ಎಲ್ಲಿಗಣ್ಣಯ್ಯ, ನಿನ್ನ ಪಯಣ?

 
ಡಾ. ಹಿ. ಶಿ. ರಾ.
 
 
 
(ಭಾಗ-೧)

ಈ ಹೊತ್ತಿನ ಸಮಾಜದ ನಿರ್ವಹಣೆಯನ್ನು ನಾಲ್ಕು ಕಾರ್ಯಾಂಗಗಳ ಮೂಲಕ ಗುರುತಿಸುವುದು ಸಾಮಾನ್ಯ. ಅವುಗಳೆಂದರೆ; ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ. ಒಂದು ಸಮಾಜದ ಸಾಂಸ್ಥಿಕ ರೂಪವನ್ನು ಸಾಮಾಜಿಕ ಎಂತಲೂ, ನಂಬಿಕೆ ಮತ್ತು ನಡವಳಿಕೆಯ ಭಾಗವನ್ನು ಸಂಸ್ಕೃತಿಯೆಂತಲೂ, ಜೀವನ ನಿರ್ವಹಣೆಗೆ ಬೇಕಾದ ಉತ್ಪಾದನಾ ಚಟುವಟಿಕೆಯನ್ನು ಆರ್ಥಿಕ ಎಂದೂ, ಸಮಾಜದ ಅಭಿವೃದ್ಧಿ ನಿರ್ವಹಣೆಯನ್ನು ರಾಜಕೀಯ ಎಂದೂ ಗುರುತಿಸಲಾಗುತ್ತದೆ.

ಇದು ಸಮಾಜವನ್ನು ಅಧ್ಯಯನ ಮಾಡಲು ನಾವು ಬಳಸಿಕೊಂಡ ವಿಭಾಗ ಕ್ರಮವಾಗಿದೆ. ಒಟ್ಟು ಜೀವನದಲ್ಲಿ ಇವುಗಳನ್ನು ಬೇರೆ ಬೇರೆ ಮಾಡಿ ನೋಡಲು ಕಷ್ಟ. ಯಾಕೆಂದರೆ ಈ ನಾಲ್ಕೂ ಅಂಗಗಳು ಅನ್ಯೋನ್ಯವಾಗಿವೆ. ಮನುಷ್ಯನ ದೇಹದ ಬೇರೆ ಬೇರೆ ಭಾಗಗಳನ್ನು ಗುರುತಿಸಿ ಹೆಸರು ಹೇಳುತ್ತೇವೆ. ಆದರೆ ಆ ಯಾವುದೊಂದೇ ಭಾಗವೂ ತಾನೇ ಮನುಷ್ಯ ಎಂದು ಹೇಳಿಕೊಳ್ಳಲಾಗುವುದಿಲ್ಲ. ಎಲ್ಲ ಅಂಗಾಂಗಗಳೂ ಸೇರಿದಾಗ ಮಾತ್ರ ಮನುಷ್ಯ ಎನಿಸಿಕೊಳ್ಳುತ್ತಾನೆ. ಸಮಾಜ ಕೂಡ ಹಾಗೆಯೇ.

ಎಲ್ಲಕ್ಕೂ ಜೀವಧಾತು ಸಂಸ್ಕೃತಿಯೇ. ಕೂಡಿ ಕೊಂಡಾಗ ಸಂಸ್ಕೃತಿ ಹುಟ್ಟುತ್ತದೆ; ದೂರವಾದಾಗ ಅದು ಇರುವುದಿಲ್ಲ. ಗಂಡು-ಹೆಣ್ಣು ಕೂಡಿದಾಗ ಸಂಸಾರ ಹುಟ್ಟುವ ಹಾಗೆ. ನಾವು ಯಾತಕ್ಕಾಗಿ, ಯಾವ ಉದ್ದೇಶಕ್ಕಾಗಿ ಕೂಡುತ್ತೇವೆಯೋ ಅದು ಸಂಸ್ಕೃತಿ. ಅಂದರೆ ಸಂಸ್ಕೃತಿಯಂತೆ ಸಮಾಜವಿರುತ್ತದೆ. ಉದಾಹರಣೆಗೆ "ಕದಿಯುವುದೇ ಸಂಸ್ಕೃತಿ" ಯಾದರೆ, ಅದು ಕದಿಯುವುದಕ್ಕೆ ಬೇಕಾದ ನಡವಳಿಕೆಗಳನ್ನು ರೂಪಿಸುತ್ತದೆ. ಕದಿಯುವ ವ್ಯಾವಹಾರಿಕತೆ ಅದರ ಅರ್ಥಶಾಸ್ತ್ರವಾಗುತ್ತದೆ. ಕದಿಯುವ ಹೊಸ ಹೊಸ ಅವಕಾಶಗಳನ್ನು ಹುಡುಕುವುದೇ ಅದರ ರಾಜಕೀಯವಾಗುತ್ತದೆ.

ಈ ಹೊತ್ತಿನ ಅಮೆರಿಕ ಕೇಂದ್ರಿತ ಸಂಸ್ಕೃತಿಯನ್ನೆ ತೆಗೆದುಕೊಳ್ಳಿ. ಅದು ಜಗತ್ತನ್ನು ಬಳಕೆದಾರರ ಒಂದು ಒಕ್ಕೂಟ ಎಂದು ಭಾವಿಸುತ್ತದೆ. ಅಲ್ಲಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಉತ್ಪಾದಕ ಪ್ರಭುವಿನ ಜಾಗದಲ್ಲಿ ನಿಲ್ಲುತ್ತವೆ. ಇತರ ದೇಶಗಳು ಅವುಗಳ ಉತ್ಪನ್ನಗಳನ್ನು ಬಿಕರಿ ಮಾಡುವ ಮಾರುಕಟ್ಟೆಗಳು ಎನಿಸಿಕೊಳ್ಳುತ್ತವೆ. ಇಂಥ ಸಾಂಸ್ಕೃತಿಕ ವಾತಾವರಣದಲ್ಲಿ ಹೆಣ್ಣನ್ನು ಗುರುತಿಸುವುದು ಹೇಗೆ?
 
ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯನ್ನು ಪ್ರತ್ಯೇಕವಾಗಿಟ್ಟುಕೊಂಡು ಮಹಿಳಾ ಸಮಾಜವೊಂದರ ಅಸ್ತಿತ್ವವನ್ನು ಹೇಳಲಾಗುತ್ತದೆ. ಹಾಗಿದ್ದಲ್ಲಿ ಮಹಿಳಾ ಸಮಾಜದ ಸಂಸ್ಕೃತಿ ಏನು? ಅದರ ಉದ್ದೇಶ ಮತ್ತು ಕಾರ್ಯಯೋಜನೆಗಳು ಯಾವುವು ಎಂಬ ಪ್ರಶ್ನೆ ಎದುರಾಗುತ್ತದೆ. ನಮಗೆ ತಿಳಿದಂತೆ ಹಿಂದೆ ಮಹಿಳಾ ಪ್ರತ್ಯೇಕತೆ ಮತ್ತು ಮಹಿಳಾ ಸಮಾಜ ಎಂಬ ಪರಿಕಲ್ಪನೆ ಇರಲಿಲ್ಲ. ಆಧುನಿಕ ಸಮಾಜ ಮಹಿಳೆಯನ್ನು ಲಿಂಗತಾರತಮ್ಯದಿಂದ ನೋಡುತ್ತಿದೆ. ಅವಳನ್ನು ದುರ್ಬಲ ಲಿಂಗ ಎಂದು ನೋಡಲಾಗುತ್ತದೆ. ಆ ಕಾರಣಕ್ಕೆ ಅವಳನ್ನು ಶೋಷಣೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ಸಮಾಜವೊಂದರಲ್ಲಿ ಅವಳಿಗೆ ಸಿಗಬೇಕಾದ ಸಮಾನತೆ, ಘನತೆ, ಗೌರವ ಮತ್ತು ಸ್ಥಾನಗಳು ಸಿಗುತ್ತಿಲ್ಲ. ಇದಕ್ಕೆಲ್ಲ ಕಾರಣ ಅಸಹಜ ಮತ್ತು ದಮನ ಸಂಸ್ಕೃತಿಗಳು ಅವಳನ್ನು ಹತ್ತಿಕ್ಕುತ್ತಿರುವುದು ಎಂದು ಹೇಳಲಾಗಿದೆ.

