ಅಂಗಳ      ಮುಗುಳು ಮುಕ್ಕಳಿಸಿ
Print this pageAdd to Favorite
 
 
 

 ...ಹಕ್ಕಿ ಬಿಟ್ಟ ಗೂಡು...


ಚಿತ್ರ, ಲೇಖನ-ಚರಿತಾ ಮೈಸೂರು
 
ಮೊನ್ನೆ ಆ ಗೂಡನ್ನು ಕಿಟಕಿ ಗಾಜಿನ ಮೂಲಕ ಇಣುಕಿದಾಗ ಗೂಡಿನ ಬಾಯಿಗೆ ಒಂದಿಷ್ಟು ನಾರು ಪೇರಿಸಿಟ್ಟಿದ್ದು ಕಂಡೆ. ನಾನು ಇಲ್ಲಿಂದ ಇಣುಕೋದು ಗೊತ್ತಾಗಿ ಮರೆಮಾಡಿರಬೇಕು ಅನ್ನಿಸಿತು.ತುಂಬ ಹೊತ್ತಿನ ತನಕ ಗೂಡಿನ ಜೊತೆಗೆ ಯಾವುದೇ ವ್ಯವಹಾರವಾಗದ್ದನ್ನು ಕಂಡಮೇಲೆ ಹಕ್ಕಿ ಗೂಡು ಬಿಟ್ಟಿರುವುದು ಖಾತ್ರಿಯಾಯ್ತು. ಎರಡು ದಿನ ಬೆಂಗಳೂರಿಗೆ ಹೋಗಿಬರುವಷ್ಟರಲ್ಲಿ ನನಗೆ ಹೇಳದೆ, ಕೇಳದೆ, ಹೀಗೆ ಖಾಲಿ ಮಾಡಿದ್ದು ಮೋಸ ಅನಿಸಿ, ಸ್ವಲ್ಪ ಹೊತ್ತು ಮೌನ ಆಚರಿಸಿದೆ.ಇದು ಸಣ್ಣ ಶಾಕ್ ಅನಿಸಿದರೂ ಅನಿರೀಕ್ಷಿತವಾಗಿದ್ದರಿಂದ ಬೇಸರ ನಿಧಾವಾಗಿ ತಲೆವರೆಗೂ ಹರಡಿ ಕೂತಿತ್ತು.

ಎರಡು ಪುಟ್ಟ ದಾಸವಾಳದಂಥ ಹಕ್ಕಿಗಳು ಅವು. 'ಹೂ ಹಕ್ಕಿ' ಅನ್ನೋದು ಅವುಗಳ ಕನ್ನಡ ಹೆಸರು. ಉದ್ದ ಕೊಕ್ಕು, ಆಗಾಗ ಕೊಕ್ಕಿನಿಂದ ಹೊರಗಿಣುಕುವ ಮಕರಂದ ಹೀರುವ ಅವುಗಳ ನಾಲಿಗೆ..ಗಂಡು ಹಕ್ಕಿಗೆ ತಲೆ ಮತ್ತು ಕತ್ತಿನಲ್ಲಿ ಮಿರುಗುವ ನೀಲಿ ತುಪ್ಪಳ ಇದೆ. ಹೆಣ್ಣು ಹಕ್ಕಿ ಮಾತ್ರ ನೀಟಾಗಿ, ಯಾವುದೇ ಮೇಕಪ್ ಇಲ್ಲದೆ, ಹಳದಿ ಹೊಟ್ಟೆ, ಕಂದು ಬಣ್ಣದ ಬೆನ್ನು ಹೊತ್ತು ಪಟಪಟಪಟ ಒಂದೇ ಸಮನೆ ತನ್ನ ಮರಿಗೆ ಉದ್ದುದ್ದ ಹುಳುಗಳನ್ನು ತಂದು ತುರುಕುವುದು ನೋಡಿದ್ದೆ. ಮುಷ್ಟಿಗಾತ್ರದ ಗೂಡಿನಲ್ಲಿ ಒಂದೇ ಒಂದು ಮರಿ ಮಾಡಿದ್ದವು. ಆ ಮರಿ- ನೋಡನೋಡುತ್ತಿದ್ದಂತೆ ದಿನದಿನಕ್ಕು ಗಾಬರಿ ಹುಟ್ಟಿಸುವಷ್ಟು ಸ್ಪೀಡಾಗಿ ದೊಡ್ಡದಾಗೇಬಿಟ್ಟಿತ್ತು ! ಆಗಲೇ ಸಣ್ಣ ಅಂದಾಜು ಮಾಡಿದ್ದೆ,.. ಈಗ ನಿಜಕ್ಕೂ ಖಾಲಿ ಗೂಡು ನೋಡುವ ದಿನ ಬಂದೇಬಂತು!

