ರಾತ್ರಿ ಜರ್ಮನಿಯ ಫ಼ೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ನಮ್ಮ ವಾಸ್ತವ್ಯ. ಹೋಟೆಲ್ ಅದ್ಭುತವಾಗಿತ್ತು. ತೀರಾ ವಿಶಾಲವಾದ ರೂಮುಗಳು. ಚಳಿ ವಿಪರೀತವಾಗಿದ್ದರಿಂದ ಊಟವಾದ ನಂತರ ನಾವೊಂದು ನಾಲ್ಕು ಮಂದಿ ರೂಮಿನಲ್ಲಿಯೇ ಒಂದಷ್ಟು ಗುಂಡು ಹಾಕಿದೆವು. ಕೊಂಚ ಬಿಸಿಯೇರಿದ್ದರಿಂದ ನಾನು ರೂಮಿನಿಂದ ಹೊರಬಂದು ಸುತ್ತಾಡಲು ಹೊರಟೆ. ಲಿಫ್ಟಿಳಿದು ಹೊರಬಂದಾಗ ಭಟ್ಟರು ರೆಸೆಪ್ಷನಿಸ್ಟ್ ಬಳಿ ಇದ್ದ ಸೋಫ಼ಾದಲ್ಲಿ ಕೂತು ಯಾವುದೋ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದರು. ಅವರನ್ನು ಇಷ್ಟು ದಿನದ ಪ್ರವಾಸದಲ್ಲಿ ಒಬ್ಬರೇ ಹೊರಗಡೆ ಬಂದುದನ್ನು ಕಂಡಿರದಿದ್ದರಿಂದ ನನಗೆ ಆಶ್ಚರ್ಯವಾಯಿತು. ’ಇದೇನ್ರೀ ಭಟ್ರೇ, ಇಷ್ಟು ಹೊತ್ತಲ್ಲಿ ಹೊರಗಡೆ ಕೂತಿದ್ದೀರಾ ಏನ್ ಸಮಾಚಾರಾ’ ಅಂದೆ. ನಾನು ಬೆಚ್ಚನೆಯ ಉಡುಪು ಧರಿಸಿ ಹೊರಗಡೆ ಹೊರಟಿದ್ದನ್ನು ಗಮನಿಸಿ ಅವರಿಗೂ ಆಶ್ಚರ್ಯವಾಗಿತ್ತು. ’ನಾವು ಕುಡಿದ ಜರ್ಮನಿ ರಂ ಭಯಂಕರ ಸ್ಟ್ರಾಂಗ್ ಮಾರಾಯ್ರ, ಸಿಕ್ಕಾಪಟ್ಟೆ ವಾಸನೆ. ನಮ್ಮ ಹೆಂಗಸರಿಗೆ ಗೊತ್ತಾದಂತೆ ಕಾಣ್ತದೆ. ಅದಕ್ಕೇ ಅವರೆಲ್ಲಾ ಮಲಗಿದ ನಂತರ ಹೋಗೋಣ ಎಣಿಸಿ ಇಲ್ಲಿ ಕೂತಿದ್ದೀನಿ’, ಅಂದ ಅವರ ಮುಖ ನೋಡಿದ ನನಗೆ ಆ ಮೂವರು ಹೆಂಗಸರು ಇವರೊಟ್ಟಿಗೆ ರಾಮಾಯಣ ಯುದ್ದವನ್ನೇ ಮಾಡಿರಬಹುದೆನಿಸಿ ಅವತ್ತು ಮಧ್ಯಾಹ್ನ ನಡೆದ ಘಟನೆಯ ನೆನಪಾಯಿತು.
ಮಧ್ಯಾಹ್ನ ಜರ್ಮನಿಯ ಕಲೋನ್ ನಗರದಲ್ಲೆಲ್ಲಾ ಅಡ್ಡಾದಿಡ್ಡಿ ಓಡಾಡಿ ಜ್ಯೂಜ಼ರ್ ನಮಗೆ ಹೇಳಿದ್ದ ಜಾಗ ತಲುಪಿದಾಗ ಇನ್ನೂ ಹಲವರು ಬಂದಿಲ್ಲವೆಂದು ಜ್ಯೂಜರ್ ಗೊಣಗಾಡತೊಡಗಿದ್ದ. ಅವನಿಗೆ ಶಾಪಿಂಗ್ ಗಾಗಿ ಹೋಗಿದ್ದವರನ್ನು ಕರೆತರುವುದೇ ದೊಡ್ಡ ತಲೆನೋವಾಗಿತ್ತು. ನಾನು, ಕಪ್ಪದ್ ಬೇಗನೇ ಬಂದು ಮಾತಾಡುತ್ತಾ ನಿಂತಿದ್ದೆವು. ನಮ್ಮೊಡನೆ ಬಾರಿನಲ್ಲಿ ಕೊಂಚ ಹೊತ್ತು ಕೂತಿದ್ದು ಹೆಂಗಸರು ಬೈಯುತ್ತಾರೆಂದು ಸರಸರನೆ ಕುಡಿದು ಎದ್ದು ಹೋಗಿದ್ದ ಭಟ್ಟರು ಒಬ್ಬರೇ ದಡದಡನೆ ಓಡುತ್ತಾ ಬಂದವರೇ ’ಎಲ್ಲಿ ಮಾರಾಯ್ರ, ಎಲ್ಲ ಬಂದು ಆಯಿತಾ’ ಅಂದವರನ್ನು ’ಅಲ್ರೀ ಭಟ್ಟರೇ, ಹೆಂಗಸರು ಬೈಯುತ್ತಾರೆಂದು ಅವಸರದಿಂದ ಎದ್ದು ಹೋದವರು ನೀವೊಬ್ಬರೇ ಬರ್ತಿದ್ದೀರಲ್ಲಾ ಎಲ್ಲಿ ನಿಮ್ಮ ಟೀಂ’ ಎಂದು ಕೇಳಿದ್ದಕ್ಕೆ, ’ಅಯ್ಯೋ ಎಲ್ಲೆಲ್ಲಿ ಹುಡುಕೋದು ಮಾರಾಯ್ರ ಎಲ್ಲೂ ಸಿಕ್ಲಿಲ್ಲ, ಎಲ್ಲಿ ತಪ್ಪಿಸಿಕೊಂಡರೋ ಏನೋ, ನಾನು ಸುಮಾರು ಅಂಗಡಿಗಳಲ್ಲೆಲ್ಲಾ ಹುಡುಕಿದೆ, ನಿಮ್ಮ ಕಣ್ಣಿಗೇನಾದ್ರೂ ಬಿದ್ದರಾ?’ ಎಂದು ನನ್ನನ್ನೂ ಕಪ್ಪದ್ ರನ್ನೂ ಏಕಕಾಲಕ್ಕೆ ಪ್ರಶ್ನಿಸಿದರು.