ಪ್ರಕೃತಿ ಹೆಣ್ಣನ್ನು ನಿಸರ್ಗದ ಒಂದು ವಿಶಿಷ್ಟತೆಯಾಗಿ ಸೃಷ್ಟಿಸಿದೆಯೇ ಹೊರತು, ಎರಡನೆಯ ಸ್ಥಾನ ಎಂಬ ತಾರತಮ್ಯವಾಗಿ ಅಲ್ಲ. ಪ್ರಕೃತಿ ಅವಳನ್ನು ಒಂದು ವಿಶಿಷ್ಟತೆ (distinction) ಯಾಗಿ ಸೃಷ್ಟಿಸಿದ್ದರೆ ಗಂಡು ಪ್ರಧಾನ ಸಮಾಜ ಅವಳನ್ನು ತಾರತಮ (discrimination) ಭಾವದಿಂದ ನೋಡಿ ತನ್ನ ಅಧೀನಕ್ಕೆ ಬಳಸಿಕೊಂಡಿದೆ. ಆದ್ದರಿಂದಲೇ ಗಂಡು ಪತಿ (ಯಜಮಾನ) ಹೆಂಡತಿ ಎಂಬುವವಳು ಪತ್ನಿ (ಗಂಡನನ್ನು ಅನುಸರಿಸುವವಳು). ಹೆಂಡತಿಯೇ ಗಂಡನನ್ನು ಯಾಕೆ ಅನುಸರಿಸಬೇಕು, ಗಂಡನೆ ಹೆಂಡತಿಯನ್ನು ಯಾಕೆ ಅನುಸರಿಸಬಾರದು? ಈ ಎರಡೂ ತಪ್ಪು ಎನ್ನುವುದಾದರೆ ಪರಸ್ಪರರು ಅನುಸೃಷ್ಟಿ ಮತ್ತು ಅನುಸರಣೆ ಮಾಡಿಕೊಂಡು ಹೋಗಬಾರದು ಎಂಬ ಚಿಂತನೆ ಈ ಹೊತ್ತಿನ ಜಾಯಮಾನವಾಗಿದೆ. ಇದೇ ಸಹಜ ಸಂಸ್ಕೃತಿಯಲ್ಲವೆ?

ಈ ಬಗೆಯ ಚಿಂತನೆ ಸಹಜ ಸಂಸ್ಕೃತಿ ಮತ್ತು ಅದಕ್ಕೆ ಪ್ರತಿಯಾಗಿ ಬೆಳೆದ 'ಪ್ರತಿಕೃತಿ' ಸಂಸ್ಕೃತಿಗಳ ನಿರಂತರ ತಿಕ್ಕಾಟವನ್ನು ತಿಳಿಸುತ್ತಿದೆ. ಹಾಗೆ ನೋಡಿದರೆ ಸ್ತ್ರೀ-ಪುರುಷ ಪರಸ್ಪರವೆಂದು ಕೂಡಿದ ಸಂಸ್ಕೃತಿ ಸಹಜ ಸಂಸ್ಕೃತಿ. ಗಂಡಿನ ಅಧೀನದಲ್ಲಿ ಉಳಿದೆಲ್ಲವುಗಳು ಎಂದರೆ ಅದು ದಮನ ಸಂಸ್ಕೃತಿ. ಸಹಜ ಸಂಸ್ಕೃತಿಗೆ ಪ್ರತಿಯಾಗಿ ಸೃಷ್ಟಿಸಿಕೊಂಡ ಸಂಸ್ಕೃತಿಗಳೆಲ್ಲವೂ ಪ್ರತಿಕೃತಿ ಸಂಸ್ಕೃತಿಗಳೆ. ಅವುಗಳೆಂದರೆ: ಗಂಡು ಪ್ರಧಾನ ಸಂಸ್ಕೃತಿ, ಊಳಿಗಮಾನ್ಯ ಸಂಸ್ಕೃತಿ, ಪುರೋಹಿತ ಸಂಸ್ಕೃತಿ, ಬಂಡವಾಳ ಸಂಸ್ಕೃತಿ, ಜಾತಿ ಸಂಸ್ಕೃತಿ, ಪ್ರಭು ಸಂಸ್ಕೃತಿ ಮತ್ತು ಈ ಹೊತ್ತಿನ ಜಾಗತಿಕ ಪ್ರಭುತ್ವ ಸಂಸ್ಕೃತಿ.

ಸಹಜ ಸಂಸ್ಕೃತಿ ಪ್ರಕೃತಿಯೊಂದಿಗೆ ಸಹ್ಯ ಹೊಂದಾಣಿಕೆ ಮತ್ತು ಅನುಕರಣೆಯೊಂದಿಗೆ ಸೃಷ್ಟಿಯದು. ಹೆಣ್ಣು ಕೂಡ ಒಂದು 'ಮಾನವ ಪ್ರಕೃತಿ' : ಪ್ರಕೃತಿಯೆಂತೆಯೆ ಮನುಷ್ಯ ಸಮಾಜದಲ್ಲಿ ಅವಳು ಗರ್ಭಧಾರಣೆ, ಜನನ ಮತ್ತು ಪೋಷಣೆಯ ಹೊಣೆಗಾರಿಕೆಯನ್ನು ಹೊತ್ತವಳು. ಮಾನವ ಸಂಸೃತಿಯ ನಿರ್ಮಾತೃ ಕೂಡ ಅವಳೆ. ಸಂಸ್ಕೃತಿ ಎಂಬುದು ಮಾನವ ಸಮಾಜ ನೆಲಸುವುದು, ಸೃಷ್ಟಿಸುವುದು, ಅನುಭವಿಸುವುದು ಮತ್ತು ಇತರರೊಡನೆ ಸ್ಪರ್ಧಿಸಿ ಅಸ್ತಿತ್ವ ಉಳಿಸಿಕೊಳ್ಳುವುದು ತಾನೆ? ಅಂಥ ಹೊಣೆಗಾರಿಕೆಯನ್ನು ಹೊತ್ತ ಸಮಾಜದ ಮೊದಲ ಪ್ರಜೆ ಹೆಣ್ಣು. ಓಡಾಡಿಕೊಂಡಿದ್ದ ಮನುಷ್ಯ ಹೆರಿಗೆಗಾಗಿ, ಮಕ್ಕಳ ಪೋಷಣೆಗಾಗಿ, ರಕ್ಷಣೆಗಾಗಿ ಒಂದು ಕಡೆ ನೆಲೆ ನಿಲ್ಲಬೇಕಾಯಿತು. ಅದು ಹೆಣ್ಣಿನ ಕಾರಣದಿಂದಲೇ ಆಯಿತು. ಕುಟುಂಬ, ಊರು, ಸಮುದಾಯ ಅಲ್ಲಿಂದ ಹುಟ್ಟಿ ಬೆಳೆದವು. ಅಂದರೆ 'ಸಂಸ್ಕೃತಿ ತಾಣದ ನಿರ್ಮಾಪಕಿ’ಯೇ ಹೆಣ್ಣು. ’ರೋಲಿಂಗ್ ಸ್ಟೋನ್ ಗ್ಯಾದರ್ಸ್ ನೋ ಮಾಸ್' ಎಂಬಂತೆ ಗಂಡು ನೆಲೆ ಕಾಣದೆ ಇದ್ದಾಗ ಅವನನ್ನು ತನ್ನ ಸೆರಗಿಗೆ ಇಟ್ಟುಕೊಂಡು ಪೋಷಿಸಿದಳು. ಅವಳು ಮಕ್ಕಳಿಗಾಗಿ ಆಹಾರ ತಯಾರು ಮಾಡುತ್ತಿದ್ದಳು. ಅದನ್ನು ಗಂಡಸು ತನಗಾಗಿಯೂ ವಿಸ್ತರಿಸಿ ಕೊಂಡು ಆರಾಮವಾದನು. ಇದು ಮಕ್ಕಳ ನೆಪದಲ್ಲಿ ಗಂಡು ಪಡೆದ ಲಾಭ!

ಮಕ್ಕಳನ್ನು ಸಾಕುವಾಗ ಅವಳು ಮನೆ ಹೊರಗೆ ಬೀಜ ಮತ್ತು ಸಸಿಗಳನ್ನು ನೆಟ್ಟು ಸಾಕಿದಳು. ಪ್ರಬಲನಾದ ಮೇಲೆ ಗಂಡು ಅದನ್ನೂ ಹೆಣ್ಣಿನಿಂದ ವಶಪಡಿಸಿಕೊಂಡನು. ಮಕ್ಕಳು ಮತ್ತು ಸಸಿಗಳನ್ನು ಪೋಷಿಸುವ ಅವಳ ಪೋಷಕ ಗುಣವನ್ನು ಕಂಡು ಅದರಿಂದ ತಾನು ಆರೋಗ್ಯವಂತನಾಗಿರಬಹುದೆಂದು ಗ್ರಹಿಸಿ ಅವಳನ್ನು ಪೋಷಕಿಯಾಗಿ ಇಟ್ಟುಕೊಂಡನು. ಅವಳಿಂದ ಪಡೆವ ಸುಖ ಸುರಲೋಕದ ಸುಖಕಿಂತ ಹೆಚ್ಚಿನದು ಎಂದು ಮನವರಿಕೆ ಆದ ಮೇಲೆ ಅವಳನ್ನು ತನಗಾಗಿ ಭದ್ರ ಮಾಡಿಕೊಂಡನು. ನೈಸರ್ಗಿಕ ಎಲ್ಲ ಪೋಷಕ ಗುಣಗಳ ಗಣಿಯಾದ ಹೆಣ್ಣನ್ನು ತನ್ನ ಎಲ್ಲ ಸೌಕರ್ಯಗಳ ಸಂಪನ್ಮೂಲ ಎಂದು ತಿಳಿದು ಅವಳನ್ನು ಗಣಿಯಾಗಿಯೆ ಉಳಿಸಿಕೊಂಡು, ಅವನು ಗಣಿಧಣಿಯಾದನು. ಎಲ್ಲದರಲ್ಲೂ ಲಾಭಕೋರನಾಗಿ ಗಂಡಸು ಸಾರ್ವತ್ರಿಕ ಫಲಾನುಭವಿಯಾಗಿ ಮಾರ್ಪಟ್ಟನು.

