ಸಾಂಸ್ಕೃತಿಕ ಯಜಮಾನ್ಯ ಮತ್ತು ಪ್ರತಿ ಸಂಸ್ಕೃತಿ ನಿರ್ಮಾಣ ಪ್ರಯತ್ನಗಳ ಕುರಿತು...(ಭಾಗ-೨)

ಡಾ. ಬಂಜಗೆರೆ ಜಯಪ್ರಕಾಶ
 
(ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ, ಬೆಂಗಳೂರು ಇವರು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾಡಿದ ಭಾಷಣದ ಬರಹ ರೂಪ)
(ಸಾಂಸ್ಕೃತಿಕ ಯಜಮಾನ್ಯ-ಭಾಗ ೨)
 
ನಮ್ಮ ಹಿಂದಿನ ಅನುಭವಗಳ ಬಗ್ಗೆ ಹೇಳುವುದಾದರೆ ಒಂದು ರೀತಿಯಲ್ಲಿ ಅದು ಸರಳವಾದ ವಿಧಾನದಲ್ಲಿತ್ತು ಎಂದು ನಾನು ಹೇಳಿದೆ. ಪುರೋಹಿತಶಾಹಿ ಶಕ್ತಿ, ಪುರೋಹಿತಶಾಹಿ ಸ್ಥಾನಮಾನಗಳು ಯಾವುದೋ ಜಾತಿಯ ಕೈಯ್ಯಲ್ಲಿ ಸೀಮಿತ ಆಗಿವೆ ಅಂತ ಆದಾಗ, ಅದನ್ನ ವಿಕೇಂದ್ರೀಕರಿಸಿ ಪ್ರಜಾತಾಂತ್ರಿಕಗೊಳಿಸುವುದು, ಎಲ್ಲಾ ಜಾತಿಗಳಲ್ಲೂ ಪುರೋಹಿತಶಾಹಿಯನ್ನ ನಿರ್ಮಿಸುವುದನ್ನು ಹೋರಾಟದ ಒಂದು ವಿಧಾನವನ್ನಾಗಿ ಮಾಡಿಕೊಂಡಿದ್ದನ್ನು ನಾವು ಕಂಡಿದ್ದೇವೆ. ಹರಿದಾಸ ಚಳುವಳಿ ನೋಡಿದರೆ, ಅದು ತನ್ನ ವ್ಯಾಪ್ತಿಗೆ ಬಂದ ಎಲ್ಲ ಜಾತಿಗಳಿಗೂ ದಾಸ ದೀಕ್ಷೆ ಕೊಡುವುದನ್ನು ಆರಂಭಿಸಿತು. ಶಾಸ್ತ್ರಪುರಾಣಗಳನ್ನೇ ಪುರೋಹಿತಶಾಹಿ ಬಹಳ ದೊಡ್ಡ ಪ್ರಮಾಣಿತ ಅಧಿಕಾರ
ಮೂಲಗಳು ಎಂದು ಕರೆದಾಗ ಶರಣ ಚಳುವಳಿ ಬದುಕಿನ ಅನುಭವಗಳನ್ನೇ ದೊಡ್ಡದು ಅಂತ ಗೌರವಿಸಿ ಅದಕ್ಕೆ ಸವಾಲೆಸೆಯಿತು.
 
