ಅಂಗಳ      ಗಾಳಿ ಅಂಗಿ ಚುಂಗು ಹಿಡಿದು
Print this pageAdd to Favorite
 

 ಗಾಳಿ ಅಂಗಿ ಚುಂಗು ಹಿಡಿದು
ಕಾಲಿಗಷ್ಟು ಚಕ್ರ ಕಟ್ಟಿ
ಮೆಲ್ಲ ಮೆಲ್ಲ ಸಿಲ್ಲಿ ಗಲ್ಲಿ
ಕೋಟೆ ಕೊತ್ತಲ ಊರು ಸುತ್ತಿ
ಕಣ್ಣು ಕಂಡ ಪಟಗಳನ್ನು
ಮನದ ಪದಕೆ ತಳಿಕೆ ಹಾಕಿ
ಹಿಗ್ಗು ಸುಗ್ಗಿ ಎಲ್ಲ ಸುರಿದು
ಪುಟದ ಮೇಲೆ ತಟಪಟಾ...

 
 

ಗೊರಕೆ ಪುರಾಣವೂ, ಯೂರೋಪಿನಲ್ಲಿ ರಾತ್ರಿಗಳ ಅಲೆದಾಟವೂ...

ಟೋನಿ
 
ರಾತ್ರಿ ರಮಾಡಾ ಹೋಟೆಲಿನಲ್ಲಿ ಸ್ನಾನ ಮಾಡಿ ಬಂದು ಮಲಗಬೇಕೆಂದುಕೊಂಡವನಿಗೆ ಅಡ್ಡಿ ಪಡಿಸಿದ್ದು ನನ್ನ ರೂಮ್ ಮೇಟ್ ನ ಗೊರಕೆಯ ಸದ್ದು. ಆ ಗೊರಕೆಯ ಅತೀ ಭಯಂಕರ ಶಬ್ದದ ಪರಿಣಾಮದಿಂದಲೇ ನಾನು ಯೂರೋಪಿನಲ್ಲಿ ರಾತ್ರಿಗಳಲ್ಲಿ ಅಲೆಯಲು ಸಾಧ್ಯವಾಗಿದ್ದು. ಇಲ್ಲದಿದ್ದಲ್ಲಿ ನನಗೆ ಯೂರೋಪಿನ ನೈಟ್ ಲೈಫಿನ ಬಗ್ಗೆ ತಿಳಿದುಕೊಳ್ಳಲು ಸಾದ್ಯವಾಗುತ್ತಿರಲಿಲ್ಲ. ಅದಕ್ಕಾಗಿ ನನ್ನ ರೂಮ್ ಮೇಟ್ ಹೊರಡಿಸುತ್ತಿದ್ದ ಶಬ್ದಕ್ಕೆ ಥ್ಯಾಂಕ್ಸ್ ಹೇಳಬೇಕು.

ಇಲ್ಲಿ ಅವರ ಗೊರಕೆಯ ಸದ್ದಿನ ಬಗ್ಗೆ ಒಂದೆರಡು ಮಾತುಗಳನ್ನಾಡದಿದ್ದಲ್ಲಿ ಅದಕ್ಕೆ ಅಪಚಾರವೆಸಗಿದಂತೆಯೇ! ಯೂರೋಪ್ ಪ್ರವಾಸ ಹೊರಡುವ ದಿನ ಬೆಂಗಳೂರಿನಲ್ಲಿ ದುಬಾಯ್ ವಿಮಾನ ಹತ್ತುವಾಗಲೇ ಬೆಳಗಿನ ಜಾವವಾಗಿತ್ತು. ವಿಮಾನ ಹಾರಾಟ ಆರಂಭಿಸಿ ಅರ್ಧಗಂಟೆಯಾಗಿರಲಿಲ್ಲ ಗಗನ ಸಖಿ ಬಂದವಳೇ ಡ್ರಿಂಕ್ಸ್ ಕೇಳಿದ್ದಳು. ರಾತ್ರಿಯಿಡೀ ವಿಮಾನ ನಿಲ್ದಾಣದಲ್ಲಿ ಕಳೆದಿದ್ದರಿಂದ ಚಳಿಯಾದಂತಾಗಿ ವಿಸ್ಕಿ ತರಿಸಿ ಕುಡಿದ ಸ್ವಲ್ಪ ಹೊತ್ತಿಗೇ ಮುಂದಿನ ಸೀಟಿನಿಂದ ಭಯಂಕರವಾದ ಶಬ್ದ ಬರಲಾರಬಿಸಿತ್ತು. ಅಕ್ಕ ಪಕ್ಕದ ಸೀಟಿನಲ್ಲಿ ಕೂತಿದ್ದವರೆಲ್ಲಾ ಬಗ್ಗಿ ಬಗ್ಗಿ ಶಬ್ದ ಬರುತ್ತಿದ್ದ ಸೀಟಿನತ್ತ ಇಣುಕಿ ಇಣುಕಿ ನೋಡಹತ್ತಿದ್ದರು. ನಾನು ಹಿಂದಿನ ಸೀಟಿನಲ್ಲಿ ಕೂತು ಇಯರ್ ಫೋನ್ ಸಿಗಿಸಿಕೊಂಡು ಟೀವಿ ಸ್ಕ್ರೀನ್ ನಲ್ಲಿ ಯಾವುದೋ ಕನ್ನಡ ಚಿತ್ರವನ್ನು ಆಯ್ಕೆ ಮಾಡಿಕೊಂಡು ನೋಡತೊಡಗಿದ್ದೆ. ಎಮಿರೇಟ್ಸ್ ವಿಮಾನದಲ್ಲಿ ದುಬಾಯ್ ಗೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿದ್ದರಿಂದಲೇನೋ ಅಲ್ಲಿ ಸೀಟಿನಲ್ಲಿ ಅಳವಡಿಸಿದ್ದ ಟೀವಿಯಲ್ಲಿ ಒಂದೆರಡು ಕನ್ನಡ ಚಾನಲ್ಲುಗಳೂ ಇದ್ದವು.