ಆ ಗೂಡೋ - ಮಹತ್ವದ ಚರಿತ್ರೆಯನ್ನು ಆಗುಮಾಡಿದ್ದರ ಪುಣ್ಯದಭಾರಕ್ಕೋ ಏನೋ ಎಂಬಂತೆ ಗಂಭೀರವಾಗಿ, ದೇವರನ್ನೇ ಸಾಕ್ಷಾತ್ಕರಿಸಿಕೊಂಡ ವಿನಮ್ರ ಭಕ್ತನಂತೆ ತಣ್ಣಗೆ ಕಣ್ಮುಚ್ಚಿ, ದಾಸವಾಳದ ರೆಂಬೆಯ ತುದಿಯಲ್ಲಿ ಗಾಳಿಗೂ ಅಲುಗಾಡದೆ, ಮಹಾತ್ಮನಂತೆ ಕುಳಿತಿದೆ !

ಕಡೇಪಕ್ಷ ಮತ್ತೆ ಸಿಕ್ಕುವ ಸುಳ್ಳು ಪ್ರಾಮಿಸ್ ಕೂಡ ಮಾಡದೆ ಗೂಡುಬಿಟ್ಟ ಈ ಪಿಟ್ಟೆ ಹಕ್ಕಿಗಳ ಧಿಮಾಕು ಮತ್ತು ನಿಷ್ಠುರತೆಯ ಬಗ್ಗೆ ನಾಲಿಗೆ ಕಹಿಮಾಡಿಕೊಂಡು ತಿಂಡಿ ತಿನ್ನುತ್ತಿದ್ದಾಗಲೇ ಒಂದಿನ ' ಹೋ, ಇಲ್ಲೇ ಇದೀವಪ್ಪಾ..' ಅಂತ ಒಳ್ಳೆ ಅಪರೂಪದ ನೆಂಟರ ಥರ ಹೊಸಮರಿಯನ್ನು ಬೇರೆ ಕಟ್ಟಿಕೊಂಡು ಧಾವಂತದಿಂದ ಪಟಪಟ ರೆಕ್ಕೆಬಡಿದು ಕರೆದು, ಗೂಡನ್ನು ತಟ್ಟಿಎಬ್ಬಿಸಿ, ಪುರ್ರ್..ಅಂತ ಅತ್ತಿತ್ತ ಹಾರಾಡಿ, ನನಗೆ ಚೆನ್ನಾಗಿ ಕಾಣಿಸೋ ಹಾಗೆ, ಸ್ಪಾಟ್ ಲೈಟ್ ಥರದ ಬೆಳಕಲ್ಲಿ ಮರಿಯನ್ನು ಕೂರಿಸಿ, ಷೋ ಮುಗಿಸಿ, ಮತ್ತೆ ಎತ್ತಲೋ ಮಾಯ !

ಆ ಮರಿಗೆ ರೆಕ್ಕೆ ಬಲಿತಿದ್ದರೂ ಹಿಂಭಾಗದ ಪುಕ್ಕ ಮಾತ್ರ ಪುಟ್ಟದಾಗೆ ಇತ್ತು. ಬೋಗನ್ವಿಲ್ಲ ಗಿಡದ ಕೊಂಬೆಯ ತುದಿಯಲ್ಲಿ ಕೂತು, ತೂರಾಡುತ್ತ, 'ಬ್ಯಾಲೆನ್ಸ್ ಮಾಡೋದು ಹೇಗೆ ಅಪ್ಪಾ..' ಅಂತ ಕೇಳ್ತಾ ಇತ್ತು.

ನಮ್ಮ ಡೈನಿಂಗ್ ಟೇಬಲ್ ಪಕ್ಕದ ದೊಡ್ಡ ಕಿಟಕಿಗೆ ನೇರವಾಗಿ ಮುಖಮಾಡಿದಂತೆ ನಮ್ಮ ಕಿಟಕಿಯ ಪ್ರತಿ ಫ್ರೇಂನಿಂದ ಬೇರೆ ಬೇರೆ ಕೋನಗಳಲ್ಲಿ ವಿವರವಾಗಿ ನೋಡಲು ಅನುಕೂಲ ಆಗೋಹಾಗೆ ಗೂಡುಕಟ್ಟಿವೆ ಅವು ! ಗಿಡದ ನಾರು, ಕೂದಲು,ತರಗೆಲೆ, ಸಣ್ಣ ಪೇಪರ್ ಚೂರು, ಹತ್ತಿ- ಇವುಗಳನ್ನೆಲ್ಲ ಸ್ವಲ್ಪಸ್ವಲ್ಪವೇ ತಂದು ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿಮಾಡಿ,.. ಈಗ ದೊಡ್ಡ ಮರಿಯನ್ನು ನನಗೆ ತೋರಿಸಲಿಕ್ಕೆ ಅಂತಾನೇ ಒಂದು ವಿಸಿಟ್ ಕೊಟ್ಟು ಹೋಗಿದ್ದೂ ಆಯ್ತು... ಆದ್ರೂ ಯಾಕೋ ಇದ್ಯಾವುದನ್ನೂ ನನ್ನ ಕ್ಯಾಮರದಲ್ಲಿ ಬಂಧಿಸಿಡುವ ಮನಸ್ಸು ಮಾತ್ರ ಆಗಲೇ ಇಲ್ಲ...!

