ಬೆಳ್ಳುಳ್ಳಿ 

 

ಬುದ್ಧಿ-ಅದೃಷ್ಟರಿಗೆ ಸಿಕ್ಕ ಬಡ ಹುಡುಗ

(ಸಂಗ್ರಹ)

 

 
ಒಂದೂರಲ್ಲಿ ಒಬ್ಬ ಬಾರೀ ಬಡವ್ರ ಹುಡುಗ ಇದ್ದ. ಅವನಿಗೆ ಅಪ್ಪ-ಅವ್ವ ಯಾರೂ ಇರಲಿಲ್ಲ. ಎಷ್ಟು ಕಷ್ಟ ಪಟ್ರೂ ಸರಿಯಾಗಿ ಹೊಟ್ಟೆಗ್ ಹಿಟ್ಟಿಲ್ಲದೆ ಮೈಗೆ ಬಟ್ಟೆ ಇಲ್ಲದೆ ಕಷ್ಟ ಪಡ್ತಿದ್ದ.
 
ಒಂದು ದಿನ ಬುಧ್ಧಿ ಮತ್ತೆ ಅದೃಷ್ಟ ಇಬ್ಬರೂ ಹಿಂಗೇ ಜನನೆಲ್ಲಾ ನೋಡ್ಕಂಡು ಬರನಾ ಅಂತ ಊರೆಲ್ಲಾ ಸುತ್ತುತ್ತಾ ಇದ್ರು. ಅವರು ಈ ಬಡ ಹುಡುಗನ್ನ ನೋಡಿದ್ರು. ಪಾಪ ಹುಡುಗ ಸಣ್ಣದು, ಇದಕ್ಕೆ ಏನಾರ ಒಳ್ಳೆದು ಮಾಡಬೇಕು ಅಂತ ಯೋಚಿಸಿದ್ರು. ಬುದ್ಧಿ ಅಣ್ಣ, ಅದೃಷ್ಟ ತಮ್ಮ. ಮೊದಲು ಆ ಹುಡುಗನಿಗೆ ನಾನು ಸ್ವಲ್ಪ ಬುದ್ಧಿ ಕೊಟ್ಟು ಅವನನ್ನು ಜಾಣನನ್ನಾಗಿ ಮಾಡಬೇಕು ಅಂತ ಬುದ್ದಿ ಯೋಚಿಸಿದ.
 
ಅವರಿಬ್ಬರೂ ಈ ಹುಡುಗ ಏನು ಮಾಡ್ತನೆ ನೋಡಣ ಅಂತ ಇವನ ಹಿಂದೆನೇ ಬಂದರು. ಆ ಹುಡುಗ ಸೌದೆ ಕಡಿತಾ ಇದ್ದ. ಬುದ್ಧಿ ಆ ಹುಡುಗನ ಹತ್ರ ಬಂದು ಬಾರಪ್ಪ ಇಲ್ಲಿ ಸ್ವಲ್ಪ ಕೆಲಸ ಇದೆ ಅಂದ. ಆ ಹುಡುಗ ’ನನಗೆ ಕೆಲಸ ಇದೆ ನಾನು ಬರಲ್ಲ ಸ್ವಾಮಿ’ ಅಂದ. ಆ ಹುಡುಗನ್ನ ಒತ್ತಾಯ ಮಾಡಿ ಬುದ್ಧಿ ಅವನನ್ನು ಕರೆದುಕೊಂಡು ಬಂದು ಒಂದು ಬಂಗಾರದ ಸರ ಕೊಟ್ಟ. ’ನೋಡಪ್ಪಾ ಈ ಸರಾನ ಇಟ್ಟುಕೋ. ಇವತ್ತು ಇದನ್ನು ಆರು ಸಾವಿರಕ್ಕೆ ಮಾರಿ ಎರಡು ಸಾವಿರದಲ್ಲಿ ಮನೆ ಕಟ್ಟಿಕೋ, ಎರಡು ಸಾವಿರದಲ್ಲಿ ಮನೆಗೆ ಸಾಮಾನು ತೆಗೆದುಕೋ, ಇನ್ನೆರೆಡು ಸಾವಿರಕ್ಕೆ ಮದುವೆ ಮಾಡಿಕೋ. ನಾಳೆಯಿಂದ ಸೌದೆ ಕಡಿಯಕೆ ಬರಬೇಡಪ್ಪಾ’ ಅಂದ.
 
