ಅಂಗಳ      ಗಾಳಿ ಅಂಗಿ ಚುಂಗು ಹಿಡಿದು
Email a Page to a FriendPrint this pageAdd to Favorite
 

 ಗಾಳಿ ಅಂಗಿ ಚುಂಗು ಹಿಡಿದು
ಕಾಲಿಗಷ್ಟು ಚಕ್ರ ಕಟ್ಟಿ
ಮೆಲ್ಲ ಮೆಲ್ಲ ಸಿಲ್ಲಿ ಗಲ್ಲಿ
ಕೋಟೆ ಕೊತ್ತಲ ಊರು ಸುತ್ತಿ
ಕಣ್ಣು ಕಂಡ ಪಟಗಳನ್ನು
ಮನದ ಪದಕೆ ತಳಿಕೆ ಹಾಕಿ
ಹಿಗ್ಗು ಸುಗ್ಗಿ ಎಲ್ಲ ಸುರಿದು
ಪುಟದ ಮೇಲೆ ತಟಪಟಾ...

 
 

ಪುಟ್ಟ ಬೆಲ್ಜಿಯಂ ಯೂರೋಪಿಗೇ ರಾಜಧಾನಿಯಂತೆ!

ಟೋನಿ
 
ಕೇವಲ ೩೦,೫೨೧ ಚ.ಕಿ.ಮೀ. ವಿಸ್ತೀರ್ಣವನ್ನಷ್ಟೇ ಹೊಂದಿರುವ ಬೆಲ್ಜಿಯಂ ಪುಟ್ಟ ದೇಶ. ನಮ್ಮ ಕರ್ನಾಟಕದ ಆರನೇ ಒಂದು ಭಾಗಕ್ಕಿಂತ ಪುಟ್ಟದಾದುದು. ಆದರೂ ಅದರ ಕೀರ್ತಿ ದೊಡ್ಡದಾದುದೇ. ಇಡೀ ಯೂರೋಪಿನ ಕೇಂದ್ರ ಸ್ಥಾನ ಬೆಲ್ಜಿಯಂನಲ್ಲಿರುವುದರಿಂದ ಇದು ಯೂರೋಪಿನ ರಾಜಧಾನಿಯೆನಿಸಿದೆ. ನಾವು ಬೆಲ್ಜಿಯಂ ರಾಜಧಾನಿಯೂ ಆಗಿರುವ ಬ್ರಸೆಲ್ಸ್ ನಗರದಲ್ಲಿ ಸುತ್ತಾಡಲು ಆರಂಭಿಸಿದ ಕೂಡಲೇ ನನ್ನ ಮೇಲೆ ಕಳ್ಳರು ತಮ್ಮ ಕೈ ಚಳಕ ತೋರಲು ಬಂದು ತಗಲ್ಹಾಕಿಕೊಂಡು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದಿರುಗಿದ್ದರು. ಅದೇಕೋ ಬೆಲ್ಜಿಯಂ ದೇಶ ನನಗೆ ಎರಡು ಬಾರಿ ಟಾಂಗ್ ಕೊಟ್ಟಿತ್ತು. ಮೊದಲು ನನ್ನ ವೀಸಾಗಾಗಿ ಕಳುಹಿಸಿದ್ದ ಅರ್ಜಿಯನ್ನು ಮುಂಬೈನಲ್ಲಿದ್ದ ಇದೇ ಬೆಲ್ಜಿಯಂ ರಾಯಭಾರಿ ಕಛೇರಿ ಸಣ್ಣ ಕಾರಣಕ್ಕಾಗಿ ವಾಪಸು ಕಳಿಸಿತ್ತು. ಯೂರೋ ರಾಷ್ಟ್ರಗಳಿಗೆ ಪ್ರವಾಸ ಹೋಗಬೇಕಾದರೆ ವೀಸಾಗಾಗಿ ಇಂಗ್ಲೆಂಡ್ ರಾಯಬಾರಿ ಕಛೇರಿಯದು ಹಾಗೂ ಇತರೆ ಯೂರೋಪಿನ ದೇಶಗಳ ಪರವಾಗಿ ಬೆಲ್ಜಿಯಂನ ರಾಯಬಾರಿ ಕಛೇರಿಯ ’ಶಂಗೆನ್’ ವೀಸಾ ಹೀಗೆ ಎರಡು ವೀಸಾಗಳ ಅಗತ್ಯವಾಗಿತ್ತು. ನನಗೆ ಬ್ರಿಟನ್ ವೀಸಾ ಬಂದಿತ್ತಾದರೂ ಯೂರೋಪಿನ ಪ್ರಯಾಣಕ್ಕಾಗಿ ವಿಮಾನದ ಟಿಕೆಟ್ ಬುಕ್ ಆಗಿದ್ದರೂ ಈ ಬೆಲ್ಜಿಯಂ ರಾಯಬಾರ ಕಛೇರಿಯಿಂದ ವೀಸಾ ಸಕಾಲಕ್ಕೆ ಬಾರದ್ದರಿಂದ ನನ್ನ ಪ್ರಯಾಣವನ್ನೇ ರದ್ದು ಮಾಡಿದ್ದೆ. ಅದು ಬೆಲ್ಜಿಯಂ ನನಗೆ ನೀಡಿದ್ದ ಮೊದಲ ಟಾಂಗ್. ಆದರೆ ಐಸ್ ಲ್ಯಾಂಡಿನಲ್ಲಿ ಕೆರಳಿದ್ದ ಜ್ವಾಲಾಮುಖಿಯಿಂದಾಗಿ ಇಡೀ ಯೂರೋಪಿನಾದ್ಯಂತ ವಿಮಾನಗಳ ಸಂಚಾರದಲ್ಲಿ ಏರು ಪೇರಾಗಿತ್ತು. ನನ್ನನ್ನು ಬಿಟ್ಟು ಹೊರಟಿದ್ದ ನಮ್ಮ ಟೀಂ ನವರ ಪ್ರವಾಸವನ್ನು ವಿಮಾನಯಾನ ಸಂಸ್ಥೆ ಹದಿನೈದು ದಿನಗಳ ಕಾಲ ಮುಂದೂಡಿತ್ತು. ಅಷ್ಟರಲ್ಲಿ ಇದೇ ಬೆಲ್ಜಿಯಂ ಕಛೇರಿಯವರು ಕೇಳಿದ್ದ ದಾಖಲೆಗಳನ್ನು ನಾನು ಕಳಿಸಿಕೊಟ್ಟದ್ದರಿಂದ ನನಗೆ ವೀಸಾ ಕೂಡಾ ಸಿಕ್ಕಿತ್ತು. ಹದಿನೈದು ದಿನಗಳ ನಂತರ ನಾನು ನಮ್ಮ ಟೀಂನೊಂದಿಗೇ ಯೂರೋಪ್ ಪ್ರವಾಸಕ್ಕೆ ಹೊರಟಿದ್ದೆ. ಇಲ್ಲಿ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನಲ್ಲಿ ಪಿಕ್ ಪಾಕೆಟ್ ಕಳ್ಳರು ನನಗೆ ಎರಡನೇ ಟಾಂಗ್ ಕೊಟ್ಟಿದ್ದರು. ಖುಷಿಯೆಂದರೆ ಎರಡೂ ಟಾಂಗ್ ನಿಂದಲೂ ನಾನು ಬಚಾವಾಗಿದ್ದೆ.
 
