|
|
|
ಕಂದೆಲುಗು ನೆಲೆದ ಅಪರೂಪದ ಕಲೆ- ಕೋನಂಗಿ ಕಲೆ
ಚಿತ್ರ-ಲೇಖನ: ಡಾ. ಜಿ. ಶ್ರೀನಿವಾಸಯ್ಯ |
ಮಾನವ ಜನಾಂಗ ಯಾವ ಕಾಲಕ್ಕೂ ಪ್ರಾಕೃತಿಕ ಸ್ತರ, ನಾಗರಿಕ ಸ್ತರಗಳಲ್ಲಿ ಬದುಕು ನಡೆಸುತ್ತದೆ. ಇವುಗಳಲ್ಲಿ ಒಂದು ನಿಸರ್ಗ ನಿಯಂತ್ರಣವಾದರೆ, ಇನ್ನೊಂದು ನಗರ ನಿಯಂತ್ರಣವಾದುದು. ನಗರ ನಿಯಂತ್ರಿತ ಜನಾಂಗಕ್ಕಿಂತ ನಿಸರ್ಗ ನಿಯಂತ್ರಿತ ಜನಾಂಗದಲ್ಲಿ ಪ್ರಾಕೃತಿಕ ಪ್ರಜ್ಞೆಗಳು ದಟ್ಟವಾಗಿ ನೆಲೆ ನಿಂತಿರುತ್ತವೆ. ಇಂತಹ ಜನಾಂಗವೆ ಜನಪದ; ಇಂತಹ ಜನಾಂಗದ ಮಧ್ಯೆ ಹುಟ್ಟುವುದೇ ಜನಪದ ಕಲೆಗಳು. ಇವು ಅಲ್ಲೇ ಹುಟ್ಟಿ ಅಲ್ಲೇ ಬೆಳೆಯುವಂತಹವು.
ಮಾನವನು ಹುಟ್ಟುತಃ ಸೃಜನಶೀಲ ವ್ಯಕ್ತಿಯಾಗಿರುತ್ತಾನೆ. ಅವನು ಯಾವುದಾದರೂ ಒಂದು ಕಲೆಯಲ್ಲಿ ಅಥವಾ ಹಲವು ಕಲೆಗಳಲ್ಲಿ ಪರಣಿತಿಯನ್ನು ಪಡೆದಿರಬಹುದು. ಮಾನವನಲ್ಲಿ ಎಲ್ಲಿಯ ತನಕ ಸೃಜನಶೀಲ ಶಕ್ತಿ ಮತ್ತು ತನ್ನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಅಭಿರುಚಿ ,ಆಸಕ್ತಿಯನ್ನು ಪಡೆದಿರುವನೋ ಅಲ್ಲಿಯ ತನಕ ಕಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಕಟಗೊಳ್ಳುತ್ತಲೇ ಇರುತ್ತದೆ.
ಜನಪದ ಕಲೆಗಳ ಉಗಮಕ್ಕೆ ಹಲವಾರು ಕಾರಣಗಳಿರಬಹುದು. ಪ್ರಾಕೃತಿಕ ಅಗೋಚರ ಶಕ್ತಿಗಳನ್ನು ತೃಪ್ತಿ ಪಡಿಸಲು ಮಾನವ ಪ್ರಕೃತಿ ಶಕ್ತಿಗಳನ್ನು ಪೂಜಿಸಿದ. ಅಲ್ಲದೆ ಕೆಲವು ವೇಳೆ ಆ ಶಕ್ತಿಯ ವೇಷವನ್ನು ಹಾಕಿ ಕುಣಿದ, ಹಾಡಿದ, ತನ್ನನ್ನು ರಕ್ಷಿಸುವಂತೆ ಬೇಡಿದ. ಈ ಬೇಡಿದ ಪದಗಳೇ ಜನಪದ ಸಾಹಿತ್ಯವಾಯಿತು. ಅವನು ಹಾಡಿದ್ದೆ ಸಂಗೀತವಾಯಿತು. ನಾವು ಯಾವುದೇ ಕಲೆಗಳನ್ನು ಗಮನಿಸಿದರು ಅದರಲ್ಲಿ ಹಾಡು, ಕುಣಿತ ಮತ್ತು ಸಾಹಿತ್ಯವಿರುವುದನ್ನು ಕಾಣಬಹುದು. ನಂತರದ ಕಾಲಘಟ್ಟದಲ್ಲಿ ಹೊಸ ಬಗೆಯ ಅಭಿನಯಗಳು ಸೇರಿ ಕಲಾ ಪರಿವರ್ತನೆಗೊಳಪಟ್ಟು ಪರಿಪಕ್ವ ಕಲಾರೂಪಗಳಾಗಿ ಮಾರ್ಪಾಟು ಹೊಂದಿದವು. ಈ ಮೇಲಿನ ಲಕ್ಷಣಗಳನ್ನು ಗಮನಿಸಿದರೇ ಕಲೆಗಳು ಧಾರ್ಮಿಕ ಹಿನ್ನಲೆಯಲ್ಲೇ ಬೆಳೆದು ಬಂದಿರುವುವೆಂಬುದನ್ನು ಒಪ್ಪಲೇಬೇಕಾಗುತ್ತದೆ.
ಕೋಲಾರ ಪರಿಸರ ಆಂಧ್ರ-ಕರ್ನಾಟಕದ ಗಡಿಭಾಗವಷ್ಟೇ ಆಗಿರದೆ ಎರಡೂ ಸಂಸ್ಕೃತಿಗಳ ಮಿಲನ ತಾಣವಾಗಿದೆ. ಇಲ್ಲಿ ತೆಲುಗು-ಕನ್ನಡ ಜನಪದ ಸಂಸ್ಕೃತಿಗಳ ಮೇಲೈಕೆಗೊಂಡ ಅನೇಕ ಜಾನಪದ ಕಲೆಗಳು ಸಿಗುತ್ತವೆ. ಆದರೆ ತೆಲುಗು ಎನ್ನುವ ಕಾರಣದಿಂದಲೋ ಅಥವಾ ತೆಲುಗನ್ನಡ ಭಾಷೆಯನ್ನುವ ಕಾರಣದಿಂದಲೋ ಇಲ್ಲಿನ ಕಲಾ-ಸಾಹಿತ್ಯಗಳ ಕಡೆ ವಿದ್ವಾಂಸರು ಗಮನ ನೀಡುತ್ತಿಲ್ಲವೆಂಬ ಕೊರಗು ಇದೆ. ಆದರೂ ಕೆಲವು ಜನಪದ ಕಲೆಗಳ ಶೋಧನೆ ನಡೆದಿದೆ. ಇಂದು ಅಸ್ಥಿತ್ವದಲ್ಲಿರುವ ಕೆಲವು ಅಪರೂಪದ ಜನಪದ ಕಲೆಗಳ ಕೊನೆಯ ಕೊಂಡಿಗಳು ಕಳಚಿಕೊಳ್ಳುವ ಮುನ್ನ ಅಂತಹ ಅಪರೂಪದ ಕಲೆಗಳ ಸಂಗ್ರಹ, ಪೋಷಣೆ ಮತ್ತು ಕಲಿಕಾಪ್ರೇರಣೆಯ ಅನಿವಾರ್ಯತೆಯಿದೆ.
ಗೀತೆ, ವಾದ್ಯ ಮತ್ತು ನೃತ್ಯ ಪ್ರಧಾನವಾದ ವಿಶಿಷ್ಟ ಕಲೆಗಳು ಒಂದೇ ಕಲೆಯಲ್ಲಿ ಏಕೀಭವಿಸುವ ಅಪರೂಪದ ಕಲೆಗಳು ಕೋಲಾರ ಜಿಲ್ಲೆಯಲ್ಲಿ ಲಭ್ಯವಾಗುತ್ತವೆ. ಅವುಗಳಲ್ಲಿ ಕೋನಂಗಿ ಕಲೆಯು ಒಂದು ವಿಶಿಷ್ಟ ಕಲಾ ಪ್ರಕಾರವಾಗಿದೆ. ಇಲ್ಲಿ ಬಳಸುವ ವಾದ್ಯ ಪರಿಕರಗಳು, ಅವರಾಡುವ ಹಾಡು. ಕುಣಿತ ಮುಂತಾದವುಗಳು ಜನಪದ ಸಾಹಿತ್ಯಕ್ಕೆ ಒಂದು ಹೊಸ ಸೇರ್ಪಡೆ ಎಂದರೆ ತಪ್ಪಾಗಲಾರದು.
