ಶೆಹೆನಾಜ಼್ ಮತ್ತು ಕಬ್ಬನ್ ಪಾರ್ಕ್

 
 
ಸುಮನ್
 
ಕಳೆದ ಐದು ವರ್ಷದಲ್ಲಿ, ವರ್ಷಕ್ಕೊಂದು ಸಲ ಬೆಂಗಳೂರಿಗೆ ಬಂದಾಗಲೂ ನನ್ನ ಎಲ್ಲಾ ಸ್ಕೂಲ್ ಫ್ರೆಂಡ್ಸ್ ಅನ್ನು ಮೀಟ್ ಮಾಡುವ ಹುಚ್ಚು ನನಗೆ. ನಮ್ಮ ಗ್ರೂಪ್ ನಲ್ಲಿರುತ್ತಿದ್ದ ೯ ಜನರನ್ನೂ ತಪ್ಪದೆ ನೋಡಿ ಮಾತಾಡಿಸಿ ಬರುತ್ತಿದ್ದೆ. ಅವರೆಲ್ಲರೂ ನನ್ನ ಲೈಫ್ ನಲ್ಲಿ ಇವತ್ತಿಗೂ ತುಂಬಾ ಮುಖ್ಯ.  ನೆಂಟರನ್ನು ನೋಡದಿದ್ದರೂ ಬೇಡ, ಆದರೆ ನನ್ನ ಈ ಫ್ರೆಂಡ್ಸ್ ಗಳನ್ನು ನೋಡಲೇ ಬೇಕು. ನಾನು ಹೊರ ಊರಿನಿಂದ ಬಂದಾಗೆಲ್ಲಾ ಪ್ರತೀ ಸಾರಿಯೂ ಅವರದ್ದೊಂದು ಹೊಸ ಸುದ್ದಿ ಇರುತ್ತಿತ್ತು; ಹೊಸ ಮಗು, ಮೈದುನನ ಮದುವೆ, ಹೊಸ ಬಿಜ಼ಿನೆಸ್ಸು, ಒಡವೆಗಳು, ರೇಷ್ಮೆ ಸೀರೆಗಳು, ಗಾಡಿಗಳು ಅಥವಾ ಪ್ರವಾಸ ಏನಾದರೂ ಒಂದು...ಇಲ್ಲಿ ಲೈಫ್ ಅದೆಷ್ಟು ಫಾಸ್ಟ್ ಆಗಿ ಓಡುತ್ತಾಪ್ಪಾ! ನನ್ನ ಬದುಕ್ಯಾಕೆ ಇಷ್ಟು ಸ್ಲೋ? ಎಂದು ಚಿಂತಿಸುತ್ತಾ ಬೆರಗಿನಿಂದ ಅವರ ಕಥೆಗಳನ್ನು ಕೇಳುತ್ತಿದ್ದೆ. ನಾನೇ ಅದರಲ್ಲಿ ಪಾತ್ರಧಾರಿಯಾಗಿ ಕಲ್ಪಿಸುತ್ತಿದ್ದೆ.
 
ಈ ಸಾರಿ ನನ್ನ ಮೂರು ಜನ ಫ್ರೆಂಡ್ಸ್ ತುಂಬಾ ಬ್ಯುಸಿ ಇದ್ದರು. ಒಬ್ಬಳು ಮನೆ ಕಟ್ಟಿಸುವ ಗಲಾಟೆಯಲ್ಲಿದ್ದಳು. ನಳಿನಿ ಅವಳ ಮಗುವಿನ ಮೂರನೇ ಬರ್ತ್ಡೇ ಗೆ ಉಳಿದವರನ್ನೆಲ್ಲಾ ಸೇರಿಸಲು ಟ್ರೈ ಮಾಡಿದ್ದಳು. ನಳಿನಿಯ ಮನೆಗೆ ಉಳಿದ ಮೂವರು ಬಂದಿದ್ದರೂ ಶೆಹೆನಾಜ಼್ ಗೆ ಬರಲು ಆಗಿರಲಿಲ್ಲ. ಅವಳ ಸದಾ ರೋಗಿ ಅಥವಾ ರೋಗಿಯಂತೆ ನಾಟಕವಾಡುವ ಅತ್ತೆ ಈ ಸರಿ ಮತ್ತೆ ತಮಗೆ ಹುಷಾರಿಲ್ಲ ಅಂತ ಗಲಾಟೆ ಮಾಡಿ ಅವಳನ್ನ ಕೂಡಿಹಾಕಿಕೊಂಡಿದ್ರು. ಯಾವಾಗಲೂ ಅವಳ ಅತ್ತೆಯದು ಕಾಟ ಇದ್ದೇ ಇರುತ್ತಿತ್ತು, ಅವಳನ್ನು ಕಳಿಸಿದರೆ ನಾವು ತಿಂದು ಬಿಡುತ್ತೇವೆ ಅಂತ ಆ ಹೆಂಗಸಿಗೆ ಭಯ ಇರಬೇಕು! ಶೆಹೆನಾಜ಼ಳ ಅತ್ತೆಯನ್ನು ಬೇಕಾದಷ್ಟು ಬೈದುಕೊಂಡೇ ನಾವೆಲ್ಲಾ ನಳಿನಿಯ ಮನೆಯಲ್ಲಿ ಬರ್ತ್ಡೇ ಆಚರಿಸಿದ್ವಿ. ಆದರೂ ನನಗೆ ನನ್ನ ಬಾಲ್ಯದ ಬೆಸ್ಟ್ ಫ್ರೆಂಡ್ ಶೆಹೆನಾಜ಼ಳನ್ನು ನೋಡಲಾಗದಿದ್ದುದು ತುಂಬಾ ಬೇಜಾರಾಗಿತ್ತು. ಇನ್ನೆರಡು ದಿನದಲ್ಲಿ ನಾನೂ ನನ್ನ ಸೊಸೆ ಡ್ಯೂಟಿ ನಿಭಾಯಿಸಲು ಹೋಗಬೇಕಿತ್ತು. ಹೇಗಪ್ಪಾ ಇವಳನ್ನು ನೋಡೋದೂ...ಮನಸ್ಸಿನಲ್ಲಿ ಅದೇ ಯೋಚನೆ.
 