ಪುಟ್ಟ ದೇಶವಾದ ಬೆಲ್ಜಿಯಂನಲ್ಲಿ ವ್ಯವಸಾಯವೇ ಮುಖ್ಯವಾದರೂ ಕೈಗಾರಿಕೆಯಲ್ಲೂ ಈ ದೇಶ ಮುಂದುವರೆದಿತ್ತು. ಕಲ್ಲಿದ್ದಲಿನ ಗಣಿಗಳು ಹೇರಳವಾಗಿದ್ದವು. ಸ್ಟೀಲ್ ಕೈಗಾರಿಕೆಗಳು, ರಸಗೊಬ್ಬರದ ಕಾರ್ಖಾನೆಗಳು, ಗ್ಲಾಸ್ ಉತ್ಪಾದನೆ, ಇವೆಲ್ಲದರಲ್ಲೂ ಈ ದೇಶ ಮುಂದು. ಪುಟ್ಟ ದೇಶವಾದರೂ ಪ್ರಪಂಚದ ನಾಲ್ಕನೇ ದೊಡ್ಡ ಬಂದರು ಇಲ್ಲಿದೆ. ಅಲ್ಲದೆ ವಜ್ರದ ಮಾರುಕಟ್ಟೆಯಲ್ಲಿ ವಿಶ್ವದಲ್ಲಿ ಪ್ರಮುಖ ಸ್ಥಾನ ಇದರದ್ದು. ಬೆಲ್ಜಿಯಂ ಕಟ್ ವಜ್ರಗಳ ಬಗ್ಗೆ ಯಾವ ಮಹಿಳಾಮಣಿಗೆ ಗೊತ್ತಿರುವುದಿಲ್ಲ ಕೇಳಿ? ಇಲ್ಲಿನ ಐಸ್ ಕ್ರೀಂ, ಚಾಕೋಲೇಟ್ ಗಲೂ ಸುಪ್ರಸಿದ್ಧವೆಂದು ನಮ್ಮ ಗೈಡ್ ಹೇಳಿದ್ದರಿಂದಲೇ ನಾನು ಅವುಗಳನ್ನು ಕೊಂಡುಕೊಳ್ಳಲು ಹೋಗಿ ಕಳ್ಳರ ಕಣ್ಣಿಗೆ ಬಿದ್ದಿದ್ದೆ. ಬೆಲ್ಜಿಯಂ ದೇಶದಲ್ಲಿ ಫ಼್ರೆಂಚ್, ಜರ್ಮನ್, ಡಚ್ ಭಾಷೆಗಳನ್ನಾಡುವ ಜನರಿದ್ದರು. ಈ ಮೂರೂ ಭಾಷೆಗಳೂ ಆ ದೇಶದ ಅಧಿಕೃತ ಭಾಷೆಗಳಾಗಿದ್ದುದು ವಿಶೇಷ. ಅಂತೆಯೇ ಬೆಲ್ಜಿಯಂ ದೇಶದ ಹೆಸರನ್ನು ಮೂರು ರೀತಿಯಲ್ಲಿ ಮೂರು ಭಾಷೆಯಲ್ಲಿ ಕರೆಯಲಾಗುತ್ತಿದೆ. ಪ್ರಪಂಚದ ಮೊದಲನೇ ಮಹಾಯುದ್ದದ ಸಮಯದಲ್ಲಿ ಈ ದೇಶವನ್ನು ಜರ್ಮನಿ ವಶಪಡಿಸಿಕೊಂಡಿತ್ತು. ನಂತರ ಎರಡನೇ ಮಹಾಯುದ್ದದ ಸಮಯದಲ್ಲೂ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮತ್ತೆ ಈ ಪುಟ್ಟ ದೇಶವನ್ನು ಆಕ್ರಮಿಸಿದ್ದ. ಯುದ್ದಾನಂತರ ಬೆಲ್ಜಿಯಂ ಬಿಡುಗಡೆಗೊಂಡಿತ್ತು. ಈಗಲೂ ಬೆಲ್ಜಿಯಂ ನಲ್ಲಿ ರಾಜಪ್ರಭುತ್ವದ ಆಳ್ವಿಕೆಯಲ್ಲಿದೆಯೆಂದು ಬ್ರಸೆಲ್ಸ್ ನ ಪ್ರಮುಖ ರಸ್ತೆಗಳಲ್ಲೆಲ್ಲಾ ಅಡ್ಡಾಡುತ್ತಾ ಅಲ್ಲಿನ ಪ್ರವಾಸಿ ಸ್ಥಳಗಳನ್ನು ತೋರಿಸುತ್ತಾ ಜ್ಯೂಜ಼ರ್ ನಮಗೆ ವಿವರಿಸತೊಡಗಿದ್ದ.
 
