ಮುಂದುವರೆದು ಇಳೆಯ ನಡುಕ...
 
 
 
 
ಮೇಲಿನ ಚಿತ್ರವನ್ನು ಸರಿಯಾಗಿ ಗಮನಿಸಿ ನೋಡಿ. ನಾವು ದಿನನಿತ್ಯ ಮನೆಗೆ ತಂದು ನಮ್ಮ ಪುಟಾಣಿಗಳಿಗೆ ಕೊಡುವ ರಸ ಭರಿತ ದ್ರಾಕ್ಷಿ ಹಣ್ಣುಗಳಿವು. ಇದುವರೆಗೂ ನಾವೆಷ್ಟೋ ಕೆಜಿಗಳಷ್ಟು ದ್ರಾಕ್ಷಿ ಹಣ್ಣುಗಳನ್ನು  ದೇಹಕ್ಕೆ ಸೇರಿಸಿಕೊಂಡಿದ್ದೇವೆ. ಮುಂದಿನ ಬಾರಿ ದ್ರಾಕ್ಷಿಯನ್ನು ಖರೀದಿಸುವಾಗ ಒಮ್ಮೆ ಅವುಗಳನ್ನು ಪ್ಯಾಕ್ ಮಾಡಿರುವ ಪ್ಲಾಸ್ಟಿಕ್ ಚೀಲ ಅಥವಾ ಡಬ್ಬಗಳನ್ನೊಮ್ಮೆ ಸಾವಧಾನದಿಂದ ನೋಡಿ.
ನಿಮ್ಮೆದುರಿಗಿರುವ ಚಿತ್ರದಲ್ಲಿ ಇರುವ ದ್ರಾಕ್ಷಿಗಳನ್ನು ಸಲ್ಫರ್ ಡೈಆಕ್ಸೈಡ್ ನಿಂದ ತೊಳೆಯಲಾಗಿದೆ ಅಥವಾ ಟ್ರ‍ೀ  ಟ್ ಮಾಡಲಾಗಿದೆ ಎಂದು ನಮೂದಿಸಲಾಗಿದೆ! ಏನಿದು ಸಲ್ಫರ್ ಡೈಆಕ್ಸೈಡ್?
 
ಸಲ್ಫರ್ ಅನ್ನು ರಾಸಾಯನಿಕವಾಗಿ ಉರಿಸಿದಾಗ ಉತ್ಪತ್ತಿಯಾಗುವ ವಸ್ತು ಸಲ್ಫರ್ ಡೈಆಕ್ಸೈಡ್ (ಎಸ್ ಒ ೨). ಯಾವುದೇ ರೀತಿಯಲ್ಲಿಯೂ ಆಹಾರವಲ್ಲದ ವಸ್ತು! ಮತ್ಯಾಕೆ ಸಲ್ಫರ್ ಡೈಆಕ್ಸೈಡ್ ಅನ್ನು ಹಣ್ಣುಗಳ ಮೇಲೆ ಉಪಯೋಗಿಸುತ್ತಾರೆ? ದ್ರಾಕ್ಷಿ ಅಥವಾ ಇತರೆ ಹಣ್ಣುಗಳ ಮೇಲೆ ಯಾವ ರೀತಿಯ ಕೀಟಗಳೂ ಕೂರದಂತೆ, ಸೇವಿಸದಂತೆ, ಫಂಗೈ ಆಗದಂತೆ, ಹಣ್ಣುಗಳು ಹೆಚ್ಚು ದಿನಗಳ ಕಾಲ ಬಣ್ಣಗೆಡದಂತೆ-ಅಂದಗೆಡದಂತೆ ಮಾಡಲು ಇದನ್ನು ಉಪಯೋಗಿಸುತ್ತಾರೆ. ಅಂದರೆ ಕೀಟಗಳಿಗೆ ವಿಷವಾಗಿ ಸಲ್ಫರ್ ಡೈ ಆಕ್ಸೈಡ್ ಅನ್ನು ಬಳಸುತ್ತಾರೆ. ನಿಯಮಿತವಾಗಿ ಇಂತಹ ರಾಸಾಯನಿಕ ವಸ್ತುಗಳ ಲೇಪನವಾದ ಆಹಾರ ವಸ್ತುಗಳನ್ನು ತಿಂದರೆ ಮನುಷ್ಯರಿಗೂ ಅವು ವಿಷ ತಾನೆ?
ನಮಗೆ ತಿಳಿದಿರಲಿ. ಸಲ್ಫರ್ ಡೈಆಕ್ಸೈಡ್ ಅನ್ನು ಉಸಿರಾಡುವುದರಿಂದ ಮಕ್ಕಳಲ್ಲಿ ಅಸ್ತಮಾ ರೋಗದ ಸಾಧ್ಯತೆಗಳು ಹೆಚ್ಚುತ್ತವೆ. ಅದರ ಸೇವನೆಯಿಂದ ಅಸ್ತಮಾ ಉಲ್ಬಣಗೊಳ್ಳುತ್ತದೆ. ವೀಜ಼ಿಂಗ್ ಅಥವಾ ಉಬ್ಬಸ ಶುರುವಾಗುತ್ತದೆ. ವಯಸ್ಕರಿಗೂ ಉಸಿರಾಟದ ತೊಂದರೆಗಳಾಗುತ್ತವೆ. ಸದಾ ಕೆಮ್ಮು, ಕಫ ಇತರೆ ಶ್ವಾಸಕೋಶದ ಕಾಯಿಲೆಗಳು ಬಾಧಿಸುತ್ತವೆ. ನಿರಂತರವಾಗಿ ಸಲ್ಫರ್ ಡೈಆಕ್ಸೈಡ್ ಅನ್ನು ಉಸಿರಾಡುವವರು ಮತ್ತು ಆಹಾರದ ಯಾವುದಾದರೂ ವಸ್ತುವಿನ ರೂಪದಲ್ಲಿ ಅದನ್ನು ಸೇವಿಸುವವರು ಹೃದಯಾಘಾತದಂತಹ ಮಾರಣಾಂತಿಕ ಖಾಯಿಲೆಗೂ ತುತ್ತಾಗುತ್ತಾರೆ!
 