’ಅಲ್ರೀ ಭಟ್ಟರೇ ನಾವು ಕಲೋನ್ ನಗರವನ್ನು ನೋಡುವುದು ಬಿಟ್ಟು ನಿಮ್ಮ ಹೆಂಗಸರನ್ನು ಹುಡುಕುತ್ತಾ ಇರಬೇಕಿತ್ತೇನ್ರೀ, ನೀವು ಅವರಿಗೆ ಬಾರಿಗೆ ಹೋಗುವುದಾಗಿ ಹೇಳಿ ಬಂದಿದ್ರಾ’ ಎಂದು ಕಪ್ಪದ್ ದನಿ ಜೋರು ಮಾಡಿ ಮಾತಾಡುತ್ತಿರುವಾಗಲೇ ಮದ್ಯ ಪ್ರವೇಶಿಸಿದ ನಾನು ’ರೀ ಭಟ್ರೇ, ನಿಮ್ಮ ಹೆಂಡತಿ, ನಾದಿನಿ, ನಿಮ್ಮ ಬೀಗಿತಿ ಮೂವರೂ ಕೈಯಲ್ಲಿ ಬಣ್ಣಬಣ್ಣದ ಕವರ್ ಹಿಡಿದುಕೊಂಡು ಜೋರಾಗಿ ನಗಾಡುತ್ತಾ ಅಂಗಡಿಯೊಂದರ ಮುಂದೆ ಹೋಗುತ್ತಿದ್ದರು ಕಣ್ರೀ, ಅವರ ಹಿಂದೆ ನೀವೂ ಇರಬಹುದೆಂದು ನಾನು ನೋಡಿದೆ, ನೀವಿರಲಿಲ್ಲ. ನಮ್ಮ ಜೊತೆ ಬಾರ್ ನಲ್ಲಿದ್ದರು, ನಿಮ್ಮ ಬಳಿ ಬಂದ್ರು, ಇನ್ನೂ ಸಿಗಲಿಲ್ವಾ’ ಅಂತಾ ನಿಮ್ಮನೆಯವರನ್ನು ಕೇಳಬೇಕೆಂದುಕೊಂಡೆ. ಆದರೆ ಅವರು ನಾವೇ ನಿಮ್ಮನ್ನು ಗುಂಡಾಕಲು ಕರೆದುಕೊಂಡು ಹೋದರೆಂದು ಅಪಾರ್ಥ ಮಾಡಿಕೊಂಡಿಬಿಟ್ರೆ ಕಷ್ಟ ಅಂತ ಕೇಳಲಿಲ್ಲ... ನೀವ್ ನೋಡಿದ್ರೆ ಬಸ್ಸು ಹೊರಡುವ ವೇಳೆಗೆ ಬಂದು ನಮ್ಮ ಹೆಂಗಸರನ್ನು ನೋಡಿದ್ರಾಅಂತೀರಲ್ರೀ...ಇಷ್ಟು ಹೊತ್ತು ಎಲ್ಲಿಗ್ರೀ ಹೋಗಿದ್ರಿ? ಮತ್ತೆ ಗುಂಡು ಹಾಕಲು ಹೋಗಿದ್ರಾ ಹೇಗೆ?’ ಅವರನ್ನು ಕೇಳಿದೆ. ’ಅಯ್ಯೋ ಇಲ್ಲಾ ಮಾರಾಯ್ರ, ನಾನು ನಿಮ್ಮ ಜತೆ ಗುಂಡಾಕಿ ಹೊರಬಂದ ಕೂಡಲೇ ನಮ್ಮ ಹೆಂಗಸರನ್ನು (ಅವರ ಪತ್ನಿ, ನಾದಿನಿ, ಹಾಗೂ ಅವರ ಬೀಗಿತಿ ಮೂವರನ್ನೂ ಒಟ್ಟಿಗೇ ಸೇರಿಸಿ ನಮ್ಮ ಹೆಂಗಸರು ಅಂತಲೇ ಅವರು ಕರೆಯುತ್ತಿದ್ದರು) ಹುಡುಕಲು ಹೊರಟೆ, ಗುರುಬಸವಯ್ಯನವರು ಸಿಕ್ಕಿಬಿಟ್ಟು ಫೋಟೋ ತೆಗೆದುಕೊಡಿ ಅಂತ ಕೇಳಿದರು...ಅವರ ಕ್ಯಾಮರಾದಲ್ಲಿ ಫೋಟೋ ತೆಗೆದು ಕೊಡುವುದೇ ತಡವಾಗಿ ಹೋಯ್ತು, ಅಂತೂ ನೀವು ನಮ್ಮ ಹೆಂಗಸರಿಗೆ ನಾನು ಬಾರಿಗೆ ಬಂದ ವಿಷಯವನ್ನು ತಿಳಿಸಲಿಲ್ಲವಲ್ಲಾ, ಒಳ್ಳೆಯದಾಯಿತು ಬಿಡಿ’ ಅಂದ್ರು.
’ನೀವು ನಮಗೆ ಮುಂಚೆಯೇ ತಿಳಿಸಬೇಕಿತ್ತು ಕಣ್ರೀ, ನಿಮ್ಮ ಹೆಂಗಸರೇನಾದರೂ ನಮ್ಮನ್ನು ನಿಮ್ಮ ಬಗ್ಗೆ ಕೇಳಿದ್ದಲ್ಲಿ ನೀವು ಬಾರ್ ನಲ್ಲಿ ಸಿಕ್ಕಿದ್ದ ವಿಷಯವನ್ನು ಹೇಳಿಬಿಡುತ್ತಿದ್ವಿ. ನಮಗೇನು ಗೊತ್ತು ನೀವು ನಿಮ್ಮ ಹೆಂಗಸರಿಗೆ ತಿಳಿಯದಂತೆ ಸೀಕ್ರೇಟಾಗಿ ಕುಡಿಯುವುದು’ ಅಂದೆ. ’ಸದ್ಯ ಅವರು ನಿಮ್ಮನ್ನು ಮಾತಾಡಿಸದಿದ್ದುದು ನನ್ನ ಪುಣ್ಯ’ ಅಂದವರೇ ’ಇರ್ರಿ ಮಾರಾಯ್ರ, ಅವರನ್ನು ಇನ್ನೊಮ್ಮೆ ಹುಡುಕಿ ಬರುತ್ತೇನೆಂದು’ ಹೇಳಿ ಹೊರಡಲು ರೆಡಿಯಾದರು. ತಕ್ಷಣ ಜ್ಯೂಜರ್ ಅವರನ್ನು ತಡೆದು ’ಸಾರ್, ಆಪ್ ಕಹಾ ಜಾತೇಹೆ, ಇದರ್ ಹೀ ಟೇರಿಯೇ’ ಎಂದು ಗದರಿದ. ಮೊದಲೇ ತಾನು ಹೇಳಿದ ಸಮಯಕ್ಕೆ ಕೆಲವರು ಬಾರದ್ದರಿಂದ ಸಿಟ್ಟು ಬಂದಿತ್ತು. ಇದೀಗ ಬಂದಿದ್ದ ಭಟ್ಟರೂ ಮತ್ತೆ ಹೊರಟಿದ್ದರಿಂದ ಇವರನ್ನೆಲ್ಲಿ ನಾನು ಹುಡುಕಿಕೊಂಡು ಹೋಗಬೇಕೋ ಎಂಬ ಆತಂಕದಿಂದ ಅವರನ್ನು ತಡೆಹಿಡಿದಿದ್ದ.
