ಅಂಗಳ      ಒಂದೂರಂತೆ
Print this pageAdd to Favorite
 

 

 

ಗೌಡನ ಹುಡುಗಿ...ಮಾಯದ ಕೋತಿ

 
 
(ಸಂಗ್ರಹ)

 
ಒಂದೂರಲಿ ಒಬ್ಬ ಗೌಡ ಇದ್ದ. ಸುಮಾರು ವರ್ಷದಿಂದ ಗಂಡ ಹೆಂಡತಿಗೆ ಮಕ್ಕಳಾಗಿರಲಿಲ್ಲ. ಆಗಷ್ಟೇ ಗೌಡನ ಹೆಂಡತಿ ಬಿಮ್ಮನ್ಸೆ ಆಗಿದ್ದಳು. ಅವತ್ತು ಇಬ್ಬರೂ ಹಟ್ಟೀಲಿ ಕೂತು ಎಲೆಡಿಕೆ ಹಾಕಿಕೋತಿದ್ರು. ಬೆಳಿಗ್ಗಿಂದ ಕೆಲಸ ಮಾಡೀ ಮಾಡೀ ಗೌಡತಿ ಸುಸ್ತಾಗಿ ಹೋಗಿದ್ಲು. ’ಲೇ ನಮಗೇನಾದ್ರೂ ಹೆಣ್ಣು ಹುಟ್ಟಿದ್ರೆ ಯಾರಿಗೆ ಕೊಡಣಾ?’ ಗೌಡ ತಡೆಯಲಾರದೆ ಕೇಳಿದ. ಸುಸ್ತಾಗಿತ್ತಲ್ಲಾ...ಅವಳಿಗೆ ಕೋಪ ಬಂತು. ’ಅಯ್ಯೋ ಒಂದು ಕೋತಿಗೆ ಕೊಟ್ರಾಯ್ತು ಬಿಡಿ’ ಅಂದುಬಿಟ್ಟಳು. ಗೌಡನ ಹಟ್ಟಿ ಹೊರಗಿನ ಮರದಲ್ಲಿ ಒಂದು ಕೋತಿ ಕಾಯಿ ತಿನ್ನಕೆ ಬಂದಿತ್ತು. ಅದು ಇವರಿಬ್ಬರ ಮಾತನ್ನು ಕೇಳಿಸಿಕೊಂಡು ತಕ್ಷಣ ಹಟ್ಟಿ ಒಳಗಡೆ ಬಂತು. ’ಹೆಣ್ಣು ಹುಟ್ಟಿದ್ರೆ ಕೋತಿಗೆ ಕೋಡ್ತೀರಿ ಅಂದ್ರಿ, ನಿಜಾನಾ ಗೌಡ್ರೇ’ ಅಂತು. ’ ಹೌದು ಕಣಪ್ಪ. ಕೋತಿಗೇ ಕೊಡ್ತಿವಿ. ನಮ್ಮಿಷ್ಟ. ನಮ್ಮಗಳು. ನಾವು ಯಾರಿಗಾದ್ರೂ ಕೊಡ್ತೀವಿ. ಹೋಗಲೇ ಕೋತಿ’ ಅಂತ ಗದರಿ ಕಳಿಸಿಬಿಟ್ರು. ಕೋತಿ ಅಲ್ಲಿಂದ ಹೊರಗೇನೋ ಹೋಯ್ತು. ಆದ್ರೆ ಈ ಮಾತ್ನ ಮನಸ್ಸಲ್ಲೇ ಇಟ್ಟುಕೋತು.
 
