ಬ್ಯಾಡ್ ಹೇರ್ ಡೇ ಆದ್ರು ಪರವಾಗಿಲ್ಲ. ಪುಟ್ಟ ಮಗಳಿಗೆ ಕಷ್ಟ ಮಾತ್ರ ಬೇಡ!
ವಿವೇಕ್ ವಿಶ್ವನಾಥ್
ಪ್ರತಿ ಬೆಳಗ್ಗೆ ನಮ್ಮ ಮನೆಯಲ್ಲಿ ಮಿಲಿಟರಿ ಡ್ರಿಲ್ ನಡೆಯುತ್ತೆ. ನನ್ನ ತಲೆಗೆ, ಪ್ರಿಯಾ ತಲೆಗೆ ಯಾರೊ (ನಮ್ಮ ಆಫೀಸ್) ಗನ್ ಹಿಡಿದು ಕೆಲಸ ಮಾಡಿಸುತ್ತಿರುತ್ತಾರೆ. ಒಂದುವರೆ ಗಂಟೆಯೊಳಗೆ ನಾವು ರೆಡಿ ಆಗಬೇಕು, ನಮ್ಮ ಮಕ್ಕಳನ್ನು ರೆಡಿ ಮಾಡಬೇಕು. ಹಲ್ಲು ಉಜ್ಜಿ, ಪಾಟಿ ಮಾಡಿಸಿ, ಬಟ್ಟೆ ಹಾಕಿ, ಗಬಗಬ ಸೀರಿಯಲ್ ತಿನ್ನಿಸಿ, ಮಗಳ ಜುಟ್ಟು ರೆಡಿ ಮಾಡಿ, ಶೂ ಹಾಕಿ, ಕಾರ್ ಗೆ ಲೋಡ್ ಮಾಡಿ, ಇವೆಲ್ಲದರ ಮಧ್ಯ ನಮ್ಮದೂ ಎಲ್ಲ ಕೆಲಸ ಮುಗಿಸಿಕೊಂಡು ಆಫೀಸ್ ಗೆ ಹೊರಡಬೇಕು. ಕೋಪ ಬಂದರು, ದುಃಖ ಬಂದರೂ ಸುಮ್ಮನೆ ಇಬ್ಬರೂ ಬಾಯಿ ಟೈಟ್ ಮಾಡಿಕೊಂಡು ನಮ್ಮ ನಮ್ಮ ಕೆಲಸ ಮಾಡಿದರೇ ಬಚಾವ್. ಇಲ್ಲದಿದ್ದರೆ ಢಮಾರ್. ವಾರ್ ಜ಼ೋನ್!
ವಾರಕ್ಕೆ ಐದು ದಿನ ಬೆಳಗ್ಗೆ ಇದು ನಮ್ಮ ರುಟೀನ್. ಅಭ್ಯಾಸ ಆಗಿಬಿಟ್ಟಿದೆ. ಮಕ್ಕಳೂ ಹೋಪ್ ಫುಲಿ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ವೀಕೆಂಡ್ ಕತೆನೇ ಬೇರೆ. ಬೆಳಗ್ಗೆ ೯ ಗಂಟೆಯಾದರೂ ಮಕ್ಕಳು ಎದ್ದು ಗಲಾಟೆ ಮಾಡುತ್ತಿದ್ದರೂ ನಾವಂತೂ ಸೋಮಾರಿಗಳಾಗೇ ಇರುತ್ತೇವೆ. ಹಾಸಿಗೆ ಮೇಲೆ ಮಲಗಿಯೇ ಇಂಡಿಯಾಗೆ ಅಮ್ಮ ಅಪ್ಪ ಅತ್ತೆ ಮಾವನಿಗೆ ಕಾಲ್ ಮಾಡುತ್ತೇವೆ. ವಾರದ ವಿಶೇಷ ವಿಚಾರಿಸಿಕೊಳ್ಳುತ್ತೇವೆ. ಮಕ್ಕಳ ಕೈಲಿ ಮಾತಾಡಿಸುತ್ತೇವೆ. ಸೀರಿಯಲ್ ಕಡೆ ಮೂಗು ಹಾಕದೆ ದೋಸೆ, ಇಡ್ಲಿ, ಚಿತ್ರಾನ್ನ ಏನಾದರು ಮಾಡಿಕೊಂಡು ಬ್ರಂಚ್ ಮಾಡಿ ಬಿಡುತ್ತೇವೆ. ಅಪ್ಪ ಅಮ್ಮ ಮನೆಯಲ್ಲೇ ಇದ್ದಾರೆ, ನಾವೂ ಮನೆಯಲ್ಲೇ ಇರುತ್ತೇವೆ ಎಂದು ಮಕ್ಕಳೂ ಹ್ಯಾಪಿ, ನಾನೇ ಅಡಿಗೆ ಮಾಡಿದರೆ ಪ್ರಿಯಾನೂ ಹ್ಯಾಪಿ. ಇವೆಲ್ಲ ನನ್ನ ಲೈಫ್ ನ ಸಣ್ಣ ಸಣ್ಣ ವಿಕ್ಟರಿಗಳು.