ಸಂಪತ್ತು ಇದ್ದ ಕಡೆಯೆ ದರೋಡೆ ನಡೆಯುವುದು, ಸಾಮ್ರಾಜ್ಯ ಸೃಷ್ಟಿಯಾಗುವುದು ತಾನೆ?! ನೈಸರ್ಗಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲದ ಸುಖವನ್ನು ಕಂಡ ಗಂಡಸು ಅವುಗಳ ಒಡೆಯನಾಗಲು ನಿರಂತರ ನಡೆಸಿದ ಹಿಕಮತ್ತೇ ಗಂಡು ಪ್ರಧಾನ ಸಮುದಾಯ ನಿರ್ಮಾಣವಾಗಲು ಕಾರಣವಾಯಿತು. ಇದೇ ಗಂಡಿನಿಂದ ಮುಂದೆ ರಾಜ್ಯ, ಸಾಮ್ರಾಜ್ಯಗಳು ಹುಟ್ಟಿಕೊಂಡವು. ಜನಹಿತದ ಹೆಸರಿನಲ್ಲಿ ಕರ-ತೆರಿಗೆ ಮುಂತಾದ ಶೋಷಕ ಮಾರ್ಗಗಳ ಮೂಲಕ ತಮ್ಮನ್ನು ಗಟ್ಟಿಗೊಳಿಸಿಕೊಂಡವು. ಇಲ್ಲಿಯವರೆಗಿನ ನೋಟದಂತೆ ಈ ಕದೀಮರು ಹೆರಿಗೆಗೆ ತೆರಿಗೆ ಹಾಕಿದಂತೆ ಇಲ್ಲ, ಇನ್ನು ಉಳಿದ ಎಲ್ಲ ಉತ್ಪಾದನೆ ಮತ್ತು ಉತ್ಪತ್ತಿದಾರರ ಮೇಲೆ ತೆರಿಗೆ ಹಾಕಿದ್ದಾರೆ. ಇದನ್ನೇ ಇವರು ರಾಜಕಾರಣ ಎಂದು ಕರೆದಿದ್ದಾರೆ. ಇದೇ ಕ್ರಿಯೆಯ ಈ ಹೊತ್ತಿನ ಪರಿಸ್ತಿತಿ ಎಂದರೆ 'ಅಭಿವೃದ್ದಿ ರಾಜಕಾರಣ'. ಇದರ ಹಿಂದೆ ಇರುವುದೇ ಗಂಡಸೆಂಬ ಅಹಂಕಾರಿಯ ಆಟಾಟೋಪ ಮತ್ತು ಸುಖ ಲೋಲುಪತೆ. ಈ ದುರಾಸೆ(greed) ಏನೆಲ್ಲಾ ಅವಶ್ಯ ಮೂಲ (basic sources) ಗಳನ್ನು ನಾಶ ಮಾಡುತ್ತದೋ ತಿಳಿಯುತ್ತಿಲ್ಲ!

ಈ ದುರಹಂಕಾರಕ್ಕೆ ಎದುರಾದ ಸಣ್ಣ ಪ್ರತಿಭಟನೆಯೆ ಮಹಿಳೆಗೆ ಸಾಂಸ್ಕೃತಿಕ ನಾಯಕತ್ವ ಬೇಕು ಮತ್ತು ಅದನ್ನು ಆಕೆ ಪಡೆಯಲು ಹೋರಾಟ ಮಾಡಬೇಕು ಎಂಬ ಸಾಮಾಜಿಕ ಚಲನೆ. ಹೆಣ್ಣಿನ ಸಬಲೀಕರಣ (empowerment), ಲಿಂಗ ಸಮಾನತೆ, ರಾಜಕೀಯದಲ್ಲಿ ಪ್ರಾತಿನಿಧ್ಯ..ಇತ್ಯಾದಿ ಇತ್ಯಾದಿಗಳೆಲ್ಲ ಗಂಡು ಪ್ರಧಾನ ರಾಜಕಾರಣ ಹೇಳುತ್ತಿರುವ, ಹೆಣ್ಣಿನ ಪರವಾಗಿ ತಾವು ಮಾಡುತ್ತಿರುವ ರಾಜಕಾರಣ. ಇದೇ ಥರದ ಮಾತುಗಳನ್ನು ಸಂಪ್ರದಾಯಸ್ತರು ಸ್ತ್ರೀ ದುರ್ಬಲೆ, ಅಬಲೆ ಎಂದು ಹೇಳುತ್ತಿದ್ದರು. ನಾಗರೀಕ ಸಂಸ್ಕೃತಿ ಸಂದರ್ಭದಲ್ಲಿ ದುರ್ಬಲೆ, ಅಬಲೆ ಎಂಬ ಮಾತೇ ಬರಕೂಡದು. ಸಬಲೀಕರಣ ಎಂಬುದೇ ಹಿಂದೆ ಮಾಡಿದ ಅಬಲೀಕರಣದ ಮತ್ತೊಂದು ಡ್ರಾಮ. ನೈಸರ್ಗಿಕವಾಗಿ ಹೆಣ್ಣು ಅವಳಾಗಿರಲು ಬಿಡುವುದೇ ಕ್ಷೇಮ. ನಾಗರಿಕ ಸಂಸ್ಕೃತಿಯಲ್ಲಿ ಹೆಣ್ಣು ದುರ್ಬಲೆಯಲ್ಲ. ಗಂಡಿನ ತೋಳ್ಬಲ, ಹಣಬಲ ಮತ್ತು ಅಧಿಕಾರ ಬಲದ ಎದುರು ಅವಳು ದುರ್ಬಲೆ. ಆದರೆ ನಾಗರೀಕ ಸಂಸ್ಕೃತಿಯ ಸಂದರ್ಭದಲ್ಲಿ ಬದುಕುತ್ತಿರುವ ಯಾರೇ ಆಗಲಿ ಇನ್ನೊಬ್ಬರ ಮೇಲೆ ತೋಳ್ಬಲ ಬಳಸುವಂತಿಲ್ಲ. ಅವನ್ನು ಬಳಸಿ ಬದುಕುವವನು ಮೃಗ. ಇಂಥ ಮೃಗದ ಮುಂದೆ ಹೆಣ್ಣು ದುರ್ಬಲಳೆ ಹೊರತು ನಾಗರೀಕ ಮನುಷ್ಯನ ಎದುರು ಅವಳು ಸಮಾನಳು.

ಪ್ರಸಂಗ ೧:
ಎಂ.ಎ ಮುಗಿಸುತ್ತಿದ್ದ ಒಬ್ಬ ಧಡೂತಿ ಹುಡುಗ. ಹಳ್ಳಿಯಿಂದ ಬಂದವನು, ಮಧ್ಯಮ ಜಾತಿಯವನು. ಅವನನ್ನು ಕೇಳಿದೆ; ನೀನು ಮದುವೆಯಾಗುವ ಹುಡುಗಿ ನಿನ್ನ ಜೊತೆಗೆ ಹೇಗಿರಬೇಕು? ಅವನು ಹೇಳಿದ್ದು; ಅವಳು ನಾನು ಹೇಳಿದಂತೆ ಕೇಳಿಕೊಂಡಿರಬೇಕು. ಇನ್ನೊಬ್ಬನ ಜೊತೆ ಹೆಚ್ಚು ಮಾತು, ಸರಸ ಆಡಬಾರದು. ಹಾಗೇನಾದರೂ ಕಂಡರೆ ಅವಳನ್ನು ತುಂಡು ತುಂಡು ಮಾಡಿ ಬಿಡುತ್ತೇನೆ.
ಹಾಗೆ ತುಂಡು ಮಾಡಿದ ಮೇಲೆ ಏನು ಮಾಡುತ್ತೀ? ತಕ್ಷಣಕ್ಕೆ ಉತ್ತರ ಇಲ್ಲ. ನಿಧಾನವಾಗಿ ಹೇಳಿದ; ಇನ್ನೊಬ್ಬಳನ್ನು ಮದುವೆಯಾಗುವುದು.