ಅವತ್ತು ಸಂಜೆ ಅಕ್ಕನ ಜೊತೆ ರಾಗಿ ಗುಡ್ಡಕ್ಕೆ ಹೋಗಿ ವಾಪಸ್ ಬರುತ್ತಿದ್ದೆ. ಶೆಹೆನಾಜ಼್ ಫೋನ್ ಮಾಡಿದಳು. "ಯಾವಾಗ ಸಿಗ್ತೀಯೇ ನಾಜ಼್? ಸ್ವಲ್ಪ ಹೊತ್ತಾದರೂ ಟೈಮ್ ಮಾಡಿಕೊಂಡು ಬಾರೇ...ಇಲ್ಲ ನಾನೇ ನಿಮ್ಮ ಮನೆಗೆ ಬರಲಾ? ನಿಮ್ಮನೆ ಹತ್ತಿರಾನೇ ಎಲ್ಲಾದ್ರೂ ಮೀಟ್ ಆಗಣಾ ಕಣೇ...ಪ್ಲೀಸ್ ಕಣೇಮಾ..." ನಾನು ಯಾವಾಗಿನ ಥರ ಅವಳನ್ನು ಗೋಗರಿಯುತ್ತಿದ್ದೆ. ಅವಳು ತನ್ನ ಗಂಡನ ಎಸ್ ಟಿ ಡಿ ಬೂತ್ ನಿಂದ ಪಿಸಪಿಸ ಅಂತ ಮಾತಾಡುತ್ತಾ ’ಕಷ್ಟಾ ಚಿತ್ರಾ...ನಮ್ಮನೇಲಿ ತುಂಬಾ ಪ್ರಾಬ್ಲಮ್ ಆಗುತ್ತೆ...ಮಗೂನ ಹೊರಗೆ ಕರೆದುಕೊಂಡು ಹೋದ್ರೆ ಕೋಪ ಮಾಡ್ತರೆ...ಎಲ್ಲಿ ಬಿಟ್ಟು ಬರಲಿ? ಹೆಂಗ್ ಬರಲಿ? ನೀನೇ ಹೇಳೂ..ನಮ್ ಜನ ಯಾ ಥರ ಅಂತ ನಿಂಗ್ ಗೊತ್ತಲ್ವಾ..." ಎಂದು ಅವಳ ಯೂಶುಅಲ್ ಕಥೆ ಶುರು ಮಾಡುತ್ತಿದ್ದಳು. ನನ್ನ ಫ್ರೆಂಡ್ಶಿಪ್ ಹುಚ್ಚಿಗೆ ಅವಳ ಕಥೆ ಕೊಚ್ಚಿಹೋಗುತ್ತಿತ್ತು. ಇದ್ಯಾವ ಸೀಮೆ ಇವಳು?! ಈಗಿನ ಕಾಲದಲ್ಲೂ ಬರೀ ಮುಸ್ಲಿಂ ಆಗಿರುವ ಕಾರಣಕ್ಕೆ ಇಷ್ಟೋಂದು ಕಟ್ಟುನಿಟ್ಟಾ ಅಂತ ಗೊಣಗಾಡಿಕೊಳ್ಳುತ್ತಿದ್ದೆ. ನಾಜ಼್ ಪ್ರತೀ ಸಾರಿ ಬುರ್ಖಾ ಹಾಕಿಕೊಂಡು ಬಂದಾಗಲೂ ಬೈದೋ ಗೊಣಗಾಡಿಯೋ ಅವಳ ಬುರ್ಖಾ ತೆಗೆಸುತ್ತಿದ್ದೆ. ಅವಳಂತ ಸುಂದರಿಗೆ ಅದೊಂದು ಕುರೂಪದ ಬಟ್ಟೆ ಎನ್ನಿಸುತ್ತಿತ್ತು. ಬುರ್ಖಾದೊಳಗೆ ನಾಜ಼್ ಕಪ್ಪೆಚಿಪ್ಪಿನೊಳಗಿನ ಮುತ್ತಿನ ಥರ ಕಾಣಿಸುತ್ತಿದ್ದಳು. ಯಾರಿಗೂ ಕಾಣಿಸಲು ಬಿಡದ ಅವಳ ಮುಖದ ಮೇಲೆ ಅಲ್ಲಲ್ಲಿ ಚಿಣಿಮಿಣಿ ಹೊಳೆಯುವ ಫೇಸ್ ಪೌಡರ್, ಗಾಢ ಗುಲಾಬಿ ಲಿಪ್ಸ್ಟಿಕ್, ಗಾಢವಾದ ಪರ್ಫ಼್ಯೂಮ್, ಕೋರೈಸುವ ನಗು, ಗಾಢವಾದ ಸ್ನೇಹ, ಜೋರುದನಿಯ ಮಾತು...ನಾಜ಼್ ಳ ಎಲ್ಲವೂ ಗಾಢವೇ...
 