ಯೂರೋಪಿನಲ್ಲಿನ ಬಹುತೇಕ ಚರ್ಚ್ ಗಳು ಒಂದೇ ಹೆಸರನ್ನು ಹೊಂದಿದ್ದವು. ಕ್ರಿಶ್ಚಿಯನ್ ಧರ್ಮದಲ್ಲಿ ಏಸುಕ್ರಿಸ್ತ, ಮೇರಿಯೇ ಪ್ರಮುಖರಾಗಿದ್ದರಿಂದ ಅವರಿಬ್ಬರ ಚರ್ಚ್ ಗಳೇ ಹೆಚ್ಚಿಗೆ ಇರಬಹುದೆಂದುಕೊಂಡೆ. ಹಿಂದೂ ಧರ್ಮದಲ್ಲಿದ್ದಂತೆ ಸಾವಿರಾರು ದೇವಾನುದೇವತೆಗಳು ಆ ಧರ್ಮದಲ್ಲಿರದಿದ್ದರಿಂದ ನಮ್ಮ ದೇಶದಲ್ಲಿರುವಂತೆ ತರಹೇವಾರು ದೇವರ ಹೆಸರಿನ ದೇವಸ್ಥಾನಗಳಂತೆ ಚರ್ಚ್ ಗಳನ್ನು ನಿರ್ಮಿಸುವ ತಲೆನೋವಿನಿಂದ ಅವರು ಪಾರಾಗಿದ್ದರು. ಅಲ್ಲಿ ನಾವು ನೋಡಿದ್ದು ಬಹುತೇಕ ಕಾಥೆಡ್ರಲ್ ಗಳೇ. ಲಂಡನ್, ಪ್ಯಾರಿಸ್, ಇದೀಗ ಬೆಲ್ಜಿಯಂ ನಲ್ಲಿ ನೋಡಿದ ಚರ್ಚ್ ಗಳೆಲ್ಲವೂ ಒಂದೇ ರೀತಿಯಿದ್ದಂತೆ ನನಗನ್ನಿಸಿತ್ತು. ಒಟ್ಟಾರೆ ಆ ಚರ್ಚ್ ಗಳ ವಾಸ್ತುಶಿಲ್ಪ, ಕೆತ್ತನೆಯಂತೂ ಅದ್ಭುತವಾಗಿತ್ತು.
 
