ಅಂಗಳ      ನೀನಾರಿಗಾದೆಯೊ ಎಲೆ ಮಾನವ
Print this pageAdd to Favorite
 

ಮನುಷ್ಯ ಎಲ್ಲಿ? ಹುಡುಕಿಕೊಡಿ -ಭಾಗ: ೨
(ಸಮೂಹ ಮಾಧ್ಯಮ, ಸಂಸ್ಕೃತಿ ಮತ್ತು ರಾಜಕೀಯ)

ಡಾ. ಹಿ. ಶಿ. ರಾ.
 
 

ಒಬ್ಬನ ನ್ಯಾಯ ಅಥವಾ ಕೆಲವೇ ಕೆಲವರ ನ್ಯಾಯ ಎಂಬುವು ಹೊಸವೇನೂ ಅಲ್ಲ. ಇವು ಹಿಂದೆ ಇದ್ದವು ಈಗ ಹೊಸ ಅವತಾರ ತಾಳಿವೆ. ಅವು ಸಂಸ್ಕೃತಿಯ ಒಳಗೇ ಇವೆ. ಸಂಸ್ಕೃತಿಯಲ್ಲಿಯೆ ಎರಡು ಹಂತ ಅಥವಾ ಸ್ಥಿತಿಗಳಿವೆ. ಒಂದು ಸ್ತಬ್ಧ ಸಂಸ್ಕೃತಿ. ಇಲ್ಲಿ ಒಬ್ಬ ವ್ಯಕ್ತಿ ಮತ್ತು ಕೆಲವೇ ಜನರ ಹಿತ ಮುಖ್ಯವಾಗುತ್ತದೆ. ಉದಾಹರಣೆಗೆ: ರಾಜಪ್ರಭುತ್ವದಲ್ಲಿ ರಾಜನೇ ಮುಖ್ಯನು. ಅವನ ಹಿತವೇ ಮುಖ್ಯ. ಅವನನ್ನು ಜನ ಅನುಸರಿಸಬೇಕು. ಹಾಗೆಯೇ ಜಾತಿ ಸಮಾಜದಲ್ಲಿ ಮೇಲು ಜಾತಿಯೇ ಮುಖ್ಯ. ಉಳಿದವರು ಆ ಜಾತಿಗೆ ಬೇರೆ ಬೇರೆ ರೀತಿಯಲ್ಲಿ ಸೇವೆ ಮಾಡಿಕೊಂಡಿರಬೇಕು ಎಂದು ಜಾತೀಯ ಧರ್ಮ ಶಾಸ್ತ್ರಗಳು ಬೋಧಿಸತೊಡಗುತ್ತವೆ. ಈ ಬೋಧನೆಯನ್ನು ನಿರ್ದಿಷ್ಟಗೊಳಿಸಲು ದೇವರು-ಧರ್ಮ ಎಂಬ ಭಯವನ್ನು ಸೃಷ್ಟಿಸುತ್ತಾರೆ. ಜನರನ್ನು ಭಕ್ತ, ಭವಿ ಎಂದು ಮಾಡಿ ಅವನ ಪಾಪ ಪರಿಹಾರಕ್ಕಾಗಿ ಮೇಳು ಜಾತಿ ಪರವಾದ ಧರ್ಮ ಮತ್ತು ದೇವರನ್ನು ಅನುಸರಿಸುವಂತೆ ಮಾಡುತ್ತಾರೆ. ಇವೆಲ್ಲವನ್ನು ಸರಿಮಾದಲು ಬಳಕೆಯಾಗುವುದೇ ’ಪ್ರವಚನ’ ಎಂಬ ಮೋಸದ ಮಾಧ್ಯಮ.
 
