ಸಾಂಸ್ಕೃತಿಕ ಯಜಮಾನ್ಯ ಮತ್ತು ಪ್ರತಿ ಸಂಸ್ಕೃತಿ ನಿರ್ಮಾಣ ಪ್ರಯತ್ನಗಳ ಕುರಿತು...(ಭಾಗ-೧)

ಡಾ. ಬಂಜಗೆರೆ ಜಯಪ್ರಕಾಶ
 
(ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ, ಬೆಂಗಳೂರು ಇವರು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾಡಿದ ಭಾಷಣದ ಬರಹ ರೂಪ)
 
ಸಾಂಸ್ಕೃತಿಕ ಯಜಮಾನ್ಯದ ವಿರುದ್ಧ ಪ್ರತಿ ಯಜಮಾನ್ಯವನ್ನು ನಿರ್ಮಿಸಲು ಕರ್ನಾಟಕದ ಚರಿತ್ರೆಯುಲ್ಲಿ ನಡೆದ ಹೋರಾಟಗಳ ವಿವರಗಳು ಸುಪ್ರಸಿದ್ಧ! ಕರ್ನಾಟಕ ಅಥವಾ ಭಾರತದ ಸಂದರ್ಭದಲ್ಲಿ ಆಳುವ ಸಂಸ್ಕೃತಿ ಮತ್ತು ಅದಕ್ಕೆ ಪ್ರತಿಯಾಗಿ ಪ್ರತಿ ಸಂಸ್ಕೃತಿಯುನ್ನು ನಿರ್ಮಾಣ ಮಾಡೋದಕ್ಕೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ನಡೆದ ಸಾಂಸ್ಕೃತಿಕ ಪ್ರತಿಭಟನೆಗಳ ಸುದೀರ್ಘ ಹಾದಿ ಇದೆ.
 
ಕನ್ನಡದ ಆದಿಕವಿ ಪಂಪ ಕಾವ್ಯದಲ್ಲಿ,'ಮನುಷ್ಯ ಕುಲಂ ತಾನೊಂದೆ ವಲಂ' ಎಂದು ಸಾರಿದ ಸನ್ನಿವೇಶದಿಂದ ಹಿಡಿದು, ರಾಮಾನುಜಾಚಾರ್ಯರು ತನ್ನ ವೈಷ್ಣವ ಪಂಥದ ಪ್ರಚಾರದ ಅಂಗವಾಗಿ ಹನ್ನೊಂದನೇ ಶತಮಾನದಲ್ಲಿ ಅಸ್ಪೃಶ್ಯರನ್ನು `ತಿರುಕುಲ'ದವರು ಎಂದು ಕರೆದು ಅವಮಾನ ತೊಡೆಯಲು ಯತ್ನಿಸಿದ್ದೂ ಸೇರಿ, ಹನ್ನೆರಡನೆಯು ಶತಮಾನದಲ್ಲಿ `ಕಾಯುಕವೇ ಕೈಲಾಸ, ದೇಹವೇ ದೇಗುಲ' ಎಂದು ಕೆಳಜಾತಿಗಳ ಕುಶಲಕರ್ಮಿಗಳು ಶರಣ ಚಳುವಳಿಯುನ್ನು ನಡೆಸಿದ್ದು, ಕನಕದಾಸರಂತಹ ಹರಿದಾಸರು ಹದಿನಾಲ್ಕು ಹದಿನೈದನೇ ಶತಮಾನದ `ನಿಮ್ಮ ಕುಲದ ನೆಲೆಯುನೇನಾದರೂ ಬಲ್ಲಿರಾ' ಎಂಬಂತಹ ಜೀವಪರ ನಿಲುವನ್ನು ಸಾರಿದ್ದು, ಹದಿನೈದು ಹದಿನಾರನೇ ಶತಮಾನಗಳಲ್ಲಿ ಸಂತರು, ಅನುಭಾವಿಗಳು ಮಲೆ ಮಾದಪ್ಪ, ಮಂಟೆಸ್ವಾಮಿ, ತಿಪ್ಪೇಸ್ವಾಮಿಯುಂತಹ ಅನೇಕರು ಹೂಡಿದ ಸಾಂಸ್ಕೃತಿಕ ಬಂಡಾಯುಗಳು, ಶಿಷುನಾಳ ಶರೀಫ, ನಾಗಲಿಂಗ ಯೋಗಿ, ಕಡಕೊಳ ಮಡಿವಾಳಪ್ಪ ತತ್ವಪದಕಾರ ಅನುಭಾವಿಗಳು ಹಾಡಿದ್ದು ಸೇರಿದಂತೆ, ತೀರಾ ಈಚಿನ ವರ್ತಮಾನದ ದಲಿತ-ಬಂಡಾಯ ಸಾಹಿತ್ಯ ಪಂಥಗಳವರೆಗೆ ಈ ಪ್ರಯತ್ನ ಮುಂದುವರೆಯುತ್ತಲೇ ಇದೆ.
 
ನಮ್ಮ ಪ್ರಶ್ನೆ ಮತ್ತು ಗೊಂದಲಗಳು ಇರೋದು ನಾವು ಮತ್ತೆ ಆ ವಿಷಯಗಳನ್ನು, ಇತಿಹಾಸದ ಮಾಹಿತಿಗಳನ್ನ ಚರ್ಚೆ ಮಾಡುವುದರಲ್ಲಲ್ಲ. ಕಡೇ ಪಕ್ಷ ಈ ರೀತಿಯಾಗಿರುವ ಜನಪರ ಹೋರಾಟಗಳ ಮುಂಚೂಣಿ ವಿದ್ವಾಂಸರು ಮತ್ತು ಮುಖ್ಯ ಹೋರಾಟಗಾರರು ಸೇರಿರುವ ಸಂದರ್ಭದಲ್ಲಿ ನಾವು ಈ ಸಾಂಸ್ಕೃತಿಕ ರಾಜಕೀಯದ ಚರ್ಚೆಯನ್ನು, ಪ್ರತಿ ಸಂಸ್ಕೃತಿ ನಿರ್ಮಾಣ ಪ್ರಯತ್ನದ ಚರ್ಚೆಯನ್ನು ವರ್ತಮಾನಕ್ಕೆ ಸಂಬಂಧಿಸಿದಂತೆ ಇನ್ನೊಂದು ಹಂತಕ್ಕೆ ಒಯ್ಯುವುದಕ್ಕೆ ಸಾಧ್ಯ ಇದೆಯೆ? ಕಡೆಯ ಪಕ್ಷ ನಮ್ಮ ಗೊಂದಲಗಳನ್ನಾದರೂ ಸ್ಪಷ್ಟಪಡಿಸಿಕೊಳ್ಳೋದಕ್ಕೆ ಸಾಧ್ಯ ಇದೆಯೆ? ಅನ್ನೋದೇ ಚರ್ಚೆಯ ಮುಖ್ಯವಾಗಿರುವ ಅಂಶವಾಗಿದ್ದರೆ ಒಳ್ಳೆಯದು ಅಂತ ನನ್ನ ಅನಿಸಿಕೆ.
 
ಸಧ್ಯದ ಪರಿಸ್ಥಿತಿಯಲ್ಲಿ ಯಜಮಾನ ಸಂಸ್ಕೃತಿಯ ವ್ಯಾಖ್ಯಾನ ಕೂಡ ಬಹಳ ಗೊಂದಲಕಾರಿಯಾದುದು. ಆಳುವ ಸಂಸ್ಕೃತಿ ಅಂದಾಗ ಶರಣ ಚಳವಳಿಯ ಸನ್ನಿವೇಶದಲ್ಲಿ ನಿರ್ದಿಷ್ಟವಾದ ಒಂದು ಆಕೃತಿಯಾದರೂ ಇತ್ತು. ದಾಸ ಸಂಸ್ಕೃತಿಯ ಸಂದರ್ಭದಲ್ಲೂ ಹೀಗೆಯೇ. ಅವರೆಲ್ಲರ ಗುರಿ ಮತ್ತು ಅವರ ಎದುರಾಳಿ ಬಹಳ ನಿಶ್ಚಿತವಾಗಿದ್ದ ಸನ್ನಿವೇಶಗಳವು. ಆನಂತರದಲ್ಲಿ ಈ ಪ್ರತಿ ಸಂಸ್ಕೃತಿ ಪ್ರಯತ್ನ ನಡೆಸಿದ ಶಕ್ತಿಗಳೇ ಸ್ಥಾಪಿತ ಜಾತಿ ಸಂಸ್ಕೃತಿಗಳಾಗಿ ಬೆಳೆದಂತಹ ಸಂದರ್ಭದಲ್ಲಿ ಅನುಭಾವಿಗಳು ಮತ್ತು ಸಂತರಿಗೂ ಕೂಡ ಅವರು ವಿರೋಧಿಸಬೇಕಾದಂತಹ ಶಕ್ತಿಗಳು ಯಾವುವು ಎನ್ನುವುದರ ಬಗ್ಗೆ ಒಂದು ಸ್ಪಷ್ಟವಾದ ಆಲೋಚನೆಗೆ ಅವಕಾಶವಿತ್ತು.
 
