ಡೆಟ್ ಸೀಲಿಂಗ್-ಕ್ರೈಸಿಸ್ ಮುಗಿಯಿತೇ?!

ಈಗ ನಡೆಯುತ್ತಿರುವ ಡೆಟ್ ಸೀಲಿಂಗ್ ಪ್ರಕ್ರಿಯೆ ಎಲ್ಲಾ ರೀತಿಯಲ್ಲೂ ಅಮೆರಿಕಾದ ಸರ್ಕಾರ, ಎಕಾನಮಿಯ ಹಿತದಲ್ಲಿ ನಡೆಯುತ್ತಿವೆ ಎನ್ನುವಂತಿಲ್ಲ. ಇದು ರಿಪಬ್ಲಿಕನ್ನರು ಮತ್ತು ಡೆಮಾಕ್ರೆಟಿಕ್ ಪಾರ್ಟಿಯವರ ರಾಜಕೀಯ ದೊಂಬರಾಟ. ಪ್ರತೀ ಬಾರಿ ಸಾಲದ ಮಿತಿಯನ್ನು ಹೆಚ್ಚಿಸುವಾಗಲೂ ಜಟಾಪಟಿ ಇರುತ್ತಿತ್ತು, ಈ ಬಾರಿ ಸ್ವಲ್ಪ ಹೆಚ್ಚಿಗೆ ನೋಡಲು ಸಿಕ್ಕಿದೆ.

ಸಾಲದ ಮಿತಿಯನ್ನು ಕಾಲಾನುಕಾಲಕ್ಕೆ ಹೆಚ್ಚಿಸಿಕೊಳ್ಳ ಹೋಗದಿದ್ದರೆ ಅಮೆರಿಕಾದ ಸರ್ಕಾರ ಕಾರ್ಯ ನಿರ್ವಹಿಸುವುದಕ್ಕೆ ಸಾಧ್ಯವೇ ಇಲ್ಲ. ೧೯೧೭ರಿಂದ ಡೆಟ್ ಸೀಲಿಂಗ್ ಅನ್ನು ಹೆಚ್ಚಿಸುತ್ತಲೇ ಬಂದಿರುವ ಸರ್ಕಾರದ ಖರ್ಚು ಕೂಡಾ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಅದರ ಮೇಲೆ ಈಗಾಗಲೇ ಮಾರಿಕೊಂಡಿರುವ ಅಸಂಖ್ಯಾತ ಟ್ರೆಶರಿ ಬಾಂಡುಗಳಿಗೆ ಬಡ್ಡಿ ಕೂಡಾ ತೆರಬೇಕಿದೆ. ಅದೂ ಬೆಳೆಯುತ್ತಿದೆ. ಇದಲ್ಲದೆ, ಅಮೆರಿಕನ್ ಸರ್ಕಾರದ ಟ್ರೆೇಡ್ ಮಾರ್ಕ್ ಯೋಜನೆಗಳಾದ ಸೋಷಿಯಲ್ ಸೆಕ್ಯುರಿಟಿ, ಮೆಡಿಕೇರ್, ಮೆಡಿಕೇಡ್, ಮಾಜಿ ಯೋಧರ ವೇತನ, ನಿರುದ್ಯೋಗ ವೇತನ ಇತ್ಯಾದಿಗಳನ್ನು ಅವಲಂಬಿಸಿರುವವರ ಸಂಖ್ಯೆ ಕೂಡಾ ಹೆಚ್ಚುತ್ತಿದೆ.