 
 
ಎರಡನೆ ಬಗೆಯ ಸಂಸ್ಕೃತಿಯೂ ಇದೆ. ಇದು ಪೂರಾ ಜನಸಾಮಾನ್ಯರದು. ’ಪುರಾಣ ಹೇಳಕೆ, ಬದನೆಕಾಯಿ ತಿನ್ನಕೆ’ ಎಂದು ಪುರಾಣವನ್ನು ಉಡಾಫೆ ಮಾಡುತ್ತಾ ಅದು ಮುಖ್ಯ ಅಲ್ಲ ಬರೀ ಕತೆ. ಅಂಥ ಕತೆಗಳು ನಮ್ಮಲ್ಲಿಯೂ ಇವೆ ಎಂದು ಮೇಲ್ಜಾತಿಯ ಕಟ್ಟು ಕತೆ ಒಡೆಯುತ್ತಾ ತಮ್ಮದೇ ಸೃಜನಶೀಲ ನಡವಳಿಕೆಗಳನ್ನು ಬದುಕುತ್ತಾ ಹೋಗುತ್ತಾರೆ. ಉದಾ: ಸಿರಿ ಆಚರಣೆ. ಇದು ದಕ್ಷಿಣ ಕನ್ನಡದ ಬಂಟರ ವಿಶೇಷ ಆಚರಣೆ. ಶಕ್ತಿಶಾಲಿ ಮಕ್ಕಳನ್ನು ಪಡೆಯಲು ಹಾಗೂ ಮಾನಸಿಕ ನೆಮ್ಮದಿಯನ್ನು ತಂದುಕೊಳ್ಳಲು ಹೆಣ್ಣುಮಕ್ಕಳು ನಡೆಸುವ ಆಚರಣೆ. ಭೂತಕೋಲ ಮತ್ತೊಂದು ಉದಾಹರಣೆ. ಭೂತ ಎಂಬ ಕೆಟ್ಟ ಶಕ್ತಿಯನ್ನು ದೈವವೆಂಬ ಫಲದಾಯಕ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡು ಜೀವನದಲ್ಲಿ ರಕ್ಷಣೆ ಮತ್ತು ನೆಮ್ಮದಿಯನ್ನು ಪಡೆಯುವುದು. ಮೋಕ್ಷ ಎಂಬ ದೂರದ ಆಸೆಗೆ ಇಲ್ಲಿ ಪ್ರಚೋದನೆ ಇಲ್ಲ. ಮತ್ತೊಂದು ಸಂದರ್ಭ ಯಕ್ಷಗಾನ. ಈ ಹೊತ್ತು ಇದು ಉಳ್ಳವರ ಪುರಾಣಕತೆ ಅಲ್ಲ. ಇದನ್ನು ಸಮಕಾಲೀನ ಪುರಾಣ ಎನ್ನಬಹುದು-ಪುರಾಣವನ್ನು ಪುರಾಣದ ಪಾತ್ರಗಳ ನಡವಳಿಕೆಗಳನ್ನೂ ವಿಮರ್ಶಿಸುತ್ತ ವ್ಯಕ್ತಿತ್ವ ವಿಕಾಸಕ್ಕೆ ಅವಕಾಶಮಾಡಿಕೊಡುತ್ತದೆ. ಈ ಬಗೆಯ ಸಂಸ್ಕೃತಿಯನ್ನು ಪ್ರಾಯೋಗಿಕ ಸಂಸ್ಕೃತಿ ಎಂದು ಕರೆಯಬಹುದು. ಇದೇ ಜೀವನ ಸಂಸ್ಕೃತಿ. ಮೊದಲನೆಯದು ಧಾರ್ಮಿಕ ಬಂಡವಾಳಿಗರ ಸಂಸ್ಕೃತಿ.
 
 
ಎಲ್ಲ ಪ್ರಾಯೋಗಿಕ ಸಂಸ್ಕೃತಿಯ ಉದ್ದೇಶ: "ಮನೆಯವರಾಗುವುದು"( ಹೋಮ್ಲೀ ಆಗುವುದು). ಎಂದರೆ: ಸ್ನೇಹಿ ಸಹೋದರ, ಸಹಜೀವಿ ಕುಟುಂಬಿ, ಸಮುದಾಯ, ನಾಡು, ದೇಶ ಆಗುವುದು. ಅದರ ಅರ್ಥ ಪ್ರತಿಯೊಬ್ಬನೂ ಉತ್ಪಾದಕ, ಸಂರಕ್ಷಕ, ಸಹವರ್ತಿ, ಹಂಚಿಕೊಳ್ಳುವವನು ಮತ್ತು ಅನುಸರಿಸುವವನು ಆಗುವುದು. ಪ್ರತಿಯೊಬ್ಬನೂ ಸಾಮಾಜಿಕವಾದ ’ಆಗುವ ಪ್ರಕ್ರಿಯೆ’ಯಲ್ಲಿ ತೊಡಗಿಸಿಕೊಳ್ಳುವುದು. ಕೇವಲ ಕೊಳ್ಳುವ, ಬಳಕೆದಾರನಾಗುವ, ಅಂತ್ಯದಲ್ಲಿ ಅವಸಾನ ಆಗುವ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಲ್ಲ. ಭಾಗಿಯಾಗುವುದು ಪಡೆದುಕೊಳ್ಳುವುದಕ್ಕೆ, ಸೃಜನಶೀಲನಾಗುವುದಕ್ಕೆ, ಕಳೆದುಕೊಳ್ಳುವುದಕ್ಕಲ್ಲ.
 