ಅವತ್ತು ನನ್ನ ಒತ್ತಾಯಕ್ಕೆ ಮಣಿದು ನಾಳೆ ಸಂಜೆ ಫೋನ್ ಮಾಡಿ ಟೈಮ್, ಜಗಹ್ ಎಲ್ಲ ಹೇಳ್ತಿನಿ ಎಂದಿದ್ದಳು ನಾಜ಼್. ನನಗೆ ಸ್ಕೂಲ್ ದಿನಗಳಿಂದಲೂ ನನ್ನೆಲ್ಲಾ ಫ್ರೆಂಡ್ಸ್ ಗಿಂತಲೂ ನಾಜ಼್ ಅಂದ್ರೆ ತುಂಬಾ ಇಷ್ಟವಾಗುತ್ತಿತ್ತು. ನಮ್ಮ ಅಮ್ಮನೂ ಅವಳನ್ನು ಸಿಕ್ಕಪಟ್ಟೆ ಮುದ್ದು ಮಾಡುತ್ತಿದ್ದರು. ನೀನು ಮಲ್ಲಿಗೆ ಹುಡುಗಿ ಕಣೇ ಅಂತ ರೇಗಿಸುತ್ತಿದ್ದರು. ಅವಳು ವಿಶೇಷ ಹುಡುಗಿ. ಹೊರಗಿಂದ ನೋಡುವವರಿಗೆ ಸಂಪೂರ್ಣ ತಟಸ್ಥ; ಬಣ್ಣವಿಲ್ಲದ ಜೀವ. ಯಾರ ಮುಂದೆಯೂ ಯಾವುದೇ ಭಾವನೆಗಳನ್ನು ವ್ಯಕ್ತ ಮಾಡುತ್ತಿರಲಿಲ್ಲ. ಚಿತ್ರಪಟದಂತಿರುತ್ತಿದ್ದಳು. ಅವಳ ಕಣ್ಣುಗಳು ನಮ್ಮ ಕಣ್ಣುಗಳನ್ನಷ್ಟೇ ಪ್ರತಿಫಲಿಸುತ್ತಿದ್ದವು. ಮಾತಂತೂ ತೀರಾ ಕಮ್ಮಿ. ಆದರೆ ಒಂದು ಸಾರಿ ನಾವಿಬ್ಬರೂ ನನ್ನ ರೂಮ್ ಸೇರಿದರೆ ನಮ್ಮ ವಾಕ್ಯಗಳಿಗೆ ಫುಲ್ ಸ್ಟಾಪೇ ಇರುತ್ತಿರಲಿಲ್ಲ. ಆಗ ನಾಜ಼್ ಬುರ್ಖಾ ತೆಗೆದಿಟ್ಟು, ಸ್ಕೂಲ್ ಬ್ಯಾಗ್ ಅನ್ನು ಎಲ್ಲ ಹೈ ಸ್ಕೂಲ್ ಹುಡುಗಿಯರ ಥರವೇ ಹಾಸಿಗೆಯ ಮೇಲೆ ಕುಕ್ಕಿ ನನ್ನಮ್ಮ ಕೊಟ್ಟ ಕೋಡುಬಳೆ, ಹಾರ್ಲಿಕ್ಸ್ ಸವಿಯುತ್ತಾ ಚಿಟ್ತೆಯಾಗಿ ಮಾರ್ಪಾಡಾಗುತ್ತಿದ್ದಳು. ಅವರಪ್ಪ ಅವಳನ್ನು ನಮ್ಮ ಮನೆಗೆ ಮಾತ್ರ ಇಂಗ್ಲಿಷ್ ಕಂಬೈಂಡ್ ಸ್ಟಡಿ ಮಾಡಲು ಕಳಿಸುತ್ತಿದ್ದರು. ನಾವು ಇಡೀ ಸಂಜೆ ಫಿಲ್ಮ್, ಹೀರೋ, ಹೀರೋಯಿನ್, ಫೇವರೆಟ್ ಅನ್ನುವ ಕೆಲವು ಅಮೂಲ್ಯ ಇಂಗ್ಲಿಷ್ ಪದ ಬಿಟ್ಟು ಬೇರಾವ ಇಂಗ್ಲಿಷ್ ಅನ್ನೂ ಕಲಿಯುತ್ತಿರಲಿಲ್ಲ. ನಾಜ಼್ ಗೆ ಹೄತಿಕ್ ರೋಷನ್, ಅಭಿಷೇಕ್ ಬಚನ್, ಅಕ್ಷಯ್ ಕುಮಾರ್ ಅಂದರೆ ತುಂಬಾ ಇಷ್ಟವಾಗುತ್ತಿತ್ತು. ನಾನು ಬರೀ ಶಾರುಕ್ ಖಾನ್, ಆಮೀರ್ ಖಾನ್, ಸಲ್ಮಾನ್ ಖಾನ್ ಗಳ ಫ್ಯಾನ್. ಅವರ ಬಗ್ಗೆ ಮಾತಾಡುವಾಗ ಅವಳ ಮುಖದ ಹಾವ ಭಾವವೇ ಬದಲಾಗಿ ಬಿಡುತ್ತಿತ್ತು; ನಾಜ಼್ ಕಣ್ಣುಗಳು ಹೊಳೆಯುತ್ತಿದ್ದವು, ಒಂದು ಕಡೆ ನಿಲ್ಲದೆ ನಾಟ್ಯವಾಡುತ್ತಿರುತ್ತಿದ್ದವು. ಮುಖ ಕೆಂಪೇರಿ ಬಿಡುತ್ತಿತ್ತು. ಆಗ ಅವಳನ್ನು ನೋಡಿದಾಗ ಇವಳು ನನಗಿಂತ ಎಷ್ಟು ಪುಟ್ಟ ಹುಡುಗಿ ಅಂತ ಅನ್ನಿಸಿಬಿಡುತ್ತಿದ್ದಳು.
 