ಚರ್ಚ್ ಒಂದನ್ನು ನೋಡಿ ಬ್ರಸೆಲ್ಸ್ ನ ಬೀದಿಯಲ್ಲಿದ್ದ ಜನಸಂದಣಿಯಲ್ಲಿ ದಾರಿಮಾಡಿಕೊಳ್ಳುತ್ತಾ ಸುತ್ತಮುತ್ತ ನೋಡುತ್ತಾ ನಡೆಯುತ್ತಿರುವಾಗ ನನ್ನೊಡನೆ ಬರುತ್ತಿದ್ದ ಅರಬಿಂದೋ ರಾಯ್ ಅವರನ್ನು ನೋಡಿ ಬೆಲ್ಜಿಯಂನವರಂತೆಯೇ ಕಂಡ ಜೋಡಿಯೊಂದು ಮುಗುಳುನಕ್ಕರು. ಕೂಡಲೇ ನನ್ನ ಕೈ ಹಿಡಿದುಕೊಂಡ ರಾಯ್ ’ಅವರ್ಯಾಕೆ ನನ್ನನ್ನು ನೋಡಿ ನಕ್ಕರು?’ ಎಂದು ನನಗೆ ಹಿಂದಿಯಲ್ಲಿ ಕೇಳಿದರು. ನಾನು ’ಹೋಗಿ ಮಾತಾಡಿಸಿ, ನನಗೆ ಹೇಳಿಕೊಟ್ಟಂತೆ ನಿಮಗೂ ಅವರು ರೊಮಾನಿಯಾ ಡಾನ್ಸ್ ಹೇಳಿಕೊಡಬಹುದು’ ಎಂದು ತಮಾಷೆ ಮಾಡಿದೆ. ಕೂಡಲೇ ಅವರು ’ಮುಜೇ ಮಾಲುಂ ಹೆ ಕೆ ತುಮ್ ಚೋರೋಂಕೊ ಪೆಹೆಚಾನ್ ಸಕ್ತಾ ಹೆ, ಇಸೀಲಿಯೆ ಮೆ ತುಮ್ಹಾರೆ ಸಾಥ್ ಆರಹಾಹು’ ಎಂದರು. ಆ ಹೊತ್ತಿನಲ್ಲಿ ನಾನು ಅವರ ಕಣ್ಣಿಗೆ ಕಳ್ಳರನ್ನು ಗುರುತು ಹಿಡಿಯುವಂತಹ ಮಹಾನ್ ಪತ್ತೇದಾರನಂತೆ ಕಂಡಿದ್ದೆ.
ಅದುವರೆವಿಗೂ ಅದೆಲ್ಲೋ ಮಾಯವಾಗಿದ್ದ ನಮ್ಮ ಟೀಂ ನ ಕಪ್ಪದ್ ಬಂದಬಂದವರೇ ’ಎಲ್ಲಿ ಕಳ್ರನ್ ಹಿಡ್ದಾಕಿದ್ರಂತೆ, ಏನಾದ್ರು, ಸುಮ್ಮನೆ ಬಿಡ್ಬಾರ್ದಿತ್ ರೀ, ನಾಲ್ಕ್ ಬಾರ್ಸಿದೇನ?’ ಅಂತಾ ಒಂದೇಸಮನೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳತೊಡಗಿದ್ದರು. ಅವರು ಹಾಗೆ ಕೇಳುತ್ತಿದ್ದುದನ್ನೇ ಬಿಟ್ಟಕಣ್ಣು ಬಿಟ್ಟಂತೆ ಅವರನ್ನೇ ನೋಡತೊಡಗಿದ ಅರಬಿಂದೋ ರಾಯ್ ಅವರಿಗೆ ಕನ್ನಡ ಅರ್ಥವಾಗದಿದ್ದುದರಿಂದ ಕಪ್ಪದ್ ಮಾತನಾಡಿದ ಉತ್ತರ ಕರ್ನಾಟಕದ ವೇಗದ ಧಾಟಿ ಕಂಡು ಅವರೂ ಎಲ್ಲೋ ಅಪಾಯಕ್ಕೆ ಸಿಲುಕಿರಬಹುದೆಂದುಕೊಂಡು ’ಆಪ್ಕೊ ಕ್ಯಾ ಹುವಾ, ಸಬ್ ಠೀಕ್ ಹೇನಾ, ಏಕ್ ಏಕ್ ಆದ್ಮೀ ಅಖೇಲಾ ಜಾನಾ ನಹೀ’ ಎಂದು ಮುಗ್ದತೆಯಿಂದ ಕೇಳಿದ್ದಕ್ಕೆ ಕಪ್ಪದ್ ’ಮೈ ಟೀಕ್ ಹೂ’ ಎಂದವರೇ ನನ್ನತ್ತ ತಿರುಗಿ ’ನಿಮ್ಗ ಏನೂ ಅಪಾಯವಾಗ್ಲಿಲ್ಲಾ ತಾನೆ’ ಎಂದು ಕೇಳಿದರು. ’ನನಗೇನೂ ಆಗ್ಲಿಲ್ಲ, ಪಾಪ ಆ ಕಳ್ಳರ ನಸೀಬು ಚೆನ್ನಾಗಿರಲಿಲ್ಲ ನನ್ನ ಹತ್ರ ಸಿಕ್ಕಿಹಾಕಿಕೊಂಡರು, ಅದ್ಸರಿ, ನೀವೆಲ್ಲಿ ಮಾಯ ಆಗ್ಬಿಟ್ಟಿದ್ರಿ,’ ಅಂದದ್ದಕ್ಕೆ ’ಅಯ್ಯೋ ನನ್ನ ರೆಡಿಮಿಕ್ಸ್ ಖಾಲಿಯಾಗಿತ್ರೀ, ಮೊದಲೇ ಹುಡುಕಿ ರೆಡಿಮಾಡ್ಕಳನಾ ಅಂತಾ ಹುಡುಕಿಕೊಂಡು ಹೋಗಿಬಿಟ್ಟೆ, ಎಂತಾ ದರಿದ್ರ ಚಳೀರೀ ಇದು, ಮೊದಲೇ ರೆಡಿಮಿಕ್ಸ್ ಮಾಡಿಕೊಳ್ಳುವುದೊಳ್ಳೆಯದು, ಕೊನೆಕೊನೆಗೆ ಅವಸರ ಮಾಡಿ ಬಸ್ ಹತ್ತಿಸುವುದರಿಂದ ಬಾರು ಹುಡುಕುವುದಕ್ಕಾಗುವುದಿಲ್ಲ, ಅದಕ್ಕೇ ಬಸ್ಸಿಳಿದವನೇ ಮೊದಲು ಹುಡುಕಿಕೊಂಡು ಹೋಗಿದ್ದೆ,’ ಅಂದರು. ಉತ್ತರ ಕರ್ನಾಟಕದ ಕಪ್ಪದ್ ಬೆಲ್ಜಿಯಂನಲ್ಲಿ ಆರು ಡಿಗ್ರಿಗೂ ಕಡಿಮೆಯಿದ್ದ ಚಳಿಯ ವಾತಾವರಣಕ್ಕೆ ನಡುಗತೊಡಗಿದ್ದರು. ಅದಕ್ಕಾಗೇ ಅವರು ನಾವು ಪ್ಯಾರಿಸ್ಸಿನಿಂದ ಐಫ಼ಲ್ ಟವರ್ ನೋಡಿಕೊಂಡು ಬೆಲ್ಜಿಯಂನತ್ತ ಪ್ರಯಾಣ ಹೊರಡುವಾಗ ಬಾರುಗಳನ್ನು ಹುಡುಕಲು ಹೋಗಿ ಅಲ್ಲಿ ಹತ್ತಿರದಲ್ಲೆಲ್ಲೂ ಕಾಣಿಸದಿದ್ದರಿಂದ ನಿರಾಶರಾಗಿ ಬಸ್ ಹತ್ತಿದ್ದರು. ಇಲ್ಲೂ ಹಾಗಾಗುವುದು ಬೇಡವೆಂದು ಮೊದಲೇ ಪ್ಲಾನ್ ಮಾಡಿ ಬೆಲ್ಜಿಯಂನಲ್ಲಿ ಬಸ್ಸಿಳಿದವರೇ ಬಾರು ಹುಡುಕಿಕೊಂಡು ಹೋಗಿದ್ದರು. ಅದರಿಂದಾಗಿಯೇ ಕಳ್ಳರ ಘಟನೆ ನಡೆದಾಗ ಅವರು ಸ್ಥಳದಲ್ಲಿರಲಿಲ್ಲ. ಈಗ ಬಾರಿಗೆ ಹೋಗಿ ಕೊಂಚ ಏರಿಸಿ ಬೆಚ್ಚಗಾಗಿ ಬಂದಿದ್ದರು. ಅವರಿಗೆ ಯಾರಿಂದಲೋ ಕಳ್ಳರ ವಿಷಯ ಗೊತ್ತಾಗಿದ್ದರಿಂದ ನನ್ನನ್ನು ಹುಡುಕಿಕೊಂಡು ಬಂದು ಎಲ್ಲಿ ಎಲ್ಲಿ ಎಂದು ಕಳ್ಳರು ಸಿಕ್ಕರೆ ನಾಲ್ಕು ಬಾರಿಸುವವರಂತೆ ಮಾತನಾಡತೊಡಗಿದ್ದರು.
 
