ಅಂಗಳ      ಒಂದೂರಂತೆ
Print this pageAdd to Favorite

 

 

ತಂಗ್ಯಮ್ಮ ತಾವರೆ

 
 
(ಸಂಗ್ರಹ)
 
ಒಂದಾನೊಂದು ಕಾಲೆಂಬೋ ಕಾಲ. ಆ ಕಾಲದಲ್ಲೊಂದ್ ಊರು. ಆ ಊರಿಗೊಬ್ ರಾಜ ರಾಣಿ ಇದ್ರು. ಅವರಿಗೆ ಎರಡ್ ಕಣ್ಣಂಗೆ ಎರಡ್ ಮಕ್ಳು. ಒಬ್ಬ ಮಗ, ಹಿರಿಯನು. ಕಿರಿಯಳು ಒಬ್ಳು ಮಗಳು. ರಾಜ ರಾಣಿ ಮಕ್ಕಳನ್ನು ಚನ್ನಾಗಿ ಸಾಕಿದ್ರು. ಹೀಗೇ ಇರುವಾಗ ಮಕ್ಕಳು ದೊಡ್ಡವರಾದ್ರು. ಮಗ ರಾಜನ ಸಮಕ್ಕಾದ. ಮಗಳು ಅವರಮ್ಮನಂತೆ ಚೆಂದುಳ್ಳಿ ಚೆಲುವೆ ಆದ್ಲು.

 
ಪಕ್ಕದೂರಿನ ರಾಜಕುಮಾರ ಇವರ ಮಗಳನ್ನ ಲಗ್ನ ಆಗಕೆ ಬಂದ. ರಾಜ ರಾಣಿಗೆ ಅವನು ಹಿಡಿಸಿ ಅವನಿಗೇ ಮಗಳನ್ನ ಜೋರಾಗಿ ಮದುವೆ ಮಾಡಿಕೊಟ್ರು. ಅವಳಿಗೆ ಬೇಕಾದಷ್ಟು ಒಡವೆ ವಸ್ತ್ರ ಮಾಡಿಸಿಕೊಟ್ರು. ಹಂಗೇ ಮಗನಿಗೂ ಒಂದು ಸಂಬಂಧ ತಂದು ಮದುವೆ ಮಾಡಿಸಿದ್ರು. ಒಂದಿನ ಆಯಸ್ಸು ಮುಗಿದು ಇಬ್ಬರೂ ತೀರಿ ಹೋದ್ರು.
 
 
ಹಿಂಗಿರುವಾಗ, ಒಂದು ಹಬ್ಬ ಬಂತು. ತಂಗಿ ಅಣ್ಣ ಅತ್ತಿಗೆಯನ್ನು ಮಾತಾಡಿಸಿಕೊಂಡು ಹಬ್ಬ ಮಾಡಿಕೊಂಡು ಬರಲು ಅಂತ ತವರಿಗೆ ಬಂದಳು. ಒಳ್ಳೆ ಸೀರೆ ಉಟ್ಟುಕೊಂಡು ಅಪ್ಪ ಅಮ್ಮ ಮಾಡಿಸಿಕೊಟ್ಟ ಒಡವೆ ಗಿಡವೆ ಚನ್ನಾಗಿ ಹಾಕಿಕೊಂಡೆ ಬಂದಿದ್ದಳು. ಮನೆಗ್ ಬಂದ ನಾದಿನಿಯ ಒಡವೆ ವಸ್ತ್ರ ನೋಡಿ ಅತ್ತಿಗೆಗೆ ಹೊಟ್ಟೆ ಉರಿ ತಡಿಯಕಾಗ್ಲಿಲ್ಲ. ಆಹಾ...ಅವರ ಮಗಳಿಗ್ ಮಾತ್ರ ಮಾಡಿಸಿಕೊಟ್ರು, ನನಗೆ ಕಮ್ಮಿ ಕೊಟ್ರು ಅಂತ ಅತ್ತೆ ಮಾವನ್ನ ಬೈದುಕೊಂಡ್ಳು. ಒಳ್ಳೆ ಮುಖ ಮಾಡಿಕೊಂಡು ನಾದಿನಿಗೆ ಒಳ್ಳೊಳ್ಳೆ ಅಡಿಗೆ ಮಾಡಿಸಿ ತಿನ್ನಿಸಿದಳು. ಅವಳನ್ನು ಕೋಣೆಯಲ್ಲಿ ಮಲಗಿಸಿ, ತಾನು ಗಂಡನ ಜೊತೆ ಮುನಿಸಿಕೊಂಡು ಕೂತಳು.
 