ಈಗ ನಮಗೆ ಯುಜಮಾನ ಸಂಸ್ಕೃತಿಯಿಂದ ಒದಗಿರುವ ಸಮಸ್ಯೆ ಅನ್ನುವಂಥಾದ್ದು ಅನುಭೋಗವಾದ. ಈ ಅನುಭೋಗವಾದಕ್ಕೆ ಪೂರಕವಾಗಿ ಉಳಿದ ಎಲ್ಲವೂ ಕೂಡ ಇಲ್ಲಿ ಕಾರ್ಯಾಚರಣೆಗೆ ನಡೆಸುತ್ತಿವೆ. ಅನುಭೋಗವಾದವೆನ್ನುವುದು ವ್ಯಕ್ತಿಕೇಂದ್ರಿತ ವಾದವಾಗಿ, ಸಂಪತ್ತಿನ ಹಂಚಿಕೆಯ ತೀವ್ರ ಅಸಮಾನತೆಯಾಗಿ, ಸರಕು ಸಂಸ್ಕೃತಿಯಾಗಿ, ಹೆಚ್ಚೆಚ್ಚು ತಂತ್ರಜ್ಞಾನ ಬಳಕೆಯ ಮೂಲಕ ಪ್ರತಿಷ್ಠೆ ತೋರಿಸಿಕೊಳ್ಳುವ ಒಂದು ಆಧುನಿಕತೆಯಾಗಿ, ಬಲಿಷ್ಠ ಜಾತಿಗಳ ಸಂಖ್ಯಾಬಲ ಮತ್ತು ಹಣಬಲದ ಪ್ರಜಾತಂತ್ರವಾಗಿ, ಆ ಮುಖಾಂತರವಾಗಿ ಸಾಮಾಜಿಕ ಮೌಲ್ಯಗಳ ಪೂರ್ತಿ ಪತನವಾಗಿ ಇದು ಅಭಿವ್ಯಕ್ತಿಗೊಂಡಿದೆ. ಈ ಲಕ್ಷಣಗಳನ್ನು ಕ್ರೋಢೀಕರಿಸಿ ಅದನ್ನು ಇಂದಿನ ಯಜಮಾನ್ಯ ಸಂಸ್ಕೃತಿಯ ಒಂದು ಆಕೃತಿಯನ್ನಾಗಿ ನೋಡಬಹುದೇ. ಬೇರೆಲ್ಲವೂ ಕೂಡ ಆನುಷಂಗಿಕ ಲಕ್ಷಣಗಳು ಅನ್ನುವಂತೆ ಕಾಣಿಸುತ್ತಾ ಇದೆ. ಅವಕಾಶವಾದ ಅಂತ ರವೀಂದ್ರ ರೇಷ್ಮೆಯವರು ಹೇಳಿದರು. ಈ ಅವಕಾಶವಾದವೇ ಬಹಳ ದೊಡ್ಡ ಸಾಂಸ್ಕೃತಿಕ ಮೌಲ್ಯವಾಗಿ ಇವತ್ತು ಎಲ್ಲ ರಂಗಗಳಲ್ಲಿ ತಾಂಡವವಾಡುತ್ತಿದೆ. ಅಂದರೆ ಅನುಭೋಗವಾದವನ್ನು ಬಲಪಡಿಸುವುದಕ್ಕೆ ಅಂತಿಮವಾಗಿ ಅಕ್ರಮ ಹಣ ಗಳಿಕೆಯ ವಿಧಾನಗಳಿಗೆ ದಾರಿ ಮಾಡಿಕೊಡುವಂತಹ ವ್ಯಕ್ತಿಕೇಂದ್ರಿತ ಸ್ವಾರ್ಥವಾಗಿ ಇವತ್ತು ನಮ್ಮಲ್ಲಿ ಚಾಲ್ತಿಯಲ್ಲಿದೆ.
 