ಕಪ್ಪದ್ ಮೂರ್ನಾಲ್ಕು ಬಾರಿ ರೆಡಿಮಿಕ್ಸ್ ಪದವನ್ನು ಬಳಸಿದ್ದರಿಂದ ಕನ್ನಡ ಅರ್ಥವಾಗದಿದ್ದ ಅರಬಿಂದೋ ರಾಯ್ ಆ ಇಂಗ್ಲಿಷ್ ಪದವನ್ನು ಕೇಳಿ ರೆಡಿಮಿಕ್ಸ್ ಪದದಲ್ಲಿ ಏನೋ ಮರ್ಮವಿರಬಹುದೆಂದು ’ಏ ರೆಡಿಮಿಕ್ಸ್ ಕ್ಯಾ ಹೆ’ ಎಂದು ಕಪ್ಪದ್ ರನ್ನು ಕೇಳಿದರು. ಕಪ್ಪದ್ ನಗುತ್ತಾ ’ವಿಸ್ಕೀ ಔರ್ ಪಾನೀ ಮಿಕ್ಸ್ ಹೇ ಇಸ್ಕೀ ಅಂದರ್,’ ಎಂದು ನೀರಿನ ಬಾಟಲಿಯನ್ನು ತೋರಿಸಿದರು. ಕೆಂಪು ಬಣ್ಣದ ಬಾಟಲಿಯಲ್ಲಿ ವಿಸ್ಕಿಯ ಬಣ್ಣ ಕಾಣಿಸದಿದ್ದರಿಂದ ಅದನ್ನು ಕಪ್ಪದ್ ರಿಂದ ಪಡೆದು ಮುಚ್ಚಳ ತೆಗೆದು ಮೂಸಿ ನೋಡಿದಾಗಲೇ ರಾಯ್ ಗೆ ಅದರಲ್ಲಿರುವುದು ವಿಸ್ಕಿ ಎಂದು ಗೊತ್ತಾದದ್ದು. ಕಳ್ಳರ ಕತೆಯನ್ನು ಕೇಳಿದನಂತರ ಕಪ್ಪದ್ ’ನಾನಿರಬೇಕಿತ್ರೀ, ಆ ನನ್ ಮಕ್ಳಿಗೆ ನಾಲ್ಕು ಬಾರಿಸದೇ ಬಿಡುತ್ತಿರಲಿಲ್ಲ,’ ಎಂತಾ ಕೆಲಸವಾಗಿಹೋಯ್ತು ಎಂದು ತಾವು ಗುಂಡಾಕಿದ್ದು ಪ್ರಯೋಜನಕ್ಕೆ ಬರಲಿಲ್ಲವೆಂದು ಬೇಸರಿಸಿಕೊಂಡರು. ಅದೂ ಇದೂ ಮಾತಾಡುತ್ತಾ ಬೆಲ್ಜಿಯಂ ನಲ್ಲಿನ ಬೀದಿಗಳನ್ನೇ ಎರಡೆರಡು ಬಾರಿ ಸುತ್ತಾಡಿದ್ದೆವು. ಮತ್ತೆ ನಮ್ಮ ಕಣ್ಣಿಗೆ ಆ ಪಿಕ್ ಪಾಕೆಟ್ ಕಳ್ಳರು ಕಾಣಿಸಲಿಲ್ಲ.
 