 
ಆ ಗೌಡನ ಹೆಂಡತಿಗೆ ದಿನ ತುಂಬಿ ಭೂಮಿತಾಯಿ ತರದ ಒಂದು ಹೆಣ್ಣು ಮಗು ಹೆತ್ತಳು. ಹುಡುಗಿ ಮನೆ ತುಂಬ ಆಡಿ ಬೆಳೆದು ಚನ್ನಾಗಿ ದೊಡ್ಡವಳಾಯಿತು. ಗೌಡ ಮಗಳಿಗೆ ಒಳ್ಳೆ ಕಡೆ ಗಂಡು ಹುಡುಕಲು ಓಡಾಡಿದ. ಕೋತಿಗೆ ಈ ವಿಚಾರ ಗೊತ್ತಾಗಿ ಗೌಡನ ಮನೆಗೆ ಬಂತು. ’ಗೌಡ್ರೇ ಗೌಡ್ತೀರೇ...ಹೆಣ್ಣು ಹುಟ್ಟಿದ್ರೆ ಕೋತಿಗೆ ಕೊಡ್ತೀನಿ ಅಂದಿದ್ರಲ್ಲಾ....ಈಗ ಬಂದಿದೀನಿ ಹೆಣ್ಣು ಕೊಡೀ...’ ಅಂತ ಕೇಳಿತು. ಗೌಡನಿಗೆ ಭಾರೀ ಕೋಪ ಬಂತು. ’ಹೊಡೆದಟ್ಟಿರ್ಲಾ ಅದುನ್ನಾ...ಏನೇನೋ ಮಾತಾಡುತ್ತೆ...’ ಅಂತ ಆಳುಗಳ ಕೈಲಿ ಹೊಡೆಸಿ ಹೊರಗೆ ಹಾಕಿಸಿದ. 
 
ಕೋತಿಗೆ ಸಿಟ್ಟು ಬಂತು. ಸುಮ್ಮನೆ ಕೂರಲಿಲ್ಲ. ಕಿರಿ ಗೌಡ ಕೊಟ್ಟ ಮಾತಿಗೆ ತಪ್ಪಿದ್ದಾನೆ ಅಂತ ಊರ ಗೌಡನ ಹತ್ತಿರ ಹೋಗಿ ದೂರು ಕೊಟ್ಟಿತು. ಪಂಚಾಯ್ತಿ ಕರೆಸಿತು. ಊರ ಗೌಡ ಕಿರಿ ಗೌಡನನ್ನು ಕರೆಸಿ ಸತ್ಯ ಕೇಳಿಸಿದ. ಗೌಡ ಗೌಡತಿ ಹೆಣ್ಣು ಹುಟ್ಟಿದರೆ ಕೋತಿಗೆ ಕೊಡ್ತೀವಿ ಅಂತ ಅಂದಿದ್ದು ನಿಜ ಅಂತ ಒಪ್ಪಿದರು. ’ಒಂದು ಮಾತು ಕೊಟ್ಟ ಮೇಲೆ ಮಗಳನ್ನು ಕೋತಿಗೇ ಕೊಟ್ಟು ಮದುವೆ ಮಾಡಬೇಕು’ ಅಂತ ಪಂಚಾಯ್ತಿ ತೀರ್ಮಾನ ಹೇಳಿತು. ಗೌಡನ ಹುಡುಗಿ ಒಳ್ಳೆಯವಳು. ’ನಾನು ಕೋತಿ ಜೊತೆಲೇ ಸಂಸಾರ ಮಾಡ್ತೀನಿ ಬಿಡಪ್ಪಯಾ...ನನ್ನ ಹಣೆಲಿ ಬರೆದಿದ್ದೇ ಆಗಲಿ’ ಅಂತ ಅವ್ವ ಅಪ್ಪನಿಗೆ ಸಮಾಧಾನ ಮಾಡಿದಳು. ಬೇರೆ ದಾರಿ ಇಲ್ಲದೆ ಗೌಡ ಗೌಡತಿ ತಮ್ಮ ಮಗಳನ್ನ ಕೋತಿಗೇ ಕೊಟ್ಟು ಊರವರ ಮುಂದೆ ಮದುವೆ ಮಾಡಿಸಿದರು. 
  
ಮದುವೆಯಾಗಿ ವಾರವಾದ ಮೇಲೆ ಕೋತಿ ಹೆಂಡತಿಯನ್ನು ಕರೆಯಲು ಬಂತು. ಗೌಡ ಮಗಳಿಗೆ ಗಾಡಿ ಕಟ್ಟಿಸಿ ಗಾಡಿ ತುಂಬ ಅವಳಿಗೆ ಬೇಕಾದ ಸಾಮಾನು ತುಂಬಿಸಿ ಗಂಡನ ಮನೆಗೆ ಕಳಿಸಿದ. ಗಾಡಿಯವನು ಗೌಡನ ಹುಡುಗಿಯನ್ನು ಊರಿಂದ ದೂರ್ದಲ್ಲಿದ್ದ ಕಾಡಿನ ಪಕ್ಕ ಬಿಟ್ಟು ಬಂದ. 

