|
|
|
ಸ್ತ್ರೀ ಸಂವೇದನೆ ಎಂಬ ಅವ್ಯಕ್ತ ಚರಿತ್ರೆ
ಡಾ.ಎನ್.ಜಗದೀಶ್ ಕೊಪ್ಪ
ಸ್ತ್ರೀ ಕುರಿತಾದ ಚಿಂತನೆ ಇತ್ತೀಚಿನ ದಿನಗಳಲ್ಲಿ ಒಂದು ಜ್ಞಾನಶಿಸ್ತುವಿನಂತೆ ಬೆಳೆದು ಬಂದಿದ್ದರೂ ಇವತ್ತಿನ ಜಾಗತೀಕರಣದ ಸಂದರ್ಭದಲ್ಲಿ ಮಹಿಳೆ ತನ್ನ ಲಿಂಗ ಅಸಮಾನತೆಯನ್ನು ಮೀರಿ ತನ್ನೊಳಗಿನ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತಿರುವಾಗ ಅವಳ ಕುರಿತಂತೆ ನಮ್ಮ ಗ್ರಹಿಕೆಯ ನೆಲೆಗಟ್ಟುಗಳು ಬದಲಾಗಬೇಕಾಗಿದೆ. ಏಕೆಂದರೆ ಜಾಗತೀಕರಣದ ಫಲವಾಗಿ ಸಂಭವಿಸಿದ ಸಾಂಸ್ಕೃತಿಕ ಪಲ್ಲಟಗಳು ತಂದಿಟ್ಟ ಅವಘಡಗಳಿಗೆ ಗುರಿಯಾದದ್ದೇ ಸ್ತ್ರೀ ಸಮುದಾಯ. ಚರಿತ್ರೆಯಲ್ಲಿ ದಾಸಿಯಂತೆ, ಜೀತದಾಳುವಿನಂತೆ ಬದುಕಿದ ಅದೇ ಮಹಿಳೆ ಇಂದಿನ ಆಧುನಿಕ ಸರಕು ಸಂಸ್ಕೃತಿಯ ಯುಗದಲ್ಲಿ ಮಾರಾಟದ ವಸ್ತುವಿನಂತೆ ಬಿಕರಿಯಾಗುತ್ತಿದ್ದಾಳೆ. ಲಿಂಗ ಭೇದದ ನೆಪದಲ್ಲಿ ನಾಲ್ಕು ಗೋಡೆಗಳ ನಡುವೆ ಬದುಕು ಸವೆಸುವಂತಹ ಅನಿವಾರ್ಯತೆ ಈಗಿಲ್ಲವಾದರೂ ಮುಕ್ತ ವಾತಾವರಣದ, ಪುರುಷ ಕೇಂದ್ರಿತ ನಾಗರೀಕ ಸಮಾಜದಲ್ಲಿ ಅನೇಕ ಅಗೋಚರ ಅಡೆ ತಡೆಗಳು ಇಂದಿಗೂ ಆಕೆಯನ್ನು ಬಾಧಿಸುತ್ತಿವೆ.
ಸ್ತ್ರೀ ಪರ ಚಿಂತನೆ ಎಂಬುದು ಈವರೆಗೆ ಅಕ್ಷರಸ್ಥ ಮಧ್ಯಮ ವರ್ಗದ ಮಹಿಳೆಯರ ಬೌದ್ಧಿಕ ಚರ್ಚೆ ಎಂಬಷ್ಟಕ್ಕೆ ಸೀಮಿತವಾಗಿದೆ. ಈ ಪರಿಧಿಯನ್ನು ದಾಟಿ ನಮ್ಮ ಚರ್ಚೆಯ ನೆಲೆಗಳನ್ನು ಮಹಿಳಾ ಸಮುದಾಯದ ಎಲ್ಲಾ ಸ್ತರಗಳಿಗೂ ವಿಸ್ತರಿಸುವ ಅಗತ್ಯವಿದೆ. ಅಕ್ಷರದಲ್ಲಿ ಹಿಡಿದಿಡಲಾಗದ ಅನಕ್ಷರಸ್ಥ ಹೆಣ್ಣು ಮಕ್ಕಳ ಮೂಕ ವೇದನೆ, ತಳ ಹಾಗೂ ಬುಡಕಟ್ಟು ಸಮುದಾಯದ ಸ್ತ್ರೀಯರ ಒಡಲಾಳದ ನೋವು ಹೀಗೆ ಅವ್ಯಕ್ತ ಚರಿತ್ರೆಯೊಂದು ಅನಾಮಿಕವಾಗಿ ಉಳಿದುಬಿಟ್ಟಿದೆ.
ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಜಾರಿಯಲ್ಲಿರುವ ಈ ಯುಗದಲ್ಲಿ ಎಲ್ಲವನ್ನೂ ಹಣದ ಮಾನದಂಡದಿಂದ ಅಳೆಯುತ್ತಿರುವಾಗ ಸ್ತ್ರೀ ಸಮುದಾಯ ಕುರಿತಂತೆ ನಮ್ಮ ಆಲೋಚನೆ ಮತ್ತು ಚರ್ಚೆಯ ನೆಲೆಗಟ್ಟುಗಳು ಮತ್ತಷ್ಟು ಸದೃಢವಾಗಬೇಕಿದೆ. ಇದಕ್ಕಿರುವ ಅಡ್ಡಿ ಆತಂಕವೆಂದರೆ ನಾವು ಬೇಡವೆಂದರೂ ನಮ್ಮನ್ನಾವರಿಸಿಕೊಂಡಿರುವ ಜಾಗತೀಕರಣ ವ್ಯವಸ್ಥೆ.
ಕಳೆದ ಎರಡು ದಶಕಗಳಿಂದ ವಿಶ್ವದಾದ್ಯಂತ ಜಾಗತೀಕರಣ ಕುರಿತಂತೆ ಗಂಭೀರ ಚರ್ಚೆ ನಡೆಯುತ್ತಿದ್ದು ನಾನಾ ರೀತಿಯಲ್ಲಿ ಇದನ್ನು ವ್ಯಾಖ್ಯಾನಿಸಲಾಗುತ್ತಿದೆ. ಕೆಲವೊಮ್ಮೆ ಇದರ ಬಗ್ಗೆ ಮಿಥ್ಯೆಯೇ ಸೃಷ್ಟಿಯಾಗಿದೆ. ಒಟ್ಟಾರೆ ಜಾಗತೀಕರಣವೆಂಬುದು ಯುಗದ ಚರ್ಚೆಯಾಗಿ ಮಾರ್ಪಟ್ಟಿರುವುದು ಸುಳ್ಳಲ್ಲ. ಅದೇ ರೀತಿ ಈ ವ್ಯವಸ್ಥೆಯು ಯಾವುದೇ ಕೇಂದ್ರವಿಲ್ಲದೆ ಅಗೋಚರವಾಗಿ ಏಕಕಾಲಕ್ಕೆ ಜಗತ್ತಿನೆಲ್ಲೆಡೆ ಹರಡುತ್ತಿರುವುದನ್ನು ತಳ್ಳಿಹಾಕಲಾಗದು. ಜಾಗತೀಕರಣಕ್ಕೆ ಯಾವುದೇ ಒಂದು ಶಕ್ತಿ ಅಥವಾ ವಿಶೇಷ ಸವಲತ್ತುಗಳ ಸ್ಥಳಗಳಿಲ್ಲ ಎಂದು ಇದರ ಪ್ರತಿಪಾದಕರಾದ ಮೈಕಲ್ ಹಾರ್ಡ್ ಮತ್ತು ಆಂಟೋನಿಯಾ ನೇಗ್ರಿ ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವ ಬ್ಯಾಂಕ್ ೧೯೯೧ರ ತನ್ನ ವಾರ್ಷಿಕ ವರದಿಯಲ್ಲಿ ಕಮ್ಯೂನಿಸ್ಟ್ ಪ್ರಣಾಳಿಕೆಯ ಕೆಲವು ಸಾಲುಗಳನ್ನು ಎತ್ತಿಕೊಂಡು ಜಾಗತೀಕರಣದ ಬಗ್ಗೆ ಹೀಗೆ ವ್ಯಾಖ್ಯಾನಿಸಿತ್ತು. ಉತ್ಪಾದನೆಯಲ್ಲಿ ಸತತವಾಗಿ ಕ್ರಾಂತಿಯಾಗುವುದು, ಸಾಮಾಜಿಕ ಪರಿಸ್ಥಿತಿ ಅಡೆ ತಡೆಗಳಿಲ್ಲದೆ ವ್ಯತ್ಯಾಸವಾಗುವುದು, ನಿರಂತರ ಅನಿಶ್ಚಿತತೆ ಹಾಗೂ ಕ್ಷೋಭೆ ಉಂಟಾಗುತ್ತಿದ್ದು ಇವುಗಳ ಪರಿಣಾಮದಿಂದ ಉಂಟಾಗುವ ಎಲ್ಲಾ ಸ್ಥಿರ ಹಾಗೂ ಘನೀಭೂತ ಸಂಬಂಧಗಳು ಅವುಗಳೊಂದಿಗೆ ಬರುವ ಅಭಿಪ್ರಾಯ, ಪೂರ್ವಾಗ್ರಹಗಳು ತೊಡೆದು ಹಾಕಲ್ಪಡುತ್ತವೆ. ಹೊಸದಾಗಿ ರೂಪುಗೊಂಡವು ಸ್ಥಿರವಾಗುವ ಮುನ್ನ ಹಳತಾಗಿ ಹೋಗುತ್ತವೆ. ಘನ ಸ್ಥಿತಿಯಲ್ಲಿ ಇರುವಂತಹವು ಗಾಳಿಯಲ್ಲಿ ಕರಗಿ ಹೋಗುತ್ತವೆ. ಯೋಜನಾಬದ್ಧ ಆರ್ಥಿಕತೆಯಿಂದಾಗಿ ಮಾರುಕಟ್ಟೆಯ ಆರ್ಥಿಕ ವ್ಯವಸ್ಥೆ ಸ್ಥಿತ್ಯಂತರವಾಗುತ್ತದೆ. ಹಾಗಾಗಿ ಜಾಗತೀಕರಣ ಪ್ರಕ್ರಿಯೆ ಎಂಬುದು ಯಾವುದೇ ಗೋಚರ ಹಸ್ತದ ಪ್ರಭಾವವಿಲ್ಲದ ಅವಿಭಾಜ್ಯ ಮೂಲ ಪ್ರಕ್ರಿಯೆ.
|
|
ವಿಶ್ವ ಬ್ಯಾಂಕ್ನ ಈ ವ್ಯಾಖ್ಯಾನವನ್ನು ಅವಲೋಕಿಸಿದಾಗ ಜಾಗತೀಕರಣಕ್ಕೆ ಯಾವುದೇ ಪರ್ಯಾಯವಿಲ್ಲ ಎಂಬ ಸಂದೇಶ ಸಾರುವ ಪ್ರಯತ್ನ ಇದಾಗಿದೆ ಎನ್ನಬಹುದು. ಇವೆಲ್ಲವೂ ಕ್ರಿ.ಶ. ೧೫೦೦ ರಿಂದ ೧೮೦೦ ರವರೆಗೆ ನಡೆದ ಐರೋಪ್ಯ ರಾಷ್ಟ್ರಗಳ ವಿಸ್ತರಣೆ ಹಾಗೂ ೧೮೦೦ರಿಂದ ೧೯೫೦ರವರೆಗೆ ನಡೆದ ಸಾಮ್ರಾಜ್ಯಶಾಹಿಗಳ ವಿಸ್ತರಣೆಯ ಮುಂದುವರಿದ ಅಧ್ಯಾಯವೆನ್ನಬಹುದು. ಅಂದು ಸಾಮ್ರಾಜ್ಯಶಾಹಿ ಯುಗದಲ್ಲಿ ಈಸ್ಟ್ ಇಂಡಿಯಾ ಕಂಪನಿಯಂತಹುಗಳ ಮೂಲಕ ಬಂಡವಾಳಶಾಹಿ ವ್ಯವಸ್ಥೆ ವ್ಯಾಪಕವಾಗಿ ಹರಡುತ್ತಿತ್ತು. ಈಗ ಇದು ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಹರಡುತ್ತಿದೆ ಅಷ್ಟೆ.
ಜಾಗತೀಕರಣ ವ್ಯವಸ್ಥೆಯಲ್ಲಿ ಮುಕ್ತ ವ್ಯಾಪಾರವನ್ನು ನೆಪವಾಗಿರಿಸಿಕೊಂಡು ಉಪಭೋಗ ಸಂಸ್ಕೃತಿಯನ್ನು ವೈಭವೀಕರಿಸುವ ಹಾಗೂ ದೈಹಿಕ ಲೋಲುಪತೆಯೇ ಮುಖ್ಯವಾಗಿರುವ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರತೊಡಗಿರುವುದು ಸಾಂಸ್ಕೃತಿಕ ಆಕ್ರಮಣವಲ್ಲದೆ ಬೇರೇನಲ್ಲ. ಈ ಸಾಂಸ್ಕೃತಿಕ ದಾಳಿಯಿಂದ ಅನೇಕ ಸಮುದಾಯಗಳು, ಬುಡಕಟ್ಟು ಜನಾಂಗ ಮತ್ತು ನಮ್ಮ ಪೂರ್ವಿಕರು ಪರಂಪರಾಗತವಾಗಿ ಪೋಷಿಸಿಕೊಂಡು ಬಂದಿದ್ದ ದೇಶಿ ಜ್ಞಾನ, ಅವಿಭಕ್ತ ಕುಟುಂಬ ಪದ್ಧತಿ, ಸಮುದಾಯಿಕ ಪ್ರಜ್ಞೆ, ಸಾಮರಸ್ಯ ಮತ್ತು ಮಾನವೀಯ ಸಂಬಂಧಗಳು ನಶಿಸುತ್ತಾ ನೆಲ ಜಲ, ಪರಿಸರ ಮಾಲಿನ್ಯಗೊಂಡು ಜಗತ್ತೇ ಒಂದು ಹಳ್ಳಿ ಎಂಬ ಪರಿಕಲ್ಪನೆಯ ನೆಪದಲ್ಲಿ ವರ್ತಮಾನದ ಬದುಕು ಗೊಂದಲದ ಗೂಡಾಗಿದೆ.
ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್ ಒಮ್ಮೆ ಭಾಷಣದಲ್ಲಿ ಜಾಗತೀಕರಣದ ಬಗ್ಗೆ ಪ್ರತಿಕ್ರಿಯಿಸುತ್ತಾ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಅಸಮಾನತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾ ಶ್ರೀಮಂತ ರಾಷ್ಟ್ರಗಳು ಮುಕ್ತ ಮಾರುಕಟ್ಟೆಯ ಬಗ್ಗೆ ಗುಣಗಾನ ಮಾಡುವುದು ಅಥವಾ ಆ ಕುರಿತು ಬಡ ರಾಷ್ಟ್ರಗಳಿಗೆ ಬೋಧನೆ ಮಾಡುವುದು ಕಪಟ ಆಚರಣೆಯಾಗಿದೆ. ಸ್ವತಃ ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರಗಳಿಗೆ ತಮ್ಮ ಮಾರುಕಟ್ಟೆಯನ್ನು ತೆರೆದಿಡದೆ ತೃತೀಯ ಜಗತ್ತಿನ ರಾಷ್ಟ್ರಗಳ ಮಾರುಕಟ್ಟೆಗೆ ಬಾರಿ ರಿಯಾಯಿತಿಯಿಂದ ಕೂಡಿದ ತಮ್ಮ ಸರಕು, ಸೇವೆ, ಸಾಮಗ್ರಿಗಳನ್ನು ತಂದು ರಾಶಿ ಹಾಕಿದರೆ ಈ ಪೈಪೋಟಿಯಲ್ಲಿ ಬಡ ರಾಷ್ಟ್ರಗಳು ಬದುಕುವುದು ಕಷ್ಟವಾಗುತ್ತದೆ. ಶ್ರೀಮಂತ ರಾಷ್ಟ್ರಗಳು ತಮ್ಮ ಉತ್ಪಾದನೆ ಮತ್ತು ಉಪಭೋಗದ ವಿಧಾನವನ್ನು ಬದಲಾಯಿಸದೆ ಜಾಗತಿಕ ಪರಿಸರವನ್ನು ರಕ್ಷಿಸಲು ಬಡರಾಷ್ಟ್ರಗಳಿಗೆ ಒತ್ತಾಯ ಮಾಡಿದರೆ ಅದು ಸರ್ವಾಧಿಕಾರದ ಮನೋಭಾವ ಅಷ್ಟೆ ಎಂದಿದ್ದರು.
ನಿಜವಾದ ಅಭಿವೃದ್ಧಿಯ ಕಲ್ಪನೆಯ ಕೂಸುಗಳಾದ ಹಸಿವು ಬಡತನ ಅಸೃಶ್ಯತೆ, ತಾರತಮ್ಯ, ನಿರುದ್ಯೋಗ, ಲಿಂಗಬೇಧ ಮುಂತಾದ ಶೋಷಣೆಗಳನ್ನು ಹೋಗಲಾಡಿಸಲಿ. ಇವತ್ತಿಗೂ ಸಾಕ್ಷರತೆ ಒಂದು ಪ್ರಬಲವಾದ ಅಸ್ತ್ರ. ಇಂದಿನ ಖಾಸಗೀಕರಣದ ಸ್ಥಿತಿಯಲ್ಲಿ ಶಿಕ್ಷಣವೆಂಬುದು ದಂಧೆಯಾಗಿರುವಾಗ ಸಾಕ್ಷರತೆಯನ್ನು ಸಮರ್ಥವಾಗಿ ಜಾರಿಗೆ ತರುವಲ್ಲಿ ನಮ್ಮ ಆಡಳಿತಶಾಹಿ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಇಂತಹ ವ್ಯವಸ್ಥೆಗೆ ನೇರ ಬಲಿಪಶುವಾಗುವವರು ಅನಕ್ಷರಸ್ಥರು ಮತ್ತು ಮಹಿಳೆಯರು.
ಶಿಕ್ಷಣ, ಆರೋಗ್ಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಬಡತನ ನಿರ್ಮೂಲನೆ ಜೊತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಎಲ್ಲಾವರ್ಗದ ಜನತೆ ಮುಕ್ತವಾಗಿ ಪಾಲ್ಗೊಳ್ಳಬೇಕಾಗಿದೆ. ಈ ಕಾರಣಕ್ಕಾಗಿಯಾದರೂ ದೇಶ, ಭಾಷೆ, ಸಂಸ್ಕೃತಿ ಅವುಗಳ ಅಗತ್ಯ ಮತ್ತು ಆಶಯಗಳ ಕುರಿತಂತೆ ಮರುಚಿಂತನೆ ಜರೂರಾಗಿ ಜರುಗಬೇಕಾಗಿದೆ. ಜಾಗತೀಕರಣ ಕುರಿತಂತೆ ಈ ಸಂಕ್ಷಿಪ್ತ ಹಿನ್ನೆಲೆಯಲ್ಲಿ ವರ್ತಮಾನದ ಮಹಿಳೆ, ಆಕೆಯ ಸ್ಥಿತಿ ಗತಿ, ಸಂವೇದನೆ ಕುರಿತು ಹೇಳುವುದಾದರೆ ಆಕೆಯ ಪಾತ್ರ ಬದಲಾಗಿಲ್ಲ ದೃಶ್ಯಗಳಷ್ಟೇ ಬದಲಾಗಿವೆ ಎನ್ನಬಹುದು. ವಿಶ್ಲೇಷಣೆಗೂ ನಿಲುಕದ ಅನೇಕ ಸಾಮಾಜಿಕ ಸ್ಥಿತ್ಯಂತರ ಮತ್ತು ಸಾಂಸ್ಕೃತಿಕ ಪಲ್ಲಟಗಳು ನಮ್ಮನ್ನು ದಿಗ್ಭ್ರಮೆಗೆ ದೂಡಿವೆ. ಈ ಹಿನ್ನೆಲೆಯಲ್ಲಿ ಆಧುನಿಕ ಮಹಿಳೆಯ ಸಂವೇದನೆ, ಸಂಕಟಗಳನ್ನು ಗ್ರಹಿಸುವುದೂ ಕೂಡ ಸವಾಲಿನ ವಿಷಯ.
