ಡಾ. ಹಿ. ಶಿ. ರಾ.
(ಕೊನೆಯ ಭಾಗ)
ಹೆಣ್ಣು ಸೃಜನಶೀಲೆ, ಭೂಮಿ ಸೃಜನಶೀಲೆ, ಪ್ರಕೃತಿ ಸೄಜನಶೀಲ. ಮೂಲತಃ ಶಕ್ತಿ ಮತ್ತು ಜ್ನಾನದಲ್ಲಿ ಇವುಗಳದೇ ಮೇಲುಗೈ. ಸ್ತ್ರೀ ಶಕ್ತಿ, ಭೂಶಕ್ತಿ ಮತ್ತು ಪ್ರಕೃತಿ ಶಕ್ತಿ ಅನಂತವಾದುದು, ಅಪ್ರಮೇಯವಾದುದು. ಮನುಷ್ಯನ ಎಂದರೆ (ಈಗ ಅವನು ಗಂಡಸು ಮಾತ್ರ) ಪ್ರಕೃತಿಯ ಶಕ್ತಿಯನ್ನು ಮತ್ತೆ ಮತ್ತೆ ಹುಡುಕುತ್ತಿರುವ ವ್ಯಕ್ತಿ. ಸ್ತ್ರೀಶಕ್ತಿಯನ್ನು ಕೂಡಾ ಅಳೆಯಲು ಸಾಧ್ಯವಿಲ್ಲ ಎಂಬುದನ್ನು ಅವನ ಅಂತರಂಗ ಅರಿತಿದೆ. ಅನೇಕ ಮಾತು ಮತ್ತು ವ್ಯಾಖ್ಯಾನಗಳಲ್ಲಿ ಅದನ್ನು ವಿವರಿಸಿಕೊಂಡಿದ್ದಾನೆ. ಈ ಶಕ್ತಿಯನ್ನು ಶೋಧಿಸಿ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇ ತನ್ನ ಅಸ್ತಿತ್ವ ಮತ್ತು ಮುಂದುವರಿಕೆಯ ಗುಟ್ಟು ಎಂಬುದು ಅವನಿಗೆ ಗೊತ್ತು. ಈಗ ಅದನ್ನೇ ಅವನು ಮಾಡುತ್ತಿರುವುದು. ಜ್ನಾನದ ವಿಷಯದಲ್ಲಿ ನೋಡಿದರೆ ಕೂಡ ಪ್ರಕೃತಿಯ ಜ್ನಾನವೇ ಬಹಳ ದೊಡ್ಡದು.ಸಮಾಜ ವಿಜ್ನಾನಿಗಳು ಒಂದು ಕಡೆಯಿಂದ ಅದನ್ನು ಮನುಷ್ಯ ಬದುಕಿನ ಮಾದರಿಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇನ್ನೊಂದು ಕಡೆಯಿಂದ ನಿಸರ್ಗದ ವಿಜ್ನಾನಿಗಳು ಮನುಷ್ಯನಿಗೆ ಬೇಕಾದ ಸೌಕರ್ಯಗಳ ದೃಷ್ಟಿಯಿಂದ ಪ್ರಕೃತಿ ಜ್ನಾನವನ್ನು ಶೋಧಿಸುತ್ತಲೇ ಇದ್ದಾರೆ. ಅದು ಹೇಗೆ ಮತು ಎಲ್ಲಿಯವರೆಗೆ ಎಂದರೆ ಆ ಜ್ನಾನವನ್ನು ಅದರ ಫಲಿತವನ್ನೂ ಹೆಣ್ಣು ನಿರ್ವಹಿಸಲು ಕಷ್ಟ ಎನ್ನುವಷ್ಟರ ಮಟ್ಟಿಗೆ! ಪ್ರಯತ್ನ ಎಲ್ಲದಕ್ಕೂ ದಾರಿ ಮಾಡಿಕೊಡುತ್ತದೆ. ಅದನ್ನು ಹೆಣ್ಣು ಮಾಡಬೇಕು.
