ಅಂಗಳ      +
  

ಶಿಕ್ಷಣದಲ್ಲಿ ಕನ್ನಡ: ೧೯೯೪ರ ಭಾಷಾನೀತಿ ಆದೇಶದ ಪರಿಚಯ

 
ಡಾ. ಪಂಡಿತಾರಾಧ್ಯ

ಶಿಕ್ಷಣದಲ್ಲಿ ಕನ್ನಡ' ಎಂದರೆ ಕನ್ನಡವನ್ನು ಒಂದು ವಿಷಯವಾಗಿ ಕಲಿಸುವುದು ಎಂದೂ, ಕನ್ನಡ ಮಾಧ್ಯಮದಲ್ಲಿ ಎಲ್ಲ ವಿಷಯಗಳನ್ನೂ ಕಲಿಸುವುದು ಎಂದೂ ಅರ್ಥವಾಗುತ್ತದೆ. ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಬಳಸುವ ಬಗ್ಗೆ ನನ್ನ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

೧೯೮೦ರ ದಶಕದಲ್ಲಿ ಗೋಕಾಕ ವರದಿಯ ಜಾರಿಗಾಗಿ ನಡೆದ ಹೋರಾಟ ಮತ್ತು ಚಿಂತನೆಗಳ ಫಲವಾಗಿ ೨೯-೪-೧೯೯೪ ರಂದು ರಾಜ್ಯ ಸರಕಾರವು ತನ್ನ ಭಾಷಾನೀತಿಯ ಆದೇಶವನ್ನು ಹೊರಡಿಸಿತು. ಈ ಆದೇಶವನ್ನು ರಾಜ್ಯದ ಉಚ್ಚ ನ್ಯಾಯಾಲಯ ಮತ್ತು ಸರ್ವೋನ್ನತ ನ್ಯಾಯಾಲಯಗಳು ಎತ್ತಿ ಹಿಡಿದವು. ಈ ಆದೇಶದ ಮುಖ್ಯಾಂಶಗಳು ಹೀಗಿವೆ:

ಅ) ಸಾಮಾನ್ಯವಾಗಿ ಮಗುವಿನ ಮಾತೃಭಾಷೆಯೇ ಮಾಧ್ಯಮವಾಗಬೇಕೆಂದು ನಿರೀಕ್ಷೆ ಇರುವ ೧ ರಿಂದ ೪ನೇ ತರಗತಿಯವರೆಗೆ ಅನುಬಂಧ ೧ರಲ್ಲಿ ತಿಳಿಸಿರುವ ಭಾಷೆಗಳ ಪೈಕಿ ಒಂದು ಮಾತೃಭಾಷೆ ಅಥವಾ ಕನ್ನಡ ಮಾತ್ರ ಕಡ್ಡಾಯ ಭಾಷೆಯಾಗಿರುತ್ತದೆ.

ಆ) ೩ನೇ ತರಗತಿಯಿಂದ ಕನ್ನಡೇತರರಿಗೆ ಕನ್ನಡವು ಐಚ್ಛಿಕ ವಿಷಯವಾಗಿರುತ್ತದೆ. ಇದನ್ನು ಸ್ವಪ್ರೇರಣೆಯಿಂದ ಕಲಿಸಲಾಗುವುದು. ಕನ್ನಡ ಭಾಷೆಗೆ ಪರೀಕ್ಷೆ ಇರುವುದಿಲ್ಲ.

ಇ) ಸಾಮಾನ್ಯ ಪದ್ಧತಿಯಂತೆ ದ್ವಿತೀಯ ಭಾಷೆಯನ್ನು ಕಲಿಸುವ ವ್ಯವಸ್ಥೆಯಂತೆ ೫ನೇ ತರಗತಿಯಿಂದ ಅನುಬಂಧ ೧ರಲ್ಲಿ ತಿಳಿಸಿರುವ ಭಾಷೆಗಳಲ್ಲಿ ಪ್ರಥಮ ಭಾಷೆಯಾಗಿರದ ಭಾಷೆಯನ್ನು ದ್ವಿತೀಯ ಭಾಷೆಯನ್ನಾಗಿ ಅಭ್ಯಾಸ ಮಾಡಬೇಕು. ಕನ್ನಡವನ್ನು ಪ್ರಥಮ ಭಾಷೆಯಾಗಿ ಅಭ್ಯಾಸ ಮಾಡದ ಮಗು ಕನ್ನಡವನ್ನು ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಬೇಕು.

