ಮಾತೃಭಾಷೆಯಲ್ಲಿ ಶಿಕ್ಷಣ: ಪಂಡಿತರ ಪತ್ರ |
ಪ್ರಿಯರೆ,
ಶಿಕ್ಷಣ ಮಾಧ್ಯಮವನ್ನು ಕುರಿತ ಮೇಲ್ಮನವಿ ಸರ್ವೋನ್ನತ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗಬೇಕಿರುವಾಗಲೇ
ಕರ್ನಾಟಕದ ಪ್ರಾಥಮಿಕ ಶಿಕ್ಷಣ ಸಚಿ ಶ್ರೀ ವಿಶ್ವೇಶ್ವರ ಕಾಗೇರಿಯವರು ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ
ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸುವ ಆತುರದಲ್ಲಿದ್ದಾರೆ.
ಒಂದು ಭಾಷೆಯನ್ನು ಚೆನ್ನಾಗಿ ಕಲಿಯದೆ ಆ ಭಾಷೆಯನ್ನು ಮಾಧ್ಯಮವಾಗಿ ಬಳಸುವುದರ ಪರಿಣಾಮಕ್ಕೆ ಇತ್ತೀಚಿನ ನಿದರ್ಶನ
ಮಂಗಳೂರು ಸಮೀಪದ ಬೊಳ್ಳಾಯಿಯಲ್ಲಿ ನಡೆದಿದೆ. ಮನೆ, ಶಾಲೆ ಎಲ್ಲಿಯೂ ಪರಿಸರದ ಭಾಷೆಯಲ್ಲದ
ಇಂಗ್ಲಿಷನ್ನು ಶಿಕ್ಷಣ ಮಾಧ್ಯಮವಾಗಿ ಒತ್ತಾಯಿಸಿದರೆ ಮಕ್ಕಳ ಮೇಲೆ ಆಗುವ ದುಷ್ಪರಿಣಾಮಕ್ಕೆ ದೇವಿಪ್ರಸಾದ್ ಬಲಿಯಾಗಿದ್ದಾನೆ.
ಎಲ್ಲ ಮಕ್ಕಳೂ ದೇವಿ ಪ್ರಸಾದನಂತೆ ಆತ್ಮಹತ್ಯೆ ಮಾಡಿಕೊಳ್ಳದಿರಬಹುದು. ಆದರೆ ಅವರಲ್ಲಿ ಹಲವರು ಮಧ್ಯದಲ್ಲಿಯೇ ಶಾಲೆ ತೊರೆಯುವ ಸಾಧ್ಯತೆ ಹೆಚ್ಚಿದೆ.
ಇಂಗ್ಲಿಷನ್ನು ಕಲಿಯುವುದಕ್ಕೂ ಅದನ್ನು ಶಿಕ್ಷಣ ಮಾಧ್ಯಮವಾಗಿ ಬಳಸುವುದಕ್ಕೂ ತುಂಬ ವ್ಯತ್ಯಾಸವಿದೆ. ಮಕ್ಕಳನ್ನು ಇಂಗ್ಲಿಷಿನಲ್ಲಿ ಮಾತನಾಡಿಸಿ ಅವರು ಅದನ್ನು ಅರ್ಥಮಾಡಿಕೊಂಡು ಇಂಗ್ಲಿಷಿನಲ್ಲಿಯೇ ಉತ್ತರಿಸುವಂತೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಚೆನ್ನಾಗಿ ಕಲಿಸುವ ಪರಿಸರವನ್ನು ನಿರ್ಮಿಸುವುದು ಮೊದಲು ಆಗಬೇಕು. ಅನಂತರ ಮಾತ್ರವೇ ಇಂಗ್ಲಿಷಿನಲ್ಲಿ ಓದು, ಬರವಣಿಗೆಗಳನ್ನು ಕಲಿಸುವುದು ಉಪಯುಕ್ತವಾಗುತ್ತದೆ.
ಅಲ್ಲಿಯವರೆಗೆ ಮಕ್ಕಳು ಎಲ್ಲ ವಿಷಯಗಳನ್ನು ತಮ್ಮ ಮಾತೃಭಾಷೆ, ಪರಿಸರ ಭಾಷೆಯಲ್ಲಿ ಕಲಿತು
ನಿಜವಾದ ಅರ್ಥದ ವಿದ್ಯಾವಂತರಾಗಲು ಸಾಧ್ಯವಾಗುತ್ತದೆ.
ಈ ಬಗ್ಗೆ ತಜ್ಷರ ಸಲಹೆ ಪಡೆದು ಮಕ್ಕಳ ವಿದ್ಯೆ ಹಕ್ಕಿನ ರಕ್ಷಕನಾಗಿ ಪಾತ್ರವಹಿಸಬೇಕಾದ ಸರಕಾರವೇ
ಮಕ್ಕಳು ಅಸಹಾಯಕರಾಗಿ ಸಾವಿಗೆ ಶರಣಾಗಲು ಕಾರಣವಾಗಿರುವುದು ಅತ್ಯಂತ ಆತಂಕದ ಸಂಗತಿ.
ಮಕ್ಕಳ ಹಕ್ಕನ್ನು ಸರಕಾರವಾಗಲಿ, ತಂದೆತಾಯಿಗಳಾಗಲಿ , ಶಾಲಾವರ್ತಕರಾಗಲಿ ಕಸಿದೊಕೊಳ್ಳದಂತೆ
ಎಲ್ಲ ಪ್ರಜ್ಞಾವಂತರೂ ದನಿ ಎತ್ತಬೇಕಿದೆ.
ಬಾಳಿ ಬದುಕಬೇಕಾದ ಬಾಲಕ ದೇವಿಪ್ರಸಾದ್ ನ ದುರಂತವೇ ಈ ನಿಟ್ಟಿನಲ್ಲಿ ಕೊನೆಯದಾಗಲಿ.
ನಿಮ್ಮ ಕ್ರಿಯಾತ್ಮಕ ಪ್ರತಿಕ್ರಿಯೆಗೆ ಸ್ವಾಗತವಿದೆ.
ಪ್ರೀತಿಯಿಂದ
ಪಂಡಿತಾರಾಧ್ಯ |
ಮೀಡಿಯಾ ಮೇನಿಯಾ
ದೇವರುಗಳ ಹೈರಾರ್ಕಿ! ಅವರ ಹೆಸರಲ್ಲಿ ಜ್ಯೋತಿಷಿಗಳ ದರ್ಬಾರು
|
ಇತ್ತೀಚೆಗೆ ಯಾವುದೇ ಟಿವಿ ಚಾನಲ್ಲುಗಳನ್ನು ಬೆಳಗಿನ ಜಾವ ನೋಡಿದರೆ ಅಲ್ಲಿ ರಾರಾಜಿಸುವುದು ರಾಜಕಾರಣಿಗಳಲ್ಲ, ಸಿನಿಮಾ ನಟ ನಟಿಯರಲ್ಲ. ಬದಲಾಗಿ ನಾನಾ ತರಹದ ವೇಷಭೂಷಣಗಳಿಂದ ಕಂಗೊಳಿಸುವಂತಹ, ಹಣೆಗೆ ಅಡ್ಡನಾಮ, ಉದ್ದುದ್ದ ನಾಮ (ಕೆಲವರದ್ದು ಯು ಆಕಾರದ ನಾಮವಾದರೆ, ಕೆಲವರದ್ದು ವಿ ನಾಮ, ಇನ್ನು ಕೆಲವರದ್ದು ಸೂರ್ಯ ನಾಮ!) ಇಂಥಹ ತರಾತರದ ನಾಮಗಳಿಂದ ಅಲಂಕೃತವಾದ ವಿಧ ವಿಧದ ಸೈಜುಗಳ ದೇಹದ ಜ್ಯೋತಿಷಿಗಳು.