ಕೋನಂಗಿ ಕಲೆ
'ಕೋನಂಗಿ' ಎಂಬುದು 'ಕೋಡಂಗಿ' ಪದದಿಂದ ಉತ್ಪತ್ತಿಯಾಗಿದೆ. ಕೋಡಂಗಿ ಎಂದರೆ ಹಾಸ್ಯಗಾರ, ವಿದೂಷಕ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಆದರೆ ಕೋಲಾರದ ಪ್ರಾಂತ್ಯದ ಈ ಕಲೆಯಲ್ಲಿ ಹಾಸ್ಯದ ಜೊತೆಗೆ ವೀರಾವೇಶ, ಮೋಡಿ, ಹಾಡಿನ ಗತ್ತಿನೊಂದಿಗೆ ಪಾಳೇಗಾರನ ವೇಷವನ್ನೂ ಸಮೀಕರಿಸಿಕೊಂಡಿದೆ. ಪ್ರಾದೇಶಿಕ ಜಾನಪದ ವೀರನಾದ ಹರಪಿನಾಯಕನಹಳ್ಳಿ (ಮುಳಬಾಗಿಲು ತಾಲೂಕು) ಬಿಸ್ಸೇಗೌಡ ಮತ್ತು ಸುಣ್ಣಕಲ್ಲು (ಶ್ರೀನಿವಾಸಪುರ ತಾಲೂಕು) ಓಬಳನಾಯ್ಡುವಿನ ವೀರಪ್ರತಾಪಗಳನ್ನು ಹಾಡುವ ಸಂದರ್ಭದಲ್ಲಿ ಸ್ವತಃ ಕಲಾವಿದನೇ ಆ ವೀರರಾಗುವ, ವೇಷ ಮತ್ತು ಪಾತ್ರದಲ್ಲಿ ತಲ್ಲೀನಗೊಳ್ಳುವಿಕೆ ನಿಜವಾಗಿಯೂ ಆ ಕಲೆಗೆ ಒಂದು ಸೊಬಗನ್ನು ತಂದುಕೊಟ್ಟಿದೆ.
ತಲೆಯ ಮೇಲೆ ಪಾಳೆಗಾರನ ಪೇಟ, ಕೋಟು, ಷರಾಯಿ, ಅದರ ಮೇಲೆ ಕೊರಳಿಗೆ ಸುತ್ತಿರುವ ಕೆಂಪು ವಸ್ತ್ರ, ಹಣೆಯಲ್ಲಿ ಮೂರು ನಾಮ, ಕೆಂಪರಿವ ಕಣ್ಣುಗಳು, ಹೆಗಲಿಗೆ ತಗಲಾಕಿರುವ ಬುವನಾಸಿ, ಭುಜದ ಮೇಲೆ ಬಿಳಿವಸ್ತ್ರ. ಕೈಗಳಲ್ಲಿ ಮರದ ಚಿಟಿಕೆಗಳು. ಕಾಲಿಗೆ ಕಟ್ಟುವ ಕಬ್ಬಿಣದ ಗುಂಡು, ಕಂಕಳಲ್ಲಿ ಕುದುರೆ ಕೋಲು. ಇವು ಕೋನಂಗಿಯ ವೇಷಭೂಷಣಗಳು. ಇವನ್ನು ಧರಿಸಿ ಕಲಾವಿದ ಭಿಕ್ಷಾಟಣೆಗೆ ಹೊರಡುತ್ತಾನೆ. ಚಿಟಿಕೆಗಳನ್ನು ಬಾರಿಸುತ್ತಾ ಥೇಟು ಪಾಳೇಗಾರನಂತೆ ತನ್ನ ಕುದುರೆ ಕೋಲಿನ ಮೇಲೆ ಕುಳಿತುಕೊಂಡು ಹೋಗುವಂತೆ ಅಭಿನಯ ಮಾಡುತ್ತಾನೆ. ಗುಟರು ಹಾಕುತ್ತಾನೆ. ಹೀಗೆ ಅಭಿನಯ ಮಾಡುತ್ತಾ ತನ್ನ ಕಾಲಲ್ಲಿ ಕಟ್ಟಿದ ಗುಂಡನ್ನು ತಿರುಗಿಸುತ್ತಾನೆ, ಅದರ ಹೊಡೆತವನ್ನು ತಪ್ಪಿಸಿಕೊಳ್ಳುತ್ತಾ ಹಾಡುತ್ತಾ ಕುಣಿಯುತ್ತಾ ರಂಜಿಸುತ್ತಾನೆ.
ಮುಳಬಾಗಿಲು ತಾಲೂಕು ಹರಪನಾಯಕನಹಳ್ಳಿಯ ಪಾಳೆಗಾರನಾದ ಬಿಸ್ಸೇಗೌಡನ ಸಾಹಸಗಾಥೆಯನ್ನು ಇಲ್ಲಿ ಕಲಾವಿದ ತನ್ನ ಪ್ರಧಾನ ಕಥೆಯಾಗಿಸಿಕೊಂಡಿದ್ದಾನೆ. ಹತ್ತೊಂಭತ್ತನೆಯ ಶತಮಾನದಲ್ಲಿ ಬಿಸ್ಸೇಗೌಡ ಇದ್ದನೆಂದು ಹೇಳುತ್ತಾರೆ. ಅವನು ಮೇಕೆಯನ್ನು ಮೇಯುಸುತ್ತಾ ಒಂದು ಉಡದ ಮರಿಯನ್ನು ಹಾಲು ಹಾಕಿ ಸಾಕಿರುತ್ತಾನೆ. ಕಾಡಿನಲ್ಲಿದ್ದ ಒಬ್ಬ ಇರುಳಿಗನ ಸಹಾಯದಿಂದ ಅವನು ಪಾಳೆಗಾರನಾಗುತ್ತಾನೆ. ಅಲ್ಲದೆ ಆ ಇರುಳಿಗ ಮಹಾ ಮಂತ್ರವಾದಿಯಾಗಿದ್ದ. ಅವನು ಮಂತ್ರಿಸಿದ ತಾಯತವೊಂದನ್ನು ಪಾಳೇಗಾರ ಬಿಸ್ಸೇಗೌಡನ ಬಲ ತೊಡೆಯನ್ನು ಸೀಳಿ ಅದರಲ್ಲಿ ಜೋಡಿಸಿದ್ದ. ಒಂದು ಸಾರಿ ಹರಿನಾಯಕನಹಳ್ಳಿಯನ್ನು ನುಂಗಲು ಬಂದ ಒಂದು ಹೆಬ್ಬಾವನ್ನು ಗಮನಿಸಿ ಇರುಳಿಗ ಅದನ್ನು ಕಲ್ಲಾಗಿಸಿದನಂತೆ, ಇಂದಿಗೂ ಆ ಪ್ರಾಂತ್ಯದಲ್ಲಿ ಅದನ್ನು ಕಾಣಬಹುದು. ಅದನ್ನು 'ಪಾಮುಗುಂಡು' ಎಂದು ಸ್ಥಳಿಯರು ಕರೆಯುತ್ತಾರೆ.
ಒಂದು ದಿನ ಒಬ್ಬ ’ಮಾಲ’ರವಳು ಸತ್ತ ದನದ ಮಾಂಸವನ್ನು ಮಕ್ಕರಿಗೆ ಹಾಕಿಕೊಂಡು ಅದರ ಮೇಲೆ 'ಸೂರಿಕತ್ತಿ'ಯನ್ನಿಟ್ಟುಕೊಂಡು ಗ್ರಾಮದ ಒಳಗೆ ಬರುತ್ತಿದ್ದಳಂತೆ. ಆಗ ಹದ್ದುಗಳು ಮಾಂಸವನ್ನು ಹಾರಿಸಲು ಬಂದರೆ ಆ ಕತ್ತಿ ಅವುಗಳನ್ನು ಓಡಿಸುತ್ತಿತ್ತಂತೆ. ಇದನ್ನು ಗಮನಿಸಿದ ಬಿಸ್ಸೇಗೌಡ ಆ ಕತ್ತಿಯನ್ನು ಆಕೆಯಿಂದ ಪಡೆದು ಅದನ್ನು ತನ್ನ ಕತ್ತಿಯನ್ನಾಗಿ ಮಾಡಿಸಿದ. ಅವನು ಅನೇಕ ಪ್ರಜಾಸೇವಾ ಕಾರ್ಯಗಳನ್ನು ಮಾಡಿಸಿದನೆಂದು ಅವನ ರೂಪ ಮತ್ತು ಅವನ ದೌಲತ್ತು ಮುಂತಾದ ವಿವರಗಳುಳ್ಳ ಕಥನ ಕವಿತೆಯನ್ನು ಈ ಕೋನಂಗಿ ಹಾಡುತ್ತಾನೆ. ಇದು ಕೋಲಾರ ಜಿಲ್ಲೆಯಲ್ಲಿ ಅತ್ಯದ್ಬುತ ಜಾನಪದ ಕಥನ ಕವಿತೆಯಾಗಿದೆ.