ಈ) ೫ನೇ ತರಗತಿಯಿಂದ ತೃತೀಯ ಭಾಷೆಯನ್ನು ಕಲಿಸಲಾಗುವುದು. ಅದು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡುವ ಭಾಷೆಯಾಗಿರಬಾರದು. ೭ನೇ ತರಗತಿವರೆಗೆ ತೃತೀಯ ಭಾಷೆಗೆ ಹಾಜರಾತಿ ಮತ್ತು ಪರೀಕ್ಷೆ ಕಡ್ಡಾಯ; ಉತ್ತೀರ್ಣತೆ ಕಡ್ಡಾಯವಲ್ಲ. ದರ್ಜೆ ಇತ್ಯಾದಿಗಳ ನಿರ್ಧಾರಕ್ಕೆ ಅದರ ಅಂಕಗಳ ಪರಿಗಣನೆ ಇಲ್ಲ.

ಉ) ಪ್ರೌಢಶಾಲಾ ಹಂತದಲ್ಲಿ ಅಂದರೆ ೮ರಿಂದ ೧೦ನೇ ತರಗತಿಯವರೆಗೆ ಮೂರು ಭಾಷೆಗಳು ಕಡ್ಡಾಯ. ಪ್ರಥಮ ಭಾಷೆಗೆ ೧೨೫ ಅಂಕಗಳು. ದ್ವಿತೀಯ ಮತ್ತು ತೃತೀಯ ಭಾಷೆಗಳಿಗೆ ೧೦೦ ಅಂಕಗಳು. ಇವುಗಳಲ್ಲಿ ಎರಡು ಭಾಷೆಗಳಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಅದರಲ್ಲಿ ಒಂದು ಕನ್ನಡವಾಗಿರಬೇಕು.

ಊ) ೧೦ನೇ ತರಗತಿಯ ಕೊನೆಯಲ್ಲಿ ದ್ವಿತೀಯ ಮತ್ತು ತೃತೀಯ ಭಾಷೆಗಳ ಮಟ್ಟವು ಆ ಭಾಷೆಗಳನ್ನು ಪ್ರಥಮ ಭಾಷೆಯಾಗಿ ೬ ವರ್ಷ ಅಭ್ಯಾಸ ಮಾಡಿದಾಗ ಗಳಿಸುವ ಮಟ್ಟಕ್ಕೆ ಸಮನಾಗಿರಬೇಕು.

ಋ) ಕನ್ನಡ ಮಾತೃಭಾಷೆಯಲ್ಲದವರಿಗೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ಗರಿಷ್ಠ ೧೫ ಕೃಪಾಂಕಗಳಿರುತ್ತವೆ. ಈ ಆದೇಶವು ಹೊರಟ ೧೦ ವರ್ಷಗಳವರೆಗೆ ಇದು ಜಾರಿಯಲ್ಲಿರುತ್ತದೆ.

ೠ) ೧೯೯೪-೯೫ನೇ ಶೈಕ್ಷಣಿಕ ವರ್ಷದಿಂದ ರಾಜ್ಯ ಸರಕಾರದಿಂದ ಅಂಗೀಕೃತವಾಗಿರುವ ಎಲ್ಲ ಶಾಲೆಗಳಲ್ಲಿ ೧ರಿಂದ ೪ನೇ ತರಗತಿಯವರೆಗೆ ಶಿಕ್ಷಣ ಮಾಧ್ಯಮವು ಮಾತೃಭಾಷೆ ಅಥವಾ ಕನ್ನಡ ಭಾಷೆಯೇ ಅಗಿರತಕ್ಕದ್ದು.

ಎ) ೧೯೯೪-೯೫ನೇ ಶೈಕ್ಷಣಿಕ ವರ್ಷದಲ್ಲಿ ೧ನೇ ತರಗತಿಗೆ ದಾಖಲಾಗುವ ವಿಧ್ಯಾರ್ಥಿಗಳಿಗೆ ಮಾತೃಭಾಷೆ ಅಥವಾ ಕನ್ನಡ ಮಾಧ್ಯದಲ್ಲಿಯೇ ಬೋಧಿಸತಕ್ಕದ್ದು.