ಇಂತಹ ಜ್ಯೋತಿಷಿಗಳನ್ನು ಕೂರಿಸಿಕೊಂಡು ಅವರಿಂದ ರಾಜ್ಯದ ಬಿಕ್ಕಟ್ಟು, ಜನತೆಯ ಭವಿಷ್ಯದ ಬಗ್ಗೆ ನಮ್ಮ ಟಿವಿಗಳಲ್ಲಿ ನಡೆಯುವಂತಹ ಕಾರ್ಯಕ್ರಮದ ಬಗ್ಗೆ ಆಯಾಮದ ಓದುಗರಿಗಾಗಿ ಕೆಲವೊಂದು ತುಣುಕುಗಳನ್ನು ನೀಡುತ್ತಿದ್ದೇವೆ. ಇದನ್ನು ಓದಿ ನೀವೇನಾದರೂ ನಿಮ್ಮ ಭವಿಷ್ಯ ಸೊಟ್ಟಗಿದೆಯೆದು ತಿಳಿದು ಅದನ್ನು ನೆಟ್ಟಗೆ ಮಾಡಿಕೊಳ್ಳಲು ಈ ಜ್ಯೋತಿಷಿಗಳ ಹಿಂದೆ ಬಿದ್ದರೆ ಅದಕ್ಕೆ ನಾವು ಜವಾಬ್ದಾರರಲ್ಲವೆಂದು ಮುಂಚಿತವಾಗಿಯೇ ಹೇಳುತ್ತಾ...ಇದೋ ಜ್ಯೋತಿಷಿಗಳ ಮಹಾಪುರಾಣವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಓದುವಂತವರಾಗಿ...
ಕನ್ನಡದ ಎಲ್ಲಾ ಟಿವಿ ಚಾನಲ್ಲುಗಳಲ್ಲೂ ಜ್ಯೋತಿಷಿಗಳ ಕಾರ್ಯಕ್ರಮ ಪ್ರಸಾರವಾಗುತ್ತಿರುವುದರಿಂದ ಇಲ್ಲಿ ನಾವು ಯಾವುದೇ ಟಿವಿಯ ಹೆಸರು ಹೇಳುವ ಪ್ರಮೇಯವೇ ಇಲ್ಲ. ಹೀಗೊಂದು ಚಾನಲ್ಲಿನಲ್ಲಿ ಜ್ಯೋತಿಷಿಗಳ ಕಾರ್ಯಕ್ರಮವೊಂದು ಶುರುವಾಗುತ್ತೆ. ಅದರಲ್ಲಿ ಭಾಗವಹಿಸಿದ್ದವರು ಹಣೆಗೆ ಅಡ್ಡಪಟ್ಟೆ ಹೊಡೆದಿದ್ದ ಗಡ್ಡಬಿಟ್ಟ ಜ್ಯೋತಿಷಿ, ಎರಡವನೆಯವ ಮೂರು ನಾಮವನ್ನು ’ಯು’ ಆಕಾರದಲ್ಲಿ ಬಳಿದುಕೊಂಡಿದ್ದ ಜ್ಯೋತಿಷಿ, ಮತ್ತೊಬ್ಬ ಅದೇ ಮೂರು ನಾಮವನ್ನು ವಿ ಆಕಾರದಲ್ಲಿ ಬಳಿದುಕೊಂಡಿದ್ದ ಜ್ಯೋತಿಷಿ. ಹೀಗೆ ಮೂರೂ ತರದ ನಾಮದವರನ್ನು ತನ್ನ ಮುಂದೆ ಕೂರಿಸಿಕೊಂಡ ನಿರೂಪಕಿ ಕಾರ್ಯಕ್ರಮವನ್ನು ಆರಂಭಿಸುತ್ತಾರೆ. ಇದು ನೇರಪ್ರಸಾರದ ಕಾರ್ಯಕ್ರಮವಾದ್ದರಿಂದ ಆಗಾಗ್ಗೆ ಪ್ರೇಕ್ಷಕರೂ ಫೋನು ಮಾಡಿ ತಮ್ಮ ಸಂಕಷ್ಟಗಳನ್ನು ಈ ಜ್ಯೋತಿಷಿಗಳ ಮುಂದಿಟ್ಟು ಪರಿಹಾರಕ್ಕಾಗಿ ಮೊರೆಯಿಡುವುದೂ ನಡೆಯುತ್ತದೆ.
ನಿರೂಪಕಿ: ’ಪ್ರಿಯ ವೀಕ್ಷಕರೇ, ನಿಮಗಾಗಿ ನಿಮ್ಮ ಎಲ್ಲಾ ಕಷ್ಟಗಳನ್ನೂ ಪರಿಹರಿಸುವ ಸಲುವಾಗಿ ನಾವೀ ಅನನ್ಯ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದೇವೆ. ಇಂದಿನ ನಮ್ಮ ಕಾರ್ಯಕ್ರಮಕ್ಕೆ ನಾಡಿನ ಪ್ರಖ್ಯಾತರಾದ, ಬಹು ಬೇಡಿಕೆಯಲ್ಲಿರುವ ಜ್ಯೋತಿಷಿಗಳು ಆಗಮಿಸಿದ್ದಾರೆ. ಬನ್ನಿ ಅವರನ್ನು ನಿಮಗೀಗ ಪರಿಚಯಿಸಿಕೊಡುತ್ತೇನೆ. ಅಡ್ಡ ಪಟ್ಟೆಯ.....ರವರೇ, ಯು ನಾಮದ.....ರವರೇ ಹಾಗೂ ವಿ ನಾಮದ.....ರವರೇ...ನಿಮಗೆಲ್ಲರಿಗೂ ನಮ್ಮ ಕಾರ್ಯಕ್ರಮಕ್ಕೆ ಸ್ವಾಗತ’. ಹಾಗೆಂದ ಕೂಡಲೇ ಮೂವರೂ ತಮ್ಮ ನಾಮಗಳಿಗೆ ತಕ್ಕಂತೆ ವಿಶೇಷ ಭಂಗಿಯಲ್ಲಿ ಕೂತಲ್ಲೇ ಕುಲುಕಾಡಿ ನಮಸ್ಕರಿಸಿದರು.
ಮಾತನ್ನು ಮುಂದುವರೆಸಿದ ನಿರೂಪಕಿ, ’ಬನ್ನಿ, ಮೊದಲು ಅಡ್ಡಪಟ್ಟೆಯವರನ್ನು ಮಾತಾಡಿಸೋಣ. ಅಡ್ಡಪಟ್ಟೆಯವರೇ, ನೀವು ರಾಜ್ಯದಲ್ಲಿ ಉಂಟಾಗಿರುವ ಜಲಪ್ರಳಯದ ಬಗ್ಗೆ ಏನನ್ನು ಹೇಳಬಯಸುತ್ತೀರಿ’ ಎಂದರು.