ನಾವು ಅಲ್ಲಿ ಇಲ್ಲಿ, ಹೇರ್ ಕಟಿಂಗ್ ಪಾರ್ಲರ್ಗಳಲ್ಲಿ ಇಟ್ಟಿರುತ್ತಿದ್ದ ಮ್ಯಾಗಜ಼ೀನ್ ಗಳಲ್ಲಿ, ನಮ್ಮ ಇತರೆ ಕ್ಲಾಸ್ ಮೇಟ್ ಗಳು ತೋರಿಸುತ್ತಿದ್ದ ಸಣ್ಣ ಸಣ್ಣ ಪೋಸ್ಟರ್ ಗಳಲ್ಲಿ, ಕದ್ದು ಕದ್ದು ಬಿ ಫೋರ್ ಯು, ಎಮ್ ಟಿವಿಯಲ್ಲಿ ನೋಡಿದ ಹಾಡುಗಳಲ್ಲಿ ಅವರು ಕಾಣುತ್ತಿದ್ದ ರೀತಿ ಅವರು ಎಷ್ಟು ಕ್ಯೂ...ಟ್ ಆಗಿದ್ದಾರೆ ಅಂತೆಲ್ಲಾ ಸ್ಟಡಿ ಮಾಡಿ ಮಾಡೀ ಖುಷ್ ಆಗುತ್ತಿದ್ದೆವು. "ನಮ್ ಜನಕ್ಕೆ ನಿಮ್ ಹೀರೋ ಇಷ್ಟ, ನಿಮ್ ಜನಕ್ಕೆ ನಮ್ ಹೀರೋ ಇಷ್ಟ" ಅಂತ ಡಿಸೈಡ್ ಮಾಡಿಕೊಂಡು, ಯಾಕಿರಬಹುದು ಅಂತ ನಮ್ಮದೇ ಸಿಲ್ಲಿ ಹೈಸ್ಕೂಲ್ ಥಿಯರಿಗಳನ್ನು ಹೊಡೆದುಕೊಂಡು ಇಡೀ ಸಮಯವನ್ನು ಬಿಂದಾಸ್ ಆಗಿ ಕಳೆಯುತ್ತಿದ್ದೆವು. ಹೊರಡುವ ಟೈಮ್ ಬರುತ್ತಿದ್ದಂತೇ ನಾಜ಼್ ಒಂಥರಾ ಟೈಟ್ ಆಗುತ್ತಿದ್ದಳು. ಮುಖ ಕೂದಲು ತೀಡಿಕೊಂಡು ಬುರ್ಖಾ ರೆಡಿ ಮಾಡಿಕೊಂಡು ನಾಳೆ ಸ್ಕೂಲಲ್ಲಿ ಸಿಗಣಾ, ಮತ್ತೆ ಮುಂದಿನವಾರ ಕಂಬೈಂಡ್ ಸ್ಟಡಿ ಮಾಡಣಾ ಎಂದುಕೊಂಡು ಹೊರಡುತ್ತಿದ್ದಳು. ಅವಳ ಅಪ್ಪನಷ್ಟೇ ವಯಸ್ಸಿನ್ವರಂತೆ ಕಾಣುತ್ತಿದ್ದ ಅವಳ ಹಿರಿಯಣ್ಣ ಬಂದು ಅವಳನ್ನು ಕರೆದುಕೊಂಡು ಹೋಗುತ್ತಿದ್ದರು. ಆಗ ಗಲಾಟೆಯ ಬೈ ಬೈ ಗಳೇನೂ ಇರುತ್ತಿರಲಿಲ್ಲ.
 
ನಾಜ಼್ ಗೆ ಇಬ್ಬರು ಅಣ್ಣಂದಿರು, ಮೂವರು ಅಕ್ಕಂದಿರು, ಒಬ್ಬ ತಂಗಿ ಇದ್ದರು. ಅವಳ ಮುಂದೆ ಅಷ್ಟೆಲ್ಲಾ ಮಕ್ಕಳಿದ್ದರೂ ಅವಳಿಗೆ ಸೆಕೆಂಡ್ ಇಯರ್ ಪಿಯುಸಿಯಲ್ಲೇ ಮದುವೆಯಾಗಿಹೋಯಿತು. ಅವಳ ಮದುವೆಗೆ ನಾವೆಲ್ಲಾ ಹೋಗಿದ್ದರೂ ನಾಜ಼್ ಜೊತೆ ಹೆಚ್ಚು ಮಾತಾಡಲು ಆಗಿರಲೇ ಇಲ್ಲ. ಬರೀ ಬರ್ತೀವಿ ಕಣೆ, ಕಂಗ್ರಾಟ್ಸ್ ಅಂದು ಬಂದಿದ್ದೆವು. ಹೊಸ ಜಾಗ, ಹೊಸ ಬಗೆಯ ಮದುವೆ, ಮದುಮಗನ ಪಕ್ಕ ಕೆಲ ನಿಮಿಷ ಕೂತರೂ ಕಣ್ಣೆ ತೆರೆಯದ ನಾಜ಼್, ಹೋಗಿದ್ದ ಫ್ರೆಂಡ್ಸ್ ಎಲ್ಲಾ ಒಂಥರಾ ಭಯದಲ್ಲೇ ಮದುವೆ ಮುಗಿಸಿಕೊಂಡು ವಾಪಸಾಗಿದ್ದೆವು. ನಾಜ಼್ ತನ್ನ ಹೊಸ ಮನೆ ಸೇರಿಬಿಟ್ಟಿದ್ದಳು. ಸಿಗುತ್ತಿದ್ದುದೇ ಅಪರೂಪ. ನನಗೂ ಮದುವೆಯಾಗಿ, ನಮ್ಮ ಸ್ನೇಹಿತರೆಲ್ಲರೂ ಸ್ವಲ್ಪ ಲೈಫಲ್ಲಿ ಸೆಟ್ಲ್ ಆಗಿ ಮತ್ತೆ ಎಲ್ಲಾ ಸಂಬಂಧ ಕುದುರಿಸಿಕೊಂಡ ಮೇಲೆ ನಾಜ಼್ ಮತ್ತೆ ನಮ್ಮ ಲೂಪ್ ಗೆ ಸಿಕ್ಕಿದ್ದಳು. ಸಿಕ್ಕರೂ ಸಿಗದವಳು, ಬಂದರೂ ಪೂರ್ತಿ ಇರದವಳು.
 
