ತಮ್ಮಯ್ಯ ಗೌಡರ ಮಗ ತಿಮ್ಮರಾಯಿ ಲಗ್ನವಾದದ್ದು

(ಸಂಗ್ರಹ)
 
ಮಗನ ನಗ್ನ ಇಟಕಂಡಿದ್ದೀವಿ ನೀವೂ ನಗ್ನಕೆ ತಪ್ಪದೇ ಬರಬೇಕು ಎಂದು ಅವಿದ್ಯಾವಂತೆ ನಿಂಗಮ್ಮ ಊರಿನ ಮನೆಮನೆಗೂ ಹೋಗಿ ಜನರನ್ನು ಮಗನ ಮದುವೆಗೆ ಕರೆದು ಬರುತ್ತಿದ್ದಳು. ಹೆಚ್ಚಿನವರು ಹೂಂ ಆಗ್ಲಿ, ಅದ್ಕೇನಂತೆ ಬರನಾ, ಅನ್ನುತ್ತಿದ್ದರು. ಕೆಲವು ಮನೆಯ ವಿದ್ಯಾವಂತ ಹೊಸ ತಲೆಮಾರಿನವರು. ಈ ಗೌಡ್ರ ಮನೆಯವರು ಮಗನ್ನೇ ಯಾಕೆ ನಗ್ನ ಮಾಡಕೆ ಹೊರಟವರೋ ಅಂತ ಆಡಿಕೊಂಡು ನಗುತ್ತಿದ್ದರು.
 
ತಮ್ಮಯ್ಯ ಗೌಡ ದೊಡ್ಡ ಕುಳ. ಅವರಿಗೆ ಒಂಬತ್ತು ಮಂದಿ ಮಕ್ಕಳು. ಆರು ಗಂಡು, ಮೂರು ಹೆಣ್ಣು. ಹಿರಿಯ ಮಗನ ಹೊರತು ಉಳಿದ ಮೂರು ಜನ ಗಂಡು ಮಕ್ಕಳು, ಎರಡು ಜನ ಹೆಣ್ಣು ಮಕ್ಕಳಿಗೆ ಮದುವೆಯಾಗಿತ್ತು. ಗೌಡರ ಯಜಮಾನಿಕೆಗೆ ಒಂದೇ ಕುತ್ತು. ಅದು, ಅವನ ಹಿರಿಯ ಮಗನನ್ನು ಲಗ್ನ ಮಾಡಲಾಗದ್ದು. ತಾನು ಧಾಂ ಧಾಂ ಅಂತ ಮದುವೆಯಾಗಿದ್ದು. ಏಳೂರ ಜನರನ್ನು ಕರೆದು ಬರ್ಜರಿ ಊಟ ಹಾಕಿದ್ದು, ಬಡ ಬಗ್ಗರಿಗೂ ಹೊಟ್ಟೆ ತುಂಬಾ ಊಟ ಮಾಡಿಸಿದ್ದು, ಒಳ್ಳೆಯ ಮಕ್ಕಳು ಹುಟ್ಟಲಿ ಎಂದು ತಿರುಪತಿಗೂ ಹೋಗಿ ಬೇಡಿಕೊಂಡು ಬಂದದ್ದು ಎಲ್ಲಾ ವೈನಾಗೇ ಆಗಿತ್ತು. ಮೊದಲನೆಯ ಕೂಸು ಗಂಡಾಗಿತ್ತು. ತಿರುಪತಿ ತಿಮ್ಮಪ್ಪನ ಪ್ರಸಾದ ಎಂದು ಅದಕ್ಕೆ ತಿಮ್ಮರಾಯ ಎಂದೂ ಹೆಸರಿಟ್ಟಿದ್ದಾಯ್ತು.
 