ಬಿಸ್ಸೇಗೌಡ ತನ್ನ ಸಹೋದರರಾದ ಮುನೇಗೌಡ, ವೆಂಕಟೇಗೌಡ ಮತ್ತು ಸಾಮಿನಿಗೌಡನೊಂದಿಗೆ ತಿರುಪತಿಯ ಬಳಿಯಿರುವ ಚಂದ್ರಗಿರಿ ಕೋಟೆಯನ್ನು ಕೊಳ್ಳೆ
ಹೊಡೆಯಲು ತನ್ನ ಸೇನಾ ಸಮೂಹದೊಂದಿಗೆ ಹೊರಡುತ್ತಾನೆ. ಆದರೆ ಚಂದ್ರಗಿರಿಯ ರಾಜರು ಈ ವಿಷಯವನ್ನು ಅರಿತು ಕೋಟೆಯ ಬಾಗಿಲುಗಳನ್ನು ಮುಚ್ಚಿಸಿದರು. ಮುತ್ತಿಗೆ ಹಾಕಿದ ಗೌಡ ಬಡಪೆಟ್ಟಿಗೆ ಹಿಂತಿರುಗಿ ಬರುವವನಲ್ಲ. ಇವನು ಮೂರು ತಿಂಗಳು ಕಾದು ಕುಳಿತನು. ಆದರೆ ಕೋಟೆಯ ಬಾಗಿಲು ತೆಗೆಯುವ ಸೂಚನೆಗಳು ಕಾಣದಿದ್ದಾಗ ಅವನೊಂದು ಉಪಾಯವನ್ನು ಹೂಡಿದ. ತಾನು ಸತ್ತಂತೆ ಚಂದ್ರಗಿರಿಯ ರಾಜರುಗಳಿಗೆ ಸಾವಿನ ಸುದ್ದಿಯನ್ನು ಮುಟ್ಟಿಸಿ, ತನ್ನನ್ನು ಪಾಡಿಗಟ್ಟಿ (ಚಟ್ಟ) ಅದರ ಮೇಲೆ ಮಲಗಿಸಿ, ಕತ್ತಿಯನ್ನು ಮತ್ತು ಕುದುರೆಯನ್ನು ಪಕ್ಕದಲ್ಲಿ ನಿಲ್ಲಿಸಿ ಎಂದು ತನ್ನ ಜನರಿಗೆ ತಿಳಿಸಿದನು. ಅದರಂತೆ ವಿಷಯವನ್ನು ಮುಟ್ಟಿಸಿದರು. ಆಗ ಚಂದ್ರಗಿರಿ ಅರಸರು ’ಎವುಡೋ ಪರಮಟ ದೇಸಿ ಮುನಿಂಕಾ ವಚ್ಚಿ ಕೋಟಕಿ ಮುತ್ತಗೇಸಿಂಡ್ಯಾ... ಪಾಪ್ಮು! ಈ ಪೊದ್ದು ಸಚ್ಚಿಪೋಯಿಂಡಾಡಂಟಾ (ಯಾರೋ ಪಶ್ಚಿಮ ದೇಶದಿಂದ ಬಂದು ಕೋಟೆಗೆ ಮುತ್ತಿಗೆ ಹಾಕಿದ್ದ...ಪಾಪ ! ಈ ಹೊತ್ತು ಸತ್ತು ಹೋದನಂತೆ) ಎಂದು ಎಲ್ಲಾ ಬಾಗಿಲುಗಳನ್ನು ತೆರೆದರು. ಅವನನ್ನು ನೋಡಲು ಎಲ್ಲರೂ ಬಂದರು. ಆಗ ಚಟ್ಟದ ಮೇಲಿನಿಂದ ಜಿಗಿದ ಗೌಡ ಎಲ್ಲಾ ತಲೆಗಳನ್ನು ತರಿದು ಕೋಟೆಯನ್ನು ಕೊಳ್ಳೆ ಹೊಡೆದ. ಅವನು ಸಾಯಿಸಿ ತಂದ ಮುಕ್ಕುರ (ಮೂಗುತಿ)ಗಳು ಮೂರು ಬುಟ್ಟಿ ಆಗಿದ್ದವಂತೆ. ಇಂದಿಗೂ ಮುಳಬಾಗಿಲು ಅಥವಾ ಕೋಲಾರ ಪ್ರಾಂತ್ಯದವರೆಂದರೆ ಚಂದ್ರಗಿರಿಯ ಜನ ಬೈಯ್ಯುತ್ತಾರೆ ಎಂದು ಕೋನಂಗಿ ತನ್ನ ಕಥೆಯಲ್ಲಿ ಹೇಳುತ್ತಾನೆ.
ಅತ್ತ ತಾನು ಚಂದ್ರಿಗಿರಿ ಕೋಟೆ ಕೊಳ್ಳೆ ಹೊಡೆಯಲು ಹೋದಾಗ ಬಿಸ್ಸೇಗೌಡ ಹರಪನಾಯಕನಹಳ್ಳಿಯ ಉಸ್ತುವಾರಿಯನ್ನು ತಾನೇ ಸಾಕಿ ಬೆಳೆಸಿದ ಅಲ್ಲಿಸಾಬಿಗೆ ವಹಿಸಿ ಹೋಗಿರುತ್ತಾನೆ. ಆದರೆ ಅಲ್ಲಿಸಾಬಿ ತನ್ನ ದುರಾಡಳಿತದಿಂದ ಪ್ರಜಾ ಮನ್ನಣೆಯನ್ನು ಕಳೆದುಕೊಂಡಿರುತ್ತಾನೆ...ಆಗ ಬಿಸ್ಸೇಗೌಡ ಅಲ್ಲಿಸಾಬಿಯನ್ನು ಬೋಡಿಬಂಡೆಗೆ ಎಳೆದು ಕೊಚ್ಚಿ ಕೊಂದನೆಂದು ಕಥೆಯನ್ನು ಮುಂದುವರಿಸುತ್ತಾನೆ. ಇದು ಕೋಲಾರ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವ ಒಬ್ಬ ಜನಪದ ವೀರ ಬಿಸ್ಸೇಗೌಡನ ಕತೆಯಾಗಿದೆ. ಅದನ್ನು ಕೋನಂಗಿ ತನ್ನ ಕಲೆಗೆ ಒಗ್ಗುವ ರೀತಿಯಲ್ಲಿ ಅದನ್ನು ಮಾರ್ಪಡಿಸಿಕೊಂಡು ಅದಕ್ಕೆ ಒಂದು ಹೊಸ ರೂಪವನ್ನು ಹೊಸ ಕಥನವನ್ನು ಹೆಣೆಯುತ್ತಾನೆ. ಪ್ರಶಸಿ ವಿಜೇತ ಕೋನಂಗಿ ಕಲಾವಿದ ಹೊದಲಿಯ ಕೋನಂಗಿ ಹನುಮಪ್ಪ ಇವತ್ತಿಗೂ ಈ ಕಲೆಗೆ ವಿಶೇಷ ರೂಪ ಕೊಟ್ಟು ಉಳಿಸಿಕೊಂಡು ಬಂದಿದ್ದಾರೆ.
