ಬಹುತೇಕ ನ್ಯೂಸ್ ಚಾನಲ್ಲುಗಳಲ್ಲಿ ನಡೆಯುವ ಸಂವಾದ ಕಾರ್ಯಕ್ರಮಗಳಲ್ಲಿ ಪಕ್ಷಾಂತರಿ ರಾಜಕಾರಣಿಗಳನ್ನು ಟೀಕಿಸುವುದು ಸಾಮಾನ್ಯವಾಗಿದೆ. ಈ ಸಂವಾದ ನಡೆಸಿಕೊಡುವ ನಿರೂಪಕರು ಪಕ್ಷಾಂತರಿಗಳ ಬಗ್ಗೆ ಪುಂಖಾನುಪುಂಖವಾಗಿ ಟೀಕಿಸುವುದರಲ್ಲಿ ನಿಸ್ಸೀಮರು. ಈ ನಿರೂಪಕರಲ್ಲಿ ಬಹುತೇಕರು ವೃತ್ತಿನಿರತ ಪತ್ರಕರ್ತರಾಗಿರುವುದಿಲ್ಲ. ಸುದ್ದಿ ವಾಚಕರಾಗಿ ಕೆಲಸಕ್ಕೆ ಸೇರಿದವರೆಲ್ಲಾ ಮಹಾನ್ ಪ್ರಕಾಂಡ ಪಂಡಿತರಂತೆ ಪೋಸು ಕೊಡುವುದರಲ್ಲಿ ಪರಿಣಿತರು. ವಿಪರ್ಯಾಸವೆಂದರೆ ಪಕ್ಷಾಂತರಿ ರಾಜಕಾರಣಿಗಳನ್ನು ಟೀಕಿಸುವ ಇವರೇ ಮನಬಂದಂತೆ ಚಾನಲ್ಲುಗಳಿಂದ ಚಾನಲ್ಲುಗಳಿಗೆ ನೆಗೆಯುತ್ತಿರುತ್ತಾರೆ. ಇಂದು ಒಂದು ನ್ಯೂಸ್ ಚಾನಲ್ಲಿನಲ್ಲಿ ಕಾಣಿಸುವ ಮುಖ ನಾಳೆ ಮತ್ತೊಂದು ಚಾನಲ್ಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಹೊಸ ಹೊಸ ಚಾನಲ್ಲುಗಳು ಶುರುವಾದಂತೆಲ್ಲಾ ಈ ತಂಗಳು ಮುಖಗಳೇ ಅಲ್ಲಿ ತರತರಾವರಿ ವೇಷಗಳಲ್ಲಿ ರಾರಾಜಿಸತೊಡಗುತ್ತವೆ. ಒಂದು ಚಾನಲ್ಲಿಗೇ ನಿಷ್ಟೆಯಿಂದಿರದ ಈ ಮಂದಿ ಪಕ್ಷಾಂತರಿ ರಾಜಕಾರಣಿಗಳನ್ನು ಟೀಕಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಎಷ್ಟೋ ಬಾರಿ ಈ ನಿರೂಪಕರು ತಾವಿದ್ದ ಚಾನಲ್ಲನ್ನು ಬಿಟ್ಟು ಹೊಸ ಚಾನಲ್ಲಿಗೆ ಸೇರಿಕೊಂಡ ನಂತರವೂ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ತಮ್ಮ ಹಳೆಯ ಚಾನಲ್ಲಿನ ಹೆಸರನ್ನೇ ಹೇಳಿ ನಗೆಪಾಟಲಿಗೀಡಾಗುತ್ತಾರೆ.
ಪ್ರಿಯ ಓದುಗರೇ, ಈ ನ್ಯೂಸ್ ಚಾನಲ್ಲುಗಳಲ್ಲಿ ಸಿಗುವ ಮನರಂಜನೆ ಇತರ ಮನರಂಜನೆಯ ಚಾನಲ್ಲುಗಳಿಗಿಂತೇನೂ ಕಡಿಮೆಯಿಲ್ಲವೆಂಬುದನ್ನು ನಾವು ಪದೇ ಪದೇ ಹೇಳುತ್ತಿದ್ದೇವೆ. ಈ ಮನರಂಜನೆಯ ಮಜಲುಗಳನ್ನು ಬಿಚ್ಚಿಡುತ್ತಾ ನಿಮ್ಮ ಮನ ಮನರಂಜಿಸುವುದಷ್ಟೇ ನಮ್ಮ ಉದ್ದೇಶ.
ಕನ್ನಡದಲ್ಲೊಂದು ಹಳೆಯ ಸುದ್ದಿ ಮಾದ್ಯಮವೊಂದಿದೆ. ಊದುವ ಟಿವಿ ಎಂಬುದು ಅದರ ಹೆಸರು. ಬೇರೆ ನೇರೆ ನ್ಯೂಸ್ ಚಾನಲ್ಲುಗಳಲ್ಲಿನ ನಿರೂಪಕರುಗಳ ಫೇಸ್ ಕಟ್ ಗಳು ಬದಲಾಗುತ್ತಿದ್ದರೆ ಈ ಊದುವ ಚಾನಲ್ಲಿನಲ್ಲಿ ದಶಕದಿಂದಲೂ ಅದೇ ಫೇಸ್ ಕಟ್ ಗಳಿರುವುದೇ ಇದರ ವಿಶೇಷ. ಇನ್ನೂ ದಶಕದ ಕಾಲ ಇವುಗಳೇ ಮುಂದುವರೆಯುವುದರಲ್ಲೂ ಯಾವುದೇ ಅನುಮಾನವಿಲ್ಲ. ಏಕೆಂದರೆ ಇಲ್ಲಿ ಕೆಲಸಕ್ಕೆ ಸೇರಿದವರು ಅಷ್ಟು ಸುಲಭವಾಗಿ ಕೆಲಸ ಬಿಡುವುದಿಲ್ಲ. ಇತ್ತೀಚೆಗೆ ಬಂದಿರುವ ಚಾನಲ್ಲುಗಳಿಗಿಂತಾ ಈ ಟಿವಿ ಬಹಳ ಭಿನ್ನವಾಗಿದೆ. ಒಂದೆರಡು ದಿನದ ಸುದ್ದಿಯನ್ನು ನೋಡದವರು ಛೇ, ನಾವು ಮಿಸ್ ಮಾಡಿಕೊಂಡೆವಲ್ಲಾ ಎಂದು ಪರಿತಪಿಸಬೇಕಿಲ್ಲ. ಅವರು ಊದುವ ಟಿವಿ ಹಾಕಿದರೆ ಸಾಕು ಎರಡು ಮೂರು ದಿನಗಳ ಹಿಂದಿನ ಸುದ್ದಿಯೂ ಲೈವ್ ಎಂದೇ ಬಿತ್ತರವಾಗುತ್ತಿರುತ್ತೆ! ಅಷ್ಟು ಭಿನ್ನ ಈ ಟಿವಿ.