ಒಂದು ಕಡೆ 

'ಜಾತಿ' ಅನ್ನುವುದು ಬಲಿಷ್ಠ ಆಗುತ್ತಾ ಇದೆ. ಅದು ಅವಕಾಶವಾದವನ್ನು ಬೆಂಬಲಿಸುವ ಅಸ್ತ್ರವಾಗಿಯೂ ಬಳಕೆಯಾಗುತ್ತಿದೆ. ಇದರಿಂದಾಗಿ ಏಕ ಕಾಲದಲ್ಲಿ ನಾವು ಜಾತ್ಯಾತೀತರೂ ಮತ್ತು ಜಾತಿವಾದಿಗಳೂ ಆಗಿರುವಂತಹ ಆಷಾಡಭೂತಿತನದ ವಿಪರ್ಯಾಸಕರ ಸನ್ನಿವೇಶ ಕಂಡುಬರುತ್ತಿದೆ. ಯಾರನ್ನೂ ಇಂತಹ ಜಾತಿಯವನೆಂಬ ಕಾರಣಕ್ಕೆ ದೂರ ಇಟ್ಟಿದ್ದೇವೆ ಅಂತ ಇವತ್ತಿನ ಸಾಮಾಜಿಕ ರಂಗದಲ್ಲಿ ಯಾರೂ ತೋರಿಸಿಕೊಳ್ಳಬಯಸುತ್ತಿಲ್ಲ. ಈಗ ಅದು ಅನುಕೂಲ ಅನಾನುಕೂಲದ ಪ್ರಶ್ನೆ ಮಾತ್ರ. ಯಾವ ಜಾತಿ ಸಮೀಕರಣ ಆ ಸನ್ನಿವೇಶದಲ್ಲಿ ಹೆಚ್ಚು ಲಾಭ ಕೊಡುತ್ತದೋ, ಆ ಜಾತಿಗಳನ್ನ ಸಮೀಕರಣ ಮಾಡುವುದಕ್ಕೆ ಈ ಅವಕಾಶವಾದಿ ರಾಜಕಾರಣಿಗಳು ಸಿದ್ಧರಿದ್ದಾರೆ. ಜಾತಿ ಸಮೀಕರಣಗಳು, ಅದಕ್ಕೋಸ್ಕರವಾಗಿ ಜಾತಿಗಳನ್ನ ಕಟ್ಟುವಂತಹ ಒಂದು ವಿಧಾನ ಜಾತಿಗಳನ್ನ ಕಾಪಾಡುವ ಹುನ್ನಾರಗಳು, ಮತ್ತು ಅದೇ ಸಂದರ್ಭದಲ್ಲಿ ಜಾತಿಗೆ ಸೀಮಿತವಾಗಿದ್ದೇವೆ ಅಂತ ತೋರಿಸಿಕೊಳ್ಳದಿರಲು ತಂತ್ರಗಾರಿಕೆಗಳು ಇಂತಹ ಎಲ್ಲ ಸರ್ಕಸ್ಸುಗಳನ್ನು ಯಜಮಾನ ಸಂಸ್ಕೃತಿ ಮಾಡುತ್ತಾ ಇದೆ.
ಪ್ರತಿಯೊಬ್ಬರೂ ಕೂಡ ಗೊತ್ತಿದ್ದೇ ತಮ್ಮ ಜಾತಿಯನ್ನ ಬಳಸುತ್ತಾ ಇದ್ದಾರೆ ಮತ್ತು ಬೇರೆ ಜಾತಿ ಗುಂಪುಗಳ ಜೊತೆ ಹಿತಾಸಕ್ತಿ ಆಧಾರಿತ ಸಮೀಕರಣವನ್ನ ಸಾಧಿಸುತ್ತಾ ಇದ್ದಾರೆ. ಅನುಭೋಗವಾದ ಮತ್ತು ಅದರ ಮುಖಾಂತರವಾಗಿ ಹುಟ್ಟುರುವಂತಹ ಅವಕಾಶವಾದವೇ ಇದರ ನೆಲೆಗಟ್ಟು. ಇದು ನಮ್ಮಲ್ಲಿ ಯಾವ ಬಗೆಯು ಸಂಸ್ಕೃತಿಯುನ್ನು ಪ್ರೇರೇಪಿಸಿದೆ? ಮತ್ತು ಅದಕ್ಕೆ ವಿರೋಧವಾಗಿ ಯಾವ ಬಗೆಯ ಸಾಂಸ್ಕೃತಿಕ ಹೋರಾಟಗಳನ್ನ ನಾವು ಮಾಡೋದಕ್ಕೆ ಸಾಧ್ಯ ಇದೆ? ಅನ್ನುವುದನ್ನು ಹೊಸದಾಗಿ ಯೋಚಿಸಬೇಕಿದೆ. ಹಳೆಯು ಅನುಭವಗಳ ಆಧಾರದಲ್ಲಿ ಆಲೋಚಿಸಿ ಈ ಹೊಸ ವಿದ್ಯಮಾನಗಳನ್ನು ಎದುರಿಸುವ ಸೂಚನೆಗಳನ್ನು ಪಡೆದುಕೊಂಡರೆ ಬಹುಶಃ ಸಾಕಾಗುವುದಿಲ್ಲ. ನನಗಂತೂ ಇದು ಬಹಳ ಇಕ್ಕಟ್ಟಿನ ಸನ್ನಿವೇಶವಾಗಿ ಕಾಣುತ್ತಿದೆ. ಏಕೆಂದರೆ ಇವತ್ತಿನ ಈ ಅವಕಾಶವಾದ ಒಂದು ಜಾತಿಗೆ ಸೀಮಿತವಾದುದಲ್ಲ. ಒಂದು ಸಮುದಾಯಕ್ಕೆ ಸೀಮಿತವಾದುದಲ್ಲ. 
 