ಜೀವಿಗಳ ಆರೋಗ್ಯಕ್ಕೆ ಇವುಗಳಿಂದಾಗುವ ಹಾನಿ ಇಷ್ಟಾದರೆ ಜೀವ ಜನ್ಯವಾದ ನಮ್ಮ ಪರಿಸರಕ್ಕೆ ಇದರಿಂದ ಹಾನಿ ಎಷ್ಟು ಇರಬಹುದು?!
ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್ ಗಳು ಸೇರಿ ವಾತವರಣದಲ್ಲಿ ಆಮ್ಲದ ಮಳೆ ಬರುವಂತೆ ಮಾಡುತ್ತವೆ. ಇವತ್ತಿನವರೆಗೂ ಭೂಮಿಯ ಮೇಳಿನ ಇದರ ಬಳಕೆಯಿಂದ ಉತ್ಪತ್ತಿಯಾಗಿರುವ ಆಮ್ಲೀಯತೆ ಈಗಾಗಲೇ ಭೂಮಿಯನ್ನು, ಉಳುಮೆ ಮಾಡುವ ಭೂ ಪ್ರದೇಶಗಳನ್ನು, ಕೆರೆ, ಕಾಲುವೆ, ಸರೋವರಗಳನ್ನು, ಕಟ್ಟಡಗಳನ್ನು ಆಮ್ಲೀಯಗೊಳಿಸಿಬಿಟ್ಟಿದೆ. ಗ್ರೀನ್ ಹೌಸ್ ಗ್ಯಾಸ್ ಗಳನ್ನು ಹೆಚ್ಚಿಸಿರುವುದಕ್ಕೂ ಕಾರಣವಾಗಿದೆ. ಧರೆ ಹತ್ತಿ ಉರಿಯಲು ಇದೂ ಒಂದು ಕಾರಣ.
ಅಮ್ಮಂದಿರು ಇಂತಹ ವಿಷಪೂರಿತ ಆಹಾರಗಳನ್ನು ಖರೀದಿಸುವ ಮುನ್ನ ಒಮ್ಮೆ ಯೋಚಿಸುವುದು ಒಳ್ಳೆಯದು. ಅಕಸ್ಮಾತ್ ನಿಮ್ಮ ಮನೆಯಲ್ಲಿರುವ ಹಣ್ಣು-ತರಕಾರಿಗಳ ಬಗ್ಗೆ ನಿಮಗೆ ಅನುಮಾನ ಬಂದರೆ ಎಲ್ಲಾ ತರಕಾರಿ, ಹಣ್ಣುಗಳನ್ನೂ ಒಂದು ಚಮಚ ಬೇಕಿಂಗ್ ಸೋಡಾ, ಅರ್ಧ ಚಮಚ ಉಪ್ಪು ಮಿಶ್ರಿತ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಟ್ಟು, ಚನ್ನಾಗಿ ತೊಳೆದು ನಂತರ ಉಪಯೋಗಿಸುವುದು ಒಳ್ಳೆಯದು.
 