ಈಗ ಈ ಆಧುನಿಕ ಕಾಲಘಟ್ಟದಲ್ಲಿ, ನಾವೀಗ ಮಾತನಾಡುತ್ತಿರುವ ಸಂದರ್ಭದಲ್ಲಿ ಯಜಮಾನ ಸಂಸ್ಕೃತಿ ಎನ್ನುವುದು ಯಾವುದು? ಮತ್ತು ಅದನ್ನು ಎದುರಿಸುವುದಕ್ಕೆ ನಾವು ಯಾವ ಪರಿಕರಗಳನ್ನು ಬಳಸಬಹುದು? ಪ್ರತಿಸಂಸ್ಕೃತಿ ಎನ್ನುವುದು ಅಥವಾ ಪ್ರತಿ ಯಜಮಾನ್ಯ ಸಂಸ್ಕೃತಿ ಎನ್ನುವುದು-ಇವು ಕೂಡ ತುಂಬ ಗೊಂದಲಕಾರಿ ಪಾರಿಭಾಷಿಕ ಶಬ್ದಗಳಲ್ಲವೇ? ಯಜಮಾನಿಕೆಯ ಬದಲಾಗಿ ಪ್ರತಿಯಜಮಾನಿಕೆಯನ್ನು ನಿರ್ಮಿಸುತ್ತಾ ಹೋದರೆ ಮತ್ತೆ ಅದು ಅದೇ ಥೀಸಿಸ್-ಆಂಟಿಥೀಸಿಸ್ನ ಪ್ರಕ್ರಿಯೆಯೊಳಗೆ ಸುತ್ತಾಡುತ್ತಾ ಇರಬೇಕಾಗಿ ಬರುವುದಿಲ್ಲವೇ? ಯಜಮಾನ್ಯ ಅಥವಾ ಪ್ರತಿ ಯಜಮಾನ್ಯ ಎರಡನ್ನೂ ನಿರಾಕರಿಸುವ ಸಂಸ್ಕೃತಿಯೊಂದನ್ನು ನಾವು ಬಯಸುವುದಾದರೆ ಅದರ ರೂಪರೇಷೆಗಳೇನು? ಅನ್ನುವುದರ ಬಗ್ಗೆ ಕೂಡ ಚರ್ಚಿಸಿ ಸ್ಪಷ್ಟಪಡಿಸಿಕೊಳ್ಳಬೇಕಾದ ಅಗತ್ಯವಿದೆಯೆಂದು ಕಾಣುತ್ತದೆ.
 
 
ನಾವು ರೂಪಕವಾಗಿ ಹೇಳಬಹುದಾದರೆ ಈ ಇಂಗ್ಲಿಷ್ ಮತ್ತು ಸಂಸ್ಕೃತ, ಇವುಗಳಲ್ಲಿ ಯಾವುದು ಯಾವಾಗ ಪ್ರಧಾನ ಆಗುತ್ತದೆ ಎಂದು ಹೇಳುವುದು ಕಷ್ಟ, ಆದ್ದರಿಂದ ನನಗೆ ಇವೆರಡೂ ಕೂಡ ಯಜಮಾನ್ಯ ಸಂಸ್ಕೃತಿ, ಆಳುವ ಸಂಸ್ಕೃತಿಗಳಾಗಿ ಕಾಣುತ್ತಿವೆ. ಅವೆರಡೂ ಒಟ್ಟೊಟ್ಟಿಗೇ ನಮ್ಮನ್ನ ಆಳುತ್ತಾ ಇರುವಂತ ಸಂಸ್ಕೃತಿಗಳು. ಅವೆರಡರ ಸಹಯೋಗವಿದೆಯೋ ಅಥವಾ ಅವೆರಡೂ ಒಂದಕ್ಕೊಂದು ಪೂರಕವಾಗಿರುವ ಪಾತ್ರಗಳನ್ನ ನಿರ್ವಹಿಸುತ್ತಿವೆಯೋ, ನಾವದನ್ನ ಮತ್ತಷ್ಟು ವಿಶದವಾಗಿ ಚರ್ಚೆ ಮಾಡಬೇಕು ಎಂದು ನನಗೆ ಅನ್ನಿಸುತ್ತಿದೆ.
 
 
ಎರಡು-ಮೂರು ದಶಕಗಳ ಹಿಂದೆ ಲೋಹಿಯಾ ಹೇಳಿದ ಮಾತು, ಈ ಭಾರತದಲ್ಲಿ ಹಣ, ಇಂಗ್ಲಿಷ್ ಮತ್ತು ಮೇಲ್ಜಾತಿ ಈ ಮೂರರಲ್ಲಿ ಯಾವುದಾದರೂ ಎರಡು ಇದ್ದರೂ ಸಾಕು ಗೆಲ್ಲಬಹುದು ಅಂತ. ಈ ವಿಷಯದಲ್ಲಿ ಅವತ್ತಿಗೂ, ಇವತ್ತಿಗೂ ಏನು ವ್ಯತ್ಯಾಸ ಆಗಿದೆ? ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದೆ. ಈ ಮೂರರಲ್ಲಿ ಯಾವುದಾದರೂ ಎರಡು ಇದ್ದರೆ ಮಾತ್ರ ಗೆಲ್ಲುವಂತಹ ನಿಚ್ಚಳ ಸಾಧ್ಯತೆಗಳನ್ನು ಈ ಆಳುವ ಸಂಸ್ಕೃತಿ ಇಲ್ಲಿ ನಿರ್ಮಿಸಿಟ್ಟಿದೆ. ಅಲ್ಲದೆ ಹೊಸ ಸಾಧ್ಯತೆಯೊಂದನ್ನು ಕೂಡ ಕೊಟ್ಟಿದೆ. ಲೋಹಿಯಾ ಅವರಿಗೆ ಆ ಅಂಶ ಹೊಳೆದಿರಲಿಲ್ಲ ಎಂದು ಕಾಣುತ್ತದೆ. ನಮ್ಮ ದೇಶದಲ್ಲಿ ಈಗ ಬಣ್ಣ ಇರುವ ಹೆಣ್ಣಾಗಿದ್ದರೆ ಕೂಡ ಬಹಳ ಸುಲಭವಾಗಿ ಯಜಮಾನ ಸಂಸ್ಕೃತಿಯ ಪರಿಧಿಯೊಳಗೆ ಸೇರಬಹುದು. ಜಾಗತೀಕರಣದ ನಂತರದಲ್ಲಿ ಉಂಟಾಗಿರುವ ವಿಚಿತ್ರವಾಗಿರುವ ಸನ್ನಿವೇಶ ಅದು.
 
ಕಂಪ್ಯೂಟರ್ ಮತ್ತು ಜ್ಯೋತಿಷ್ಯಗಳು ಸಲೀಸಾಗಿ ಒಟ್ಟಿಗೇ ಹೋಗುತ್ತಾ ಇರುವುದನ್ನು ನಾವು ಕಾಣುತ್ತಿದ್ದೇವೆ. ಸಂಸ್ಕೃತ ಮತ್ತು ಇಂಗ್ಲಿಷ್ಗಳು ಸಹ ಅಸ್ತಿತ್ವವನ್ನು ಸಾಧಿಸಿರುವಷ್ಟು ಸುಲಭವಾಗಿ ಕನ್ನಡಕ್ಕೆ ಸಾಧ್ಯವಾಗದೇ ಹೋಗುತ್ತಿರುವುದು ಬಹಳ ದೊಡ್ಡ ಸಮಸ್ಯಾತ್ಮಕ ಸನ್ನಿವೇಶ. ಕಂದಾಚಾರ ಪುನರುತ್ಥಾನ ಅಂತಲೋ ಅಥವಾ ನವಕಂದಾಚಾರ ಅಂತಲೋ ಇದನ್ನು ನಾವು ಕರೆಯುಬಹುದೆಂದು ಕಾಣುತ್ತದೆ. ನಾವು ಆಧುನಿಕಗೊಂಡಷ್ಟೂ ಕಂದಾಚಾರಗಳನ್ನು ನಮ್ಮ ಸಮಾಜದಲ್ಲಿ ಮತ್ತೆ ಮತ್ತೆ ಪುನರುಜ್ಜೀವನಗೊಳಿಸುತ್ತಾ ಇದ್ದೇವೆ. ಕ್ಲೀಷೆಯಾದ ಮಾತುಗಳಲ್ಲಿ ಹೇಳಬಹುದಾದರೆ, ಈ ಕಂಪ್ಯೂಟರ್ ಮತ್ತು ಜ್ಯೋತಿಷ್ಯ ಎಷ್ಟು ಚೆನ್ನಾಗಿ ಜೋಡಿಯಾಗಿವೆ ಅಂತ ಹೇಳಿದರೆ, ಡಿಟಿಪಿ ಮಾಡೋದು, ಇಂಟರ್ನೆಟ್ ಬ್ರೌಸ್ ಮಾಡೋದು ಬಿಟ್ಟರೆ ಸಾಮಾನ್ಯರಿಗೆ ಅತ್ಯಂತ ಹೆಚ್ಚು ಬಳಕೆಯಾಗ್ತಿರೋದು ಜ್ಯೋತಿಷ್ಯ ಕೇಳೋಕೆ. ಅವರು ಬರೀ ಜ್ಯೋತಿಷಿಗಳಲ್ಲದೆ ಕಂಪ್ಯೂಟರ್ ತಂತ್ರಜ್ಞಾನ ಬಳಸುವ ಜ್ಯೋತಿಷಿಗಳಾದ್ದರಿಂದ ಜನರ ಕಣ್ಣಲ್ಲಿ ಕವಡೆ ಹಾಕಿ ಶಾಸ್ತ್ರ ಹೇಳುವವರಿಗಿಂತ ಹೆಚ್ಚು ವಿಶ್ವಾಸಾರ್ಹತೆಯನ್ನು ಪಡೆದುಕೊಂಡಿದ್ದಾರೆ.
 
