(ಪುಟ ೨೪) ನಿನ್ನೊಳಗೆ ನೀನೆಷ್ಟೆ ಹುಡುಗೀ...
ಬೇಲಾ ಮರವ೦ತೆ
ಹೊಟ್ಟೆಗೆ ಹೊತ್ತಿಗೆ ಸರಿಯಾಗಿ ಊಟ, ದೇಹಕೆ ನಿದ್ರೆ ಶುಚಿ ರುಚಿ ಎಲ್ಲ ಕೊಟ್ಟು, ಮನಸ್ಸನ್ನು ದುಡಿಸಿಕೊಳ್ಳಲು ಅತೀವವಾದ ಕೆಲಸವೇನೂ ಇಲ್ಲದಾಗ, ಅಕ್ಕಪಕ್ಕ ಗೌಜಿ ಗದ್ದಲದ ಸುಳಿವಿಲ್ಲದಾಗ, ಮೌನ ತನ್ನನ್ನು ತಾನು ನಿಮ್ಮೊಳಗೆ ಇನ್ವೈಟ್ ಮಾಡಿಕೊಂಡು ಸ್ವಸ್ಥವಾಗಿ ಸೆಟಲ್ ಆಗುತ್ತದೆ. ಹಾಗೇ ಟೈಮ್ ಪಾಸ್ ಗೆ ಅಂತ ಅದು (ಮೌನ) ಅಂತರಾಳದ ಜೊತೆಗೆ ಚಿಕ್ಕ ಸಂಭಾಷಣೆ ಶುರು ಮಾಡುತ್ತದೆ. ಅಂತರಾಳದ ಆಟ ಗೊತ್ತಲ್ಲವಾ...ಸುಲಭಕ್ಕೆ ಬಿಚ್ಚಿಕೊಳ್ಳದು! ಭಯಂಕರ ಸ್ಕೋಪು. ನಾವಾಗಿ ನಾವು ನಮ್ಮ ದೇಹ ಮನಸ್ಸಿನ ಮೇಲೆ ಹಿಡಿತ ತೋರಿಸಿ ಯಾರ ಮುಂದಾದರೂ ಬಿಚ್ಚೋಣಾ ಅಂದರೂ...ಊಹೂಂ! ಈರುಳ್ಳಿಯ ಸಿಪ್ಪೆ ಸುಲಿದಂತೆ ಒಂದೋ ಎರಡೂ ಪದರಗಳನ್ನು ತೆರೆಯಬಹುದೇ ಹೊರತು ಪೂರ್ತಿ ತೆಗೆದುಕೊಳ್ಳುವುದಿಲ್ಲ. ಅಂಥದ್ದರಲ್ಲಿ ಸುತ್ತಮುತ್ತಲ ಸ್ತಬ್ಧತೆ ಸುಂದರವೆನಿಸಿ ಮೌನ ಮನದೊಳಗೆ ನೆಲೆಸಿ, ಅದು ಅಂತರಾಳದ ಜೊತೆ ಮಾತಿಗೆ ಕೂತಾಗ ಅವೆರಡು ಶುರು ಮಾಡುವ ಗಲಾಟೆ ಯಾವ ಮಹಾಭಾರತಕ್ಕೂ ಕಮ್ಮಿ ಇಲ್ಲ!
ಹಾಗೊಂದು ಮಹಾಭಾರತದ ದಿನ ಒಳಗಿದ್ದ ಅಂತರಾಳವೆಂಬ ಭಯೋತ್ಪಾದಕ ಒಂದು ಸಣ್ಣ ಪ್ರಶ್ನೆ ಹಾಕಿತು. ’ಲೇ ಹುಡುಗಿ...ನಿನ್ನೊಳಗೆ ನೀನೆಷ್ಟು?’ ಅಂತು. ಒಳಗೆ, ಸುತ್ತೆಲ್ಲ ಮೌನವಲ್ಲವೇ...ಜೋರು ಪ್ರತಿಧ್ವನಿ!
’ಅರೆ! ಏನ್ ನಾನ್ಸೆನ್ಸ್? ಏನ್ ಕೇಳ್ತಿದೀಯ? ನನ್ನೊಳಗೆ ನಾನೇ. ಪೂರಾ ನಾನೇ’. ಅಂತರಾಳವನ್ನು ಬಿಟ್ಟು ಅದೇನಿತ್ತೋ ಅದು ಬಾಯಕೈಲಿ ಉತ್ತರ ಹೇಳಿಸಿತು.