ಈ ಊದುವ ಟೀವಿಯಲ್ಲಿ ವಾಚಾಳ ತಿಮ್ಮರಸ ಅಲಿಯಾಸ್ ’ಉತ್ತರ’ ಕುಮಾರನೆಂಬ ನಿರೂಪಕನೊಬ್ಬನಿದ್ದಾನೆ. ಲಾಸ್ಯ, ನಾಟ್ಯ ಎಲ್ಲವೂ ಕೂಡಿದ ಮಾತಿನ ಕಾರ್ಯಕ್ರಮ ಈತನದ್ದು! ಈತನ ವಿಶೇಷವೆಂದರೆ ತನ್ನ ಮುಂದೆ ಕೂರಿಸಿಕೊಳ್ಳುವ ಅತಿಥಿಗಳಿಗೆ ತಾನು ಕೇಳುವ ಜಹಾಂಗೀರ್ ಜಂಕ್ಷನ್ ನಂತಹ ಕೊನೆ ಮೊದಲಿಲ್ಲದ ಪ್ರಶ್ನೆಗಳಿಗೆ ತಾನೇ ಉತ್ತರವನ್ನು ಕೊಟ್ಟು ಅತಿಥಿಯ ದಿಲ್ ಖುಶ್ ಮಾಡುವುದು! ಈತನ ಪ್ರಶ್ನೆ ಏನೆಂಬುದೇ ಅರ್ಥವಾಗದೇ ಮುಂದೆ ಕೂತವರು ತಡಬಡಿಸುವುದರಿಂದ ಅದಕ್ಕೆ ಉತ್ತರವನ್ನೂ ತಾನೇ ನೀಡಿ ಅವರು ತಡಬಡಾಯಿಸುವುದನ್ನು ತಪ್ಪಿಸುತ್ತಾನೆ ಈ ’ಉತ್ತರ’ ಕುಮಾರ! ಈತ ನಡೆಸಿಕೊಡುವ ಕಾರ್ಯಕ್ರಮದ ಒಂದು ಸ್ಯಾಂಪಲ್ ನಿಮಗಾಗಿ, ನಿಮ್ಮ ಮನೋಲ್ಲೋಸಕ್ಕಾಗಿ, ನಿಮ್ಮ ಮುಂದಿಡುತ್ತಿದ್ದೇವೆ ಓದಿ ಸುಮ್ಮನೇ ನಕ್ಕುಬಿಡಿ.
ಆತನೊಬ್ಬ ಹಳೆಯ ರಾಜಕಾರಣಿ. ರಾಜಕೀಯದಲ್ಲಿ ನುರಿತವನು. ರಾಜ್ಯ ರಾಜಕಾರಣದಲ್ಲಿ ಪ್ರಮುಖ ನಾಯಕರಲ್ಲೊಬ್ಬ. ಆತನನ್ನು ಹಿಡಿದು ತಂದು ತನ್ನ ಮುಂದೆ ಕೂರಿಸಿಕೊಳ್ಳುವ ವಾಚಾಳ ತಿಮ್ಮರಸನೆಂಬ ’ಉತ್ತರ’ ಕುಮಾರ ತನ್ನ ಕಾರ್ಯಕ್ರಮವನ್ನು ಆರಂಭಿಸುತ್ತಾನೆ.
ತಿಮ್ಮರಸ: ನೋಡೀ ಇವ್ರೇ, ನೀವು ರಾಜ್ಯದಲ್ಲಿ ಅನೇಕ ವರ್ಷದಿಂದಲೂ ರಾಜಕೀಯ ಮಾಡುತ್ತಲೇ ಬಂದಿದ್ದೀರಿ, ಈಗ ನಿಮ್ಮ ಪಕ್ಷದ್ದೇ ಸರ್ಕಾರವಿದೆ. ನೀವು ನಿಮ್ಮ ಪಕ್ಷವನ್ನು ಆಡಳಿತಕ್ಕೆ ತರುವಲ್ಲಿ ಬಹಳ ಒದ್ದಾಡಿದ್ದೀರಿ, ಈಗ ನಿಮ್ಮ ಪಕ್ಷದಲ್ಲಿ ಭಿನ್ನ ಮತ ಶುರುವಾಗಿದೆ, ಇದಕ್ಕೆ ನೀವೇ ಕಾರಣವೆಂಬುದು ನನ್ನ ಅಭಿಪ್ರಾಯವಲ್ಲ, ಅದು ಜನರ ಅಭಿಪ್ರಾಯವಾಗಿದೆ. ಜನರು ಆ ಬಗ್ಗೆ ಮಾತಾಡಿಕೊಳ್ಳುತ್ತಿದ್ದಾರೆ. ನೀವು ಇದರ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡಬಯಸುತ್ತೀರಿ, ನೀವು ಬಹಳ ವರ್ಷ ರಾಜಕಾರಣದಲ್ಲೀದ್ದೀರಿ ರಾಜ್ಯ ರಾಜಕಾರಣದಲ್ಲಿ ನಿಮ್ಮದು ಬಹಳ ನಡೆಯುತ್ತೆ! ಬಹಳ ಕಠಿಣ ಶ್ರಮ ಪಟ್ಟು ನೀವು ಆಡಳಿತವನ್ನು ಹಿಡಿದಿದ್ದೀರಿ, ನೀವು ಇಂಥಾ ಸಂದರ್ಭದಲ್ಲಿ ಮುನಿಸಿಕೊಂಡಿರುವುದು ಸರಿಯಾ?