|
(ಕರ್ನಾಟಕದ ಮಹಿಳಾ ಪರ ಹೋರಾಟಗಾರರಿಗೆ ಅದರಲ್ಲೂ ಮೈಸೂರಿನವರಿಗೆ ಮೀರಕ್ಕ ಚಿರಪರಿಚಿತರು. ಈಕೆ ಸತತ ಸಂಘಟನಾಗಾರ್ತಿ. ಸಮಾನ ಮನಸ್ಕರ ಪುಟ್ಟದೊಂದು ಸಂಘ ಮಾಡಿಕೊಂಡು ಮಹಿಳೆಯರಿಗೆ ಅನ್ಯಾಯವಾದರೆ ಎಲ್ಲಿಗೂ ಹೋಗಿ ಹೋರಾಟ ಮಾಡಲೂ ಸೈ ಎಂದವರು. ತಾವು ಕಲಿಸುತ್ತಿದ್ದ ಪ್ರೌಢ ಶಾಲೆಯ ಮಕ್ಕಳಿಗೆ, ಅದರಲ್ಲೂ ಹೆಣ್ಣು ಮಕ್ಕಳಿಗೆ ವೈಟ್ ಟೈಗ್ರೆಸ್ ಆಗೇ ಸ್ಪೂರ್ತಿಯಾದವರು. ಕಲಿಸಿದ ಗುರು, ಪ್ರೀತಿಸಿ ಹರಸಿದ ಮನಸ್ಸು, ಸಹಾಯಕ್ಕೆ ನಿಂತ ಸೆಲೆ. ಮೀರಕ್ಕ ತಮ್ಮ ಉಪಾಧ್ಯಾಯಿನಿಯ, ಹೋರಾಟಗಾರ್ತಿಯ ಅತ್ಯಂತ ಚಟುವಟಿಕೆಯ ದಿನಗಳಲ್ಲಿ ದಾಖಲಿಸಿಟ್ಟ ಕೆಲವು ಅನಿಸಿಕೆಗಳನ್ನು, ಅನುಭವಗಳನ್ನು, ಅಂಕಿ ಅಂಶಗಳನ್ನು ಆಯಾಮದೊಟ್ಟಿಗೆ ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದಾರೆ.)
ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆ
ಶ್ರೀಮತಿ ಮೀರಾ ನಾಯಕ್ |
ಇಂದಿನ ಜಗತ್ತು ತುಂಬ ವೇಗದಲ್ಲಿ ಬದಲಾಗುತ್ತಿದೆ. ಬದಲಾವಣೆಯ ಹಂಬಲ ನಿರಂತರವಾಗಿ ಎಲ್ಲೆಲ್ಲೂ ಕಾಣುತ್ತಿದೆ. ಬದಲಾವಣೆಯ ಹಂಬಲಕ್ಕೆ ಕಾರಣ ಹೊಸ ಬದುಕಿನ ಅಪೇಕ್ಷೆ; ಗುರಿ. ಆ ಅಪೇಕ್ಷೆ ಅಥವಾ ಗುರಿಯ ಕಡೆ ಸಾಗಬೇಕಾದರೆ ಆಸೆ ಸಾರ್ವತ್ರಿಕವಾಗುತ್ತಿದ್ದಂತೆ ಸ್ಪರ್ಧೆ ಆರಂಭವಾಗುತ್ತದೆ. ಇಂದಿನ ಜಗತ್ತಿನಲ್ಲಿ ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲ ಇವುಗಳಿಗೆ ಸಂಬಂಧಿಸಿದ ಸ್ಪರ್ಧೆ ಪ್ರಮುಖವಾಗಿ ಕಾಣಿಸುತ್ತಿದೆ. ಇವು ಪರಸ್ಪರ ತೀರಾ ಭಿನ್ನವೇನಲ್ಲ, ಹೆಚ್ಚು ಕಡಿಮೆ ಒಂದಕ್ಕೊಂದು ಹೊಂದಿಕೊಂಡು ಇರುವಂಥವೇ ಆಗಿವೆ.
ಸ್ಥಿರ ಸಮಾಜದಲ್ಲಿ ಚಲನೆ, ಬದಲಾವಣೆ ಇರುವುದಿಲ್ಲ. ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲ ಇವು ಬಹುಮಟ್ಟಿಗೆ ಪೂರ್ವ ನಿರ್ಧರಿತವಾಗಿ ಇರುತ್ತಿದ್ದವು. ಧಾರ್ಮಿಕತೆ ಪ್ರಧಾನವಾಗಿ ಇದ್ದ ಸಮಾಜದಲ್ಲಿ ಧಾರ್ಮಿಕ ಸಾಧನೆ ಸಿದ್ಧಿಗಳ ಮಾನದಂಡದಿಂದ ಸಾಮಾಜಿಕವಾಗಿ ಗೌರವ ದೊರೆಯುತ್ತಿತ್ತೆಂಬುದು ನಿಜವಾದರೂ ಧಾರ್ಮಿಕ ಅಧಿಕಾರ, ಸಾಮಾಜಿಕ ಸ್ಥಾನಮಾನಗಳು, ಹುಟ್ಟಿದ ಜಾತಿ, ಜಾತಿಯೊಳಗೂ ನಿರ್ದಿಷ್ಟ ಪಂಗಡ ಇವುಗಳಿಗೆ ಸೀಮಿತವಾಗಿರುತ್ತಿತ್ತು. ದೊರೆತನದ ಜೊತೆಗೆ ಆರ್ಥಿಕ ಅನುಕೂಲವೂ ಇರುತ್ತಿತ್ತಾದ್ದರೂ ದೊರೆತನ ವಂಶಪಾರಂಪರ್ಯದಿಂದ ಬಹುಪಾಲು ನಿಗದಿಯಾಗುತ್ತಿತ್ತಾದ್ದರಿಂದ ಹುಟ್ಟಿದ ವರ್ಣ, ಜಾತಿ, ಮನೆತನಗಳೂ ಅದಕ್ಕೆ ಕಾರಣವಾಗುತ್ತಿದ್ದವು.
ಇಂದಿನ ಜಗತ್ತಿನಲ್ಲಿಯೂ ಧಾರ್ಮಿಕ ಅಧಿಕಾರ ಸಂಬಂಧವಾದ ಸ್ಥಾನಮಾನ ದೊರೆತನಕ್ಕೆ ಆ ಮೂಲಕ ಆರ್ಥಿಕ ಅನುಕೂಲತೆಗೆ ಸಂಬಂಧಿಸಿದ ಸ್ಥಾನಮಾನಗಳು ನಿಗದಿಯಾಗುವಂಥ ಸಮಾಜ. ರಾಷ್ಟ್ರಗಳು ಕೆಲವು ಇವೆಯಾದರೂ ಮುಖ್ಯವಾಗಿ ಇಂದಿನ ಜಗತ್ತು ಧರ್ಮಾಧಿಕಾರ, ರಾಜ ಪ್ರಭುತ್ವ ಇವುಗಳಿಂದ ದಿನೇ ದಿನೇ ದೂರ ಸರಿಯುತ್ತಲಿದೆ. ಆದ್ದರಿಂದ ಇಂದು ಪ್ರಜಾಸತ್ತಾತ್ಮಕ ಭಾರತದಂಥ ರಾಷ್ಟ್ರಗಳಲ್ಲಿಯಾಗಲಿ ಸಮತಾವಾದೀ ರಾಷ್ಟ್ರಗಳಲ್ಲಿಯಾಗಲಿ ಧರ್ಮಾಧಿಕಾರ, ರಾಜಪ್ರಭುತ್ವಗಳು ಇಲ್ಲ; ಇದ್ದರೂ ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಅನುಕೂಲಗಳನ್ನು ಅವು ಪ್ರತಿನಿಧಿಸುವ ಸ್ಥಿತಿಯಲ್ಲಿ ಇಲ್ಲ.