ಮೊದಮೊದಲು ಮುಂದಿನ ಸೀಟಿನಲ್ಲಿ ಕೇಳಿಬರುತ್ತಿದ್ದ ಶಬ್ದವನ್ನು ನಾನು ಟಿವಿಯಲ್ಲಿನ ಗೊರಗೊರ ಸದ್ದಿರಬೇಕೆಂದುಕೊಂಡಿದ್ದೆ. ಆದರೆ ಐದಾರು ನಿಮಿಷಗಳಲ್ಲಿಯೇ ಆ ಶಬ್ದ ಜೋರಾಗಿದ್ದರಿಂದ ಇಯರ್ ಫೋನ್ ಹಾಕಿಕೊಂಡಿದ್ದರೂ ತಮ್ಮ ಕಿವಿಗಳಿಗೆ ಅಪ್ಪಳಿಸುತ್ತಿರುವ ಶಬ್ದದ ಮೂಲವನ್ನರಸುವವರಂತೆ ಅಕ್ಕ ಪಕ್ಕ ಕೂತಿದ್ದವರೆಲ್ಲಾ ನನ್ನ ಮುಂದಿನ ಸೀಟಿನತ್ತ ಬಗ್ಗಿ ಬಗ್ಗಿ ನೋಡುವಾಗಲೇ...ಗೊರಗೊರ ಶಬ್ದ ಟಿವಿಯಿಂದ ಬರುತ್ತಿಲ್ಲವೆಂದೂ, ಅದು ನನ್ನ ಮುಂದಿನ ಸೀಟಿನಿಂದ ಬರುತ್ತಿರುವುದೆಂದು ನನಗೆ ಗೊತ್ತಾದದ್ದು. ಇನ್ನೇನು ನಿದ್ರೆ ಹತ್ತುವ ಹಂತದಲ್ಲಿರುವಾಗಲೇ ಆ ಶಬ್ದ ನಿದ್ರೆಗೆಡಿಸಿತ್ತು. ಇಯರ್ ಫೋನಿನ ವಾಲ್ಯೂಮ್ ಜಾಸ್ತಿ ಮಾಡಿ ಹೇಗೋ ಅರೆಬರೆ ನಿದ್ರೆ ಮಾಡಿದ್ದೆ. ದುಬಾಯ್ ನಲ್ಲಿ ವಿಮಾನ ಇಳಿಯುವಾಗ ಅಕ್ಕ ಪಕ್ಕದ ಸೀಟಿನಿಂದ ಎದ್ದವರೆಲ್ಲಾ ಮೊದಲು ಮಾಡಿದ್ದು ಆ ಶಬ್ದವನ್ನು ಹೊರಡಿಸಿದ ವ್ಯಕ್ತಿಯ ದರ್ಶನವನ್ನು. ನಾನು ಕುತೂಹಲದಿಂದ ಮುಂದಿನ ಸೀಟಿನತ್ತ ನೋಡಿದಾಗಲೇ ಅಂತಾ ಭಯಂಕರ ಶಬ್ದದ ಗೊರಕೆಯ ಮೂಲಕ ವಿಮಾನದಲ್ಲಿ ತನ್ನ ಅಕ್ಕಪಕ್ಕದ ಜನರೆಲ್ಲಾ ತನ್ನತ್ತ ನೋಡುವಂತೆ ಮಾಡಿದ್ದ ವ್ಯಕ್ತಿ ಬೇರ್ಯಾರೂ ಆಗಿರದೆ ನಮ್ಮ ಟೀಮಿನವರೆ ಎಂದು ನನಗೆ ಗೊತ್ತಾದದ್ದು.

ದುಬಾಯ್ ನಿಂದ ಲಂಡನ್ ವರೆಗಿನ ದೀರ್ಘ ಪ್ರಯಾಣದಲ್ಲಿ ಆ ಟೀಮ್ ಮೇಟ್ ನನ್ನಿಂದ ಸುಮಾರು ದೂರ ಕುಳಿತಿದ್ದರಿಂದ ಅವರ ಮದ್ಯಾಹ್ನದ ನಿದ್ರೆ-ಗೊರಕೆ ನನಗೆ ಕೇಳಿಸಿರಲಿಲ್ಲ. ಪ್ರಯಾಣದ ಮಧ್ಯೆ ಟಾಯ್ಲೆಟ್ ಗೆ ಹೋಗಿ ಬರುವಾಗ ಅವರು ಕುಳಿತಿದ್ದ ಸೀಟಿನತ್ತ ಕಣ್ಣಾಡಿಸಿದೆ. ಅವರ ಪಕ್ಕದ ಸೀಟಿನಲ್ಲಿ ಕೂತಿದ್ದ ರಾಜೇಗೌಡರು ಬನ್ನಿ ಬನ್ನಿ ಎಂದು ನನಗೆ ಕೈಸನ್ನೆ ಮಾಡಿದರು. ಏನೋ ವಿಶೇಷವಿರಬಹುದೆಂದು ಕುತೂಹಲದಿಂದ ಹತ್ತಿರ ಹೋದೆ. ರಾಜೇಗೌಡರು ಮುಸು ಮುಸು ನಗುತ್ತಾ ’ಏನ್ರೀ, ಈ ಮನುಷ್ಯ ಈ ಪಾಟೀ ಗೊರ್ಕೆ ಹೊಡೀತರೆ, ಯಾವುದೋ ಒಳ್ಳೇ ಸಿನಿಮಾ ನೋಡ್ತಿದ್ದೆ, ಇವರ ಸದ್ದಿನಲ್ಲಿ ನನ್ನ ಮೂಡೇ ಹಾಳಾಗಿ ಹೋಯ್ತು ಕಣ್ರೀ, ಅದಕ್ಕೆ ಏನೋ ನಮ್ಮ ಪಕ್ಕದಲ್ಲಿ ಕೂತಿದ್ದ ಒಬ್ಬ ಪಾರ್ಟಿ ಇಲ್ಲಿಂದ ಎದ್ದು ಹೋದವ ಬಂದೇ ಇಲ್ಲ, ಎಲ್ಲೋ ಬೇರೆ ಖಾಲಿ ಸೀಟಲ್ಲಿ ಕೂತನೇನೋ? ಎಂದವರೇ ಬನ್ನಿ ಇಲ್ಲೇ ಕೂರಿ ಎಂದರು. ’ಅವರನ್ನು ಏಳ್ಸಿ, ಮಾತಾಡಿಸ್ತಾ ಕೂತ್ಕಳಿ,’ ಅಂದದ್ದಕ್ಕೆ, ’ಅಯ್ಯೋ ಎರಡು ಬಾರಿ ಏಳ್ಸಿದೆ, ಎದ್ದು ಕೂತ ಐದಾರು ನಿಮಿಷದಲ್ಲೇ ಮತ್ತೆ ನಿದ್ರೆ, ಗೊರಕೆ. ಬನ್ನಿ ಕೂರಿ ಇಬ್ಬರೂ ಮಾತಾಡುವಾ ಅಂದರು. ಅಲ್ಲಿ ಕೂತಿದ್ದ ಮತ್ತೊಬ್ಬ ವ್ಯಕ್ತಿ ಆ ಸೀಟಿನ ಸಹವಾಸವೇ ಬೇಡವೆಂದು ಅಲ್ಲಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದ. ಸ್ವಲ್ಪ ಹೊತ್ತು ಮಲಗಿ ಬರುತ್ತೇನೆ ಕಣ್ರೀ ಎಂದು ಗೊರಕೆಯಿಂದ ತಪ್ಪಿಸಿಕೊಂಡಿದ್ದೆ.