ಇಷ್ಟೆಲ್ಲಾ ಗೊತ್ತಿದ್ದೂ ರಿಪಬ್ಲಿಕನ್ನರು, ’ಟೀ ಪಾರ್ಟಿ’ ಗುಂಪಿನವರು ಸಾಲದ ಮಿತಿಯ ಹೆಚ್ಚಳ ಬೇಡ ಎನ್ನುತ್ತಾ ಸಾಕಷ್ಟು ಆತಂಕದ ವಾತಾವರಣ ನಿರ್ಮಿಸಿದ್ದರು. ಸಾಲದ ಮಿತಿಯ ಮೊತ್ತವೊಂದನ್ನು ತಮ್ಮಲ್ಲೇ ಸಮ್ಮತವಾಗಿ ನಿರ್ಧರಿಸಲು ಸುಮಾರು ಡ್ರಾಮಾ ಮಾಡಿದ್ದರು? ಹಾಗೇ, ಹರಿಬಿರಿಯಲ್ಲಿ ಹೇಗೆ ರಾತ್ರೋರಾತ್ರಿ ಒಮ್ಮತಕ್ಕೆ ಬಂದರು?

ಹಿನ್ನೆಲೆ:
ಅಮೆರಿಕಾ ಸರ್ಕಾರ ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ಳುತ್ತಿರುವ ಸಾಲದ ಮಿತಿಯಿಂದ ಅಮೆರಿಕನ್ ತೆರಿಗೆದಾರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾನೆ. ಅಮೆರಿಕದ ಬಜೆಟ್ ಕೈ ಮೀರಿ ಹೋಗುತ್ತಿದೆ. ಉತ್ಪಾದನೆ ಅಥವಾ ಸಂಪಾದನೆಗಿಂತ ಸರ್ಕಾರ ಖರ್ಚುಮಾಡುವುದು ಮಿತಿಮೀರಿ ಹೋಗುತ್ತಿದ್ದೆ. ಈ ಕಾರಣಗಳನ್ನು ಮುಂದಿಟ್ಟುಕೊಂಡು ಈ ವರ್ಷ ಸಾಲದ ಮಿತಿಯನ್ನು ಹೆಚ್ಚಿಸುವುದು ಬೇಡವೇ ಬೇಡ. ಏನೇ ಆಗಲಿ ಈ ಬಾರಿ ಒಂದು ಕ್ರಾಂತಿಕಾರಕ ಬದಲಾವಣೆಯೊಂದನ್ನು ತಂದು ಡೆಟ್ ಸೀಲಿಂಗ್ ಎನ್ನುವ ಅಭ್ಯಾಸಕ್ಕೇ ಕತ್ತರಿ ಹಾಕಿ ಅದರ ಬದಲು ಖರ್ಚು ಕಡಿತಗೊಳ್ಳುವಂತಹ, ಸಂಪಾದನೆ ಹೆಚ್ಚಿಸುವಂತಹ, ಭವಿಷ್ಯಕ್ಕೆ ಆಶಾದಾಯಕವಾಗುವಂತಹ ಆಯವ್ಯಯದ ಪ್ಲಾನ್ ಒಂದನ್ನು ರೂಪಿಸೋಣ ಎಂದು ರಿಪಬ್ಲಿಕನ್ನರು ಹಟ ಶುರು ಮಾಡಿದರು. ಅರೆ! ನಿಮ್ಮ ಪಕ್ಷದ ಅಭ್ಯರ್ಥಿ ಅಧ್ಯಕ್ಷರಾಗಿದ್ದಾಗ ಕ್ರಾಂತಿಯ ಮಾತಾಡದ ನೀವು ಈಗ ಸುಮ್ಮನೆ ಏಕೆ ಅಧಿಕಪ್ರಸಂಗ ಮಾಡುತ್ತಿದ್ದೀರಿ? ಸಾಂಪ್ರದಾಯಿಕವಾಗಿ ಪ್ರತಿ ವರ್ಷವೂ ಇಷ್ಟಿಷ್ಟು ಸಾಲದ ಮಿತಿಯನ್ನು ನಾವು ಹೆಚ್ಚಿಸಿಕೊಂಡು ಬರಲು ಎರಡೂ ಪಕ್ಷದವರು ಅನುಮೋದಿಸುತ್ತಲೇ ಇದ್ದೇವೆ...ಈ ಬಾರಿ ಏನು? ನಿಮ್ಮ ಇಲ್ಲದ ಪಿರಿಪಿರಿ ಎಂದು ಡೆಮಾಕ್ರಟಿಕರು ಗುರ್ರ್ ಗುಟ್ಟಿದರು.