ಭಾರತ ಪ್ರಜಾಸತ್ತಾತ್ಮಕ ರಾಷ್ಟ್ರ. ಇಲ್ಲಿ ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲಗಳನ್ನು ನಿರ್ಧರಿಸುವ ಮಾನದಂಡಗಳು ಬದಲಾಗುತ್ತಿವೆ. ಬದಲಾಗುವುದು ಅನಿವಾರ್ಯ. ದೊರೆತನಗಳ ಕಾಲ ಮುಗಿದಿದೆ, ಧರ್ಮಾಧಿಕಾರದ ಕಾಲವೂ ಮುಗಿಯುತ್ತಲಿದೆ, ಮುಗಿಯ ಬೇಕಾದದ್ದೂ ಅಗತ್ಯ, ಅನಿವಾರ್ಯ. ಆದ್ದರಿಂದ ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲಗಳನ್ನು ನಿರ್ಧರಿಸುವ ಸಂಗತಿಗಳು, ವಿಷಯಗಳು ಬದಲಾಗುತ್ತಿವೆ. ಸಾಂಪ್ರದಾಯಿಕವಾಗಿ ಧಾರ್ಮಿಕ ದೃಷ್ಟಿಯಿಂದ ಕೀಳೆಂದು ಪರಿಗಣಿತವಾದ ಲಿಂಗ, ಜಾತಿ, ಮತ, ಜನಾಂಗಗಳಿಂದಲೂ ಇಂದು ವ್ಯಕ್ತಿ ಸಾಮಾಜಿಕವಾಗಿ ಉನ್ನತವಾದ ಸ್ಥಾನಮಾನವನ್ನೂ, ಆರ್ಥಿಕ ಅನುಕೂಲವನ್ನೂ ಪಡೆಯಬಹುದಾದ ಸ್ಥಿತಿ ನಿರ್ಮಾಣವಾಗಿದೆ, ಆಗುತ್ತಲಿದೆ. ದೊರೆತನದ ಕಾಲ ಮುಗಿದೇ ಹೋಗಿರುವುದರಿಂದ ರಾಜಕೀಯ ಕ್ಷೇತ್ರದಲ್ಲಿ ವ್ಯಕ್ತಿಯ ಲಿಂಗ, ಜಾತಿ, ಮತ, ಜನಾಂಗ ಬೇಧವಿಲ್ಲದೆ ಅಧಿಕಾರ ಸ್ಥಾನ, ಆರ್ಥಿಕ ಅನುಕೂಲತೆ ಪಡೆಯಬಹುದಾದ ಸ್ಥಿತಿ ನಿರ್ಮಾಣವಾಗಿದೆ, ಆಗುತ್ತಲಿದೆ. ಜೊತೆಗೆ ಯಂತ್ರ ನಾಗರಿಕತೆ ನಿರ್ಮಾಣವಾಗಿರುವುದರಿಂದ ಮತ್ತು ಅದು ಮುಂದುವರಿಯುತ್ತಲೇ ಇರುವುದರಿಂದ ಸ್ಪರ್ಧಾತ್ಮಕ ಸಾಹಸಗಳಿಗೂ ಮುಕ್ತ ಅವಕಾಶ ಇರುವಂತಾಗಿದೆ. ಇಂಥ ಲಿಂಗ, ಜಾತಿ, ಮತ, ಜನಾಂಗಕ್ಕೆ ಸೇರಿದ ವ್ಯಕ್ತಿಗೆ ಇಂಥದೇ ಉದ್ಯೋಗ ಕಡ್ಡಾಯ, ಕುಲ ಧರ್ಮ ಎಂಬಂಥ ಸ್ಥಿತಿಯೂ ಈಗ ಇಲ್ಲವಾಗಿದೆ, ಇಲ್ಲವಾಗುತ್ತಿದೆ.
ಭಾಗ-೨
ಈ ಎಲ್ಲ ಕಾರಣಗಳಿಂದಾಗಿ ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು, ಸರ್ವರಿಗೆ ಸಮಾನವಾದ ಅವಕಾಶ-ಹಕ್ಕು ಎಂಬಂಥ ತತ್ವ, ಧೋರಣೆ ಸಾರ್ವತ್ರಿಕವಾಗಿ ವ್ಯಕ್ತವಾಗುತ್ತಿದೆ. ಇಂಥ ಮುಕ್ತ ವಾತಾವರಣ, ಮುಕ್ತ ಮನೋಧರ್ಮವನ್ನು ತಾತ್ವಿಕವಾಗಿ ಒಪ್ಪಿಕೊಂಡಿರುವಂಥ ಸಂವಿಧಾನವೂ ನಮ್ಮದಾಗಿದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಗೂ ತನ್ನೆಲ್ಲ ಶಕ್ತಿ, ಸಾಮರ್ಥ್ಯ, ಚೈತನ್ಯಗಳು ಲಿಂಗ, ಜಾತಿ, ಮತ, ಜನಾಂಗ ಕಾರಣವಾದ ಅಡೆತಡೆಗಳಿಲ್ಲದೆ ವಿಕಾಸವಾಗಬೇಕೆಂಬ ತತ್ವ ಸಾರ್ವತ್ರಿಕವಾಗಿದೆ, ಆಗುತ್ತಲಿದೆ.
ಆದರೆ ಸಾರ್ವತ್ರಿಕವಾಗುತ್ತಿದ್ದಷ್ಟು ವಾಸ್ತವದಲ್ಲಿ, ದೈನಂದಿನ ರಾಷ್ಟ್ರ ಜೀವನದಲ್ಲಿ ಅದು ನಿಜವಾಗುತ್ತಿಲ್ಲ. ಸಂಪ್ರದಾಯದ ಹ್ಯಾಂಗೋವರಿಂದ ನಮ್ಮ ಜನ ಸಮುದಾಯ ರಾಷ್ಟ್ರಕ್ಕೆ ಸ್ವಾತಂತ್ರ ದೊರೆತು ಅರವತ್ತು ವರ್ಷಗಳಿಗೂ ಹೆಚ್ಚಾಗಿದ್ದರೂ ಬಿಡುಗಡೆ ಪಡೆದು ಪೂರ್ಣ ಜಾಗೃತ ಸ್ಥಿತಿಗೆ ಬಂದು ತಲುಪಿಲ್ಲ. ಅದರಿಂದಾಗಿ ಲಿಂಗ, ಜಾತಿ, ಮತ, ಜನಾಂಗ, ಬೇಧ ಮತ್ತು ಮೇಲು ಕೀಳೆಂಬ ನಂಬಿಕೆ ಇವುಗಳ ನೆರಳ ನಸುಗತ್ತಲಲ್ಲಿ ತಡವರಿಸುತ್ತ ಸಾಗುತ್ತಲಿದೆ. ಮಹಿಳೆ ಈ ಲಿಂಗಬೇಧ ಸಂಬಂಧವಾದ ಅಡೆತಡೆಯಿಂದಾಗಿ ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲ ಇವುಗಳನ್ನು ಪುರುಷನಷ್ಟು ಪ್ರಮಾಣದ ಮುಕ್ತವಾತಾವರಣ ಮತ್ತು ಮುಕ್ತ ಅವಕಾಶಗಳ ಸಂದರ್ಭದಲ್ಲಿ ಪಡೆಯಲಾಗುತ್ತಿಲ್ಲ. ಮಹಿಳೆ ಪುರುಷನಿಗಿರುವಂಥ ಮುಕ್ತ ವಾತಾವರಣ ಮತ್ತು ಅವಕಾಶಗಳನ್ನು ಸಂವಿಧಾನದ ಬರವಣಿಗೆಯಲ್ಲಷ್ಟೇ ಉಳಿದು ಬಿಡದಂತೆ ದಿನನಿತ್ಯದ ವ್ಯಾವಹಾರಿಕ ಬದುಕಿನಲ್ಲಿಯೂ ಪಡೆದುಕೊಳ್ಳುವುದಕ್ಕಾಗಿ ಹೋರಾಟ ನಡೆಸುತ್ತಲೇ ಸಾಗಬೇಕಾಗಿದೆ. ಆದ್ದರಿಂದ ಮಹಿಳೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುರುಷನೊಂದಿಗೆ ಸ್ಪರ್ಧಿಸಬೇಕಾಗಿದೆ, ಜೊತೆಗೇ ಈ ಸ್ಪರ್ಧೆ ಪುರುಷನೊಂದಿಗೆ ಸಮ ಸ್ಪರ್ಧೆಯಾಗುವಂತೆ ಮಾಡಲು ನಿರಂತರ ಸ್ತ್ರೀ ಪರವಾದ ಸಮಾನತಾ ಆಂದೋಲನವನ್ನು ನಡೆಸಬೇಕಾಗಿದೆ.
ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಅನುಕೂಲಗಳ ಗಳಿಕೆಗೆ ಈ ಕಾಲದಲ್ಲಿ ಕಾರಣವಾಗುವ ಅಂಶಗಳು ಮುಖ್ಯವಾಗಿ ಇವು: ಶಿಕ್ಷಣ, ಅಧಿಕಾರ-ಸ್ಥಾನಗಳು, ಔದ್ಯೋಗಿಕ ಅವಕಾಶಗಳು, ಎಲ್ಲ ವಿಷಯಗಳಲ್ಲಿಯೂ ಪುರುಷನೊಂದಿಗೆ ಸಮಾನ ಹಕ್ಕುಗಳು.
