ಅಂಗಳ      ಪಂಚವಟಿ
Print this pageAdd to Favorite
 
 
 

 (ಪುಟ ೨) ಬಿಲ್ಲಿಯೆಂಬ ಬೆಕ್ಕಿನ ಲಾಂಗ್ ಡಿಸ್ಟೆನ್ಸ್ ಸಂಬಂಧಗಳು
ಬೇಲಾ ಮರವ೦ತೆ


ನನ್ನ ಡೈರಿಯ ಪುಟಗಳನ್ನು ಪ್ರೀತಿಗೋ, ಕುತೂಹಲಕ್ಕೋ, ಕ್ಯಾಶುಅಲ್ ಆಗೋ ಹೊಕ್ಕಿಹೋಗುವ ಎಲ್ಲಾ ಕಣ್ಣುಗಳಿಗೆ, ಅವು ಕನೆಕ್ಟ್ ಮಾಡಿಕೊಡುವ ಮನಸ್ಸುಗಳಿಗೆ ಹೊಸವರ್ಷದ ಸಿರಿ ಹಾರೈಕೆಗಳು. ೨೦+ ಪುಟಗಳನ್ನು, ಓದುವವರಿರಲೀ ಬಿಡಲೀ, ನನ್ನಷ್ಟಕ್ಕೆ ನಾನು ತೆರೆದುಕೊಳ್ಳುತ್ತಾ ಹೋಗುತ್ತಿದ್ದಂತೆ ಹಗುರವಾದ ಅನುಭವ. ಬರೆಯುವುದು ಎಷ್ಟೆಲ್ಲಾ ಇದೆ, ನಾನು ಬರೆಯಬಲ್ಲೆನಾ, ಹೀಗೆ ಬರೆದದ್ದು ಸರಿಯಾ ಎನ್ನುವ ಕಡೆಗೋಲನ್ನಿಟ್ಟುಕೊಂಡೇ ಶುರು ಆಗಿತ್ತು ಈ ಕಥೆ. ಹೆಚ್ಚಿನ ಸಮಯ ಮನದಲ್ಲಿ ಹರಡಿಕೊಂಡಿರುವ ಮೆಲಾಂಕಲಿಯಲ್ಲಿ ಬರೆದರೆ ಕೆಲವೊಮ್ಮೆ ಖುಷಿ, ಮಹಾನ್ ಸೋಮಾರಿತನ, ಇನ್ನೊಮ್ಮೆ ಸಿಟ್ಟು, ಹಾಗೇ ಸಿಲ್ಲಿ ನಥಿಂಗ್ಸ್...ಸಾಗುತ್ತಿದೆ. ಒಂಟಿತನ, ಪರಕೀಯತೆ, ಇಲ್ಲಿನ ಅಲ್ಲಿನ ಸದಾ ಹೋಲಿಕೆ, ನಮ್ಮಂಥ ಹುಡುಗಿಯರ ಡೈರಿಗಳ ಮೇನ್ ಫೀಚರ್ಗಳು. ಹೊರಗೆ ಬರುತ್ತೇವೆಂದು ನಿರ್ಧರಿಸುವವರೆಗೂ ನಾವು ಅದೇ ಸಮುದ್ರದಲ್ಲಿ ತೇಲುತ್ತಾ ಮುಳುಗುತ್ತಾ ಏಗುತ್ತಿರುತ್ತೇವೆ. ಸಮಯ ನಮ್ಮೆಲ್ಲಾ ನೋವು ಒಂಟಿತನ, ಕಾಯುವಿಕೆ, ಕ್ರೇವಿಂಗ್ ಗಳಿಗೆ ಮದ್ದು...

ಇರಲಿ...

ಮೊನ್ನೆ ’ಪವಿತ್ರಾ’ರ ಲಾಂಗ್ ಡಿಸ್ಟನ್ಸ್ ಸಂಬಂಧದ ಬಗ್ಗೆ ಬರೆದು ಅದನ್ನು ಕಳಿಸಿಕೊಟ್ಟ ಮೇಲೆ ಮನಸ್ಸು ತುಂಬಾ ಕಷ್ಟಕ್ಕೆ ಬಿದ್ದಿತ್ತು. ಆಕೆ ಒಬ್ಬ ಹೆಂಗಸು. ಹೆಂಗಸರ ಬಗ್ಗೆ ಒರಟಾಗಿ ಬರೆದಾಗ ಇಷ್ಟು ಯೋಚನೆಯಾಗುತ್ತೆ ಎಂದುಕೊಂಡಿರಲಿಲ್ಲ. ಆಕೆಯ ಸಂಬಂಧಕ್ಕಿಂತಾ ಆಕೆಯ ಸ್ವಭಾವದ ಬಗ್ಗೆ ನನಗೆ ಕಂಡಿದ್ದನ್ನು ಹೆಚ್ಚು ಬರೆದೆನಾ ಎಂದು ಪ್ರಶ್ನಿಸಿಕೊಳ್ಳುವಂತಾಯಿತು. ಸ್ವಭಾವಗಳು ಸಂಬಂಧ ನಿರ್ವಹಿಸುವಲ್ಲಿ ಮಹತ್ವದ್ದಲ್ಲವಾ? ಯಾಕೆ ಈ ಅನುಮಾನ? ಆಕೆಯ ಮೇಲೆ ನನಗೆ ಕೋಪ ಇದೆಯಾ? ಇದ್ದರೂ ಯಾಕೆ? ನಾನಾಕೆಯ ಬಗ್ಗೆ ನೆಗೆಟಿವ್ ಆಗಿ ಮಾತ್ರ ಬರೆದೆನಾ ಎಂದೆಲ್ಲಾ ಮೆಲುಕು ಹಾಕುತ್ತ ಕುಳಿತೆ. ನನ್ನ ಅವರ ಒಡನಾಟವನ್ನು, ಮಾತುಕತೆಯನ್ನು, ಆ ವರ್ಷದ ಮಳೆಗಾಲವನ್ನು ಮತ್ತೊಮ್ಮೆ ಕೂತು ಧ್ಯಾನಿಸಿದೆ. ಕೂರುವಾಗ ಸಮಾಧಾನದಿಂದಿದ್ದ ಮನಸ್ಸು ಆಕೆಯ ಮುಖ, ಭಂಗಿ, ಕೆಲಸ ಮಾಡಿಸಿಕೊಂಡಿದ್ದು, ಸುಳ್ಳುಗಳು, ಕೆಲಸವಿಲ್ಲದ ಹುಡುಗಿಯರನ್ನು ಪರೋಕ್ಷವಾಗಿ ಅವಹೇಳನ ಮಾಡುತ್ತಿದ್ದ ರೀತಿ ಎಲ್ಲವೂ ನೆನಪಿಗೆ ಬಂದವು. ಅಬ್ಬಾ ಸಾಕಪ್ಪಾ! ಕಣ್ಣು ತೆರೆದೆ. ಅವಸರಕ್ಕೆ ಬರೆದಂತೆ ಅಸಮಾಧಾನ ತೀರಿಸಿಕೊಂಡಿದ್ದೆನಾದರೂ ಅಸತ್ಯ ಬರೆದಿರಲಿಲ್ಲ. ಸಮಾಧಾನವಾಯಿತು. ಅದರ ಜೊತೆಗೇ ಮನಸ್ಸಿಗೆ ಇನ್ನೊಂದು ಕೆಲಸ ಮಾಡುವುದಿತ್ತು.
 
