ಡಾ.ಎನ್.ಜಗದೀಶ್ ಕೊಪ್ಪ
ಮನುಕುಲದ ಮಹಾಮಾರಿ ಏಡ್ಸ್ ರೋಗ ನಮ್ಮ ಮನೆಗೆ ಕಾಲಿಟ್ಟು ಜೂನ್ ೫ ೨೦೧೧ಕ್ಕೆ (ಎಚ್ ಐ ವಿ ಯ ಮೊದಲ ಕೇಸ್ ಅಮೆರಿಕಾದಲ್ಲಿ ಗುರುತಿಸಲ್ಪಟ್ಟಿದ್ದು ಜೂನ್ ೫, ೧೯೮೧) ಮೂವತ್ತು ವರ್ಷ ತುಂಬಿತು. ದೈಹಿಕ ಲೋಲುಪತೆ, ಸ್ವಚ್ಛಂದ ಕಾಮಕೇಳಿ ಮೂಲಕ ಬೀದಿಯಲ್ಲಿದ್ದ ಮಾರಿಯನ್ನು ಮನೆಗೆ ಕರೆತಂದು, ಇನ್ನಿಲ್ಲದ ಸಾವು-ನೋವು ಅನುಭವಿಸುತ್ತಾ ಬಂದ ಆಧುನಿಕ ಜಗತ್ತು, ಈ ಮಹಾಮಾರಿಯನ್ನು ಕೊನೆಗಾಣಿಸಲು ದಾರಿ ಕಾಣದೆ ಅಸಹಾಯಕತೆಯಿಂದ ಕೈ ಚೆಲ್ಲಿದೆ. ನಮ್ಮ ವಿಜ್ಞಾನದ ಎಲ್ಲಾ ಆವಿಷ್ಕಾರಗಳು, ಪ್ರಯೋಗಗಳು ಈ ಮಹಾಮಾರಿಯ ರೌದ್ರ ನರ್ತನದೆದುರು ನೆಲಕಚ್ಚಿ ಕುಳಿತಿವೆ.
ತಮ್ಮ ಕೊಳ್ಳುಬಾಕ ಸಂಸ್ಕೃತಿ ಹಾಗೂ ಮುಕ್ತ ಲೈಂಗಿಕ ಚಟುವಟಿಕೆಯ ಮೂಲಕ ಈ ಮಹಾಮಾರಿಯನ್ನು ಜಗತ್ತಿಗೆ ಹಂಚಿದ ಅಮೆರಿಕನ್ನರು ಏನೂ ಆಗದಂತೆ ತಣ್ಣಗೆ ಬದುಕಿದ್ದಾರೆ. ಆದರೆ ಏಡ್ಸ್ ಮಾರಿಯ ಕೆನ್ನಾಲಿಗೆಗೆ ತೃತೀಯ ಜಗತ್ತಿನ ಆಫ್ರಿಕಾ, ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳ ಅನಕ್ಷರಸ್ಥ ಬಡಜನತೆ ತರಗೆಲೆಗಳಂತೆ ಉರಿದು ಹೋಗುತ್ತಿದ್ದಾರೆ. ೧೯೮೦ರಲ್ಲಿ ಪ್ರಸಿದ್ಧ ಪ್ರವಾಸಿ ದ್ವೀಪ ಹೈಟಿಯಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಈ ರೋಗ ಲಕ್ಷಣಗಳನ್ನು ವಿಶ್ಲೇಷಿಸಿ, ೧೯೮೧ರ ಜೂನ್ ೫ ರಂದು ಅಮೆರಿಕಾದ ’ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆಂಟೇಷನ್" ಸಂಸ್ಥೆ ಇದಕ್ಕೆ ಏಡ್ಸ್ ಎಂದು ನಾಮಕರಣ ಮಾಡಿತು. ಮಾನವ ಶರೀರದ ರೋಗ ನಿರೋಧಕ ಶಕ್ತಿಯನ್ನು ಕುಂದಿಸಬಲ್ಲ ಈ ಮಾರಕ ಖಾಯಿಲೆಗೆ ಜಗತ್ತಿನಾದ್ಯಂತ ಈವರೆಗೆ ೩ ಕೋಟಿ ೩೨ ಲಕ್ಷ ಜನ ಬಲಿಯಾಗಿದ್ದಾರೆ. ಪ್ರತಿ ವರ್ಷ ೨೬ ಲಕ್ಷ ಮಂದಿ ಏಡ್ಸ್ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಸಾವನ್ನಪ್ಪಿದವರಲ್ಲಿ ಶೇ. ೭೬ ರಷ್ಟು ಅಮಾಯಕ ಮಕ್ಕಳೇ ಆಗಿರುವುದು ದುರದೃಷ್ಟಕರ ಸಂಗತಿ. ಮೂಲತಃ ಚಿಂಪಾಂಜಿ ಪ್ರಾಣಿಗಳಲ್ಲಿ ಕಾಣಿಸಿಕೊಂಡ ಈ ವೈರಸ್ ಮಾನವ ಶರೀರಕ್ಕೆ ಪ್ರವೇಶ ಪಡೆದದ್ದು ಇಂದಿಗೂ ಸೋಜಿಗವಾಗಿದೆ.