ಆ ಹುಡುಗ ಬುಧ್ಧಿ ಕೊಟ್ಟ ಬಂಗಾರದ ಸರ ಹಿಡಿದಿಕೊಂಡು ಅದನ್ನು ಮಾರಕೆ ಹೋಗ್ತಾ ಇದ್ದ. ದಾರೀಲಿ ಅವನಿಗೆ ತುಂಬಾ ಬಾಯಾರಿಕೆ ಆಯ್ತು. ಅಲ್ಲೇ ಒಂದು ಬಾವಿ ಇತ್ತು. ಆ ಬಂಗಾರದ ಸರನ ಬಾವಿಕಟ್ಟೆ ಮೇಲಿಟ್ಟು ನೀರು ಕುಡಿದು ಬರಕೆ ಕೆಳಗೆ ಇಳಿದ. ಅಷ್ಟರಲ್ಲಿ ಆಕಾಶದಲ್ಲಿ ಹಾರ್ತಿದ್ದ ಒಂದು ಗರುಡ ಮಿರಮಿರ ಅಂತಿದ್ದ ಬಂಗಾರದ ಸರವನ್ನು ನೋಡಿ ಅದನ್ನು ಹಾವು ಅಂತ ತಿಳಿದುಕೊಂಡು ಎತ್ತಿಕೊಂಡು ಹೋಗಿಬಿಡ್ತು. ಈ ಹುಡುಗ ನೀರು ಕುಡಿದು ಬಂದು ನೋಡ್ತನೇ! ಸರ ಇಲ್ಲ. ಅವನು ಅಳುತ್ತಾ ಅವರಿವರ ಹತ್ರ ಬೇಡಿ ಊಟ ಮಾಡಿ ಮಲಗಿಕೊಂಡ.
 
ಮಾರನೆ ದಿನ ಬುಧ್ಧಿ ಮತ್ತೆ ಅದೃಷ್ಟ ಇಬ್ಬರೂ ಮತ್ತೆ ಆ ಹುಡುಗ ಹೇಗಾಗಿದ್ದಾನೆ ಅಂತ ನೋಡಕೆ ಬಂದ್ರು. ಆ ಹುಡುಗ ಮತ್ತೆ ಸೌದೆ ಕಡಿತಾ ಇದ್ದ. ಅವನು ಬುಧ್ಧಿಯನ್ನು ನೋಡಿ ಬೇಜಾರು ಮಾಡಿಕೊಂಡ. ಹಿಂದಿನ ಇಡೀ ದಿನದ ಕಥೆ ಹೇಳಿದ. ಬುಧ್ಧಿಗೆ ಬೇಜಾರಾಯ್ತು. ಆ ಹುಡುಗನಿಗೆ ಐದು ಬಂಗಾರದ ವರಹ (ನಾಣ್ಯ) ಕೊಟ್ಟು ಅದನ್ನು ಮಾರಿಕೋ ಅಂತ ಹೇಳಿದ.
 