’ಇವನದೊಂದು ಗೋಳು’, ಎಂದ ಭಟ್ಟರು ತಮ್ಮ ಹೆಂಗಸರನ್ನು ಮರೆತು ನಮ್ಮೊಡನೆ ಹರಟತೊಡಗಿದ್ದರು. ಈಗ ರಾತ್ರಿ ಇವರು ಹೊರಗಡೆ ಇರುವುದನ್ನು ನೋಡಿದರೆ ಮಧ್ಯಾಹ್ನ ತಮ್ಮೊಂದಿಗೆ ಶಾಪಿಂಗ್ ಬಾರದೆ ಒಬ್ಬರೇ ಸುತ್ತಾಡಿದ್ದರಿಂದಲೋ ಅಥವಾ ಜರ್ಮನಿ ರಮ್ಮಿನ ವಾಸನೆ ಅವರ ಮೂಗಿಗೆ ಬಡಿದ ಕಾರಣದಿಂದಲೋ ಇವರ ಫ್ಯಾಮಿಲಿ ಇವರಿಗೆ ಬಹಿಷ್ಕಾರ ಹಾಕಿರಬಹುದೆನಿಸಿತು. ’ಅದ್ಸರಿ ಮಾರಾಯ್ರ, ಇದೇನು ನೀವು ಇಷ್ಟೊತ್ತಲ್ಲಿ ಹೊರಗಡೆ ಹೊರಟಿರಲ್ಲಾ’ ಎಂದು ಆಶ್ಚರ್ಯದಿಂದ ನನ್ನನ್ನು ಕೇಳಿದರು. ’ಹಿಂಗೇ ಸುಮ್ನೇ ಭಟ್ರೇ, ರಾತ್ರಿ ಈ ನಗರ ಹೇಗಿರುತ್ತದೆಂಬ ಕುತೂಹಲಕ್ಕೆ ಸುತ್ತಾಡಲು ಹೊರಟಿದ್ದೇನೆ, ನೀವೂ ಹೇಗಿದ್ದರೂ ಹೊರಗಡೆ ಬಂದಿದ್ದೀರಲ್ಲಾ ಬನ್ನಿ ಒಂದು ಸುತ್ತು ಹಾಕಿ ಬರೋಣ’ ಅಂದ ಕೂಡಲೇ ಗಾಬರಿಯಾದ ಅವರು ಇನ್ನೆಲ್ಲಿ ಇನ್ನೊಂದು ಯುದ್ದವನ್ನು ಎದುರಿಸಬೇಕಾಗುತ್ತೋ ಎಂಬ ಭಯದಿಂದ ’ಇಲ್ಲ ಇಲ್ಲ ನನಗೆ ನಿದ್ದೆ ಬರ್ತಿದೆ, ನೀವು ಹೋಗಿ ಬನ್ನಿ ನೀವೇ ಪುಣ್ಯವಂತರು’ ಎಂದು ನನ್ನ ಪ್ರತಿಕ್ರಿಯೆಗೂ ಕಾಯದೇ ದಡದಡನೆ ಎದ್ದು ಲಿಫ್ಟಿನತ್ತ ಹೋದರು. ನಾನು ಸಾಕಷ್ಟು ಅಲೆದಾಡಿ ಹೊತ್ತಲ್ಲದ ಹೊತ್ತಿನಲ್ಲಿ ರೂಮಿಗೆ ಹೋಗಿ ಮಲಗಿದ್ದೆ.
ಬೆಳಿಗ್ಗೆ ಎದ್ದಾಗ ಕೊಂಚ ತಡವಾಗಿತ್ತು. ನನ್ನ ರೂಮ್ ಮೇಟ್ ಸ್ನಾನ ಮಾಡಲು ಹೋದವರು ಬಾತ್ ರೂಮಿನಿಂದ ಸುಮಾರು ಹೊತ್ತಾದರೂ ಹೊರಗಡೆ ಬರಲಿಲ್ಲ. ಇಂದು ಬೆಳಿಗ್ಗೆ ಸ್ವಿಟ್ಜ಼ರ್ ಲೆಂಡ್ ದೇಶಕ್ಕೆ ಹೋಗಲಿದ್ದೇವೆಂದೂ ಬೇಗನೇ ರೆಡಿಯಾಗಿರೆಂದು ಜ್ಯೂಜ಼ರ್ ರಾತ್ರಿ ಊಟ ಮಾಡುವಾಗಲೇ ಹೇಳಿದ್ದ. ಅವನು ಬೇರೆ ದೇಶಗಳಿಗೆ ಹೋಗುವಾಗಲೆಲ್ಲಾ ಬೇಗನೇ ಎದ್ದು ರೆಡಿಯಾಗಿರಬೇಕೆಂದು ಹೇಳುವುದಲ್ಲದೆ ಬೆಳ್ಳಂಬೆಳಿಗ್ಗೆಯೇ ವೇಕ್ ಅಪ್ ಕಾಲ್ ಮಾಡಿ ಎಚ್ಚರಿಸುತ್ತಿದ್ದ. ನಾನು ಅರ್ಧಗಂಟೆ ಕಾದರೂ ನನ್ನ ರೂಮ್ ಮೇಟ್ ಬಾತ್ ರೂಮಿನಿಂದ ಹೊರಗಡೆ ಬರುವ ಲಕ್ಷಣವೇ ಕಾಣಲಿಲ್ಲ. ನಾನೇ ಬಾಗಿಲು ತಟ್ಟಿ ಕೂಗಿದಾಗ ಅವರು ನೀರು ಕಟ್ಟಿಕೊಂಡುಬಿಟ್ಟಿರುವುದಾಗಿಯೂ ಬಾತ್ ಟಬ್ಬಿನಿಂದ ನೀರು ಹೋಗುತ್ತಿಲ್ಲವೆಂದೂ ಗೊಣಗಾಡಿದರು. ಹಿಂದೊಮ್ಮೆ ಮಾಡಿದಂತೆ ನೀರನ್ನೇನಾದರೂ ಹೊರಗೆ ಚೆಲ್ಲಿ ಕ್ಲೀನ್ ಮಾಡಲು ಕೂತರೇನೋ... ಇವರದೊಳ್ಳೆ ನೀರಿನ ಸಮಸ್ಯೆಯಾಯಿತಲ್ಲಾ ಎಂದುಕೊಂಡು ಹೊರಗೆ ಬರುವಂತೆ ಕರೆದೆ. ಅವರು ಹೊರಗೆ ಬಂದ ನಂತರ ನೋಡಿದರೆ ಬಾತ್ ಟಬ್ಬಿನ ತುಂಬೆಲ್ಲಾ ನೀರು ತುಂಬಿಕೊಂಡಿತ್ತು. ಟಬ್ಬಿನ ಕೆಳಗಡೆ ಇರುವ ನೀರು ಹೊರಹೋಗುವ ರಂಧ್ರಕ್ಕೆ ರಬ್ಬರ್ ವಾಶರ್ ಅನ್ನು ಚೈನ್ ಸಮೇತ ಇಟ್ಟಿರುತ್ತಿದ್ದರು. ಇವರು ಸ್ನಾನ ಮಾಡುವಾಗ ಅದನ್ನು ಕಾಲಿನಿಂದ ತುಳಿದಿದ್ದರಿಂದ ಅದು ರಂಧ್ರದಲ್ಲಿ ಸೇರಿಕೊಂಡು ನೀರು ಹೊರಗೆ ಹೋಗದಂತಾಗಿತ್ತು ನೀರನ್ನು ಹೊರಗೆ ಕಳಿಸಲು ಸುಮಾರು ಅರ್ಧಗಂಟೆಯಿಂದಲೂ ಪ್ರಯತ್ನಿಸುತ್ತಿರುವುದಾಗಿಯೂ, ಸಾಧ್ಯವಾಗುತ್ತಿಲ್ಲವೆಂದೂ ಅವರು ಬೇಸರದಿಂದ ಹೇಳಿದರು. ಕೆಳಗೆ ರಂದ್ರದ ಮೇಲೆ ಮುಚ್ಚಿಕೊಂಡಿರುವ ರಬ್ಬರ್ ವಾಶರ್ ತೆಗೆಯಿರಿ ಎಂದು ಹೇಳಿದೆ. ನೀರು ಖಾಲಿಯಾಗದಿದ್ದಲ್ಲಿ ನಾನು ಸ್ನಾನ ಮಾಡುವಂತಿರಲಿಲ್ಲ. ಮತ್ತೆ ಟಬ್ಬಿನೊಳಗೆ ಇಳಿದ ಅವರು ರಬ್ಬರ್ ಮುಚ್ಚಳವನ್ನು ಕಿತ್ತರು. ನೀರು ಹೋಗಲಾರಂಭಿಸಿತ್ತು. ಅಂತೂ ಮಂದಸ್ಮಿತರಾದ ಅವರು ಮತ್ತೊಮ್ಮೆ ಸ್ನಾನ ಮಾಡಿ ಹೊರಬಂದರು. ನನಗೆ ಆಶ್ಚರ್ಯ! ಅಷ್ಟೂ ಗೊತ್ತಾಗಬಾರದಾ?! ಈ ಪಾಟಿ ಪ್ರೊಫೆಸರರನ್ನು ಅದೇ ಮೊದಲು ನಾನು ನೋಡಿದ್ದು.
