|
|
|
|
|
|
|
|
|
ಒಬಾಮಾರ ವಿದೇಶೀ ಪಾಲಿಸಿ!
ಬರಾಕ್ ಒಬಾಮಾ ಅಮೆರಿಕನ್ನರ ಮನಸ್ಸು ಗೆದ್ದು ಅಮೆರಿಕಾದ ಅಧ್ಯಕ್ಷರಾದಾಗ ಅವರ ಜಾಗತಿಕ ವರ್ಚಸ್ಸು ತುಟ್ಟ ತುದಿಯಲ್ಲಿತ್ತು. ಆ ಸಂತಸದ, ಜನಪ್ರಿಯತೆಯ ತುದಿಯಲ್ಲಿನ ಪರಿಸ್ಥಿತಿಯಲ್ಲಿ ಒಬಾಮ ಕೊಟ್ಟಿದ್ದ ಅಧ್ಯಕ್ಷೀಯ ಭಾಷಣ ಈಗ ಈಜಿಪ್ಟಿನಲ್ಲಾಗುತ್ತಿರುವ ಬೆಳವಣಿಗೆಗೆ ಪ್ರವಾದಿಯೊಬ್ಬ ನುಡಿಯಂತಿದೆ! ಅವತ್ತು ಒಬಾಮ, ಜನ ಪ್ರಜಾಪ್ರಭುತ್ವವನ್ನು ಬಯಸಿ ದುರಾಡಳಿತದ ರಾಜಕೀಯ ನಾಯಕರಿಂದ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಎಲ್ಲ ರೀತಿಯ ಹೋರಾಟ ಮಾಡಬೇಕು ಎಂದಿದ್ದರು. ತನ್ನ ಆಡಳಿತವಿರುವಷ್ಟೂ ದಿನ ಅಂತರರಾಷ್ಟ್ರೀಯ ಸಮಸ್ಯೆಗಳ ವಿಷಯದಲ್ಲಿ ಅಮೆರಿಕಾ ಬಹುಪಕ್ಷೀಯವಾಗಿ ಪಾಲ್ಗೊಳ್ಳಲಿದೆ, ಯಾವ ಕಾರಣಕ್ಕೋ ದ್ವಿಪಕ್ಷೀಯ ಅಥವಾ ಏಕ ಪಕ್ಷೀಯವಾಗಿ ತಾನು ತೀರ್ಮಾನ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ವಿದೇಶೀ ಪಾಲಿಸಿಗಳಿಗೆ ಸಂಬಂಧಪಟ್ಟಂತೆ ವಿಶ್ವಸಂಸ್ಥೆ, ನ್ಯಾಟೋ ಗಳ ಒಮ್ಮತದಿಂದ ಮಾತ್ರವೇ ತನ್ನ ಅಧ್ಯಕ್ಷೀಯ ಅಮೆರಿಕಾ ಕೆಲಸ ಮಾಡಲಿದೆ ಎಂದಿದ್ದರು. ಆಗ ಒಬಾಮಾ ವಿರೋಧಿ ವಿಮರ್ಶಕರು ವಿಶ್ವ ಸಮುದಾಯದ ಮುಂದೆ ಅಮೆರಿಕಾದ ಸಾಮರ್ಥ್ಯ ಕುಂದುತ್ತಿದೆ ಎಂದು ಒಬಾಮ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಟೀಕೆ ಮಾಡಿದ್ದರು. ಅವರನ್ನು ಮೆಚ್ಚುವವರು ಅಮೆರಿಕಾದ ಈಗಿನ ಬಿಕ್ಕಟ್ಟಿನ ಹಣಕಾಸಿನ ಪರಿಸ್ಥಿತಿಯಲ್ಲಿ ಒಬಾಮಾ ಅತ್ಯಂತ ಜಾಣ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬೆನ್ನು ತಟ್ಟಿದ್ದರು.