ಪ್ರಕೃತಿ ಹೆಣ್ಣು ಮತ್ತು ಗಂಡೆಂಬ ಎರಡು ಅಸ್ತಿತ್ಚಗಳನ್ನು ಸಮಾನವಾಗಿಯೆ ಸೃಷ್ಟಿಸಿದೆ. ಸಮಾಜ, ಗಂಡು ಸಮಾಜ ಮಾಡಿಕೊಂಡ ಕಟ್ಟುಕಟ್ಟಲೆಗಳೆಂಬ ತಾರತಮ್ಯ ಸಿದ್ದಾಂತದ ಕಾರಣದಿಂದಾಗಿ ಮಾತ್ರ ಹೆಣ್ಣು ಅಬಲೆ, ಅಸಹಾಯಕಿ ಆಗಿದ್ದಾಳೆ. ಕೂಡಿಟ್ಟುಕೊಂಡ ವ್ಯಕ್ತಿಯಲ್ಲಿ ಯಾಹೊತ್ತೂ ಚೈತನ್ಯ ಕುಂದಿರುತ್ತದೆ. ಬಿಡುಗಡೆಗೊಂಡವನಲ್ಲಿ ಚೈತನ್ಯ ಉಕ್ಕುತ್ತಿರುತ್ತದೆ. ಅದು ಯಾವುದೇ ಶಕ್ತಿಗಿಂತ ದೊಡ್ಡದು. ಹೆಣ್ಣು ಗಂಡಿನ ಆವರಣದಿಂದ ಬಿಡುಗಡೆ ಹೊಂದುವುದು ಒಂದು ಬಗೆಯ ಪ್ರಯತ್ನವಾದರೆ, ತನ್ನೊಳಗಿಂದ ಬಿಡುಗಡೆ ಹೊಂದುವುದು ಅತ್ಯಂತ ಮುಖ್ಯ ಸಂಗತಿಯಾಗಿದೆ. ಈ ಬಿಡುಗಡೆಗೆ ಅವಳು ಗಂಡಿನೊಡನೆಯ ವಿರೋಧಿ ನೆಲೆಯಿಂದ ಹೊರಡದೆ ಸ್ನೇಹದ ಮಾರ್ಗದಿಂದ ಮುನ್ನಡೆಯಬೇಕಿದೆ. ಪರಿಹಾರಕ್ಕಾಗಿ ಹೊರಡಲಿ ಬಿಡುಗಡೆಗಾಗಿಯಾದರೂ ಹೊರಡಲಿ ಅವಳ ನಿಲುವು ಸ್ಪಷ್ಟವಾಗಬೇಕು. ಸಮಾನತೆ ಬೇಡಿಕೆಯಿಂದ ಬರುವುದಿಲ್ಲ, ಸಾಮರ್ಥ್ಯದ ಹಕ್ಕುದಾರಿಕೆಯಿಂದ ಅದನ್ನು ಗಳಿಸಬೇಕು. ಈಗ ಭಾರತದಲ್ಲಿ ದಲಿತರು ಕೇಳುತ್ತಿರುವ ಸಮಾನತೆ ಬೇಡಿಕೆಯ ಸ್ವರೂಪದ್ದು. ಸಂಘಶಕ್ತಿ ಮತ್ತು ಸೃಜನಶೀಲತೆಯ ಮೂಲಕ ಪಡೆಯಲಿರುವ ಸಮಾನತೆಯ ಕಡೆಗೆ ಅವರು ತುಡಿಯಬೇಕು. ಮಹಿಳೆಯ ಪರಿಹಾರ ಸ್ವರೂಪದ ಬೇಡಿಕೆಗಳು ಬಾಹ್ಯ ಸ್ವರೂಪದವು. ಅಂತರಂಗದಿಂದ ಹೊರಡಿಸುವ ಸಮಾನತೆಯ ಧ್ವನಿಗಳು ಮಾತ್ರ ಅವಳನ್ನು ಸರಿದಾರಿಗೆ ತರಬಲ್ಲವು.
ಅಂತರಂಗದ ಧ್ವನಿ ತರಂಗಗಳನ್ನು ಹೊರಡಿಸುವುದು ಹೇಗೆ;
೧) ಒಂದು ಹೆಣ್ಣಿನೊಳಗಡೆ ಒಬ್ಬ ಗಂಡಸೂ ಇದ್ದಾನೆ.
ಒಬ್ಬ ಗಂಡಸಿನೊಳಗಡೆ ಒಂದು ಹೆಣ್ಣೂ ಇದೆ.
೨) ಸೃಜನಶೀಲ ಮೂಲಗಳ ರಕ್ಷಣೆ ಗಂಡುಗಳ ಜೀವಧಾತುವಿನ ಸಂವರ್ಧನೆ.
೩) ಸೃಜನ ಮೂಲಗಳ ಆರೋಗ್ಯಕರ ಅಸ್ತಿತ್ವವೆಂದರೆ ಪ್ರತಿಪ್ರಜೆ, ಸಂಸ್ಕೃತಿ, ಭಾಷೆ, ನಾಡು ಮತ್ತು ದೇಶದ ಸಂರಕ್ಷಣೆ ಹಾಗೂ ಮುಂದುವರಿಕೆಯಾಗಿದೆ.
