(ಪುಟ ೧೮)

(ಪುಟ )
(ಪುಟ ೧೦)
(ಪುಟ ೧೧)
 (ಪುಟ ೧)  
(ಪುಟ ೧೪)   
(ಪುಟ ೧೫) 
(ಪುಟ ೧೬) 
(ಪುಟ ೧) 
(ಪುಟ ೧)

ಒಂಟಿತನಕ್ಕೆ ಹೆದರಿ ವಿಪರೀತವಾಗಿ ಕೈಕೊಟ್ಟ ವಿಪಶನ!

ಬೇಲಾ ಮರವ೦ತೆ
 
ಒಂದು ಕೆಟ್ಟ ಜೂನ್. ಸ್ಮಿತಾ ನೆಂಟರ ಮದುವೆಗಳಿವೆ ಅಂತ ಇಂಡಿಯಾಗೆ ಹೋಗಿದ್ದರು. ಪರಿಚಯವಿದ್ದ ಎಷ್ಟೋಂದು ಉತ್ತರ ಭಾರತದ, ದಕ್ಷಿಣ ಭಾರತದ ಹೆಂಗಸರು ಮಕ್ಕಳಿಗೆ ಬೇಸಿಗೆ ರಜೆ ಎಂದು ಇಂಡಿಯಾ ಕಡೆಗೆ ಹೋಗಿದ್ದರು. ಸುಮಾರು ಜನ ಭಾರತೀಯರೇ ಇದ್ದ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಹೆಂಗಸರು ಮಕ್ಕಳ ಸದ್ದಿಲ್ಲದೆ ಖಾಲಿ ಹೊಡೆಯುತ್ತಿದೆ ಎನ್ನಿಸುತ್ತಿತ್ತು. ಮೊದಲೇ ಇಲ್ಲಿ ಸದ್ದಿಗೆ ಬರ. ಅದು ಬಿಸಿಲಿನ ಜೊತೆಗೆ ಸೇರಿ ಬರಡೆನಿಸುವ ಭಾವನೆ. ಸಂಜೆ ಹೊತ್ತು ವಾಕ್ ಮಾಡುವಾಗ ಎಂಟು ಹತ್ತು ಪರಿಚಿತ ಮುಖಗಳಾದರೂ ಕಾಣುತ್ತಿದ್ದವು. ಈಗ ಅದೂ ಇಲ್ಲ. ಆ ದಿನ ಸಂಜೆ ಹಾಗೇ ಅವರ ಮನೆ ಬಾಲ್ಕನಿ, ಇವರ ಮನೆ ಮುಂದಿನ ಹೂ ಕುಂಡಗಳನ್ನು ನೋಡುತ್ತಾ ಒಂದಷ್ಟು ಸುತ್ತು ಮುಗಿಸಿದೆ. ರಾತ್ರಿ ಎಂಟು ಗಂಟೆಯಾದರೂ ಮಧ್ಯಾನ್ಹ ನಾಲ್ಕರ ಬೆಳಕು. ಕತ್ತಲಿನ ಸುಳಿವಿಲ್ಲ. ಇದು ಅಮೆರಿಕಾದ ಆ ಬೇಸಿಗೆ.
 
ಮನೆಗೆ ಬರಲು ಉತ್ಸಾಹ ಇರಲಿಲ್ಲ. ಪ್ರಶಾಂತ ರಾತ್ರಿಯ ಊಟ ಮುಗಿಸಿ ಬರುವವನಿದ್ದ. ಒಂದು ವಾರದಿಂದ ಅವನು ಮನೆಗೆ ಪೇಯಿಂಗ್ ಗೆಸ್ಟ್ ಥರ ಆಗಿದ್ದಾನೆ. ಬೆಳ್ಳಂಬೆಳಿಗ್ಗೆ ಕೆಲಸಕ್ಕೆ ಹೊರಟರೆ ರಾತ್ರಿ ಮಲಗಲಿಕ್ಕೇ ಮನೆಗೆ. ದಿನಕ್ಕೊಮ್ಮೆ ಮಾಡುತ್ತಿದ್ದ ಫೋನ್ ಕಾಲ್ ಗಳೂ ಇಲ್ಲ. ಅವನ ಕಂಪನಿಗೆ ಒಂದಷ್ಟು ಹೊಸ ಪ್ರಾಜೆಕ್ಟ್ ಸಿಕ್ಕಿವೆಯಂತೆ. ಹಾಗೇ ಇವನಿಗೊಂದು. ಅದನ್ನು ಚನ್ನಾಗಿ ಮಾಡಿ ಭೇಷಾಗುವ ಹುರುಪಿನಲ್ಲಿದ್ದ. ಮನೆ ಬೇಕಿತ್ತು. ಮಡದಿ ಬೇಕು ಆದರೆ ಜಾಸ್ತಿ ಮಾತುಕತೆ ಡಿಸ್ಟ್ರಾಕ್ಷನ್ ಬೇಡದಂತಿದ್ದ. ಕೆಲಸ ಅವನನ್ನು ಆವರಿಸಿಕೊಂಡು ಬಿಟ್ಟಿತ್ತು. ಮನೆಯಲ್ಲಿ ಕೂತಾಗಲೂ ಅವನ ಮೊದಲ ಹೆಂಡತಿ ಅವನ ಮಡಿಲ ಮೇಲೇ ಇರುತ್ತಿದ್ದಳು; ಆ ಲ್ಯಾಪ್ ಟಾಪ್ ಅವನ ಸರ್ವಸ್ವ, ಕತ್ತಲಾಗದಿದ್ದರೂ ನಡೆದೂ ನಡೆದು ಬೋರಾಗಿ ಮನೆ ಸೇರಿಕೊಂಡೆ. ಒಬ್ಬಳಿಗೆ ಬೇಕಾದ್ದು ತಿಂದುಕೊಂಡೆ. ಮನ್ಸೂರರ ಸಿಡಿ ಹಾಕಿದೆ. ಪ್ರಶಾಂತ ೧೦:೩೦ ಅಷ್ಟಕ್ಕೆ ಬಂದ. ಹಾಯ್ ಹಲೋ, ದಿನ ಹೇಗಿತ್ತುಗಳೆಲ್ಲ ಆದಮೇಲೆ ಬಟ್ಟೆ ಬದಲಿಸಿ ಬಂದು ಕೂತ. ಅವತ್ತು ಕೈಯ್ಯಲ್ಲಿ ಲ್ಯಾಪ್ ಟಾಪ್ ಇರಲಿಲ್ಲ. ಇದೇನಿದು ಶುಕ್ರವಾರ ಅಲ್ಲವಲ್ಲಾ, ಇವತ್ತು ಇಷ್ಟೋಂದು ರಿಲ್ಯಾಕ್ಸ್ ಆಗಿ ಕೂತಿದ್ದಾನೆಂದು ಅಚ್ಚರಿಯಾಯಿತು. ’ಬಿಲ್ಲೀ ಬಟ್ಟೆ ಪ್ಯಾಕ್ ಮಾಡಿಕೋಬೇಕು’ ಅಂದ. ’ಯಾಕೆ? ಯಾರದು? ಎಲ್ಲಿಗೆ?’ ಜಿಗಿದು ಕೇಳಿದೆ. ವಾರದಿಂದ ಆವರಿಸಿಕೊಂಡಿದ್ದ ಕೆಲಸದ ಏಕತಾನತೆಯನ್ನು ಮುರಿಯಲು ಏನಾದರೂ ಚಟುವಟಿಕೆ-ಬದಲಾವಣೆ ಬೇಕು ಎಂದು ಮನಸ್ಸಿಗೆ ಎನ್ನಿಸುತ್ತಿತ್ತು. ಅವನಿಗೆ ಮಾತಾಡಲು ಪುರುಸೊತ್ತಿರಲಿಲ್ಲದೇ ಸುಮ್ಮನಿರುತ್ತಿದ್ದ. ನನಗೆ ಮಾತಾಡಲು ಕಾದು ಕಾತರಿಸೀ ಅವನಿಂದೆನೂ ಪ್ರತಿಕ್ರಿಯೆಯೇ ಬರದಾಗ ತಲೆ ಚಿಟ್ಟು ಹಿಡಿದು ಸುಮ್ಮನಿರುತ್ತಿದ್ದೆ. ಅದಕ್ಕೇನಾದರೂ ನಾವಿಬ್ಬರೂ ಎಲ್ಲಿಗಾದರೂ ಹೋಗಿಬರುವ ಪ್ಲಾನ್ ಮಾಡುತ್ತಿದ್ದಾನಾ ಎಂಬ ದೂರದಾಸೆ.
 