ನನ್ನ ಗೆಳತಿಯನ್ನು ಸಂಪರ್ಕಿಸಿ ಪವಿತ್ರಾರ ಫೋನ್ ನಂಬರ್ ಪಡೆದುಕೊಂಡೆ. ಗೆಳತಿ ಅಚ್ಚರಿಪಟ್ಟಳು. ’ಬೇಕು ಕಣೇ ಹೊಸವರ್ಷದ ವಿಶ್ ಮಾಡಲಿಕ್ಕೆ’ ಎಂದು ಒಂದು ಸಮಾಧಾನದ ಸಮಯ ನೋಡಿ ಕಾಲ್ ಮಾಡೇ ಬಿಟ್ಟೆ. ಪವಿತ್ರಾ ಸಿಕ್ಕರು. ನನ್ನನ್ನು ನೆನಪಿಸಿಕೊಂಡರು. ’ನಿಮಗೆ ನ್ಯೂ ಯಿಯರ್ ವಿಶ್ ಮಾಡೋಣ ಅಂತ ಮಾಡಿದೆ’ ಎಂದೆ. ’ಓ ಥ್ಯಾಂಕ್ಯೂ’ ಸಂಭಾಷಣೆಯ ಮಧ್ಯ ಆಕ್ವರ್ಡ್ ಎನಿಸುವ ಮೌನ.
 
’ನಾನು ಹೀಗೆ ಒಂದು ವೆಬ್ ಗೆ ಬರಿತಾ ಇದ್ದೀನಿ’
’ಓ ಯು ಫೈನಲೀ ಫೌಂಡ್ ಅ ಜಾಬ್! ಸ್ಟಡೀಸ್ ನಿಲ್ಲಿಸಿಬಿಟ್ಯಾ ಹೇಗೆ?’
’ಇಲ್ಲ, ನಡಿತಾ ಇದೆ’....’ನಾನು ನಿಮ್ಮ ಲಾಂಗ್ ಡಿಸ್ಟನ್ಸ್ ರಿಲೇಷನ್ಸಿಪ್ ಬಗ್ಗೆ ನನ್ನ ಬ್ಲಾಗ್ ನಲ್ಲಿ ಬರೆದಿದ್ದೀನಿ...ಹೆಸರು ನಿಮ್ಮದಲ್ಲ...ಟೈಮ್ ಆದ್ರೆ ನೋಡಿ...’
ಎರಡು ನಿಮಿಷ ಮೌನ. ’ಸೋ ವಾಟ್ ಶೇರ್ ಡು ಐ ಗೆಟ್ ಇನ್ ಯುಅರ್ ರಾಯಲ್ಟಿ?’ ಅವರ ಟಿಪಿಕಲ್ ನಗು.
’ಇಲ್ಲ, ಐ ಡೋಂಟ್ ಗೆಟ್ ಎನಿ...’
’ಓ...ಫ್ರೀ ಸರ್ವಿಸ್ ಈಸ್ ಇಟ್?...ಡೋಂಟ್ ಬೀ ಅ ಲೂಸರ್!’
"ಐ ಆಮ್ ನಾಟ್. ಥ್ಯಾಂಕ್ಯೂ...ನೀವು ಚನ್ನಾಗಿದ್ದೀರಾ?’
’ಓ ಯಾ! ಗ್ರೇಟ್! ನೆಕ್ಸ್ಟ್ ವೀಕ್ ಕಸಿನ್ ಮದುವೆಗೆ ಇಂಡಿಯಾಗೆ ಹೋಗ್ತಾ ಇದ್ದೀನಿ...ಹ್ಯಾವಿಂಗ್ ಅ ಗುಡ್ ಟೈಮ್!!’
’ಸಂತೋಷ...ಹ್ಯಾಪಿ ನ್ಯೂ ಯಿಯರ್...ವಿಶ್ ಯೂ ಅ ವಂಡರ್ಫುಲ್ ಟೈಂ ಅಹೆಡ್...’
’ಓ ಥ್ಯಾಂಕ್ಯೂ...’
ಫೋನಿಟ್ಟ ಮೇಲೊಂದು ದಿಮ್ಮಿ ಗಾತ್ರದ ಉಸಿರು ಬಿಸಾಕಿದೆ. ತಿಳಿತ ಹಾಗಾಯಿತು.
 
