ಅಂಗಳ      ಧರೆ ಹತ್ತಿ ಉರಿದೊಡೆ
Print this pageAdd to Favorite
 
 
 
  

ಬಿಪಿ ಈ ಸಾವುಗಳು ಕಾಕತಾಳೀಯವೇ ಅಥವಾ ಕೈವಾಡವೇ?

ಬಿಪಿಯ ತೈಲ ಸೊರಿಕೆ ಬಗ್ಗೆ ನಾವು ಹಲವಾರು ಸಂಚಿಕೆಗಳಲ್ಲಿ ವಿವರವಾಗಿ ಬರೆದಿದ್ದೆವು. ತೈಲ ಸೋರಿಕೆಯಿಂದ ಗಲ್ಫ್ ಆಫ್ ಮೆಕ್ಸಿಕೋ ಮತ್ತು ಅಲ್ಲಿನ ತೀರದ ಜಲ-ವಾಯು-ಭೂ ಪ್ರದೇಶದಲ್ಲಿ ಉಂಟಾದ ವಿಷದಿಂದ ಅಪಾರ ಜಲಚರಗಳ ಸಾವು, ಮೀನುಗಾರರ ಕುಟುಂಬಗಳು ಮನೆ-ಮಠ-ಕೆಲಸ ಕಳೆದುಕೊಂಡದ್ದು, ಆತ್ಮಹತ್ಯೆ ಮಾಡಿಕೊಂಡದ್ದು, ಜನ ಅದೇ ವಿಷಮಯ ಗಾಳಿಯನ್ನು ಉಸಿರಾಡಿಕೊಂಡೇ ಸಂಘಟಿತರಾಗಿ ಬಿಪಿಯ ವಿರುದ್ಧ ಹೋರಾಡಿದ್ದು ಇದೆಲ್ಲವನ್ನೂ ನಿಮ್ಮೊಡನೆ ಹಂಚಿಕೊಂಡಿದ್ದೆವು.
 
ಈ ಅಕ್ಷಮ್ಯ ಅಪಾರ ತೈಲ ಸೋರಿಕೆಯ ಭಯಂಕರ ಪರಿಣಾಮಗಳ ಕುರಿತು ಸುದ್ದಿ ಮಾಧ್ಯಮಗಳಲ್ಲಿ ಸದ್ದು ಕಡಿಮೆಯಾಯಿತು. ಅಷ್ಟಕ್ಕೆ ಸಮಸ್ಯೆ ಮುಗಿಯುತ್ತದೆಯೇ?
ತೈಲ ಸೋರಿಕೆಯ ವಿರುದ್ಧವಾಗಿ ಬಹಿರಂಗವಾಗಿ ಮಾತನಾಡಿದ, ಮಾತನಾಡುತ್ತಿದ್ದ ಹಲವಾರು ಜಲಚರ ವಿಜ್ನಾನಿಗಳು, ಪರಿಸರ ವಿಜ್ನಾನಿಗಳು, ಬಿಪಿಯಲ್ಲಿ ಕೆಲಸ ಮಾಡಿ ಅದರ ವಿರುದ್ಧ ಮಾತನಾಡುವ ಧೈರ್ಯ ತೋರಿದ್ದ ಸುದ್ದಿ ಮೂಲಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿರುವುದು, ಕಳೆದುಹೋಗುತ್ತಿರುವುದು ಅಥವಾ ಕೊಲೆಯಾಗುತ್ತಿರುವುದನ್ನು ಯುವ ಪರಿಸರವಾದಿಗಳ ಗುಂಪೊಂದು ಅಭ್ಯಸಿಸಿ ವರದಿ ಮಾಡಿದೆ. ಬಂಡವಾಳಶಾಹಿ ಭಾರೀ ಕಾರ್ಪೋರೇಶನ್ ಗಳ ಸರ್ವವ್ಯಾಪಿ ಹಣ ಮುಕ್ಕುವ ರಾಕ್ಷಸ ಪರಿಯ ಮುಂದೆ ಜನ, ಜನಾಸಕ್ತಿ, ಪರಿಸರ, ಭೂಮಿ, ಪ್ರೀತಿ, ಅನುಕಂಪ, ಸತ್ಯ ಇವುಗಳೆಲ್ಲವೂ ಟಾಯ್ಲೆಟ್ ಪೇಪರಿಗೆ ಸಮ ಎನ್ನುವುದು ಪರಮ ಸತ್ಯ.
ಬಿಪಿಯ ತೈಲ ಸೋರಿಕೆಯ ಭೀಕರ ಪರಿಣಾಮಗಳ ಕುರಿತು ಮಾತನಾಡಲು ಹಲವು ’ಹೈಪ್ರೊಫೈಲ್’ ಜನ ತಯಾರಿದ್ದರು. ಇವರಲ್ಲಿ ಹೆಚ್ಚಿನವರು ಬಹಿರಂಗವಾಗಿ ಬಿಪಿಯನ್ನು ಸಮೂಹ ಮಾಧ್ಯಮಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಇನ್ನಷ್ಟು ಜನ ಮೌನವಾಗಿ ತೈಲಸೋರಿಕೆಯಿಂದ ಸಮುದ್ರದ ಆಳದಲ್ಲಿ, ಭೂಮಿಗೆ, ಜೀವಿಗಳಿಗೆ ಆಗಿರುವ ರಿಪೇರಿ ಮಾಡಲಾಗದ ತೊಂದರೆಗಳ ಕುರಿತು ತಮ್ಮ ಸಂಶೋಧನೆಯನ್ನು ಮುಂದುವರೆಸುತ್ತಿದ್ದರು. ಅವರಲ್ಲಿ ಈಗ ಕೆಲವು ಜನ ಅನುಮಾನಾಸ್ಪದ ರೀತಿಯಲ್ಲಿ ಸತ್ತಿದ್ದಾರೆ ಎಂದು ಗಲ್ಫ್ ಆಫ್ ಮೆಕ್ಸಿಕೋನ ಸ್ವಾತಂತ್ರ ಮಾಧ್ಯಮಗಳು ವರದಿ ಮಾಡುತ್ತಿವೆ. ಒಬ್ಬ ವ್ಯಕ್ತಿ ತನ್ನ ಮೇಲಾದ ಅನಾಮತ್ ಗುಂಡು ಧಾಳಿಯಿಂದ ತಪ್ಪಿಸಿಕೊಂಡು ಹುಶಾರಾಗುತ್ತಿದ್ದಾರೆ. ಒಬ್ಬಾತ ಮಾಡದ ಅಪರಾಧದ ಆಧಾರದ ಮೇಲೆ ಜೈಲಿಗೆ ಕಳಿಸಲ್ಪಟ್ಟಿದ್ದಾರೆ, ಮತ್ತೊಬ್ಬರು ’ಕಾಣೆಯಾಗಿದ್ದಾರೆ’ ಎನ್ನಲಾಗಿದೆ.
 