ಈ ಹುಡುಗನಿಗೆ ತನ್ನ ಮಧ್ಯೆ ಒಂದು ನಾಗರಿಕ ಸಮಾಜ ಅಸ್ತಿತ್ವದಲ್ಲಿದೆ ಎಂಬುದೇ ಗೊತ್ತಿಲ್ಲ. ಅಷ್ಟು ಮುಗ್ದ ಮತ್ತು ಮೂಢ, ಅಸಾಂದರ್ಭಿಕವಾದ ಆಲೋಚನೆ. ನಾನು ಹೇಳಿದೆ; ನಿನ್ನ ಸುತ್ತ ಒಂದು ನಾಗರಿಕ ಸಮಾಜ ಇದೆ. ಕಾನೂನು ಇದೆ, ಪೋಲೀಸ್ ವ್ಯವಸ್ತೆ ಇದೆ, ನಾಗರೀಕ ಸಂಘಗಳಿವೆ. ನಿನ್ನ ಹೆಂಡತಿ ಕಡೆಯ ಸಮಾಜ ಇದೆ. ಇವೆಲ್ಲ ನಿನಗೆ ಏನೂ ಅಲ್ಲವೆ?
 
ಹುಡುಗನಿಂದ ಉತ್ತರ ಇಲ್ಲ. ಅವನು ಆ ಬಗ್ಗೆ  ಯೋಚಿಸಿಯೆ ಇಲ್ಲ. ಊಳಿಗ ಮಾನ್ಯ ವ್ಯವಸ್ತೆಯಲ್ಲಿ ಕೆರೆ ಏರಿ ಒಡೆದಾಗ ಆ ಜಾಗಕ್ಕೆ ಹೆಣ್ಣೊಂದನ್ನು, ಅದೂ ಹಿರಿಯ ಸೊಸೆಯನ್ನು ಬಲಿಕೊಟ್ಟು ಏರಿಯನ್ನು ಭದ್ರ ಮಾಡಿಕೊಂಡ ಹಾಗೆ. ಆ ಹೆಣ್ಣಿನ ಪಾಲಿಗೆ ಇಡೀ ಸಮಾಜ ಸತ್ತುಹೋದ ಹಾಗೆ. ಪುರೋಹಿತಶಾಹಿ ಸೃಷ್ಟಿಸಿದ ನಂಬಿಕೆಯನ್ನು ಊಳಿಗ ಮಾನ್ಯ ಯಜಮಾನ ಸೈನಿಕನಂತೆ ಕಾರ್ಯರೂಪಕ್ಕೆ ತಂದ ಹಾಗೆ; ಹೇಳುವವರು ಕೇಳುವವರು ಇಲ್ಲದೆ ನಡೆದು ಹೋಗುವ ಘಟನೆ.

ನಾನು ಹುಡುಗನಿಗೆ ಹೇಳಿದೆ. ಅಲ್ಲಯ್ಯಾ, ಅವಳು ನಿನ್ನ ಜೊತೆಗೆ ಇರಲು ಆಗದೆ ಬೇರೊಬ್ಬನೊಡನೆ ಸರಸವಾಡಿದರೆ ನೀನು ಅವಳನ್ನು ಕರೆದು ಕೂರಿಸಿ ಮಾತನಾಡು. ನನ್ನ ಬಗ್ಗೆ ಇಷ್ಟ ಇಲ್ಲ ಎಂದರೆ ನೀನು ಹೊರಗೆ ಹೋಗಿ ನಿನ್ನ ದಾರಿ ಕಂಡುಕೊ ಎಂದು ಹೇಳು. ಹೆಣ್ಣು ತನಗೆ ಗಂಡ ಬೇಡವೆಂದಾಗ ಅದನ್ನೆ ತಾನೆ ಮಾಡುತ್ತಿರುವುದು. ಅವಳು ಗಂಡನನ್ನು ಕೊಲ್ಲುತ್ತಿಲ್ಲವಲ್ಲ! ಮೇಲಾಗಿ ನೀನು ಒಂದು ಜೀವವನ್ನಷ್ಟೇ ಕೊಲ್ಲುತ್ತಿಲ್ಲ, ಅವಳ ಬದುಕನ್ನೂ ಕೊಂದ ಹಾಗೆ ಆಗುತ್ತದೆ. ಅವಳಿಗೂ ನಿನ್ನ ಹಾಗೆಯೆ ಆಸೆ-ಆಕಾಂಕ್ಷೆಗಳಿವೆ. ಅವುಗಳ ಮುಂದುವರಿಕೆಯನ್ನು ತಡೆಯಲು ನೀನು ಯಾರು. ಇದೆಲ್ಲಕ್ಕಿಂತ ಹೆಚ್ಚಾಗಿ ಇದೇ ಕೃತ್ಯಕ್ಕೆ ನಿನ್ನ ಜೀವನವನ್ನೂ ನಾಶ ಮಾಡಿಕೊಳ್ಳುತ್ತೀಯ. ನೀನು ಜೈಲಿನಲ್ಲಿ ಕೊಳೆಯಬಹುದು ಇಲ್ಲವೆ ಮರಣ ದಂಡನೆಗೂ ಗುರಿಯಾಗಬಹುದು. ಆಗ ಹುಡುಗ ಅಪಾಯದಲ್ಲಿ ಸಿಕ್ಕವನಂತೆ ಕಾಣಿಸಿದ. ಮಾತು ಬರಲಿಲ್ಲ.

ನಾನು ಹೇಳಿದೆ; ಇನ್ನೊಂದು ಅಂಶ ಇದೆ, ತಿಳಕೊ. ಆಕೆಯನ್ನು ಕೊಲ್ಲದೆ ಅವಳ ಇಷ್ಟದಂತೆ ಹೊರಗೆ ಬಿಟ್ಟರೆ ನಿನಗೆ ಮತ್ತೊಂದು ಮದುವೆ ಆಗುವ ಅವಕಾಶವಿದೆ. ಗಂಡಿಗೆ ಅದು ಛಾನ್ಸ್ ಅಲ್ಲವೇ ನಿನ್ನ ಹಾಲಿ ಹೆಂಡತಿಯಿಂದಲೇ ನಿನಗೊಂದು ಹೊಸ ಅವಕಾಶ ಸಿಕ್ಕಂತಾಯಿತಲ್ಲ ಎಂದೆ. ಆಗ ಅವನು ಚಿಗುರಿದಂತೆ ಭಾಸವಾಯಿತು !

ಇದು ಸಮಸ್ಯೆಯಿಂದ ಪಲಾಯನವಾ, ಜೀವ ದಯೆಯಾ ಅಥವ ನೈಸರ್ಗಿಕ ಅಸ್ತಿತ್ವಗಳ ಜೀವಿತದ ಹಕ್ಕಾ ? ಚಿಂತಿಸಿ.
 
ಪ್ರಸಂಗ ೨:
ಆಕೆ ನನ್ನ ವಿದ್ಯಾರ್ಥಿನಿ. ’ನೋಡಿ ಸಾರ್, ಗಂಗೋತ್ರಿಯಲ್ಲಿ ನಾನು ಅಧ್ಯಾಪಕ ಅಂತ ನನ್ನನ್ನು ನಂಬಿಸಿ ಮದುವೆ ಮಾಡಿಕೊಂಡ. ಆಮೇಲೆ ವಿಚಾರಿಸಿದರೆ ಆತ ಇಲ್ಲಿ ಟೈಪಿಸ್ಟ್ ಆಗಿದ್ದಾನೆ. ನಾನು ಬಿ.ಎ ಪಾಸುಮಾಡಿದ್ದೇನೆ. ಗಂಗೋತ್ರಿಗೆ ಬಂದು ಏನೇನೋ ಹೊಸದು ಕಲಿಯಬೇಕೆಂಬ ಅಪೇಕ್ಷೆ ಇತ್ತು. ನಮ್ಮ ಕಡೆಯವರು ಮತ್ತು ಅವನ ಕಡೆಯವರು ಆಸ್ತಿವಂತರು. ಡಾಂ, ಡೂಂ.. ಅಂತ ಮದುವೆ ಮಾಡಿದರು. ಅವರು ತಿಂದು ಉಂಡು ಮದುವೆ ಅಂತ ಗಲಾಟೆ ಮಾಡಿಕೊಂಡು ಹೋದರು. ಅವನ ಜೊತೆಗೆ ಹೇಗೆ ಇರುವುದು ಸಾರ್? ಅಸಹ್ಯವಾಗುತ್ತದೆ. ನನಗೆ ಅವನ ಜೊತೆ ಬದುಕೇ ಬೇಡ ಅನಿಸಿತು. ಅದಕ್ಕೆ ಕನಿಷ್ಟ ಒಂದು ಎಂ.ಎ ಡಿಗ್ರಿಯನ್ನಾದರೂ ಮಾಡೋಣ ಅಂತ ಸೇರಿಕೊಂಡೆ’.
 