ಇದನ್ನು ಇನ್ನೊಂದು ರೂಪದಲ್ಲಿ ಹೇಳಬೇಕೆಂದರೆ ಫ್ಲೈಓವರ್ ಮತ್ತು ವಾಸ್ತುಶಾಸ್ತ್ರ. ಬಹುರಾಷ್ಟ್ರೀಯ ನಿರ್ಮಾಣ ಕಂಪನಿಗಳು ನಿರ್ಮಿಸುತ್ತಿರುವ ಅತ್ಯಾಧುನಿಕ ಫ್ಲೈಓವರ್ಗಳು, ಅದರ ಜೊತೆಜೊತೆಗೇ ಹೆಚ್ಚಳಗೊಳ್ಳುತ್ತಿರುವ ವಾಸ್ತುಶಾಸ್ತ್ರದ ಗೀಳು. ಅದನ್ನ ಇನ್ನೂ ವಿಸ್ತರಿಸಿ ಆಧುನಿಕ ತಂತ್ರಜ್ಞಾನದ ಬಗ್ಗೆ ಹೇಳುವುದಾದರೆ 'ಬ್ಲೂಟೂತ್' ಮತ್ತು ಜನಿವಾರ. ಒಂದರಲ್ಲಿ ಯಾವುದೇ ಮಾಹಿತಿಯನ್ನು ವರ್ಗಾಯಿಸಬೇಕೆಂದರೂ ಯಾವುದೇ ತಂತುಗಳ ಅಗತ್ಯವಿಲ್ಲವಾದರೆ ಅದನ್ನು ನಿರ್ವಹಿಸುತ್ತಿರುವ ಇಂಜಿನಿಯರ್ಗಳು ಜನಿವಾರದ ದಾರವನ್ನು ಇನ್ನಿಲ್ಲದಷ್ಟು ಆಧರಿಸಿಕೊಳ್ಳತೊಡಗಿದ್ದಾರೆ. ಇವೆಲ್ಲ ಒಟ್ಟೊಟ್ಟಿಗೆ ಮುಂದುವರೆಯುತ್ತಿವೆ ಅನ್ನೋದೆ ನಮ್ಮ ಆಳುವ ವರ್ಗದ ಸಂಸ್ಕೃತಿ ಯಾವುದು ಅನ್ನೋ ಗೊಂದಲಕ್ಕೆ ಕಾರಣವಾಗಿದೆ.

ಇಲ್ಲಿ ಯಜಮಾನ ಸಂಸ್ಕೃತಿ ಅನ್ನುವುದು, ಆಳುವ ಸಂಸ್ಕೃತಿ ಅನ್ನುವುದು ಯಾವುದು ಎನ್ನುವ ಪ್ರಶ್ನೆಯನ್ನು ಮತ್ತಷ್ಟು ನಾವು ವಿಶ್ಲೇಷಿಸಬೇಕಿದೆ? ಸಧ್ಯಕ್ಕೆ ಗೊತ್ತಾಗುವ ರೀತಿಯಲ್ಲಿ ಇಬ್ಬರು ಯಜಮಾನರಿದ್ದಾರೆ ಕಾಣುತ್ತಿದ್ದಾರೆ ನಮಗೆ. ಒಬ್ಬ ಜಾಗತಿಕ ಯಜಮಾನ. ಅವನ ರೀತಿ, ರಿವಾಜುಗಳೇ ಬೇರೆ ಇವೆ. ಇನ್ನೊಬ್ಬ ನಿರ್ವಾಹಕ ಯಜಮಾನ ಇದ್ದಾನೆ. ಭಾರತೀಯ ನಿರ್ವಾಹಕ ಮ್ಯಾನ್ಯೇಜರ್. ಅವನ ಸಂಸ್ಕೃತಿ ಒಂದಿದೆ. ಅದೂ ಕೂಡ ಅಷ್ಟೇ ಪ್ರಮಾಣದಲ್ಲಿ ಮಾನ್ಯತೆಯನ್ನು ಪಡೆದುಕೊಂಡಿದೆ. ಒಂದು ನೆಲೆಯಲ್ಲಿ ನೋಡಿದರೆ, ಆ ಎರಡೂ ಸಂಸ್ಕೃತಿಗಳಿಗೆ ತದ್ವಿರೋಧಿಯಾಗಿರುವಂತಹ ಚಹರೆಗಳಿವೆ. ಜಾಗತಿಕ ಯಜಮಾನನಿಗೆ ಗೋಮಾಂಸ ಭಕ್ಷಣೆಯ ಬಗ್ಗೆ ಯಾವುದೇ ರೀತಿಯ ಆಕ್ಷೇಪಗಳೂ ಇಲ್ಲ. ಆತನ ನಿತ್ಯದ ಆಹಾರ ಕ್ರಮ ಅದು. ಆದರೆ ಈ ನಿರ್ವಾಹಕ ಯಜಮಾನನಿಗೆ ಗೋವು ಪವಿತ್ರ ಅನ್ನೋ ಕಾರಣಕ್ಕೆ ನಾವು ಗೋಮಾಂಸ ಭಕ್ಷಣೆಯನ್ನ ನಿಲ್ಲಿಸಬೇಕು. ಜಾಗತಿಕ ಯಜಮಾನನಿಗೆ ಜಾತಿ ಏನೂ ಇಲ್ಲ. ಬಣ್ಣಗಳಿವೆ. ಜಾತಿ ಬಗ್ಗೆ ಬಹಳ ದೊಡ್ಡ ಆಲೋಚನೆಗಳೇನೂ ಆತನಿಗೆ ಅರ್ಥ ಆಗೋದಿಲ್ಲ. ಆದರೆ ಈ ನಿರ್ವಾಹಕ ಯಜಮಾನನಿಗೆ ಜಾತಿ ಎನ್ನುವುದು ಬಹಳ ದೊಡ್ಡ ಪ್ರಶ್ನೆ ಆಗಿಹೋಗಿದೆ. ನಮ್ಮ ಎಲ್ಲ ಐಟಿ ಬಿಟಿ ಕಂಪನಿಗಳೂ ಇವತ್ತು ಜಾತಿ ಆಧಾರಿತ ನವ ಶ್ರಮವಿಭಜನೆಯ ಮೇಲೆ ಅಸ್ತಿತ್ವದಲ್ಲಿವೆ.
 
 
ಆಧುನಿಕತೆ ಮತ್ತು ಸನಾತನತೆ ಇವೆರಡೂ ಒಟ್ಟೊಟ್ಟಿಗೇ ಹೋಗುತ್ತಾ ಇರುವಂತ ಒಂದು ವಿಚಿತ್ರವಾದ ಸನ್ನಿವೇಶ - ಅತ್ಯಂತ ಹೆಚ್ಚು ಓದಿರುವಂತವರು ಎನ್ ಆರ್ ಐಗಳಾಗಿ ಬೇರೆ ದೇಶಗಳಲ್ಲಿದ್ದಾರೆ. ಅವ್ರು ಇಲ್ಲಿಗೆ ಹಣ ಕಳಿಸುತ್ತಿರೋದು ಜಾತಿ ಸಂಘಟನೆಗಳನ್ನ ಮಾಡೋದಕ್ಕೆ. ಇವತ್ತು ಅತ್ಯಂತ ಸಮರ್ಪಕವಾಗಿ ಜಾತಿ ಸಂಘಟನೆಗಳನ್ನ ಮಾಡ್ತಾ ಇರುವಂತ ಎಲ್ಲ, ಬಲಿಷ್ಠ ಹಿಂದುಳಿದ ಜಾತಿಗಳು ವರ್ಗಗಳು ಎನ್ ಆರ್ ಐ ಗಳ ದುಡ್ಡನ್ನೇ ಅದಕ್ಕಾಗಿ ಅವಲಂಬಿಸಿರೋದು. ವಿದೇಶಗಳಲ್ಲಿ ಆಧುನಿಕ ತಂತ್ರಜ್ಞಾನದ ಕಂಪನಿಗಳಲ್ಲಿ ಕೆಲಸ ಮಾಡುತ್ತಾ ಇರುವಂತ ಇಂಜಿನಿಯರ್ಗಳು ಕಳಿಸಿರುವ ಹಣದಿಂದಲೇ ಇವತ್ತು ಇಲ್ಲಿ ನವಆಧ್ಯಾತ್ಮಿಕ ಆಶ್ರಮಗಳು ಹುಟ್ಟುತ್ತಾ ಇರೋದು. ಆದ್ದರಿಂದ ಈ ವಿನ್ಯಾಸದಲ್ಲಿ ನಾವು ನಮ್ಮ ಆಳುವ ಸಂಸ್ಕೃತಿಯನ್ನು ವ್ಯಾಖ್ಯಾನಿಸುವುದು ಮತ್ತು ಅದನ್ನು ಯಾವ ರೀತಿಯಲ್ಲಿ ಎದುರಿಸುವುದು?