ಬಹುಷಃ ಅಗಾಧ ಮತ್ತು ಅವಿರತ ಚಲನೆಯ ಗಡಿಯಾರದ ಮುಳ್ಳುಗಳನ್ನು ನನಗೆ ಬೇಕಾದ ಹಾಗೆ ತಿರುಚುವ ಅಥವಾ ವೈಂಡ್ ಅಪ್ ಮಾಡುವ ದೊಡ್ಡ ಮೇಧಾವಿ ನಾನು - ಎಂಬ ಭ್ರಮೆ ನಿಧಾನವಾಗಿ ಕರಗುತ್ತಿರಬಹುದು. ಬದುಕಿನ ಪ್ರತಿಯೊಂದು ಚಲನೆಯ ನಿಷ್ಠುರತೆಯ ಭಾರವಾದ ಹೆಜ್ಜೆಗುರುತುಗಳು ನನ್ನ ಉಸಿರಿನ ಹಾದಿಯಲ್ಲೂ ಮೂಡುತ್ತಿವೆ.. ನಿಲ್ಲದ ಈ ಚಲನೆಗೆ ತಲೆಬಾಗಿ, ದಾರಿಮಾಡಿಕೊಡುತ್ತ ಹಕ್ಕಿರೆಕ್ಕೆಯ ಧಾವಂತಕ್ಕೆ ಮುಗುಳ್ನಗುತ್ತಿದ್ದೇನೆ.

ಒಮ್ಮೆ ನನ್ನಲ್ಲಿದ್ದು, ನನ್ನದಾಗಿದ್ದು - ಮತ್ತೆ ನೆನಪಿರದಂತೆ ಕಳೆದುಹೋಗುವ ನೆನಪುಗಳು ನನ್ನ ಕಣ್ಣಗಲವನ್ನು ಮತ್ತೆ ವಿಸ್ತಾರಗೊಳಿಸಿವೆ.. ಪಡೆದು ಕಳೆಯುವ ಅವಿರತ ಚಲನೆಯ ಈ ಹಕ್ಕಿಗಳು ಆ ಬೆಚ್ಚನೆಯ ಗೂಡಿನ ನಿರ್ಲಿಪ್ತ ಗಾಂಭೀರ್ಯವನ್ನು ಮಾತ್ರ ನನಗಾಗಿ ಬಿಟ್ಟುಹೋಗಿವೆ...
 
 
 

 ನೆನಪಿನಂಗಳದಿಂದ... ನಮ್ಮೂರ ಚಿಕ್ಕೀರಯ್ಯ ಫಾದರ್ ಆಗಿದ್ದು

ಡಾ. ರಾಜೇಗೌಡ ಹೊಸಹಳ್ಳಿ
(ಅಲ್ಲಲ್ಲಿ ಅಷ್ಟಷ್ಟನ್ನು ಹೆಕ್ಕುತ್ತಾ ಪೋಣಿಸುತ್ತಿರುವ ಮಾಲೆ)

 

೧) ಜಗತ್ತಿನ ಮಹಾ ಅಡವಿಗಳೊಲ್ಲೊಂದಾದ ಹುಲಿಕಲ್ಲು ಘಾಟಿಯಲ್ಲಿ ವರಾಹಿ ಅಣೆಕಟ್ಟು ಕೆಲಸ ನಡೆಯೋ ಸಮಯ. ಅಲ್ಲಿ ಬರ್ಮನಾಯಕನಂತೋರು ಭಾರತ ದೇಶದ ಮತದಾರರು. ವರಾಹಿ ಅಣೆಕಟ್ಟು ಕಟ್ಟುವಾಗ ’ಈ ಕಟ್ಟು ಹಾಕಾಕೆ ಆಗುತ್ತಾ...ಹೆಗಡೇರಾ...ಉಂಟೇ ಉಂಟೇ! ಕುಂದದ ಗುಡ್ಡಕ್ಕೂ ಯಮಕಲ್ಕೆರೆ ದೊಡ್ಡ ಗುಡ್ಡಕ್ಕೂ ಸೇರಿಸಿ ಕಟ್ಟು ಹಾಕಿದರೆ ನಿಲ್ಲಬಹುದೇನ್ರಪ್ಪಾ?! ಅದು ಆದೀತಾ! ಅಲ್ಲಾ...ನಮ್ಮ ಘಾಟಿ ಚೌಡಿ ಬಿಟ್ಟಾಳೆ! ಕೆಂಪು ರಕ್ತಕೋಡಿ ಹರಿಸಿಬಿಟ್ಟಾಳು!’ ಎಂದು ಬರ್ಮನಾಯಕನು ಸೂರ್ಯನಿಗೂ ಚಂದ್ರನಿಗೂ ಮುನಿಸು ಬರಬಾರದೆಂದು ಇಪ್ಪತ್ತುನಾಲ್ಕುಗಂಟೆಯೂ ಪುಲ್ ಟೈಟ್ ಆಗಿ ಕೆಲವು ಸತ್ಯಗಳನ್ನು ಹೇಳುತ್ತಲಿದ್ದ. ಆದರೂ ಬರ್ಮನಾಯಕನ ಭವಿಷ್ಯದ ಕಣಿ ಸುಳ್ಳಾಗಿಬಿಟ್ಟಿತು. ಡ್ಯಾಂ ಕಟ್ಟಿಬಿಟ್ಟರು. ಎಲ್ಲೆಲ್ಲೂ ವರಾಹಿ ಹೊಳೆಗಿಂತಾ ಹೆಚ್ಚಾಗಿ ಹೆಂಡದ ಹೊಳೆ ಹರಿಯಲು ಪ್ರಾರಂಭವಾಗಿತ್ತು.
 
