ಅಂಗಳ      ನೀನಾರಿಗಾದೆಯೊ ಎಲೆ ಮಾನವ
Email a Page to a FriendPrint this pageAdd to Favorite
 

ಎಲ್ಲಿಗಣ್ಣಯ್ಯ, ನಿನ್ನ ಪಯಣ?

 
ಡಾ. ಹಿ. ಶಿ. ರಾ.
 
 
  
ಈ ಹೊತ್ತಿನ ಮಹಿಳಾವಾದಿ ಚಿಂತನೆ ಕೂಡ ಒಂಟಿ ದ್ವನಿಯೇ. ಅದು ಗಂಡನ ವಿರೋಧಿಯೋ, ಗಂಡಿನ ವಿರೋಧಿಯೋ ಎಂದು ಕೇಳಿದರೆ ಅದು ಹೆಣ್ಣಿನ ವಿರುದ್ದವೇ ಇದೆ ಎಂದು ತಿಳಿಯುತ್ತಿದೆ. ಆಧುನಿಕ ಜಗತ್ತಿನ ಡಿಟ್ರಾಕ್ಟ್ ಅಂದರೆ ಒಡೆದುಕೊಳ್ಳುವ ತತ್ವ ಸಿದ್ದಾಂತದಿಂದಲೇ ಅವಳ ಹೋರಾಟ ಹುಟ್ಟಿಕೊಂಡಿದೆ ಎಂಬುದು ನನ್ನ ಗ್ರಹಿಕೆ. ಗಂಡು ತನ್ನ ಪರವಾಗಿಯೇ ಚಿಂತಿಸಿ. ಬಹುಜೀವಿಗಳ ಅನುಭವ ಮತ್ತು ಸೃಜನ ಶೀಲತೆಯನ್ನು ನಾಶಮಾಡಿದ್ದಾನೆ. ಇದೇ ರೀತಿ ಅವನ ವೈಜ್ಞಾನಿಕ ಶೋಧನೆ ಮುಂದುವರಿದರೆ ಅದು ಭೂಮಿಯನ್ನು ಮಾತ್ರವಲ್ಲ ತಾನು ಶೋಧಿಸುತ್ತಿರುವ ಚಂದ್ರಗ್ರಹವನ್ನೂ ನಾಶ ಮಾಡಬಹುದು. ಬಾಂಬು ಹಾಕಿ ಅಲ್ಲ; ತನ್ನ ಸ್ವಾರ್ಥ ಮತ್ತು ದುರಾಸೆಯನ್ನು ಸಿಡಿಸುವ ಮೂಲಕ!

ಹೆಣ್ಣು ತನ್ನ ಪ್ರತಿಭಟನೆಯಲ್ಲಿ ಒಂಟಿಯಾಗುತ್ತಾ ಅದೇ ಕೆಲಸವನ್ನು ಮಾಡುವ ಅಗತ್ಯ ಇಲ್ಲ. ಗಂಡಿನ ಬಗ್ಗೆಯ ದ್ವೇಷ ಒಂದು ಹಂತದಲ್ಲಿ ಸಹಜ. ಅದು ಅನುಭವ ಮತ್ತು ಆಸೆಗಳ ಮುಖಾಮುಖಿ. ಸ್ವಾತಂತ್ರವನ್ನು ಸಮಾನವಾಗಿ ಹಂಚಿಕೊಳ್ಳ ಬಯಸುವ ಎರಡು ಜೀವಸೃಷ್ಟಿಗಳ ಮಧ್ಯೆ ನಡೆಯುವ ಪ್ರಕ್ರಿಯೆ ಅದು. ನಿರಾಕರಣೆ ಮಾತ್ರ ಮೊದಲು ಕಳೆದುಕೊಳ್ಳುವುದು ನಿರಾಕರಿಸಲು ಹೋರಟವರನ್ನೆ. ಯಾಕೆಂದರೆ ನಿರಾಕರಣೆ ಸಮಾಜ ಮುಖಿ ಅಲ್ಲ. ಅದು ಸಮಾಜ ವಿರೋಧಿ. ಅಂದರೆ ಸಂಸ್ಕೃತಿ ಪ್ರಕ್ರಿಯೆಯ ವಿರೋಧಿ.
 