’ಪೂರಾ ನೀನೇನಾ?’ ಅಂತರಾಳ ಅವತ್ತು ಮಾತಾಡುವ ಮೂಡಿನಲ್ಲಿತ್ತು!
’ಹೂಂ.’
’ನೀನಂದ್ರೆ?’
’ಬೇಲಾ...’
ಬೇಲಾ ಅಂದ್ರೆ?
’ಈ ಅಪ್ಪ ಅಮ್ಮಂದಿರ ಮಗಳು...ಅದು ಬಿಟ್ರೆ...ಒಂದು ಹುಡುಗಿ, ಒಬ್ಬ ಮಗಳು, ಒಬ್ಬ ತಂಗಿ, ಒಬ್ಬ ಅಕ್ಕ, ಒಬ್ಬ ಪ್ರಜೆ, ಒಂದು ವ್ಯಕ್ತಿ, ಒಬ್ಬ ಸ್ಟೂಡೆಂಟ್, ಒಬ್ಬ ಗೆಳತಿ...ಒಬ್ಬ ಹೆಂಡತಿ...ಒಬ್ಬ ಸೊಸೆ......ಬಹುಷಃ ಭವಿಷ್ಯದಲ್ಲಿ ಒಬ್ಬ ಅಮ್ಮ! ನೋಡು ನಾನೆಷ್ಟೆಲ್ಲಾ!!’
’ಅವೆಲ್ಲಾ ನಿನ್ನ ಪಾತ್ರಗಳು. ಒಪ್ಪಿದೆ. ಸುಮಾರಿವೆ. ನಿನ್ನ ಬ್ಯುಸಿ ಇಡ್ತಿವೆ. ಅದು ಬಿಟ್ಟು ನೀನು?’
’ಅದು ಬಿಟ್ಟು ನಾನು ಅಂದ್ರೆ ಏನು ಹೇಳಲಿ?’
’ಅದು ಬಿಟ್ಟು ನೀ...ನು ಏನೋ ಅದನ್ನೇ ಹೇಳು’.
ನನಗೆ ಏನು ಉತ್ತರ ಕೊಡಬೇಕೋ ಗೊತ್ತಾಗಲಿಲ್ಲ. ಇಷ್ಟೆಲ್ಲಾ ಪರಿಚಯ ಹೇಳಿದ ಮೇಲೂ ’ನೀನೇನು’ ಅಂತ ಯಾರಾದರೂ ನಿಮ್ಮನ್ನ ಕೇಳಿದರೆ ಏನು ಹೇಳ್ತೀರಿ? ನನಂತೂ ಗೊತ್ತಾಗಲಿಲ್ಲ. ಸೋಲೊಪ್ಪಿಕೊಳ್ಳಲು ಈಗೋ ರೆಡಿ ಇರಲಿಲ್ಲ. ಏನಾದರೂ ಮಸ್ಕಾ ಮಾಡಿ ಏನು ಉತ್ತರ ಇರಬಹುದು ಅಂತ ಅಂತರಾಳದಿಂದಲೇ ತಿಳಿದುಕೊಳ್ಳಬೇಕಿತ್ತು. ’ನನಗೆ ಹೆಂಗೆ ಉತ್ತರ ಕೊಡಬೇಕು ಅಂತ ಗೊತ್ತಾಗ್ತಾ ಇಲ್ಲವಲ್ಲಾ...’ ಟ್ರಿಕ್ ಮಾಡಿ ಕೇಳಿದೆ.
ಸ್ವಲ್ಪ ಹೊತ್ತು ಮೌನ. ’ನಿನ್ನೊಳಗೆ ಏನಿದೆ ಗೊತ್ತಾ?’ ಕೇಳಿತು.
’ಹೌದು. ನನ್ನೊಳಗೆ ಅಂದ್ರೆ ನನ್ನ ದೇಹ, ಮನಸ್ಸು ತಾನೇ? ಆತ್ಮನೂ ಇರುತ್ತೆ ಅಂತರಪ್ಪಾ’ ನನಗೆ ಅಷ್ಟೂ ಗೊತ್ತಾಗಲ್ವಾ! ಟಕ್ ಅಂತ ಉತ್ತರ ಹೇಳಿದ್ದೆ.
’ಹಾಗಾದ್ರೆ ನಿನ್ನ ದೇಹದೊಳಗೆ ಏನು?’
