ವೆನೆಜ಼ುಎಲಾದ ಎದೆಗಾರ ನಾಯಕ ಹ್ಯೂಗೋ ಚಾವೆಜ಼್ ಈಗ ಕ್ಯಾನ್ಸರ್ ನಿಂದ ಗುಣಮುಖರಾಗುತ್ತಿದ್ದಾರೆ. ಮೊನ್ನೆ ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ’ಲ್ಯಾಟಿನ್ ಅಮೆರಿಕಾದ ನಾಯಕರುಗಳೆಲ್ಲರೂ ಇತ್ತೀಚೆಗೆ ಒಂದಿಲ್ಲೊಂದು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ...ಲ್ಯಾಟಿನ್ ಅಮೆರಿಕಾದ ನಾಯಕರುಗಳಿಗೆ ಕ್ಯಾನ್ಸರ್ ಹರಡುವ
ತಂತ್ರಜ್ನಾನವೊಂದನ್ನು ಅಮೆರಿಕಾ ರಹಸ್ಯವಾಗಿ ಕಂಡು ಹಿಡಿದಿರಬಹುದಾ’ ಎಂದು ಪ್ರಶ್ನಿಸಿ ಅಮೆರಿಕಾಗೆ ಕೋಪ ಬರಿಸಿದ್ದಾರೆ.
ಅಮೆರಿಕಾಗೆ ಕೋಪ ಬಂದರೆ ಚಾವೆಜ಼್ ಗೇನೂ ಬೇಜಾರಿಲ್ಲ. ಲ್ಯಾಟಿನ್ ಅಮೆರಿಕಾದ ನಾಯಕರು ಅಮೆರಿಕಾದ ಜೆನೆಟಿಕಲಿ ಮಾಡಿಫೈಡ್ ಅಥವಾ ಕುಲಾಂತರಿ ಬೀಜಗಳನ್ನು, ಸಂಸ್ಕರಿತ ಆಹಾರವನ್ನು ಲ್ಯಾಟಿನ್ ಅಮೆರಿಕಾದ ನೆಲದಿಂದ ಗುಡಿಸಿ ಹಾಕಿದರೆ ಕ್ಯಾನ್ಸರ್ ತಾನಾಗಿಯೇ ಜಾಗ ಖಾಲಿ ಮಾಡುತ್ತದೆ ಬಿಡಿ. ಆದರೆ ಈಗ ಚಾವೆಜ಼್ ವೆನಿಜ಼ುವೆಲಾದ ಹೆಂಗಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ!
ಅಮೆರಿಕಾದ ಮಾಧ್ಯಮ ಇತ್ತೀಚಿನ ದಶಕಗಳಲ್ಲಿ ಅತ್ಯಂತ ಜನಪ್ರಿಯಗೊಳಿಸಿರುವ ಸ್ತನ ಇಂಪ್ಲಾಟೇಷನ್ (breast implants) ಅಥವಾ ನೈಸರ್ಗಿಕ ಸ್ತನಗಳ ಗಾತ್ರವನ್ನು ಸಿಲಿಕಾನ್ ತುಂಬಿಸಿಕೊಂಡು ಹೆಚ್ಚಿಸಿಕೊಳ್ಳುವ ಶಸ್ತ್ರಚಿಕಿತ್ಸೆ ವೆನೆಜ಼ುಎಲಾ ಸೇರಿದಂತೆ ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ವೈರಸ್ ಸೋಂಕಿನಂತೆ ಹೆಚ್ಚುತ್ತಿದೆ. ಬಡವರು ಸಿರಿವಂತರೆನದೆ, ಒಂದು ವರ್ಷಕ್ಕೆ ಕನಿಷ್ಟ ೪೦,೦೦೦ದಷ್ಟು ವೆನೆಜ಼ುಎಲಾದ ಹೆಂಗೆಳೆಯರು ತಮ್ಮ ದುಡಿಮೆಯನ್ನು ಕೂಡಿಟ್ಟು ತಮ್ಮ ಬಾಹ್ಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಈ ಶಸ್ತ್ರಚಿಕಿತ್ಸೆಯ ಮೊರೆ ಹೋಗುತ್ತಿದ್ದಾರಂತೆ.
