ಅಂಗಳ      ಹಾಡು ಹಕ್ಕಿ
Print this pageAdd to Favorite


ದಿಲ್ ಕೊಡುತ್ತೀನಿ ಅಂದ್ರೆ ಹೋಗೋ ಅದ್ಯಾವನಿಗೆ ಬೇಕು...ಪರ್ಸು ಕೊಡು ಅಂದಳಾಕೆ...


ವಿವೇಕ್ ವಿಶ್ವನಾಥ

ಇದು ನನ್ನ ಹೋದ ವರ್ಷದ ವ್ಯಾಲೆಂಟೈನ್ ಟ್ರಾಜೆಡಿ.
 
ಎರಡು ವಾರದಿಂದಲೇ ಪ್ರಿಯಾ ಇನ್ಡೈರೆಕ್ಟ್ ಆಗಿ ಫೆಬ್ರವರಿ ಬರ್ತಿದೆ ಅಂತ ನೆನಪಿಸುತ್ತಿದ್ದಳು. ಆಫೀಸಿನಲ್ಲೂ ಕ್ಯಾಲೆಂಡರಿನಲ್ಲಿ ೧೪ರ ಮೇಲೆ ರೆಡ್ ಹಾರ್ಟ್ ಅಂಟಿಸಿ ಬಿಟ್ಟಿದ್ದರು. ವ್ಯಾಲೆಂಟೈನ್ಸ್ ಪಾರ್ಟಿಗೆ ಎಲ್ಲರೂ ೧೨ ಗಂಟೆಗೆ ಲಂಚ್ ಗೆ ಸೇರಬೇಕು ಅಂತ ಮೆಮೋ ಬೇರೆ. ಇನ್ನು ವ್ಯಾಲೆಂಟೈನ್ಸ್ ಡೇ ನ ಮರೆಯೋಕಾಗುತ್ತ!

ಮದುವೆಗೆ ಮುಂಚೆ ವ್ಯಾಲೆಂಟೈನ್ಸ್ ಡೇ ಅಂದ್ರೆ ಒಂಥರ ಥ್ರಿಲ್ ಇರ್ತಿತ್ತು. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಮ್ಮ ಕ್ಲಾಸ್ ಮೇಟ್ಸ್ ಎಲ್ಲರೂ ಒಟ್ಟಿಗೇ ಯಾವುದಾದ್ರೂ ಹಿಂದಿ ಅಥವಾ ಇಂಗ್ಲಿಷ್ ಸಿನೆಮಾಗೆ ಹೋಗಿ ಬರ್ತಾ ಇದ್ವಿ. ಒಟ್ಟಿಗೆ ಹೋಗಿ ಊಟ ಮಾಡಿ ಐಸ್ ಕ್ರೀಂ ಅದು ಇದೂ ತಿಂದು ಬರ್ತಾ ಇದ್ವಿ. ಹುಡುಗಿಯರು ಅವರದ್ದೇ ಗಾಡಿ ತಂದಿಲ್ಲ ಅಂದ್ರೆ ನಮ್ಮ ಹಿಂದೆ ಕೂರಿಸಿಕೊಂಡು ಥಿಯೇಟರ್ ಗೆ, ಹೋಟೆಲ್ ಗೆ ಅಥವಾ ಮನೆಗೆ ಬಿಡುವ ಚಾನ್ಸ್ ಸಿಗುತ್ತಿತ್ತು. ಮದುವೆ ಆದ ಹೊಸದರಲ್ಲೂ ಚನ್ನಾಗಿತ್ತು. ಹೊಸಾ ಹೆಂಡತಿ ಜೊತೆ ಹುಡುಗಾಟ ಆಡುವುದು ಮಜ ಎನ್ನಿಸಿತ್ತು.
 
