ವಿಕಿಲೀಕ್ಸ್ ಮತ್ತು ಮೊನ್ಸಾಂಟೋ!!!
ವಿಕಿಲೀಕ್ಸ್ ಕೇವಲ ಅಮೆರಿಕಾ ಮತ್ತಿತರೆ ದೇಶಗಳ ರಾಜಕೀಯ ಗುಟ್ಟು ಗಾಸಿಪ್, ರಕ್ಷಣಾತಂತ್ರಗಳನ್ನಷ್ಟೇ ಹೊರಹಾಕಿದೆ ಎಂದೆಣಿಸಬೇಡಿ. ವಿಕಿಲೀಕ್ಸ್ ನ ನ ಕೆಲವು ಕೇಬಲ್ ಗಳು ಜಾಗತಿಕ ಆಹಾರ ಪಾಲಿಸಿಗೆ ಒತ್ತು ನೀಡುತ್ತಾ ಮೊನ್ಸಾಂಟೋನ ಕುಲಾಂತರಿ (ಜೆನೆಟಿಕಲಿ ಮಾಡಿಫೈಡ್) ಬೀಜಗಳನ್ನು ಇಡೀ ವಿಶ್ವಕ್ಕೆ ಸಾರಾ ಸಗಟಾಗಿ ಮಾರಾಟಮಾಡಬೇಕೆನ್ನುವ ಅಮೆರಿಕಾದ ಗುಟ್ಟಿನ ರಾಜತಾಂತ್ರಿಕ ಒತ್ತಾಯವನ್ನೂ ಬಯಲು ಮಾಡಿವೆ.
೨೦೦೭ ರಲ್ಲಿ ಅಮೆರಿಕಾದ ಫ್ರಾನ್ಸ್ ರಾಯಭಾರಿಯಾಗಿದ್ದ ಕ್ರೇಗ್ ಸ್ಟಾಪ್ಲ್ಟನ್, ಜಾರ್ಜ್(ಮಗ) ಬುಶ್ ರ ಆಡಳಿತದೊಂದಿಗೆ ಸೇರಿ ಯೂರೋಪಿಯನ್ ದೇಶಗಳಿಗೆ ಬುದ್ಧಿ ಕಲಿಸಲು ಹೀಗೊಂದು ಪ್ಲಾನ್ ಮಾಡಿದ್ದರು ಎನ್ನುವುದು ವಿಕಿಲೀಕ್ಸ್ ನಿಂದ ಬಹಿರಂಗಗೊಂಡಿದೆ.
ಅಮೆರಿಕಾದ ಕುಲಾಂತರಿ ಬೀಜಗಳಿಗೆ, ಫ್ರಾನ್ಸ್, ಇಟಲಿ, ಆಸ್ಟ್ರಿಯಾ ಮತ್ತಿತರ ಐರೋಪ್ಯ ದೇಶಗಳು ಅನಾಸಕ್ತಿ ತೋರಿಸಿದ್ದವು. ಆಗ ಮೋನ್ಸಾಂಟೋ ತನ್ನ ತೆರೆಮರೆಯ ಲಾಬಿಯಿಂದ ವಾಶಿಂಗ್ಟನ್ನಿನ, ವೈಟ್ ಹೌಸಿನ ಘಟಾನುಘಟಿಗಳನ್ನು ತೆಕ್ಕೆಗೆ ತಂದುಕೊಂಡು ಫ್ರಾನ್ಸ್, ಇಟಲಿಗಳಿಗೆ ಹೇಗಾದರೂ ತನ್ನ ಬೀಜವನ್ನು ಕೊಳ್ಳಲೇಬೇಕೆಂದು ರಾಜತಾಂತ್ರಿಕ ಒತ್ತಾಯ ಹೇರುವಂತೆ ಮಾಡಿತ್ತು. ಯೂರೋಪಿನ ದೇಶಗಳು ಬೈಯೋ ಟೆಕ್ ಬೀಜಗಳ ವಿಷಯದಲ್ಲಿ ಮುಂದೆ ಹೋಗುವ ಬದಲು ಹಿಂದೆ ಸರಿಯುತ್ತಿದ್ದಾರೆ. ಫ್ರಾನ್ಸ್ ಈ ಅಭಿಪ್ರಾಯದ ಮುಂಚೂಣಿವಹಿಸಿದೆ. ನಮ್ಮ ಬೈಯೋ ಟೇಕ್ ಬೀಜಗಳನ್ನು ಒಪ್ಪಿಕೊಳ್ಳುವಂತೆ ಯೂರೋಪಿಯನ್ ಯೂನಿಯನ್ ಗೆ ಬುದ್ಧಿ ಕಲಿಸಲು ನಾವು ತಂತ್ರವೊಂದನ್ನು ರೂಪಿಸುಕೊಳ್ಳುವುದು ಬೇಕಿದೆ ಎಂದು ಸ್ಟಾಪ್ಲನ್ ಕಳಿಸಿದ್ದ ಕೇಬಲ್ ತಿಳಿಸುತ್ತದೆ.
