(ಪುಟ ೧೬)
ಬಿಟ್ಟು ಹೋಗದಿರೆನ್ನ ಬಡಪಾಯಿ ನಾನಮ್ಮಾ...
ಬೇಲಾ ಮರವ೦ತೆ
|
|
|
|
|
|
|
(ಪುಟ ೮) |
|
(ಪುಟ ೧೦) |
(ಪುಟ ೧೧) |
|
ಸಂದೇಸೆ ಆತೇ ಹೈ
ಹಮೇ ತಡ್ ಪಾತೇ ಹೈ
ಹಾಡನ್ನು ಗುನುಗುನಿಸಿಕೊಳ್ಳುತ್ತಾ ನನಗೆ ಸರಿಯಾಗಿ ಪತ್ರವನ್ನೇ ಬರೆಯದ, ಬರೆದ ಪತ್ರಕ್ಕೆ ಉದ್ದದ ಉತ್ತರವನ್ನೂ ಕೊಡದ ನಮ್ಮ ಮನೆಯವರನ್ನೆಲ್ಲಾ ಬೈದುಕೊಳ್ಳುತ್ತಾ...ನನ್ನನ್ನು ಪತ್ರಕ್ಕಾಗಿ ತಡಪಾಯಿಸುತ್ತಾರಲ್ಲಪ್ಪಾ ಅಂತ ನನ್ನ ಬಗ್ಗೆ ನಾನೇ ಸಿಂಪತಿ ಪಟ್ಟುಕೊಂಡು ಸೊರ ಸೊರ ಮೂಗೆಳೆದುಕೊಳ್ಳುತ್ತಾ ಇಸ್ತ್ರಿ ಮಾಡಿಕೊಳ್ಳುತ್ತಿದ್ದೆ.
ಅವತ್ತು ಮಧ್ಯಾನ್ಹ ನಾನು ಓದು ಮುಂದುವರಿಸಬೇಕೆಂದಿದ್ದ ಯೂನಿವರ್ಸಿಟಿಗೆ ನನ್ನ ಪ್ರೋಗ್ರಾಂ ಡೈರೆಕ್ಟರ್ ಅನ್ನು ನೋಡಲು ಹೋಗಬೇಕಿತ್ತು. ಹೊರಡಲು ಇನ್ನು ಬೇಕಾದಷ್ಟು ಗಂಟೆಗಳಿದ್ದರೂ ಹೆಚ್ಚು ಕಡಿಮೆ ತಯಾರಾಗಿ ಕೂತಿದ್ದೆ. ಆಗ್ಗೆ ಕೆಲದಿನಗಳ ಹಿಂದೆಯಷ್ಟೇ ಸ್ಮಿತಾರ ಕಸಿನ್ ಪ್ರೀತಿ ಮತ್ತು ಅವರ ಗಂಡ ವಿನೀತ್ ಮತ್ತು ಎರಡುವರೆ ವರ್ಷದ ಮಗ ಶಿವಾನ್ ಲಂಡನ್ ನಿಂದ ಒಂದು ವಾರದ ರಜೆ ಕಳೆಯಲು ಅಮೆರಿಕಾ ಸುತ್ತಾಡಲು ಬಂದಿದ್ದರು. ಸ್ಮಿತಾ ಮನೆಯಲ್ಲೇ ೨-೩ ದಿನ ಉಳಿದು ಹೋಗುವ ಪ್ಲಾನ್ ಇತ್ತು. ಸ್ಮಿತಾ ನಮ್ಮನ್ನೂ ಬರಲೇಬೇಕೆಂದು ಅವರಿದ್ದಾಗ ಮನೆಗೆ ಕರೆದು ಅವರನ್ನು ಪರಿಚಯಿಸಿದ್ದರು. ಹುಡುಗರು ಅವರದ್ದೇ ಶೇರು, ಸ್ಟಾಕ್ ಗಳ ಮಾತಲ್ಲಿ ಮುಳುಗಿ ಅಕ್ಕ ತಂಗಿಯರು ತಮ್ಮ ಸಂಬಧಿಕರ ಕುರಿತು ಮಾತಾಡಿಕೊಳ್ಳುವಾಗ ನಾನು ಆ ಪುಟ್ಟ ಮಗುವಿನ ಜೊತೆ ಆಟ ಆಡುತ್ತಾ ಮಾತನಾಡಿಸಲು ಪ್ರಯತ್ನಿಸುತ್ತಿದ್ದೆ. ಅದು ಎರಡುವರೆ ವರ್ಷವಾದರೂ ಒಂದು ಬಿಳಿ ಇಲಿ ಮರಿ ಥರ ಇತ್ತು. ಅಮೆರಿಕಾದಲ್ಲಿ ಎರಡುವರೆ ವರ್ಷಕ್ಕೆ ಮಕ್ಕಳು ಪುಟ್ಟ ಕುರಿಮರಿಯ ಥರ ಇರುತ್ತಾರೆ! ಈ ಬ್ರಿಟಿಷ್ ಸಂಜಾತ ಯಾಕೆ ಹೀಗಿದೆ ಅಂತ ನನ್ನ ತಲೆಹರಟೆ ಕುತೂಹಲ ನನಗೆ. ಯಾಕೋ ಆ ಮಗು ತುಂಬಾ ನೆನಪಾಗುತ್ತಿತ್ತು. ಮನಸ್ಸಿನಲ್ಲಿದ್ದದ್ದನ್ನು ಹೊರ ಹಾಕಲು ಪೆನ್ ಹಿಡಿದುಕೊಂಡು ಕೂತೆ.