healthfreedoms.org ಬಿಪಿ ಕೇಸಿನ ಹೈಪ್ರೊಫೈಲ್ ಜನರ ಸಾವಿನ ಪಟ್ಟಿಯೊಂದನ್ನು ಪ್ರಕಟಿಸಿದೆ. ಅದು ಆಯಾಮದ ಓದುಗರಿಗಾಗಿ...
ಟಕರ್ ಮೆಂಡೋಜಾ ಗಲ್ಫ್ ಆಫ್ ಮೆಕ್ಸಿಕೋನಲ್ಲಿ ಬಿಪಿ ವಿರುದ್ಧದ ಸತ್ಯ ಶೋಧನಾ ಹೋರಾಟದಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದರು. ಮೊನ್ನೆ ಏಪ್ರಿಲ್ ೨, ೨೦೧೧ ರಂದು ಅವರ ಮನೆಯ ಮುಂಬಾಗಿಲಿನಿಂದ ಗುಂಡಿನ ಮಳೆ ಸುರಿಯಿತು. ಆತ ಮತ್ತು ಅವರ ಸಂಬಧಿಯೊಬ್ಬರು ತೀವ್ರವಾಗಿ ಗಾಯಗೊಂಡರು. ಜನಪ್ರಿಯರಾಗಿರುವ ಈತ ಈಗ ಚೇತರಿಸಿಕೊಂಡಿರುವ ಆತ ತನ್ನ ವಿರುದ್ಧ ಧಾಳಿ ಮಾಡಲು ಬಿಪಿಗಷ್ಟೇ ಕಾರಣವಿದೆ ಎನ್ನುತ್ತಾರೆ.
 

 
ಲೂಯಿಸಿಯಾನ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದ ೫೪ ವರ್ಷದ ವಿಜ್ನಾನಿ ಗ್ರೆಗರಿ ಸ್ಟೋನ್ ಬಿಪಿಯ ವಿರುದ್ಧ , ತೈಲ ಸೋರಿಕೆಯಿಂದ ಲೂಯಿಸಿಯಾನಾದ ತೀರ ಪ್ರದೇಶಕ್ಕೆ ಆಗಿರುವ ಹಾನಿಯ ಬಗ್ಗೆ ವೈಜ್ನಾನಿಕ ಸಾಕ್ಷಿ ಸಂಗ್ರಹಿಸುತ್ತಿದ್ದರು ಮತ್ತು ಮಾಧ್ಯಮಗಳಲ್ಲಿ ಮಾತನಾಡುತ್ತಿದ್ದರು. ಯಾವ ಖಾಯಿಲೆಯೂ ಇರದೆ ಆರೋಗ್ಯವಾಗಿದ್ದ ಸ್ಟೋನ್ ಫೆಬ್ರವರಿ ೧೭ ೨೦೧೧ ರಂದು ಅನುಮಾನಾಸ್ಪದವಾಗಿ ನಿಧನರಾದರು.
 
ಆಂಟನಿ ನಿಕೊಲಸ್ ಟ್ರೆಮೊಂಟ್ ಮಿಸ್ಸಿಸ್ಸಿಪ್ಪಿ ರಾಜ್ಯದ ಸಮುದ್ರ ಸಂಪನ್ಮೂಲ ವಿಭಾಗದ ಅಧಿಕಾರಿ. ಇವರಿಗೆ ೩೧ ವರ್ಷ. ಬಿಪಿಯ ಖರೀದಿಗೆ ಸಿಗಲೊಲ್ಲದ ಇವರನ್ನು ಸುಳ್ಳು ಆಪಾದನೆ ಹೊರಿಸಿ ಜನವರಿ ೨೬ ೨೦೧೧ ರಂದು ಬಂಧಿಸಲಾಯಿತು.
 

 
ಡಾಕ್ಟರ್ ಥಾಮಸ್ ಬಿ ಮ್ಯಾಂಟನ್ ಅಂತರ್ರಾಷ್ಟ್ರ‍ೀಯ ತೈಲ ಸೋರಿಕೆ ತಡೆ ಕಾರ್ಪೋರೇಷನ್ ನ ಮಾಜಿ ಅಧ್ಯಕ್ಷ ಮತ್ತು ಸಿಎಒ ಆಗಿದ್ದರು. ಇವರನ್ನು ಕ್ಷುಲ್ಲಕ ಕಾರಣಕ್ಕೆ ಬಂಧಿಸಿ ಜೈಲಿಗೆ ಹಾಕಲಾಯಿತು. ಈತ ಜೈಲಿನಲ್ಲಿಯೇ ಜನವರಿ ೧೯ ೨೦೧೧ ರಂದು ಕೊಲೆಯಾದರು.
 

 
ಜೇಮ್ಸ್ ಪ್ಯಾಟ್ರಿಕ್ ಬ್ಲ್ಯಾಕ್ ಬಿಪಿಯ ಗಲ್ಫ್ ಆಫ್ ಮೆಕ್ಸಿಕೋ ತೈಲ ಸೋರಿಕೆ ಕ್ಲೀನ್ ಅಪ್ ಕಾರ್ಯಾಚರಣೆಯಲ್ಲಿ ಕಮಾಂಡರ್ ಆಗಿದ್ದರು. ಬಹಳ ಹತ್ತಿರದಿಂದ ಗಲ್ಫ್ ಆಫ್ ಮೆಕ್ಸಿಕೋನಲ್ಲಾದ ಅನಾಹುತವನ್ನು ಕಂಡಿದ್ದರು, ದಾಖಲಿಸುತ್ತಿದ್ದರು. ಇವರು ನವೆಂಬರ್ ೨೩ ೨೦೧೦ರಂದು ಸಣ್ಣ, ಖಾಸಗಿ ವಿಮಾನವೊಂದರ ಅಪಘಾತದಲ್ಲಿ ನಿಧನರಾದರು.
 