ಅಡ್ಡಪಟ್ಟೆಯ ಜ್ಯೋತಿಷಿ ಮೊದಲು ಶಿವನಾಮ ಸ್ಮರಣೆಯನ್ನು ಒಂದೆರಡು ನಿಮಿಷ ಮಾಡಿ ಮುಗಿಸಿ, ನಂತರ: ’ನೊಡೀ ಇವರೇ ಇದು ಕೈಲಾಸದಿಂದ ಪರಮೇಶ್ವರ ಮುನಿಸಿಕೊಂಡು ಮಾಡುತ್ತಿರುವ ಪ್ರವಾಹ. ಜನ ಇತ್ತೀಚೆಗೆ ಶಿವನಾಮ ಸ್ಮರಣೆಯಲ್ಲಿ ಸರಿಯಾಗಿ ಮಗ್ನರಾಗದೇ ತಮ್ಮದೇ ರೀತಿಯ ಮೋಜುಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಅಂತಹ ಜನರಿಗೆ ಸರಿಯಾಗಿ ಪಾಠ ಕಲಿಸಬೇಕೆಂಬ ಉದ್ದೇಶದಿಂದಲೇ ಪರಮೇಶ್ವರ ಕಾಲ ಕಾಲದಿಂದಲೂ ಈ ರೀತಿಯ ಪರೀಕ್ಷೆಗಳನ್ನು ಮಾಡುತ್ತಿರುತ್ತಾನೆ. ಇದರಿಂದ ಕಷ್ಟಕ್ಕೆ ಒಳಗಾದವರು ನನ್ನ ಬಳಿ ಬಂದರೆ ಅದಕ್ಕೆ ಸೂಕ್ತವಾದ ದರದಲ್ಲಿ ಸೂಕ್ತವಾದ ಪರಿಹಾರವನ್ನು ನೀಡುತ್ತೇನೆ’ ಎಂದು ತನ್ನ ಬ್ಯುಸಿನೆಸ್ ಕುದುರಿಸಿಕೊಳ್ಳುವುದನ್ನು ಶುರುಹಚ್ಚಿಕೊಳ್ಳುತ್ತಲೇ,
ಆತನ ಮಾತನ್ನು ತುಂಡರಿಸಿದ ನಿರೂಪಕಿ: ’ಈಗ ನಮ್ಮ ಮತ್ತೊಬ್ಬ ಜ್ಯೋತಿಷಿಗಳಾದ ಯು ನಾಮದವರು ಈ ಬಗ್ಗೆ ಏನು ಹೇಳ್ತಾರೆ ಕೇಳೋಣ ಬನ್ನಿ’ ಎಂದರು.
ಯು ನಾಮದ ಜ್ಯೋತಿಷಿ ಅಡ್ಡಪಟ್ಟೆಯವ ಶಿವನಾಮಸ್ಮರಣೆ ಮಾಡಿದ್ದರಿಂದ ತಾನು ಇನ್ನೂ ಹೆಚ್ಚೇ ಟೈಮ್ ತೆಗೆದುಕೊಂಡು ನಿಮಿಷ ಹರಿನಾಮ ಸ್ಮರಣೆಯನ್ನು ಮಾಡಿ: ’ನೊಡೀ ನಮ್ಮ ಹರಿ ದುಷ್ಟ ಸಂಹಾರಕ, ಶಿಷ್ಟ ರಕ್ಷಕ. ಕಾಲಕಾಲಕ್ಕೆ ದುಷ್ಟರಿಂದ ಜಗತ್ತನ್ನು ರಕ್ಷಿಸುತ್ತಾ ನಮ್ಮನ್ನೆಲ್ಲಾ ಕಾಪಾಡಿದ್ದಾನೆ. ಇಂಥಾ ಪರಮಾತ್ಮನ ಕಡೆಗೆ ಇತ್ತೀಚೆಗೆ ಜನರ ಗಮನ ಅಲ್ಪವಾಗಿದೆ. ಭಕ್ತರು ಭಗವಂತನ ನಾಮಸ್ಮರಣೆ ಮಾಡುತ್ತಿಲ್ಲ. ಅವರು ವಾಸನೆಳಲ್ಲಿ, ಭೋಗಗಳಲ್ಲಿ ಮುಳುಗಿ ಹೋಗಿದ್ದಾರೆ, ಲೋಲುಪರಾಗುತ್ತಿದ್ದಾರೆ. ಅದಕ್ಕಾಗೇ ಆತ ಕುಪಿತನಾಗಿದ್ದಾನೆ. ಜನರ ದುರ್ಬುದ್ಧಿ ಅನಾಚಾರಗಳಿಗೆ ಶಿಕ್ಷೆಯಾಗಿ, ಜನ ತನ್ನನ್ನು ಕಾಲಕಾಲಕ್ಕೆ ನೆನೆಯಬೇಕೆಂದೇ ಈ ಪ್ರಳಯಗಳನ್ನು ಸೃಷ್ಟಿ ಮಾಡುತ್ತಾನೆ, ಜನ ಈ ಪ್ರಳಯಕ್ಕೆ ಹೆದರಿದ್ದಾರೆ. ಹಾಗಂತ ನಾವು ಸುಮ್ಮನೇ ಕುಳಿತಿಲ್ಲ. ಹರಿಯ ಕೋಪವನ್ನು ತಣಿಸಿ, ಅವನನ್ನು ಶಾಂತಮಾಡಲು ಹರಿಕಥಾಮೃತ ಸಾರ ಇತ್ಯಾದಿ ಪುರಾತನ, ಪುರಾಣ ಪುಣ್ಯ ವೇದ ಶಾಸ್ತ್ರಗಳಿಂದ ಹುಡುಕಿ ಹುಡುಕಿ ಪರಿಹಾರವನ್ನು ಕಂಡುಹಿಡಿದಿದ್ದೀವಿ’ ಎಂದವರು ಅಡ್ಡಪಟ್ಟೆಯ ಜ್ಯೋತಿಷಿ ತನ್ನ ವ್ಯವಹಾರ ಕುದುರಿಸಿಕೊಳ್ಳುವ ಮಾತಾಡಿದ್ದು ನೆನಪಾಗಿ ’ಇದರಿಂದ ತೊಂದರೆಗೊಳಗಾಗಿರುವ ಜನ ನಮ್ಮ ಬಳಿ ಬಂದಲ್ಲಿ ಅವರವರ ಭಾವಕ್ಕೆ, ಅವರಿಗೆ ಹಣಕಾಸಿನ ಹೆಚ್ಚು ಸ್ರಮವಾಗದಂತೆ ಪರಿಹಾರವನ್ನು ನೀಡುತ್ತೇನೆ’ ಎಂದರು.
ನಿರೂಪಕಿ: ’ಆಯ್ತು, ಅಯ್ತು, ಬನ್ನಿ ನಮ್ಮ ಮೂರನೆಯ ಅತಿಥಿಗಳಾಗಿ ಬಂದಿರುವ ವಿ ನಾಮದವರು ಈ ಪ್ರಳಯದ ಬಗ್ಗೆ ಏನಂತರೆ ಕೇಳೋಣ, ಎಂದು ವಿ ನಾಮದ ಜ್ಯೋತಿಷಿಯತ್ತ ನೋಡಿದರು.