ಆ ಹುಡುಗ ಬುಧ್ಧಿ ಕೊಟ್ಟ ಬಂಗಾರದ ನಾಣ್ಯಗಳನ್ನ ಜೇಬಲ್ಲಿ ಹಾಕಿಕೊಂಡು ಮಾರಕೆ ಹೊರಟ. ಮತ್ತೆ ಅವನಿಗೆ ತುಂಬಾ ಬಾಯಾರಿಕೆ ಆಯ್ತು. ಈ ಸಲ ಬಂಗಾರದ ನಾಣ್ಯಗಳನ್ನ ಜೇಬಿಂದ ತೆಗೆಯೋದ್ ಬೇಡ ಅಂತ ಹಂಗೇ ಬಾವಿಗಿಳಿದು ಬಗ್ಗಿ ನೀರು ಕುಡಿದ. ಅವನು ಬಗ್ಗಿದಾಗ ಜೇಬಿನಲ್ಲಿದ್ದ ನಾಣ್ಯಗಳೆಲ್ಲಾ ನೀರಿಗೆ ಬಿದ್ದುಹೋದ್ವು. ಹುಡುಗ ಮತ್ತೆ ಅಳುತ್ತಾ ತನಗೆ ಆಸೆ ತೋರ್ಸಿದ್ದಕ್ಕೆ ಬುಧ್ಧಿನ ಬೈದುಕೋತಾ ಊರಕಡೆ ಬಂದು ಅವರಿವರ ಹತ್ತಿರ ಬೇಡಿ ಊಟ ಮಾಡಿ ಮಲಗಿದ.
 
ಮರುದಿನ ಮತ್ತೆ ಬುಧ್ಧಿ, ಅದೃಷ್ಟ ಆ ಹುಡುಗ ಏನ್ಮಾಡ್ತಿದನೆ ಅಂತ ನೋಡಕೆ ಬಂದ್ರು. ಆ ಹುಡುಗ ಬುಧ್ಧಿನ ಬೈದು ಬಿಟ್ಟ. ನಿಮ್ಮ ಕೆಲಸ ನೀವು ನೋಡ್ಕಳಿ ಸ್ವಾಮಿ, ನನ್ನ ಬಿಟ್ಬಿಡಿ ಅಂತಂದ. ಆಗ ಮತ್ತೆ ಬುಧ್ಧಿ ಆ ಹುಡುಗನಿಗೆ ಒಂದು ತಪ್ಪಲೆಯ ತುಂಬಾ ಬೆಳ್ಳಿ ಹೊರಿಸಿ ಕಳಿಸಿದ. ಈ ಸಲ ಆ ಬಾವಿಯಿರೋ ದಾರೀಲಿ ಹೋಗಬೇಡ. ಬೇರೆ ದಾರಿಲಿ ಹೋಗು ಅಂತ ಕಳಿಸಿಕೊಟ್ಟ.
 
ಆ ಹುಡುಗ ತಲೆ ಮೇಲೆ ಭಾರವಾಗಿದ್ದ ಆ ತಪ್ಪಲೇನ ಹೊತ್ತುಕೊಂಡು ಬರ್ತಿದ್ದ. ಮೊದಲೇ ಬಡ ಹುಡುಗ, ಮೈಲಿ ಶಕ್ತಿ ಕಡಿಮೆ ಇತ್ತು. ಇನ್ನೇನು ತನ್ನ ಗುಡಿಸಲಿನ ಹತ್ರ ಬರ್ತಿದ್ದವನು ಬಾಯಾರಿ, ದಣಿವಾಗಿ ತಲೆತಿರುಗಿ ಬಿದ್ದುಬಿಟ್ಟ. ಅವನ ಬೆಳ್ಳಿ ತಪ್ಪಲೆ ಅವನ ಪಕ್ಕ ಬಿತ್ತು. ಅದನ್ನು ನೋಡಿದ ಅವನ ಪಕ್ಕದ ಮನೆಯ ಮುದುಕಿ ಮೆತ್ತಗೆ ಬಂದು ಆ ತಪ್ಪಲೆಯನ್ನು ತಗೊಂಡು ತನ್ನ ಮನೆಯಲ್ಲಿಟ್ಟುಕೊಂಡು ಬಿಟ್ಟಳು.
 