ಒಂದಷ್ಟು ಕಡೆ ನಮ್ಮನ್ನು ಸುತ್ತಾಡಿಸಿದ ಜ್ಯೂಜ಼ರ್ ಬೆಲ್ಜಿಯಂ ನ ಬ್ಲೋ ಗ್ಲಾಸ್ ಪ್ರಸಿದ್ದಿಯೆಂದು ಹೇಳಿ ಗ್ಲಾಸಿನ ಅಂಗಡಿಯೊಂದಕ್ಕೆ ಕರೆದುಕೊಂಡು ಹೋದ. ನಮ್ಮ ಬೆಂಗಳೂರಿನಲ್ಲಿ ಕೆಲವರು ತಮ್ಮ ಮನೆಗೆ ಬೆಲ್ಜಿಯಂ ಗ್ಲಾಸು ಹಾಕಿಸಿರುವುದಾಗಿ ಹೇಳುತ್ತಿದ್ದುದನ್ನು ಕೇಳಿದ್ದೆ. ನನಗಂತೂ ಬೆಲ್ಜಿಯಂ ಗ್ಲಾಸಿಗೂ ಭಾರತದ ಗ್ಲಾಸಿಗೂ ಇರುವಂತಹ ವ್ಯತ್ಯಾಸವನ್ನು ಕಂಡುಹಿಡಿಯಲಾಗಲಿಲ್ಲ. ಗ್ಲಾಸಿನಲ್ಲಿಯೇ ವಿಧ ವಿಧವಾದ ನಮೂನೆಯಲ್ಲಿ ಏನೇನನ್ನೋ ಮಾಡಿಟ್ಟಿದ್ದರು. ನಾವು ಹೊರಗಡೆ ಬಂದು ಸುತ್ತಾಡತೊಡಗಿದೆವು. ನಮ್ಮ ಮುಂದೆ ಹೋಗುತ್ತಿದ್ದ ಕಪ್ಪದ್ ನಿಂತವರೇ ಕಟ್ಟಡವೊಂದರತ್ತ ಕೈ ತೋರಿದರು. ಏನೆಂದು ನೋಡಿದರೆ ಅದು ಅತ್ಯಂತ ವ್ಯವಸ್ಥಿತವಾಗಿ ಕಂಗೊಳಿಸುತ್ತಿದ್ದ ಬಾರ್ ಆಗಿತ್ತು. ಮೊದಲೇ ಕೊರೆಯುವ ಚಳಿ. ಆಗಲೇ ಮದ್ಯಾಹ್ನ ಮೀರತೊಡಗಿತ್ತು. ಹಾಗೆ ಕಟ್ಟಡವನ್ನು ತೋರಿದವರೇ ಅದರ ಮೆಟ್ಟಿಲು ಹತ್ತಿದರು. ನಾನೂ ಅವರನ್ನು ಹಿಂಬಾಲಿಸಿದೆ. ಅಲ್ಲಿ ಹುಡುಗ ಹುಡುಗಿಯರೆಲ್ಲರೂ ಕೂತು ಹರಟುತ್ತಾ ಗುಂಡುಹಾಕುತ್ತಿದ್ದರು. ನಾನು ಆ ದೇಶದ್ದೇ ಬ್ರಾಂಡ್ ಟೇಸ್ಟ್ ಮಾಡಲು ನಿರ್ಧರಿಸಿ ಆರ್ಡರ್ ಮಾಡಿದೆ. ಆಯಾ ದೇಶದ ಸ್ಥಳೀಯ ಡ್ರಿಂಕ್ಸ್ ನಲ್ಲಿ ಎಷ್ಟರಮಟ್ಟಿಗೆ ಆಲ್ಕೋಹಾಲ್ ಇರುತ್ತದೆ, ಅದರ ಉತ್ಕೃಷ್ಟತೆ ಏನು ಹಾಗೂ ಅದು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆಂಬ ಕಲ್ಪನೆ ನನಗಿರಲಿಲ್ಲ. ಈ ಶೀತವಲಯದ ದೇಶಗಳಲ್ಲಿ ಅಲ್ಲಿನ ಚಳಿಗೆ ತಕ್ಕಂತೆ ಕೆಲಸ ಮಾಡುವಂತೆ ಆಲ್ಕೋಹಾಲ್ ಪ್ರಮಾಣ ಕೊಂಚ ಜಾಸ್ತಿ ಇರುತ್ತದೆಂದು ಸ್ನೇಹಿತರಿಂದ ಕೇಳಿದ್ದರಿಂದ, ಜಾಸ್ತಿ ಗುಂಡುಹಾಕಿ ಅದು ಬೇರೆ ತರದ ಪರಿಣಾಮ ಬೀರಿದರೆ ಕಷ್ಟವೆಂದೂ, ಅಲ್ಲದೆ ನಮಗೆ ಸಮಯದ ಅಭಾವವೂ ಇದ್ದುದರಿಂದ ಒಂದೆರಡು ಪೆಗ್ ಏರಿಸಿ ಹಿಂದಿರುಗಿದ್ದೆವು. ಕಪ್ಪದ್ ಆಗಲೇ ಕೊಂಚ ಜಾಸ್ತಿಯಾದವರಂತೆ ಮಾತಾಡತೊಡಗಿದ್ದರು.
 