ಆ ಕೂಸು ಕಯ್ಯಾ ಪಯ್ಯಾ ಅಂತ ಶಬ್ದಗಳನ್ನು ಹೊರಡಿಸುತ್ತಿತ್ತೇ ಹೊರತು ಮಾತಾಡುತ್ತಿರಲಿಲ್ಲ, ಪದಗಳನ್ನು ರಿಪೀಟ್ ಮಾಡುತ್ತಿರಲಿಲ್ಲ. ಒಂದೇ ಸಮನೆ ಮಾತಾಡಿಸುತ್ತಿದ್ದ ನನ್ನ ಬಾಯಿಯನ್ನೇ ಪಿಳಪಿಳ ನೋಡುತ್ತಿತ್ತು, ನಾನು ಮಾತಾಡಿಸಿದರೆ ಮುದ್ದಾಗಿ ಕಣ್ಣು ಕಣ್ಣು ಬಿಡುತ್ತಿತ್ತು. ಇದ್ಯಾಕೆ ಒಂದೂ ಮಾತಾಡುವುದಿಲ್ಲ? ನಾನು ಇದುವರೆಗೆ ಕಂಡ ಎಷ್ಟೋಂದು ಮಕ್ಕಳು ೨೧/೨ ವರ್ಷಕ್ಕೆ ಒಂದೆರಡು ಪದಗಳನ್ನಾದರೂ ಮಾತಾಡುತ್ತಿದ್ದರು. ನೀವು ಅವನ ಜೊತೆ ಯಾವ ಭಾಷೆಯಲ್ಲಿ ಮಾತಾಡ್ತೀರಾ ಅಂತ ಪ್ರೀತಿಯನ್ನು ಕೇಳಿದ್ದೆ. ಅದಕ್ಕವರು ನಮಗೆ ಅವನ ಜೊತೆ ಮಾತಾಡೋಕೆ ಟೈಮೇ ಸಿಗಲ್ಲಾ...ಹಾಗೇನಾದ್ರೂ ಸಿಕ್ಕರೆ ಅವನ ಜೊತೆ ಕನ್ನಡ, ಹಿಂದಿ, ಇಂಗ್ಲಿಷ್ ಎಲ್ಲದರಲ್ಲೂ
ಮಾತಾಡ್ತೀನಿ ಎಂದಿದ್ದರು. ನಾನೂ ನೋಡೇ ಬಿಡೋಣ ಅಂತ ಅವನನ್ನು ನನಗೆ ಬರುವ ಎಲ್ಲಾ ಭಾಷೆಗಳಲ್ಲೂ ಮಾತಾಡಿಸಿ (ಬಹುಷಃ ಇನ್ನೂ ಕನ್ಫ್ಯೂಸ್ ಮಾಡಿಸಿಟ್ಟೆ) ಪ್ರಯತ್ನಿಸಿದ್ದೆ. ಬಟ್ಟಲು ಕಣ್ಣಿಂದ ನನ್ನನ್ನೇ ಎವೆಯಿಕ್ಕದೆ ನೋಡುತ್ತಾ ಮ್ಯಾ, ಕ್ಯೂ ಅಂತಷ್ಟೇ ಸದ್ದು ಬರಿಸಿತ್ತು. 'ಅವನಿಗೆ ಸ್ಪೀಚ್ ತೊಂದರೆ ಏನೂ ಇಲ್ಲ...ನಾವು ಅವನ ಜೊತೆ ಹೆಚ್ಚು ಟೈಮ್ ಸ್ಪೆಂಡ್ ಮಾಡಿದ್ರೆ ಎಲ್ಲಾ ಸರಿಯಾಗುತ್ತೆ ಅಂತ ಅವನ ಡಾಕ್ಟರ್ ಹೇಳಿದ್ದಾರೆ, ಆದ್ರೆ ಏನು ಮಾಡೋದು ಹೇಳಿ...ಲೈಫ್ ಎಷ್ಟು ಬ್ಯುಸಿ ಅಲ್ವಾ..." ಪ್ರೀತಿ ಬೇಸರದಿಂದ ಅಲವತ್ತುಕೊಂಡಿದ್ದರು.
