ಮನುಷ್ಯ ಎಲ್ಲಿ? ಹುಡುಕಿಕೊಡಿ
(ಸಮೂಹ ಮಾಧ್ಯಮ, ಸಂಸ್ಕೃತಿ ಮತ್ತು ರಾಜಕೀಯ)

ಡಾ. ಹಿ. ಶಿ. ರಾ.
 
 
 
ಸಮೂಹ ಮಾಧ್ಯಮ ಒಂದು ದೊಡ್ಡ ರಾಜಕೀಯ ಚಟುವಟಿಕೆ. ಅದು ಸಿನೆಮಾ ನಟಿಯಂತೆ ಆಕರ್ಷಕವಾಗಿರುವುದರಿಂದ, ಆಕರ್ಷಣೆಯೆ ಮುಖ್ಯವಾಗಿ ಅಂತರಂಗ ಬೇರೆಲ್ಲೋ ಅಡಗಿರುತ್ತದೆ. ರಾಜಕೀಯ ಎಂದರೆ ಅಭಿವೃದ್ಧಿ ಮಾಡುವುದು ಎಂದು ಅರ್ಥ. ಇದು ಜನಗಳ ಒಳಗೂ, ಆಳುವ ಪಕ್ಷದಿಂದಲೂ ನಡೆಯುತ್ತಿರುತ್ತದೆ. ಜನಗಳ ಒಳಗಿನ ರಾಜಕೀಯ ಎಂದರೆ ಸಹಕಾರ ತತ್ವ. ನಾನೂ ಬದುಕಿ ನೀನೂ ಬದುಕು ಎಂಬುದು ಆ ಸಿದ್ಧಾಂತ. ಅದು ಯಾರೋ ವ್ಯಕ್ತಿ ಪ್ರತಿಪಾದಿಸಿದ ಸಿದ್ಧಾಂತವಲ್ಲ, ಸಮಾಜ ಪ್ರಕೃತಿಯಿಂದ ಬಂದುದು. ಭಾರತದಲ್ಲಿ ಶತಶತಮಾನಗಳಿಂದಲೂ ಜಾತಿ ಸಮೂಹಗಳಿವೆ. ಅವು ತಾರತಮ್ಯ ತತ್ವದ ಮೇಲೆ ಅಸ್ತಿತ್ವದಲ್ಲಿವೆ. ಈ ತಾರತಮ್ಯ ಕಾರಣಕ್ಕೆ ಅವುಗಳ ಮಧ್ಯೆ ಘೋರ ಕದನ ನಡೆದು ರಕ್ತಪಾತವಾಗಬೇಕಿತ್ತು. ಕಲಹಗಳಾಗಿರುವುದು ನಿಜ, ರಕ್ತಪಾತಗಳಾಗಿಲ್ಲ. ಸಾಂದರ್ಭಿಕ ಅನಾಹುತಗಳಿಂದ ಅಂಥ ಘಟನೆಗಳು ಜರುಗಿರಬಹುದು. ನಿರಂತರವಾದ ಪ್ರಕ್ರಿಯೆಯಾಗಿ ಹಾಗೆ ಆಗಿಲ್ಲ. ಇದಕ್ಕೆ ಕಾರಣ ಜಾತಿ ಒಂದು ಪ್ರತ್ಯೇಕ ತತ್ವವಾದರೂ, ಜನ ಕೂಡಿಬಾಳುವುದನ್ನು ನಿರಾಕರಿಸಲಿಲ್ಲ. ಆ ಪುಣ್ಯದಿಂದಲೇ ಮೇಲುಜಾತಿ ಜನ ಬಚಾವಾದರು, ನೆಮ್ಮದಿಯಿಂದ ಬದುಕಿದರು. ಬಡವರು ’ಬಡವ ನೀನು ಮಡಗಿದಂತೆ ಇರು’ ಎಂದು ಇದ್ದುಬಿಟ್ಟರು.
 
ಆಳುವ ಪಕ್ಷಗಳ ರಾಜಕೀಯ ಬೇರೆ. ಅವು ಹೊರಗಿನಿಂದ ಅಭಿವೃಧ್ಧಿ ಮಾಡುತ್ತೇವೆ ಎನ್ನುತ್ತವೆ.ಆ ಹೊರಗಿನ ಅಭಿವೃದ್ಧಿಯನ್ನೆ ಯೋಜನೆ ಎನ್ನುತ್ತವೆ. ಏಕ ವಾರ್ಷಿಕ, ದ್ವೈವಾರ್ಷಿಕ, ಪಂಚವಾರ್ಷಿಕ ಯೋಜನೆ ಎಂದು ಬೇರೆ ಬೇರೆ ಬಗೆಯ ಯೋಜನೆಗಳನ್ನು ಹಾಕಿಕೊಳ್ಳುತ್ತವೆ. ಈ ಯೋಜನೆಯ ಉದ್ದೇಶ ಬಡವರ ಮತ್ತು ದೇಶದ ಉದ್ಧಾರ ಎನ್ನುತ್ತವೆ. ಒಂದು ಮಟ್ಟದವರೆಗೆ ಇದು ನಿಜ. ದೇಶದ ಹಿತ ಕಡಿಮೆಯಾಗಿ ಸ್ವಂತ ಹಿತ ಮುಖ್ಯವಾದರೆ ಅವೆಲ್ಲ ಸ್ವಯೋಜನೆಗಳಾಗಿ ಬಿಡುತ್ತವೆ. ಅಂಥ ಯೋಜನೆಯ ಕೇಂದ್ರದಲ್ಲಿ ಯಾರಿರುತ್ತಾರೆ ಎಂಬುದು ಮುಖ್ಯ. ನಿಜವಾದ ಸರ್ಕಾರವೇ ಆ ಯೋಜನೆಯ ಕೇಂದ್ರದಲ್ಲಿದ್ದರೆ ಜನರಿಗೆ ಅನುಕೂಲವಾಗುತ್ತದೆ. ಅದು ಹೊರತು, ಆ ಯೋಜನೆಯ ತಳದಲ್ಲೇ ಒಡೆಯ, ಉದ್ಯಮಪತಿ ಮತ್ತು ಮಹತ್ವಾಕಾಂಕ್ಷೆಯ ರಾಜಕಾರಣಿ ಇದ್ದಲ್ಲಿ ಇಡೀ ಯೋಜನೆ ಹಳ್ಳಕ್ಕೆ ಬೀಳುವುದು ಖಂಡಿತ.
 