ಮದುವೆ ಆಗುವವರನ್ನೇ ಒಂದು ಬದಿಗೆ ಸರಿಸಿ, ಮದುವೆಗೆ ನೇರವಾಗಿ ಸಂಬಂಧವಿಲ್ಲದ ಚಟುವಟಿಕೆಗಳಿಂದ ಮದುವೆ ನಡೆದು ಹೋಗಿದೆ. ಹೆಣ್ಣು-ಗಂಡು ಪರಸ್ಪರ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲೂ ಅವಕಾಶ ನೀಡಿಲ್ಲ. ಗಂಡು ಹೇಳಿದ ಸುಳ್ಳನ್ನು ಹೆಣ್ಣಿನ ಮನೆಯವರು ಪರಿಶೀಲಿಸಿಲ್ಲ. ಮೇಲಾಗಿ ಆಸ್ತಿಯ ಗೌಡಿಕೆ ಇರುವವರಿಗೆ ಅವೆಲ್ಲ ಸೆಕೆಂಡರಿ. ಜ್ನಾನವನ್ನು ಹೆಚ್ಚಿಸಿಕೊಳ್ಳುವ ಆಸೆ ಮತ್ತು ಗಂಡ ಜ್ನಾನ ಕೇಂದ್ರದಲ್ಲೇ ಇದ್ದಾನೆ ಎಂಬ ನಂಬಿಕೆಯಿಂದ ಆ ಹುಡುಗಿ ಮದುವೆಯಾಗಿದ್ದಾಳೆ. ಬೇರೆಯವರಿಗೆ ಅದು ಸಮಸ್ಯೆ ಅಲ್ಲ. ಯಾಕೆಂದರೆ ತಾಳಿಕಟ್ಟಿಸಿ ಗಂಡನೊಟ್ಟಿಗೆ ನೂಕಿದರೆ ಎಲ್ಲಾ ಸರಿ ಹೋಗುತ್ತದೆ ಎಂಬ ವ್ಯವಹಾರಿಕ ದೃಷ್ಟಿ. ಛೆ! ಇದೊಂದು ರೀತಿಯಲ್ಲಿ 'ಮನೆ ಹಾದರ' ಕ್ಕೆ ವ್ಯವಸ್ತೆ ಮಾಡಿಕೊಟ್ಟಂತೆ ಎಂದು ನನಗೆ ಅನ್ನಿಸಿತಾದರೂ ಆಕೆಗೆ ಏನೂ ಉತ್ತರಿಸಲಾಗಲಿಲ್ಲ.
 
ಗಂಡ ಆತನ ತಂದೆ-ತಾಯಿಗೆ ಏನೂ ಹೇಳಿರಬೇಕು. ಅವರು ಇವಳನ್ನು ತಾಕೀತು ಮಾಡಿದರು. ನೀನು ಯಾಕೆ ಓದಬೇಕು? ಮದುವೆಯಾದ ಮೇಲೆ ಓದುವುದೇನಿರುತ್ತದೆ? ಸಂಸಾರವೂ ಒಂದು ಓದು. ಹೆತ್ತ ಮಕ್ಕಳನ್ನು ಸಾಕಿ ಸಲಹುವುದೇ ಒಂದು ಶಾಲೆ. ಅಲ್ಲಿ ನೀನು ಮೇಡಂ. ಹೊರಗಿನವರಿಗ್ಯಾಕೆ  ಮೇಡಂ ಆಗಬೇಕು? ತಂದೆ-ತಾಯಿಯರಿಂದಲೂ ಹೆಣ್ಣಿಗೆ ಉಪದೇಶ, ಮದುವೆ ಅಂದ್ರೆ ಓದು ಮುಗೀತು ಅಂತನೆ ಅರ್ಥ. ನಿನಗೆ ಓದುವ ಆ ಕಷ್ಟ ಯಾಕೆ? ತಿಂದುಂಡು ಕಾಲಕಳೆದರೆ ಸಾಕಲ್ಲವೆ ಅಂತ.
 
ವಿರಾಮದ ವೇಳೆ ಯಾರೊ ಇಬ್ಬರು ವಯಸ್ಸಾದ ಗಂಡಸು ಮತ್ತು ಹೆಂಗಸು ನನ್ನ ರೂಮಿಗೆ ಬಂದರು, ಕೈಮುಗಿದರು. ನಿಮ್ಮ ಜೊತೆಗೆ ಮಾತನಾಡುವುದಿದೆ ಎಂದರು. ಹೇಳಿ ಎಂದು ಅವರ ಮುಖವನ್ನು ನೋಡುತ್ತಾ ಕೈಕಟ್ಟಿ ಕುಳಿತೆ. 'ನಮ್ಮದು ಗೌರವಸ್ತ ಕುಟುಂಬ. ಮರ್ಯಾದೆಯಿಂದ ಬದುಕಿ ಬಂದವರು, ದೊಡ್ಡ ಸಂಸಾರ. ಅನುಕೂಲಕ್ಕೇನೊ ಕೊರತೆಯಿಲ್ಲ. ಈ ಹೊತ್ತು ಮರ್ಯಾದೆ ಹೋಗುವ ಕಾಲ ಬಂದಿದೆ. ನಿಮ್ಮ ಕಾಲೇಜಿನಿಂದಲೇ ಈ ಕೆಲಸ ಆಗಿದೆ..." ನನಗೆ ಆಶ್ಚರ್ಯವೂ, ಆತಂಕವೊ ಒಟ್ಟಿಗೆ ಉಂಟಾದವು. ’ಏನು ಅಂಥ ವಿಷಯ ಹೇಳಿ’ ಎಂದೆ. "ಬೇಡ ಬೇಡವೆಂದರೂ ನಮ್ಮ ಸೊಸೆ ನಿಮ್ಮ ಕಾಲೇಜಿಗೆ ಸೇರಿಕೊಂಡಳು. ಓದಿರುವುದೇ ಸಾಕು. ಇನ್ನು ಏನು ಓದುವುದಿದೆ ಎಂದು ತಲೆಚಚ್ಚಿಕೊಂಡು ಹೇಳಿದೆವು. ಈಗ ನೋಡಿ ಏನು ಮಾಡಿದ್ದಾಳೆ ಅಂತ...’. ’ನಿಮ್ಮ ಸಮಸ್ಯೆ ಏನೆಂದು ಗೊತ್ತಾಗಲಿಲ್ಲ' ಎಂದೆ.
 
"ನಿಮ್ಮ ಕಾಲೇಜಿಗೆ ಬಂದ ನಮ್ಮ ಸೊಸೆ ಈಗ್ಗೆ ಹದಿನೈದು ದಿವಸಗಳಿಂದ ಮನೆಗೆ ಬಂದಿಲ್ಲ. ಎಲ್ಲ ಕಡೆ ವಿಚಾರಿಸಿದೆವು, ಏನೂ ಗೊತ್ತಾಗಲಿಲ್ಲ. ಇಲ್ಲಿಗೆ ಬಂದು ಆಫೀಸಿನಲ್ಲಿ ವಿಚಾರಿಸಿದೆವು. ಅವಳದು ನಿಮ್ಮ ಕ್ಲಾಸಂತೆ. ನಿಮ್ಮನ್ನು ಕೇಳಿದರೆ ಎಲ್ಲ ಗೊತ್ತಾಗಬಹುದು ಎಂದು ಇಲ್ಲಿಗೆ ಕಳಿಸಿದರು". ನಾನೇನು ಪೋಲೀಸಾ, ಇವರು ಇಲ್ಲಿಗ್ಯಾಕೆ ಬಂದರು ಅಂದುಕೊಳ್ಳುತ್ತಿರುವಾಗಲೇ ಮುಂದುವರಿದು ಹೇಳಿದರು. ’ಹುಡುಗರು ಮಾತನಾಡಿಕೊಳ್ಳುತ್ತಿದ್ದಾರೆ. ನಮ್ಮ ಸೊಸೆ ಕೆಳಜಾತಿಯ ಹುಡುಗನ ಜೊತೆಗೆ ಓಡಿ ಹೋಗಿರಬಹುದು ಅಂತ. ಆ ಹುಡುಗ ಕೂಡ ನಿಮ್ಮ ಕ್ಲಾಸಂತೆ. ನೋಡಿ, ನಮ್ಮ ಜಾತಿಯನ್ನು ಅವನು ಎಷ್ಟು ಸದರ ತೆಗೆದುಕೊಂಡ! ನಮ್ಮ ಜಾತಿಯವರಾಗಿ ನೀವು ಸುಮ್ಮನಿರಬಾರದು. ಅವನನ್ನು ಎಳೆಸಿ ತರಿಸಿ ಒದೆಸಿ ಹಾಕಿಸಬೇಕು. ನಾವು ಎಂದರೆ ಏನು, ಅವನು ಅಂದರೆ  ಏನು, ಯಾರ್ಯಾರು ಎಲ್ಲೆಲ್ಲಿ ಇರಬೇಕೋ ಅಲ್ಲೇ ಇರಬೇಕು...’ ಹೀಗೆ ಹೇಳುತ್ತಲೇ ಇದ್ದರು.
 