***
’ಕದ್ದಿಂಗಳು...ಕಗ್ಗತ್ತಲು...ಕಾರ್ಮೋಡದ ಮುಗಿಲು...’ ಯಾವಾಗಲೋ ಓದಿದ್ದೆ. ಕವಿಯ ಹೆಸರು ನೆನಪಿಗೆ ಬರುತ್ತಿಲ್ಲ. ನಾನು ಅನುಭವಿಸಿದ ಲಾಂಗ್ ಡಿಸ್ಟೆನ್ಸ್ ರಿಲೇಶನ್ಶಿಪ್ ನ ಸಮಯದಲ್ಲಿ ನನ್ನ ಮನಸ್ಸಿದ್ದ ರೀತಿ ಇದು. ಎಮೋಷನಲ್ ಪಾರ್ಟಿ ಆದ್ದರಿಂದ ಮನಸ್ಸಿಗೆ ’ಆಗುತ್ತಿದ್ದುದು’ ಜಾಸ್ತಿ. ಅಯ್ಯೋ ತಿಂಗಳುಗಳು ಗಂಡನಿಂದ ದೂರ ಇದ್ದೇ ಇಷ್ಟೋಂದು ಸೆಂಟಿ ಆಗುತ್ತಿದ್ದಾಳಲ್ಲಾ ಅಂತ ನಿಮಗೆ ತಮಾಷೆ ಅನಿಸಬಹುದು.
ಗಂಡನಿಂದ ದೂರವಿದ್ದು ಕಷ್ಟವಾಗಿದ್ದಾದರೆ ’ವಿರಹಾ ನೂರು ನೂರು ತರಹಾ..’ಅಂತ ಗೋಳಾಡುವ ಎಪಿಸೋಡು ಬರೆದುಕೊಳ್ಳುತ್ತಿದ್ದೆ. ನನಗೆ ನನ್ನ ಲಾಂಗ್ ಡಿಸ್ಟೆನ್ಸ್ ನಲ್ಲಿ ಗಂಡನೇ ಮುಖ್ಯನಾಗಿರಲಿಲ್ಲ. ನನ್ನ ಬದುಕು-ನಾನು ಕಟ್ಟಿಟ್ಟುಕೊಂಡಿದ್ದ, ನಂಬಿದ್ದ, ನಾನು ಭಾರ ಬಿಟ್ಟಿದ್ದ ಎಲ್ಲಾ ಸಂಬಂಧಗಳಿಂದ, ಅಪ್ಪ ಅಮ್ಮ ಅಕ್ಕ ತಮ್ಮ, ಸ್ನೇಹಿತರು, ಅತ್ತೆಮಾವಂದಿರು, ಇನ್ನುಳಿದ ಸಂಸಾರ, ಪರಿಚಿತರು ಎಲ್ಲರಿಂದಲೂ ದೂರ...ಲಾಂಗಾತಿ ಲಾಂಗಾದ ಅಂತರ ಕಲ್ಪಿಸಿ, ಯಾವುದೋ ಸಮುದ್ರದ ಮಧ್ಯದಲ್ಲಿ ವಿಳಾಸವಿಲ್ಲದೆ ತೇಲಾಡುವ ಪುಟ್ಟ ದ್ವೀಪವೊಂದರಲ್ಲಿ ನನ್ನ ಕೂಡಿಹಾಕಿತ್ತು. ನನಗಂತೂ ಹಾಗನಿಸಿತ್ತು. ...ಒಂಟಿತನಕ್ಕೆ ಹಲುಬುತ್ತಲೇ, ಪ್ರತೀ ಸಂಬಂಧಗಳ ಆಳ ವಿಸ್ತಾರಗಳನ್ನು, ಅವುಗಳ ಸತ್ಯಗಳನ್ನು ತಿಳಿಯುತ್ತಾ, ಅನುಭವಿಸುತ್ತಾ, ಅವನ್ನು ಸಾಣೆ ಹಿಡಿಯುವಂತೆ ಮಾಡಿತ್ತು. ನಾನೂ ಸಾಣೆಗೆ ಸಿಲುಕಿದ್ದೆನೇನೋ...
***

ಸಾಯಂಕಾಲವೆನ್ನುವುದು ಕಣ್ಣುಬಿಡುವ ಹೊತ್ತು...ಕಾಲೇಜಿಂದ ಮನೆಗೆ ಬಂದಾಗ ಅಮ್ಮನ ಅಡಿಗೆ ಮನೆಯ ಹಸಿವೆ ಬರಿಸುವ ಸದ್ದು, ಅಕ್ಕ ಮನೆಗೆ ಬಂದು ನೋಟ್ಸ್ ಬರೆದುಕೊಳ್ಳುವಾಗ...ಬಟ್ಟೆ ಮಡಿಸಿಟ್ಟುಕೊಳ್ಳುವಾಗ ಅವಳ ಬಳೆಗಳು ಮಾಡುತ್ತಿದ್ದ ಚಿಲಚಿಲ ಚಿಲಿಪಿಲಿ ಸದ್ದು ಅಥವಾ ಅಕ್ಕಪಕ್ಕದ ಮನೆಗಳಿಂದ ದಿನಾ ಹೊರಡುತ್ತಿದ್ದ ಏನಾದರೊಂದು ಪರಿಚಿತ ಸದ್ದು ಕಿವಿಗೆ ಬೀಳಲೇಬೇಕು. ಕಾಣಲೇಬೇಕು. ಅವರು ಬಂಡೆ ಮೇಲಿನ ಬರಹದಂತೆ ಅಲ್ಲಿದ್ದೇ ಇರುತ್ತಿದ್ದರು. ಇಲ್ಲದಿದ್ದರೆ ’ಅಮ್ಮಾ...ಅಮ್ಮಾ...ಅಕ್ಕಾ...ಅಕ್ಕಾ...ಅಕ್ಕಾಲೇ’ ಬೆಳಗಿನ ಹೊತ್ತು ತಂಗಳನ್ನ ಬೇಡಲು ಬರುತ್ತಿದ್ದ ಹೆಂಗಸು ಬೇರೆ ಬೇರೆ ಶ್ರುತಿಯಲ್ಲಿ ರಾಗಗಳಲ್ಲಿ ನಮ್ಮನ್ನು ಹೊರಗೆ ಕರೆಯುವಂತೆ...ನಾನೂ ಕರೆದಾಡುತ್ತಿದ್ದೆ. ’ಏನೇ ಅದೂ! ಏನಂದುಕೋಬೇಕು ಅಕ್ಕಪಕ್ಕದವರು?! ಇಷ್ಟು ವಯಸ್ಸಾಗಿ ಈ ಥರ ಕೂಗ್ತಿಯಲ್ಲಾ!’ ಬೈದುಕೊಳ್ಳುತ್ತಲಾದರೂ ಸರಿ, ಎಲ್ಲಿಂದಾದರೂ ಅಮ್ಮ ಅಕ್ಕನ ದನಿ ಕೇಳಿಸದಿದ್ದರೆ ನನ್ನೊಳಗಿದ್ದ ಧೈರ್ಯವೆನ್ನುವ ಗುಬ್ಬಚ್ಚಿ ಪುರ್ರ್ ಅಂತ ಎಲ್ಲಿಗೋ ಹಾರಿಬಿಡುತ್ತಿತು.
 