ಈ ಕಾರಣಕ್ಕೆ ಸರ್ಕಾರ ಎಂಬುದು ಯಾವ ತತ್ವಕ್ಕೆ ಬದ್ಧವಾಗಿದೆ ಎಂಬುದು ಬಹಳ ಮುಖ್ಯ. ಸಮಾಜವಾದಿ ಧೋರಣೆಯುಳ್ಳ ಸರ್ಕಾರಕ್ಕೆ ಜನರೇ ಮುಖ್ಯವಾಗುತ್ತಾರೆ. ಆಗ ಜನಾಧಾರಿತ ಕಾರ್ಯಕ್ರಮಗಳು ಜಾರಿಗೆ ಬರುತ್ತವೆ. ಬಂಡವಾಳವಾದಿ ಸರ್ಕಾರ ಇದ್ದರೆ ಬಂಡವಾಳ ಹೂಡುವವರು ಮುಖ್ಯವಾಗುತ್ತಾರೆ. ಅವರ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎನಿಸಿಕೊಳ್ಳುತ್ತದೆ. ಅವರ ಮೂಲಕವೇ ಜನಗಳ ಅಭಿವೃದ್ದಿ ಎಂಬ ನಿಯಮ ಜಾರಿಯಲ್ಲಿರುತ್ತದೆ. ಉದ್ಯಮಿ ಉದ್ಯಮ ಸ್ಥಾಪಿಸಿದರೆ ನೌಕರನಿಗೆ, ದೇಶದ ಜನರಿಗೆ ಉದ್ಯೋಗ, ಇಲ್ಲದಿದ್ದಲ್ಲಿ ನಿರುದ್ಯೋಗವೇ ಗತಿ ಎಂಬಂತಾಗುತ್ತದೆ. ಅವನ ಕರುಣೆ, ಕೃಪೆಯಲ್ಲಿ ಜನ ಇರಬೇಕಾಗುತ್ತದೆ. ದೇಶದಲ್ಲಿ ಇವನೇ ಪ್ರಬಲ ಶಕ್ತಿ. ಇವನನ್ನು ಅನುಸರಿಸುವುದು ಸರ್ಕಾರದ ಕೆಲಸ. ಅವನ ಅನುಕೂಲಗಳನ್ನು ಹೆಚ್ಚಿಸುವುದು ಮತ್ತು ಅವನ ಅಧಿಕ ಲಾಭದ ಹೊಣೆ ಹೊರುವುದೂ ಸರ್ಕಾರದ ಕೆಲಸ. ಪ್ರಜಾಪ್ರಭುತ್ವದ ಹೆಸರಿನ ಅಮೆರಿಕಾ ದೇಶ ಕೈವಶವಾಗಿರುವುದು ಇಂಥ ಭಾರಿ ಭಾರಿ ಉದ್ಯಮಪತಿಗಳಿಗೆ. ಅಮೆರಿಕ ಕಾಲಕಾಲಕ್ಕೆ ಅಲ್ಲಿನ ಭಾರೀ ಯುದ್ಧೋಪಕರಣ ತಯಾರಿಕಾ ಉದ್ಯಮಿಗಳನ್ನು ಸಂತೈಸದಿದ್ದರೆ; ಅಂದರೆ ಅವರ ಯುದ್ಧೋಪಕರಣಗಳಿಗೆ ಮಾರುಕಟ್ಟೆ ಸೃಷ್ಟಿಸಿಕೊಡದಿದ್ದರೆ ಸಂಕಷ್ಟಕ್ಕೆ ಈಡಾಗಬೇಕಾಗಿ ಬರುತ್ತದೆ. ಇವರ ಪರವಾಗಿಯೆ ಅಮೆರಿಕಾ ಆಗಾಗ ಬೇರೆಬೇರೆ ದೇಶಗಳ ಮೇಲೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಯುಧ್ಧವನ್ನು ಘೋಷಿಸುತ್ತದೆ. ಆ ಕಾರಣಕ್ಕೆ ಅದು ನಿರಂತರ ಯುದ್ಧಕೋರ ದೇಶವಾಗಿದೆ.
 
ಈಗ ಇಂತಹ ಬಂಡವಾಳಿಗರ ಪರವಾಗಿಯೇ ಅತ್ಯಾಧುನಿಕ ಅಥವ ಇಪ್ಪತ್ತೊಂದನೆಯ ಶತಮಾನದ ಯುಧ್ಧ ಮಾದರಿಯೊಂದು ರೂಪುಗೊಂಡಿದೆ. ಅದೇ ಬೃಹತ್ ಮಾರುಕಟ್ಟೆ ಸಿದ್ಧಾಂತ. ಇದನ್ನು ಸೈಲೆಂಟ್ ಮತ್ತು ಆಕರ್ಷಕ ಯುದ್ಧ ಎಂದು ಕರೆಯಲಾಗಿದೆ. ಯಾವುದೇ ದೇಶ ಬಂಡವಾಳಿಗನ ಬಂಡವಾಳ ಹೂಡಿ ಉದ್ಯಮ ತೆರೆಯಲು ಅವಕಾಶ ಮಾಡಿಕೊಡಬೇಕು. ದೇಶದ ಹಿತಕ್ಕಿಂತ ಈ ಉದ್ಯಮಪತಿಯ ಲಾಭದ ಹಿತ ಮುಖ್ಯವಾಗಬೇಕು. ಇದು ’ಹಾದರಗಳ್ಳ ಬಂದರೆ ಪ್ರತಿಭಟಿಸದೆ ಹಾಸಿಗೆ ಹಾಸಿಕೊಡು’ ಎಂಬ ತತ್ವವಾಗಿದೆ. ಅಂದರೆ, ಅನೈತಿಕತೆಯೆ ಬದುಕುವ ತತ್ವವಾಗಿ ರೂಪುಗೊಳ್ಳುತ್ತಿದೆ.
 
