ಹನಿಕತೆ: ಅವ್ನಿಗೆ ಬರೆದ ಕಾರ್ಡು ಅವ್ಳಿಗೆ
ಹಳ್ಳಿ ಹಿನ್ನೆಲೆಯಿಂದ ಬಂದ ನನಗೆ ’ವ್ಯಾಲೆಂಟೈನ್ಸ್ ಡೇ’ ಎಂಬೊಂದು ದಿನದ ಪರಿಚಯ ಆಗಿದ್ದು ಡಿಗ್ರಿಗೆ ಬಂದಾಗ. ಅದೂ ನನ್ನಂತೆಯೇ ವ್ಯಾಲೆಂಟೈನ್ ಅಮಾಯಕರಾಗಿದ್ದ ನನ್ನ ಹಿನ್ನೆಲೆಯಿಂದಲೇ ಬಂದಿದ್ದ ಕಾಲೇಜು ಸಹವರ್ತಿಗಳಿಂದ. ’ಇನ್ ಮೂರ್ ದಿಸ್ಕೆ ವೆಲೆಂಟೆನ್ಸ್ ಡೆ ಬತ್ತದೆ ಕಣ್ಲಾ...ಅವಾಗ್ ಕೊಟ್ಬುಡು...ನೀನೇನು ತಲೆ ಕೆಡಿಸ್ಕಬೇಡ. ಆಮೇಲೇನಾದ್ರು ನಾವ್ ನಿಂಗ್ ಸಪೋರ್ಟ್ ಮಾಡ್ತಿವಿ’ ಅಂತ ಕ್ಲಾಸಿನ ಜನಪದರ ಮುಖಂಡ ದೇವು ಸೂರಿಗೆ ಬರೋಬ್ಬರಿ ಆಶ್ವಾಸನೆ ಕೊಡುತ್ತಿದ್ದಾಗ, ’ವೆಲೆಂಟೆನ್ಸ್ ಡೆ’ ಅಂದರೆ ಅಟೆಂಡೆನ್ಸ್ ಗೆ ಸಂಬಂಧ ಪಟ್ಟಿರುವ ಎಂತದೋ ವಿಷಯ ಇರಬೇಕೆಂದು ಭಾವಿಸಿ ಸುಮ್ಮನಾಗಿದ್ದೆ. ನನಗೆ ಹಂಗೇ ಕೇಳಿಸಿತ್ತು. ನಮ್ಮೆಲ್ಲರಲ್ಲಿ (ಹಳ್ಳಿಯಿಂದ ನಗರಕ್ಕೆ ಡಿಗ್ರೀ ಓದಲು ಬಂದಿದ್ದ ಸೆಕೆಂಡ್ ಜನರೇಷನ್ ಮುಕ್ಕರಲ್ಲಿ) ನೋಡಲು ಸ್ವಲ್ಪ ತಿದ್ದಿದಂತಿದ್ದ, ಬಣ್ಣದಲ್ಲಿ ತಿಳಿಯಾಗಿದ್ದ, ಅನುಕೂಲಸ್ತರ ಹುಡುಗ ಸೂರಿ ಸರಿಯಾಗಿ ತರಗತಿಗಳಿಗೆ ಬರದೆ ಲೇಡಿಸ್ ಹಾಸ್ಟೆಲ್, ಸಿನೆಮಾಗಳ ಬೀಟ್ಸ್ ಹೊಡೆಯುವ ಚಾಳಿಗೆ ಬಿದ್ದಿದ್ದನಾದ್ದರಿಂದ ಅವನಿಗೇನೋ ಅಟೆಂಡೆನ್ಸ್ ತೊಂದರೆ ಬಂದಿರಬಹುದೆಂದೂ ಅದನ್ನು ನಮ್ಮ ಜನನಾಯಕ ದೇವ್ರಾಜ ಉರುಫ್ ದೇವುನ ಅವಗಾಹನೆಗೆ ತಂದು ದೇವು ಆಶ್ವಾಸನೆ ಕೊಡುತ್ತಿರಬಹುದು ಎಂದುಕೊಂಡು ಸುಮ್ಮನಾಗಿದ್ದೆ. ಯಾಕೆಂದರೆ ದೇವು ಎಲ್ಲವನ್ನೂ ಸಂಭಾಳಿಸುತ್ತಿದ್ದ.
'ನಮ್ಮ ದೇವು’ ಎಲ್ಲರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ ಬಿಸಿರಕ್ತದ ಲೀಡರ್. ನಮ್ಮಂತೆಯೇ ಹಳ್ಳಿಯಿಂದ ನಗರಕ್ಕೆ ಓದಲು ಬಂದು ಸುಮಾರು ವರ್ಷ ಓದೀ ಓದೀ ಪಳಗಿದ್ದವನು. ವಯಸ್ಸಿನಲ್ಲೂ, ಹಾಸ್ಟೆಲಿನಲ್ಲೂ, ಧೈರ್ಯದಲ್ಲೂ ನಮ್ಮ ಸೀನಿಯರ್. ಕ್ಲಾಸಿನಲ್ಲಿ ಮಾತ್ರ ಜೊತೆಗೆ. ಸಿಟಿಯ ಕಾಲೇಜಿಗೆ ಓದಲು ಬಂದಿದ್ದೀವಿ ಎಂಬ ಭಯಂಕರ ಖುಷಿಯನ್ನು ಅನುಭವಿಸುತ್ತಲೇ ನಮ್ಮೊಂದಿಗೇ ಕಾಲೇಜಿಗೆ ಬರುವ ಸಿಟಿ ಹುಡುಗರ ಸ್ಟೈಲು, ಥಳುಕುಗಳಿಗೆ ಬೆಚ್ಚಿ ಒಳಗೇ ಅಳುಕುತ್ತಿದ್ದ ನಮ್ಮಂತ ಕಪ್ಪಿರುವೆಗಳಿಗೆ ದೇವು ನೆರಳಾಗಿದ್ದ ಬೃಹತ್ ಅಣಬೆ. ಅವನ ಗತ್ತು ರೋಷಕ್ಕೆ ಸಿಟಿಯ ಹುಡುಗರೂ ಹೆದರುತ್ತಿದ್ದರು. ಅವನ ಮಾತು ಕೇಳುತ್ತಿದ್ದರು. ಎದುರು ಕಂಡರೆ ’ಹಲೋ ಬಾಸ್ ಚನ್ನಾಗಿದೀರ’ ಅಂತ ಗೌರವದಲ್ಲಿ ಮಾತಾಡಿಸುತ್ತಿದ್ದರು. ಅವರೇನು? ಲೆಕ್ಚರರ್ಗಳೂ ಅವನಿಗೆ ಒಂಥರಾ ಹೆದರುತ್ತಿದ್ದರು. ಸಿಟಿ ಹುಡುಗರು ನಮ್ಮನ್ನು ನೋಟೀಸು ಮಾಡದಿದ್ದರೇನಾಯ್ತು!? ನಮ್ಮ ಮಧ್ಯೆ ಇರುತ್ತಿದ್ದ ದೇವುಗೆ ಹೆದರುತ್ತಿದ್ದರಲ್ಲ! ನಾವು ಅವನಲ್ಲಿ ನಮ್ಮನ್ನು ಕಾಣುತ್ತಿದ್ವಿ.
ಅವತ್ತು ನಾವಿದ್ದ ಹಾಸ್ಟೆಲೆಂಬ ಕೋಟೆಯಲ್ಲಿ ಅತ್ಯಂತ ಅಸಡ್ಡೆಯಿಂದ ಬಡಿಸಿದ್ದ ಚಿತ್ರಾನ್ನವೆಂಬ ಹಳದಿಯನ್ನು ಹೊಟ್ಟೆಗೆ ಹಾಕಿ, ಗಾಳಿಗಾರಿ ಬೆವರಿನ ವಾಸನೆ ಕಮ್ಮಿಯಾಗಲಿ ಅಂತ ರೂಮಿನಲ್ಲಿ ಒಣಗಿಹಾಕಿದ್ದ ನೆನ್ನೆ ಹಾಕಿದ್ದ ಷರ್ಟನ್ನು ಹಾಕಿಕೊಳ್ಳಲು ಹೋಗುತ್ತಿದ್ದಾಗ ರೂಂಮೇಟ್ ಗಂಗಾಧರ ಹಾರ್ಟು ಹೊರಗೆ ಹಾರುವಷ್ಟು ಹುರುಪಿನಲ್ಲಿ ’ಇವತ್ತು ಸೂರಿ ಅವ್ನಿಗೆ ಕಾಲ್ಡ್ ಕೊಡ್ತನಂತೆ ಕಣೋ!’ ಎಂದಿದ್ದ. ಯಾವ ಕಾರ್ಡು? ಯಾವನೋ ಅವ್ನು ಅಂತ ಕೇಳಿದ್ದಕ್ಕೆ ’ಏ ಅದೆ, ಎಕನಾಮಿಕ್ಸ್ ಕ್ಲಾಸ್ ಗೆ ಬತ್ತಳಲ್ಲ...ಒಂಜುಟ್ಟು, ಬೆಳ್ಗವ್ಳಲ...’ ನನ್ನ ಮುಖ ನೋಡಿ ಇಷ್ಟು ವಿವರಣೆ ಇವನಿಗೆ ಸಾಕಾಗಿಲ್ಲ ಅಂದುಕೊಂಡು ’...ಲೇ..ಡ್ರಾಮ್ದಲಿ ಬಾವ್ಟ ಇಡ್ಕಂಡಿದ್ಲಲ...ಸ್ಕೂಟಿಲ್ ಬತ್ತಳಲೋ...’ ಅಂದ. ಸ್ವಾತಂತ್ರ್ಯ ದಿನಾಚರಣೆಗೆ ಸೈಕಾಲಜಿ ಡಿಪಾರ್ಟ್ಮೆಮೆಂಟಿನವರು ಮಾಡಿದ್ದ ಸ್ಕಿಟ್ ನಲ್ಲಿ ಭಾರತದ ಬಾವುಟ ಹಿಡಿದು ಅಲ್ಲಾಡಿಸಿ ’ಭಾರತ್ ಮಾತಾಕಿ ಜೈ’ ಎಂದು ಅರ್ಧ ನಾಚಿಕೆ ಅರ್ಧ ಆವೇಶದಿಂದ ಕೂಗಿ ಇಡೀ ಆಡಿಟೋರಿಯಂನ ಹುಡುಗರಿಂದ ಕಿವಿ ತೂತಾಗುವಷ್ಟು ಶಿಳ್ಳೆ ಹೊಡೆಸಿಕೊಂಡಿದ್ದ ತೆಳ್ಳಗೆ ಬೆಳ್ಳಗಿದ್ದ ಅವನಿ ನೆನಪಾಗಿದ್ದಳು. ’ಲೋ ನಿಜವೇನೋ? ಅದ್ಯಾಕೋ? ಅವನಿಗೇನಾಯ್ತು?’ ಅಂತ ಅಚ್ಚರಿಯಿಂದ ಕೇಳಿದ್ದೆ. ’ಲವ್ವು ಕಣೋ ಲವ್ವು!’ ಗಂಗಾಧರ ಉತ್ಸಾಹದಿಂದ ಆ ಕ್ಷಣದಲ್ಲಿ ತಾನೇ ಸೂರಿಯಾಗಿದ್ದ.