 
ಆ ಟೈಮ್ ನಲ್ಲೇ ನಾನು ನನ್ನ ಕಾಲ ಮೇಲೆ ನಾನೇ ಸುತ್ತಿಗೇಲಿ ಹೊಡೆದುಕೊಂಡೆ ಎನ್ನಬಹುದು. ಮದುವೆಯಾದ ಮೊದಲ ವರ್ಷದ ವ್ಯಾಲೆಂಟೈನ್ಸ್ ಡೇ ಅಷ್ಟು ಹೊತ್ತಿಗೆ ಪ್ರಿಯಾ ಕೂಡಾ ವೀಸಾ ಮಾಡಿಸಿಕೊಂಡು ಅಮೆರಿಕಾಗೆ ಬಂದು ಬಿಟ್ಟಿದ್ದಳು. ಆಗ ನಾನು ಅವಳಿಗೆ ಆರು ನೂರು ಡಾಲರ್ ತೆತ್ತು ಒಂದು ರೂಬಿಯ ಹಾರ್ಟ್ ಶೇಪಿನ ಪೆಂಡೆಂಟ್ ಕೊಡಿಸಿದ್ದೆ. ಪ್ರಿಯಾ ತುಂಬ ಇಷ್ಟ ಪಟ್ಟಿದ್ದಳು. ಅದಾದ ಮೇಲೆ ಪ್ರತೀ ವರ್ಷಾನೂ ಏನಾದ್ರೂ ಒಂದು ಕೊಡಿಸುತ್ತಿದ್ದೆ ಆದರೂ ಅವಳು ಸುಮ್ಮನಿರುತ್ತಿರಲಿಲ್ಲ. ’ಮೊದಲನೇ ವರ್ಷ ಆರು ನೂರಕ್ಕೆ ಕೊಡಿಸಿದೆ...ಈಗ ಬರ್ತಾ ಬರ್ತಾ ಜಿಪುಣ ಆಗ್ತಾ ಇದಿಯಾ ನೀನು..ಅಥವಾ ನನ್ನ ಮೇಲೆ ನಿಂಗೆ ಪ್ರೀತಿ ಕಡಿಮೆ ಆಗ್ತಾ ಇದೆ ಅಲ್ವಾ..’ ಅಂತ ದೂರುತ್ತಿದ್ದಳು. ’ಪ್ರತೀ ವರ್ಷ ನೀನು ಬೆಟರ್ ಗಿಫ್ಟ್ ಕೊಡಬೇಕು ತಾನೇ?’ ಅವಳ ಲಾಜಿಕ್ ನನಗೆ ಅರ್ಥಾನೇ ಆಗಿರಲಿಲ್ಲ. ಆದರೆ ಅವಳು ಮಾತ್ರ ತುಂಬಾ ಜಾಣೆ. ಮೊದಲ ವರ್ಷ ನನಗಿಷ್ಟ ಅಂತ ರಸಗುಲ್ಲಾ ಮಾಡಿಕೊಟ್ಟಿದ್ದಳು. ಎರಡನೇ ವರ್ಷ ಇನ್ನೊಂದೆರಡು ಸ್ವೀಟ್ಸ್ ಮಾಡಿದ್ದಳು. ಅವಳು ಪ್ರತೀ ವರ್ಷ ವೆರೈಟಿ ಹೆಚ್ಚಿಸಿದಂತೆ ನಾನು ಪ್ರತೀ ವರ್ಷ ಖರ್ಚು ಮಾಡುವ ಹಣ ಹೆಚ್ಚಾಗಬೇಕು...ಇದು ಮಾತಿನಲ್ಲಿ ಹೇಳದ ನಿಯಮ.
 