ಸಂಸ್ಕೃತಿ ಅನ್ನುವುದರ ನಿರ್ವಚನದ ಕೂಡ ಸಂಕೀರ್ಣವಾಗಿದೆ. ಒಟ್ಟಾರೆಯಾಗಿ ನಾವು ಇವತ್ತು ಕಾಣುತ್ತಾ ಇರುವಂಥದ್ದು ಒಂದು ಏಕಾಕಾರಿ ಸಂಸ್ಕೃತಿ. ಮತ್ತದು ಏಕಾಕಾರಿ ಭಾಷೆಯನ್ನು ಓಲೈಸುತ್ತಿರುವಂತಾದ್ದು ಕೂಡ. ಸಂಸ್ಕೃತಿಯಲ್ಲಿ ಏಕಾಕಾರ, ಭಾಷೆಯಲ್ಲಿ ಏಕಾಕಾರ, ಉತ್ಪಾದನೆಯಲ್ಲಿ ಏಕಾಕಾರ, ಅಭಿರುಚಿಯಲ್ಲಿ ಏಕಾಕಾರ, ಇವುಗಳಿಗೆ ಜೊತೆಯಾಗಿ ಏಕಾಕಾರಿ ರಾಜಕೀಯ- ಅದು ಯಾವುವುದೆಂದರೆ ಅಧಿಕಾರ ಹುದ್ದೆಗಳನ್ನವಲಂಬಿಸಿರುವ ಅವಕಾಶವಾದ. ಇವತ್ತು ಇದು ಎಲ್ಲರಿಗೂ ಗೊತ್ತಿರುವ ಅಂಶ. ಅದು ಸಿದ್ಧಾಂತವೂ ಅಲ್ಲ. ಮೌಲ್ಯವೂ ಅಲ್ಲ, ಹೋರಾಟವೂ ಅಲ್ಲ. ಅಧಿಕಾರವನ್ನ ಮಾತ್ರ ಪಡೆ0ುಬೇಕು. ಅಧಿಕಾರ ಕೂಡ ಅಕ್ರಮ ಹಣ ಮಾಡೋದಕ್ಕೋಸ್ಕರವಾಗಿ ಮಾತ್ರ. 
ಈ ಸನ್ನಿವೇಶದಲ್ಲಿ ಒಂದು ನವಹಿಂದೂತ್ವವಾದ ನಮ್ಮ ಭಾರತದಲ್ಲಿ ಕಾಣಿಸಿಕೊಂಡಿದೆ. ಈ ನವಹಿಂದುತ್ವವಾದಕ್ಕೂ ಮೊದಲ ಮೂಲದ ಬ್ರಾಹ್ಮಣ ಹಿಂದುತ್ವವಾದಕ್ಕೂ ಹಲವಾರು ವ್ಯತ್ಯಾಸಗಳಿವೆ. ಬ್ರಾಹ್ಮಣ ಶ್ರೇಷ್ಠತೆಯು ಆದ್ಯತೆಯ ಪ್ರತಿಪಾದನೆಯಾಗಿರಬೇಕು ಎಂಬುದು ಈಗ ಪಕ್ಕಕ್ಕೆ ಸರಿದಿದೆ. ಅದರೊಳಗೆ ಬಂದು ಹಿಂದುತ್ವವಾದದ ಮುಖಾಂತರವಾಗಿ ಹಿಂದುಳಿದ ಬಲಿಷ್ಠ ಜಾತಿಗಳು ರಾಜಕಾರಣವನ್ನು ನಡೆಸೋದಾದರೆ ಅಧಿಕಾರ ಸ್ಥಾನಗಳಲ್ಲಿ ಕೂರಿಸುವ ಅವಕಾಶ ಕಲ್ಪಿಸುವುದಕ್ಕೆ ಅದು ಸಿದ್ಧವಿದೆ. ಭಾರತೀಯ ಜನತಾ ಪಕ್ಷದ ಬಹುಪಾಲು ರಾಜಕಾರಣಿಗಳನ್ನು, ಅದರಲ್ಲಿ ಮುಖ್ಯಮಂತ್ರಿಗಳಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವವರನ್ನು ನೋಡಿದರೆ ಇವತ್ತು ಯಾವ ಕಾರಣಕ್ಕೂ ಭಾರತೀಯ ಜನತಾ ಪಕ್ಷ ಅನ್ನುವಂತಾದ್ದು ಕೇವಲ ಬ್ರಾಹ್ಮಣ ರಾಜಕಾರಣಿಗಳ ಸಂಘಟನೆ ಅಥವಾ ಪಕ್ಷವಾಗಿ ಉಳಿದಿಲ್ಲ.
ಪ್ರಜಾತಾಂತ್ರಿಕ ವಿಧಾನಗಳಲ್ಲಿ ಅಧಿಕಾರಕ್ಕೆ ಬರಬೇಕು ಅಂತ ಹೇಳಿದರೆ, ಸಂಖ್ಯಾಬಲವುಳ್ಳ ಬಲಿಷ್ಠ ಜಾತಿಗಳನ್ನು ತನ್ನೊಳಕ್ಕೆ ಸೇರಿಸಿಕೊಳ್ಳಬೇಕು. ಅದನ್ನವರು ಈಗ ಸಾಧಿಸಿದ್ದಾರೆ. ಈ ಬಗೆಯ ಏರ್ಪಾಡನ್ನು ಸಂಘ ಪರಿವಾರ ಪ್ರವರ್ತಿಸಿರುವ ಹಲವಾರು ಸಮೂಹ ಸಂಘಟನೆಗಳಲ್ಲೂ ಇದೇ ಬಗೆಯ ಏರ್ಪಾಡನ್ನು ಮಾಡಿದ್ದಾರೆ. ಅದನ್ನು ನವಹಿಂದೂತ್ವವಾದ ಎಂದೇ ನಾವು ಕರೆಯಬೇಕು. ಮತ್ತೆ ಜಾತಿ ಆಧಾರಿತ ದಮನಕಾರಿ ರಾಜಕಾರಣವನ್ನ ಮಾಡೋದಕ್ಕೆ ಮತ್ತು ತೋಳ್ಬಲವನ್ನ ಬಳಸೋದಕ್ಕೆ ಈ ನವಹಿಂದೂತ್ವಕ್ಕೆ ಈ ಹಿಂದುಳಿದ ಬಲಿಷ್ಠ ಜಾತಿಗಳ ಬೆಂಬಲ ಅನ್ನೋದು ಬಹಳ ಅತ್ಯಗತ್ಯವಾಗಿದೆ. ಆದ್ದರಿಂದ ಸ್ವರೂಪದಲ್ಲಿ ಅದಕ್ಕಿರುವಂತಹ ಕೋಮುವಾದಿ ರಾಜಕಾರಣದ ಅಧಿಕಾರ ಕೇಂದ್ರದ ಪುರೋಹಿತಿಕೆಯನ್ನು ಬ್ರಾಹ್ಮಣವರ್ಗ ತಾನೇ ಇಟ್ಟುಕೊಂಡಿರುತ್ತದೆ. ಅದನ್ನ ಇವರು ಒಪ್ಪಿದರಾಯಿತು. ಬಲಿಷ್ಠ ಹಿಂದುಳಿದ ಜಾತಿಗಳು ಅದು ಯಡಿಯೂರಪ್ಪ ಆಗಿರಲಿ, ಗುಜರಾತಿನಲ್ಲಿ ಮೋದಿ ಆಗಿರಲಿ ಅಥವಾ ಇನ್ನೊಂದು ಕಡೆ ಯಾರಾದರೂ ಆಗಿರಲಿ, ಅವರಿಗೆ ಥಿಂಕ್ ಟ್ಯಾಂಕ್ ಆಗಿರುವುದು ಇವರ ಕೆಲಸ. ಈ ಥಿಂಕ್ ಟ್ಯಾಂಕ್ ಆದೇಶಗಳು ಅಂತಿಮ. 
 