ಅವತ್ತು ಮಧ್ಯಾಹ್ನ ನಾನು ವಿಮಾನದಲ್ಲಿ ಆ ವ್ಯಕ್ತಿಯ ಗೊರಕೆ ಸದ್ದಿನಿಂದ ತಪ್ಪಿಸಿಕೊಂಡು ಖುಶಿಯಾದೆನಾದರೂ ಆ ಗೊರಕೆ ನನ್ನನ್ನು ಈ ಪ್ರವಾಸವಿಡೀ ಕಾಡುತ್ತದೆಂಬುದು ಆ ಕ್ಷಣದಲ್ಲಿ ಗೊತ್ತಾಗಲಿಲ್ಲ. ಸಂಜೆ ಲಂಡನ್ನಿನಲ್ಲಿ ಹೋಟೆಲ್ಲಿಗೆ ಹೋದಾಗ ಅಲ್ಲಿ ಜ್ಯೂಜ಼ರ್ ಇಬ್ಬರಿಗೊಂದರಂತೆ ರೂಮುಗಳನ್ನು ಕೊಡತೊಡಗಿದ. ಅಲ್ಲಿ ಬಂದವರು ಬಹುತೇಕ ಜೋಡಿಗಳೇ ಆಗಿದ್ದರು. ನಾನು ಮತ್ತು ಗೊರಕೆಯ ಗಿರಾಕಿ ಒಬ್ಬೊಬ್ಬರೇ ಇದ್ದುದರಿಂದ ನನಗೆ ಅನಿವಾರ್ಯವಾಗಿ ಅವರೆ ರೂಮ್ ಮೇಟ್ ಆಗಿದ್ದರು. ಅಂದು ಮೊದಲ ದಿನ ಲಂಡನ್ನಿನಲ್ಲಿ ನಾನು ಆ ಗೊರಕೆಯ ಸದ್ದಿಗೆ ಅಕ್ಷರಶಃ ಬೆಚ್ಚಿ ಬಿದ್ದಿದ್ದೆ. ಮೊದಮೊದಲು ನಿಧಾನಕ್ಕೆ ಆರಂಭವಾಗುತ್ತಿದ್ದ ಅವರ ಗೊರಕೆ ಶಬ್ಧ ಒಂದೆರಡು ನಿಮಿಷಗಳಲ್ಲೇ ಭಯಂಕರ ಸದ್ದಾಗಿ ಪರಿವರ್ತಿತವಾಗುತ್ತಿತ್ತು. ಏರ್ ಕಂಡೀಷನ್ನಿನ ಆ ರೂಮಿನಲ್ಲಿ ಕಿಟಕಿಗಳನ್ನು ತೆರೆಯುವಂತಿರದ ಕಾರಣಕ್ಕೆ ಗೊರಕೆ ಪ್ರತಿಧ್ವನಿಯಾಗುತ್ತಿತ್ತು.
 
ನನ್ನ ರೂಮ್ ಮೇಟೇ ತಮ್ಮದೇ ಗೊರಕೆಯ ಶಬ್ದ ಪರಾಕಾಷ್ಟೆ ತಲುಪಿದಾಗ ಅವರ ಕಿವಿಗೇ ಅಪ್ಪಳಿಸಿದಂತಾಗಿ ಸಡನ್ನಾಗಿ ಎದ್ದುಬಿಡುತ್ತಿದ್ದರು. ಹಾಗೆ ಎದ್ದವರೇ ನನ್ನನ್ನು ಕೆಲವು ಕ್ಷಣ ದಿಟ್ಟಿಸಿ ನೋಡುತ್ತಿದ್ದರು. ಅವರು ಹಾಗೆ ನೋಡುತ್ತಿದ್ದ ಪರಿ ಹೇಗಿತ್ತೆಂದರೆ ನಾನೇ ಜೋರಾಗಿ ಗೊರಕೆ ಹೊಡೆದು ಅವರ ನಿದ್ರೆಗೆ ಭಂಗವುಂಟುಮಾಡಿದೆನೆಂಬಂತಿರುತ್ತಿತ್ತು. ಹಾಗೆ ಎದ್ದು ಕೂತ ಒಂದೆರಡು ಕ್ಷಣದಲ್ಲೇ ಮತ್ತೆ ನಿದ್ರೆಗೆ ಜಾರುತ್ತಿದ್ದರು. ಆ ರಾತ್ರಿಯಲ್ಲಿ ಎರಡು ಮೂರು ಬಾರಿ ಅವರು ಹೊರಡಿಸುತ್ತಿದ್ದ ಶಬ್ದಕ್ಕೆ ಅವರೇ ಎದ್ದು ಎದ್ದು ಕೂರುತ್ತಿದ್ದರೆಂದರೆ ಆ ಶಬ್ದವನ್ನು ಸಹಿಸಿಕೊಂಡು ನಾನಾದರೂ ಹೇಗೆ ನಿದ್ರಿಸಲು ಸಾದ್ಯವೆಂದು ಯೋಚಿಸಿದವನೇ ನಟ್ಟ ನಡುರಾತ್ರಿಯಲ್ಲಿ ಹೋಟೆಲ್ಲಿನ ಹೊರಗಡೆ ಬಂದು ಸುತ್ತಾಡಿ ಹಿಂದಿರುಗಿದ್ದೆ. ರೂಮಿನಲ್ಲಿ ಲಂಡನ್ನಿನ ಆ ಚಳಿಯಲ್ಲೂ ಏರ್ ಕೂಲರ್ ಆನ್ ಮಾಡಿದವನೇ ತಲೆತುಂಬ ಹೊದ್ದು ಮಲಗಿದೆನಾದರೂ ಆ ಶಬ್ದಕ್ಕೆ ಆಗಾಗ್ಗೆ ಎಚ್ಚರವಾಗುತ್ತಲೇ ಇತ್ತು. ಚಳಿಗೆ ನನ್ನ ರೂಮ್ ಮೇಟ್ ಪೂರ್ತಿ ಹೊದಿಕೆ ಹೊದ್ದುಕೊಂಡಿದ್ದರಾದರೂ ಶಬ್ದ ಬರುವುದು ಮಾತ್ರ ಕಡಿಮೆಯಾಗಿರಲಿಲ್ಲ. ತಲೆಯಿಂದ ಕಾಲಿನವರೆಗೂ ಪೂರ್ತಿ ಮುಚ್ಚಿಕೊಂಡಿದ್ದ ಅವರ ದೇಹದ ಯಾವ ಭಾಗದಿಂದ ಶಬ್ದ ಬರುತ್ತಿತ್ತೋ ನನಗಂತೂ ಗೊತ್ತಾಗಲಿಲ್ಲ.
 