ಗಂಡು ವಿರೋಧ ಎಂಬುದು ಶುದ್ದ ಅಪರಾಧ. ಹಾಗೆ ಮಾಡುವುದು ಇರುವ ಮಾತನ್ನು ಕಳಕೊಂಡ ಹಾಗೆ, ಜೀವನ ಸೃಷ್ಟಿಯನ್ನು ವಿರೋಧಿಸಿದ ಹಾಗೆ. ಹೆಣ್ಣು ಹೆರಲಿಕ್ಕಲ್ಲ ಎಂದರೆ ಹೇಗೆ? ಹೆಣ್ಣು ಹೆರುವುದಕ್ಕೇ ಇರುವುದಲ್ಲ ಎನ್ನುವುದು ಸರಿ. ಗಂಡಿಗೆ ಹೆರುವ ಅವಕಾಶ ಇದ್ದಿದ್ದರೆ ಅದನ್ನು ಅವನು ನಿರಾಕರಿಸಲು ಆಗುತ್ತಿರಲಿಲ್ಲ. ಹೆಣ್ಣು ಅಡಿಗೆ, ಸೇವೆ ಇತ್ಯಾದಿ ಮಿನಿಕೆಲಸಗಳನ್ನೇ ಮಾಡಿಕೊಂಡಿರಬೇಕು ಎಂದರೆ ಅದು ಒಪ್ಪತಕ್ಕ ಮಾತಲ್ಲ. ಪರ್ಯಾಯ ಇಲ್ಲದ ಕಾರ್ಯಗಳು ಮತ್ತು ಪರ್ಯಾಯ ಇರುವ ಕಾರ್ಯಗಳ ಮಧ್ಯದ ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳುವಂತೆ ಆದಲ್ಲಿ ಬದುಕು ಸಾಮರಸ್ಯ, ಸಹ್ಯವಾಗಬಲ್ಲದು.

ಈಗಿರುವ ಹೆಣ್ಣು ಗಂಡಿನ ಮಧ್ಯದ ತಿಕ್ಕಾಟ ಪರ್ಯಾಯ ರಹಿತ ಮತ್ತು ಪರ್ಯಾಯ ಸಾಧ್ಯತೆಗಳ ಮಧ್ಯದ ಸಮಸ್ಯೆಯನ್ನು ಪರಿಹರಿಸುವುದು. ಹೆಣ್ಣು ಗಂಡು ಪ್ರೀತಿಸದಿದ್ದರೆ ಹೇಗೆ, ಕೂಡದಿದ್ದರೆ ಹೇಗೆ-ಈ ಸಂಬಂಧಿ ಎಲ್ಲ ಕ್ರಿಯೆಗಳಿಗೆ ಪರ್ಯಾಯ ಇಲ್ಲ. ಹೆಣ್ಣು ಗಂಡು ಮದುವೆಯಾಗುವುದು ಹೇಗೆ? ಹೆಣ್ಣು ಗಂಡು ಸಂಸಾರ ನಡೆಸುವುದು ಹೇಗೆ ಎಂದು ಕೇಳಿದರೆ ವೈಯುಕ್ತಿಕವಾಗಿ ಯೋಚಿಸಿದರೆ ಅವಕ್ಕೆ ಪರ್ಯಾಯಗಳಿವೆ. ಪ್ರೀತಿಸುವುದಕ್ಕೆ, ಕೂಡುವುದಕ್ಕೆ ಮದುವೆಯೆ ಬೇಕಾಗಿಲ್ಲ, ಸಂಸಾರವೂ ಬೇಕಾಗುವುದಿಲ್ಲ. ಸಮಾಜ ಜೀವನ ಬೇಕು ಎಂದಾಗ ಮದುವೆಯೂ ಬೇಕು, ಕುಟುಂಬವೂ ಬೇಕು. ಪ್ರೀತಿ ಮತ್ತು ಕೂಡುವಿಕೆ ವಿಕೃತಿ ಆಗದಿರಲಿ ಎಂಬ ಕಾರಣಕ್ಕೇ ಮದುವೆ ಮತ್ತು ಕುಟುಂಬಗಳಿವೆ. ಹಾಗೆ ಕೂಡುವುದನ್ನೇ ಸಂಸ್ಕೃತಿ ಎನ್ನುವುದು. ಒಂಟಿ ಧ್ವನಿ ಮತ್ತು ಒಂಟಿ ವಾದದಲ್ಲಿ  ಸಂಸ್ಕೃತಿ ಇರುವುದಿಲ್ಲ. ಪರಸ್ಪರ ಅಲ್ಲದ್ದು ಸಂಸ್ಕೃತಿಯಾಗಲು ಹೇಗೆ ಸಾಧ್ಯ?
 