ಇದೊಂದು ರೀತಿಯಲ್ಲಿ ಪುರಾತನ ಸಾಮ್ರಾಜ್ಯಗಳ ರಾಜಪುರೋಹಿತಿಕೆಯ ವಿಧಾನವನ್ನವಲಂಬಿಸಿದೆ. ಆರ್.ಎಸ್.ಎಸ್. ಈಗ ಕೋಮುವಾದಿ ರಾಜಕಾರಣದ ರಾಜಪುರೋಹಿತ ಸ್ಥಾನ ಅಲಂಕರಿಸಿ ತೆರೆಮರೆಯಿಂದ ನಿಯಂತ್ರಣ ಮಾಡುತ್ತಿದೆ. ಅಧಿಕಾರದ ಹುದ್ದೆಗಳಲ್ಲಿ ಬೇರೆ ಬಲಿಷ್ಠ ಜಾತಿಗಳವರಿರುತ್ತಾರೆ. ಇವರ ಮುಖಾಂತರವಾಗಿಯೆ ಆಡಳಿತ ನಡೆಸೋದಕ್ಕೆ, ಇವರ ಮುಖಾಂತರವೇ ತನ್ನ ಅಜೆಂಡಾಗಳನ್ನು ಪೂರೈಸಿಕೊಳ್ಳೋದಕ್ಕೆ ಅದು ತಂತ್ರಗಾರಿಕೆ ರೂಪಿಸಿದೆ. ಅವರು ಮಾಂಸಾಹಾರಕ್ಕೆ ಈಗ ರೆಡಿ ಇದ್ದಾರೆ. ಬಿಜೆಪಿಗೇನು ಮಾಂಸಾಹಾರ ಈಗ ದೊಡ್ಡ ವಿಷಯ ಅಲ್ಲ. ಗೋವು ಪವಿತ್ರ ಎಂದು ಭಾವಿಸಬೇಕು ಮತ್ತು ಅದರಿಂದಾಗಿ ಗೋವು ತಿನ್ನೋರನ್ನು ಪ್ರತ್ಯೇಕಗೊಳಿಸಬೇಕಷ್ಟೆ. 
 
