ಜುಲೈ ೨೦೧೧
ಜೆನೆರಲ್ ಶೆರ್ಮನ್ ಹೆಸರಿನ ದೈತ್ಯ ಸಿಕೋಯಾ ಮರ ಇದು.
ಕ್ಯಾಲಿಫೋರ್ನಿಯಾದ ಸಿಯೆರಾ ನೆವಾಡಾ ಪರ್ವತ ಶ್ರೇಣಿಯ ಸೆರಗಲ್ಲೇ ಇರುವ ಸೆಕೋಯಾ ನ್ಯಾಷನಲ್ ಪಾರ್ಕ್ ನಲ್ಲಿ ಸುಮಾರು ಎರಡು-ಎರಡುವರೆ ಸಾವಿರ ವರ್ಷದಿಂದಲೂ ಧೀಮಂತನಂತೆ ತಲೆ ಎತ್ತಿ ನಿಂತಿರುವ ವಿಶ್ವದ ಅತ್ಯಂತ ಹಿರಿಯ ಮರ ಈತ!!!
ದೈತ್ಯ ಸೆಕೋಯಾ ಮರಗಳು ಡೈನೋಸಾರ್ ಗಳ ಕಾಲದಿಂದಲೂ ಅಸ್ತಿತ್ವದಲ್ಲಿವೆ ಎನ್ನಲಾಗಿದೆ. ಸುಮಾರು ಒಂದು ಮಿಲಿಯನ್ ವರ್ಷಗಳ ಹಿಂದೆ ಐಸ್ ಏಜ್
ಆರಂಭವಾದಾಗ ಅತಿಯಾದ ಶೀತ ತಾಳಲಾರದೆ ಈ ದೈತ್ಯಗಳು ಭೂಗೋಳದ ಉತ್ತರ ಭಾಗದಿಂದ ಮಾಯವಾಗಿಬಿಟ್ಟವು. ಇಡೀ ಭೂಮಿಯ ಮೇಲೆ ಇವು ಈಗ ಉಳಿದಿರುವುದು ಕ್ಯಾಲಿಫೋರ್ನಿಯಾದ ಸಿಯೆರಾ ನೆವಾಡಾ ಶ್ರೇಣಿಯಲ್ಲಿ ಮಾತ್ರ. ಈ ನಿಮಿಷಕ್ಕೂ ಉಸಿರಾಡುತ್ತಾ ಅಸಂಖ್ಯಾತ ಬೀಜಗಳನ್ನು ಹಾರಿಸಿ ತಮ್ಮ ಸಂತತಿ ಬೆಳೆಸುತ್ತಿರುವ ಈ ಮರಗಳು ಹಿಂದಿನ ದೈತ್ಯ ಸೆಕೋಯಾಗಳ ಪುಟಾಣಿ ಪಳೆಯುಳಿಕೆಗಳಷ್ಟೇ!! ಈಗಿರುವ ಮರಗಳ ಸರಾಸರಿ ಎತ್ತರ ೪೦೦-೪೫೦ ಅಡಿಗಳು ಮಾತ್ರ!!
ಈ ಭೂಭಾಗದಲ್ಲಿ ಪ್ರತೀ ಬಾರಿ ಪ್ರಚಂಡ ಸಿಡಿಲುಗಳು ಬಂದಾಗಲೂ ಅವು ಮೊದಲು ಧಾಳಿ ಮಾಡುವುದು ಈ ದೈತ್ಯ ಸೆಕೋಯಾಗಳನ್ನೇ. ಸಿಡಿಲಿನ ಧಾಳಿಗಳಿಗೆ ಸಿಕ್ಕಿ ಅಷ್ಟಿಷ್ಟು ತುಂಡಾದರೂ, ಹತ್ತಿ ಉರಿದರೂ, ಬದುಕು ನಿಲ್ಲಿಸದ ಬೃಹತ್ ಮರ ಜೆನೆರಲ್ ಶೆರ್ಮನ್ ಮತ್ತು ಅವನ ಹಲವಾರು ಮಿತ್ರ ಸೆಕೊಯಾಗಳ ಬುಡದಲ್ಲಿ ನಿಂತಾಗ ಬಳಿ ನಿಂತಾಗ ’ಕಾಲ’ನನ್ನೆ ತಾಕಿದ ಅನನ್ಯ ಅನುಭವ.
ಮೇ ೨೦೧೧
ಸಮುದ್ರ ಲೋಕದ ಅಚ್ಚರಿಯ ಆದಿವಾಸಿ ಜೆಲ್ಲಿ ಫಿಶ್!
ಸಮುದ್ರಗಳ ತುಂಬೆಲ್ಲಾ ಬಣ್ಣ ಬಣ್ಣದ ಹೂ ಹಿಂಡುಗಳಂತೆ ತುಂಬಿಕೊಂಡಿರುವ ಎರಡು ಸಾವಿರಕ್ಕೂ ಹೆಚ್ಚು ಬಗೆಯ ಜೆಲ್ಲಿ ಫಿಶ್ ಗಳು ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವ ಅತ್ಯಂತ ಪುರಾತನ ಜೀವಿಗಳಲ್ಲಿ ಒಂದು. ಡೈನೋಸಾರ್ಗಳಿಗಿಂತಲೂ ಮೊದಲೇ ಭೂಮಿಯನ್ನು ವಾಸಸ್ಥಾನ ಮಾಡಿಕೊಂಡ ಜೆಲ್ಲಿ ಫಿಶ್ ಗಳು ಭೂಮಿಯ ಮೇಲೆ ೬೫೦ ಮಿಲಿಯನ್ ವರ್ಷಗಳಿಂದಲೂ ಇವೆ! ನಿರ್ಜೀವವಾದಾಗ ಇವು ಆಕಾರವೇ ಇಲ್ಲದ ಜೆಲ್ಲಿ ಮುದ್ದೆಗಳಂತೆ ಕಾಣುತ್ತವಾದರೂ ನೀರಿನಲ್ಲಿ ಇವುಗಳ ಓಲಾಟ-ತೇಲಾಟ ಅತ್ಯಂತ ಲಾಲಿತ್ಯದಿಂದ ಕೂಡಿರುತ್ತದೆ. ಜೆಲ್ಲಿ ಫಿಶ್ ನ ದೇಹದ ಭಾಗ ಎಲ್ಲಕಡೆಯಿಂದಲೂ ಸಿಮೆಟ್ರಿಕಲ್ ಆಗಿದೆ. ಹೀಗಾಗಿಯೇ ಅದು ಯಾವ ದಿಕ್ಕಿಗೂ ಸರಾಗವಾಗಿ ತಿರುಗಬಲ್ಲದು. ಶತ್ರುಗಳಿಂದ ತನ್ನನ್ನು ರಕ್ಷಿಸಿಕೊಳ್ಳಬಲ್ಲದು. ಜೆಲ್ಲಿ ಫಿಶ್ ಗಳ ದೇಹದಲ್ಲಿ ನರವ್ಯೂಹವೊಂದು ಮಾತ್ರ ಇರುತ್ತದೆ, ಈ ಅಚ್ಚರಿಯ ಜೀವಿಗೆ ಹೃದಯ, ಮೆದುಳು ಅಥವಾ ಎಲುಬುಗಳಿರುವುದಿಲ್ಲ!
ಏಪ್ರಿಲ್, ೨೦೧೧