 

 
ಡಾಕ್ಟರ್ ಜೆಫ್ರಿ ಗಾರ್ಡ್ನರ್ ಹಂಸ-ಕೊಕ್ಕರೆಗಳನ್ನು ಅಭ್ಯಸಿಸುವ ವಿಜ್ನಾನಿಯಾಗಿದ್ದರು. ಗಲ್ಫ್ ಆಫ್ ಮೆಕ್ಸಿಕೋ ತೀರದಲ್ಲಿ ಸಾಯುತ್ತಿದ್ದ ಕೊಕ್ಕರೆಗಳ ಸಾವಿನ ಕಾರಣವನ್ನು ಅಭ್ಯಸಿಸುತ್ತಿದ್ದರು. ಗಲ್ಫ್ ಆಫ್ ಮೆಕ್ಸಿಕೋ ನಿಂದ ಒಳನಾಡಿಗೆ ಹರಿಯುವ ನೀರು, ಸರೋವರ ಪ್ರದೇಶಗಳ ಹಂಸಗಳು ಇತರೆ ಪಕ್ಷಿಗಳು ಸಾಯುತ್ತಿದ್ದುದನ್ನು ದಾಖಲಿಸುತ್ತಿದ್ದರು. ಈತ ನವೆಂಬರ್ ೨೦೧೧ ರಿಂದ ’ಕಾಣೆಯಾಗಿದ್ದಾರೆ’.
ಗಲ್ಫ್ ತೀರದ ತೈಲ ಸೋರಿಕೆ ದುರಂತಕ್ಕೆ ಒಳಗಾದವರಿಗೆ ತಮ್ಮ ಬೆಂಬಲ ಸೂಚಿಸಿ ೬೬ ವರ್ಷದ ರೋಜರ್ ಗ್ರೂಟರ್ಸ್ ಕ್ಯಾಲಿಫೋರ್ನಿಯಾ ದಿಂದ ಸೆಪ್ಟೆಂಬರ್ ೧೦ ೨೦೧೦ ರಂದು ಗಲ್ಫ್ ತೀರದವರೆಗೂ (ಅಮೆರಿಕಾದ ಒಂದು ತೀರದಿಂದ ಇನ್ನೊಂದು ತೀರಕ್ಕೆ, ಸುಮಾರು ೩,೨೦೦ ಮೈಲಿ ದೂರದ) ಸೈಕಲ್ ಸವಾರಿ ಹಮ್ಮಿಕೊಂಡಿದ್ದರು. ಅವರ ಸೈಕಲ್ ಸವಾರಿಗೆ ಭಾರೀ ಜನಬೆಂಬಲ ದೊರೆತಿತ್ತು. ಸೈಕಲ್ ಸವಾರಿ ಸಂದರ್ಭದಲ್ಲಿ ದೇಣಿಗೆಯಾಗಿ ಬರುವ ಹಣವನ್ನು ಗಲ್ಫ್ ತೀರದಲ್ಲಿ ಕೆಲಸ-ಆರೋಗ್ಯ ಕಳೆದುಕೊಂಡಿರುವ ಜನರ ಸಹಾಯಾರ್ಥವಾಗಿ ಖರ್ಚು ಮಾಡುವ ಉದ್ದೇಶ ಇವರದ್ದು. ಸವಾರಿಯ ಅಂತಿಮ ಘಟ್ಟವನ್ನು ಮುಗಿಸುವ ವೇಳೆಯಲ್ಲಿ ಟ್ರಕ್ ಒಂದರಿಂದ ಗುದ್ದಲ್ಪಟ್ಟು ಮೃತಪಟ್ಟರು.

 
 
ಮ್ಯಾಥ್ಯೂ ಸಿಮನ್ಸ್ , ಬಿಪಿಯಲ್ಲಿದ್ದು ಡೀಪ್ ಹೊರೈಜ಼ನ್ ತೈಲ ಭಾವಿ ವ್ಯವಹಾರದ ಬಗ್ಗೆ, ಸೋರಿಕೆಯ ಬಗ್ಗೆ ಮಾತನಾಡಲು ತಯಾರಾಗಿದ್ದ ಏಕೈಕ ವ್ಯಕ್ತಿಯಾಗಿದ್ದರು. ಈತ ಆಗಸ್ಟ್ ೧೩ ೨೦೧೦ ರಂದು ತಮ್ಮ ಮನೆಯ ಸ್ನಾನದ ತೊಟ್ಟಿಯಲ್ಲಿ ಮುಳುಗಿ ಸಾವಿಗೀಡಾಗಿದ್ದರು. ೪೬ ವರ್ಷದ ಪ್ರತಿಭಾವಂತ ವಿಜ್ನಾನಿ ಜೋಸೆಫ್ ಮಾರಿಸ್ಸೇ ಅವರನ್ನು ಮನೆಗೆ ನುಗ್ಗಿ ಕೊಲೆ ಮಾಡಲಾಯಿತು. ಅವರ ಸಾವನ್ನು ದರೋಡೆ ಸಂಬಂಧಪಟ್ಟ ಸಾವೆಂದು ಘೋಷಿಸಲಾಯಿತು ಎನ್ನಲಾಗಿದೆ.
ಇದು ಸಮಾಜದ ಕಣ್ಣಿಗೆ ಎದ್ದು ಕಾಣುವ ’ಹೈಪ್ರೊಫೈಲ್’ ಜನಗಳ ಕೇಸು. ಬಿಪಿಯಿಂದಾಗಿರುವ ಅನಾಹುತದಿಂದ ದಿನನಿತ್ಯ ನರಳುತ್ತಿರುವ ಜನರನ್ನು, ಅವರ ಬದುಕನ್ನು, ಬಾಯಿಬಿಟ್ಟು ಸತ್ಯ ಹೇಳಿದ ಬಡಪಾಯಿ ’ಹೈಪ್ರೊಫೈಲ್’ ಅಲ್ಲದವರ ಕಥೆ?!
 