೨೦೦೯ ರಲ್ಲಿ ಅಮೆರಿಕದ ಸ್ಪೇನ್ ರಾಯಭಾರಿ, ಅಮೆರಿಕನ್ ಸರ್ಕಾರಕ್ಕೆ ಯೂರೋಪನ್ನು ಮಣಿಸುವಂತೆ ಮಾಡುವ ಬೈಯೋಟೆಕ್ ಒಪ್ಪಂದವೊಂದನ್ನು ಮಾಡಲು ಒತ್ತಾಯ ಪಡಿಸುತ್ತಾರೆ. ಸ್ಪೇನ್ ನ ಕೆಲವು ರಾಜಕಾರಣಿಗಳು ಕುಲಾಂತರಿ ತಳಿಗಳಿಗೆ ಆಸಕ್ತಿ ತೋರಿದ್ದಾರೆಂದೂ ತಾನು ಮೊನ್ಸಾಂಟೋದ ಡೈರೆಕ್ಟರ್ ಜೊತೆಗೆ ಈ ಕುರಿತು, ಇವರನ್ನು ಒಲಿಸುವುದು ಹೇಗೆ ಎಂಬುದರ ಕುರಿತು ಮಾತನಾಡಿದ್ದೇನೆಂದೂ ತಿಳಿಸುತ್ತಾರೆ. "ಸ್ಪೇನ್ ಹಳ್ಳಕ್ಕೆ ಬಿದ್ದರೆ ಇಡೀ ಯೂರೋಪ್ ಬೀಳುತ್ತದೆ" ಎಂದೂ ಈತ ದಾಖಲಿಸುತ್ತಾರೆ. ಇಷ್ಟೇ ಅಲ್ಲ!! ಅಮೆರಿಕನ್ ಎಂಬಸಿಯು ವಾಟಿಕನ್ ಗೆ ಹಲವಾರು ಕೇಬಲ್ ಮಾಡಿ ಪೋಪ್ ಅಮೆರಿಕಾದ ಬೀಜ ತಂತ್ರಜ್ನಾನಕ್ಕೆ ಸಂಪೂರ್ಣ ಒಪ್ಪಿಗೆ ನೀಡುತ್ತಾರೆಂಬ ನಂಬಿಕೆ ಅಮೆರಿಕಾಗಿದೆ ಎಂದು ಪದೇ ಪದೇ ಒತ್ತಾಯಿಸುತ್ತದೆ. ಅಮೆರಿಕಾ ಸರ್ಕಾರದ ಮುಖ್ಯ ಬೈಯೋಟೆಕ್ನಾಲಜಿ ವಿಶೇಷಜ್ನ ಕೆನ್ಯಾ ಮೂಲದ ಬಯೋಟೆಕ್ನಾಲಜಿ ವಿಶೇಷಜ್ನರ ಜೊತೆ ಸೇರಿ ವಾಟಿಕನ್ ನ ಪ್ರಬಲರೊಂದಿಗೆ ಲಾಬಿ ಮಾಡಿ ಪೋಪ್ ಕುಲಾಂತರಿ ತಳಿಗಳನ್ನು ಬೆಂಬಲಿಸುವಂತೆ ಮನವೊಲಿಸಲು ನಿರಂತರವಾಗಿ ಯತ್ನಿಸಿರುವುದೂ ಈ ಕೇಬಲ್ಗಳಿಂದ ಬೆಳಕಿಗೆ ಬರುತ್ತದೆ.
ಇದೇ ಮೊನ್ಸಾಂಟೋದ ಮಹಾನ್ ಅಪಾಯಕಾರಿ ಬೀಜ ರಾಜಕೀಯ. ಒಂದು ದಿನ ಪ್ರಪಂಚದಲ್ಲಿ ಬಿತ್ತುವ ಪ್ರತಿಯೊಂದು ಬೀಜವೂ ಮೊನ್ಸಾಂಟೋದೇ ಆಗಿ, ಮನುಷ್ಯರು ಪ್ರಾಣಿಗಳು ತಿನ್ನುವ ಪ್ರತಿ ಆಹಾರದ ಕಣವೂ ಮೊನ್ಸಾಂಟೋದೇ ಆದರೆ ಉಣಿಸುವ ಇಡೀ ಧರೆ, ಉಣ್ಣುವ ಪ್ರತೀ ದೇಹ ಮೊನ್ಸಾಂಟೋದೇ ಆದಂತೆ..ಪ್ರತೀ ಜೀವಿಯೂ ಅವರ ಒತ್ತಾಳಾದಂತೆ...ನಾವು ಇಂದು ಮೈಮರೆತರೆ ನಮ್ಮ ಇಡೀ ವಿಶ್ವವೇ ಮೋನ್ಸಾಂಟೋ ಎಂಬ ರಾಕ್ಷಸನ ವಸಾಹತುವಾಗಲಿರುವುದರ ಮುನ್ಸೂಚನೆ.
|