ಬಂಗಾರಪ್ಪನವರು ಮತ್ತೊಂದು ಹೊಸ ಪಕ್ಷ ಕಟ್ಟಿದ್ದರು. ಪ್ರಚಾರ ಭಾಷಣ ಯಡೂರುನಲ್ಲಿ ಆಗುವುದಿತ್ತು. ಜನ ಸೇರಿದ್ದರು. ಟೈಟ್ ಆಗಿದ್ದ ಬರ್ಮನಾಯಕನನ್ನು ಬಂಗಾರಪ್ಪನವರು ಅರಿಯದವರೇನಲ್ಲ. ಭಾಷಣ ಇನ್ನೇನು ಪ್ರಾರಂಭವಾಗಬೇಕು. ನಾಯಕ ಮುಂದಿನ ಸಾಲಿನಲ್ಲಿ ಕುಳಿತಂತೆ ಮಾಡಿ ಮತ್ತೆ ಎದ್ದು, ’ಪ್ರತೀ ಸಾರಿ ಬಿಚ್ಚಿದ ಕಚ್ಚೆ ಕಟ್ತಾ ಇರೋದೆ ನಮ್ಮ ಕೆಲಸವಲ್ಲ. ಅದು ಸಾಧ್ಯವಿಲ್ಲ ಬಿಡಿಬಿಡಿ’ ಎಂದು ಎದ್ದು ಜೋರಾಗಿ ಮಾತು ಒಗೆದು ಹೊರಟುಬಿಟ್ಟ. ಆ ಪಕ್ಷ ಈ ಪಕ್ಷ ಯಾವ ಪಕ್ಷವಪ್ಪಾ ಎನ್ನುವ ಪ್ರಜಾಪ್ರಭುತ್ವದ ರಾಜಕೀಯ ಮಾದರಿಗೊಂದು ಗುದ್ದು ಹಾಕಿ ಹೊರಟ ಬರ್ಮನಾಯಕನೆದುರು ಬಂಗಾರಪ್ಪನವರು ಮರು ಮಾತಾಡದೆ ಹಾಗೇ ನಿಂತರು.
 