 
ಹೋಮ್ಲೀ ಆಗುವುದೆಂದರೇನೇ ಕಲ್ಚರ್ ಆಗುವುದು ಎಂದು ಅರ್ಥ. ಕಲ್ಚರ್ ಆಗಬೇಕಾದರೆ ’ಮನೆ’ಯೆಂಬ ಮಾನಸಿಕ ವ್ಯವಸ್ಥೆಯ ಒಳಗೆ ಹೊಕ್ಕುವುದು (go home-ಮನೆಗೆ ಹೋಗು:ಮನೆಯವನಾಗು). ಈ ’ಮನೆ ಹೊಕ್ಕುವ’ ಮೆಸೇಜುಗಳ ಬಗೆಗಳೆಂದರೆ:
 
೧) Message for an indivudual: ಸತ್ಯವೇ ದೇವರು
೨) Message for a home: ಮನೆಯೇ ಮಂದಾರ
೩) Message for society: ನಮ್ಮ ಜನ, ನಮ್ಮ ಮನ
೪) Message for State: ಕನ್ನಡಕೆ ಹೋರಾಡು ಕನ್ನಡದ ಕಂದ
೫) Message for Nation: ಜೈ ಭಾರತ ಜನನಿ
ಇದೆಲ್ಲವನ್ನೂ ನಿರ್ವಹಿಸುವುದೇ ಜನಪದ ಮಾಧ್ಯಮ (Folk ಮೀಡಿಯಾ) ಇಂಥ ಸಂದೇಶವನ್ನು ಇಟ್ಟುಕೊಂಡು ಹೊರಟರೇನೆ ವ್ಯಕ್ತಿಗೆ, ಸಮುದಾಯಕ್ಕೆ ಮತ್ತು ದೇಶಕ್ಕೆ ಶಕ್ತಿ ಮತ್ತು ಹಿತ. ಬಟ್ಟೆ ಬಿಚ್ಚಿಕೊಳ್ಳುವ ಮಾರುಕಟ್ಟೆ ತತ್ವದಲ್ಲಿ ಏನಿದೆ?
 
 
ಸಮುದಾಯದ ಸಂದೇಶ ಬೇರೆ, ಜಾತಿ ಸಂದೇಶ ಬೇರೆ. ಸಮುದಾಯ ಸಂದೇಶಕ್ಕೆ ಉದಾಹರಣೆ:
ಡೊಳ್ಳು ಕುಣಿತ-ಡೊಳ್ಳಾಸುರನ ಹೊಟ್ಟೆ ಒಡೆದು ಬಂದವರು
ವೀರಗಾಸೆ-ಸ್ವಂತದ ನಾಶವನ್ನು ತಡೆಯಲು ವೀರರಾದವರು
ಕಂಸಾಳೆ-ಹೊರಹಾಕಲ್ಪಟ್ತ ಒಮ್ಟಿತನವನ್ನು ಗೆಲ್ಲುವುದು
ಸುಗ್ಗಿ ಕುಣಿತ-ಎಲ್ಲವನ್ನೂ ನಿಭಾಯಿಸಿ ಸಂತಸಗೊಂಡವರು.
ಹೀಗೆ ಪ್ರತಿಯೊಂದು ಸಮುದಾಯಕ್ಕೂ ಶಕ್ತಿಶಾಲಿಯಾದ ನೈತಿಕ ಸಂದೇಶವಿರುತ್ತದೆ. ಅದೇ ಅವುಗಳ ಅಸ್ತಿತ್ವ. ಜಾತಿ ಸಂದೇಶ ತಾರತಮ್ಯವನ್ನು ಪ್ರತಿಪಾದಿಸುತ್ತದೆ. ಆದ್ದರಿಂದಲೆ ತಲೆ ಇರುವವರು ಅದನ್ನು ತಿರಸ್ಕರಿಸುತ್ತಾರೆ.
 