ಅದು ಕೋಮುವಾದಿ ರಾಜಕಾರಣದ ಜನರನ್ನು ವಿಭಜಿಸುವ ಒಂದು ಹುನ್ನಾರ. ಬಹುಸಂಖ್ಯಾತ ಧಾರ್ಮಿಕ ಸಮುದಾಯವನ್ನು ಇಂತಹ ವಿಷಯಗಳ ಮೂಲಕ ಭಾವೋದ್ರೇಕಗೊಳಿಸಿ ಮತಬ್ಯಾಂಕ್ಅನ್ನು ನಿರ್ಮಾಣ ಮಾಡಿಕೊಳ್ಳುತ್ತಿದೆ. ನೀವು ಆಧುನಿಕರಾಗಿರುವುದರಲ್ಲಿ ಸಮಸ್ಯೆ ಇಲ್ಲ ಅವರಿಗೆ. ಬಹಿರಂಗವಾಗಿ ಪಬ್ ಗಳಿಗೆ ಹೋಗಬಾರದು. ನಿಮ್ಮ ಮನೆಯಲ್ಲಿ ಕುಡಿಯಬಹುದು. ಹೀಗೆ ವಿಚಿತ್ರವಾಗಿರುವ ಸಾಂಸ್ಕೃತಿಕ ಸಮೀಕರಣಗಳನ್ನ ಅವರು ನಮ್ಮ ಸಮಾಜದಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಮುಂದಿಡುತ್ತಿದ್ದಾರೆ. ಡೆಮಾಕ್ರಸಿ ಕೂಡ ಅವರಿಗೆ ಪರವಾಗಿಲ್ಲ. ಆದರೆ ಏನಪ್ಪಾ ಅಂದರೆ ಮುಖ್ಯಮಂತ್ರಿಗಳು ಯಾವಾಗಲೂ ಕೋಮುವಾದವನ್ನು ಒಪ್ಪಿಕೊಳ್ಳುವ ಬಲಿಷ್ಠ ಹಿಂದುಳಿದ ಜಾತಿಯವರಾಗಿರಬೇಕು.
 