ಆಗ ನನಗೆ ಗೊತ್ತಾಯಿತು. ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದ ಹುಡುಗಿಯೇ ಈಕೆ ಅಂತ. ತನ್ನ ಗಂಡನಿಂದ ಹೆಚ್ಚಿನ ವಿದ್ಯೆ ನಿರೀಕ್ಷಿಸಿದ್ದ ಆಕೆ ತನ್ನ ಒಬ್ಬ ಸುಂದರ ಸಹಪಾಠಿ ಯುವಕನ ಜೊತೆಗೆ ಸಂಗ ಮಾಡಿಕೊಂಡಿದ್ದಳು. ಅಧ್ಯಾಪಕನಾದವನಿಗೆ ಆ ಉಸಾಬರಿ ಕೂಡ ಯಾಕೆ? ನನಗೆ ಆ ಬಗ್ಗೆ ಏನೂ ಹೇಳಲು ಆಗಲಿಲ್ಲ. ಆ ವಯಸ್ಸಾದ ಮನುಷ್ಯ ಹೇಳುವುದನ್ನೆಲ್ಲ ಹೇಳಿ 'ವಯಸ್ಸಾದ ಮೇಲೆ ನನಗೆ ಇಂಥ ದುಸ್ತಿತಿ ಬರಬಾರದಿತ್ತು. ನೀವೇನಾದರೂ ಸ್ವಲ್ಪ ಬುದ್ಧಿ ಹೇಳಿ ನೋಡಿ. ಮುಂದಿನದು ಏನು ಮಾಡಬೇಕು ಎಂದು ನಮಗೆ ಗೊತ್ತು' ಎಂದು ಹೇಳಿ ಹೋದರು.
 
ಜಾತಿ, ಮತ ,ಆಸ್ತಿ, ಅಂತಸ್ತು ಸಕಾಲಿಕ ಹೊರಗಿನ ಬಣ್ಣಗಳಷ್ಟೆ. ಇಲ್ಲಿ ಹೆಣ್ಣಿಗೆ ಒಂದು ಮನಸ್ಸಿದೆ,ಆಸೆ-ಆಶೋತ್ತರಗಳಿವೆ, ಅದರಂತೆ ಅವಳದೇ ಆದ ಆಯ್ಕೆ ಇರುತ್ತದೆ ಎಂಬುದನ್ನು ಅವಗಣಿಸಲಾಗಿದೆ. ಅವಳನ್ನು ಒಂದು ನಿರ್ಜೀವ ವಸ್ತುವಿನಂತೆ ನೋಡಲಾಗಿದೆ. ಇಟ್ಟುಕೊಂಡು ಬಳಸುವ ಗುಲಾಮಳಂತೆ ಪರಿಗಣಿತವಾಗಿದ್ದಾಳೆ. ಬೆಳೆದ ಹೆಣ್ಣನ್ನು ಬೇಗ ಮದುವೆ ಮಾಡಿ ಕಳಿಸಬೇಕು ಎಂದರೆ ಏನರ್ಥ? ಅವಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದವಳು ಎಂದೆ? ಕಳ್ಳ-ಕಾಕರಿಂದ ಅವಳನ್ನು ರಕ್ಷಣೆ ಮಾಡುವುದು ಕಷ್ಟ ಎಂದೆ? ಹಾಗಿದ್ದರೆ ಆ ಕಳ್ಳರು ಯಾರು?
 
ಪ್ರಸಂಗ ೩:
 
ಬೆಳಿಗ್ಗೆ ೯ ಗಂಟೆಗೆ ಕೆಲವು ವಿದ್ಯಾರ್ಥಿಗಳು ಗಾಬರಿಯಿಂದ ನನ್ನ ರೂಮಿಗೆ ಬಂದರು. ’ಸೀತಾಲಕ್ಷಿ ನೇಣು ಹಾಕಿಕೊಂಡು ಸತ್ತಿದ್ದಾಳಂತೆ ಸಾರ್, ಇಲ್ಲಿಗೆ ಹದಿನೈದು ಮೈಲಿ ದೂರ ಅವಳ ಊರು. ಹೋಗಿ ನೋಡಿಕೊಂಡು ಬರೋಣ ಬನ್ನಿ ಸಾರ್’ ಎಂದು ಚಡಪಡಿಸಿದರು. ನಾವೆಲ್ಲ ಹೋದೆವು. ಆಗಲೆ ಜನವೆಲ್ಲ ಸೇರಿದ್ದರು. ಪಕ್ಕದಲ್ಲೆ ಆಕೆಯ ಆರೇಳು ವರ್ಷದ ಮಗು. ಅಳುವವರು ಅಳುತ್ತಲೇ ಇದ್ದರು. ಬಂದು ಹೋಗುವವರು ಏನೇನೋ ಮನಸ್ಸಿನಿಂದ ನೋಡಿಕೊಂಡು ಹೋಗುತ್ತಿದ್ದರು. ಗಂಡ ಎನ್ನುವ ಪ್ರಾಣಿ ಅಲ್ಲೆಲ್ಲೂ ಕಾಣಲಿಲ್ಲ.

ಬರುವಷ್ಟರಲ್ಲಿ ನಮ್ಮ ಹುಡುಗ-ಹುಡುಗಿಯರು ಆ ಬಗ್ಗೆ ಹಲವು ಕತೆಗಳನ್ನು ಕಟ್ಟಿಕೊಂಡು ಬಂದಿದ್ದರು. ಆಕೆಯ ಗಂಡ ದೈಹಿಕ ಶಿಕ್ಷಕ. ಇವಳು ಮೂರನೆಯ ಹೆಂಡತಿಯಂತೆ. ಸುಳ್ಳು ಹೇಳಿ ಮದುವೆಯಾದಾಗ ಆಕೆ ಪಿಯುಸಿ ಓದಿ ಮುಗಿಸಿದ್ದಳು. ಅವಳ ಹಿಂದೆ ಮೂರು ಜನ ತಂಗಿಯರಿದ್ದರು. ತಾನೇ ಹುಡುಕಿಕೊಂಡು ಬಂದ ಗಂಡು, ಕೆಲಸದಲ್ಲಿ ಬೇರೆ ಇದ್ದಾನೆ ಎಂಬ ದೃಢತೆ. ಸುಲಭದಲ್ಲಿ ದೇವಸ್ತಾನದಲ್ಲಿ ಮದುವೆ ಮಾಡಿಕೊಂಡು ಖರ್ಚು ಉಳಿಸಿದ ಎಂಬ ಸಮಾಧಾನ ಕೂಡ.
ತಿಂಗಳು ಕಳೆದ ಮೇಲೆ ಬೆಳಕಿನ ಆನುಭವ; ಇನ್ನೂ ಇಬ್ಬರು ಬೇರೆ ಬೇರೆ ಕಡೆ ಹೆಂಡತಿಯರಿದ್ದಾರೆ ಅಂತ. ಆಕೆ ಪ್ರಶ್ನಿಸಿದಳು, ಜಗಳವಾಡಿದಳು. ಸಿಕ್ಕಿದ್ದು ಮೈ ತುಂಬಾ ಹೊಡೆತ. ಮದುವೆಯಿಂದ ಹೊರಗೆ ಬಂದರೆ ಜೀವನದ ಗತಿಯೇನು. ಬಹುಬೇಗನೆ ಮಗುವನ್ನು ಕೊಟ್ಟು ಬಿಟ್ಟಿದ್ದಾನೆ. ಹೊರಗಡೆಗೆ ಗೊತ್ತಾದರೆ ತೌರುಮನೆಯಲ್ಲಿ ತಂಗಿಯರಿದ್ದಾರೆ. ಪ್ರೀತಿಗೆ ಕೊಡಿಸಿ ಸಾಕಿಕೊಂಡ ನಾಯಿಯ ಹಾಗೆ. ಅದೇ ಕೂಳು ಅದೇ ಬಾಳು. ಮುಂದಕ್ಕೆ ಓದುವುದೊಂದೆ ಮಾರ್ಗ. ಮುಕ್ತ ವಿಶ್ವವಿದ್ಯಾಲಯದಲ್ಲಿ ಹೊರಗಿನಿಂದ ಬಿ.ಎ ಕಟ್ಟಿ ಪಾಸು ಮಾಡಿದಳು. ಸಾಹಿತ್ಯದ ಎಂ.ಎ ನಲ್ಲೂ ಸೀಟು ಪಡೆದಳು. ತುಂಬ ಚುರುಕು, ಆತ್ಮೀಯತೆ, ಜೀವನದಲ್ಲಿ ಗೆಲ್ಲುವ ಉತ್ಸಾಹದ ಹುಡುಗಿ. ಎಂ.ಎ ಮಾಡಿ ಉಪನ್ಯಾಸಕಿ ಆಗಿ ಸ್ವಂತ ಜೀವನ ಕಟ್ಟಿಕೊಳ್ಳಬೇಕೆಂಬ ವೀರಹಟ. ಮಗನನ್ನು ಸಮಾಜದ ಉತ್ತಮ ಪ್ರಜೆಯಾಗಿಸಬೇಕೆಂಬ ಹೆಬ್ಬಯಕೆ.
 