ಏ) ಇಂಗ್ಲಿಷ್ ಮಾತೃಭಾಷೆಯಾಗಿರುವ ವಿದ್ಯಾರ್ಥಿಗಳಿಗೆ ಮಾತ್ರ ಈಗ ಇರುವ ಅಂಗೀಕೃತ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ೧ರಿಂದ ೪ನೇ ತರಗತಿಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಅನುಮತಿ ನೀಡಬಹುದು.

ಐ) ಮೇಲ್ಕಂಡ ನಿಬಂಧನೆಗಳನ್ನು ಪೂರೈಸದಿರುವ ಎಲ್ಲ ಅನಧಿಕೃತ ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ.

ಈ ಆದೇಶದಂತೆ ಎಲ್ಲ ಮಕ್ಕಳಿಗೂ ಅವರ ಮಾತೃಭಾಷೆಯಲ್ಲಿ ಕಲಿಯುವ ಅವಕಾಶ ದೊರೆಯುತ್ತದೆ. ಕನ್ನಡೇತರ ಮಾತೃಭಾಷೆಯ ಮಕ್ಕಳ ಮೇಲೆ ಒಂದನೆಯ ತರಗತಿಯಿಂದ ಕನ್ನಡವನ್ನು ಹೇರಿದಂತಾಗುವುದಿಲ್ಲ. ಕನ್ನಡ ಮಾತೃಭಾಷೆಯಲ್ಲದ (ಉದಾ: ಕೊಡವ, ತುಳು, ಕೊಂಕಣಿ, ಉರ್ದು ಇತ್ಯಾದಿ) ಮಕ್ಕಳಿಗೆ ತಮ್ಮ ಮಾತೃಭಾಷೆಯಲ್ಲಿ ಕಲಿಯುವ ಅನುಕೂಲವಿಲ್ಲದ ಸಂದರ್ಭಗಳಲ್ಲಿ ಅವರ ಪರಿಸರದ ಭಾಷೆ, ರಾಜ್ಯಭಾಷೆ ಎರಡನೆಯ ಮಾತೃಭಾಷೆಯಷ್ಟೇ ಉಪಯುಕ್ತವಾಗಿರುತ್ತದೆ. ಆ ಭಾಷೆಯಲ್ಲಿ ಶಿಕ್ಷಣ ನೀಡುವುದು ಅವರ ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದಷ್ಟೇ ಪರಿಣಾಮಕಾರಿಯಾಗಿರುತ್ತದೆ.

ಈಗ ಶಾಲೆಯಲ್ಲಿ ತುಳು, ಕೊಡವ, ಕೊಂಕಣಿ ಭಾಷೆಗಳನ್ನು ಕಲಿಸುವ, ಕಲಿಸಬೇಕೆಂದು ಒತ್ತಾಯಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದರೂ ಪ್ರಾಥಮಿಕ ೧ನೇ ತರಗತಿಯಿಂದಲೇ ಆ ಭಾಷೆಗಳನ್ನು ಕಲಿಸುವ ವ್ಯವಸ್ಥೆಯಾಗಬೇಕಿದೆ. ಅಷ್ಟೇ ಅಲ್ಲ, ಕನ್ನಡ ಮಾತೃಭಾಷೆಯಾಗಿರುವ ಮಕ್ಕಳಿಗೂ ಆಯಾ ಪ್ರಾದೇಶಿಕ ಉಪಭಾಷೆಯಲ್ಲಿಯೇ ೧ನೇ ತರಗತಿಯಿಂದ ಕಲಿಸುವ ವ್ಯವಸ್ಥೆಯಾಗಬೇಕು. ಶಿಷ್ಟ ಕನ್ನಡವನ್ನು ೫ನೇ ತರಗತಿಯಿಂದ ಕಲಿಸಬಹುದು.