ಅವನಿಯನ್ನು, ಅವಳಂತೆಯೇ ನಮ್ಮ ಕೆಲವು ತರಗತಿಗೆ ಬರುತ್ತಿದ್ದ ಏಳೆಂಟು ಹುಡುಗಿಯರನ್ನು ಎಲ್ಲ ಹುಡುಗರೂ ನೋಡೇ ನೋಡುತ್ತಿದ್ವಿ. ಸಿಟಿ ಹುಡುಗರು, ಅನುಕೂಲಸ್ತರು ಅವರಿಗೆ ಹಾಯ್ ಹಲೋ ಹೇಳಿ ಹತ್ತಿರದಲ್ಲೇ ಕೂತು ಮಾತಾಡಿಸಿದರೆ ನಾವು ಸುಮ್ಮನೆ ನಮ್ಮ ಪಾಡಿಗೆ ಅವರುಗಳಿಂದ ಆದಷ್ಟು ದೂರ ಕುಳಿತುಕೊಳ್ಳುತ್ತಿದ್ವಿ. ನಮಗೆ ಅವರು ತಮ್ಮ ಸಮಸ್ತ ಒನಪು ಬಳುಕು ಲಜ್ಜೆಗಳಿಂದಾವೃತ ರೂಪದಲ್ಲಿ ಕಂಡು ಪ್ರತಿ ಹಾವಭಾವದಲ್ಲಿ ನಮ್ಮೊಳಗಿದ್ದ ಪುರುಷನನ್ನು ಕರಗಿಸುತ್ತಿದ್ದರೂ ನಾವು ಅವರಿಗೆ ಕಾಣುತ್ತಿದ್ದೆವೋ ಇಲ್ಲವೋ ಎಂಬ ಅನುಮಾನ ಆಗಾಗ ಏಳುತ್ತಿದ್ದುದಂತೂ ನಿಜ. ಲೆಕ್ಚರರಿಗೆ ಏನಾದ್ರೂ ಪ್ರಶ್ನೆ ಕೇಳಿದಾಗ, ಅವರ ಪ್ರಶ್ನೆಗೆ ನಾವೇನಾದರೂ ತಲೆಕೆಟ್ಟು ಧೈರ್ಯ ಮಾಡಿ ಉತ್ತರ ಹೇಳಿಯೇ ಬಿಟ್ಟಾಗ ಎಲ್ಲ ಹುಡುಗಿಯರ ಕತ್ತೂ ನಮ್ಮ ಕಡೆ ತಿರುಗುತ್ತಿತ್ತು. ಓ ಇಲ್ಲೂ ಒಂದು ತಲೆ ಇದೆ, ಅದರಲ್ಲೂ ಮಿದುಳಿದೆ ಎಂಬ ತುಸು ಮೆಚ್ಚುಗೆ ಅಚ್ಚರಿ ಬೆರೆತ ನೋಟಗಳು. ಮುಖಕ್ಕೆ ಬೀಳುತ್ತಿದ್ದ ನೋಟ ಮೇಲಿಂದ ಕೆಳಗೆ ಒಂದು ಕ್ಷಣದಲ್ಲಿ ಹಾದುಬಿಡುತ್ತಿತ್ತು, ನಮ್ಮ ಎಲ್ಲವನ್ನೂ ಪರೀಕ್ಷಿಸಿಬಿಟ್ಟಂತೆ, ನಮ್ಮನ್ನು ಪೂರಾ ಅಳೆದುಬಿಟ್ಟಂತೆ...ಆಗ ನಮ್ಮ ಹೃದಯಗಳ ಬಡಿತ ಇಡೀ ಕ್ಲಾಸಿಗೆ ಕೇಳದಂತೆ, ಎದೆಯ ಕಂಪನ ಯಾರಿಗೂ ಕಾಣಗೊಡದಂತೆ ನಾವು ಮಾಡುತ್ತಿದ್ದ ಹರಸಾಹಸ ನಮಗೇ ಗೊತ್ತು! ಓಹ್ ಸಿಟಿ ಹುಡುಗಿಯರು.
ಸೂರಿ ಅವನಿ ಗೆ ಕಾರ್ಡು ಕೊಡುತ್ತಿದ್ದಾನೆ ಎನ್ನುವ ವಿಚಾರ ಇಡೀ ಹಾಸ್ಟೆಲಿಗೆ ಗೊತ್ತಾಗಿತ್ತು. ಯಾಕೆಂದರೆ ಅವತ್ತು ’ವೆಲೆಂಟೆನ್ಸ್ ಡೆ’. ದೇವು ಸೂರಿಗೆ ಮತ್ತೊಮ್ಮೆ ಸಪೋರ್ಟ್ ಕೊಟ್ಟಿದ್ದ. ಹಾಸ್ಟೆಲಿನ ಹುಡುಗರು ತರಾನುತರದಲ್ಲಿ ಅವನಿಗೆ ಬೆಂಬಲ ಧೈರ್ಯ ಹೇಳಿ ಸೂರಿ ಹಾರುವುದು ಬಾಕಿ. ನನಗೆ ಇಂಡಿಪೆಂಡೆನ್ಸ್ ಡೇ, ರಿಪಬ್ಲಿಕ್ ಡೇ, ನ್ಯೂಯಿಯರ್ ಡೇ, ಗುಡ್ ಫ್ರೈಡೇ, ಸೆಕೆಂಡ್ ಸಾಟರ್ಡೇ ಈ ದಿನಗಳು ಚನ್ನಾಗಿ ಪರಿಚಿತವಿದ್ದವು. ಸೆಕೆಂಡಿಯರ್ ಪಿಯುಸಿಯಲ್ಲಿ ನಮ್ಮ ಹಳ್ಳಿಯ ಇಂಗ್ಲಿಷ್ ಮೇಷ್ಟು ಬೆಂಗಳೂರು ಪ್ರೆಸ್ ನ ಇಂಗ್ಲಿಷ್ ಕ್ಯಾಲೆಂಡರ್ ತೋರಿಸಿ ರಜಾದಿನಗಳನ್ನು ಪಟ್ಟಿ ಮಾಡಿಸಿ ಗಟ್ಟು ಹೊಡೆಸಿ ನಮ್ಮ ಇಂಗ್ಲಿಷ್ ಜ್ನಾನ ಹೆಚ್ಚಿಸಿದ್ದರು. ಆದರೆ ಈ ’ವೆಲೆಂಟೆನ್ಸ್ ಡೆ’ ಅಲ್ಲಿರಲಿಲ್ಲ. ಅವಳ ಮೇಲೆ ಲವ್ವಾಗಿದೆ ಎಂದು ಎಲ್ಲ ಹುಡುಗರಿಗೂ ಹೇಳಿಕೊಂಡು ಹಾಸ್ಟೆಲ್ಲಿನ ಮಜನೂ ಆಗಿ ಕಡೆಗೊಂದು ದಿನ ದೇವದಾಸನಾಗಿ ಅದೇ ಹುಡುಗಿಯನ್ನು ಬೈದುಕೊಂಡು ತಿರುಗುವ ಬೇರೆಯವರಿಗಿಂತ, ಲವ್ವಾಗಿದೆ ಅಂತ ಹುಡುಗಿಗೇ ಅರುಹಿಕೊಳ್ಳುವ ಸಾಹಸ ಮಾಡಲಿದ್ದ ಸೂರಿಯ ಧೈರ್ಯದ ಮೇಲೆ ಅಭಿಮಾನ ಹುಟ್ಟಿತ್ತು. ಇವನೇ ನಿಜವಾದ ಗಂಡೆನಿಸಿ ಹೆಮ್ಮೆಯಾಗಿತ್ತು. ಅವನು ಕಾರ್ಡು ಕೊಡುವುದನ್ನು ನೋಡುವ ಕುತೂಹಲ, ಕೊಟ್ಟಾದ ಮೇಲೆ ಆಗಬಹುದಿದ್ದ ಸರಣಿಗಳು ಕಾತರ ತಳಮಳ ಹುಟ್ಟಿಸಿದ್ದವು. ಸೂರಿ-ಅವನ ಲವ್ವು ಗೆಲ್ಲಲಿ ಎಂದು ಮನಸ್ಸಿನಲ್ಲಿ ಹಾರೈಸಿಕೊಂಡಿದ್ದೆ. ಸೂರಿಯ ಗೆಲುವು ನಮ್ಮೆಲ್ಲರ ಗೆಲುವು. ಸೂರಿಯೇನಾದರೂ ಸೋತರೆ, ತಿರಸ್ಕೃತನಾದರೆ ನಾವೆಲ್ಲರೂ ತಿರಸ್ಕೃತರು ತಾನೇ.
ಲಗುಬಗೆಯಿಂದ ಕ್ಲಾಸಿಗೆ ಮುಂಚೆಯೇ ಕಾಲೇಜಿಗೆ ಹೊರಟಿದ್ದೆ, ಇಡೀ ಹಾಸ್ಟೆಲಿನ ಥರ. ಕರಿಮರದಲ್ಲಿ ಕಡೆದಿಟ್ಟಂತಿದ್ದ ರೂಂಮೇಟು ಗಂಗಾಧರ ಅಪರೂಪಕ್ಕೆ ಕೆಂಪಗಿನ ಬಿಗಿ ಟಿ ಷರ್ಟು ಹಾಕಿಕೊಂಡು ಭದ್ರಕಾಳಿಯ ಹುಡುಗು ವರ್ಷನ್ ಥರ ಕಾಣಿಸುತ್ತಿದ್ದ, ಚಡಪಡಿಸುತ್ತಿದ್ದ. ಅವನ ರಕ್ತ ಆ ಪಾಟಿ ಬಿಸಿಯಾಗಿತ್ತು. ಸೂರಿಯೇನಾದರೂ ಅವತ್ತು ಹುಡುಗಿಗೆ ಕಾರ್ಡು ಕೊಡದಿದ್ದರೇ ಇವನೇ ಹೋಗಿ ಕೊಟ್ಟುಬಿಡುತ್ತಿದ್ದನೇನೋ!