(ಮುಂದುವರೆಯುವುದು)
 
 
 
 
 
 
 

ಎಸ್ ಎಸ್ ಎಲ್ ಸಿ ಮಂಜುನಾಥ್ ಸೆವೆಂತ್ ಕ್ಲಾಸ್ ನಿರ್ಮಲಾ.

 
ಸುದೇಶ್ ದೊಡ್ಡಪಾಳ್ಯ
 

(ಪತ್ರಕರ್ತ ಸುದೇಶ್ ದೊಡ್ಡಪಾಳ್ಯ ಸರಳ ಸುಂದರವಾಗಿ ದಾಖಲಿಸಿರುವ ಕನ್ನಡದ ನೈಜ ಪ್ರೇಮ ಕಥೆಗಳು ಆಯಾಮದ ಓದುಗರಿಗಾಗಿ)
 
ನಿರ್ಮಲ ತನ್ನ ಲಂಚ್ ಬಾಕ್ಸ್ ಅನ್ನು ಮಂಜುನಾಥ್ ಮುಖಕ್ಕೆ ಹಿಡಿದಳು. ಆತ ಸ್ವಲ್ಪವೂ ಹಿಂಜರಿಯದೆ ನಿರ್ಮಲಾ ಕೊಟ್ಟ ಲಂಚ್ ಬಾಕ್ಸ್ ತೆಗೆದುಕೊಂಡು ಊಟ ಮಾಡುತ್ತಾ ’ನಂಗೆ ಜಾತಿ-ಗೀತಿ ಅನ್ನೋದರಲ್ಲಿ ನಂಬಿಕೆ ಇಲ್ಲ. ನೀನು ಡೈಲಿ ತಿಂಡಿ, ಊಟ ಕೊಟ್ಟರೂ ತಿನ್ನುತ್ತೇನೆ, ಗೊತ್ತಾ ಅಮ್ಮಣ್ಣಿ’ ಎಂದು ತಮಾಷೆಗಾಗಿ ಹೇಳಿ ಆಕೆಯ ಮುಖ ನೋಡಿದ. ಆಗ ನಿರ್ಮಲ ತಬ್ಬಿಬ್ಬಾಗಿ "ಅರೆರೆ! ಪರವಾಗಿಲ್ವೆ, ನಾನು ಚುಡಾಯಿಸೋಣ ಅಂತ ಲಂಚ್ ಬಾಕ್ಸ್ ಕೊಟ್ಟರೆ ಪೂರ್ತಿ ಮುಕ್ಕಿಬಿಟ್ಟನಲ್ಲ’ ಎಂದು ಅಭಿಮಾನದಿಂದ ಆತನನ್ನು ನೋಡಿದಳು.
 
ಆಗ ಮಂಜುನಾಥ್, ’ನೀನು ಹಾಕಿದ ಸವಾಲನ್ನು ಸ್ವೀಕರಿಸಿ ನಾನು ಗೆದ್ದು ಬಿಟ್ಟೆ’ ಎನ್ನುವಂತೆ ಮತ್ತೆ ಆಕೆಯತ್ತ ನೋಡಿದ. ಇಷ್ಟಕ್ಕೆ ಸುಮ್ಮನಾಗದ ನಿರ್ಮಲಾ, ’ಮಾತಿಗೆ ಸಿಕ್ಕಾಗಲೆಲ್ಲಾ ನಾನು ಜಾತಿಯನ್ನು ನಂಬೊಲ್ಲ ಅಂತ ಹೇಳುತ್ತಲೇ ಇರ್ತೀರಾ, ಬರೀ ಊಟ ಮಾಡಿದ್ರೆ ಇದು ಸಾಬೀತು ಆಗೋದಿಲ್ಲ. ನಿಮ್ಗೆ ಧೈರ್ಯ ಇದ್ರೆ ನನ್ನನ್ನು ಮದುವೆ ಮಾಡಿಕೊಳ್ಳಿ, ನೋಡೋಣ’ ಎಂದು ಸವಾಲ್ ಮಿಶ್ರಿತ ಆಹ್ವಾನವನ್ನು ನೀಡಿಯೇ ಬಿಟ್ಟಳು.
 
ಮಂಜುನಾಥ್ ಕನಸಿನಲ್ಲಿಯೂ ನಿರ್ಮಲಳಿಂದ ಇಂಥ ಮಾತನ್ನು ನಿರೀಕ್ಷಿಸಿರಲಿಲ್ಲ. ’ನಾನು ತಮಾಷೆಗೆ ಹೇಳಿದ ಮಾತು ಇಷ್ಟೋಂದು ಸೀರಿಯಸ್ ಆಗಿಬಿಟ್ಟಿತಲ್ಲ. ನಾನು ನೋ ಎಂದರೆ ಇಷ್ಟು ದಿನ ಆಡಿದ ಮಾತು ಟೊಳ್ಳು ಅನಿಸುತ್ತದೆ; ಓಕೆ ಎಂದರೆ ಜಾತಿ ಬಿಟ್ಟು ಮದುವೆಯಾಗಬೇಕು. ಆಮೇಲೆ ಶಿವ...ಶಿವ...’ ಎಂದು ತಲೆ ಕೆರೆದುಕೊಂಡು ಗಟ್ಟೀ ಮನಸು ಮಾಡಿ ಹೇಳಿಯೇ ಬಿಟ್ಟನು-’ನಾನು ನಿನ್ನನ್ನು ಮದ್ವೆ ಆಗ್ತೀನಿ.’ ಇಂತಹ ಮಾತಿನಿಂದ ಗಾಬರಿ ಮತ್ತು ಆಶ್ಚರ್ಯಗೊಳ್ಳುವ ಸರದಿ ಈಗ ನಿರ್ಮಲಳದ್ದಾಗಿತ್ತು.
 
’ನಾನು ಸ್ವಲ್ಪ ರೇಗಿಸೋಣ ಅಂದ್ರೆ ಈಯಪ್ಪ ಮದುವೆ ಆಗ್ತೀನಿ ಅಂದೇ ಬಿಟ್ತನಲ್ಲ. ಈಯಪ್ಪನ ಜಾತಿ ಬೇರೆ, ನನ್ನ ಜಾತಿ ಬೇರೆ, ಇವನನ್ನು ಕಟ್ಟಿಕೊಂಡರೆ ಮುಂದಿನ ದಿನಗಳು ಹೇಗಪ್ಪ’ ಎನ್ನುವ ವಿಚಾರ ತಲೆಯಲ್ಲಿ ಗಿರಕಿ ಹೊಡೆಯಿತು. ಬೇರೆ ದಾರಿ ಕಾಣದ ನಿರ್ಮಲಾ ಮದುವೆಗೆ ಮಾತುಕೊಟ್ಟಳು.
 
ಮಣ್ಜುನಾಥ್ ಹಾಗೂ ನಿರ್ಮಲಾ ಪರಸ್ಪರ ಚುಡಾಯಿಸಿಕೊಂಡು, ಕಿಚ್ಚಾಯಿಸಿಕೊಂಡು ಮದುವೆ ಅಂತ ದೊಡ್ಡ ನಿರ್ಧಾರಕ್ಕೆ ಬಂದಿದ್ದರು. ಇದನ್ನು ಮನೆಯವರಿಗೆ ಹೇಳುವುದು ಹೇಗೆ? ಎನ್ನುವ ಚಿಂತೆ ಇಬ್ಬರಿಗೂ ಶುರುವಾಯಿತು. ಸ್ವಲ್ಪ ದಿನ ಮನೆಯವರಿಗೆ ವಿಷಯವನ್ನು ತಿಳಿಸದೆ ಇರಲು ಇಬ್ಬರು ತೀರ್ಮಾನಿಸಿದರು.
 
ಮಂಜುನಾಥ್ ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಹಿರೇಗಂಗೂರಿನವನು. ಎಸ್.ಎಸ್.ಎಲ್.ಸಿ ಯಲ್ಲಿ ಎರಡು ಬಾರಿ ಲಾಗ ಹಾಕಿದ್ದ. ಓದು ಅನ್ನೋದು ತಲೆಗೆ ಹೋಗಲೇ ಇಲ್ಲ. ಮೈಸೂರಿನ ಲಕ್ಷ್ಮಿಪುರಂನಲ್ಲಿ ಸದರನ್ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದ ಸೋದರಮಾವ ಓಂಕಾರಪ್ಪ ಈತನನ್ನು ಸಹಾಯಕ್ಕಿರಲಿ ಎಂದು ೧೯೮೪ರಲ್ಲಿ ಕರೆದುಕೊಂಡು ಬಂದು ಪ್ರೆಸ್ ನಲ್ಲಿ ಕೆಲಸಕ್ಕೆ ಬಿಟ್ಟಿದ್ದರು. ಓದಿನಲ್ಲಿ ಹಿಂದೆ ಇದ್ದ ಈತ ಪ್ರೆಸ್ ನಲ್ಲಿ ಪ್ರಿಂಟಿಂಗೂ, ಬೈಂಡಿಂಗೂ, ಕಂಪೋಸಿಂಗೂ ಅಂಥ ಆಲ್ ರೌಂಡರ್ ಕೆಲಸ ಮಾಡುತ್ತಾ ಎಲ್ಲರ ಮೆಚ್ಚುಗೆ ಗಳಿಸಿದ. ಮೃದು ಸ್ವಭಾವದ ಈತ ಸಹೋದ್ಯೋಗಿಗಳ ಜೊತೆ ಬೆರೆಯುತ್ತಿದ್ದ. ಬೆಳಿಗ್ಗೆಯಿಂದ ರಾತ್ರಿ ತನಕ ಪ್ರೆಸ್ ಈತನ ಸಂಗಾತಿ ಆಗಿತ್ತು. ಭಾನುವಾರ ಮಾತ್ರ ರಜೆ. ಅಂದು ಸೋದರಮಾವ ಓಂಕಾರಪ್ಪ ಖರ್ಚಿಗೆ ಹಣ ಕೊಡುತ್ತಿದ್ದರು. ಉಳಿದಂತೆ ಎಲ್ಲವೂ ಮನೆಯಲ್ಲಿಯೇ ಆಗುತ್ತಿತ್ತು.
 
