ಅಂಗಳ      ಹಾಡು ಹಕ್ಕಿ
Print this pageAdd to Favorite


ಗಣಪತಿ ಸ್ಟ್ರಾಂಗೋ ಜೀಸಸ್ ಸ್ಟ್ರಾಂಗೋ?!

ನವಮಿ

ಚೋಟು ಕನ್ನಡ ಚನ್ನಾಗಿ ಮಾತಾಡುತ್ತಿದ್ದ. ಆದರೆ ಇತ್ತೀಚೆಗೆ ಸ್ಕೂಲಿನ ಹಾವಳಿ ಜಾಸ್ತಿಯಾಗಿ ಅವನ ಬಾಯಿಯಲ್ಲಿ ಬರುತ್ತಿದ್ದ ಆಲ್ಮೋಸ್ಟ್ ಶುದ್ಧ ಕನ್ನಡಕ್ಕೆ ಅಮೆರಿಕನ್ ಆಕ್ಸೆಂಟು ಮೆತ್ತಿಕೊಳ್ಳಲಾರಂಭಿಸಿತ್ತು. ಲಕ್ಷಣವಾಗಿ ರಾಜ, ಪುಟ್ಟ ಎಂದು ಹೊರಬರುತ್ತಿದ್ದ ಪದಗಳು ಈಗ ಸ್ಟೈಲಾಗಿ ವಿಚಿತ್ರವಾಗಿ ಕೇಳಿಸುತ್ತಿದ್ದವು. ನನಗೆ ಟೆನ್ಷನ್. ನನ್ನದು ನನ್ನ ಬೇರಿನದ್ದು ಅಂತಲಾದ್ರೂ ಮಗ ಕನ್ನಡಭಾಷೆಯನ್ನು ಕಲಿತುಕೊಳ್ಳಲಿ ಅಂತ ನನ್ನಾಸೆ. ಕಲಿಸುತ್ತಾ ನಾನು ಗೆದ್ದೆ ಎಂದುಕೊಳ್ಳುವಷ್ಟರಲ್ಲಿ ಹೊಸ ಹೊಸ ಚಾಲೆಂಜ್ ಗಳು ಎದುರಾಗುತ್ತಿದ್ದವು. ಅವನು ಸದಾ ಗುನುಗುನಿಸುತ್ತಿದ್ದರೆ, ಕನ್ನಡ ಅವನ ಬಾಯಿ-ಕಿವಿಯಲ್ಲಿ ತುಂಬಿಕೊಂಡಿದ್ದರೆ ಸರಿಹೋಗಬಹುದೇನೋ ಅಂತ ಏನೇನೋ ಲೆಕ್ಕಾಚಾರ ಮಾಡಿ ಕನ್ನಡದ ಒಂದಷ್ಟು ಪದ್ಯ, ಜನಪದ ಶಿಶುಪ್ರಾಸ ಹೇಳಿಕೊಟ್ಟಿದ್ದೆ. ಅದರಿಂದಾದರೂ ಏನಾದರೂ ಮ್ಯಾಜಿಕ್ಕಾಗಿ ಅವನ ಬಾಯಲ್ಲಿ ಕನ್ನಡ ಕನ್ನಡದ ಆಕ್ಸೆಂಟಿನಲ್ಲೇ ಉಳಿಯಲಿ ಅಂತ ಆಸೆ.
 
ಬಡಜ್ಜಿ ಮನೆಮುಂದೆ
ಎರಡೆತ್ತೆರಡೆಮ್ಮೆರಡ್ ಹಾವ್
ಎರಡ್ ಹಾವ್ನಾವ್ ಮರಿಎರಡು...
ಯಾವಾಗೋ ಕಲಿತಿದ್ದ ಪುಟ್ಟ ಪದ್ಯ ಕಲಿಸಿದ್ದೆ. ಢೋಲು, ಡ್ರಮ್ಮಿಂಗ್ ಇಷ್ಟ ಪಡುವ ನನ್ನ ಮಗನಿಗೆ ಅದರ ರಿದಂ ಇಷ್ಟವಾಗಿತ್ತು. ಖುಶಿಯಿಂದ ಕಲಿತಿದ್ದ.
 
 
ಅವತ್ತು ತನ್ನಷ್ಟಕ್ಕೆ ತಾನು ಒಂದೇ ಸಮ ಬಡಜ್ಜಿಯ ಪದ್ಯವನ್ನು ನಾನು ಹೇಳಿಕೊಟ್ಟ ಟ್ಯೂನ್ ನಲ್ಲೇ ಗುನುಗುನಿಸಿಕೊಳ್ಳುತ್ತಿದ್ದನ್ನು ಗಮನಿಸಿದೆ. ರಾಗ ಕೇಳಿದರೂ ಪದಗಳು ಸರಿಯಾಗಿ ಕೇಳಿಸುತ್ತಿರಲಿಲ್ಲದ್ದರಿಂದ ’ಜೋರಾಗಿ ಹೇಳಪ್ಪಾ, ನಂಗೂ ಕೇಳಿಸಲೀ’ ಅಂತ ಕೇಳಿದೆ.
 
 
ಬಡಜ್ಜಿ ಮನೆಮುಂದೆ
ಡಮ್ಮರಡಮ್ಮರ ಡಮ್
ಡಂಡಂ ಡರಡಂ
ಗೋಯಿಂಗ್ ಟು ಬೆತ್ಲಹೆಮ್ ಎಂದುಕೊಂಡು ಮಗ ಶಿಶುಪ್ರಾಸವನ್ನು ತಾನೇ ಬೇಕಾಬಿಟ್ಟಿ ನವೀಕರಿಸಿಕೊಂಡು ಹಾಡಿದ!
 