ಸಮೂಹ ಮಾಧ್ಯಮ ೨೦ನೆಯ ಶತಮಾನದವರೆಗೆ ಸರಿಯಾಗಿಯೆ ಇತ್ತು. ಅದು ಆಧುನಿಕ ವೈಜ್ನಾನಿಕ, ವೈಚಾರಿಕೆ ಚಿಂತನೆಗಳ ಮಾಧ್ಯಮವಾಗಿತ್ತು. ಬಡವರು, ವಿಜ್ನಾನಿಗಳು ಮತ್ತು ಅಸಹಾಯಕರು ಅದರಿಂದ ಅನುಕೂಲ ಪಡೆದರು. ಬಿಡುಗಡೆಗೊಂಡರು. ಜಾತಿ ಮತ ಧರ್ಮಗಳ ಕುಬ್ಜತೆಯನ್ನು ಆ ಸಮೂಹ ಮಾಧ್ಯಮ ಪ್ರಶ್ನಿಸಿತು. ಸತ್ಯದ ಬೆಳಕಿನ ಕಡೆಗೆ ದಾರಿ ತೋರಿಸಿತು. ೨೧ನೆಯ ಶತಮಾನದ ಸಮೂಹ ಮಾಧ್ಯಮ ಅದನ್ನು ಉಲ್ಟಾಪಲ್ಟಾ ಮಾಡಿದೆ. ಅದು ಈಗ ಉದ್ಯಮಪತಿಯ ಬಾಯಿಮಾತು ಆಗಿದೆ. ಈಗ ಸಮೂಹ ಮಾಧ್ಯಮವೇ ಒಂದು ಮಾರುಕಟ್ಟೆ. ಅದು ಬರೀ ಮಾರುಕಟ್ಟೆ ಅಲ್ಲ. ಅತ್ಯಂತ ಅಗ್ರೆಸಿವ್ ಮಾರ್ಕೆಟ್ (agressive market). ಅದು ಹೇಳುತ್ತದೆ 'ಗೋ ಟು ಮಾರ್ಕೆಟ್' (Go to Market).

Message for an indivudual and home: Go to Market
Message for a home, society: Go to Market
Message for State, Nation: Go to Market

ಅದರ ಒಟ್ಟಾರೆ ಮೆಸೇಜು-buy, buy ,buy -ಕೊಳ್ಳಿ ಕೊಳ್ಳಿ ಕೊಳ್ಳಿ
 
ಇದು ಮಾರುಕಟ್ಟೆ ಆರಾಧನೆ. ಸಂಘಟಿತಾತ್ಮಕವಾಗಿ ಇದು ಕೊಡುವುದು ೦ (ಸೊನ್ನೆ) ಮೆಸೇಜು. ಸಂದೇಶ ಇಲ್ಲದಿದ್ದಲ್ಲಿ ಸಂಸ್ಕೃತಿ ಕುಸಿಯುತ್ತದೆ. ವಸ್ತು, ವ್ಯಕ್ತಿ, ಸಂದರ್ಭಗಳು ಸಾಂಸ್ಕೃತಿಕವಾಗಿ ಆಚರಣೆಗೊಳ್ಳುವುದಿಲ್ಲ. ಇದರಿಂದ ವ್ಯಕ್ತಿತ್ವಗಳು ನೈತಿಕ ದೈವಗಳು ಫಲವತಾತ್ಮಕ ಆಚರಣೆಗಳು ಅಸ್ತಿತ್ವಕ್ಕೆ ಬರುವುದಿಲ್ಲ.