ನಾನು ಅವಸರದಿಂದಲೇ ಸ್ನಾನ ಮಾಡಿ ಲಗೇಜು ಹೊತ್ತು ಕೆಳಗಿಳಿದೆ. ತಿಂಡಿ ತಿನ್ನಲು ರೆಸ್ಟೋರೆಂಟ್ ಬಳಿ ಹೋದಾಗ ನಮಗಿಂತ ಮುಂಚಿತವಾಗಿ ಬಂದಿದ್ದ ಆಂದ್ರ ಪ್ರದೇಶದ ಶೆಟ್ಟರ ತಂಡದ ಇನ್ನೂ ಕೆಲವರು ಅವರ ತಿಂಡಿಯ ಸಮಯ ಮುಗಿದಿದ್ದರೂ ತಿನ್ನುತ್ತಲೇ ಇದ್ದರು. ಬೇರೆಯವರು ಬಂದಲ್ಲಿ ನಮಗೇನೂ ಉಳಿಯುವುದಿಲ್ಲವೆಂಬತೆ ಗಬಗಬನೆ ಅವಸರವಾಗಿ ತಿನ್ನುತ್ತಲೇ ಇದ್ದರು. ಬಹುಶಃ ಅವರಲ್ಲಿ ಒಂದಿಬ್ಬರು ರಾತ್ರಿ ಲಿಫ್ಟಿನಲ್ಲಿ ಹೋಗುವಾಗ ನನ್ನಿಂದ ಗದರಿಸಿಕೊಂಡಿದ್ದವರಿರಬಹುದೆಂದು ಕಾಣುತ್ತೆ. ನನ್ನ ಮುಖ ಕಂಡವರೇ ಇವನಿನ್ನೆಲ್ಲಿ ಮತ್ತೆ ರೇಗಲು ಬರುತ್ತಾನೋ ಎಂಬಂತೆ ಮುಖ ಸಿಂಡರಿಸಿಕೊಂಡು ’ಪದಂಡಿ ಪದಂಡಿ’ ಎಂದು ಸರಸರನೇ ಎದ್ದು ಹೋದ್ರು. ಬೇಗನೇ ತಿಂಡಿ ತಿಂದು ಹೊರಗೆ ಬಂದು ಒಂದಷ್ಟು ಫೋಟೋಸ್ ತೆಗೆದೆ.
ಗುರುಬಸವಯ್ಯನವರು ಕ್ಯಾಮರಾ ಕೈಯಲ್ಲಿ ಹಿಡಿದು ಫೋಟೋ ತೆಗೆದು ಕೊಡಲು ಯಾರಾದರೂ ಸಿಗುತ್ತಾರಾ ಎಂದು ಹುಡುಕಾಡತೊಡಗಿದ್ದರು. ನಾನು ಅವರನ್ನು ನೋಡಿಯೂ ನೋಡದವನಂತೆ ಬೇರೆಕಡೆ ಫೋಟೋ ತೆಗೆಯಲು ಹೋದೆ. ನಾನೊಬ್ಬನೇ ಅಲ್ಲ ಅವರ ಜತೆ ಚೆನ್ನಾಗಿ ಮಾತಾಡುತ್ತಿದ್ದವರೆಲ್ಲಾ ಅವರ ಕೈಯಲ್ಲೋ ಕುತ್ತಿಗೆಯಲ್ಲೋ ನೇತುಹಾಕಿಕೊಂಡಿದ್ದ ಕ್ಯಾಮರವನ್ನು ಕಂಡರೆ ಸಾಕು ಎ ಕೆ ೪೭ ಗನ್ ಕಂಡವರಂತೆ ಅವರಿಂದ ಎಸ್ಕೇಪ್ ಆಗುತ್ತಿದ್ದರು. ಆ ಕ್ಯಾಮರಾದ ಮಹಿಮೆಯಿಂದಲೇ ನಾನೂ ಕೂಡ ಅವರಿಂದ ತಪ್ಪಿಸಿಕೊಳ್ಳುತ್ತಿದ್ದುದು. ಸೂರ್ಯ ಉದಯಿಸಿದ್ದರೂ ಕಲೋನ್ ನಗರದಲ್ಲಿ ಅತಿಯಾದ ಚಳಿಯಿತ್ತು. ತಿಂಡಿ ತಿಂದು ಬಂದವರೆಲ್ಲಾ ಬಸ್ ಹತ್ತಿದ ನಂತರ ಜ್ಯೂಜ಼ರ್ ಮೈಕ್ ನಲ್ಲಿ ಮತ್ತೆ ಕಲೋನ್ ನಗರದ ಬಗ್ಗೆ ಮಾತನಾಡತೊಡಗಿದ್ದ.