ಅವತ್ತು ಶನಿವಾರ ಯಾವ ಪ್ಲಾನ್ ಇರಲಿಲ್ಲ. ಮನೆಯಲ್ಲೇ ರಿಲ್ಯಾಕ್ಸ್ ಮಾಡಿಕೊಂಡು ಯಾವುದಾದರೂ ಮೂವಿ ನೋಡೋಣ ಎನ್ನಿಸಿತ್ತು. ಶನಿವಾರ ನಮಗೆ ಸೋಮಾರಿ ದಿನ ಆದರೆ ಮಕ್ಕಳಿಗೆ ಕೆಲಸದ ದಿನ. ದಿನಾ ಬೆಳಗ್ಗೆ ಟೈಮ್ ವೇಸ್ಟ್ ಆಗುತ್ತದೆ ಎಂದು ನಾವೇ ಅವರ ಹಲ್ಲು ಬ್ರಷ್ ಮಾಡಿಸುತ್ತಿದ್ದೆವು. ಆದರೆ ವೀಕೆಂಡ್ ಗಳಲ್ಲಿ ಅವರೇ ಉಜ್ಜುವುದನ್ನು ಕಲಿಯಬೇಕಿತ್ತು. ನೀರಿನಲ್ಲಿ ಆಟವಾಡಲು ಅವರಿಗೆ ಒಳ್ಳೆ ಚಾನ್ಸ್. ಅವರಿಬ್ಬರೂ ಮಿನಿಮಮ್ ೧೫-೨೦ ನಿಮಿಷ ಬ್ರಶ್ ಮಾಡುತ್ತಾ ಬ್ಯುಸಿ ಇರುತ್ತಿದ್ದರು.
ಪ್ರಿಯಾ ದೋಸೆ ಮಾಡುತ್ತಿದ್ದೆ. ನಾನು ವ್ಯಾಕ್ಯೂಮ್ ಮಾಡುತ್ತಿದ್ದೆ. ಮಗಳು ಬಂದು ’ಪಾ, ಸ್ಮೆಲ್ ಮೈ ಮೌತ್’ ಎಂದಳು. ಅವರ ಬಾಯನ್ನು ಸ್ಮೆಲ್ ಮಾಡಿ ಕೆಟ್ಟ ವಾಸನೆ ಹೋಗಿದೆ ಎಂದರೆ ಹಲ್ಲು ಬ್ರಶ್ ಮಾಡುವುದನ್ನು ನಿಲ್ಲಿಸುತ್ತಿದ್ದರು. ಇಲ್ಲದಿದ್ದರೆ ಇನ್ನೊಂದು ರೌಂಡ್. ಬಾಯಿ ಗಮಗಮ ಎನ್ನುತಿತ್ತು. ಚೆನ್ನಾಗಿ ಪೇಸ್ಟ್ ಹಾಕಿಕೊಂಡಿದೆ ಎಂದುಕೊಂಡು ’ಪೇಸ್ಟ್ ತಿಂದೆಯಾ ಎಂದೆ’ ಮುದ್ದಾಗಿ ’ನೋ’ ಎಂದಳು. ಮುಖ ತೊಳೆದುಕೊಂಡು ಅಮ್ಮನ ಯಾವುದೋ ಘಮಘಮಿಸುವ ಕ್ರೀಂ ಹಚ್ಚಿಕೊಂಡಿದ್ದಳು ಎನ್ನಿಸುತ್ತದೆ. ’ಗುಡ್ ಜಾಬ್’ ಎಂದೆ. ನಮ್ಮ ನಮ್ಮ ಕೆಲಸ ಕಂಟಿನ್ಯೂ ಮಾಡಿದೆವು.