ಅಧ್ಯಕ್ಷ ಒಬಾಮ ಇರಾಕ್ ಮತ್ತು ಆಫ್ಘಾನಿಸ್ಥಾನದಿಂದ ಸೈನ್ಯವನ್ನು ಹಂತ ಹಂತವಾಗಿ ಹಿಂದೆ ಕರೆಸಿಕೊಳ್ಳಲು ಆರಂಭಿಸಿರುವುದರಿಂದ ಅಲ್ಲಿಗೆ ಖರ್ಚಾಗುತ್ತಿದ್ದ ಹಣ ಈಗ ಉಳಿಯಲಿದೆ. ಹಾಗೇ ಒಬಾಮ ಲಾಕ್ ಹೀಡ್ ಮಾರ‍್ ಟಿನ್ ನಂತಹ ಬೃಹತ್ ಆಯುಧ, ಯುಧ್ಧ ನೌಕೆ ತಯಾರಿಕಾ ಕಾರ್ಖಾನೆಗಳಿಗೆ ಆಯುಧ-ನೌಕೆಗಳ ಖರೀದಿಗೆ ಹಿಂದಿನ ಸರ್ಕಾರದಿಂದ ಕೊಡಲಾಗುತ್ತಿದ್ದ ಯೋಜನೆಗಳಲ್ಲಿ ಸಾಕಷ್ಟನ್ನು ನಿಲ್ಲಿಸಿದ್ದಾರೆ. ನಾಸಾ ಪ್ರತೀ ವರ್ಷವೂ ನಡೆಸುತ್ತಿದ್ದ ಬಾಹ್ಯಾಕಾಶ ಸಂಶೋಧನೆಗೂ ಕತ್ತರಿ ಹಾಕಿದ್ದಾರೆ. ವರ್ಷಕ್ಕೊಮ್ಮೆಯಾದರೂ ಅಂತರಿಕ್ಷದಲ್ಲಿರುವ ಸ್ಪೇಸ್ ಸೆಂಟರ್ ಗೆ ಭೇಟಿ ಕೊಟ್ಟು ಸಂಶೋಧನೆಗೆ ಸಹಾಯ ಮಾಡುತ್ತಿದ್ದ ಅಟ್ಲಾಂಟಿಸ್ ನೌಕೆ ತನ್ನ ಕೊನೆಯ ಯಾನ ಮುಗಿಸಿ ನಾಸಾದ ಶೆಡ್ಡಿನಲ್ಲಿ ಕೂತಿದೆ. ಇದೆಲ್ಲ ಯೋಜನೆಗಳು ಈಗ ಸರ್ಕಾರದ ಖರ್ಚನ್ನು ಸಾಕಷ್ಟು ಕಡಿಮೆ ಮಾಡಿವೆ ಹಾಗೂ ಆದಾಯ ಹೆಚ್ಚಿಸುತ್ತಿವೆ. ಈ ಲೆಕ್ಕಾಚಾರವನ್ನು ಮುಂದಿಟ್ಟುಕೊಂಡು, ಸರ್ಕಾರ ಇರುವ ಆದಾಯವನ್ನು ಉಪಯೋಗಿಸಿಕೊಂಡು ಸರ್ಕಾರ ನಡೆಸಲಿ ಎಂದು ರಿಪಬ್ಲಿಕನ್ನರ ಆಶಯ. ಮರುಅಧ್ಯಕ್ಷೀಯ ಚುನಾವಣೆಯ ಸಮಯ ಬರುವವರೆಗೂ ಸರ್ಕಾರದ ಖರ್ಚನ್ನು ಕಟ್ಟಿಹಾಕಿ ಸರ್ಕಾರ ಯಾವುದೇ ಹೊಸ ಜನಪರ ಪಾಲಿಸಿಗಳಿಗೆ ಹಣ ಹೂಡಲಾಗದಂತೆ ಮಾಡಬೇಕು ಎನ್ನುವುದು ರಿಪಬ್ಲಿಕನ್ನರ ರಾಜಕೀಯ ಉದ್ದೇಶ.