 
ನನಗೆ ನಗು ತಡೆಯಲಾಗಲಿಲ್ಲ. ಕನ್ನಡದ ಹಳ್ಳಿಯ ಬಡಜ್ಜಿಯನ್ನು ಬೆತ್ಲಹೆಮ್ ಆಕ್ರಮಿಸಿಕೊಂಡಿತ್ತು. ಬಡಜ್ಜಿ ಮನೆಮುಂದೆ ಗೋಯಿಂಗ್ ಟು ಬೆತ್ಲಹೆಮ್ ಅಂತ ಕಟ್ಟಿ ಹಾಡುವ ಮುಗ್ಧ ಕವಿಯನ್ನು ಕೂರಿಸಿಕೊಂಡು ’ಇದು ಏನು ಹಾಡ್ತಿದ್ದೀಯಾ...ಬಡಜ್ಜಿ ಹಾಡಿಗೆ ಬೇರೇನೋ ಸೇರಿಸಿ ಬಿಟ್ಯಾ’ ಅಂದೆ. ’ಹೂ ಅಮ್ಮಾ ಮಿಸ್ ಹೊಸದಾಗಿ ಬೆತ್ಲಹೆಮ್ ಹಾಡು ಹೇಳಿಕೊಟ್ರು, ಯಾವಗ್ಲು ಪ್ರಾಕ್ಟೀಸ್ ಮಾಡಿ ಅಂದ್ರು’ ಅಂದ. ’ನಿಮ್ಮ ಮಿಸ್ ಹೇಳಿಕೊಡೋ ಹಾಡನ್ನೆಲ್ಲಾ ಅಷ್ಟು ಚನ್ನಾಗಿ ನೆನಪಿಟ್ಟುಕೊಂಡು ಹಾಡ್ತೀಯಾ...ನಾನು ಹೇಳಿಕೊಡೋ ಹಾಡಿಗೆ ಈ ಥರ ಮರ್ಯಾದೆ ತೆಗೀಬಹುದೇನಪ್ಪಾ’ ಅಂತ ಬೇಜಾರಿನಲ್ಲಿ ಕೇಳಿದ್ದೆ. ’ನೀನು ಹೇಳಿಕೊಡೋದೆಲ್ಲಾ ಫನ್ನಿ ಹಾಡುಗಳು. ಮಿಸ್ ಕ್ಯಾತಿ ಹೇಳಿಕೊಡೋದೆಲ್ಲಾ ಜೀಸಸ್ ಹಾಡುಗಳು ಅಮ್ಮಾ. ಜೀಸಸ್ ಹಾಡನ್ನ ಸರಿಯಾಗಿ ಹೇಳದೇ ಇದ್ರೆ ತಪ್ಪು ಅಲ್ವಾ...’ ಅಂತ ನನ್ನನ್ನೇ ವಿಚಾರಿಸಿಕೊಂಡಿದ್ದ. ’ಬಡಜ್ಜಿ ಹಾಡನ್ನು ಕೆಡಿಸಿದ್ರೆ ಅವಳು ತುಂಬಾ ಬೇಜಾರು ಮಾಡಿಕೋತಾಳೆ...ಅವೆರಡನ್ನೂ ಮಿಕ್ಸ್ ಮಾಡಬೇಡ ಕಣೋ’ ಅಂತ ಎಚ್ಚರಿಸಿದ್ದೆ. 
 
 
ಅದು ಕ್ರಿಸ್ಮಸ್ ಕಾಲವಾದ್ದರಿಂದ ಸ್ಕೂಲುಗಳಲ್ಲಿ ಕ್ರೈಸ್ತ ಪ್ರಾರ್ಥನೆಗಳ ಹಾವಳಿ ಜಾಸ್ತಿ. ಮಕ್ಕಳಿಗೆ ಹಾಡನ್ನು ಕಲಿಸಿ ಅಂತ ನನ್ನಂತ ಕ್ರೈಸ್ತೇತರ ಅಮ್ಮಂದಿರಿಗೆ ಮಿಸ್ಸುಗಳು ಹಾಡಿನ ಚೀಟಿ ಕಳಿಸುತ್ತಾರೆ. ನಮಗೆ ಅದರ ತಲೆ ಬುಡ, ರಾಗ ತಾಳ ಗೊತ್ತಿರುವುದಿಲ್ಲ. ಹೇಳಿಕೊಡದಿದ್ರೆ ಮಿಸ್ ಬಿಡುವುದಿಲ್ಲ. ಅದಲ್ಲದೇ ಇಲ್ಲಿ ಹೇಳಿಕೊಡುವ ಹಾಡು-ಕಥೆ ಕಲಿಯದ ಮಕ್ಕಳಿಗೆ ಶಾಲೆಗಳಲ್ಲಿ ತಾವೂ ಎಲ್ಲರ ಜೊತೆ ಬೆರೆತಂತೆ ಆಗುವುದಿಲ್ಲ. ನಮ್ಮ ಮಕ್ಕಳು ಪರಕೀಯರಂತಾಗುವುದು ನಮಗೂ ಬೇಕಿರುವುದಿಲ್ಲ. ಅದಕ್ಕಾದರೂ ಇಂಟರ್ನೆಟ್ ಜಾಲಾಡಿ, ಆ ಹಾಡು ಕೇಳಿ ಕಲಿತು, ಮಕ್ಕಳಿಗೆ ಕಲಿಸಿಕೊಡಬೇಕು. ಎಲ್ಲಾ ಫಜೀತಿಯ ಕೆಲಸ.
 