 

ಅಮೆರಿಕಾದ ಕೋಳಿಗಳಲ್ಲಿ ಆರ್ಸೆನಿಕ್! ತಪ್ಪೊಪ್ಪಿದ ಎಫ್. ಡಿ. ಎ.

ಎಫ್ ಡಿ. ಎ ಅಥವಾ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರ‍ೇಷನ್ ಆಫ್ ಅಮೆರಿಕಾ ಒಂದು ರೀತಿಯಲ್ಲಿ ಸರ್ಕಾರದ್ದೆನಿಸಿಕೊಂಡರೂ ಸರ್ಕಾರದ್ದಾಗುಳಿಯದ, ಸ್ವಾಯತ್ತ ಸಂಸ್ಥೆಯೂ ಎನಿಸಿಕೊಳ್ಳದ, ಖಾಸಗೀ ಆಹಾರ ತಯಾರಿಕಾ ಕಾರ್ಪೊರೇಷನ್ನಿನ ಹಂಗಿನಲ್ಲಿರುವ ಒಂದು ಸಂಸ್ಥೆ. ಈಗ ಅಮೆರಿಕಾದಲ್ಲಿ ಜನಸಾಮಾನ್ಯರಿಗೆ ಎಟಕುವ ದರದಲ್ಲಿ ಸರ್ವವ್ಯಾಪಿ ಮಾರಾಟದಲ್ಲಿರುವ ಕೋಳಿ ಅಥವಾ ಅನೇಕ ಮಾಂಸ, ಹೈನು ಪದಾರ್ಥಗಳು ಜೆನೆಟಿಕಲಿ ಮಾಡಿಫೈಡ್ ತಳಿಗಳಿಂದ ಅಥವಾ ಕೃತಕ-ಅಸ್ವಾಭಾವಿಕ ಜನ್ಯ ಪ್ರಾಣಿಗಳಿಂದ ಒದಗುತ್ತಿವೆ. ಇದು ಸತ್ಯ. ಸಾವಯವ/ಆರ್ಗ್ಯಾನಿಕ್ ಕೋಳಿ, ಮೊಟ್ಟೆ, ಮಾಂಸ, ಹೈನು ಪದಾರ್ಥಗಳು ಮಾರುಕಟ್ಟೆಯಲ್ಲಿ ದೊರೆತರೂ ಅವುಗಳ ಬೆಲೆ ಈ ಬಗೆಯ ಫ಼ಾರ್ಮ್ ಗಳೆಂಬ ಕಾರ್ಖಾನೆಗಳಲ್ಲಿ ತಯಾರಾದ ಆಹಾರಕ್ಕಿಂತ ೨-೩ ಪಟ್ಟು ದುಬಾರಿ.
 
ಗಾಳಿ ಬೆಳಕು, ಸ್ವಾಭಾವಿಕ ಜೀವನವಿಲ್ಲದೆ ೨-೩ ವಾರ ರಸಾಯನಿಕ ತುಂಬಿದ ಮೇವನ್ನು ಹಗಲೂ ರಾತ್ರಿ ಹೊಟ್ಟೆ ತುಂಬಿಸಿ ಗುಂಡಗೆ ಮಾಡಿ ಮಾರುಕಟ್ಟೆಗೆ ಕಳಿಸುವ ಕೋಳಿಯಲ್ಲಿ ಆರೋಗ್ಯಕ್ಕೆ ಭಾರೀ ಕುತ್ತನ್ನುಂಟುಮಾಡುವ ಹಲವಾರು ರಾಸಾಯನಿಕಗಳಿವೆ ಎಂದು ಪರಿಸರ ಪ್ರಿಯರು, ಜೀವ ವಿಜ್ನಾನಿಗಳು ಆಗಾಗ ಗಲಾಟೆ ಮಾಡುತ್ತಿದ್ದರೂ ಎಫ್ ಡಿ ಎ ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಕೋಳಿಗಳಿಗೆ ಕೊಡುವ ಆಹಾರದಲ್ಲಿ ಮಾತ್ರ ಆರ್ಸೆನಿಕ್ ಇದೆ, ಅದು ಕೊಳಿಗಳ ಮಲದಲ್ಲಿ ಹೊರಗೆ ಬರುತ್ತದೆ ಎಂದು ಸಮರ್ಥಿಸಿಕೊಳ್ಳುತ್ತಲೇ ಬಂದಿದ್ದ ಈ ಸಂಸ್ಥೆ ಈಗ ಒಬಾಮಾರ ಸರ್ಕಾರದ ದೆಸೆಯಿಂದಲೋ ಏನೋ ತನ್ನ ಹಳೆಯ ತಪ್ಪುಗಳನ್ನು ಸ್ವಲ್ಪವಾದರೂ ಒಪ್ಪಿಕೊಳ್ಳುವ ಮಟ್ಟಕ್ಕೆ ಬಂದಿದೆ. ಅಮೆರಿಕಾದಲ್ಲಿ ಮಾರಾಟವಾಗುತ್ತಿರುವ ಕೋಳಿಮಾಂಸದಲ್ಲಿ ಆರ್ಸೆನಿಕ್ ಇದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದೆ.
 
ಆದರೆ ಎಫ್ ಡೊ ಎ ಈ ಕೋಳಿಗಳ ಮಾರಾಟವನ್ನು ನಿಲ್ಲಿಸುತ್ತೇನೆ ಎಂದಿಲ್ಲ. ವಿಷಯ ಗೊತ್ತಾದವರು ತಿನ್ನದಿದ್ದರೆ ಬೇಡ ಎಂಬ ನಿಲುವಿಗೆ ಬಂದಿದೆ. ಒಟ್ಟಿನಲ್ಲಿ ಎಫ್ ಡಿ ಎ ತಪ್ಪೊಪ್ಪಿಕೊಂಡರೂ ಚನ್ನಾಗಿ ಜೇಬು ತುಂಬಿಸಿಕೊಂಡಿದೆ. ಇತ್ತ, ಕುಲಾಂತರಿ ತಳಿಗಳ ಕ್ರಾಂತಿಯಾದ ಕಳೆದ ಅರವತ್ತು ವರ್ಷಗಳಿಂದ ಅಮೆರಿಕಾದ ಜನರು ದಿನನಿತ್ಯ (ಅಮೆರಿಕಾದ ಬಹುಪಾಲು ಜನ ದಿನಾ, ಕನಿಷ್ಟ ಎರಡು ಹೊತ್ತಾದರೂ ಮಾಂಸಾಹಾರ ಸೇವಿಸುತ್ತಾರೆ) ಕೋಳಿಯ ಜೊತೆಯಲ್ಲಿಯೇ ಕ್ಯಾನ್ಸರ್ ಜನಕ ಆರ್ಸೆನಿಕ್ ಅನ್ನೂ ತಿನ್ನುತ್ತಿದ್ದಾರೆ!
 