ಬೆಳಗಿನ ಜಾವ ಲಂಡನ್ನಿನ ಚುಮುಚುಮು ಚಳಿಯಲ್ಲಿ ವಾಕ್ ಹೋಗಿ ಬರುವಾಗ ಅಡ್ಡಸಿಕ್ಕ ರಾಜೇಗೌಡರು ’ಗುಡ್ ಮಾರ್ನಿಂಗ್, ನೀವು ಯಾವ ರೂಮಿನಲ್ಲಿ ಉಳಿದಿದ್ದೀರಿ?, ಯಾರು ನಿಮ್ಮ ರೂಮ್ ಮೇಟ್,’ ಅಂದರು. ’ ವಿಮಾನದಲ್ಲಿ ನಿಮ್ಮ ಪಕ್ಕ ಕೂತಿದ್ದವರೇ ಕಣ್ರೀ,’ ಅಂದೆ ಹಾಗೆಂದ ಕೂಡಲೇ ಅವರು ನಗು ತಾಳಲಾಗದೇ ಜೋರಾಗಿ ನಕ್ಕವರೇ ’ಬಿಡಿ, ರಾತ್ರಿಯಿಡೀ, ಜಾಗರಣೆಯಾಗಿರುತ್ತೆ, ವಿಮಾನದಲ್ಲಿ ನನಗೆ ಅನುಭವವಾಗಿತ್ತು, ನೀವು ಪಕ್ಕದಲ್ಲಿ ಕೂರದೇ ತಪ್ಪಿಸಿಕೊಂಡಿರಿ, ಈಗ ಹೇಗೆ ತಪ್ಪಿಸಿಕೊಳ್ಳುತ್ತೀರಿ’, ಎಂದವರೇ ನನ್ನತ್ತ ತಮಾಷೆ ಮಿಶ್ರಿತ ಅನುಕಂಪದ ದೃಷ್ಟಿಯಿಂದ ನೋಡಿದ್ದರು. ಒಂದೆರಡು ದಿನ ಬಸ್ಸಿನಲ್ಲಿ ಎಚ್ಚರವಾಗಿದ್ದ ನನ್ನ ರೂಮ್ ಮೇಟ್ ನಂತರದ ದಿನಗಳಲ್ಲಿ ಮಧ್ಯಾಹ್ನದ ಹೊತ್ತೂ ಬಸ್ಸಿನಲ್ಲಿಯೇ ಗೊರಕೆ ಹೊಡೆಯಲಾರಂಭಿಸಿದ್ದರು. ಪ್ಯಾರಿಸ್ಸಿನಿಂದ ಬರುವಾಗ ಮಾರ್ಗ ಮಧ್ಯೆ ಚೆಕ್ ಪೋಸ್ಟಿನಲ್ಲಿ ಬಸ್ ನಿಲ್ಲಿಸಿದ್ದಾಗ ಇವರ ಗೊರಕೆ ಶಬ್ದ ಡ್ರೈವರ್ ಮಿಸ್ಟರ್ ಆರ್ ಗೂ ಕೇಳಿಸಿ ಆತ ಅಲ್ಲಿಂದಲೇ ’ವಾಟ್ಸ್ ದಟ್ ಸೌಂಡ್’ ಎಂದು ಕೇಳಿದ್ದ. ಅವನ ಹಿಂದಿನ ಸೀಟಲ್ಲಿ ಕೂತಿದ್ದವರು ವಿಷಯ ತಿಳಿಸಿದಾಗ ಅವನಿಗೂ ಇಂಥಾ ಶಬ್ದ ಹೊರಡಿಸುವ ವ್ಯಕ್ತಿ ಯಾರೆಂದು ತಿಳಿಯುವ ಕುತೂಹಲವುಂಟಾಗಿ ಅಲ್ಲಿಂದಲೇ ಎದ್ದು ನಿಂತು ನನ್ನ ರೂಮ್ ಮೇಟ್ ಅನ್ನು ನೋಡಿ ನಕ್ಕಿದ್ದ. ಪ್ಯಾರಿಸ್ಸಿನ ಲಿಡೋ ಶೋ ನಲ್ಲಂತೂ ನನಗೆ ನನ್ನ ರೂಮ್ ಮೇಟ್ ರನ್ನು ಆಗಾಗ್ಗೆ ಏಳಿಸುವುದೇ ಕಾಯಕವಾಗಿತ್ತು. ಇಲ್ಲದಿದ್ದಲ್ಲಿ ಅಲ್ಲಿ ಕೂತಿದ್ದ ಅಕ್ಕ ಪಕ್ಕದವರೆಲ್ಲಾ ಗೊರಕೆ ಶಬ್ದ ಬರುತ್ತಿದ್ದ ನಮ್ಮ ಟೇಬಲ್ ನತ್ತಲೇ ಗುರಾಯಿಸತೊಡಗಿದ್ದನ್ನು ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ.  
 