 
ಎರಡು ವರ್ಷದ ಹಿಂದೆ ನಾನೂ ಜಾಣತನ ಮಾಡಿ ಪ್ರಿಯಾಳ ಹೆಸರಲ್ಲಿ ಹೋಗಿ ಫ್ಲಾಟ್ ಸ್ಕ್ರೀನ್ ಟಿವಿ ತಂದಿದ್ದೆ. ಬೈಸಿಕೊಳ್ಳುವುದು ಇರಲಿಲ್ಲ. ಈ ವರ್ಷ ಏನು ಮಾಡಬಹುದು ಯೋಚಿಸಿದೆ. ನಮಗೀಗ ಎರಡು ಮಕ್ಕಳು. ಒಂದು ಮಾರ್ಟ್ಗೇಜ್. ಒಂದು ಕೆಟ್ಟ ಎಕಾನಮಿ. ಇದನ್ನು ನೇರವಾಗಿ ನನ್ನ ಹೆಂಡತಿಗೆ ಹೇಳದೆ ಏನಾದ್ರೂ ತುಂಬಾ ರೊಮ್ಯಾಂಟಿಕ್ ಆಗಿ ಮಾಡಬೇಕೆನಿಸಿತು. ಆಫೀಸಿನಲ್ಲಿ ಅವತ್ತು ಬೇಗ ಕೆಲಸ ಮುಗಿಸಿ ಚೀಪ್ ಅಂಡ್ ಬೆಸ್ಟ್ ಆಗಿ ಹೆಂಡತಿಯನ್ನು ಇಂಪ್ರೆಸ್ ಮಾಡುವುದು ಹೇಗೆ ಅಂತ ಹುಡುಕಾಡಿದೆ. ಒಂದು ಜನ್ಮಕ್ಕೆ ಸಾಕಾಗುವಷ್ಟು ಮಾಹಿತಿ ಬಂತು. ನಿಮ್ಮನ್ನೇ ಒಂದು ಕೆಂಪು ಹೃದಯವನ್ನಾಗಿ ಮಾಡಿ ಹೆಂಡತಿ ಮುಂದೆ ಇಡಿ ಎಂದು ಯಾರೋ ಐಡಿಯಾ ಕೊಟ್ಟಿದ್ರು! ನಿಜವಾಗಲೂ ಚೀಪ್ ಅಂಡ್ ಬೆಸ್ಟ್!! ಈ ಇಂಟರ್ ನೆಟ್, ಗೂಗಲ್ ಇಲ್ಲದಿದ್ದರೆ ನನ್ನಂತಹ ಲಕ್ಷಾಂತರ ದಡ್ಡ ಗಂಡಂದಿರ ಗತಿ ಏನಾಗುತ್ತಿತ್ತೋ?!
 
ಪ್ರಿಯಾಗೆ ಒಂದು ಚೂರು ಅನುಮಾನ ಬರದಂತೆ ಮಾಡಬೇಕಿತ್ತು. ಮೈಕಲ್ಸ್ ಅನ್ನುವ ಕ್ರಾಫ್ಟ್ಸ್ ಸಾಮಾನು ಸಿಗುವ ಅಂಗಡಿಗೆ ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದ ಒಂದು ಹುಡುಗಿಗೆ ನನ್ನ ಐಡಿಯಾ ಹೇಳಿಕೊಂಡೆ. ’ಓ ಮೈ ಗಾಶ್! ನಿನ್ನ ಹೆಂಡತಿ ಎಷ್ಟು ಲಕ್ಕಿ’ ಅಂತ ಅವಳು ಅಳೋದೊಂದು ಬಾಕಿ!! ಹೋಗಲಿ ಬಿಡು ಮಾರಾಯತಿ ನನ್ನ ಹೆಂಡತಿಗೆ ಹಾಗಂತ ಅನ್ನಿಸದಿದ್ದರೂ ನಿನಗಾದ್ರೂ ಅನ್ನಿಸಿತಲ್ಲ ಎಂದು ಮನಸ್ಸಿನಲ್ಲಿ ಸಮಾಧಾನ ಮಾಡಿಕೊಂಡೆ. ಆ ಹುಡುಗಿ ನನಗೆ ಕಾರ್ಡ್ ಬೋರ್ಡ್ ಉಪಯೋಗಿಸಿ ದೊಡ್ದದೊಂದು ಹಾರ್ಟ್ ಶೇಪ್ ಮಾಡಿಕೊಳ್ಳಲು ಹೇಳಿಕೊಟ್ಟಳು.
 