ಜೆನೆಟಿಕಲಿ ಮಾಡಿಫೈಡ್ ಕೋಳಿಗಳನ್ನು ’ಉತ್ಪಾದಿಸುವ’ ಆಹಾರ ಕಾರ್ಖಾನೆಗಳಲ್ಲಿ, ಅಲ್ಲಿನ ಕೋಳಿಗಳಿಗೆ ಕೊಡುವ ಆಹಾರದಲ್ಲಿ ಬೇಕಂತಲೇ ಆರ್ಸೆನಿಕ್ ಅನ್ನು ಬಳಸಲಾಗಿರುತ್ತದಂತೆ. ಆರ್ಸೆನಿಕ್ ತಿಂದ ಕೋಳಿಯ ಮಾಂಸ ಕತ್ತರಿಸಿದಾಗ ಒಳ್ಳೆಯ ಬಣ್ಣ ಮತ್ತು ತಾಜಾ ಇರುವಂತೆ ಕಾಣುವುದಂತೆ. ಅಮೆರಿಕಾದಲ್ಲಿ ಕುಯ್ದ ಕೋಳಿಯೊಂದು ಆಹಾರವಾಗಲು ಮನೆಯೊಂದನ್ನು ತಲುಪಲು ಸರಾಸರಿ ೧೦ ದಿನ ಬೇಕು! ಹತ್ತು ದಿನ ಶೈತ್ಯಾಗಾರ ಅಲ್ಲಿ ಇಲ್ಲಿ ಸುತ್ತಾಡಿ ಬರುವ ಆ ಆಹಾರ ಚನ್ನಾಗಿ ಕಾಣಬೇಕೆಂದು ಆಹಾರ ತಯಾರಿಕೆಯವರು ಈ ಉಪಾಯ ಕಂಡುಕೊಡಿದ್ದಾರೆ. ಅವರ ಕ್ರಿಮಿನಲ್ ಮೆದುಳಿನ ಆಳ ಅಗಲ ಅಳೆಯುವುದು ಇನ್ನೂ ಸಾಕಷ್ಟಿದೆ ಬಿಡಿ...
ಈ ಕೋಳಿ ಆಹಾರದ ಹೆಸರು ರೊಕ್ಸಾರ್ಸನ್ (Roxarsone) ಎಂದು. ಕೋಳಿಗಳಿಗೆ ಸಾರಾಸಗಟು ಈ ಆಹಾರ ತಯಾರಿಸುವ ಮಹಾನ್ ಕಂಪನಿಯ ಹೆಸರು ಆಲ್ಫಾರ್ಮಾ ಎಲ್ ಎಲ್ ಸಿ (Alpharma LLC) ಎಂದು. ಈ ಕಂಪನಿ ಈಗ ಅಮೆರಿಕದಲ್ಲಿ ತನ್ನ ಆಹಾರ ಮಾರಾಟವನ್ನು ನಿಲ್ಲಿಸುವುದಾಗಿಯೂ ಆದರೆ ಇದೇ ಕೋಳಿ ಆಹಾರವನ್ನು ತನ್ನಿಂದ ಕೊಳ್ಳುತ್ತಿರುವ ಇತರೆ ೧೨ ಕ್ಕೂ ಹೆಚ್ಚು ದೇಶಗಳಿಗೆ ಮಾರಾಟವನ್ನು ಮುಂದುವರೆಸುವುದಾಗಿಯೂ ಹೇಳಿಕೊಂಡಿದೆ. ಈ ಆಲ್ಫಾರ್ಮಾ ಕಂಪನಿ ಬಹುರಾಷ್ಟ್ರೀಯ ಔಷಧಿ ತಯಾರಿಕಾ ಕಂಪನಿ ಫಿಜ಼ೆರ್ (Pfizer) ಗೆ ಸೇರಿದ್ದು!
 
 

ಗಂಡೂ-ಹೆಣ್ಣೂ ಅಲ್ಲದ ಹಾಲು ಕೊಡುವ ಕುಲಾಂತರಿ ’ಹೋಡು’ಗಳು!