ಇಷ್ಟು ಹೊತ್ತೂ ಎಲ್ಲರನ್ನೂ ಕೇಳುತ್ತಾ ಮುದುರಿ ಕುಳಿತಿದ್ದ ವಿ ನಾಮವಿಟ್ಟುಕೊಂಡಿದ್ದ ಜ್ಯೋತಿಷಿ ಸಡನ್ನಾಗಿ ಅಟೆನ್ಷನ್ ಭಂಗಿಯಲ್ಲಿ ನೆಟ್ಟಗೆ ಕೂತವ, ಈ ಮೊದಲು ಮಾತಾಡಿದ ಅಡ್ಡಪಟ್ಟೆ ಹಾಗೂ ಯು ನಾಮದ ಜ್ಯೋತಿಷಿಗಳು ಒಬ್ಬ ಶಿವನನ್ನೂ ಮತ್ತೊಬ್ಬ ಹರಿಯನ್ನೂ ಪ್ರಾರ್ಥಿಸಿದ್ದು ನೆನಪಾಗಿ ಎರಡು ನಿಮಿಷ ಹರಿಹರ ಇಬ್ಬರನ್ನೂ ಒಟ್ಟಿಗೇ ಪ್ರಾರ್ಥನೆ ಮಾಡಿ, ಇನ್ನೂ ತನ್ನ ಸಪೋರ್ಟಿಗಿರಲೆಂದು ಬ್ರಹ್ಮನನ್ನೂ ಒಂದು ನಿಮಿಷ ಪ್ರಾರ್ಥಿಸಿ: ’ಇದು ನಮ್ಮ ಸೃಷ್ಟಿ-ಪೋಷಣೆಗೆ ಕಾರಣರಾದ ತ್ರಿಮೂರ್ತಿಗಳಿಗೆ, ವಾಯು, ವರುಣ, ಅಗ್ನಿ ದೇವರಿಗೆ ಭೂಲೋಕದ ಜನತೆಯ ಮೇಲೆ ಹುಟ್ಟಿರುವ ಸಿಟ್ಟಿನ ಪರಿಣಾಮ, ಹಿಂದೆಲ್ಲಾ ಕಾಲಕಾಲಕ್ಕೆ ಮಳೆ, ಬೆಳೆ ಸರಿಯಾಗಿ ಆಗುವಂತೆ ಅವರನ್ನು ಸಂತೃಪ್ತಿ ಪಡಿಸುತ್ತಾ, ನಾವು ಶಾಸ್ತ್ರೋಕ್ತವಾಗಿ ಜನರಿಗಾಗಿ ಹೋಮ, ಹವನಗಳನ್ನು ಮಾಡಿಕೊಡುತ್ತಿದ್ದೆವು’ ಎಂದವರೇ ಒಂದು ಕ್ಷಣ ಅಡ್ಡಪಟ್ಟೆ ಹಾಗೂ ಯು ನಾಮದವರತ್ತ ಕಣ್ಣಾಡಿಸಿ, ’ಈಗ ನಕಲಿ ಜ್ಯೋತಿಷಿ, ಪೂಜೆ ಮಾಡುವವರು ಹೆಚ್ಚಾಗಿರುವುದರಿಂದ ಹೋಮ ಹವನ ಶಾಂತಿಗಳನ್ನು ಶಾಸ್ತ್ರೋಕ್ತವಾಗಿ ಅಚ್ಚುಕಟ್ಟಾಗಿ ಮಾಡಿಕೊಡುವವರು ಕಡಿಮೆಯಾಗುತ್ತಿದ್ದಾರೆ. ಒಂದು ದಿನ ನಡೆಯಬೇಕಾದ ಶಾಂತಿ, ಹೋಮಗಳೆಲ್ಲಾ ಈಗ ಒಂದು ಗಂಟೆಯಿರಲಿ, ಹತ್ತು ನಿಮಿಷಕ್ಕೂ ಮುಗಿದುಬಿಡುತ್ತವೆ. ಇದು ದೇವಾದಿ ದೇವರನ್ನು ಹೇಗೆ ತೃಪ್ತಿ ಪಡಿಸಲು ಸಾಧ್ಯ? ವಾಸ್ತವವಾಗಿ ಕೆಲವರು ಮಾಡುತ್ತಿರುವ ಪೂಜೆಗಳು ಸಲ್ಲಬೇಕಾದ ದೇವರಿಗೆ ಸಲ್ಲುತ್ತಲೇ ಇಲ್ಲ. ಎಲ್ಲದ್ದಕ್ಕೂ ಕ್ರಮ ಇರಬೇಕಲ್ಲವೇ? ಅದೇ ಇಲ್ಲದಿದ್ದರೆ! ವಿಧಿ ವಿಧಾನಗಳು ಶಾಸ್ತ್ರೋಕ್ತವಾಗಿರದಿದ್ದರೆ ಅದನ್ನು ಮಾಡಿಸುವುದೂ ಒಂದು ಮಹಾಪಾಪವೇ. ಈ ರೀತಿಯ ಹಲವಾರು ಕಾರಣಗಳಿಂದ ಜನಕ್ಕೆ ಸೂಕ್ತ ಪರಿಹಾರ ಸಿಗುತ್ತಿಲ್ಲ...ನಾನು ಈ ಸಮಸ್ಯೆಯನ್ನು ಅಧ್ಯಯನ ಮಾಡಿದ್ದೇನೆ, ಅದಕ್ಕೆ ಒಂದು ಬ್ರಹ್ಮ ವಿದ್ಯೆಯಂತಹ ಪರಿಣಾಮಕಾರಿಯಾದ ಮಾರ್ಗೋಪಾಯವನ್ನೂ ಕಂಡುಹಿಡಿದಿದ್ದೇನೆ...’ ಎಂದು ಮುಂಚಿನರಿಬ್ಬರೂ ತಮ್ಮ ವ್ಯಾಪಾರದ ಬಗ್ಗೆ ಹೇಳಿದ್ದು ನೆನಪಾಗಿ ಅವರಿಗಿಂತಲೂ ಕಡಿಮೆ ದರದಲ್ಲಿ ಪರಿಹಾರ ನೀಡುತ್ತೇನೆಂದರೆ ಜನ ನನ್ನ ಬಳಿಯೇ ಬರುವುದು ಖಾತ್ರಿಯೆಂದರಿತು ’ಯಾವ ಜನ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಕಷ್ಟಗಳಿಗೆ ಈಡಾಗಿದ್ದರೋ ಅವರು ನನ್ನ ಬಳಿ ಬಂದರೆ ಅವರಿಗೆ ರಿಯಾಯಿತಿ ದರದಲ್ಲಿ ಪರಿಹಾರವನ್ನು ಮಾಡಿಕೊಡುತ್ತೇನೆ’ ಎಂದರು.
ಈತನೂ ತನ್ನ ವ್ಯಾಪಾರದ ಬಗ್ಗೆಯೇ ಮಾತಾಡಲು ಶುರು ಮಾಡಿದನಲ್ಲಾ ಎಂದು ಕಸಿವಿಸಿಯಾದ ನಿರೂಪಕಿ : ’ಸರಿ, ಸರಿ, ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ ರಾಜ್ಯಕ್ಕೆ ಎದುರಾಗಿರುವ ಬಿಕ್ಕಟ್ಟನ್ನು ಯಾವ ರೀತಿ ಬಗೆಹರಿಸಬೇಕೆಂಬುದು. ನಮ್ಮ ರಾಜಕಾರಣಿಗಳು ಜನರ ಕಷ್ಟವನ್ನು ಬಗೆಹರಿಸಲಾಗದೇ ತಮ್ಮ ತಮ್ಮ ಕಷ್ಟಗಳನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಜ್ಯೋತಿಷಿಗಳ ಬೆನ್ನು ಹತ್ತಿದ್ದಾರೆ. ಜ್ಯೋತಿಷಿಗಳಿಂದಲೇ ಎಲ್ಲ ಪರಿಹಾರವಾಗುವುದು ನಿಜವೇ? ಇದರ ಬಗ್ಗೆ ಅಡ್ಡಪಟ್ಟೆಯವರು ಏನು ಹೇಳ್ತಾರೆ ಕೇಳೋಣ ಬನ್ನಿ’ ಎಂದು ಆತನತ್ತ ತಿರುಗಿದರು.