ಕಾಲೇಜಿಗೆ ಹೋಗಿ ಸೈಕಲ್ಲು ಸ್ಟಾಂಡಿನ ಹತ್ತಿರ ಅಲ್ಲಲ್ಲಿ ಅಷ್ಟಷ್ಟು ಗುಂಪು ಮಾಡಿಕೊಂಡು ಮುಂದಾಗಲಿರುವ ಅತಿಶಯದ ಘಟನೆಯನ್ನು ಕಣ್ಣಾರೆ ವೀಕ್ಷಿಸಿ ಸಾಕ್ಷಿಯಾಗಲು ಕಾದೆವು. ಒಬ್ಬರ ಬೆನ್ನ ಹಿಂದೆ ಒಬ್ಬರನ್ನು ಸ್ವಲ್ಪ ಮರೆಮಾಡಿಕೊಂಡು ಒಮ್ಮೆ ಸ್ಟಾಂಡಿಗೆ ಬರಲಿದ್ದ ವಾಹನಗಳತ್ತ ಮತ್ತೊಮ್ಮೆ ಸ್ಟಾಂಡಿನ ಒಳಗೆ ತನ್ನ ಲವ್ವರಿನ ಬರುವಿಕೆಗಾಗಿ ಒಂಟಿ ಯೋಧನ ಥರ ಕಾಯುತ್ತಿದ್ದ ಸೂರಿಯತ್ತ ಕಣ್ಣುಹಾಯಿಸುತ್ತಾ ನಿಂತಿದ್ದೆವು. ಆಗಾಗ ಭರ್ರೋ ಭರ‍್ರೋ ಎಂದು ಬೈಕು ಸ್ಕೂಟರ್ಗಳಲ್ಲಿ ಬಂದು ಪಾರ್ಕು ಮಾಡಿ ರೇರ್ ವ್ಯೂ ಕನ್ನಡಿಗಳಲ್ಲಿ ಮುಖನೋಡಿ ತಲೆ ತೀಡಿಕೊಂಡು, ತನ್ನನ್ನೇ ಮೆಚ್ಚಿಕೊಂಡು ಹೋಗುತ್ತಿದ್ದ ಸಿಟಿಹುಡುಗರ ಗುಂಪಿಗೆ ನಮ್ಮ ಅವತ್ತಿನ ರಹಸ್ಯದ ಕುರುಹೂ ಇರಲಿಲ್ಲ. ಅವರು ಅವರದೇ ಏನೋ ಹುಮ್ಮಸ್ಸಿನಲ್ಲಿದ್ದರು. ಎಲ್ಲರೂ ಎಂದಿಗಿಂತ ಹೆಚ್ಚು ಟ್ರಿಮ್, ಗರಿಗರಿಯಾಗಿದ್ದರೆನಿಸಿತ್ತು. ’ವೆಲೆಂಟೆನ್ಸ್’ ದಿನದ ಪರಿಣಾಮಕ್ಕೋ ಏನೋ...ಎಂಥದೋ ತೊನೆದಾಟ. ಇವತ್ತಿನದು ನನ್ನ ಆಟ, ನನ್ನ ಟೆರಿಟರಿ ಎಂದು ಸಾರಿಕೊಳ್ಳುತ್ತಿದ್ದ ತೊನೆದಾಟ. ಅವರ ಬೆವರಿನಿಂದಲೇ ಗೊತ್ತಾಗುತ್ತಿತ್ತು. ಅವರ ಗತ್ತು, ಬೂಟಿನ ಸದ್ದುಗಳು ನಮ್ಮನ್ನು ಅಷ್ಟಷ್ಟು ಕುಟ್ಟುತ್ತಿದ್ದರೂ ಅವತ್ತು ’ವೆಲೆಂಟೆನ್ಸ್ ಡೆ’, ನಮ್ಮ ಸೂರಿ ಕಾರ್ಡು ಕೊಡುವ ಡೆ ಆಗಿದ್ದರಿಂದ ನಮ್ಮನ್ನು ಯಾರೂ ತಗ್ಗಿಸಲು ಸಾಧ್ಯವಿರಲಿಲ್ಲ.
ಅಲ್ಲೇ ಎರಡು ಗಂಟೆ ಕೆಲಸಕ್ಕೆ ಬಾರದ್ದು ಮಾತಾಡಿಕೊಂಡು ಕಾಯುತ್ತಿದ್ದರೂ ನಾವು ಎದಿರುನೋಡುತ್ತಿದ್ದ ಸ್ಕೂಟಿ ಬಂದಿರಲಿಲ್ಲ. ಕ್ಲಾಸು ತಪ್ಪಿಸಿಕೊಳ್ಳುವುದು ಬೇಡ ಎನಿಸಿದ ಒಂದಿಬ್ಬರ ಪಾಲಿಗೆ ನಾನೂ ಸೇರಿದ್ದೆ. ಕ್ಲಾಸು ಸೇರಿಕೊಂಡಿದ್ದೆವು.
ಕ್ಲಾಸಿನಲ್ಲಿ ಕುಳಿತಾಗಲೂ ಮನಸ್ಸೆಲ್ಲಾ ಸೂರಿಯ ಸುತ್ತಮುತ್ತಲೇ. ಇಷ್ಟು ಹೊತ್ತಿಗೆ ಸೂರಿಗೆ ಅವನಿ ಸಿಕ್ಕಿರಬಹುದು. ಕಾರ್ಡು ಕೊಟ್ಟು ಐ ಲವ್ ಯೂ ಎಂದಿರಬಹುದು. ಆಕೆ ನಾಚಿಕೊಂಡೋ ಹೆದರಿಕೊಂಡೋ ಆಯ್ತು ಎಂದಿರಬಹುದು...ಹೃದಯದಲಿ ಇದೇನಿದೂ...ಹಾಡಾಗಿರಬಹುದು ಅಥವಾ ಚಟಾರ್ ಅಂತ ಕಪಾಳಕ್ಕೆ ಹಾಕಿರಬಹುದು. ಓಹ್! ಸ್ಲೋ ಮೋಷನ್ನಿನಲ್ಲಿ ಹಾಡುಹೇಳಿಕೊಳ್ಳುತ್ತಾ ಓಡಿ ಬರುತ್ತಿರುವ ದೃಶ್ಯ...ತಕ್ಷಣ ಚಟಾರೆಂದು ಬಾರಿಸಿದ ಸದ್ದು! ಥತ್. ಕೆಡಿಸುತ್ತಿದ್ದ ಕಲ್ಪನೆಗಳನ್ನು ತಲೆಯಿಂದ ಕೊಡವಿಕೊಂಡಿದ್ದೆ. ಮೇಡಮ್ಮು ಅದೇ ಭಾವ ಸತ್ತ ದನಿಯಲ್ಲಿ ಇಂಗ್ಲಿಷಿನಲ್ಲಿ ಸಂವಿಧಾನದ ಪರಿಚಯ ಮಾಡಿಕೊಡುತ್ತಿದ್ದರು. ಅವರಲ್ಲಿ ಏನೂ ಬದಲಾವಣೆ ಇಲ್ಲ. ಬಹುಷಃ ಲೆಕ್ಚರರಿಗೆ, ಮದುವೆಯಾದವರಿಗೆ, ವಯಸ್ಸಾದವರಿಗೆ ವೆಲೆಂಟೆನ್ಸ್ ಡೆ ಇಲ್ಲ. ಅದೇನಿದ್ದರು ನಮ್ಮಂತವರಿಗೆ, ವಯಸ್ಸು ಚಿಗುರಿದವರಿಗೆ, ನಮ್ಮ ಸೂರಿಯಂತವರಿಗೆ ಇರಬೇಕು. ಮತ್ತೆ ಸೂರಿ ಮನಸ್ಸಿಗೆ ಬಂದು ಹಾಡು ಕಪಾಳ ಮೋಕ್ಷದ ಸೀನು ರಿಪೀಟಾಗುವುದು ಬೇಡ ಅಂತ ಒಂದೇ ಒಂದು ಬಾರಿ ಮೆಲ್ಲಗೆ ಧೈರ್ಯ ಮಾಡಿ ಪಕ್ಕದ ಸಾಲಿನಲ್ಲಿ ಮುಂದಿನ ಬೆಂಚುಗಳಲ್ಲಿ ಕುಳಿತಿದ್ದ ಹುಡುಗಿಯರತ್ತ ಕಣ್ಣು ಹಾಯಿಸಿದ್ದೆ. ಬೇರೆ ದಿನಗಳಿಗಿಂತ ಹೆಚ್ಚು ಸುಂದರರಾಗಿದ್ದರು. ಹೂವಿನ ಬಣ್ಣಗಳ ಬಟ್ಟೆಗಳು, ಥರಾವರಿ ಜುಟ್ಟು ಜಡೆಗಳು, ನೇತಾಡುತ್ತ ತಮ್ಮಷ್ಟಕ್ಕೆ ತಾವು ಮಾತಾಡಿಕೊಳ್ಳುತ್ತಿದ್ದ ಕಿವಿಯೋಲೆಗಳು...ಇನ್ನೂ ಹೆಚ್ಚು ನೋಡಬಾರದೆನಿಸಿ ತಲೆ ತಗ್ಗಿಸಿದೆ. ಇವತ್ತು ನಿಜವಾಗಲೂ ಇಲ್ಲಿ ಏನೋ ವಿಶೇಷ ದಿನ...