ಕಲೋನ್ ನಗರ ಜರ್ಮನಿಯಲ್ಲಿನ ನಾಲ್ಕನೆಯ ದೊಡ್ಡ ನಗರವಾಗಿತ್ತು. ಬರ್ಲಿನ್, ಹ್ಯಾಂಬರ್ಗ್, ಮ್ಯೂನಿಚ್ ನಗರಗಳ ನಂತರದ ಸ್ಥಾನ ಈ ಕಲೋನ್ ನಗರದ್ದಾಗಿತ್ತು. ರಿನೋ ನದಿಯ ದಂಡೆಯ ಮೇಲೆ ಬೆಳೆದುಕೊಂಡಿದ್ದ ನಗರವಿದು. ರೋಮನ್ನರು ಈ ನಗರವನ್ನಾಳಿದ್ದರಿಂದ ಇಲ್ಲಿಯ ಬಹುತೇಕ ಕಟ್ಟಡಗಳು, ಚರ್ಚುಗಳು ರೋಮನ್ ಶೈಲಿಯಲ್ಲಿಯೇ ಇದ್ದವು. ಜರ್ಮನಿಯ ಮಾದ್ಯಮ ಕೇಂದ್ರವೆಂದೂ ಕಲೋನ್ ಹೆಸರುವಾಸಿಯಾಗಿತ್ತು. ಬಹುತೇಕ ರೇಡಿಯೋ, ಟೆಲಿವಿಷನ್ ಕೇಂದ್ರಗಳು ಇಲ್ಲಿ ನೆಲೆಯೂರಿದ್ದವು. ಇಲ್ಲಿ ನಡೆಯುತ್ತಿದ್ದ ಕಲೋನ್ ಕಾರ್ನಿವಾಲ್, ಕಲೋನ್ ಕಾಮಿಡಿ ಫ಼ೆಸ್ಟಿವಲ್ ಯೂರೋಪಿನಲ್ಲಿಯೇ ಪ್ರಸಿದ್ದಿಯಾಗಿದ್ದವು. ಇಲ್ಲಿಯ ಮ್ಯೂಸಿಯಂಗಳು ಜಗತ್ ಪ್ರಸಿದ್ದಿಯಾದುವೆಂದೂ, ಪ್ರವಾಸಿಗರೆಲ್ಲಾ ಅವುಗಳನ್ನು ನೋಡಲೆಂದೇ ಇಲ್ಲಿಗೆ ಬರುತ್ತಾರೆಂದೂ ಜ್ಯೂಜ಼ರ್ ಹೇಳತೊಡಗಿದ್ದ. ದುರಂತವೆಂದರೆ ನಾವು ಯೂರೋಪ್ ಪ್ರವಾಸದಲ್ಲಿ ಯಾವ ದೇಶದಲ್ಲಿಯೂ ಮ್ಯೂಸಿಯಂ ಗಳನ್ನು ನೋಡಲಾಗಲಿಲ್ಲ. ಪ್ಯಾಕೇಜ್ ಪ್ರವಾಸದಲ್ಲಿ ನಮಗಿದ್ದುದು ಸೀಮಿತವಾದ ಸಮಯವಾಗಿದ್ದರಿಂದ ಅವುಗಳನ್ನು ನೋಡುವುದು ಸಾಧ್ಯವಾಗಿರಲಿಲ್ಲ. ಪ್ಯಾರಿಸ್ಸಿನಲ್ಲಿ ನಮಗೆ ಸಮಯವಿತ್ತಾದರೂ ನಮಗೆ ಸರಿಯಾದ ಮಾಹಿತಿ ನೀಡದಿದ್ದರಿಂದ್ಫ಼ ನಾವು ಡಿಸ್ನಿಲ್ಯಾಂಡಿಗೆ ಹೋಗಿ ನಮ್ಮ ಅಮೂಲ್ಯ ಸಮಯವನ್ನು ಮ್ಯೂಸಿಯಂ ನೋಡದೇ ಹಾಳು ಮಾಡಿಕೊಂಡಿದ್ದೆವು.
ರಿನೋ ನದಿಯ ದಂಡೆಯಲ್ಲಿದ್ದರಿಂದ ಕಲೋನ್ ನಗರ ಪ್ರವಾಹ ಭೀತಿಯ ಸಮಸ್ಯೆಯನ್ನು ಎದುರಿಸುತ್ತಿತ್ತು. ನಗರದಲ್ಲಿದ್ದ ಹಲವು ಮುಖ್ಯ ಕಟ್ಟಡಗಳ ಬಗ್ಗೆ ಜ್ಯೂಜ಼ರ್ ವೀಕ್ಷಕ ವಿವರಣೆ ನೀಡುತ್ತಿದ್ದ. ಮುಂದಿನ ಸೀಟಿನಲ್ಲಿ ಅವರ ಹೆಂಗಸರ ಜೊತೆಗೆ ಕೂತಿದ್ದ ಭಟ್ಟರು ಹಿಂದಿರುಗಿ ನೋಡಿ ನಸುನಕ್ಕರು. ಅವರು ನಗುವನ್ನು ಕಂಡಾಗ ರಾತ್ರಿ ಅವರು ಒಬ್ಬರೇ ಕುಳಿತು ಅರ್ಥವಾಗದಿದ್ದರೂ ಜರ್ಮನಿ ಭಾಷೆಯಲ್ಲಿದ್ದ ಮ್ಯಾಗಜ಼ೀನ್ ಒಂದನ್ನು ಗಂಭೀರವಾಗಿ ಗಮನಿಸುತ್ತಿದ್ದುದನ್ನೂ ನೆನೆದು ನನಗೂ ನಗುಬಂತು. ಅವರತ್ತ ನೋಡಿ ಏನೆಂದು ಕೇಳಿದ್ದಕ್ಕೆ ಅವರು ತಮ್ಮ ಸಮಸ್ಯೆ ಬಗೆಹರಿದಿದೆಯೆಂಬುದನ್ನು ಸನ್ನೆ ಮಾಡಿ ತಿಳಿಸಿದರು.
ಇಂದು ನಾವು ಸ್ಚಿಟ್ಜ಼ರ್ ಲೆಂಡ್ ದೇಶಕ್ಕೆ ಹೋಗುತ್ತಿರುವುದಾಗಿಯೂ ಅಲ್ಲಿ ಒಂದೇ ಊರಿನಲ್ಲಿ ಮೂರು ರಾತ್ರಿ ತಂಗಲಿರುವುದಾಗಿಯೂ ಜ್ಯೂಜ಼ರ್ ಹೇಳಿದ ಕೂಡಲೇ ಬಸ್ಸಿನಲ್ಲಿದ್ದ ಮೂರ್ನಾಲ್ಕು ಯುವ ಜೋಡಿಗಳು ಹೋ ಎಂದು ಅತ್ಯಾನಂದವನ್ನು ವ್ಯಕ್ತಪಡಿಸಿದರು. ಅಲ್ಲಿ ಸಿಕ್ಕಾಪಟ್ಟೆ ಚಳಿ ಇರುವುದರಿಂದ ಎಲ್ಲರೂ ತಮ್ಮ ಬೆಚ್ಚನೆಯ ಉಡುಪುಗಳನ್ನು ತೆಗೆದಿಟ್ಟುಕೊಳ್ಳಿರೆಂದು ಜ್ಯೂಜ಼ರ್ ಸಲಹೆ ನೀಡಿದ.
ಸ್ಚಿಟ್ಜ಼ರ್ ಲೆಂಡ್ ಗೆ ಹೋಗುವ ಮಾರ್ಗ ಮಧ್ಯೆ ಟಿ ಟಿ ಸಿ ಎಂಬಲ್ಲಿ ಬಸ್ಸನ್ನು ನಿಲ್ಲಿಸಲಾಯಿತು. ಅಲ್ಲಿ ಊಟ ಮಾಡಿ ಶಾಪಿಂಗ್ ಮಾಡಬಹುದೆಂದು ಹೇಳಿದ್ದರಿಂದ ಎಲ್ಲರೂ ಕೆಳಗಿಳಿದೆವು. ಅದೊಂದು ದಾರಿ ಮಧ್ಯದ ಪುಟ್ಟ ನಗರವಾಗಿತ್ತು. ಹೋಟೆಲುಗಳು, ಅಂಗಡಿಗಳು ಬಹಳವಿದ್ದವು. ಎಲ್ಲರೂ ಅವರವರ ಇಚ್ಚಾನುಸಾರ ಸುತ್ತಾಡಲು ಹೊರಟರು. ನಾನು ಅಲ್ಲಿಯ ಶಾಪಿಂಗ್ ಜಾಗವನ್ನೆಲ್ಲಾ ಸುಮ್ಮನೇ ಸುತ್ತಾಡುವಾಗ ಅಲ್ಲಿಯ ಅಂಗಡಿಯೊಂದರಲ್ಲಿದ್ದ ಗೌತಮ ಬುದ್ದನ ಪುಟ್ಟ ಪ್ರತಿಮೆ ಗಮನ ಸೆಳೆಯಿತು. ಅದನ್ನು ಕಂಡು ಖುಷಿಯಾಗಿ ನೆನಪಿಗಿರಲೆಂದು ತೆಗೆದುಕೊಂಡೆ. ಅದಾಗಲೇ ಸಿಕ್ಕಾಪಟ್ಟೆ ಚಳಿಯಾಗತೊಡಗಿತ್ತು. ಆಗಾಗ್ಗೆ ತುಂತುರು ಮಳೆಯೂ ಬೀಳುತ್ತಿದ್ದರಿಂದ ಅಲ್ಲಿ ಸುತ್ತಾಡುವುದು ವ್ಯರ್ಥವೆನಿಸಿ ಅಲ್ಲಿಂದ ಕೊಂಚ ದೂರ ಹೋದೆ.