 
ಚೋಟುವಿಗೆ ನಾನು ಯಾವುದೇ ದೇವರ ಪ್ರಾರ್ಥನೆಯನ್ನು ಕಲಿಸಿಯೇ ಇರಲಿಲ್ಲವಾದ್ದರಿಂದ ಅವನ ಮಿಸ್ ಗಳು ಕೊಡುತ್ತಿದ್ದ ಕೆಲಸ ನನಗೆ ರೇಜಿಗೆ ಎನ್ನಿಸುತ್ತಿತ್ತು. ಹಾಗೇ, ಅರೆ! ಮಿಸ್ ಹೇಳಿದ್ರೂಂತ ಇಷ್ಟು ಜಿತವಾಗಿ ಕೂತು ಕ್ರಿಸ್ಮಸ್ ಹಾಡುಗಳನ್ನು ಕಲಿಸುತ್ತಿದ್ದೀನಲ್ಲಾ...ಅದರ ಜೊತೆಗೆ ನಮ್ಮ ಗಣಪತಿ, ಈಶ್ವರ, ರಘುಪತಿ ರಾಘವ ಅಂಥಿಂಥ ಪ್ರಾರ್ಥನೆಗಳನ್ನೂ ಕಲಿಸಬೇಕಲ್ವಾ...ಧಾರ್ಮಿಕ ವಿಷಯದಲ್ಲಿ ಖಾಲಿ ಸ್ಲೇಟಿನಂತಿರುವ ನನ್ನ ಮಗನ ತಲೆಯನ್ನು ಸಂಪೂರ್ಣ ಜೀಸಸ್ ಭಕ್ತನನ್ನಾಗಿ ಮಾಡಿಬಿಟ್ರೆ ಏನು ಮಾಡಲಿ ಅನ್ನುವ ಧರ್ಮಪ್ರೇಮ ಅದೆಲ್ಲಿಂದಲೋ ಸಡನ್ನಾಗಿ ನುಗ್ಗುತ್ತಿತ್ತು. ಊಟಕ್ಕೆ ಕುಳಿತಾಗ ’ತಡಿಯಮ್ಮಾ ಗಾಡ್ ಗೆ ಗ್ರೇಸ್ ಹೇಳಿ ಊಟ ಶುರು ಮಾಡಣ’ ಅವನು ಪರಮ ಭಕ್ತನಂತೆ ನಮಗೆ ತಾಕೀತು ಮಾಡುತ್ತಿದ್ದಾಗ ಇಲ್ಲಿನ ಸ್ಕೂಲ್ ಸಿಸ್ಟಮ್ ನಮ್ಮ ಮಕ್ಕಳಿಗೆ ಕ್ರೈಸ್ತಧರ್ಮ ಹೇಳಿಕೊಟ್ಟು ನಮ್ಮೊಳಗೆ ಕಲೆತು ಬೆರೆತು ನಮ್ಮದಾಗಿರುವ ದೇವರು, ಆಚರಣೆಗಳಿಂದ ಮತ್ತು ನಮ್ಮಿಂದ ಅವರನ್ನು ದೂರ ಮಾಡಲು ಪಿತೂರಿ ನಡೆಸುತ್ತಿವೆ ಅಂತ ಭಯಂಕರ ಕೋಪ ಬರುತ್ತಿತ್ತು. ’ಗ್ರೇಸ್ ನ ಕನ್ನಡದಲ್ಲೇ ಹೇಳಣ...ನಮಗೆ ಒಳ್ಳೆಯ ಊಟ ಸಿಕ್ಕಿದ್ದಕ್ಕೆ ಭೂಮಿಗೆ, ಮಳೆಗೆ ಥ್ಯಾಂಕ್ಯೂ ಹೇಳಣಾ’ ಎಂದರೂ ಮಗ ಕೊನೆಯಲ್ಲಿ ’ಥ್ಯಾಂಕ್ಯೂ ಫಾದರ್’ ಅಂತಲೇ ನಿಲ್ಲಿಸುತ್ತಿದ್ದ!
 
 
 
ಮೊದಮೊದಲು ತಮಾಷೆಯೆನಿಸಿದರೂ ಬರುಬರುತ್ತಾ ಮಿಸ್ ಕ್ಯಾತಿ ಚೋಟುವಿನ ಮೂಲಕ ನಮ್ಮ ತಾಳ್ಮೆಯನ್ನು ಪ್ರಶ್ನಿಸತೊಡಗಿದರು. ಮಗ ’ಐ ಲವ್ ಯೂ ಜೀಸಸ್...’ಅಂತ ಪದೇ ಪದೇ ತಾರಕದಲ್ಲಿ ಹಾಡಿಕೊಳ್ಳುತ್ತಿದ್ದ. ’ಆರ್ ಯೂ ಅ ಮದರ್ ಲೈಕ್ ಮೇರಿ?’ ಎನ್ನುತ್ತಿದ್ದ. ಮೇರಿ ಯಾವ ಥರದ ತಾಯಿ ಅಂತ ಇವನಿಗೆ ಸ್ಕೂಲಿನಲ್ಲಿ ಹೇಳಿಕೊಟ್ಟಿದ್ದಾರೆ ನನಗೆ ಗೊತ್ತಿರಲಿಲ್ಲ. ಹೂಂ ಅಂದರೂ ಕಷ್ಟ, ಉಹೂಂ ಅಂದರೂ ಕಷ್ಟ! ’ನಮ್ಮನೆಲ್ಯಾಕೆ ಜೀಸಸ್ ಫೋಟೋ ಇಲ್ಲಾಮ್ಮಾ?’ ಒಂದು ದಿನ ಸ್ಕೂಲಿನಿಂದ ಬರುತಿದ್ದಂತೆ ಮಗ ಕೇಳಿದ. ’ಜೀಸಸ್ ನಮಗೆ ಇತ್ತೀಚೆಗೆ ಫ್ರೆಂಡ್ ಆಗಿದ್ದು..ಇನ್ನೂ ತುಂಬಾ ಕ್ಲೋಸ್ ಫ್ರೆಂಡ್ ಆಗಿಲ್ಲ ಅದಕ್ಕೆ...’ ಅಂದಿದ್ದೆ. ’ನೋ ಅಮ್ಮಾ..ಜೀಸಸ್ ನ ಫ್ರೆಂಡ್ ಅನ್ನಬಾರದು ಲಾರ್ಡ್ ಅನ್ನಬೇಕು ಗೊತ್ತಾ’ ಅಂದಿದ್ದ. ಅಯ್ಯೋ ಇವನಾ...ಇದ್ಯಾವ ಸೀಮೆ ಇರಿಟೇಷನ್ ಅಂತ ಅವನ ಮಿಸ್ಗಳನ್ನು ಬೈದುಕೊಂಡು ಸುಮ್ಮನಾಗಿದ್ದೆ.
 