ಅಡ್ಡಪಟ್ಟೆಯವ: ’ಓಂ ನಮಃ ಶಿವಾಯ ಎಂದು ’ನೋಡೀ ಇವರೇ, ಇದು ಜಗತ್ತಿನ ಅಂತ್ಯವನ್ನು ಸೂಚಿಸುತ್ತದೆ. ಶಿವ ಇಡೀ ಜಗತ್ತಿನ ಮೇಲೆ ಮುನಿಸಿಕೊಂಡಿದ್ದಾನೆ, ೨೦೧೨ ನೆಯ ಇಸವಿಗೆ ಈ ಜಗತ್ತಿನ ಅಂತ್ಯವಾಗುವುದು ಖಚಿತ. ಇದು ಕಲಿಯುಗದ ಖಂಡಿತ ಅಂತ್ಯದ ಸೂಚನೆ. ಪರಮೇಶ್ವರನಿಗೆ ಕೋಪ ಬಂದರೆ ಪ್ರಪಂಚ ಉಳಿಯುವುದೇ? ಎಲ್ಲೆಲ್ಲೂ ರುದ್ರ ತಾಂಡವ. ಜನ ಈಶ್ವರನನ್ನು ಭಕ್ತಿ ಭಾವುಕತೆಯಿಂದ ಪ್ರಾರ್ಥಿಸಿ, ಆತನಿಗೆ ಸೂಕ್ತ ರೀತಿಯಲ್ಲಿ ನಾವು ಹೇಳುವ ಹಾಗೆ ಪೂಜೆ ಪುರಸ್ಕಾರಗಳನ್ನು, ನಮ್ಮ ಕೆಲವು ನಿಯಮಗಳನ್ನು ಪಾಲಿಸಿದಲ್ಲಿ ಪ್ರಪಂಚಕ್ಕೆ ಶಾಂತಿ ತರಬಹುದು. ಈ ಪ್ರಳಯದಿಂದ ಅವರನ್ನು ಪಾರುಮಾಡಬಹುದು’. ಎಂದವರೇ ವಿ ನಾಮದವನತ್ತ ನೋಡಿ ’ಕೆಲವರು ಎಲ್ಲಾ ದೇವರುಗಳನ್ನೂ ಮಿಕ್ಸ್ ಮಾಡಿ ಪ್ರಾರ್ಥನೆ ಮಾಡಿಬಿಡುತ್ತಾರೆ. ಆಗ ಆ ದೇವರುಗಳು ಯಾರೂ ಸೀರಿಯಸ್ಸಾಗಿ ಅವರ ಪ್ರಾರ್ಥನೆಯನ್ನು ಪರಿಗಣಿಸುವುದಿಲ್ಲ. ಆ ದೇವರು ಸ್ಪಂದಿಸಲಿ, ಈ ದೇವರು ಸ್ಪಂದಿಸಲಿ ಎಂದು ತಮ್ಮನ್ನು ಏಕಾಗ್ರ ಭಕ್ತಿಭಾವದಿಂದ ಪೂಜಿಸುವವರ ಕಡೆಗೇ ಒಲಿಯುತ್ತಾರೆ. ಏಕೆಂದರೆ ಹಾಗೆ ಪೂಜಿಸುವವರಿಗೆ ಪರಮೇಶ್ವರನೇ ಸರ್ವಸ್ವ ನೋಡಿ... ’
ಆಗ ತಕ್ಷಣ ಯು ನಾಮದವ: ಹರಿ ಓಂ ಎಂದು ಜೋರಾಗಿ ಹೇಳಿ, ’ನೊಡೀ ಯಾವ ದೇವರು ಪವರ್ ಫ಼ುಲ್ ಆಗಿರ್ತಾನೆ ಎಂಬುದನ್ನು ಮೊದಲು ಜನ ತಿಳೀಬೇಕು, ಸುಮ್ಮ ಸುಮ್ಮನೇ ಯಾವಯಾವ ದೇವರನ್ನೋ ಓಲೈಸಿದರೆ ಏನನ್ನೂ ಗಳಿಸಲಾರರು. ಪ್ರಳಯ ಅದೂ, ಇದೂ ಸಂಧರ್ಭವನ್ನು ನಿಭಾಯಿಸುವುದರಲ್ಲಿ ಚಾಣಾಕ್ಷನೆಂದರೆ ಹರಿ. ಆತ ಯಾರನ್ನೂ ಮಣಿಸಬಲ್ಲ. ನೀವು ಪುರಾಣಗಳಲ್ಲೆಲ್ಲಾ ನೋಡಿಲ್ಲವೇ, ಎಂತೆಂತಹ ಸಂಕ್ರಮಣ ಸನ್ನಿವೇಶಗಳನ್ನು, ಯುಧ್ಧಗಳನ್ನೂ ನಮ್ಮ ಹರಿ ಗೆಲ್ಲಿಸಿಕೊಟ್ಟಿದ್ದಾನೆ. ಅವನ ಜಾಣತನ-ಯುಕ್ತಿಗೆ ಸರಿ ಸಾಟಿಯೇ ಇಲ್ಲ. ಯಾವತ್ತೂ ಗೆಲ್ಲುವ ಕುದುರೆಯನ್ನೇ ಜನ ನಂಬಬೇಕು, ಈಗ ರೇಸ್ ಕೋರ್ಸ್ ನಲ್ಲಿ ನೋಡಿ ಜನ ಫ಼ೇವರೇಟ್ ಆಗಿರುವ, ಬಲವಾಗಿರುವ ಕುದುರೆಯ ಮೇಲೆ ತಾನೇ ಹಣ ಕಟ್ಟೋದು?’ ಎಂದು ಸ್ವಲ್ಪ ನಿಶ್ಯಕ್ತನಂತಿದ್ದ ವಿ ನಾಮದವನತ್ತ ಒಮ್ಮೆ ನೋಡಿ ’ಎಲ್ಲಾ ದೇವರನ್ನೂ ಒಟ್ಟೊಟ್ಟಿಗೇ ಪೂಜಿಸಿದಲ್ಲಿ ಸಿಗುವ ಪರಿಹಾರವೂ ಮಿಕ್ಸ್ ಆಗಿ ಬಿಡುತ್ತದೆ...’ ಎಂದು ಸುಮ್ಮನಾದರು. ಹರಿಯ ಮೊರೆಗೆ ಹೋದರೇ ಬಚಾವಾಗುತ್ತೀರಿ, ನಾನೇ ಹರಿಯಿಂದ ಅಪಾಯಿಂಟ್ ಆದ ಡೈರೆಕ್ಟ್ ಏಜೆಂಟ್ ಎನ್ನುವಂತೆ ಧೀಮಂತಿಕೆಯ ಪೋಸು ಕೊಟ್ಟು ಕುಳಿತರು.
ಇವರಿಬ್ಬರೂ ಸಿಕ್ಕಾಪಟ್ಟೆ ಮಾತಾಡುತ್ತಿದ್ದಾರೆ. ನನ್ನ ಏರ್ ಟೈಮ್ ಕಡಿಮೆಯಾಗುತ್ತಿದೆ ಎನಿಸಿ, ವಿ ನಾಮದವ: ’ನೋಡಿ ಇವ್ರೇ, ನಿಮಗೆ ಯಾವ ಖಾಯಿಲೆ ಬಂದರೆ ಆ ಖಾಯಿಲೆಯನ್ನು ವಾಸಿ ಮಾಡುವ ಡಾಕ್ಟರ್ ಬಳಿಯೇ ಹೋಗುತ್ತೀರಲ್ಲವೇ, ನಿಮಗೆ ಚರ್ಮದ ಖಾಯಿಲೆ ಬಂದರೆ ಸ್ಕಿನ್ ಸ್ಪೆಷಲಿಸ್ಟ್ ಬಳಿ ಹೋಗದೆ ಇ ಎನ್ ಟಿ ಡಾಕ್ಟರ ಬಳಿ ಹೋಗ್ತೀರ್ಯೇ? ಇಲ್ಲ! ಹಾಗೆಯೇ ದೇವರುಗಳೂ ಸಹ, ಒಂದೊಂದು ತೊಂದರೆಯ ಡಿಪಾರ್ಟ್ ಮೆಂಟ್ ಒಬ್ಬೊಬ್ಬ ದೇವರ ಬಳಿ ಇರುತ್ತದೆ.'