ಆಂಗ್ಲೊ ಇಂಡಿಯನ್ನರನ್ನು ಬಿಟ್ಟು ಯಾರ ಮಾತೃಭಾಷೆಯೂ ಅಲ್ಲದ ಇಂಗ್ಲಿಷನ್ನು ಎಲ್ಲ ಮಕ್ಕಳು ಐದನೆಯ ತರಗತಿಯಿಂದ ಸಮಾನವಾಗಿ ಕಲಿಯಬಹುದು.

ಆದರೆ ಈ ಭಾಷಾನೀತಿಯ ಜಾರಿಗೆ ಸರ್ವೋನ್ನತ ನ್ಯಾಯಾಲಯದಲ್ಲಿ ಮೊಕದ್ದಮೆಗಳು ಬಾಕಿ ಉಳಿದಿವೆ ಎಂಬ ವಾದವನ್ನು ಮನ್ನಿಸಿದ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿತು. ಸರ್ವೋನ್ನತ ನ್ಯಾಯಾಲಯದಲ್ಲಿದ್ದ ಮೊಕದ್ದಮೆಗಳು ನಿವಾರಣೆಯಾದಮೇಲೂ ಉಚ್ಚನ್ಯಾಯಾಲಯದ ತಡೆಯಾಜ್ಞೆ ತೆರವಾಗಲಿಲ್ಲ.

ಈ ಮಧ್ಯೆ ಒಂದನೆಯ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಶಿಕ್ಷಣ ತಜ್ಞರು ಅನುಮೋದಿಸದಿದ್ದರೂ ಸಾಮಾಜಿಕ ನ್ಯಾಯಕ್ಕಾಗಿ ಹಾಗೆ ಮಾಡಬೇಕೆಂದು ಕೆಲವು ಕನ್ನಡ ಚಿಂತಕರು ಒತ್ತಾಯಿಸಿದ್ದರಿಂದ ಅದನ್ನು ಅಂದಿನ ಮುಖ್ಯಮಂತ್ರಿ ಶ್ರೀ ಧರ್ಮಸಿಂಗ್ಅವರ ಸರಕಾರ ಅಂಗೀಕರಿಸಿ ಎಲ್ಲ ಕನ್ನಡ ಮಾಧ್ಯಮ ಮತ್ತು ಭಾಷಾ ಅಲ್ಪ ಸಂಖ್ಯಾತರ ಶಾಲೆಗಳಲ್ಲಿ ಒಂದನೆಯ ತರಗತಿಯಿಂದ ಇಂಗ್ಲಿಷನ್ನು ಕಲಿಸಲು ಆದೇಶ ಹೊರಡಿಸಿತು(೨೯-೧೦-೨೦೦೬). ಒಂದನೆಯ ತರಗತಿಯಿಂದಲೇ ಕಲಿಸಿದರೆ ತಮ್ಮ ಮಕ್ಕಳು ಇಂಗ್ಲಿಷನ್ನು ಚೆನ್ನಾಗಿ ಕಲಿಯಬಹುದೆಂಬ ಪೋಷಕರ ನಿರೀಕ್ಷೆಯೇ ಇದಕ್ಕೆ ಕಾರಣ. ಇದರಿಂದ ಕನ್ನಡೇತರ ಮಾತೃಭಾಷೆಯ ಮಕ್ಕಳು ಮೂರನೆಯ ತರಗತಿಯಿಂದ ರಾಜ್ಯಭಾಷೆ ಕನ್ನಡವನ್ನು ಕಲಿಯುವ ಮುನ್ನವೇ ಅಂದರೆ ಒಂದನೆಯ ತರಗತಿಯಿಂದಲೇ ಆಂಗ್ಲೊ ಇಂಡಿಯನ್ನರನ್ನು ಬಿಟ್ಟರೆ ಬೇರೆ ಯಾರ ಮಾತೃಭಾಷೆಯೂ ಅಲ್ಲದ ರಾಜ್ಯಭಾಷೆ ಅಥವಾ ಪರಿಸರದ ಭಾಷೆಯೂ ಅಲ್ಲದ ಇಂಗ್ಲಿಷನ್ನು ಕಲಿಯುವ ವಿಲಕ್ಷಣ ಸ್ಥಿತಿ ನಿರ್ಮಾಣವಾಯಿತು. ಇದರಿಂದ ಮಕ್ಕಳಲ್ಲಿ ಆರಂಭದಲ್ಲಿಯೇ ತಮ್ಮ ಭಾಷೆಯ ಬಗ್ಗೆ ಕೀಳರಿಮೆಯನ್ನು ಬಿತ್ತಿದಂತಾಯಿತು.