ಯಾಕೋ ಬೆಳೆ ಬೆಳೆಯುತ್ತಾ ತಿಮ್ಮರಾಯನಿಗೆ ಸರಿಯಾಗಿ ಮಾತು ಬರಲಿಲ್ಲ. ಮೆದಳೂ ಬೆಳೆಯಲಿಲ್ಲ, ದೇಹವೂ ಚಿಗುರಲಿಲ್ಲ. ಮೂವತ್ತು ವರ್ಷ ತುಂಬಿದರೂ ಮೀಸೆ ಬರಲಿಲ್ಲ. ಬಟ್ಟೆ ಬರೆ ಬಗ್ಗೆ ಇಷ್ಟ ಇಲ್ಲ. ಯಾವ ಕೆಲಸವೂ ಗೊತ್ತಿಲ್ಲ. ತಿಂದು ಉಂಡು ಊರ ಬೀದಿಗೆ ಹೋಗುವುದು. ಊರ ಹುಡುಗರ ಜೊತೆಗೆ ಗಜ್ಜುಗೋಲಿ, ಚಿಣ್ಣೆದಾಂಡು, ಉಪ್ಪುಪ್ಪು ಕಡ್ಡಿ, ಕೊಕ್ಕೊ, ಮರಕೋತಿ ಆಟ ಆಡಿಕೊಳ್ಳುತ್ತಿತ್ತು. ಊರವರು ಸತ್ಯ ಹರಿಶ್ಚಂದ್ರ, ಶನಿಮಹಾತ್ಮ ಅಥವಾ ದೇವಿ ಮಹಾತ್ಮೆ ಕಲಿಯಲು ತೊಡಗಿದಾಗ ಆಲಿ ಹೋಗಿ ಕೂತು ಕಾಲಕ್ಷೇಪ ಮಾಡುತ್ತಿತ್ತು. ಯಾರೂ ಜೊತೆಗೆ ಆಟವಾಡಲು ಸಿಗದಿದ್ದಾಗ ತಿಮ್ಮರಾಯ ಶಾಲೆಗೆ ಹೋಗಿ ಕೊರುತ್ತಿದ್ದ. ಊರ ಯಜಮಾನರ ಮಗ ಅಂತಲೊ, ಅಯ್ಯೋ ಪಾಪ ಅಂತಲೊ ಮೇಷ್ಟ್ರು ಅವನನ್ನು ಹೊರಗಟ್ಟುತ್ತಿರಲಿಲ್ಲ. ಮನೆಗೆ ಬಂದಾಗ ಅವ್ವ ’ಎಲ್ಲಿಗೆ ಹೋಗಿದ್ಯೋ ಈ ಹೊತ್ತು’ ಆಂತ ಕೇಳಿದರೆ ’ಪಾಪನ್ ಕಾಕಮಾಡರು’ ಎನ್ನುತ್ತಿದ್ದ. ಕೆಲವೊಮ್ಮೆ ಅಕ್ಕಸಾಲಿಯ ಕುಲುಮೆ ಮನೆ ಬೆಂಕಿ ಹತ್ತಿರ ಕುಳಿತು ಮೈಕಾಯಿಸಿಕೊಂಡು ಬರುತ್ತಿದ್ದ. ಅವ್ವ ’ಎಲ್ಲಿಗೆ ಹೋಗಿದ್ಯೋ’ ಎಂದು ಕೇಳಿದರೆ ಬುಸ್ ಬುಸ್ ಎಂದು ತೋರಿಸುತ್ತಿದ್ದ. ದೇವಸ್ತಾನದ ಹತ್ತಿರ ಹೋಗಿ ಬಂದರೆ ’ಗಳಂ ಗಳಂ’ ಎಂದು ಗಂಟೆ ಸದ್ದು ಮಾಡುತ್ತಿದ್ದ. ಹೇಳಿ ತಿಳಿಸುತ್ತಿದ್ದ . ಬಯಲು ಕಡೆಗೆ ಹೋಗಿ ಬಂದರೆ ಅಂಡು ತೊಳೆಯುವ ಹಾಗೆ ತೋರಿಸುತ್ತಿದ್ದ. ಬೆಳಿಗ್ಗೆ ಮನೆಬಿಟ್ಟು ಹೋದವನ ಸಂಜೆ ಮನೆಗೆ ಬರುತ್ತಾನೆ ಅಂತ ತಾಯಿಗೊಂದು ಸಮಾಧಾನ.
 