ನಾನು ಪಾಠ ಹೇಳಿದ್ದೆ: ’ಹೆಣ್ಣು ಗಂಡೊಂದಕ್ಕಾಗಿಯೆ ಹುಟ್ಟುವುದಿಲ್ಲ. ಅವಳು ಕೂಡ ಗಂಡಿನಂತೆ ಒಂದು ನೈಸರ್ಗಿಕ ಸೃಷ್ಟಿ. ಅವಳೂ ಕೂಡ ಸಮಾನಳು. ಅಸಮಾನತೆ ಎಂಬುದು ಸಮಾಜದ ಸೃಷ್ಟಿ. ಅದು ನೈಸರ್ಗಿಕ ಅಲ್ಲ. ಹೆಣ್ಣೇ ದುರ್ಬಲೆ ಅಂದುಕೊಂಡರೆ ಹೇಗೆ? ಸೃಷ್ಟಿಯಲ್ಲಿ ಎಂಥಂಥ ಚಿಕ್ಕ ಪುಟ್ಟ ಜೀವಿಗಳಿವೆ. ಅವು ಮನುಷ್ಯನಿಂದ ಏನೆಲ್ಲ ಹಿಂಸೆಗೆ ಒಳಗಾಗಿವೆ. ನಿಸರ್ಗದ ಸಮಾನತೆಯನ್ನು ಅರಿಯದ "ಯಜಮಾನ ಗಂಡು" ಎಲ್ಲವೂ ತನ್ನ ಬಳಕೆಗಾಗಿ ಎಂದು ತಿಳಿದುಕೊಂಡಿದ್ದಾನೆ. ಅವನ ಅನುಕೂಲದ ಸಮಾಜವನ್ನು ಸೃಷ್ಟಿ ಮಾಡಿಕೊಂಡಿದ್ದಾನೆ. ಹೆಣ್ಣು ಕೂಡ ದೃಢವಾಗಿನಿಂತು ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳಬೇಕು. ಗಂಡಿನ ಕಾಮಕ್ಕಾಗಿ ಹೆಣ್ಣು ಅಲ್ಲ. ಅದು ಇದ್ದಲ್ಲಿ ಇಬ್ಬರ ಪರವಾಗಿರುತ್ತದೆ. ಹೆಣ್ಣನ್ನು ಹೆದರಿಸಿ, ಒತ್ತಾಯದಿಂದ, ಸಾಮಾಜಿಕ ಕಟ್ಟು ಪಾಡುಗಳಲ್ಲಿ ಬಂಧಿಸಿ ಮದುವೆಗೆ ತಂದು ಹಾಕಿಕೊಂಡರೆ ಅಲ್ಲಿ ಅನುಭವಿಸುವ ಸುಖ ಅಸಹ್ಯದ್ದೇ ಹೊರತು ಆರೋಗ್ಯಕರವಾದುದಲ್ಲ. ಗಂಡು ಹೆಣ್ಣಿಗೆ ಸಮಾನ ಸ್ಪಂದನಕ್ಕೆ ಅವಕಾಶ ನೀಡಬೇಕು. ಅದು ನಿಜವಾದ, ಸಾರವತ್ತಾದ ಸಂಸಾರ’ ....ಆ ನನ್ನ ಮಾತು, ಭಾಷಣ ಇಲ್ಲಿ ಸತ್ತು ಮಲಗಿತ್ತು.
 
ಇಡೀ ದಿನ, ವಾರ ನಾನು ಕೊರಗಿದೆ. ಆ ಹೆಣ್ಣು ಮಗಳನ್ನು ಉಳಿಸಿಕೊಳ್ಳಲಾರದ ನಾವು ಕೊಡುವ ವಿದ್ಯೆ ಅದ್ಯಾವತರ ವಿದ್ಯೆ? ಹೆಣ್ಣನ್ನು ಕೊಲ್ಲುವುದೂ, ಪ್ರಕೃತಿಯನ್ನು ನಾಶ ಮಾಡುವುದೂ ಬೇರೆ ಬೇರೆ ಅಲ್ಲ ಎಂದು ನಮಗೆ ಮನವರಿಕೆಯಾಗುವುದು ಯಾವಾಗ. ಪ್ರಾಣಿಗಳನ್ನು ಕೊಲ್ಲುವುದು, ತಿನ್ನುವುದು ಆಗಾಗ ಇದೆ. ಹೆಣ್ಣನ್ನು ನಿತ್ಯವೂ ಕೊಲ್ಲುತ್ತಿದ್ದೇವೆ. ಅವಳ ಸೃಷ್ಟಿಯನ್ನು ನಿತ್ಯವೂ ನುಂಗುತ್ತಿದ್ದೇವೆ. ಗಂಡು ಆ ಮೂಲಕ ನಿತ್ಯ ವಾಚ್ಯವಾಗುತ್ತಿದ್ದಾನೆ. ರಾಕ್ಷಸರೇ ಹಾಗೆ!
 
 
ಪ್ರಸಂಗ : ೪

ಅಂತರಜಾತಿ ಮದುವೆ, ತೀರಾ ಕೆಳವರ್ಗದ ಹುಡುಗ ಮತ್ತು ಮೇಲುಜಾತಿ ಹುಡುಗಿ. ತುಂಬಾ ಪ್ರೀತಿಸಿದ್ದಾರೆ. ಊರ ಕಡೆ ಮದುವೆಯಾಗುವುದು ಸಾಧ್ಯವೇ ಇಲ್ಲ. ಓಡೋಡಿ ಇಲ್ಲಿಗೆ ಬಂದಿದ್ದಾರೆ. ಮದುವೆ ಮಾಡೋಣ, ನೀವು ಅದರ ಪ್ರಾಯೋಜಕರಾಗಬೇಕು ಎಂದರು ಮಿತ್ರ. ಆ ಹುಡುಗ ಹುಡುಗಿಯ ಪ್ರೇಮ ಕಥನವನ್ನು ತಿಳಿದು ತುಂಬಾ ಸಂತೋಷವಾಯಿತು. ಭಾರತದ ಸನ್ನಿವೇಶದಲ್ಲಿ ಮೇಲು ಜಾತಿಯ ಹುಡುಗಿ ಕೆಳಜಾತಿಯ ಹುಡುಗನನ್ನ ಪ್ರೀತಿಸುವುದೆಂದರೇನು?! ಉತ್ತರ ಭಾರತದಿಂದ ವರದಿಯಾಗುತ್ತಿರುವ 'ಮರ್ಯಾದಾ ಹತ್ಯೆ' ಪ್ರಕರಣಗಳನ್ನು ಕೇಳಿದರೆ ಸಾಕು ನಮ್ಮ ಪ್ರಜಾಪ್ರಭುತ್ವ ಎಂಥ ಹೆಳವ ಅಂತ ಗೊತ್ತಾಗುತ್ತದೆ. ಬಹುಸಂಖ್ಯಾತರ ಮೇಲು ಜಾತಿ ಎಂದರೆ ಸಾಕು. ಅವರಿಗೆಲ್ಲ ಸುಲಭ. ಅವರು ಶತ್ರುವನ್ನು ಅತಳ ವಿತಳ ಪಾತಾಳದಿಂದಲೂ ಹಿಡಿದುಕೊಂಡು ಬರುತ್ತಾರೆ. ತಮ್ಮನ್ನ ಬಿಟ್ಟು ಉಳಿದವರು ಅವರಿಗೆ ಕುರಿಗಳು ಮಾತ್ರ.