ಗಂಡ ಏನು ಮಾಡಿದರು ಹೆಂಡತಿ ಮಾತಾಡ್ಲಿಲ್ಲ. ’ಏನು ಮಾಡಿದ್ರೆ ನಿನ್ನ ಕೋಪ ಕಮ್ಮಿಯಾಗುತ್ತೇ’ ಅಂತ ಗಂಡ ಕೇಳಿದಾಗ ಹೆಂಡತಿ ಸುಳ್ಳು ಸುಳ್ಳೆ ಅತ್ತುಕೊಂಡು ’ನಿಮ್ಮ ತಂಗಿಯ ಒಡವೆ ವಸ್ತ್ರನೆಲ್ಲ ನನಗೆ ಕೊಡಿಸಿ ಆಗ ಮಾತಾಡ್ತೀನಿ’ ಅಂದ್ಳು. ’ಅದು ಹೆಂಗೆ ಅವಳ ಒಡವೆ ನಿನಗೆ ಕೊಡಿಸಲೆ’ ಅಂತ ಗಂಡ ಕೇಳಿದಾಗ ’ನಿನ ತಂಗಿ ಸುಖಕ್ಕಿಲ್ಲ ಏನಿಲ್ಲ. ಅವಳ್ನ ಸಾಯಿಸಿಬಿಡು’ ಅಂತ ಹೇಳಿಕೊಟ್ಟಳು. ಹೆಂಡತಿಯ ಮಾತು ಕೇಳಿಕೊಂಡು ಗಂಡ ಅವನ ತಂಗಿಯನ್ನು ಮಾರ್ನೆ ದಿನ ಅವಳ ಅತ್ತೆಮನೆಗೆ ಮನೆಗೆ ಬಿಟ್ಟುಕೊಟ್ಟು ಬರಲು ಹೊರಟ. ದಾರಿ ಮಧ್ಯದಲ್ಲಿ ಒಂದು ದೊಡ್ಡ ಕೆರೆ ಸಿಕ್ಕಿತು. ಅಲ್ಲಿ ಬುತ್ತಿ ಉಣ್ಣಣ ಅಂತ ತಂಗಿಯನ್ನು ಇಳಿಸಿದ. ತಂಗಿ ಊಟಕ್ಕೆ ಮೊದಲು ಕೈ ತೊಳೆದು ಬರಲು ಕೆರೆಗೆ ಬಂದಳು. ಅವಳು ಬಗ್ಗಿ ನೀರಿಗೆ ಕೈ ಹಾಕಿದ್ದೇ ತಡ ಅಣ್ಣ ಅವಳ ತಲೆ ಕಡಿದುಬಿಟ್ಟ. ಅವಳನ್ನು ನೀರಿಗೆ ಹಾಕಿ ಅವಳ ವಸ್ತ್ರ ಒಡವೆಯ ಗಂಟು ಎಲ್ಲವನ್ನೂ ಹೆಂಡತಿಗೆ ತಂದುಕೊಟ್ಟ.
 
 
ಈ ಕಡೆ, ಸೊಸೆ ಇಷ್ಟು ದಿನ ಆದರೂ ಮನೆಗೆ ಬರಲಿಲ್ಲ ಅಂತ ಅವಳನ್ನು ಕರೆಯಲು ಅವಳ ಮಾವ ಸೊಸೆಯ ತವರಿಗೆ ಹೊರಟ. ದಾರಿ ಮಧ್ಯ ಸುಧಾರಿಸಿಕೊಳ್ಳಲು ಅವನೂ ಅದೇ ಕೆರೆ ಹತ್ತಿರ ಗಾಡಿ ನಿಲ್ಲಿಸಿ ನೀರು ಕುಡಿಯಲು ಹೋದ. ಆ ಕೆರೆಯಲ್ಲಿ ಒಂದು ಕೆಂದಾವರೆ ಹೂವು ಅರಳಿತ್ತು. ಅಂತಿಂತ ಹೂವಲ್ಲ. ಎಲ್ಲಿಲ್ಲದ ಹೂವು. ಅಷ್ಟು ಚನ್ನಾಗಿತ್ತು. ಮಾವ ಅದಕ್ಕೆ ಕೈ ಹಾಕಿ ಕಿತ್ತುಕೊಳ್ಳಲು ಹೋದ.
 