ರಕ್ತ, ವೀರ್ಯ, ಜೊಲ್ಲು, ಎದೆಹಾಲು ಇವುಗಳ ಮೂಲಕ ಶರೀರದಿಂದ ಶರೀರಕ್ಕೆ ದಾಟಬಲ್ಲ ಈ ವೈರಸ್‌ಗಳಿಗೆ ಮಾನವನ ದುಶ್ಚಟ ಹಾಗೂ ಸ್ವಚ್ಛಂದ ಕಾಮಕೇಳಿ ರಹದಾರಿಗಳಾದವು. ಮಾದಕ ವಸ್ತುಗಳನ್ನು ಸಿರಿಂಜ್‌ಗಳ ಮೂಲಕ ಚುಚ್ಚಿಕೊಳ್ಳುವ ಮಾದಕವ್ಯಸನಿಗಳಿಂದ, ವೇಶ್ಯೆಯರಿಂದ ಅಂಟಿಸಿಕೊಂಡ ರೋಗವನ್ನು ತಮ್ಮ ಪತ್ನಿಯರಿಗೆ ದಾಟಿಸಿದ ಪುರುಷರು, ತಮಗರಿವಿಲ್ಲದಂತೆ ಗಂಡನಿಂದ ಪಡೆದ ಈ ಬಳುವಳಿಯನ್ನು ಎದೆಹಾಲಿನ ಮೂಲಕ ತಮ್ಮ ಮಕ್ಕಳಿಗೆ ನೀಡಿದ ತಾಯಂದಿರು, ಹೀಗೆ ಸಾವಿನ ಸರಪಳಿಯ ಮಹಾಕೊಂಡಿಯೊಂದು ಅರಿವಿಗೆ ಬಾರದಂತೆ ಜಗತ್ತನ್ನು ಆವರಿಸಿಕೊಂಡಿತು.
೨೦ನೇ ಶತಮಾನದ ಮೂರು ಮರೆಯಲಾಗದ ಮಹತ್ವದ ಸಂಗತಿಗಳೆಂದರೆ, ಒಂದು ೧೯೩೦ರಲ್ಲಿ ಅಮೆರಿಕಾದಲ್ಲಿ ಕಾಣಿಸಿಕೊಂಡು ಜಗತ್ತಿನಾದ್ಯಂತ ಪರಣಾಮ ಬೀರಿದ ಆರ್ಥಿಕ ಹಿಂಜರಿತ. ಎರಡನೆಯದು ೧೯೪೪ – ೪೫ ರಲ್ಲಿ ನಡೆದ ಎರಡನೇ ಮಹಾಯುದ್ಧ, ಮೂರನೆಯದು ೧೯೮೧ ರಲ್ಲಿ ಕಾಣಿಸಿಕೊಂಡ ಸಾವಲ್ಲದೆ ಬೇರೆ ಪರ್ಯಾಯವಿಲ್ಲದ ಏಡ್ಸ್ ಎಂಬ ಮಹಾಮಾರಿ. ವಿಶ್ವ ಸಂಸ್ಥೆಯ ೨೦೦೯ರ ವರದಿಯ ಪ್ರಕಾರ ಆಫ್ರಿಕಾ ಖಂಡದ ೪೨ ರಾಷ್ಟ್ರಗಳಲ್ಲಿ ೬ ಕೋಟಿಗೂ ಅಧಿಕ ಮಂದಿ ಏಡ್ಸ್ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅಲ್ಲಿನ ಸಂಸ್ಕೃತಿ, ಬಹು ಪತ್ನಿತ್ವ ಪದ್ಧತಿ, ಅರಣ್ಯಗಳ ನಡುವೆ ಇಂದಿಗೂ ಬದುಕುತ್ತಿರುವ ಬುಡಕಟ್ಟು ಜನರ ಮುಕ್ತ ಲೈಂಗಿಕ ಚಟುವಟಿಕೆ, ಏಡ್ಸ್ ಖಾಯಿಲೆ ಕಾಡ್ಗಿಚ್ಚಿನಂತೆ ಹರಡಲು ಕಾರಣವಾಗಿದೆ.