’ಬಿಲ್ಲೀ ನಾನು ನಾಳೆ ಸಂಜೆ ಸಿನ್ಸಿನಾಟಿಗೆ ಹೋಗಬೇಕು. ನಮ್ಮ ಕ್ಲಯಂಟ್ ಹತ್ತಿರ. ಇಂಪ್ಲಿಮೆಂಟೇಶನ್ ನಡಿತಿದೆ. ಇಟ್ ಈಸ್ ಕ್ರೂಷಿಯಲ್. ನಾನು ೧೦ ದಿನ ಹೋಗಲೇ ಬೇಕು’ ಅಂದ. ನಾಳೇನೇ! ಅದೂ ಹತ್ತು ದಿನಕ್ಕೆ! ನನಗೆ ಶಾಕ್. ’ಪ್ರಶಾಂತನನ್ನು ಬಿಟ್ಟು ಅಷ್ಟು ದಿನ ಒಬ್ಬಳೇ ಇಲ್ಲಿದ್ದು ನನಗೆ ಅಭ್ಯಾಸವಿರಲಿಲ್ಲ. ಅವನಿದ್ದಿದ್ದರಿಂದಲೇ ಇಲ್ಲಿನ ಎಲ್ಲವೂ ಹೊಸದಾದರೂ ನನಗೆ ಭಯವಿರಲಿಲ್ಲ. ’ನಾನೂ ಬರಲಾ, ಬರಬಹುದಾ? ಪರವಾಗಿಲ್ಲವಾ?’ ಕೇಳಿದೆ. ’ನೀನು ಬರಬಹುದು, ಆದರೆ ಬಂದು ಏನ್ ಮಾಡ್ತೀಯಾ, ಸುಮ್ಮನೆ ಹೊಟೆಲ್ ರೂಮ್ ನಲ್ಲಿ ಇರಬೇಕು ಅಷ್ಟೇ. ನಾನು ಹೋಗುವ ಏರಿಯಾನಲ್ಲಿ ನೋಡುವಂತಾದ್ದು ಏನಿದೆಯೋ ಗೊತ್ತಿಲ್ಲ. ನನಗೇನಾದ್ರೂ ಕ್ಲಯಂಟ್ ಜೊತೆಯಲ್ಲೇ ಡಿನ್ನರ್ ಮಾಡಿದರೆ ಸಂಜೆ ಸುತ್ತಾಡೊಕೂ ಆಗಲ್ಲ. ದಿಸ್ ಇಸ್ ಅ ಟಫ್ ವನ್’ ಅಂದ.
 