ಕೊನೇ ಸಲ ಹುಡುಗನನ್ನು ನೋಡಿ ಬರೋಣ ಅಂತ ಮತ್ತೆ ಬುಧ್ಧಿ, ಅದೃಷ್ಟ ಅಲ್ಲಿಗೆ ಬಂದ್ರು. ಆ ಹುಡುಗ ಒಂದು ಸಣ್ಣ ಸೌದೆ ಕಟ್ಟು ಇಟ್ಟುಕೊಂಡು ಮಾರಾಟಕ್ಕೆ ಕೂತಿದ್ದ. ಅದನ್ನು ನೋಡಿ ಬುಧ್ಧಿಗೆ ಭಾಳಾನೇ ಬೇಜಾರಾಗಿ ಬಿಟ್ಟಿತು. ಆಗ ಅವನ ತಮ್ಮ ಅದೃಷ್ಟ ’ಸುಮ್ನಿರಣ್ಣಾ ನೀನು ಬೇಜಾರು ಮಾಡಿಕೋ ಬೇಡ...ನೀನು ಮಾಡಬೋದನ್ನೆಲ್ಲಾ ಮಾಡಿದಿಯಾ...ಈ ಸಲ ನನಗೆ ಬಿಡು’ ಅಂದ.
 
 
ಸೌದೆ ಕಟ್ಟೂ ಮಾರುತ್ತಿದ್ದ ಹುಡುಗನ ಹತ್ತಿರ ಅದೃಷ್ಟ ಬಂದ. ’ಎಷ್ಟಪ್ಪಾ ನಿನ್ನ ಸೌದೆ ಕಟ್ಟಿಗೆ?’ ಅಂದ. ’ನಾಲ್ಕು ಕಾಸು ಸ್ವಾಮಿ’ ಅಂದ ಹುಡುಗ. ಅದೃಷ್ಟ ಅವನಿಗೆ ನಾಲ್ಕು ಕಾಸು ಕೊಟ್ಟು ’ಒಂದು ಕಾಸಲ್ಲಿ ಅಕ್ಕಿ, ಇನ್ನೊಂದು ಕಾಸಲ್ಲಿ ಉಪ್ಪು, ಮೂರನೇ ಕಾಸಲ್ಲಿ ಮೆಣಸಿನಕಾಯಿ ತಗೊಳಪ್ಪಾ’ ಅಂದ. ಹುಡುಗ ಅದೃಷ್ಟ ಹೇಳಿದಂಗೆ ಮೂರು ಕಾಸಿಗೆ ಸಾಮಾನು ತಗೊಂಡು ಒಂದು ಕಾಸು ಉಳಿಸಿಕೊಂಡು ಮನೆ ಹತ್ರ ಬರ್ತಿದ್ದ. ಅಲ್ಲಿ ಒಬ್ಬಳು ಹೆಂಗಸು ಒಂದು ಮೀನು ಮಾರ್ತಾ ಇದ್ದಳು. ಆ ಹುಡುಗನಿಗೆ ಮೀನು ತಿನ್ನಬೇಕಂತ ಆಸೆ ಆಯ್ತು. ಒಂದು ಕಾಸುಕೊಟ್ಟು ಮೀನು ತಗೊಂಡ. ಗುಡಿಸಲಿಗೆ ಬಂದು ಮೀನು ತೊಳೆದು ಅದನ್ನು ಕುಯ್ದ. ಏನಂತಿರಿ! ಮೀನಿನೊಳಗೆ ಐದು ಬಂಗಾರದ ನಾಣ್ಯ! ಆ ಹುಡುಗನಿಗೆ ತುಂಬಾ ಸಂತೋಷವಾಗಿ ಆ ನಾಣ್ಯಗಳನ್ನು ಎತ್ತಿಟ್ಟುಕೊಂಡ.
 