ಜಗತ್ತಿನಾದ್ಯಂತ ಹಲವಾರು ಜೀವ ವಿಜ್ಞಾನಿಗಳು, ವಿಶ್ವ ಪ್ರಸಿದ್ಧ ಪ್ರಯೋಗಾಲಯಗಳು ಏಡ್ಸ್ ನಿಯಂತ್ರಣಕ್ಕೆ ಮದ್ದು ಕಂಡು ಹಿಡಿಯಲು ನಿರಂತರ ಪ್ರಯತ್ನ ನಡೆಸಿದರೂ, ಸಿಕ್ಕಿದ್ದು ಮಾತ್ರ ಅಲ್ಪ ಯಶಸ್ಸು. ರೋಗ ಕಾಣಿಸಿಕೊಂಡ ಪ್ರಾರಂಭಿಕ ಹಂತದಲ್ಲಿ ಎಚ್.ಐ.ವಿ. ವೈರಸ್ಸು ದೇಹದ ಇತರೆ ಭಾಗಗಳಿಗೆ ಕ್ಷಿಪ್ರಗತಿಯಲ್ಲಿ ಹರಡಂತೆ ತಡೆಗಟ್ಟುವಲ್ಲಿ ಕೆಲವು ಔಷಧಗಳು ಬಳಕೆಯಾಗುತ್ತಿದ್ದು, ರೋಗಿಯ ಸಾವನ್ನು ಸ್ವಲ್ಪ ದಿನ ಮುಂದೂಡಬಹುದಾಗಿದೆ. ಈ ಔಷಧಗಳು ಅತ್ಯಂತ ದುಬಾರಿಯಾಗಿದ್ದು, ಇವುಗಳ ತಯಾರಿಕೆಯ ಮೂಲಕ ಶ್ರೀಮಂತ ರಾಷ್ಟ್ರಗಳ ಬಹುರಾಷ್ಟ್ರೀಯ ಕಂಪನಿಗಳು ಲಾಭ ಗಳಿಕೆಯಲ್ಲಿ ಪೈಪೋಟಿಗೆ ಇಳಿದಿವೆ.
ಅದೃಷ್ಟವಶಾತ್ ವಿಶ್ವ ವ್ಯಾಪಾರ ಸಂಘಟನೆಯಲ್ಲಿ ವ್ಯಾಪಾರ ಪೇಟೆಂಟ್ ಒಪ್ಪಂದ ಕುರಿತಂತೆ ಒಂದು ಹೊಸ ನಿಯಮಾವಳಿಯನ್ನು ರೂಪಿಸಿದ್ದು, ಯಾವುದೇ ರಾಷ್ಟ್ರ ತುರ್ತು ಪರಿಸ್ಥಿತಿಯಲ್ಲಿ ತನಗೆ ಅಗತ್ಯವಿರುವ ಔಷಧವನ್ನು ತಯಾರಿಸಿಕೊಳ್ಳಬಹುದು. ಇದಕ್ಕೆ ಪೇಟೆಂಟ್ ನಿಯಮದ ಕಡಿವಾಣವಿರುವುದಿಲ್ಲ ಎಂದು ಘೋಷಿಸಿದೆ. ಜೊತೆಗೆ ಅಗತ್ಯ ಔಷಧಗಳ ತಯಾರಿಕೆಗೆ ಬೇಕಾದ ಮೂಲಭೂತ ಸೌಕರ್ಯಗಳ ಕೊರತೆಯಿದ್ದರೆ, ಇತರೆ ದೇಶಗಳಿಂದ ಈ ಔಷಧಿಗಳನ್ನು ಆಮದು ಮಾಡಿಕೊಳ್ಳಬಹುದು. ೨೦೦೪ರಲ್ಲಿ ಜಾರಿಗೆ ಬಂದ ಈ ನಿಯಮಾವಳಿಯ ಪರಿಣಾಮ ಭಾರತ ಮತ್ತು ಬ್ರೆಜಿಲ್ ಇದೀಗ ಏಡ್ಸ್ ಖಾಯಿಲೆಗೆ ಅಗ್ಗದ ಔಷಧವನ್ನು ಉತ್ಪಾದಿಸಿ ರಫ್ತು ಮಾಡುವುದರ ಮೂಲಕ ಆಫ್ರಿಕನ್ ರಾಷ್ಟ್ರಗಳ ಪಾಲಿಗೆ ಆಪದ್ಭಾಂದವ ರಾಷ್ಟ್ರಗಳಾಗಿವೆ.