ಶಿಕ್ಷಣ ಜ್ನಾನಾರ್ಜನೆಗೆ ಅಗತ್ಯ. ಅಧಿಕಾರ-ಸ್ಥಾನ ಸಾಮಾಜಿಕ ಸ್ಥಾನಮಾನದ ದೃಷ್ಟಿಯಿಂದ ಅಗತ್ಯ, ಔದ್ಯೋಗಿಕ ಅವಕಾಶಗಳು ಆರ್ಥಿಕ ಅನುಕೂಲ ಪ್ರಪ್ತಿಗೆ ಅಗತ್ಯ, ಪುರುಷನೊಂದಿಗೆ ಸಮಾನ ಹಕ್ಕುಗಳು ಸಮ ಸ್ಪರ್ಧೆಯ ದೃಷ್ಟಿಯಿಂದ ಅಗತ್ಯ. ಪುರುಷನೊಂದಿಗೆ ಸಮಾನ ಬಾಧ್ಯತೆಗಳೂ ಇರುವುದು ರಾಷ್ಟ್ರದ ಒಟ್ಟಿನ ಪ್ರಗತಿಯನ್ನು ಸಧಿಸುವುದಕ್ಕೆ ಅಗತ್ಯ.
ತಂತ್ರಯುಗದ ಭದ್ರ ಬುನಾದಿಯಲ್ಲಿ ಜನ ಸುಖ ಮತ್ತು ಆರ್ಥಿಕ ಭದ್ರತೆ ಬಯಸುವುದರಿಂದ ಶಿಕ್ಷಣ ಪಡೆದು ಸಂಬಳ ತರುವ ಕೆಲಸದಲ್ಲಿರುವ ಹೆಣ್ಣನ್ನೇ ಮದುವೆಯಾಗ ಬಯಸುವುದರಿಂದ ಸ್ತ್ರೀ ಶಿಕ್ಷಣ ಆದ್ಯತೆ ಪಡೆದಿದೆ. ಕಳೆದ ಶತಮಾನದಲ್ಲಿ ಈಶ್ವರ ಚಂದ್ರ ವಿದ್ಯಾಸಾಗರ ಗುಜರಾತಿನಲ್ಲಿ ಮೊಟ್ಟಮೊದಲ ಕನ್ಯಾಶಾಲೆ ತೆರೆದರೆ, ಇಂದು ಲಿಂಗ ಬೇಧವಿಲ್ಲದೆ ಶಿಕ್ಷಣ ಪಡೆಯುವ ಪರಿಸ್ಥಿತಿ ನಮ್ಮ ಸಮಾಜ ವ್ಯವಸ್ಥೆಯಲ್ಲಿದೆ.
ಭಾಗ-೩
ಈಶ್ವರ ಚಂದ್ರರು ಬಾಲ್ಯವಿವಾಹ ನಿಲ್ಲಿಸುವ, ವಿಧವಾ ಜೀವನದ ಕಷ್ಟಗಳ ನಿವಾರಣೆ ಮಾಡುವ ಮತ್ತು ಸತಿ ಪದ್ಧತಿಯಿಂದ ಹೆಣ್ಣನ್ನು ವಿಮುಕ್ತಗೊಳಿಸುವ ಸಮಾಜ ಬದಲಾವಣೆಗೆ ಬುನಾದಿ ಹಾಕಿದ್ದರೆ ಇಂದು ಶ್ತ್ರೀ ಶಿಕ್ಷಣ ಸಂಬಳ ತರುವ ಒಂದು ವಸ್ತುವಾಗಿ ಮಾರ್ಪಾಟಾಗಿದೆ. ಬೇರೆ ಬೇರೆ ಕ್ಷೇತ್ರದಲ್ಲಿ ಅಲ್ಲಲ್ಲಿ ಮಹಿಳೆ ಕಾಣಿಸಿಕೊಳ್ಳುವುದರಿಂದ ಪ್ರಜಾರಾಜ್ಯದ ಕಲ್ಪನೆಗಳಾದ ಸ್ವಾತಂತ್ರ್ಯ, ಸಮಾನಾವಕಾಶ, ಸಮಾನತೆ ಮೂರ್ತರೂಪ ಪಡೆದಿದೆ ಎಂಬ ಭಾವನೆ ಜನ ಸಾಮಾನ್ಯರಲ್ಲಿ ಉಂಟಾಗುತ್ತಿದೆ. ಶಿಕ್ಷಣದ ವಿವಿಧ ಹಂತದಲ್ಲಿ ಹೆಣ್ಣೂ ತನ್ನ ಬುದ್ಧಿಶಕ್ತಿಯ ಪ್ರದರ್ಶನ ಮಾಡಿತ್ತಿದ್ದಾಳೆ. ಉದಾ-ಎಸ್ ಎಸ್ ಎಲ್ ಸಿ, ಪಿ ಯು ಸಿ, ಬಿ ಎ, ಬಿ ಎಸ್ಸಿ, ಎಂ ಎ, ಎಂ ಎಸ್ಸಿ ಗಳಲ್ಲದೆ ವೈದ್ಯಕೀಯ, ತಾಂತ್ರಿಕ ವಿಜ್ನಾನಗಳಲ್ಲೂ ಹೆಚ್ಚಿನ ಪ್ರಮಾಣದ ಪ್ರಗತಿ, ಪಾಸಾಗುವಿಕೆ ಮತ್ತು ’ರಾಂಕ್’ ಗಳಿಕೆಯ ಸಾಧನೆಯನ್ನು ಕಾಣುತ್ತಿದ್ದೇವೆ. ಅಡಿಗೆ ಮನೆಗೇ ಬಂಧಿತಳಾದ ಮಹಿಳೆಯನ್ನು ಸ್ಪರ್ಧಾತ್ಮಕ ಜಗತ್ತು ಅಡಿಗೆ ಮನೆಯಿಂದ ಆಫೀಸ್, ಶಾಲೆ, ಕಾಲೇಝು, ಬ್ಯಾಂಕಿನ ಕೆಲಸದವರೆಗೆ ಬಿಡುಗಡೆ ಮಾಡಿದೆ. ಗ್ಯಾಸು, ಫ್ರಿಜ್, ಮಿಕ್ಸಿಗಳಲ್ಲದೇ ಲೂನಾ, ಕೈನೆಟಿಕ್, ಕಾರ್ ಗಳ ಸೌಲಭ್ಯವನ್ನೂ ಅವರು ಅವರು ಬಳಸಿಕೊಳ್ಳುವಂತೆ ಮಾಡಿರುವುದರಿಂದ ಅವಳು ಸ್ವತಂತ್ರಆಗಿ ಬಿಟ್ಟಿದ್ದಾಳೆ ಎಂಬ ಭ್ರಮೆ ಉಂಟುಮಾಡುವಂಥ ವಾತಾವರಣ ನಿರ್ಮಿತವಾಗುತ್ತಲಿದೆ. ಆದರೆ ನೈಜ ಪರಿಸ್ಥಿತಿಯೇ ಬೇರೆ.
ಹಿಂದೆ ಅಡಿಗೆಗೇ ಮೀಸಲಾದ ಹೆಣ್ಣು ಇಂದಿನ ಆಧುನಿಕ ಉಪಕರಣಗಳಿಂದ ಕೆಲಸದ ಶ್ರಮವನ್ನು ಸ್ವಲ್ಪ ಹಗುರ ಮಾಡಿಕೊಂಡರೂ, ಕಾಲವನ್ನು ಸ್ವಲ್ಪ ಉಳಿಸಿಕೊಂಡರೂ ತನ್ನ ಸಂಬಳ ತರುವ ಕೆಲಸ ಸೇರಿಕೊಂಡಿರುವುದರಿಂದ ಮೊದಲಿನ ಎರಡರಷ್ಟು ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ. ಶ್ರಮ ಪಡಬೇಕಾಗಿದೆ. ಹೆಚ್ಚು ಕಾಲ ದುಡಿಯಬೇಖಾಗಿದೆ. ಈ ಡಬಲ್ ವರ್ಕನ್ನು ಜವಾಬ್ದಾರಿಯುತವಾಗಿ ಮಾಡಿಕೊಳ್ಳದಿದ್ದರೆ ಸಂಸಾರಕ್ಕೆ ಎರವಾಗುವ ಭಯ ಹಿಂದಿನದಕ್ಕಿಂತ ಇಂದು ಹೆಚ್ಚಾಗಿ ಮಹಿಳೆಯನ್ನು ಕಾಡುತ್ತಿದೆ. ಗಂಡನ ಸಹಾಯ ಹಸ್ತವನ್ನು ಮನೆಗೆಲಸದಲ್ಲಿ ತಾನು ಬಯಸಿದರೆ ಆರ್ಥಿಕ ಭದ್ರತೆ ಇದ್ದರೂ ಎಲ್ಲಿ ಒಂಟಿಯಾಗಿ ಸಮಾಜದ ಕುಹಕ ದೃಷ್ಟಿಗೆ ಬಲಿಯಾಗುವೆನೋ ಎಂಬ ದಿಗಿಲಿನಿಂದ ಬಿಡುವಿಲ್ಲದ ತನ್ನ ಕಾಯಕವನ್ನು ಬೆಳಗ್ಗಿನ ೮ ಗಂಟೆಯಿಂದ ರಾತ್ರಿ ೧೦ರ ವರೆಗೂ ನಿರ್ವಹಿತ್ತಲೇ ಇರುವಳು. ಸರ್ಕಾರಿ ಕೆಲಸದ ಅವಧಿ ೬ ಗಂಟೆ. ಪುರುಷ ಅಷ್ಟು ಕಾಲ ದುಡಿದು ಬಂದರೆ ಆ ದಿನದ ಕೆಲಸ ಹೆಚ್ಚು ಕಡಿಮೆ ಮುಗಿದಂತೆ. ಆದರೆ ಮಹಿಳೆಯ ಸ್ಥಿತಿ ಹಾಗಿಲ್ಲ, ಅವಳದು ದಿನಕ್ಕೆ ಸುಮಾರು ೧೫-೧೬ ಗಂಟೆಗೆಕಡಿಮೆ ಇಲ್ಲದ ಕೆಲಸ.