ಅದೇನೇ ಇರಲಿ, ಈಗ ವಿಶ್ವದಲ್ಲಾಗುತ್ತಿರುವ ರಾಜಕೀಯ ಮತ್ತು ಆರ್ಥಿಕ ಬದಲಾವಣೆಗಳು ಒಬಾಮಾರ ಧೋರಣೆಗಳನ್ನು ಪ್ರಶ್ನಿಸುವಂತೆ ಮಾಡಿವೆ. ಒಂದು ಮಾಧ್ಯಮದವರಿಗೆ ಒಬಾಮಾ ಈಜಿಪ್ಟ್ ಕುರಿತು ತೆಗೆದುಕೊಂಡ ನಿಲುವು ಸರಿಪಡಿಸಲಾರದ ತಪ್ಪು. ಮತ್ತೊಂದು ಪಂಗಡದವರಿಗೆ ಅದು ಒಬಾಮಾರ ಮಹಾನ್ ಚಾಣಾಕ್ಷತನ! ಈಜಿಪ್ಟ್ ನ ಕ್ರಾಂತಿ ಬಿಸಿಯೇರಿದಷ್ಟೂ ಒಬಾಮಾ ತೀವ್ರವಾದ ಸ್ವಾತಂತ್ರ್ಯ ಪರ ಹೇಳಿಕೆಗಳನ್ನು ಕೊಡುತ್ತಿದ್ದರು. ಫೇಸ್ ಬುಕ್ ನಂತಹ ಹೊಸ ಕಾಲದ ಮಾಧ್ಯಮವೊಂದು ಅಮೆರಿಕಾದ ಗೆಳೆಯನಾಗಿದ್ದ ಈಜಿಪ್ಟ್ ನಲ್ಲಿ ಕ್ರಾಂತಿಗೆ ಸದ್ದಿಲ್ಲದೇ ಸಹಾಯ ಮಾಡಿದ್ದನ್ನು, ಆ ಕ್ರಾಂತಿ ಯಶಸ್ವಿಯಾಗುವಂತೆ ನೋಡಿಕೊಂಡಿದನ್ನು ಗಮನಿಸುತ್ತಿದ್ದ ಅಮೆರಿಕಾದ ಯುವ ಜನತೆ ಈಜಿಪ್ಟಿಗೆ ಶುಭ ಹಾರೈಸಿದ್ದರು. ಈಜಿಪ್ಟ್ ನಲ್ಲಿ ಹೊಸ್ನಿ ಮುಬಾರಕ್ ಯುಗ ಮುಗಿದ ಮೇಲೆ ಅಲ್ಲಿಗೆ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ವಿಷಯವಾಗಿ ಅಮೆರಿಕಾ ಯಾವ ರೀತಿಯಲ್ಲೂ ಮಧ್ಯಸ್ಥಿಕೆ ವಹಿಸದೆ ಇದ್ದದ್ದು ಒಬಾಮಾರ ವಿಮರ್ಶಕರಿಗೆ ಸಿಟ್ಟು ಬರಿಸಿತ್ತು. ಒಟ್ಟಿನಲ್ಲಿ ಅಮೆರಿಕಾಗೆ ನೇರವಾಗಿ ಯಾವ ರೀತಿಯ ಆರ್ಥಿಕ ಒತ್ತಡವನ್ನೂ ಹೇರದೇ ಈಜಿಪ್ಟ್ ನ ಕ್ರಾಂತಿ ಸಫಲವಾಗಿ, ಒಂದು ಹಂತಕ್ಕೆ ಬಂದಿತ್ತು; ಅಮೆರಿಕಾದಿಂದ ಈಜಿಪ್ಟ್ ಯಾವ ನಿರೀಕ್ಷೆಯನ್ನೂ ಮಾಡಿರಲಿಲ್ಲ.