ತಮ್ಮಯ್ಯ ಗೌಡರ ವಿಚಾರವೆ ಬೇರೆ. ನನ್ನ ಕುಟುಂಬದಲ್ಲಿ ಊನನೊಬ್ಬ ಹುಟ್ಟಿ ನಮ್ಮ ಪಿರ್ಕಕ್ಕೆ ಅವಮಾನವಾಯಿತು. ನನ್ನ ಘನತೆಗೂ ಕುಂದಾಯಿತು. ಮೊದಲನೆಯವನನ್ನು ಬಿಟ್ಟು ಅವನ ಹಿಂದಿನವರನ್ನು ಲಗ್ನ ಮಾಡಬೇಕಾಯಿತು. ಮದುವೆಯಾಗದ ಒಬ್ಬ ಮಗ ಮನೆಯಲ್ಲಿ ಇದ್ದಾನೆ ಎಂದರೆ ನನ್ನ ಗೌಡಿಕೆಗೇ ಅವಮರ್ಯಾದೆ. ಏನು ಹೇಳುವುದು, ಏನು ಮಾಡುವುದು. ಗೊತ್ತಾಗದೆ ಗೌಡರು ಒದ್ದಾಡುತ್ತಿದ್ದರು.
 
ಏನು ಗೌಡ್ರೆ ನೀವು ಯೊಚ್ನೆ ಮಾಡದು. ಅವನಿಗೊಂದು ಎಂಥದಾದ್ರು ಒಂದು ತಂದು ಗಂಟಾಕಿ. ತಿದ್ಕಂಡ್ ಉಂಡಕಂಡ್ ಮನೇಲಿ ಬಿದ್ದಿರುತ್ತೆ. ನಿಮ್ಮನೆ ಏನು ಕಡಿಮೆ ಇದೆ. ನಿಮ್ಮ ಮಗ ಅಂದ್ರೆ ಯಾರಾದ್ರೂ ಹೆಣ್ಣು ಕೊಡ್ತಾರೆ. ಬಡವರ ಮನೆ ಅಂತ ಹೋಗಬೇಡಿ. ನಿಮ್ಮಂಗೆ ಗೈರತ್ತಾಗಿರೂ ಮನೆಯವ್ರೆ ಹೆಣ್ಣು ಕೊಡ್ತಾರೆ. ಮಗನದೇನು ತಕರಾರು...ತಾಳಿ ಕಟ್ಲ ಅಂದ್ರೆ ಕಟ್ಟತಾನೆ ಅಷ್ಟೆಯ...ಹೀಗೆ ಹೀಗೆ ಗೌಡರಿಗೆ ನಿರಂತರ ಉಪದೇಶಗಳು ಅಕ್ಕಪಕ್ಕದವರಿಂದ ಬರುತ್ತಲೇ ಇದ್ದವು.
 
ಸಿಟ್ಟುಬಂದು, ಒಂದು ದಿನ ಗೌಡರು ಎಲ್ಲರೂ ಬೆಚ್ಚಿಬೀಳುವಂತೆ ಹಿರಿಮಗನಿಗೆ ಹೆಣ್ಣು ಗೊತ್ತು ಮಾಡಿಕೊಂಡು ಬಂದೇ ಬಿಟ್ಟರು. ಅದೂ ತಮ್ಮಂತೆಯೆ ಒಬ್ಬ ಊರ ಗೌಡನ ಮಗಳು. ಹೊಲ ಮನೆಯ ಕೆಲಸ ಮಾಡಿ ಗೊತ್ತಿದ್ದ ಗಟ್ಟಿಗಿತ್ತಿ ಹೆಣ್ಣುಮಗಳನ್ನೇ ತಂದರು. ಗೌಡರ ಮನೆ ಮುದ್ದೆ ತಿರುವಬೇಕು, ಕೊಟ್ಟಿಗೆ ಕಸಗುಡಿಸಬೇಕು, ಮನೆಗೆಲಸ ಮಾಡಬೇಕು ಅಂದರೆ ಕಡಿಮೆ ಗುಂಡಿಗೆ ಬೇಕಾ... ಗಂಡು ಹೆಣ್ಣನ್ನು ನೋಡುವ ಅಗತ್ಯವೇನೂ ಬರಲಿಲ್ಲ. ಅಪ್ಪ, ಅವ್ವ, ತಮ್ಮ, ತಂಗಿಯರೆ ಆ ಕೆಲಸವನ್ನು ತಮ್ಮದೆಂದು ಪೂರೈಸಿಕೊಟ್ಟರು. ಲಗ್ನದ ದಿನವೂ ಕೂಡಿಬಂತು. ಕೊಡುವುದು ತರುವುದು ಅಂತ ಬೇರೆ ವ್ಯವಹಾರವೆಲ್ಲಾ ಆಯಿತು. ಗಾಡಿಗೆ ಒಂದು ಚಿನ್ನದ ಕಪ್ಪ. ಅವರ ಮನೆಯಲ್ಲಿ, ಆ ಕಾಲಕ್ಕೆ ಅದೇ ವಿಶೇಷ. ಅದು ಗೌಡರ ಕಾರುಬಾರು.
 