ನಿಜಕ್ಕೂ ಡೆಟ್ ಸೀಲಿಂಗ್ ನಂತಹ ಪದೇಪದೇ ಸಾಲದ ಮಿತಿಯನ್ನು ತಾವಾಗಿ ಹೆಚ್ಚಿಸಿಕೊಳ್ಳುವ ಅನುಕೂಲವೊಂದಕ್ಕೆ ಕಡಿವಾಣ ಹಾಕಿಕೊಳ್ಳಬೇಕು ಎಂಬ ಸದುದ್ದೇಶ ರಿಪಬ್ಲಿಕನ್ನರಿಗಿದ್ದರೆ ಅವರು ಬೇರೆ ಯಾವುದಾದರೂ ಸಮಯದಲ್ಲಿ ಸಮಾಧಾನವಾಗಿ ಈ ವಿಷಯವನ್ನು ಮುಂದಿಡಬಹುದಿತ್ತು. ಆದರೆ ಸಾಲಗಾರರಿಗೆ ಬಡ್ಡಿ ಕೊಡುವ ಗಡುವು ಹತ್ತಿರಕ್ಕೆ ಬಂದಾಗ ಕ್ರಾಂತಿ ಮಾಡೋಣ ಎಂದು ಶುರು ಹಚ್ಚಿಕೊಂಡಿದ್ದು ಡೆಮಾಕ್ರೆಟರಿಗೆ ಮತ್ತು ಕೆಲವರು ಲಿಬೆರಲ್ ರಿಪಬ್ಲಿಕನ್ನರಿಗೆ ಚೊರೆ ಎನ್ನಿಸಿತ್ತು. ಆದರೆ ಸಂಖ್ಯೆಯೊಂದನ್ನು ಸಮ್ಮತಿಸದೆ ಪ್ರಕ್ರಿಯೆ ಮುಂದುವರಿಯದ್ದನ್ನು ಮನಗಂಡ ಒಹಾಯೋ ರಾಜ್ಯದ ಕಾಂಗ್ರೆಸ್ ಮನ್, ಅಮೆರಿಕಾದ ಜನಪ್ರತಿನಿಧಿಗಳ ಸಂಸತ್ತಿನ (ಯುನೈಟೆಡ್ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ಸ್ಪೀಕರ್ ಜಾನ್ ಬೇನರ್ ೯೦೦೦ ಬಿಲಿಯನ್ ಡಾಲರ್ಗಳ ಮಿತಿಯನ್ನು ಸೂಚಿಸಿ ರಿಪಬ್ಲಿಕನ್ನರ ಅನುಮೋದನೆಗಾಗಿ ಅವರ ಮುಂಡಿಟ್ಟಿದ್ದರು. ಕನ್ಸರ್ವೇಟಿವ್ ರಿಪಬ್ಲಿಕನ್ನರು ಮತ್ತು ಟೀ ಪಾರ್ಟಿ ಮಂದಿ ಬೇನರ್ ವಿರುದ್ಧ ಎಗರಿಬಿದ್ದಿದ್ದರು.

ಈ ವರ್ಷ ಅಮೆರಿಕಾದ ಸಾಲದ ಮಿತಿಯ ಏರಿಕೆ ಆಗುವುದೇ ಇಲ್ಲವೇನೋ...ಅಮೆರಿಕಾ ಸಾಲಗಾರರಿಗೆ ಕೊಡಬೇಕಿರುವ ಬಡ್ಡಿಯನ್ನು ಡಿಫಾಲ್ಟ್ ಮಾಡುವುದೇನೋ...ಮೆಡಿಕೇರ್-ಸೋಷಿಯಲ್ ಸೆಕ್ಯುರಿಟಿ ಅನುಕೂಲಗಳು ಕಡಿತವಾಗುವುದೇನೋ...ಎಕಾನಮಿ ಮತ್ತಷ್ಟು ಇಳಿಯುವುದೇನೊ...ಎಂಬೆಲ್ಲಾ ಆತಂಕ ಹುಟ್ಟಿತ್ತು. ಆದರೆ ಕಡೆಗೂ ರಿಪಬ್ಲಿಕನ್ನರು ರಾತ್ರೋರಾತ್ರಿ ಮೊತ್ತವೊಂದನ್ನು ನಿರ್ಧರಿಸಿದ್ದಾರೆ.