ಯು ಎನ್ ಒ ವರದಿ ಪ್ರಕಾರ-"ವಿಶ್ವದ ಜನಸಂಖ್ಯೆಯಲ್ಲಿ ಸ್ತ್ರೀಯರ ಸಂಖ್ಯೆ ಅರ್ಧದಷ್ಟಿದೆ. ವಿಶ್ವದ ಕೆಲಸಗಳಲ್ಲಿ ಸ್ತ್ರೀಯರು ಮೂರನೆಯ ಎರಡರಷ್ಟು ಭಾಗ ಕೆಲಸ ಮಾಡುತ್ತಾರೆ. ಇವರ ಆದಾಯ ವಿಶ್ವದ ಹತ್ತನೆಯ ಒಂದು ಭಾಗ. ಸ್ವಂತ ಆಸ್ತಿ ನೂರರಲ್ಲಿ ಒಂದು ಭಾಗ." ಈ ಲೆಕ್ಕ ದಾಖಲಿಸಿದೆ. ಆಯಾಸ ಪರಿಹಾರಕ್ಕೂ ಅವಳಿಗೆ ಸರಿಯಾದ ಸಮಯ ಇಲ್ಲದಂತ ಸ್ಥಿತಿ ಇದೆ. ತನ್ನ ಸಾಧನೆಯ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವುದಕ್ಕೆ ಓದಿಗಾಗಲೀ, ಇತರ ಕಾರ್ಯ ಚಟುವಟಿಕೆಗಳಿಗಾಗಲೀ ಅವಳಿಗೆ ಸಮಯವೆಲ್ಲಿ? ಬಿಡುವೆಲ್ಲಿ? ಆದ್ದರಿಂದ ಪ್ರಗತಿ ಸಾಧಿಸಲು ಪುರುಷನೊಡನೆ ಸಮಾನವಕಾಶ ಅವಳಿಗೆ ಇಲ್ಲವಾಗಿದೆ. ಹೆಣ್ಣು ತಂದೆಗೆ ಮಗಳಾಗಿ, ಗಂಡನಿಗೆ ಮಡದಿಯಾಗಿ ವೃದ್ಧಾಪ್ಯದಲ್ಲಿ ಮಗನ ಆಶ್ರಯದಲ್ಲಿ ಹೀಗೆ ತನ್ನ ಜೀವನದುದ್ದಕ್ಕೂ ಸ್ವಾತಂತ್ರ, ಉದ್ಯೋಗದಿಂದ ನಿವೃತ್ತಿ ಇಲ್ಲದ ಮತ್ತು ಪುರಸ್ಕಾರವೂ ಇಲ್ಲದ ಜೀವನ ಸಾಗಿಸಬೇಕಾದ ಪಾಡು ಅವಳದಾಗಿದೆ. ಹಿಂದಿನಿಂದಲೂ ಹೆಣ್ಣೀನ ಅಂತಿಮ ಗುರಿ ಮದುವೆ ಎಂದು ಇದ್ದುದರಿಂದಲೇ ಶಿಕ್ಷಣವೂ ಇಂದು ಹೆಣ್ಣೂ ಮತ್ತು ಮದುವೆಯ ಮಧ್ಯವರ್ತಿ ಸೇತುವೆಯಾಗಿದೆ. ವರ ವಿದ್ಯಾವಂತ-ಕೆಲಸದಲ್ಲಿರುವ ವಧುವನ್ನು ಬಯಸುವುದರಿಂದ ಹೆಣ್ಣಿಗೆ ಓದು, ಕೆಲಸ ಎಂಬಂತಾಗಿದೆ. ಇದರ ಜೊತೆಗೆ ವರದಕ್ಷಿಣೆಯ ಪೀಡೆ ಸೇರಿಕೊಂಡಿದೆ. ಅದು ಹೆಣ್ಣಿನ ದಾರುಣ ಅವಸ್ಥೆಯ ದ್ಯೋತಕವಾಗಿ ಹೆಣ್ಣನ್ನು ಅವಮಾನಿಸಲ್ಪಡುವ ವ್ಯವಹಾರವಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲೂ ತಂತ್ರ ವಿಜ್ನಾನದಿಂದ ಭ್ರೂಣದಲ್ಲಿಯೇ ಶಿಶುವುನ ಲಿಂಗ ಪತ್ತೆ ಹಚ್ಚಿ ಹೆಣ್ಣು ಭ್ರೂಣದ ಹತ್ಯೆ ನಡೆಸುವುದೂ ಸಾಗಿದೆ. ಇಂಥ ವಿಷಯಗಳಲ್ಲಿಯೂ ಸರಕಾರದ ಅಸಡ್ಡೇಯ ವಿಳಂಬ ನೀತಿ ನಮ್ಮ ಸಮಾಜ ಹೆಣ್ಣಿನ ವಿಷಯದಲ್ಲಿ ತಳೆದ ಪ್ರತಿಗಾಮಿ ನೀತಿಗೆ ಕನ್ನಡಿ ಹಿಡಿದಂತಿದೆ. ಹೆಣ್ಣು ಮಕ್ಕಳು ಎಷ್ಟೇ ಒಳ್ಳೆಯ ಶಿಕ್ಷಣ ಪಡೆದು ತಮ್ಮ ಗಂಡು ಮಕ್ಕಳಿಗಿಂತ ಮುಂದಿದ್ದರೂ ವಿದೇಶದಲ್ಲಿ ಹೆಚ್ಚು ಹಣಗಳಿಸುವ ಡಾಲರು ವರ ಬಂದರೆ ತಾಯ್ತಂದೆ ಬಂಧುಬಳಗದವರು ಸೇರಿ ಅವಳ ವಿದ್ಯಾಭ್ಯಾಸ ಮೊಟಕುಗೊಳಿಸುವಂತೆ ಮಾಡಿ ಮದುವೆ ಮಾಡಿಸುವುದಂತೂ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.
ಅಂತೂ ಹೆಣ್ಣು ಒಟ್ಟೂ ಜನಸಂಖ್ಯೆಯ ಅರ್ಧದಷ್ಟಿದ್ದರೂ ಈಗಿನ ಸಮಾಜದಲ್ಲಿಯೂ ಅವಳ ಜೀವನ ನಿಯಂತ್ರಿಸುವವನು ಪುರುಷ. ಜನಸಂಖ್ಯೆಯಲಿ ಅರ್ಧದಷ್ಟಿರುವ ಮಹಿಳಾಶಕ್ತಿ ಪ್ರತಿಭೆಗಳನ್ನು ಸರಿಯಾಗಿ ಬೆಳೆಸುವ, ಸದುಪಯೋಗ ಪಡಿಸಿಕೊಳ್ಳುವ ವಿವೇಕ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ರಾಷ್ಟ್ರ ಜೀವನದಲ್ಲಿ ಕಾಣುತ್ತಿಲ್ಲ. ಅಲ್ಲಿಯವರೆಗೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆಯ ಪ್ರಗತಿ ಕುಂಠಿತವಾಗುವುದು ಮಾತ್ರವಲ್ಲ ಇಡೀ ರಾಷ್ಟ್ರದ ಪ್ರಗತಿಯೇ ಕುಂಠಿತವಾಗುತ್ತದೆ ಎಂಬ ಅರಿವು ಎಲ್ಲರಲ್ಲಿಯೂ ಮೂಡಬೇಕಾಗಿದೆ.