’ನಿನಗೆ ಮನೆಗೆ ೧೦ ದಿನಕ್ಕೆ ಏನೇನು ಬೇಕೋ ಎಲ್ಲಾ ತರೋಣ ಬಾ. ನಾನು ಪ್ಯಾಕ್ ಮಾಡಿಕೋ ಬೇಕು’ ಹರಿಬಿರಿ ಮಾಡಿದ. ಸದ್ದಿಲ್ಲದೆ ಅವನ ಜೊತೆ ನಡೆದೆ. ರಾತ್ರಿ ಹನ್ನೊಂದುವರೆಗೆ ಇಡೀ ೨೪ ಗಂಟೆ ವಹಿವಾಟು ನಡೆಸುವ ವಾಲ್ಮಾರ್ಟ್ ಗೆ ಹೋಗಿ ೧೦ ದಿನಕ್ಕೆ ಎಂದು ಮನಸ್ಸಿಗೆ ತೋಚಿದ್ದು ತೆಗೆದುಕೊಂಡೆವು. ಮನೆಗೆ ಬಂದು ಪ್ಯಾಕಿಂಗ್. ’ದಿನಾ ಫೋನ್ ಮಾಡ್ತೀಯಾ ತಾನೇ? ನಾನೇ ಮಾಡ್ಲಾ? ಎಂದೆಲ್ಲಾ ಕೇಳಿಕೊಂಡೆ. ಒಬ್ಬಳೇ ಇಡೀ ಪರಿವಾರವನ್ನು ಬಿಟ್ಟು ಈ ಹುಡುಗನ ಹಿಂದೆ ಬಂದಿದ್ದಾಗಲೂ ಇಷ್ಟು ಬೇಜಾರಾಗಿರಲಿಲ್ಲ. ಈಗ ಧೃತಿಗೆಡುತ್ತಿದ್ದೆ. ’ಅಪ್ಪ-ಅಮ್ಮನ ಜೊತೆ ದಿನಾ ಮಾತಾಡಿಕೋ, ರಾತ್ರಿ ವಾಕ್ ಮುಗಿಸಿ ಬೇಗ ಮನೆಗೆ ಬಂದುಬಿಡು, ಸೆಲ್ ಫೋನ್ ಯಾವಾಗಲೂ ಹತ್ತಿರ ಇಟ್ಟುಕೋ, ಯಾವ ಅಪರಿಚಿತ ಬಂದರೂ ಬಾಗಿಲು ತೆಗೀಬೇಡ, ಒವನ್ ಆನ್ ಮಾಡುವಾಗ ಹುಶಾರು, ದಿನಾ ಅಡಿಗೆ ಮಾಡಿಕೋ, ಟಿವಿ-ಪಿಚ್ಚರ್ ನೋಡು, ಜಿಆರ್.ಇ ಓದಿಕೋ...ಬೇಸಿಕಲಿ ಖುಷಿಯಾಗಿರು" ಪ್ರಶಾಂತ ಗಡಗಡ ಇನ್ಸ್ಟ್ರಕ್ಷನ್ ಕೊಡುತ್ತಿದ್ದ. ಅಮ್ಮನೇ ಪ್ರಶಾಂತನ ರೂಪದಲ್ಲಿ ಬಂದತಿತ್ತು.
ಬೆಳಿಗ್ಗೆ ಅವನನ್ನು ಕಳಿಸಿಕೊಟ್ಟೆ. ಕೆಲಸದಿಂದ ಹಾಗೇ ಏರ್ಪೋರ್ಟಿಗೆ ಹೊರಡುವವನಿದ್ದ. ದಿನಾ ಬೆಳಿಗ್ಗೆ ಮನೆ ಭಣಗುಡುತ್ತಿತ್ತು, ಆದರೆ ರಾತ್ರಿಯವರೆಗೆ. ಇವತ್ತು ಇನ್ನು ಹತ್ತು ದಿನ ನಾನೊಬ್ಬಳೇ ಎನಿಸಿ ವಿಚಿತ್ರವಾದ ಅನುಭವವಾಯಿತು.
 