ಅಷ್ಟು ದೊಡ್ಡ ಹಾರ್ಟ್ ಅನ್ನು ಪ್ರಿಯಾಗೆ ಗೊತ್ತಾಗದೆ ಮನೆಯಲ್ಲಿ ಹೇಗೆ ಮಾಡಲಿ?
ನನ್ನ ಫ್ರೆಂಡ್ ಅನಂತನಿಗೆ ಫೋನ್ ಮಾಡಿ ಅವರ ಮನೆ ಗರಾಜ್ ನಲ್ಲಿ ನನ್ನ ಆರ್ಟ್ ಪ್ರಾಜೆಕ್ಟ್ ಮಾಡಲು ಜಾಗ ಕೇಳಿದೆ. ಪ್ರಿಯಾಗೆ ಚೂರೂ ಗೊತ್ತಾಗಬಾರದೆಂದು ಗಂಡ ಹೆಂಡತಿ ಇಬ್ಬರಲ್ಲೂ ಕೇಳಿಕೊಂಡೆ. ಎರಡು ದಿನ ಆಫೀಸಿನಿಂದ ನೇರ ಅವರ ಮನೆಗೆ ಬಂದು ವರ್ಕ್ ಮಾಡಿದೆ. ಮೂರನೇ ದಿನ ಯಾಕೋ ಅನಂತ್ ಸ್ವಲ್ಪ ಟೈಟ್ ಆಗಿ ಮಾತಾಡಿಸಿದ. ’ಏನಾಯ್ತೋ...ನಾನು ಇಲ್ಲಿ ಜಾಗ ಯೂಸ್ ಮಾಡಿಕೊಳ್ತಿರೋದು ತೊಂದರೆ ಆಗ್ತಿದೆಯಾ?’ ಎಂದು ಕೇಳಿದ್ದೆ. ನಾನು ಮಾಡುತ್ತಿರುವ ಪ್ರಾಜೆಕ್ಟ್ ಕೇಳಿ ಅವನ ಹೆಂಡತಿ ’ನೀವೂ ಇದೀರಿ, ದಂಡಕ್ಕೆ’ ಎಂದು ಅವನಿಗೆ ಬೈದಿದ್ದರು! ಅದರ ಪಾಪವೂ ನನ್ನ ಮೇಲೆ ಬಂತು.
 
 
ವ್ಯಾಲೆಂಟೈನ್ಸ್ ದಿನ ಬಂದೇಬಿಟ್ಟಿತು. ಮಧ್ಯಾನ್ಹ ವ್ಯಾಲೆಂಟೈನ್ ಲಂಚ್ ಮುಗಿಸಿಕೊಂಡು ಪ್ರಿಯಾ ಆಫೀಸಿನಲ್ಲಿ ಇರುವುದನ್ನು ಪಕ್ಕಾ ಮಾಡಿಕೊಂಡು ಅನಂತು ಮನೆಯಿಂದ ನನ್ನ ದೊಡ್ಡ ಹಾರ್ಟನ್ನು ಮನೆಗೆ ಸಾಗಿಸಿದೆ. ಅದು ಸುಮಾರಾದ ಶೇಪ್ನಲ್ಲಿ ಬಂದಿತ್ತು. ರೂಮಲ್ಲಿ ಜೋಡಿಸಿಟ್ಟು ಬಂದೆ. ಈ ಸಾರಿ ಪ್ರಿಯಾ ನನ್ನ ಕೆಲಸ ನೋಡಿ ಫ಼್ಲೋರ್ ಆಗಿ ಬಿಡ್ತಾಳೆ ಎಂದುಕೊಂಡು ಖುಷಿ ಆಯಿತು.
 