ಒಂದು ಮಸಾಲೆ ದೋಸೆ ತಿಂದು, ಇನ್ನೂ ಒಂದು ಬೇಕು ಎಂದು ಅಪರೂಪಕ್ಕೆ ಕೇಳಿ ತಿಂದ ಮಗಳು ಸ್ವಲ್ಪ ಹೊತ್ತಿನಲ್ಲಿ ’ಡ್ಯಾಡಿ ಮೈ ಟಮ್ಮಿ ಹರ್ಟ್ಸ್...’ ಎಂದು ಕಂಪ್ಲೇನ್ ಮಾಡಿದಳು. ಎರಡು ದೋಸೆ, ಆಲೂಗಡ್ಡೆ ಪಲ್ಯ, ಹಾಲು ಸ್ವಲ್ಪ ಹೆವಿ ಆಯಿತೇನೋ ಎನಿಸಿ ನಾವು ಸಮಾಧಾನ ಮಾಡಿದೆವು. ಸ್ವಲ್ಪ ಹೊತ್ತಿನಲ್ಲಿ ಮಗಳು ’ಮಮ್ಮೀ ಮೈ ಟಮ್ಮಿ ರಿಯಲಿ ಹರ್ಟ್ಸ್’ ಎಂದು ಜೋರಾಗಿ ಅಳಲು ಸ್ಟಾರ್ಟ್ ಮಾಡಿದಳು. ಅವಳಿಗೆ ಸ್ವಲ್ಪ ಬೆಚ್ಚಗಿನ ನೀರು ಕುಡಿಸಿ ಆಲೂಗಡ್ಡೆ ಪಲ್ಯ ಖಾರ ಆಗಿತ್ತಾ? ಹಾಲು ಎಕ್ಸ್ಪೈರಿ ಡೇಟ್ ಆಗಿತ್ತಾ? ಎಂದು ನಾವು ಚೆಕ್ ಮಾಡಿದೆವು. ಮಗ ದೋಸೆ ತಿಂದು ಆರಾಮಾಗಿ ಆಟ ಆಡುತ್ತಿದ್ದ. ಅಷ್ಟರಲ್ಲಿ ಒಂದೆ ಸರ್ತಿಗೆ ಮಗಳು ವಾಮಿಟ್ ಮಾಡಿಕೊಂಡಳು. ನೊರೆನೊರೆ ವಾಮಿಟ್. ನಾವಿಬ್ಬರೂ ಬಹಳ ಹೆದರಿಕೊಂಡುಬಿಟ್ಟೆವು.