ಅಮೆರಿಕಾಗೆ ಬಂದಮೇಲೆ ಒಂಟಿತನದ ನಾನಾ ಮಜಲುಗಳನ್ನು ಅನುಭವಿಸುವ ದುರ್ಭಾಗ್ಯ ಸಿಕ್ಕಿತ್ತು. ಎಲ್ಲವೂ ನನ್ನ ಮೇಲೆ ಆಪಾದಿಸಿದ ಅಥವಾ ಹೊರಿಸಿದ ಒಂಟಿತನವಾದ್ದರಿಂದ ಅದನ್ನು ನಾನು ದ್ವೇಷಿಸಿದ್ದೆ. ಅದಕ್ಕೆ ಕಾರಣರಾದವರ ಮೇಲೂ ಕೋಪ ಮಾಡಿಕೊಂಡಿದ್ದೆ. ಊರಲ್ಲಿ ಆಗಾಗ ಅಪ್ಪ-ಅಮ್ಮ ಮದುವೆಗೋ, ಹಳ್ಳಿಯ ಯಾವುದಾದರೂ ಕಾರ್ಯಕ್ರಮಕ್ಕೋ ಹೋಗುವ ಮುಂಚೆ ಪಕ್ಕದ ಮನೆಯ ಎಲ್ಲಾ ಆಂಟಿಗಳಿಗೂ ಹೇಳುತ್ತಿದ್ದರು. ರಾತ್ರಿ ಮನೆಯಲ್ಲಿ ಬಂದು ಮಲಗಲು ಮನೆಕೆಲಸಕ್ಕೆ ಬರುತ್ತಿದ್ದ ಅವರ ಫೇವರೆಟ್ ಅಸಿಸ್ಟೆಂಟ್ ಗೂ ಹೇಳುತ್ತಿದ್ದರು. ಇಲ್ಲವೇ ನಮ್ಮ ಸಂಬಂಧಿಕರಲ್ಲೇ ಯಾರಿಗಾದರೂ ನಮ್ಮನ್ನು-ಮನೆಯನ್ನು ಕಾಯುವ ಡ್ಯೂಟಿ ವಹಿಸಿಬಿಡುತ್ತಿದ್ದರು. ಒಂದೇ ಒಂದು ಸಾರಿ ಅಪ್ಪ-ಅಮ್ಮ ನನ್ನಕ್ಕ ಮತ್ತು ತಮ್ಮನನ್ನು ಯಾವುದೋ ಪೂಜೆಯ ಕಾರಣಕ್ಕೆ ಒಂದು ದಿನದ ಮಟ್ಟಿಗೆ ಎಲ್ಲಿಗೋ ಕರೆದುಕೊಂಡು ಹೋಗಬೇಕಿತ್ತು. ಆಗ ನನಗೆ ಸ್ಕೂಲಿನಲ್ಲಿ ಟೆಸ್ಟ್ ನಡೆಯುತ್ತಿದ್ದರಿಂದ ಮನೆಯಲ್ಲೇ ಇರಬೇಕಾಗಿತ್ತು. ಒಬ್ಬಳೇ ಮಜವಾಗಿ ಇರಬಹುದು ಎಂದು ಸ್ವಲ್ಪ ಅನ್ನಿಸಿತ್ತಾದರೂ ಸ್ಕೂಲಿನಿಂದ ಖಾಲಿ ಮನೆಗೆ ಬಂದು ಬೇಸ್ತು ಬಿದ್ದಿದ್ದೆ. ತಕ್ಷಣ ಪಕ್ಕದ ಮನೆಗೆ ಹೋಗಿ ಅಲ್ಲೇ ಕಾಲ ಕಳೆದು ಗೆಳತಿಯ ಜೊತೆಯಲ್ಲಿದ್ದು ಬೆಳಿಗ್ಗೆ ಮನೆಯವರು ಬಂದಾಗ ಹಿಂತಿರುಗಿದ್ದೆ. ನಮ್ಮ ಮನೆಗೂ ನಮ್ಮ ಅಕ್ಕಪಕ್ಕದ ಮನೆಗೂ ೨೦ ಅಡಿ ಅಂತರವಿದ್ದಿರಬಹುದು. ಮನೆ ಬಾಗಿಲು ತೆಗೆದ ತಕ್ಷಣ ದಾರಿಯಲ್ಲಿ ಓಡಾಡುವ ಐವತ್ತು ನೂರು ಜನರಿರುತ್ತಿದ್ದರು. ಎಮ್ಮೆ-ಹಸು-ನಾಯಿ-ಸೈಕಲ್ -ಸ್ಕೂಟರ್-ಕಾರ್ ಗಳ ನಿರಂತರ ಚಲನೆಯಿರುತ್ತಿತ್ತು. ಹೊರಗೆ ಬಂದು ನಿಂತರೆ ಹೊತ್ತು ಹೋಗುತ್ತಿದ್ದುದೇ ಗೊತ್ತಾಗುತ್ತಿರಲಿಲ್ಲ. ನಾನೇ ಪ್ರಪಂಚವಾಗುತ್ತಿದ್ದೆ. ಸುತ್ತಲದ್ದೆಲ್ಲ ನನ್ನದಾಗುತ್ತಿತ್ತು. ಒಂಟಿತನ ಮತ್ತು ನಿಶ್ಯಬ್ಧತೆ ಕಕ್ಕಸ್ಸು ಮನೆಯಲ್ಲಿ ಕೂತಾಗ ಸಿಗುವ ತೀರಾ ಬ್ಲಿಸ್ ಫುಸ್ ಸ್ಟೇಟ್ ಆಗಿತ್ತು. ಒಂಟಿತನವಾದರೂ ಹೌದು. ನಿಶ್ಯಬ್ಧತೆಯಂತೂ ಬಹಳ ದುಬಾರಿಯಾಗಿತ್ತು.
 
ಇಡೀ ಬೆಳಿಗ್ಗೆ ಕೂತು ಹತ್ತು ದಿನವನ್ನು ತುಂಬಾ ಬ್ಯುಸಿಯಾಗಿ ಕಳೆಯುವ ಪ್ಲಾನ್ ಮಾಡಿದೆ. ಜಿ.ಆರ್.ಇ ಯನ್ನು ಇಷ್ಟು ಮುಗಿಸಬೇಕು, ಆ ಕೋಣೆ ಕ್ಲೀನ್ ಮಾಡಬೇಕು, ಈ ಗಿಡಕ್ಕೆ ರಿಪಾಟ್ ಆಗಬೇಕು, ಆ ಮೂವಿ ನೋಡಬೇಕು, ಆ ಪೇಂಟಿಂಗ್ ಮುಗಿಸಬೇಕು, ಬಜ್ಜಿ ಮಾಡಿಕೊಂಡು ತಿನ್ನಬೇಕು...ಲಿಸ್ಟ್ ತಯಾರಿಸಿದೆ. ಹಿಂದಿನ ದಿನಗಳ ಉಳಿದಿದ್ದ ಊಟ ಮಧ್ಯಾನ್ಹ ಖಾಲಿ ಮಾಡಿದೆ. ಪ್ರಶಾಂತ ಸಂಜೆ ಎಂಟರಷ್ಟಕ್ಕೆ ಸಿನ್ಸಿನಾಟಿ ತಲುಪಿದ್ದ. ಸಮಾಧಾನದಿಂದ ಸಂಜೆ ವಾಕ್ ಮಾಡಿ ಬಂದು ಕಯ್ಯಲ್ಲಿ ಚಿಪ್ಸ್ ಹಿಡಿದು ಟಿವಿ ಮುಂದೆ ಕೂತೆ. ಟಿವಿಯ ಸದ್ದು ನನ್ನ ಮನೆ ತುಂಬಾ ಜನರಿದ್ದಾರೆನ್ನುವ ಭ್ರಮೆ, ಧೈರ್ಯ ತಂದಿತ್ತು. ಅದೇನು ನೋಡುತ್ತಾ ಕೂತಿದ್ದೆನೋ...ಮತ್ತೆ ಟೈಮ್ ನೋಡಿದಾಗ ರಾತ್ರಿ ೧೨ ಗಂಟೆ! ಅಯ್ಯೋ ಇದೇನು ಈ ಪಾಟಿ ಟಿವಿ ನೋಡಿದ್ದೀನಿ ಎಂದು ಒಂದು ಕ್ಷಣ ಗಾಬರಿಯಾದರೂ ನಾಳೆ ಮಾಡುವುದೇನಿದೆ? ಯಾರು ಬರುತ್ತಾರೆ ಯಾರು ಹೋಗುತ್ತಾರೆ ಎಂದುಕೊಂಡು ಭಂಡಳಂತೆ ಟಿವಿ ಮುಂದೆಯೇ ಬೆಚ್ಚಗೆ ಹೊದ್ದು ಕೂತೆ. ಬೆಳಗ್ಗಿನ ಜಾವದವರೆಗೂ ನೋಡಿಯೇ ನೋಡಿದೆ. ಆ ಹೊತ್ತಿನಲ್ಲಿ ತೂಕಡಿಸಿಕೊಂಡು ಟಿವಿ ನೋಡಿದ್ದು ಅದೇನು ಅರ್ಥವಾಯಿತೋ ಬಿಟ್ಟಿತೋ, ನನ್ನ ಮುಂದಿನ ಹತ್ತು ದಿನದ ರುಟೀನ್ ಗೆ ಒಂದು ತಳಪಾಯ ಹಾಕಿತು.
 