ಆಕೆ ಬೆಳಿಗ್ಗೆ ೬ ಗಂಟೆಗೆ ಮಗುವನ್ನು ಏಳಿಸಿಕೊಂಡು ಹಲ್ಲುಜ್ಜಿಸಿ, ಮೈಕೈ ತೊಳೆಸಿ, ಬಟ್ಟೆ ಬದಲಿಸಿ, ಕೈಗೆ ಹಾಲು ಬಾಟಲ್ ಕೊಟ್ಟು ಅದನ್ನು ಡೇ ಕೇರ್ ಗೆ ಕರೆದುಕೊಂಡು ಹೋಗುತ್ತಾರಂತೆ. ಸಂಜೆ ೬:೩೦ ಕ್ಕೆ ಅಲ್ಲಿಂದ ಮಗುವನ್ನು ಮನೆಗೆ ಕರೆದುಕೊಂಡು ಬರುತ್ತಾರಂತೆ. ಮನೆಗೆ ಬಂದವರೇ ಅದಕ್ಕೊಂದು ಸ್ನಾನ ಮಾಡಿಸಿ ಹಾಲು ಕೊಟ್ಟುಬಿಡುತ್ತಾರಂತೆ. ಅದರ ಡಿನ್ನರ್ ಕೂಡಾ ಡೇ ಕೇರ್ ನಲ್ಲೇ ೬ ಗಂಟೆಗೇ ಮುಗಿದಿರುತ್ತದಾದ್ದರಿಂದ ಮಗು ಸ್ನಾನ ಆಗುತ್ತಿದ್ದಂತೇ ಮಲಗಿಬಿಡುತ್ತದಂತೆ. ವೀಕೆಂಡುಗಳಲ್ಲಿ ಆಕೆ ಕೆಲಗಂಟೆ ಎಂಬಿಎ ಕೋರ್ಸ್ ಗಳಿಗೆ ಹೋಗುತ್ತಾರಂತೆ. ತಂದೆಗೊಬ್ಬನಿಗೇ ಮಗುವನ್ನು ಸಂಭಾಳಿಸುವುದು ಕಷ್ಟ ಎನ್ನಿಸಿ ಶನಿವಾರ ಭಾನುವಾರಗಳಲ್ಲೂ ಅರ್ಧ ದಿನ ಮಗು ಇಂಡಿಯನ್ ನ್ಯಾನಿಯೊಬ್ಬರ ಮನೆಯಲ್ಲಿ ಕಳೆಯುತ್ತದಂತೆ.
ಶಿವಾನ್ ನಾಲ್ಕು ತಿಂಗಳಿನ ಮಗು ಇದ್ದಾಗಿನಿಂದ ಇದೇ ದಿನಚರಿ ಮುಂದುವರಿದಿದೆಯಂತೆ. ಆಶ್ಚರ್ಯ ಆಯಿತು. ಬೆಳಿಗ್ಗೆ ಏಳಿಸಿ ಹಲ್ಲುಜ್ಜಿಸಿ ಬಟ್ಟೆಹಾಕಿಸುವುದು, ಸಂಜೆ ಅದಕ್ಕೆ ಸ್ನಾನ ಮಾಡಿಸಿ ಮಲಗಿಸುವುದು...ಇದನ್ನು ಬಿಟ್ಟರೆ ತಾಯಿ ಮಗುವಿನ ನಡುವೆ ಇನ್ಯಾವ ಕ್ರಿಯೆ, ಆಟ-ತುಂಟಾಟ, ಮುದ್ದು ಗದ್ದಲ ಏನೂ ಇರದು!! ಏನೋ ಇದ್ದರೆ ನಾಲ್ಕಾರು ಮಾತು! ಹೀಗಾದರೆ ಮಕ್ಕಳು ಅಮ್ಮಂದಿರ ಜೊತೆ ಹೇಗೆ ತಾನೇ ಬಾಂಧವ್ಯ ಬೆಳೆಸಿಕೊಳ್ಳುತ್ತಾರೆ? ಅವರ ಬೇಕು ಬೇಡಗಳನ್ನೆಲ್ಲಾ ಗುಂಪಲ್ಲಿ ಗೋವಿಂದಾ ಅನ್ನೋ ರೀತಿ ’ಬೇಬಿ ಸಿಟ್ಟಿಂಗ್’ ಅಥವಾ ’ಡೇಕೇರ್’ ಗಳ ನ್ಯಾನಿಗಳಿಂದಲೇ ನಡೆದು ಹೋಗುತ್ತದೆ. ಸುತ್ತಲೂ ಅದೂ ಇದೂ ಬೇಡುವ ಕೂಸುಗಳಿದ್ದಾಗ ಯಾವ ನ್ಯಾನಿ ನಿಮಿಷಗಟ್ಟಲೆ ಕೂತು ಶಿವಾನ್ ನಂತಹ ಮಗುವಿನೊಂದಿಗೆ ಮುದ್ದು ಸಂಭಾಷಣೆ ನಡೆಸುತ್ತಾಳೆ? ಇವತ್ತಿನ ಜೀವನ ಶೈಲಿ, ವೃತ್ತಿಗಳು ಅಮ್ಮ-ಎಳೆ ಮಕ್ಕಳನ್ನು ಅಷ್ಟು ದೂರ ಮಾಡುತ್ತಿವೆಯಾ? ಹಿಂದೆ ಅಮ್ಮಂದಿರು ಕೆಲಸಕ್ಕೆ ಹೋದಾಗ ತಮ್ಮ ಹಸುಮಕ್ಕಳನ್ನು ಹೆಗಲಿಗೋ, ಸೊಂಟಕ್ಕೋ ಬಟ್ಟೆಯಲ್ಲಿ ಕಟ್ಟಿಕೊಂಡು ತಿರುಗುತ್ತಿದ್ದರು. ಮಗು ಅಮ್ಮನ ಜೊತೆಯಲ್ಲೇ ಅವಳ ಪ್ರಪಂಚವನ್ನು ವೀಕ್ಷಿಸುತ್ತಿತ್ತು, ಕೇಳುತ್ತಿತ್ತು ಭಾಗಿಯಾಗುತ್ತಿತ್ತು ಕಲಿಯುತ್ತಿತ್ತು. ಆದರೀಗ...ಹೆರುವುದು ಮಾತ್ರ ತಾಯ್ತನವೇ?! ನನ್ನ ತಲೆ ಗೊಜ್ಜಾಗಿತ್ತು.
ಆ ಪುಟ್ಟ ಶಿವಾನ್ ಗೂ ಧ್ವನಿಯಿತ್ತು ಆದರೆ ಭಾಷೆ ಇರಲಿಲ್ಲ. ಯಾಕೆಂದರೆ ಅಮ್ಮ ಇರಲಿಲ್ಲ. ಆ ಕೂಸಿಗೆ Tongue ಇತ್ತು; ಅದಕ್ಕೆ ಮಾತಿನ ಮುತ್ತು ಕೊಡಲು Mother ಇರಲಿಲ್ಲ, ಅವಳ ಹತ್ತಿರ ಸಮಯ ಇರಲಿಲ್ಲ!!
ನನಗೆ ಭಯ ಆಯಿತು. ದುಡಿಯುವ ಭರದಲ್ಲಿ ಕುಟುಂಬದ ಬೆಂಬಲವೂ ಇಲ್ಲದ ಹೊರ ದೇಶಗಳಲ್ಲಿ ಹೀಗೆ ಎಳೇ ಮಕ್ಕಳನ್ನು ಒಬ್ಬಂಟಿಗಳನ್ನಾಗಿಸಿ ತಂದೆ-ತಾಯಿ ಇಬ್ಬರೂ ಪರಾರಿಯಾಗಿಬಿಟ್ರೆ...ಮಕ್ಕಳಿಗೆ ಭಾಷೆಗಳ ಅರಿವು, ನಡವಳಿಕೆ, ಪ್ರೀತಿ ಯಾರು ಕೊಡುತ್ತಾರೆ? ಇಂಗ್ಲೀಷೂ ಅಲ್ಲದ, ಮಾತೃ ಭಾಷೆಯೂ ಅಲ್ಲದ ಜಿಬರಿಶ್ ಅನ್ನೇ ಮಾತಾಡಿಕೊಂಡು ಅವೂ ಕಾಲ ತುಂಬುತ್ತವೇನೋ. ಮುಂದೊಂದು ದಿನ ಮನೆಯ ಹೊರಗೆ ಧಂಡಿಯಾಗಿ ಬಳಕೆಯಾಗುವ ಶಿಟ್ ಫಕ್ ಗಳೆಂಬ ಗನಾಲು ಪದಗಳನ್ನೇ ಹೆಕ್ಕಿಕೊಂಡು ಉದುರಿಸುತ್ತವೇನೋ...ಆಗ ತಂದೆತಾಯಿಗಳಿಗೆ ತಮ್ಮ ಸಂಸ್ಕೃತಿ-ಪರಂಪರೆಗಳ ಸಮಸ್ತ ಪಠ್ಯಕ್ರಮವನ್ನು ಶುರುಮಾಡುವ ಚಾಲೆಂಜ್ ಎದುರಾಗುತ್ತದೆ. ಆಗ ಬುಧ್ಧಿ ಹೇಳಲು ಅಮ್ಮ ಬಂದಾಗ 'ಇವಳ್ಯಾವ ಸ್ಪೆಷಲ್ ನ್ಯಾನಿ?! ಇಷ್ಟೊಂದು ಜಾಸ್ತಿ ಮಾತಾಡುತ್ತಾಳಲ್ಲ?' ಎಂದು ಅವರಿಗೆ ಅನಿಸಲಾರದೇ?!