ಮುಟ್ಟಬ್ಯಾಡ ಮುಟ್ಟಬ್ಯಾಡ ಮಾವಯ್ಯಾ
ಮುಟ್ಟಿದರೆ ನಾನು ಬಾಡೇನು
ತಿಂದಿದ್ದೆ ತಂಗಿದ್ದೆ ಮಾವಯ್ಯಾ
ತುತ್ತನ್ನ ತಿನ್ನೋಕೆ ಕೈಕಾಲು ತೊಳೆವಾಗ
ಅಣ್ಣೆಂಬ ಗಂಡವನು ಮಾವಯ್ಯಾ
ರುಂಡಾನೆ ಕಡಿದೆಸೆದ ಮಾವಯ್ಯಾ ಅನ್ನುತ್ತಾ ಆ ಹೂವು ಹಿಂದಕ್ಕೆ ಹೋಗಿಬಿಟ್ಟಿತು.

ಮಾವ ಮತ್ತೆ ಅದನ್ನು ಕೀಳಲು ಕೈ ಹಾಕಿದ. ಹೂವು ಮತ್ತೆ ಹಂಗೇ ಅಂದು ಕೈ ತಪ್ಪಿಸಿಕೊಂಡಿತು. ಇದರಲ್ಲೇನೋ ವಿಶೇಷ ಇದೆ ಅಂತ ಮಾವ ಮನಸ್ ತಡೀಲಾರ್ದೆ ಮನೆಗೆ ಬಂದುಬಿಟ್ಟ. ಬಂದು ಅವನ ಹೆಂಡತಿಯನ್ನು ಸೊಸೆಯನ್ನು ಕರೆುಕೊಂಡು ಬರಲು ಕಳಿಸಿದ. ಅವಳು ಬಂದಾಗಲೂ ಅದೇ ಕೆರೆಯ ಹತ್ತಿರ ನಿಂತು ನೀರು ಕುಡಿಯಲು ಬಂದಳು. ಆ ಹೂವು ಹಂಗೇ ಇತ್ತು. ಅವಳೂ ಕೀಳಲು ಹೋದಾಗ,
 
ಮುಟ್ಟಬ್ಯಾಡ ಮುಟ್ಟಬ್ಯಾಡ ಅತ್ಯಮ್ಮಾ
ಮುಟ್ಟಿದರೆ ನಾನು ಬಾಡೇನು
ತಿಂದಿದ್ದೆ ತಂಗಿದ್ದೆ ಅತ್ಯಮ್ಮಾ
ತುತ್ತನ್ನ ತಿನ್ನೋಕೆ ಕೈಕಾಲು ತೊಳೆವಾಗ
ಅಣ್ಣೆಂಬ ಗಂಡವನು ಅತ್ಯಮ್ಮಾ
ರುಂಡಾನೆ ಕಡಿದೆಸೆದ ಅತ್ಯಮ್ಮಾ ಅನ್ನುತ್ತಾ ಹೂವು ಹಿಂದಕ್ಕೆ ಹೋಯಿತು.
 
’ಅರೆರೆ ಇದೇನು ಅತ್ಯಮ್ಮಾ ಅಂತ ಹಿಂಗೆ ಹಾಡುತ್ತೆ, ಇದರಲ್ಲೇನೋ ಇದೆ’ ಅಂತ ಅತ್ತೆನೂ ಮನೆಗೆ ವಾಪಸ್ ಬಂದು ’ಹೋಗಿ ನನ್ನ ಸೊಸೆಯನ್ನು ಕರೆದುಕೊಂಡು ಬಾರಪ್ಪಾ’ ಅಂತ ಮಗನನ್ನು ಕಳಿಸಿದಳು. ಮಗ ಹೆಂಡತಿಯನ್ನು ಕರೆದುಕೊಂಡು ಬರಲು ಗಾಡಿ ಕಟ್ಟಿಕೊಂಡು ಹೊರಟ. ದಾರಿ ಮಧ್ಯದಲ್ಲಿ ನೀರಡಿಕೆಯಾಗಿ ಅದೇ ಕೆರೆ ಹತ್ತಿರ ನಿಂತ. ಅವನಿಗೂ ಆ ಹೂವು ಕಾಣಿಸಿತು. ಅಲೆಲೆ ಇಷ್ಟು ಚನ್ನಾಗಿದೆ ಈ ಹೂವು. ನನ್ನ ಹೆಂಡತಿಗೆ ಕೊಡಬೇಕು ಅಂತ ಅದನ್ನು ಕೀಳಲು ಕೈ ಹಾಕಿದ.
 