ಕ್ಲಾಸು ಮುಗಿಸಿ ಮೇಲೆ ಹೊರಗೆ ಹೋಗುವಾಗ ಯಾವುದೋ ಸಹಚರ ಪ್ರಾಣಿ ಏನೋ ಮಾಡಲಿದೆ ಎಂಬ ಸೆನ್ಸ್ ಬಂದಿತ್ತು, ಸುಮಾರು ಹುಡುಗರಿಗೆ. ಎಂದಿಗಿಂತ ನಿಧಾನಕ್ಕೆ ಎದ್ದು ಹೊರಗೆ ಹೋಗುವಾಗ ಪೊಲಿಟಿಕಲ್ ಸೈನ್ಸ್ ಗೆ ನಮ್ಮೊಟ್ಟಿಗೆ ಬರುತ್ತಿದ್ದ ಸಿದ್ಧಾರ್ಥ್ ಅಪ್ಪಯ್ಯ, ಕೋಮಲ್ ಎನ್ನುವ ಕನ್ನಡ ಬಾರದ ಹುಡುಗಿಯನ್ನು ನಿಲ್ಲಿಸಿಕೊಂಡು ಏನೋ ಮಾತಾಡುತ್ತಿದ್ದ. ಆಕೆ ನಾಚಿಕೆ ಸಂತೋಷವೇ ತಾನಾದಂತೆ ಕಾಣಿಸಿದ್ದಳು. ಓಹ್. ಇಲ್ಲೂ ಏನೋ ಆಗುತ್ತಿದೆ. ಇವರಿಗೂ ಲವ್ವು. ನೋಡೇ ಬಿಟ್ಟೆವು. ಇವತ್ತು ನಿಜಕ್ಕೂ ಏನೋ ವಿಶೇಷ! ಏನೋ ಪುಳಕ. ಸೂರಿಗೂ ಅವನಿ ಹೀಗೇ ಮಾಡಿರಬೇಕು...ಧಾವಂತದಲ್ಲಿ ಹೆಜ್ಜೆ ಹಾಕುತ್ತಿದ್ದಂತೇ ಮಧುಗಿರಿ ಅವನ ಕ್ಲಾಸ್ ಮುಗಿಸಿ ವೇಗವಾಗಿ ನಡೆದುಕೊಂಡು ಬಂದು ’ನಂ ಕ್ಲಾಸಲ್ಲಿ ಪ್ರವೀಣ ಅವ್ನಲ್ಲಾ ಮಗಾ...ಅದೇ ಬುಕ್ ಸ್ಟೋರ್ ಪಾರ್ಟಿ...ಅವ್ನು ಕವಿತುಂಗೆ ಊ ಕೊಟ್ಟೇಬಿಟ್ಟ ಕಣ್ರೋ..’ ಖುಷಿಯಿಂದ ಹೇಳಿದ್ದ. ಆಮೇಲೆ? ’ಇವತ್ತು ಜತೆಲಿ ಪಿಚ್ಚರ್ಗೊಯ್ತಾವ್ರೆ ಮಗಾ’ ಹೂ ಕೊಟ್ಟು ಈಸಿಕೊಂಡು ಮುಂದಿನ ಹಂತವನ್ನೂ ಪ್ರವೀಣ ಸಾಧಿಸಿಬಿಟ್ಟಿದ್ದ. ಭಲೇ ’ವೆಲೆಂಟೆನ್ಸ್ ಡೆ’!
ಸೂರಿದು ಏನಾಯಿತೆಂದು ಕ್ಯಾಂಪಸ್ಸು ತಿರುಗುತ್ತಾ ಲೈಬ್ರರಿಗೆ ಬಂದಾಗ ಸೂರಿಗೆ ಇನ್ನೂ ಅವನಿ ಸಿಕ್ಕಿಲ್ಲ ಎಂದು ಗೊತ್ತಾಗಿತ್ತು. ’ಅವನಿಗ್ಯಾಕೆ ಸಿಗ್ತಳೆ ಬಿಡ್ರೋ’ ಕೆಲವರು ಆಗಲೇ ಅಡ್ಡಬಾಯಿ ಹಾಕಿದ್ದರು. ಸಿದ್ಧಾರ್ಥ ಹೇಳಿದ ಕೂಡಲೇ ನಾಚಿದಂತೆ, ಪ್ರವೀಣ ಹೂ ಕೊಡುವುದನ್ನು ಕಾದು ಕೂಡಲೇ ಹೂಂ ಆದಂತೆ ಸೂರಿಯ ಲವ್ವು ಇನ್ನೂ ಫಲ ಕೊಟ್ಟಿರಲಿಲ್ಲ. ಸೂರಿಯ ಅರುಹಿಕೆಗೆ ಎರಡು ಮೂರು ಗಂಟೆಗಳು ಕಾದದ್ದಕ್ಕೇ ಕೆಲ ಹುಡುಗರಿಗೆ ಆಗಲೇ ’ಅಯ್..ಇವನದ್ಯಾವ್ ಸೀಮೆನ್ರೋ’ ಎನ್ನುವಂತಾಗಿತ್ತು. ಲೈಬ್ರರಿ ಮುಂದೆ ನಿಂತು ಇನ್ನು ನಮ್ಮ ಪಾತ್ರ ಏನು ಅಂತ ನಾವು ಮನಸ್ಸಲ್ಲೇ ಯೋಚನೆ ಮಾಡಿಕೊಳ್ಳುತ್ತಿರಬೇಕಾದ್ರೆ ಸೂರಿಯ ಹೀರೋಹೊಂಡಾ ಬರುವುದು ಕಂಡಿತ್ತು. ಹಿಂದೆ ದೇವು ಕೂತಿದ್ದ. ಮಾರಲ್ ಸಪೋರ್ಟ್ ಗೋ ಎಂಬಂತೆ ಲೈಬ್ರರಿಯ ಹತ್ತಿರ ನಿಂತಿದ್ದ ಹಾಸ್ಟೆಲು ಹುಡುಗರ ಎದುರಿಗೊಮ್ಮೆ ಬೈಕ್ ನಿಲ್ಲಿಸಿ ದೇವು...’ಮತ್ತೆ? ಏನ್ ಸಮಾಚಾರ’ ಎಂಬಂತೆ ಕೈ ಬೀಸಿ ಕೆಲವರ ಬೆನ್ನು ತಟ್ಟಿದ್ದ. ಮೆಲುದನಿಯಲ್ಲಿ ಒಂದೆರಡು ಮಾತಾಡಿದ್ದ. ಬೈಕು ಹ್ಯುಮಾನಿಟೀಸ್ ನ ಹೊಸ ಬಿಲ್ಡಿಂಗ್ ಕಡೆ ಹೊರಟಿತ್ತು. ಬೆಳಿಗ್ಗೆ ಸೈಕಲ್ ಸ್ಟಾಂಡಿನಲ್ಲಿ ಉತ್ಸಾಹ-ಗೆಲುವಿನ ಹೀರೋ ಥರ ಇದ್ದ ಸೂರಿ ಈಗ ಭಯಂಕರ ಒತ್ತಡದಲ್ಲಿರುವಂತೆ ಕಂಡಿದ್ದ. ಮೂರುವರೆ ಗಂಟೆಗಳಲ್ಲೇ...ಇವನು ನಿಜಕ್ಕೂ ಗೆಲ್ಲುತ್ತಾನ ಎನ್ನುವ ಅನುಮಾನ ನನಗೂ ಬಂದಿತ್ತು. ’ದೇವು ಅವನಿ ಫ್ರೆಂಡ್ ಲತನ್ನ ಮಾತಾಡ್ಸಕೊಯ್ತಾವ್ನೇ ಕಣ್ರೊ...ಅವನಿ ಎಲ್ ಅವ್ಳೆ, ಎಲ್ ಸಿಗ್ತಳೆ ಅಂತ ವಿಚಾರ್ಸ್ತರಂತೆ..’ ಗಿರೀಶ ಗುಂಪಿಗೆ ಸುದ್ದಿ ಸಪ್ಲೈ ಮಾಡಿದ್ದ. ಮತ್ತೆ ಹೊಸ ಸಂಚಲನ. ದೇವು ಏನಾದ್ರೂ ಮಾಡೇ ಮಾಡ್ತಾನೆ, ಸೂರಿಗೆ ಲವ್ವು ಸಿಗುತ್ತೆಂಬ ಆಶಾದಾಯಕ ಸ್ಥಿತಿ.
ಮನಸ್ಸಿನ ಉದ್ವೇಗ, ಕುತೂಹಲ ಬೆಳಗ್ಗಿನ ಚಿತ್ರಾನ್ನವನ್ನು ಎಂದಿಗಿಂತಲೂ ಬೇಗ ಚಿಂದಿ ಮಾಡಿತ್ತಾದ್ದರಿಂದ ಹಾಸ್ಟೆಲಿನ ಕೆಟ್ಟ ಊಟದ ಸಿಕ್ಕಾಪಟ್ಟೆ ನೆನಪು ಬರುತ್ತಿತ್ತು. ಬೇಗ ಹೋಗಿ ಊಟ ತೆಗೆದುಕೊಳ್ಳದಿದ್ದರೆ ಸಾರೆಂಬ ಸಮಾರಾಧನೆಯಲ್ಲಿ ಸಾಸಿವೆಯೂ ಸಿಗುತ್ತಿರಲಿಲ್ಲ. ಕಾಲೇಜಿನಿಂದ ಹಾಸ್ಟೆಲಿಗೆ ಐದು ನಿಮಿಷದ ನಡಿಗೆ. ಹಳ್ಳಿಯಿಂದ ಬಂದಿದ್ದ ನಮಗೆ ಆ ಹಾಸ್ಟೆಲ್, ಎಷ್ಟೇ ಭೀಭತ್ಯ್ಸವೆನಿಸಿದ್ದರೂ, ಸಲಹಿದ್ದ ಧರ್ಮಛತ್ರದಂತೆ. ಊಟ ಮುಗಿಸಿ ರೂಮಿನ ಆಶ್ರಯದಲ್ಲಿ ಐದು ಹತ್ತು ನಿಮಿಷ ವಿರಮಿಸಲು ಕೂತಾಗ ಗಂಗಾಧರ ಬಂದಿದ್ದ. ಫೆಬ್ರವರಿಯ ಮಂದ ಚಳಿಯಲ್ಲೂ ಬೆವರಿ ಮಿರಿಮಿರಿ ಎನ್ನುತ್ತಿದ್ದ. ’ಬೆಳ್ಗೆಯಿಂದ ನಾಕೈದ್ ಸೆಟ್ ಆಗೊಯ್ತು ಕಣಲೋ...’ ನಿರಾಸೆಯಿಂದ ಹೇಳಿದ್ದ. ಬಹುಷ: ಜೋಡಿಗಳ ಮಾತಾಡಿದ್ದ. ’ಏ...ಇದ್ಯಾಕೋ ಆಗಕಿಲ್ಲ ಬುಡಲೋ...’ ಚಾಪೆ ಮೇಲೆ ಅಡ್ಡಾಗಿದ್ದ. ’ಇವ್ನು ಆಸ್ಟೆಲ್ಲು, ಸಿನ್ಮಾ ಅಂತ್ ಅದ್ಯಾರ್ ಇಂದೆ ಸುತ್ತಿದ್ನೋ...ಅವ್ಳೇ ಆಗಿದ್ರೆ ಸಿಕ್ಬುಡ್ಬೇಕಿತ್ತು ತಾನೇ...’ ’ಮದ್ಯಾನ್ಕೂ ಸಿಕ್ದೆ ಇದ್ರೆ ಏನ್ ಮಾಡಂಗವ್ನೆ ಇವ್ನು? ಎಳ್ಕಂಬರಕಾಯ್ತದಾ?’ ಗಂಗಾಧರ ಸೂರಿಯ ಸಾಹಸದ ಕ್ಲೈಮ್ಯಾಕ್ಸ್ ಎದುರು ನೋಡುತ್ತಿದ್ದ ನೂರಾರು ಹುಡುಗರಂತೇ ಪರಿಸ್ಥಿತಿಯನ್ನು ತನಗೆ ತಿಳಿದ ಮಟ್ಟಿಗೆ ಅನಲೈಜ಼್ ಮಾಡಿದ್ದ.