ದುಡಿಯುವ ತಾಯಂದಿರು ಕ್ಷಮಿಸಬೇಕು. ನನಗೆ ಅವರ ಬಗ್ಗೆ ಅಪಾರ ಗೌರವ. ನಾನೂ ದುಡಿಯುವವಳೇ. ಈ ಥರದ ಪರಿಸ್ಥಿತಿಯಲ್ಲೆ ಇರುವ ಲಕ್ಷಾಂತರ ಮಂದಿ ತಾಯಂದಿರು ವರ್ಕ್ ಫ್ರಮ್ ಹೋಮ್ ಮಾಡಿಕೊಂಡೋ, ಮಕ್ಕಳನ್ನು ಬಾಲ ವಿಹಾರ, ಬಾಲ ಗೋಕುಲದಂತಹ ’ಭಾರತೀಯ ನಡವಳಿಕೆಗಳ’ ಕ್ಲಾಸ್ ಗಳಿಗೆ ಕಲಿಸುತ್ತಲೋ, ಪಾರ್ಟ್ ಟೈಂ ಕೆಲಸ ಮಾಡುತ್ತಲೋ ಎರಡು ಮೂರು ದೋಣಿಗಳಲ್ಲಿ ಕಾಲಿಟ್ಟು ಸರ್ಕಸ್ ಮಾಡುತ್ತಾ, ಕಷ್ಟ ಪಡುತ್ತಾ ಸಂಭಾಳಿಸುವುದನ್ನು ನಾನು ನೋಡಿದ್ದೇನೆ. ಆದರೆ ಇದು ಎಲ್ಲಿಯವರೆಗೆ? ಎನ್ನುವ ಪ್ರಶ್ನೆ ಕಾಡುತ್ತದೆ. ಶಿವಾನ್ ನಂತಹ ಮುದ್ದು ಮಕ್ಕಳನ್ನು ನೋಡಿದಾಗಲಂತೂ ಕನಸು ಕಂಡು ಕೂಸು ಹಡೆದು, ನಿನ್ನನ್ನು ಹಡೆದಿದ್ದಕ್ಕೆ ನಾನು ಇಷ್ಟು ದುಡಿಯಲೇ ಬೇಕು, ಇಷ್ಟು ಗಳಿಸಲೇ ಬೇಕು...ನಿನ್ನ ಹತ್ತಿರ ನಾನು-ನನ್ನ ಸೆರಗಿನ ಕಾವು ಇರದಿದ್ದರೂ ಸರಿ ಫಿಶರ್ ಪ್ರೈಜ಼್ ನ ಅತ್ಯಾಧುನಿಕ ಆಟಿಕೆ, ಲರ್ನಿಂಗ್ ಗೇಮ್ ಇರಬೇಕು...ಎನ್ನುವ ಒತ್ತಡಕ್ಕೆ ಸಿಕ್ಕಿರುವ ಅಮ್ಮಂದಿರ ಮಕ್ಕಳು ಅಮ್ಮನಿದ್ದೂ ಎಷ್ಟೋ ವಿಷಯಗಳಲ್ಲಿ ಅನಾಥರಂತೆಯೇ ಬೆಳೆದುಬಿಡುತ್ತಾರೆನಿಸುವುದಿಲ್ಲವೇ? ಇದು ನನ್ನ ಯೋಚನೆ.
(ಮುಂದುವರಿಯುವುದು)
|