ವ್ಯಾಘ್ರ ಸಂತತಿ: ಎಷ್ಟುಳಿದಿವೆ ವಿಶ್ವದಲ್ಲಿ?
ಇವು ಕಡೆಯ ಕರೆಗಳು. ಸಾಮರ್ಥ್ಯ, ಸೂಕ್ಷ್ಮತೆ, ಚತುರತೆ, ಧೈರ್ಯ, ಬಿಡದ ಚಲ, ಧೀಮಂತಿಕೆ-ಇವೆಲ್ಲದರ ಸಂಕೇತವಾದ ವ್ಯಾಘ್ರ...ಪುಣ್ಯಕೋಟಿಯ ಸತ್ಯ ಕಂಡು, ಮನನೊಂದು, ಎದೆ ಕರಗಿ ಜೀವ ಕಳೆದುಕೊಂಡ ವ್ಯಾಘ್ರ...
ಭವ್ಯ ಭಾರತ ರಾಷ್ಟ್ರದ ದ್ಯೋತಕವಾಗಿ ಬರೀ ದಾಖಲೆಗಳಲ್ಲಿ ರಾರಾಜಿಸುವ ವ್ಯಾಘ್ರಗಳೆಂಬ ಈ ಅಮೋಘ ಪ್ರಾಣಿಗಳು ಒತ್ತಾಯಪೂರ್ವಕವಾಗಿ, ನಮ್ಮ ಹಿಂಸೆಗೆ ಮಣಿದು, ಶಾಶ್ವತವಾಗಿ ಭೂಮಿ ಬಿಡುವ ಸ್ಥಿತಿಗೆ ಬಂದು ಕೆಲವು ವರ್ಷಗಳಾಗಿವೆ. ೬-೭ ದಶಕಗಳ ಹಿಂದೆ ಏಶಿಯಾದ ಕಾಡುಗಳಲ್ಲಿ, ರಷಿಯಾದ ಕೆಲವು ಭಾಗಗಳಲ್ಲಿ ಯಥೇಚ್ಚವಾಗಿದ್ದ ಕೆಲವು ವ್ಯಾಘ್ರ ಪ್ರಬೇಧಗಳು ಈಗ ಇಲ್ಲವೇ ಇಲ್ಲ. ಈಗ ಇಡೀ ಭೂಮಿಯ ಮೇಲೆ ಬದುಕುಳಿದಿರುವ ಹುಲಿಗಳ ಸಂಖ್ಯೆ ಕೇವಲ ೩೨೦೦ ಎಂದು ಪರಿಸರ ವಿಜ್ನಾನಿಗಳು ಪಟ್ಟಿಕೊಡುತ್ತಾರೆ!
ಹುಲಿಗಳ ಮೊದಲ ಮತ್ತು ಕೇವಲ ಶತ್ರು ಮನುಷ್ಯ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅರಣ್ಯಗಳನ್ನು ಒತ್ತುವರಿ ಮಾಡಿಕೊಳ್ಳುತ್ತಾ...ಆಕ್ರಮಣ ಮಾಡುವ ಆರೋಪವನ್ನು ಅವುಗಳ ಮೇಲೆ ಹೊರಿಸುತ್ತಾ...ಬದುಕಲು ತಾವು ಕೊಡದೆ ಅವಕಾಶ ಸಿಕ್ಕಲ್ಲಿ ಅವುಗಳನ್ನು ಬೇಟೆಯಾಡುತ್ತಾ ಬಂದಿರುವ ನಮಗೆ ಮಾನವೀಯತೆ ಎನ್ನುವ ಮೌಲ್ಯವೇ ಒಂದು ಶಾಪ. ಮನುಷ್ಯರಿಗಾಗಿ, ಅವರ ರಕ್ಷಣೆಗಾಗಿ, ಒಳಿತಿಗಾಗಿ, ಅಭಿವೃದ್ಧಿಗಾಗಿ ಎಂಬ ಹಣೆಪಟ್ಟಿ ಹೊತ್ತು ನಾವು ಪ್ರಾರಂಭ ಮಾಡಿರುವ ಪ್ರಾಣಿಮೇಧ, ಜೀವ ಸಂಕುಲಮೇಧ ನಮ್ಮನ್ನು ಭೂಮಿಯ ಮೇಲೆ ಬದುಕಿರುವ ಇತರೆಲ್ಲ ಜೀವಿಗಳಿಗಿಂತ ಅನೈತಿಕ ಮತ್ತು ಕ್ರೂರರೆಂದು ಸಾಬೀತು ಪಡಿಸಿದೆ.
ಆದರೂ...ಪ್ರೀತಿ ಎಂಬುದು ಕಾಡು ಬೀಜ. ಸಾವಿಲ್ಲದ ಬೀಜ. ಎಲ್ಲಾದರೂ ಎಂತಾದರೂ ಚಿಗುರಿ ಹಸಿರಾಗಲು ಸಾಧ್ಯವಿರುವ ಅನನ್ಯ ಬೀಜ. ಆ ಬೀಜ ನಮ್ಮ ನಿಮ್ಮಲ್ಲೆಲ್ಲೋ ಇರಬಹುದು. ಹುಡುಕಿ ನೋಡಿ. ದಯವಿಟ್ಟು ವ್ಯಾಘ್ರ ಸಂರಕ್ಷಣಾ ಪ್ರಯತ್ನಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ.
|
|
|