ಸ್ಕೂಲಿನಿಂದೇನಾದರೂ ಸ್ಟಮಕ್ ಫ್ಲೂ ಇನ್ಫೆಕ್ಶನ್ ಆಗಿರಬಹುದಾ ಎಂದು ಯೋಚಿಸಿ, ಅವಳ ಬಟ್ಟೆ ಬದಲಿಸುತ್ತಿದ್ದಂತೆ ಲೂಸ್ ಮೋಷನ್ ಮಾಡಿದಳು. ಪ್ರಿಯಾ ಮಕ್ಕಳ ವಿಷಯದಲ್ಲಿ ನನಗಿಂತ ತುಂಬಾ ಸ್ಮಾರ್ಟ್. ಅವಳಿಗೆ ಏನೋ ಡೌಟ್ ಬಂದು ಮಗಳನ್ನು ಬಾತ್ ರೂಮ್ ಗೆ ಕರೆದುಕೊಂಡು ಹೋಗಿ ಯಾವ ಪೇಸ್ಟ್ ನಲ್ಲಿ ಹಲ್ಲುಜ್ಜಿದೆ ಪುಟ್ಟಾ ಎಂದು ಪೂಸಿ ಹೊಡೆದಳು. ಪ್ರಿಯಾಗೆ ಯಾಕೆ ಈ ಡೌಟ್ ಬರುತ್ತಿದೆ ನಾನು ಯೋಚಿಸಿದೆ. ಮಕ್ಕಳಿಗೆ ಎಂದು ಅವರದ್ದೇ ಡೋರಾ-ಡಿಯಾಗೋ-ಸ್ಪಾಂಜ್ ಬಾಬ್ ಪೇಸ್ಟ್ ಗಳಿದ್ದವು. ಅವರಿಗಿಷ್ಟ ಬಂದ ಪ್ಲೇವರ್ ನಲ್ಲಿ ಹಲ್ಲು ಬ್ರಶ್ ಮಾಡುತ್ತಿದ್ದರು. ಪ್ರಿಯಾ ಪೂಸಿ ಹೊಡೆದಿದ್ದಕ್ಕೆ ಮಗಳು ಮುಗ್ಧವಾಗಿ ’ದಿಸ್ ವನ್’ ಎಂದು ಸಿಂಕಿನ ಸುತ್ತಮುತ್ತಾ ಇದ್ದ ನಾಲಕ್ಕು ಐದು ಡಬ್ಬಿಗಳಲ್ಲಿ ಒಂದು ಡಬ್ಬಿ ತೋರಿಸಿದಳು. ಪ್ರಿಯಾ ನಾನು ಮುಖ ಮುಖ ನೋಡಿಕೊಂಡೆವು. ನಮ್ಮ ಮುದ್ದು ಮಗಳು ನಾನು ತಲೆಗೆ ಹಚ್ಚುವ ಬ್ರಿಲ್ ಹೇರ್ ಕ್ರೀಮಿನಲ್ಲಿ ಹಲ್ಲುಜ್ಜಿದ್ದಳು. ಡಬ್ಬಿ ತೆಗೆದು ನೋಡಿದೆ. ಒಂದೆರಡು ಸ್ಪೂನಾದರೂ ಕಮ್ಮಿಯಾಗಿತ್ತು!
ನಾವು ಅವಳನ್ನು ತಕ್ಷಣ ಎಮರ್ಜೆನ್ಸಿ ರೂಮ್ ಗೆ ಕರೆದುಕೊಂಡು ಹೋದೆವು. ಅಷ್ಟರಲ್ಲಿ ಅವಳು ಸ್ವಲ್ಪ ಆರಾಮ್ ಕಾಣುತ್ತಿದ್ದಳು. ಹೊಟ್ಟೆ ನೋವಿನ ಕಂಪ್ಲೇನ್ ಮಾಡಲಿಲ್ಲ. ಡಾಕ್ಟರ್ ಸಿಗುವವರೆಗೂ ಕಾಯುತ್ತಾ ಯೋಚಿಸಿದೆವು. ಮಗ ಇನ್ನೂ ಚಿಕ್ಕವನು ಎಂದು ಅವನ ಬ್ರಶ್ ಗೆ ಪ್ರಿಯಾನೇ ಪೇಸ್ಟ್ ಹಾಕುತ್ತಿದ್ದಳು. ಮಗಳು ಎಲ್ಲವನ್ನೂ ನಾನೇ ಮಾಡಬೇಕು ಎನ್ನುವ ಸ್ಟೇಜ್ ನಲ್ಲಿ ಇದ್ದರಿಂದ ಅವಳಿಗೆ ವೀಕೆಂಡ್ ನಲ್ಲಾದರೂ ಆ ಸ್ವಾತಂತ್ರ್ಯ ಸಿಗಲಿ ಎಂದು ಅವಳ ಪೇಸ್ಟ್ ಅವಳೇ ಹಾಕಿಕೊಳ್ಳಲು ಬಿಟ್ಟಿದ್ದೆವು. ಅವರಿಗೆ ಎಂದೇ ೨-೩ ಚಾಯ್ಸ್ ಇದ್ದದ್ದರಿಂದ ಅವರಿಗೆ ಎಲ್ಲಾ ಗೊತ್ತಾಗುತ್ತದೆ ಎಂದೇ ಇದ್ದುಬಿಟ್ಟಿದ್ದೆವು. ನಾನೇ ಚೂಸ್ ಮಾಡುತ್ತೇನೆ ಎಂದು ಸಿಕ್ಕಿದ್ದ ಕ್ರೀಮ್ ಅನ್ನು ಬಾಯಿಗೆ ಹಾಕಿಕೊಂಡು ಬಿಡುತ್ತಾಳೆಂದು ಯಾರಿಗೆ ಗೊತ್ತು? ಅವಳು ಯಾವತ್ತೂ ಹೀಗೆ ಮಾಡಿರಲಿಲ್ಲ.