ಟೂ ಮಚ್! ಕೆಲಸ ಇಲ್ಲ ಅಂತ ತಲಹರಟೆ ಮಾಡೋದಾ?! ನನಗೆ ಕೋಪ ಬಂತು. ’ನನ್ನ ದೇಹದೊಳಗೆ ಪಂಚೇಂದ್ರಿಯಗಳಿವೆ, ಮೆದುಳು, ತಲೆ ಬುರ‍್ಡೆ ಇವೆ. ಒಂದಷ್ಟು ಅಂಗಗಳಿವೆ-ಉಸಿರಾಡಕೆ, ಹೆರಕೆ, ಜೀರ್ಣ ಮಾಡಕೆ...ಸ್ನಾಯು, ಮಾಂಸ, ನರ ನಾಡಿ, ರಕ್ತ, ಮಲ ಹಾಳುಮೂಳು ಇವೆ’...ಅಸಡ್ಡೆಯಿಂದಲೇ ಹೇಳಿದೆ.
’ಗುಡ್! ಜಾಣೆ. ಸ್ವಲ್ಪ ಸೈನ್ಸ್ ಬರುತ್ತೆ! ಈಗ ನಿನ್ನ ಮನಸ್ಸಿನಲ್ಲೇನಿದೆ ಹೇಳು’ ಅಂತು.
ಮನಸ್ಸಲ್ಲಿ ಏನಿದೆ ಅಂತ ಧಡಾರ್ ಅಂತ ಹೇಗೆ ಹೇಳಬಹುದು? ನಾನು ಯೋಚಿಸಿದೆ. ’ಮನಸ್ಸಲ್ಲಿ ಪ್ರೀತಿ ಇದೆ. ಜೀವ ಇದೆ. ಬೇಕಾದಷ್ಟು ಭಾವನೆಗಳಿವೆ...ಅದೆ ಮೋಹ-ಕಾಮ-ಕ್ರೋಧ...ಇನ್ನೂ ಏನೇನೋ ಲಿಸ್ಟ್ ಇದೆಯಲ್ಲಾ ಅವೂ ಎಲ್ಲಾ ಸುಮಾರಾಗಿವೆ...ಯೋಚನೆಗಳಿವೆ, ಆಸೆ, ಕನಸು, ಹಾಡು, ಶಕ್ತಿ, ಭಯ, ಸಾಕಷ್ಟು ನೆನಪುಗಳು ಎಲ್ಲ ಇವೆ...ಹಾಗೇ ಸುಮಾರು ಜಾಗ ಖಾಲೀನೂ ಇದೆ...’ ನನಗೆ ಗೊತ್ತಿದ್ದನ್ನ ಹೇಳಿದೆ.
’ಸರಿ ಕಣೆ ಹುಡ್ಗಿ...ಇನ್ನೊಂದ್ ಪ್ರಶ್ನೆ...ನಿನ್ನೊಳಗೆ ಯಾರ್ಯಾರಿದ್ದಾರೆ? ಹೇಳ್ತಿಯಾ’ ಕೇಳಿತು.
ನಾನು ಸುಮಾರು ಹೊತ್ತು ಯೋಚನೆ ಮಾಡಿದೆ. ಪ್ರಶ್ನೆಯೇನೋ ತುಂಬಾ ಸುಲಭದ್ದೆನಿಸಿತ್ತು. ಆದರೆ ಉತ್ತರ...’ಟೈಮ್ ತಗೋಬಹುದಾ?’ ಕೇಳಿದೆ.
’ಓ.....ಎಷ್ಟಾದರೂ ತಗೋ. ಹಾಗಂತ ಇಡೀ ಲೈಫ್ ತಗೋಬೇಡ್ವೇ ಮಾರಾಯ್ತಿ...’ ಸಣ್ಣಗೆ ನಕ್ಕಿತು.