ಕಾರಣ:
ಹಾರಾಡುತ್ತಿದ್ದ ಟೀ ಪಾರ್ಟಿ ಮಂದಿ, ಕನ್ಸರ್ವೇಟಿವ್ ರಿಪಬ್ಲಿಕನ್ನರು ಸೀಟಿನಲ್ಲಿ ಕೂತು ವೋಟು ಹಾಕಲು ಅಧ್ಯಕ್ಷ ಒಬಾಮಾ ಕೊಟ್ಟ ಶಾಕ್ ಇಷ್ಟೇ. ರಿಪಬ್ಲಿಕನ್ ಪಾರ್ಟಿ-ಡೆಮಾಕ್ರಟಿ ಪಾರ್ಟಿಯವರ ಜಟಾಪಟಿ ನೋಡಿದ ಒಬಾಮ ನೀವೇ ಸಮಾಧಾನದಿಂದ ಒಮ್ಮತಕ್ಕೆ ಬರದಿದ್ದರೆ ಸಂವಿಧಾನದ ೧೪ನೆಯ ತಿದ್ದುಪಡಿಯನ್ನು ಸದುಪಯೋಗ ಮಾಡಿಕೊಂಡು ತಾನೇ ವಿಟೋ ಮಾಡಿ ಸಾಲದ ಮಿತಿಯನ್ನು ಏರಿಸಿಕೊಳ್ಳುವ ತೀರ್ಮಾನಕ್ಕೆ ಬರುತ್ತೇನೆ ಎಂಬ ಸೂಚನೆ ಕೊಟ್ಟರು. ರಿಪಬ್ಲಿಕನ್ನರಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಒಬಾಮ ಅವರಿಗೆ ವೀಟೋ ಪವರ್ ಅನ್ನು ಬಳಸಲು ಬಿಡುವುದಕ್ಕಿಂತ ತಾವೂ ಈ ಕ್ರಿಯೆಯಲ್ಲಿ ಪಾಲುದಾರರಾಗಿ ಉಳಿಯಬೇಕೆಂಬ ಉದ್ದೇಶದಿಂದ ಒಪ್ಪಿಗೆ ಕೊಟ್ಟಿದ್ದಾರೆ.
ಹಾಗಾದರೆ ಕ್ರೈಸಿಸ್ ಪರಿಹಾರವಾಯಿತೇ?