ಮಗಳನ್ ಕಳಿಸಿಕೊಟ್ಟು ಸುಮಾರು ತಿಂಗಳಾಗಿತ್ತು. ಗೌಡತಿಗೆ ಮಗಳದೇ ಯೋಚ್ನೆ. ಗಂಡನನ್ನು ಕರೆದು ’ಹೋಗಿ ನಮ್ಮ ಹುಡುಗಿ ಅದ್ಯಾವ ಸೀಮೆ ಕಷ್ಟಕ್ಕೆ ಬಿದ್ದಿದೆಯೋ ನೋಡಿಕೊಂಡು ಬನ್ರೀ’ ಎಂದಳು. ಗೌಡನಿಗೂ ಅದು ಸರಿ ಅನಿಸಿ ’ನನ್ನ ಮಗಳ ಸಂಸಾರ ಎಲ್ಲಪ್ಪಾ’ ಅಂತ ಗಾಡಿಯವನನ್ನು ಕೇಳಿದ. ’ಊರ ಪಕ್ಕ ಇರೋ ಕಾಡಿನ ಹತ್ತಿರ ಬಿಟ್ಟು ಬಂದೆ ಸಾಮಿ. ಅವರ ಹಟ್ಟಿ ಎಲ್ಲಿ ಅಂತ ನನಗೆ ಗೊತ್ತಿಲ್ಲ’ ಅಂದ ಗಾಡಿಯವ. ಗೌಡನಿಗೆ ಯೋಚನೆ ಬಂತು. ಮಗಳೇನಾದ್ರೂ ಕಾಡು ಪ್ರಾಣಿಗಳಿಗೆ ಬಲಿಯಾಗಿದ್ರೆ ಏನು ಗತಿ? ಕೋತೀನ ಕಟ್ಟಿಕೊಂಡು ಅದ್ಯಾವ ಪಡಬಾರ್ದ ಕಷ್ಟ ಪಡ್ತಿದ್ದಾಳೋ ಎಂದುಕೊಂಡು ಊರ ಪಕ್ಕದ ಕಾಡಿನ ಹತ್ತಿರ ಹೋದ. ಅಲ್ಲಿ ಒಂದು ದೊಡ್ಡ ಆಲದ ಮರ ಇತ್ತು. ಮುಂದೆ ಎಲ್ಲಿಗೆ ಹೋಗಬೇಕು ಅಂತ ತಿಳೀದೆ ಆ ಆಲದ ಮರದ ಕೆಳಗೆ ಕೂತುಕೊಂಡ. 
 
ಹಂಗೇ ಕೂತಿದ್ದಾಗ ಅಲ್ಲೊಬ್ಬ ದಾರಿಹೋಕ ಬಂದ. ಗೌಡ ಯಾಕೆ ಅಲ್ಲಿ ಬೇಜಾರದಲ್ಲಿ ಕೂತಿದ್ದಾನೆ ಅಂತ ವಿಚಾರಿಸಿಕೊಂಡ. ಆ ದಾರಿಹೋಕ ಗೌಡನಿಗೆ ಒಂದು ಉಪಾಯ ಹೇಳಿದ. ’ಹಿಂಗೇ ನಾನೂರು ಗಜ ಉತ್ತರ ದಿಕ್ಕಿಗೆ ಹೋಗು. ಅಲ್ಲೊಂದು ದೊಡ್ಡ ಹಳೇ ಬಾವಿ ಕಾಣುತ್ತೆ. ಆ ಬಾವಿಲಿ ಸ್ನಾನ ಮಾಡಿ ಅಲ್ಲಿಂದ ನೂರು ಗಜ ಪಶ್ಚಿಮ ದಿಕ್ಕಿಗೆ ಹೋಗು. ಅಲ್ಲೊಂದು ಗುಡಿ ಕಾಣುತ್ತೆ. ಅದಕ್ಕೆ ಅಡ್ಡ ಬಿದ್ದು ಮತ್ತೆ ನಲವತ್ತು ಗಜ ಉತ್ತರಕ್ಕೆ ಹೋದ್ರೆ ಅಲ್ಲೊಂದು ಗುಹೆ ಕಾಣುತ್ತೆ. ಆ ಗುಹೆಗೆ ಕೈಮುಕ್ಕೊಂಡು ನೀನ್ಯಾರು ಅಂತ ಹೇಳಿಕೋ. ಅದು ಬಾಗಿಲು ತೆಗಿಯುತ್ತೆ. ಆಗ ಅದರ ಒಳಕ್ಕೆ ಹೋಗು’ ಅಂತ ಹೇಳಿ ಹೊರಟ. 
 