(ಮುಂದುವರೆಯುವುದು) |
|
‘ಸಾಂಗ್ ಆಫ್ ಲಾವಿನೋ’ ದಿಂದ
ಮೂಲ:ಒಕಾಟ್ ಪಿ. ಬಿಟೆಕ್, ಉಗಾಂಡಾ.
ಅನುವಾದ: ಎಚ್ ಎಸ್. ರಾಘವೇಂದ್ರ ರಾವ್ |
|
|
....
ಗಡಿಯಾರ ಈಗ, .. ... ....
ಗಡಿಯಾರ, ನನ್ನ ಗಂಡನ ಒಡೆಯನಾಗಿಬಿಟ್ಟಿದೆ
ಅದು ಗಂಡನ ಗಂಡನಾಗಿಬಿಟ್ಟಿದೆ.
ಈಗ ನನ್ನ ಗಂಡ
ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ
ಚಿಕ್ಕಹುಡುಗನ ಹಾಗೆ ಓಡಾಡುತ್ತಾನೆ,
ಘನತೆಯಿಲ್ಲದೆ, ಗೌರವವಿಲ್ಲದೆ.
ಮನೆಗೆ ಅತಿಥಿಗಳು ಬಂದಾಗ
ಅವನ ಮುಖ ಕಪ್ಪಿಡುತ್ತದೆ.
ಸ್ವಾಗತದ ದನಿಯಿಲ್ಲ, ಮುಗುಳುನಗೆ ಇಲ್ಲ.
ಸುಮ್ಮನೆ ಕೇಳುತ್ತಾನೆ
“ವಾಟ್ ಕೆನ್ ಐ ಡು ಫಾರ್ ಯು?”
ಬಿಳಿಯರ ಗಡಿಯಾರದ ಈ ಗಣಿತ ನನಗೆ ಅರ್ಥವಾಗುವುದಿಲ್ಲ.
ಅಮ್ಮ ಹೇಳಿಕೊಟ್ಟ ಅಕೋಲಿಗಳ ಕಾಲಗಣನೆ ಗೊತ್ತು ನನಗೆ
ನನ್ನ ಜನಗಳ ಸಂಪ್ರದಾಯಗಳು ಮಾತ್ರ ಗೊತ್ತಿವೆಯೆಂದು
ಬಾಯಿಬಡಿಯಲು ನೀವು ಯಾರು?
ಮಗು ಅಳುತ್ತಿದೆಯೇನು?
ಅದು ಮೊಲೆ ಚೀಪಲಿ, ಹಾಲು ಕುಡಿಯಲಿ
ಮೊಲೆಹಾಲು ಕುಡಿಸಲೂ ಗಡಿಯಾರ ಬೇಕೇ?
ಮಗು ಅಳುತ್ತಿದ್ದರೆ,
ಅವನು ಅಸ್ವಸ್ಥನಿರಬಹುದು
ಮಗುವಿನ ಮೊದಲ ಔಷಧಿ ಮೊಲೆಯೆ.
ಹಾಲುಣಿಸು ಕಂದನಿಗೆ, ಅಳುವು ನಿಲ್ಲುತ್ತದೆ.
ಜ್ವರವೆ ಬಂದಿದ್ದರೂ ಮೊಲೆಯ ಹೀರುತ್ತಿರಲಿ,
ಬೀರುಹೀರುವ ವೈದ್ಯ ಬರುವತನಕ.
ನಮ್ಮ ಮನೆಯಂಗಳದ ಮಕ್ಕಳು
ಗಡಿಯಾರ ನೋಡಿ ಮಲಗುವುದಿಲ್ಲ.
ಕಣ್ಣುರೆಪ್ಪೆಗಳು ಭಾರವಾದಾಗ ಅವರು ಮಲಗುತ್ತಾರೆ
ಅವು ಗರಿಹಗುರವಾದಾಗ ಎದ್ದು ಚಿಮ್ಮುತ್ತಾರೆ.
ಮಗು ಕೊಳೆಯಾಗಿದ್ದಾನೆಯೇ?
ಸರಿ ಅವನಿಗೆ ಸ್ನಾನ ಮಾಡಿಸಿ.
ಅದಕ್ಕಾಗಿ ಸೂರ್ಯನ ಕಡೆಗೆ ನೋಡುವ ಅಗತ್ಯವಿಲ್ಲ.
ಮನೆಯಲ್ಲಿ ನೀರೇ ಇಲ್ಲದಾಗ,
ಎಲ್ಲಿಯ ಗಡಿಯಾರ? ಇನ್ನೆಲ್ಲಿಯ ಸ್ನಾನ??
ನನ್ನ ಗಂಡನೆ, ಕೇಳು:
ಅಕೋಲಿಗಳ ತಿಳಿವಳಿಕೆಯಲ್ಲಿ,
ಕಾಲವನ್ನು ಪೆದ್ದುಪೆದ್ದಾಗಿ ಗಂಟೆನಿಮಿಷಗಳಾಗಿ
ಕತ್ತರಿಸಿ ಇಟ್ಟಿಲ್ಲ.
ಅದು ಮುಗಿಯುವ ತನಕ ಹೀರಲೇಬೇಕಾದ
ಸದಾ ಸರ್ವದಾ ಹರಿಯುತ್ತಲೇ ಇರುವ
ಮಡಕೆಯೊಳಗಿನ ಮಧುವಲ್ಲ.
ಕಾಲವೆನ್ನುವುದು,
ಬೇಟೆಯಾಡಿಬಂದ ತರುಣರ ನಡುವೆ ಕುಳಿತಿರುವ,
ನೋಡನೋಡುತ್ತಲೇ ಮಾಯವಾಗುವ ರಾಗಿರೊಟ್ಟಿಯಲ್ಲ.
ಅದು ತಟ್ಟೆಯೊಳಗಿನ ತರಕಾರಿಯಂತೆ ಮುಗಿದುಹೋಗುವುದಿಲ್ಲ.
ಸೋಮಾರಿ ಯುವಕನ ಮುಖಕ್ಕೆ ಉಗಿಯುತ್ತಾರೆ,
ಸೋಮಾರಿ ಯುವತಿಯ ಕೆನ್ನೆಗೆ ಹೊಡೆಯುತ್ತಾರೆ,
ಸೋಮಾರಿ ಹೆಂಡತಿಗೆ ಏಟು ಬೀಳುತ್ತದೆ
ಸೋಮಾರಿ ಗಂಡನನ್ನು ನೋಡಿ ನಗುತ್ತಾರೆ.
ಏಕೆ ಗೊತ್ತೇನು?
ಅವರು ಕಾಲಹರಣ ಮಾಡುವರೆಂದು ಅಲ್ಲ.
ಏನನ್ನೂ ಸೃಷ್ಟಿಸದೆ ಎಲ್ಲವನ್ನೂ ತಿಂದುತೇಗುವರೆಂದು.
ಅಷ್ಟೆ.
ಹೀಗೆಯೇ ಮುಂದುವರಿದರೆ,
ನಿಮ್ಮ ಹಳ್ಳಿಗಳ ಮೇಲೆ
ಬರಗಾಲ ದಾಳಿಯಿಡುತ್ತದೆ.
ನಿಮ್ಮ ಹೆಂಗಸರು ಭಿಕ್ಷೆಯ ಬೋಗುಣಿ ಹಿಡಿದು
ಪಕ್ಕದ ಹಳ್ಳಿಗಳಲ್ಲಿ ಊರಾಡುತ್ತಾರೆ.
ಅವರ ಸಂಗಡ ಅಪರಿಚಿತ ಗಂಡಸರು ಮಲಗುತ್ತಾರೆ.
ನಿಮ್ಮ ಹೆಂಡಿರ ಕೂಡ ಅವರ ರತಿಕೇಳಿ,
ನೀವೇನು ಮಾಡುವಿರಿ ಆಗ, ಹೇಳಿ.
|
|
|
|
|
|
Copyright © 2011 Neemgrove Media
All Rights Reserved
|
|
|
|