೪) ಸೃಜನ ಮೂಲಗಳಿಂದ ಪಡೆವ ಸುಖವೆ ಬ್ರಹ್ಮಾನಂದ, ಕೃತಕ ಸೃಷ್ಟಿಗಳಿಂದ ಸಿಗುವ ಸುಖ ಮತ್ತತೆ ಮಾತ್ರ.
೫) ಸೃಜನ ಮೂಲಗಳನ್ನು ಉದ್ಯಮಕ್ಕೆ ಬಳಸಿಕೊಳ್ಳುವ ಸಂಪನ್ಮೂಲ ಎಂದು ತಿಳಿಯದೆ ಅವು ಇದ್ದರೆ ದೇಶ, ಜನ ಮತ್ತು ಬದುಕು ಎಂದು ತಿಳಿಯಬೇಕು.
೬) ಪ್ರಗತಿ ಅನಿವಾರ್ಯ. ಅದನ್ನು ಅಭಿವೃದ್ಧಿ ಎಂದು ಮಹಾಭೋಗವನ್ನಾಗಿ ಪರಿವರ್ತಿಸಬಾರದು, ಇದರಿಂದ ಹಲವರು ಹಿಂದೆ ಬಿದ್ದು, ಕೆಲವರು ಮಾತ್ರ ಮುನ್ನಡೆಯಲ್ಲಿರುತ್ತಾರೆ.
೭) ಜನರನ್ನು ಉಳಿಸುವ ತತ್ವ ಮೊದಲು
ವಸ್ತುಗಳನ್ನು ಬಳಸುವ ತತ್ವ ಆಮೇಲೆ
೮) ಧರ್ಮ ಮತ್ತು ಸಂಸ್ಕೃತಿಗಳು ಬಹುಜನರನ್ನು ಭಕ್ತರು ಅಥವ ಸೇವಕರನ್ನಾಗಿ ಮಾಡುವ ಸೌಮ್ಯ ಭಯೋತ್ಪಾನೆಗಳಲ್ಲ. ಧರ್ಮ ಧ್ಯಾನಕ್ಕೆ ಸಾಕು; ಸಂಸ್ಕೃತಿ, ಸಂಬಂಧ ನಿರ್ಮಾಣಕ್ಕೆ ಇರಲಿ.
೯) ಶಿಕ್ಷಣ ತರಬೇತಿ ಅಲ್ಲ, ಜಗತ್ತಿನ ಅರಿವು.
ಉದ್ಯೋಗ ಸೃಷ್ಟಿ ತಾತ್ಕಾಲಿಕ ಕಸುಬು ನಿರಂತರ
೧೦) ಮಕ್ಕಳನ್ನು ಕಟ್ಟಿಹಾಕಿ ಬೆಳೆಸಬೇಡಿ, ಜೊತೆಗೆ ಬಿಟ್ಟುಕೊಂಡು ಬೆಳಸಿ-ಎಂದು ಸಾಧಿಸಬೇಕು.
ಮೇಲು ನೋಟದಲ್ಲಿ ಮೇಲಿನ ತಾತ್ವಿಕ ಅಂಶಗಳು ಹೆಣ್ಣನ್ನು ನೇರವಾಗಿ ಕುರಿತೇ ಇಲ್ಲ ಎಂದೆನಿಸಲೂಬಹುದು, ಹೆಣ್ಣು ಮತ್ತು ದುರ್ಬಲರು ಆಯುಧ ಹಿಡಿದು ಶತ್ರುಗಳನ್ನು ಗೆಲ್ಲುವ ಅವಕಾಶಗಳೇ ಈಗ ಇಲ್ಲ. ಅವರು ಮೃಗಗಳ ಮನಸ್ಸನ್ನು ಪ್ರವೇಶಿಸಬೇಕಿದೆ. ಅಲ್ಲಿಂದ ಮನುಷ್ಯರನ್ನೂ ಹುಟ್ಟಿಸಬೇಕಿದೆ. ಹುಟ್ಟಿನ ಸೃಷ್ಟಿಯನ್ನು ತನ್ನಲ್ಲಿಟ್ಟುಕೊಂಡಿರುವ ತಾಯಿ, ಮನಸ್ಸನ್ನೂ ಹುಟ್ಟಿಸುವ ಕಾಯಕಕ್ಕೆ ತೊಡಗಬೇಕಿದೆ. ಮಕ್ಕಳ ಮನಸ್ಸನ್ನು ಬೆಳೆಸಿದ ಮನೋವಿಜ್ನಾನಿ ಅವಳೇ ಅಲ್ಲವೇ? ಅದೇ ಅವಳ ಆಯುಧವೂ, ತತ್ವವೂ ಆಗಬೇಖು. ಅದು ಮೊದಲಾಗಿ ತನ್ನ ಮಗುವಿನ ಮೂಲಕ.
(ಮುಗಿಯಿತು) |