ಮಧ್ಯಾನ್ಹದ ಕ್ಲಾಸುಗಳಿಗೆ ಕಾಲೇಜಿಗೆ ಹೋಗುವಾಗ ಅಂಥದ್ದೇನೂ ಉತ್ಸಾಹ ಇರಲಿಲ್ಲ. ಸಿಟಿಹುಡುಗರ ಸುಮಾರು ಜೋಡಿಗಳು ಸೆಟ್ ಆಗಿದ್ದವು. ಒಂದಿಬ್ಬರು ಹುಡುಗಿಯರು ಕೈಯ್ಯಲ್ಲಿ ಯಾರೋ ಕೊಟ್ಟ ಕೆಂಪು ಗುಲಾಬಿಗಳನ್ನು ಹಿಡಿದು ತಾವು ತುಂಬಾ ಪ್ರಮುಖರಾದವರು ಎಂಬುದನ್ನು ಸಾರಿದ್ದರು. ಮುಂದೇನು ಮಾಡುತ್ತಾರೋ? ಹೆಂಗೆ ಲವ್ವು ಮಾಡಬಹುದು? ಪಿಚ್ಚರ್ ಗೆ ಹೋಗಬಹುದು. ಹೋಟೆಲ್ಗಳಲ್ಲಿ ಒಳ್ಳೆ ತಿಂಡಿ ಊಟ ಮಾಡಬಹುದು...ಪಾರ್ಕು ಗೀರ್ಕು ಅಲೆಯಬಹುದು...ಮದುವೆಯೇನಾದ್ರೂ ಆಗುತ್ತಾರಾ? ಅವರವರನ್ನೇ ಆಗುತ್ತಾರಾ? ಅವರ ಮನೆಯವರು ಬಿಡಬಹುದಾ? ನಾನೂ ಯೋಚಿಸಿದ್ದೆ. ಅವನಿಯಂಥ ಹುಡುಗಿಗೆ ಕಾರ್ಡು ಕೊಟ್ಟು ಅವಳು ನನಗೆ ಹೂಂ ಅಂದಿದ್ದರೆ ಏನು ಮಾಡುತ್ತಿದ್ದೆ? ಒಂದು ಕ್ಷಣ ಯೋಚನೆ ಬಂತು. ಮುದ್ದಾದ ಹುಡುಗಿ...ಚನ್ನಾಗೇನೋ ಇರುತ್ತದೆ...ಆದರೆ ಎಲ್ಲಿಗೆ ಸುತ್ತಿಸಲಿ? ಹೇಗೆ ಕರೆದುಕೊಂಡು ಹೋಗಲಿ? ತಿನ್ನಿಸಲು ದುಡ್ಡೆಲ್ಲಿಂದ ಬರಬೇಕು? ಅವಳಿಗೋಸ್ಕರ ದಿನ ಒಂದು ಬಟ್ಟೆ ಹಾಕುವವರ್ಯಾರು? ನಮ್ಮನೆಯ ರಾಸುಗಳಿಗೆ ಅವನಿ ಮೇವು ಹಾಕುತ್ತಾಳಾ? ಕೋಳಿ ಕಸ ಕೆರೆಯುತ್ತಾಳಾ? ನನಗಿಷ್ಟದ ತಂಬಿಟ್ಟು, ಮುದ್ದೆ, ಬಸ್ಸಾರು ಮಾಡಿಕೊಡುತ್ತಾಳಾ ಅಥವಾ ತಿನ್ನುತ್ತಾಳಾ? ಅಪ್ಪ ಅವ್ವನಿಗೇನಾದರೂ ಗೊತ್ತಾದರೆ...ಸೀರಿಯಸ್ಸಾಗಿ ಯಾವನಿಂದಲಾದರೂ ಪೊರಕೆ ತಗೊಂಡು ಬಾರಿಸಿ, ಗಾಳಿ ಬಿಡಿಸಿ ತಾಯತ ಕಟ್ಟಿಸಿಬಿಡುತ್ತಿದ್ದರೇನೋ...ನನ್ನಂತವರು ಅವನಿಯಂಥವರನ್ನು ಜೋಡಿಯಾದರೆ ಎತ್ತಿಗೂ ಬಿಳಿ ಕೊತ್ತಿಗೂ ಜೋಡಿ ಮಾಡಿಸಿದಂತಲ್ಲವೇ...ಹಾಗಾದರೆ ಸ್ವಲ್ಪ ನನ್ನಂತೆಯೇ ಇರುವ ಸೂರಿ ಏನು ಮಾಡುತ್ತಾನೆ? ಓಹ್. ಇದು ಬರೀ ಕಾಲೇಜಿನ ವ್ಯವಹಾರ, ಸಿಟಿಯಲ್ಲಿ ಬೆಳೆದ ಅನುಕೂಲಸ್ತರ ಮನೆ ಹುಡುಗರ ವ್ಯವಹಾರ, ನಿಜಜೀವನದ್ದಲ್ಲ ಎನಿಸಿತ್ತು.
ಕ್ಲಾಸಿನಲ್ಲಿ ಕೂತಾಗ ಮನಸ್ಸು ಶಾಂತವಾಗಿತ್ತು. ಸೂರಿಗೆ ಲವ್ವು ನಿಜವಾದರೆ ದೇವರೇ ಅವನನ್ನು ಕಾಪಾಡಬೇಕು ಎಂದುಕೊಂಡು ಯಾವತ್ತೂ ಕೊಡದಿದ್ದ ಗಮನವನ್ನು ಇಂಗ್ಲಿಷ್ ಕ್ಲಾಸಿಗೆ ಕೊಟ್ಟು ಕೇಳಿದ್ದೆ. ಹುಡುಗಿಯರ ಕಡೆ ಕಣ್ಣು ಹಾಯಿಸಿದಾಗ ಇವರು ಅಷ್ಟು ದೂರದಲ್ಲೇ ಸರಿ ಎನಿಸಿದ್ದರು.
ಕ್ಲಾಸುಗಳು ಮುಗಿದಾದ ಮೇಲೂ ಯಾರಿಗೂ ಸೂರಿ, ಅವನಿ, ದೇವುಗಳ ಸುದ್ದಿಯಿರಲಿಲ್ಲ. ಸೂರಿಯ ಬೈಕು ಎಲ್ಲೂ ಕಂಡಿರಲಿಲ್ಲ. ಬೆಳಿಗ್ಗೆ ಬಿಸಿಯೇರಿಸಿದ್ದ ’ವೆಲೆಂಟೆನ್ಸ್ ಡೆ’ ಸಂಜೆಗೇ ಆಸಕ್ತಿ ಕಳೆದುಕೊಂಡಿತ್ತು. ಹೂಕೊಟ್ಟು ಕಾರ್ಡು ಕೊಟ್ಟು ಜೋಡಿಯಾಗುವುದರಲ್ಲಿ ಮಜ ಇದೆ ನಿಜ. ಆದಾದ ಮೇಲೆ?! ಎಲ್ಲಾ ಬರೀ ವೇಸ್ಟು ಎನ್ನಿಸಿತ್ತು. ಲೈಬ್ರರಿಯಲ್ಲಿ ಕೂತು ಓದುವಾಗಲೂ ಸುತ್ತಮುತ್ತ ಒಂದಿಬ್ಬರು ಹುಡುಗ ಹುಡುಗಿಯರು ಪಿಸುಪಿಸು ಮಾತಾಡಿಕೊಳ್ಳುವಾಗ ಸೂರ್ಯ ಮುಳುಗುವ ಮುಂಚೆ ಇವರೂ ಹಳ್ಳಕೆ ಬೀಳುವರೇ ಅಂತ ಖುಷಿ ಪಡುವವನಾಗಿದ್ದೆ.
ರಾತ್ರಿ ಊಟ ಹಾಕಿಸಿಕೊಂಡು ಬಂದು ರೂಮಲ್ಲಿ ’ವೆಲೆಂಟೆನ್ಸ್ ಡೆ’ ಅಂದ್ರೆ ಏನೋ ಅಂತ ಗಂಗಾಧರನನ್ನು ಕೇಳಿದ್ದೆ. ’ಯಾವನಿಗ್ಗೊತ್ತಲೊ...ಉಡ್ಗೀರ್ಗೆ ಕಾಲ್ಡ್ ಕೊಟ್ಟು ಲವ್ ಮಾಡ ದಿನ ಇರ್ಬೌದು..ಆ ಬಡ್ಡಿಮಗ ಕಾಲ್ಡ್ ಕೊಡ್ತನೆ ಅಂದ್ರೇ...ಥತ್...ಪತ್ತೆನೇ ಇಲ್ಲ ಬುಡು...’ ಗಂಗಾಧರನಿಗೂ ಗೊತ್ತಿದ್ದಂತಿರಲಿಲ್ಲ. ಇನ್ನೂ ಹೆಚ್ಚು ತಿಳಿದುಕೊಳ್ಳಲು ನನಗೆ ಆ ಸಮಯದಲ್ಲಿ ಬೇರೆ ಯಾವ ಸೋರ್ಸೂ ಸಿಕ್ಕಿರಲಿಲ್ಲ. ಗಂಗಾಧರ ಮಲಗಲು ತಯಾರಾಗಿದ್ದ. ಕಷ್ಟಪಟ್ಟು ನಿಲ್ಲಿಸಿರೋ ನಮ್ಮ ರೂಮಿನ ಬಾಗಿಲನ್ನು ಬಡಿದ ಸದ್ದು. ’ಇವನಯ್ನ್...ಯಾಕಲೇ...’ ಬಾಗಿಲು ಬಿಚ್ಚಿಕೊಂಡು ಬಿದ್ದುಬಿಡಬಹುದೆಂಬ ಗಾಬರಿಯಲ್ಲಿ ಗಂಗಾಧರ ನೆಗೆದೆದ್ದು ಚಿಲಕ ತೆಗೆದ. ನಮ್ಮಂತೆ ಹಾಸ್ಟೆಲ್ ಪಾರ್ಟಿ, ಫಸ್ಟ್ ಇಯರ್ ಸೈನ್ಸ್ ಸ್ಟೂಡೆಂಟ್ ’ಸಿ’ ಬ್ಲಾಕ್ ನ ಶೇಖರ ನಿಂತಿದ್ದ. ’ಸಕ್ಸಸ್ ಆಯ್ತ್ ಕಣ್ರೀ!! ಕಾರ್ಡ್ ಕೊಟ್ರಂತೆ!’ ಗಂಗಾಧರ ಪುಟಿದಿದ್ದ. ’ಏನಂದ್ಲಂತೆ?’ ಹಾಸ್ಟೆಲ್ಲಿನ ಕಾರಿಡಾರಿನಲ್ಲಿ ಸುಮಾರು ಹುಡುಗರು ಗುಂಪು ಗುಂಪಾಗಿ ನಿಂತು ಗುಲ್ಲು ಮಾಡುತ್ತಿದ್ದರು. ಇಡೀ ಹಾಸ್ಟೆಲ್ಲಿಗೆ ಹತ್ತು ನಿಮಿಷ ಮುಂಚೆ ತಲುಪಿ, ತನಗೂ ಸಿಕ್ಕಿದ್ದ ಸುದ್ದಿಯನ್ನು ಇವರಿಗೆ ನಾನೇ ಮೊದಲು ತಲುಪಿಸುತ್ತಿರುವುದು ಎಂಬ ಖುಷಿಯಲ್ಲಿ ಶೇಖರ ರಂಜನೀಯವಾಗಿ ವಿವರಿಸಿದ್ದ.
