ಬೆಳ್ಳುಳ್ಳಿ 

ಸಣ್ಣ ಸಣ್ಣಿ 
 'ಅಕ್ಕಂದಿರಿಗೆ' 'ಪಚ್ಚೆ'ಯಿಡುವ ದ್ರಾವಿಡ ಆಚರಣೆ-ಒಂದು ಪರಿಚಯ (ಜಿ.ಶ್ರೀನಿವಾಸಯ್ಯ)
 
 

ಜಾಣ ಗೊಲ್ಲ

(ಸಂಗ್ರಹ)

(ಚಿತ್ರ-ಮಹಿಮಾ ಪಟೇಲ್)

ಒಂದೂರಲ್ಲಿ ಚಿಕ್ಕ ಬಿಕ್ಕ ಅಂತ ಇಬ್ರು ಹುಡುಗರಿದ್ರು. ಅವರು ಆಸೆಗೆ ಅಂತ ಎರಡು ಪಕ್ಷಿ ಸಾಕಿಕೊಂಡಿದ್ರು. ಒಂದಿನ ಇಬ್ಬರೂ ಆಟ ಆಡ್ತಾ ಜೂಜು ಕಟ್ಟಿಬಿಟ್ರು. ಚಿಕ್ಕ ತನ್ನ ಪಕ್ಷಿಯ ಕತ್ತಿಗೆ ಕೈ ಹಾಕಿ ’ಈಗ ಇದು ಸಾಯ್ತದೋ ಬದಿಕತದೋ ಹೇಳು’ ಅಂದ. ಬಿಕ್ಕನಿಗೆ ಏನು ಹೇಳದು ಅಂತ ಗೊತ್ತಾಗಲಿಲ್ಲ. ಪಕ್ಷಿ ಸಾಯ್ತದೆ ಅಂದ್ರೆ ಚಿಕ್ಕ ಅದನ್ನು ಬಿಟ್ಟು ಬದ್ಕಿಸ್ತನೆ, ತಾನು ಜೂಜು ಸೋತು ಬಿಡ್ತೀನಿ. ಪಕ್ಷಿ ಬದಿಕ್ತದೆ ಅಂದ್ರೆ ಚಿಕ್ಕ ಅದರ ಕತ್ತಿಸಕಿ ಸಾಯಿಸಿಬಿಡ್ತಾನೆ..ಏನಾದ್ರೂ ನಂಗೇ ಬ್ಯಾಸರ ಅಂದ್ಕಂಡು ’ಚಿಕ್ಕ ನಂಗೆ ಒಂದು ವಾರ ಕಾಲ ಕೊಡು. ನಾನು ಯೋಚ್ನೆ ಮಾಡಿ ಉತ್ರ ಹೇಳ್ತಿನಿ’ ಅಂದ. ’ಸರಿ ಹಂಗೇ ಮಾಡು’ ಅಂತ ಚಿಕ್ಕ ಬಿಕ್ಕನಿಗೆ ಒಂದು ವಾರ ಕಾಲ ಕೊಟ್ಟ.
 
ಇದಕ್ಕೆ ಏನಾರಾ ಜಾಣತನದ ಉತ್ರ ಹೇಳ್ಕೊಡಿ ಅಂತ ಬಿಕ್ಕ ಊರವರ ಹತ್ರ ಎಲ್ಲಾ ಕೇಳ್ದ. ’ಬದಿಕ್ತದೆ ಅಂದ್ರೆ ಅವನೇ ಸಾಯಿಸ್ತನೆ, ಸಾಯ್ತದೆ ಅಂದ್ರೆ ಅವನೇ ಪಕ್ಷಿನ ಹಾರಿಸಿಬಿಡ್ತನೆ...’ ಜನವೆಲ್ಲಾ ’ಇದು ಕಷ್ಟ ಕನಪ್ಪಾ’ ಅಂದ್ರು.
ಒಂದು ವಾರದಲ್ಲಿ ಆರು ದಿನ ಹಿಂಗೇ ಕಳೆದುಹೋಯ್ತು. ಬಿಕ್ಕನಿಗೆ ಉತ್ತರ ಗೊತ್ತಾಗ್ಲಿಲ್ಲ. ತಾನು ಪಕ್ಷಿನ ಕಳಕೊಳ್ಳಬೇಕಲ್ಲಾ ಅಂತ ಗೋಳಾಡಿಕೊಳ್ಳುತ್ತಾ ಬಿಕ್ಕ ಊರ ಹೊರಗಡೆ ಬಾರೆ ಮೇಲೆ ಕೂತುಕೊಂಡಿದ್ದ. ಅಲ್ಲೇ ಬಾರೆ ಕೆಳಗೆ ಒಬ್ಬ ಗೊಲ್ಲರಜ್ಜ ಹಸು ಮೇಯಿಸುತ್ತಾ ಕೂತಿದ್ದ. ಅವನು ಬಿಕ್ಕನ ಗೋಳಾಟ ನೋಡ್ದ. ’ಏನಪ್ಪಾ ಮಗಾ ಯಾಕಿಂಗ್ ಕಣ್ಣಿರ್ ಸುರಿಸ್ತಿದೀಯಾ’ ಅಂದ. ಬಿಕ್ಕ ತನ್ನ ಜೂಜಿನ ಕತೆನೆಲ್ಲಾ ಹೇಳಿಕಂಡ. ಅದ್ಕೆ ಆ ಗೊಲ್ಲರಜ್ಜ "ಅಯ್ಯೋ ಇಷ್ಟೇನೇನಪ್ಪಾ! ನೀನೇನೂ ಬ್ಯಾಸರ ಮಾಡ್ಕೋಬೇಡ...ಈಗ ಮನೆಗೋಗಿ ಚನ್ನಾಗಿ ಮಲಿಕೋ. ನಾಳೆ ಸಂಜೆ ಊರಲ್ಲಿ ಪಂಚಾಯ್ತಿ ಸೇರಿಸು. ಚಿಕ್ಕನ್ನೂ ಕೂರಿಸು. ನಾನು ಬಂದು ನಿನಗೆ ಉತ್ತರ ಹೇಳಿ ಕೊಡ್ತೀನಿ’ ಅಂದ. ’ನಿನ್ನನ್ನೇ ನಂಬ್ತೀನಿ ಕನಜ್ಜಾ...ಮರಿದೇ ನಾಳೆ ಬಾರಪ್ಪಾ’ ಅಂತ ಬಿಕ್ಕ ಊರಕಡೆ ಹೊರಟ.
 