ಸಾಮಾನ್ಯವಾಗಿ ಆ ಕಾಲದಲ್ಲಿ ಮೂರು ನಾಲ್ಕು ದಿನಗಳಲ್ಲಿ ಮದುವೆ ನಡೆಯುತ್ತಿತ್ತು. ಮೊದಲ ದಿನ ದೇವರ ಕಾರ್ಯ, ಎರಡನೆಯ ದಿನ ಧಾರೆ, ಮೂರೆನೆಯ ದಿನ ಹೆಣ್ಣು ಕರೆಯುವುದು. ಎರಡೂ ಕಡೆಯವರು ಮೊದಲ ದಿನ ದೇವರ ಕಾರ್ಯ ಮಾಡುತ್ತಿದ್ದರು. ಮೂಹೂರ್ತ ಹೆಣ್ಣಿನ ಮನೆಯಲ್ಲಿ. ಆ ದಿನ ಎಲ್ಲಾ ಶಾಸ್ತ್ರ ಮುಗಿಸಿ ಸಂಜೆಯ ಹೊತ್ತಿಗೆ ಹೆಣ್ಣನ್ನು ಗಂಡಿನ ಮನೆಗೆ ಕರೆದೊಯ್ಯತ್ತಿದ್ದರು. ಮೂರನೆಯ ದಿನ ಹೆಣ್ಣಿನ ಮನೆಯವರು ಬಂದು ತಮ್ಮ ಮಗಳು ಅಳಿಯನನ್ನು ಕರೆದುಕೊಂಡು ಹೋಗುತ್ತಿದ್ದರು. ಮಾವನ ಮನೆಯಲ್ಲಿ ಅಳಿಯ ಒಂದಷ್ಟು ದಿನ ಹೆಂಡತಿ ಜೊತೆಗೆ ಸ್ವಂತ ಊರಿಗೆ ವಾಪಸಾಗುತ್ತಿದ್ದ.
 
ಊರಿಗೆ ಊರೇ ಮೂಗಿನ ಮೇಲೆ ಬೆರಳಿಟ್ಟು ಕೊಂಡು ಆಶ್ಚರ್ಯಪಡುವಂತೆ ತಿಮ್ಮರಾಯನ ಮದುವೆ ನಿಶ್ಚಯವಾಯಿತು. ಗಂಡಿನ ಮನೆಯಲ್ಲಿ ಅವತ್ತು ದೇವರ ಕಾರ್ಯ. ಸಂಜೆಯಾಗುತ್ತಿದ್ದಂತೆ ಗಂಡಿನ ತಯಾರಿ ಶುರುವಾಯಿತು. ಎಲ್ಲೋ ಆಟ ಆಡಿಕೊಂಡಿದ್ದ ತಿಮ್ಮರಾಯನನ್ನು ಬೇಗನೆ ಮನೆಗೆ ಕರೆತರಲು ಗೌಡತಿ ಆಳುಗಳನನ್ನು ಕಳಿಸಿದಳು. ಆಗ ಅವನು ಮಾಮೂಲು ಜಾಗದಲ್ಲಿ ಸಿಗಲಿಲ್ಲ. ಗಾಬರಿಯಿಂದ ಗೌಡರ ನೇತ್ರತ್ವದಲ್ಲಿ ಅವನನ್ನು ತಡಕಿಸಿದಾಗ ಸಂಜೆ ಏಳರ ಹೊತ್ತಿಗೆ ಅವನು ಊರ ಹೊರಗೆ ಸಿಕ್ಕಿದ. ಆ ಊರ ಹೊರಗೆ ಕೆರೆಯ ಏರಿ ಹಿಂದೆ ಬೀಡು ಬಿಟ್ಟಿದ್ದ ಸುಡುಗಾಡುಸಿದ್ದರನ್ನು ನೋಡಿಕೊಳ್ಳುತ್ತಾ ಕೂತಿದ್ದ.