ಆಮೇಲೆ ಅವನು ಮೀನು ಕುಯ್ದು ಒಲೆ ಮೇಲೆ ಇಡಲು ನೋಡಿದ್ರೆ ಸೌದೇನೇ ಇರಲಿಲ್ಲ. ಆ ಹುಡುಗನ ಗುಡಿಸ್ಲ ಮುಂದೆ ಒಂದು ಹಳೇ ಬೇವಿನ ಮರ ಇತ್ತು. ಅದರಲ್ಲೇ ಒಂದೆರೆಡು ಒಣ ಪುರ್ಲೆ ಮುರ್ಕೊಳಣ ಅಂತ ಹುಡುಗ ಬೇವಿನ ಮರ ಹತ್ತಿದ. ಆ ಮರದ ಮೇಲೆ ಒಂದು ಗರುಡ ಗೂಡು ಕಟ್ಟಿಕೊಂಡಿತ್ತು. ಅದರ ಗೂಡಲ್ಲಿ ಎನೋ ಮಿರಮಿರ ಮಿಂಚ್ತಾ ಇತ್ತು. ಇವನು ಹೋಗಿ ನೋಡ್ತನೇ...ಬುಧ್ಧಿ ಕೊಟ್ಟಿದ್ದ ಬಂಗಾರದ ಸರ!! ಹುಡುಗನಿಗೆ ಸಂತೋಷ ತಡ್ಕಳಕಾಗಲಿಲ್ಲ. ಲೇ ಸಿಕ್ಕಿದೆಯಾ ಕಳ್ಳಮುಂಡೇ!! ಅಂತ ಕೂಗಿದ.
 
ಅವನು ಅಷ್ಟು ಜೋರಾಗಿ ಕೂಗಿದ್ದು ಅವನ ಪಕ್ಕದ ಮನೆಲಿದ್ದ ಆ ಮುದುಕಿಗೆ ಕೇಳಿಸ್ತು. ನಾನು ಇವನ ಬೆಳ್ಳಿ ತಪ್ಪಲೆಯನ್ನು ಕದ್ದಿರುವುದು ಇವನಿಗೆ ಗೊತ್ತಾಗಿ ಬಿಟ್ಟಿದೆಯೇನೋ ಅಂತ ಆ ಮುದುಕಿ ಹೆದರಿಕೊಂಡು ’ತಡಿಯಪ್ಪಾ ಕೊಟ್ಟುಬಿಡ್ತೀನಿ’ ಅಂತ ಆ ತಪ್ಪಲೇನ ಅವನ ಮುಂದಿಟ್ಳು. ’ಎಣಿಸಿಕೊಳಪ್ಪಾ ಒಂದುನೂ ಎತ್ತಿಕೊಂಡಿಲ್ಲಾ’ ಅಂತ ಅವನಿಗೆ ಎಲ್ಲಾ ಕೊಟ್ಟು ತಪ್ಪಾಯ್ತು ಅಂದ್ಲು. ಆ ಹುಡುಗ ಅದೆಲ್ಲನೂ ತೆಗೆದು ಮನೆಲಿಟ್ಟುಕೊಂಡ. ಮರುದಿನದಿಂದ್ಲೇ ವ್ಯಾಪಾರ ಶುರು ಮಾಡಿದ. ಇನ್ನೊಂದಷ್ಟು ಬಡ ಹುಡುಗರ್ನ ಕೆಲಸಕ್ಕಿಟ್ಟುಕೊಂಡು ಒಳ್ಳೆ ವ್ಯಾಪಾರ ಮಾಡಿ ಒಳ್ಳೆ ಮನುಷ ಆದ. ಬುಧ್ಧಿ, ಅದೃಷ್ಟ ಅವನನ್ನು ಆಗಾಗ ನೋಡಿಕೊಂಡು ಹೋಗ್ತಿದ್ರು. ’ನನಗಿಂತಾ ನೀನೇ ಮೇಲು ಕಣಪ್ಪಾ’ ಅಂತ ಬುಧ್ಧಿ ತಮ್ಮನ ಬೆನ್ ತಟ್ಟಿದ.
 
  
 
 
 
 
 
 
Copyright © 2011 Neemgrove Media
All Rights Reserved