ಇದೇ ಪ್ರೆಸ್ ಗೆ ೧೯೮೯ರಲ್ಲಿ ನಿರ್ಮಲಾ ಬೈಂಡಿಂಗ್ ಕೆಲಸಕ್ಕೆಂದು ಸೇರಿಕೊಂಡಳು. ದೊಡ್ಡದಾದ ಪ್ರಿಂಟಿಂಗ್ ಪ್ರೆಸ್ ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಕೆಲಸಗಾರರಿದ್ದರು. ಅವರಲ್ಲಿ ಹುಡುಗಿಯರು, ಹುಡುಗರೇ ಹೆಚ್ಚಿದ್ದರು. ನಿರ್ಮಲಳಿಗೆ ಇಬ್ಬರು ಗೆಳತಿಯರಿದ್ದರು. ಇದೇ ಪ್ರೆಸ್ ನಲ್ಲಿ ಮಂಜುನಾಥ್ ಮತ್ತು ನಿರ್ಮಲ ಮೊದಲು ಭೇಟಿಯಾಗಿದ್ದು. ಇಬ್ಬರು ಒಂದೇ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಪರಸ್ಪರ ಪರಿಚಯವಾಯಿತು. ಪರಿಚಯ ’ಅತಿ’ಯಾಯಿತು. ಸಮಯ ಸಿಕ್ಕಾಗಲೆಲ್ಲಾ ಮಝುನಾಥ್-ನಿರ್ಮಲ ಈಕೆಯ ಇನ್ನಿಬ್ಬರು ಗೆಳತಿಯರು ಹರಟೆಯಲ್ಲಿ ತೊದಗುತ್ತಿದ್ದರು. ಹರಟೆ ಹೀಗೆ ಮುಂದುವರೆಯುತ್ತಿತ್ತು. ಒಮ್ಮೊಮ್ಮೆ ಇಬ್ಬರೇ ಪ್ರೆಸ್ ನ ಮೂಲೆಯಲ್ಲಿ ಕುಳಿತು ಮಾತಾನಾಡುವಷ್ಟು ಆಪ್ತರಾದರು. ಮಂಜುನಾಥ್ ನ ’ಮೃದು’ ಸ್ವಭಾವ ನಿರ್ಮಲಳಿಗೆ ಅರ್ಥವಾಗಿತ್ತು. ನಿರ್ಮಲಳ ’ಗಟ್ಟಿಗಿತ್ತಿ’ತನ ಮಂಜುನಾಥ್ ಗೆ ಇಷ್ಟವಾಗಿತ್ತು. ಇಬ್ಬರೂ ಗೊತ್ತಿದ್ದೋ, ಗೊತ್ತಿಲ್ಲದೆಯೋ(?!) ಮನಸ್ಸು ಕೊಟ್ಟುಕೊಂಡಿದ್ದರು. ಇಂತಹ ಸಂದರ್ಭದಲ್ಲಿಯೇ ಲಂಚ್ಬಾಕ್ಸ್ ನೆಪವಾಗಿ, ಪ್ರೀತಿ ಹೆಚ್ಚಾಗಿ, ಅದೇ ಸವಾಲಿನ ರೂಪದಲ್ಲಿ ಮದುವೆ ನಿರ್ಧಾರಕ್ಕೆ ಬಂದು ನಿಂತಿದ್ದರು.
 
ಎಲ್ಲಾ ಪ್ರೇಮಿಗಳಂತೆ ಇವರ ಮದುವೆಗೂ ಜಾತಿ ಅಡ್ದಗೋಡೆ ಆಯಿತು. ಕಾರಣ ನಿರ್ಮಲ ಅಶೋಕಪುರಂನ ದಲಿತರ ಹೆಣ್ಣೂಮಗಳು. ಈಕೆ ಓದಿದ್ದು ಕೇವಲ ಏಳನೇ ಕ್ಲಾಸ್ ಮಾತ್ರ. ಮಂಜುನಾಥ್ ಹೇಳಿ ಕೇಳಿ ಮೇಲ್ಜಾತಿಯ ಲಿಂಗಾಯಿತರ ಹುಡುಗ. ನಿರ್ಮಲಳ ಮನೆಯಲ್ಲಿ ಒಪ್ಪಿದರೂ ಮಂಜುನಾಥ್ ಮನೆಯಲ್ಲಿ ಒಪ್ಪುವುದು ಅಸಾಧ್ಯವಾಗಿತ್ತು. ಮಂಜುನಾಥ್ ಮೇಲ್ಜಾತಿಯ ಜೊತೆಗೆ ಆರ್ಥಿಕವಾಗಿ ಉತಮ ಸ್ಥಿತಿಯಲ್ಲಿದ್ದ. ತಂದೆ ಚಂದ್ರಪ್ಪನಿಗೆ ಏಳೆಂಟು ಎಕರೆ ಜಮೀನಿತ್ತು. ಇವರ ಒಬ್ಬ ತಮ್ಮ ಜಿಲ್ಲಾ ಪಂಚಾಯ್ತಿಯ್ ಸಿಇಒ ಆಗಿದ್ದರೆ, ಮತ್ತೊಬ್ಬ ತಮ್ಮ ಫಾರೆಸ್ಟ್ ಆಫೀಸರ್ ಆಗಿದ್ದರು. ಇಂತಹ ಹಿನ್ನೆಲೆಯ ಮಂಜುನಾಥನ ತಂದೆ ಚಂದ್ರಪ್ಪ ನಿರ್ಮಲಳನ್ನು ಸೊಸೆ ಎಂದು ಒಪ್ಪುವುದು ಉಂಟೇ? ಇವೆಲ್ಲವನ್ನು ಯೋಚಿಸಿಯೇ ಇಬ್ಬರು ಮದುವೆ ನಿರ್ಧಾರವನ್ನು ಯಾರಿಗೂ ತಿಳಿಸಿರಲಿಲ್ಲ. ಒಂದೆರಡು ತಿಂಗಳ ಕಾಲ ಮಾಮೂಲಿನಂತೆಯೇ ಮಾತನಾಡಿಕೊಂಡು ಯಾರಿಗೂ ಅನುಮಾನ ಬರದಂತೆ ಇದ್ದುಬಿಟ್ಟರು.
 
ಪ್ರೆಸ್ ನ ಮೂಲೆಯೊಂದರಲ್ಲಿ ಇಬ್ಬರು ಕುಳಿತಿದ್ದರು. ಮಂಜುನಾಥ್ ತನ್ನ ಪ್ರೇಯಸಿಗೆ ಏನನ್ನೋ ಕೇಳುವ ತವಕದಲ್ಲಿದ್ದ. ಹೇಗೆ ಮಾತು ಶುರು ಮಾಡಬೇಖು ಎನ್ನುವುದು ಗೊತ್ತಾಗದೆ ಸುಮ್ಮನೆ ಮುಖ ನೋಡುತ್ತಾಕುಳಿತಿದ್ದ. ಕಡ್ಡಿ ತುಂಡು ಮಾಡಿದಂತೆ ಮಾತನಾಡುವುದು ನಿರ್ಮಲಳ ಸ್ವಭಾವ. ಇದು ಮಂಜುನಾಥ್ ಗೆ ಚೆನ್ನಾಗಿ ಗೊತ್ತಿತ್ತು. ಧೈರ್ಯ ತಂದುಕೊಂಡು ಮಂಜುನಾಥ್ ಮಾತಿಗಿಳಿದ.
 