ಅಲ್ಲೊಂದು ಪುಟ್ಟದಾದ ಚೊಕ್ಕ ಬಾರಿತ್ತು. ಚಳಿಯಲ್ಲಿ ಅದನ್ನು ಕಂಡಕೂಡಲೇ ಒಳನುಗ್ಗಿದ್ದೆ. ಪ್ರವಾಸದ ಆರಂಭದ ದಿನಗಳಲ್ಲಿ ಎಲ್ಲರೂ ಒಟ್ಟೊಟ್ಟಾಗಿ ಶಾಪಿಂಗ್ ಗೆ ಹೋಗುತ್ತಿದ್ದ ನಮ್ಮ ಬಸ್ಸಿನಲ್ಲಿದ್ದವರು ನಂತರದ ದಿನಗಳಲ್ಲಿ ಒಬ್ಬೊಬ್ಬರೇ ಸುತ್ತಾಡುವುದನ್ನು ರೂಡಿಸಿಕೊಂಡಿದ್ದರಿಂದ ಯಾರು ಎಲ್ಲಿಗೆ ಹೋದರೆಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಒಬ್ಬನೇ ಹತ್ತಿರವಿದ್ದ ಪುಟ್ಟ ಬೆಟ್ಟವೊಂದನ್ನು ನೋಡುತ್ತಾ ಕೂತು ಒಂದೆರಡು ಪೆಗ್ ವಿಸ್ಕಿ ತರಿಸಿಕೊಂಡು ಹೀರತೊಡಗಿದೆ. ತಿನ್ನಲು ಖಾರವಾಗಿರುವಂತೆ ಹಂದಿ ಮಾಂಸವನ್ನು ಮಾಡಿಕೊಂಡು ಬರುವಂತೆ ವೇಟ್ರೆಸ್ ಗೆ ಹೇಳಿದ್ದಕ್ಕೆ ಅವಳು ನಕ್ಕು ನೀವು ಇಂಡಿಯನ್ಸ್ ಬಹಳ ಖಾರ ಇಷ್ಟಪಡುತ್ತೀರಿ ಅಂದಳು. ಹೊರಗೆ ಜಡಿಮಳೆ ಬೀಳುತ್ತಿದ್ದರಿಂದ ಬಾರ್ ಒಳಗಿನ ವಾತಾವರಣ ಹಿತವಾಗಿತ್ತು. ಅಲ್ಲಲ್ಲಿ ಒಂದಿಬ್ಬರು ಪ್ರವಾಸಿಗರು ಕೂತಿದ್ದರಿಂದ ಇತರೆ ನಗರಗಳ ಬಾರ್ ಗಳಲ್ಲಿದ್ದಂತೆ ಗೌಜು ಗದ್ದಲಗಳಿರಲಿಲ್ಲ. ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ನಮ್ಮದೇ ಬಸ್ಸಿನಲ್ಲಿದ್ದ ಉತ್ತರ ಭಾರತದ ಯುವ ಜೋಡಿಯೊಂದು ಒಳಗೆ ಬಂದವರೇ ನನ್ನನ್ನು ಕಂಡು ಹಲೋ ಹೇಳಿ ಮೂಲೆಯೊಂದರಲ್ಲಿ ಕೂತರು. ನಿಧಾನವಾಗಿ ಇನ್ನೂ ಒಂದಿಬ್ಬರು ಬಂದು ಕೂತರು. ನಮ್ಮನ್ನು ಇಳಿಸಿದ್ದ ಪ್ರದೇಶ ಟಿ ಟಿ ಸಿ ಪುಟ್ಟದಾಗಿದ್ದರಿಂದ ಅಲ್ಲಿ ಶಾಪಿಂಗ್ ಪ್ರಿಯರಿಗೆ ಇಷ್ಟವಾದುದೇನೂ ಹೆಚ್ಚಿಗೆ ಸಿಗದಿದ್ದರಿಂದಲೂ, ಸತತವಾಗಿ ಜಡಿಮಳೆ ಬೀಳುತ್ತಿದ್ದರಿಂದಲೂ ಶಾಪಿಂಗ್ ನಲ್ಲಿ ಆಸಕ್ತಿ ಕಳೆದುಕೊಂಡವರು ಕಂಡ ಕಂಡ ಹೋಟೆಲುಗಳಿಗೆ ನುಗ್ಗಿ ಮೆನು ಓದುವಲ್ಲಿ ನಿರತರಾಗಿದ್ದರು. ಹೊರಡಲು ರೆಡಿಯಾಗಿದ್ದ ನಾನು ನಮ್ಮ ಬಸ್ಸಿನಲ್ಲಿದ್ದ ಸುಮಾರು ಜನ ಇಲ್ಲಿಗೇ ಬರತೊಡಗಿದ್ದರಿಂದ ಅಲ್ಲಿಯೇ ಕೂತೆ.