ಭಯವೆಂದಲ್ಲ. ನನ್ನ ಮನೆಯವರ ಸದ್ದು, ಇರುವಿನ ಸುಳಿವಿಲ್ಲದ ಪ್ರಪಂಚವೇ ನನಗೆ ಗೊತ್ತಿಲ್ಲ. ಬೇಕಿಲ್ಲ. ವಯಸ್ಸು ಹದಿನೆಂಟಾದರೂ ನಾನವರ ಬೆಚ್ಚನೆಯ ಕಾವಿನಲ್ಲಿ ಇಷ್ಟಿಷ್ಟೇ ಬಿಗಿಯಾಗುತ್ತಾ ಅವಿತುಕೊಳ್ಳುತ್ತಿದ್ದ ಕೂಸು. ಅವರು ಹಾಗೆಂದುಕೊಂಡಿದ್ದರೋ ಇಲ್ಲವೋ ನನಗೆ ಗೊತ್ತಿರಲಿಲ್ಲ. ನನದಂತೂ ಅದೇ ನಿಜ. ಮನೆಯೊಳಗೆ ಕೇಳಿಸಲಿಲ್ಲವೆಂದಾಗ ಧಡಕ್ ಅಂತ ಮನೆಹೊರಗೆ ಬಂದು ಬಿಡುತ್ತಿದ್ದೆ. ಕಾಂಪೌಡಿನ ಸುತ್ತೆಲ್ಲಾ ದರಬರ ಹುಡುಕುತ್ತಿದ್ದೆ. ಹಿಂದೆ ಬಟ್ಟೆ ಕಲ್ಲಿನ ಹತ್ತಿರವೋ, ಗೊಬ್ಬರದ ಗುಂಡಿಗೆ ಕಸ ಸುರಿಯುತ್ತಲೋ, ಸೀಬೆ ಕಾಯಿ ಕೀಳುತ್ತಲೋ, ಚಪ್ಪರದವರೆ ಬಿಡಿಸುತ್ತಲೋ ಸಿಕ್ಕಿಬಿಡುತ್ತಿದ್ದರು. ಅಲ್ಲೂ ಇರಲಿಲ್ಲವೆಂದರೆ ನನ್ನೊಳಗಿನ ಮೌನ ಹೆದರಿ ಹೊರಗೆ ಹಾರಿ ಬಿಡುವಂತೆ ಕಾಪೌಂಡಿನ ಮೂಲೆಯಲ್ಲಿ ನಿಂತು ಪಕ್ಕದ ಮನೆಯ ಆಂಟಿಯನ್ನು ಕರೆಯುತ್ತಿದ್ದೆ. ಆಗಲಾದರೂ ಸಿಕ್ಕಿಬಿಡುತ್ತಿದ್ದರು. ಒಮ್ಮೆ ಅವರ ಮುಖ ನೋಡಿದ ಮೇಲೆ ಅಷ್ಟೇ. ನನ್ನಷ್ಟಕ್ಕೆ ಬಟ್ಟೆ ಬದಲಾಯಿಸಿ, ಅಡಿಗೆ ಮನೆಯಲ್ಲಿ ತಿನ್ನಲು ಹುಡುಕುತ್ತಾ ಅವತ್ತಿನ ದಿನ ಕಾಲೇಜಿನಲ್ಲಾದದ್ದನ್ನೆಲ್ಲಾ ಕೆಮ್ಮು, ಕ್ಯಾಕರಿಕೆಯನ್ನೂ ಸೇರಿಸಿ ಹೇಳಿಬಿಡಲು ಅಕ್ಕನನ್ನು ಹಿಡಿಯುತ್ತಿದ್ದೆ. 
 
ಇದೇ ಬದುಕಾಗಿತ್ತು. ಅಮ್ಮ ಅಪ್ಪ ಅಕ್ಕ ತಮ್ಮ ಯಾರಾದರೂ ಜೊತೆಗೆ ಸಿಗುತ್ತಿದ್ದರು. ಎಲ್ಲರಿಗೂ ನನ್ನಿಂದ ತಪ್ಪಿಸಿಕೊಳ್ಳುವಂತಾದರೆ ಕಾಂಪೌಂಡ್ ಮುಂದಿನ ಗಸಗಸೆ ಮರದ ಕೆಳಗೆ ಸಂಜೆಯ ಶಿಫ್ಟಿಗೆ ಗಾಡಿ ನಿಲ್ಲಿಸಿಕೊಳ್ಳಲು ಬರುತ್ತಿದ್ದ ಇಸ್ತ್ರಿಯ ಶಿವಮ್ಮ ಆಂಟಿ ಸಿಗುತ್ತಿದ್ದರು. ಅವರಿಗೆ ನಾನು ಯಾವತ್ತೂ ಬೇಕು...ಅಕ್ಕಪಕ್ಕದ ಮನೆಯವರು, ವಯಸ್ಸಿನ ಹುಡುಗರು ಮನೆ ಸೇರುವ ಟೈಮ್ ಆಗುತ್ತಿದ್ದಂತೇ ನಾವೆಲ್ಲಾ ನಮ್ಮನೆಯೊಳಗೆ ಬೆಚ್ಚಗಾಗಿ ಬಿಡುತ್ತಿದ್ದೆವು. ಟಿವಿ ಎನ್ನುವುದೊಂದು ಇದ್ದರೂ ತಮ್ಮನನ್ನು ಬಿಟ್ಟು ಅದಕ್ಕೆ ಯಾರೂ ಮಣೆ ಹಾಕುತ್ತಿರಲಿಲ್ಲ. ನ್ಯೂಸ್ ಬಂದಾಗ ಮಾತ್ರ ಮನ್ನಣೆ. ಅದು ಬಿಟ್ರೆ ಅಪರೂಪದ ಬೆಳಿಗ್ಗೆಗಳಲ್ಲಿ ಎರಡು ನಿಮಿಷ ’ವಂದೇ ಮಾತರಂ...’ ಕೇಳುತ್ತಾ ಬ್ಲ್ಯಾಕ್ ಅಂಡ್ ವೈಟ್ ನದಿ, ಅರಣ್ಯ, ಹಿಮದ ಮಣಿಗಳನ್ನು ನೋಡುತ್ತಿದ್ದೆವು.
ನನ್ನ ಬದುಕಿನಲ್ಲಿ ಸಂಬಂಧಗಳನ್ನು ನಾನೇ ನನಗಿಷ್ಟವಾದಷ್ಟು ಗಾಢವಾಗಿ ಹೆಣೆದುಕೊಂಡು ಬಿಟ್ಟಿದ್ದೆ.
 
ಒಂದಿನ ಅಕ್ಕ ಬೇರೆ ಮನೆ-ಬದುಕಿಗೆ ಹೋಗಿಬಿಟ್ಟಳು. ಒಂದು ಸದ್ದು ತುಂಬಲಾರದಂತೆ ಕಡಿಮೆಯಾಯಿತು. ಅದೇ ಬೇಜಾರಿನಲ್ಲಿ ನನ್ನ ಡಿಗ್ರೀ ಮುಗಿಯಿತು ಅಷ್ಟೇ. ನನ್ನೊಳಗೆ ಇನ್ನೇನೂ ಬದಲಾವಣೆಗಳಾಗಿರಲಿಲ್ಲ. ಆದರೆ ನನ್ನನ್ನೂ ನನ್ನ ಗೂಡಿನಿಂದ ಹೊರಗೆ ಸಾಗಿಸುವ ಯೋಜನೆ. ಮದುವೆ, ಸಡಗರ ಹಾಳುಮೂಳು ಹೊಸತೆನಿಸಿದರೂ ಗೂಡು ಬಿಡಲು ನಾನಿನ್ನೂ ಸಂಪೂರ್ಣ ತಯಾರಿರಲಿಲ್ಲ. ಬಹುಃಷ ಯಾರೂ ತಯಾರಿರುವುದಿಲ್ಲವೇನೋ...
 