 

ಈಗ ಜಪಾನ್ ಸರದಿ


ಒಂದಷ್ಟು ಅದುರುವಿಕೆ. ಒಂದೇ ಒಂದು ಹೆಬ್ಬಲೆ. ಒಂದೇ ಗಂಟೆಯಲ್ಲಿ ಇಡೀ ತೀರ ನಿರ್ನಾಮ. ಅಲ್ಲಿದ್ದ ಜನ, ಮನೆ, ಜೀವನ ಎಲ್ಲವೂ ನಿರ್ನಾಮ. ಏಷ್ಯಾದ ಅತ್ಯಂತ ಶ್ರೀಮಂತ ದೇಶ, ತಂತ್ರಜ್ನಾನದಲ್ಲಿ ಎಲ್ಲರನ್ನೂ ಮೀರಿಸಿ ಬೆಳೆದ ಪುಟಾಣಿ ದೇಶ, ಏನೇ ಬಂದರೂ ನಿಭಾಯಿಸಬಲ್ಲೆ ಎಂದು ಬೀಗಿದ್ದ ದೇಶ, ಹಿರೋಶಿಮಾ-ನಾಗಾಸಾಕಿಯಲ್ಲಾದ ವರ್ಷಾನುವರ್ಷಗಳ ನರಕಸದೃಶ ನೋವನ್ನು ಅವಡುಗಚ್ಚಿ ಅನುಭವಿಸಿ ಗೆದ್ದಿದ್ದ ಸಾಮುರಾಯ್ ಗಳ ದೇಶ, ಪ್ರಕೃತಿಯ ಈ ಬಾರಿಯ ಭಾರೀ ಹೊಡೆತಕ್ಕೆ ಮರ್ಮಾಘಾತಗೊಂಡಿದೆ. ಸಾವಿನ ಎಣಿಕೆ ಮುಗಿದಿಲ್ಲ. ನೋವು ನೆನಪಿಲ್ಲದಷ್ಟು ಮಸುಕಿರುವ ಭವಿಷ್ಯದ ಭೀತಿ. ನನಗೆ ಅಣುಬಾಂಬುಗಳ ಗೊಡವೆ ಯಾವತ್ತಿಗೂ ಬೇಡ ಎಂದು ಶಪಥ ಮಾಡಿಕೊಂಡೇ ಅಣು ಶಕ್ತಿಯನ್ನು ಎದೆಗೆ ಅವುಚಿಕೊಂಡು ಅದನ್ನೇ ಅಭಿವೃದ್ಧಿಗೆ ಸೇತುವೆಯನ್ನಾಗಿ ಮಾಡಿಕೊಂಡಿದ್ದ ಜಪಾನ್ ತಾನು ಕಟ್ಟಿಕೊಂಡ ಸಂಕೀರ್ಣ ನಾಗರೀಕತೆಯ ಜಾಲದಲ್ಲಿ ಸಿಕ್ಕು ಬಿದ್ದಿದೆ. ಅಣು ಶಕ್ತಿ ಯಾವತ್ತೂ ಸೇತುವೆಯಾಗಲಾರದು, ಮಿತ್ರನಾಗಲಾರದು ಅಂತ ಒಮ್ಮೆ ಅಮೆರಿಕಾದಿಂದ ಅನುಭವಿಸಿ ಅರಿತಿದ್ದ ಜಪಾನ್ ಈಗ ತನ್ನ ತಪ್ಪಿನಿಂದಲೇ ಮತ್ತೊಮ್ಮೆ ಭಾರೀ ಕಷ್ಟ ಅನುಭವಿಸುತ್ತಿದೆ. ಅಣು ಪ್ರಮಾದ ನಡೆದಿರುವುದು ಸುನಾಮಿಯ ದೆಸೆಯಿಂದಿರಬಹುದು, ಜಪಾನ್ ನೆಲದ ಮೇಲಿರಬಹುದು. ಆದರೆ ಈ ಪ್ರಮಾದವನ್ನು ಅನುಭವಿಸುವವರು ಜಪಾನಿನ ಮತ್ತು ಅದರ ನೆರೆಹೊರೆಯ ದೇಶಗಳ ಮಂದಿ.
 