'...ಉದಾಹರಣೆಗೆ ನೋಡಿ, ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬನೇ ರಾಜ್ಯವಾಳಲು ಸಾಧ್ಯವೇ? ಅದಕ್ಕಾಗಿ ಬೇರೆ ಬೇರೆ ಇಲಾಖೆಗಳಿಗೆ ಒಬ್ಬೊಬ್ಬ ಮಂತ್ರಿಯಿರುತ್ತಾನೆ ಅಲ್ಲವೇ...ಎಲ್ಲವನ್ನೂ ಒಬ್ಬನೇ ನಿಭಾಯಿಸುವಂತಿದ್ದಲ್ಲಿ ಮುಖ್ಯಮಂತ್ರಿಗೆ ಬೇರೆ ಮಂತ್ರಿಗಳು ಏಕೆ ಬೇಕಿತ್ತು? ಅಲ್ವಾ, ಹಾಗೆಯೇ ದೇವರುಗಳೂ ಸಹ ತಮ್ಮ ತಮ್ಮಲ್ಲೇ ಖಾತೆಗಳನ್ನು ಹಂಚಿಕೊಂಡಿರುತ್ತಾರೆ. ಒಬ್ಬ ದೇವನ ಖಾತೆಗೆ ಬರುವ ತೊಂದರೆಯನ್ನು ಇನ್ನೊಬ್ಬ ದೇವರು ಬಗೆಹರಿಸಲಾರ. ಒಂದು ವೇಳೆ ಆತನೇನಾದರೂ ಮತ್ತೊಬ್ಬನ ಖಾತೆಗೆ ಬರುವ ಜನರ ಸಮಸ್ಯೆಯನ್ನು ಬಗೆಹರಿಸಲು ಮುಂದಾದರೆ ಆ ಖಾತೆಯನ್ನು ಹೊಂದಿರುವ ದೇವರು ಸುಮ್ಮನಿರುವುದಿಲ್ಲ. ಇಲ್ಲಿ ನಮ್ಮ ಮಂತ್ರಿಗಳಲ್ಲೇ ತಮ್ಮ ಖಾತೆಗಳಲ್ಲಿ ಇತರರು ಮೂಗು ತೂರಿಸಿದಲ್ಲಿ ಹಾದಿ ರಂಪ ಬೀದಿ ರಂಪ ಮಾಡಿಬಿಡುತ್ತಾರೆ. ಇನ್ನು ಸರ್ವ ಶಕ್ತರಾದ ದೇವರುಗಳು ಸುಮ್ಮನಿರಲು ಸಾಧ್ಯವೇ?...'
'ಹಾಗಾದರೆ ನಮ್ಮಲ್ಲಿ ಮೂರು ಸಹಸ್ರ ದೇವಾನುದೇವತೆಗಳು ಏಕಿರಬೇಕು ಹೇಳಿ? ಎಂದು ತನ್ನ ವಾಕ್ಚಾತುರ್ಯಕ್ಕೆ ತಾನೇ ಮೆಚ್ಚಿಕೊಳ್ಳುತ್ತಾ ಆಡ್ಡಪಟ್ಟೆ, ಯು ನಾಮದರತ್ತ ಒಮ್ಮೆ ಗುರಾಯಿಸಿ ’ನಾವು ಎಲ್ಲಾ ಸಮಸ್ಯೆಗಳನ್ನೂ ಒಬ್ಬನೇ ದೇವರಿಗೆ ಒಪ್ಪಿಸುವುದು ಒಳ್ಳೆಯದಲ್ಲ, ಹಾಗೆ ಮಾಡಿದಲ್ಲಿ ನಾವು ದೇವರು ದೇವರುಗಳ ನಡುವೆ ಜಗಳ ತಂದಿಟ್ಟ ಹಾಗೆ ಆಗುತ್ತದೆ, ನಮ್ಮ ಹಿಂದು ಧರ್ಮದ ಪ್ರತಿಯೊಬ್ಬ ದೇವದೇವತೆಯೂ ಒಂದೊಂದು ರೀತಿಯಲ್ಲಿ ವಿಶಿಷ್ಟವಾದವರು. ಅವರಿಗೆ ಸಲ್ಲಬೇಕಾದ ಭಕ್ತಿ, ಪೂಜೆ, ಪುರಸ್ಕಾರ ಅವರಿಗೇ ಸಲ್ಲಬೇಕು. ಇದರಿಂದಲೇ ನಾನು ಹೇಳುತ್ತಿರುವುದು...ನನ್ನ ಅಧ್ಯಯನದಿಂದ ನಾನು ಪ್ರತಿಯೊಬ್ಬ ದೇವ-ದೇವತೆಗೂ ಪ್ರೀತಿಪಾತ್ರವಾಗುವಂತೆ ಅತ್ಯಂತ ಉನ್ನತ ಪೂಜಾ ವಿಧಾನವೊಂದನ್ನು ಕಂಡುಹಿಡಿದಿದ್ದೇನೆ. ನನಗೆ ಆಬಗ್ಗೆ ದೈವ ಸಾಕ್ಷಾತ್ಕಾರವೂ ಮೊನ್ನೆ ಆಗಿದೆ....’ ಮಾತಾಡುತ್ತಾ ವಿ ನಾಮದವರು ಸ್ವಲ್ಪ ಎಮೋಷನಲ್ ಆದರು...
ಇವನಿಗೆ ಜಾಸ್ತಿ ಹೊತ್ತು ಮಾತನಾಡಲು ಅವಕಾಶವನ್ನು ಕೊಟ್ಟಿದ್ದಕ್ಕೆ ಸಿಟ್ಟಿಗೆದ್ದ ಅಡ್ಡಪಟ್ಟೆ ಹಾಗೂ ಯು ನಾಮದ ಜ್ಯೋತಿಷಿಗಳು ನಿರೂಪಕಿಯ ವಿರುದ್ದ ತಿರುಗಿ ಬಿದ್ದರು. ಅವರ ಕೋಪಾಕ್ಕೆ ಕೊಂಚ ಹೆದರಿದಂತೆ ಕಂಡು ಬಂದ ನಿರೂಪಕಿ ಇದೆಂಥಾ ಕೆಲಸವಾಗಿ ಹೋಯ್ತು, ಪ್ರಳಯದ ಬಗ್ಗೆ ಮಾತನಾಡಲು ಕರೆದ್ರೆ ಇವರೆಲ್ಲಾ ದೇವ ದೇವರುಗಳ ಮದ್ಯೆ ಗಲಾಟೆ ಶುರುವಿಟ್ಟುಕೊಂಡರಲ್ಲಾ ಎಂದುಕೊಂಡು ತಾನು ಯಾರ ಪರವಹಿಸಿ ಮಾತನಾಡಿದರೂ ಇನ್ನೊಬ್ಬ ದೇವರು ಮುನಿಸಿಕೊಳ್ಳುವ ಹಾಗಾಯ್ತಲ್ಲಾ...ಈ ಜ್ಯೋತಿಷಿಗಳು ನನ್ನನ್ನು ಇದೊಳ್ಳೇ ಪೀಕಲಾಟಕ್ಕೆ ಸಿಲುಕಿಸಿದರಲ್ಲಾ ಎಂದು ಗಾಬರಿಯಾಗಿ ಏನೂ ಮಾತನಾಡಲು ತೋಚದೇ ’ಈಗ ಒಂದು ದೊಡ್ದ ಬ್ರೇಕ್’ ಅಂದು ಬಿಟ್ಟರು.
ಬ್ರೇಕ್ ನ ಸಮಯದಲ್ಲಿ ಅಡ್ಡಪಟ್ಟೆ, ಯು ನಾಮದವ ಹಾಗೂ ವಿ ನಾಮದವ ಮೂವರೂ ಪರಸ್ಪರ ವಾಗ್ಧಾಳಿಗೆ ನಿಂತುಬಿಟ್ಟರು. ಅವರುಗಳನ್ನು ನಿಭಾಯಿಸಲಾಗದ ನಿರೂಪಕಿ ಸ್ಟುಡಿಯೋದಿಂದ ಹೊರಗೆ ಓಡಿದ್ದರು. ಮುಂದೆ ಅಲ್ಲಿ ಯಾವ ರೀತಿ ಜಗಳವಾಯಿತು, ಯಾರು ಮೇಲುಗೈ ಸಾಧಿಸಿದರು, ನಿರೂಪಕಿ ಹೊರಗೆ ಓಡಿಹೋಗಲು ಕಾರಣಗಳಾದರೂ ಏನು ಎಂಬುದನ್ನು ತಿಳಿದುಕೊಳ್ಳಬೇಕಿದ್ದಲ್ಲಿ ನಮ್ಮ ಆಯಾಮದ ಓದುಗರು ಮುಂದಿನ ಸಂಚಿಕೆವರೆಗೂ ಕಾಯಲೇಬೇಕಾದ ಅನಿವಾರ್ಯತೆಯಿದೆಯೆಂಬುದನ್ನು ಹೇಳುತ್ತಾ...ಅಲ್ಲಿವರೆಗೆ ನೀವು ನಿಮ್ಮ ನಿಮ್ಮ ದೇವರುಗಳ ಬಗ್ಗೆ ತಲೆಕೆಡಿಸಿಕೊಳ್ಳಿರಿ ಅಥವಾ ಬಿಟ್ಟುಬಿಡಿ ಎನ್ನುತ್ತಾ...