 
ಕುಲಾಂತರಿ ತಳಿಗಳನ್ನು ವಿರೋಧಿಸುವ, ಸಾವಯವ, ಸ್ವಾಭಾವಿಕ ಕೃಷಿಯನ್ನು ಉಳಿಸಲು ಹೋರಾಡುತ್ತಿರುವ ಎಲ್ಲಾ ಭೂಮಿ ಮಿತ್ರರಿಗೆ ಇನ್ನೊಂದು ಸುದ್ದಿ.
ನ್ಯೂಜಿಲ್ಯಾಂಡಿನ ರುಆಕುರಾ ಎಂಬಲ್ಲಿರುವ ’ಆಗ್ ರಿಸರ್ಚ್’ ಎಂಬ ಕೃಷಿ ಮತ್ತು ಹೈನುಗಾರಿಕೆಯ ಜೆನೆಟಿಕಲಿ ಇಂಜಿನಿಯರಿಂಗ್ ಪ್ರಯೋಗ ಶಾಲೆ/ಕ್ಷೇತ್ರಯಿಂದ ಈಗ ಹೊಸದೊಂದು ಜೀವಿ ಸೃಷ್ಟಿಯಾಗಿದೆ. ಹೋತ-ಆಡುಗಳ ಕುಲಾಂತರಿ ತಳಿಗಳನ್ನು ಹುಟ್ಟುಹಾಕುತ್ತಿದ್ದ, ಅವನ್ನು ಬೆಳೆಸುತ್ತಿದ್ದ ಈ ಸಂಸ್ಥೆಯಲ್ಲಿ ಹುಟ್ಟಿಸಲಾದ ಆಡುಗಳಲ್ಲಿ ಗರ್ಭಧರಿಸಿದ ಆಡುಗಳು ಈಗ ಗಂಡೂ ಅಲ್ಲದ, ಹೆಣ್ಣೂ ಅಲ್ಲದ, ಎರಡೂ ದೇಹದ ಲಕ್ಷಣಗಳನ್ನು ಹೊತ್ತಿರುವ (transgender) ಮರಿಗಳನ್ನು ಈದಿವೆ. ಈ ಮರಿಗಳು ಗಂಡು ಆಡುಗಳ ದೇಹದಲ್ಲಿರುವ ಹೆಣ್ಣುಗಳು! ಇವಕ್ಕೆ ತಮ್ಮ ಮುಂದಿನ ತಳಿಯನ್ನು ತಾವಾಗೇ ಸ್ವಾಭಾವಿಕ ವಾಗಿ ಸೃಷ್ಟಿಸಲು ಸಾಧ್ಯವಾಗುವ ಯಾವುದೇ ಜನನಾಂಗಗಳಿಲ್ಲ. ಆದರೂ ಇವೆಲ್ಲ ಆಡುಗಳೂ ಹಾಲು (ಅಥವಾ ಹಾಲೆಂಬ ದ್ರಾವಣ!) ಕೊಡಬಲ್ಲವು!!


ಇವು ಕೊಡುವ ಹಾಲನ್ನು ಮನುಷ್ಯರು ನಿಯಮಿತವಾಗಿ ಸೇವಿಸಿದರೆ ಅವರ ದೇಹದ ಮೇಲಾಗುವ ಕೆಟ್ಟ ಪರಿಣಾಮಗಳನ್ನು ಅಭ್ಯಸಿಸುವ ಮಟ್ಟಕ್ಕೆ ಇನ್ನೂ ಈ ಸಂಸ್ಥೆ ಹೋಗಿಲ್ಲ. ಈ ಪ್ರಯೋಗ ಇಲ್ಲಿಗೇ ನಿಲ್ಲಲಿ ಎಂದು ನ್ಯೂಜಿಲೆಂಡಿನ ಸಾವಯವ ಕೃಷಿಕ ಮಿತ್ರರು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಬೆಂಬಲ.
 
 

ಅವು ಎಲ್ಲಿ ಹೋಗಬೇಕು?

 
ರೂಪಾ ಹಾಸನ
ನಾವು ಮನೆ ಕಟ್ಟಲು ಕೊಂಡ ಸೈಟಿನಲ್ಲಿ ಮೊದಲಿಗೆ ಗಿಡ-ಮರ, ಬಳ್ಳಿ-ಪೊದೆಗಳು ತುಂಬಿತ್ತು. ಅದರಲ್ಲಿ ಅದೆಷ್ಟು ಜಾತಿಯ ಹಕ್ಕಿ-ಕೀಟ, ಹುಳು-ಹುಪ್ಪಟೆಗಳು ವಾಸವಾಗಿದ್ದವೋ! ಆ ಹಸಿರು ರಾಶಿಯನ್ನು ಕಡಿದು ಸಪಾಟಾಗಿಸಿ ನಾವು ಮನೆ ಕಟ್ಟಿಕೊಂಡು ವಾಸಕ್ಕೆ ಬಂದಾಗಲೇ ಅವುಗಳ ಜಾಗವನ್ನು ನಾವು ಆಕ್ರಮಿಸಿಕೊಂಡಿರುವ ಅರಿವಾಗಿದ್ದು. ಮೊದ ಮೊದಲು ಸೊಳ್ಳೆಗಳಂತೂ ಯುದ್ಧಕ್ಕೆ ನಿಂತ ಸೈನಿಕರಂತೆ ದಾಳಿ ಇಡುತ್ತಿದ್ದವು. ಇದರೊಂದಿಗೆ ಇರುವೆ, ಗೊದ್ದ, ನೆಂಟರಹುಳ, ಮಿಡತೆ, ನೊಣ, ಕಣಜ, ಕುದುರೆಹುಳ..... ನಾನು ನೋಡಿಯೇ ಇರದ, ಹೆಸರೂ ಗೊತ್ತಿರದ ಪುಟ್ಟಪುಟ್ಟ ಕೀಟ, ಹುಳು, ಹುಪ್ಪಟೆಗಳು ಕಿಟಕಿಯೊಳಗಿಂದ ನಮ್ಮ ಮನೆಯನ್ನು ಪ್ರವೇಶಿಸಿ, ಮತ್ತೆ ಹೊರಹೋಗಲು ತಿಳಿಯದೇ ನಮ್ಮನ್ನು ಗೋಳುಗುಟ್ಟಿಸಿ, ನಾವು ರಾತ್ರಿ ಕಿಟಕಿ ಬಾಗಿಲು ಹಾಕಿದ ನಂತರ ಅದರ ಗಾಜಿಗೆ ಬಡಿದು ಬಡಿದು ಬೆಳಗಾಗುವಷ್ಟರಲ್ಲಿ ಸತ್ತು ಬಿದ್ದಿರುತ್ತಿದ್ದವು. ಪ್ರತಿ ಕಿಟಕಿಯ ಗೋಡೆಯ ಚೌಕಟ್ಟಿನಲ್ಲಿ ಬಿದ್ದ ಈ ಹೆಣಗಳ ರಾಶಿಯನ್ನು ದಿನ ಬೆಳಗ್ಗೆ ಗೊಣಗುತ್ತಾ ಗುಡಿಸಿ ತೆಗೆಯುವುದೇ ಒಂದು ಕೆಲಸ.
ಚೆಂದ ಚೆಂದದ ಚಿಟ್ಟೆ, ಪತಂಗ, ಏರೋಪ್ಲೇನ್ ಚಿಟ್ಟೆ, ಬಣ್ಣಬಣ್ಣದ ಪುಟ್ಟ ಹಕ್ಕಿಗಳೂ ದಿಕ್ಕು ತಪ್ಪಿ ನಮ್ಮ ಮನೆಗೆ ಬರುತ್ತಲೇ ಇದ್ದವು. ಎಷ್ಟೋ ಬಾರಿ ಹೊರಗೆ ಹೋಗಲು ತಿಳಿಯದೇ ಮನೆಯಲ್ಲೇ ಸುತ್ತಿ ಸುತ್ತಿ ಸತ್ತು ಬೀಳುತ್ತಿದ್ದುದೂ ಉಂಟು. ಪ್ರತಿ ಬಾರಿ ಈ ಜಾಗದ ಮರದಲ್ಲೆಲ್ಲೋ ತನ್ನ ಗೂಡು ಕಟ್ಟಿ ರೂಢಿಯಾಗಿದ್ದ ಗೀಜಗಗಳು, ನಮ್ಮ ಮನೆಯೊಳಗೆ ಹುಲ್ಲಿನ ಎಸಳು, ಎಲೆ, ನಾರು, ಹತ್ತಿಯನ್ನೆಲ್ಲಾ ತಂದು ಹಾಕಿ ಹೋಗುವುದು, ಮತ್ತೆ ಬಂದಾಗ ಅದನ್ನೆಲ್ಲಾ ಹುಡುಕುವುದು, ಜೋಡಿಸಿಡುವುದು ಮಾಡುತ್ತಿದ್ದವು.
 