ಗಂಡಿಗೆ-ಹೆಣ್ಣಿಗೆ ಕೊಡಬೇಕಾದ್ದು ಕೊಟ್ಟು, ಮದುವೆಯಲ್ಲಿ ಹಾಜರಿದ್ದವರಿಗೆ ಸಮಾಧಾನದ ಊಟ ನೀಡಿ, ಆಶೀರ್ವಾದದ ಭಾಷಣ ಮಾಡಿ ಆನಂದದಿಂದ ಕಳಿಸಿಕೊಟ್ಟೆವು. ದೂರದಿಂದಲೇ ಅಸ್ಪೃಶ್ಯತೆಯನ್ನು ಆಚರಿಸುವ ಜನವರ್ಗದ ಹೆಣ್ಣು ಹತ್ತಿರದಿಂದ ಅಸ್ಪೃಶ್ಯನನ್ನು ಪ್ರೀತಿಸುತ್ತಾಳೆ, ಬದುಕು ಕಟ್ಟಿಕೊಳ್ಳಬಯಸುತ್ತಾಳೆ ಎಂಬುದು ಮಾನವತಾವಾದಿಗಳ ಮನಗಳಲ್ಲಿ ಸಂತಸ ಹುಟ್ಟಿಸುತ್ತದೆ. ಆ ಹೆಣ್ಣಿಗೆ ನಾನು ಮನಸ್ಸಿನಲ್ಲೆ ನಮಸ್ಕರಿಸಿದೆ. ಮೇಲು ಜಾತಿಯನ್ನು ಅಪ್ಪಿಕೊಳ್ಳುವ ಅಸ್ಪ್ರಶ್ಯನ ಅದಮ್ಯ ಆಸೆಯನ್ನು ಪೂರೈಸಿಕೊಡದ ಭಾರತದ ಮನಸ್ಸು ಅದೆಂಥ ದರಿದ್ರದ್ದು ಅನಿಸಿತು!
ಆದರೆ, ಆದರೆ...ಬಹಳ ವರ್ಷಗಳು ಕಳೆಯಲಿಲ್ಲ. ಹುಡುಗ, ಅದೇನು ಕೀಳುರಿಮೆ ಕಾಡಿತೋ ಅಥವ ಮೇಲು ವರ್ಗದ ಬಗ್ಗೆಯಾದ ಸಾಂಪ್ರದಾಯಿಕ ದ್ವೇಷವೊ ಹುಡುಗಿಯ ಬಗ್ಗೆ ತಾತ್ಸಾರ ಮಾಡತೊಡಗಿದ. ತನ್ನ ಸಮುದಾಯದ ರುಚಿಗಾಗಿ ದಾರಿತಪ್ಪಿದ. ಅಥವಾ ಇನ್ನೇನು ಕಾರಣವೊ ಸಂಸಾರವನ್ನೇ ಹಿಂಸೆಮಾಡಿದ. ತಾನೂ ಹಿಂಸೆಪಟ್ಟುಕೊಂಡ. ಸಾಧ್ಯಮಾಡಿಕೊಂಡದ್ದನ್ನು ನಿರ್ವಹಿಸಲಾರದೆ ಪ್ರೀತಿಸಿ ಬಂದ ಹೆಣ್ಣಿಗೆ ಜೀವನ ಕೊಡಲಾರದೆ ಹೋದ. ಅವನ ಭಯಕೆಯ ನವಭಾರತ ಹುಟ್ಟಲೇ ಇಲ್ಲ.
ಇಂಥ ನೂರು ಪ್ರಸಂಗಗಳನ್ನು ನೋಡಿ. ಭಾರತದಲ್ಲಿ 'ಯೂಸ್ ಅಂಡ್ ಥ್ರೋ' ಸಂಸ್ಕೃತಿಗೆ ಬಳಕೆಯಾಗುತ್ತಿರುವವಳು ಹೆಣ್ಣು. ಇಟ್ಟುಕೊಳ್ಳುವುದು, ಕಟ್ಟಿಕೊಳ್ಳುವುದನ್ನು ಬಿಟ್ಟರೆ ಎಸೆಯುವುದೊಂದೆ ಅವಳಿಗಿರುವ ಭಾಗ್ಯ! 'ಇಟ್ಟುಕೊಂಡವಳು ಇರೋವರೆಗೆ ಕಟ್ಟಿಕೊಂಡವಳು ಕೊನೆವರೆಗೆ' ಎಂಬ ಗಾದೆ ನಮ್ಮಲ್ಲಿ ಇದೆ. ಇದನ್ನು ಗಂಡು ಸಮಾಜ ಸೃಷ್ಟಿಸಿತೊ, ಹೆಣ್ಣು ಸಮಾಜ ಸೃಷ್ಟಿಸಿತೊ ಗೊತ್ತಿಲ್ಲ. ಗಂಡು ಸಮಾಜ ಕಟ್ಟಿರಲಾರದು. ಇದು ಅಸಹಾಯಕರಾದ ಮಡದಿಯರು ಗಂಡನ ಜೊತೆಯಲ್ಲಿ ಸಾಧ್ಯವಾಗುವವರೆಗೂ ಇರಲು ಮಾಡಿಕೊಂಡ ಉಪದೇಶದ ನುಡಿಯಂತೆ ಕಾಣುತ್ತದೆ. ಇಟ್ಟುಕೊಳ್ಳುವುದು ಮತ್ತು ಕಟ್ಟಿಕೊಳ್ಳುವುದು- ಈ ಎರಡೂ- ಹೆಣ್ಣು ಸ್ವತಂತ್ರ ಅಸ್ತಿತ್ವ ಇಲ್ಲದವಳು ಎಂಬುದನ್ನೇ ಸೂಚಿಸುತ್ತಿವೆ. ಗಂಡಿನ ಸುಪರ್ದಿನಲ್ಲಿ ಹೆಣ್ಣಿನ ಬದುಕಿಗೆ ಸೂಚಿಸಲಾಗಿರುವ ಎರಡು ಮಾರ್ಗಗಳು ಎಂದು ಇವುಗಳನ್ನು ತಿಳಿಯಬಹುದು...ಸಹಜವೆ, ಅಸ್ತಿತ್ವ ಇಲ್ಲದವರಿಗೆ ಸ್ವಂತ ನೆಲ, ನೆಲೆ, ಸಂಸ್ಕೃತಿ ಮತ್ತು ಜೀವನ ವಿಧಾನ ಇರುವುದಿಲ್ಲ. ಇದ್ದೂ ಇಲ್ಲದಂತ ಸ್ಥಿತಿಯನ್ನು ಬದುಕುತ್ತಿರುವ ಹೆಣ್ಣು ಇನ್ನಾದರೂ ತನ್ನ ಜೀವನ ನೆಲೆಯನ್ನು ಕಂಡುಕೊಳ್ಳಬೇಕಾಗಿದೆ. ಅಂಥ ಪ್ರಯತ್ನದ ಮೊದಲ ಹೆಜ್ಜೆ ತಮ್ಮದೇ ಸಂಸ್ಕೃತಿಯನ್ನು ಕಟ್ಟಿಕೊಳ್ಳುವುದು ಮತ್ತು ಅದರಂತೆ ಬದುಕುವುದು.
ಗಂಡು ಒಂಟಿಯಾಗಿ ಯೋಚಿಸಿ, ಒಂಟಿಯಾಗಿ ಬದುಕಲು ಎಂದು ನಿರ್ಧರಿಸಿದನೊ ಅಂದೇ ಅವನು ದುಷ್ಟನಾದ. ನನಗೆ ನಾನು, ನನಗಾಗಿ ಎಲ್ಲವೂ ಇವೆ ಎಂದು ಯೋಚಿಸಿದ್ದೇ ಗಂಡಿನ ಮೊದಲ ಅಪರಾಧ ಮತ್ತು ದುಷ್ಟತನ. ಆದ್ದರಿಂದಲೇ ಅವನು ಕಾಲಿಟ್ಟ ಕಡೆ ಅವನೊಬ್ಬನೇ, ಅವನ ಪರವಾದ ಉದ್ಧಾರವೆ ಹೊರತು ಅನ್ಯರಿಗೆ ಅಭಿವೃದ್ದಿ ಎಂಬುದೇ ಇರುವುದಿಲ್ಲ. ಸಾಂಪ್ರದಾಯಿಕ ಸಮಾಜದ ಗಂಡಿನಿಂದ ಹಿಡಿದು ಈ ಹೊತ್ತಿನ ಕಾರ್ಪೋರೇಟ್ ಉದ್ಯಮಿಯವರೆಗಿನ ಗಂಡಸರ ಪರಿಸರವೂ ಸೇರಿಕೊಂಡಂತೆ ಹೆಣ್ಣನ್ನು ಯಾವ ಯಾವ ಬಗೆಯಲ್ಲಿ ಅನುಭವಿಸಬೇಕು ಎಂದೇ ಯೋಜನೆ ಹಾಕುತ್ತಿದ್ದಾರೆ. ಅಂದರೆ ಹಲವು ಜೀವಿಗಳ ಈ ಜಗತ್ತು ಗಂಡೆಂಬ ಒಂದೇ ಜೀವಿಯ ಚಿಂತನೆ ಮತ್ತು ಬದುಕಿನಿಂದ ನರಳುತ್ತಿದೆ. ಅಷ್ಟರ ಮುಟ್ಟಿಗೆ ಒಟ್ಟು ಜೀವಕುಲದ ಅನುಭವ, ಸೃಜನ ಸಾಧ್ಯತೆ ಮತ್ತು ವೈಭವಗಳು ಹಿಂದೆ ಬಿದ್ದು ಹೋಗಿವೆ. ಸಂಪೂರ್ಣ ಜೀವನ ಎಂಬುದೊಂದು ಈಗ ಇಲ್ಲವೇ ಇಲ್ಲ. ವಸ್ತು ಬಹುತ್ವದ ಅನುಭವದ ಬಗ್ಗೆಯೇ ಯೋಚಿಸುತ್ತಿರುವ ಈ ಜಗತ್ತು ಸಕಲ ಪ್ರಜ್ಞಾವಂತ ಜೀವಿಗಳ ಅನುಭವ ಬಹುತ್ವವನ್ನು ಅನುಭವಿಸುವ ಅವಕಾಶವನ್ನು ಕಳೆದುಕೊಂಡಿದೆ. ಹೊಸ ಜಗತ್ತಿನ ಪಯಣ ಅತ್ತ ಕಡೆಗೇ ಹೊರಳಿದೆ.
 
(ಮುಂದುವರೆಯುವುದು)

 
 
 
 
 
 
Copyright © 2011 Neemgrove Media
All Rights Reserved