ರಾಜಕಾರಣಿ: ’ನೋಡಿ ಸಾರ್, ನಾನೇನು ಹೇಳ್ತೀನಿ ಅಂದ್ರೆ’ ಅಂದು ಮಾತು ಮುಂದುವರೆಸುವಷ್ಟರಲ್ಲೇ
ತಿಮ್ಮರಸ: ’ಹಾ ನಂಗೊತ್ತು, ನಂಗೊತ್ತು, ಒಂದೇನಪ್ಪಾಂತಂದ್ರೆ, ನೀವು ಏನ್ ಹೇಳ್ತೀರಂತ ನಂಗೊತ್ತು. ನನಗೂ ಅದಕ್ಕೂ ಸಂಬಂಧವಿಲ್ಲಾ, ನಾನು ಭಿನ್ನಮತ ಮಾಡುತ್ತಿಲ್ಲಾ, ನಾನು ಪಕ್ಷದ ನಿಷ್ಟಾವಂತ ರಾಜಕಾರಣಿ, ನನಗೆ ಪಕ್ಷ ಮುಖ್ಯ ಅಂತಾ ನೀವಂತೀರಂತಾ ನಂಗೊತ್ತು. ನೋಡಿ ಇವ್ರೇ, ಇಂದು ನಿಮ್ಮ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಇದು ನನ್ನ ಅಭಿಪ್ರಾಯವಲ್ಲ, ಹಾಗಂತಾ ಜನ ಮಾತಾಡಿಕೊಳ್ಳುತ್ತಿದ್ದಾರೆ, ಯಾಕೆ ಎಲ್ಲವೂ ಸರಿಯಿಲ್ಲ, ಆರಂಭದಲ್ಲಿ ಚೆನ್ನಾಗಿತ್ತಲ್ಲಾ, ಯಾಕೆ ಈಗ ಸರಿಯಿಲ್ಲಾ, ಅದಕ್ಕೆ ನೀವೇನಂತೀರಿ?. ಹಾ ಹಾಗೆ ನಿಮ್ಮ ಪಕ್ಷದಲ್ಲಿ ಎದ್ದಿರುವ ಗೊಂದಲಕ್ಕೆ ನಿಮ್ಮ ಮುಖ್ಯಮಂತ್ರಿಗಳೇ ಕಾರಣ ಅಂಥಾ ಅಭಿಪ್ರಾಯವಿದೆ ಇದು ನನ್ನ ಅಭಿಪ್ರಾಯವಲ್ಲ ಜನರದ್ದು, ಜನ ಹಾಗಂತಾ ಮಾತಾಡುತ್ತಿದ್ದಾರೆ, ಯಾಕೆ ಮುಖ್ಯ ಮಂತ್ರಿಗಳು ಅಧಿಕಾರವನ್ನು ಸರಿಯಾಗಿ ನಡೆಸುತ್ತಿಲ್ಲ?, ಹಾಗೊಂದು ವೇಳೆ ಅವರು ಸರಿಯಾಗಿ ಆಡಳಿತ ನಡೆಸುವುದಿಲ್ಲ ಅಂತಾದರೆ ನಿಮಗಾದರೂ ಆ ಖುರ್ಚಿಯನ್ನು ಬಿಟ್ಟುಕೊಡಬಹುದಲ್ಲಾ, ಅದನ್ನು ಯಾಕೆ ಅವರು ಮಾಡುತ್ತಿಲ್ಲ, ಈ ಬಗ್ಗೆ ನಾಡಿನ ಜನತೆಗೆ ನೀವು ದೀರ್ಘವಾದ ಉತ್ತರವನ್ನು ಕೊಡಬೇಕಾಗಿದೆಯಲ್ಲವೇ?.’
ಈತ ಕೇಳಿದ ಪ್ರಶ್ನೆಯ ತಲೆ ಬುಡ ಅರ್ಥವಾಗದ ರಾಜಕಾರಣಿ: ’ನೋಡೀ ಸಾರ್, ನೀವು ಯಾರ ಕುರಿತು ಪ್ರಶ್ನೆ ಕೇಳಿದ್ದೀರಿ ಅನ್ನೋದು ಗೊತ್ತಾಗ್ಲಿಲ್ಲ, ನಾನು ಏನು ಹೇಳೋದು ಅಂದ್ರೆ...." ಅನ್ನುವಷ್ಟರಲ್ಲಿ
ತಿಮ್ಮರಸ: ’ಹಾ ನಂಗೊತ್ತು, ನಂಗೊತ್ತು ನೀವೇನ್ ಹೇಳ್ತೀರಂತಾ ನಂಗೊತ್ತು. ಒಂದೇನಪ್ಪಂತಂದ್ರೆ, ನನಗೂ ಇದಕ್ಕೂ ಸಂಬಂಧವಿಲ್ಲಾ ಅಂತಾ ತಾನೇ ನೀವು ಹೇಳೋದು, ನಾನು ಪಕ್ಷದ ನಿಷ್ಟಾವಂತ ಅಂಥಾ ತಾನೇ ನೀವು ಹೇಳ್ತಿರೋದು!’ ಎಂದು ನಕ್ಕಾಗ ರಾಜಕಾರಣಿ ಹೌದೆಂದು ತಲೆ ಅಲ್ಲಾಡಿಸುತ್ತಾರೆ.