ಅತ್ತ ಈಜಿಪ್ಟ್ ನಲ್ಲಿ ಇನ್ನೂ ಕ್ರಾಂತಿಯ ಧೂಳು ಹೋಗಿರಲಿಲ್ಲ, ಅಷ್ಟರಲ್ಲೇ ಲಿಬಿಯಾದ ಜನ ಗಡಾಫಿಯ ಆಡಳಿತದ ವಿರುದ್ಧ ಸಮರಕ್ಕೆ ನಿಂತಿದ್ದರು. ಅಮೆರಿಕಾ ಲಿಬಿಯಾದ ೪೦ ವರ್ಷಗಳ ನಾಯಕ ಗಡಾಫಿ ಜೊತೆಗೆ ಕೋಪ, ಗೆಳೆತನಗಳ ಮಿಶ್ರ ಸಂಬಂಧ ಇಟ್ಟುಕೊಂಡೇ ಬಂದಿತ್ತು. ಒಬಾಮ ಲಿಬಿಯಾದ ಜನರಿಗೆ ತಕ್ಷಣವೇ ತಮ್ಮ ಬೆಂಬಲ ಕೊಟ್ಟರು. ಯಾಕೆಂದರೆ ಇದು ಲಿಬಿಯಾ ಜನರ ಹೋರಾಟದ ಜೊತೆಗೇ ತೈಲಕ್ಕಾಗಿ ಅಮೆರಿಕಾ ಮಾಡಬೇಕಾಗಿದ್ದ ಜಾಣತನದ ಯುದ್ಧವೂ ಆಗಿತ್ತು!
’ಅಮೆರಿಕಾ ನನ್ನ ಜನರ ಕಾಫಿಯಲ್ಲಿ ಡ್ರಗ್ ಬೆರೆಸಿ ಕೊಡುತ್ತಿದೆ, ನಾನು ನನ್ನ ವಿರುದ್ಧ ಸಿಡಿಯುವವರನ್ನು ಶಿಕ್ಷಿಸಲು ಪ್ರತೀ ಮನೆ ಬಾಗಿಲಿಗೂ ಹೋಗುತ್ತೇನೆ’ ಎಂದು ಗಡಾಫಿ ಗುಡುಗಿದ್ದೇ ತಡ, ಮೇಲು ನೋಟಕ್ಕೆ ಚನ್ನಾಗೇ ಕಾಣುತ್ತಿದ್ದ ಅಮೆರಿಕಾ-ಲಿಬಿಯಾ ಸಂಬಂಧ ತಕ್ಷಣಕ್ಕೆ ಮುರಿದು ಬಿತ್ತು. ಗಡಾಫಿ ತಿರುಗಿಬಿದ್ದವರನ್ನು ಹಿಮ್ಮೆಟ್ಟಿಸಲು ಆಯುಧಗಳ, ವಾಯು ಸೈನ್ಯದ ಮೊರೆ ಹೊಕ್ಕರು. ಲಿಬಿಯಾದಲ್ಲಿ ಶುರುವಾದ ಡ್ರಾಮವನ್ನು ಅಂತರರಾಷ್ಟ್ರೀಯ ಸಮುದಾಯ ನೋಡುತ್ತಿತ್ತು. ಒಬಾಮಾ ಲಿಬಿಯಾದಲ್ಲಿ ಜನಗಳ ಮೇಲಾಗುತ್ತಿದ್ದ ದೌರ್ಜನ್ಯವನ್ನು ಬಲವಾಗಿ ವಿರೋಧಿಸಿದರೂ ಏಕ ಪಕ್ಷೀಯವಾಗಿ ಲಿಬಿಯಾ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಜರ್ಮನಿ, ಫ್ರಾನ್ಸ್, ಬ್ರಿಟನ್ ಗಳ ಬೆಂಬಲದಿಂದ ವಿಶ್ವಸಂಸ್ಥೆಯ ಮೂಲಕ ಲಿಬಿಯಾದಲ್ಲಿ ನೊ ಪ್ಲೈ ಜ಼ೋನ್ ನಿಯಮ ತಂದಿತು. ತಕ್ಷಣವೇ ಲಿಬಿಯಾದ ವಾಯು ಸೈನ್ಯವನ್ನು ನಾಶಮಾಡಿತು. ನ್ಯಾಟೊವನ್ನು ಮಧ್ಯ ಎಳೆದು ತಂದಿತು. ಗಡಾಫಿ ಇದಕ್ಕೆಲ್ಲಾ ಮೊದಲೇ ತಯಾರಾಗಿ ಯುಧ್ದವನ್ನು ಮುಂದುವರಿಸಿಕೊಂಡೇ ಹೋಗಲು ತಯಾರಾಗಿದ್ದಾರೆ ಎನ್ನಿಸುತ್ತದೆ...