ಮರುದಿನ ಫೋನ್ ಮಾಡಿ ’ಸಂಜೆ ನಾಲ್ಕು ಗಂಟೆಗೆ ಫ್ರೀ ಇದ್ದೀಯಾ’ ಅಂದಳು. ’ಎಲ್ಲಿ ಸಿಗ್ತೀಯಾ? ನಾನೇ ಬರ್ತಿನಿ ನಿನ್ನನ್ನು ಕರೆದುಕೊಂಡ್ ಹೋಗಕೆ’ ಅಂದಿದ್ದೆ. ’ಸರಿ ಮನೆ ಹತ್ರ ಬಾ’ ಎಂದಳು. ನಾನು ಮೂರುವರೆಗೇ ಅವರ ಮನೆ ಏರಿಯಾ ತಲುಪಿ ನಾಲ್ಕಕ್ಕೆ ಅವಳ ಮನೆ ಮುಂದೆ ನಿಂತಿದ್ದೆ. ಒಮ್ಮೆ ಹೊರಕ್ಕೆ ಬಂದು ಅವಸರದಲ್ಲಿ ’ಚನ್ನಾಗಿದ್ದಿಯೇನೇಮಾ? ನೀನೇನು ಚನ್ನಾಗಿರ್ತಿಯ ಬಿಡು’ ಅಂತ ಗಲ್ಲ ಹಿಂಡಿ ’ಒಂದ್ ಸೆಕೆಂಡ್ ಬೇಗ ಬರ್ತಿನಿ’ ಅಂತ ಮತ್ತೆ ಮನೆ ಹೊಕ್ಕವಳು ಹತ್ತು ಹದಿನೈದು ನಿಮಿಷ ಆದರೂ ಹೊರಬಂದಿರಲಿಲ್ಲ. ಆಮೇಲೆ ಬಂದವಳು ಕಾರು ಹತ್ತುವವರೆಗೂ ಮೂರುನಾಲ್ಕು ಸರಿ ಜೀ ಅಮ್ಮಿ, ಜೀ ಅಮ್ಮೀ ಅಂತ ಕೂಗಿ ಕಾರಿನ ಬಾಗಿಲು ಎಳೆದುಕೊಂಡಿದ್ದಳು. ನಾನು ನಾಜ಼ೀ ಅಂತ ಕೈ ಹಿಡಿದೆ. ಬುರ್ಖಾ ತೆಗೆದು ಗಟ್ಟಿಯಾಗಿ ಕೈ ಹಿಡಿದು ’ತುಂಬಾ ಖುಷಿ ಆಯ್ತು ಕಣೇಮಾ..ಕೊನೆಗೂ ನಿನ್ನನ್ನ ನೋಡಕಾಯ್ತಲ್ಲಾ’...ಅಂತ ತೇವವಾಗಿದ್ದಳು. ನಾನು ಅವಳು ಕಾರಲ್ಲಿ ಕೂತಾಗಿನಿಂದ ಮೂರು ಸರಿ ಹೇಗಿದ್ದೀಯಾ ಅಂತ ಕೇಳಿದ್ದೆ. ಅವಳು ಹೂಂ ಅಂತಲೇ ತಲೆಯಾಡಿಸಿದ್ದಳು. ಮಗು ಹೇಗಿದೆ ಅಂದಾಗ ಪರವಾಗಿಲ್ಲ ಚನ್ನಾಗಿದ್ದಾನೆ ಈಗ ಸ್ವಲ್ಪ ನಡೆಯೋದು ಇಂಪ್ರೂವ್ ಆಗ್ತಿದೆ, ಟ್ರೀಟ್ ಮೆಂಟ್ ಕೊಡ್ತಾನೇ ಇದ್ದಾರೆ ಅಂದಳು. ನಾಜ಼ಳ ಪುಟ್ಟ ಮಗನಿಗೆ ಏನೋ ರಕ್ತಗತವಾದ ಡೆವೆಲಪ್ಮೆಂಟಲ್ ಡಿಸಾರ್ಡರ್ ಇದೆ ಎಂದಿದ್ದರು. ಆಕೆಗೆ ಎರಡನೇ ಬಾರಿ ತಾಯಿಯಾಗಲಾಗಿರಲಿಲ್ಲ. ನಾಜ಼್ ಮಾಸಿ ಹೋದಂತೆ ಕಾಣುತ್ತಿದ್ದಳು.
 
’ಸರಿ ಎಲ್ಲಿಗೆ ಹೋಗಿ ಕೂರಣ? ನಮ್ಮನೆಗೆ ಹೋಗಣ್ವಾ ಅಥವಾ ಯಾವುದಾದರೂ ಹೋಟೆಲ್ ಗೆ ಹೋಗಣ್ವಾ’ ಕೇಳಿದೆ. ಅರ್ಧ ಸೆಕೆಂಡಿನಲ್ಲಿ ’ಕಬ್ಬನ್ ಪಾರ್ಕ್ ಗೆ ಕರೆದುಕೊಂಡು ಹೋಗು ನನ್ನ’ ಅಂದಳು. ಅಯ್ಯೋ ಇವಳಾ! ಮತ್ತೆ ಕಬ್ಬನ್ ಪಾರ್ಕ್! ನಾನು ಹೋದ ಸಲ ಬಂದಾಗಲೂ ಬೇರೆಲ್ಲೂ ಬೇಡ ಕಬ್ಬನ್ ಪಾರ್ಕ್ ಗೆ ಹೋಗಣ ಅಂತ ಮಗುವಿನ ಥರ ಹಠ ಹಿಡಿದಿದ್ದಳು. ಇವತ್ತೂ ಅಲ್ಲಿಗೇ! 'ಅಲ್ಲಿ ಗಲಾಟೆ ನಾಜ಼್...ಒಂದು ಕಡೆ ಕೂತು ಮಾತಾಡಕೆ ಆಗಲ್ಲಾ...ಬೇರೆ ಎಲ್ಲಾದ್ರೂ ಹೋಗಣಾ’ ಅಂದೆ. ’ಬೇಡ ಬೇಡ ಅಲ್ಲಿಗೇ ಹೋಗಣ...ಹೋದ ಸತಿ ಥರಾನೇ ಟ್ರೇನ್ ನಲ್ಲಿ ಹೋಗಣ, ಬೋಟ್ ನಲ್ಲಿ ಹೋಗಣ’ ಅಂದಳು. ಅವಳ ಕಡೆ ನೋಡಿದೆ. ಬ್ಯುಸಿಯಾಗಿ ಹೊರಗೆ ನೋಡುತ್ತಿದ್ದಳು, ತುಂಟ ಮಗುವಿನ ಥರ.
 