’ನಿಮ್ಮ ಮನೆಯಲ್ಲಿ ಮದ್ವೆಗೆ ಒಪ್ಪಿಗೆ ಕೊಡ್ತಾರಾ?’ ಮೆಲ್ಲಗೆ ಕೇಳಿದ.
’ಒಪ್ಪಬಹುದು, ಒಪ್ಪದೆಯೂ ಇರಬಹುದು, ಮನೆಯಲ್ಲಿ ವಿಚಾರಿಸದೆ ಏನನ್ನೂ ಹೇಳಲಾಗದು’ ಗುಂಡು ಹೊಡೆದಂತೆ ಹೇಳಿದಳು ನಿರ್ಮಲ.
’ಒಂದು ವೇಳೆ ನಿಮ್ಮ ಮನೆಯಲ್ಲಿ ಮದ್ವೆಗೆ ಒಪ್ಪದೇ ಹೋದ್ರೆ?’ ಮಂಜುನಾಥ್ ಸ್ವಲ್ಪ ಆತಂಕದಿಂದಲೇ ಕೇಳಿದ.
’ಒಪ್ಪದೇ ಹೋದ್ರೆ...?’ ನಿರ್ಮಲ ಮಾತು ಅರ್ಧಕ್ಕೆ ನಿಲ್ಲಿಸಿದಳು.
’ಇಬ್ರೂ ಎಲ್ಲಿಗಾದ್ರೂ ಓಡಿ ಹೋಗೋಣವೇ?’ ಮಂಜುನಾಥ್ ಅಂಜುತ್ತಲೇ ಕೇಳಿದ.
’ಏನಂದ್ರಿ?’ ಗಾಬರಿ ಮತ್ತು ಸಿಟ್ಟಿನಿಂದ ಕೇಳಿದಳು ನಿರ್ಮಲ.
’ಅದೇ ಎಲ್ಲಿಗಾದ್ರೂ...?’ ಮಂಜುನಾಥ್ ಬೆಬ್ಬೆಬ್ಬೆ ಅಂದ.
’ಇದು ಸಾಧ್ಯವೇ ಇಲ್ಲ’ ಮುಖ ಗಂಟಿಕ್ಕಿಕೊಂಡಳು ನಿರ್ಮಲ.
’ಹಾಗಿದ್ರೆ ಏನ್ಮಾಡೋದು?’ ಮುಂದೆ ದಾರಿ ಕಾಣದ ಮಂಜುನಾಥ್ ಕೇಳಿದ.
’ಮನೆಗೆ ಬಂದು ಮಾತಾಡಿ’ ನಿರ್ಮಲ ಕೋಪದಲ್ಲಿಯೇ ಸಲಹೆ ನೀಡಿದಳು.
’ಒಂದ್ ವೇಳೆ ಮನೇಳಿ ಒಪ್ಪದೆ ಹೋದ್ರೆ?’ ಅಳುಕುತ್ತಲೇ ಕೇಳಿದ ಮಂಜುನಾಥ್.
’ಅದೇ ಹೇಳಿದ್ನಲ್ಲ. ನಾನು ಓಡಿ ಹೋಗಲು ರೆಡಿ ಇಲ್ಲ’ ನಿರ್ಮಲ ಮತ್ತೊಮ್ಮೆ ನಿರ್ಧಾರ ಹೇಳಿದಳು.
’ಯಾಕೆ ಅಂತ ಕೇಳಬಹುದೇ’ ಮಂಜುನಾಥ್ ದಿಗ್ಭ್ರಾಂತನಾಗಿ ಕೇಳಿದ.
’ನಾನು ನಮ್ ಮನೆಗೆ ಹಿರಿಮಗ್ಳು ನಾನೇ ಹಿಂಗ್ಮಾಡಿದ್ರೆ...’ ನಿರ್ಮಲ ತನ್ನ ಧರ್ಮ ಸಂಕಟವನ್ನು ಹೇಳಿಕೊಂಡಳು.
 
ನಿರ್ಮಲಳ ಸತ್ಯಕಥೆ ಹೇಗಿತ್ತಪ್ಪಾ ಅಂದರೆ ಅಬ್ಬಯ್ಯನಾಯ್ಡುವಿನ ’ತಾಯಿಯ ಮಡಿಲಲ್ಲಿ’ ಸಿನಿಮಾದ ನಾಯಕಿ ಆರತಿ ಪಾತ್ರದಂತೆ ಇತ್ತು. ಅಪ್ಪ, ಅಮ್ಮ, ಇಬ್ಬರು ತಂಗಿಯರು, ತಮ್ಮನನ್ನು ನಿರ್ಮಲಾ ಸಾಕಬೇಕಿತ್ತು. ಅಪ ಅಮ್ಮ ಮುಗ್ಧರು. ಹೀಗಾಗಿ ಮನೆಯ ಜವಾಬ್ದಾರಿ ನಿರ್ಮಲಳ ಹೆಗಲ ಮೇಲಿತ್ತು. ನಿರ್ಮಲಳಿಗೆ ತನ್ನ ಕುಟುಂಬದ ಬಗ್ಗೆ ಎಲ್ಲಿಲ್ಲದ ಅಕ್ಕರೆ. ಮೇಲ್ಜಾತಿ ಹುಡುಗನನ್ನು ಪ್ರೀತಿಸಿದ ಕಾರಣಕ್ಕೆ ಮನೆಬಿಟ್ಟು ಹೋದರೆ ತನ್ನನ್ನೇ ನಂಬಿಕೊಂಡಿರುವ ಐದು ಜನಗಳ ಹೊಟ್ಟೆ ಬಟ್ಟೆಯ ಕಥೆ ಏನು? ಎನ್ನುವ ಚಿತ್ರ ಕಣ್ಣಮುಂದೆ ಬರುತ್ತಲೇ ಇತ್ತು. ತಾನು ಪ್ರೀತಿಗಾಗಿ ಓಡಿ ಹೋದರೆ ಮುಂದಿನ ದಿನಗಳಲ್ಲಿ ಮನೆಯಲ್ಲಿ ಆಗಬಹುದಾದ ತೊಂದರೆಗಳನ್ನು ನೆನಪಿಸಿಕೊಂಡ ನಿರ್ಮಲ ’ಓಡಿಹೋಗುವ" ಪದ ಕೇಳಿಯೇ ಸಿಡಿಮಿಡಿಗೊಂಡಿದ್ದಳು.
 
’ಮನೆಯ ಹಿರಿಯಕ್ಕ ನಾನೇ ಓಡಿ ಹೋದ್ರೆ, ಇನ್ನಿಬ್ಬರು ತಂಗಿಯರನ್ನು ಮದ್ವೆ ಆಗೋದಿಕ್ಕೆ ಯಾರ್ತಾನೆ ಬರ್ತಾರೆ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಅನ್ನೋ ಗಾದೆ ಬೇರೆ ಇದೆ.ಪ್ರೀತಿಸಿ ಓಡಿ ಹೋದರೆ ಸಂಬಂಧಿಕರು, ನೆರೆಹೊರೆಯವರ ಬಾಯಿಗೆ ಸುಮ್ಮನೆ ಆಹಾರವಾಗಬೇಕಾಗುತ್ತದೆ. ಇದ್ಯಾವುದೂ ಬೇಡವೇ ಬೇಡ’ ಎನ್ನುವ ನಿರ್ಧಾರಕ್ಕೆ ನಿರ್ಮಲ ಬಂದಿದ್ದಳು. ನಿರ್ಮಲಳ ಕಥೆಯನ್ನು ಮೈಯೆಲ್ಲಾ ಕಿವಿಯಾಗಿ ಕೇಳಿಸಿಕೊಂಡ ಮಂಜುನಾಥ್ ಗೆ ತಾನು ಮೆಚ್ಚಿದ ಹುಡುಗಿಯ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಯಿತು.
 
ಇಷ್ಟೆಲ್ಲಾ ಆದಮೇಲೆ ಸುಮ್ಮನೆ ಕಾಲ ನೂಕುವುದರಲ್ಲಿ ಅರ್ಥವಿಲ್ಲ ಎಂದುಕೊಂಡ ಮಂಜುನಾಥ್ ನಿರ್ಮಲಳ ಮನೆಗೆ ಹೋಗಿ ತಮ್ಮ ಪ್ರೀತಿಯ ವಿಚಾರವನ್ನು ತಿಳಿಸಲು ನಿರ್ಧರಿಸಿದ. ಇದಕ್ಕೂ ಮುನ್ನ ನಿರ್ಮಲ ತನ್ನ ಸಹೋದರನಿಗೆ ಮಂಜುನಾಥ್ ಜೊತೆಗಿನ ಪ್ರೀತಿ ಮತ್ತು ಮದುವೆ ವಿಚಾರವನ್ನು ತಿಳಿಸಿದ್ದಳು. ವಿವೇಕವುಳ್ಳ ಸಹೋದರ ಮಂಜುನಾಥ್ ನನ್ನೌ ಮನೆಗೆ ಕರೆದುಕೊಂಡು ಬರಲು ಅಕ್ಕನಿಗೆ ತಿಳಿಸಿದ.
 
"ಈಗ ಪ್ರೀತಿ ಅಂದುಕೊಂಡು ಮದುವೆಯಾಗುತ್ತೀರಿ, ಆಮೇಲೆ ನಿಮ್ಮ ಮನೆಯವರ ಒತ್ತಡಕ್ಕೆ ಮಣಿದು ನಮ್ಮಕ್ಕನಿಗೆ ಕೈಕೊಟ್ಟರೆ ಏನು ಮಾಡುವುದು’ ಎಂದು ಸಹೋದರ ಆತಂಕವನ್ನು ವ್ಯಕ್ತಪಡಿಸಿದ. ’ನಾನು ಅಂಥವನಲ್ಲ ಎಷ್ಟೇ ಕಷ್ಟವಾದರೂ ಸರಿ, ನಿರ್ಮಲಳನ್ನು ಕೈಬಿಡುವುದಿಲ್ಲ. ಹಾಗೆಯೇ ಮನೆಯವರನ್ನು ಒಪ್ಪಿಸುವುದು ಇಲ್ಲವೇ ಹೆದರಿಸುವುದನ್ನು ನನಗೆ ಬಿಟ್ಟುಬಿಡಿ’ ಎನ್ನುವ ಭರವಸೆಯನ್ನು ಮಂಜುನಾಥ್ ನೀಡಿದ. ಇಂತಹ ಮಾತಿನಿಂದ ಸಮಾಧಾನಗೊಂಡ ನಿರ್ಮಲರ ಮನೆಯವರುಮದುವೆಗೆ ಒಪ್ಪಿಗೆಯನ್ನು ಸೂಚಿಸಿದರು.
 