ಬೆಳ್ಳಂಬೆಳಿಗ್ಗೆ ರಾತ್ರಿಯ ನಿದ್ದೆ ತೆಗೆಯುತ್ತಿದ್ದೆ. ಮಧ್ಯಾನ್ಹ ಎದ್ದು ಪಶ್ಚಾತಾಪ ಪಡುತ್ತಿದ್ದೆ. ಪೂರ್ವ-ಪಶ್ಚಿಮ ತೀರಗಳ ಸಮಯ ವ್ಯತ್ಯಾಸ ಇದ್ದುದರಿಂದ, ಅವನು ಬ್ಯುಸಿ ಇರುತ್ತಿದ್ದುದರಿಂದ ಪ್ರಶಾಂತ ಫೋನ್ ಮಾಡಿದರೆ ಮಾತ್ರ ಮಾತಾಡಲು ಸಿಗುತ್ತಿತ್ತು. ’ಏನು ಮಾಡಿದೆ ಬಿಲ್ಲು? ಜಿ.ಆರ್.ಇ ಗೆ ಓದುತ್ತಿದ್ದೀಯ? ಏನು ಹೇಳಲೋ, ಸಿಕ್ಕಾಪಟ್ಟೆ ಬ್ಯುಸಿ. ನನಗೆ ಹೆಲ್ಪ್ ಮಾಡಲು ಸ್ಟೀವ್ ಅಂತ ಒಬ್ಬನನ್ನು ಬಿಟ್ಟಿದ್ದಾರೆ. ವಾಟ್ ಅ ಕ್ರಾಪಿ ಮ್ಯಾನ್ ಗೊತ್ತಾ...ಏನೂ ಬರಲ್ಲ. ಇವರೆಲ್ಲ ಎದು ಹೇಗೆ ಇಷ್ಟು ವರ್ಷದಿಂದ ಸರ್ವಿಸ್ ನಲ್ಲಿದ್ದಾರೊ? ಮ್ಯಾನ್!..’ ಪ್ರಶಾಂತ ಅವನದೇ ಲಹರಿಯಲ್ಲಿ ಹೇಳುತ್ತಿರುತ್ತಿದ್ದ. ನಾನು ಅದೇ ಸೋಫಾದ ಮೂಲೆಯಲ್ಲಿ ಕುಳಿತು ಕೇಳುತ್ತಿರುತ್ತಿದ್ದೆ. ನನ್ನ ಸುತ್ತಲೂ ತಟಸ್ಥತೆಯಿರುತ್ತಿತ್ತು. ಅವನು ಹೇಳುವ ವ್ಯಕ್ತಿ, ವಿಷಯಗಳನ್ನು ನನ್ನ ಸುತ್ತ ಕಲ್ಪಿಸಿಕೊಂಡು ಖುಷಿ ಪಡುತ್ತಾ ’ಆಮೇಲೆ, ಆಮೇಲೆ’ ಎನ್ನುತ್ತಾ ಕೇಳುತ್ತಿದ್ದೆ. ’ಒಕೆ. ಹೊರಡಬೇಕು. ಮತ್ತೆ ಆದಾಗ ಮಾಡ್ತಿನಿ. ಟೇಕ್ ಕೇರ್, ಹ್ಯಾವ್ ಫನ್’ ಎಂದು ಇಡುತ್ತಿದ್ದ. ನಾನೂ ಫೋನಿಟ್ಟು ಮತ್ತೆ ಟಿವಿಗೋ, ಯೋಚನೆಗೋ ಮರಳುತ್ತಿದ್ದೆ. ಒಂದೆರಡು ದಿನಗಳಂತೂ ರಾತ್ರಿಯಾದಾಗ ಮನೆಯಲ್ಲಿ ಲೈಟ್ ಕೂಡಾ ಹಾಕಿರಲಿಲ್ಲ.
 