’ಏನೇ ಆದರೂ ನೀವು ಆ ಕಳ್ಳರನ್ನು ಹಿಡಿದವರು ನಾಲ್ಕು ಬಾರಿಸದೇ ಹಾಗೇ ಬಿಟ್ಟು ಕಳಿಸಿ ತಪ್ ಮಾಡಿದ್ರೀ, ಆ ನನ್ ಮಕ್ಳೀಗ್ ನಾನ್ ಇದ್ದಿದ್ರೆ ಸರಿಯಾಗಿ ಬುದ್ದಿ ಕಲಿಸ್ತಿದ್ದೆ’ ಎಂದು ನಾನು ಅಷ್ಟರಲ್ಲಾಗಲೇ ಮರೆತಿದ್ದ ಕಳ್ಳರ ವಿಷಯ ತೆಗೆದು ನಾನು ತಪ್ಪು ಮಾಡಿದಂತೆ ಮಾತಾಡತೊಡಗಿದರು. ನನಗೊಳ್ಳೇ ಪೀಕಲಾಟದಂತಾಗಿತ್ತು. ಕಳ್ಳನನ್ನು ಹಿಡಿದು ಅವನಿಗೆ ನಾಲ್ಕು ಬಾರಿಸಬೇಕೆಂದೇ ಸಿಟ್ಟಿನಲ್ಲಿ ಹೋದೆನಾದರೂ ಅವನು ಓಡಿದ್ದ. ಆಗ ನಾನು ಹೊಡೆಯಲು ಹೋದುದನ್ನೇ ಮಹಾಪರಾಧವೆನ್ನುವಂತೆ ನಮ್ಮ ಜತೆಯಲ್ಲಿದ್ದವರೇ ಸುಮಾರು ಮಾತಾಡಿದ್ದರು. ಇಲ್ಲಿ ನೋಡಿದರೆ ಈ ಕಪ್ಪದ್ ನಾನು ಕಳ್ಳರಿಗೆ ನಾಲ್ಕು ಬಾರಿಸದೇ ಬಿಟ್ಟದ್ದೇ ಅಪರಾಧವೆಂಬಂತೆ ಮಾತಾಡತೊಡಗಿದ್ದರು. ಆ ದರಿದ್ರ ಕಳ್ಳರಿಂದಾಗಿ ನಾನು ಇವರುಗಳಿಂದ ಎರಡು ರೀತಿಯ ವಿಮರ್ಶೆ ಕೇಳಬೇಕಾಗಿ ಬಂದಿತ್ತು. ’ಹೋಗ್ಲೀ ಪಾಸ್ ಪೋರ್ಟ್ ಜೋಪಾನವಾಗೈತೇನ್ರೀ, ಅದನ್ನೂ ಎಗರಿಸಿಬಿಡ್ತಾರೆ ಆ ಕಳ್ ನನ್ಮಕ್ಳು’ ಎಂದು ಕಪ್ಪದ್ ಕೇಳಿದಾಗಲೇ ನಾನದರತ್ತ ಗಮನ ಹರಿಸಿದ್ದು. ಸದ್ಯ ಅದು ಸೊಂಟದಲ್ಲಿ ಜೋಪಾನವಾಗಿತ್ತು. ’ಇದೆ’ ಅಂದೆ. ’ಸದ್ಯ ಬಿಡಿ, ದುಡ್ ಹೋದ್ರೂ ಪರ್ವಾಗಿಲ್ರೀ, ಪಾಸ್ ಪೋರ್ಟ್ ಮುಖ್ಯ ಅದು ಇಲ್ಲಾಂದ್ರೆ ನಿಮ್ ಕೇಲ್ ಖತಂ’ ಅಂದ್ರು. ’ಈ ಕಳ್ಳರು ಒಂದೇ ದೇಶದಲ್ಲಿ ಖಾಯಂ ಆಗಿರೂದಿಲ್ರೀ, ಇವರು ಯೂರೋಪಿನೆಲ್ಲೆಡೆ ಅಲೀತರ್ರಿ, ಹಂಗೇ ಅವರನ್ನೇ ಕಣ್ಣಲ್ ಕಣ್ಣಿಟ್ಟು ನೋಡ್ತಿರ್ರಿ, ಯಾವ ದೇಶದಲ್ಲಾದ್ರೂ ತಗಲಾಕಂತರೆ, ಆಗ ಅವರಿಗೆ ಸರಿಯಾಗಿ ಮಾಡೋಣವಂತೆ.’ ಎಂದರು. ಅವರು ಹೇಳಿದ ಧಾಟಿ ಹೇಗಿತ್ತೆಂದರೆ ನಾನು ಮುಂದೆ ಹೋಗುವ ದೇಶದಲ್ಲೆಲ್ಲಾ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡುವುದು ಬಿಟ್ಟು ಕಣ್ಣಲ್ಲಿ ಕಣ್ಣಿಟ್ಟು ಆ ದರಿದ್ರ ಕಳ್ಳರನ್ನೇ ಹುಡುಕಬೇಕಾಗುತ್ತಿತ್ತು. ಹಾಗೆ ಹುಡುಕಿ ಅವರನ್ನು ಹಿಡಿದು ಕಪ್ಪದ್ ಕೈಗೆ ಕೊಟ್ಟು ಅವರಿಂದ ಆ ಕಳ್ಳರಿಗೆ ನಾಲ್ಕು ಬಾರಿಸಿ ಕಳಿಸುವುದನ್ನೇ ನನ್ನ ಮುಂದಿನ ಯೂರೋಪ್ ಪ್ರವಾಸದ ಗುರಿಯಾಗಿಸಿಕೊಳ್ಳಬೇಕಿತ್ತು.
 