ಮಾಧ್ಯಮ ಕೂಡ ಈ ಬಂಡವಾಳಿಗನ ಉದ್ಯಮವಾಗಿ ಈಗ ಭರಾಟೆಯಲ್ಲಿದೆ. ಮಾಧ್ಯಮವೆಂದರೆ ಮೂಲತಃ ಇಬ್ಬರ ಮಧ್ಯೆ ವಸ್ತು ಅಥವಾ ವಿಚಾರವನ್ನು ವಿನಿಮಯ ಮಾಡುವುದು. ಈಗ ಹೆಸರಿಗೆ ಮಾತ್ರ ಈ ’ಮಧ್ಯ’ ಎಂಬುದಿದೆ. ಈ ಹೊತ್ತಿನಲ್ಲಿ ಹೆಚ್ಚಿನವು ದುಡ್ಡಿಟ್ಟುಕೊಂಡು ತತ್ವ ಹೇಳಿಸುವವನದ್ದೇ ಮಾಧ್ಯಮ. ಕೇಳುವವನು ಸುಮ್ಮನೇ ಕಣ್ಣು ಬಿಟ್ಟುಕೊಂಡು ನೋಡಬೇಕು, ಕಿವಿತೆರೆದುಕೊಂಡು ಕೇಳಬೇಕು. ಹೀಗೆ ಮಾಡಿ ಎಂದದ್ದನ್ನು ಅನುಸರಿಸಬೇಕು. ಉದಾಹರಣೆಗೆ ’ಮಸ್ತ್ ಮಜಾ ಮಾಡಿ’ ಎಂದರೆ ಮಾಡಬೇಕು. ಯಾರನ್ನಾದರೂ ಸುಲಿಗೆ ಮಾಡು, ಯಾರ ಮನೆಯನ್ನಾದರೂ ಮುರಿ, ಬಡವನೇ ಆಗಿರು ’ಮಸ್ತ್ ಮಜಾ’ ಮಾಡಬೇಕು.
 
ಹಾಗಿದ್ದಲ್ಲಿ ಸಂಸ್ಕೃತಿ: ಸನ್ನಡತೆ, ಸಧ್ಭಾವನೆ, ಸಹಕಾರ, ಪರೋಪಕಾರ, ಸಹಿಷ್ಣುತೆ, ಸಹಬಾಳ್ವೆ, ಸಮಜೀವನ, ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ಘನತೆ...ಇವೆಲ್ಲ ಇಲ್ಲವೆ? ’ಸಂಸ್ಕೃತಿ’ ಎಂಬ ಜೀವನ ನ್ಯಾಯವನ್ನು ಬಿಟ್ಟು, ವ್ಯಕ್ತಿನ್ಯಾಯ ಮತ್ತು ಕೆಲವೇ ಕೆಲವರ ನ್ಯಾಯ ಯಾಕೆ, ಹೇಗೆ ಮುಖ್ಯವಾಗುತ್ತದೆ? ಅದರ ನ್ಯಾಯ ಏನು?
(ಮುಂದುವರೆಯುವುದು)
  
 
 
 
 
 
Copyright © 2011 Neemgrove Media
All Rights Reserved