ವಸ್ತು ಜ್ನಾನ
ವ್ಯಕ್ತಿ ಜ್ನಾನ
ವಿಶಯ ಜ್ನಾನ
ದೈವ ಜ್ನಾನ

ಈ ಎಲ್ಲವನ್ನೂ ಮಾರ್ಕೆಟ್ ಡ್ರಿವನ್ ನಾಲೆಡ್ಜ (Market driven knowledge) ಆಗಿ ಪರಿವರ್ತಿಸಲಾಗುತ್ತದೆ. ಇದರಿಂದ ವ್ಯಾಲ್ಯೂ ಪ್ರೈಜ಼್ (value prize) ಮಾತ್ರ ಉಳಿದು ವ್ಯಾಲ್ಯೂ ಜಡ್ಜಮೆಂಟ್ (value judgement) ಇಲ್ಲವಾಗುತ್ತದೆ. ಇದನ್ನು ನಾನು ಮಾರ್ಕೆಟ್ ಕ್ರೈಮ್ (Market crime) ಎನ್ನುತ್ತೇನೆ. ಈಗ ಬೆಳೆಯುತ್ತಿರುವುದು ನಡವಳಿಕೆಯ ಕ್ರಿಮಿನಾಲಜಿ ಅಲ್ಲ, ಮಾರ್ಕೆಟ ಕ್ರಿಮಿನಾಲಜಿ (Market criminalogy). ಎರಡು ಉದಾಹರಣೆಗಳಿಂದ ಅದನ್ನು ಸ್ಪಷ್ಟಪಡಿಸುತ್ತೇನೆ.

ಉದಾ ೧: ಸ್ಥಳೀಯ

ಒಂದು ಪ್ರೈಮರಿ ಶಾಲೆಯಲ್ಲಿ ಒಬ್ಬ ಮುಖ್ಯೋಪಾಧ್ಯಾಯ ಮತ್ತು ನಾಲ್ವರು ಸಹ ಉಪಾಧ್ಯಾಯರಿದ್ದರು. ಇವರು ಆ ಹಳ್ಳಿಯ ಶಾಲೆಗೆ ದೂರದ ಪಟ್ಟಣದಿಮ್ದ ಬಂದು ಹೋಗುತ್ತಿದ್ದರು. ಪಾರ್ಟಿ-ಗೀರ್ಟಿ ಕೊಡಿಸಿಕೊಂಡು ಹಳ್ಳೀಯ ಮುಖಂಡನ ಜೊತೆಗೆ ಸ್ನೇಹದಿಂದಿದ್ದರು. ಒಮ್ಮೆ ಮುಖ್ಯೋಪಾಧ್ಯಾಯನ ವರ್ಗಾವಣೆ ಆಯಿತು. ಹೊಸದಾಗಿ ಬಂದ ಮುಖ್ಯೋಪಾಧ್ಯಾಯ ಹಳ್ಳಿಯಲ್ಲೇ ವಾಸಕ್ಕೆ ತೊಡಗಿದ. ಶಾಲೆಯನ್ನು ಅಭಿವೃಧ್ಧಿಪಡಿಸಲು ಶುರು ಮಾಡಿದ. ಪಟ್ಟಣದಿಂದ, ಬಂದಾಗ ಬರುವ ಹೋಗುವಾಗ ಬರುವ ಶಿಕ್ಷಕರಿಗೆ ಶಿಸ್ತು ಬೋಧಿಸಿದ.
 