ಹೆಣ್ಣು ಮಕ್ಕಳು ಕುಡೀಬಹುದಂತೆ, ಆದರೆ ಪಬ್ಗೆ ಹೋಗಬಾರದಂತೆ. ನಾನು ಅವರ ಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿದಾಗ ಇನ್ನೂ ಒಂದು ಅವರು ರಿಯಾಯಿತಿಯನ್ನೂ ಹೇಳಿದರು. ಬೇಕಾದರೆ ಪಬ್ಬಿಗೆ ಹೋಗಿ ಕುಡೀಲಿ, ಆದರೆ ಅವರ ಅಫಿಶಿಯಲ್ ಗಂಡನ ಜೊತೆಗೆ ಅಥವಾ ಅಣ್ಣನ ಜೊತೆಗೆ ಹೋಗಿ ಕುಡಿಯಬಹುದು. ಯಾರ್ಯಾರೋ ಜೊತೆಗೆ ಹೋಗಿ ಅದು ಹೇಗೆ ಕುಡೀತಾರೆ? ಇದು ಬಹಳ ಸಮಸ್ಯಾತ್ಮಕ ಆಗಿರುವ ಸಾಂಸ್ಕೃತಿಕ ಡಿಸ್ಕೋಸರ್. ಒಬ್ಬ ವ್ಯಕ್ತಿಗೆ ಆಹಾರ, ಆಚಾರ, ವಿಚಾರ ಇವುಗಳ ಸ್ವಾತಂತ್ರ್ಯ ಸಂವಿಧಾನ ಕೊಟ್ಟಿದೆ. ಅದನ್ನು ಚಲಾಯಿಸಲಿಕ್ಕೂ ಈ ಬಗೆ0ು ನಿರ್ಬಂಧಗಳು. ಆದ್ದರಿಂದ ಸನಾತನವಾದವೂ ಈ ಆಧುನಿಕತೆಯೂ ವಿಚಿತ್ರ ರೀತಿಯಲ್ಲಿ ತಳುಕು ಹಾಕಿಕೊಂಡು ಮುನ್ನಡೆಯುತ್ತಿರುವಂತ ಬಹಳ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿವತ್ತು ಇದ್ದೇವೆ. 
ಮಹಿಳೆಯರನ್ನ ಅವರು ಒಂದು ರೀತಿಗೆ ಒಳಪಟ್ಟು ಬಿಡುಗಡೆ ಮಾಡೋಕೆ ರೆಡಿ ಇದ್ದಾರೆ. ಆದರೆ ಮಹಿಳೆ ಯಾವ ಬಗೆಯ ಸಾರ್ವಜನಿಕ ಕೆಲಸಗಳಲ್ಲಿ ನಿಯೋಜನೆಗೊಳ್ಳಬೇಕು ಅಂತ ಇವರ ನವಹಿಂದೂತ್ವ ಹೇಳುತ್ತದೋ ಅದಕ್ಕೇ ಅವರು ಸೀಮಿತಗೊಂಡಿರಬೇಕು. ಅವರನ್ನ ಪೂರ್ತಿಯಾಗಿ ಮೊದಲ ರೀತಿಯಲ್ಲಿ ಮನೆಗೆ ಮಾತ್ರ ಸೀಮಿತ ಎಂದು ಅವರು ಕರೆಯೋದಿಲ್ಲ. ಆದರೆ ಪಾಲನೆ ಪೋಷಣೆಗೆ ಸಂಬಂಧಪಟ್ಟ ಎರಡನೇ ದರ್ಜೆಯ ಪರಿಚಾರಕ ಕೆಲಸಗಳ ನಿರ್ವಹಣೆಯನ್ನೇ ಅವರು ಮಾಡಬೇಕು, ಅದು ಅವರ ಮುಖ್ಯವಾಗಿರುವಂತ ನಿಬಂಧನೆ. 
 