 
 
’ವಿ ಆರ್ ಗೋಯಿಂಗ್ ಟು ಬೆತ್ಲಹೆಮ್..ಟು ಸೆಲೆಬ್ರೇಟ್ ಹಿಸ್ ಬರ್ತ್ ಡೇ...’ ಸ್ಕೂಲಿನ ಮಕ್ಕಳೆಲ್ಲಾ ಮುದ್ದಾಗಿ ಊಳಿಟ್ಟುಕೊಂಡು ಹಾಡಿ ಅವತ್ತು ಕ್ರಿಸ್ತನ ಹುಟ್ಟುಹಬ್ಬ ಆಚರಿಸಿದ್ದರು. ನನ್ನ ಕೂಸು ’ಫಾರ್ ಫಾರ್ ಅವೇ ಲ್ಯಾಂಡ್’ ನಿಂದ ಬಂದಿದ್ದ ರಾಜನ ಪಾರ್ಟು ಹಾಕಿತ್ತು. ಕೈಯ್ಯಲ್ಲಿ ಮಿಸ್ಸು ಕಟ್ಟಿಟ್ಟುಕೊಟ್ಟ ಗಿಫ್ಟ್ ಪ್ಯಾಕೊಂದನ್ನು ಹಿಡಿದುಕೊಂಡು ಬಂದು ’ಐ ಹ್ಯಾವ್ ಕಮ್ ಫ್ರಮ್ ಫಾರ್ ಅವೇ ಲ್ಯಾಂಡ್...ಟು ವರ್ಶಿಪ್ ಜೀಸಸ್...ಐ ಲವ್ ಯೂ ಜೀಸಸ್..’ ಅಂತ ಡೈಲಾಗು ಹೊಡೆದು ಮಿಸ್ ಕೈಲಿ ಭೇಷ್ ಎನ್ನಿಸಿಕೊಂಡಿತ್ತು. ತಮ್ಮ ಮಕ್ಕಳ ಅಂದ ಚಂದದ ವೇಷ, ಹಾಡುಗಳನ್ನು ನೋಡುತ್ತಾ ಖುಷಿಯಿಂದ ಮೆರೆಯುತ್ತಿದ್ದ ಪೋಷಕರಿಂದ ಕಿಕ್ಕಿರಿದು ತುಂಬಿದ್ದ ಸ್ಕೂಲಿನ ಪ್ರಾರ್ಥನಾ ಮಂದಿರದಲ್ಲಿ ನಾವೂ ನಮ್ಮ ಮಗನ ಡೈಲಾಗು ಕೇಳಿ ಚಪ್ಪಾಳೆ ತಟ್ಟಿದ್ದೆವು. ಸರ್ವ ಬಿಳಿ ಸದಸ್ಯರ ಮಧ್ಯೆ ಲಕಲಕ ಹೊಳೆಯುತ್ತಾ ಕಂದಗೆ ಕೂತಿದ್ದ ನಮ್ಮನ್ನು ಅಜ್ಜಿಯೊಬ್ಬರು ಬಂದು ’ಓ...ಬ್ಲೆಸ್ ಹಿಸ್ ಹಾರ್ಟ್! ಆರ್ ಯೂ ಕ್ರಿಸ್ಚಿಯನ್?’ ಕೇಳಿದ್ದರು. ’ಇಲ್ಲ’ ಎಂದಿದ್ದೆವು. ’ಓ!" ಅಜ್ಜಿ ಮೊದಲು ಹೇಳಿದ ಪ್ರೀತಿ ಸುರಿಸುವ ’ಓ’ ಗೆ ೩೬೦ ಡಿಗ್ರ‍ಿ ಉಲ್ಟಾ ಅಚ್ಚರಿಯ ಉದ್ಗಾರ ಮಾಡಿ ಅರ್ಧಂಬರ್ಧ ನಗು ಕೊಟ್ಟು ಹಾಗೇ ಎಕ್ಸಿಟ್ ಮಾಡಿದ್ದರು.
 