ದೇವು ಅವನಿ ಎಲ್ಲಿದ್ದಾಳೆಂದು ಅವಳ ಗೆಳತಿ ಲತಾ ಎಂಬ ಹುಡುಗಿಯನ್ನು ವಿಚಾರಿಸಿದ್ದಾಗ ಅವನಿ ತನ್ನ ಕುಟುಂಬದವರ ಜೊತೆ ’ವೆಲೆಂಟೆನ್ಸ್ ಡೆ’ ಆಚರಿಸಲು ಹಿಂದಿನ ಸಂಜೆ ಊರಿಗೆ ಹೋಗಿದ್ದಳಂತೆ. ಅದನ್ನು ಕೇಳಿದ ಸೂರಿ ನಿರಾಸೆಯಿಂದ ಅಲ್ಲೇ ಕೂತು ಕಣ್ಣೀರು ಹಾಕಿಬಿಟ್ಟಿದ್ದನಂತೆ. ಅವನಿ ಗೆ ಆಗಲೇ ಬಾಯ್ ಫ್ರೆಂಡ್ ಇದ್ದಾನೆ ಅಂತಲೂ ಆ ಹುಡುಗಿ ತಿಳಿಸಿಬಿಟ್ಟಳಂತೆ. ಆಗ ಸೂರಿ ಪಟ್ಟ ಸಂಕಟ ನೋವು ನೋಡಿ ದೇವುಗೂ ಕಣ್ಣಲ್ಲೆಲ್ಲಾ ನೀರು ಬಂದು ’ಅವನಿ ಗೆ ಹಿಂಗಾಗಿದೆ ಅಂತ ಫೋನ್ ಮಾಡಿ ನೋಡು...ಸಂಜೆ ಬರ್ತಿವಿ...ಏನಕ್ಕೂ ಒಂದು ಉತ್ತರ ಹೇಳ್ಬೇಕಂತೆ ಅನ್ನು’ ಅಂತ ಆ ಹುಡುಗಿಯನ್ನು ಹೆದರಿಸಿ ಕಳಿಸಿದ್ದನಂತೆ. ಒಂದು ಕೆಲಸ ಹಿಡಿದರೆ ಅದು ಸಫಲವೋ ವಿಫಲವೋ, ಒಟ್ಟು ಅದಕ್ಕೊಂದು ಗತಿ ಕಾಣಿಸುವ ಸ್ವಭಾವದ ನಮ್ಮ ನಾಯಕ ದೇವು ಸಂಜೆ ಸೂರಿಯನ್ನು ಕರೆದುಕೊಂಡು ಲೇಡೀಸ್ ಹಾಸ್ಟೆಲ್ ಹತ್ತಿರ ಹೋಗಿ ಸಂದೇಶಕ್ಕೆ ಕಾದಿದ್ದನಂತೆ.
ಅವನಿ ಜೊತೆ ಫೋನ್ ನಲ್ಲಿ ಮಾತಾಡಿ ಅವನಿಗೆ ಸೂರಿ ಬಗ್ಗೆ ’ಆ’ ಭಾವನೆ ಇಲ್ಲ. ಅವಳು ಆಗಲೇ ಎಂಗೇಜ್ಡು...ಸೂರಿಯನ್ನು ’ಅಣ್ಣಾ’ ಅಂತ ತಿಳ್ಕೊತಾಳಂತೆ...ಅವನು ಮನಸ್ಸಿಗೆ ಬೇಜಾರು ಮಾಡಿಕೊಳ್ಳಬಾರದಂತೆ...ಅಂತೆಲ್ಲಾ ಆ ಹುಡುಗಿ ಲತಾ ಸೂರಿ ದೇವುರ ಸಮ್ಮುಖದಲ್ಲಿ ಕಣ್ಣೀರು ತುಂಬಿಕೊಂಡು ಹೇಳಿತಂತೆ. ಸೂರಿ ಹತ್ತು ನಿಮಿಷ ಅಲ್ಲಿಂದ ಹೋಗೇಬಿಟ್ಟನಂತೆ. ದೇವುನೂ ಹತ್ತಿರ ಬಿಟ್ಟುಕೊಳ್ಳಲಿಲ್ಲವಂತೆ! ಇವರು ಕೋಪದಲ್ಲಿ ನನ್ನೇನಾದರೂ ಹೊಡೆದು ಬಿಡುತ್ತಾರೋ ಅಂತ ಆ ಹುಡುಗಿ ಲತಾ ಗಳಗಳನೆ ಅಳಲು ಶುರು ಮಾಡಿಬಿಟ್ಟಿತಂತೆ. ಅಷ್ಟರಲ್ಲಿ ಸೂರಿ ಬಂದು ಎದೆ ಮೇಲೆ ಕೈಯ್ಯಿಟ್ಟುಕೊಂಡು ತನಗೇನೂ ಬೇಜಾರಾಗಿಲ್ಲ...ಆಕೆ ಖುಷಿಯಾಗಿರಲಿ ಅಂತ ಮಾತ್ರ ತನ್ನ ಆಸೆ ಎಂದುಬಿಟ್ಟನಂತೆ. ಅವನ ಕಣ್ಣೆಲ್ಲಾ ರಕ್ತದಷ್ಟು ಕೆಂಪಂತೆ! ಬೆಳಿಗ್ಗೆಯಿಂದ ಷರ್ಟಿನ ಒಳಗೆ ಹೊಕ್ಕಿಸಿಟ್ಟುಕೊಂಡಿದ್ದ ಕಾರ್ಡನ್ನು ಹೊರಗೆ ತೆಗೆದು ಅವರಿಬ್ಬರ ಎದುರು ಹರಿದು ಬಿಸಾಕಲು ಹೋದಾಗ ದೇವು ಅವನನ್ನು ತಡೆದುಬಿಟ್ಟನಂತೆ!! ತನಗೆ ಬಂದಿದ್ದ ಸುದ್ದಿಗೆ ತನ್ನದೇ ಶೈಲಿಕೊಟ್ಟು ಆದಷ್ಟು ರೋಚಕವಾಗಿ ವಿವರಿಸುತ್ತಿದ್ದ ಶೇಖರ ಒಂದು ನಿಮಿಷ ನಿಲ್ಲಿಸಿ ನಮ್ಮ ಮುಖ ನೋಡಿದ್ದ. ಗಂಗಾಧರ ಹೀಗಾಗಿ ಹೋಯಿತಾ ಎಂಬಂತೆ ಕೇಳುತ್ತಿದ್ದ. ಕಥೆಯಲ್ಲಿ ಇನ್ನೂ ಏನೋ ಇದೆ ಎನಿಸಿ ಉಸಿರಾಡುವುದನ್ನೂ ಹಿಡಿದಿಟ್ಟುಕೊಂಡು ಅವನ ಕಡೆ ನೋಡುತ್ತಿದ್ದೆವು. ನಮ್ಮಿಬ್ಬರ ಮುಖಭಾವಗಳನ್ನೂ ಗಮನಿಸಿ ನಾವಿಬ್ಬರೂ ಸುದ್ದಿಯ ಅಂತ್ಯಕ್ಕೆ ಕಾಯುತ್ತಿರುವುದನ್ನು ಖಾತ್ರಿ ಮಾಡಿಕೊಂಡ ಶೇಖರ...
ದೇವು ಸೂರಿ ಕೈಯ್ಯಿಂದ ಕಾರ್ಡು ಈಸಿಕೊಂಡು, ಪೆನ್ ತೆಗೆದುಕೊಂಡು ಏನೋ ಬರೆದು...ಅದನ್ನು ಹಾಗೇ ಮಡಚಿ ಕವರಿನೊಳಗಿಟ್ಟು ನೀವು ತುಂಬಾ ಒಳ್ಳೆಯವರು...ನನಗಿಷ್ಟ ಆದಿರಿ...ಇದನ್ನ ನನ್ನ ಕಡೆಯಿಂದ ತಗೊಳ್ಳಿ ಎಂದು ಅದೇ ಕಾರ್ಡನ್ನು ಅಳುತ್ತಿದ್ದ ಆ ಹುಡುಗಿಯ ಕೈಗೆ ಕೊಟ್ಟು ಆಕೆಗೇನನ್ನಿಸುತ್ತೋ ಹೇಳಲು ಒಂದು ವಾರ ಟೈಮ್ ಕೊಟ್ಟು, ಏನು ತೀರ್ಮಾನ ಮಾಡಿದರೂ ನನಗೆ ಬೇಜಾರಾಗಲ್ಲ ಎಂದೂ ಹೇಳಿ ಬಂದುಬಿಟ್ಟನಂತೆ! ತಿರುವು ನಮಗೆ ಆಶ್ಚರ್ಯ ತಂದಿತ್ತು. ಬೆಳಿಗ್ಗೆಯಿಂದ ಸೂರಿ ಕಾರ್ಡು ಕೊಡುತ್ತಾನೆಂದು ಅವನನ್ನು ಹಾಟ್ ಸ್ಪಾಟಿನಲ್ಲಿಟ್ಟು ಲವ್ವಿನ ಹೀರೋ ಮಾಡಿಕೊಂಡು ಕಾದಿದ್ದವರಿಗೆ ದೇವುಗೇನಾಯಿತು?! ಅಷ್ಟು ಸಡನ್ನಾಗಿ?! ನಾವು ನಿಜವೋ ಸುಳ್ಳೊ ನಂಬಲಾಗದಂತಿದ್ದೆವು. ಶೇಖರ ಇನ್ನೊಂದಷ್ಟು ಹುಡುಗರಿಗೆ ಸುದ್ದಿ ಕೊಡಲು ಹೋದ. ಒಟ್ಟಿನಲ್ಲಿ ಕಾರ್ಡು ಹುಡುಗರ ಸೈಡಿಂದ ಹುಡುಗಿಯರ ಸೈಡಿಗೆ ಹೋಯಿತೆಂಬ ಸಣ್ಣ ಸಮಾಧಾನ ಗಂಗಾಧರನ ಮುಖದಲ್ಲಿ ಕಂಡರೂ "ಸವಾಸಲ್ಲ ಬುಡಪ್ಪ...ಐಲ್ ನನ್ಮಕ್ಳ್ರು’ ಗೊಣಗುತ್ತಾ ರೂಮ್ ಹೊಕ್ಕು ಮುಖದ ತುಂಬ ಕವುಚಿ ಮಲಗಿದ.