ಬೆಳಿಗ್ಗೆ ಎದ್ದ ಕೂಡಲೇ ’ರಾತ್ರಿ ಒಳ್ಳೆ ನಿದ್ರೆಯಲ್ಲವಾ’ ಎಂದು ಕೇಳಿದರೆ ’ಅಯ್ಯೋ, ಹೊಸ ವಾತಾವರಣ ನೋಡೀ, ರಾತ್ರಿಯಿಡೀ ನಿದ್ರೆಯೇ ಬರಲಿಲ್ಲ, ಸ್ವಲ್ಪ ಅಡ್ಜಸ್ಟ್ ಆಗಬೇಕು’ ಅಂದರು. ಅವರು ಹೇಳಿದ್ದು ಕೇಳಿ ನನಗೆ ಆಶ್ಚರ್ಯವುಂಟಾಯಿತು. ರಾತ್ರಿಯಿಡೀ ರೂಮೇ ಗಡಗಡ ಎನಿಸುವಷ್ಟು ಶಬ್ದ ಮಾಡಿಕೊಂಡು ಮಲಗಿದ್ದವರು ಸರಿಯಾಗಿ ನಿದ್ರೆಯೇ ಬರಲಿಲ್ಲ ಅನ್ನುತ್ತಾರಲ್ಲಾ ಹಾಗಾದರೆ ಇವರು ಎಚ್ಚರವಾಗಿದ್ದುಕೊಂಡೇ ಗೊರಖೆ ಹೊಡೆಯುತ್ತಾರೆಯೇ! ಹಾಗೆಂದು ಯೋಚಿಸಿದವನೇ ’ಸಖತ್ ಗೊರಕೆ ಶಬ್ದ ಬರುತ್ತಿತ್ತಲ್ಲಾ, ಅಂಥಾ ಗೊರಕೆ ಹೊಡೆದೂ ನಿದ್ರೆ ಬರಲಿಲ್ಲವಾ ನಿಮಗೇ?’ ಅಂದದ್ದಕ್ಕೆ ’ಹೌದಾ, ಹೌದಾ, ನನಗೆ ಗೊತ್ತಾಗಲಿಲ್ಲವಲ್ಲಾ,’ ಎಂದು ಮುಗ್ದವಾಗಿ ನನ್ನತ್ತ ನೋಡಿ ’ನೀವು ಚೆನ್ನಾಗಿ ನಿದ್ರೆ ಮಾಡಿದಿರಾ’ ಎಂದರು. ಜೆಟ್ ಲಾಗ್ ಸಮಸ್ಯೆಯಿಂದಾಗಿ ನನಗೂ ಸರಿಯಾಗಿ ನಿದ್ರೆ ಬರಲಿಲ್ಲವೆಂದೆ. ನಿದ್ರೆ ಬಂದಿದ್ದರೂ ನಿಮ್ಮ ಗೊರಕೆಯ ಶಬ್ದದಿಂದಾಗಿ ಮಲಗಲಾಗಲಿಲ್ಲವೆಂದು ಹೇಳಬೇಕೆಂದುಕೊಂಡೆನಾದರೂ ಅವರಿಗೇಕೆ ಆ ವಿಷಯ ಹೇಳಿ ಬೇಸರಿಸಬೇಕೆಂದು ಸುಮ್ಮನಾದೆ.

ತುಂಬಾ ದಪ್ಪಗಿರುವವರು ಮಾತ್ರ ಜೋರಾಗಿ ಗೊರಕೆ ಹೊಡೆಯುತ್ತಾರೆಂಬ ನನ್ನ ನಂಬಿಕೆ ನನ್ನ ರೂಮ್ ಮೇಟ್ ಗೊರಖೆ ಹೊಡೆಯುವುದನ್ನು ಕಂಡಾಗ ಹುಸಿಯಾಗಿತ್ತು. ಅವರು ನನ್ನಷ್ಟೂ ದಪ್ಪವಿರಲಿಲ್ಲ. ಪ್ಯಾರಿಸ್ಸಿನಲ್ಲಿ ಡಿಸ್ನಿ ಲ್ಯಾಂಡಿನಲ್ಲಿ ಒಂದೆರಡು ಕಡೆ ಅತಿವೇಗದ ರೈಲು, ಇತರೆ ಆಟದಲ್ಲಿ ಭಾಗವಹಿಸಿದ್ದ ನನ್ನ ರೂಮ್ ಮೇಟ್ ತಲೆ ಸುತ್ತುತ್ತದೆಂದು ಹೇಳಿ ಅಲ್ಲಿಂದ ಗಾಯಬ್ ಆಗಿದ್ದವರು ಬಸ್ ಬಳಿಗೆ ಹಿಂದಿರುಗಿ ಮಲಗಿದ್ದರು. ನಾನು ರಾಜೇಗೌಡ್ರು ಪೂರ್ತಿ ಸುತ್ತಾಡಿ ಬಸ್ ಬಳಿ ಹಿಂದಿರುಗಿದಾಗ ನಮ್ಮ ತಂಡದ ನಾಲ್ಕಾರು ಮಂದಿ ಬಸ್ ಬಾಗಿಲು ತೆಗೆದಿದ್ದರೂ ಕೆಳಗೇ ನಿಂತು ಹರಟುತ್ತಿದ್ದರು. ಹೊರಗೆ ನಿಂತಿದ್ದ ಭಟ್ಟರನ್ನು ಒಳಗೆ ಕೂರೋಣವೆಂದು ಕರೆದೆ. ಅವರು ’ಇಷ್ಟು ಹೊತ್ತೂ ಒಳಗೇ ಕೂತಿದ್ದೆವೆಂದೂ, ನಿಮ್ಮ ರೂಮ್ ಮೇಟ್ ಬಂದ ನಂತರ ನಾವೆಲ್ಲಾ ಕೆಳಗೆ ಇಳಿದೆವೆಂದರು. ನನ್ನ ರೂಮ್ ಮೇಟ್ ಬಸ್ಸಿನೊಳಗೆ ಬಂದರೆ ಇವರೆಲ್ಲಾ ಯಾಕೆ ಕೆಳಗಿಳಿಯಬೇಕೆಂದು ನನಗರ್ಥವಾಗಲಿಲ್ಲ. ನನಗಂತೂ ಡಿಸ್ನಿ ಲ್ಯಾಂಡಿನಲ್ಲಿ ಸುತ್ತಾಡಿ ಆಯಾಸವಾಗಿದ್ದರಿಂದ ರೆಸ್ಟ್ ತೆಗೆದುಕೊಳ್ಳಲು ಬಸ್ಸಿನೊಳಕ್ಕೆ ಹೋದೆ. ಕೂಡಲೇ ನನಗೆ ರಾಪಡಿಸಿದ್ದು ನನ್ನ ರೂಮ್ ಮೇಟ್ ಗೊರಕೆಯ ಶಬ್ದ. ಆಗಲೇ ನನಗೆ ಗೊತ್ತಾದದ್ದು ಬಸ್ಸಿನಲ್ಲಿದ್ದವರೆಲ್ಲಾ ಯಾಕೆ ಕೆಳಗಿಳಿದು ನಿಂತಿದ್ದಾರೆಂದು. ರೂಮಿನಲ್ಲಿ ಒಟ್ಟಿಗೇ ಇದ್ದು ನನಗಾಗಲೇ ಆ ಶಬ್ದ ಅಡ್ಜಸ್ಟ್ ಆಗಿದ್ದರಿಂದ ಸೀಟಿಗೊರಗಿದ್ದೆ. ನಮ್ಮ ಚಾಲಕ ಆರ್ ಬಂದ ನಂತರ ಬಸ್ಸಿಗೆ ಹತ್ತಿಕೊಂಡ ನಮ್ಮ ತಂಡದವರು ಆ ಶಬ್ದದಲ್ಲೂ ಸೀಟಿಗೊರಗಿ ಕೂತಿದ್ದ ನನ್ನನ್ನು ಕಂಡು ಇಂಥಾ ಶಬ್ದವನ್ನೂ ಸಹಿಸಿಕೊಂಡು ನಿದ್ರೆ ಮಾಡುವ ನಾನು ವಿಶೇಷ ಅತಿಮಾನುಷ ಶಕ್ತಿಯುಳ್ಳವನೆಂಬಂತೆ ಮೆಚ್ಚುಗೆಯ ದೃಷ್ಟಿ ಬೀರಿದ್ದರು. ನನಗೆ ನನ್ನ ರೂಮ್ ಮೇಟ್ ರ ಗೊರಕೆ ನನ್ನ ಪ್ರವಾಸದ ಸಮಯವನ್ನು ಒಂದು ರೀತಿಯಲ್ಲಿ ದುಪ್ಪಟ್ಟು ಮಾಡಿತ್ತು. ರಾತ್ರಿ ಎಷ್ಟೇ ಸುಸ್ತಾದರೂ ಅವರ ಗೊರಕೆಗೆ ಹೆದರಿ ನಾನು ರೂಮಿನಿಂದ ಹೊರಬಂದು ನಾವು ಹೋಗಿದ್ದ ದೇಶಗಳ ಉಳಿದುಕೊಂಡಿದ್ದ ಜಾಗಗಳ ಸುತ್ತಮುತ್ತ ರಾತ್ರೋರಾತ್ರಿ ಅಲೆದಾಡಿದ್ದೆ. ಇದರಿಂದ ಪ್ರವಾಸೀ ತಾಣಗಳ ಅನುಭವವಷ್ಟನ್ನೇ ಅಲ್ಲದೆ ಸ್ಥಳವೊಂದರ, ಸಂಸ್ಕೃತಿಯೊಂದರ ಅಷ್ಟೇನೂ ಪ್ರವಾಸೀ ಅಲ್ಲದ ಹಲವು ಮುಖಗಳನ್ನೂ ತಿಳಿಯಲು ಸಾಧ್ಯವಾಗಿತ್ತು.  
 