ಅವನನ್ನು ಮನೆಗೆ ಎಳೆ ತಂದಾಗ ’ಎಲ್ಗೋಗಿದ್ದೊ ಹಾಳಾದನೆ ಮದ್ವೆ ದಿವ್ಸ’ ಅಂದಳು ಅವ್ವ. ಅಕ್ಕ ತಂಗಿಯರು ಗಂಡಿನ ತಯಾರಿಗೆ ಸಿದ್ದರಾದರು. ಅವನಿಗೆ ಕ್ಷೌರ ಮಾಡಿಸಿ, ಸಿಂಬಳ ತೆಗೆದರು. ಕೂದಲಿನ ಕೆರಕಲು-ಪರಕಲು ಜಾಡಿಸಿದರು. ತಲೆ ಕೂದಲಿಗೆ ಕೈಹಾಕಿ ಹೇನುಗಳನ್ನು ಹೆಕ್ಕಿತೆಗೆದರು. ಮೈಗೆಲ್ಲಾ ಎಣ್ಣೆ ತೀಡಿ ತಿಕ್ಕಿ ಸ್ನಾನ ಮಾಡಿಸಿದರು. ಮೈಗೆ ಅರಿಶಿನ ಹಚ್ಚಿ, ಕುದಲು ಬಾಚಿ, ಪಂಚೆ ಉಡಿಸಿದರು. ಎಲ್ಲಾ ಸರಿ. ಆದರೆ ವರನ ಮೂಗಿನಿಂದ ನಿಲ್ಲದೆ ಇಳಿಯುತ್ತಿದ್ದ ಸಿಂಬಳವನ್ನು ತಡೆಯುವುದು ಹೇಗೆ!? ಗೌಡರು ಹೆಂಡತಿಗೇ ಆ ಮಹತ್ತರವಾದ ಜವಾಬ್ದಾರಿಯನ್ನು ಹೊರಿಸಿದರು. ಹೇಗೂ ತಾಯಿ. ಮಗನ ಇತರ ವಿಸರ್ಜನೆಗೆ ವ್ಯವಸ್ತೆ ಮಾಡಿದವಳೇ ಹಿರಿಯನಾದ, ತನ್ನೂರಿಗೆ ಪಟೇಲನೆ ಆದ ಲಕ್ಕಪ್ಪನೆಂಬ ತನ್ನ ಅಣ್ಣನನ್ನೇ ಈ ಮಹತ್ತರವಾದ ಕೆಲಸಕ್ಕೆ ಯೋಜಿಸಿದಳು.
 