ದಿನಾ ಬೆಳಗ್ಗೆ ಟೆನ್ಶನ್ ನಲ್ಲಿ ಹೊರಡುತ್ತಿದ್ದುದ್ದರಿಂದ ನಾವು ಯೂಸ್ ಮಾಡುತ್ತಿದ್ದ ಎಷ್ಟೋ ಸಾಮಾನುಗಳನ್ನು ಪ್ರತಿ ದಿನ ತೆಗೆದು ಜೋಡಿಸಿಡುತ್ತಿರಲಿಲ್ಲ. ಅವತ್ತು ಹಾಗೇ ಆಗಿಯೇ ಅವಳಿಗೆ ನನ್ನ ಹೇರ್ ಜೆಲ್ ಸಿಕ್ಕಿತ್ತು. ಉಜ್ಜಿದಾಗ ನೊರೆ ಬಂದಿಲ್ಲ, ಸ್ವೀಟ್ ಆಗಿಲ್ಲ ಎಂದು ಹೆಚ್ಚು ಕ್ರೀಂ ಹಾಕಿಕೊಂಡು ಬಿಟ್ಟಿದ್ದಳು. ಮಕ್ಕಳ ಪೇಸ್ಟ್ ಗಳ ಮೇಲೆ ಇದನ್ನು ನುಂಗಿದರೂ ಚಿಂತೆಯಿಲ್ಲ ಎನ್ನುವ ಸ್ಟೇಟ್ ಮೆಂಟ್ ಇತ್ತು. ಅದಕ್ಕೇ ಮಕ್ಕಳೇ ಸರಿಯಾಗಿ ಉಜ್ಜುವುದನ್ನು ಕಲಿಯುವವರೆಗೂ ಸ್ವಲ್ಪ ಪೇಸ್ಟ್ ನುಂಗಿದರೂ ಪರವಾಗಿಲ್ಲ ಎಂದು ಸುಮ್ಮನಿದ್ದೆವು. ಅದೇ ರೀತಿ ಮಗಳು ಬ್ರಿಲ್ ಹೇರ್ ಜೆಲ್ ಅನ್ನೂ ನುಂಗಿಬಿಟ್ಟಿದ್ದಳು.