೨) ನಮ್ಮ ಮಲೆನಾಡ ಜನಕ್ಕೆ ಏನು ಗೊತ್ತಿದ್ದೀತು! ಚಾಪೆ ಹಾಸಿ ಮಲಗಬೇಕು ಅನ್ನೋದು ಗೊತ್ತಿರಲಿಲ್ಲ, ಚಾಪೆ ಸುತ್ತಿಕೊಂಡು ದಡಾರನೆ ಬೀಳೋರು ಎಂಬ ಮಾತೇ ಇಲ್ಲವೆ! ಆ ಮೇಲಾದರು ಏನು! ಉಫ್ ಅಂತಾ ಊದಿದರೆ ಉರಿಯೋ ಬಲ್ಬು ಆರಿಹೋಗ್ತಾವೆ ಅಂತಾ ಊದೋರು! ನನ್ನಜ್ಜಿ ಹಿಂಗೇ ನಮ್ಮನೇಗೆ ಆಗ ತಾನೇ ಬಂದಿದ್ದ ವಿದ್ಯುತ್ ಬಲ್ಬ್ ಉರಿಯೋದನ್ನ ನೋಡ್ತಾ ಮಲಗಿತ್ತು. ಎಲಾ ಮಗಾ! ಇದಕೆ ಎಲ್ಲಿಂದ ಎಣ್ಣೆ ಬಿಡ್ತರಲಾ ಅಂತಾ ಕೇಳ್ತು. ನಾವು ಓದೋ ಹುಡುಗರಲ್ಲವೆ! ನಾನು ಬಾಳ ತಿಳಿದವನಂತೆ ಹೇಳೇ ಬಿಟ್ಟೆ...’ಅದೇ ಕಣ್ಣಮ್ಮಾ...ಆ ಊರ ಮುಂದಲ ಹೊಲದಲ್ಲಿ ಡಬ್ಬ ಇಟ್ಟಿಲ್ವಾ (ಟ್ರಾನ್ಸ್ ಫಾರ್ಮರ್)... ಅದರೊಳಿಕೆ ಎಣ್ಣೆ ತಂದು ಉಯ್ತರೇ...ಅದು ತಂತಿವೊಳಗಿಂದಾ ಎಲ್ಲರ ಮನೆಗೂ ಹರ್ಕಂತಾ ಬರ್ತದೆ’. ’ಓ ಹಂಗನ್ನು ಮತೇ!’ ಅಂತಾ ಅಜ್ಜಿ ನನ್ನ ತಲೆಕೂದಲೊಳಗೆ ಕೈ ಹಾಕಿ ಹೇನು ತಡರಿಸುತ್ತಾ ನನಗೆ ನಿದ್ದೆ ಬರಿಸುತ್ತಿತ್ತು ಎಂಬ ನೆನಪು ಈಗಲೂ...
 
೩) ನಮ್ಮೂರ ಚಿಕ್ಕೀರಯ್ಯ ಫಾದರ್ ಆಗಿದ್ದು: ಈ ಚಿಕ್ಕೀರಯ್ಯ ಬಲೇ ಮಾತುಗಾರ, ಮಾತಿಗೊಂದು ಅರ್ಥ, ಅರ್ಥಕ್ಕೊಂದು ಮಾತು. ಮಾತು ಮಾತಿಗೂ ಹಾಸ್ಯದ ಹೊನಲಿನ ಈತನ ಅಡ್ಡ ಹೆಸರೇ ಸುಳ್ಳಕ್ಕಿ. ’ಎಂಟು ಮಕ್ಕಳಾದವಲ್ಲೋ, ಇನ್ನೂ ಎಷ್ಟು ಅಂತ ಹೆರುತಾಳೋ ಕಣತೂರಿನೋಳು’ ಅಂದು ನನ್ನಜ್ಜಿ ಕೇಳಿದಾಕ್ಷಣ ’ಯಮ್ಮೋ ಅರರೇ ನಿನ್ನ ಮನೆಗೆ ಕಸಾ ಹಾಕಕೆ ಬ್ಯಾಡವೇ...ಗೆಯ್ಯಕೆ ಬ್ಯಾಡವೇ...ಗೆಯ್ಯಕಂಡು ತಿನ್ನಲಿ ಬಿಡು, ನಿನ್ನ ಮನೆ ಇಲ್ಲದೆ ಹೋದರೆ ಏನಂತೆ ಈ ಲೋಕದಲ್ಲಿ ಹುಟ್ಟಿಸಿದ ಶಿವಾ ಹುಲ್ಲು ಮೇಯಿಸ್ತಾನೇ’ ಎಂದುಬಿಡುತ್ತಿದ್ದ.
 