ಗೌಡ ದಾರಿಹೋಕ ಹೇಳಿದ್ದಂಗೇ ಬಾವಿಲಿ ಸ್ನಾನ ಮಾಡಿ ಗುಡಿಗೆ ಅಡ್ಡ ಬಿದ್ದು ಗುಹೆ ಹತ್ತಿರ ಬಂದು ತನ್ನ ಕತೆನೆಲ್ಲಾ ಹೇಳಿಕೊಂಡ. ಗುಹೆ ಬಾಗಿಲು ತೆಗೀತು. ಗೌಡ ಒಳಕ್ಕೆ ಬಂದ. ಬಂದವನೇ ಏನು ನೋಡ್ತನೆ?!! ಗುಹೆ ಒಳಗೆ ದೊಡ್ದ ಅರಮನೆ. ಅಂತಿಂತಾ ಅರಮನೆ ಅಲ್ಲ. ಮಾರಾಜನ ಅರಮನೆ. ಆಳು ಕಾಳು ಎಲ್ಲಾ ಇದ್ದ ಅರಮನೆ. ಗೌಡ ಅರಮನೆ ನೋಡ್ತಾ ಈಗ ಏನು ಮಾಡ್ಲಿ ಅಂತ ನಿಂತಿದ್ದಾಗ ಉಪ್ಪರಿಗೆಯಿಂದ ಅವನ ಮಗಳು ದಡದಡಾ ಇಳಿದ್ ಬಂದ್ಲು. ಅಪ್ಪನನ್ನು ಕಂಡು ಎಲ್ಲಿಲ್ಲದ ಸಂತೋಷಪಟ್ಳು. ಅಪ್ಪನನ್ನು ಅರಮನೇಲೆ ಒಂದು ತಿಂಗಳು ಇರಿಸಿಕೊಂಡು ಅವನಿಗೆ ಎಣ್ಣೆನೀರು ಹಾಕಿ, ಒಳ್ಳೆ ಊಟ ಮಾಡಿ ಹಾಕಿ ಸೇವೆ ಮಾಡಿದಳು. ಹೊಸ ಅರಿವೆ ಕೊಟ್ಟಳು. ಅವಳ ಕೋತಿ ಗಂಡ ಮಾತ್ರ ಎಲ್ಲೂ ಕಾಣಿಸಲಿಲ್ಲ. ’ಹೆಂಗಿದಿಯವ್ವಾ? ಎಲ್ಲವ್ವಾ ನನ್ನಾಳಿಮಯ್ಯ?’ ಅಂತ ಗೌಡ ಕೇಳಿದ್ದಕ್ಕೆ ’ಅವರು ಮಾರಾಜರಂಗೆ ಕನಪ್ಪಾ...ಆದ್ರೆ ಜನರ್ನ ಕಂಡ್ರೆ ನಾಚಿಕೆ’. ಅಂದಳು.
 