ಕಬ್ಬನ್ ಪಾರ್ಕ್ ನಲ್ಲಿ, ವೀಕ್ ಡೇ, ಬೇಸಿಗೆಯ ಸಂಜೆ ನಾಲ್ಕೂ ಮುಕ್ಕಾಲಿನಲ್ಲೂ ಪಿತ ಪಿತ ಎನ್ನುವಷ್ಟು ಜನರಿದ್ದರು. ಕುಳಿತುಕೊಳ್ಳಲು ಖಾಲಿ ಬೆಂಚುಗಳೂ ಕಾಣುತ್ತಿರಲಿಲ್ಲ. ನಾಜ಼್ ಅಲ್ಲಿನ ಜನ ಗಿಜಿ ಗಿಜಿ ನೋಡಿಯೇ ಖುಷಿಯಾಗಿದ್ದಳು. ಬುರ್ಖಾ ತೆಗೆದು ಕೈಮೇಲೆ ಹಾಕಿಕೊಂಡಳು. ನಾವು ಒಳ ಹೊಕ್ಕು ಇನ್ನೂ ಐದು ನಿಮಿಷವಾಗಿಲ್ಲ. ’ಬಾ ಟ್ರ‍ೇನ್ಗೆ ಹೋಗಣಾ’ ಅಂದಳು. ನಾವು ಕ್ಯೂ ನಿಂತು ಆ ಪುಟಾಣಿ ಎಕ್ಸ್ ಪ್ರೆಸ್ ಏರಿ ಕೂತೆವು. ಅವಳು ನಿಜವಾಗಿ ಕರ್ನಾಟಕ ಎಕ್ಸ್ಪ್ರೆಸ್ ಹತ್ತಿದ ಹುಮ್ಮಸ್ಸಿನಲ್ಲಿದಳು. ಅಕ್ಕ ಪಕ್ಕ ನೋಡಿ, ’ಪಾಪ್ಕಾರ್ನ್ ತಗೋಬೇಕಿತ್ತಲ್ವಾ?’ ಅಂದಳು. ಹೌದೆಂದು ತಲೆಯಾಡಿಸಿದೆ. ನಾಜ಼್ ನನ್ನ ಕೈ ಹಿಡಿದು ಆ ಟ್ರ‍ೇನ್ ಕಿಟಕಿಯಲ್ಲಿ ಹೊರ ನೋಡುತ್ತಾ, ಕಬ್ಬನ್ ಪಾರ್ಕಿನ ಅರೆ ಸ್ಥಬ್ಧ ಬಿಸಿ ಗಾಳಿಗೆ ಮುಖವೊಡ್ಡಿ ಕೂತಿದ್ದಳು. ಹೇಗಿದ್ದೀಯ, ಎಲ್ಲಿದ್ದೀಯಾ, ಏನು ಮಾಡುತ್ತಿದ್ದೀಯಾ, ಎಲ್ಲಿದ್ದೀಯ ಇವೆಲ್ಲಾ ಮಾತುಗಳಿಗೆ ಅವಳಲ್ಲಿ ಸಮಯವಿರಲಿಲ್ಲ. ಯಾವ ಧಾವಂತವೂ ಇರಲಿಲ್ಲ. ಅವಳು ಅವಳ ಹೈಸ್ಕೂಲ್ ಗೆಳತಿಯ ಕೈ ಹಿಡಿದು ಪುಟಾಣಿ ಎಕ್ಸ್ ಪ್ರೆಸ್ ನಲ್ಲಿ ಕೂತು ಸಾಗುತ್ತಿದ್ದಳು. ನಿಜಕ್ಕೂ ಖುಷಿಯಾಗಿದ್ದಳು. ನಾನೂ ಅವಳ ಕೈ ಗಟ್ಟಿಯಾಗಿ ಹಿಡಿದೆ. ಟ್ರ‍ೇನ್ ಮತ್ತೆ ನಿಲ್ದಾಣಕ್ಕೆ ಬಂದಿತು. ಅಲ್ಲಿಂದ ಲಗುಬಗೆಯಿಂದ ಇಳಿದುಕೊಂಡು ಇಬ್ಬರಿಗೂ ಮೊದಲೇ ಗೊತ್ತಿದ್ದಂತೆ ಕಾಟನ್ ಕ್ಯಾಂಡಿ ಹತ್ತಿರ ಬಂದೆವು. ನಾನು ಕಾಟನ್ ಕ್ಯಾಂಡಿ ತಿಂದು ದಶಕವೇ ಆಗಿತ್ತು. ಬೇರೆ ಎಲ್ಲಾದರೂ ಆಗಿದ್ದರೆ ಕಸ, ಕೊಳೆ ಅಂತ ಕಣಿ ಹೊಡೆಯುತ್ತಿದ್ದವಳು ಎಲ್ಲದಕ್ಕಿಂತ ದಪ್ಪ ಇದ್ದ ಕಾತನ್ ಕ್ಯಾಂಡಿಯೊಂದನ್ನು ಹಿಡಿದುಕೊಂಡೆ.
 