ಒಮ್ಮೊಮ್ಮೆ ಮನೆಯೊಳಗೆ ಬಂದ ಗೀಜಗಗಳಿಗೆ ಹೊರಗೆ ಹೋಗುವುದು ತಿಳಿಯದೇ 'ಎಲ್ಲೋ ಬಂದು ಸೇರಿಕೊಂಡುಬಿಟ್ಟಿದ್ದೀನಿ' ಅಂತ ಗಲಿಬಿಲಿಯಾಗಿ, ದಿಗಿಲಿನಿಂದ ಕೂಗಾಡುತ್ತ ಫ್ಯಾನು, ಅಟ್ಟ, ಪುಸ್ತಕಗಳ ಮಧ್ಯೆ ಸೇರಿಕೊಂಡು ಆತಂಕಪಡ್ತಿತ್ತು. ಅದರ ಗಾಬರಿ ನೋಡಿ ನಮಗೂ, ಪಾಪ! ಅವುಗಳನ್ನ ಹೊರಗೆ ಕಳಿಸಿದ್ರೆ ಸಾಕಪ್ಪ ಅನ್ನಿಸಿಬಿಡುತ್ತಿತ್ತು. ಅದನ್ನು ಹುಷಾರಾಗಿ ಹೊರಗೆ ಕಳಿಸುವ, ಜೊತೆಗೆ ಅವು ಹಾರಾಡುವ ರಭಸದಲ್ಲಿ ನಮಗೆಲ್ಲಿ ಬಡಿದುಬಿಡುತ್ತವೋ ಎಂಬ ಕಳವಳ ನಮ್ಮದು. ನಮ್ಮನ್ನು ನೋಡಿ ಮತ್ತಷ್ಟು ದಿಗಿಲಾಗಿ ಗೋಡೆಯಿಂದ ಗೋಡೆಗೆ ಬಡಿದುಕೊಂಡು ಹೊರಗೆ ಹೋಗಲಾಗದ ಆತಂಕ ಗೀಜಗಗಳದು.
 
ಇಂತಹ ಘರ್ಷಣೆಗಳು ಹಲವು ಬಾರಿ ಆಯ್ತು. ಆಮೇಲಾಮೇಲೆ 'ಇದು ಮನುಷ್ಯರ ಮನೆ, ತನ್ನ ಗೂಡು ಕಟ್ಟೋದಿಕ್ಕೆ ಸುರಕ್ಷಿತ ಜಾಗ ಅಲ್ಲ' ಅಂತ ಅವಕ್ಕೆ ಗೊತ್ತಾಗಿ ಹೋಗಿರ್ಬೇಕು, ಮತ್ತೆ ಬರೋದನ್ನೇ ನಿಲ್ಲಿಸಿಬಿಟ್ಟವು! ಹೀಗೆ ಅದೆಷ್ಟು ಹಕ್ಕಿಗಳ ವಾಸ ಸ್ಥಾನವನ್ನು ನಮ್ಮ ಮನೆ ಕಬಳಿಸಿತ್ತೋ ಗೊತ್ತಿಲ್ಲ.
 