ಚಾವೆಜ಼್ ಇಂಥವರನ್ನುದ್ದೇಶಿಸಿ ’ಅವರಿಗೆ ಮಾಡಲು ಕೆಲಸವಿಲ್ಲ...ಇರುವುದರಲ್ಲಿ ಸಮಾಧಾನದಿಂದಿರುವುದನ್ನು ಬಿಟ್ಟು...’ ಎಂದು ಕಟುವಾಗಿ ಟೀಕಿಸಿದ್ದರು. ಅಲ್ಲಿನ ಹೆಂಗಸರಿಗೆ ಕೋಪ ಬರಿಸಿದ್ದರು.
ಇದರ ನಡುವೆಯೇ, ಈ ಬಗೆಯ ಇಂಪ್ಲಾಂಟನ್ನು ತಯಾರು ಮಾಡುವ ಫ್ರಾನ್ಸ್ ದೇಶದ ’ಪಾಲಿ ಇಂಪ್ಲಾಂಟ್ ಪ್ರೋಥೀಸ್’ ಎಂಬ ಕಂಪನಿಯ ಇಂಪ್ಲಾಂಟುಗಳು ಕಳಪೆ ಗುಣ ಮಟ್ಟದವೆಂದೂ, ಅವು ಕೆಲವು ವರ್ಷಗಳಲ್ಲೇ ಒಡೆದು ಹೋಗುತ್ತವೆಂದೂ ವಿಶ್ವದಾದ್ಯಂತ ದೂರು ಬಂದು ಆ ಕಂಪನಿ ತನ್ನ ಉತ್ಪಾದನೆಯನ್ನು ನಿಲ್ಲಿಸಿ ತನ್ನ ಕಂಪನಿಯ ಇಂಪ್ಲಾಂಟ್ ಗಳನ್ನು ಹಾಕಿಕೊಂಡಿರುವ ಮಹಿಳೆಯರಿಗೆ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ತಾನು ಭರಿಸುವುದಾಗಿ ಹೇಳಿದೆ. ಈ ಫ್ರೆಂಚ್ ಕಂಪನಿಯ ಅಗ್ಗದ ಇಂಪ್ಲಾಂಟ್ ಗಳನ್ನೇ ವೆನೆಜ಼ುಎಲಾದ ಮಹಿಳೆಯರು ಹೆಚ್ಚಾಗಿ ಖರೀದಿಸಿದ್ದರೆನ್ನಲಾಗಿದೆ.
ಈಗ ಚಾವೆಜ಼್ ರ ಸರ್ಕಾರ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ವೆನೆಜ಼ುಎಲಾದ ಮಹಿಳೆಯರಿಗೆ ಉಚಿತವಾಗಿ ಮರು ಶಸ್ತ್ರಚಿಕಿತ್ಸೆ ಮಾಡಿ ಇಂಪ್ಲಾಂಟ್ಸ್ ಗಳನ್ನು ಹೊರೆತೆಗೆಯುವ ಖರ್ಚನ್ನು ತಾನು ವಹಿಸಿಕೊಂಡಿದೆ. ಆದರೆ ಯಾವುದೇ ಕಾರಣಕ್ಕೂ ಹೊಸ ಇಂಪ್ಲಾಂಟನ್ನು ಉಚಿತವಾಗಿ ಮತ್ತೆ ಹಾಕಿಕೊಡುವ ಪ್ರಕ್ರಿಯೆಯನ್ನು ಸರ್ಕಾರ ಪ್ರೋತ್ಸಾಹಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿ ಇಂಪ್ಲಾಂಟೇಶ್ವರಿಯರ ಡಬಲ್ ಮುನಿಸಿಗೆ ಕಾರಣವಾಗಿದೆ.