ಸೂರಿಯ ಲವ್ವು, ಸಂಭ್ರಮ, ಕಾಯುವಿಕೆ, ಆಸೆ, ನಿರಾಸೆಯ ಬೆವರನ್ನೆಲ್ಲಾ ಹೀರಿ ಹೀರಿ ಮೆತ್ತಗಾಗಿದ್ದ ಆ ಕಾರ್ಡು ದೇವುನ ಹೆಸರು ಹಾಕಿಸಿಕೊಂಡು ಒಟ್ಟಿನಲ್ಲಿ ಯಾರದೋ ಕೈ ತಲುಪಿತ್ತು. ದೇವು ಯಾಕೆ ಇಷ್ಟು ವೀಕ್ ಆಗಿಹೋದ? ಹೇಳ್ದೆ ಕೇಳ್ದೆ ಆ ಹುಡುಗಿಗ್ಯಾಕೆ ಕಾರ್ಡು ಕೊಟ್ಟುಬಿಟ್ಟ? ಈಗ ಆ ಹುಡುಗಿ ಇವನನ್ನು ಲವ್ವು ಮಾಡದಿದ್ರೆ ದೇವುವಂತಾ ಯುವ ಜನನಾಯಕ ಗಡ್ಡಪಡ್ಡ ಬಿಟ್ಟುಕೊಂಡು ಹಾಸ್ಟೆಲಿನ ಕಾರಿಡಾರಿನಲ್ಲಿ ’ಇದು ಯಾರು ಬರೆದ ಕಥೆಯೋ..’ ಅಂತ ಹಾಡಿಕೊಂಡು ತಿರುಗುವುದನ್ನು ಊಹಿಸಿಕೊಳ್ಳಲೂ ಆಗಲಿಲ್ಲ. ಇದ್ಯಾವ ಸೀಮೆ ತಲೆ ಕೆಟ್ಟ ದಿನ...ಅವತ್ತು ನಮ್ಮ ಹಾಸ್ಟೆಲಿನಲ್ಲಿ ಸುಮಾರು ಹುಡುಗರು ನೆಮ್ಮದಿಯ ನಿದ್ದೆ ಮಾಡಿರಲಿಕ್ಕಿಲ್ಲ.
ನಾನು ಮೊದಲು ಕೇಳಿ ಕಂಡ ’ವೆಲೆಂಟೆನ್ಸ್ ಡೆ’ ಮುಗಿದಿತ್ತು. ಬೆಳಿಗ್ಗೆ ತಿಂಡಿಗೆ ದೇವು ಪ್ರತ್ಯಕ್ಷನಾದಾಗ ಎಲ್ಲರೂ ಅವನನ್ನು ಮೇಲಿಂದ ಕೆಳಗೆ ನೋಡಿ ’ಅಣ್ಣಾ ಚನ್ನಾಗಿದ್ದೀಯ’ ಎಂಬಂತೆ ಕೇಳಿ ತಮ್ಮ ಕೆಲಸ ಮುಂದುವರಿಸಿದ್ದರು. ಎಂದಿನಂತೆ ಕಾಲೇಜಿಗೆ ಹೋದಾಗ ಸೂರಿ ತನ್ನ ಭಾವನೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ನಿರಾಳನಾದಂತಿದ್ದ. ನೆನ್ನೆಯ ಟೆನ್ಷನ್ ನಿಂದ ಮುಕ್ತಿ ಪಡೆದು ಫ್ರೆಶ್ಶಾಗಿದ್ದ. ಎಲ್ಲರೂ ಅವನ ಹೆಗಲು ಮುಟ್ಟೋ, ಬೆನ್ನು ಸವರಿಯೋ ಸಮಾಧಾನ ಹೇಳುವಂತೆ ಮಾಡಿದೆವು. ತ್ಯಾಗಮಯಿಯಂತೆ ಉಸಿರುಬಿಟ್ಟಿದ್ದ. ದಿನಾ ದೇವುನ ಸುತ್ತ ಹರಡಿಕೊಂಡು ಅವನನ್ನು ತಮ್ಮ ಮಧ್ಯೆ ವಿಜೃಂಭಿಸಿಕೊಳ್ಳುತ್ತಿದ್ದ ಹುಡುಗರು ಯಾಕೋ ಸೂರಿಯ ಇಕ್ಕೆಲಗಳಲ್ಲಿ ಕಲೆತುಕೊಂಡಿದ್ದರು. ನಮ್ಮ ನಾಯಕ ಲವ್ವಿನ ಸಹವಾಸಕ್ಕೆ ಬಿದ್ದು ಮೆತ್ತಗಾಗಿ ಹೋದರೆ ಇವನೂ ನಮ್ ಸಪೋರ್ಟಿಗಿರಲಿ ಎಂದುಕೊಂಡಂತಿತ್ತು.
ನೆನಪಿನಂಗಳದಿಂದ... ಕಾಮ್ರೆಡ್ ಕೆ.ಎಂ. ಶ್ರೀನಿವಾಸ್ ಹೇಳಿದ ನೆನಪುಗಳು...
ಡಾ. ರಾಜೇಗೌಡ ಹೊಸಹಳ್ಳಿ
(ಅಲ್ಲಲ್ಲಿ ಅಷ್ಟಷ್ಟನ್ನು ಹೆಕ್ಕುತ್ತಾ ಪೋಣಿಸುತ್ತಿರುವ ಮಾಲೆ)
೧) ನನಗೆ ಆಗ ಆಡೋ ವಯಸ್ಸು. ನಮ್ಮ ತೀರ್ಥಳ್ಳಿ-ಆರಗ ಕಡೆ ಮಂಜಪ್ಪ ಅಂತಾ ಒಬ್ಬರು ಮಾಸ್ಟರು ಇದ್ದರು. ಗಾಂಧಿ ಹಿಂದೆ ಬಿದ್ದು ಇರೋ ಕೆಲಸ ಕಳ್ಕೊಂಡ್ರು. ಬಹಳ ಬಡತನಕ್ಕೆ ಸಿಕ್ಕಿಬಿದ್ದರು. ಅದಿರಲಿ! ಯಡೂರಲ್ಲಿ ಕಾಂಗ್ರೆಸ್ ಭಾಷಣ ಇಡಿಸಿದ್ದರು. ಅದಕ್ಕೆ ಸಾಹುಕಾರ್ ಶ್ರೀನಿವಾಸ್ ಜೋಯಿಸರನ್ನ ಅಧ್ಯಕ್ಷತೆ ಅಂತಾ ಪ್ರಚಾರ ಮಾಡಿದ್ರು. ಇದನ್ನೆಲ್ಲಾ ಪೋಲೀಸಿನೋರು ಹೆಜ್ಜೆಹೆಜ್ಜೆಗೆ ಸುದ್ಧಿಕೊಡೋ ಕಾಲ. ಇದೆಲ್ಲ ರಾಮಾಯಣ ಯಾಕೆ ಅಂತಾ ಜೋಯಿಸರು ಸಭೆಗೇ ಬರಲಿಲ್ಲ. ನಾನು ಎಂಟು ಹತ್ತು ವರ್ಷದ ಹುಡುಗ, ಅಲ್ಲಿ ಅಜ್ಜಿಮನೆಗೆ ಹೋದೋನು! ನೋಡ್ತಾ ನಿಂತಿದ್ದೆ! ಮಂಜಪ್ಪನವರು ನನ್ನ ಊರ ಕಡೇರೇ ಹೌದು. ಇನ್ನೇನು ಸಭೆ ಪ್ರಾರಂಭವಾಗಬೇಕು. 'ಹೇ ಶ್ರೀನಿವಾಸ' ಅಂದವರೇ ಅನಾಮತ್ ನನ್ನ ಟೇಬಲ್ ಮೇಲೆ ನಿಲ್ಲಿಸಿ ಭಾಷಣ ಮಾಡು ಅಂದ್ರು. ಸಭೇಲಿ ಈ ಶ್ರೀನಿವಾಸನೇ ಭಾಷಣ ಮಾಡ್ತಾನೆ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅಂದ್ರು. ಅದೇನು ಮಾಡಿದೇನೋ. ಅದೆಂತ ಹೇಳಿದನೋ ಕಾಣೆ.
ನಾನು ನನ್ನೂರಲ್ಲಿ ಆಡ್ತ ಇದ್ದೆ. ಪೋಲೀಸಪ್ಪ ಬಂದು 'ಯಾರು ಶ್ರಿನಿವಾಸ' ಅಂದ. 'ಇವನೇ ಇವನೇ' ಅಂತಾ ನನ್ನ ತೋರಿಸಿದರು. ಹೇ ತಮಾಷೆ ಮಾಡ್ತಿರೇನ್ರಿ; ಕಾಂಗ್ರೆಸ್ ಸಭೆಲಿ ಅಧ್ಯಕ್ಷತೆ ವಹಿಸಿದ ಶ್ರೀನಿವಾಸ ಯಾರ್ರಿ ಅಂದ್ರು. ಪೋಲೀಸನವರಿಗೆ ಹೆದರೋ ಕಾಲ ಅಲ್ಲವೇ! ಅಲ್ಲಿ ಪಟ್ಟಮಕ್ಕಿಯವರು ಒಬ್ಬರು ಶ್ರೀನಿವಾಸ ಅಂತಾ ಇದ್ದರು. 'ಅವರೇ ಶ್ರೀನಿವಾಸ' ಅಂತಾ ಆತನನ್ನು ತೋರಿಸಿದ್ರು. ಏನೂ ಕಾಣದ ಅವನ ಹಿಡ್ಕೊಂಡು ಹೋದರು. ಹೀಗಿತ್ತು ನಾವು ನಮ್ಮ ಸಮಾಜ ಆಗಿನ ಕಾಲದಲ್ಲಿ ಅನ್ನಿ. ಮುಂದೆ 'ಮೈಸೂರ ಚಲೋ ಚಳುವಳಿಲಿ' ಇದೇ ಮಂಜಪ್ಪ ಮತ್ತು ನಾನು ಅಲ್ಲದೆ ಇನ್ನು ಎಲ್ಲ ಸೇರಿ ಜಾತಾ ಹೊರಟವು. ಕಡೂರು ಬಳಿ ನಮ್ಮನ್ನು ಬಂಧಿಸಿದರು.