ಮಹಿಳೆ ಮತ್ತು ಮಹಿಳಾವಾದ ಸಾಂಸ್ಕೃತಿಕವಾಗಬೇಕಿದ್ದಲ್ಲಿ ಏಣು ಮಾಡಬೇಕು? ಈ ಸಂದರ್ಭದಲ್ಲಿ ಈಗ ಮಹಿಳೆ ಸಾಂಸ್ಕೃತಿಕವಾಗಿಲ್ಲವೆ ಎಂಬ ಪ್ರಶ್ನೆಯನ್ನು ನೀವು ಕೇಳಬಹುದು. ನಿರ್ಧಾರಾತ್ಮಕವಾಗಿ ನಾನು ಇಲ್ಲ ಎಂದೇ ಹೇಳುತ್ತೇನೆ. ಗಂಡು ಸೃಷ್ಟಿಸಿದ ಸಂಸ್ಕೃತಿಯನ್ನು ಆಕೆ ನಿಭಾಯಿಸುತ್ತಿದ್ದಾಳೆಮತ್ತು ನಿರ್ವಹಿಸುತ್ತಿದ್ದಾಳೆ ಎಂದಷ್ಟೇ ಹೇಳಬಹುದು. ಹೆಣ್ಣು ಇನ್ನುವರೆಗೆ ತನ್ನ ಸಂಸ್ಕೃತಿ ಸೃಷ್ಟಿ ಮತ್ತು ಅದರ ನಿರ್ವಹಣೆಯನ್ನು ಕಂಡುಕೊಂಡೇ ಇಲ್ಲ. ಇದಕ್ಕೆ ದೊಡ್ಡ ಉದಾಹರಣೆ: ಹೆಣ್ಣು ಹುಟ್ಟಿದರೆ ದಂಡ, ಗಂಡು ಹುಟ್ಟಿದರೆ ಪಿಂಡ ಪ್ರದಾಯಕ ಎಂಬುದನ್ನು ಗಂಡಿನಂತೆಯೇ ಹೆಣ್ಣೂ ನಂಬಿ ಅನುಸರಿಸುತ್ತಿರುವುದು. ಆ ಮೂಲಕ ತನ್ನ ಸೃಜನ ಸಂಪನ್ನತೆಯನ್ನು ಗಂಡಿಗೆ ಮಾರಿಕೊಂಡಿರುವುದು. ಮಾರಿಕೊಂಡವರು ಸ್ವತಂತ್ರವಾಗಿರಲು ಸಾಧ್ಯವೇ? ತಮ್ಮ ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯವೇ? ಕೊಂಡುಕೊಂಡ ಸಮಾಜದಲ್ಲಿರುವ ಹೆಣ್ಣು ತನ್ನನ್ನು ಬಿಡುಗಡೆಗೊಳಿಸಿಕೊಂಡಲ್ಲದೆ ಅವಳ ಧ್ವನಿಯೂ, ವಾದವೂ ಅಸಲಿಯಾಗಲು ಸಾಧ್ಯವಿಲ್ಲ.
 