 
 
ಕ್ರಿಸ್ಮಸ್ ರಜ ಶುರುವಾಗುವ ದಿನ. ಸ್ಕೂಲಿನಿಂದ ಮಕ್ಕಳು ಮಿಸ್ಗಳೆಲ್ಲಾ ಕ್ರಿಸ್ಮಸ್ ವಿಶ್ ಮಾಡಿಕೊಂಡು ಬೀಳ್ಕೊಡುತ್ತಿದ್ದರು. ಮನೆಗೆ ಬರುತ್ತಿದ್ದಾಗ ’ಅಮ್ಮಾ ನಾವು ಯಾವ ಚರ್ಚ್ ಗೆ ಹೋಗ್ತೀವಿ?’ ಅಂತ ಪ್ರಶ್ನೆ ಬಂತು. ’ಯಾವುದಕ್ಕೂ ಇಲ್ಲವಲ್ಲಾ’ ಅಂದಿದ್ದೆ. ’ಕ್ರಿಸ್ಮಸ್ ದಿನ ಹೋಗಣ ಅಮ್ಮಾ...ಮಿಸ್ ಕ್ಯಾತಿ ಹೋಗಬೇಕು ಅಂತ ಹೇಳಿದಾರೆ. ಬೇಬಿ ಜೀಸಸ್ ನ ನೋಡಿಕೊಂಡು ಬರಣಾ ಅಮ್ಮಾ...’ ಮಗ ಕೇಳಿದ. ’ನಾವು ಯಾವತ್ತೂ ಚರ್ಚ್ ಗೆ ಹೋಗೇ ಇಲ್ಲವಲ್ಲಪ್ಪಾ..ನಾವು ಇಂಡಿಯಾಯಿಂದ ಬಂದಿದ್ದೀವಿ ಅಲ್ವಾ..ನಮಗೆ ಚರ್ಚ್ ಗೆ ಹೋದ್ರೆ ಏನು ಮಾಡಬೇಕು ಅಂತ ಗೊತ್ತಾಗಲ್ಲ...’ ಏನೋ ಒಂದು ಉತ್ತರ ಹೇಳಿದ್ದೆ. ’ಇಲ್ಲಾ ಅಮ್ಮಾ...ವಿ ಶುಡ್ ಗೋ.. ಐ ಲವ್ ಜೀಸಸ್ ಅಮ್ಮಾ...ಮಾಮಿ ಡ್ಯಾಡ್ ನ ಕರೆದುಕೊಂಡು ಬಾ ಅಂತ ಮಿಸ್ ಕ್ಯಾತಿ ನಂಗೆ ಹೇಳಿದಾರೆ’ ಅಂತ ಮಗ ಉತ್ಸಾಹದಿಂದ ಹೇಳಿದ. ಇಲ್ಲದ ಸಮಸ್ಯೆ ಸೃಷ್ಟಿಸುವ ಮಿಸ್ ಕ್ಯಾತಿಯನ್ನು ಚಚ್ಚಿಬಿಡುವಷ್ಟು ಸಿಟ್ಟು ಬಂದಿತ್ತು. ’ನೋಡಣಾ...ಅವತ್ತು ನಮ್ಮದು ಏನು ಪ್ಲಾನ್ ಇದೆ ನೋಡಿಕೊಂಡು ಆಮೇಲೆ ಯೋಚನೆ ಮಾಡಣಾ...’ ಎಂದು ಸುಮ್ಮನಾಗಿಸಿದ್ದೆ.
 
 
 
ಕ್ರಿಸ್ತನಲ್ಲಿ, ಕ್ರೈಸ್ತ ಧರ್ಮದಲ್ಲಿ ಅಥವಾ ಯಾವುದೇ ದೇವರು-ಧರ್ಮದ ಬಗ್ಗೆ ನಿಷ್ಠುರ, ತಾರತಮ್ಯವಿಟ್ಟುಕೊಳ್ಳದೇ ಧರ್ಮ ದೊಡ್ಡ ವಿಷಯವಲ್ಲ, ಯಾವ ಧರ್ಮದ ಒಳ್ಳೆಯ ಆಚರಣೆಯಾದರೂ ಅದು ನಮ್ಮದೇ ಎಂದೆನ್ನುಕೊಳ್ಳುತ್ತಿದ್ದ ಮನಸ್ಸು ಈ ರೀತಿಯ ಪರಿಸ್ಥಿತಿಗಳಲ್ಲಿ ಕಲಸಿದಂತಾಗುತ್ತಿತ್ತು. ಯಾವ ದೇವರೂ ಮುಖ್ಯರಲ್ಲ ಅಥವಾ ಅಮುಖ್ಯರಲ್ಲ ಎಂದು ಬೆಳೆಸುವ ಆಸೆಯಿದ್ದಾಗ ಜೀಸಸ್ ವ್ಯವಸ್ಥಿತವಾಗಿ ನಮ್ಮೊಳಗೆ ನುಸುಳುತ್ತಿದ್ದುದು ಇಷ್ಟವಾಗುತ್ತಿರಲಿಲ್ಲ. ಗಣೇಶನೇ ಬೇಡ ಅಂದ ಮೇಲೆ ಜೀಸಸ್ ಯಾಕೆ? ಎನ್ನುವುದು ಹೋಗಿ ಜೀಸಸ್ ಈ ಪಾಟಿ ಆವರಿಸಿಕೊಳ್ಳುವ ಮುನ್ನ ನಮಗೆ ಗೊತ್ತಿರುವವನೇ ಆದ ಗಣೇಶನನ್ನೇ ಮನಸ್ಸು ತುಂಬಿಸಿಕೊಂಡು ಬಿಡೋಣ ಎನ್ನುವ ತರ್ಕ.
 