ಸೋದರಮಾವ ಓಂಕಾರಪ್ಪನ ಸಹೋದರ ಲೋಕೇಶನ ಮದುವೆ ಗೊತ್ತಾಗಿತ್ತು. ಹೀಗಾಗಿ ಎಲ್ಲರೂ ಚನ್ನಗಿರಿ ತಾಲ್ಲೂಕಿನ ಕೊರಟಗೆರೆಗೆ ಹೋಗಲು ರೆಡಿಯಾಗಿದ್ದರು. ಇದು ತಮ್ಮ ಮದುವೆಗೆ ಸರಿಯಾದ ಸಮಯ ಎಂದು ಮಂಜುನಾಠ್ ಗೆ ಹೊಳೆಯಿತು. ಕೂಡಲೇ ನಿರ್ಮಲಳಿಗೆ ಹೇಳಿ ಮನೆಯಲ್ಲಿ ಸಿದ್ಧವಾಗಲು ತಿಳಿಸಿದ. ಮಾವನ ಮನೆಯವರು, ಸಂಬಂಧಿಕರು ಕೊರಟಗೆರೆಗೆ ಹೊರಟರು. ಮಾವ ಓಂಕಾರಪ್ಪಗೆ ಸೋದರಳಿಯನ ಮೇಲೆ ಸ್ವಲ್ಪ ಅನುಮಾನ ಶುರುವಾಗಿತ್ತು. ಆದ್ದರಿಂದಲೇ ಮಂಜುನಾಥನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲು ರಾತ್ರಿ ೧೨ ಗಂಟೆಯವರೆಗೂ ಹುಡುಕಿಸಿದರು. ಕೊನೆಗೂ ಮಂಜುನಾಥ್ ಸಿಗದೇ ಹೋದದ್ದರಿಂದ ಬೇರೆ ದಾರಿ ಕಾಣದೆ ಕೊರಟಗೆರೆ ಕಡೆಗೆ ಹೊರಟರು.
 
ಅದು ಜುಲೈ ೪, ೧೯೯೪. ಮಂಜುನಾಥ್ ಮತ್ತು ನಿರ್ಮಲ ನಂಜನ ಗೂಡಿನ ದೇವಸ್ಥಾನದಲ್ಲಿ ಗಂಡ-ಹೆಂಡತಿಯಾದರು. ಈ ಸಂದರ್ಭದಲ್ಲಿ ನಿರ್ಮಲಳ ಕುಟುಂಬದವರು ಸಂಬಂಧಿಕರು ಇದ್ದರು. ಮಂಜುನಾಥ್ ಪರವಾಗಿ ಕ್ರಿಸ್ಚಿಯನ್ ಗೆಳೆಯ ಸೆಲ್ಂ ಮಾತ್ರ ಇದ್ದ. ಮದುವೆಯಾದ ಮೇಲೆ ಮುಂದೆ ಕಿರಿಕ್ ಆಗಬಹುದು ಎನ್ನುವ ಕಾರಣಕ್ಕಾಗಿ ಅಶೋಕಪುರಂನ ಕೆಲವು ಬುಧ್ಧಿವಂತರು ಮದುವೆಯನ್ನು ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ನೋಂದಣಿ ಮಾಡಿಸುವ ಜಾಣತನ ತೋರಿಸಿದರು.

ಮದುವೆ ಆಯ್ತು, ಆದ್ರೆ ಪ್ರೆಸ್ ನಲ್ಲಿ ಮಾತ್ರ ಯಾರಿಗೂ ಗೊತ್ತಾಗಲೇ ಇಲ್ಲ. ಎಲ್ಲವೂ ಮಾಮೂಲಿಯಂತೆಯೇ ಇತ್ತು. ಆದರೆ ಎಡವಟ್ಟು ಆಗಿದ್ದೇ ಸಬ್ ರಿಜಿಸ್ಟ್ರಾರ್ ಆಫೀಸಿನ ನೋಟಿಸ್ ಬೋರ್ಡ್ ನಿಂದ. ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ನ ಗೆಳೆಯರು ಬೇರೊಬ್ಬರ ಮದುವೆ ನೋಂದಣಿಗಾಗಿ ಹೋಗಿದ್ದರು. ನೋಟಿಸ್ ಬೋರ್ಡ್ ಮೇಲೆ ಕಣ್ಣಾಡಿಸುತ್ತಿದ್ದಾಗ ಟಿ.ಸಿ. ಮಂಜುನಾಥ್-ನಿರ್ಮಲ ಹೆಸರು ಕಾಣಿಸಿತು. ಹೀಗಾಗಿ ಗುಟ್ಟಾಗಿದ್ದ ಮದುವೆ ರಟ್ಟಾಯಿತು. ಮದುವೆ ವಿಷಯ ಮಂಜುನಾಥ್ ಕುಟುಂಬ ಮತ್ತು ಸೋದರಮಾವನಿಗೆ ಗೊತ್ತಾದ ಕೂಡಲೇ ಎಲ್ಲರೂ ಕೆಂಡಾಮಂಡಲವಾದರು. ಮಂಜುನಾಥ್ ಹೆಂಡತಿಯ ಮನೆಯಲ್ಲಿಯೇ ವಾಸವಿದ್ದ. ಅವನ ಅಪ್ಪ, ಸೋದರಮಾವ ಅಲ್ಲಿಗೆ ಹೋಗಿ ’ನಮ್ಮ ಹುಡುಗನನ್ನು ಹೆದರಿಸಿ ಮೋಸದಿಂದ ಮದುವೆ ಮಾಡಿಕೊಂಡಿದ್ದೀರಿ’ ಎಂದು ಗುಟುರು ಹಾಕಿದರು. ಇದ್ಯಾವುದಕ್ಕೂ ನಿರ್ಮಲ ಬಗ್ಗದೆ ಹೋದಾಗ ’ನಿನಗೆ ದುಡ್ಡು ಬೇಕಿದ್ದರೆ ಕೇಳು, ಕೊಟ್ಟು ಬಿಡುತ್ತೇವೆ, ಆದರೆ ನಮ್ಮ ಹುಡುಗನನ್ನು ಬಿಟ್ಟುಬಿಡು’ ಎಂದು ಸಿನಿಮಾ ಶೈಲಿಯಲ್ಲಿ ಆಸೆ ತೋರಿಸಿದರು. ಇದಕ್ಕೂ ನಿರ್ಮಲ ಸೊಪ್ಪು ಹಾಕಲಿಲ್ಲ. ಇದರಿಂದ ಹತಾಶರಾಗಿ, ನೀನು ನಮ್ಮ ಮಾನ ಮರ್ಯಾದೆ ತೆಗೆದುಬಿಟ್ಟೀಂದು ಮಂಜುನಾಥ್ ನಿಗೆ ಬೈದರು. ಆಮೇಲೆದೊಡ್ಡ ಸೋದರಮಾವ ಬಂದು ’ಆಕೆಯನ್ನು ಬಿಟ್ಟುಬಿಡು ಬೇರೆ ಮದುವೆ ಮಾಡುತ್ತೇವೆ’ ಎಂದು ಬೆಣ್ಣೆ ಹಚ್ಚಿದರು. ಇದಕ್ಕೂ ಮಂಜುನಾಥ್ ಗೋಣು ಆಡಿಸಲಿಲ್ಲ.
 
ಇಷ್ಟರಲ್ಲಿ ಮೊದಲಮಗ ಭರತ್ ಕುಮಾರ್ ಹುಟ್ಟಿದ. ಆಮೇಲೆ ತಂದೆ ಚಂದ್ರಪ್ಪ ಅಶೋಕಪುರಂ ನ ಬೀಗರ ಮನೆಗೆ ಬಂದು ಮೊಮ್ಮಗನನ್ನು ನೋಡಿಕೊಂಡು ಹೋದರು. ಆದರೆ ತಾಯಿ ಮಾತ್ರ ಒಪ್ಪಲೇ ಇಲ್ಲ. ಮಂಜುನಾಥ್ ಅಶೋಕ್ ಪುರಂ ಬಿಟ್ಟು ಮೇಲ್ಜಾತಿಯವರು ಹೆಚ್ಚಾಗಿ ವಾಸವಿರುವ ಕನ್ನೇಗೌಡನ ಕೊಪ್ಪಲಿನಲ್ಲಿ ಮನೆ ಮಾಡಿದರೂ ಅಲ್ಲಿಗೂ ಬರಲಿಲ್ಲ. ಸಂಬಂಧಿಕರು ಮಾತ್ರ ಬಂದು ಹೋಗಲು ಶುರು ಮಾಡಿದರು. ಮನೆಗೆ ಬಾಡಿಗೆ ಕಟ್ಟಿ ಬದುಕುವುದು ಕಷ್ಟವಾಯಿತು; ದಿಕ್ಕು ಕಾಣದ ಮಂಜುನಾಥ್ ಮತ್ತೆ ಅಶೋಕಪುರಂ ನ ಮಾವನ ಮನೆಗೆ ಹಿಂದಿರುಗಿದ.
 