ಜಾಗತೀಕರಣ ಈ ದೇಶಕ್ಕೆ ಕಾಲಿಡುವ ಮುನ್ನ ಎರಡು ದಶಕಗಳ ಹಿಂದಿನ ಭಾರತದ ಸಾಮಾಜಿಕ ವ್ಯವಸ್ಥೆ, ಕಟ್ಟು ಪಾಡುಗಳು, ರೂಢಿ ಸಂಪ್ರದಾಯ, ಕೌಟುಂಬಿಕ ವ್ಯವಸ್ಥೆ, ಸಾಂಸ್ಕೃತಿಕ ಆಚರಣೆ ಇವೆಲ್ಲವೂ ನಮ್ಮ ನಿರೀಕ್ಷೆ ಮೀರಿ ಪಲ್ಲಟಗೊಂಡಿವೆ. ಗಂಡು ಮತ್ತು ಹೆಣ್ಣು ಕುರಿತಂತೆ ಈವರೆಗೆ ನಾವು ಗ್ರಹಿಸಿದ ನಿಲುವುಗಳು, ನಿರ್ವಚಿಸಿಕೊಂಡು ಬಂದ ಕ್ರಮವನ್ನು ಮರುಚಿಂತನೆ ಮಾಡುವಂತೆ ಪ್ರೇರೇಪಿಸಿದೆ. ನಮ್ಮ ಆಹಾರ, ಉಡುಪು, ನಾವು ಬಳಸುವ ಗೃಹಪಯೋಗಿ ವಸ್ತುಗಳಿಂದ ಹಿಡಿದು ನಮ್ಮ ನಡೆ ನುಡಿಗಳನ್ನು ಬಹು ರಾಷ್ಟ್ರೀಯ ಕಂಪನಿಗಳು ಮಾಧ್ಯಮಗಳ ಮೂಲಕ ನಮ್ಮನ್ನು ನಿಯಂತ್ರಿಸುತ್ತಿವೆ. ಜೊತೆಗೆ ನಮ್ಮ ಆಲೋಚನಾ ಕ್ರಮದ ದಿಕ್ಕನ್ನೇ ಬದಲಾಯಿಸಿವೆ. ಉದಾರೀಕರಣದಿಂದ ಖಾಸಗಿ ವಲಯದಲ್ಲಿ ಸೃಷ್ಟಿಯಾದ ಉದ್ಯೋಗದ ಅವಕಾಶ ಇಂದಿನ ತಲೆಮಾರಿಗೆ ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಸ್ವಾಭಿಮಾನವನ್ನು ಜೊತೆಗೆ ಸ್ವೇಚ್ಛಾಚಾರವನ್ನು ತಂದುಕೊಟ್ಟಿತು. ಇದರಿಂದಾಗಿ ನಮ್ಮ ಸಾಮಾಜಿಕ ಕಟ್ಟು ಪಾಡುಗಳು ಛಿದ್ರಗೊಂಡವು.
ಆಧುನಿಕ ಭಾರತದ ನಗರಗಳ ಜೀವನ ಕ್ರಮ ಮತ್ತು ಅಲ್ಲಿ ದೊರೆಯುತ್ತಿರುವ ಶಿಕ್ಷಣ, ಉದ್ಯೋಗಾವಕಾಶಗಳ ಪ್ರಭಾವದಿಂದ ಹೆಣ್ಣಿನ ವಿವಾಹದ ವಯಸ್ಸು ಮುಂದೂಡಲ್ಪಟ್ಟಿದೆ. ಅದೇ ರೀತಿ ಧರ್ಮ ಮತ್ತು ಜಾತಿಯ ಚೌಕಟ್ಟನ್ನು ಮೀರಿ ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ ಕೂಡ ಆಧುನಿಕ ತಲೆಮಾರಿಗೆ ಲಭಿಸಿದೆ. ಇಂದಿನ ದಿನಗಳಲ್ಲಿ ನಗರಗಳಲ್ಲಷ್ಟೇ ಅಲ್ಲ ಹಳ್ಳಿಗಳಲ್ಲೂ ಹೆಣ್ಣಿನ ಶೀಲವೆಂಬುವುದು ಪವಿತ್ರ ಎಂಬ ಪರಿಕಲ್ಪನೆ ಉಳಿದಿಲ್ಲ. ವಿವಾಹಕ್ಕೆ ಮುನ್ನ ಲೈಂಗಿಕ ಅನುಭವ, ದಾಂಪತ್ಯ ಬದುಕಿನಾಚೆಗಿನ ಸಂಬಂಧ ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಇವೆಲ್ಲವನ್ನೂ ಮೀರಿ ಕುಟುಂಬ ಅಥವಾ ವಿವಾಹ ಬಂಧನಕ್ಕೆ ಒಳಪಡದೆ ಒಟ್ಟಾಗಿ ಬದುಕುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗತೊಡಗಿದೆ. ಇದರ ಜೊತೆಗೆ ಸ್ವತಂತ್ರವಾಗಿ ಬದುಕುತ್ತಿರುವ ಹೆಣ್ಣೊಬ್ಬಳು ತಾನು ಇಷ್ಟ ಪಟ್ಟ ವ್ಯಕ್ತಿಯೊಬ್ಬನಿಂದ ಮಗುವನ್ನು ಪಡೆದು ತಾಯಿಯಾಗಿ ದಾಂಪತ್ಯದ ಹಂಗಿಲ್ಲದೆ ಬದುಕುವ ಅವಕಾಶವನ್ನು ಸಮಾಜ ಕಲ್ಪಿಸಿಕೊಟ್ಟಿದೆ. ಇಂತಹ ಹೆಣ್ಣುಮಕ್ಕಳ ಕುರಿತಂತೆ ನಮ್ಮಗಳ ದೃಷ್ಟಿಕೋನವೂ ಬದಲಾಗಿದೆ.
ಜಾಗತೀಕರಣದ ಅತಿ ದೊಡ್ಡ ಹೊಡೆತವೆಂದರೆ ನಮ್ಮ ಅವಿಭಕ್ತ ಕುಟುಂಬಗಳ ವಿನಾಶ. ಈ ವ್ಯವಸ್ಥೆಯ ಬಗ್ಗೆ ಏನೇ ದೋಷಗಳಿರಲಿ ಹೆಣ್ಣು ಮಕ್ಕಳಿಗೆ ಹಾಗೂ ವೃದ್ಧ ತಂದೆತಾಯಿಗಳಿಗೆ ಈ ವ್ಯವಸ್ಥೆಯಡಿ ರಕ್ಷಣೆ ಇತ್ತು. ಪ್ರಸ್ತುತ ಚಾಲ್ತಿಯಲ್ಲಿರುವ ಕುಟುಂಬ ವ್ಯವಸ್ಥೆಯಲ್ಲಿ ಪುರುಷನೇ ಯಜಮಾನ ಎಂಬ ಮಾತು ಗೇಲಿಯ ಸಂಗತಿಯಾಗಿದೆ. ಪುರುಷನ ಸಮನಾಗಿ ದುಡಿಯುವ ಮಹಿಳೆ ಕೂಡ ಕುಟುಂಬ ನಿರ್ವಹಣೆಯ ಸಮಾನ ಹೊಣೆ ಹೊತ್ತಿದ್ದಾಳೆ. ಸ್ತ್ರೀ ಪುರುಷರಿಬ್ಬರ ದುಡಿತದ ಪರಿಣಾಮ ಮಕ್ಕಳ ಪಾಲನೆ ಪೋಷಣೆ ತ್ರಾಸದಾಯಕವಾಗಿದ್ದು ಕೆಲವು ದಂಪತಿಗಳು ಒಂದೇ ಮಗುವಿಗೆ ಕಟ್ಟು ಬಿದ್ದರೆ, ಹಲವರು ಮಕ್ಕಳಿಲ್ಲದ ಬದುಕನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರ ಸಾಮಾಜಿಕ ಪರಿಣಾಮ ದೂರಗಾಮಿಯಾಗಿದ್ದು ನಂತರದ ದಿನಗಳಲ್ಲಿ ಈ ದಂಪತಿಗಳ ಭವಷ್ಯದ ಬದುಕು ಹಾಗೂ ರಕ್ಷಣೆ ಯಾರದು ಎಂಬುದಕ್ಕೆ ಕಾಲವೇ ಉತ್ತರಿಸಬೇಕು.
ಈಗಾಗಲೇ ನಮ್ಮ ದೇಶದಲ್ಲಿ ದುಡಿಯುವ ಮಕ್ಕಳ ಜೊತೆ ಬದುಕುವ ಅವಕಾಶದಿಂದ ವಂಚಿತರಾದ ವೃದ್ಧ ತಂದೆ ತಾಯಿಗಳ ಯಾತನಾಮಯ ಬದುಕು ಜ್ವಲಂತ ಸಮಸ್ಯೆಯಾಗಿದೆ. ಇತ್ತೀಚೆಗಷ್ಟೇ ನಮ್ಮ ಕೇಂದ್ರ ಸರಕಾರ ೬೦ವರ್ಷ ಮೇಲ್ಪಟ್ಟ ವೃದ್ಧರನ್ನು ಸಾಕುವ ಹೊಣೆಯನ್ನು ಅವರ ಮಕ್ಕಳಿಗೆ ವರ್ಗಾಯಿಸಿ ಕಾಯ್ದೆ ರೂಪಿಸಿದೆ. ವರ್ತಮಾನದ ನಗರಗಳ ಸಂಕೀರ್ಣವಾದ ವಸತಿ ವ್ಯವಸ್ಥೆಯ ಸಂಸಾರಗಳಲ್ಲಿ ಪೋಷಕರನ್ನು ಇಟ್ಟುಕೊಂಡು ಬದುಕುವುದು ಮಕ್ಕಳ ಪಾಲಿಗೆ ದುಸ್ತರದ ಸಂಗತಿ.
ಇವೆಲ್ಲವೂ ವ್ಯಕ್ತಿಗತ ಹಾಗೂ ಕೌಟುಂಬಿಕ ಸಮಸ್ಯೆಯಾದರೆ ಇದರಾಚೆಗಿನ ಸಾಮಾಜಿಕ ಸಮಸ್ಯೆಯೊಂದು ನಮಗರಿವಿಲ್ಲದಂತೆ ನಮ್ಮನ್ನಾವರಿಸಿಕೊಂಡಿದೆ. ಜಾಗತೀಕರಣದ ಅತಿ ದೊಡ್ಡ ಕೊಡುಗೆ ಎಂದರೆ ಇದರಿಂದ ಸೃಷ್ಟಿಯಾದ ನವ ಮಧ್ಯಮ ವರ್ಗ ಹಾಗೂ ಅವರಲ್ಲಿ ಹುಟ್ಟಿಕೊಂಡ ಕೊಳ್ಳುಬಾಕ ಸಂಸ್ಕೃತಿ. ಸರಳವಾದ ಜೀವನ ಮತ್ತು ನೈಸರ್ಗಿಕ ಕೊಡುಗೆಗಳಾದ ನೆಲ-ಜಲ-ವಾಯು ಇವುಗಳ ಮಿತವಾದ ಬಳಕೆ ಕುರಿತ ಪರಿಕಲ್ಪನೆಗಳು ನವ ಮಧ್ಯಮ ವರ್ಗದ ಪಾಲಿಗೆ ಅಪಮಾನಕಾರ ಸಂಗತಿಗಳು. ಇವರ ಆಹಾರ, ಪಾನೀಯ, ಉಡುಪು ಪ್ರಸಿದ್ಧ ಬ್ರಾಂಡ್ಗಳ ಉತ್ಪನ್ನಗಳೇ ಆಗಿರಬೇಕು. ಜೊತೆಗೆ ಇವರು ಬಳಸುವ ಮೊಬೈಲ್, ಕಂಪ್ಯೂಟರ್, ಟಿ.ವಿ. ಕಾರು ಇವುಗಳೆಲ್ಲಾ ಪ್ರತಿ ವರ್ಷ ಬದಲಾಗುತ್ತಿರಬೇಕು. ಉಳ್ಳವರ ಇಂತಹ ಹವ್ಯಾಸದಿಂದಾಗಿ ಸಮಕಾಲೀನ ನಗರ ಜೀವನ ಬಡವರ ಪಾಲಿಗೆ ನರಕಯಾತನೆಯಾಗಿದೆ. ಇದರಿಂದಾಗಿ ಈಗ ಭಾರತ ಒಂದು ದೇಶವಾಗಿ ಉಳಿದಿಲ್ಲ. ಉಳ್ಳವರ ಭಾರತ ಒಂದು, ನರಳುವವರ ಭಾರತ ಇನ್ನೊಂದು. ಹೀಗೆ ಎರಡು ಭಾರತಗಳು ಸೃಷ್ಟಿಯಾಗಿದ್ದು ಎಲ್ಲರ ಗಮನ ಮತ್ತು ಗುರಿ ಉಳ್ಳವರ ಭಾರತವೇ ಆಗಿದೆ. ನರಳುವ ಭಾರತದಲ್ಲಿನ ಜನ ರಾಜಕಾರಣಿಗಳ ಪಾಲಿಗೆ ಜೀವಂತ ಮತಗಳಾಗಿ ಬದುಕುತ್ತಿದ್ದಾರೆ ಅಷ್ಟೆ.
ಔದ್ಯೋಗಿಕರಣದ ಒತ್ತಡ ಹಾಗೂ ರಭಸದಿಂದ ಬೆಳೆಯುತ್ತಿರುವ ನಗರೀಕರಣ ಇವುಗಳ ಪರಿಣಾಮ ನಮ್ಮ ಫಲವತ್ತಾದ ಕೃಷಿ ಭೂಮಿಗಳೆಲ್ಲ ರಿಯಲ್ ಎಸ್ಟೇಟ್ ಏಜೆಂಟರ ಪಾಲಾಗಿವೆ. ಕುಂಠಿತಗೊಂಡ ಆಹಾರ, ಬೇಳೆ, ತರಕಾರಿ ಇವುಗಳ ಉತ್ಪಾದನೆ ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಬಡವರ ಬದುಕು ಮೂರಾಬಟ್ಟೆಯಾಗಿದೆ. ೧೫ ರೂ ಕೊಟ್ಟು ಒಂದು ಲೀಟರ್ ನೀರು ಖರೀದಿಸುವ ಮಧ್ಯಮವರ್ಗದ ಜನಾಂಗಕ್ಕೆ ಅದೇ ಮೌಲ್ಯಕ್ಕೆ ಗ್ರಾಮಾಂತರ ಪ್ರದೇಶದಲ್ಲಿ ೧ ಲೀಟರ್ ಹಾಲು ದೊರೆತರೂ ಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿ ಜನರಿದ್ದಾರೆ ಎಂಬ ಕಟು ಸತ್ಯ ಅರ್ಥವಾಗಲಾರದು. ಇಂತಹ ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳ ನೇರ ಪರಿಣಾಮ ಬೀರುವುದು ಹೆಣ್ಣಿಗೆ ಹೊರತು ಗಂಡಿಗಲ್ಲ. ಸಮಾಜದ ಅಡಿಪಾಯದಂತಿರುವ ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಣ್ಣೊಬ್ಬಳು ಗೃಹಿಣಿಯಾಗಿ, ತಾಯಿಯಾಗಿ, ಸೊಸೆಯಾಗಿ, ಸಹೋದರಿಯಾಗಿ ಹೀಗೆ ನಿರ್ವಹಿಸುವ ಪಾತ್ರಗಳು ಹಲವಾರು. ಉಳ್ಳವರ ಭಾರತವಾಗಲಿ, ನರಳುವವರ ಭಾರತವಾಗಲಿ ಅಲ್ಲಿ ಹೆಣ್ಣೊಬ್ಬಳು ಅನುಭವಿಸುವ ಯಾತನೆಗಳು ವಿಭಿನ್ನವಾದರೂ ನೋವು ಮಾತ್ರ ಒಂದೆ. ಇಂತಹ ಸ್ಥಿತಿಯಲ್ಲಿ ಆಧುನಿಕ ಹೆಣ್ಣಿನ ಸಂವೇದನೆ ಕುರಿತಂತೆ ವಿಶ್ಲೇಸಿಸುವುದು ಕಷ್ಟಕರವಾದ ಸಂಗತಿ.
ಇಂಗ್ಲೀಷ್ ಭಾಷೆಯಲ್ಲಿನ ಸೆನ್ಸಿಬಿಲಿಟಿ ಎಂಬ ಶಬ್ಧ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಸಂವೇದನೆಯಾಗಿ ಚಾಲ್ತಿಯಲ್ಲಿದ್ದರೂ ಅದನ್ನು ವಿವಿಧ ದೃಷ್ಟಿಕೋನಗಳಿಂದ ಬಳಸಲಾಗುತ್ತಿದೆ. ಮುಸ್ಲಿಂ, ದಲಿತ, ಸ್ತ್ರೀ ಸಂವೇದನೆ ಎಂಬರ್ಥದಲ್ಲಿ ಬಳಸಲಾಗುತ್ತಿದ್ದು ಇವತ್ತಿನ ಸಾಹಿತ್ಯ ಸೃಷ್ಟಿಯ ಸಂದರ್ಭದಲ್ಲಿ ಇದು ಅರ್ಥ ಕಳೆದುಕೊಳ್ಳುತ್ತಿದೆ. ತಮಿಳುನಾಡು ಮೂಲದ ಪೂರ್ಣ ಪ್ರಮಾಣದಲ್ಲಿ ಹೆಣ್ಣು-ಗಂಡು ಅಲ್ಲದ ರೇವತಿ ಎಂಬಾಕೆಯ ಆತ್ಮ ಕತೆ ಎ ಟ್ರೂ ಸ್ಟೋರಿ ಎಬೌಟ್ ಮೈ ಸೆಲ್ಫ್ ಎಂಬ ಕೃತಿಯನ್ನು ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದ್ದು ಈ ಕೃತಿಯಲ್ಲಿ ಹಿಜಡಾ ಸಮುದಾಯ ಅನುಭವಿಸುವ ಯಾತನೆ, ಸಂಕಟಗಳು ಓದುಗರನ್ನು ಬೆಚ್ಚಿ ಬೀಳಿಸುತ್ತವೆ. ಈ ಕೃತಿಯ ಸಂವೇದನೆಯನ್ನು ನಾವು ಯಾವ ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು?. ಇದು ಪುರುಷ ಸಂವೇದನೆಯೊ ಅಥವಾ ಸ್ತ್ರೀ ಸಂವೇದನೆಯೊ? ಇದೊಂದು ಉತ್ತರವಿಲ್ಲದ ಪ್ರಶ್ನೆ.
ಪುರುಷ ಪ್ರಧಾನ ಸಂಸ್ಕೃತಿಯಲ್ಲಿ ಗಂಡು ಕೇಂದ್ರ ಸ್ಥಾನದಲ್ಲಿ ನಿಂತುಕೊಂಡು ತನ್ನನ್ನು ನಾನು ಎಂದು ನಿರ್ವಚಿಸಿಕೊಂಡುಬಂದ ಹಿನ್ನೆಲೆಯಲ್ಲೇ ಸ್ತ್ರೀ ಸಂವೇದನೆಯೊಂದು ಕವಲೊಡೆಯಲು ಕಾರಣವಾಯಿತು. ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಜಗತ್ತಿನ ಎಲ್ಲ ಸೂತ್ರಗಳನ್ನು ಪುರುಷ ಜಗತ್ತು ತನ್ನ ಕೈಯಲ್ಲಿರಿಸಿಕೊಂಡು ಬಂದ ಕಾರಣಕ್ಕಾಗಿಯೇ ನಮ್ಮ ನಾಗರೀಕತೆ, ಪುರಾಣ, ಇತಿಹಾಸದ ತುಂಬ ರಾಜ ಮಹಾರಾಜರುಗಳ ಜಯಾಪಜಯ ಯುದ್ಧಗಳ ಕಥನ, ಅರಮನೆಯ ವೈಭವ ತುಂಬಿ ತುಳುಕಿತೆ ಹೊರತು ಅರಮನೆಯೊಳಗಿನ ಮೌನ ಜೀವಿಗಳ ಸಂವೇದನೆಗೆ ಇತಿಹಾಸದ ಪುಟಗಳಲ್ಲಿ ಸ್ಥಾನ ದೊರಕಲೇ ಇಲ್ಲ. ಈ ಕಾರಣಕ್ಕಾಗಿಯೇ ಸ್ತ್ರೀ ಸಂವೇದನೆಯ ನೆಲೆಗಟ್ಟಿನಲ್ಲಿ ನಮ್ಮ ಪುರಾಣ, ಇತಿಹಾಸಗಳ ದ್ರೌಪತಿ, ಕುಂತಿ, ಊರ್ಮಿಳೆ, ಶಾಕುಂತಲಾ, ಅಹಲ್ಯೆ, ಸೀತೆ ಮುಂತಾದವರು ಮರು ವಿಮರ್ಶೆಗೆ ಒಳಪಡುತ್ತಿದ್ದಾರೆ.