 
 
ತಮ್ಮ ಧರ್ಮ ಅಥವಾ ತಾವು ಹುಟ್ಟಿದಾಗಿನಿಂದಲೂ ತಮ್ಮದೊಂದು ಭಾಗದಂತೆ ಹೆಣೆದುಕೊಂಡು ಬಂದಿದ್ದ ಧರ್ಮ ಅಥವಾ ಆಚರಣೆಯಿಂದ ದೂರ, ಬೇರೊಂದು ದೇಶ, ಬೇರೊಂದು ಧಾರ್ಮಿಕ ವ್ಯವಸ್ಥೆಯೊಳಕ್ಕೆ ವಲಸೆ ಬರುವ ಮೊದಲನೆ ತಲೆಮಾರಿನ ಎಲ್ಲರೂ ಎದುರಿಸುವ ಕನ್ಫ್ಯೂಶನ್ ಇದು. ಆಯ್ಕೆ ಮಾಡುವ ಅಗತ್ಯವೇ ಇರದೆ ಬದುಕಿಬಿಟ್ಟಿರುತ್ತೇವೆ. ಆದರೀಗ ಒಂದನ್ನು ಆಯ್ಕೆ ಮಾಡಿಕೊಂಡು ನಮ್ಮನ್ನು ನಾವು ಹೇಗೆ, ಯಾವುದರ ಜೊತೆ ಗುರುತಿಸಿಕೊಂಡು ಡಿಫೈನ್ ಮಾಡಿಕೊಳ್ಳುವುದು ಎಂಬ ಪ್ರಶ್ನೆ ಬರುತ್ತದೆ. ಬದುಕಿನಲ್ಲಿ ಧರ್ಮ-ದೇವರು-ಆಚರಣೆಗಳು ಅಷ್ಟೋಂದು ಹಾಸುಹೊಕ್ಕಾಗಿದೆಯಾ ಎಂದು ಆಶ್ಚರ್ಯವಾಗುತ್ತದೆ. ನಾವು ಹೋದಡೆ ನಮ್ಮ ಜೊತೆ ಬರುವ ಗೌರಿ, ಗಣಪತಿ, ಲಕ್ಷ್ಮಿ, ಈಶ್ವರ, ಕೃಷ್ಣರ ವಿವಿಧ ಆಕಾರ ಗಾತ್ರಗಳ, ಸದಾ ಮನೆಯ ಯಾವುದಾದರೂ ಭಾಗದಲ್ಲಿ ಸೆಟಲ್ ಆಗಿಬಿಡುವ ಆಕೃತಿಗಳು ಮಕ್ಕಳಿಗೆ ಮೊದಲು ವಿಶೇಷವೆನಿಸಿದರೂ ಅವರು ಶಾಲೆಗೆ ಹೋಗಲು ಶುರು ಮಾಡಿದಾಗ ಅಲ್ಲಿ ಟೀಚರ್ ಗಳು ಕಲಿಸುವ ಜೀಸಸ್ ಜೋಸೆಫ್ ಮೇರಿಯರ ಮುಂದೆ ಚಾರ್ಮ್ ಕಳೆದುಕೊಳ್ಳುತ್ತವೆ. ಮನುಷ್ಯರಂತೆಯೇ ಇರುವ ಮನುಷ್ಯರ ಗಾಡ್ ಗಳಾದ ಜೀಸಸ್ ಮುಂದೆ ಆನೆ ಮುಖದ ಗಣಪತಿ ಬರೀ ಗೊಂಬೆಯಂತೆ ಕಾಣತೊಡಗುತ್ತಾನೇನೋ. ಅದಕ್ಕೇ ಏನೋ ಇಲ್ಲಿನ ಹಿಂದೂ ಪೋಷಕರು ಮಕ್ಕಳಿಗೆ ೪-೫ ವರ್ಷ ಆಗುವುದೇ ತಡ ಬಾಲಗೋಕುಲ, ಬಾಲ ಬೃಂದಾವನ ಥರದ ವಾರಾಂತ್ಯದ ಚಟುವಟಿಕೆಗಳಿಗೆ ಹಾಕಿ ಅವರಿಗೆ ಭಗವದ್ಗೀತೆ, ಶ್ಲೋಕ, ಮಂತ್ರ ಏನೆಲ್ಲವನ್ನೂ ತುಂಬಿಸುವ ಹರಿಬಿರಿ ಮಾಡಿಬಿಡುವುದು. ’ನಮ್ಮ ಧರ್ಮ’ ಎನ್ನುವ ಭಾರವಾದ ಪ್ಯಾಕೇಜೊಂದನ್ನು ಮಕ್ಕಳಿಗೆ ಶುರುವಿನಿಂದಲೇ ಹೇರಿ ಅವುಗಳನ್ನು ಸೀಸನ್ ಮಾಡಿಬಿಟ್ಟರೆ ಅವುಗಳ ತಲೆಗಳಲ್ಲಿ ಮುಂದೆ ಜೀಸಸ್ ಗೆ ಜಾಗವಿರುವುದಿಲ್ಲ ಅಥವಾ ಆ ಮಕ್ಕಳಿಗೆ ಇನ್ಯಾವುದೇ ದೇವರನ್ನು ಸಹಿಸಿಕೊಳ್ಳುವ ಸಹನೆಯೇ ಇಲ್ಲದಷ್ಟು ತುರುಕಿದಂತಾಗಿರುತ್ತದೆ.
 