ಮಾರ್ಚ್ ೧೧ರಂದು ರಿಕ್ಟರ್ ಮಾಪನದಲ್ಲಿ ೯ ಸೂಚಿಸಿದ ಐತಿಹಾಸಿಕ ಭೂಕಂಪ ಜಪಾನ್ ಅನ್ನು ನಡುಗಿಸಿ, ಭಯಂಕರ ಸುನಾಮಿಯನ್ನು ಸೃಷ್ಟಿಸಿ, ಪೂರ್ವ ತೀರ ಪ್ರದೇಶವನ್ನು ಗುಡಿಸಿ, ಜಾಲಾಡಿ, ಮಟ್ಟಮಾಡಿದ ದೃಶ್ಯಗಳು ನಮ್ಮ ಅಕ್ಷಿ ಪಟಲಗಳಿಂದ ಮರೆಯಾಗಿಲ್ಲ. ಜಪಾನಿನ ಈ ಭೂಕಂಪ-ಸುನಾಮಿ ತೊಹೋಕು ಪ್ರಾಂತ್ಯದ ನೆಲ, ಕಟ್ಟಡ, ಜನ-ಜೀವನವನ್ನಷ್ಟೇ ಅಲ್ಲದೇ ವೈಜ್ನಾನಿಕವಾಗಿ, ತಂತ್ರಜ್ನಾನದಲ್ಲಿ ಅಭಿವೃದ್ಧಿ ಹೊಂದಿರುವ ಬೃಹತ್ ದೇಶಗಳ ಇಗೋ ವನ್ನು ಅಲ್ಲಾಡಿಸಿದೆ.
ಫುಕೋಷಿಮಾದಲ್ಲಿ ಸಾಲಾಗಿ ಮೂರು ಪರಮಾಣು ರಿಯಾಕ್ಟರ್ ಗಳು ನಿಯಂತ್ರಣ ತಪ್ಪಿ ಸೃಷ್ಟಿಸಿದ, ಇನ್ನೂ ಹೆಚ್ಚಿಸುತ್ತಿರುವ ಅನಾಹುತಗಳು ಯಾವ ಪ್ರಮಾಣದ್ದು ಎಂದು ಅಂದಾಜು ಮಾಡಲು ಜಪಾನಿಗಾಗಲೀ ಅಂತರಾಷ್ಟ್ರ‍ೀಯ ಸಮುದಾಯಕ್ಕಾಗಲೀ ಇನ್ನೂ ಸಾಧ್ಯವಾಗುತ್ತಿಲ್ಲ. ಈಗಾಗಲೇ ಸೋರಿರುವ ವಿಕಿರಣ ಮತ್ತೊಂದು ಚರ್ನೋಬಿಲ್ ದುರಂತವನ್ನು ಮರುಕಳಿಸುವ ಸಾಧ್ಯತೆ ನಿಚ್ಚಳವಾಗುತ್ತಿದೆ. ದೇಶಗಳ ಅಂಗಳಗಳಲ್ಲೇ, ನಾವೇ ಬೇಕು ಬೇಕೆಂದು, ಮುಂದುವರೆಯಬೇಕೆಂಬ ಓಟಕ್ಕೆ ಬಿದ್ದು ನಿರ್ಮಿಸಿಕೊಳ್ಳುತ್ತಿರುವ ಪರಮಾಣು ರಾಕ್ಷಸನ ಮನುಷ್ಯ ನಿರ್ಮಿತ ಸೆರೆಮನೆಗಳಾದ ಈ ಪರಮಾಣು ರಿಯಾಕ್ಟರ್ ಗಳು ನಿಸರ್ಗದ ಕೋಪದ ಮುಂದೆ ಗಡಗಡನೆ ಅಲ್ಲಾಡಿ ಪರಮಾಣು ರಾಕ್ಷಸನನ್ನು ಹೊರಬಿಡುವುದಂತೂ ಈ ಬಾರಿಯ ಜಪಾನ್ ಭೂಕಂಪದಿಂದ ಖಚಿತವಾಗಿದೆ.   
  