ಹೆಣ್ಣು ಗಂಡು ನಡುವಿನ ಜೈವಿಕತೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜಗತ್ತಿನ ಅನುಭವದ ಭಿನ್ನತೆಯಿಂದಾಗಿ ಅವರ ಸಂವೇದನೆಗಳಲ್ಲಿ ವಿಭಿನ್ನತೆ ಇರುವುದು ಸಹಜ. ಗಂಡನಷ್ಟು ಸಲೀಸಾಗಿ ಹೆಣ್ಣೊಬ್ಬಳು ತನ್ನ ಗ್ರಹಿಕೆಗಳನ್ನು ನೇರವಾಗಿ ಅಭಿವ್ಯಕ್ತಿಗೊಳಿಸಲು ಸಾಧ್ಯವಾಗದ ಸಾಂಸ್ಕೃತಿಕ ಒತ್ತಡಗಳಿಂದ ನರಳಿದ್ದಾಳೆ. ಹಾಗಾಗಿ ಈವರೆಗೆ ಸ್ತ್ರೀ ಸಂವೇದನೆಯು ಅದು ಕಾವ್ಯವಿರಲಿ, ಕಥನವಿರಲಿ, ರೂಪಕ ಅಥವಾ ಪ್ರತಿಮೆಗಳ ಮೂಲಕ ಅಭಿವ್ಯಕ್ತಿಗೊಂಡಿದೆ.
ವರ್ತಮಾನದ ಜಗತ್ತಿನಲ್ಲಿ ಮಹಿಳಾ ಲೇಖಕಿಯರಿಗೆ ಅಂತಹ ಯಾವುದೇ ಒತ್ತಡಗಳಿಲ್ಲ. ಹಾಗಾಗಿ ಇವತ್ತಿಗೂ ನಮ್ಮೆದುರು ದ್ರೌಪತಿಯ ಪ್ರತಿ ರೂಪದಂತಿರುವ, ನಗರದ ಪಬ್ಗಳಲ್ಲಿ ತನ್ನ ಹಸುಗೂಸಿನ, ವೃದ್ಧ ತಂದೆ ತಾಯಿಗಳ ಹಸಿವು ನೀಗಿಸುವುದಕ್ಕಾಗಿ ಅರೆಬೆತ್ತಲೆ ಕುಣಿಯುವ ಹೆಣ್ಣಿನ ಹಿಂದೆ ನೋವಿನ ಕಥನವೊಂದಿದೆ. ಅವಳ ದೇಹ ಸಿರಿಯನ್ನೇ ಗುರಿಯಾಗಿಸಿಕೊಂಡ ಮನಸ್ಸಿಗೆ ಅವಳೆದೆಯ ಬಾಗಿಲನ್ನು ತೆರೆದು ನೋಡುವ ವ್ಯವಧಾನವಿಲ್ಲ.
ಇಂದಿಗೂ ಗೊಲ್ಲ ಜನಾಂಗದಲ್ಲಿ ಗರ್ಭಿಣಿ ಹೆಣ್ಣನ್ನು ಊರಾಚೆ ಗುಡಿಸಲಲ್ಲಿ ಬಿಟ್ಟು ಬರುವ ಸಂಪ್ರದಾಯವಿದ್ದು ತನ್ನ ಹೆರಿಗೆಯನ್ನು ತಾನೇ ಮಾಡಿಕೊಳ್ಳುವ ಈ ಹೆಣ್ಣಿನ ಸ್ಥಿತಿ ಅಶೋಕವನದ ಸೀತೆಯ ಏಕಾಂಗಿತನದ ನೋವಿಗಿಂತ ಕಡಿಮೆಯೇ? ನಾವು ಯಾವುದನ್ನೂ ಅನಿಷ್ಟ ಆಚರಣೆಗಳು ಎಂದು ಕರೆಯಲ್ಪಟ್ಟೆವೊ ಅವೆಲ್ಲವೂ ಜಾಗತೀಕರಣದ ಈ ಯುಗದಲ್ಲಿ ಹೊಸರೂಪ ತಾಳಿ ನಮ್ಮೆದುರು ಬಂದು ನಿಂತಿವೆ. ದೇವದಾಸಿ ಪದ್ಧತಿ ನಿರ್ಮೂಲನೆಯಾಯಿತು ಎಂದುಕೊಂಡಿರುವಾಗಲೇ ಇವತ್ತಿಗೂ ಕೂಡ ಧಾರವಾಡ ಜಿಲ್ಲೆಯ ಕಲಘಟಗಿ ಹಾಗೂ ಕುಂದಗೋಳ ತಾಲೂಕಿನಿಂದ ವರ್ಷವೊಂದಕ್ಕೆ ೩೦೦ಕ್ಕೂ ಹೆಚ್ಚು ಹೆಣ್ಣು ಮಕ್ಕಳು ವಧು ದಕ್ಷಿಣೆಯ ನೆಪದಲ್ಲಿ ಮಾರಾಟವಾಗಿ ಮುಂಬೈ ನಗರದ ವೇಶ್ಯಾ ವಾಟಿಕೆಗೆ ದೂಡಲ್ಪಡುತ್ತಿದ್ದಾರೆ.
ಇಂತಹ ಯಾತನಾಮಯ ಸ್ಥಿತಿಗಳನ್ನು ನಾವು ಯಾವ ನೆಲೆಯಲ್ಲಿ ಗ್ರಹಿಸಬೇಕು? ಇದಕ್ಕಾಗಿಯೇ ನಮ್ಮ ಸ್ತ್ರೀ ಸಂವೇದನೆಯ ಪಾತಾಳಿಯನ್ನು ಮತ್ತಷ್ಟು ವಿಸ್ತರಿಸಬೇಕೆ? ಬೇಡವೆ? ಇದು ನಮ್ಮ ಮುಂದಿರುವ ಪ್ರಶ್ನೆ.
|
ಕಾವೇರಿ ಚಳುವಳಿ-ಅಂತಿಮ ಭಾಗ: ಇಷ್ಟಕ್ಕೇ ಮುಗಿಯುವುದೇ?! |
ಜಾಣಗೆರೆ ವೆಂಕಟರಾಮಯ್ಯ, ಬಿ ಎಸ್ ಶಿವಪ್ರಕಾಶ್
(ಜನ ಕಾನೂನಿನ ವಿರುದ್ಧ ತಿರುಗಿ ಆಕ್ರೋಶಗೊಂಡು ಜನ-ಜೀವನ ಹಾನಿ ಮಾಡುವುದನ್ನು ಸರಿ ಎಂದು ನಾವು ಕಾವೇರಿ ಚಳುವಳಿಯ ವಿವರಗಳನ್ನು ಇಲ್ಲಿ ಬರೆಯುತ್ತಿಲ್ಲ. ಕರ್ನಾಟಕದ ಜನ ತಮ್ಮ ನಾಡಿಗಾಗಿ, ರೈತರಿಗಾಗಿ, ನೀರಿಗಾಗಿ, ತಮ್ಮ ಹಿತಾಸಕ್ತಿಗೆಂದು ಒಗ್ಗಟ್ಟಾಗಿ ಒಕ್ಕೊರಲಿನಲ್ಲಿ ಪ್ರತಿಭಟಿಸಿದ ಚಳುವಳಿ ಇದೊಂದೇ. ಕಾವೇರಿಗಾಗಿ ನಡೆದ ಚಳುವಳಿಯ ನಂತರ ಬೇರೆಲ್ಲೂ ಕರ್ನಾಟಕದ ಜನ ಈ ಪರಿ ಒಗ್ಗಟ್ಟಿನಿಂದ ವರ್ತಿಸಿರಲಿಲ್ಲ. ಈಗ ಬಿಡಿ. ಬಂದ್ ಗಳು, ಚಳುವಳಿಗಳು ಕೇವಲ ಒಂದೋ ಎರಡೋ ರಾಜಕೀಯ ಪಕ್ಷಗಳ, ನಾಯಕರ ಅನುಕೂಲಗಳಿಗೆ ಮಾತ್ರ ನಡೆಯುತ್ತವೆ. ಚಳುವಳಿ ಎಂಬ ಸಂಚಲನವೇ ಅರ್ಥ ಕಳೆದುಕೊಂಡಿದೆ. ಅದೂ ಒಂದು ರೋಲ್ ಕಾಲ್ ಆಗಿದೆ. ಎಷ್ಟು ಲಕ್ಷ ಅಥವಾ ಕೋಟಿ ಸುರಿದು ಎಷ್ಟು ಜನರನ್ನು ಒಟ್ಟು ಮಾಡಿ ದೊಂಬಿ ಮಾಡಬಹುದು ಎನ್ನುವುದು ಇವತ್ತಿನ ಹೋರಾಟಗಳ ಹೊಟ್ಟೆಪಾಡು. ಹಣ ಮುಖ್ಯವಾಗುತ್ತಾ ಹೋದಂತೆ, ಹೊರಗಿನ ಹಣ ದಾಹೀ ಅಥವಾ ಹಣ ಹೂಡುವ ಶಕ್ತಿಗಳು ನಾಡೊಂದಕ್ಕೆ ನುಗ್ಗಿ ಅಲ್ಲಿನ ಜನರನ್ನು ತಮ್ಮ ನಾಡಿನ ಕುರಿತಾದ ಭಾವನೆಗಳ ನಂಟಿಂದ ದೂರ ಮಾಡಿ ಜನ-ಜೀವನ ಎರಡರ ಮಧ್ಯೆ ಅರ್ಥಮಾಡಿಕೊಳ್ಳಲಾಗದ ಕಂದಕವೊಂದನ್ನು ಸೃಷ್ಟಿಸಿಬಿಡುತ್ತವೆ. ಈಗ ಹೋರಾಟ ಮಾಡುವವರು ಎಂದರೆ ಗೂಂಡಾಗಳು ಎಂದೇ ವ್ಯಾಖ್ಯಾನ. ಅದಕ್ಕೆ ಅದರದ್ದೇ ಕಾರಣಗಳೂ ಇವೆ ಬಿಡಿ.)
ತಮಿಳು ಚಾನಲ್ಲುಗಳಿಗೆ ಹಾಗೂ ತಮಿಳು ಚಿತ್ರಗಳಿಗೆ ಹಾಕಿದ್ದ ಬಹಿಷ್ಕಾರ ಯಶಸ್ವಿಯಾಗಿದ್ದರಿಂದ ಉಲ್ಲಸಿತರಾಗಿದ್ದ ಚಳವಳಿಗಾರರು ಪ್ರತಿಭಟನೆಯ ಸ್ವರೂಪವನ್ನು ತೀರ್ವಗೊಳಿಸಲು ಕನ್ನಡಪರ ಹೋರಾಟಗಾರರು, ರೈತ ಸಂಘಟನೆಗಳು, ವಿರೋಧಪಕ್ಷಗಳ ಸಭೆ ಸೇರಿಸಿ ಚರ್ಚೆ ನಡೆಸಿ ೨೦೦೨ ರ ನವೆಂಬರ್ ೧ ರಂದು ಕರಾಳ ದಿನಾಚರಣೆ ಆಚರಿಸಬೇಕೆಂದು ನಿರ್ಧರಿಸಿದರು. ಅಂದು ಕರ್ನಾಟಕದ ರಾಜ್ಯೋತ್ಸವವಾದ್ದರಿಂದ ಎಸ್. ಎಮ್. ಕೃಷ್ಣರ ಸರ್ಕಾರ ಪ್ರತಿವರ್ಷದಂತೆ ಈ ವರ್ಷವೂ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸಿದ್ದತೆ ನಡೆಸಿತ್ತು. ಅದೇ ದಿನವನ್ನೇ ಕಾವೇರಿ ಹೋರಾಟಗಾರು ಕರಾಳ ದಿನಾಚರಣೆಯನ್ನಾಗಿ ಆಚರಿಸಲು ಮುಂದಾಗಿದ್ದುದು ಸರ್ಕಾರಕ್ಕೆ ತಲೆಬಿಸಿಯಾಗಿತ್ತು. ಚಳವಳಿಯ ನಾಯಕರನ್ನು ಸಂಪರ್ಕಿಸಿದ ಸರ್ಕಾರದ ಪ್ರತಿನಿಧಿಗಳು ಕರಾಳ ದಿನಾಚರಣೆಯನ್ನು ವಾಪಸ್ಸು ಪಡೆಯುವಂತೆ ವಿನಂತಿಸಿಕೊಂಡರು. ಆದರೆ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಟ್ಟಿದ್ದ ಎಸ್. ಎಮ್. ಕೃಷ್ಣರ ನಿಲುವನ್ನು ಬಲವಾಗಿ ಖಂಡಿಸಿದ್ದ ಚಳುವಳಿ ನಾಯಕರು ಸರ್ಕಾರದ ಪ್ರತಿನಿಧಿಗಳ ಮನವಿಯನ್ನು ತಿರಸ್ಕರಿಸಿದ್ದರು. ಕರಾಳದಿನವನ್ನು ಯಶಸ್ಸುಗೊಳಿಸಲು ರಾಜ್ಯಾದ್ಯಂತ ಹೋರಾಟಗಾರರನ್ನು ಸಂಪರ್ಕಿಸಿ ಸಂಘಟಿಸತೊಡಗಿದರು.
ಕರಾಳ ದಿನಾಚರಣೆಗೆ ತಯಾರಿ ನಡೆಯುತ್ತಿರುವಾಗಲೇ ಬೆಂಗಳೂರಿನ ಆರ್ ಟಿ ನಗರದ ಸಿನಿಮಾ ಟೆಂಟ್ ಒಂದರಲ್ಲಿ ತಮಿಳು ಸಿನಿಮಾ ಪ್ರದರ್ಶನ ಮಾಡುತ್ತಿದ್ದಾರೆಂಬ ಸುದ್ದಿ ತಿಳಿದ ಕನ್ನಡ ಕಾರ್ಯಕರ್ತರುಗಳು ಅಲ್ಲಿಗೆ ದೌಡಾಯಿಸಿದ್ದರು. ಅಲ್ಲೇನಾದರೂ ಅನಾಹುತ ನಡೆಯಬಹುದೆಂಬ ಆತಂಕದಿಂದ ಚಳವಳಿ ನಾಯಕರುಗಳು ಅಲ್ಲಿಗೆ ಧಾವಿಸುವಷ್ಟರಲ್ಲಿ ಅಲ್ಲಿನ ಪರಿಸ್ಥಿತಿ ವಿಕೋಪಕ್ಕೆ ತಿರುಗಿಬಿಟ್ಟಿತ್ತು. ಅಷ್ಟರಲ್ಲಾಗಲೇ ಕೆಲವು ರೋಷಾವೇಶದ ಕನ್ನಡ ಕಾರ್ಯಕರ್ತರು ಆ ಟೆಂಟ್ ನ ಪ್ರೊಜೆಕ್ಟರನ್ನು ಧ್ವಂಸಗೊಳಿಸಿ ತಮಿಳು ಸಿನಿಮಾದ ರೀಲಿಗೆ ಬೆಂಕಿಯಿಟ್ಟಿದ್ದರಲ್ಲದೆ ಪರದೆಗೂ ಬೆಂಕಿ ಹಚ್ಚಿದ್ದರು. ಆ ಟೆಂಟ್ ನ ಮಾಲೀಕನಿಗೆ ಎಚ್ಚರಿಕೆ ನೀಡಿ ಸಿನಿಮಾ ಸ್ಥಗಿತಗೊಳಿಸಬೇಕೆಂದು ಹೇಳಲು ಹೋಗಿದ್ದ ಮುಖಂಡರುಗಳಿಗೆ ಅಲ್ಲಿ ಕಂಡದ್ದು ಪೂರ್ತಿ ಬೆಂಕಿಗಾಹುತಿಯಾಗಿದ್ದ ಸಿನಿಮಾ ಟೆಂಟ್. ಕರ್ನಾಟಕ ರಕ್ಷಣಾ ವೇದಿಕೆ ಈ ಘಟನೆಗೆ ಹೊಣೆ ಹೊತ್ತುಕೊಂಡಿತಾದ್ದರಿಂದ ಅದರ ಅದ್ಯಕ್ಷರಾದ ಜಾಣಗೆರೆ ಹಾಗೂ ಇತರೆ ನಾಯಕರ ಮೇಲೆ ಈ ಸಂಬಂಧ ಕ್ರಿಮಿನಲ್ ಮೊಕದ್ದಮೆ ದಾಖಲಾಯಿತು. ಈ ಘಟನೆಯಿಂದ ಎಚ್ಚೆತ್ತು, ತಮಿಳರೇ ಹೆಚ್ಚಿರುವ ಜಾಗಗಳಲ್ಲೂ ತಮಿಳು ಚಿತ್ರ ಪ್ರದರ್ಶನ ನಿಲ್ಲಿಸಬೇಕೆಂದು ಪೋಲೀಸರೇ ತೀರ್ಮಾನ ಮಾಡಿಬಿಟ್ಟರು.
೨೦೦೨ ರ ನವೆಂಬರ್ ೧ ರ ಕರಾಳ ದಿನಾಚರಣೆಯಂದು ಮೊದಲೇ ನಿರ್ಧರಿಸಿದಂತೆ ಕೆಲವಾರು ಜಿಲ್ಲೆಗಳಲ್ಲಿ ಕನ್ನಡ ಸಂಘ-ಸಂಸ್ಥೆಗಳು, ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ಅಂದು ಬೆಳಿಗ್ಗೆ ೮ ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ಮುಂದುಗಡೆ ಕರ್ನಾಟಕ ರಕ್ಷಣಾ ವೇದಿಕೆ ಜಾಣಗೆರೆ ವೆಂಕಟರಾಮಯ್ಯ ನವರ ನೇತ್ರತ್ವದಲ್ಲಿ ಧರಣಿ ಕಾರ್ಯಕ್ರಮ ಏರ್ಪಡಿಸಿತ್ತು. ಅದರಲ್ಲಿ ಪ್ರೊ. ಚಂದ್ರಶೇಖರ ಪಾಟೀಲರೂ ಸೇರಿದಂತೆ ಹಲವಾರು ಸಂಘಟನೆಗಳ ನಾಯಕರು, ಸಾಹಿತಿಗಳು ಭಾಗವಹಿಸಿದ್ದರು. ಸಣ್ಣಗೆ ಮಳೆ ಜಿನುಗುತ್ತಿದ್ದರೂ ಧರಣಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು. ಅದೇ ಸಮಯದಲ್ಲಿ ಸರ್ಕಾರದ ರಾಜ್ಯೋತ್ಸವ ಕಾರ್ಯಕ್ರಮ ಕಂಠೀರವ ಸ್ಟೇಡಿಯಂ ನಲ್ಲಿ ಅದ್ದೂರಿಯಾಗಿ ನಡೆಯತೊಡಗಿತ್ತು. ಆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಸ್. ಎಮ್. ಕೃಷ್ಣರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಕರ್ನಾಟಕ ರಕ್ಷಣಾ ವೇದಿಕೆಯ ಕೆಲವು ನಾಯಕರುಗಳು, ಕಾರ್ಯಕರ್ತರು ಹೋಗಿದ್ದರು. ಮುಖ್ಯಮಂತ್ರಿ ಕೃಷ್ಣರು ಭಾಷಣ ಮಾಡಲು ಪ್ರಾರಂಭಿಸುತ್ತಿದ್ದಂತೆಯೇ ಕನ್ನಡ ಕಾರ್ಯಕರ್ತರು ದೂರದಿಂದಲೇ ಕಪ್ಪು ಬಾವುಟ ಪ್ರದರ್ಶಿಸಿ ಧಿಕ್ಕಾರ ಕೂಗತೊಡಗಿದ್ದರು. ಅಷ್ಟರಲ್ಲಿ ಯಾರೋ ಎಸೆದ ಚಪ್ಪಲಿಯೊಂದು ವೇದಿಕೆಯತ್ತ ಹಾರಿಬಂದಿತ್ತು. ಇದನ್ನು ಕಂಡ ಮುಖ್ಯಮಂತ್ರಿ ಎಸ್. ಎಮ್. ಕೃಷ್ಣ ಒಂದು ಕ್ಷಣ ವಿಚಲಿತರಾಗಿ ಭಾಷಣ ನಿಲ್ಲಿಸಿದ್ದರೂ ಮರುಗಳಿಗೆಯಲ್ಲೇ ಸಾವರಿಸಿಕೊಂಡು ತಮ್ಮ ಭಾಷಣ ಮುಂದುವರೆಸಿ ಕಾವೇರಿ ಹೋರಾಟ ಕುರಿತಂತೆ ತಮ್ಮದೇ ವ್ಯಾಖ್ಯಾನ ಮಾಡಿದ್ದರು.