ಇತ್ತ, ಅಮೆರಿಕಾಗೆ ಈ ಯುದ್ಧ ಎಷ್ಟು ಖರ್ಚು ಮಾಡಿಸುತ್ತದೋ, ಮತ್ತೆ ಎಕಾನಮಿಯ ಹಣೆಬರ ಏನಾಗುತ್ತದೋ ಎಂದು ಅಮೆರಿಕನ್ನರು ಚಿಂತೆ ಮಾಡುತ್ತಿದ್ದಾರೆ. ಈ ಯುದ್ಧವೂ ಕೊಲ್ಲಿ ಯುದ್ಧದಂತೆ ಅಮೆರಿಕಾದ ಬೊಕ್ಕಸವನ್ನು ಸಿಕ್ಕಾಪಟ್ಟೆ ಖಾಲಿ ಮಾಡಿದರೆ ಏನು ಮಾಡುವುದೆಂದು ಯೋಚನೆ. ಬೇರೆ ಯಾವ ಅಧ್ಯಕ್ಷರಂತೆಯೂ ಅಂತರರಾಷ್ಟ್ರೀಯ ವಿಷಯಗಳಲ್ಲಿ ಏಕ ಪಕ್ಷೀಯವಾಗಿ ಯಾವ ಕೆಲಸವನ್ನೂ ಮಾಡಲಾರೆ, ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲಾರೆ, ನಾನು ಸದಾ ನ್ಯಾಯ ಸಮ್ಮತ ಎಂದೆಲ್ಲಾ ತಮ್ಮ ಹುರುಪು ತುಂಬುವ ಭಾಷಣಗಳಲ್ಲಿ ವ್ಯಕ್ತ ಮಾಡುವ ಒಬಾಮಾರ ಆಡಳಿತ ನಿಜಕ್ಕೂ ಅವರ ಮಾತುಗಳಂತೆಯೇ ಇರುತ್ತದಾ ಎಂದು ನೋಡಬೇಕು.
| |
|
|
|
| |
| |
|
|
|
|
|
|
ಅಮೆರಿಕಾದ ರಾಜ್ಯಗಳಲ್ಲಿ ಜಪಾನ್ ವಿಕಿರಣ ಮಳೆ!!