ಮನುಷ್ಯನೊಬ್ಬ ಅರಿತೊ ಅರಿಯದೆಯೋ ತನ್ನ ಸಂಯಮ ಮೀರಿ ಮಾಡಿಕೊಂಡ ಈ ಅವಘಡಕ್ಕೆ ಪ್ರತಿಯಾಗಿ ಪಡೆದ ರೋಗದಿಂದ ಬಳಲುವ ಸ್ಥಿತಿ, ಜಗತ್ತಿನಲ್ಲಿ ಯಾವ ಜೀವಿಗೂ ಬರಬಾರದು ಎನಿಸುತ್ತದೆ.
ಮಾನವ ಶರೀರವನ್ನು ಪ್ರವೇಶಿಸಿದ ಈ ವೈರಸ್‌ಗಳು ದೇಹದ ರೋಗ ನಿರೋಧಕ ಶಕ್ತಿಯ ಜಾಲವನ್ನೇ ಕಡಿದುಹಾಕಿ, ಎಲ್ಲಾ ರೋಗಗಳ ವಿರುದ್ಧ ಹೋರಾಡುವ ಬಿಳಿ ರಕ್ತಕಣಗಳ ಬಲವನ್ನು ಕುಂದಿಸಿ, ಇಡೀ ದೇಹವನ್ನು ಆವರಿಸಿದಾಗ, ಸದಾ ಕಾಡುವ ಜ್ವರ, ನಿಲ್ಲದ ಬೇಧಿ, ನಿರಂತರ ಕೆಮ್ಮು ಇವುಗಳಿಂದ ವ್ಯಕ್ತಿಯ ದೇಹದ ತೂಕ ಕಡಿಮೆಯಾಗಿ ಕೃಶವಾಗುತ್ತಾ ಹೋಗುತ್ತಾನೆ. ಹೀಗೆ ಏಡ್ಸ್ ಪೀಡಿತ ರೋಗಿ ಸರ್ವ ರೋಗಗಳ ತೊಟ್ಟಿಲಂತಾಗಿ ಸಾವೊಂದೇ ಇದಕ್ಕೆಲ್ಲಾ ಪರಿಹಾರ ಎನ್ನುವ ಹೀನಾಯ ಸ್ಥಿತಿ ತಲುಪುತ್ತಾನೆ.