ಕೆಲವೊಮ್ಮೆ ವಾಕ್ ಮಾಡುವುದನ್ನು ಬಿಟ್ಟು ಹೊರಗೆ ಎಲ್ಲಾದರೂ ಹೋಗಬೇಕು ಎನ್ನಿಸಿದರೂ ಮೈಲಿಗಟ್ಟಲೆ ಒಬ್ಬಳೇ ಹೋಗಬೇಕಲ್ಲಾ ಎಣಿಸಿ ಸುಮ್ಮನಾಗುತ್ತಿದ್ದೆ. ಮುಂಚೆ ಪಾರ್ಕ್ ಗೆ ಹೋಗುತ್ತಿದ್ದೆ. ಅಲ್ಲಿ ಬರುವ ಅಮ್ಮಂದಿರು, ಅವರ ಮರಿಗಳನ್ನು ನೋಡಿ ಸಂತೋಷಪಡುತ್ತಿದೆ. ಇತ್ತೀಚೆಗೆ ಪಾರ್ಕ್ ಬೋರೆನಿಸುತ್ತಿತ್ತು, ನನ್ನ ಒಂಟಿತನವನ್ನು ಎತ್ತಿ ತೋರಿಸುತ್ತಿತ್ತು. ಒಬ್ಬಳೇ ಒಂದು ಚೇರಿನ ಮೇಲೆ ಕೂತು ಎಲ್ಲರ ಕಲರವವನ್ನು ನೋಡುವುದು ಅದೇ ಕಲರವಕ್ಕಾಗಿ ಆಸೆ ಪಡುವಂತಾಗಿತ್ತು. ಹೋಗುವುದನ್ನು ನಿಲ್ಲಿಸಿದೆ. ನಾನು ಎಚ್-೪ ವೀಸಾ (ಇದನ್ನು ನಮ್ಮ ಹೊಟ್ಟೆ ಉರಿಸಲು ಡಿಪೆಂಡೆಂಟ್ ವೀಸಾ ಅಂತಲೂ ಕರೆಯುತ್ತಾರೆ) ದಲ್ಲಿದ್ದುದರಿಂದ ನನಗಿನ್ನೂ ಡ್ರೈವಿಂಗ್ ಲೈಸನ್ಸ್ ಸಿಕ್ಕಿರಲಿಲ್ಲ. ಕಲಿಕೆಯ ಲೈಸನ್ಸ್ ನಲ್ಲಿ ಕಾರ್ ಓಡಿಸಿದ್ದರೂ ರಸ್ತೆಗಳಲ್ಲಿ ಕಿತ್ತುಹರಿದುಕೊಂಡು ಹೋಗುತ್ತಿವೆ ಎನಿಸುತ್ತಿದ್ದ ವಾಹನಗಳ ಮಧ್ಯೆ ಒಬ್ಬಳೇ ಓಡಿಸುವ ಧೈರ್ಯ ಇರಲಿಲ್ಲ. ಅದೇ ವೀಸಾ ದೆಸೆಯಿಂದ ನಾನು ಕೆಲಸ ಮಾಡುವಂತೆಯೂ ಇರಲಿಲ್ಲ. ವರ್ಕ್ ಪರ್ಮಿಟ್ ಸಿಗುವವರೆಗೂ ಕಾಯಬೇಕಿತ್ತು. ಹೋಗಲಿ, ಸಾಫ್ಟ್ ವೇರ್ ಕಲಿತಿದ್ದರೆ ಯಾವ ಕಂಪನಿಯಾದರೂ ನನಗೆ ಎಚ್-೧ ವೀಸಾ ಸ್ಪಾನ್ಸರ್ ಮಾಡುತ್ತಿತ್ತೇನೋ...ನಾನು ಹೇಳಿ ಕೇಳಿ ಬಿ.ಬಿ.ಎಮ್ ಕೇಸ್. ನನಗ್ಯಾರು ಕೊಡುತ್ತಾರೆ ತರಾತುರಿಯಲ್ಲಿ ಕೆಲಸ?!
ಬೇರೆ ಅಮೆರಿಕನ್ ಪ್ರಜೆಗಳಿಗೆ, ಗ್ರೀನ್ ಕಾರ್ಡ್ ಹೋಲ್ಡರ್ ಗಳಿಗೆ, ಎಚ್-೧ ವೀಸಾದವರಿಗೆ ಇರುವಂತೆ ನನಗೆ ಸೋಷಿಯಲ್ ಸೆಕ್ಯುರಿಟಿ ನಂಬರ್ ಇರಲಿಲ್ಲ. ಸೋಷಿಯಲ್ ಸೆಕ್ಯುರಿಟಿ ನಂಬರ್ ಅಮೆರಿಕಾದ ಸರ್ಕಾರ ಅದರ ಪ್ರಜೆಗಳನ್ನು ಅಥವಾ ಲೀಗಲ್ ನಿವಾಸಿಗಳನ್ನು ಗುರುತಿಸುವ ಏಕಮೇವಾದ್ವಿತೀಯ ವಿಧಾನ. (ಈಗ ನಮ್ಮಲ್ಲಿ ಆಧಾರ ನಂಬರ್ ಪ್ರಾಜೆಕ್ಟ್ ನಡೀತಿದೆ ನೋಡಿ ಆಥರ) ಸರ್ಕಾರ ನನಗೆ ಒಂದು ಟ್ಯಾಕ್ಸ್ ಐಡೆಂಟಿಟಿ ಕೊಟ್ಟಿತ್ತು. ನನ್ನ ಗಂಡ ಸಂಪಾದಿಸುವ ಹಣದಲ್ಲಿ ನಾನೂ ಬದುಕುತ್ತಿದ್ದೇನೆ, ಅವನ ಸಂಬಳದಲ್ಲಿ ಟ್ಯಾಕ್ಸ್ ಹಿಡಿಯುವ ಮೊದಲು ನಾನೂ ಒಂದು ಬಾಯಿ ಇದ್ದೇನೆ ಅವನಿಗೆ’ ’ಡಿಪೆಂಡೆಂಟ್’ ಆಗಿ ಎಂದು ಗುರುತಿಸಿ...ಎಂದು ಸಾರಲು. ಈ ಗುರುತು ಬಿಟ್ಟರೆ ನಾನು ಇಡೀ ಅಮೆರಿಕಾದ ಸಿಸ್ಟೆಮ್ ನಲ್ಲಿ ’ಇನ್ವಿಸಿಬಲ್’ ಆಗಿದ್ದೆ. ಅಸ್ತಿತ್ವ ಇಲ್ಲದವಳಾಗಿದ್ದೆ.
ನಾನು ಹೋಗಿ ಮಾತನಾಡಿಸಿ ಬರುವ, ಅಥವಾ ಮನೆಗೆ ಕರೆಯುವ ಸಲುಗೆಯಿರುವ ಪರಿಚಿತರು ಇಂಡಿಯಾಗೋ ಅಥವಾ ವೆಕೇಷನ್ನಿಗೋ ಹೋಗಿದ್ದರಾದ್ದರಿಂದ ಒಂಟಿತನ ಶಿಕ್ಷೆ ಎನಿಸುವಂತಾಗಿತ್ತು. ನನ್ನ ಕರ್ಮದಲ್ಲಿ ಈ ದಿನಗಳು ನಾನು ಒಂಟಿಯಾಗೇ ಕಳೆಯಬೇಕೆಂದು ನಿರ್ಧರಿತವಾಗಿವೆ ಎಂದುಕೊಂಡು ಅಲ್ಪ ಸ್ವಲ್ಪ ಕಲಿತಿದ್ದ ವಿಪಸನ ಮಾಡಲು ಪ್ರಯತ್ನಿಸಿದೆ. ವಿಪಸನ ಮಾಡಲು ಮನಸ್ಸು ತಯಾರಾಗಿರಲಿಲ್ಲ, ಬರೀ ಗದ್ದಲ. ಮನಸ್ಸಿಗೆ ಬೇಕಿಲ್ಲದಿದ್ದಾಗ ಅದು ಹೇಗೆ ಕೇಳುತ್ತದೆ? ವಿಪಶನವೆಂಬ ಸಾಧು ಕ್ರಿಯೆಯೂ ಹೇರಿಕೆಯೆನಿಸಿತು. ಫಜೀತಿ ಎನಿಸಿತು. ಇದ್ಯಾವ ಸುಖಕ್ಕೆ ನಾನು ಇಲ್ಲಿಗೆ ಬಂದೆ? ಇದ್ಯಾವ ಸುಖಕ್ಕೆ ನನ್ನ ಹೆತ್ತವರು ನನ್ನನ್ನು ದೂರದೇಶದಲ್ಲಿ ವಾಸಿಸುವ ಹುಡುಗನಿಗೆ ಗಂಟು ಹಾಕಿದರು ಎಂದೆಲ್ಲಾ ಯೋಚನೆ ಬರುತ್ತಿತ್ತು.
 