ಆಗ ಮುಂದುವರೆವ ತಿಮ್ಮರಸ: "ನೋಡೀ ಇವ್ರೇ...ನಾನು ಏನ್ ಹೇಳದೂಂದ್ರೆ ನೀವು ಇಷ್ಟೆಲ್ಲಾ ವರ್ಷ ರಾಜಕಾರಣಿಯಾಗಿ ಪಕ್ಷವನ್ನು ಕಟ್ಟಿದ್ದೀರಿ, ಈಗ ಅಧಿಕಾರದಲ್ಲಿದ್ದೀರಿ, ನಿಮ್ಮ ಬಹುತೇಕ ಮಂತ್ರಿಗಳು ರಾಜೀನಾಮೆ ನೀಡಿದ್ದಾರೆ, ಯಾಕೆ ಅವರಿಂದ ರಾಜೀನಾಮೆ ಪಡೆದಿರಿ? ಅವರಿಗೆ ಅದರ ಬಗ್ಗೆ ಬೇಸರವಾಗಿರಬಹುದಲ್ಲವೇ, ಇದು ನಿಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲವೆಂಬುದನ್ನು ತೋರಿಸುತ್ತದಲ್ಲವೇ?, ಇದು ನನ್ನ ಅಭಿಪ್ರಾಯವಲ್ಲಾ ಜನ ಹಾಗಂತಾ ಬೀದಿಯಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ, ಭ್ರಷ್ಟಾಚಾರವೆಂದರೆ ಏನು?, ಯಾತಕ್ಕಾಗಿ ಅದನ್ನು ಮಾಡಬೇಕು ಅಂತೆಲ್ಲಾ ನಾನಲ್ಲ, ಜನ ಕೇಳುತ್ತಿದ್ದಾರೆ. ನಿಮ್ಮಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು? ನೀವೇ ಅದಕ್ಕೆ ಅರ್ಹರು ಎಂಬುದು ನನ್ನ ಅಭಿಪ್ರಾಯವಲ್ಲ, ಜನ ಹಾಗಂತಾ ಮಾತಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೀವೆಂದರೆ ನೀವು ಒಪ್ಪಿಕೊಳ್ಳುತ್ತೀರಾ?
ರಾಜಕಾರಣಿ ಸಖತ್ ಖುಶಿಯಾಗಿ: ’ನೋಡೀ ಸಾರ್, ನೀವು...’ ಅನ್ನುವಷ್ಟರಲ್ಲಿ ಮಧ್ಯ ಪ್ರವೇಶಿಸುವ ತಿಮ್ಮರಸ...
’ಹಾ ನನಗ್ಗೊತ್ತು, ನನಗ್ಗೊತ್ತು, ನೀವೇನ್ ಹೇಳ್ತೀರಂತಾ, ಒಂದೇನಪ್ಪಾಂತಂದ್ರೆ ನೀವು ಜನ ಇಷ್ಟ ಪಟ್ಟರೆ ಮುಖ್ಯಮಂತ್ರಿಯಾಗಕ್ಕೆ ರೆಡೀ ಅಂತಾ ನಂಗೊತ್ತು, ಆದ್ರೆ ಏನಪ್ಪಾಂದ್ರೆ ನೀವು ಮುಂದಿನ ಮುಖ್ಯಮಂತ್ರಿಯಾದ್ರೆ ಯಾವ ರೀತಿ ಈಗ ಎದ್ದಿರುವ ಭಿನ್ನಮತವನ್ನು ಬಗೆಹರಿಸುತ್ತೀರಿ ಎಂಬುದು ನನ್ನ ಪ್ರಶ್ನೆಯಲ್ಲಾ ಜನ ಹಾಗಂತಾ ಬೀದಿಯಲ್ಲಿ ಮಾತಾಡುತ್ತಿದ್ದಾರೆ, ನೀವು ಭ್ರಷ್ಟಾಚಾರವನ್ನು ಹೇಗೆ ತಡೆಯುತ್ತೀರಿ, ನಿಮ್ಮ ಮೇಲೂ ಭ್ರಷ್ಟಾಚಾರದ ಆಪಾದನೆಗಳಿವೆಯಲ್ಲಾ, ಇದು ನನ್ನ ಅಭಿಪ್ರಾಯವಲ್ಲ, ಜನ ಹಾಗಂತಾ ಮಾತಾಡುತ್ತಿದ್ದಾರೆ, ನಿಮ್ಮನ್ನು ಯಾಕೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕು?, ನೀವೇ ಈ ಮುಖ್ಯಮಂತ್ರಿಯನ್ನು ಕೆಳಗಿಳಿಸಲು ಹುನ್ನಾರ ನಡೆಸುತ್ತಿದ್ದೀರಾ?, ಇದು ನನ್ನ ಅಭಿಪ್ರಾಯವಲ್ಲ, ಜನ ಹಾಗಂತಾ ಬೀದಿಯಲ್ಲಿ ನಿಂತು ಮಾತಾಡುತ್ತಿದ್ದಾರೆ. ನೀವು ನಿಮ್ಮ ಮುಖ್ಯಮಂತ್ರಿ ರಾಜಿಗೆ ಕರೆದರೆ ಒಪ್ಪಿಕೊಳ್ಳುತ್ತೀರಾ? ನೀವು ನಿಮ್ಮ ಸ್ವಾರ್ಥಕ್ಕಾಗಿ ಭಿನ್ನಮತವನ್ನು ಆರಂಭಿಸಿದ್ದೀರಿ ಎಂಬುದು ನನ್ನ ಅಭಿಪ್ರಾಯವಲ್ಲಾ ಜನ ಹಾಗಂತಾ... ಇದರ ಬಗ್ಗೆ ನೀವೇನಂತೀರಿ?.