(ಮುಂದುವರೆಯುವುದು)
|
’ಸಹನಾ’
ಸಂತೋಷ್ ಹೆಗಡೆಯವರು ಕೊಟ್ಟ ವರದಿ ಯಡ್ಯೂರಪ್ಪನವರಿಗೆ ಮುಳುವಾಗಿದೆ. ಅವರು ಇಳಿಯುವುದು ಖಚಿತವಾಗಿದ್ದರೂ ಖುರ್ಚಿಯನ್ನೂ ಅಂಟಿಸಿಕೊಂಡೇ ಹೋಗುತ್ತೇನೆ ಎನ್ನುತ್ತಿದ್ದಾರೆ! ಅವರ ಭಂಡತನ ಆಶ್ಚರ್ಯ-ಹಾಸ್ಯಾಸ್ಪದ. ಆದರೂ ಆಡಳಿತಾರೂಢ ಬಿಜೆಪಿ ಲೋಕಾಯುಕ್ತ ವಿರುದ್ಧ ತಿರುಗಿ ಬಿದ್ದಿದೆ. ಗಣಿಲೂಟಿ ರೆಡ್ಡಿ ಬ್ರದರ್ಸ್ ಈಗ ಲೋಕಾಯುಕ್ತದ ತಪ್ಪು ಕಂಡುಹಿಡಿಯುತ್ತಿದ್ದಾರೆ. ನಿಮಗೆ ನೆನಪಿರಬೇಕು ಲೋಕಾಯುಕ್ತ ಸಂತೋಷ್ ಹೆಗಡೆ ಅವರು ಹಿಂದೊಮ್ಮೆ ರಾಜೀನಾಮೆ ಬಿಸಾಡಿ ಹೊರಟಾಗ ದಮ್ಮಯ್ಯ-ದತ್ತಯ್ಯ ಅಂತ ಅವರ ಕಚೇರಿ ಬಾಗಿಲಿಗೆ ಬಿಜೆಪಿ ರಾಷ್ಟ್ರೀಯ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ, ಯಡಿಯೂರಪ್ಪ ಇತ್ಯಾದಿ ನಾಯಕರು ಎಡತಾಕಿದ್ದರು. ಅಷ್ಟೇ ಏಕೆ, ಮಾಜಿ ಪ್ರಧಾನಿ ಎಲ್.ಕೆ ಅದ್ವಾನಿ ಕೂಡ ದೂರವಾಣಿ ಮೂಲಕ ಹೆಗಡೆಯವರ ಮನವೊಲಿಸಬೇಕಾಯ್ತು. ಅದೆಲ್ಲ ಮಾಡಿ, ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಪಶ್ಚಾತಾಪದಲ್ಲಿ ಬಿಜೆಪಿ ಇವತ್ತು ಒದರಾಡುತ್ತಿದೆ.
ಗಣಿವರದಿಯನ್ನು ಯಡ್ಯೂರಪ್ಪ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಅದರ ಜೊತೆಗೆ ಲೋಕಾಯುಕ್ತರ ಟೆಲಿಫೋನ್ ಕದ್ದಾಲಿಸಿದ ಆಪಾದನೆಯೂ ಸೇರಿ ಅದರ ಬಿಸಿ ಅವರನ್ನು ತಟ್ಟಿದೆ. ರಾಷ್ಟ್ರೀಯ ಬಿಜೆಪಿ ನಾಯಕರ ಬಗ್ಗೆ ಯಡ್ಯೂರಪ್ಪರಿಗೆ ಕಿಂಚಿತ್ ಗೌರವ ಇದ್ದಂತಿಲ್ಲ. ಯಡಿಯೂರಪ್ಪನವರ ಭ್ರಷ್ಟಾಚಾರದ ಹಣದಲ್ಲಿ ಬಿಜೆಪಿ ನಾಯಕರಿಗೂ ಒಳ್ಳೆಯ ಪಾಲೇ ಸೇರಿದೆ. ಪಕ್ಷದ ನಾಯಕರು ಯಡ್ಯೂರಪ್ಪನವರನ್ನು ರಾಜಿನಾಮೆ ಬಗ್ಗೆ ಮಾತುಕತೆಗೆ ಕರೆಸಿಕೊಳ್ಳಲು ಪ್ರಯತ್ನಿಸಿದರೂ ಯಡ್ಯೂರಪ್ಪನವರು ಅಲುಗಾಡಿರಲಿಲ್ಲ. ಬಿಜೆಪಿ ನಾಯಕರು ಅವರ ಮನೆಗೇ ಬರಬೇಕಾಯಿತು. ಆ ಮಟ್ಟದ ಭಂಡತನ, ಗರ್ವ.
ತಾನು ಹೇಳಿದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಬೇಕು, ನಾನೇ ಬಿಜೆಪಿ ರಾಜ್ಯಾಧ್ಯಕ್ಷ ಆಗಬೇಕು, ಜಗದೀಶ್ ಶೆಟ್ಟರ್, ಅನಂತ್ ಕುಮಾರರಿಗೆ ಅಧಿಕಾರ ಕೊಡಬಾರದು, ಇತ್ಯಾದಿ ಷರತ್ತು ಹಾಕಿರುವ ಯಡ್ಯೂರಪ್ಪ ಕಡೆಗೂ ಅಮವಾಸ್ಯೆ ಕಳೆದುಕೊಂಡು ಶ್ರಾವಣ ಮಾಸದಲ್ಲೇ ರುವ ಯಡ್ಯೂರಪ್ಪ ಅಮವಾಸ್ಯೆ ಕಳೆಯುವುದನ್ನು ಕಾಯುತ್ತಿದ್ದಾರೆ ಅಂತ ರಾಜಿನಾಮೆ ಕೊಟ್ಟಿದ್ದಾರೆ! ಆಮೇಲೆ ಅವರ ರಾಜಕೀಯ ಭವಿಷ್ಯ ಉಜ್ವಲವಾಗಿದೆಯಂತೆ! ಅದನ್ನು ನೋಡೋಣ, ಆದರೀಗ ಪಕ್ಷದಲ್ಲಿ ಶಿಸ್ತು ಇಲ್ಲ ಎನ್ನುವುದು ಜಗಜ್ಜಾಹಿರವಾಗಿದೆ. ಈಗ ಯಡ್ಯೂರಪ್ಪ ನನ್ನ ಸುತ್ತ ಶಾಸಕರಿದ್ದಾರೆ ಎನ್ನುತ್ತಿದ್ದರೂ ಅವರೆಲ್ಲರೂ ಎಷ್ಟು ಸಮಯ ಮುಳುಗುತ್ತಿರುವ ಯಡ್ಯೂರಪ್ಪನವರ ದೋಣಿಯಲ್ಲಿ ಇರುತ್ತಾರೆ ನೋಡಬೇಕು.
ಕರ್ನಾಟಕದ ಲೋಕಾಯುಕ್ತ ಹೊಸ ಇತಿಹಾಸ ಬರೆದಿದೆ. ಲೋಕಾಯುಕ್ತರ ವರದಿ ಬಿಜೆಪಿ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಯಡ್ಯೂರಪ್ಪ ಲೋಕಾಯುಕ್ತರ ದೋಷಿಯಷ್ಟೇ ಅಲ್ಲ. ಅವರ ವಿರುದ್ಧ ಸುಪ್ರೀಂ ಕೋರ್ಟ್, ಬೆಂಗಳೂರಿನ ಜಿಲ್ಲಾ ಸೆಶನ್ ನ್ಯಾಯಲದಲ್ಲೂ ಮೊಕದ್ದಮೆಗಳಿವೆ. ಅವರ ಮುಂದಿನ ದಿನಗಳು ಅಷ್ಟು ಸಲೀಸಲ್ಲ. ಮಾಡಿದನ್ನು ಉಣ್ಣುವುದಕ್ಕೆ ಅವರು ಸಿದ್ಧರಿರಬೇಕು.