ಇಲ್ಲ. ರಿಪಬ್ಲಿಕನ್ನರು ಕೊಟ್ಟ ಸಂಖ್ಯೆಯನ್ನು ಡೆಮಾಕ್ರಟಿಕ್ ಪಕ್ಷದವರು ತಿರುಗಿಯೂ ನೋಡಲಿಲ್ಲ. ಏಕೆಂದರೆ ಅದು ಅಮೆರಿಕಾದ ಆನೆಗಾತ್ರದ ಖರ್ಚಿಗೆ ಆಡಿನ ಗಾತ್ರದ ಪರಿಹಾರ. ಅದಕ್ಕೆ ಬದಲಾಗಿ ನೆವಾಡಾ ರಾಜ್ಯದ ಹಿರಿಯ ಡೆಮಾಕ್ರಟಿಕ್ ಪ್ರತಿನಿಧಿ ಹಾರೀ ರೀಡ್ ಪ್ರಪೋಸ್ ಮಾಡಿರುವ ೨.೭ ಟ್ರಿಲಿಯನ್ ಡಾಲರ್ ಮಿತಿಯನ್ನು ರಿಪಬ್ಲಿಕನ್ ಪ್ರತಿನಿಧಿಗಳ ಮನಸ್ಸಿಗೆ ಸಮಾಧಾನವಾಗುವಂತೆ ಕೊಂಚ ಮಾರ್ಪಾಡು ಮಾಡಿಕೊಳ್ಳುವ ಪ್ಲಾನ್ ಡೆಮಾಕ್ರಟಿಗರದ್ದು. ಎರಡೂ ಪಕ್ಷದವರೂ ಒಮ್ಮತದಿಂದ ಹ್ಯಾರಿ ರೀಡ್ ರವರ ಪ್ಲಾನ್ ಗೆ ಒಪ್ಪಿದರೆ ಸರ್ಕಾರದ ಕಡೆಯಿಂದ ನಾನೂ ಮೆಡಿಕೇರ್ ಪಾಲಿಸಿಯಲ್ಲಿ ಬದಲಾವಣೆ ತರುತ್ತೇನೆ, ಯುಧ್ಧ ಇತ್ಯಾದಿಗಳ ಖರ್ಚನ್ನು ಉಳಿಸುವ ಪ್ರಯತ್ನ ಮಾಡುತ್ತೇನೆ, ಎಂದು ಶ್ವೇತ ಭವನ ಭರವಸೆ ಕೊಟ್ಟಿದೆ. ಆದರೂ ರಾಜಕೀಯ ಜಗ್ಗಾಟ ನಿಲ್ಲುತ್ತಿಲ್ಲ. ಈ ಬಗ್ಗೆ ಮಾತುಕತೆ ಇನ್ನೂ ನಡೆಯುತ್ತಿದೆ, ನಡೆಯಲಿದೆ. ಒಪ್ಪಂದಕ್ಕೆ ಬರುವ ಮುನ್ನ ಇನ್ನೂ ಟೀ ಪಾರ್ಟಿಯವರ ಡ್ರಾಮ ನೋಡಲು ಬಾಕಿ ಇದೆ. ಗಡುವಿಗೆ ಮುಂಚೆ ಪರಿಹಾರ ಕಂಡುಹಿಡಿದುಕೊಳ್ಳುತ್ತೇವೆ ಎಂಬ ಸೂಚನೆಯನ್ನೆನ್ನೋ ಕೊಡಲಾಗಿದೆ. ಆದರೆ ಅಂತಿಮ ತೀರ್ಮಾನವಾಗಿಲ್ಲ. ಮೊತ್ತ ಖಚಿತವಾಗಿಲ್ಲ.

ಡೆಟ್ ಸೀಲಿಂಗ್ ಹೆಚ್ಚಿಸಿಕೊಳ್ಳುತ್ತೇವೆ ಎಂದಿರುವ ಅಮೆರಿಕಾದ ನೆನ್ನೆಯ ಹೇಳಿಕೆಯಿಂದ ಸಾಲ ಕೊಟ್ಟಿರುವವರಿಗೆ (ಟ್ರೆಶರಿ ಬಾಂಡುಗಳನ್ನು ಖರೀದಿಸಿರುವವರಿಗೆ) ಸಮಾಧಾನವೇನೋ ಆಗಿದೆ. ಏಶಿಯಾ ಷೇರು ಮಾರುಕಟ್ಟೆ ತನ್ನ ಖುಷಿಯನ್ನು ತೋರಿಸಿಕೊಂಡಿದೆ. ಅಮೆರಿಕಾದಲ್ಲೂ ಷೇರು ವಹಿವಾಟಿನಲ್ಲೂ ಸ್ವಲ್ಪ ಚೇತರಿಕೆಯಾಗಿದೆ. ದಿಕ್ಕಾಪಾಲಾಗಿ ಓಡುತ್ತಿದ್ದ ಚಿನ್ನದ ಬೆಲೆ ಇದ್ದಲ್ಲೇ ನಿಂತಿದೆ. ಆದರೂ ಅಮೆರಿಕಾ ಇಷ್ಟು ದಿನ ಈ ತೀರ್ಮಾನ ತೆಗೆದುಕೊಳ್ಳಲು ತಡ ಮಾಡಿದ್ದರಿಂದ ಅಂತರರಾಷ್ಟ್ರ‍ೀ  ಯ  ಮಾರುಕಟ್ಟೆಯಲ್ಲಿ ಸಾಲ ಪಡೆದು ಅದಕ್ಕೆ ಸರಿಯಾಗಿ ಬಡ್ಡಿ ಕಟ್ಟಿ ತಿರಿಸುವ ಸಾಮರ್ಥ್ಯದ ಕುರಿತ ತನ್ನ ಅಕಳಂಕಿತ ’ರೆಪ್ಯುಟೇಷನ್’ ಸಂದೇಹಕ್ಕೆ ಒಳಪಡಿಸಿಕೊಂಡಿದೆ.