ರಾಜಕಾರಣಿ: ’ನೋಡೀ, ತಿಮ್ಮರಸರೇ, ನಾನು...’
ತಿಮ್ಮರಸ: ’ಹಾ ನಂಗೊತ್ತು, ನಂಗೊತ್ತು, ಜನ ಇಷ್ಟ ಪಟ್ಟರೆ ನಾನು ಮುಖ್ಯಮಂತ್ರಿಯಾಗೋಕೆ ರೆಡಿ ಅಂತಾ ನೀವೇಳ್ತೀರಿ ಅಂತ ನಂಗೊತ್ತು. ಒಂದೇನಪ್ಪಾಂತಂದ್ರೆ ನೀವು ಹಿಂದೆಲ್ಲಾ ನಾನು ಮುಖ್ಯಮಂತ್ರಿಯಾಗಕ್ಕೆ ಸಿದ್ದ ಎಂದೇ ಹೇಳ್ತಿದ್ರಿ, ಈಗ ಬಿನ್ನಮತದ ಮೂಲಕ ನೀವು ಈ ಮುಖ್ಯಮಂತ್ರಿಯನ್ನು ಕೆಳಗಿಳಿಸಿ ನಿಮ್ಮ ಆಸೆ ನೆರವೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದೀರಿ, ನೀವು ಮುಖ್ಯಮಂತ್ರಿಯಾದರೆ ಜನರಿಗೆ ಯಾವ ಹೊಸ ಕಾರ್ಯಕ್ರಮವನ್ನು ಕೊಡುತ್ತೀರಿ?. ನನಗೇನೋ ನೀವು ಆ ಖುರ್ಚಿಯಲ್ಲಿ ಕೂರುವುದನ್ನು ನೋಡಬೇಕೆಂಬ ಆಸೆಯಿದೆ!, ನೀವು ನಿಮ್ಮ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಾ ಯಾವುದೇ ಕಾರ್ಯವನ್ನು ಮಾಡಿಲ್ಲಾ ಎಂಬ ದೂರಿದೆ, ಇದು ನನ್ನ ಅಭಿಪ್ರಾಯವಲ್ಲಾ, ಹಾದೀಲಿ, ಬೀದೀಲಿ ಓಡಾಡುವ ಜನ ಹಾಗಂತಾ ಮಾತಾಡ್ತಾರೆ. ನೀವು ಯಾಕೆ ಜನರ ಮಾತನ್ನು ಕೇಳುವುದಿಲ್ಲಾ, ನಿಮ್ಮನ್ನು ಯಾಕೆ ಜನ ಆರಿಸಿ ಕಳಿಸಿದ್ದು, ಇವೆಲ್ಲಾ ಪ್ರಶ್ನೆಗಳಿಗೂ ನೀವು ಜನರಿಗೆ ಉತ್ತರ ಕೊಡಬೇಕಿದೆ’
ಈತ ಯಾವ ಪ್ರಶ್ನೆ ಕೇಳಿದ? ತಾನು ಯಾವುದಕ್ಕೆ ಉತ್ತರ ಕೊಡಬೇಕೆಂದು ಗಲಿಬಿಲಿಗೊಳಗಾದ ರಾಜಕಾರಣಿ: ನೊಡೀ ತಿಮ್ಮರಸರೇ, ನೀವು ಕೇಳಿದ ಪ್ರಶ್ನೆ ನನಗರ್ಥವಾಗಲಿಲ್ಲ, ನಾನೇನೇಳದು ಅಂದ್ರೆ’ ಎನ್ನುವಷ್ಟರಲ್ಲಿ
ತಿಮ್ಮರಸ: ಹಾ ನಂಗೊತ್ತು ನಂಗೊತ್ತು, ನೀವೇನ್ ಹೇಳ್ತೀರಂತಾ, ನಾನು ಸಾಕಷ್ಟು ಅಭಿವ್ರದ್ದಿ ಕಾರ್ಯಗಳನ್ನು ಮಾಡಿದ್ದೀನಿ ಅಂಥಾ ತಾನೇ ನೀವು ಹೇಳುವುದು, ಒಂದೇನಪ್ಪಾಂದ್ರೆ, ನಿಮ್ಮ ಜನಪ್ರಿಯತೆಯನ್ನು ಸಹಿಸದೇ ನಿಮ್ಮ ವಿರೋಧಿಗಳು ನಿಮ್ಮ ಬಗ್ಗೆ ಮಾಡುತ್ತಿರುವ ಅಪಪ್ರಚಾರವಿದು ಅಂತಾ ನೀವೇಳ್ತೀರಿ ಅಲ್ವಾ...’