* * *
ರಾಜ್ಯದಲ್ಲಿ ವರ್ಷಾಂತ್ಯಕ್ಕೆ ಚುನಾವಣೆಗಳು ಎದುರಾದರೆ ಅಚ್ಚರಿ ಪಡಬೇಕಿಲ್ಲ. ಸಧ್ಯಕ್ಕೆ ಬೇರೆ ವಿರೋಧ ಪಕ್ಷದವರಿಗೂ ಚನಾವಣೆ ಬೇಕಿಲ್ಲ, ಸ್ವಲ್ಪ ಟೈಮ್ ಬೇಕು. ಹಾಗಾಗಿ ಸಧ್ಯಕ್ಕೆ ಒಂದು ಸರ್ಕಾರದ ರಚನೆ ಅದರೂ ಅದು ಹೆಚ್ಚು ದಿನ ಉಳಿಯುವುದಿಲ್ಲ ಅನ್ನೋದು ಲೇಟೆಸ್ಟ್ ಸುದ್ದಿ.
ಲೋಕಾಯುಕ್ತ ಸಂತೋಷ್ ಹೆಗ್ಡೆ ನಿವೃತ್ತಿ ಹೊಂದುತ್ತಿದ್ದಾರೆ. ಮತ್ತೊಬ್ಬ ಹಿರಿಯ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ಸ್ಥಾನಕ್ಕೆ ಬರಲಿದ್ದಾರೆ. ಅವರ ಆಡಳಿತದಲ್ಲಿ ಲೋಕಾಯುಕ್ ಸ್ಥಿತಿ ಏನಾಗಲಿದೆ ಎನ್ನುವುದರ ನಿರೀಕ್ಷೆಯಿದೆ. ಕರ್ನಾಟಕದ ಜನರ ದೃಷ್ಟಿಯಲ್ಲಿ ಲೋಕಾಯುಕ್ತ ಸರ್ಕಾರಕ್ಕಿಂತಲೂ ಪ್ರಭಾವಿ ಸಂಸ್ಥೆ. ರಾಜಕಾರಣಿಗಳಿಗಿಂತಲೂ, ಜನಪ್ರತಿನಿಧಿಗಳಿಗಿಂತಲೂ ಕರ್ನಾಟಕದ ಜನತೆ ಲೋಕಾಯುಕ್ತ ಸಂಸ್ಥೆ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದಾರೆ; ರಾಜಕಾರಣದಲ್ಲಿ ಮಾಯವಾಗುತ್ತಿರುವ ಮೌಲ್ಯ ಲೋಕಾಯುಕ್ತದಲ್ಲಿ ಕಾಣುತ್ತಿದೆ.
***
ಕಾಲ ಬದಲಾದಂತೆ ನಾವು ಬದಲಾಗ ಬೇಕು ಅನ್ನೋದು ರೂಡಿ ಮಾತು. ಈಗಂತೂ ಬದಲಾವಣೆ ಎಲ್ಲಾ ಕ್ಷೇತ್ರಗಳಲ್ಲೂ ಬಿರುಗಾಳಿಯನ್ನೇ ಎಬ್ಬಿಸುತ್ತಿದೆ. ದಿನ ಕಳೆದಂತೆ ಆಧುನಿಕತೆ, ತಂತ್ರಜ್ನಾನದ ಹೊಸ ಆವಿಷ್ಕಾರಗಳ ಬೆನ್ನ ಹಿಂದೆ ಕುಳಿತು ಬದಲಾವಣೆ ಅನ್ನೋದು ಶರವೇಗದಲ್ಲಿ ಓಡುತ್ತಿರುವ ಕುದುರೆಯಂತೆ ಕಾಣುತ್ತಿದೆ. ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ರಾಜಕೀಯ, ರಂಜನೆ ಹೀಗೆ ಎಲ್ಲದರಲ್ಲೂ ಅದರದ್ದೇ ರೀತಿಯ ಬದಲಾವಣೆ. ಭ್ರಷ್ಟಾಚಾರ-ರಾಜಕೀಯದಲ್ಲೂ ಬದಲಾವಣೆಯಾಗಿದೆ. ಇದು ರಾಜಕೀಯ ಅಪಮೌಲೀಕರಣದ ಕಾಲ.
ಈಗ ನಮ್ಮ ದೇಶದ ಉದ್ದಗಲಕ್ಕೂ ಹರಡಿರುವ ಭ್ರಷ್ಟಾಚಾರಕ್ಕೆ ವ್ಯವಸ್ಥೆಯೂ ಪೂರಕವಾಗಿ ಸ್ಪಂದಿಸತೊಡಗಿದೆ! ಇದು ಸದ್ಯದ ವಿಪರ್ಯಾಸ. ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮಂಡ್ಯ ಪಿಇಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಹಿರಿಯ ರಾಜಕಾರಣಿ ಚೌಡಯ್ಯ ಅವರ ಮಾತುಗಳನ್ನು ಕೇಳಿದೆ. ಅಚ್ಚರಿ ಆಯ್ತು. ಇವರು ಸುಮಾರು ಇಪತ್ತು ವರ್ಷಗಳ ಕಾಲ ವಿಧಾನಸಭೆ, ವಿಧಾನಪರಿಷತ್ ನಲ್ಲಿ ಕಾರ್ಯ ನಿರ್ವಹಿಸಿದವರು. ಕಳೆದ ನಾಲ್ಕು ದಶಕಗಳಿಂದ ರಾಜ್ಯ ರಾಜಕಾರಣವನ್ನು ಹತ್ತಿರದಿಂದ ನೋಡಿದವರು. ಇನ್ನೂ ರಾಜಕಾರಣದಲ್ಲಿರುವ ಶಕ್ತಿ ಇದ್ದರು ಇವರ ಸಹವಾಸವೇ ಬೇಡ ಎಂದು ಈಗಿನ ರಾಜಕೀಯದಿಂದ ದೂರ ಉಳಿದಿರುವ ಸಜ್ಜನ. ತಾವು ರಾಜಕೀಯದಲ್ಲಿದ್ದ ದಶಕಗಳಿಗೂ ಈಗಿನ ದಿನಗಳಿಗೂ ಹೋಲಿಕೆಯೇ ಇಲ್ಲ, ಇವತ್ತಿನದೇನಿದ್ದರೂ ಹಣ -ತೋಳ್ಬಲದ ರಾಜಕಾರಣವಷ್ಟೇ, ಇವತ್ತು ರಾಜಕಾರಣವೂ ಒಂದು ಉದ್ದಿಮೆ, ಜನಪರ ಕಾಳಜಿಯಿರುವ ಜನ ಕಡಿಮೆ. ರಾಜಕೀಯಕ್ಕೆ ಬರುವವರದ್ದೆಲ್ಲ ಲೂಟಿ ಮಾಡುವ ಅಜೆಂಡಾ ಇಟ್ಟುಕೊಂಡೇ ಬರುತ್ತಾರೆ, ಹೀಗಾದ್ರೆ ಜನರ ಭವಿಷ್ಯ ಹೇಗೆ ಎಂದು ಕೇಳಿದರೆ ಅವರಿಗೂ ಭವಿಷ್ಯ ಕೇಳಿಸಬೇಕು ಎನ್ನುತ್ತಾರಲ್ರೀ ಎಂದು ಚೌಡಯ್ಯನವರು ಆತಂಕ ಪಡುತ್ತಾರೆ.
|