ಸರಳೀಕರಿಸಿ ಹೇಳುವುದಾದರೆ, ಈ ಪರಮಾಣು ರಿಯಾಕ್ಟರ್ ಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಯುರೇನಿಯಮ್ ಅಥವಾ ಪ್ಲುಟೋನಿಯಮ್ ಅನ್ನು ನಿಯಂತ್ರಿತ ವಾತಾವರಣದಲ್ಲಿ ಬಹಳ ಎಚ್ಚರಿಕೆಯಿಂದ (ಫಿಷನ್) ವಿಭಜಿಸಲಾಗುತ್ತದೆ. ಒಮ್ಮೆ ವಿಭಜಿತವಾದ ಯುರೇನಿಯಮ್ ಅಥವಾ ಪ್ಲುಟೋನಿಯಮ್ ಅಪಾರ ಪ್ರಮಾಣದ ಶಕ್ತಿ ಹಾಗೂ ಉಷ್ಣವನ್ನು ಉತ್ಪತ್ತಿ ಮಾಡಲು ಶುರು ಮಾಡುತ್ತವೆ. ಹೀಗೆ ಉತ್ಪತ್ತಿಯಾದ ಶಕ್ತಿ/ಉಷ್ಣ ರಿಯಾಕ್ಟರ್ ಗಳಲ್ಲಿರುವ ನೀರಿನ ಬೃಹತ್ ಪೈಪುಗಳನ್ನು ತಲುಪಿ, ಆವಿಯನ್ನು ಸೃಷ್ಟಿಸಿ, ಆ ಆವಿ ವಿದ್ಯುತ್ ಉತ್ಪಾದಿಸುವ ಟರ್ಬೈನ್ ಗಳನ್ನು ತಿರುಗಿಸತೊಡಗುತ್ತವೆ. ಇದೊಂದು ಸರಪಳಿಯಂತಹ ಕ್ರಿಯೆ. ಹೀಗೆ ವಿಭಜಿಸಲಾಗುವ ಯುರೇನಿಯಮ್/ಪ್ಲುಟೋನಿಯಮ್ ಅನ್ನು ಸರಳುಗಳ ಅಥವಾ ರಾಡ್ ಗಳ ರೂಪದಲ್ಲಿ ಸಂಗ್ರಹಿಸಿರಲಾಗುತ್ತದೆ. ಒಮ್ಮೆ ವಿಭಜಿಸಿದ ಯುರೇನಿಯಮ್ ರಾಡ್ ಗಳಿಂದ ಉಷ್ಣವನ್ನು ಪಡೆದು ನಂತರ ಅವನ್ನು ತಣಿಸಲು ಸುಸಜ್ಜಿತ ಕೂಲರ್ ಪೂಲ್ ಗಳಲ್ಲಿ ಇಡಲಾಗುತ್ತದೆ. ಹೀಗೆ ವಿದ್ಯುತ್ತಿಗಾಗಿ ಬಳಕೆಯಾಗಿ ಕೂಲರ್ ಪೂಲ್ ಗಳೊಳಗೆ ಹೋಗುವ ಯುರೇನಿಯಮ್ ನ ಬಳಸಿದ ರಾಡ್ ಗಳು ತಿಂಗಳಾನುಗಟ್ಟಲೆ ಉಷ್ಣ ಉತ್ಪತ್ತಿ ಮಾಡುತ್ತಲೇ ಇರುತ್ತವೆ. ಆದ್ದರಿಂದ ಇವನ್ನು ಸದಾ ಕಾಲ ಅತ್ಯಂತ ವ್ಯವಸ್ಥಿತವಾಗಿ ತಣ್ಣೀರಿನ ಆಳ ಪೂಲ್ ಗಳ ಒಳಗೆ ಮುಳುಗಿಸಿಟ್ಟು ನಂತರ ಅದನ್ನು ಬಹಳ ಎಚ್ಚರಿಕೆಯಿಂದ ಪರಮಾಣು ತ್ಯಾಜ್ಯವಸ್ತುಗಳನ್ನು ಡಂಪ್ ಮಾಡಲು ಬಳಸುವ ಸುರಕ್ಷಿತ ಜಾಗಗಳಿಗೆ ಸಾಗಿಸುತ್ತಾರೆ. ಹೀಗೆ ತಣಿಸಲು ಇಡುವ ಬಳಸಿದ ರಾಡ್ ಗಳಿಗೆ ತಿಂಗಳುಗಳ ಕಾಲ ಸತತವಾಗಿ ತಣ್ಣನೆಯ ನೀರು ಸರಬರಾಜಾಗುತ್ತಿರಬೇಕು. ಇಲ್ಲದಿದ್ದರೆ ಅವುಗಳಿಂದ ಉತ್ಪತ್ತಿಯಾಗುವ ಉಷ್ಣ ಪೂಲ್ ಗಳಿಂದ, ರಿಯಾಕ್ಟರ್ ಗಳಿಂದ ಹೊರ ಸೋರಿ, ಸಿಡಿದು ವಾತಾವರಣವನ್ನು ವಿಕಿರಣಯ ಮಾಡಿಬಿಡಬಲ್ಲವು!! ಫುಕೋಷಿಮಾದಲ್ಲಿ ಆದದ್ದು ಇದೇ.
 