ಇನ್ನು ಭಾರತದಲ್ಲಿ ಏಡ್ಸ್‌ನ ಸ್ಥಿತಿ-ಗತಿ ಅವಲೋಕಿಸಿದರೆ, ಅನಕ್ಷರಸ್ಥರ, ಬಡವರ ನಾಡಾದ ಈ ನೆಲ ಕೂಡ ಏಡ್ಸ್ ಮಾರಿಯ ಕಬಂಧ ಬಾಹುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಜಗತ್ತಿನ ದಟ್ಟ ಜನಸಂಖ್ಯೆಯ ರಾಷ್ಟ್ರಗಳಲ್ಲಿ ಒಂದಾದ ಭಾರತದ ಪರಿಸ್ಥಿತಿ ಆಫ್ರಿಕಾದಷ್ಟು ಆತಂಕಕಾರಿಯಾಗಿಲ್ಲ. ೧೯೮೧ರಲ್ಲಿ ಕಾಣಿಸಿಕೊಂಡ ಏಡ್ಸ್ ಮಹಾಮಾರಿ ೧೯೮೬ರ ಜನವರಿ ವೇಳೆಗೆ ಜಗತ್ತಿನಾದ್ಯಂತ ೨೦ ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿತ್ತು. ಆದರೆ ಭಾರತದಲ್ಲಿ ಒಂದು ಪ್ರಕರಣವೂ ಪತ್ತೆಯಾಗಿರಲಿಲ್ಲ. ಅದೇ ೮೬ರ ಜುಲೈನಲ್ಲಿ ಚನ್ನೈ ನಗರದ ವೇಶ್ಯೆಯೊಬ್ಬಳಲ್ಲಿ ಪ್ರಪ್ರಥಮವಾಗಿ ಏಡ್ಸ್ ಪತ್ತೆಯಾಯಿತು. ೧೯೮೭ರ ಅಂತ್ಯದ ವೇಳೆಗೆ ೫೬ ಸಾವಿರ ಸಂಶಯಾಸ್ಪದ ವ್ಯಕ್ತಿಗಳ ರಕ್ತವನ್ನು ತಪಾಸಣೆಗೆ ಒಳಪಡಿಸಿದಾಗ ಇವರಲ್ಲಿ ೧೩೫ ಮಂದಿಗೆ ಎಚ್.ಐ.ವಿ. ಲಕ್ಷಣ ಹಾಗೂ ೧೪ ಮಂದಿಗೆ ಏಡ್ಸ್ ಸಂಪೂರ್ಣ ಆವರಿಸಿಕೊಂಡಿತ್ತು.
ಸೋಜಿಗದ ಸಂಗತಿ ಎಂದರೆ ಇಂದಿಗೂ ಕೂಡ ಏಡ್ಸ್ ರೋಗ ಅತ್ಯಂತ ವೇಗವಾಗಿ ಹರಡುತ್ತಿರುವುದು ದಕ್ಷಿಣ ಭಾರತದಲ್ಲಿ. ಅತ್ಯಂತ ಅಪಾಯಕಾರಿ ರಾಜ್ಯಗಳೆಂದು ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಕೇರಳ ರಾಜ್ಯಗಳನ್ನು ಗುರುತಿಸಲಾಗಿದೆ. ಉತ್ತರ ಭಾರತದ ಯಾವ ರಾಜ್ಯಗಳೂ ಆತಂಕದ ಸ್ಥಿತಿಯಲ್ಲಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಮಣಿಪುರ ಕ್ಷಿಪ್ರವಾಗಿ ಏಡ್ಸ್ ಹರಡುತ್ತಿರುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ. ಉತ್ತರದ ಗುಜರಾತ್, ರಾಜಸ್ಥಾನ, ಹರಿಯಾಣ, ಪಂಜಾಬ್, ಉತ್ತರಪ್ರದೇಶ ಮುಂತಾದ ರಾಜ್ಯಗಳಲ್ಲಿ ಜಾರಿಯಲ್ಲಿರುವ ಅತ್ಯಂತ ಕಠಿಣವಾದ ಸಾಮಾಜಿಕ ಕಟ್ಟು ಪಾಡುಗಳು ಏಡ್ಸ್ ನಿಯಂತ್ರಣಕ್ಕೆ ಪರೋಕ್ಷವಾಗಿ ನೆರವಾಗಿವೆ.