’ಕ್ಯಾ ಆಪ್ ಇದರ್ ಬೇಟ್ಲಿಯಾ, ಭಟ್ ಸಾಬ್ ಆಪ್ ಕೊ ಢೂಂಡ್ ರಹೇಥೆ’ ಎನ್ನುತ್ತಲೇ ಒಳಬಂದರು ಅರಬಿಂದೋ ರಾಯ್. ಭಟ್ಟರು ನಿಮ್ಮನ್ನು ಎರಡು ಬಾರಿ ಕೇಳಿದರೆಂದೂ ನಾನು ನೋಡಲಿಲ್ಲವೆಂದು ಅವ್ರಿಗೆ ತಿಳಿಸಿದ್ದಾಗಿ ಹೇಳಿದವರು ಡ್ರಿಂಕ್ಸೂ ತೆಗೆದುಕೊಳ್ಳದೆ ಬಂದಷ್ಟೇ ವೇಗವಾಗಿ ಹೊರಗೆ ಹೊದರು. ಐದು ನಿಮಿಷವಾಗುವಷ್ಟರಲ್ಲಿ ಅವರು ಮತ್ತೆ ಹಾಜರ್. ಜತೆಯಲ್ಲಿ ಭಟ್ಟರಿದ್ದರು. ’ಎಲ್ಲೆಲ್ಲಿ ಮಾರಾಯ್ರಾ, ನಿಮ್ಮನ್ನು ಹುಡುಕೋದು, ನಾನು ಶಾಪಿಂಗ್ ಏರಿಯಾದಲ್ಲೆಲ್ಲಾ ಹುಡುಕಿದೆ. ನೀವ್ ನೋಡಿದ್ರೆ ಇಲ್ಲಿ ಆರಾಮಾಗಿ ಕೂತಿದ್ದೀರಾ, ರಾಯ್ ಸಾಹೇಬ್ರು ನೀವಿಲ್ಲಿರುವುದಾಗಿ ಹೇಳಿ ಕರೆದುಕೊಂಡು ಬಂದರು’ ಅಂದ ಭಟ್ಟರು ಚಳಿಯಿಂದಾಗಿ ಎರಡೂ ಕೈಗಳನ್ನೂ ಬಿಗಿಯಾಗಿ ಕಟ್ಟಿಕೊಂಡು ಕೂತವರೇ ’ಯಾವುದು ಹೇಳಿದ್ದೀರಿ? ಚೆನ್ನಾಗಿದೆಯಾ, ನಾನೂ ಅದನ್ನೇ ಹೇಳುತ್ತೇನೆ,’ ಅಂದವರೇ ಬಾರ್ ನಲ್ಲಿದ್ದ ಹುಡುಗಿಯನ್ನು ನಮ್ಮ ಬೆಂಗಳೂರಿನ ಕಡೆ ಕೂಗಿ ಕರೆಯುವ ಹಾಗೆ ಕೂಗಿದರು. ಅವರ ಕೂಗಿನಿಂದ ಗಾಬರಿಯಾದಂತೆ ಕಂಡ ಅಕ್ಕ ಪಕ್ಕ ಕೂತಿದ್ದವರೆಲ್ಲಾ ಏನಾಯಿತೆಂಬಂತೆ ನಮ್ಮ ಕಡೆಯೇ ನೋಡತೊಡಗಿದ್ದರು. ’ ರೀ ಭಟ್ರೇ, ಹಂಗೆಲ್ಲಾ ಜೊರಾಗಿ ಕೂಗಬಾರದು ಕಣ್ರೀ, ಅವರೇ ಬರ್ತಾರೆ ಇರಿ’ ಎಂದೆ. ನಮ್ಮ ಸಂಭಾಷಣೆಯ ತಲೆ ಬುಡ ಅರ್ಥವಾಗದ ಬಂಗಾಳಿ ಅರಬಿಂದೋ ರಾಯ್ ಉತ್ತರ ಭಾಷಿಕರು ಕೂತಿದ್ದ ಕಡೆಗೆ ಹೋದರು. ’ನಮ್ಮ ಹೆಂಗಸರದ್ದೊಂದು ಗೋಳು ಕಣ್ರೀ, ನಾನು ಐದು ನಿಮಿಷ ಕಾಣದಿದ್ದರೆ ಹುಡುಕಿಕೊಂಡು ಬಂದು ಬಿಡುತ್ತಾರೆ, ಅದಕ್ಕೇ ಬೇಗ ತರಲೆಂದು ಹಾಗೆ ಕೂಗಿದೆ’ ಅಂದ ಭಟ್ಟರು ಡ್ರಿಂಕ್ಸ್ ಬರುವುದು ತಡವಾದುದಕ್ಕೆ ಚಡಪಡಿಸತೊಡಗಿದ್ದರು. ’ಅಲ್ರೀ ಭಟ್ರೇ, ನಿಮ್ಮ ಹೆಂಗಸರ ಭದ್ರತೆಗಾಗಿ ನೀವು ಬಂದಿರುವುದೋ ಅಥವಾ ನಿಮ್ಮ ಭದ್ರತೆಗಾಗಿ ನಿಮ್ಮ ಹೆಂಗಸರು ಬಂದಿದ್ದಾರೋ’ ಎಂದು ಕಿಚಾಯಿಸಿದೆ. ವಿಸ್ಕಿ ಬಂದ ಕೂಡಲೇ ಒಂದು ಗುಟುಕು ಏರಿಸಿದ ಭಟ್ಟರು ’ಅಯ್ಯೋ, ಸುಮ್ನಿರಿ ಮಾರಾಯ್ರಾ ಅವರದೊಂದು ಗೋಳು’ ಎಂದು ಉಳಿದಿದ್ದನ್ನು ಒಂದೇ ಸಿಪ್ಪಿಗೆ ಮುಗಿಸಿ ’ಅಮೇಲೆ ಸಿಗ್ತೀನಿ’ ಎಂದು ಓಡಿದ್ದರು.
ಯೂರೋಪಿನಲ್ಲಿ ಪ್ರತ್ಯೇಕ ಬಾರುಗಳು ಇರುತ್ತವಾದರೂ ಪ್ರತೀ ರೆಸ್ಟೊರಾಂಟ್ ಊಟ ಮಾಡುವ ಸ್ಥಳದಲ್ಲಿಯೂ ಒಂದಿಲ್ಲೊಂದು ಡ್ರಿಂಕ್ಸ್ ಸಿಕ್ಕೆ ಸಿಗುತ್ತದೆ. ಅಲ್ಲಿನ ಚಳಿಗೆ ಜನರು ಒಂದೆರಡು ಗುಟುಕು ವಿಸ್ಕಿ ಇತರ ಡ್ರಿಂಕ್ಸ್ಗಳಿಲ್ಲದೆ ಇರುವುದಿಲ್ಲ. ಹಾಗಾಗಿ, ನಾನು ಡ್ರಿಂಕ್ಸ್ ಬಗ್ಗೆ ಹೇಳಿದ ಮಾತ್ರಕ್ಕೆ ಅದನ್ನು ಕಂಠಮಟ್ಟ ಕುಡಿತವೆಂದುಕೊಳ್ಳಬಾರದು.
ಎಲ್ಲರೂ ಇಂದು ಬೇಗನೇ ಬಸ್ಸಿನಲ್ಲಿ ಬಂದು ಕೂತಿದ್ದರು. ಚಳಿಯ ಪ್ರಭಾವದಿಂದಲೋ, ಶಾಪಿಂಗ್ ನಲ್ಲಿ ತಮಗೆ ಇಷ್ಟವಾದ್ದು ಸಿಗದಿದ್ದುದರಿಂದಲೋ ಇನ್ನೂ ಸಮಯವಿರುವಂತೆಯೇ ಬಸ್ಸಿಗೆ ಹತ್ತಿ ಜ್ಯೂಜ಼ರ್ ಇಂಥಾ ಜಾಗದಲ್ಲಾ ಶಾಪಿಂಗ್ ಗೆ ನಿಲ್ಲಿಸುವುದು ಎಂದು ಕೆಲವರು ಗೊಣಗಾಡತೊಡಗಿದ್ದರು. ಮಾರ್ಗ ಮದ್ಯದಲ್ಲಿ ಸಿಕ್ಕ ಪಟ್ಟಣದಲ್ಲಿ ಬಸ್ಸು ನಿಲ್ಲಿಸದೆ ದೊಡ್ಡ ನಗರಕ್ಕೇ ಶಾಪಿಂಗ್ ಗೆ ಕರೆದುಕೊಂಡು ಹೋಗಬೇಕೆಂಬುದು ಅವರ ಇರಾದೆಯಗಿತ್ತು. ನಮ್ಮ ಬಸ್ಸಿನಲ್ಲಿ ಇಪ್ಪತು ಪರ್ಸೆಂಟ್ ಜನ ಯೂರೋಪ್ ನೋಡಲು ಬಂದಿದ್ದರೆ ಎಂಭತ್ತು ಪರ್ಸೆಂಟ್ ಜನ ಶಾಪಿಂಗ್ಗೇ ಬಂದವರಂತಿದ್ದರು.