 
(ಮುಂದುವರಿಯುವುದು)  
 


ಕೈಲಾಸ ಎಂದಾಕ್ಷಣ ನೆನಪಾಗುವುದೇ ಆತ

ಮೂಲ: ಹರೀಶ್ ಕಪಾಡಿಯಾ, ಜರ್ನಿ ಆಫ್ ಹಿಮಾಲಯನ್ ವ್ಯಾಲೀಸ್

ಭಾವಾನುವಾದ: ಶ್ಯಾಮ್ ಸುಂದರ್

ಚಿತ್ರಗಳು: ಅಂತರ್ಜಾಲ

 
ಹಿಂದೂಗಳಲ್ಲಿ ಕೈಲಾಸ ಎಂದ ತಕ್ಷಣ ಮನದಲ್ಲಿ ಮೂಡಿ ಬರುವುದು ಭಕ್ತಿ ಮತ್ತು ಪವಿತ್ರ ಭಾವನೆ. ಕೈಲಾಸದಲ್ಲಿ ಪರಮೇಶ್ವರ ಪಾರ್ವತಿಯೊಂದಿಗೆ ವಾಸಿಸುತಿದ್ದ ಎಂದು ಪುರಾಣಗಳು ಹೇಳುತ್ತವೆ. ಈಶ್ವರನ ಕೈಲಾಸ ಅದೆಷ್ಟು ದೊಡ್ಡದಿದೆಯೋ ಗೊತ್ತಿಲ್ಲ, ಆದರೆ ನಿಮಗೆ ಗೊತ್ತ, ಭಾರತಕ್ಕೆ ಸೇರುವ ಹಿಮಾಲಯ ಶ್ರೇಣಿಯಲ್ಲಿ ಹಲವಾರು ಕೈಲಾಸಗಳಿವೆ. ಉಳಿದ ಇನ್ನೊಂದು ಕೈಲಾಸ-ಮಾನಸಸರೋವರ ಟಿಬೆಟ್ ಗೆ ಹಂಚಿ ಹೋಗಿದೆ. ಹಿಮಾಚಲ ಪ್ರದೇಶದ ಕಿನ್ನೋರ್ ಜಿಲ್ಲೆಯಲ್ಲಿ "ಕಿನ್ನೋರ್ ಕೈಲಾಶ್’, ಚಂಬಾ ಜಿಲ್ಲೆಯಲ್ಲಿ ’ಮಣಿಮಹೇಶ್ ಕೈಲಾಶ್/ಚಂಬಾ ಕೈಲಾಶ್’ ಮತ್ತು ಉತ್ತರ ಖಂಡದ ’ಆದಿಕೈಲಾಶ್’ ಮತ್ತು ಯಮುನೋತ್ರಿಯ ಹತ್ತಿರವಿರುವ ’ಶ್ರೀ ಕೈಲಾಶ್’. ಈ ಪ್ರತಿಯೊಂದು ಪರ್ವತಕ್ಕೂ ಅದರದೇ ಆದ ಪೌರಾಣಿಕ ಕಥೆಗಳಿವೆ. ಎಲ್ಲ ಕೈಲಾಶದಲ್ಲೂ ಈಶ್ವರ ವಿವಿಧ ರೂಪದಲ್ಲಿ ವಾಸಿಸುತ್ತಾನೆ.