ಉಚ್ಚ ನ್ಯಾಯಾಲಯದ ಪೂರ್ಣಪೀಠವು ಇಡೀ ಪ್ರಕರಣವನ್ನು ಹೊಸದಾಗಿ ಆಲಿಸಿ ಸರಕಾರದ ಭಾಷಾನೀತಿಯನ್ನು ಸರಕಾರಿ ಶಾಲೆಗಳಿಗೆ ಮಿತಗೊಳಿಸಿ ೨-೭-೨೦೦೮ ರಂದು ತೀರ್ಪು ನೀಡಿತು. ಇದರಲ್ಲಿ ಸರಕಾರದ ಭಾಷಾನೀತಿಯನ್ನು ಭಾಗಶಃ ಅನುಮೋದಿಸಿ ಅದನ್ನು ಸರಕಾರಿ ಮತ್ತು ಸರಕಾರದ ಅನುದಾನ ಪಡೆಯುವ ಶಾಲೆಗಳಿಗೆ ಮಿತಗೊಳಿಸಲಾಗಿದೆ; ಸರಕಾರದ ಮಾನ್ಯತೆ ಪಡೆದ ಶಾಲೆಗಳಿಗೆ ಅದರಿಂದ ವಿನಾಯಿತಿ ನೀಡಲಾಗಿದೆ. ಸರಕಾರದ ಆದೇಶದ ೨, ೩, ೬ ಮತ್ತು ೮ನೇ ನಿಬಂಧನೆಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಖಾಸಗಿ ಶಾಲೆಗಳಿಗೆ ಒಂದನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲು ಅವಕಾಶ ದೊರೆತಿದ್ದು `ಉಳ್ಳವರಿಗೆ ಇಂಗ್ಲಿಷ್ ಮಾಧ್ಯಮ ಖಾಸಗಿ ಶಾಲೆ; ಇಲ್ಲದವರಿಗೆ ಕನ್ನಡ ಮಾಧ್ಯಮ ಸರಕಾರಿ ಶಾಲೆ' ಎಂಬ ಶೈಕ್ಷಣಿಕವಲ್ಲದ ಹೊಸ ಸಾಮಾಜಿಕ ಭೇದವನ್ನು ಹುಟ್ಟುಹಾಕಿದಂತಾಗಿದೆ.

ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಸರ್ವೋನ್ನತ ನ್ಯಾಯಾಲಯದಲ್ಲಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಗೆ ಅಂಗೀಕಾರವಾಗಿದೆ. ಶಿಕ್ಷಣವು ಕೇಂದ್ರ ಸರಕಾರಕ್ಕೂ ಸಂಬಂಧಿಸಿದ ವಿಷಯ ಆಗಿರುವುದರಿಂದ ದೇಶಕ್ಕೆಲ್ಲ ಏಕರೂಪವಾಗಿ ಅನ್ವಯವಾಗುವ ತನ್ನ ಶಿಕ್ಷಣನೀತಿಯನ್ನು ಪ್ರತಿಪಾದಿಸುವಂತೆ ಇದೇ ಮೊದಲ ಬಾರಿಗೆ ಸರ್ವೋನ್ನತ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಸೂಚಿಸಿದೆ. ವಿಚಾರಣೆ ಇನ್ನೂ ನಡೆಯುತ್ತಿದೆ.

ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಅದರಲ್ಲಿ ಕರ್ನಾಟಕ ಸರಕಾರದ ಶಿಕ್ಷಣ ನೀತಿಯನ್ನು ಬೆಂಬಲಿಸಿ ಕನ್ನಡ ಚಿಂತಕರು, ಶಿಕ್ಷಣ ತಜ್ಞರು, ಸಾಹಿತಿಗಳು ಭಾಗವಹಿಸಿದ್ದರು. ಅವರು ಈಗ ಸರ್ವೋನ್ನತ ನ್ಯಾಯಾಲಯದ ವಿಚಾರಣೆಯಲ್ಲಿಯೂ ಭಾಗವಹಿಸುತ್ತಿದ್ದಾರೆ. ಶ್ರೀ ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿ ಯಾಗಿದ್ದಾಗ ಜಾರಿಯಾದ ಕರ್ನಾಟಕ ಸರಕಾರದ ಭಾಷಾನೀತಿಯನ್ನು ಅನಂತರ ಬಂದ ಎಲ್ಲ ಸರಕಾರಗಳು ಪಕ್ಷಭೇದವಿಲ್ಲದೆ ಬೆಂಬಲಿಸುತ್ತ ಬಂದಿರುವುದು ಸಂತೋಷದ ಸಂಗತಿ. ಈ ವಿಷಯದಲ್ಲಿ ಇಂದಿನ ಕರ್ನಾಟಕ ಸರಕಾರ ಮತ್ತು ಪ್ರಾಥಮಿಕ ಶಿಕ್ಷಣ ಮಂತ್ರಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿಲುವು ಮೆಚ್ಚುವಂಥದು.

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವಾಗ ಮಗು ಭಾಷೆಯನ್ನು ಕಲಿಯುವ ಕೌಶಲಗಳನ್ನೂ ಕಲಿಯುತ್ತದೆ. ಅದರಿಂದ ಎರಡನೆಯ ಭಾಷೆಯ ಕಲಿಕೆಗೆ ನೆರವಾಗುತ್ತದೆ ಎನ್ನುವುದು ಶಿಕ್ಷಣ ತಜ್ಞರ ಸ್ಪಷ್ಟ ಅಭಿಪ್ರಾಯ. ಅಲ್ಲದೆ ಮಗು ಶಾಲೆಗೆ ಬರುವ ಮುನ್ನವೇ ತನ್ನ ಮಾತೃಭಾಷೆ ಮತ್ತು ಪರಿಸರದ ಭಾಷೆಗಳಲ್ಲಿ ಗ್ರಹಿಸುವ ಮತ್ತು ಮಾತನಾಡುವ ಕೌಶಲಗಳನ್ನು ಕಲಿತಿರುತ್ತದೆ. ಶಾಲೆಯಲ್ಲಿ ಅದು ಆ ಭಾಷೆಗಳಲ್ಲಿ ಓದುವ ಮತ್ತು ಬರೆಯುವ ಕೌಶಲಗಳನ್ನು ಮಾತ್ರ ಹೊಸದಾಗಿ ಕಲಿಯುತ್ತದೆ. ಆದರೆ ತಮ್ಮ ಮಾತೃಭಾಷೆಯಲ್ಲದ, ಪರಿಸರದ ಭಾಷೆಯೂ ಅಲ್ಲದ ಇಂಗ್ಲಿಷಿನಲ್ಲಿ ಗ್ರಹಿಸುವ ಮತ್ತು ಮಾತನಾಡುವ ಕೌಶಲಗಳನ್ನು ಕಲಿಯುವ ಮುನ್ನವೇ ಒಂದನೆಯ ತರಗತಿಯಿಂದಲೇ ಆ ಭಾಷೆಯಲ್ಲಿ ಓದಲು, ಬರೆಯಲು ಕಲಿಸುತ್ತಿರುವುದರಿಂದ ಮಕ್ಕಳ ಪಾಲಿಗೆ ಇಂಗ್ಲಿಷ್ ಕಲಿಕೆ ಗಗನ ಕುಸುಮವೇ ಆಗಿದೆ. ಆದ್ದರಿಂದ ತಜ್ಞರು ಹೇಳುವಂತೆ ಮಕ್ಕಳು ಮೊದಲು ತಮ್ಮ ಮಾತೃಭಾಷೆ ಅಥವಾ ಎರಡನೆಯ ಮಾತೃಭಾಷೆಯಾದ ಪರಿಸರದ ಭಾಷೆ/ರಾಜ್ಯಭಾಷೆಯನ್ನು ಚೆನ್ನಾಗಿ ಕಲಿಯಬೇಕು. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷಿನಲ್ಲಿ ಕೇಳುವ, ಮಾತನಾಡುವ ಕೌಶಲಗಳನ್ನು ಮೊದಲು ಕಲಿಯಬೇಕು. ಮಕ್ಕಳು ಈ ಎರಡು ಕೌಶಲಗಳನ್ನು ಕಲಿತ ಅನಂತರವೇ ಅವರಿಗೆ (೫ನೇ ತರಗತಿಯಿಂದ) ಇಂಗ್ಲಿಷಿನಲ್ಲಿ ಓದುವ, ಬರೆಯುವ ಕೌಶಲಗಳನ್ನು ಕಲಿಸಬೇಕು. ಆಗ ಮಾತ್ರ ಅವರ ಇಂಗ್ಲಿಷ್ ಕಲಿಕೆ ಸಾರ್ಥಕವಾಗುತ್ತದೆ.