ಆಗ ಕರ್ಚೀಪ್ ಗಿರ್ಚೀಪ್ ಇರಲಿಲ್ಲ. ಹಳೆಯ ಬಿಳಿ ಬಟ್ಟೆಗಳ ಚೂರುಗಳನ್ನು ಬಂದು ಬ್ಯಾಗ್ಗೆ ತುಂಬಿ ಆ ಬ್ಯಾಗನ್ನು ಲಕ್ಕಪ್ಪ ಪಟೇಲರು ಹೆಗಲಿಗೇರಿಸಿಕೊಂಡು, ತನ್ನ ಸೋದರಳಿಯನ ಪಕ್ಕ ನಿಂತು ಅವನ ಸಿಂಬಳ ಬರುವುದನ್ನು ಕಾಯುವುದು. ಅದು ಮೂಗಿನಿಂದ ಹೊರಗೆ ಕಾಣಿಸಿಕೊಂಡ ತಕ್ಷಣ , ತಟ್ಟನೆ, ಓಡಿ ಹೋಗುವ ಮೊಲವನ್ನು ಹಿಡಿದುಕೊಳ್ಳುವಂತೆ ಬಟ್ಟೆಯಲ್ಲಿ ಹಿಡಿದಿಡುವುದು. ಟ್ಟಿನಲ್ಲಿ ತಿಮ್ಮರಾಯಿಯ ಮುಖ ಸುಂದರವಾಗಿರುವಂತೆ ನೋಡಿಕೊಳ್ಳುವುದು. ಇದಲ್ಲದೆ ಅಕ್ಕ ಪಕ್ಕ ಇಬ್ಬರು ಅಡಲುದಮ್ಮದಿರು ನಿಂತು ಯಾವತ್ತೂ ಚಪ್ಪಲಿ ಹಾಕದಿದ್ದ ತಿಮ್ಮರಾಯಿ ಚಪ್ಪಲಿಯನ್ನು ಎತ್ತಿ ಒಗೆಯದಂತೆ, ಚಪ್ಪಲಿ ಅವನ ಕಾಲಿಂದ ಜಾರದಂತೆ ನೋಡಿಕೊಳ್ಳುವುದು.
ದೇವರ ಕೆಲಸ ಸಾಂಗವಾಗಿ ಆಯಿತು. ಗಂಡಿಗೆ ಮಾಡಬೇಕಾದ ಅದೂ ಇದೂ ಶಾಸ್ತ್ರ ಸಂಬಂಧಗಳೆಲ್ಲಾ ಮುಗಿದವು. ಮದುಮಗ ಉಪವಾಸ ಇರಬೇಕು. ನಾಳೆ ಮುಹೂರ್ತ ಆಗುವವರೆಗೆ ಹೊಟ್ಟೆ ತೀರಾ ಖಾಲಿ ಇರಬಾರದಲ್ಲಾ ಎಂದು ತಿಮ್ಮರಾಯಿಗೆ ತಿನ್ನಲು ಎರಡು ಬಾಳೆ ಹಣ್ಣು ಕೊಟ್ಟರು. ಸಿಕ್ಕಿದ್ದು ತಿಂದು ಆರಾಮವಾಗಿದ್ದ ತಿಮ್ಮರಾಯನಿಗೆ ಅದು ಸಾಕೆನಿಸಲಿಲ್ಲ. ರಾತ್ರೋ ರಾತ್ರಿ ಎಲ್ಲರ ಕಣ್ಣು ತಪ್ಪಿಸಿ ಅಟ್ಟದ ಮೇಲೆ ಇಟ್ಟಿದ್ದ ಹಸಿ ತಂಬಿಟ್ಟನ್ನು ಅವಸರ ಅವಸರವಾಗಿ ಹೊಟ್ಟೆ ತುಂಬ ತಿಂದುಬಿಟ್ಟ.
 
ಬೆಳಿಗ್ಗೆ ಗಂಡಿನ ಮನೆಯಿಂದ ಹೆಣ್ಣಿನ ಮನೆಗೆ ನೆರೆ (ಗಂಡಿನ ಕಡೆ ಜನ) ಹೋಗುವ ಹೊತ್ತು. ಎಲ್ಲರೂ ದಿಬ್ಬಣದ ಹಿಂದೆ ಹೊರಟರು. ಹಾಕಿದ ವೇಷ ಹಾಕಿಸಿಕೊಂಡು ತಿಮ್ಮರಾಯಿ ಕಷ್ಟಪಟ್ಟು ನಡೆಯುತ್ತಿದ್ದ. ಅವನ ಹಿಂದೆ ಒಂದು ಮಗ್ಗುಲಲ್ಲಿ ಗೊಣ್ಣೆ ತೆಗೆಯುವ ಸೋದರಮಾವ. ಮತ್ತೊಂದು ಕಡೆ ಎಕ್ಕಡ ಜಾರದಂತೆ ನೋಡಿಕೊಳ್ಳುವವರು. ಎಲ್ಲರಿಗಿಂತ ಮುಂದೆ ವಾಲಗದವರು. ಗೌಡರ ಗಂಡು ಮತ್ತು ಬಳಗ ಬರುತ್ತಿದೆ ಎಂದು ಎಲ್ಲರಿಗೆ ಗೊತ್ತಾಗಲಿ ಎಂದು ಜೋರಾಗೆ ಬಾರಿಸಿದರು. ಅಂತೂ ಗಂಡು ಹೆಣ್ಣಿನ ಊರನ್ನು ತಲುಪಿ ಊರ ದೇವಸ್ಥಾನದ ಕಟ್ಟೆಯ ಮೇಲೆ ಕೂತುಕೊಂಡ. ಹೆಣ್ಣಿನ ಕಡೆಯವರು ಒಳ್ಳೆಯ ಜನ, ವಾಲಗ ಸಮೇತ ಬಂದು ಗಂಡು ಮತ್ತು ಗೌಡರ ಮನೆಯವರನ್ನು ಮನೆಗೆ ಕರೆದರು.
 