ಈ ಬಾರಿ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ "ಮಣಿಮಹೇಶ್ ಕೈಲಾಶ್" ನೋಡುವ ಸುಯೋಗ ಒದಗಿ ಬಂತು. "ಮಣಿಮಹೇಶ್ ಕೈಲಾಶ್" ದಲ್ಲಿರುವ ಮಣಿಮಹೇಶ್ ಸರೋವರ ಒಂದು ಪ್ರಸಿದ್ಧ ಯಾತ್ರಾ ಸ್ಥಳ. ಅಲ್ಲಿ ಪ್ರತಿ ವರುಷ ಆಗಸ್ಟ್ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ. ಸರೋವರಕ್ಕೆ ಸಾವಿರಾರು ಭಕ್ತರು ಬಂದು ಪುಣ್ಯ ಸ್ನಾನ ಮಾಡಿ ಹೋಗುತ್ತಾರೆ. ಯಾರಾದರೂ ೧೦ ದಿನಗಳ ರಜೆಯನ್ನು ಪಡೆಯುವುದಾದರೆ ಅವರು ಈ ಮಣಿಮಹೇಶನ ದರ್ಶನ ಪಡೆಯಬಹುದು. ಈ ಬಾರಿ ಆ ಸುವರ್ಣ ಅವಕಾಶ ನಮ್ಮದಾಯಿತು.
 
ನಾನು, ಧೀರಜ್, ಅಕ್ಷಯ್ ಮತ್ತು ಸುನಿಲ್ ನಿಗದಿತ ವೇಳೆಯಂತೆ ವಿಮಾನದಲ್ಲಿ ಶಿಮ್ಲಾ ತಲುಪಿ ಅಲ್ಲಿಂದ "ಚಂಬಾ" ಜಿಲ್ಲೆಯಯಲ್ಲಿ ಬಂದಿಳಿದೆವು. ಚಂಬಾದಲ್ಲಿ ಒಂದು ದಿನ ಕಳೆದ ಮೇಲೆ ನಮ್ಮ ಪ್ಲಾನ್ ನಂತೆ "ಬ್ರಹಮೋರ್" ಎಂಬ ಸ್ಥಳವನ್ನು ತಲುಪಿದಾಗ ಬೆಳಿಗ್ಗೆ ೯ ಗಂಟೆ. ನಾವು ಅಂದುಕೊಂಡಂತೆ "ಮಣಿಮಹೇಶ ಸರೋವರ" ಮತ್ತು "ಮಣಿಮಹೇಶ್ ಕೈಲಾಶ್" ಅನ್ನು ನೋಡಲು ಚಾರಣ ಮಾಡಿ ೬೦ ಕಿ.ಮೀ ಗಳನ್ನು ಪರಿಕ್ರಮಿಸಬೇಕಿತ್ತು. ಅಲ್ಲಿದ್ದ ಅಂಗಡಿಯ ಪಾನ್ವಾಲ ನಮ್ಮನ್ನು ನೋಡಿ "ಸಾಬ್ ಯಾರೂ ಮಣಿಮಹೇಶ್ ಕೈಲಾಶ್ ಪರ್ವತವನ್ನು ಹತ್ತಲಿಕ್ಕೆ ಸಾದ್ಯವಿಲ್ಲ. ಹಾಗೇನಾದರೂ ಹತ್ತಲು ಪ್ರಯತ್ನಿಸಿದರೆ ಅವರು ಶಿವನ ಅವಕೃಪೆಗೆ ಒಳಗಾಗುತ್ತಾರೆ. ನೀವು ಸರೋವರವನ್ನು ನೋಡಲಷ್ಟೇ ಸಾಧ್ಯ" ಎಂದು ಹೇಳಿದ. ಆತ ಅಲ್ಲಿ ಚಾಲ್ತಿಯಲ್ಲಿರುವ ಪೌರಾಣಿಕ ಕಥೆಯನ್ನೂ ಹೇಳಿದ. ನಾವು ಸ್ಥಳೀಯ ಗೈಡ್ ರಾಜೇಂದ್ರ ಸಿಂಗ್ ಎಂಬಾತನನ್ನು ಕರೆದುಕೊಂಡು ಸರೋವರದ ದರ್ಶನಕ್ಕೆ. ಅಷ್ಟು ದೂರದಿಂದಲೆ ನಮಗೆ "ಮಣಿಮಹೇಶ್ ಸರೋವರದ" ದರ್ಶನವಾಯಿತು. ದಾರಿಯಲ್ಲಿ ಸಿಕ್ಕ "ಬ್ರಹಮೋರ್ ಕೈಲಾಶ್" ದೇವಸ್ತಾನ ನಿರ್ಜನವಾಗಿತ್ತು. ಇಲ್ಲಿ ಆಗಸ್ಟ್ ತಿಂಗಳಿನ ಜಾತ್ರೆಯ ಸಮಯದಲ್ಲಿ ಮಾತ್ರ ಸಾವಿರಾರು ಯಾತ್ರಿಕರಿರುತ್ತಾರೆ. ಆಗ ಎಲ್ಲ ಕಡೆಯಿಂದಲೂ ಬಸ್ ಗಳ ಸೌಕರ್ಯವನ್ನು ಹಿಮಾಚಲ ಸರ್ಕಾರ ಕಲ್ಪಿಸಿಕೊಡುತ್ತದಂತೆ.
 