ಕಣ್ಣು ತೆರೆದೆ. ನನ್ನೊಳಗೆ ಯಾರ್ಯಾರು? ಎಷ್ಟಾದರೂ ಟೈಮ್ ತಗೋ ಬಹುದಿತ್ತು...ಅದಕ್ಕೇನು! ಪ್ರಪಂಚದಲ್ಲಿದ್ದ ಟೈಮ್ ಎಲ್ಲಾ ನನ್ನ ಹತ್ತಿರವೇ ಇತ್ತು. ಮನೆಯೆಂಬ ನಾ ಮಾಡಿಕೊಂಡಿದ್ದ ಗೂಡೊಳಗೆ ನನ್ನ ಉಸಿರು ಬಿಟ್ಟರೆ ಮತ್ತೇನೂ ಅಲುಗಾಡುತ್ತಿರಲಿಲ್ಲ. ಆಗಾಗ ಹೊಟ್ಟೆಯಲ್ಲಿ ಸಣ್ಣದೊಂದು ಮೊರೆತ...ಆಲ್ ಈಸ್ ವೆ..ಲ್...ಕೆಲಸ ನಡೆಯುತ್ತಿದೆ ಎಂದು ಸಾರುವಂತೆ. ಸಂಜೆ ಮನೆಗೆ ಬಂದು ಕದ ತಟ್ಟುವ ಸಂಗಾತಿ ಬೇರೊಂದು ಊರಿಗೆ ಕೆಲಸಕ್ಕೆ ಹೋಗಿದ್ದ. ಕದಕ್ಕೆ ಗಟ್ಟಿ ಚಿಲಕ ಹಾಕಿದ್ದೆ. ನನ್ನ ಫೋನ್ ಅವನ ಲಂಚ್ ಅಥವಾ ಕೆಲಸ ಮುಗಿದ ಟೈಮ್ ನಲ್ಲಿ ಮಾತ್ರ ಜೀವ ಪಡೆದುಕೊಳ್ಳುತ್ತಿತ್ತಾದ್ದರಿಂದ, ಇದು ಸ್ಕೂಲಿಗೆ ಓದುವ ಸಮಯವಾದ್ದಾರಿಂದ ಗೊತ್ತಿದ್ದ ಇದ್ದಬದ್ದ ಪರಿಚಯಸ್ತರು ಈಗ ಫೋನ್ ಮಾಡುವುದಿಲ್ಲ. ಹಾಗಾಗಿ ಫೋನ್ ಸಧ್ಯಕ್ಕೆ ಕೋಮಾನಲ್ಲಿತ್ತು. ಸುತ್ತ ಅಲುಗಾಡದೆ ನಿಂತಿರುವ ಕುರ್ಚಿ, ಮೇಜು, ಟಿವಿ, ಫ್ರಿಜ್ಜು, ಕಪಾಟು, ಪುಸ್ತಕಗಳು, ಗೋಡೆಮೇಲಿದ್ದ ಫೋಟೋಗಳು, ಅಲಂಕಾರಕ್ಕಿಟ್ಟಿದ್ದ ಬಟ್ಟೆಯ ಹೂಗಳು, ಮುಖ ಒರೆಸಿಕೊಂಡು ಅಲ್ಲೇ ಹಾಕಿದ್ದ ಟವಲ್ಲು, ಅರ್ಧ ಕುಡಿದಿಟ್ಟಿದ್ದ ನೀರಿನ ಲೋಟ...ಎಲ್ಲಕಡೆ ಗಾಢವಾದ ಮೌನ. ನಿಶ್ಚಲತೆ. ತಪಸ್ಸಿನಲ್ಲಿವೆ ಎನಿಸಿತು. ನಾನೊಬ್ಬಳೇ ನಿರಂತರ ಬಡಿದುಕೊಳ್ಳುತ್ತಿದ್ದೇನೆ, ನಾನೊಬ್ಬಳೇ ಇಲ್ಲಿ ಅಲುಗಾಡುತ್ತಿರುವವಳು ಉಸಿರಾಡುತ್ತಿರುವವಳು!! ಕಣ್ಣು ಬಿಟ್ಟು ಅವನ್ನೆಲ್ಲಾ ಅವುಗಳ ನಿಶ್ಚಲ ಸ್ತಿತಿಯಲ್ಲಿ ನೋಡಿದಾಗ ಅತೀವವಾದ ಸಂತೋಷ ಆಗಿತ್ತು. ಕೆನ್ನೆಯೆಲ್ಲ ನೀರು. ಇದು ಮೊದಲ ಬಾರಿಯ ಅನುಭವ. ಅವುಗಳು ಸತ್ತಂತಿರುವುದಕ್ಕಲ್ಲ. ನಾನು ಬದುಕಿದ್ದೇನೆ!!!!! ಓಹ್...