ಫುಕೋಷಿಮಾದಲ್ಲಿ ವಿದ್ಯುತ್ ಉತ್ಪಾದಿಸಲು ಜಪಾನ್ ನಿರ್ಮಿಸಿದ್ದ ಪರಮಾಣು ರಿಯಾಕ್ಟರ್ ಗಳು ಬಹಳ ವ್ಯವಸ್ಥಿತವಾಗಿ, ಭೂಕಂಪಗಳಿಗೆ ತಯಾರಾಗೇ ಇದ್ದವು. ಅಂದು ಜಪಾನ್ ಸರಹದ್ದಿನಲ್ಲಿ ಮೊದಲ ಭೂ ಕಂಪನ ಆದ ತಕ್ಷಣ ಆ ಪ್ರದೇಶದ ಪರಮಾಣು ರಿಯಾಕ್ಟರ್ ಗಳು ಆಟೋಮ್ಯಾಟಿಕ್ ಆಗಿ ಬಂದ್ ಆಗಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದವು. ಅಲ್ಲಿದ್ದ ಬಳಸಿದ ಯುರೇನಿಯಮ್ ರಾಡ್ ಗಳನ್ನು ತಣಿಸಲು ಭಾರೀ ಜನರೇಟರ್ ಮೂಲಕ ಹೆಚ್ಚು ಪ್ರಮಾಣದ ನೀರನ್ನು ಪಂಪ್ ಮಾಡಿ ಅವನ್ನು ತಣ್ಣಗಿಡುವ ವ್ಯವಸ್ಥೆಯೂ ಇತ್ತು. ಆದರೆ ಸುನಾಮಿಯಂತಹ ದೊಡ್ಡದೊಂದು ಅಲೆ ಎಲ್ಲಾ ವ್ಯವಸ್ಥೆಗಳನ್ನೂ ಅಲ್ಲೋಲಕಲ್ಲೋಲ ಮಾಡಿತ್ತು. ರಿಯಾಕ್ಟರ್ಗಳಿಗೆ ನೀರನ್ನು ಸರಬರಾಜು ಮಾಡುತ್ತಿದ್ದ ಜನರೇಟರ್ ಗಳ ಒಳಗೆ ಸಮುದ್ರದ ನೀರು, ಕಸ ತುಂಬಿ ಅವು ಕೆಟ್ಟಿ ನಿಂತವು. ಕೂಲರ್ ಪೂಲ್ ಗಳಿಗೆ ತಣ್ಣೀರಿನ ಹರಿವು ನಿಂತು ಅವು ಕುದಿಯ ತೊಡಗಿದವು. ರಿಯಾಕ್ಟರ್ ಗಳಲ್ಲಿದ್ದ ಬಳಸಿದ ರಾಡ್ ಗಳು ಉಷ್ಣ ಉತ್ಪತ್ತಿ ಮಾಡುವುದು ನಿಮಿಷ ನಿಮಿಷಕ್ಕೂ ಹೆಚ್ಚಾಗಿ ರಿಯಾಕ್ಟರ್ ಸ್ಪೋಟಗೊಂಡಿತು. ವಿಕಿರಣ ಹೊರಗೆ ಸೋರಲಾರಂಭಿಸಿತು.
 