 
 
ಮನೆ ಹೊರಗೆ ಜೀಸಸ್, ಮನೆಯೊಳಗೆ ಸಕಲ ಹಿಂದೂ ದೇವತೆಗಳ ಪೆರೇಡ್! ಆ ಮಕ್ಕಳ ಪಾಡು ಏನಾಗಬೇಡ ಅಂತ ಬೇಜಾರಾದರೂ ಆ ತಂದೆತಾಯಿಯರ ದ್ವಂದ್ವ ಈಗ ಸ್ವಲ್ಪ ಅರ್ಥವಾಗುತ್ತಿದೆ. ಇಂಡಿಯಾದಲ್ಲೇ ಇದ್ದು ಮಕ್ಕಳನ್ನು ಬೆಳೆಸಿದ್ದರೆ ಬಹುಃಷ ಅವರೂ ಈ ಪಾಟಿ ಕರ್ಮಠರಾಗುತ್ತಿರಲಿಲ್ಲ. ಇಲ್ಲಿ ನಾವು ಪರಮ ಅಲ್ಪಸಂಖ್ಯಾತರಾದ್ದರಿಂದ ನಮ್ಮ ಧರ್ಮ-ಆಚರಣೆಗಳನ್ನು (ನಾವು ಅವನ್ನು ನಂಬಲೀ ಬಿಡಲಿ-ಅವು ನಮ್ಮ ಗುರುತಾಗಿಬಿಡುವುದರಿಂದ) ಕಾಯ್ದುಕೊಳ್ಳುವ, ಸಂರಕ್ಷಿಸಿಕೊಳ್ಳುವ ಪರಿ ಶುರುವಾಗಿಬಿಡುತ್ತದೆ. ಏನೋ ಒಂದು ಹೇಗಾದರೂ ಬೆಳೆದುಕೋ ಎನ್ನುವ ಮನಸ್ಸೇ ಬರುವುದಿಲ್ಲ. ಚೋಟುವಿನ ಸ್ಕೂಲು ಮತ್ತು ಮಿಸ್ ಕ್ಯಾತಿ ನಮಗೂ ಇಂಥದ್ದೊಂದು ಪರಿಸ್ಥಿತಿಯ ರುಚಿ ತೋರಿಸಿದ್ದರು.
 
 
ಮರಾಠೀ ಗೆಳತಿಯೊಬ್ಬಳು ಊರಿನಲ್ಲಿ ಅಪ್ಪನ ಖಾಯಿಲೆ ಗುಣವಾಗಿ ಆಪರೇಷನ್ ಯಶಸ್ವಿಯಾಗಿದ್ದಕ್ಕೆ ಮನೆಯಲ್ಲಿ ಗಣೇಶನ ಪೂಜೆ ಇಟ್ಟುಕೊಂಡಿದ್ದಳು. ನಮ್ಮೆಲ್ಲ ಸ್ನೇಹಿತರನ್ನು ಊಟಕ್ಕೆ ಕರೆದಿದ್ದಳು. ಬಣ್ಣಬಣ್ಣದ ಲೈಟು, ವಸ್ತ್ರ, ಹೂವು ಹಣ್ಣಿನಿಂದ ದೊಡ್ಡ ಗಣೇಶನನ್ನು ಭರ್ಜರಿಯಾಗಿ ಅಲಂಕರಿಸಿ ಪೂಜೆ ಮಾಡಿದ್ದಳು. ಚೋಟು ಬೆರಗಿನಿಂದ ಎಲ್ಲವನ್ನೂ ನೋಡುತ್ತಿದ್ದ. ನನ್ನ ಗೆಳತಿ ಅವನನ್ನು ತನ್ನ ಕೂಸಿನ ಜೊತೆ ಕೂರಿಸಿ ಕುಂಕುಮ ಇಟ್ಟು ಕೈಗೊಂದು ಬಣ್ಣದ ದಾರ ಕಟ್ಟಿದಳು. ಅವರಿಂದಲೂ ಗಂಟೆ ಅಲ್ಲಾಡಿಸಿ ಆರತಿ ಬೆಳಗಿಸಿದಳು. ಕೈ ಮುಗಿಸಿ ಅಡ್ಡ ಬೀಳಿಸಿದಳು. ಮಕ್ಕಳು ಹೇಳಿಕೊಟ್ಟಂತೆ ಮಾಡಿದರು. ಕೈಯ್ಯಲ್ಲಿ ’ಫಯರ್’ ಹಿಡಿದು ಆರತಿ ಮಾಡಿದ್ದು ಚೋಟುವಿಗೆ ಬಹಳ ಇಷ್ಟವಾಗಿತ್ತು. ಬೆಳಗುತ್ತಿದ್ದ ದೀಪ, ಅಗರಬತ್ತಿಯ ಪರಿಮಳ, ಹೂಗಳ ಬಣ್ಣ, ಗಣಪತಿಯ ಅಲಂಕಾರ, ಅವನ ಮುಂದಿದ್ದ ತಿಂಡಿಗಳು ಎಲ್ಲವನ್ನೂ ಅಲ್ಲೇ ಕೂತು ತದೇಕಚಿತ್ತದಿಂದ ನೋಡಿದ್ದ. ಸಂದರ್ಭ ಸಿಕ್ಕಿದ್ದೇ ತಡ ಸೀರೆ ಸಲ್ವಾರ್ ಜುಬ್ಬಾ ತೊಟ್ಟು ಸಡಗರದಿಂದ ಬೇರೆಯದೇ ಅವತಾರದಲ್ಲಿ ಬಂದಿದ್ದ ಪರಿಚಿತರನ್ನೆಲ್ಲಾ ಮಕ್ಕಳು ಮೇಲಿಂದ ಕೆಳಗೆ ದಿಟ್ಟಿಸಿದ್ದರು. ಗಣಪತಿ ಸಡಗರ ಹುಟ್ಟಿಸುತ್ತಾನೆ ಎನ್ನಿಸಿತ್ತೋ ಏನೋ...
 