ಚಿಕ್ಕೀರಯ್ಯನ ಹಿರೀ ಮಗ ಸ್ವಲ್ಪ ಓದಿಬಿಟ್ಟ. ಸರ್ಕಾರೀ ಮೇಷ್ಟರ ಕೆಲಸ. ಮಲೆಸೀಮೆ ಬಾಳ್ಳುಪೇಟೇಲಿ ಮದುವೆಯಾಯ್ತು. ಅಕ್ಕತಂಗೇರು ಅವಳಿ ಜವಳಿ. ಹೆಸರು ಗಂಗೆ ಗೌರಿ. ಅವರಲ್ಲಿ ಇವನ ಹೆಂಡ್ತಿ ಹೆಸರು ಗೌರಿ. ’ರೀ ಮೇಷ್ಟ್ರೆ, ಅವಳಿ ಜವಳಿ ಅಕ್ಕತಂಗೀರು. ಆ ತಂಗಿನ ಇನ್ನೊಬ್ಬರಿಗೆ ಕೊಡೋಕ್ಕಾದೀತೇನ್ರಿ? ಗಂಗೇನೂ ನೀವೇ ಮದುವೆ ಆಗ್ರಿ’ ಎಂದದ್ದೆ ತಡಾ, ಸಾಕ್ಷಾತ್ ಶಿವನೇ ಇಂಥಾ ಮದುವೆ ಆದ ಇನ್ನು ಇವನು ಇಲ್ಲ ಅನ್ನೋದುಂಟೆ! ಗಂಗೆನೂ ಮದುವೆಯಾಗಿಬಿಟ್ಟ. ಹಿರೇಳಿಗೆ ಒಂದರ ಹಿಂದುಗಡೆ ನಾಲ್ಕು ಹೆಣ್ಣು ಮಕ್ಕಳಾದವು. ಗಂಗೆ ಕೇಳಬೇಕೆ! ಅವಳಿಗೂ ನಾಲ್ಕು ಹೆಣ್ಣು ಆಗೇಬಿಟ್ಟವು. ಈ ಪೈಪೋಟಿಲಿ ಅಪ್ಪನ ಮೀರಸಾಕಾಗದೆಯಿದ್ರೂ ಸಂಸಾರ ನೀಸೋದರಲ್ಲಿ ಮೇಸ್ಟ್ರರಿಗೆ ಪಜೀತಿ ಬಂದುಬಿಡ್ತು. ಅಪ್ಪ ಅವ್ವ ಅಣ್ಣ ತಮ್ಮಂದಿರೆಲ್ಲಾ ಗೇಣಿ ಗದ್ದೇಲಿ ಗೇಯ್ದಿದ್ದೆ ಗೇಯ್ದಿದ್ದು! ಎಷ್ಟು ಜನಕ್ಕೆ ಅಂತಾ ಹೊಟ್ಟೆ ತುಂಬಿಸಿಯಾರು! ಒಂದರ ಹಿಂದುಗಡೆ ಒಂದರಂತೆ ಮೇಸ್ಟರ ಮಕ್ಕಳು ಮದುವೆಗೆ ಬಂದೇಬಿಟ್ಟವು.
 
ಆಲೂರು ಪೇಟೆಯಲ್ಲಿ ಪ್ರಾರಂಭವಾದ ಹೊಸ ಚರ್ಚಿನ ಪಾದ್ರಿ ಹತ್ತಿರ ಮೇಸ್ಟರು ಹೋಗ್ತಾ ಬರ್ತಾ ಇರಬೇಕಾದ್ರೆ, ಒಂದು ದಿನ ಮೇಸ್ಟರು ಬಂದವರೇ ಗೋಡೆ ಮೇಲಿದ್ದ ಮಾರ್ವಾಡಿ ಅಂಗಡಿಯವನು ಕೊಟ್ಟಿದ್ದ ಕ್ಯಾಲೆಂಡರನ ಲಕ್ಷ್ಮಿ ಫೋಟೋ, ಧರ್ಮಸ್ಥಳಕ್ಕೆ ಹೋದಾಗ ತಂದು ಮೊಳೆ ಉಯ್ದು ನೇತಾಕಿದ್ದ ಸಾಕ್ಷಾತ್ ಮಂಜುನಾಥಸ್ವಾಮಿ ಫೋಟೋನೆಲ್ಲಾ ಕಿತ್ತು ಆಚೆಲಿಟ್ಟುಬಿಟ್ಟರು! ’ಈ ನಮ್ಮಪ್ಪ ಏಸುಸ್ವಾಮಿಯಾದರೂ ಇನ್ನು ಮುಂದೆ ನನ್ನ ಮನೆ ಕಷ್ಟ ಬಗೆಹರಿಸ್ತಾನಂತ ಮಾಡಿದಿನಪ್ಪಾ.." ಗದ್ದೆ ಉತ್ತು ಸಾಕಾಗಿ ಬಂದು ಕುಳಿತ ಚಿಕ್ಕೀರನಿಗೆ ಓದಿದ ಮಗನೇ ಹೀಗೆ ಹೇಳಿದ ಮೇಲೆ ಏಸುಸ್ವಾಮಿ ಕೈ ಬಿಡುವುದುಂಟೆ?!
 