ಈ ಘಟನೆ ನಡೆಯುತ್ತಿದ್ದಂತೆಯೇ ಕೆಲವು ಖಾಸಗಿ ಗೂಂಡಾಗಳು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರುಗಳ ಮೇಲೆ ಗೂಂಡಾಗಿರಿ ನಡೆಸತೊಡಗಿದರು. ಪರಿಸ್ತಿತಿ ವಿಕೋಪಕ್ಕೆ ಹೋಗುವುದನ್ನು ಮನಗೊಂಡ ಸ್ಥಳದಲ್ಲಿದ್ದ ಡಿ.ಸಿ.ಪಿ. ಗೋಪಾಲ್ ಹೊಸೂರ್ ರವರು ಗೂಂಡಾಗಳನ್ನು ತರಾಟೆಗೆ ತೆಗೆದುಕೊಳ್ಳುವಷ್ಟರಲ್ಲೇ ಕೆಲವು ಕನ್ನಡ ಕಾರ್ಯಕರ್ತರುಗಳಿಗೆ ಏಟುಗಳು ಬಿದ್ದಿದ್ದವು. ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆಯನ್ನೂ ಕೊಡಿಸದೇ ಬಂಧಿಸಿದ ಪೋಲಿಸರು ಅವರನ್ನೆಲ್ಲಾ ಆಡುಗೋಡಿಯಲ್ಲಿದ್ದ ಕಲ್ಯಾಣ ಮಂಟಪವೊಂದರಲ್ಲಿ ಕೂಡಿಹಾಕಿದ್ದರು. ಇದರಿಂದಾಗಿ ಸೂಕ್ತ ಚಿಕಿತ್ಸೆಯಿಲ್ಲದೆ ಕಾರ್ಯಕರ್ತರು ಕಷ್ಟಪಟ್ಟಿದ್ದರು. ಇದಾದಮೇಲೆ ಟೌನ್ ಹಾಲ್ ಬಳಿ ಧರಣಿ ಮಾಡುತ್ತಿದ್ದ ಜಾಣಗೆರೆ, ಚಂಪಾ, ನಾರಾಯಣಗೌಡ ಮುಂತಾದವರನ್ನು ಬಂಧಿಸಿದ ಪೋಲೀಸರು ಅವರನ್ನೆಲ್ಲಾ ಜಾಲಹಳ್ಳಿ ಠಾಣೆಯಲ್ಲಿ ಕೂಡಿದ್ದರು. ಅದೇ ವೇಳೆ ಕೆ.ಆರ್. ವೃತ್ತದಲ್ಲಿನ ವಿಶ್ವೇಶ್ವರಯ್ಯನವರ ಪ್ರತಿಮೆ ಬಳಿ ಧರಣಿ ನಡೆಸುತ್ತಿದ್ದ ಕನ್ನದ ಸಂಘರ್ಷ ಸಮಿತಿಯ ರಾಮಣ್ಣ ಕೋಡಿಹೊಸಳ್ಳಿ, ಶ್ರ.ದೇ. ಪಾರ್ಶ್ವನಾಥ್, ಕೋ.ವೆಂ. ರಾಮಕೃಷ್ಣೇಗೌಡ, ಕಾ.ವೆಂ. ಶ್ರೀನಿವಸಮೂರ್ತಿ, ಮುಂತಾದವರನ್ನು ಬಂಧಿಸಿ ಹೆಚ್.ಎ.ಎಲ್. ಠಾಣೆಯಲ್ಲಿಟ್ಟರು.
ಹೀಗೆ ಬಂಧಿತರಾಗಿದ್ದ ಕನ್ನಡ ಕಾರ್ಯಕರ್ತರುಗಳನ್ನೂ, ಸಾಹಿತಿಗಳನ್ನೂ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕೂಡಿಹಾಕಿದ್ದ ಪೋಲಿಸರು ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಅವರೆಲ್ಲರನ್ನೂ ಆಡುಗೋಡಿ ಪೋಲೀಸ್ ಕಲ್ಯಾಣ ಮಂಟಪಕ್ಕೆ ಕರೆತಂದು ಅಲ್ಲಿಗೇ ಮ್ಯಾಜಿಸ್ಟೇಟರನ್ನು ಕರೆಸಿದರು. ಕೆಲವೇ ಕೆಲವು ಹಿರಿಯರನ್ನು ಹೊರತುಪಡಿಸಿ, ನ್ಯಾಯಾಧೀಶರು ಮಿಕ್ಕೆಲ್ಲರಿಗೂ ಜಾಮೀನು ತಿರಸ್ಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ರಾತ್ರಿ ೧೨ ಗಂಟೆಯ ಹೊತ್ತಿಗೆ ಅವರೆಲ್ಲರನ್ನೂ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದು ಅದರ ಹೊರಗೇ ಒಂದೆರಡು ಗಂಟೆ ಪೋಲೀಸ್ ವ್ಯಾನಿನೊಳಗೇ ಕೂರಿಸಿ ಕಾಯಿಸಿದ್ದರು. ೧೭೫ ಜನ ಬಂಧಿತ ಚಳುವಳಿಗಾರರಿದ್ದರು. ಯಾರಿಂದ ಅದ್ಯಾವ ತರಹದ ಆದೇಶಕ್ಕಾಗಿ ಕಾಯುತ್ತಿದ್ದರೋ ಪೋಲಿಸರು ಬಂಧಿತ ಚಳವಳಿಗಾರರನ್ನು ಕಾರಾಗೃಹದ ಒಳಗೆ ಕಳಿಸದೇ ಹೊರಗಡೆಯೇ ನಿಲ್ಲಿಸಿದ್ದು ಅಲ್ಲಿದ್ದವರಿಗೆಲ್ಲಾ ಆಶ್ಚರ್ಯವುಂಟು ಮಾಡಿತ್ತು. ಸ್ವಲ್ಪ ಹೊತ್ತಿನ ನಂತರ ಇವರನ್ನು ಕೂಡಿಹಾಕಲು ಇಲ್ಲಿ ಸ್ಥಳಾವಕಾಶವಿಲ್ಲದಿರುವುದರಿಂದ ಬಳ್ಳಾರಿ ಜೈಲಿಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿ ನಾಲ್ಕು ಬಸ್ಸು ತರಿಸಿ ಎಲ್ಲರನ್ನೂ ಬಳ್ಳಾರಿಗೆ ಕರೆದುಕೊಂಡು ಹೋಗಿದ್ದರು. ಕೊರೆವ ಚಳಿಯ, ಜಿನುಗುವ ಜಡಿಮಳೆಯ ವಾತಾವರಣದಲ್ಲಿಯೇ ನಡುರಾತ್ರಿ ಕಳೆದ ನಂತರ ಬಳ್ಳಾರಿಯತ್ತ ಹೊರಟಿದ್ದ ಚಳವಳಿಗಾರರು ಮರು ಮಧ್ಯಾಹ್ನ ಬಳ್ಳಾರಿ ಕಾರಾಗೃಹದಲ್ಲಿ ಬಂಧಿಗಳಾಗಿದ್ದರು. ಕಾವೇರಿ ನೀರಿಗಾಗಿ ಚಳವಳಿ ಮಾಡಿದವರನ್ನು ಕುಖ್ಯಾತ ಖೈದಿಗಳನ್ನಿಡುವ ಬಳ್ಳಾರಿ ಜೈಲಿಗಟ್ಟಿದ್ದು ಮುಖ್ಯಮಂತ್ರಿ ಎಸ್.ಎಮ್. ಕೃಷ್ಣರ ಸಾಧನೆಯಾಗಿತ್ತು.
ಹಾಗೆ ಬಳ್ಳಾರಿಗೆ ಹೋದ ಚಳವಳಿಗಾರರಿಗೆ ಅಲ್ಲಿಯ ಕನ್ನಡಿಗರು ಅದ್ದೂರಿ ಸ್ವಾಗತದ ಮೂಲಕ ಬರಮಾಡಿಕೊಂಡಿದ್ದರು. ವಿಪರ್ಯಾಸವೆಂದರೆ ಅಲ್ಲಿ ಬಂಧಿಸಿಟ್ಟ ಚಳುವಳಿಗಾರರನ್ನೆಲ್ಲರನ್ನೂ ಮಾರನೆಯ ದಿನವೇ ಬಿಡುಗಡೆ ಮಾಡುವಂತೆ ಸ್ವತಃ ಮುಖ್ಯಮಂತ್ರಿ ಕೃಷ್ಣರೇ ಆದೇಶ ಹೊರಡಿಸಿದ್ದರು. ಮಂಡ್ಯದವರೆಂದೇ ರಾಜಕೀಯವಾಗಿ ಕೊಚ್ಚಿಕೊಳ್ಳುವ ಮುಖ್ಯಮಂತ್ರಿಗಳು ತಮ್ಮ ಜಿಲ್ಲೆಯ ಜನರ ಒಳಿತಿಗಾಗಿ ಚಳುವಳಿ ಮಾಡಿದ ಹೋರಾಟಗಾರರನ್ನು ಬಂಧಿಸಿ ಬಳ್ಳಾರಿ ಜೈಲಿಗಟ್ಟಿದ್ದೂ ಕರ್ನಾಟಕದ ಕಾವೇರಿ ಹೋರಾಟದ ಇತಿಹಾಸದಲ್ಲಿ ಸೇರಿ ಹೋಯಿತು.
ಎಸ್.ಎಮ್. ಕೃಷ್ಣರ ನಂತರ ೨೦೦೪ ರಲ್ಲಿ ಅಧಿಕಾರಕ್ಕೆ ಬಂದ ಧರ್ಮಸಿಂಗರ ಆಡಳಿತದಲ್ಲಿ ಎರಡು ವರ್ಷ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅವಧಿಯಲ್ಲಿ ಸಕಾಲಕ್ಕೆ ಮಳೆಯಾಗಿದ್ದರಿಂದ ಕಾವೇರಿ ಸಮಸ್ಯೆ ಅಷ್ಟಾಗಿ ಕಾಡಲಿಲ್ಲ. ಅದರೆ ೨೦೦೭ ರ ಆರಂಭವಾಗುತ್ತಿದ್ದಂತೆಯೇ ಫ಼ೆ. ೫ ರಂದು ಕಾವೇರಿ ನ್ಯಾಯ ಮಂಡಳಿಯು ಅಂತಿಮ ತೀರ್ಪನ್ನು ಸಾರಲಿದೆಯೆಂಬ ಪ್ರಕಟಣೆ ಹೊರಬಿತ್ತು. ಕರ್ನಾಟಕದ ಜನ ಎಲ್ಲರಿಗಿಂತಲೂ ಕುತೂಹಲದಿಂದ ಕಾಯುತ್ತಿದ್ದರು.
ಫ಼ೆ. ೫ರ ಮಧ್ಯಾಹ್ನದ ಹೊತ್ತಿಗೆಲ್ಲಾ ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪು ಹೊರಬಿತ್ತು. ಕನ್ನಡಿಗರ ನಿರೀಕ್ಷೆಯಂತೆಯೇ ರಾಜ್ಯಕ್ಕೆ ಮತ್ತೆ ಪರಮ ಅನ್ಯಾಯವಾಗಿತ್ತು. (ಇದೇ ಸರಣಿಯ ಲೇಖನ ಮಾಲೆಯಲ್ಲಿನ ಮೊದಲನೇ ಭಾಗವಾದ ಕಾವೇರಿ ನದಿ ನೀರಿನ ಇತಿಹಾಸದಲ್ಲಿ ಕರ್ನಾಟಕಕ್ಕೆ ಪರಮ ಅನ್ಯಾಯವಾಗಿರುವ ಬಗ್ಗೆ ಅಂಕಿ ಅಂಶಗಳ ಸಮೇತ ಎಳೆ ಎಳೆಯಾಗಿ ವಿವರಿಸಲಾಗಿದೆ). ಇಂತಹ ಪರಮ ಅನ್ಯಾಯದ ತೀರ್ಪನ್ನು ಖಂಡಿಸಿ ರಾಜ್ಯದೆಲ್ಲೆಡೆ ಜನ ರೊಚ್ಚಿಗೆದ್ದಿದ್ದರು. ಯಾವ ಸಂಘಟನೆಗಳ ನಾಯಕರ ಅಪ್ಪಣೆಗೂ ಕಾಯದ ಕನ್ನಡನಾಡಿನ ಜನತೆ ಭಾವಾವೇಶದಿಂದ ಪ್ರತಿಭಟನೆಗೆ ಮುಂದಾಗಿದ್ದರು. ಬೆಂಗಳೂರಿನಲ್ಲಿ ಮೊದಲು ಬೀದಿಗಿಳಿದದ್ದು ಟಿ.ಎ. ನಾರಾಯಣಗೌಡ ನೇತ್ರತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು. ಮಾರನೆಯದಿನವೇ ಕರ್ನಾಟಕ ಗಡಿ ಹೋರಾಟ ಸಮಿತಿಯ ಹೆಸರಲ್ಲಿ ಕನ್ನಡ ಚಳವಳಿ ಮುಖಂಡರಾದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ, ಕೆ. ಪ್ರಭಾಕರರೆಡ್ಡಿ, ರಾಮಣ್ಣ ಕೋಡಿಹೊಸಳ್ಳಿ, ಕೆ.ಆರ್. ಕುಮಾರ್, ಎನ್. ಮೂರ್ತಿ, ಮುಂತಾದವರ ನಾಯಕತ್ವದಲ್ಲಿ ರಸ್ತೆತಡೆ, ಭೂತದಹನ, ನಿಷ್ಕ್ರಿಯ ಸಂಸದರ ಹರಾಜು, ಕುರಿಗಳು, ನಾಯಿಗಳು, ಎಮ್ಮೆಗಳಂತಹ ತರಹೇವಾರಿ ಪ್ರಾಣಿಗಳನ್ನೂ ಪ್ರತಿಭಟನೆಗೆ ಬಳಸಿಕೊಳ್ಳಲಾಯಿತು. ಅಂತೆಯೇ ಬೆಂಗಳೂರು ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ, ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿನ ಕನ್ನಡದ ಕಟ್ಟಾಳುಗಳು ಯಾವ ನಾಯಕರುಗಳ ಅಪ್ಪಣೆಗೂ ಕಾಯದೇ ಪ್ರತಿಭಟನೆಗಿಳಿದಿದ್ದರು. ಫ಼ೆ. ೧೨ರಂದು ಕರ್ನಾಟಕ ಬಂದ್ ಆಚರಿಸಲು ಕರ್ನಾಟಕ ಗಡಿ ಹೋರಾಟ ಸಮಿತಿ ನಾಯಕರು ಕರೆ ಕೊಟ್ಟರು. ಇದಕ್ಕೆ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ಘೋಷಿಸಿದವು. ವಿರೋಧ ಪಕ್ಷಗಳೂ ಬೆಂಬಲ ನೀಡಿದ್ದವು. ರಾಜ್ಯ ಸರ್ಕಾರವೂ ಪರೋಕ್ಷ ಬೆಂಬಲವಿತ್ತಿತು.
ಫ಼ೆ. ೧೨ರಂದು ಬಂದ್ ಶಾಂತಿಯುತವಾಗಿ ನಡೆಯಿತು. ಬೀದರ್, ಬಾಗಲಕೋಟೆ, ಉಡುಪಿ, ಮಂಗಳೂರು, ಕಾರವಾರ ಹೊರತು ಪಡಿಸಿ ಮಿಕ್ಕೆಲ್ಲಾ ಜಿಲ್ಲೆಗಳಲ್ಲಿ ಕರ್ನಾಟಕ ಬಂದ್ ಯಶಸ್ವಿಯಾಗಿತ್ತು. ಅದೇ ದಿನ ಕರ್ನಾಟಕ ರಕ್ಷಣಾ ವೇದಿಕೆ ಪ್ರತ್ಯೇಕವಾಗಿ ರಾಜ್ಯದ ಹಲವೆಡೆ ರೈಲ್ ರೊಕೋ ಚಳವಳಿ ನಡೆಸಿತು. ಹಲವಾರು ರೀತಿಯ ಒತ್ತಡಗಳನ್ನು ಹೇರಲಾಯಿತು. ಏನೇ ಒತ್ತಡಗಳನ್ನು ಹೇರಿದರೂ ಕಾವೇರಿ ನ್ಯಾಯಮಂಡಳಿಯ ತೀರ್ಪಿನಲ್ಲಿರುವ ದೋಷಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ ಇದುವರೆವಿಗೂ ಮುಂದಾಗಿಲ್ಲ. ಕೇಂದ್ರ ಸರ್ಕಾರವನ್ನು ಮಣಿಸುವಂತಾ ಬಲವಾದ ಪ್ರಾದೇಶಿಕ ಪಕ್ಷದ ಕೊರತೆ ಕರ್ನಾಟಕವನ್ನು ಕಾಡುತ್ತಿದೆ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರಾದ್ದರಿಂದ ಅವುಗಳು ತಮ್ಮ ರಾಜ್ಯದ ಹಿತರಕ್ಷಣೆಯ ವಿಷಯದಲ್ಲಿ ಎಂದೆಂದಿಗೂ ರಾಜಿಯಾಗಲಾರರು. ಆದರೆ ಅಲ್ಲಿ ಉಳಿಯಲಾರರು. ಆದರೆ ಕರ್ನಾಟಕದ ದುರಂತವೆಂದರೆ ಇಲ್ಲಿ ಆಳ್ವಿಕೆ ನಡೆಸುವ ರಾಜಕಾರಣಿಗಳು ರಾಜ್ಯದ ಹಿತಾಸಕ್ತಿಗಿಂತ ಮುಖ್ಯವಾಗಿ ತಮ್ಮ ಹಿತಾಸಕ್ತಿಯನ್ನೇ ಕಾಯ್ದುಕೊಳ್ಳುವಲ್ಲಿ ನಿರತರಾಗಿರುವುದು.
ಇನ್ನು ಇತ್ತೀಚಿನ ’ಕನ್ನಡ ಚಳವಳಿ’ಯಲ್ಲಂತೂ ಗಲ್ಲಿಗೊಂದೊಂದು ಸಂಘಟನೆಗಳು, ಬೀದಿಗೊಬ್ಬ ನಾಯಕ. ದುರಂತವೆಂದರೆ ಇತ್ತೀಚೆಗೆ ಕನ್ನಡ ಚಳವಳಿಯೆಂಬುದು ಹೊಟ್ಟೆಪಾಡಿಗಾಗಿ ಮಾಡುವ ಚಳವಳಿಯೆಂದು ಕರೆಸಿಕೊಳ್ಳತೊಡಗಿರುವುದು. ಸ್ವಾರ್ಥ, ಸ್ವಪ್ರತಿಷ್ಟೆಗಾಗಿ ತಮಗನುಕೂಲವಾಗುವ ರಾಜಕಾರಣಿಗಳನ್ನು ಓಲೈಸುತ್ತಾ, ಕಂಪನಿಗಳಿಂದ ಹಣ ವಸೂಲಿ ಮಾಡುತ್ತಾ, ಚಳವಳಿಯನ್ನು-ಕನ್ನಡದ ಕಾರ್ಯಕರ್ತರುಗಳನ್ನು ದಿಕ್ಕುತಪ್ಪಿಸುವ ನಾಯಕರುಗಳೇ ಮಂಚೂಣಿಯಲ್ಲಿರುವುದು ನಮ್ಮ ನಾಡಿನ ಪರಮ ದುರಂತ.