ನಾನು ವಾಚಾಳಿಯಲ್ಲ. ನನ್ನಷ್ಟಕ್ಕೆ ನಾನು ಏಕಾಂಗಿಯಾಗಿ, ಮೌನವಾಗಿರುವುದನ್ನು ಖುಷಿಪಡುತ್ತಿದ್ದೆ. ಮೌನದಲ್ಲಿ ಮನಸ್ಸು ಮಾತಾಡುತ್ತಿತ್ತು, ಡೈರಿಯ ಪುಟಗಳರಳುತ್ತಿದ್ದವು. ಹಾಗೆ ಏಕಾಂತ ಮೌನವನ್ನು ಖುಷಿಟ್ಟರೂ ನನಗೂ ನನ್ನ ಪ್ರತಿದಿನದ ’ಸೋಷಿಯಲೈಜ಼್’ ಮಾಡುವ ’ಮಾತುಕತೆಯ’ ಡೋಸ್ ಬೇಕಾಗುತ್ತಿತ್ತು. ಊರಲ್ಲಿದ್ದಾಗ ಪಕ್ಕದ ಮನೆಯವರೊಡನೆಯೋ, ಬಸ್ ನಲ್ಲಿ ಪಕ್ಕ ಕೂತ ಆಂಟಿಯೊಡನೆಯೋ, ಅಕ್ಕನೊಡನೆಯೋ, ಅಮ್ಮ-ಅಪ್ಪನೊಡನೆಯೋ, ಸ್ನೇಹಿತರೊಡನೆಯೋ ಸ್ವಲ್ಪ ಹೊತ್ತು ಮಾತಾಡಿದಾಗ ಎಲ್ಲಾ ಸರಿಯಾಗಿರುತ್ತಿತ್ತು. ಇಲ್ಲಿಗೆ ಬಂದ ಮೇಲೆ ಬಸ್ ನಲ್ಲಿ ಸಿಗುತ್ತಿದ್ದ ಆಂಟಿ, ಕಾಲೇಜಿಗೆ ಹೋಗುವಾಗ ಸಿಗುತ್ತಿದ್ದ ಬೇಲದ ಕಾಯಿ, ನೆಲ್ಲಿಕಾಯಿ, ಎಲಚಿ ಕಾಯಿ ಮಾರುತ್ತಿದ್ದ ಅಜ್ಜಿ, ನಮ್ಮನೆ ಕೆಲಸದವರು, ಅಕ್ಕನೊಟ್ಟಿಗಿನ ಮುನಿಸು, ತಮ್ಮನೊಟ್ಟಿಗಿನ ಗಲಾಟೆ ಎಲ್ಲವೂ ಈಗ ಬೇಕೇ ಬೇಕು ಎನಿಸತೊಡಗಿದವು. ಸಿಗವು ಎಂದು ಗೊತ್ತು. ನನ್ನ ಸ್ಥಿತಿಗೆ ಅಳು ಬರುತ್ತಿತ್ತು. ಇವಳು ಮಹಾ ಗಟ್ಟಿಗಿತ್ತಿ, ಬಜಾರಿ, ಎಲ್ಲಾದರೂ ನಿಭಾಯಿಸುತ್ತಾಳೆ ಎಂದೆಲ್ಲಾ ಹರಸಿದ್ದ ನೆಂಟರ ಹರಕೆಯೂ ಹರಿದು ನೆಲಸೇರಿ ನಾನು ಕುಯ್ಯೋ ಮರ್ರೋ ಎನ್ನುವಂತಾಗಿದ್ದೆ. ಇಲ್ಲಿ ಒಂಟಿತನವೂ ಕ್ರೂರ, ಮೌನವೂ ಕ್ರೂರ, ನಿಶ್ಯಬ್ಧವೂ ಕ್ರೂರ ಎನಿಸತೊಡಗಿತು.
ಇಡೀ ಹತ್ತು ದಿನ ಇಷ್ಟವಿಲ್ಲದಿದ್ದರೂ ಕೈಕೇಯಿಯ ಥರ ಕುಯ್ಯೋ ಅಂತ ಕತ್ತಲೆಯಲ್ಲೇ ಕಳೆದಿದ್ದೆ. ಹಲ್ಲುಜ್ಜಲೂ ಬೇಜಾರು, ಸ್ನಾನ ಮಾಡಲೂ ಸೋಮಾರಿತನ. ನಾನು ಮಾಡಿಕೊಂಡಿದ್ದ ’ಟು ಡೂ’ ಲಿಸ್ಟ್ ಅದೆಲ್ಲಿತ್ತೋ ಅದಕ್ಕೇ ಗೊತ್ತು! ಶನಿವಾರ ಬೆಳಗ್ಗಿನ ಜಾವ ಪ್ರಶಾಂತ ಬಂದು ಬಿಡುತ್ತಾನೆಂದು ಹಿಂದಿನ ದಿನವೇ ಹಬ್ಬಕ್ಕೆ ತಯಾರಿ ಮಾಡುವಂತೆ ತೊಳೆದು, ಒರೆಸಿ, ಅಡಿಗೆಮಾಡಿ ತರಾತುರಿಯಿಂದ ತಯಾರಾಗಿದ್ದೆ. ಪ್ರಶಾಂತ ಬಂದೇ ಬಂದ. ಅವನ ಭುಜದ ಭಾರವನ್ನೆಲ್ಲಾ ನನಗೆ ವರ್ಗಾಯಿಸಿಬಿಡುವ ಒಂದು ಭಾರೀ ಹಗ್ ಕೊಟ್ಟ. ಹಲ್ಲುಜ್ಜಿದ. ರೆಡ್ ಐ ಫೈಟ್ (ರಾತ್ರೋ ರಾತ್ರಿ ಪಯಣಿಸುವ ಪ್ಲೈಟ್) ಹಿಡಿದು ಬಂದಿದ್ದರಿಂದ ಹಾಗೇ ಹೋಗಿ ಬೋರಲಾದ. ಅವನು ಬಂದಾಗ ತಿಂಡಿ ತಿನ್ನುತ್ತಾ ಅದು ಮಾತಾಡಬಹುದು, ಇದು ಮಾತಾಡಬಹುದು ಎಂದೆಲ್ಲ ಕಾದಿದ್ದ ನಾನು ತಲೆ ಕೆರೆದುಕೊಂಡು ಕೂತೆ.
ಎದ್ದ ಹುಡುಗ ಹೊಟ್ಟೆ ತುಂಬಾ ಊಟ ಮಾಡಿ ’ಹೇಗಿದ್ದೀಯಾ? ದಿಸ್ ಇಸ್ ಲೈಫ್! ಈಗ ನಾನು ಸ್ವಲ್ಪ ವೈಂಡ್ ಡೌನ್ ಮಾಡಿಕೋತೀನಿ ಬಿಲ್ಲೀ. ಸಂಜೆ ಶಾಪಿಂಗ್ ಹೋಗಣ’ ಎಂದು ಟಿವಿ ಹಾಕಿಕೊಂಡ! ಇಡೀ ಅಷ್ಟು ದಿನ ಅಪ್ಯಾಯಮಾನವಾಗಿ ಕೇಳಿದ್ದ ಟಿವಿಯ ಸದ್ದು ಈಗ ಅಸಹನೀಯವಾಗಿತ್ತು. ಅವನು ಯಾವುದೋ ಕಾಮಿಡಿ ನೋಡುತ್ತಿದ್ದ. ಇದೇನು ನೋಡಿಕೊಂಡು ಕೂತಿದ್ದಾನೆ? ನಾನು ಈ ಮನೆಯಲ್ಲಿ ಇರುವುದೂ ಇವನಿಗೆ ಕಾಣುತ್ತಿಲ್ಲವಾ? ನನ್ನ ಜೊತೆ ಮಾತನಾಡಬೇಕು ಎನಿಸುತ್ತಿಲ್ಲವಾ? ಆಶ್ಚರ್ಯವಾಯಿತು. ದುಃಖವಾಯಿತು. ಯಾರಿವನು? ಇವನ ಬರುವಿಕೆಯನ್ನೇ ನಾನು ಕಾಯುತ್ತಿದ್ದೆನಾ? ನನ್ನ ಖುಷಿ ಸಂತೋಷಗಳನ್ನು ಹಂಚಿಕೊಳ್ಳಬೇಕಿರುವುದು ಇವನ ಜೊತೆಯಾ? ಹೆಂಡತಿಯೊಟ್ಟಿಗೆ ಶಾಪಿಂಗ್ ಹೋದರೆ ಹೆಂಡತಿಗೆ ಸಮಾಧಾನವಾಗುತ್ತದೆ ಎಂದುಕೊಳ್ಳುವ ಹೆಡ್ಡನನ್ನು ಮದುವೆಯಾಗಿದ್ದೀನಾ?! ಸಡನ್ನಾಗಿ ಪ್ರಶಾಂತ ಅಪರಿಚಿತನಾಗಿದ್ದ. ನನ್ನ ದುರದೃಷ್ಟಕ್ಕೋ ಏನೋ...ಪ್ರಶಾಂತ ಮತ್ತೆ ಭಾನುವಾರ ರಾತ್ರಿ ಅದೇ ಕ್ಲಯಂಟ್ ಹತ್ತಿರ ಇನ್ನೂ ಹದಿನೈದು ದಿನಕ್ಕೆ ಹೊರಡುವ ತಯಾರಿ ನಡೆಸಿದ. ಇದೇ ಪರಿ ೪-೫ ತಿಂಗಳು ಮುಂದುವರಿಯಿತು. ಲಾಂಗ್ ಡಿಸ್ಟೆನ್ಸ್ ಸಂಬಂಧ ಎಂದರೇನು? ಅದರಲ್ಲಿ ಯಾರಿಗೆ ಏನು ಲಾಭ-ನಷ್ಟ? ಯಾರಿಗೆ ಏಟು? ಯಾರಿಗೆ ಗೂಟ? ಈ ಮಹಾಜ್ನಾನದ ಅನುಭವ ಪಾಠ ಶುರುವಾಯಿತು.
 
 
(ಮುಂದುವರಿಯುವುದು)  
 
 
 
 
 
 
Copyright © 2011 Neemgrove Media
All Rights Reserved