ತಂದೆತಾಯಿಗಳು ಬಯಸುತ್ತಾರೆಂದೊ ಶಿಕ್ಷಣ ವ್ಯಾಪಾರಿಗಳು ದುರಾಸೆಪಡುತ್ತಾರೆಂದೊ ಒಂದನೆಯ ತರಗತಿಯಿಂದಲೇ ಮಗುವಿಗೆ ಪರಿಚಿತವಲ್ಲದ ಭಾಷೆ(ಇಂಗ್ಲಿಷ್)ಯನ್ನು ಕಲಿಸುವುದರಿಂದ, ಮಾತೃಭಾಷೆ-ಪರ ಭಾಷೆ ಇಂಗ್ಲಿಷ್-ಇವುಗಳೆರಡೂ  ಭಾಷೆಗಳ ಕಲಿಕೆಯೂ ಕುಂದುತ್ತದೆ. ಮಾತೃಭಾಷೆಯನ್ನು ಕಲಿತ ಅನಂತರ ಎರಡನೆಯ ಭಾಷೆಯನ್ನು ಕಲಿಯುವುದು ಸುಲಭವಾಗುತ್ತದೆ ಎಂದು ವಿಶ್ವಬ್ಯಾಂಕ್ ನ ಶಿಕ್ಷಣ ತಜ್ಞರಾದ ಹೆಲನ್ ಅಬಾದ್ಜಿ ಅವರು ಪ್ರತಿಪಾದಿಸಿದ್ದಾರೆ (Effective Learning for the Poor Insights from the Frontier of Cognitive Neuroscience. The World Bank Washington 2006, Sec 5-Teaching Basic Skills to Young Students in Their Mother tongue).

ಈಗ ಈ ಎಲ್ಲ ವಿಷಯಗಳೂ ಸರ್ವೋನ್ನತ ನ್ಯಾಯಾಲಯದ ಮುಂದಿವೆ. ಸರ್ವೋನ್ನತ ನ್ಯಾಯಾಲಯ ಆದಷ್ಟು ಬೇಗ ವಿಚಾರಣೆಯನ್ನು ನಡೆಸಿ ಉಚ್ಚ ನ್ಯಾಯಾಲಯ ವಿಧಿಸಿರುವ ಭಾಗಶಃ ನಿಷೇಧವನ್ನು ರದ್ದುಮಾಡಿ ಸರಕಾರದ ಭಾಷಾನೀತಿ ಪೂರ್ಣಪ್ರಮಾಣದಲ್ಲಿ ಜಾರಿಯಾಗಲು ಅನುವು ಮಾಡಿಕೊಡಬೇಕು. ಆಗ ಮಕ್ಕಳು ತಮ್ಮ ಮಾತೃಭಾಷೆ/ರಾಜ್ಯಭಾಷೆ(ಕನ್ನಡ)ಯನ್ನು ಚೆನ್ನಾಗಿ ಕಲಿಯಲು ಸಾಧ್ಯವಾಗುತ್ತದೆ. ಅನಂತರ ಎರಡನೆಯ/ಮೂರನೆಯ ಭಾಷೆಯಾಗಿ ಇಂಗ್ಲಿಷನ್ನೂ ಪರಿಣಾಮಕಾರಿಯಾಗಿ ಕಲಿಯಲು ಸಾಧ್ಯವಾಗುತ್ತದೆ.