ಆಫೀಸ್ ಮುಗಿಸಿ ಪ್ರಿಯಾಗೆ ಫೋನ್ ಮಾಡಿ ಇಬ್ಬರೂ ಒಟ್ಟಿಗೇ ಕಾಫಿಗೆ ಹೋಗೋಣ ಎಂದು ಕೇಳಿದೆ. ತುಂಬಾ ಖುಷಿಯಿಂದ ಒಪ್ಪಿದ್ದಳು. ಒಂದು ಬಂಚ್ ಕೆಂಪು ಗುಲಾಬಿ ಹಿಡಿದುಕೊಂಡು ಆಫೀಸಿಗೆ ಹೋಗಿದ್ದೆ. ಈಲ್ಲರೂ ನನ್ನನ್ನೇ ಮೆಚ್ಚುಗೆಯಿಂದ ನೋಡಿದ್ದರು. ಪ್ರಿಯಾ ಎಲ್ಲರೆದುರಿಗೆ ನಾಚಿಕೆ ಪಟ್ಟುಕೊಂಡಿದ್ದಳು. ಇಬ್ಬರೂ ಹೊಸದಾಗಿ ಮದುವೆಯಾದವರ ಥರ ಖುಷಿಯಾಗಿ ಕಾಫಿ ಕುಡಿದು, ಮಕ್ಕಳನ್ನು ಬೇಬಿ ಸಿಟ್ಟಿಂಗ್ ನಿಂದ ಕರೆದುಕೊಂಡು ಮನೆಗೆ ಬಂದ್ವಿ. ಅವಳನ್ನು ಕೆಳಗೇ ನಿಂತು ನಾನು ಕರೆದಾಗ ಬರಲು ಹೇಳಿ ರೂಮಿಗೆ ಹೋದೆ. ಅವಳು ಕುತೂಹಲದಿಂದ ಅರಳಿಬಿಟ್ಟಿದ್ದಳು. ಅರ್ಜೆಂಟಲ್ಲಿ ಕಷ್ಟಪಟ್ಟು ನನ್ನ ದೊಡ್ಡ ಹಾರ್ಟಿನಲ್ಲಿ ಕೂತು ಅದನ್ನು ಮುಚ್ಚಿಕೊಂಡು ಪ್ರಿಯಾಳನ್ನು ಕರೆದೆ. ಅವಳು ಬಂದು ನಿಂತು ’ಏನೋ ಇದು?’ ಎಂದದ್ದು ಕೇಳಿಸಿ....’ಓ ಪ್ರಿಯಾ ಆ..ಪ್ರಿಯಾ...ಆ ಆ ಆ...ನನ್ನ ದಿಲ್ ನಿನಗಾಗಿ...’ ಅಂತ ನನಗೆ ಎಷ್ಟು ಬರುತ್ತೋ ಅಷ್ಟೂ ಚನ್ನಾಗಿ ಹಾಡಿ ಹಾರ್ಟಿನಿಂದ ಹೊರಗೆ ಬಂದಿದ್ದೆ. ಇದ್ಯಾವ ಹುಚ್ಚಾಟವೆಂಬಂತೆ ನನ್ನ ಕಡೆ ನೋಡುತ್ತಿದ್ದಳು. ಏನೂ ರಿಯಾಕ್ಷನ್ನೇ ಇಲ್ಲ! ಇಷ್ಟ ಆಯ್ತಾ ಎಂದಿದ್ದಕ್ಕೆ ’ಥ್ಯಾಂಕ್ಯೂ ಕಣೋ ನೀನೇ ಮಾಡಿದ್ಯಾ?...ಚನ್ನಾಗಿದೆ..ಇನ್ನು ಮೇಲೆ ಮಗಳ ಆರ್ಟ್ ಪ್ರಾಜೆಕ್ಟ್ ನೀನೇ ಮಾಡಿಸು’ ಎಂದು ಬಿಟ್ಟಳು.
 
ಅಷ್ಟೇನಾ??!! ಮತ್ತೊಮ್ಮೆ ’ನನ್ನ ಈ ದಿಲ್ ನಿನಗಾಗಿ ಪ್ರಿಯಾ’ ಡೈಲಾಗು ಹೊಡೆದೆ. ’ಹೋಗೊ! ನಿನ್ನ ದಿಲ್ ಯಾರಿಗೆ ಬೇಕು!? ಪರ್ಸು ಕೊಡು...ನನಗೇನೋ ಬೇಕು..ನಾನೇ ತಗೋತೀನಿ...ಈಗ ಅಡಿಗೆ ಮಾಡಬೇಕು’ ಎಂದವಳೇ ಹೊರಟೇ ಹೋದಳು.
 
ಅಷ್ಟರಲ್ಲಿ ಮೇಲೆ ಬಂದಿದ್ದ ಮಕ್ಕಳು ನನ್ನ ಹಾರ್ಟಿನೊಳಗೆ ಕೂತು ಆಟ ಆಡುತ್ತಿದ್ದರು. ನಾನು ಪರ್ಸು ಹಿಡಿದುಕೊಂಡು ಅಡಿಗೆ ಮನೆಗೆ ಬಂದೆ.

(ಪಿ ಎಸ್: ನಿಜ ಏನಂದ್ರೆ ನನ್ನ ಪ್ರಿಯಾ ಮಾತಿಗೆ ಮಾತ್ರ ಬಯ್ಯುವ ಹೆಂಡತಿ. ಅವಳು ಇಲ್ಲದಿದ್ರೆ ನನಗೆ ಏನೂ ಬರೆಯೋದಿಕ್ಕೇ ಆಗಲ್ಲ ಅನ್ನೋ ಕಾರಣಕ್ಕೆ ಅವಳ ಹೆಸರನ್ನು ಅವಳ ಪರ್ಮಿಷನ್ ಪಡೆದು ಅಬ್ಯೂಸ್ ಮಾಡುವುದು ನನ್ನ ಕೆಟ್ಟ ಬುದ್ದಿ!) 
 
 
 


 
 
 
 
 
Copyright © 2011 Neemgrove Media
All Rights Reserved