’ಏನಲಾ ಚಿಕ್ಕ ನೀನು ಚರ್ಚಿಗೆ ಹೋಗಿದ್ದಂತೆ?’ ’ಹೂ ಮತ್ತೆ! ನಾನೀಗ ಪಾದರು ಪಾದರು' ಅಂದ ಚಿಕ್ಕೀರಯ್ಯ. ’ಅಲಲೇ ಊರ ದೇವರು ಬಾಗಿಲ ಚಿಕ್ಕಣ್ಣ ಸುಮ್ನೆ ಬಿಟ್ಟಾತೆನಲೋ?’ ’ಬಿಡದೆ ಮತ್ತೆ! ಆ ಏಸುಸ್ವಾಮಿ ಮುಂದೆ ಇವನದೇನು ಬಾಲ ಬಿಚ್ಚಕಾಗಲ್ಲ ಬಿಡಿ. ನನ್ನದು ಹಳೇ ಕತೆ ಹೋಯ್ತು...ನಾನು ಈಗ ಅಂಥೊಣಿ...ಚಿಕ್ಕೀರಯ್ಯ ಸತ್ತ’ ಎಂದು ಬಿಡೋದೆ! ’ಅಲಲೇ ಆ ಹೊಲದ ಚೌಡಿ, ಬೋರೆ ಮ್ಯಾಗಲ ಮುನಿಯ ಸುಮ್ನೆ ಬಿಟ್ಟಾತೆನಲೋ?’ ’ಏ ಅವಕ್ಕು ಜೀವನಪೂರ್ತಿ ಅನ್ನಹಾಕಿ, ಕೋಳಿ ಕುರಿ ಕುಯ್ದು ಸಾಕಾಗೊಗಿತ್ತು ಬಿಡಿ ಅತ್ತಾಗೆ...ಅವ್ರ ಕಣ್ಣು ಹಿಂಗಿ ಹೋಗಾ! ಈಗೇನಿಲ್ಲ ನೋಡಿ, ಒಂದು ಹುಡುಗಿ ಮದುವೆ ಆಗೋಯ್ತು. ಇನ್ನೊಬ್ಬಳ ಆಗಲೇ ಕೇಳ್ತಾ ಅವರೆ...ಅಲ್ಲಿ ಪ್ಯಾಟೆ ಚರ್ಚಲಿ ನಮ್ಮ ಗುರುಗಳು ನಮ್ಮನ್ನೆಲ್ಲಾ ಹತ್ತಿರಕೆ ಕರೆದು ಕೂರಿಸಿ ಮಾತಾಡಿಸ್ತಾರೆ ಅಂತೀನಿ! ಸದ್ಯ ಬಡತನ ಬಗೆಹರಿತು ಬಿಡಿ ಅತ್ತಾಗೆ...’ ಅಂದು ಮಲೆಸೀಮೆ ಕರಿಟೋಪಿಯನ್ನ ತಲೆಗೆ ಅದುಮಿ ಹೊರಟೇಬಿಟ್ಟ. 'ಸುಮ್ಮನೆ ಕುತ್ತಿಗೆಯಿಂದ ಮ್ಯಾಕೆ ಮಾತಾಡ್ತನೆ ಕನಿ...ಮಗ ಹೋಗಿ ಜಾತಿ ಬಿಟ್ಟು ಬಿಟ್ಟವನೆ, ಇವನದು ಏನು ನಡದಾತು? ಒಬ್ಬನೇ ಇದ್ದಾಗ ಮಂಕಾಗಿ ಕೂತಿರ್ತಾನೆ...’ ಎಂದಳು ಅವನ ಹೆಂಡ್ತಿ ಮಾಳಿ.
 
 
೪) ಬೋಕ್ರೆ ಹೊಲ: ಮಣ್ಣಿನ ಮಡಕೆ...ಇದು ಹಿಟ್ಟು ಮಾಡೋದು, ಇದು ಹತ್ತು ವರ್ಷದ್ದು, ಇದು ಹೆಸರು ಮಾಡೋದು, ಇದು ಎಂಟು ವರ್ಷದ್ದು, ಹೋಯ್ತಲ್ಲಾ, ಒಡೆದು ಹೋದ ಮೇಲೆ ಏನು ಮಾಡೋದು? ತಿಪ್ಪೆ ಕಡೆ ಎಸೆಯೋದಲ್ಲವೆ...ಆದರೆ ಇಂಥಾ ಮಡಕೆ ಬೋಕ್ರಿ ನಮ್ಮೂರ ಕುಳುವಾಡಿ ಮಳ್ಳೆಗೆ ಮಾತ್ರ ಬಿಸಾಕುವ ವಸ್ತುವಾಗಲಿಲ್ಲ. 'ಏನೋ ಆ ಬೋಕ್ರಿ ಯಾತಗಲಾ' ಎಂದೆ. ’ಅಯ್ ಈ ವರ್ಷ ನಮ್ಮೂರಲಿ ಎರಡು ಹೊಸಮನೆ ವಕ್ಕಲಾಕ್ತ ಇಲ್ಲವೆ...’ ಅಂದಿದ್ದ. ’ಅರೆ ಅದಕೂ ಇದಕೂ ಏನಲೋ ಸಂಬಂಧ?’ ’ಅಯ್ ಅದು ಹೆಂಗೆ ನನ್ನ ಬಿಟ್ ವಕ್ಕಲಾಕ್ತರೆ ನೋಡ್ತಿನಿ...’ ಎನ್ನುತ್ತಲೇ ಬೋಕ್ರಿಯನ್ನು ತನ್ನ ಮನೆಯ ಹಿತ್ತಲಲ್ಲಿ ಇಟ್ಟುಕೊಂಡನು ಕುಳುವಾಡಿ ಮಳ್ಳೆ.
 