೨) ಜಯಚಾಮರಾಜ-ಒಡೆಯರ ಕಾಲ ೧೯೪೨ರಲ್ಲಿ ತೀರ್ಥಹಳ್ಳಿ ತುಂಗಾನದಿಗೆ ಕಮಾನು ಸೇತುವೆ ಕಟ್ಟಿದ್ದು. ಅದೇ ನಮ್ಮ ಪುಟ್ಟಪ್ಪನವರದ್ದು 'ದೋಣಿಸಾಗಲಿ ಮುಂದೆಹೋಗಲಿ' ಅಂತಾ ಬರುತ್ತಲ್ಲಪ್ಪ ಅದೇ ಜಾಗ. ಆಚೆ ಕಾಡಲ್ಲಿ ಮಿಲಿಟರಿ ಕ್ಯಾಂಪಿತ್ತು. ಆಗ ಸ್ವಾತಂತ್ರ ಹೋರಾಟದ ಕಾಲ. ಜನಾರ್ಧನನಾಯಕರು ಮುಂದಾಳು. ಕಾಳಿಂಗರಾಯರು, ಪುಟ್ಟರಾಯರು, ಉಡುಪಿ ಮಂಜಪ್ಪನವರು ಇಂತವರೆಲ್ಲ ತೀರ್ಥಹಳ್ಳಿ ಕಡೆ ಹೋರಾಟಗಾರರು. ನನಗೆ ಇನ್ನು ವಯಸ್ಸು ಆಗಿರಲಿಲ್ಲ. ಅದು ಹೇಗೋ ನನ್ನ ಕಿವಿಗೆ ಕಮಾನು ಸೇತುವೆ ಉಡಾಯಿಸೋ ವಿಚಾರ ಸಿಕ್ತು. ಓಡೋಗಿ ಇನ್ಸೆಕ್ಟರ್ಗೆ ಹೇಳಿದೆ. ಅದೇನೋ ನನಗೆ ಗೊತ್ತಿಲ್ಲ! ಇಂಥಾ ಸೇತುವೆ ಒಡೆದರೆ ಹೇಗೆ! ಉಳಿಸಬೇಕು ಅಂತಾ ಮನಸಿಗೆ ಬಂದುಬಿಡ್ತು. ಉಳಿತು.
೩) ಅಯ್ಯೋ ಆಗಿನ ಮಲೆನಾಡು ಏನು ಹೇಳ್ತೀರಿ. ಹುಟ್ಟಿದೋರು, ಹೆತ್ತೋರು, ದುಡಿಯೋರು, ಇವೊತ್ತಿದ್ದೋರು ನಾಳೆ ಇರ್ತಿರ್ಲಿಲ್ಲ. ನನಗೆ ಒಂದೆರಡು ವರ್ಷದ ಮಗುನಲ್ಲೆ ಅಪ್ಪ ಸತ್ತೊದರು. ತಾಯಿ ಬೇಸಾಯಕ್ಕೆ ಇಳಿದಳು. ಸಾಕಿದಳು ಓದಿಸಿದಳು. ಆದರೆ ನಾನು ಮನೆಬಿಟ್ಟು ಸಮಾಜಕಾರ್ಯ ಅಂತಾ ಇಳಿದುಬಿಟ್ಟೆ. ಹೀಗೀಗೆ ಅಂತಾ ಒಂದಿನ ಹಂಗಿಸ್ಲಿಲ್ಲ. ಹೇಗೆ ಸಹಿಸಿಕೊಂಡಿರಬೇಕು. ಮಾತಾಯಿ! ಅಗ ಒಂಥರಾ ಗಾಣಗುದ್ದುಗೆ ಜ್ವರ ಅಂತಾ ಬಂದು ಬಿಡೋದು. ಅದು ೧೯೩೧ ಜಪಾನ್-ಚೈನಾ ಯುದ್ಧ ಕಾರಣ ಅದೊಂದು ಪ್ಲೂ ತರಾ ಬರ್ತಿತ್ತು ಅಂತಾರ್ರಪ್ಪಾ! ಅದೆಂತದೋ ಸುಡುಗಾಡು ಅದಿರಲಿ! ನನ್ನಜ್ಜ ಬೊಮ್ಮೆಗೌಡ ದೊಡ್ಡ ಜಮೀನ್ದಾರ್ರು. ಆಗ ವಿಠಲ್ರಾವ್ ಅನ್ನೋ ಸಾಹುಕಾರ ಜೊತೆ ಬೊಂಬಯಿವರೆಗೂ ವ್ಯಾಪಾರ ಮಾಡ್ತಿದ್ದರು. ಆಗ ಸೊಂಟದಲ್ಲಿ ಚಿನ್ನದ ನಾಣ್ಯ ಕಟ್ಕೊಂಡು ಬರ್ತ ಇದ್ದರಂತೆ.
ನಮ್ಮನೆಲಿ ಒಂದು ದೋಣಿ. ಅಂದರೆ ಮುಚ್ಚಿದರೆ ಪೆಟ್ಟಿಗೆ, ಅದೇ ಮಲಗೋ ಮಂಚ ಆಗೋದು. ಅದರೊಳಗೆ ಚಿಕ್ಕದೊಂದು ಪೆಟ್ಟಿಗೆಗೆ ಬೀಗಹಾಕಿ ಬಂಗಾರ ಇಟ್ಟಿರ್ತಿದ್ದರು. ನಮ್ಮನೆಲಿ ಹೆಗ್ಗಣ ಇಲಿ ಕಾಟ. ನನ್ನ ದೊಡ್ಡಪ್ಪನ ಮಕ್ಕಳೂ ನನ್ನ ವಯಸ್ಸಿನವರೇ ಹೌದು. ಒಂದಿನ ಮಲಗ್ತಿದ್ವಿ. ಕರಕರ ಕೊರಕೊರ ಅನ್ನೋ ಶಬ್ಧ. ಆಗ ಎದ್ದು ಇಲಿ ಹೆಗ್ಗಣ ಹೊಡ್ಯೋದು ಇದ್ದೇ ಇತ್ತು. ದಿನಾ ಇದಿತ್ತಲಾ! ಆವೊತ್ತು ಹಿಂಗೇ ಶಬ್ಧ ಆಗ್ತಾ ಇತ್ತು. ಹೇ ಸುಮ್ಮನೆ ಬಿದ್ಕೊಳೋ ಯಾವನು ಏಳ್ತನೆ ಅಂತಾ ನನ್ನಣ್ಣ ಹೇಳಿದ. ಬೆಳಗಾದರೆ ನೋಡ್ತಾರೆ! ಮನೆ ಹೆಂಚು ತೆಗೆದವರೆ! ಪೆಟ್ಟಿಗೆ ಖಾಲಿ. ಯಾರ್ಯಾರನ್ನೋ ಪೋಲಿಸಿನವರು ತಂದು ವದೆ ಬಿಟ್ಟಿದ್ದು ಅಷ್ಟೇ ನೆನಪು. ಅದೆಲ್ಲಿ ಸಿಕ್ಯಾತು! ನಾನು ಆಗ ಸಣ್ಣ ಹುಡುಗ ಅನ್ನಿ.
೪) ನಾನು ಬೆಂಗಳೂರಿನ ರೇಸ್ಕೋರ್ಸ್ ರಸ್ತೆಲಿರೋ ಲಾ ಕಾಲೇಜು ಹಾಸ್ಟೆಲಿನಲ್ಲಿದ್ದೆ. ೧೯೫೬ರಲ್ಲಿ ಕೆಂಗಲ್ ಹನುಮಂತಯ್ಯನೋರು, ವಿಧಾನಸೌದ ಕಟ್ಟಿದ ಕನಸು ನೆನಸುಗಳಲ್ಲೆ 'ನಾಳೆ ಉದ್ಘಾಟನೆ' ಎನ್ನುವಾಗ ಅಧಿಕಾರ ಕಳ್ಕೊಂಡ್ರು. ಪಶ್ಚಿಮ ದ್ವಾರದ ಕಡೆಯಿಂದ ತಾನು ಕಟ್ಟಿದ ಸೌಧ ಹಿಂದಿರುಗಿ ನೋಡುತ್ತಲೇ ನಮ್ಮಂತಾ ನೋಡ್ತಾ ನಿಂತಿದ್ದವರ ಕಡೆಗೆ ಕೈ ಮುಗಿತಾ ಬರ್ತಾ ಇದ್ರು. ಆತನ ಕಣ್ಣಲ್ಲಿ ನೀರು ಇಳಿತಾ ಇದ್ವು. ಆ ಸನ್ನಿವೇಶ ಬಿಡಿ! ನನ್ನಂತಾ ಕಡುಪಿನ ಮನುಷ್ಯನ ಕಣ್ಣಲ್ಲಿ ಸಹಾ ನೀರು ಬಂದ್ವು ಅನ್ನಿ. ಮನುಷ್ಯನ ಆಸೆ, ಜಾತಿಪ್ರೇಮ ಈ ದೇಶದ ದುರಂತ. ಇದಕ್ಕೆ ಕಡಿದಾಳ್ ಮಂಜಪ್ಪನವರು ಜವಾಬ್ದಾರ್ರೆ ಹೌದು.
(ಮುಂದುವರಿಯುವುದು)
’ಪಿಳ್ಳಂಗೋವಿ’
ಸತ್ತು ಸಂತರಾದ ವ್ಯಾಲೆಂಟೀನೋರಿಗೇನು ಗೊತ್ತು
ನಮ್ಮ ಕಸಿವಿಸಿ
ಪ್ರೀತಿಯ ತಲೆಬಿಸಿ.
ತಮ್ಮನ್ನೇ ಕಳೆದುಕೊಂಡದ್ದು
ಕೊಟ್ಟುಬಿಟ್ಟದ್ದು
ಸೋತದ್ದು ಅವರ ಪ್ರೀತಿ...
ಕಾಸು ಕರಗಿಯೂ ಕೊಂಡೂ ಕೊಂಡೂ
ಒಲ್ಲದ ತಮ/ತಮೆಗೆ
ಕೊಟ್ಟೂ ಕಿಸಿದೂ ಸಾಕಾಗಿ,
ಫ್ಯಾಕ್ಟ್ರಿಗಳಲ್ಲಿ ಬ್ರೀಡು ಮಾಡಿದ
ಲವ್ವೆಂಬ ನಕಲಿ ಮಾಲನ್ನು
ದುಬಾರಿ ದರದಲ್ಲಿ ಮಾರುವ
ಮಾರ್ಕೆಟ್ ಮಾರರಿಗೆ
ಸಕಲವನ್ನೂ ಕಳೆದುಕೊಳ್ಳುವುದು
ನಮ್ಮ ಫಜೀತಿ!
|
|