ನಿಜಕ್ಕೂ ಕಾಂಗ್ರೆಸ್ ಸಹಮತದ ಒಪ್ಪಂದಕ್ಕೆ ಬರಲಿದೆಯೇ? ಅಮೆರಿಕಾ ಮತ್ತೆ ಎಷ್ಟು ಟ್ರೆಶರಿ ಬಾಂಡುಗಳನ್ನು ಮಾರಲಿದೆ? ಯಾರು ಅದನ್ನು ಹೆಚ್ಚಾಗಿ ಖರಿದಿಸಲಿದ್ದಾರೆ? (ಬಹುಪಾಲು ಟ್ರೆಶರಿ ಬಾಂಡುಗಳು ಅಮೆರಿಕನ್ನರು, ಅಮೆರಿಕಾದ ಸಂಸ್ಥೆ, ಖಾಸಗೀ ಕಾರ್ಪೊರೇಷನ್ನಿನ ಸ್ವತ್ತಾಗಿದ್ದರೂ...ಇತರೆ ರಾಷ್ಟ್ರಗಳ ಪೈಕಿ ಚೈನಾ ಅತ್ಯಂತ ಹೆಚ್ಚು ಬಾಂಡುಗಳನ್ನು ಖರೀದಿಸಿಕೊಂಡಿದೆ). ಹಣದುಬ್ಬರ ಎಷ್ಟರ ಮಟ್ಟಿಗೆ ಏರಿಕೆಯಾಗಲಿದೆ? ಅಮೆರಿಕನ್ ಸರ್ಕಾರ ಯುದ್ಧ ಮಾತ್ರವಲ್ಲದೆ ಇನ್ನು ಯಾವ ಯಾವ ಯೋಜನೆಗಳಿಗೆ ಹಣ ಕಡಿತ ಮಾಡಲಿದೆ? ಇದು ಜಾರುತಿರುವ ಎಕಾನಮಿಯನ್ನು ಯಾವ ರೀತಿ ಹಿಡಿದು ಮೇಲೆಳೆಯಲಿದೆ ಅಥವಾ ಹಳ್ಳ ಹತ್ತಿಸಲಿದೆ ಎಂಬುದನ್ನು ಕಾದೇ ನೋಡಬೇಕು

 

 


 




ಮತ್ತೊಂದು ಟ್ರೈ ವ್ಯಾಲಿ ಕೇಸ್-ಇದು ಬರಿಯ ಆರಂಭವಷ್ಟೇ!