ಭಾರತದ ಲಾರಿ ಚಾಲಕರು ಹೆಚ್ಚು ಪ್ರಮಾಣದಲ್ಲಿ ಈ ಖಾಯಿಲೆಗೆ ತುತ್ತಾಗಿದ್ದು ಇವರನ್ನು ಏಡ್ಸ್ ಖಾಯಿಲೆಯ ವಾಹಕರೆಂದೇ ಗುರುತಿಸಲಾಗಿದೆ. ಭಾರತದಂತಹ ಬಹುಮುಖಿ ಸಮಾಜದಲ್ಲಿ ಏಡ್ಸ್ ತಗುಲದಂತೆ ಮುನ್ನೆಚ್ಚರಿಕೆ ವಹಿಸಲು ಕಾಂಡೋಮ್ ಬಳಕೆಗೆ ಪುರುಷರು ಹಾಗೂ ವೃತ್ತಿನಿರತ ವೇಶ್ಯೆಯರನ್ನು ಮನವೊಲಿಸಲು ಸರಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ದಶಕದುದ್ದಕ್ಕೂ ಶ್ರಮಪಟ್ಟಿವೆ. ಈಗ ನಿಧಾನವಾಗಿ ಏಡ್ಸ್ ಭೀಕರತೆ ಅರಿವಾಗತೊಡಗಿದಂತೆ ಜನಸಾಮಾನ್ಯರಲ್ಲೂ ಎಚ್ಚರದ ಪ್ರಜ್ಞೆ ಮೂಡಿರುವುದು ಸಮಾಧನಕರ ಸಂಗತಿ. ೨೦೦೧ರಲ್ಲಿ ಭಾರತದಲ್ಲಿ ಏಡ್ಸ್ ರೋಗಿಗಳ ಸಂಖ್ಯೆ ೫೬ ಲಕ್ಷ ಇದ್ದದ್ದು ೨೦೦೭ರ ಅಂತ್ಯಕ್ಕೆ ೩೧ ಲಕ್ಷಕ್ಕೆ ಇಳಿದು ೨೦೦೮ ರವೇಳೆಗೆ ೨೩ಲಕ್ಷದ ೧ ಸಾವಿರಕ್ಕೆ ತಲುಪಿತ್ತು. ೨೦೦೯ರ ಸಂಮೀಕ್ಷೆಯಲ್ಲಿ ಈ ಸಂಖ್ಯೆ ೨೪ ಲಕ್ಷಕ್ಕೆ ತಲುಪಿದೆ.
ಇದೇ ಜೂನ್ ೮ರಂದು ವಿಶ್ವ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ರವರ ನೇತೃತ್ವದಲ್ಲಿ ನಡೆದ ಏಡ್ಸ್ ಪೀಡಿತ ೩೦ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯಲ್ಲಿ ಏಡ್ಸ್ ನಿಯಂತ್ರಣ ಕುರಿತಂತೆ ಪರಾಮರ್ಶೆ ನಡೆಯಿತು. ಇತ್ತೀಚಿನ ವರ್ಷಗಳಲ್ಲಿ ಏಡ್ಸ್ ರೋಗದ ನಿರ್ಮೂಲನೆಗಾಗಿ ಜಾಗತಿಕವಾಗಿ ಹರಿದು ಬರುತ್ತಿದ್ದ ದೇಣಿಗೆ ಕುಂಠಿತವಾಗಿರುವುದನ್ನು ಸಭೆ ಗಂಭೀರವಾಗಿ ಪರಿಗಣಿಸಿತು.(ದೇಣಿಗೆ ನೀಡುತ್ತಿರುವ ಪ್ರಮುಖರಲ್ಲಿ ಮೈಕ್ರೊಸಾಫ್ಟ್ ಸಂಸ್ಥೆಯ ಬಿಲ್‌ಗೇಟ್ಸ್ ಹಾಗೂ ಪ್ರಸಿದ್ಧ ಹೂಡಿಕೆದಾರ ವಾರನ್ ಬಫೆಟ್ ಮುಂಚೂಣಿಯಲ್ಲಿದ್ದಾರೆ.) ಏಡ್ಸ್ ನಿಯಂತ್ರಣ ಕುರಿತಂತೆ ತಮ್ಮ ಕಾರ್ಯ ತಂತ್ರವಸಸನ್ನು ಬದಲಿಸಿಕೊಳ್ಳಲು ನಿರ್ಧರಿಸಿರುವ ರಾಷ್ಟ್ರಗಳು ಇನ್ನು ಮುಂದೆ ಏಡ್ಸ್ ನಿರ್ಮೂಲನೆಗಿಂತ ರೋಗ ಬಾರದಂತೆ ತೆಗೆದು ಕೊಳ್ಳಬಹುದಾದ ಮುನ್ನೆಚರಿಕೆಯ ಕ್ರಮಗಳಿಗೆ ಒತ್ತು ನೀಡಲು ನಿರ್ಧರಿಸಿವೆ. ಈ ಕಾರ್ಯಕ್ರಮಕ್ಕಾಗಿ ವಿಶ್ವಸಂಸ್ಥೆಯು ತನ್ನ ನಿಧಿಯಿಂದ ೨೨ ಶತಕೋಟಿ ಡಾಲರ್ ಹಣವನ್ನು ೨೦೧೫ರವರೆಗೆ ವಿನಿಯೋಗಿಸಲು ನಿರ್ಧರಿಸಿದೆ.