 
ಸಂಜೆ ಆಯ್ತು. ಜನ ಬಿಕ್ಕನ ಮಾತುಕೇಳಿ ಪಂಚಾಯ್ತಿ ಸೇರಿದ್ರು. ಚಿಕ್ಕನೂ ಬಂದ. ಪಕ್ಷಿ ಹಿಡಕೊಂಡೇ ಬಂದ. ಜನರೆಲ್ಲಾ ಪಂಚಾಯ್ತಿ ಕಟ್ತೆ ಸುತ್ತ ಕೂತ್ರು. ಚಿಕ್ಕ ಪಕ್ಷಿಯ ಕತ್ತು ಹಿಡ್ಕಂಡು ಮತ್ತೆ ಪ್ರಶ್ನೆ ಕೇಳಿದ. ಆಗ ಅಲ್ಲಿಗೆ ಬಂದ ಗೊಲ್ಲಜ್ಜ ಚಿಕ್ಕನಿಗೆ ’ನೀನು ನೆಟ್ಟಗೆ ಕೂತ್ಕೊಳಪ್ಪಾ ನಾನು ಉತ್ರ ಹೇಳ್ತಿನಿ’ ಅಂದ. ಚಿಕ್ಕ ನೆಟ್ಟಗೆ ಕೂತ. ಆ ಗೊಲ್ಲರಜ್ಜ ಅವನ ಜೊತೆ ತನ್ನ ದೊಡ್ಡ ದೊಣ್ಣೆ ತಂದಿದ್ದ. ಅವನು ದೊಣ್ಣೆನ ಚಿಕ್ಕನ ತಲೆ ಮೇಲೆ ಹಿಡಿದು, ’ಈಗ ಈ ದೊಣ್ಣೆ ನಿನ್ನ ತಲೆ ಮೇಲೆ ಬೀಳ್ತದಾ, ಕತ್ತಿನ ಮೇಲೆ ಬೀಳ್ತದಾ ಹೇಳಪ್ಪಾ’ ಅಂದ. ಚಿಕ್ಕನಿಗೆ ಉತ್ರ ಗೊತ್ತಾಗ್ಲಿಲ್ಲ. ನನ್ನ ತಲೆ ಮ್ಯಾಲೆ ಈ ದೊಣ್ಣೆ ಬೀಳ್ತದೆ ಅಂದ್ರೆ ಅವನು ಕತ್ತಿನ ಮ್ಯಾಲೆ ಬೀಳಿಸ್ತನೆ. ಕತ್ತಿನ ಮ್ಯಾಲೆ ಬೀಳ್ತದೆ ಅಂದ್ರೆ ತಲೆ ಮ್ಯಾಲೆ ಬೀಳಿಸ್ತನೆ, ಎಲ್ಲಿಗೆ ಬಿದ್ರೂ ನನಗೇ ಏಟು’ ಅಂತ ಯೋಚನೆ ಮಾಡ್ತಾ ಕೂತ. ಆಗ ಆ ಗೊಲ್ಲರಜ್ಜ ’ನೀನು ಬಿಕ್ಕನಿಗೆ ಕೇಳಿದ ಪ್ರಶ್ನೆಗೆ ಇದೇ ಕನಪ್ಪಾ ಉತ್ರ...’ ಅಂದ. ಊರವರೆಲ್ಲಾ ಗೊಲ್ಲರಜ್ಜನ ಉತ್ರವನ್ನು ಮೆಚ್ಚಿದ್ರು. ಚಿಕ್ಕ ಬಿಕ್ಕನಿಗೆ ಪಕ್ಷಿಕೊಟ್ಟುಬಿಟ್ಟ. ದೊಣ್ಣೆ ಏಟು ತಪ್ಪಿಸ್ಕಂಡ.
 
ಆಯಾಮದ ಪುಟ್ಟ ಗೆಳತಿ ಮಹಿಮಾ ಪಟೇಲ್ ನಮ್ಮ ಒಂದೂರಂತೆ ಅಂಕಣಗಳಿಗೆ ಚಿತ್ರ ಬರೆದುಕೊಡುತ್ತೇನೆಂದಿದ್ದಾಳೆ.
 
 
 
 
 
 
Copyright © 2011 Neemgrove Media
All Rights Reserved