ಬಂದು ಸುಮಾರು ದಿನ ಆಯ್ತು ಹೊರಡಬೇಕು ಅಂತ ಗೌಡ ಊರ ಕಡೆ ಹೊರಟು ನಿಂತ. ಮಗಳು ಅವ್ವನಿಗೆ ಅರಿವೆ ತಿಂಡಿ ಕಟ್ಟಿಟ್ಟುಕೊಟ್ಟಳು. ಮಗಳ ಗಂಡ ಮಗಳ ಕೈಲಿ ಮಾವನಿಗೆ ಅಂತ ಒಂದು ಭರಣಿ ಕೊಟ್ಟು ಕಳಿಸಿದ. ಗೌಡ ಆ ಭರಣಿ ಹೊತ್ತುಕೊಂಡು ಕಾಡು ಹಾಯುತ್ತಾ ಮನೆಕಡೆ ಬಂದ. ಮಗಳು ಕೊಟ್ಟದ್ದನ್ನೆಲ್ಲಾ ಹೆಂಡತಿಗೆ ಕೊಟ್ಟ. ಮಗಳ ಅದೃಷ್ಟಕ್ಕೆ ಇಬ್ಬರೂ ಸಂತೋಷಪಟ್ಟುಕೊಂಡ್ರು. ಅವಳು ಕೊಟ್ಟಿದ್ದ ಭರಣೀಲಿ ಏನಿದೆ ಅಂತ ತೆಗೆದು ನೋಡಿದಾಗ ಅಲ್ಲಿಂದ ಒಬ್ಬಳು ಹುಡುಗಿ ಹೊರಗೆ ಬಂದು ’ಏನು ಬೇಕು ಹೇಳಪ್ಪಾ’ ಅಂತ ಕೇಳಿದಳು. ಗೌಡ ’ಏನವ್ವಾ ಕೊಡ್ತೀಯಾ’ ಅಂದಾಗ ’ನೀವು ಹೇಳಿದ ಕೆಲಸನೆಲ್ಲಾ ಚಿಟಿಕೆ ಹೊಡೆಯೋದ್ರೊಳಗೆ ಮಾಡಿ ಮುಗಿಸ್ತೀನಿ’ ಅಂದಳು. 
 
ಈ ಮಾಯದ ಹುಡುಗಿ ಸಿಕ್ಕಿದ್ದಕ್ಕೆ ಗಂಡ ಹೆಂಡತಿ ಇಬ್ಬರೂ ಸಂತೋಷ ಪಟ್ಟುಕೊಂಡು ನಮ್ಮ ಮಗಳ ಮದುವೇನಾ ನಾವು ಬೇಜಾರಿನಲ್ಲಿ ಮಾಡಿಬಿಟ್ವಿ. ನಮ್ಮ ನೆಂಟರಿಷ್ಟರಿಗೆ, ಊರಿನವರಿಗೆ ಒಂದು ಒಳ್ಳೆ ಊಟ ಹಾಕ್ಸಣ’ ಅಂದುಕೊಂಡು ಊರವರನ್ನೆಲ್ಲಾ ಊಟಕ್ಕೆ ಕರೆದರು. ಊರವರೆಲ್ಲಾ ಬಂದಾಗ ಆ ಭರಣಿ ಮುಚ್ಚಳ ತೆಗೆದು ಊಟ ಹಾಕಲು ಆ ಹುಡುಗಿಗೆ ಹೇಳಿದರು. ಹುಡುಗಿ ಚಿಟಿಕೆ ಹೊಡೆಯೋದ್ರಲ್ಲಿ ಎಲ್ಲರಿಗೂ ತರಾನುತರದ ಗಮಲಿನ ಊಟ ಮಾಡಿಟ್ಟಳು. ಜನ ಊಟ ಮಾಡಿ ಇಂತಾ ಊಟ ಹಾಕಿಸಿದ್ದಕ್ಕೆ ಬಾಯಿ ತುಂಬಾ ಒಳ್ಳೆ ಮಾತಾಡಿ ಹೋದ್ರು. ಗೌಡ ಹಿಂಗೆ ಮಾಯ ಮಾಡಿದಂಗೆ ಊಟ ಹಾಕಿಸಿಬಿಟ್ಟ ವಿಚಾರ ಊರೂರಿಗೂ ಹೊರಡಿತು. ಕಡೆಗೆ ರಾಜನಿಗೂ ಗೊತ್ತಾಯ್ತು. 
 
ರಾಜ ಗೌಡನನ್ನು ಕರೆಸಿ ಅವನ ಕಡೆಯವರಿಗೆ ಮಾಯದ ಊಟ ಮಾಡಿಸಲು ಹೇಳಿದ. ಗೌಡ ರಾಜನೆದುರಿಗೆ ಭರಣಿ ತೆಗೆದು ’ಇವರೆಲ್ಲರಿಗೂ ಊಟ ಮಾಡಿ ಹಾಕವ್ವಾ’ ಅಂತ ಆ ಹುಡುಗಿಗೆ ಹೇಳಿದ. ಹುಡುಗಿ ಚಿಟಿಕೆ ಹೊಡೆಯೋದ್ರಲ್ಲಿ ಅಡಿಗೆ ಮಾಡಿಟ್ಟಳು. ಇಂತಾ ಭರಣಿ ರಾಜನ ಹತ್ರ ಮಾತ್ರ ಇರಬೇಕು ಅಂತ ರಾಜನಿಗೆ ಆಸೆ ಆಯಿತು. ಭರಣಿ ನನಗೇ ಬೇಕು ಅಂದ. ’ಆಯ್ತು ದೊರೆ, ನೀವೇ ಇಟ್ಗಳಿ’ ಅಂತ ಗೌಡ ಭರಣೀನ ರಾಜನಿಗೆ ಕೊಟ್ಟು ಮನೆಗೆ ಬಂದ.
 