ಸಹ ಉಪಾಧ್ಯಾಯರುಗಳು ಸಿಟ್ಟಿಗೆದ್ದರು. ಹಳೆಯ ಗೆಳೆಯ ಗ್ರಾಮ ಮುಖಂಡನನ್ನು ಜೊತೆಗೆ ಸೇರಿಸಿಕೊಂಡರು. ಯೋಜನೆ ಮಾಡಿ ಮುಖ್ಯೋಪಾಧ್ಯಾಯನ ಮೇಲೆ ಹುಡುಗಿ ಕೆಣಕಿದ ಆರೋಪ ಹೊರಿಸಿದರು. ಟಿವಿ ಮಾಧ್ಯಮವನ್ನು ಕರೆಸಿದರು. ಊರಿನ ಜನರಿಂದ ಹೊಡೆಸಿದರು. ಪ್ರತಿ ಹಂತದ ಹೊಡೆತವನ್ನು ಟಿವಿ ಸೆರೆ ಹಿಡಿಯುತ್ತಿರುವಾಗ ಸಂಭ್ರಮಗೊಂಡ ಜನರು ತಮ್ಮದೂ ಮುಖ ಕಾಣಲೆಂದು ತಾವೂ ನೀತಿಯ ನೇತಾರರು ಎಂದು ತೋರಿಸಲು ಮತ್ತೆ ಮತ್ತೆ ಮನ ಬಂದಂತೆ ಮುಖ್ಯೋಪಾಧ್ಯಾಯನಿಗೆ ಹೊಡೆದರು. ಟಿವಿಗೆ ಮೂರು ದಿವಸದ ನ್ಯೂಸ್ ಗೆ ಗ್ರಾಸ ಒದಗಿತು. ಆ ಚಾನಲ್ ನ ಟಿ ಆರ್ ಪಿ ಹೆಚ್ಚಿತು. ಅದರ ಉದ್ಯಮಪತಿಗೆ ಒಳ್ಳೆ ಲಾಭವಾಯಿತು. ಆಶ್ಚರ್ಯ, ಛೂಬಿಟ್ಟ ಹುಡುಗಿ ಗ್ರಾಮಮುಖಂಡನ ಮಗಳೆ ಆಗಿರಬೇಕೆ?
 
ಉದಾ ೨: ಅಂತರಾಷ್ಟ್ರೀಯ

ಮೂರುವರ್ಷದ ಆದಿವಾಸಿ ಮಗುವೊಂದು ಕುಟುಂಬದಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಅಳುತ್ತಿದೆ. ಆಕಾಶ್ದಿಂದ ರಣಹದ್ದುಗಳು ಅದನ್ನು ನೋಡಿದವು. ಅವು ಹಸಿದಿದ್ದವು. ಮಗುವಿನ ಮೇಲೆ ಎರಗಲು ತೊಡಗಿದವು. ಮಾಧ್ಯಮ ಪ್ರತಿನಿಧಿಯೊಬ್ಬನ ಕಣ್ಣಿಗೆ ಆ ದೃಶ್ಯ ಕಣ್ಣಿಗೆ ಬಿತ್ತು. ಅದನ್ನು ಅವನ್ನು ಚಿತ್ರಿಸಿಕೊಳ್ಳುತ್ತಾ ಹೋದ. ಎಲ್ಲಿಯವರೆಗೆ ಎಂದರೆ ಆ ರಣಹದ್ದುಗಳು ಮಗುವನ್ನು ಕುಕ್ಕಿ ಕುಕ್ಕಿ ಸಾಯಿಸಿ ಕಿತ್ತುತಿನ್ನುವವರೆಗೆ.
ಈ ದೃಶ್ಯವನ್ನು ಸೆರೆ ಹಿಡಿದುದಕ್ಕಾಗಿ ಅವನಿಗೆ ಅಂತರಾಷ್ಟ್ರೀಯ ಮಾಧ್ಯಮ ಪ್ರಶಸ್ತಿಗಿಟ್ಟಿತು. ಮಧ್ಯಮದೊಡೆಯ ಮತೆ ಮತ್ತೆ ಆ ದೃಷ್ಯವನ್ನು ಪ್ರಸಾರ ಮಾಡಿಸುವ ಮೂಲಕ ತನ್ನ ಲಾಭ ಹೆಚ್ಚಿಸಿಕೊಂಡ.
ಎರಡೂ ಸಂದರ್ಭವನ್ನು ಗಮನಿಸಿ. ಎರಡೂ ಕಡೆ ಸುದ್ದಿ ಮುಖ್ಯವಾಯಿತು. ಮಾನವೀಯತೆ ಮರೆತುಹೋಗಿತ್ತು. ಇದು ಲಾಭದ-ಮಾರುಕಟ್ಟೆ ರಾಜಕೀಯ. ಈಗ ’ಮನುಷ್ಯ’ ಎಲ್ಲಿ? ಹುಡುಕಿಕೊಡಿ.

(ಮುಂದುವರೆಯುವುದು)
  
 
 
 
 
 
Copyright © 2011 Neemgrove Media
All Rights Reserved