ರಾಜಕಾರಣಿ ಖುಶಿಯಾಗಿ ತಲೆಯನ್ನು ಮೇಲಕ್ಕೂ ಕೆಳಕ್ಕೂ ಆಡಿಸಿ ಮುಂದೆ ಮಾತನಾಡಲು ಬಾಯಿ ತೆರೆಯುವಷ್ಟರಲ್ಲಿ
ಮುಂದುವರೆಸಿದ ತಿಮ್ಮರಸ ’ನೋಡೀ ಇವ್ರೇ, ನೀವು ಬಹಳ ರಸಿಕರಂತೇ ಹೌದಾ?, ಇದು ನನ್ನ ಅಭಿಪ್ರಾಯವಲ್ಲಾ ಜನ ಬೀದಿಬದಿಯಲ್ಲಿ ನಿಂತು ಬೀಡಿ ಸೇದುತ್ತಾ ಆ ಬಗ್ಗೆ ಮಾತಾಡುವುದನ್ನು ನಾನೇ ಎಷ್ಟೋ ಬಾರಿ ಕಾರಿನಲ್ಲಿ ಬರುವಾಗ ಕೇಳಿಸಿಕೊಂಡಿದ್ದೇನೆ!, ನೀವು ಇದರ ಬಗ್ಗೆ ರಾಜ್ಯದ ಜನತೆಗೆ ಉತ್ತರ ಕೊಡಲೇ ಬೇಕಿದೆ. ನೀವು ಯಾಕಾಗಿ ರಸಿಕರಾದಿರಿ? ಇದು ನಿಮಗೆ ವಂಶಪಾರಂಪರ್ಯವಾಗಿ ಬಂದ ಬಳುವಳಿಯೇ? ನೀವು ರಾಜಕೀಯ ರಂಗಕ್ಕಿಳಿದ ನಂತರವಾದರೂ ನಿಮ್ಮ ರಸಿಕತೆಯನ್ನು ಕಡಿಮೆ ಮಾಡಿಕೊಳ್ಳಬಹುದಿತ್ತಲ್ಲವೇ?, ಇದು ನನ್ನ ಅಭಿಪ್ರಾಯವಲ್ಲಾ, ಜನ ಹಾಗಂತಾ ಬೀದಿಬದಿಯಲ್ಲಿ ಬೀಡಿ ಸೇದುತ್ತಾ’...
ತಿಮ್ಮರಸನ ಮಾತು ಕೇಳಿ ಅಕ್ಷರಶಃ ಗಾಬರಿಯಾದ ಏಕಪತ್ನೀ ವ್ರತಸ್ಥ ರಾಜಕಾರಣಿ: ಹೇ, ಹೇ, ಯಾರು ಹೇಳಿದ್ದು ಹಂಗಂತಾ, ನೋಡೀ ತಿಮ್ಮರಸರೇ’ ಎನ್ನುವಷ್ಟರಲ್ಲಿ
ತಿಮ್ಮರಸ: ಹಾ ನಂಗೊತ್ತು, ನಂಗೊತ್ತು, ನೀವು ಏನ್ ಹೇಳ್ತೀರಂತಾ, ನೊಡೀ ಇವ್ರೇ ನಾನು ರಸಿಕನಲ್ಲಾ ನನ್ನ ಬಗ್ಗೆ ನನ್ನ ವಿರೋಧಿಗಳು ನಡೆಸುತ್ತಿರುವ ಪಿತೂರಿ ಇದು ಅಂತಾ ನೀವು ಹೇಳ್ತೀರಂತಾ ನಂಗೊತ್ತು. ನೀವು ಬರೀ ಪಂಚೆಯಲ್ಲೇ ಇರುತ್ತೀರಲ್ಲಾ ಅದಕ್ಕೆ ಏನು ಕಾರಣ? ಹಿಂದೆಲ್ಲಾ ನೀವು ಸಫ಼ಾರೀ ಸೂಟಿನಲ್ಲೇ ಇರ್ತ್ತಿದ್ರಿ, ಇತ್ತೀಚೆಗೆ ಬರೀ ಪಂಚೆಯಲ್ಲೇ ಇರ್ತ್ತೀರ... ಹಾಗೇ ಇನ್ನೊಂದೇನಪ್ಪಾಂದ್ರೆ ನೀವು ಬರೀ ಬಿಳೀ ಬಟ್ಟೆಯನ್ನೇ ತೊಡುವುದನ್ನು ಇತ್ತೀಚೆಗೆ ಮಾಡುತ್ತಿದ್ದೀರಿ, ಯಾಕೆ ಹಾಗೆ? ಹಿಂದೆಲ್ಲಾ ನೀವು ಬಣ್ಣದ ಬಟ್ಟೇ ತೊಟ್ಟು ರಂಗು ರಂಗಾಗಿ ಕಾಣಿಸುತಿದ್ರಿ, ನೀವು ಬಿಳೀ ಬಟ್ಟೆ ತೊಡುತ್ತಿರುವುದು ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿಂದಾ ಅಲ್ವಾ? ಇದು ನನ್ನ ಅಭಿಪ್ರಾಯವಲ್ಲಾ ಜನ ಹಾಗಂತಾ ಹಾದಿ ಬೀದಿಯಲ್ಲಿ..