ವಿಕಿರಣ ಸೋರುತ್ತಿರುವುದನ್ನೂ ಲೆಕ್ಕಿಸದೆ, ಪ್ರಾಣಭಯವನ್ನೂ ಲೆಕ್ಕಿಸದೆ, ರಿಯಾಕ್ಟರ್ ಗಳಲ್ಲಿದ್ದ ರಾಡ್ ಗಳನ್ನು ತಣಿಸಿ, ಭಾರೀ ವಿಕಿರಣ ಸೋರಿಕೆ ತಡೆಯಲು ಸಮುದ್ರದ ಉಪ್ಪು ನೀರನ್ನೇ ಪಂಫು ಮಾಡಲು ಜಪಾನಿಗರ ಪುಟ್ಟ ಪಡೆಯೊಂದು ದಿನ ರಾತ್ರಿ ಸೆಣೆಸಾಡಿತು. ಸೆಣೆಸಾಟ ಇನ್ನೂ ಸಾಗಿದೆ, ಆದರೆ ವಿಕಿರಣ ಸೋರುವುದು ನಿಂತಿಲ್ಲ! ಅಂತರಾಷ್ಟ್ರ‍ೀಯ ಸಮುದಾಯವೂ ಸಹಾಯ ಮಾಡುತ್ತೇನೆಂದು ಮುಂದೆ ಬಂದಿದೆ, ಆದರೆ ಯಾರಿಗೂ ಮುಂದೆ ಏನಾಗಬಹುದೆಂಬ ನಿಖರ ತಿಳಿವಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಬರಲು, ಸೋರಿಕೆ ನಿಲ್ಲಿಸುವಂತಾಗಲು ಇನ್ನು ಕೆಲವು ತಿಂಗಳುಗಳಾದರೂ ಬೇಕಾಗುತ್ತದೆಂದು ಜಪಾನ್ ಸರ್ಕಾರ ಹೇಳಿಕೆ ಕೊಟ್ಟಿದೆ. ರಿಯಾಕ್ಟರ್ ಗಳ ಸುತ್ತಲೂ, ೨೦ ಕಿಲೋಮೀಟರ್ ಗಳ ಆಜುಬಾಜಿನಲ್ಲಿದ್ದ ಜನರನ್ನು ಅಲ್ಲಿಂದ ತೆರವು ಮಾಡಿಸಿದ್ದರೂ ಸೋರಿಕೆ ಗಾಳಿಯಿಂದ ಹರಡುವುದನ್ನು ತಡೆಯಲು ಹೇಗೆ ಸಾಧ್ಯ?
 
ಈಗ ಫುಕೋಷಿಮಾ ಸುತ್ತಮುತ್ತಲಿನ ಜಾಗಗಳಲ್ಲಿ ಐಯೋಡಿನ್ ೧೩೧, ಸೆಸಿಯಮ್ ೧೩೪ ರಂತಹ ವಿಕಿರಣಗಳು ಭಾರೀ ಪ್ರಮಾಣದಲ್ಲಿ ಸೋರಿವೆ.  ಅಲ್ಲಿ ವಿಕಿರಣಗಳ ಮಟ್ಟ ಇರಬಹುದಾದ ಆರೋಗ್ಯಕರ ಮಟ್ಟಕ್ಕಿಂತ ೪, ೩೮೫ ಪಟ್ಟು ಹೆಚ್ಚಾಗಿದ್ದು ರಿಯಾಕ್ಟರ್ ಒಂದರಲ್ಲಿ ವಿಕಿರಣದಿಂದ ಕಲುಷಿತವಾಗಿದ್ದ ನೀರು ಸಮುದ್ರವನ್ನೂ ಸೇರುತ್ತಿದೆ. ಅದನ್ನು ತಡೆಯುವ ಯತ್ನವೂ ಇನ್ನೂ ನಡೆಯುತ್ತಲೇ ಇದೆ.
 
ಜಪಾನಿನ ಈ ಪ್ರಮಾದ ನೋಡಿ ಜರ್ಮನಿ ತಾನು ಇನ್ನೇನು ಶುರು ಮಾಡಬೇಕಿದ್ದ ಹತ್ತು ಹದಿನೈದು ಪರಮಾಣು ವಿದ್ಯುತ್ ಯೋಜನೆಗಳಿಗೆ ತಾತ್ಕಾಲಿಕವಾಗಿ ಕಡಿವಾಣ ಹಾಕಿದೆ. ಈಗ ೫೦-೬೦ ವರ್ಷಗಳ ಹಿಂದಿನಿಂದ ಇದ್ದ ಹಳೆಯ ಪರಮಾಣು ತಯಾರಿಕಾ ಘಟಕಗಳನ್ನು ತಕ್ಷಣದಿಂದಲೇ ಮುಚ್ಚುತ್ತೇನೆ ಎಂದುಬಿಟ್ಟಿದೆ. ಅಮೆರಿಕಾ ತನ್ನ ರಾಜ್ಯಗಳಲ್ಲಿರುವ ಎಲ್ಲಾ ಪರಮಾಣು ಪ್ರೋಸೆಸಿಂಗ್ ಘಟಕಗಳನ್ನೂ ತುರ್ತು ಪರಿಸ್ಥಿತಿ ಎದುರಿಸುವ ಶಕ್ತಿ ಇದೆಯಾ ಎಂದು ಪರೀಕ್ಷೆಗೆ ಒಳಪಡಿಸಲು ಆರಂಭಿಸಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ, ಅದರಲ್ಲೂ ಅಮೆರಿಕಾ-ಯೂರೋಪ್ ನ ಹಲವಾರು ದೇಶಗಳಲ್ಲಿ ಪರಮಾಣು ಶಕ್ತಿ ನಮ್ಮ ನಡುವೆ ಬೇಕಾ? ಪರಮಾಣುವನ್ನು ಕ್ಷೆಮವಾಗಿ-ಸುರಕ್ಷಿತವಾಗಿ ಬಳಸುತ್ತೇವೆಂಬುದು ಕೇವಲ ಭ್ರಮೆಯಲ್ಲವಾ?? ಎಂದು ಜೋರು ಚರ್ಚೆ ನಡೆಯುತ್ತಿದೆ.
 