ನಾನು ಎಷ್ಟೋಂದು ಬದುಕಿದ್ದೇನೆ!!!!! ಎನ್ನುವ ಅರಿವಿನ ಸಣ್ಣ ಸೆಲೆಬ್ರೇಷನ್. ಇಷ್ಟು ದಿನ ಬದುಕಿರುವುದು ಒಂದು ’ಸೋ ವಾಟ್?’ ಥರದ ಸಂಗತಿಯಾಗಿತ್ತು. ಅಥವಾ ಸಂಗತಿಯೇ ಆಗಿರಲಿಲ್ಲ. ನಾನು ಬದುಕಿದ್ದೇನಾ ಅಂತ ಹುಟ್ಟಿದಾಗಿನಿಂದ, ಬುಧ್ದಿ ಬಂದಾಗಿನಿಂದ ಯಾವತ್ತೂ ಚೆಕ್ ಮಾಡಿಕೊಂಡಿರಲಿಲ್ಲ. ನನ್ನನ್ನು ನಾನು ಮುಟ್ಟಿ ಫೀಲ್ ಮಾಡಿಕೊಂಡಿರಲಿಲ್ಲ. ಅವತ್ತು ಮಾಡಿದ್ದೆ. ಕೈ ಕಾಲು ತಡವಿಕೊಂಡಿದ್ದೆ. ಆ ಬಡಿತಕ್ಕೆ, ಅಲ್ಲಾಗುತ್ತಿದ್ದ ಹರಿತಕ್ಕೆ, ಆ ಮೊರೆತಕ್ಕೆ ತುಂಬಾ ಪ್ರೀತಿಯ ಒಂದು ಹಗ್ ಕೊಡಬೇಕೆನಿಸಿತು. ’ಥ್ಯಾಂಕ್ಯೂ ಸೋ ಮಚ್...’ ಅಂತ ಕೈಮುಗಿದುಕೊಂಡಿದ್ದೆ. ಮೊದಲ ಬಾರಿ...ಈ ದೇಶಕ್ಕೆ ಬಂದು ಒಂಟಿಯಾಗಿದ್ದೇನೆ ಎಂಬುದು ನಿಜವೆನಿಸಲಿಲ್ಲ. ಆ ಮೌನ, ಆ ಅನುಭವ, ಅಂತರಾಳ, ಅದರ ಸಿಲ್ಲಿ ಕ್ವಿಜ಼್ ಗಳು ನನ್ನ ಜೊತೆ, ಸದಾ....ಜೊತೆ ಇದ್ದವು! ನಾನು...ಕಪಿ. ನೋಡಿಕೊಂಡಿರಲಿಲ್ಲ ಅಷ್ಟೇ.
ಅಂತರಾಳಕ್ಕೆ ಆಮೇಲೆ ಸಿಗ್ತೀನಿ ಅಂತ ಮಾತುಕೊಟ್ಟು, ಮೌನಕ್ಕೆ ಬಾಯ್ ಹೇಳಿ ಕಳಿಸಿ, ಆಗಿದ್ದ ಆನಂದವನ್ನೆಲ್ಲಾ ಮನಸ್ಸಿಗೆ ಬಂದಿದ್ದ ಬೇಂದ್ರೆಯವರ ನನ್ನ ಪ್ರೀತಿಯ ಪದ್ಯವೊಂದಕ್ಕೆ ಹಾಕಿ ಹೆಂಗೆ ಬರುತ್ತೋ ಹಂಗೆ ಕೂಗಿಕೊಂಡಿದ್ದೆ. ಇಷ್ಟು ಕಷ್ಟಪಟ್ಟು ದುಡಿಯುತ್ತಿರೋ ನನ್ನ ದೇಹದೊಳಗಿನ ಸೈನಿಕರಿಗೆ ಏನಾದರೂ ಟ್ರೀಟ್ ಕೊಡಬೇಕು ಅಂತ. ಫ್ರಿಜ್ಜಿನಲ್ಲಿರುವ ತಂಗಳುಗಳ ಸಹವಾಸಕ್ಕೆ ಹೋಗದೆ ಹೊಸದಾಗಿ ಅಡಿಗೆ ಮಾಡಿಕೊಂಡು ಚೊಕ್ಕವಾಗಿ ಉಂಡು..ಪೇಪರ್ ಪೆನ್ನು ಹಿಡಿದುಕೊಂಡು ಕೂತೆ. ಅಸೈನ್ಮೆಂಟ್ ಇತ್ತಲ್ಲಾ...ನನ್ನೊಳಗೆ ಯಾರ್ಯಾರು? ಉತ್ತರ ಬರೀಬೇಕಿತ್ತು.
(ಮುಂದುವರಿಯುವುದು)