ಈಗಲಾದರೂ ಒಂದೆರಡು ಮಾತಾಡಬಹುದೆಂಬ ಆಸೆಯಿಂದ ರಾಜಕಾರಣಿ: ’ನೋಡೀ ತಿಮ್ಮರಸರೇ, ನಾನು ಯಾಕೆ ಬರೀ ಬಿಳೀ ಬಟ್ಟೆಯನ್ನೇ ಹಾಕ್ತೀನಂದ್ರೇ’ ಎನ್ನುವಷ್ಟರಲ್ಲಿ,
ತಿಮ್ಮರಸ: ಹಾ ನಂಗೊತ್ತು, ನಂಗೊತ್ತು, ನೀವೇನ್ ಹೇಳ್ತೀರಂತಾ, ಇದು ನಿಮ್ಮ ವಿರೋಧಿಗಳು ಮಾಡುತ್ತಿರುವ ಅಪಪ್ರಚಾರ ಅಂತೀರಾ ಅಲ್ವಾ, ನೋಡೀ ಇವ್ರೇ ಒಂದೇನಪ್ಪಾಂದ್ರೆ, ನೀವು ರಾಜಕಾರಣಕ್ಕೆ ಯಾಕೆ ಬಂದಿರಿ ಎಂಬುದು ಇಲ್ಲಿ ಬಹು ಮುಖ್ಯ ಪ್ರಶ್ನೆಯಾಗಿದೆ. ನೀವು ಹಿಂದೆ ವ್ಯಾಪಾರ ಅದೂ ಇದೂ ಅಂತಾ ಮಾಡಿಕೊಂಡಿದ್ದವರು, ಈಗ ರಾಜಕೀಯದಲ್ಲೂ ಶಾಸಕರ ವ್ಯಾಪಾರ ಮಾಡುತ್ತಿದ್ದೀರಾ ಎಂಬ ಗಂಭೀರ ಆಪಾದನೆ ನಿಮ್ಮ ಮೇಲಿದೆ, ಇದು ನನ್ನ ಅಭಿಪ್ರಾಯವಲ್ಲಾ ಜನ ಹಾಗಂತಾ ಹಾದಿಬೀದಿಯಲ್ಲಿ ನಿಂತು...ಇರಲಿ ಬಿಡಿ...ನೀವು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲಾ ಎಂದು ನನಗ್ಗೊತ್ತು, ನೀವು ಶಾಸಕರನ್ನು ಯಾಕಾಗಿ ವ್ಯಾಪಾರ ಮಾಡುತ್ತೀರಾ ಎಂಬುದನ್ನಂತೂ ವಿವರವಾಗಿ ರಾಜ್ಯದ ಜನತೆಯ ಮುಂದೆ ನಮ್ಮ ಊದುವ ಟಿವಿಯ ಮುಖಾಂತರ ಈಗ ಹೇಳಲೇಬೇಕಿದೆ, ನೀವು ವ್ಯಾಪಾರ ಮಾಡಿದಂತಾ ಶಾಸಕರನ್ನು ಎಲ್ಲಿಡುತ್ತೀರಿ?, ನಿಮ್ಮ ವ್ಯಾಪಾರ ಮಳಿಗೆಯ ಹಿಂದಿನ ಗೋದಾಮಿನಲ್ಲಿ ಗುಡ್ಡೆ ಹಾಕ್ತೀರಂತೇ ಹೌದಾ, ಇದು ನನ್ನ ಅಭಿಪ್ರಾಯವಲ್ಲಾ ಜನ ಹಾಗಂತಾ ರಸ್ತೆಬದಿಯಲ್ಲಿ ನಿಂತು ಮಾತಾಡುವುದನ್ನು ಕಾರಲ್ಲಿ ಬರುವಾಗ ನಾನೇ ಕೇಳಿಸಿಕೊಂಡಿದ್ದೇನೆ!. ನೀವು ಇದರ ಬಗ್ಗೆ ರಾಜ್ಯದ ಜನತೆಗೆ ಏನ್ ಹೇಳ್ತೀರಿ?.
ಸ್ವಲ್ಪ ರಾಂಗಾದ ರಾಜಕಾರಣಿ: ’ಅಲ್ರೀ ಶಾಸಕರನ್ನು ವ್ಯಾಪಾರ ಮಾಡೊದಿಕ್ಕೇನು ಅವರು ಹಾಸನದ ಆಲೂಗಡ್ಡೆಯಾ?. ನಾನೇಳದು ಏನಂದ್ರೇ’ ಎನ್ನುವಷ್ಟರಲ್ಲಿ
ತಿಮ್ಮರಸ: ’ಹಾ ನಂಗೊತ್ತೂ, ನಂಗೊತ್ತೂ ನೀವೇನ್ ಹೇಳ್ತೀರಂತಾ, ಇದು ನನ್ನ ವಿರೋಧಿಗಳು ಮಾಡುತ್ತಿರುವ ಅಪಪ್ರಚಾರ ಅಂತಾ ತಾನೇ ನೀವು ಹೇಳೋದು?, ನೋಡೀ ಇವ್ರೇ ಒಂದೇನಪ್ಪಾಂದ್ರೆ, ನೀವು ಕಾರಲ್ಲಿ ಹೋಗುವಾಗ ಯಾವಾಗಲೂ ಕಾರಿನ ಗ್ಲಾಸನ್ನು ಏರಿಸಿಕೊಂಡಿರುತ್ತೀರಾ ಎಂಬ ಗಂಭೀರವಾದ ಆಪಾದನೆ ನಿಮ್ಮ ಮೇಲಿದೆ! ನೀವು ಯಾಕೆ ಗ್ಲಾಸನ್ನು ಏರಿಸಿಕೊಳ್ಳುತ್ತೀರಿ ಎಂಬುದರ ಬಗ್ಗೆ ನೀವು ನಮ್ಮ ಊದುವ ಟೀವಿಯ ಮೂಲಕ ರಾಜ್ಯದ ಜನತೆಗೆ ವಿವರಣೆಯನ್ನು ಕೊಡಲೇ ಬೇಕಿದೆ!, ಅಲ್ಲದೇ ಸದಾ ನೀವು ಕಣ್ಣಿಗೂ ಕಪ್ಪು ಕನ್ನಡಕವನ್ನು ಹಾಕ್ಕಳ್ಳದ್ ಯಾಕೆ ಎಂದು ನಾನಲ್ಲಾ ಜನ ಹಾದಿಬೀದಿಯಲ್ಲಿ ನಿಂತು ಏನೇನೋ ಮಾತಾಡುವುದನ್ನು ನಾನೇ ನನ್ನ ಕಿವಿಯಾರೆ ಕಾರಲ್ಲಿ ಬರುವಾಗ ಕೇಳಿಸಿಕೊಂಡಿದ್ದೀನಿ!, ಇದರ ಬಗ್ಗೆಯಂತೂ ನೀವು ಸುದೀರ್ಘ ವಿವರಣೆಯನ್ನು ರಾಜ್ಯದ ಜನತೆಗೆ ನೀಡಲೇಬೇಕಿದೆ?.’