ಈಗ ಕಾವೇರಿಯ ಕಾವು ಅಷ್ಟಿಲ್ಲ. ಈ ಬಾರಿ ಕೃಷ್ಣರಾಜ ಸಾಗರ ತುಂಬಿದರೆ ಪರವಾಗಿಲ್ಲ.
ಕಾವೇರಿ ಕಾವು ಕಡಿಮೆಯಾಗಿರುವ ಈ ಹೊತ್ತಿನಲ್ಲೂ ಪ್ರಾಮಾಣಿಕ ಕನ್ನಡದ ಕಾರ್ಯಕರ್ತರುಗಳಿಂದ, ರೈತರಿಂದ ಅಲ್ಲಲ್ಲಿ ಚಿಕ್ಕದಾಗಿ ನಿರಂತರ ಪ್ರತಿಭಟನೆ ನಡೆಯುತ್ತಿವೆ. ಕಾವೇರಿ ತೀರ್ಪು, ಅದು ಕರ್ನಾಟಕಕ್ಕೆ-ರೈತರಿಗೆ ಅನಾನುಕೂಲವಾಗದಂತೆ ಮಾಡಿಕೊಳ್ಳುವ ಕುರಿತು ಚರ್ಚೆಗಳು, ಚಿಂತನಾ ಕಾರ್ಯಗಳು ನಡೆಯುತ್ತಿವೆ. ಸಾಹಿತಿ-ಕಲಾವಿದರು, ಗಾಯಕರು, ಉದ್ಯಮಿಗಳು, ವ್ಯಾಪಾರಿಗಳು, ಕಾರ್ಮಿಕರು, ವಿದ್ಯಾರ್ಥಿಗಳು ಎಲ್ಲರೂ ಈವರೆಗೂ ಬೀದಿಗಿಳಿದು ತಮ್ಮದೇ ರೀತಿಯ ಪ್ರತಿಭಟನೆ ವ್ಯಕ್ತ ಮಾಡಿದ್ದಾರೆ. ಇವತ್ತಿಗೂ ಕಾವೇರಿ ವಿಚಾರವಾಗಿ ನಮಗೆ ನ್ಯಾಯ ಸಿಕ್ಕೀತೆ ಎಂದು ಜಾತಕ ಪಕ್ಷಿಯಂತೆ ನಮ್ಮ ರೈತರು ಕಾತುರ, ಆತಂಕದಿಂದ ಕಾಯುತ್ತಲೇ ಇದ್ದಾರೆ. ಇವರ ಆತಂಕವನ್ನು ದೂರ ಮಾಡುವತ್ತ ಪ್ರಾಮಾಣಿಕವಾಗಿ ಚಿಂತಿಸುವಂತಹ ರಾಜಕೀಯ ಪಕ್ಷ, ರಾಜಕೀಯ ನಾಯಕರು ಬರುವವರೆಗೂ ಈ ನಮ್ಮ ರೈತರ, ಜನತೆಯ ಗೋಳು ಇದೇ ರೀತಿ ಮುಂದುವರೆಯುತ್ತದೇನೋ ಎಂಬ ಆತಂಕ ನಮ್ಮದು, ನಿಮ್ಮದು, ಎಲ್ಲರದ್ದೂ.
(ಮುಗಿಯಿತು) |
ಮೀಡಿಯಾ ಮೇನಿಯಾ
ಎಲೆ ಅಡಿಕೆ ಭಟ್ಟರ ಭಟ್ಟಂಗಿ ಪುರಾಣವು... |
ಈಗ ಕನ್ನಡದಲ್ಲಿರುವ ಐದಾರು ಸುದ್ದಿ ಚಾನಲ್ಲುಗಳಲ್ಲಿ ಕೆಲಸ ಮಾಡುವವರಲ್ಲಿ ಬಹುತೇಕರು ಚಾನಲ್ಲಿನಿಂದ ಚಾನಲ್ಲಿಗೆ ಜಿಗಿಯುವ ಚಾಂಪಿಯನ್ನರುಗಳೇ. ಇಂಥಾ ಚಾಂಪಿಯನ್ನರುಗಳಲ್ಲಿ ಒಬ್ಬ ಪ್ರಮುಖರಿದ್ದಾರೆ. ಅವರೇ ಸದಾ ಎಲೆ ಅಡಿಕೆ ಅಗಿಯುವ ’ಎಸ್ ಎಸ್’ ಗುಂಡಾಭಟ್ಟರು. ಎಸ್ ಎಸ್ ಎಂಬುದು ಅವರ ಹೆಸರಿನ ಇನ್ಷಿಯಲ್ ಅಲ್ಲ. ಅವರು ತಮ್ಮ ಮುಂದೆ ಕೂರಿಸಿಕೊಳ್ಳುವ ಅತಿಥಿಗಳ ಮಾತಿಗೆಲ್ಲಾ ಸದಾ ’ಎಸ್ ಎಸ್’ ಎಂದು ಹೇಳುವುದರಿಂದ ಅವರಿಗೆ ಪ್ರೀತಿಯಿಂದ ’ಎಸ್ ಎಸ್’ ಭಟ್ಟರೆನ್ನುವುದು. ಈ ಭಟ್ಟರ ದನಿಯಲ್ಲೇ ಒಂದು ವಿಶಿಷ್ಟತೆಯಿದೆ. ಅವರು ತಂಬೂರಿಯ ರಾಗದಂತೆ ನಿಧಾನವಾಗಿ ಆರಂಭಿಸಿ ನಂತರ ಡೋಲಿನಂತೆ ಭಯಂಕರವಾಗಿ ಅರಚುತ್ತಿರುತ್ತಾರೆ. ಯಾವ ಅತಿಥಿಗಳಿಗೂ ನಿಷ್ಟುರವಾದ ಪ್ರಶ್ನೆಗಳನ್ನು ಕೇಳದ ’ಅಂದರಿಕೂ ಮಂಚಿವಾಳ್ಳು’ ಈ ನಮ್ಮ ಭಟ್ಟರು.
ಈ ಹಿಂದೆ ಒಂದೆರಡು ಚಾನಲ್ಲುಗಳಲ್ಲಿ ಎಸ್ ಎಸ್ ಎನ್ನುತ್ತಿದ್ದವರು, ಹಾಗೆನ್ನುತ್ತಲೇ ಸಂಪನ್ಮೂಲ ಕ್ರೋಡೀಕರಿಸಿಕೊಂಡು ಸಂಪನ್ನರಾಗಿ, ಇತ್ತೀಚೆಗೆ ’ಕರ್ಣ ಕಠೋರ’ದಿಂದ ಜಿಗಿದು ’ಘಂಟೆ ಚಾನಲ್ಲಿ’ಗೆ ಅಂಟಿಕೊಂಡು ಯಥಾ ಪ್ರಕಾರ ತಮಗೆ ಅತ್ಯಂತ ಪ್ರಿಯವಾದ ಎಸ್ ಎಸ್ ಪದದ ’ಘಂಟೆ’ ಬಾರಿಸತೊಡಗಿದ್ದಾರೆ. ನಮ್ಮ ಎಲೆ ಅಡಿಕೆ ಎಸ್ ಎಸ್ ಭಟ್ಟರ ಮಾತಿನ ವೈಖರಿಯನ್ನು ಮನೋರಂಜನೆಗಾಗಿ ನಿಮ್ಮ ಮುಂದಿಡುತ್ತಿದ್ದೇವೆ. ನೀವೂ ಊಟ ಮಾಡಿ ಮುಗಿಸಿ, ಎಲೆ ಅಡಿಕೆ ಮೆಲುಕು ಹಾಕುತ್ತಾ ಓದಿ ಮಜಾ ಅನುಭವಿಸಬೇಕೆನ್ನುವುದು ನಮ್ಮ ಪ್ರಾಮಾಣಿಕ ಉದ್ದೇಶವಾಗಿದೆ. ನೀವು ಮಜಾ ಅನುಭವಿಸದಿದ್ದಲ್ಲಿ ಅದು ನಿಮಗಾಗುವ ತುಂಬಲಾರದ ನಷ್ಟವೆಂದು ಹೇಳುತ್ತಾ...ನಿಮಗಾಗುವ ನಷ್ಟಕ್ಕೆ ನಾವು ಹೊಣೆಯಲ್ಲವೆಂದು ನಮ್ಮ ಮುಖ್ಯಮಂತ್ರಿಗಳಂತೆ ಧರ್ಮಸ್ಥಳದ ಮಂಜುನಾಥನ ಮೇಲೆ ಅಪ್ಪಿತಪ್ಪಿ ಪ್ರಮಾಣವನ್ನಂತೂ ಮಾಡದೇ, ಎಸ್ ಎಸ್ ಭಟ್ಟರ ಕಾರ್ಯಕ್ರಮದ ತುಣುಕನ್ನು ಇದೋ ನಿಮ್ಮ ಮುಂದಿಡುತ್ತಿದ್ದೇವೆ...
ನೀವೂ ಎಸ್ ಎಸ್ ಎಂದು ಸಿದ್ದರಾಗಿ...
ಎಸ್ ಎಸ್ ಭಟ್ಟರು ಯಾರನ್ನೂ ನಿಷ್ಠುರ ಮಾಡಿಕೊಳ್ಳದ ವ್ಯಕ್ತಿ. ಅವರ ಮಾತುಕತೆಗಳೇನಿದ್ದರೂ ಉಳ್ಳ ರಾಜಕಾರಣಿಗಳೊಂದಿಗೆ ಮಾತ್ರ. ಕಿಮ್ಮತ್ತಿಲ್ಲದವರನ್ನು ಅವರು ಕ್ಯಾರೇ ಅನ್ನುವುದಿಲ್ಲ. ಇತ್ತೀಚೆಗೆ ಅವರು ಮೂವರು ವಿವಿಧ ಪಕ್ಷದ ರಾಜಕಾರಣಿಗಳೊಂದಿಗೆ ನಡೆಸಿಕೊಟ್ಟದ್ದನ್ನು ಇದ್ದದ್ದನ್ನು ಇದ್ದ ಹಾಗೇ ನಿಮ್ಮ ಅವಗಾಹನೆಗೆ...
ಎಸ್ ಎಸ್:
’ಪ್ರಿಯ ಅತ್ಮೀಯ ವೀಕ್ಷಕರೇ, ಎಸ್ ನನಗ್ಗೊತ್ತು ನೀವು ನನ್ನ ಈ ಕಾರ್ಯಕ್ರಮಕ್ಕಾಗಿ ಕಾದು ಕುಳಿತಿದ್ದೀರಿ ಅಂತಾ, (ಅದ್ಯಾವ ವೀಕ್ಷಕರು ಇವರನ್ನು ನೋಡಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರೋ!) ನಿಮ್ಮನ್ನು ನಿರಾಸೆಗೊಳಿಸದೇ ನಾನು ನಿಮ್ಮ ಮುಂದೆ ಹಾಜರಾಗಿದ್ದೇನೆ. ಇಂದು ನನ್ನ ಮುಂದೆ ಮೂವರು ಮಹಾನುಭಾವರು ಕುಳಿತಿದ್ದಾರೆ. ಅವರಲ್ಲಿ ಒಬ್ಬರು ನಮ್ಮ ರಾಜ್ಯದ ಘನತೆವೆತ್ತ ಅಬ್ಕಾರಿ ಸಚಿವರು, ಮತ್ತೊಬ್ಬರು ವಿರೋಧ ಪಕ್ಷದ ನಾಯಕರು, ಇನ್ನೂ ಒಬ್ಬರಿದ್ದಾರೆ...ಅವರೂ ಬಹಳ ಪ್ರಮುಖ ರಾಜಕಾರಣಿಗಳೇ’ ಎಂದು ಮೂವರ ಹೆಸರುಗಳನ್ನೂ ಹೇಳುತ್ತಾ ವೀಕ್ಷಕರಿಗೂ ಪ್ರಶ್ನೆಗಳನ್ನು ಕೇಳುವಂತೆ ಮನವಿ ಮಾಡಿಕೊಳ್ಳುತ್ತಾ, ತಾವು ತಿಂದಿದ್ದ ಎಲೆ ಅಡಿಕೆಯ ಪಳೆಯುಳಿಕೆಯನ್ನು ಚಪ್ಪರಿಸುತ್ತಾ ಕೆಂಪಾದ ನಾಲಿಗೆ ತುಟಿಗಳನ್ನೊಮ್ಮೆ ಪ್ರದರ್ಶಿಸಿದವರೇ ’ಹೇಳಿ ಸಚಿವರೇ, ಹೇಗೆ ನಡೀತಿದೆ ನಿಮ್ಮ ಅಬ್ಕಾರಿ ಖಾತೆಯ ವ್ಯವಹಾರ, ನೀವೀಗ ಬಾರುಗಳಲ್ಲಿ ಹೆಣ್ಣು ಮಕ್ಕಳೂ ಕೆಲಸ ಮಾಡಬಹುದೆಂದು ಫ಼ರ್ಮಾನು ಹೊರಡಿಸಿದ್ದೀರಿ, ಎಸ್. ನೀವು ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?’
ಅಬ್ಕಾರಿ ಸಚಿವರು: ’ನೋಡಿ ಇವರೇ, ನಾವು ಎಲ್ಲರಿಗೂ ಸಮಾನ ಹಕ್ಕು ನೀಡಬೇಕೆಂದು ಹೊರಟಿರುವವರು. ಇತ್ತೀಚೆಗೆ ಬಾರುಗಳಲ್ಲಿ ಜನ ಮನರಂಜನೆಯಿಲ್ಲದೇ ಕೊರಗುತ್ತಿರುವುದು ನಾವು ನಡೆಸಿದಂಥಾ ತನಿಖೆಯಿಂದ ತಿಳಿದು ಬಂತು, ಕುಡಿದಾದ ಮೇಲೆ ಮನರಂಜನೆ ಇಲ್ಲದಿದ್ದರೆ ಹೇಗೆ ಹೇಳಿ? ಉದಾಹರಣೆಗೆ ನೀವೇ ಎಷ್ಟೋ ಬಾರಿ ನಾವೆಲ್ಲಾ ಬಾರಲ್ಲಿ ಸೇರಿದ್ದಾಗ ಮನರಂಜನೆಗಾಗಿ ಚಡಪಡಿಸಿಲ್ಲವೇ?’
ಈ ಮಾತನ್ನು ಕೇಳುತ್ತಲೇ ಗಾಬರಿಗೊಳಗಾದ ಎಸ್ ಎಸ್ ಭಟ್ಟರು, ಈ ನನ್ಮಗ ಇನ್ನೆಲ್ಲಿ ನನ್ನ ಪುರಾಣವನ್ನೆಲ್ಲಾ ಬಿಚ್ಚಿಡುತ್ತಾನೋ ಎಂಬ ಆತಂಕದಿಂದ ಕೂಡಲೇ ಮದ್ಯ ಪ್ರವೇಶಿಸಿ: ’ಎಸ್ ಎಸ್ ಎಸ್ ನೀವು ಹೇಳುವುದು ಸರಿ, ಹೆಣ್ಣು ಮಕ್ಕಳಿಗೂ ಅವಕಾಶ ನೀಡಬೇಕಾದುದು ನಿಜವೇ, ಯಾಮ್ ಐ ರೈಟ್? ಈ ಬಗ್ಗೆ ನಮ್ಮ ವಿರೋಧ ಪಕ್ಷದ ರಾಜಕಾರಣಿಗಳು ಏನಂತಾರೆ ಕೇಳೋಣ, ಸಾರ್, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ವಿಪಕ್ಷ ನಾಯಕರು: ’ಅಲ್ಲಾ ಸಾರ್, ಮನರಂಜನೆ ಬೇಕಂದ್ರೆ ಜನ ನಾಟಕಕ್ಕೋ, ಸಿನಿಮಾಕ್ಕೋ ಹೋಗ್ತಾರೆ, ಬಾರುಗಳಲ್ಲೇ ಮನರಂಜನೆ ಇಟ್ಟರೆ ನಾಟಕಗಳನ್ನು ನೋಡುವವರ್ಯಾರು, ಸಿನಿಮಾಗಳನ್ನು ನೋಡುವವರ್ಯಾರು, ಆಗ ನಮ್ಮ ಕಲಾವಿದರುಗಳು ಹೊಟ್ಟೆಪಾಡಿಗಾಗಿ ಏನು ಮಾಡಬೇಕು, ನಾನೂ ಒಬ್ಬ ಕಲಾವಿದನಾಗೇ ರಾಜಕೀಯ ಪ್ರವೇಶ ಮಾಡಿದವನು. ಇವರು ಹೆಂಡದಂಗಡಿಗಳಲ್ಲೆಲ್ಲಾ ಹುಡುಗಿಯರನ್ನು ಕೆಲಸಕ್ಕಿಟ್ಟರೆ ನಮ್ಮ ನಾಟಕ ಮಂದಿರಗಳನ್ನು, ಸಿನಿಮಾ ಮಂದಿರಗಳನ್ನು ಮುಚ್ಚಬೇಕಾಗುತ್ತದಷ್ಟೇ...’ ಎನ್ನುವಾಗಲೇ...
ಮಧ್ಯ ಪ್ರವೇಶಿಸಿದ ಎಸ್ ಎಸ್ ಭಟ್ಟ: ’ಎಸ್ ಎಸ್ ಎಸ್ ನೀವು ತುಂಬಾ ಒಳ್ಳೆಯ ಪಾಯಿಂಟು ಹೇಳಿದ್ರಿ, ಇದರಿಂದಾಗಿ ತಲೆತಲಾಂತರದಿಂದ ಬಂದಿರುವ ಕಲೆಗೆ ಧಕ್ಕೆಯಾಗುವುದು ಖಂಡಿತಾ, ಯಾಮ್ ಐ ರೈಟ್? ಇದರ ಬಗ್ಗೆ ನಮ್ಮ ಮತ್ತೊಬ್ಬ ವಿರೋಧ ಪಕ್ಷದ ನಾಯಕರು ಏನು ಹೇಳ್ತರೆ ಕೇಳೋಣ ಬನ್ನಿ’ ಎಂದು ಅವನತ್ತ ತಿರುಗಿ, ಎಸ್ ನೀವೀನಂತೀರಿ’ ಅಂದರು.
ಆ ನಾಯಕನದ್ದೂ ಹಲವಾರು ವೈನ್ ಸ್ಟೋರುಗಳು, ಬಾರುಗಳಿದ್ದವು, ಆತನೂ ತನ್ನ ಬಾರಿನಲ್ಲಿ ಲೈವ್ ಬ್ಯಾಂಡು ನಡೆಸುತ್ತಿದ್ದವನೇ, ಆತನನ್ನು ನಿಮ್ಮ ರಾಜಕೀಯ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿರೆಂದು ಫಿಕ್ಸ್ ಮಾಡಿಕೊಂಡು ಎಸ್ ಎಸ್ ಭಟ್ಟರು ತಮ್ಮ ಟಿವಿ ಸ್ಟುಡಿಯೋಕ್ಕೆ ಕರೆಸಿದ್ದರು. ಇಲ್ಲಿ ನೋಡಿದರೆ ವೈನ್ ಸ್ಟೋರ್, ಬಾರುಗಳ ಬಗ್ಗೆ ಚರ್ಚೆ ಆರಂಭಗೊಂಡಿದ್ದರಿಂದ ಇಕ್ಕಟ್ಟಿಗೆ ಸಿಲುಕಿದಂತಾದ ಆ ನಾಯಕ ಸಡನ್ನಾಗಿ ಏನು ಹೇಳಬೇನ್ನುವುದು ತಿಳಿಯದೇ ಈ ನನ್ಮಗ ನನಗೆ ಇವತ್ತು ಬಾರುಗಳ ವಿಷಯವೆಂದು ತಿಳಿಸಲಿಲ್ಲವಲ್ಲಾ...ಎಂದುಕೊಳ್ಳುತ್ತಾ ಎಸ್ ಎಸ್ ಭಟ್ಟನನ್ನು ಒಮ್ಮೆ ಗುರಾಯಿಸಿ...
ರಾಜಕಾರಣಿ: ’ನೋಡಿ ಸಾರ್, ಇಂದು ನಾವು ತತ್ವ ಆದರ್ಶಗಳನ್ನು ಇಟ್ಟುಕೊಂಡು ಬಾಳಬೇಕಾಗಿದೆ, ನಾನು ರಾಜಕೀಯದಲ್ಲಿ ತತ್ವಗಳನ್ನಿಟ್ಟುಕೊಂಡಿರುವವನು, ಇಂದು ನಮಗೆ ಅದು ಮುಖ್ಯವೇ ಹೊರತು ಬೇರಾವುದೂ ಅಲ್ಲ’ ಎಂದು ಮುಂದೇನೂ ಮಾತಾಡಲು ತೋಚದೇ ತೆಪ್ಪನೆ ಕೂತರು.