’ಬಾ ಈಗ ಬೋಟಿಂಗ್ ಹೋಗಣ’ ಅಂದಳು. ’ಸೀರಿಯಸ್ಸಾಗಾ?’ ಅಂದೆ. "ಮತ್ತೆ’ ನಾಜ಼್ ಆ ಕಡೆ ಹೊರಟೇ ಬಿಟ್ಟಿದ್ದಳು. ಆ ಹಸಿರು ಪಾಚಿ ನೀರಿನಲ್ಲಿ ನಮ್ಮ ಬೋಟ್ ಅಷ್ಟೇ ಅಲ್ಲದೆ ಬೇರೆ ಏನೇನೋ ವಸ್ತುಗಳು, ಪ್ಲಾಸ್ಟಿಕ್ ಗಳೂ ತೇಲಾಟ ನಡೆಸಿದ್ದವು. ’ಆಹ್. ಎಷ್ಟು ಚನ್ನಾಗಿದೆ ಅಲ್ವಾ’ ಅಂತ ಉದ್ಗಾರ ಮಾಡುತ್ತಾ ಕೈಗೆ ತಾಕುವಂತಿದ್ದ ಬಿದಿರಿನ ಕಡ್ಡಿಯೊಂದನ್ನು ಎಟಕಿಸಿಕೊಳ್ಳುತ್ತಾ ನನ್ನ ಗೆಳತಿ ಕಳೆದುಹೋಗಿದ್ದಳು. ಅಲ್ಲಿಂದ ಇಳಿದವಳನ್ನು ’ಬಾ ನಿಂಗೆ ಐಸ್ ಕ್ರೀಮ್ ಕೊಡಿಸುತ್ತೀನಿ’ ಅಂತ ಎಳೆದುಕೊಂಡು ಹೋದಳು. ’ಮೊದಲು ಐಸ್ ಕ್ರೀಮಾ, ಜೋಳಾನಾ?’ ನಾನು ಕೇಳಿದ ಪ್ರಶ್ನೆಗೆ ನನ್ನ ಮುಖ ನೋಡಿ ಈಗ ನೀನು ಸರಿಯಾಗಿದ್ದೀಯ ಎನ್ನುವಂತೆ ನೋಡಿ ’ಮೊದಲು ಚನ್ನಾಗಿ ಮಸಾಲೆ ಹಾಕಿಸಿ ಜೋಳ ತಿಂದುಬಿಡೋಣ ಬಾ’ ಅಂದಳು. ಹಸಿ ಹಸಿ ಹಸಿರು ಖಾರದ ಜೋಳ ತಿಂದು ನಾನು ಬಾಯಲ್ಲಿ ಭೂಕಂಪವಾದವರ ಥರ ನಿಗರಾಡುತ್ತಿದ್ದರೆ ’ನೀನು ಮಸಾಲೆ ತಿನ್ನೋದನ್ನ ನಿಲ್ಲಿಸಬಾರದು..ನಿಲ್ಲಿಸಿದ್ರೇ ಹಿಂಗೇ ಆಗದು’ ಅಂತ ನನ್ನಮ್ಮ ನಾಜ಼್ ಐಸ್ ಕ್ರೀಮ್ ಕೊಡಿಸಹೋದಳು.
 

ನನ್ನ ಅದೃಷ್ಟಕ್ಕೆ ಅಲ್ಲೊಂದು ಬೆಂಚು ಖಾಲಿ ಕಂಡಿತು. ಕೂತು ಸುತ್ತ ಮುತ್ತ ನೋಡಿದೆ. ಆಟವಾಡುವ, ನಾಜ಼್ ಜೊತೆ ತಿಂಡಿ ತಿನ್ನುವ ಗಡಿಬಿಡಿಯಲ್ಲಿ ಗಮನಿಸಿರಲೇ ಇಲ್ಲ. ನನ್ನಚ್ಚರಿಗೆ ಕಬ್ಬನ್ ಪಾರ್ಕಿನೊಳಗೆಲ್ಲಾ ಕಪ್ಪುಚಿಪ್ಪಿನೊಳಗೆ ಅವಿತು, ಆ ಬಿಸಿಲಲ್ಲೂ ಆಡ ಬಂದ ನೂರಾರು ನಾಜ಼್ ಗಳು! ವಾವ್!!
 