ಮುಟ್ಟಬ್ಯಾಡ ಮುಟ್ಟಬ್ಯಾಡ ನನ ದೊರೆ
ಮುಟ್ಟಿದರೆ ನಾನು ಬಾಡೇನು
ತಿಂದಿದ್ದೆ ತಂಗಿದ್ದೆ ನನ ದೊರೆ
ತುತ್ತನ್ನ ತಿನ್ನೋಕೆ ಕೈಕಾಲು ತೊಳೆವಾಗ
ಅಣ್ಣೆಂಬ ಗಂಡವನು ನನ ದೊರೆ
ರುಂಡಾನೆ ಕಡಿದೆಸೆದ ನನ ದೊರೆ ಅನ್ನುತ್ತಾ ಹಿಂದಕ್ಕೆ ಹೋಯಿತು.

ಗಂಡ ಇದೇನಾಯ್ತು ಅಂತ ಸುತ್ತಮುತ್ತ ನೋಡಿದ. ಅವನ ಮನಸ್ ತಡೆಯಲಿಲ್ಲ. ಅವನು ನೀರಿಗೆ ಬಿದ್ದು ಹೂವನ್ನು ಕಿತ್ತುಕೊಂಡು ಮನೆಗೆ ತಿರುಗಿ ಬಂದ. ಬಂದವ್ನು ನಡೆದದ್ನ ಅವರಪ್ಪ ಅಮ್ಮನಿಗೆ ಹೇಳಿದ. ’ನಾವು ಹೋದಾಗ್ಲೂ ಹಿಂಗೇ ಆಯ್ತು ಕಣಪ್ಪಾ’ ಅಂತ ಅವ್ರು ತಾವು ನೋಡಿದ್ದನ್ ಹೇಳಿದ್ರು.
 
ಗಂಡ ಆ ಕೆಂದಾವರೆ ಹೂವನ್ನ ಮರದ ಪೆಟ್ಟಿಗೆಯೊಂದ್ರಲ್ಲಿ ಮುಚ್ಚಿಟ್ಟು ದೇವರ ಮುಂದಿಟ್ಟು ಊದುಗಡ್ಡಿ ಹಚ್ಚಿ ಪೂಜೆ ಮಾಡಿದ. ಆಗ ಆ ಪೆಟ್ಟಿಗೆಯೊಳಗಿಂದ ಅವನ ಹೆಂಡತಿ ಜೀವಂತವಾಗಿ ಬಂದಳು. ಅಣ್ಣನ ಮನೆಯಲ್ಲಿ ಹಿಂಗಾಯ್ತು ಅಂತ ಕಥೆನೆಲ್ಲ ಹೇಳಿದ್ಳು. ಗಂಡ ಅವಳನ್ನು ಕೂರ್ಸಿಕೊಂಡು ಆಗಲೇ ಅವಳ ಅಣ್ಣನ ಮನೆಗೆ ಹೋದ. ಅವಳ ಅತ್ತಿಗೆ ಮನೆ ಹೊರಕ್ ಬಂದ್ಳು. ಅವಳು ಈ ಹುಡುಗಿಯ ಒಡವೆನೆಲ್ಲಾ ಹಾಕಿಕೊಂಡು ಮೆರಿತಿದ್ಳು. ನಾದಿನಿ ಮತ್ತೆ ಬಂದಿದ್ ನೋಡಿ ದೆವ್ವ ಮೆಟ್ಟಿದವಳ ಹಂಗಾಡಿದಳು. ಈ ಹುಡುಗಿಯ ಗಂಡ ಅವಳನ್ನೂ ಅವಳ ಗಂಡನನ್ನೂ ಸಿಗಿದು ಕೆರೆಗೆ ಹಾಕಿ ಬಂದ. ಹೆಂಡತಿಯ ಜೊತೆ ಸುಖವಾಗಿದ್ದ.
  
 
 
 
 
 
 
Copyright © 2011 Neemgrove Media
All Rights Reserved