ಜಪಾನ್ ನಲ್ಲಿ ಸುನಾಮಿ ಆಗಿ ನ್ಯೂಕ್ಲಿಯರ್ ರಿಯಾಕ್ಟರ್ ಗಳು ಕೆಟ್ಟು, ವಿಕಿರಣ ಸೋರಿಕೆ ಶುರುವಾದಾಗ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಮೊಟ್ಟ ಮೊದಲಿಗೆ ವಿಕಿರಣದ ಪ್ರಮಾಣ ಕಂಡು ಬಂದಿತ್ತು. ಈಗ ಮ್ಯಾಸಚೂಸೆಟ್ಸ್, ಮಿನ್ನೆಸೋಟ, ಇಲ್ಲಿನಾಯ್ ಇತರ ರಾಜ್ಯಗಳಲ್ಲೂ ವಿಕಿರಣಗಳು ಕಂಡು ಬಂದಿವೆ. ಮಳೆ ಬಂದಾಗ ವಿಕಿರಣಗಳು ವಾತಾವರಣದಿಂದ ಭೂಮಿಗೆ ಇಳಿಯುವುದರಿಂದ ವಿಕಿರಣ ಸೋರಿಕೆ ಆದ ನಂತರ ಈ ರಾಜ್ಯಗಳಲ್ಲಿ ಬಿದ್ದ ಮೊದಲ ಮಳೆಗಳಲ್ಲಿ ಜಪಾನಿನ ರಿಯಾಕ್ಟರ್ ಗಳಲ್ಲಿ ಸೋರಿರುವ ವಿಕಿರಣಗಳ ಅಂಶಗಳು ಪತ್ತೆಯಾಗಿವೆ. ಸಾವಿರಾರು ಮೈಲಿ ದೂರದಲ್ಲಿರುವ ಅಮೆರಿಕಾದ ರಾಜ್ಯಗಳಲ್ಲೇ ಗಮನಿಸಬಲ್ಲ ಪ್ರಮಾಣದಷ್ಟು ವಿಕಿರಣ ಕಂಡರೆ, ಇನ್ನು ಜಪಾನಿನ ನೆರೆ ಹೊರೆಯ ದೇಶದಲ್ಲಿ ಎಷ್ಟು ಪ್ರಮಾಣ ಇರಬಹುದು?
ಜಪಾನೀಯರ ಮುಖ ಚರ್ಯೆ!
ಮಾಧ್ಯಮಗಳಲ್ಲಿ ನೋಡಿದ್ದೀರಾ? ಭೂಕಂಪ, ಸುನಾಮಿಯಂಥಾ ದೊಡ್ಡ ವಿಕೋಪ, ದುರಂತ ನಡೆದಿದ್ದರೂ ಒಬ್ಬ ಜಪಾನೀ ಪ್ರಜೆಯೂ ದುಃಖ ಹರಿಸಿ ಎಲ್ಲೂ ಮಾತಾಡಿಲ್ಲ, ಎಲ್ಲೂ ರೋಷ-ಕೂಗಾಟವಿಲ್ಲ, ಭೋರಾಡಿ ಅತ್ತು ಕರೆದ ಸುದ್ದಿ ಇಲ್ಲ, ಎದೆ ಬಡಿದುಕೊಂಡೋ, ಚಲೆಚಚ್ಚಿಕೊಂಡೋ ಕಣ್ಣೀರ್ಗರೆವ ಪರಿಯಿಲ್ಲ...
ಜಪಾನೀಯರು ಕ್ರಿಯೆಯಲ್ಲಿ ಯಾವತ್ತೂ ಅಲ್ಲದಿದ್ದರೂ ಮುಖಚರ್ಯೆಯಲ್ಲಿ ಸ್ಟಾಯಿಕ್ ಅಥವ ತಟಸ್ಥತೆಗೆ ಸಾಂಪ್ರದಾಯಿಕವಾಗಿ ಹೆಸರಾದವರು. ’ಹಲ್ಲು ಕಚ್ಚಿ ಸಹಿಸಿಕೋ..", ’ಮುಖ ಗಟ್ಟಿ ಮಾಡು ಇಲ್ಲದಿದ್ದರೆ ಜನ ಏನೆಂದಾರು", ’ಆದದ್ದಾಯಿತು ಸಹಿಸಿಕೋ.. ಮುಂದೆ ನಡೆಯುತ್ತಿರು." ನಿನ್ನ ಕಷ್ಟ ನಿನ್ನದು’...