ಅವರ ಕಷ್ಟವನ್ನು ಅರ್ಥ ಮಾಡಿಕೊಂಡವನಂತೆ ಎಸ್ ಎಸ್ ಭಟ್ಟ; ’ಎಸ್ ಎಸ್ ಎಸ್ ನೀವು ಹೇಳಿದ್ದು ಅಕ್ಷರಶಃ ಸತ್ಯ. ಅಂದರೆ ಕುಡಿಯುವುದು ತಪ್ಪೆಂದು ನಿಮ್ಮ ಮಾತಿನ ಉದ್ದೇಶ ಅಂತ ನಾನಂತೂ ಅರ್ಥ ಮಾಡಿಕೊಂಡಿದ್ದೇನೆ ಯಾಮ್ ಐ ರೈಟ್? ಎಸ್...ಇದರ ಬಗ್ಗೆ ನಮ್ಮ ಸಚಿವರು ಏನಂತಾರೆ ಕೇಳೋಣ, ಎಸ್ ನೀವೇನಂತೀರಿ ಸಾರ್?’ ಎಂದು ಸಚಿವರನ್ನು ಕೇಳಿದರು.
ಮೊನ್ನೆ ತಾನೇ ತನ್ನ ಹತ್ತಾರು ಬಾರು ಲೈಸೆನ್ಸುಗಳಿಗಾಗಿ ನನ್ನ ಮುಂದೆ ಬಂದು ಗೋಗರೆದು ಕೆಲಸ ಮಾಡಿಸಿಕೊಂಡು ಹೋದ ಈ ಪಾರ್ಟಿ ಇದೀಗ ತತ್ವ ಆದರ್ಶದ ಬಗ್ಗೆ ಮಾತಾಡುತ್ತಿರುವುದನ್ನು ಕಂಡು ಕೆರಳಿದ ಅಬ್ಕಾರಿ ಸಚಿವರು- ’ನೋಡೀ ಸಾರ್, ಇದು ತತ್ವ ಆದರ್ಶದ ಪ್ರಶ್ನೆಯಲ್ಲಾ, ಬಾರು, ವೈನ್ ಸ್ಟೋರುಗಳನ್ನಿಟ್ಟಿರುವವರಿಂದ ನಾನು ತತ್ವದ ಬಗ್ಗೆ ಹೇಳಿಸಿಕೊಳ್ಳಬೇಕಿಲ್ಲಾ, ಅವರ ಬಾರುಗಳಲ್ಲೇ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿಲ್ಲವಾ ಕೇಳಿ, ಅದರಿಂದ ನಮ್ಮ ವ್ಯಾಪಾರ ದುಪ್ಪಟ್ಟಾಗಿದೆಯೆಂದು ಅವರೇ ನನ್ನ ಬಳಿ ಹೇಳಿದ್ದರೋ, ಇಲ್ವೋ ಕೇಳಿ,’ ಅಂದವರೇ ಆ ರಾಜಕೀಯ ನಾಯಕನ ಮದ್ಯ ವ್ಯಾಪಾರದಲ್ಲಿ ತನ್ನದೂ ಪಾಲುದಾರಿಕೆಯಿದೆಯೆನ್ನುವುದು ಸಡನ್ನಾಗಿ ನೆನಪಾಗಿ ಆತನೇನಾದರೂ ತನ್ನ ಹೆಸರನ್ನೂ ಹೇಳಿಬಿಟ್ಟರೆ ತಲೆನೋವೆಂದುಕೊಂಡವನೇ ಹೇಗಾದರೂ ತೇಪೆ ಹಾಕಬೇಕೆಂದು ’ಹೌದು, ಆದರೂ ಅವರು ಹೇಳಿದಂತೆ ತತ್ವ ಮುಖ್ಯ’ ಅಂದರು.
ಇಂಥಾ ಚರ್ಚೆಯಿಂದ ತನಗೆ ಫಾಯಿದೆಯಾಗುವುದಿಲ್ಲವೆಂದರಿತ ಎಸ್ ಎಸ್ ಭಟ್ಟರು; ’ಎಸ್ ಎಸ್ ಎಸ್ ನೀವ್ ಹೇಳದೂ ಸತ್ಯ. ತತ್ವ, ತತ್ವ ಮುಖ್ಯ ಎಂದವನೇ ವಿಪಕ್ಷದ ನಾಯಕರನ್ನು ’ಎಸ್ ಹೇಳೀ ಸಾರ್, ನೀವಿದನ್ನು ಒಪ್ತೀರೋ ಇಲ್ವೋ’ ಅಂದರು.
ಮದ್ಯ ವ್ಯಾಪಾರದಿಂದ ದೂರವಿದ್ದು, ಹತ್ತಾರು ಥಿಯೇಟರುಗಳ ಮಾಲೀಕರಾಗಿದ್ದ, ಹಲವಾರು ರಿಯಲ್ ಎಸ್ಟೇಟು ಅವ್ಯವಹಾರದಲ್ಲಿ ಭಾಗಿಯಾಗಿದ್ದ ಆ ವಿರೋಧ ಪಕ್ಷದ ನಾಯಕರು ಈ ಚರ್ಚೆಯನ್ನು ಮದ್ಯ ವ್ಯಾಪಾರಕ್ಕೇ ಸೀಮಿತಗೊಳಿಸಿದರೆ ಅಲ್ಲಿದ್ದ ಇಬ್ಬರು ರಾಜಕಾರಣಿಗಳನ್ನೂ ಇಕ್ಕಟ್ಟಿಗೆ ಸಿಲುಕಿಸಿ ಅದರ ಲಾಭ ಪಡೆಯಬಹುದೆಂಬ ಲೆಕ್ಕಾಚಾರ ಹಾಕಿಕೊಂಡವರೇ ’ನೋಡೀ ಸಾರ್, ತತ್ವಕ್ಕೂ ಬಾರಿನಲ್ಲಿ ಹುಡುಗಿಯರನ್ನು ಕುಣಿಸುವುದಕ್ಕೂ ಏನು ಸಂಬಂಧ ಹೇಳಿ? ಈ ಸಚಿವರು ಬಾರುಗಳಲ್ಲಿ ಹುಡುಗಿಯರು ಕೆಲಸ ಮಾಡಬಹುದೆಂದು ಅಪ್ಪಣೆ ಕೊಡಿಸಿದಾಗಿಂದ ಕುಡಿದವರು ಅಲ್ಲೇ ಕಾಲಹರಣ ಮಾಡಿ ಮನೆ ಕಡೆ ಹೊರಟು ಹೋಗುತ್ತಿದ್ದಾರೆ, ಮುಂಚೆ ಈ ಪರಿಸ್ಥಿತಿ ಇರಲಿಲ್ಲ. ಕುಡಿದು ಜಾಸ್ತಿಯಾದವರು ಮನೆಗೆ ಹೋದರೆ ಹೆಂಡತಿಯರ ಕಾಟವೆಂದು ಕಾಸು ಕೊಟ್ಟು ಥಿಯೇಟರುಗಳಿಗೆ ಬಂದು ಸಿನಿಮಾ ನೋಡದಿದ್ದರೂ ಮಲಗಿಯಾದರೂ ಕುಡಿದ ಅಮಲನ್ನು ಇಳಿಸಿಕೊಂಡು ಮನೆಗೆ ಹೋಗುತ್ತಿದ್ದರು. ಆದರೀಗ ಅವರಿಗೆ ಬಾರುಗಳಲ್ಲೇ ಪುಕ್ಕಟೆ ಮನರಂಜನೆಯಿರುವುದರಿಂದ ಹೊತ್ತು ಗೊತ್ತಿಲ್ಲದೆ ಎರ್ರಾಬಿರ್ರಿ ಕುಡಿದು ಮನೆಗೆ ಹೋಗಿ ದಿನನಿತ್ಯ ತಮ್ಮ ಹೆಂಡತಿಯರ ಬಳಿ ಹೊಡೆತ ತಿನ್ನುವುದು ಜಾಸ್ತಿಯಾಗುತ್ತಿದೆ. ನಮ್ಮ ಥಿಯೇಟರುಗಳು ಜನರಿಲ್ಲದೇ ಬಣಗುಡುತ್ತಿವೆ. ಹೀಗಾದರೆ ನಮ್ಮ ಗತಿಯೇನಾಗಬೇಕು ಹೇಳಿ?’ ಎಂದು ತನ್ನ ವ್ಯಾಪಾರದ ಕಷ್ಟ ಹೇಳಿಕೊಂಡರು.
ಎಸ್ ಎಸ್ ಭಟ್ಟರು: ’ಎಸ್ ಎಸ್ ಎಸ್ ನೀವು ಹೇಳದು ಸತ್ಯ. ನಿಮ್ಮ ಥಿಯೇಟರುಗಳೆಲ್ಲಾ ಖಾಲಿಯಾಗಿ ಕೆಲಸಗಾರರಿಗೆ ಸಂಬಳ ನೀಡುವುದೂ ಕಷ್ಟವಾಗಿದೆ ತಾನೇ, ಯಾಮ್ ಐ ರೈಟ್? ಸೋ ಇದಕ್ಕೇನಂತಾರೆ ಸಚಿವರು ಅವರನ್ನೇ ಕೇಳೋಣ ಬನ್ನಿ...’
ಅಬ್ಕಾರಿ ಸಚಿವರು; ’ನಮ್ಮ ಪ್ರತಿಪಕ್ಷದ ನಾಯಕರ ಕಷ್ಟ ನನಗರ್ಥವಾಗುತ್ತದೆ, ಆದರೆ ನಾನು ಅಬ್ಕಾರಿ ಸಚಿವನಾದ ಮೇಲೆ ನನ್ನ ಇಲಾಖೆಯ ಅದಾಯ ಹೆಚ್ಚುತ್ತಿದೆ. ಪಾಪ ಅವರ ಥಿಯೇಟರುಗಳಿಗೆ ಜನ ಬಾರದಿರುವುದಕ್ಕೆ ಅವರು ನನ್ನನ್ನು ದೂರ್ತಿದ್ದಾರೆ. ಬೇಕಾದ್ರೆ ನಾನು ಥಿಯೇಟರುಗಳಲ್ಲಿಯೂ ಮದ್ಯ ಮಾರಾಟಕ್ಕೆ ಅನುಮತಿ ನೀಡುತ್ತೇನೆ. ಜನ ಕುಡಿಯುತ್ತಲೇ ಸಿನಿಮಾ ಆನಂದಿಸಲಿ, ಒಟ್ಟಾರೆ ಜನರಿಗೆ ಎಲ್ಲಾ ಕಡೆಯೂ ಮದ್ಯ ಸಿಗುವಂತೆ ಮಾಡುವುದೇ ನನ್ನ ಪ್ರಮುಖ ಉದ್ದೇಶ. ಇನ್ನು ಮುಂದೆ ಪ್ರತೀ ಹಳ್ಳಿ ಹಳ್ಳಿಯಲ್ಲೂ ಮದ್ಯದ ಅಂಗಡಿಗಳನ್ನು ತೆರೆಯಲು ನಾನು ನಿಶ್ಚಯಿಸಿದ್ದೇನೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಹಣ ಹರಿದು ಬಂದು ನಾವು ಅಭಿವೃದ್ದಿಯಲ್ಲಿ ಮೊದಲನೇ ಸ್ಥಾನವನ್ನು ಗಳಿಸುವುದು ಖಂಡಿತ. ನಮ್ಮ ಮುಖ್ಯಮಂತ್ರಿಗಳೂ ಸಹ ನನ್ನ ಮೇಲೆಯೇ ಭರವಸೆಯಿಟ್ಟು ಹೇಗಾದರೂ ಮಾಡಿ ಹಳ್ಳಿ ಹಳ್ಳಿಯಲ್ಲೂ ಮದ್ಯದಂಗಡಿಗಳನ್ನು ಹೆಚ್ಚು ಮಾಡಿ ಜನರೆಲ್ಲಾ ಸದಾ ಕುಡಿದು ಅಮಲಿನಲ್ಲಿರುವಂತೆ ಮಾಡು ಇದು ನಮಗೇ ಅನುಕೂಲ ಎಂದಿದ್ದಾರೆ’ ಎಂದವರೇ ’ಗುರುಗಳೇ ಇದು ಆಫ಼್ ದಿ ರೆಕಾರ್ಡ್’ ಎಂದು ಎಸ್ ಎಸ್ ಭಟ್ಟನ ಕಿವಿಯಲ್ಲಿ ಉಸುರಿದರು.
ಎಸ್ ಎಸ್ ಭಟ್ಟರು ಸಾಕು ನಿಲ್ಲಿಸಿ ಎನ್ನುವಂತೆ ಕಣ್ಣು ಮಿಟುಕಿಸಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳದ ಅಬ್ಕಾರಿ ಸಚಿವರು ’ರೈತರು ಹೆಚ್ಚು ಹೆಚ್ಚು ಕುಡಿದಾಗ ಅವರು ನಮ್ಮ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲಾ ಅಂತಾ ಮುಖ್ಯಮಂತ್ರಿಗಳು ನನ್ನಲ್ಲಿ ಗುಟ್ಟಾಗಿ ಹೇಳಿದ್ದಾರೆ, ಯಾಕಂದರೆ ನಮ್ಮ ಮುಖ್ಯಮಂತ್ರಿಗಳು ಈ ನಾಡಿನ ರೈತರ ಹೆಸರಿನಲ್ಲಿ ಪ್ರಮಾಣವಚನ ಮಾಡಿದವರು, ಅವರಿಗೆ ನಮ್ಮ ರೈತರು ಸದಾ ಸಂತಸದಿಂದ ನಲಿಯುತ್ತಿರಬೇಕೆನ್ನುವುದೇ ಪ್ರಮುಖ ಉದ್ದೇಶವಾಗಿದೆ. ನೆರೆಯಿರಲಿ, ಬರ ಬರಲಿ ಸದಾ ನಮ್ಮ ರೈತರು ಕುಡಿದು ಖುಶಿಯಾಗಿರಬೇಕೆನ್ನುವುದು ನಮ್ಮ ಸರ್ಕಾರದ ಅಜೆಂಡಾ. ನೆರೆ ಪರಿಹಾರದ ಸಂತ್ರಸ್ತರು ಇನ್ನೂ ಮುರುಕು ಶೆಡ್ಡುಗಳಲ್ಲಿಯೇ ಇರುವುದರಿಂದ ಅವರಿಗೆ ಚಳಿಯಾಗದಂತೆ ಮಾಡಲು ಅವರುಗಳ ಶೆಡ್ಡುಗಳ ಬಳಿಯೇ ಮದ್ಯದಂಗಡಿಗಳನ್ನು ತೆರೆಸಿ ಅವರಿಗೆ ಉಪಕಾರ ಮಾಡಿದ್ದೇನೆ ಗೊತ್ತಾ...? ಇದೀಗ ಆ ರೈತರಿಗೆ ಚಳಿ ಬಾಧೆ ಕಡಿಮೆಯಾಗಿದೆಯಂತೆ, ಅದಕ್ಕಿಂತ ಇನ್ನೇನು ಹೇಳಿ, ಅದಕ್ಕಾಗಿಯೇ ನಾನು ರೈತರ ನಲಿವಿಗಾಗಿ ಪ್ರತೀ ಹಳ್ಳಿಯಲ್ಲೂ ಜನ ಕೇಳಿದಷ್ಟು ಮದ್ಯದಂಗಡಿಗಳನ್ನು ತೆರೆಸುತ್ತಿದ್ದೀನಿ. ನಾವು ಸದಾ ರೈತರ ಪರವಿರುವುದರಿಂದ ಅವರ ಸುಖವೇ ನಮ್ಮ ಸುಖ’ ಎಂದವರೆ ಎಸ್ ಎಸ್ ಭಟ್ಟರತ್ತ ನೋಡಿದರು.
ಎಸ್ ಎಸ್ ಭಟ್ಟರ ಮುಖ ಇಂಗು ತಿಂದ ಮಂಗನಂತಾಗಿತ್ತು. ಏಕೆಂದರೆ ಅದು ನೇರಪ್ರಸಾರದ ಕಾರ್ಯಕ್ರಮ ಎನ್ನುವುದನ್ನೂ ಮರೆತು ಆ ದಡ್ಡ ಅಬ್ಕಾರಿ ಸಚಿವರು ತನ್ನಷ್ಟಕ್ಕೆ ತಾನೇ ಆಫ಼್ ದಿ ರೆಕಾರ್ಡ್ ಎಂದು ಹೇಳಿ ಎಸ್ ಎಸ್ ಭಟ್ಟ ನೀಡುತ್ತಿದ್ದ ಎಚ್ಚರಿಕೆಯನ್ನೂ ಲೆಕ್ಕಿಸದೇ ಗುಟ್ಟಿನ ವ್ಯವಹಾರವನ್ನು ಬಹಿರಂಗಗೊಳಿಸಿಬಿಟ್ಟಿದ್ದರು! ಇನ್ನೂ ಮುಂದೇನು ಮಾತಾಡಿ ಅನಾಹುತ ಮಾಡಿಬಿಡುವನೋ ಈ ದಡ್ಡ ಸಚಿವ ಎಂದು ಎಚ್ಚೆತ್ತ ಎಸ್ ಎಸ್ ಕೂಡಲೇ ಸಭಿಕರನ್ನುದ್ದೇಶಿಸಿ ’ಎಸ್ ಎಸ್ ಎಸ್ ವೀಕ್ಷಕರೇ ಇದೀಗ ಸಣ್ಣ ಬ್ರೇಕ್ ಎಂದರು’.
ಬ್ರೇಕ್ ಸಮಯದಲ್ಲಿ ಎಸ್ ಎಸ್ ಭಟ್ಟರು ಅಬ್ಕಾರಿ ಸಚಿವನನ್ನು ತರಾಟೆಗೆ ತಗಂಡು ’ಅಲ್ಲ ಸಾರ್, ನೀವು ನೇರಪ್ರಸಾರದ ಕಾರ್ಯಕ್ರಮದಲ್ಲಿ ಅದನ್ನೆಲ್ಲಾ ಯಾಕೆ ಹೇಳಿದ್ರಿ, ಜನ ಅದನ್ನೆಲ್ಲಾ ಕೇಳಿಸಿಕೊಂಡುಬಿಟ್ರಲ್ಲಾ, ಎಂಥಾ ಕೆಲಸ ಮಾಡಿಬಿಟ್ಟಿರಿ, ಎಂಥಾ ಕೆಲಸವಾಗೋಯ್ತು,’ ಎಂದು ಕೈ ಹಿಸುಕಿಕೊಂಡು ಆತಂಕ ವ್ಯಕ್ತಪಡಿಸಿದ. ಆತ ಹೇಳಿದ ಮಾತು ಕೇಳಿದ ಅಬ್ಕಾರಿ ಸಚಿವರಿಗೆ ಕೈಕಾಲು ನಡುಕ ಶುರುವಾಗಿ ’ನೀವ್ಯಾಕ್ರೀ ನನಗೆ ಮೊದಲೇ ಹೇಳಲಿಲ್ಲ, ನಾನು ನಿಮ್ಮ ಜತೆ ಗುಂಡಾಕುವಾಗ ಆಫ಼್ ದಿ ರೆಕಾರ್ಡ್ ಎಂದು ಅದೆಷ್ಟು ಬಾರಿ ಮಾತಾಡಿದ್ದೀನಿ, ನೀವೇ ವಿರೋಧ ಪಕ್ಷಗಳವರ ಅದೆಷ್ಟೋ ಗುಟ್ಟನ್ನು ನನ್ನ ಬಳಿ ಹೇಳಿದ್ದೀರಿ, ನೀವು ಕ್ಯಾಮರಾ ಆಫ಼್ ಮಾಡಿಸಬೇಕಿತ್ತಲ್ಲವಾ’, ಎಂದು ಎಸ್ ಎಸ್ ಭಟ್ಟನನ್ನು ತರಾಟೆಗೆ ತಗಂಡರು.