ಸೌದಿ ಅರೇಬಿಯಾ ಇನ್ನಿತರೆ ರಾಷ್ಟ್ರಗಳು ನೈಸರ್ಗಿಕ ವಿಕೋಪಗಳಿಗೆ ನಮ್ಮಲ್ಲಿರುವ ಪರಮಾಣು ಘಟಕಗಳು ಎಷ್ಟು ಸೇಫ್ ಎಂದು ಪರೀಕ್ಷೆಗೆ ಶುರುಮಾಡಿಕೊಂಡಿವೆ. ಆದರೆ ನಮ್ಮಲ್ಲಿರುವ ಪರಮಾಣು ತಂತ್ರಜ್ನಾನ ಬಹಳ ಅಚ್ಚುಕಟ್ಟಾಗಿದೆ, ಫೂಲ್ ಪ್ರೂಫ್ ಆಗಿದೆ, ನಾವು ಪರಮಾಣು ವಿದ್ಯುತ್ ಉತ್ಪಾದನೆಯನ್ನು ಕೈ ಬಿಡುವ ಸಾಧ್ಯತೆಯೇ ಇಲ್ಲ ಎಂದು ಭಾರತ ಹೇಳಿಕೆ ಕೊಟ್ಟಿದೆ. ಅದರ ಹಿಂದೆಯೇ ಪಾಕಿಸ್ತಾನ, ಇರಾನ್ ಗಳೂ ತಮ್ಮ ನ್ಯೂಕ್ಲಿಯರ್ ಪ್ರೋಗ್ರಾಂ ಗಳನ್ನು ಸಮರ್ಥಿಸಿಕೊಂಡಿವೆ. ವಿಶ್ವದಲ್ಲೇ ಅತ್ಯಂತ ಪ್ರಗತಿಹೊಂದಿದ ತಂತ್ರಜ್ನಾನ ಬಳಸುತ್ತಿರುವ ಜಪಾನ್ ಎಂಬ ದೇಶ ಅಣು ಶಕ್ತಿಯನ್ನು ಹ್ಯಾಂಡಲ್ ಮಾಡಲಾಗದೆ ಈ ಪರಿ ಪಡುತ್ತಿರಬೇಕಾದರೆ ನಾವೀಗ ಪರಮಾಣು ಶಕ್ತಿ ಹೊಂದಿದ್ದೇವೆ ಎಂದು ಕೊಚ್ಚಿಕೊಳ್ಳುವ ಪಾಕಿಸ್ತಾನ, ಇರಾನ್ ಅಥವಾ ಮಹಾನ್ ಭ್ರಷ್ಟ ರಾಜಕಾರಣಿಗಳ ತೆಕ್ಕೆಯಲ್ಲಿರುವ ಭಾರತಕ್ಕೆ ಅಣುಶಕ್ತಿಯನ್ನು ಸಾವಧಾನವಾಗಿ, ಹುಶಾರಾಗಿ ಬಳಸಿಕೊಳ್ಳುವುದು ನಿಜಕ್ಕೂ ಸಾಧ್ಯವಿದೆಯಾ? ಲಾತೂರಿನಲ್ಲಿ ದಶಕಗಳ ಹಿಂದೆ ಆದಂಥ ಒಂದು ಭೂಕಂಪ, ಒಂದಷ್ಟು ಪ್ರವಾಹ ಕೈಗಾ ಅಣುಸ್ಥಾವರದ ಬಳಿ ಒಮ್ಮೆ ಆದರೆ??
ನಮಗೆ ಪರಮಾಣು ಶಕ್ತಿ ನಿಜಕ್ಕೂ ಬೇಕಾ?????
 

 
 
 
 
 
Copyright © 2011 Neemgrove Media
All Rights Reserved