ಅಂತೂ ಕಳ್ಳರ ಘಟನೆಯಿಂದಾಗಿ ಅರ್ಧ ದಿನದ ನಗರ ಪ್ರದಕ್ಷಿಣೆಯಲ್ಲಿ ಅವರದೇ ಮಾತಾಗಿತ್ತು. ಸಂಜೆ ಬ್ರಸೆಲ್ಸ್ ನಲ್ಲೇ ನಾವು ತಂಗಲಿದ್ದೆವು. ’ಇಲ್ಲಿ ಸಾಂಬಾ ಡಾನ್ಸ್ ಇರಬಹುದು ಕಣ್ರೀ, ಅ ಜ್ಯೂಜ಼ರ್ ನಮಗೆ ಅದರ ಬಗ್ಗೆ ಸರಿಯಗಿ ಏನನ್ನೂ ಹೇಳ್ತಿಲ್ಲ,’ ಅನ್ನುತ್ತಾ ನನ್ನೆಡೆಗೆ ಬಂದರು ನನ್ನ ರೂಮ್ ಮೇಟ್ ಗುರುಬಸವಯ್ಯನವರು. ಅವರಿಗೆ ಅದ್ಯಾರು ಭಾರತದಲ್ಲಿ ಹೇಳಿ ಕಳಿಸಿದ್ದರೋ, ಅದು ಇಲ್ಲಿಲ್ಲ ಬ್ರೆಜಿಲ್ ನಲ್ಲಿರುವುದು ಎಂದು ಜ್ಯೂಜ಼ರ್ ಹೇಳಿದ್ದನ್ನೂ ಮರೆತು ಸಾಂಬಾ ಡಾನ್ಸ್ ಬಗ್ಗೆ ಕನವರಿಸತೊಡಗಿದ್ದರು. ಇನ್ನು ರಾತ್ರಿ ಸಾಂಬಾ ಡಾನ್ಸ್ ಹುಡುಕೋಣವೆಂದು ನನ್ನನ್ನೂ ಕರೆದೊಯ್ಯುವ ಸಾಧ್ಯತೆ-ಸಂದರ್ಭವಿದ್ದುದರಿಂದ ಇಲ್ಲಿಲ್ಲದ ಸಾಂಬಾ ಡಾನ್ಸ್ ಗಾಗಿ ರಾತ್ರಿಯೆಲ್ಲಾ ಇವರ ಜೊತೆ ಜಾಗರಣೆ ಮಾಡುತ್ತಾ ಸುತ್ತಬೇಕಾಗುತ್ತದೆಂದು ಯೋಚಿಸಿದ ನಾನು ಅವರಿಂದ ತಪ್ಪಿಸಿಕೊಳ್ಳಲು ’ಅಯ್ಯೋ, ಬನ್ರೀ, ಈ ದೇಶದಲ್ಲಿ ಹಗಲೊತ್ತೇ ಕಳ್ಳರ ಕಾಟ, ನಾನೀಗಾಗ್ಲೇ ರೋಮೇನಿಯಾ ಡಾನ್ಸ್ ಮಾಡಲು ಹೋಗಿ ಕಳ್ಳರ ಕೈಗೆ ಸಿಕ್ ಹಾಕಂಡಿದ್ದೀನಿ, ಇನ್ನು ರಾತ್ರಿ ನೀವು ಸಾಂಬಾ ಡಾನ್ಸ್ ಹುಡುಕಿಕೊಂಡು ಹೋದರೆ ಇನ್ನೇನ್ ಪಜೀತಿ ಪಡಬೇಕಾಗುತ್ತೋ,’ ಎಂದೆ. ಅವರಿಗೆ ಆ ಸಾಂಬಾ ಡಾನ್ಸೇ ಕಳ್ಳರ ಸಂತೆಯಂತೆ ಭಾಸವಾಯಿತೇನೋ, ಕೂಡಲೇ ’ಹೌದು, ಹೌದು, ಯಾವನಿಗ್ಬೇಕು ಆ ಡಾನ್ಸ್, ಆರಾಮಾಗಿ ರೂಮಲ್ಲಿಯೇ ಟೀವಿ ನೋಡುತ್ತಾ ಮಲಗೋಣ’ ಅಂದರು. ಬ್ರಸೆಲ್ಸ್ ನಲ್ಲಿಯೂ ಭಾರತೀಯ ಹೋಟೆಲಿನಲ್ಲಿಯೇ ಊಟದ ವ್ಯವಸ್ಥೆಯಾಗಿತ್ತು. ಊಟ ಮುಗಿಸಿದ ನಂತರ ಹೋಟೆಲ್ಲಿಗೆ ಹೋದೆವು. ನಮಗಾಗಿ ವ್ಯವಸ್ಥೆ ಮಾಡಿದ್ದ ಹೋಟೆಲ್ ಅದ್ಭುತವಾಗಿತ್ತು. ನಾವು ಯೂರೋಪ್ ನಲ್ಲಿ ಉಳಿದುಕೊಂಡಿದ್ದ ಹೋಟೆಲ್ಲುಗಳಲ್ಲಿಯೇ ಇದು ಅತ್ಯುತ್ತಮವಾಗಿತ್ತು. ಅತ್ಯಂತ ವಿಶಾಲವಾದ ಕೋಣೆಗಳಲ್ಲಿ ಪಂಚತಾರಾ ಸೌಕರ್ಯಗಳು ನಮ್ಮನ್ನು ಕಾಯುತ್ತಿದ್ದವು. ಬಿಸಿನೀರ ಸ್ನಾನ ಮಾಡಿ ಹೊರ ಬರುವಷ್ಟರಲ್ಲಿ ನನ್ನ ರೂಮ್ ಮೇಟ್ ಗೊರಕೆಯ ಸದ್ದು ಕಿವಿಗೆ ಅಪ್ಪಳಿಸತೊಡಗಿತ್ತು.
 
(ಮುಂದುವರಿಯುವುದು)  
 
 

 

 
 
 
 
 
 
 
 
 
Copyright © 2011 Neemgrove Media
All Rights Reserved