ಅಷ್ಟರಲ್ಲಾಗಲೇ ಈ ನೇರ ಪ್ರಸಾರವನ್ನು ನೋಡಿದ್ದ ವೀಕ್ಷಕನೊಬ್ಬನೊಬ್ಬ ಫೋನ್ ಮಾಡಿದವನೇ ’ಅಬ್ಕಾರಿ ಸಚಿವರು ರೈತರನ್ನು ಕುಡಿಸಿ ತೃಪ್ತಿ ಪಡಿಸುವುದೇ ತಮ್ಮ ಸರ್ಕಾರದ ಉದ್ದೇಶವೆನ್ನುತ್ತಿದ್ದಾರೆ, ಅಲ್ಲದೆ, ಜಿಲ್ಲಾ ಕೇಂದ್ರದಲ್ಲಿರುವ ಬಾರುಗಳಲ್ಲಿಯೂ ಹುಡುಗಿಯರೇ ಸಪ್ಲೈ ಮಾಡಬೇಕೆಂದು ಆದೇಶ ಹೊರಡಿಸಿದ್ದಾರೆ. ಅಲ್ಲಿ ಕೂತಿರುವ ವಿರೋಧಪಕ್ಷದ ನಾಯಕರುಗಳು, ಅಬ್ಕಾರಿ ಮಂತ್ರಿಗಳ ಮಾತುಗಳನ್ನು ಕೇಳಿಕೊಂಡು ಸುಮ್ಮನಿರುವುದನ್ನು ನೋಡಿದರೆ ಅವರೂ ಈ ವ್ಯವಹಾರದಲ್ಲಿ ಪಾಲುದಾರರಿರಬಹುದೆಂಬ ಸಂಶಯ ಬರುತ್ತಿದೆ’ ಎಂದು ತನ್ನ ಮಾತನ್ನು ಮುಂದುವರೆಸುತ್ತಿದ್ದಂತೆಯೇ ಅವನಿನ್ನೆಲ್ಲಿ ನನ್ನನ್ನೂ ಪಾಲುದಾರನಿರಬಹುದೆಂದು ಹೇಳಿಬಿಡುತ್ತಾನೋ ಎಂಬ ಆತಂಕದಿಂದ ಅವನ ಮಾತನ್ನು ಅಷ್ಟಕ್ಕೇ ತುಂಡರಿಸಿ, ಎಸ್ ಎಸ್ ಭಟ್ಟರು...
’ಎಸ್ ಎಸ್ ಎಸ್ ನೀವು ಹೇಳಿದ್ದು ಸರಿಯಾಗಿದೆ ಇವರೇ, ಇದಕ್ಕೆ ನಮ್ಮ ನಾಯಕರೇನು ಹೇಳ್ತರೆ ಕೇಳೋಣ ಅದಕ್ಕೂ ಮುಂಚೆ ಸಣ್ಣ ಬ್ರೇಕ್’ ಅಂದವರ್ ಭಟ್ಟರು ಕ್ಯಾಮರಾ ಆಫ಼್ ಆದುದನ್ನು ಖಚಿತ ಪಡಿಸಿಕೊಂಡು ಟೆಲಿಫೋನ್ ಆಪರೇಟ್ ಮಾಡುತ್ತಿದ್ದವನನ್ನು ಕರೆದು ಇನ್ನು ಮುಂದೆ ಸಾರ್ವಜನಿಕರ್ಯಾರಿಗೂ ಲೈನ್ ಸಿಗದಂತೆ ಕಟ್ ಮಾಡುವಂತೆ ಸೂಚಿಸಿ ತಮ್ಮದೇ ಚಾನಲ್ಲಿನಲ್ಲಿ ಕೆಲಸ ಮಾಡುವವರಿಗೆ ಒಂದಷ್ಟು ಪ್ರಶ್ನೆಗಳನ್ನು ಬರೆದುಕೊಟ್ಟು ಆ ಪ್ರಶ್ನೆಗಳನ್ನು ಮಾತ್ರ ಸಾರ್ವಜನಿಕರ ಹೆಸರಿನಲ್ಲಿ ಬೇರೆ ಬೇರೆ ಊರುಗಳ ಹೆಸರು ಹೇಳಿ ಕೇಳಬೇಕೆಂದರು. ಎಸ್ ಎಸ್ ಭಟ್ಟನ ಬುದ್ದಿವಂತಿಕೆಗೆ ತಲೆತೂಗಿದ ನಾಯಕರುಗಳು ಹೇಗಾದರೂ ತಮ್ಮನ್ನು ಸಂಕಷ್ಟದಿಂದ ಪಾರು ಮಾಡುವಂತೆ ವಿನಂತಿಸಿಕೊಂಡರು. ಇದೇ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಎಸ್ ಎಸ್ ಭಟ್ಟರು ಅಬ್ಕಾರಿ ಇಲಾಖೆಯಲ್ಲಿ ಪೆಂಡಿಂಗ್ ಆಗಿದ್ದ ತಮ್ಮ ಕೆಲಸಗಳನ್ನು ಮಾಡಿಕೊಡುವಂತೆ ಒಂದು ಪುಟ್ಟ ಲಿಸ್ಟ್ ಅನ್ನು ಅಬ್ಕಾರಿ ಸಚಿವರ ಕೈಗಿಟ್ಟರು.
ಮುಂದೆ ವೀಕ್ಷಕರ ಹೆಸರಿನಲ್ಲಿ ಬಂದ ಪ್ರಶ್ನೆಗಳೆಲ್ಲವೂ ಮೂವರೂ ರಾಜಕಾರಣಿಗಳನ್ನು ಹೊಗಳಿದವೇ ಆಗಿದ್ದವು ಎಂಬುದನ್ನು ಬುದ್ದಿವಂತರಾದ ನಮ್ಮ ಓದುಗರು ಅರ್ಥಮಾಡಿಕೊಂಡಿರುತ್ತಾರೆ ಎಂದು ನಾವಾದರೂ ತಿಳಿದುಕೊಳ್ಳುತ್ತಾ ಮುಂಬರುವ ಸಂಚಿಕೆಗಳಲ್ಲಿ ಈ ನಮ್ಮ ಎಲೆ ಅಡಿಕೆ ಎಸ್ ಎಸ್ ಭಟ್ಟರ ಸಂದರ್ಶನದ ಮತ್ತೊಂದಷ್ಟು ಝಲಕುಗಳನ್ನು ಹಾಗೂ ವೀಕ್ಷಕರನ್ನು ಭಯಭೀತರನ್ನಾಗಿಸುವ ಟಿವಿ ಮಾದ್ಯಮಗಳ ಕಾರ್ಯಕ್ರಮದ ಸತ್ಯಾಸತ್ಯತೆಯ ಬಗ್ಗೆ ನಿಮ್ಮ ಮುಂದಿಡಲಿದ್ದೇವೆ. ಅಲ್ಲಿವರೆಗೂ ಭಯ ಪಡದೇ ಆರಾಮಾಗಿರೆಂದು ಹೇಳುತ್ತಾ.....
(ಮುಂದುವರೆಯುವುದು)
ಕೆಂಪನ್ನೂ ಕರಗಿಸಿಟ್ಟ ’ದೀದಿ’ಯ ಅಕ್ಕರೆ!
ಇತ್ತ, ಕರ್ನಾಟಕಕ್ಕೆ ಹೆಮ್ಮೆಯ ಫ಼ಸ್ಟ್ ಪ್ರೈಜ಼್! |
’ಸಹನಾ’
ಭಾರತದ ರಾಜಕೀಯದಲ್ಲಿ ಈ ವರ್ಷ ಅತ್ಯಂತ ಮಹತ್ವದ್ದು! ಯಾಕೆಂದರೆ ಈ ಬಾರಿ ತಮಿಳ್ನಾಡು, ಕೇರಳ, ಅಸ್ಸಾಂ, ಪಾಂಡಿಚೆರಿ ಹಾಗು ಪಶ್ಚಿಮಬಂಗಾಳ ರಾಜ್ಯಗಳಲ್ಲಿ ನಡೆದ ಲೋಕಸಭಾ ಚುನಾವಣೆ ಕೊಟ್ಟಿರುವ ಐತಿಹಾಸಿಕ ಫಲಿತಾಂಶ!
ತಮಿಳುನಾಡಿನ ಡಿಎಂಕೆ ಸರ್ಕಾರ ೨ಜಿ ಸ್ಪೆಕ್ಟ್ರಮ್ ಹಗರಣಕ್ಕೆ ತಲೆತೆತ್ತು ಜಯಲಲಿತಾಗೆ ಮತ್ತೆ ಪಟ್ಟ ಬಿಟ್ಟುಕೊಟ್ಟರೆ, ಕೇರಳದಲ್ಲಿ ಎಡರಂಗದ ಅಚ್ಯತ ನಂದನ್ ಸರ್ಕಾರ ಅಂತರಿಕ ಸಮಸ್ಯೆಗಳಿಂದ ಅಧಿಕಾರ ಕಳೆದುಕೊಳ್ಳಬೇಕಾಯ್ತು. ಅಸ್ಸಾಂನಲ್ಲಿ ಮಾತ್ರ ಕಾಂಗ್ರೆಸ್ಸ್ ನ ಗೊಗಾಯ್ ಸರ್ಕಾರ ಮೂರನೆ ಬಾರಿ ಅಧಿಕಾರ ಹಿಡಿಯುವ ಮೂಲಕ ತನ್ನ ಅಧಿಪತ್ಯ ಮುಂದುವರಿಸಿದೆ .ಈ ಚುನಾವಣೆಗಳಲ್ಲಿ ಅತ್ಯಂತ ಗಮನಾರ್ಹವಾದದ್ದು ಎಂದರೆ ಪಶ್ಚಿಮ ಬಂಗಾಳದ ಚುನಾವಣೆ. ಕಳೆದ ೩೪ ವರ್ಷಗಳಿಂದ ಪಶ್ಚಿಮ ಬಂಗಾಳವನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಎಡರಂಗ ಸರ್ಕಾರದ ಪತನದ ಮೂಲಕ, ಬಂಗಾಲಿ ಬಾಬುಗಳ ನೆಚ್ಚಿನ ’ದೀದೀ’ ಯಾಗಿ ಮಮತಾ ಎಂಬ ಫೈರ್ ಬ್ರಾಂಡ್ ನಾಯಕಿ ರಾರಾಜಿಸತೊಡಗಿದ್ದಾರೆ. ಪಶ್ಚಿಮ ಬಂಗಾಳದ ರಾಜಕೀಯ ನೋಡಿದರೆ ಬಹುಶ ಎಡಪಂಥಿಯ ನಾಯಕರ ಊಹೆಗೆ ಸಿಲುಕದ ಫಲಿತಾಂಶವನ್ನ ಬಂಗಾಳದ ಜನತೆ ನೀಡುವ ಮೂಲಕ ಕೆಂಬಾವುಟದ ಆಳ್ವಿಕೆ ಯನ್ನು ಕೊನೆಗೊಳಿಸಿದ್ದಾರೆ. ಈಗ ಮಮತಾ ದೀದೀಯದೆ ಕಾರುಬಾರು!
ಮಮತಾ ಶಪಥ: ೧೯೯೩ ಜನವರಿ ೭ ಆಗಿನ್ನೂ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಪಕ್ಷದ ಯುವ ನಾಯಕಿ! ಕಮುನಿಸ್ಟ್ ಆಳ್ವಿಕೆಯಲ್ಲಿ ನಡೆಯುತ್ತಿದ್ದ ಹಿಂಸಾಚಾರವನ್ನ ಗಟ್ಟಿ ದ್ವನಿಯಲ್ಲಿ ಕೇಳುತ್ತಿದ್ದ ದಿಟ್ಟೆ! ಆಗ ನಡೆದ ಒಂದು ಘಟನೆ ಇಂದು ಮಮತಾ ಮುಖ್ಯಮಂತ್ರಿ ಗಾದಿಗೇರಲು ಪ್ರೇರಕ ಅನ್ನೋದು ವಿಶೇಷ. .ಹಿಂದುಳಿದ ವರ್ಗಕ್ಕೆ ಸೇರಿದ ಯುವತಿಯೊಬ್ಬರು ಅತ್ಯಾಚಾರಕ್ಕೆ ಒಳಗಾಗಿದ್ದನ್ನು ಪ್ರಶ್ನಿಸಿ ಆ ಯುವತಿಗೆ ನ್ಯಾಯ ದೊರಕಿಸಿಕೊಡುವ ಸಲುವಾಗಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಅಧಿಕಾರ ಕೇಂದ್ರವಾದ ರೈಟರ್ಸ್ ಭವನ ಮೆಟ್ಟಲನ್ನು ಹತ್ತಿ ಮುಖ್ಯಮಂತ್ರಿ ಜ್ಯೋತಿಬಸು ವಿರುದ್ದ ಪ್ರತಿಭಟನೆಗೆ ಬಂದಾಗ .ಪೋಲಿಸ್ ಸಿಬ್ಬಂದಿ ಮಮತಾರನ್ನು ದರದರನೆ ಎಳೆದು ರೈಟರ್ಸ್ ಭವನದಿಂದ ಹೊರಹಾಕಿದ್ದರು. ಹಾಗೆ ಎಳೆಸಿಕೊಂಡು ಹೊರಹಾಕಿಸಿಕೊಂಡು ಅವಮಾನಿತರಾದ ಮಮತಾ ಬ್ಯಾನರ್ಜಿ ತಾನು ಮುಖ್ಯಮಂತ್ರಿ ಯಾಗುವವರೆಗೂ ರೈಟರ್ಸ್ ಭವನವನ್ನ ಹತ್ತುವುದಿಲ್ಲ ಎಂದು ಶಪಥ ಕೈಗೊಂಡಿದ್ದರು. ಅದನ್ನೀಗ ಆಕೆ ತೀರಿಸಿಕೊಂಡಿದ್ದಾರೆ!! ತಮ್ಮ ಶಪಥವನ್ನ ಪೂರೈಸಲು ಹದಿನೆಂಟು ವರ್ಷಗಳ ಕಾಲ ನಡೆಸಿದ ಸುದೀರ್ಘ ಸಾಮಾಜಿಕ ಮತ್ತು ರಾಜಕೀಯ ಹೋರಾಟವೀಗ ಫಲ ನೀಡಿ ಮಮತಾರ ಕನಸು ನನಸಾಗಿದೆ. ಅಚಲ ಹೋರಾಟ, ಸರಳತೆ, ಪ್ರಾಮಾಣಿಕತೆ ಹಾಗೂ ದಿಟ್ಟತನದ ಮಮತಾ ಅವರನ್ನ ಪಶ್ಚಿಮ ಬಂಗಳಾದ ಜನತೆ ತಮ್ಮ ನಾಯಕಿಯನ್ನಾಗಿ ಒಪ್ಪಿಕೊಳ್ಳುವಂತೆ ಮಾಡಿದೆ.
ಯಾರೀಕೆ? ೧೯೫೫ ರಲ್ಲಿ ಸಾಮಾನ್ಯ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಮಮತಾ ಕಾಲೇಜು ದಿನಗಳಿಂದಲೂ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಾಕೆ. ಮಹಿಳಾ ಪರ ಚಳುವಳಿ, ಹೋರಾಟದ ಜೊತೆಗೆ ರಾಜಕಿಯವಾಗಿಯೂ ಕಡಕ್ ಆಗಿ ಮಾತನಾಡುವ ಮಮತ ೭೦ ರ ದಶಕದಲ್ಲಿ ಕಾಂಗ್ರೆಸ್ಸ್ ಗೆ ಕಾಲಿಟ್ಟಾಗ ಅವರಲ್ಲಿನ ಹೋರಾಟ ಮನೋಭಾವ ಅವರನ್ನ ಅತಿ ಬೇಗನೆ ಪಶ್ಚಿಮ ಬಂಗಾಳದ ರಾಜ್ಯ ಮಹಿಳಾ ಕಾಂಗ್ರೆಸ್ಸ್ ಕಾರ್ಯದರ್ಶಿಯ ಸ್ಥಾನಕ್ಕೇರಿಸಿತ್ತು. ಈಕೆ ೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸ್ ಪಕ್ಷದ ಟಿಕೆಟ್ ಗಿಟ್ಟಿಸಿ ಹಿರಿಯ ಕಾಮ್ರೇಡ್ ಸೋಮನಾಥ್ ಚಟರ್ಜಿ ವಿರುದ್ದ ಸ್ಪರ್ಧಿಸಿ ಜಾಧವಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ದಿಸಿ ಮಣಿಸುವ ಮೂಲಕ ಲೋಕಸಭೆ ಪ್ರವೇಶಿಸಿದ ಅತಿ ಕಿರಿಯ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆಗಿನ್ನೂ ಮಮತಾಗೆ ೨೯ ವರ್ಷ! ಪಕ್ಷಕ್ಕೆ ಸೇರಿದ ೧೦ -೧೨ ವರ್ಷಗಳಲ್ಲೇ ಕಾಂಗ್ರೆಸ್ಸ್ ಆಕೆಯನ್ನ ಗುರ್ತಿಸಿ ಭವಿಷ್ಯದ ನಾಯಕಿ ಎಂಬ ಪಟ್ಟ ನೀಡಿತ್ತು. ಆಕೆಯಲ್ಲಿದ್ದ ಪ್ರಾಮಾಣಿಕತೆ, ವಾಕ್ಚಾತುರ್ಯ, ಬಡತನದ ಬಗ್ಗೆ ಆಕೆಗಿದ್ದ ಅರಿವು ಹಾಗು ಹೋರಾಟ ಮನೋಭಾವದ ಕಮ್ಯುನಿಸ್ಟ್ ಪಕ್ಷದವರನ್ನ ಸಮರ್ಥವಾಗಿ ಎದುರಿಸಬಲ್ಲ ಅಸ್ತ್ರಗಳು ಎಂಬುದು ಸ್ಪಷ್ಟಗೊಂಡಿತ್ತು. ೧೯೮೯ರ ಚುನಾವಣೆಯಲ್ಲಿ ಈಕೆ ಸೋತರೂ ಧೃತಿಗೆಡದ ಮಮತಾ ೧೯೯೧ ರಲ್ಲಿ ಕೋಲ್ಕತ್ತಾ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು, ಅಲ್ಲಿಂದ ೧೯೯೬, ೯೮, ೯೯, ೨೦೦೪ ಹಾಗು ೨೦೦೯ರ ಚುನಾವಣೆಗಳಲ್ಲಿ ಆಕೆ ಹಿಂತಿರುಗಿ ನೋಡಿಲ್ಲ. ೧೯೯೧ರಲ್ಲಿ ನರಸಿಂಹ ರಾವ್ ಸರ್ಕಾರದಲ್ಲಿ ಮೊದಲಿಗೆ ಕೇಂದ್ರ ಸಚಿವೆಯಾದ ಮಮತಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹೆಚ್ ಆರ್ ಡಿ ಹಾಗೂ ಯೂತ್ ಅಫೇರ್ಸ್ ಅಂಡ್ ಸ್ಪೋರ್ಟ್ಸ್ ಖಾತೆ ಗಳ ರಾಜ್ಯ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದಾಕೆ. ೧೯೯೩ ರರಲ್ಲಿ ಕ್ರೀಡಾ ಅಭಿವೃದ್ದಿಗೆ ಸರ್ಕಾರದ ತಾರತಮ್ಯ ವಿರೋದಿಸಿ ಯಾವುದೇ ಮುಲಾಜು ನೋಡದೆ ರಾಜೀನಾಮೆ ಬಿಸಾಕಿ ಹೊರಬಂದಾಕೆ. ೧೯೯೬ರರಲ್ಲಿ ತಮ್ಮದೇ ಕಾಂಗ್ರೆಸ್ಸ್ ಪಕ್ಷದ ವಿರುದ್ದ ಪೆಟ್ರೋಲ್ ದರ ಏರಿಕೆ ವಿರೋದಿಸಿ ಕೋಲ್ಕತ್ತಾ ದಲ್ಲಿ ಬೃಹತ್ ಪ್ರತಿಭಟನ ಪ್ರದರ್ಶನ ನಡೆಸಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾದಾಕೆ. ಆದರೂ ಯಾವುದಕ್ಕೂ ಸಲಾಮು ಹೊಡೆಯದೆ ಕಾಂಗ್ರೆಸ್ಸಿಗರ ಸಹವಾಸಕ್ಕೆ ೧೯೯೭ ರಲ್ಲಿ ಗುಡ್ ಬೈ ಹೇಳಿ ತೃಣಮೂಲ್ ಕಾಂಗ್ರೆಸ್ ಪಕ್ಷ ಕಟ್ಟುವಮೊಲಕ ತನ್ನದೇ ದಾರಿ ಕಂಡುಕೊಂಡಾಕೆ.