ಮನೆಗೆ ಬಂದ ಹೊಸದರಲ್ಲಿ ನಮ್ಮ ಮನೆಯ ಕಾಂಪೌಂಡ್ ಗೇಟಿಗೆ ಒಂದು ಪೋಸ್ಟ್ ಬಾಕ್ಸ್ ಸಿಕ್ಕಿಸಿದ್ದೆವು. ಅದರಲ್ಲಿ ಪತ್ರಗಳನ್ನ ಹಾಕುವುದಕ್ಕೆ ಆಗುವುದಿಲ್ಲ ಎಂದು ಪೋಸ್ಟ್ಮನ್ ಅದನ್ನು ಉಪಯೋಗಿಸುತ್ತಲೇ ಇರಲಿಲ್ಲ. ಮನೆಯೊಳಗೇ ಹಾಕಿ ಹೋಗ್ತಿದ್ದ. ಹಲವು ದಿನ ಬಿಟ್ಟು ಅದರಲ್ಲಿ ಕೆಲವು ಪತ್ರಗಳಿರೋದನ್ನ ಅದರ ಗಾಜಿನಿಂದ ನೋಡಿದ ನಾನು ದಿಢೀರನೆ ಅದರೊಳಗೆ ಕೈ ಹಾಕಿದೆ. ಆ ಡಬ್ಬಿಯೊಳಗೆ ಕಣಜಗಳು ಗೂಡು ಕಟ್ಟಿದ್ದು ನನಗೆ ತಿಳಿದಿರಲಿಲ್ಲ. ನೆಮ್ಮದಿಯಾಗಿ ಇದ್ದ ಅವುಗಳ ವಾಸಸ್ಥಾನಕ್ಕೆ ನನ್ನ 'ಕೈ'ನ ಅತಿಕ್ರಮಣ ಪ್ರವೇಶವಾದ ಕೂಡಲೇ ಕಣಜಗಳು ನನ್ನ ಕೈ ಮೇಲೆ ಆಕ್ರಮಣ ಮಾಡಿ ಕಚ್ಚಿ ಹಾಕಿದವು! ಕಷ್ಟಪಟ್ಟು ಉಜ್ಜಿ ಅವುಗಳಿಂದ ಬಿಡಿಸಿಕೊಂಡಿದ್ದೆ. ನಾನು ಉಜ್ಜಿದ ರಭಸಕ್ಕೆ ಎಷ್ಟು ಕಣಜಗಳು ಸತ್ತು ಬಿದ್ದವೋ ಗೊತ್ತಿಲ್ಲ. ಆದರೆ ನನ್ನ ಕೈ ಬೆಲೂನಿನಂತೆ ಊದಿಕೊಂಡು, ತೀವ್ರ ನೋವಿನಿಂದ ಹಲವು ರಾತ್ರಿಗಳನ್ನು ನಿದ್ದೆಯಿಲ್ಲದೇ ಕಳೆದೆ.
ಆದರೆ ಆಗಲೇ ನನಗೆ ಇನ್ನೊಂದು ಮಗ್ಗುಲಿನಿಂದ ಯೊಚಿಸಲು ಸಾಧ್ಯವಾಗಿದ್ದು. ನಾವು ಮನುಷ್ಯರು ಮಾತ್ರ ಇಂತಹ ಹಲವು ಪುಟ್ಟ ಜೀವಿಗಳ ಬದುಕುವ ಹಕ್ಕನ್ನು ನಾಶ ಮಾಡಿ ಈ ಪ್ರಪಂಚವೆಲ್ಲಾ ನಮಗಾಗಿಯೇ ಸೃಷ್ಟಿಯಾಗಿದೆ ಎಂದು ಮೆರೆಯುತ್ತಿರುವುದಿರಬೇಕು. ನಮ್ಮಂತೆಯೇ ಪ್ರತಿಯೊಂದು ಜೀವಿಗೂ ಈ ಭೂಮಿ ಮೇಲೆ ನೆಮ್ಮದಿಯಾಗಿ ಬದುಕುವ ಹಕ್ಕಿದೆ ಎಂಬುದು ನಮ್ಮ ಗಮನಕ್ಕೇ ಬಂದಿರುವುದಿಲ್ಲ. ಅದು ನಮಗೆ ಮುಖ್ಯವೂ ಅಲ್ಲ.
 
'ನಮ್ಮ ಜಾಗದೊಳಗೆ ಈ ಕ್ರಿಮಿ-ಕೀಟಗಳು ಅತಿಕ್ರಮಣ ಪ್ರವೇಶ ಮಾಡಿಬಿಟ್ಟಿವೆ. ನಮಗೆ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ' ಎಂಬುದು ನಮ್ಮ ಆರೋಪ. ಆದರೆ ನಿಜವಾಗಿ ಅವುಗಳ ನೆಮ್ಮದಿಗೆ ನಾವು ಭಂಗ ತಂದಿದ್ದೇವೆ. ಗಿಡ-ಮರ-ಪೊದೆಗಳಲ್ಲಿ ಗೂಡು ಕಟ್ಟಿಕೊಂಡು ಆರಾಮವಾಗಿದ್ದ ಅವುಗಳ ನೆಲೆಗಳನ್ನು ನಾವು ನಾಶ ಮಾಡಿ, ನಮ್ಮ ಊರು, ಮನೆ, ಕಟ್ಟಡ..... ಕಟ್ಟಿಕೊಂಡು, ಅವುಗಳ ಊರು, ಮನೆ, ಕಟ್ಟಡಗಳನ್ನು ನಾವು ಆಕ್ರಮಿಸಿಕೊಂಡಿದ್ದೇವೆ! ಈಗ ಅವುಗಳು ಎಲ್ಲಿಗೆ ಹೋಗಬೇಕು?
 
ನಿಜ. ಅವುಗಳ ವಾಸಸ್ಥಾನವನ್ನು ನಾಶಗೊಳಿಸಿ, ನಾವು ಆಕ್ರಮಿಸಿಕೊಂಡಿದ್ದಕ್ಕೆ ಅವು ನಮ್ಮ ವಿರುದ್ಧ ನ್ಯಾಯಾಲಯಕ್ಕೆ ಹೋಗಲಾರವು, ನ್ಯಾಯ ಕೇಳಲಾರವು. ಆದರೆ ನಮ್ಮ ಒಂದು ಮನೆ ಕಟ್ಟಲು ಅದೆಷ್ಟು ಪುಟ್ಟ ಜೀವಿಗಳು ತಮ್ಮ ನೆಲೆ ಕಳೆದುಕೊಂಡವೋ, ಬಲಿಯಾದವೋ, ಜೀವ ಕಳೆದುಕೊಂಡವೋ ಲೆಕ್ಕವಿಟ್ಟವರ್ಯಾರು? ಇಲ್ಲಿ ಬಲಾಢ್ಯನಿಗೇ ಚಕ್ರಾಧಿಪತ್ಯ ತಾನೆ? ಆದರೆ ಆ ಪುಟ್ಟ ಜೀವಿಗಳ ಅಸಹಾಯಕತೆ ಮತ್ತೆ ಮತ್ತೆ ಕಾಡುವ ಚಿತ್ರಗಳಾಗಿ ಕಣ್ಮುಂದೆ ಬರುತ್ತಲೇ ಇರುತ್ತದೆ. ನಮ್ಮಿಂದ ಸಾವು-ನೋವಿಗೀಡಾದ ಆ ಮುಗ್ಧ ಜೀವಗಳು, ಅವುಗಳ ಬಂಧುಗಳು ಎಂದಾದರೂ ನಮ್ಮನ್ನು ಕ್ಷಮಿಸುವವೇ? ಪ್ರಶ್ನೆ ಹಾಗೇ ಉಳಿದಿದೆ. 
 
 

 
 
 
 
 
Copyright © 2011 Neemgrove Media
All Rights Reserved