ಹೆಣ್ಣಿನ ಸಮಾನತೆ, ಸ್ವಾತಂತ್ರ್ಯ ಮತ್ತು ಅಸ್ತಿತ್ವವಿರುವುದು ಅವಳು ತನ್ನ ಜೀವಿತಕ್ಕೆ ಸಂಬಂಧಪಟ್ಟ ಸಂಸ್ಕೃತಿಯನ್ನು ತನ್ನದೆಂದು ಅಧಿಕೃತಗೊಳಿಸಿಕೊಳ್ಳುವುದು. ಹಾಗಂದರೇನು?
 
ಈಗ ನಡೆಯುತ್ತಿರುವ ಸಮಾಜವನ್ನು ಕಾಣಿರಿ. ಅದು ಪೂರ ಪ್ರದರ್ಶಕರದು. ಈ ಹೊತ್ತಿನ ಪರಿಕಲ್ಪನೆಯಲ್ಲಿ ಮಾರುಕಟ್ಟೆಯವರದು. ಆ ಪ್ರದರ್ಶಕ ಬೇರೆಯಾರೂ ಅಲ್ಲ, ಅವನು ಪುರುಷ. ಅವನ ಪೌರುಷವೇ ಆ ಪ್ರದರ್ಶನದ ಶಕ್ತಿ. ಅದು ಅವನ ದೇಹದಲ್ಲಿ ಹೌದು ಮತ್ತು ಅವನ ಪರವಾಗಿ ಸೃಷ್ಟಿಸಿಕೊಂಡ ಜ್ನಾನವೂ ಹೌದು. ಅವನ ದೇಹ ಹೆಣ್ಣಿಗೆ ಹೆದರಿಕೆ. ಅವನ ಜ್ನಾನ ಹೆಣ್ಣಿಗೆ ಬಂಧನ. ಅಥವ ಗಂಡಸು ಸೃಷ್ಟಿಸಿದ ಆವರಣ ಎಂದು ಅದನ್ನು ಕರೆಯಬಹುದು. ಈ ಆವರಣ ಲಕ್ಷ್ಮಣರೇಖೆಗಿಂತಲೂ ಹೆಚ್ಚಿನದು; ದೂರಗಾಮಿ ಮತ್ತು ಕಾಲಾತೀತವಾದುದು. ಈ ಆವರಣವನ್ನು ಮೀರಿ ಹೊರಬರುವುದು ಸುಲಭವಲ್ಲ. ಅದರೊಳಗೆ ಸೋಲನ್ನು ಸಹಜ ಎಂದು ಒಪ್ಪಿಕೊಂಡೇ ಇರಬೇಕಾಗುತ್ತದೆ. ಹೆಣ್ಣು ಈಗ ಅದರೊಳಗೆ ಬಂಧಿಯಾಗಿದ್ದಾಳೆ. ಅಂಥ ಆವರಣವನ್ನು ಮೀರುವ ಶಕ್ತಿಯನ್ನು ಅವಳು ಪಡೆಯಬೇಕಿದೆ. ಸ್ತ್ರೀವಾದ ಆ ನಿಟ್ಟಿನಲ್ಲಿ ಪ್ರಯತ್ನವನ್ನೇ ಮಾಡಿಲ್ಲ. ಅವಳದು ಪಾಲುಕೇಳುವ ಬೇಡಿಕೆಯ ಸ್ವರೂಪದ ಪ್ರತಿಭಟನೆ ಮಾತ್ರ.
 
(ಮುಂದುವರೆಯುವುದು)  
 
 
 
 
 
Copyright © 2011 Neemgrove Media
All Rights Reserved