ಅಕ್ಕನಂತೆ ವಾರಕ್ಕೊಮ್ಮೆ ಬಂದು ಅಪ್ಪ ಅಮ್ಮನ ಮಡಿಲಲ್ಲಿ ಬೆಚ್ಚಗಾಗುವ ಅದೃಷ್ಟ ನನ್ನದಾಗಲಿಲ್ಲ. ನಾನು ಮಾಯದ ಬೆನ್ಹತ್ತಿದಂತೆ ಹೋಗೇ ಹೋದೆ. ಗೂಡುಕಟ್ಟುವುದು, ಕೂಳು ಮಾಡುವುದು, ಪ್ರೀತಿ ಮಾಡುವುದು, ಹೊಸ ಸಂಬಂಧವೊಂದನ್ನು ಹೆಣೆದುಕೊಳ್ಳುವುದು ಎಲ್ಲವನ್ನೂ ಹೊಸದಾಗಿ ಒಬ್ಬಳೇ ಕಲಿತೆ. ಬದುಕೇ ಮಿಸ್ಸು ಬದುಕೇ ಪಾಠ. 
 
ಇತ್ತ ಕಟ್ಟುವುದು ಕೊಡುವುದನ್ನು ಕಲಿಯುತ್ತಿದ್ದಾಗ ಅತ್ತ ಜೀವದೊಂದಿಗೆ ತಳುಕು ಹಾಕಿದ್ದ ಸಂಬಂಧಗಳು ತಾವೇ ಸಡಿಲಾಗತೊಡಗಿದವು. ಭೌಗೋಳಿಕವಾಗಿದ್ದ ದೂರ ಮನಸ್ಸುಗಳ ನಡುವೆಯೂ ಬರಲಾರಂಭಿಸಿತ್ತು. ಅಕ್ಕ ಯಥಾಪ್ರಕಾರ ಅವಳ ಬದುಕು, ಮಗು, ಗಂಡನ ಭರಾಟೆಯಲ್ಲೇ ಇದ್ದು ವಾರಕ್ಕೊಮ್ಮೆ ಮಾತಿಗೆ ಸಿಕ್ಕಾಗಲೂ ಮನಸ್ಸು ಕೊಡಲು ಕಷ್ಟ ಪಡುತ್ತಿದ್ದಳು. ಅಕ್ಕ ತಂಗಿಗೆ ಮಾತ್ರವೇ ಕೇಳಿ ಹೇಳಿಕೊಡಬಹುದಾದ ಜೀವನ ಪಾಠಗಳನ್ನು ಹೇಳುವ ವ್ಯವಧಾನ ಅಪರೂಪಕ್ಕಿರುತ್ತಿತ್ತು. ಸಿಗುವ ಹಿಡಿಯಷ್ಟು ಅಮೂಲ್ಯ ಸಮಯದ ಮಧ್ಯಮಧ್ಯ ಅಮೆರಿಕನ್ ಡೈಮಂಡ್ ನಿಜವಾದ ಡೈಮಂಡ್ ಗಿರುವ ವ್ಯತ್ಯಾಸ, ಅಮೆರಿಕಾದಲ್ಲಿ ಇದು ಸಿಗುತ್ತಾ ಅಂತ ಅವಳ ನಾದಿನಿ ಕೇಳಿದ ಸಾಮಾನುಗಳ ಪಟ್ಟಿಗಳು ನುಸುಳಿ ನನಗೆ ಶರಂಪರ ಕೋಪ ಬರುತ್ತಿತ್ತು. ’ಯಾವ ಡೈಮಂಡ್ ಹೆಂಗಿದ್ದರೇನೇ...ನನ್ನ್ಯಾಕೆ ಕೇಳ್ತೀಯಾ?’ ಎಂದಾಗ 'ನೀನಲ್ದೆ ಇನ್ನ್ಯಾರು ಹೇಳ್ತಾರೆ ಬಿಲ್ಲಿ? ನೀನು ತಿಳಿದುಕೋ...ಮೊನ್ನೆ ಮೌನ ಗೌರಿ ವ್ರತ ಇಟ್ಟುಕೊಂಡಿದ್ಯಾ?’ ಅಂತೆಲ್ಲಾ ಅರ್ಥವಾಗದಂತೆ ಮಾತಾಡಿಬಿಡುತ್ತಿದ್ದಳು. ಅವಳು ಮಾಡಿದ್ದನ್ನೆಲ್ಲಾ ಮೆಚ್ಚುತ್ತಾ ಹಿಂದೆ ಮುಂದೆ ಸುಳಿದಾಡುತ್ತಿದ್ದ ಬೆಕ್ಕಿನ ಮರಿ ಬಿಲ್ಲಿಯನ್ನು ಮರೆತೇ ಬಿಟ್ಟಿದ್ದಳು. ನನ್ನಕ್ಕನಿಗೆ ನಾನೀಗ ಸಡನ್ ಸದ್ಗೃಹಸ್ತ ಹೆಂಗಸು! ನಾಲ್ಕೈದು ತಿಂಗಳಲ್ಲಿ ಅದೆಲ್ಲಿ ಅಷ್ಟು ಬೆಳೆದೆ ನಾನು?!!
 