ಡಾಕ್ಟರ್ ಸಿಕ್ಕರು. ಅವರಿಗೆ ಭಯದಲ್ಲೇ ಎಲ್ಲಾ ಹೇಳಿದೆವು. ಅವರು ತಕ್ಷಣ ಅವಳ ಹೊಟ್ಟೆ ಕ್ಲೀನ್ ಮಾಡಿಸಿದರು. ಜೆಲ್ ಅವಳ ಬಾಯಿಯನ್ನು ಅಂಟಿಕೊಂಡು ಅವಳು ಬಾಯಿ ತೊಳೆದಾಗಲೂ ಸರಿಯಾಗಿ ಹೋಗದೆ ಹೊಟ್ಟೆಗೆ ಸೇರಿತ್ತು. ಎರಡು ಗಂಟೆ ಎಮರ್ಜೆನ್ಸಿ ರೂಮ್ ನಲ್ಲಿದ್ದು ಮನೆಗೆ ಬರುವಾಗ ಡಾಕ್ಟರ್ ನಮ್ಮನ್ನು ಕೂರಿಸಿಕೊಂಡು ನಮಗೂ ಒಂದು ಡೋಸ್ ಕೊಟ್ಟರು. ಬೇಗ ವಾಮಿಟ್ ಮಾಡಿದ್ದರಿಂದ ಮಗಳು ಹುಶಾರಾಗಿದ್ದಳು. ಹೆಚ್ಚು ಕ್ರೀಂ ಅಥವಾ ಇನ್ನು ಬೇರೆ ಯಾವುದಾದರೂ ಹಾರ್ಶ್ ಕೆಮಿಕಲ್ ನುಂಗಿದ್ದರೆ ಕಂಡಿಷನ್ ತುಂಬಾ ಸೀರಿಯಸ್ ಆಗಿರುತ್ತಿತ್ತು. ಇನ್ನೊಂದು ಸರ್ತಿ ಹೀಗೆ ನೆಗ್ಲಿಜೆನ್ಸ್ ತೋರಿಸಿದರೆ ಸೋಷಿಯಲ್ ಸೆಕ್ಯುರಿಟಿಗೆ ತಿಳಿಸಬೇಕಾಗುತ್ತದೆ. ಅವರು ಮಕ್ಕಳನ್ನು ನಿಮ್ಮಿಂದ ಕರೆದುಕೊಂಡು ಹೋಗಿಬಿಡುವ ಸಾಧ್ಯತೆ ಇದೆ, ಇನ್ನೊಂದು ಸರ್ತಿ ಹೀಗಾಗದಂತೆ ನೋಡಿಕೊಳ್ಳಿ ಎಂದು ವಾರ್ನ್ ಮಾಡಿ ಕಳಿಸಿದರು ಡಾಕ್ಟರ್.
ಕಾರ್ ನಲ್ಲಿ ಕೂತು ನನ್ನ ಮಗಳನ್ನು ಹಿಡಿದು ಅತ್ತುಬಿಟ್ಟೆ. ಸಾರಿ ಕೇಳಿದೆ. ಅವಳಿಗೆ ಏನನ್ನಿಸಿತೋ ’ಡೊಂಟ್ ಕ್ರೈ ಡ್ಯಾಡಿ. ಐ ವಿಲ್ ನಾಟ್ ಕ್ರೈ...ಮೈ ಟಮ್ಮಿ ಇಸ್ ಗುಡ್ ನೌ’ ಎಂದಳು. ನನ್ನ ಮೇಲೆ ತುಂಬಾ ಕೋಪ ಬಂದಿತ್ತು. ಮನೆಗೆ ಬಂದು ಟ್ರಾಶ್ ಬ್ಯಾಗ್ ತಂದು ಬಾತ್ ರೂಮ್ನಲ್ಲಿಟ್ಟಿದ್ದ ಬ್ರಿಲ್ ಕ್ರೀಂ, ಕ್ಲೀನಿಂಗ್ ಸಪ್ಲೈ, ಬ್ಲೀಚ್ ಗಳನ್ನೆಲ್ಲಾ ತುಂಬಿಕೊಂಡು ಬಿಸಾಡಿದೆ.
ಈ ಘಟನೆಯನ್ನು ಬರೆಯಬೇಕು ಎಂದುಕೊಂಡಿರಲಿಲ್ಲ. ಆದರೆ ನಮಗೆ ಗೊತ್ತಿಲ್ಲದೇ ಆಗಿದ್ದ ತಪ್ಪುಗಳು ನಿಮ್ಮ ಮನೆಯಲ್ಲಿಯೂ ಆಗದಿರಲಿ ಎಂದು ಎಲ್ಲರಿಗೂ ಹೇಳೋಣ ಎಂದು ಬರೆದಿದ್ದೇನೆ.
|