ಈಕೆ ೧೯೯೯ ರಲ್ಲಿ ಎನ್ ಡಿ ಏ ಜೊತೆ ಕೈ ಜೋಡಿಸುವ ಮೂಲಕ ಕೇಂದ್ರದಲ್ಲಿ ಅತಿ ಮಹತ್ವದ ರೈಲ್ವೆ ಖಾತೆ ಸಚಿವೆಯಾಗಿ ೨೦೦೦ರ ರೈಲ್ವೆ ಬಜೆಟ್ ಮಂಡಿಸುವ ಮೂಲಕ ದೇಶದ ಗಮನ ಸೆಳೆದರಾದರೂ ಎನ್ ಡಿ ಏ ಜೊತೆಗಿನ ಸಂಬಂಧ ಹೆಚ್ಚುದಿನ ಉಳಿಯದೆ ೨೦೦೧ ರಲ್ಲಿ ರಾಜೀನಾಮೆ ನೀಡಿ ಹೊರಬಂದರು. ಮುಂಗೋಪ ಹಾಗೂ ಭ್ರಷ್ಟ ಚಾರವನ್ನು ಸಹಿಸದ ಮಮತಾ ಅವರ ನಡವಳಿಕೆ ಬಹಳಷ್ಟು ಬಾರಿ ಆಡಳಿತ ಪಕ್ಷಗಳಿಗೆ ಇರಿಸು ಮುರಿಸು ತಂದಿದ್ದು ಉಂಟು. ಮತ್ತೆ ೨೦೦೧ರಲ್ಲಿ ಕಾಂಗ್ರೆಸ್ಸ್ ಜೊತೆ ಸೇರಿದ ಮಮತಾ ೨೦೦೪ರ ಚುನಾವಣೆಯಲ್ಲಿ ಇಡೀ ಪಕ್ಷದಿಂದ ತಾವೊಬ್ಬರೇ ಆಯ್ಕೆಯಾಗಿ ಕೇಂದ್ರದಲ್ಲಿ ಗಣಿ ಸಚಿವೆಯಾದರು, ತಮ್ಮ ರಾಜಕೀಯ ಪ್ರಭಾವವನ್ನ ಬೆಳೆಸಿಕೊಂಡು ಪಶ್ಚಿಮಬಂಗಾಳದಲ್ಲಿ ತೃಣಮೂಲ ಪಕ್ಷ ಗಟ್ಟಿಯಾಗಿ ಬೇರು ಬಿಡಲು ಕಾರಣರಾದರು. ಪಕ್ಷವನ್ನು ಸಂಘಟಿಸುವಲ್ಲಿ ಹಗಲು-ರಾತ್ರಿ ಪ್ರವಾಸ ಮಾಡುತ್ತಾ ಈಕೆ ಸುತ್ತದ ಹಳ್ಳಿಗಳಿಲ್ಲ, ಕಮ್ಯುನಿಷ್ಟರ ತೀವ್ರ ವಿರೋಧದ ನಡುವೆಯೂ ಪಕ್ಷ ಬೆಳೆಸಿದರೂ ೨೦೦೫ರಲ್ಲಿ ಕೋಲ್ಕತ್ತಾ ನಗರಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದಾಗ ಮಮತಾ ಕಂಗಾಲಾಗಿದ್ದರು. ನಂತರದ ೨೦೦೬ ರ ವಿಧಾನಸಭೆ ಚುನಾವಣೆಯಲ್ಲೂ ತೃಣಮೂಲ ಕಾಂಗ್ರೆಸ್ ನೆಲಕಚ್ಚಿದಾಗ ಇನ್ನು ಮಮತಾ ಕತೆ ಮುಗಿದಂತೆ ಎಂದು ಭಾವಿಸಲಾಗಿತ್ತು. ೨೦೦೯ ರಲ್ಲಿ ಬುದ್ದದೇವ್ ಭಟ್ಟಾಚಾರ್ಯ ನೇತ್ರತ್ವದ ಸರ್ಕಾರ ಸಿಂಗೂರ್, ನಂದಿಗ್ರಾಮದಲ್ಲಿ ಕೈಗಾರಿಕೆಗೆ ಮುಂದಾದಾಗ ಅದನ್ನು ವಿರೋಧಿಸಿ ಮಮತಾ ನಡೆಸಿದ ಹೋರಾಟ ಭಯಂಕರ ಕ್ಲಿಕ್ ಆಗಿತ್ತು, ಹೋರಾಟದ ಸ್ವರೂಪವನ್ನೇ ಬದಲಿಸಿತು. ಮಮತಾ ಕೂಡ ನಿರೀಕ್ಷಿಸದಷ್ಟು ಜನ ಬೆಂಬಲ ಸಿಕ್ಕಿ ಮತ್ತೆ ತೃಣಮೂಲ ಕಾಂಗ್ರೆಸ್ಸಿಗೆ ಆಶಾವಾದ ಹುಟ್ಟಿಸಿತ್ತು. ರೈತರ ಮೇಲೆ ಕಮ್ಯುನಿಸ್ಟರು ನಡೆಸಿದ ಹಿಂಸಾಚಾರ ಅವರ ಪಾಲಿಗೆ ನೆಗೆಟಿವ್ ಆಗಿ ಮಮತಾಗೆ ದೊಡ್ಡ ಜಯ ಕೊಟ್ಟಿತು. ೨೦೧೦ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ತೃಣಮೂಲ ಮೈತ್ರಿಕೂಟ ೨೬ ಸ್ಥಾನ ಗೆದ್ದು ಮಮತಾ ಮತ್ತೆ ಕೇಂದ್ರದಲ್ಲಿ ರೈಲ್ವೆ ಸಚಿವೆ ಯಾಗಿ ಆಯ್ಕೆಯಾದರು. ೨೦೧೦ರ ಮುನ್ಸಿಪಾಲ್ ಎಲೆಕ್ಷನ್ ಸೇರಿದಂತೆ ನಡೆದ ಎಲ್ಲಾ ಉಪಚುನಾವಣೆಗಳಲ್ಲೂ ತೃಣ ಮೂಲ ಕಾಂಗ್ರೆಸ್ ನ ವಿಜಯೋತ್ಸವ ಎಡರಂಗದ ನಾಯಕರಿಗೆ ನಿದ್ದೆಗೆಡಿಸಿತ್ತು.
ಈ ’ದೀದಿ’ಯ ಏಕಾಂಗಿ ಹೋರಾಟಕ್ಕೆ ಕೊನೆಗೂ ಪ್ರತಿಫಲ ದೊರೆತದ್ದು ಮೊನ್ನಿನ ಚುನಾವಣೆಯಲ್ಲಿ. ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲದ, ಹಲ ದಶಕಗಳಷ್ಟು ಆಳಿದ ಸರಕಾರವೊಂದನ್ನು ಅತ್ಯಂತ ನಾಜೂಕಾಗಿ, ಆಶ್ಚರ್ಯಕರವಾಗಿ ಮಣಿಸಿದ ಕೀರ್ತಿ ಮಮತಾರಿಗೆ ಸಲ್ಲುತ್ತದೆ. ಮಮತಾ ಅಲ್ಲದೆ ಬೇರಾರಿಂದಲೂ ಬುದ್ದದೇವ್ ಭಟ್ಟಾಚಾರ್ಯ ಅವರ ಕಮ್ಮ್ಯುನಿಸ್ಟ್ ಸರಕಾರವನ್ನ ಸೋಲಿಸುವುದು ಸುಲಭದ ಮಾತಲ್ಲ! ಈಗ ಮಮತಾ ಜೊತೆ ಕಾಂಗ್ರೆಸ್ ಕೂಡ ತನ್ನ ಐಡೆಂಟಿಟಿಯನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.
ಪಶ್ಚಿಮ ಬಂಗಾಳದ ೧೧ನೇ ಮುಖ್ಯಮಂತ್ರಿಯಾಗಿರುವ ಮಮತಾರ ಮುಂದೆ ಈಗ ದೊಡ್ಡ ಸವಾಲುಗಳಿವೆ. ನಿರುದ್ಯೋಗ, ಕೈಗಾರೀಕರಣ, ಕೃಷಿ, ಜಾಗತೀಕರಣದ ಪ್ರಭಾವಗಳ ಜೊತೆಗೆ ಮಾವೋವಾದಿಗಳನ್ನು ಹದ್ದುಬಸ್ತಿನಲ್ಲಿಡುವ ವಿಚಾರಗಳಿಗೆ ಮಮತಾ ಆದ್ಯತೆ ನೀಡಬೇಕಿದೆ. ರಾಷ್ಟ್ರದಾದ್ಯಂತ ಭ್ರಷ್ಟಾ ಚಾರದ ಬಗ್ಗೆ ಚರ್ಚೆ ಆಗುತ್ತಿರುವಾಗಲೇ ಮಮತಾ ಎಂಬ ಸಾದಾ-ಸೀದಾ ನಾಯಕಿ ಪಶ್ಹಿಮ ಬಂಗಾಳದ ಲಾಗಾಮು ಹಿಡಿದಿರುವುದು ಆ ರಾಜ್ಯದ ಅಭಿವೃದ್ದಿಗೆ ನಾಂದಿ ಹಾಡಲಿದೆಯೇ ಕಾದುನೋಡಬೇಕಿದೆ. ಸ್ವತಂತ್ರ್ಯ ಪೂರ್ವದಿಂದಲೂ ರಾಜಕೀಯವಾಗಿ ಭಾರತದಲ್ಲಿ ಮೊದಲ ಬದಲಾವಣೆ ಏನಾದರು ಆಗಿದ್ದರೆ ಅದು ಪಶ್ಚಿಮ ಬಂಗಾಳದಲ್ಲಿ!
ಕಮುನಿಸ್ಟ್ ಸರ್ಕಾರಗಳಿಂದ ಅಭಿವೃದ್ದಿ ಮಂದಗತಿಯಾದರೂ ಭ್ರಷ್ಟಾಚಾರ ಇರುವುದಿಲ್ಲ. ಹಾಗಾಗಿಯೇ ಕೇರಳ ಕಾಂಗ್ರೆಸ್ಸ್ ನಾಯಕರಿಗೂ ದೇಶದ ಉಳಿದ ರಾಜ್ಯಗಳಲ್ಲಿನ ಕಾಂಗ್ರೆಸ್ಸ್ ನಾಯಕರಿಗೂ ಸಾಕಷ್ಟು ವ್ಯತ್ಯಾಸ ನೋಡಬಹುದು. ದೇಶದ ಬಹುಪಾಲು ಕಾಂಗ್ರೆಸ್ಸಿಗರು ಭ್ರಷ್ಟಾಚಾರದ ಕೊಳಕಲ್ಲೇ ಈಜು ಹೊಡೇದುಕೊಂಡು ಕೂತಿದ್ದರೆ ಕೇರಳದಲ್ಲಿ ಅದಕ್ಕೆ ಭಿನ್ನವಾದ ಕಾಂಗ್ರೆಸ್ಸಿಗರನ್ನು ನೋಡಬಹುದು. ಹಾಗೆ ಪಶ್ಚಿಮ ಬಂಗಾಳದಲ್ಲೂ ಸಹ ತೀರಾ ಸರಳ ಸಜ್ಜನಿಕೆಯ ನಾಯಕತ್ವದ ನಾಯಕಿ ಆದ್ದರಿಂದ ಮಾತ್ರ ಮಮತಾರಿಗೆ ಗದ್ದುಗೆ ಏರಲು ಸಾಧ್ಯವಾಯಿತು. ಇನ್ನು ತಮಿಳುನಾಡಿನಲ್ಲಂತೂ ಒಂದು ಭ್ರಷ್ಟ ಸರ್ಕಾರ ತೊಲಗಿದ್ದು, ಮತೊಂದ್ದು ಅತಿ ಭ್ರಷ್ಟ ಸರ್ಕಾರ ಬಂದಿದೆ; ಕರುಣಾನಿಧಿ ಜಯಲಲಿತಾರ ನಡುವೆ ಲಿಂಗಭೇದ ಬಿಟ್ಟರೆ ಭ್ರಷ್ಟಾಚಾರದಲ್ಲಿ ಇಬ್ಬರೂ ಸರಿಸಮಾನರು!
ಇತ್ತ ಕರ್ನಾಟಕ: ಕರ್ನಾಟಕದಲ್ಲಿ ಭ್ರಷ್ಟಾಚಾರದ್ದೇ ಸುಪ್ರಭಾತವಾಗಿಬಿಟ್ಟಿದೆ. ಜನ ಯಡ್ಯೂರಪ್ಪನವರ ಹಗಲು ದರೋಡೆಗೆ ಸೀಸನ್ ಆಗಿ ಬಿಟ್ಟಿದ್ದಾರೆ. ಇಷ್ಟು ದಿನ ಯಡ್ಯೂರಪ್ಪನ ಸರ್ಕಾರಕ್ಕೆ ಆರೋಪ ಮಾಡುತ್ತಿದ್ದವರೇ ಸೋತು ಸುಮ್ಮನಾಗಿದ್ದಾರೆ. ಮಾಡುವವರೇ ಸಾಕಷ್ಟು ಭ್ರಷ್ಟಾ ಚಾರಿ ಗಳಾಗಿರುವುದರಿದ ಆರೋಪ ಸತ್ಯ ವಾದರೂ ಅದು ಒಂದು ರೀತಿ ಅರಣ್ಯ ರೋಧನವಾಗಿದೆ. ಇನ್ನು ಮುಂದಿನ ಎರಡು ವರ್ಷ ಹೇಗಾದರೂ ಗಂಟು ಹೊಡೆದುಕೊಂಡು ಆಮೇಲೆ ಜನರಿಂದ ಹೊಡೆಸಿಕೊಳ್ಳಲಿ ಬಿಡು ಎಂದು ಕಾಂಗ್ರೆಸ್ ಜೆಡಿಎಸ್ ನಾಯಕರು ಕೈ ಕೈ ಹಿಸುಕಿಕೊಂಡು ನಿಟ್ಟುಸಿರು ಬಿಡತೊಡಗಿದ್ದಾರೆ! ಮೂರು ವರ್ಷ ಪೂರೈಸಿದ ಖುಷಿ, ನ್ಯಾಯಾಲಯದ ತೀರ್ಪನ್ನೂ ಜಾಣತನದಲ್ಲಿ ತಣ್ಣಗಾಗಿಸಿಕೊಂಡ ಸಂತೋಷದಲ್ಲಿ ಯಡಿಯೂರಪ್ಪ ಮೈ ಕೊಡವಿಕೊಂಡು ಭಲೇ ಉತ್ಸುಕರಾಗಿದ್ದಾರೆ. ಜನಕ್ಕೆ ಇದ್ಯಾವುದರಲ್ಲೂ ಆಸಕ್ತಿ ಇದ್ದಂತಿಲ್ಲ. ಕರ್ನಾಟಕಕ್ಕೆ ಯಡ್ಯೂರಪ್ಪನವರ ವಕ್ರದೆಸೆ ಇನ್ನೂ ಮುಗಿದಿಲ್ಲ!
ಹಿಂಗೇ... ತಮ್ಮದೂ ಒಂದು ಛಾಪು ಇರಲಿ ಅಂತ ಯಡ್ಯೂರಪ್ಪ ಈಗ ಆಣೆ-ಪ್ರಮಾಣದ ರಾಜಕೀಯ ಶುರು ಮಾಡಿಕೊಂಡಿದ್ದಾರೆ. ತಂತಮ್ಮ ವ್ಯವಹಾರ-ಅನಾಚಾರ-ಸದಾಚಾರ ಇತ್ಯಾದಿಗಳ ಬಗ್ಗೆ ಆಣೆ ಇಡಲು ರಾಜಕೀಯ ಆಹ್ವಾನ ನೀಡಿದ್ದ ಯಡ್ಯೂರಪ್ಪನವರೇ ಹಿಟ್ ಅಂಡ್ ರನ್ ಮಾಡಿ ಸುದ್ದಿಯಾಗಿದ್ದಾರೆ. ಮೊನ್ನೆ ಜೂನ್ ೨೭ ರಂದು ಧರ್ಮಸ್ಥಳಕ್ಕೆ ಬಂದು ಯಾವ ಆಣೆ-ಪ್ರಮಾಣವನ್ನು ಮಾಡದೆ ಮಂಜುನಾಥನಿಗೆ ಬರೀ ಕೈಮುಗಿದು ವಾಪಸ್ ಬಂದಿದ್ದಾರೆ! ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ ತಾವು ಮಾಡಿರುವ ಆರೋಪಗಳೆಲ್ಲ ಸತ್ಯ ಅಂತ ಧರ್ಮಸ್ಥಳದಲ್ಲಿ ಹೇಳುವ ಮೂಲಕ ಸಮರ್ಥನೆ ಕೊಟ್ಟಿದ್ದಾರೆ! ಈ ಇಬ್ಬರೂ ದೈವಭಕ್ತರು ಪೂಜೆ, ಪುನಸ್ಕಾರ, ಮಾಟ, ಮಂತ್ರ, ತಂತ್ರಗಳ ಮೊರೆ ಹೋಗುವುದರಲ್ಲಿ ನಿಸ್ಸಿಮರು ಅಂತ ನಿಮಗೇ ಗೊತ್ತು. ಹಾಗಾಗಿ ಇವರಿಗೆ ಜನರ-ಅಭಿವೃದ್ದಿಯ ಕಾಳಜಿ ಮುಖ್ಯ ಅಲ್ಲವೇ ಅಲ್ಲ. ನಮಗಿಂತಲೂ ಮತ್ತೊಬ್ಬ ಜಾಸ್ತಿ ಲೂಟಿ ಮಾಡುತ್ತಿದ್ದಾನೆ ಅನ್ನೋದನ್ನು ಪ್ರೂವ್ ಮಾಡುವುದು ಇಲ್ಲಿರುವ ಉದ್ದೇಶ! ಬಿಜೆಪಿ ಸರ್ಕಾರ ದೇವೇಗೌಡರ ಕುಟುಂಬದ ಮೇಲೆ ೧೫೦೦ ಕೋಟಿ ಭ್ರಷ್ಟಾಚಾರದ-ಅಕ್ರಮ ಆಸ್ತಿ ಸಂಪಾದನೆ ಕುರಿತಂತೆ ಚಾರ್ಜ್ ಶೀಟ್ ಬಿಡುಗಡೆ ಮಾಡಿ ನೀವು ಇದರಿಂದ ಬಚಾವಾಗಿ ನೋಡೊಣ ಎಂದು ಸವಾಲು ಹಾಕಿದೆ. ಏನೋ...ಕರ್ನಾಟಕದ ಜನಕ್ಕೆ ಅದೃಷ್ಟ ಇದ್ದರೆ ನಮ್ಮನ್ನು ಯಾರು ಯಾರು ಯಾವ ಯಾವ ಕಾಲದಲ್ಲಿ, ಯಾವ ಯಾವ ರೀತಿಯಲ್ಲಿ ಲೂಟಿ ಮಾಡಿದ್ದಾರೆ ಅನ್ನುವ ಸತ್ಯ ಅನಾವರಣಗೊಳ್ಳಲಿದೆ.
ದೇಶದಲ್ಲೇ ಅತ್ಯಂತ ಭ್ರಷ್ಟ ರಾಜ್ಯ ಅಂತ ಕರ್ನಾಟಕಕ್ಕೆ ಈಗ ಫಸ್ಟ್ ಪ್ರೈಜ಼್ ಸಿಕ್ಕಿದೆ, ಯಡ್ಯೂರಪ್ಪ ಇದನ್ನು ಯಾವ ಬಾಂಕ್ವೆಟ್ ಹಾಲ್ ನಲ್ಲಿ ಎಷ್ಟು ಜನರನ್ನು ಕರೆದು, ಎಷ್ಟು ಕೋಟಿ ಲೆಕ್ಕ ತೋರಿಸಿ ಸೆಲೆಬ್ರೇಟ್ ಮಾಡಬೇಕು ಅಂತ ಪ್ಲಾನ್ ಹಾಕುತ್ತಿದ್ದಾರೆ. |
|
|
|
|
Copyright © 2011 Neemgrove Media
All Rights Reserved
|
|
|
|