ಅಪ್ಪ-ನನ್ನ ಹೀರೋ, ಗೆಳೆಯ, ನನಗೆ ಅಳುಬಂದಾಗ ಮುದ್ದುಗರೆಯುವ ದೇವರು...’ದೊಡ್ಡವಳಾದ’ ಮೇಲೆ ಅಪ್ಪನ ಜೊತೆ ಜೂಟಾಟ, ಐಸ್ ಪೈಸ್ ಆಡುವುದು ನಿಂತರೂ ಚೌಕಾಬಾರ, ಅಳಗುಳಿಮಣೆ, ಕೇರಂ ಆಡುತ್ತಾ ಜಗಳ ಆಡುತ್ತಿದ್ದುದೇನೂ ನಿಂತಿರಲಿಲ್ಲ. ಅಪ್ಪ ತಮ್ಮನ ಪರ ವಹಿಸಿದ ತಕ್ಷಣ ’ನಿಮಗೆ ಪುತ್ರ ವ್ಯಾಮೋಹ ಜಾಸ್ತಿ ಕಣ್ರಪ್ಪಾ...’ ಅಂತ ಅಕ್ಕ ನಾನು ಅಟ್ಯಾಕ್ ಮಾಡಿ ಬಿಡುತ್ತಿದ್ದೆವು. ಆತ ತನ್ನ ದಿನನಿತ್ಯದ ಕೆಲಸದಲ್ಲಿ ಯಾವಾಗಲೂ ಮುಳುಗಿರುತ್ತಿದ್ದರೂ ಸಂಜೆ ನಮ್ಮ ಜೊತೆ ಮಾತಿಗೆ ಕೂರುತ್ತಿದ್ದರು. ಕುಟುಂಬದ ಹಣಕಾಸಿನ ಸ್ಥಿತಿ ಹೇಳಿಕೊಳ್ಳುತ್ತಿದ್ದರು. ನೆಂಟರ ನಿರೀಕ್ಷೆಗಳನ್ನು ಹಂಚಿಕೊಳ್ಳುತ್ತಿದ್ದರು...ತಮ್ಮ ಬಾಲ್ಯವನ್ನು ಕಥೆಯಾಗಿಸಿ ನಮ್ಮ ಮುಂದಿಡುತ್ತಿದ್ದರು. ಮಕ್ಕಳಿಗೆ ಅವರು ಮುದ್ದಿನ ಅಪ್ಪನಾದರೂ ’ಹೆಣ್ಣುಮಕ್ಕಳ’ ವಿಷಯದಲ್ಲಿ ಅಮ್ಮ ಹೇಳಿದ್ದಕ್ಕೆ ಚಾಚೂ ತಪ್ಪುತ್ತಿರಲಿಲ್ಲ. ಮದುವೆಯಾದದ್ದೇ ತಡ. ’ಪ್ರಶಾಂತ್ ಏನಂತಾರೆ? ಅವರನ್ನೇ ಕೇಳು...ಆತನನ್ನು ಚನ್ನಾಗಿ ನೋಡಿಕೋ ಮಗಳೇ...ಕಂಪ್ಯೂಟರ್ ಕೆಲಸ ಮಾಡುವ ಹುಡುಗ...ಮೆದುಳಿಗೆ ಒತ್ತಡ ಜಾಸ್ತಿ...ಆಗಾಗ ಸಂಗೀತ ಕೇಳಿಸು...ಒಳ್ಳೆ ಪುಸ್ತಕ ಓದಲು ಕೊಡು...ಸಾಮರಸ್ಯವಾಗಿರಿ...’ ಅಂತಲೇ ಹೇಳುತ್ತಿದ್ದರೇ ಹೊರತು ಒಮ್ಮೆಯೂ ’ಆ ಹುಡುಗ ಹೇಗೆ? ಒಳ್ಳೆಯವನಾ? ಚನ್ನಾಗಿ ನೋಡಿಕೋತಾನಾ?’ ಎಂದು ಕೇಳಿರಲಿಲ್ಲ. ಅವರ ಆಯ್ಕೆ ಬಗ್ಗೆ ಅವರಿಗಿದ್ದ ಭರವಸೆಯೋ ಅಥವಾ ಕೇಳಿದರೆ ನಾನೇನಾದರೂ ಹುಳಿಯಾದ ವಿಷಯ ಹೇಳಿಬಿಟ್ಟರೆ ಅದನ್ನು ತಡೆಯಲು ಇಲ್ಲದ ಶಕ್ತಿಯೋ...ಯಾವುದು ಕಾರಣ ನನಗೆ ಗೊತ್ತಿರಲಿಲ್ಲ. ಪ್ರಶಾಂತ ಬಂದ ಮೇಲೆ ನನ್ನ ಬದುಕಿಂದ ಅಪ್ಪ ಪಕ್ಕಕ್ಕೆ ಸರಿದುಬಿಡುವ ಆಯ್ಕೆ ಮಾಡಿದ್ದರು.
 
ಅಮ್ಮ-ಹದಿನೈದು ವರ್ಷವಾಗುವುದೇ ತಡ ’ಇನ್ನೇನು ದಡದಡಾ ಅಂತ ಬೆಳೆದು ಬಿಡ್ತೀರಿ...ಹೆಣ್ಣು ಮಕ್ಕಳು ತಿಪ್ಪೆ ಬೆಳೆದಷ್ಟು ಸುಲಭದಲ್ಲಿ ಬೆಳೆದುಬಿಡ್ತಾರೆ...ಇನ್ನು ನಿಮ್ಮನ್ನು ಮದುವೆ ಮಾಡಿ ಒಳ್ಳೆಕಡೆ ತಲುಪಿಸಿದ ಮೇಲೇನೇ ನನಗೆ ನೆಮ್ಮದಿ ಕಣ್ರೇ...’ ಅಂತ ನಮ್ಮನ್ನು ಹಡೆದಿರುವುದೇ ಮದುವೆ ಮಾಡಿಸಲು ಎಂಬಂತೆ ಮಾತಾಡಿ ಮಾತಾಡೀ...ಕಡೆಗೂ ತನ್ನ ನೆಮ್ಮದಿ ಪಡೆದುಕೊಂಡ ನನ್ನ ಟ್ರೂಲೀ ಸದ್ಗೃಹಸ್ತ ಮದರ್ ಇಂಡಿಯಾ! ಪ್ರತೀ ಶನಿವಾರ ಬೆಳಿಗ್ಗೆ ಹಿಂದಿನ ಬಾಗಿಲಿನ ಹತ್ತಿರ ಕೂರಿಸಿಕೊಂಡು ತಲೆಕೂದಲನ್ನು ಭಾಗ ಮಾಡುತ್ತಾ ಬೆಚ್ಚಗಿನ ಹರಳೆಣ್ಣೆ ಮೆತ್ತಿ ಅದನ್ನು ನೆತ್ತಿಗೆ ಗಸಗಸ ತಿಕ್ಕುತ್ತಲೇ...’ಅವನ್ಯಾಕೇ ನಿನ್ನನ್ನ ಅವತ್ತು ಹಂಗೆ ನೋಡ್ತಿದ್ದ? ಹುಷಾರಾಗಿರು ಆಯ್ತಾ? ಪುಂಡಮುಂಡೇ ಮಕ್ಳು! ಕಣ್ಣೆತ್ತೀನೂ ನೋಡಬೇಡ...ಅದ್ಯಾರು ಬಿಲ್ಲಿ? ಮೊನ್ನೆ ಸಂಜೆ ನಿನಗೆ ಫೋನ್ ಮಾಡಿದ್ದೋನು? ಲವ್ ಗಿವ್ ಏನಿಲ್ಲಾ ತಾನೇ? ಹುಡುಗರ ಹತ್ರ ಹುಷಾರಾಗಿರಬೇಕು! ನಕ್ಕು ಮಾತಾಡಿಸಿದರೇ ಲವ್ ಮಾಡ್ತರೆ ಅಂದುಕೊಳ್ಳುತ್ವೆ...’ ನಮ್ಮ ತಲೆಗಳನ್ನು ಸುತ್ತು ಬರುವಂತೆ ಬಿಗಿಯಾಗಿ ತಿಕ್ಕಿ ಸುಸ್ತು ಹಿಡಿಸುತ್ತಾ ವಿಚಾರಣೆ ಮಾಡಿ...ಉಸಿರಾಡಲೂ ನಿಲ್ಲಿಸದೆ ತನ್ನ ಅನರ್ಘ್ಯ ಆರ್ಡರ್ ಗಳನ್ನು ಕೊಡುತ್ತಾ ನಮ್ಮನ್ನು ಬೇಸ್ತು ಬೀಳಿಸುತ್ತಿದ್ದ ನಮ್ಮಮ್ಮ ಏನಾದ್ರೂ ಪುಂಡು ಹುಡುಗರ ಸೈಕಾಲಜಿ ಓದಿದ್ದಾಳಾ? ಅಥವಾ ಯಾರಿಂದಾದ್ರೂ ಲವ್ ಮಾಡಿಸಿಕೊಂಡಿದ್ದಾಳಾ ಅಂತ ನನಗೆ ಯಾವಾಗಲೂ ಒಳಗೇ ಡೌಟು ಬರುತ್ತಿತ್ತು. ಮೊದಲ ಮಗಳಾದ್ದರಿಂದ ಅಮ್ಮನಿಗೆ ಅಕ್ಕನ ಮೇಲೆ ಜಾಸ್ತಿ ಅಕ್ಕರೆ. ಅದಕ್ಕೇ ಏನೋ ಎಲ್ಲಾ ಬುದ್ದಿವಾದ ಬೈಗುಳಗಳೂ ಫೈನಲೀ ನನಗೇ ಬರುತ್ತಿದ್ದವು.
 