ಹಾಗೇ ಚಾರಣ ಮಾಡುತ್ತಾ "ಕುಗಟಿ"ಯಿಂದ ದಕ್ಷಿಣಕ್ಕೆ ತಿರುಗಿ "ಬುಜ ನಾಲಾ" ನಡುವೆ ಇರುವ "ನಿಕೋರ"ದಲ್ಲಿ ಒಂದು ದಿನ ಕ್ಯಾಂಪ್ ಮಾಡಿದೆವು. ಧೀರಜ್ ಮತ್ತು ಅಕ್ಷಯ್ ನಮ್ಮ ಮುಂದಿನ ದಾರಿಯನ್ನು ಹುಡುಕಲು ಕ್ಯಾಂಪ್ನಿಂದ ಹೊರಟರು. ನಮಗೆ ಮೊದಲೇ ತಿಳಿದಿದ್ದಂತೆ ಮಣಿಮಹೇಶ್ ಕೈಲಾಶವನ್ನು ಗುರುತಿಸಲು ಅಲ್ಲೇ ಹತ್ತಿರದಲ್ಲಿರುವ ಇನ್ನೊಂದು ಪರ್ವತವನ್ನು ಹತ್ತಬೇಕಾಗಿ ಬಂತು. ಮಣಿಮಹೇಶ್ ಪರ್ವತವನ್ನು ಗುರುತಿಸಲು ನಮ್ಮ ಹತ್ತಿರ ೧೯೬೮ರಲ್ಲಿ ಜಪಾನಿನ ಮಹಿಳೆಯರು ತೆಗೆದ ಚಿತ್ರಗಳು ಮತ್ತು ಗೂಗಲ್ ನಲ್ಲಿ ಸಿಕ್ಕ ಚಿತ್ರಗಳಿದ್ದವು. ಅವುಗಳನ್ನು ಜೋಡಿಸಿ ನೋಡಿದಾಗ ಸುತ್ತಲ ಪರ್ವತಗಳಲ್ಲಿ "ಮಣಿಮಹೇಶ್ ಕೈಲಾಶ ಪರ್ವತ’ವನ್ನು ಗುರುತಿಸಲು ಸಾಧ್ಯವಾಯಿತು. ಆ ಅಧ್ಬುತ ಕೈಲಾಶ ಪರ್ವತದವನ್ನು ನೋಡಿದಾಗ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿರುವ "ಯಾಣ" ದ ನೆನಪಾಯಿತು. ಈ ಮಣಿಮಹೇಶ್ ಕೈಲಾಶ ಪರ್ವತವೂ ಯಾಣದ ಬಂಡೆಗಲ್ಲಿನ ತರಹ ಮುಗಿಲು ಮುಟ್ಟಿನಿಂತಿದೆ, ಆದರೆ ಇನ್ನೂ ಎತ್ತರ. ಅದರ ಮೈ ಎಷ್ಟು ಮೋನಚಾಗಿದೆ ಎಂದರೆ ಯಾವ ಕಡೆಯಿಂದ ನೋಡಿದರೂ ಅದನ್ನು ಹತ್ತುವ ದಾರಿಯನ್ನು ನಮಗೆ ಕಂಡು ಹಿಡಿಯಲಾಗಿಲ್ಲ. ಆಗ "ಹದಸರ್" ನಲ್ಲಿ ಅಂಗಡಿಯ ಪಾನ್ವಾಲ "ಈ ಕೈಲಾಸವನ್ನು ಯಾರೂ ಹತ್ತಲು ಸಾಧ್ಯವಿಲ್ಲ ಸಾಬ್" ಎಂದದ್ದು ನೆನಪಾಯಿತು. ಅದಕ್ಕೆ ಸರಿಯಾಗಿ ನಮ್ಮ ಜೊತೆಗಿದ್ದ ಗೈಡ್ ರಾಜೇಂದ್ರ ಸಿಂಗ್ ಇನ್ನೂ ಮುಂದು ಹೋಗುವುದು ಸರಿಯಲ್ಲ ಎಂದು ಎಚ್ಚರಿಸಿದ. ಆಗ ಜೊತೆಗಿದ್ದ ಸುನೀಲ್ "ಪರ್ವತ ಎಷ್ಟು ಎತ್ತರವಾಗಿದೆ ಎಂದರೆ ನೋಡಲು ಹೋದರೆ ಕತ್ತು ನೋಯುತ್ತದೆ!!" ಎಂದು ಗೊಣಗಾಡಿದ.
 
ಕುಗಟಿ ಎಂಬಲ್ಲಿಂದ "ಚಂಬಾ ಪಾಸ್" ನಲ್ಲಿ ಒಂದು ದಿನ ಕ್ಯಾಂಪ್ ಮಾಡಿ ದಿನ ಕಳೆದೆವು. ಮೇ ತಿಂಗಳಾದ್ದರಿಂದ ಉಳಿದುಕೊಳ್ಳುವಾಗ ಪುಣ್ಯಕ್ಕೆ ಹವಾಮಾನದ ವೈಪರೀತ್ಯ ಅಡ್ಡ ಬರಲಿಲ್ಲ (ನಮ್ಮ ಪಾಲಿಗೆ ಪರಮೇಶ್ವರನಿದ್ದನಲ್ಲ!). ಮರುದಿನ ದಿನ ಬೆಳಿಗ್ಗೆ ನಾವು ಕರೆತಂದಿದ್ದ ಗೈಡ್ "ಸಾಬ್ ಇನ್ನು ಇಲ್ಲಿ ಉಳಿಯಲು ಸಾಧ್ಯವಿಲ್ಲ ಬನ್ನಿ" ಎಂದು ಹೊರಡಿಸಿದ. ಅಲ್ಲಿಂದ ದೂರದಿಂದಲೇ ಮತ್ತೊಮ್ಮೆ ಪರ್ವತದ ದರ್ಶನ ಪಡೆದು ೧೫ ಕಿ.ಮೀ ಕ್ರಮಿಸಿದ ಮೇಲೆ "ಮಣಿಮಹೇಶ್" ಸರೋವರದ ಹತ್ತಿರಕ್ಕೆ ಬಂದೆವು. ಅಲ್ಲಿ ದೇವಸ್ಥಾನಲ್ಲಿದ್ದ ಪರಮೇಶ್ವರನಿಗೆ ನಮಸ್ಕರಿಸಿ ಬೀಳ್ಕೊಂಡೆವು. ಸಂಜೆಯಾಗುವಷ್ಟರಲ್ಲಿ ಹದಸರ್ ತಲುಪಬೇಕಾಗಿತ್ತು. ಹದಸರ್ ನಲ್ಲಿ ಉಳಿದು ನಾಲ್ಕು ದಿನಗಳ ಕ್ಯಾಂಪಿಂಗ್ ಮುಗಿಸಿ ಮರುದಿನ ಬೆಳಿಗ್ಗೆ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು.
ಬೆಂಗಳೂರಿಗೆ ಬಂದು ಮಿತ್ರರ ಬಳಿ ಅನುಭವವನ್ನು ಹೇಳಿಕೊಂಡಾಗ ತಿಳಿದದ್ದು ನಾಲ್ಕು ಕೈಲಾಶ ಪರ್ವತಗಳಲ್ಲಿ "ಮಣಿ ಮಹೇಶ್" ಪರ್ವತವೇ ಹತ್ತಲು ಬಲು ಕಷ್ಟವಂತೆ!. ಇವತ್ತಿಗೂ ಅದು ಪರ್ವತಾರೋಹಿಗಳಿಗೆ ಒಂದು ಸವಾಲು. ಅದನ್ನು ಹತ್ತಲು ಹಿಮಾಚಲ ಪ್ರದೇಶ ಸರ್ಕಾರದ ಅನುಮತಿ ಕೂಡಾ ಬೇಕು. ’ಮಣಿಮಹೇಶ್’ ಅಲ್ಲಿನ ಸ್ಥಳೀಯರಿಗೆ ಪವಿತ್ರ ಸ್ಥಳವಾಗಿರುವುದರಿಂದ ಅನುಮತಿ ಸಿಗುವುದು ಕಷ್ಟದ ಕೆಲಸ.
 
 
 
 


 
 
 
 
 
Copyright © 2011 Neemgrove Media
All Rights Reserved