ಎಣೆಯಿರದ ನೋವಿನಲ್ಲೂ ಇಲ್ಲಿ ಮೆರೆವ ಕರುಣೆ |
|

ಕರುಳಕುಡಿ ಕಣ್ಣೆದುರೇ ಕೈ ಬಿಡಿಸಿಕೊಳ್ಳುತ್ತಾ, ಇಂಚಿಂಚೇ ಬದುಕಿನಿಂದ ಜಾರಿಹೋಗುವಾಗಿನ ಎಣೆಯಿರದ ನೋವಿನಲ್ಲೂ ಇಲ್ಲಿ ಕರುಣೆ ಕಣ್ಣು ತೆರೆದಿರುತ್ತಾಳೆ!
ಉಂಡಾಡಿಕೊಂಡು ಕೈಗೆ ಬಂದಿದ್ದ ೨೩ ವರ್ಷದ ಮಗಳನ್ನು ಆಕಸ್ಮಿಕ ಅಪಘಾತವೊಂದಕ್ಕೆ ಕಳೆದುಕೊಂಡ ಮಂಗಳೂರಿನ ತಪ್ತ ಅಮ್ಮ-ಅಪ್ಪ ಶ್ರೀಮತಿ ಹೇಮಲತಾ ಮತ್ತು ಶ್ರೀ ಜಸ್ವಂತ್ ಅವರ ಹೃದಯವಂತಿಕೆಗೆ ಆಯಾಮ ಪರಿವಾರ ಮತ್ತು ಆಯಾಮದ ಓದುಗರ ಹೃದಯಪೂರ್ಣ ನಮನಗಳು.
ದೊಡ್ಡಬಳ್ಳಾಪುರದ ಕಾಲೇಜೊಂದರಲ್ಲಿ ಫ್ಯಾಷನ್ ವಿಷಯವನ್ನು ಕಲಿಯುತ್ತಿದ್ದ ಸ್ವರ್ಣಾ ಜಸ್ವಂತ್ ಡಿಸೆಂಬರ್ ನಲ್ಲಿ ಮಹಡಿ ಹತ್ತುವಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಸಾವಿನ ಅಂಚಿಗೆ ತಲುಪಿದ್ದರು. ಮಗಳು ಮತ್ತೆ ಜೀವ ತಳೆಯಲಾರಳೆಂದು ದೃಢವಾಗಿ ತಿಳಿದಾಗ ಆಕೆಯ ಪೋಷಕರು ಅವಳ ಅಂಗಗಳನ್ನು ದಾನಮಾಡಿ, ಒಬ್ಬ ಸ್ವರ್ಣಾಳನ್ನು ಆರು ಮಂದಿಯಲ್ಲಿ ಜೀವಂತವಾಗಿರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ತಾಯ್ತನ ಜೀವಗಳನ್ನು ಕಾಯಬೇಕು.
ನೀವೇ ಆ ಹೀರೋ ಆಗಿ!
ನೀವು ಬೀಚಿನಲ್ಲೋ, ರೆಸಾರ್ಟುಗಳಲ್ಲೋ, ಪಾರ್ಟಿಗಳಲ್ಲೋ, ಬೆಚ್ಚಗೆ ನಿಮ್ಮ ಮನೆಗಳಲ್ಲೋ ಅಥವಾ ಇನ್ನೆಲ್ಲೋ ಜಾಲಿಯಾಗಿ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಿದ್ದಾಗ ಚಂಡಮಾರುತ ಥೇನ್ ತಮಿಳುನಾಡಿನ ತುದಿಯನ್ನು ಅಪ್ಪಳಿಸಿ ಹೋಗಿದೆ. ಕಡಲ ತೀರದ ಜನ ಜೀವ-ಸೂರು ಕಳೆದುಕೊಂಡಿದ್ದಾರೆ. ಮೀನುಗಾರರು ದೋಣಿ ಕಳೆದುಕೊಂಡಿದ್ದಾರೆ. ಬಡವರೆನಿಸಿಕೊಳ್ಳುವವರಿಗೆ ಕಳೆದುಕೊಳ್ಳುವುದೇ ಬದುಕಾಗಿಬಿಡುತ್ತಿದೆ.
ಸರ್ಕಾರ ಯೋಜನೆ ಮಾಡಬಹುದು. ಫೈಲು ತಯಾರು ಮಾಡಬಹುದು. ತಕ್ಷಣ ಮನಸ್ಸು ಮಾಡಲಾರದು. ಇದ್ದರೆ ತಾನೇ ಮಾಡುವುದು! ಆದರೆ ಮನಸು ನಿಮಗಿದೆ. ನಿಮ್ಮನೆಗಳಲ್ಲಿ ಹೆಚ್ಚಾಗಿರುವ ಹೊದಿಕೆ, ಬಟ್ಟೆ, ಪಾತ್ರೆ ಪಗಡಿಗಳನ್ನು, ನಿಮಗೆ ಸಾಧ್ಯವಾದರೆ ದವಸ-ಧನ ಸಹಾಯವನ್ನು ಪ್ಲೀಸ್ ನೆರವು ಬೇಕಾದಲ್ಲಿಗೆ ಕಳಿಸಿಕೊಡಿ. ಸುರಕ್ಷಿತವಾಗಿ ಅಲ್ಲಿಗೇ ತಲುಪಿಸುವವರು ನಿಮ್ಮ ಸುತ್ತಲೇ ಸಿಗುತ್ತಾರೆ. ಕರ್ನಾಟಕದಲ್ಲಿರುವ ಹೃದಯವಂತರು ನೀವೇ ಒಂದು ಸಣ್ಣ ಟ್ರಿಪ್ ಮಾಡಬಹುದು. ಹೊಸ ವರ್ಷದ ದಿನ ಪುಟ್ಟದೊಂದು ರಾಂಡೆಮ್ ಆಕ್ಟ್ ಆಫ್ ಕೈಂಡ್ನೆಸ್...ಮುಂದೊಂದು ದಿನ ಅದೂ ನಿಮ್ಮನ್ನು ಕಾಯಲಿ...
|