’ಅಲ್ಲಾಮ್ಮಾ...ಯಾರೋ ನಮ್ಮನ್ನ ನೋಡಿದರೆ ನಾವೇನು ಮಾಡದು? ಅವತ್ತು ಫೋನ್ ಮಾಡಿದ್ದೋನು ನನ್ನ ಕ್ಲಾಸ್ ಮೇಟ್. ನೋಟ್ಸ್ ಬೇಕಿತ್ತಂತೆ ಅಷ್ಟೇ..’ ನಾವೇನಾದ್ರೂ ವಿವರಣೆ ಕೊಟ್ಟರೆ ಮುಗೀತು! ಬೆಳಗಿನ ಬುಧ್ಧಿವಾದದ ಸೆಷನ್ ಸೋಮವಾರ ಬೆಳಿಗ್ಗೆ ನಾವೆಲ್ಲಾ ದಡಬಡಾ ಅಂತ ಕಾಲೇಜಿಗೆ ಓಡಿ ತಪ್ಪಿಸಿಕೊಳ್ಳುವವರೆಗೂ ನಡೆಯುತ್ತಿತ್ತು. ಅಕ್ಕ ನಾನು ತಲೆ ಬಗ್ಗಿಸಿ ಕೂತುಬಿಡುತ್ತಿದ್ದೆವು. ಅಮ್ಮ ನಮ್ಮನ್ನು ನಂಬಲ್ವಾ ಎನಿಸಿ ಕೆಲವೊಮ್ಮೆ ತಡೆಯದೆ ಕಣ್ಣೀರು ಬಂದು ಬಿಡುತ್ತಿತ್ತು. ಆಗ ಅಮ್ಮನೂ ಮೌನಿಯಾಗಿಬಿಡುತ್ತಿದ್ದಳು. ’ಹೌದು ಕಣ್ರೇ ನಾನೇ ನಿಮಗೆ ಬೈದು ಬೈದು ಹಿಂಸೆ ಕೊಡ್ತೀನಿ...’ ಮುಸುಮುಸು ಅಳಲು ಶುರು ಮಾಡಿಬಿಡುತ್ತಿದ್ದಳು. ಅದು ಇನ್ನೂ ಟಾರ್ಚರಸ್!! ಅದಕ್ಕೆ ಏನಂದರೂ ’ಉದುರು ಉದುರು ಮಲ್ಲಿಗೇ...ಉದುರದಿರು ಮಲ್ಲಿಗೇ...ಉದುರಿದರೇ ಶಿವನಾ ಪಾದ ಸೇರು ಮಲ್ಲಿಗೆ...’ಅಂತ ಶಿವನ ಮೇಲೆ ಭಾರ ಹಾಕಿ ಕುಳಿತುಬಿಡುತ್ತಿದ್ದೆ.
 
 
ಅವಳ ಪಕ್ಕ ನಿಂತು ಒಬ್ಬಟ್ಟು ಬೇಯಿಸುವಾಗ ಮೊದಲ ಒಬ್ಬಟ್ಟುಗಳನ್ನು ತುಪ್ಪ ಸುರಿದು ತಿನ್ನಿಸುತ್ತಿದ್ದಳು. ಉಳಿಸಿ ಕೂಡಿಡುತ್ತಿದ್ದ ಗಂಟು ಸ್ವಲ್ಪ ಗುಂಡಗಾದರೇ ಅಕ್ಕನನ್ನೂ ನನ್ನನ್ನೂ ರೇಷ್ಮೆ ಸೀರೆ ವ್ಯಾಪಾರ ಮಾಡುವ ಜಯಮ್ಮ ಆಂಟಿ ಮನೆಗೋ, ಎಂಟನೇ ಕ್ರಾಸಿನಲ್ಲಿದ್ದ ಮಾಲಸ ಜುವೆಲರ್ಸ್ ಗೋ ಕರೆದುಕೊಂಡು ಹೋಗಿ ಚಿಕ್ಕದಾಗಿ ಇಬ್ಬರಿಗೂ ಏನನ್ನಾದರೂ ತೆಗೆದಿಡುತ್ತಿದ್ದಳು. ’ನಮಗೆ ಯಾಕಮ್ಮಾ ಸೀರೆ ಒಡವೆ ಎಲ್ಲಾ? ನೀನು ಏನಾದರೂ ಮಾಡಿಸಿಕೋ’ ಎಂದರೆ ’ಇದು ಅವಳಿಗೆ ಇದು ನಿಂಗೆ ಬಿಲ್ಲೀ...ನನಗೆಷ್ಟಾಗುತ್ತೋ ನಾನು ಮಾಡ್ತೀನಿ...ಚನ್ನಾಗಿ ಕಳಿಸಿಕೊಡ್ತೀನಿ...ಆಮೇಲೆ ನೀವೇ ನಿಮಗೇನು ಬೇಕೋ ಎಷ್ಟರದ್ದು ಬೇಕೋ ಮಾಡಿಕೊಳ್ಳಿ...’ ಅಂತ ಕಣ್ಣೀರು ತುಂಬಿಕೊಳ್ಳುತ್ತಿದ್ದಳು. ಅಮ್ಮನ ಜೊತೆಗಿನ ಬದುಕಿನ ಒಂದೂ ನಿಮಿಷ ಸಪ್ಪೆಯಾಗಿರಲಿಲ್ಲ. ಅವಳು ಒಂಥರಾ ಲೈವ್ ಕರೆಂಟ್. ಮಹಾಪೂರ...
 