 
ಹೌದು. ಕೋಳಿ ಕೂಗೋ ವೊತ್ತಿಗೆ ಕೊಂಬು ಕಾಳೆ ಊದಿ, ಕೆರೆ ಏರಿ ಮೇಲಿಂದ ಗಂಗಮ್ಮನ (ಹೊಸ ನೀರು ತರೋದು) ತಂದು ಪೂಜೆಗೆ ಅನು ಮಾಡಿ, ಹೊಸ ಮನೆಗೆ ವಕ್ಕಲಾಗುವಾಗ ಎಲ್ಲಾ ಪೂಜೆ ಮುಗಿದು ಆ ದಿನ ಹೊಸ ಮನೆ ನಾಲ್ಕು ಮೂಲೆಗೂ ಎಲೆ ಮೇಲೆ ಕೂಳು ಹಾಕೋದೇನೋ ಸರಿ! ಪುನ ಬೆಳಕರಿಯೋದರೊಳಗೆ ಹಾಕಿದ ಕೂಳನ್ನು ಎತ್ತಲು ಕುಳುವಾಡಿಯಲ್ಲದೆ ಬೇರೆಯವರು ಎತ್ತೊ ಹಕ್ಕುಂಟೆ?! 'ಇದು ನನ್ನದಲ್ಲವೆ ಹಕ್ಕು' ಎಂದು ಕುಳುವಾಡಿ ಮಳ್ಳೆ ಮೀಸೆ ಮೇಲೆ ಕೈ ಮಡಗಿದ. (ಜಾತಿ ಜಾತಿಯೊಳಗಿನ ಬಾಬುದಾರಿಕೆ ವಿಚಾರದ ಸಾಂಸ್ಕೃತಿಕ ಚರಿತ್ರೆಯ ವಿಚಾರವಿದು). ’ಹಿಂದೆ ಆ ದೊಡ್ಡಗೌಡ್ರ ಮನೆ ಕಟ್ಟಿದಾಗ ಕೂಳೆತ್ತಿದ್ದಕ್ಕೆ ಒಂದು ಹೊಲನೇ ಕೊಟ್ಟಿದ್ರು, ಈಗ ಹೊಲ ಕೊಡೋದು ಬ್ಯಾಡ, ಒಂದು ಹಸುವಿನ ಕರು ಕೊಡೋದು ಬೇಡವೆ?’ ಹೀಗೆ ಹೇಳಿದವನೇ ಅಂದು ಎಷ್ಟು ಕರೆದರೂ ಬರದೆ ಒಂದು ಹಸುವಿನ ಕರು, ಒಂದು ಕೋಳಿ, ಎರಡು ಸೇರು ಅಕ್ಕಿ ಕೊಡಲು ವಾಗ್ದಾನ ಮಾಡಿದ ಮೇಲೆಯೇ ಲಗುಬಗೆಯಿಂದ ಎದ್ದು ವಕ್ಕಲು ಮನೆಯ ಕೂಳು ಎತ್ತಿ, ಊರ ಹೊರಗೆ ಕೆರೆಕೋಡಿಲಿ ತಾನು ಜೋಪಾನವಾಗಿಟ್ಟುಕೊಂಡಿದ್ದ ಮಡಕೆ ಬೋಕ್ರಿವೊಳಗೆ ಕೂಳನ್ನು ತುಂಬಿಟ್ಟು ಬಂದ. ಹಕ್ಕಿ ಪಕ್ಷಿ ನಾಯಿ ನರಿ ಅದನ್ನೆಲ್ಲಾ ಅಂದು ಹೊಟ್ಟೆ ತುಂಬಾ ತಿಂದು ಹೊಟ್ಟೆ ತುಂಬಿಸಿಕೊಂಡಿರಬೇಕು.
 
'ಬೋಕ್ರೆಹೊಲ' ಎಂಬ ಹೆಸರು ಕೇಳಿದ್ದೆ. ಕುಳುವಾಡಿ ಮಳ್ಳೆಯ ಹಿನ್ನೆಲೆಯಿಂದ ಈ ಹೆಸರು ಬಂತೆಂದು ತಿಳಿಯಿತು. ಆ ಹೊಲ ಈಗ ಅವನಲ್ಲಿದೆಯೇ? ಎಲ್ಲಿದ್ದಾತು! ಮಾಡಿದ್ದ ಸಾಲ ತೀರಿಸಲಾರದೆ ಅಸಲು ಬಡ್ಡಿಗೆ ಪುನ ದೊಡ್ಡಗೌಡರ ಮನೆಗೆ ಜಮಾ ಆಗಿತ್ತು. ಕೂಳು ಎತ್ತೋದು ಹುಡುಗಾಟವೇ! ರಾಹು ಹೊಡೆದಂತೆ ಎನ್ನೋದುಂಟು.
(ಮುಂದುವರಿಯುವುದು)

 
 

 
 
 
 
 
Copyright © 2011 Neemgrove Media
All Rights Reserved