ಇನ್ನೊಂದೆರಡು ತಿಂಗಳು ಕಳೆದ ಮೇಲೆ ಅವನು ಮತ್ತೆ ಮಗಳ ಮನೆಗೆ ಹೋದ. ಮಗಳು ಅಪ್ಪನಿಗೆ ಪ್ರೀತಿಯಿಂದ ಬಾವಣಿಸಿದಳು. ಗೌಡ ಹೊರಡೋ ಮೊದಲು ಮಗಳು ಅಮ್ಮನಿಗೆ ಅರಿವೆ ತಿಂಡಿ ಮಾಡಿ ಕಳಿಸಿದಳು. ಹಂಗೇ ಮಗಳ ಗಂಡ ಗೌಡನಿಗೆ ಒಂದು ಕುಂಬಳ ಬೀಜ ಕೊಟ್ಟು ಕಳಿಸಿದ. 
 
ಗೌಡ ಮನೆಗೆ ಬಂದು ಹೆಂದತಿಗೆ ಎಲ್ಲನೂ ತೋರಿಸಿದ. ’ಥೂ ಇದೇನ್ರೀ ಕುಂಬಳದ ಬೀಜ ತಂದಿದೀರಿ...ನಮಗೇನು ಗತಿ ಇಲ್ವಾ’ ಅಂತ ಆ ಬೀಜನ ಮನೆಯಿಂದ ಹೊರಕ್ಕೆ ಬಿಸಾಕಿದಳು. ಆ ಬೀಜ ಅಲ್ಲೇ ಮೊಳೆತು ದೊಡ್ದ ಹಂಬು ಬೆಳೀತು. ಇಡೀ ಗಿಡದಲ್ಲಿ ಒಂದೇ ಒಂದು ಭಾರಿ ಕುಂಬಳಕಾಯಿ ಬಿಟ್ಟಿತ್ತು. ’ಏನು ಮಾಡನಾ ಈ ಗಾತ್ರದ ಕುಂಬಳಕಾಯ್ನಾ?!’ ಅಂತ ಗೌಡ ಯೋಚನೆ ಮಾಡ್ತಿದ್ದಾಗ್ಲೇ ಆ ಊರಿನ ಒಬ್ಬ ದೊಡ್ದ ಸೆಟ್ಟಿ ತೀರಿಹೋದ. ಅವನ ಹನ್ನೊಂದನೇ ದಿನಕ್ಕೆ ದೊಡ್ದ ಕುಂಬಳಕಾಯಿ ಬೇಕಾಗಿತ್ತು. ಸೆಟ್ಟಿಯ ಮಗ ನೂರು ರುಪಾಯಿ ಕೊಟ್ಟು ಗೌಡನ ಕುಂಬಳಕಾಯಿನ ಕಿತ್ತುಕೊಂಡು ಹೋದ. ಕುಂಬಳಕಾಯ್ನ ತಗೊಂಡೋಗಿ ಮನೆಯಲ್ಲಿ ತೊಲೆ ಮೇಲೆ ಇಟ್ಟಿದ್ದ. ಅವತ್ ರಾತ್ರಿ ಒಂದು ಕೊತ್ತಿ ತೊಲೆ ದಾಟಬೇಕಾದರೆ ಆ ಕುಂಬಳಕಾಯನ್ನ ಬಿಳಿಸಿಬಿಡ್ತು. ನೋಡ್ತರೇ!!!! ಕುಂಬಳಕಾಯಿಯ ತುಂಬಾ ವಜ್ರದ ಹರಳು!!! ಮೊದಲೇ ಸೆಟ್ಟಿ ಮಗ. ಎಲ್ಲಾ ವಜ್ರಾನೂ ಬಾಚಿಕೊಂಡು ತುಂಬಿಟ್ಟುಕೊಂಡ. ಈ ವಿಚಾರ ಗೌಡನಿಗೂ ಗೊತ್ತಾಗಿ ಬೇಜಾರ ಪಟ್ಟುಕೊಂಡ. 
 