 
ಕ್ಯಾಲಿಫೋರ್ನಿಯಾ ದ ಟ್ರೈ ವ್ಯಾಲಿ ಎಂಬ ನಕಲಿ ಯೂನಿವರ್ಸಿಟಿಯ ಮೇಲೆ ಎಫ್.ಬಿ.ಐ ಧಾಳಿ ನಡೆದು ೪-೫ ತಿಂಗಳುಗಳಷ್ಟೇ ಆಗಿವೆ. ಟ್ರೈವ್ಯಾಲಿ ನಾವು ವಿವರವಾಗಿ ವರದಿ ಮಾಡಿದ್ದಲ್ಲದೆ ಯೂನಿವರ್ಸಿಟಿ ಎಂಬ ಹೆಸರಿನಡಿಯಲ್ಲಿ ವೀಸಾ, ಒಪಿಟಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಹಲವಾರು ಮೋಸದ ಸಂಸ್ಥೆಗಳು ಸಧ್ಯದಲ್ಲೇ ವಿಚಾರಣೆ ಎದುರಿಸಲಿವೆ, ಬಂದ್ ಆಗಲಿವೆ ಎಂದೂ ಎಚ್ಚರಿಸಿದ್ದೆವು. ಅದರ ಮೊದಲ ಹಂತದ ಆಪರೇಷನ್ ಆಗಿ ಯೂನಿವರ್ಸಿಟಿ ಆಫ್ ನಾರ್ತ್ ವರ್ಜಿನಿಯಾದ ಆನನ್ಡೇಲ್ ಕ್ಯಾಂಪಸ್ಸಿನ ಮೇಲೆ ಎರಡು ದಿನಗಳ ಹಿಂದೆ ಎಫ್.ಬಿ.ಐ, ಇಮಿಗ್ರೇಶನ್-ಕಸ್ಟಮ್ಸ್ ಅಧಿಕಾರಿಗಳ ತಂಡ ಧಾಳಿ ನಡೆಸಿದೆ.
ಈ ಯೂನಿವರ್ಸಿಟಿಯೆಂಬ ಜಾಲದಲ್ಲಿ ಕೂಡಾ ಒಪಿಟಿ, ವಿದ್ಯಾರ್ಥಿ ವೀಸಾ, ನಕಲಿ ಡಿಗ್ರಿಗಳಿಗಾಗಿ ಟ್ರೈ ವ್ಯಾಲಿಯದ್ದೇ ಮೋಸದಾಟ ನಡೆಯುತ್ತಿತ್ತು. ದುರಂತದ ವಿಷಯವೆಂದರೆ ಇಲ್ಲಿರುವ ೨,೪೦೦ ವಿದ್ಯಾರ್ಥಿಗಳಲ್ಲೂ ೯೦ ಶೇಕಡಾ ಭಾರತೀಯರು, ಅದೂ ಆಂಧ್ರ ಪ್ರದೇಶದವರೇ!!!
ಟ್ರೈವ್ಯಾಲಿ ಪ್ರಕರಣದಲ್ಲಿ ವಿಶ್ವವಿದ್ಯಾನಿಲಯದ ವಿರುದ್ಧ ಸಾಕ್ಷ್ಯ ಪಡೆಯಲು, ಇಮಿಗ್ರೇಷನ್ ಇತರೆ ಕಾರಣಗಳಿಗಾಗಿ ಅಲ್ಲಿದ್ದ ಕೆಲ ಭಾರತೀಯ ವಿದ್ಯಾರ್ಥಿಗಳಿಗೆ ರೇಡಿಯೋ ಕಾಲರ್ ಹಾಕಿ ಮಾನಿಟರ್ ಮಾಡಲಾಗಿತ್ತು. ಆದರೀಗ ಸಂಪೂರ್ಣ ಆರೋಪ ಪಟ್ಟಿಯನ್ನು ಈ ನಕಲಿ ವಿದ್ಯಾಸಂಸ್ಥೆಯ ಮೇಲೇ ಕೇಂದ್ರೀಕರಿಸಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ರೇಡಿಯೋ ಕಾಲರ್ ಹಾಕಿಸಿಕೊಳ್ಳುವ ಪರಿಸ್ಥಿತಿ ಇರುವುದಿಲ್ಲ.
ಆದರೂ, ಯೋಚಿಸಲೇ ಬೇಕು. ಶ್ರಮಪಟ್ಟು ಓದುವವರೆಂಬ, ಕಲಿಯುವವರೆಂಬ ಹೆಸರು ಗಳಿಸಿರುವ ಭಾರತೀಯ ವಿದ್ಯಾರ್ಥಿ ಸಮುದಾಯಕ್ಕೆ ಇದು ನಿಜಕ್ಕೂ ಅಸಹನೀಯ ಮತ್ತು ನಾಚಿಕೆಗೇಡಿನ ವಿಷಯವಲ್ಲವೇ?
 









 
 
 
 
 
Copyright © 2011 Neemgrove Media
All Rights Reserved