ಈತ ಯಾವುದಾವುದೋ ಸಂಬಂಧವಿಲ್ಲದ ಪ್ರಶ್ನೆಗಳನ್ನು ಕೇಳಿ ತನಗೂ ಮಾತನಾಡಲು ಬಿಡದೇ ತಾನೆ ಎಲ್ಲವನ್ನೂ ಹೇಳುತ್ತಿದ್ದರಿಂದ ಗೊಂದಲಕ್ಕೀಡಾದ ರಾಜಕಾರಣಿ: ’ನಾನು ಕಾರಿನಲ್ಲಿ ಹೋಗುವಾಗ ಗ್ಲಾಸನ್ನು ಏರಿಸಿಕೊಳ್ಳುವುದೂ ಅಪರಾಧವೇ ತಿಮ್ಮರಸರೇ, ನೋಡಿ, ನಾನೇಳದ್ ಏನಂದ್ರೇ’ ಎನ್ನುವಷ್ಟರಲ್ಲಿ
ತಿಮ್ಮರಸ: ಹಾ ನಂಗೊತ್ತು, ನಂಗೊತ್ತು, ನೀವೇನ್ ಹೇಳ್ತೀರಂತಾ’, ಅಂದವನೇ ವೀಕ್ಷಕರತ್ತ ತಿರುಗಿ ’ ಪ್ರಿಯ ವೀಕ್ಷಕರೇ ಇಲ್ಲಿಗೆ ನಮ್ಮ ಬಲೆಗೆ ಸಿಗಿಸುವ ಕಾರ್ಯಕ್ರಮವನ್ನು ಮುಕ್ತಾಯ ಮಾಡುವ ಸಮಯ ಬಂದಿದೆ. ಇಷ್ಟು ಹೊತ್ತು ನಮ್ಮ ಅತಿಥಿಗಳಾದ ಶ್ರೀಯುತ----ಅವರು ಒಂದು ಘಂಟೆಯ ಕಾಲ ರಾಜ್ಯದ ಜನತೆಯ ಮುಂದೆ ತಮ್ಮ ಮನದಾಳದ ಮಾತುಗಳನ್ನು ಸುದೀರ್ಘವಾಗಿ ಬಿಚ್ಚಿಟ್ಟಿದ್ದಾರೆ. ಈ ಬಲೆಯಲ್ಲಿ ಸಿಗಿಸುವ ಜನಪ್ರಿಯ ಕಾರ್ಯಕ್ರಮವನ್ನು ನೋಡಿದ್ದಕ್ಕೆ ನನ್ನ ನಮಸ್ಕಾರಗಳು. ಮುಂದಿನವಾರ ಮತ್ತೊಬ್ಬ ಅತಿಥಿಯೊಂದಿಗೆ ಸುದೀರ್ಘವಾದ ಚರ್ಚೆಯನ್ನು ಮಾಡೋಣ’ ಎಂದು ನಾಟ್ಯದಂತೆ ಕೈ ಮುಗಿದು ಹೊರಡುತ್ತಾನೆ. ಅವನ ಪ್ರಶ್ನೆಗಳು, ಅವನದೇ ಉತ್ತರಗಳು, ಅವನ ಲಾಸ್ಯದಿಂದ ಭಯಂಕರ ಇರಿಟೇಟ್ ಆಗಿ ಫ್ಯೂಸ್ ಕೆಡಿಸಿಕೊಳ್ಳುವ ರಾಜಕಾರಣಿ ಅದನ್ನು ತೋರಿಸಿಕೊಳ್ಳದೆ ಸ್ಟೂಡಿಯೋದಿಂದ ನೇರ ಒಂದೆರಡು ಪೆಗ್ ಸುರಿದುಕೊಳ್ಳಲು ಪಾನೀಯದಂಗಡಿಗೆ ಹೊರಡುತ್ತಾರೆ. ಊದುವ ಟೀವಿಯಲ್ಲಿನ ಉತ್ತರಕುಮಾರನ ಈ ಕಾರ್ಯಕ್ರಮವನ್ನು ಕಣ್ಣು ಕಿವಿ ಬಿಟ್ಟುಕೊಂಡು ತುಂಬಿಕೊಳ್ಳುವ ಜನತೆಯ ಮೆದುಳು ಮತ್ತಷ್ಟು ಹಿಗ್ಗುತ್ತದೆ.
ಒಂದು ಘಂಟೆಯ ಕಾರ್ಯಕ್ರಮದಲ್ಲಿ ಐವತ್ತೈದು ನಿಮಿಷ ತಾನೇ ಮಾತಾಡಿ ಅತಿಥಿಗಳಿಂದ ಸುದೀರ್ಘವಾದ ಉತ್ತರವನ್ನು ಪಡೆದುದಾಗಿ ಹೇಳುವ ’ಉತ್ತರ’ಕುಮಾರನ ಬಲೆಗೆ ಸಿಗಿಸುವ ಕಾರ್ಯಕ್ರಮದ ತುಣುಕನ್ನು ಈ ಸಂಚಿಕೆಯಲ್ಲಿ ನಿಮ್ಮ ಮುಂದಿಟ್ಟಿದ್ದೀವಿ. ಓದಿ ತಲೆಕೆಟ್ಟು ತಲೆನೋವಿನ ಮಾತ್ರೆಗಳ ಡಬ್ಬಿಯನ್ನೇ ನುಂಗುವಂತಾದರೆ ಅದಕ್ಕೆ ನಾವು ಕಾರಣರಲ್ಲ ಎಂದು ಹೇಳುತ್ತಾ ಮುಂದಿನ ಸಂಚಿಕೆಯವರೆಗೆ ಆರಾಮಾಗಿರಿ ಎನ್ನುತ್ತಾ...