ಅಂತಲೇ ಪರಂಪರಾಗತವಾಗಿ, ಪುಟ್ಟ ವಯಸ್ಸಿನಿಂದಲೂ ಜಪಾನೀ ಮಕ್ಕಳಿಗೆ ಕಲಿಸಲಾಗುತ್ತದಂತೆ. ಜಪಾನೀ ಸಂಸ್ಕೃತಿಯಲ್ಲಿ ಭಾವನೆಗಳನ್ನು ಎಲ್ಲರ ಮುಂದೆ ಬಿಚ್ಚಿಡುವುದು ಅಥವಾ ತೋರಿಸಿಕೊಳ್ಳುವುದು ಎಂದರೆ ತಮ್ಮ ಅಸಹಾಯಕತೆಯನ್ನು ಹೊರಹಾಕಿಕೊಂಡಂತೆ, ಎದುರಿಗಿರುವವರನ್ನು ಅವಮಾನಿಸಿದಂತೆ ಎಂಬ ಅರ್ಥವಿದೆಯಂತೆ. ಇದೇ ಹಲ್ಲು ಕಚ್ಚಿಕೊಂಡಿರುವ, ಹೊರಗಿನವರಿಗೆ ತಮ್ಮೊಳಗಿನ ಭಾವನೆಯನ್ನು ವ್ಯಕ್ತ ಮಾಡದಂತೆಯೇ ತರಬೇತಿಗೊಂಡು ಬೆಳೆಯುವ ಜಪಾನೀಯರಲ್ಲಿ ಕ್ರಮೇಣ ಭಾವನೆಗಳೂ ಮುಖದಂತೆಯೇ ಜಡ್ಡುಗಟ್ಟಿದಂತೆ ಅಥವಾ ಮೊಂಡಾದಂತಾಗಿಬಿಡುತ್ತದಂತೆ...ಭಾವನೆಗಳನ್ನು ಮನಸ್ಸಿನೊಳಗೆ ಹುಟ್ಟಿಸುವುದು, ಅವುಗಳ ಕಲಸುವಿಕೆ, ವ್ಯಕ್ತ ಮಾಡುವುದು ಇವೆಲ್ಲವೂ ಮನಸ್ಸಿನ ಶಕ್ತಿಯನ್ನು ಪೋಲು ಮಾಡುವ ಮಾನಸಿಕ ಕ್ರಿಯೆಗಳಾದ್ದರಿಂದ ಅತಿಯಾದ ಭಾವನೆಗಳಿಗೆ ಅವರಲ್ಲಿ ಅವಕಾಶವೇ ಇಲ್ಲವಂತೆ!
ಹಿಂದೊಮ್ಮೆ ಜಪಾನೀ ಸಂಶೋಧನೆಯೊಂದನ್ನು ಪತ್ರಿಕೆಯೊಂದು ವರದಿ ಮಾಡಿತ್ತು. ಓದಿ ತಮಾಷೆಯೆನಿಸಿತ್ತು. ಜಪಾನೀಯರಿಗೆ ಭಾರತೀಯ ಫಿಲ್ಮ್ ಗಳು ಅದರಲ್ಲೂ ರಜನೀಕಾಂತ್ ರ ಚಲನಚಿತ್ರಗಳೆಂದರೆ ಸಿಕ್ಕಾಪಟ್ಟೆ ಇಷ್ಟವಂತೆ. ೫-೬ ತಿಂಗಳಿಗೊಮ್ಮೆ ಮೂರುವರೆ ಗಂಟೆ ಥಿಯೇಟರ್ ನಲ್ಲಿ ಕುಳಿತು ಬಂದರೆ ಅಳು, ನಗು, ಕೋಪ, ರೋಷ, ಹಾಡು, ನೃತ್ಯ, ತಮಾಷೆ ಎಲ್ಲವನ್ನೂ ಒಟ್ಟಿಗೇ ಆನಂದಿಸಲಾಗುವ ಅವರಿಗೆ ಸಂಪೂರ್ಣ ಕೌನ್ಸಲಿಂಗ್ ತೆಗೆದುಕೊಂಡ ಹಾಗೆ ಎನ್ನಿಸುತ್ತದಂತೆ. | |
|
|
|
| |
| |
|
|
|
|
Copyright © 2011 Neemgrove Media
All Rights Reserved
|
|
|
|