 
ಮನೆಗೆ ಹಿಂತಿರುಗುವಾಗ ನಿದ್ದೆ ಹೋಗುವ ಟೈಮ್ ನಲ್ಲಿ ’ಅಮ್ಮಾ...ಗಣಪತಿ ಸ್ಟ್ರಾಂಗೋ...ಜೀಸಸ್ ಸ್ಟ್ರಾಂಗೋ?’ ಮಿಸೈಲು ಬಂತು. ಅಷ್ಟೆಲ್ಲದರ ಮಧ್ಯೆ ಗಣಪತಿಯನ್ನು ಜೀಸಸ್ ಜೊತೆಗೆ ಹೋಲಿಸಲು ಪ್ರಯತ್ನಿಸುತ್ತಿರುವ ಪುಟ್ಟ ಮನಸ್ಸಿನ ಬಗ್ಗೆ ಅಚ್ಚರಿಯಾಯಿತು. ಆದರೆ ಇದು ಎಮೋಷನಲ್ಲಾಗುವ ಸಮಯವಲ್ಲ. ತಕ್ಷಣ, ನಾನೇ ಕಣ್ಣಾರೆ ಕಂಡ ಸತ್ಯವೆಂಬಷ್ಟು ಧೃಢವಾಗಿ ’ಗಣಪತಿನೇ ತುಂಬಾ ಸ್ಟ್ರಾಂಗ್ ಮಗನೇ’ ಅಂದೆ.
 
’ಅವನು ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್ ಗಿಂತಾ ಸ್ಟ್ರಾಂಗಾ?’
’ಅಯ್ಯೋ ಅವರಿಬ್ಬರೂ ಗಣಪತಿ ಮುಂದೆ ಯಾವ ಮೂಲೆ?!, ಗಣಪತಿ ಅವರಿಬ್ಬರನ್ನೂ ಒಂದೇ ಕೈಲಿ ಬಿಸಾಕಿ ಬಿಡ್ತಾನೆ’
’ಆದರೆ ಅವನು ತುಂಬಾ ಫನ್ನಿಯಾಗಿದ್ದಾನಲ್ಲಾ...’
’ಯಾಕಂದ್ರೆ ಮಕ್ಕಳಿಗೆ ಮುದ್ದಾಗಿ ಕಾಣಿಸಲಿ ಅಂತ!’
’ಮತ್ತೆ..ಜೀಸಸ್?’
’ಪಾಪ...ಜೀಸಸ್ ಒಳ್ಳೆಯವನು ಆದ್ರೆ ತುಂಬಾ ಸಣ್ಣ...ಗಣಪತಿಯಷ್ಟು ಶಕ್ತಿಯಿಲ್ಲ...’ ಎಲ್ಲಾದರೂ ಧರ್ಮ ಪ್ರಚಾರಕಿಯಾಗಿದ್ದರೆ ಒಳ್ಳೆ ಬಿಸಿನೆಸ್ಸು ಮಾಡಬಹುದಿತ್ತು ಎಂದುಕೊಂಡೆ.
ಎರಡು ನಿಮಿಷ ಮಗ ಏನೂ ಮಾತಾಡಲಿಲ್ಲ. ಆದರೆ ಪುಟ್ಟ ಬ್ರೇನಿಗೆ ಪ್ರೋಸೆಸ್ ಮಾಡಲು ಹೆಚ್ಚು ಸಮಯ ಬೇಕಾಗಲಿಲ್ಲ.
’ಅಮ್ಮಾ..ಐ ಲವ್ ಗಣಪತಿ ವೆರಿ ಮಚ್’ ಅಂದ. 
’ಮೀ ಟೂ ಮಗನೇ’ ಖುಶಿಯಾಗಿತ್ತು. ಬಡಪಾಯಿ ಜೀಸಸ್ ನಿಂದ ಅವನ ಪುಟ್ಟ ಫ್ಯಾನ್ ಒಬ್ಬನನ್ನು ಕಸಿದುಕೊಂಡೆ ಅಂತ.
 
 
ಮಿಣಮಿಣ ಕಂಡದ್ದಕ್ಕೇ ಮಾರು ಹೋಗಿ ಇವನೇ ನಮ್ಮ ಹೀರೋ ಅಂತ ಐ ಲವ್ ಯೂಗಳನ್ನು ಸುರಿಸುವ ಇಂಥ ಪುಟಾಣಿ ಮನಸ್ಸುಗಳ ಮೇಲೆ ಧರ್ಮದ ಹೇರಿಕೆ ಮಾಡುವ ಅಪ್ಪ ಅಮ್ಮ, ಶಾಲೆಗಳು, ಸಮಾಜದ ಮೇಲೆ ಕೋಪ ಬಂದರೂ...ನನ್ನದನ್ನು ನನ್ನ ಅನುಮತಿಯಿಲ್ಲದೇ ಆಕ್ರಮಿಸಿಕೊಳ್ಳಲು ಅಥವಾ ಆವರಿಸಿಕೊಳ್ಳಲು ಪ್ರಯತ್ನಿಸುವ ಶಕ್ತಿಗಳನ್ನು ದೂರ ಇಟ್ಟುಕೊಳ್ಳಲು ಅಪ್ಪ ಅಮ್ಮಂದಿರು ದೂರದ ದೇಶಗಳಲ್ಲಿ ತಮ್ಮದೇ ಒಂದು ಕಾಂಪೌಂಡು ಕಟ್ಟಿಕೊಳ್ಳುವ ಪರಿಯ ಪರಿಚಯ ಆಗಿತ್ತು.
 
 


 
 
 
 
 
Copyright © 2011 Neemgrove Media
All Rights Reserved