ಬಸ್ಸಿನಲ್ಲಿ ಕೂತ ಕೂಡಲೇ ನಿದ್ರೆಯಾವರಿಸಿತ್ತು. ಅರ್ಧ ಗಂಟೆ ನಿದ್ರೆ ಮಾಡಿ ಎದ್ದಾಗ ಬಸ್ಸು ನಮ್ಮ ಮಲೆನಾಡಿನಂತೆ ಸುಂದರ ಪ್ರದೇಶದ ತಿರುವುಗಳಲ್ಲಿ ಸುತ್ತಿ ಸುತ್ತಿ ಹೋಗುತ್ತಿತ್ತು. ಇಂದು ಬೆಳಿಗ್ಗೆ ಜ್ಯೂಜ಼ರ್ ಬಸ್ಸಿನ ಮುಂಭಾಗದಲ್ಲಿ ಕೂತಿದ್ದವರನ್ನೆಲ್ಲಾ ಹಿಂಭಾಗಕ್ಕೆ, ಹಿಂಭಾಗದಲ್ಲಿ ಕೂತಿದ್ದವರನ್ನೆಲ್ಲಾ ಮುಂಭಾಗಕ್ಕೆ ಕೂರಿಸಿದ್ದ. ಹಾಗೆ ಕೂರಿಸುವುದೂ ಪ್ಯಾಕೇಜ್ ಪ್ರವಾಸದ ನಿಯಮವೇನೋ ಎಂಬಂತೆ ಯಾಕೆಂದು ಕೇಳದೆ ಅವನು ಹೇಳಿದಂತೆ ಎಲ್ಲರೂ ಸ್ಥಾನ ಅದಲು ಬದಲು ಮಾಡಿಕೊಂಡಿದ್ದೆವು. ೩ ಗಂಟೆಯ ಹೊತ್ತಿಗೆ ನಾವು ಸ್ವಿಟ್ಜ಼ರ್ ಲೆಂಡ್ ದೇಶದ ಗಡಿಯೊಳಗೆ ಹೋದೆವು. ಸ್ವಲ್ಪ ದೂರ ಹೋಗುವಷ್ಟರಲ್ಲಿ ’ಲುಕ್ ಅಟ್ ದಟ್ ಬ್ಯೂಟಿಫ಼ುಲ್ ಲೇಕ್’ ಎಂಬ ಗಡುಸಾದ ದನಿ ಸ್ಪೀಕರಿನಲ್ಲಿ ಕೇಳಿಸಿದ್ದರಿಂದ ಮಲಗಿದ್ದವರೆಲ್ಲರೂ ಗಡಿಬಿಡಿಯಿಂದ ಎದ್ದು ಕೂತರು. ಆನಂದದಿಂದ ಜೋರಾಗಿ ಗೊರಕೆ ಹೊಡೆಯುತ್ತಾ ನಿದ್ರಿಸುತ್ತಿದ್ದ ಗುರುಬಸವಯ್ಯನವರಂತೂ ಗಾಬರಿಯಿಂದ ಆ ಶಬ್ಧಕ್ಕೆ ಬೆಚ್ಚಿಬಿದ್ದು ’ಏನಾಯ್ತು, ಏನಾಯ್ತು’ ಎಂದರು. ’ಆರ್’ ನಮ್ಮ ಚಾಲಕನಷ್ಟೇ ಅಲ್ಲ ಆತ ನಮ್ಮ ಪ್ರವಾಸದ ಗೈಡ್ ಕೂಡಾ ಎಂದು ಜ್ಯೂಜ಼ರ್ ಆತನನ್ನು ಪರಿಚಯ ಮಾಡಿಕೊಡುವಾಗ ಹೇಳಿದ್ದನಾದರೂ ’ಆರ್’ ಇದುವರೆವಿಗೂ ಎಲ್ಲಿಯೂ ಯಾವ ಸ್ಥಳದ ಬಗ್ಗೆಯೂ ನಮಗೆ ವಿವರಿಸಿರಲಿಲ್ಲ. ಇಂದೇ ಪ್ರಥಮವಾಗಿ ಅವನು ಮೈಕಿನಲ್ಲಿ ದೂರದಲ್ಲೆಲ್ಲೋ ಕಾಣುತ್ತಿದ್ದ ಕೆರೆಗಳನ್ನು ಬ್ಯೂಟಿಫ಼ುಲ್ ಕೆರೆಗಳನ್ನು ನೋಡಿರೆಂದು ಜೋರಾಗಿ ಮೈಕಿನಲ್ಲಿ ಹೇಳಿದ್ದ. ಇದುವರೆವಿಗೂ ಅವನು ಗೈಡ್ ಆಗಿ ನಮಗೆ ತೋರಿಸಿದ್ದು ದೂರದಲ್ಲೆಲ್ಲೋ ಕಾಣುತ್ತಿದ್ದ ಆ ಎರಡು ಕೆರೆಗಳನ್ನು ಮಾತ್ರ! ಗಾಬರಿಯಿಂದ ಎದ್ದವರಿಗೆಲ್ಲಾ ಅವನು ಮತ್ತೆ ಕೆರೆಗಳ ಬಗ್ಗೆ ಹೇಳಿದ್ದು ಕೇಳಿ ನಿರಾಸೆಯಾಗಿತ್ತು. ಅಯ್ಯೋ ಇಷ್ಟೇನಾ ಎಂದವರೇ ಮತ್ತೆ ನಿದ್ರೆಗೆ ಶರಣುಹೋದರು. ಗುರುಬಸವಯ್ಯನವರಂತೂ ತಮ್ಮ ನಿದ್ರೆಗೆ ಭಂಗ ತಂದ ’ಆರ್’ ನನ್ನು ದೂಷಿಸುತ್ತಾ ಮತ್ತೆ ಮಲಗಿ ಗೊರಕೆಗೆ ಜಾರಿದ್ದರು.
ಹಿಟ್ಲರನ ರಕ್ತಸಿಕ್ತ ಅಧ್ಯಾಯದ ನಾಡಿನಿಂದ ಅಗಾಧ ಪ್ರಾಕೃತಿಕ ಸೌಂದರ್ಯದಿಂದ ಕೂಡಿದ್ದ ಸುಂದರ ದೇಶಕ್ಕೆ ನಾವು ಕಾಲಿಟ್ಟಿದ್ದೆವು. ಇಡೀ ವಿಶ್ವದ ಸಾಮಾನ್ಯ ಜನತೆ, ಪ್ರಕೃತಿ ಪ್ರಿಯರು ಈ ದೇಶವನ್ನು ಭೂಲೋಕದ ಸ್ವರ್ಗವೆಂದು ಕರೆದರೆ, ವಿಶ್ವಾದ್ಯಂತ ಬೇರೆ ಬೇರೆ ಮೂಲಗಳಿಂದ, ಕಾಳದಂಧೆಗಳಿಂದ ಹಣ ಸಂಪಾದಿಸುವ ಖದೀಮರುಗಳು ತಮ್ಮ ಕಪ್ಪು ಹಣವನ್ನೆಲ್ಲಾ ಈ ದೇಶಕ್ಕೆ ತಂದು ಸುರಿದು ಈ ದೇಶವನ್ನು ಸ್ವರ್ಗ ಮಾಡಿಕೊಂಡಿದ್ದರು. ’ನಾವೀಗ ಅತ್ಯಂತ ಸುಂದರ ರಿನೋ ಫ಼ಾಲ್ಸ್ ನೋಡಲು ಹೋಗುತ್ತಿದ್ದೇವೆ’ ಎಂದು ಜ್ಯೂಜ಼ರ್ ಹೇಳಿದ ಕೂಡಲೇ ನಿದ್ರಾವಸ್ಥೆಯಲ್ಲಿದ್ದವರೆಲ್ಲಾ ಎದ್ದು ಕೂತರು.