ಮಗ-ಸೊಸೆ ಯಾವುದೇ ಪಟ್ಟಿಗೂ ಸಿಕ್ಕಿಕೊಳ್ಳದೇ ಹೋದಾಗ ಮನೆಯವರು ಅಡ್ಡದಾರಿಯೊಂದನ್ನು ಹುಡುಕಿದರು. ಅದುವೇ ಲಿಂಗ ಕಟ್ಟಿಸುವುದು, ಸೊಸೆಯನ್ನು ಯಾವುದಾದರೂ ಮಠಕ್ಕೆ ಕರೆದುಕೊಂಡು ಹೋಗಿ ಲಿಂಗ ಕಟ್ಟಿಸಿ ಜಾತಿಗೆ ಸೇರಿಸಿಕೊಂಡು ಬಿಟ್ತರೆ ಎಲ್ಲವೂ ಸರಿ ಹೋಗುತ್ತದೆ ಎನ್ನುವ ಚರ್ಚೆ ನಡೆಯಿತು. ಈ ಸಂಬಂಧವಾಗಿ ಮಗ ಸೊಸೆಯನ್ನು ಒಪ್ಪಿಸಲು ಮುಂದಾಗಿದ್ದರು. ರೈತ ಮುಖಂಡ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರಿಂದ ಪ್ರಭಾವಿತರಾಗಿದ್ದ ಮಂಜುನಾಥ್ ನ ಚಿಕ್ಕಮ್ಮನ ಮಗ ಪ್ರಭು ಬಿಸ್ಲೇಹಳ್ಳಿ ಇದಕ್ಕೆ ಅವಕಾಶ ಕೊಡಲಿಲ್ಲ. ’ಇದು ಸರಿಯಲ್ಲ, ನಿರ್ಮಲ ಲಿಂಗಾಯತ ಜಾತಿಗೆ ಸೇರಿಬಿಟ್ಟರೆ ಆಕೆಯ ಮನೆಯವರನ್ನು ನೀವು ಮತ್ತೆ ದಲಿತರಂತೆಯೇ ಕಾಣುತ್ತೀರಿ, ಇದರಿಂದ ಏನನ್ನೂ ಸಾಧಿಸಿದಂತೆ ಆಗುವುದಿಲ್ಲ. ಆದ್ದರಿಂದ ಇದು ಸರಿಯಲ್ಲ’ ಎಂದು ಪ್ರಭು ಅವರ ಅಡ್ಡದಾರಿಗೆ ಕಲ್ಲುಹಾಕಿದ ಮೇಲೆ ಎಲ್ಲರೂ ಅವರವರ ಪಾಡಿಗೆ ಉಳಿದುಕೊಂಡರು. ಮಂಜುನಾಥ್ ವರ್ಷಕ್ಕೊಮ್ಮೆ ಹುಟ್ಟೂರಿಗೆ ಹೋಗಿ, ಬರುವುದನ್ನು ಮಾಡುತ್ತಿದ್ದ. ತಂದೆಗೆ ಸೊಸೆ ಅನ್ನುವ ಭಾವನೆ ಇದ್ದರೆ ತಾಯಿ ಮಾತ್ರ ಒಮ್ಮೆಯೂ ಸೊಸೆ, ಮೊಮ್ಮಕ್ಕಳ ಬಗ್ಗೆ ವಿಚಾರಿಸಿಕೊಳ್ಳಲಿಲ್ಲ.
 
ಇಬ್ಬರಿಗೆ ಪ್ರೆಸ್ ಕೆಲಸ ಬಿಟ್ಟು ಬೇರೆ ಗೊತ್ತಿಲ್ಲ. ಹಾಗೂ-ಹೀಗೂ ಅದರಲ್ಲಿಯೇ ಇಡೀ ಸಂಸಾರ ನಿಭಾಯಿಸುವ ಕಸರತ್ತು ಕಲಿತುಕೊಂಡರು. ಮೊದಲ ಮಗ ಭರತ್ ಕುಮಾರ್ ಎಂಟನೇ ಕ್ಲಾಸಿನಲ್ಲಿ ಓದುತ್ತಿದ್ದಾನೆ. ನಾಲ್ಕು ವರ್ಷದ ಎರಡನೇ ಮಗ ಮಹದೇವ್ ಪ್ರಸಾದ್ ಕೂಡಾ ಇದ್ದಾನೆ. ಊರ ಕಡೆ ಆಸ್ತಿ ಕೇಳಿದರೆ ಮನೆಯವರು ದ್ವೇಷ ಸಾಧಿಸಲು ಮುಂದಾಗಿದ್ದಾರೆ. ’ನಮ್ಮ ಮಾತು ಕೇಳದ ಮೇಲೆ ಶಿಕ್ಷೆ ಅನುಭವಿಸಬೇಕು’ ಎನ್ನುವುದು ಅವರ ತೀರ್ಪು. ತಂಗಿ ಕೌಸಲ್ಯ ಶ್ರೀಮಂತರ ಮನೆ ಸೊಸೆ. ಈಕೆ ಒಬ್ಬ ಅಣ್ಣನಿಗೆ ತೆಂಗಿನ ತೋಟ ತೆಗೆದುಕೊಟ್ಟಿದ್ದಾಳೆ. ಆದರೆ ಮಂಜುನಾಥ್ ಎಂದರೆ ಹತ್ತು ರೂಪಾಯಿಗಳನ್ನು ಸಹಾಯ ಮಾಡುವುದಿಲ್ಲ. ಊರಲ್ಲಿನ ಆಸ್ತಿ ಕೇಳಿದರೆ ’ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಅವ್ವ ಬೆದರಿಸುತ್ತಾಳೆ. ಅಧಿಕಾರಿಗಳಾಗಿರುವ ಚಿಕ್ಕಪ್ಪಂದಿರಿಗೆ ಇದೇ ನೆಪ ಬೇಕಿತ್ತು. ’ನೀನು ಬೇರೆ ಜಾತಿ ಹುಡುಗಿ ಮದುವೆಯಾಗಿ ನಮ್ಮ ಗೌರವ ಹಾಳು ಮಾಡಿದೆ’ ಎನ್ನುತ್ತಲೇ ತಮ್ಮ ಜೇಬು ಭದ್ರಪಡಿಸಿಕೊಂಡರು.
 
ಮನೆಯಲ್ಲಿ ಆರ್ಥಿಕ ಸ್ಥಿತಿ ಬಿಗಡಾಯಿಸಿದಾಗ ಮಂಜುನಾಥ್ ಮತ್ತು ನಿರ್ಮಲರಲ್ಲಿ ಕೋಪ, ತಾಪ, ಜಗಳ, ಮುನಿಸು ಮಾಮೂಲಿಯಾಗಿತ್ತು. ಇದು ಸ್ವಲ್ಪ ಹೊತ್ತು ಮಾತ್ರ. ಆಮೇಲೆ ಎಲ್ಲವೂ ಸರಿ ಹೋಗುತ್ತಿತ್ತು. ನಿರ್ಮಲ ಗಂಡನಿಗಾಗಿ ಮಾಂಸ ತಿನ್ನುವುದನ್ನು ಬಿಟ್ಟಿದ್ದಾಳೆ. ’ಅವರು ಕಷ್ಟ ಸುಖಗಳಿಗೆ ಚನ್ನಾಗಿ ಅಗುತ್ತಾರೆ, ಆ ಗುಣ ನನಗೆ ತುಂಬ ಇಷ್ಟ’ ಎಂದು ನಿರ್ಮಲ ಗಂಡನಿಗೆ ಪ್ರಮಾಣಪತ್ರ ನೀಡಿದರೆ, ’ಆಕೆ ಎಂತಹ ಸಂದರ್ಭದಲ್ಲಿಯೂ ಹೆದರುವುದಿಲ್ಲ. ಜವಾಬ್ದಾರಿಯನ್ನು ಚನ್ನಾಗಿ ನಿಭಾಯಿಸುತ್ತಾಳೆ’ ಎಂದು ಮಂಜುನಾಥ್ ಪತ್ನಿಗೆ ಪ್ರಮಾಣಪತ್ರವನ್ನು ನೀಡುತ್ತಾನೆ.

ಈಗಲೂ ಮಝುನಾಥ್ ಅಶೋಕಪುರಂನ ಐದನೇ ಕ್ರಾಸ್ ನಲ್ಲಿರುವ ಪತ್ನಿ ಮನೆಯಲ್ಲಿಯೇ ವಾಸವಿದ್ದಾನೆ. ಅಕ್ಕಪಕ್ಕದ ಮನೆಯವರು, ಕೇರಿಯವರಿಗೆ ಮಂಜುನಾಥ್ ಬಗ್ಗೆ ಗೌರವವಿದೆ. ಮಂಜುನಾಥ್ ಮತ್ತು ನಿರ್ಮಲ ಮೂಲಕ ಬಸವಣ್ಣ, ಅಂಬೇಡ್ಕರ್ ಒಟ್ಟಾಗಿದ್ದಾರೆ.
 
     
 
 
 
 
 
Copyright © 2011 Neemgrove Media
All Rights Reserved