’ನಾಜ಼್ ನಿನಗೆ ಈ ಕಬ್ಬನ್ ಪಾರ್ಕ್ ಯಾಕಿಷ್ಟು ಇಷ್ಟ? ಕೇಳಿದೆ. ’ಯಾಕೆ ಅಂದ್ರೆ? ಇಷ್ಟ!. ನೋಡು ಎಷ್ಟು ಜನ ಇದ್ದಾರೆ. ಎಲ್ಲಾ ಖುಷಿಯಾಗಿದ್ದಾರೆ. ಎಷ್ಟು ಚನ್ನಾಗಿ ಮುಖದ ಮೇಲೆ ಹವಾ ಬರ್ತಿದೆ. ಟ್ರ‍ೇನ್ ಇದೆ, ಬೋಟ್ ಇದೆ, ಜೋಳ ಇದೆ, ಒಂದೇ ಕಡೆ ಎಲ್ಲಾ ಇದೆ. ಒಂದ್ ಗಂಟೆ ಇಲ್ಲಿಗೆ ಬಂದ್ರೂ ಎಷ್ಟೆಲ್ಲಾ ಆಟ ಆಡಬಹುದು...ನೋಡಬಹುದು...’ ಅಂದಳು. ನಾನು ಮತ್ತೆ ನಮ್ಮ ಸುತ್ತ ನೋಡಿದೆ. ನಾಜ಼್ ಕಣ್ಣಿಗೆ ಈ ಜಾಗದಲ್ಲಿ ಢಾಳಾಗಿ ಕಾಣುತ್ತಿರುವ ಆ ’ಚಂದ’ ನನ್ನ ಕಣ್ಣೀಗ್ಯಾಕೆ ಕಾಣುತ್ತಿಲ್ಲ? ಏನನ್ನು ಎಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ? ಪ್ರಯತ್ನಿಸಿದೆ. ಸೋತೆ. ಅಷ್ಟರಲ್ಲಿ ಕೈಲಿದ್ದ ಐಸ್ ಕ್ರೀಮ್ ಮುಗಿದಿತ್ತು. ’ನೋಡು ಝೂಲಾ ಖಾಲಿ ಇದೆ..ಬಾ ಬಾ...’ ನಾಜ಼್ ಎಳೆದಳು. ಜೊತೆ ಓಡಿದೆ. ಕಿರ್ರ್ ಕಿಟಾರ್ ಅನ್ನುತ್ತಿದ್ದ ಆ ಜೋಕಾಲಿಯಲ್ಲಿ ಕೂತ ಅವಳನ್ನು ತೂಗಿ, ನಾನು ತೂಗಿಸಿಕೊಂಡೆ. ’ಸಖತಾಗಿತ್ತು ಅಲ್ವಾ’ ಅವಳ ಪ್ರಶ್ನೆಗೆ ’ಅಲ್ವಾ ಸೂಪರ್’ ಅಂದೆ. ಜೀನ್ಸ್ ಕುರ್ತಾ ಧಾರಿಯಾದ ನಾನು ಮತ್ತು ಗುಲಾಬಿ ನಕ್ಕಿಯ ಸಲ್ವಾರ್ ಧರಿಸಿದ್ದ ನಾಜ಼್ ಇಬ್ಬರನ್ನೂ ಅಕ್ಕ ಪಕ್ಕದ ಜನ ಆಗಾಗ ನೋಡುತ್ತಿದ್ದರೂ ಅವರ ನೋಟಕ್ಕೆ ಪ್ರತಿಸ್ಪಂದಿಸುವಷ್ಟು ಸಮಯ-ಮನಸ್ಥಿತಿ ನಮ್ಮಲ್ಲಿರಲಿಲ್ಲ. ’ಟೈಮ್ ನೋಡು...ಓಹ್ ಆರು ಗಂಟೆ! ತುಂಬಾ ಲೇಟಾದ್ರೆ ನಮ್ಮತ್ತೆ ಬಯ್ತರೆ’ ನಾಜ಼್ ನನ್ನತ್ತ ನೋಡಿದಳು. ’ಬಾ ಹೊರಟು ಎಲ್ಲದ್ರೂ ಕೂತು ಕಾಫಿ ಕುಡಿದು ಹೋಗಣ’ ನಾನಂದಿದ್ದಕ್ಕೆ ’ಇನ್ನು ಕಾಫಿ ಕುಡಿಯೋದಿಕ್ಕೆ ಜಾಗ ಎಲ್ಲಿದೆ? ಬಾ ಹೊರಟು ಬಿಡೋಣ’ ಅಂತ ಹೊರಟೇ ಬಿಟ್ಟಳು.
 
ಕಾರಿನಲ್ಲಿ ಕೂತಾಗ ಅವಳಿಗಾಗಿ ತಂದಿದ್ದ ಪುಟ್ಟ ಉಡುಗೊರೆಯೊಂದನ್ನು ಕೈಗಿಟ್ಟಾಗ ’ಇದೆಲ್ಲಾ ಯಾಕೆ ತರ್ತೀಯಾ? ಪ್ರತೀ ಸತಿ ಇದೇ ಥರ ಬಾ. ಹೊರಗೆ ಹೋಗಣ..ಅದಕ್ಕಿಂತ ಏನು ಅಲ್ವಾ?’ ಅಂದಿದ್ದಳು. ’ನೀನು ಸಿಕ್ಕಿದ್ದು ತುಂಬಾ ಚನ್ನಾಗಿತ್ತು...ನಿನ್ನನ್ನು ಚನ್ನಾಗಿ ನೋಡಿಕೋ...ನಿನ್ನ ಮಗನಿಗೆ ನನ್ನ ಮುತ್ತು...’ ಹೇಳುವಷ್ಟರಲ್ಲಿ ನನಗೆ ಅಳು ಬಂದಿತ್ತು. ಗಟ್ಟಿಯಾಗಿ ನನ್ನ ಕೈ ಹಿಡಿದಿದ್ದ ನಾಜ಼್ ಮನೆ ಹತ್ತಿರವಾಗುತ್ತಿದ್ದಂತೇ ಬಿಗಿಯಾಗಿ ಹಗ್ ಮಾಡಿ ’ಮತ್ತೆ ಬೇಗ ಬಾ...ಕಬ್ಬನ್ ಪಾರ್ಕ್ ಗೆ ಬರಣಾ' ಅಂದಳು. 'ಸರಿ ಮಾರಾಯ್ತಿ' ನಗುತ್ತಾ ಅವಳ ಕಣ್ಣುಗಳನ್ನು ನೋಡಿದೆ. ಅಮ್ಮನ ಜೊತೆ ಇಡೀ ದಿನ ಆಟವಾಡಿ ಅತಿ ಸ್ಟ್ರಿಕ್ಟ್ ಆದ ಬೋರ್ಡಿಂಗ್ ಸ್ಕೂಲ್ ಒಳಕ್ಕೆ ಇಷ್ಟವಿಲ್ಲದೆ ಹೋಗುವ ಮಗುವಿನಂತಿತ್ತು. ಬುರ್ಖಾ ಮುಚ್ಚಿಕೊಂಡು ಕಾರಿಳಿದಳು. ಇಬ್ಬರ ಕೈ ಟಾಟಾ ಹೇಳುತ್ತಲೇ ಇತ್ತು. ಪುಟ್ಟ ಗೆಳತಿಯನ್ನು ಬಿಟ್ಟು ಹೋಗಲು ಸಂಕಟವಾಯಿತು. ನಾಜ಼್, ಕಾರ್ ನಿಲ್ಲಲಿಲ್ಲ.
 
 


 
class="js-kit-comments" permalink="http://www.aayaama.com">
 
 
 
 
 
 
Copyright © 2011 Neemgrove Media
All Rights Reserved