 ಇನ್ನೊಂದೆರಡು ತಿಂಗಳು ಕಳೆದು ಗೌಡ ಮತ್ತೆ ಮಗಳ ಮನೆ ಕಡೆ ಬಂದ. ಮಗಳು ಅಪ್ಪನ್ನ ಚನ್ನಾಗಿ ನೋಡಿಕೊಂಡ್ಳು. ಗೌಡ ಹೊರಡೋ ಮೊದಲು ಮಗಳ ಗಂಡ ಅವನಿಗೆ ಇನ್ನೊಂದು ದೊಡ್ಡ ಭರಣಿ ಕೊಟ್ಟು ಕಳಿಸಿದ. ಹೊರಲಾರ್ದೆ ಆ ಭರಣೀನ ಹೊತ್ತುಕೊಂಡು ಗೌಡ ಮನೆಗೆ ಬಂದ. ಇದರಲ್ಲೇನಿದೆ ಅಂತ ಗಂಡ ಹೆಂಡತಿ ಇಬ್ಬರೂ ಭರಣಿ ತೆಗೆದು ನೋಡಿದರು. ಅದರೊಳಗಿಂದ ಒಂದಷ್ಟು ಜನ ಜಟ್ಟಿಗಳು ಬಂದರು. ’ದಡ್ ನನ ಮಗನೇ! ಎಲ್ಲಾ ಕಳಕೋತೀಯಲ್ಲಾ...ಹಿಂಗಾ ಮಾಡದು!’ ಅಂತ ಗೌಡನಿಗೂ ಅವನಿಗೂ ಹೆಂಡತಿಗೂ ನಾಕು ಹಾಕಿದರು. ಗೌಡ ಭರಣಿಯನ್ನು ರಾಜನ ಹತ್ರ ತೆಗೆದುಕೊಂಡು ಹೋದ. ರಾಜ ಅದನ್ನು ತೆಗೆದಾಗ ಆ ಜಟ್ಟಿಗಳು ಹೊರಗೆ ಬಂದು ಅವನಿಗೂ ಚನ್ನಾಗಿ ಚಚ್ಚಿದರು. ರಾಜ ತಪ್ಪಾಯ್ತು ಅಂತ ಮೊದಲು ತೆಗೆದುಕೊಂಡಿದ್ದ ಭರಣೀನ ವಾಪಸು ಕೊಟ್ಟುಬಿಟ್ಟ. 
  
ಹಂಗೇ ಗೌಡ ಸೆಟ್ಟಿಯ ಮಗನ ಹತ್ರ ಬಂದ. ಜಟ್ಟಿಗಳು ಅವನಿಗೂ ಹಾಕಿ ಚಚ್ಚಿದರು. ಅವನೂ ತುಂಬಿಟ್ಟ ವಜ್ರನೆಲ್ಲಾ ಗೌಡನಿಗೆ ವಾಪಸ್ಸು ಕೊಟ್ಟುಬಿಟ್ಟ. ಅಳಿಯ ಕೊಟ್ಟ ಎಲ್ಲಾ ಬಳುವಳೀನೂ ತನ್ನ ಹತ್ರಾನೇ ಇಟ್ಟುಕೊಂಡು ಗೌಡ ಊರಿಗೆಲ್ಲಾ ಉಪಕಾರ ಮಾಡಿಕೊಂಡು ಸುಕವಾಗಿದ್ದ. ಮಗಳು ಅವಳ ಮನೆಲಿ ರಾಣಿ ತರ ಇದ್ಳು. ಆ ಕೋತಿ ಏನಾಯ್ತು? ಎಲ್ಲೋಯ್ತು? ಮಗಳಿಗೆ ಅದೆಂಗೆ ರಾಜನಂತ ಗಂಡ ಸಿಕ್ದ? ಎಲ್ಲಾ ಬರಿ ಮಾಯ...
 
 
  
 
 
 
 
 
 
Copyright © 2011 Neemgrove Media
All Rights Reserved