ಆದ್ದರಿಂದ ಇಲ್ಲಿ ಎರಡು ರೀತಿಯ ಹಂತಗಳಿವೆ ಅಂತ ಅನ್ನಿಸುತ್ತಿದೆ. ಈ ಆಳುವ ಸಂಸ್ಕೃತಿಯಲ್ಲಿ ಯಜಮಾನ ಸಂಸ್ಕೃತಿ ಕೊಡುತ್ತಿರುವಂತಹ ಮಾದರಿಗಳು, ಆ ಮಾದರಿಗಳನ್ನ ಅಳವಡಿಸಿಕೊಳ್ಳುವುದಕ್ಕೆ ನಮ್ಮ ನಿರ್ವಾಹಕ ಯಜಮಾನ ಸಂಸ್ಕೃತಿ ತನ್ನದೇ ಆಗಿರುವ ಸ್ಥಳೀಯ ಪ್ರಭೇದವನ್ನ ಸೃಷ್ಟಿ ಮಾಡಿಕೊಂಡು, ತನಗೆ ಬೇಕಾಗಿರುವಂತಹ ಕಂದಾಚಾರದ ಸಾಂಸ್ಕೃತಿಕ ಬಣ್ಣವನ್ನು ಹಚ್ಚುತ್ತಾ ಇರುವಂತಹ ಒಂದು ವಿಧಾನ. ಆಧುನಿಕವಾಗಿರುವ ಹಣ, ಬಂಡವಾಳ ಮತ್ತು ತಂತ್ರಜ್ಞಾನದ ಮೂಲಕವೇ ಮತ್ತೊಂದು ಸಲ ಜಾತಿ ತಾರತಮ್ಯ ಆಧರಿಸಿರುವ ಶ್ರಮ ವಿಭಜನೆಯನ್ನು ಈ ವಿಚಿತ್ರ ಸನ್ನಿವೇಶ ಉಂಟುಮಾಡಿದೆ. ಆಧುನಿಕವಾದ ಜಾಗತೀಕರಣ ಅನ್ನುವಂಥಾದ್ದು ಭಾರತದಲ್ಲಿ ಜಾತೀಕರಣವಾಗಿ ಮತ್ತೊಂದು ಸಲ ಬಹಳ ದೊಡ್ಡದಾಗಿ ಅಪ್ಪಳಿಸಿದೆ. ಅಮೆರಿಕಾದವರು ಪ್ರಪಂಚಕ್ಕೆ ಬ್ರಾಹ್ಮಣರು, ಬ್ರಾಹ್ಮಣರು ಭಾರತದ ಅಮೆರಿಕಾದವರು. ಆ ರೀತಿಯಾಗಿರುವ ಒಂದು ಸಂಯೋಜನೆಯಲ್ಲಿ ಕೆಲಸ ಮಾಡುತ್ತಾ ಇದ್ದಾರೆ.
 
(ಮುಂದುವರೆಯುವುದು)  
 
 
 
 
 
 
 
     
 
 
 
 
 
Copyright © 2011 Neemgrove Media
All Rights Reserved