ತಿಮ್ಮರಾಯಿ ದಿಬ್ಬಣ, ಹಿರಿಯರು, ಅಕ್ಕಪಕ್ಕದ ಸಹಾಯಕರ ಜೊತೆಗೆ ಹೆಣ್ಣಿನ ಮನೆಯ ಬಾಗಿಲು ಹತ್ತಿರ ಬಂದು ನಿಂತ. ಹೆಣ್ಣಿನ ಕಡೆಯವರು ಗಂಡಿನ ಕಾಲು ತೊಳೆದರು. ಮುಖ ತೊಳೆದು ವಿಭೂತಿ ಹಚ್ಚಿದರು. ಹುಡುಗಿಯರು ಆರತಿ ತಂದು ಬೆಳಗಿದರು. ಗಂಡು ಪಕ್ಕದಲ್ಲೇ ಗೊಣ್ಣೆ ಒರೆಸುತ್ತಿದ್ದ ಮಾವನಿಗೆ ’ಮಾವಯ್ಯ ಬರ್ ಅಂತೀನಿ ಬರ್ ಅಂತೀನಿ’ ಅಂದ. ಅದನ್ನು ಅರ್ಥ ಮಾಡಿಕೊಂಡ ಮಾವಯ್ಯ ’ಇನ್ನೊಂದ್ ನಿಮಿಶ ಸುಮ್ನಿರ್ಲ, ಒಳಕ್ಕೆ ಹೋಗ್ತೀವಿ, ಆಮೇಲೆ ಏನಾದ್ರು ಮಾಡಿಕೊಳ್ಳಿವಂತೆ’ ಅಂದರು. ತಿಮ್ಮರಾಯಿ ಮತ್ತೆ ’ಮಾವಯ್ಯ, ಮಾವಯ್ಯ ಬರ್ ಬರ್ ಅಂತೀನಿ’ ಎಂದು ಉಡಿಸಿದ್ದ ಕಾಸೆ ಪಂಚೆಯನ್ನು ಅಲ್ಲೆ ಬಿಚ್ಚಿ ಬಿಸಾಕಿ ಓಡಲು ಶುರು ಮಾಡಿದ. ಇದ್ಯಾಕೆ ಗಂಡು ಹೀಗೆ ಓಡುತ್ತಿದೆ ಎಂದು ಜನ ಗಾಬರಿ, ಆಶ್ಚರ್ಯದಿಂದ ನೋಡುತ್ತಿದ್ದರು. ಕೆಲವರು ಗಂಡಿನ ಹಿಂದೆ ದೌಡಾಯಿಸಿದರು. ನೋಡು ನೋಡುತ್ತಿದ್ದಂತೆ ಗಂಡು ಪೊದೆಯ ಮರೆಗೆ ಹೋಗಿ ಕೂತು ಬಿಟ್ಟಿತು.
ಯಾಕ್ಲಾ ಅವನು ಓಡಿದಾ? ಎನ್ರ್ಲಾ ಬರ್ ಅಂದ್ರೆ? ಜನ ಗೊತ್ತಿದ್ದವರನ್ನು ಕೇಳಿದರು. ಪಾಪ ಹಿಂದಿನ ದಿನ ಹಸಿ ತಂಬಿಟ್ಟು ತಿಂದಿದ್ದು ಆಗ ತಿಮ್ಮರಾಯಿಗೆ ಒತ್ತಿಕೊಂಡು ಬಂದಿತ್ತು.
 
ಮತ್ತೆ ತಿಮ್ಮರಾಯಿಯನ್ನು ಹಿಡಿದುಕೊಂಡು ಸ್ವಚ್ಚ ಮಾಡಿಕೊಂಡು ಹೆಣ್ಣಿನ ಮನೆಗೆ ಬಂದು ಮದುವೆ ಮಾಡಿಸಿದರು. ಆಮೇಲೇನಾಯ್ತೋ ಗೊತ್ತಿಲ್ಲ.
 
  
 
 
 
 
 
 
Copyright © 2011 Neemgrove Media
All Rights Reserved