 
ಅಂತಹ ಅಮ್ಮ ತಾನೇ ಎಣ್ಣೆ ಸ್ನಾನ ಮಾಡಿಸಿ, ಆರತಿ ಮಾಡಿ, ರೇಷಿಮೆ ಸೇರೆ ಉಟ್ಟು, ನೆಂಟರಿಷ್ಟರಿಗೆಲ್ಲಾ ಊಟ ಹಾಕಿಸಿ ಸಡಗರದಿಂದ ನನ್ನ ಮದುವೆ ಮಾಡಿದ್ದಳು. ಅತ್ತು ಕಳಿಸಿಕೊಟ್ಟಿದ್ದಳು. ಗಂಡನಿಗೆ ಏನು ಅಡಿಗೆ ಮಾಡಬೇಕು, ಅತ್ತೆ ಮನೆಯಲ್ಲಿ ಹೇಗಿರಬೇಕು, ಸಂಬಂಧಿಕರನ್ನು ಹೇಗೆ ನೋಡಿಕೊಳ್ಳಬೇಕು ಎಂದು ಒಂದೆರಡು ಮಾತು ಹೇಳಿಕೊಟ್ಟಿದ್ದಳು. ನಾನು ಅಮೆರಿಕಾ ತಲುಪಿದ ಮೇಲೆ ಅವಳ ವಿಚಾರಣೆ ಬುಧ್ದಿವಾದಗಳೇ ನಿಂತು ಹೋಗಿದ್ದವು. ಅವಳು ತನ್ನ ಜವಾಬ್ದಾರಿ ಮುಗಿಸಿಬಿಟ್ಟಂತಿದ್ದಳು. ಅವಲ ಕಡೆಯಿಂದ ಬರುತ್ತಿದ್ದ ಸದ್ದುಗಳು ಖಾಲಿಖಾಲಿ. ಇನ್ನು ನೀವೇನು ಮಾಡಿಕೋತೀರೋ ನಿಮ್ಮ ಬದುಕು ಅಂತ ತನ್ನ ಬದುಕಿಗೆ ವಾಪಸ್ ಜಾರಿ ಬಿಟ್ಟಿದ್ದಳು. ಅವಳಿಗೆ ಮಾಡುವುದು ಸಾಕಷ್ಟಿತ್ತು. ನನ್ನ ತಮ್ಮನಿದ್ದ. ಸೊಸೆ ಬರುವವಳಿದ್ದಳು. ಅಪ್ಪನ ರಿಟೈರ್ ಮೆಂಟ್ ಆಗುವುದಿತ್ತು...ಅವಳು ಲೀಲಾಜಾಲವಾಗಿ ಹರಿದುಬಿಟ್ಟಳು.
 
 
ಸಿಕ್ಕಿಕೊಂಡಿದ್ದು ನಾನೇ. ತಿಂಗಳುಗಳ ಸಮಯವೂ ಇರದೆ, ಅಪ್ಪ ಅಮ್ಮನ ಕೂಸೆಂದೇ ಭ್ರಮಿಸಿದ್ದ ಕುವರಿ ಬೇಲಾ ಸಡನ್ನಾಗಿ ಸಿರಿ ’ಮತಿ’ಯಾಗಿ ಮಾರ್ಪಾಡಾಗಬೇಕಿತ್ತು! ಪರ್ಸಿನಲ್ಲಿ ಅಪ್ಪ ಕೊಟ್ಟ ದುಡ್ಡಿಟ್ಟುಕೊಂಡೇ ಲೈಫು ಸಾಗಿಸುತ್ತಿದ್ದಾಕೆ ’ಬ್ಯಾಂಕ್ ನಲ್ಲಿ ಈಗ ಇಷ್ಟಿದೆ..ಹೇಗೆ ಇನ್ವೆಸ್ಟ್ ಮಾಡೋಣಾ? ಸ್ಟಾಕ್ ಬಗ್ಗೆ ನಿಂಗೇನನಿಸುತ್ತೆ? ನಿಂದೇನಾದ್ರೂ ಐಡಿಯಾ ಇದೆಯಾ? ಅಂತ ಗಂಡನೆಂಬೊಬ್ಬ ಹುಡುಗ ಕೇಳಿದಾಗ...ದಿಗ್ಭ್ರಾಂತಿಗೊಂಡದ್ದನ್ನು ತೋರಿಸಿಕೊಳ್ಳದೆ ಮಹಾಮತಿಯಂತೆ ಮುಖ ಮಾಡಿ ಕ್ಲಾಸಿನಲ್ಲಿ ಹೇಳಿಕೊಟ್ಟ ಅಕೌಂಟ್ಸ್ ಪಾಠದಲ್ಲೇನಾದ್ರೂ ಉತ್ತರ ಸಿಗಬಹುದಾ ಅಂತ ಮನಸ್ಸಿನಲ್ಲೇ ಹುಡುಕಿಕೊಳ್ಳಬೇಕಿತ್ತು!??
 
ನನ್ನ ಸೋರ್ಸುಗಳೆಲ್ಲವೂ ’ಅಳುವ ಕಡಲಲಿ ನಗೆಯ ಹಾಯಿದೋಣಿ’ಯಾಗಿ ನೀನೇ ತೇಲಿಕೋ ಅಂತ ದಾರ ತುಂಡರಿಸಿಕೊಂಡಿದ್ದರು. ಮದುವೆಯ ಸಡಗರ ಗಲಾಟೆಯಲ್ಲಿ ಒಂಟಿತನದ ರಾಕ್ಷಸ ರೇಷಿಮೆ ಹೊದ್ದು ಗೋರಂಟಿಯ ಕಂಪಿನೊಳಗೆ ಬಚ್ಚಿಟ್ಟುಕೊಂಡು ನನ್ನನ್ನು ಆಕ್ರಮಿಸಿಕೊಂಡುಬಿಟ್ಟಿದ್ದ. ಮಾತಾಡಲೂ ಮೂವತ್ತು ಸಾರಿ ಯೋಚನೆ ಮಾಡುವ ಕಂಪ್ಯೂಟರ್ ಪ್ರೇಮಿ ಹುಡುಗನೊಬ್ಬನ ಜೊತೆ ಸಾಗರ ಹಾರಿಸಿ ತಂದು ನನ್ನ ಪ್ರತೀ ನರ-ನಾಡಿಯನ್ನೂ ಕಯ್ಯೋ ಎನ್ನುವಂತೆ ಮೀಟಿ ನಾನೆಂಬ ವ್ಯಕ್ತಿಯನ್ನು ಯಾವ ಮೆಟೀರಿಯಲ್ ನಿಂದ ಮಾಡಿದ್ದಾರೆ ಎಂದು ಪರೀಕ್ಷೆ ಮಾಡಲು ಶುರು ಮಾಡಿದ...ನಾನು ಹುಟ್ಟಿದಾಗಿನಿಂದ ಪಾಲಿಸಿಕೊಂಡು ಬರುತ್ತಿದ್ದ ಎಲ್ಲ ಮುಖ್ಯ ಸಂಬಂಧಗಳೂ...ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್...ಆಗಿ ಕಡೆಗೊಂದು ದಿನ...

(ಮುಂದುವರಿಯುವುದು)  

 
 
 
 
 
 
Copyright © 2011 Neemgrove Media
All Rights Reserved