(ಪುಟ - ೭ ) ಕಿಲ್ಲರ್ ಮಂಡೇ!!!
ಬೇಲಾ ಮರವ೦ತೆ
ಸ್ಮಿತಾ ಚಿನ್ಮಯ್ ರಿಗೆ ಬಾಯ್ ಹೇಳಿ ನಮ್ಮ ಮನೆಗೆ ಬಂದೆವು. ಒಳಗೆ ಬಂದವರೇ ಇದ್ದಬದ್ದ ಸಾಮಾನುಗಳನ್ನೆಲ್ಲಾ ನೆಲದ ಮೇಲೆ ಹಾಕಿ ಹೊಯ್ ಅಂತ ನೆಲದ ಮೇಲೆ ಕೂತುಬಿಟ್ಟೆವು. ಗೆಳೆಯರು ಜೊತೆಯಲ್ಲಿದ್ದಿದ್ದರಿಂದ ಇಡೀ ದಿನ ಹಾರಿ ಹೋಗಿದ್ದು ಗೊತ್ತೇ ಆಗಿರಲಿಲ್ಲ. ಹೊಸ ಜಾಗಗಳು, ಜನ, ಗಲಾಟೆ, ಸುತ್ತುವ ಹರಿಬಿರಿಯಲ್ಲಿ ಸುಸ್ತು ಮೈ ಮನವನ್ನೆಲ್ಲಾ ಆವರಿಸಿಕೊಂಡಿದ್ದು ಗಮನಕ್ಕೂ ಬಂದಿರಲಿಲ್ಲ. ಇನ್ನು ಜೆಟ್ ಲ್ಯಾಗ್ ಬೇರೇ ಇತ್ತಲ್ಲ!! ಮೊದಲು ಪ್ರಶಾಂತ ಎದ್ದ. "ಊಟ ಮಾಡ್ತೀಯಾ ಬಿಲ್ಲೀ" ಕೇಳಿದ. ಹೊತ್ತು ಹೊತ್ತಿಗೆ ಹೊಟ್ಟೆಗೆ ತುಂಬಿಸಿಕೊಳ್ಳುತ್ತಿದ್ದರೂ, ಈ ಹೊತ್ತು-ಗೊತ್ತಿನ ಕನ್ಫ್ಯೂಶನ್ ನಲ್ಲಿ ಹೊಟ್ಟೆ ಜೀರ್ಣಕ್ರಿಯೆಯನ್ನು ಸರಿಯಾಗಿ ಮಾಡುವುದನ್ನೇ ನಿಲ್ಲಿಸಿಬಿಟ್ಟಿತ್ತು. "ಬೇಡಪ್ಪಾ" ಅಂದೆ. "ಸರಿ ಹಾಗಾದ್ರೆ ನನಗೂ ಬೇಡ... ನಾನು ಬೇಗ ಮಲಗಿ ಬಿಡ್ತೀನಿ. ನಾಳೆ ಆಫೀಸ್ ಗೆ ಹೋಗಬೇಕಲ್ಲಾ..." ಅಂದ. ನಾಳೆ ನಾನೊಬ್ಬಳೇ ಮನೆಯಲ್ಲಿರಬೇಕು ಎಂದು ನೆನಪಾಗಿ ಗಾಬರಿಯಿಂದ ಎದ್ದೆ. "ಎಷ್ಟು ಗಂಟೆಗೆ ಹೋರಡ್ತೀಯಾ...ಎಷ್ಟು ಗಂಟೆಗೆ ಬರ್ತೀಯಾ? ಮಧ್ಯಾನ್ಹ ಊಟಕ್ಕೆ ಬರ್ತೀಯಾ ತಾನೆ?" ನನ್ನ ಗಾಬರಿ ನೋಡಿ, "ನೀನು ಆರಾಮಕ್ಕೆ ಮಲಗಿರು, ನಾನು ಏಳುವರೆಗೆಲ್ಲಾ ಹೊರಟು ಸಂಜೆ ಆರುವರೆ ಅಷ್ಟರಲ್ಲಿ ಮನೆಗೆ ಬಂದು ಬಿಡ್ತೀನಿ" ಎಂದ. ತಿಂಡಿ ಏನು ಮಾಡಲಿ ಕೇಳಿದೆ. "ಇಲ್ಲಿ ಅದನ್ನೆಲ್ಲಾ ಯೋಚನೇನೇ ಮಾಡಬಾರದು. ಸೀರಿಯಲ್ ಇದೆಯಲ್ಲಾ....ನೀನು ಆರಾಮಕ್ಕಿರು" ಎಂದ. "ಬಾ ನಿಂಗೆ ಒಮ್ಮೆ ಸ್ಟವ್, ಎಸಿ, ಸೆಕ್ಯುರಿಟಿ ಲಾಕ್, ಕೇಬಲ್ ಆಪರೇಟ್ ಮಾಡುವುದನ್ನು ತೋರಿಸಿಬಿಡ್ತೀನಿ" ಎಂದು ಎಲ್ಲವನ್ನೂ ತೋರಿಸಿಕೊಟ್ಟ.
ಮರು ಬೆಳಿಗ್ಗೆ ಎಚ್ಚರವಾದಾಗ ಹನ್ನೊಂದುವರೆ! ಪ್ರಶಾಂತ ಬಾಗಿಲನ್ನು ಲಾಕ್ ಮಾಡಿಕೊಂಡು ಆಫೀಸಿಗೆ ಹೊರಟು ಹೋಗಿದ್ದ. ಅವನಿಗೆ ಫೋನ್ ಮಾಡಲಾ ಎಂದುಕೊಂಡೆ. ಇಷ್ಟು ದಿನ ರಜ ಹಾಕಿ ಇವತ್ತು ಆಫೀಸಿಗೆ ಹೋಗಿದ್ದಾನೆ. ಫೋನ್ ಮಾಡಿದರೆ ತೊಂದರೆ ಆಗಬಹುದು ಎನ್ನಿಸಿ ಸುಮ್ಮನೆ ಕೂತೆ. ಹಲ್ಲುಜ್ಜಲೂ ಸೋಮಾರಿತನ. ಫ್ರಿಜ್ ಮೇಲೆ ಏನೋ ದೊಡ್ಡ ಚೀಟಿ ಕಾಣಿಸಿತು. ಇಂಡಿಯಾಗೆ ಫೋನ್ ಮಾಡಲು ಏನೇನು ಪಿನ್ ಎಂಟರ್ ಮಾಡಬೇಕು ಎಂದೆಲ್ಲಾ ಒಂದು ಕಾಗದದಲ್ಲಿ ಬರೆದು ಅಂಟಿಸಿಟ್ಟು ಹೋಗಿದ್ದ. ಒಳ್ಳೆ ಐಡಿಯಾ ಎಂದುಕೊಂಡು ಮನೆಗೆ ಫೋನ್ ಹಚ್ಚಿದೆ. ಅಮ್ಮನ ತವಕದ ದನಿ ಕೇಳಿಸಿತು. ಪ್ರಯಾಣದ ಬಗ್ಗೆ, ಮನೆ ಬಗ್ಗೆ, ಅಮೆರಿಕಾ ವಾಸದ ಬಗ್ಗೆ ಎಲ್ಲರ ಜೊತೆಗೂ ಸುಮಾರು ಹೊತ್ತು ಮಾತಾಡಿದೆ. ಅವರಿಗೆ ಅದರ ವಿವರಣೆ ಬೇಕಿತ್ತು, ನನಗೆ ಅವರ ದನಿ, ಆ ಜೊತೆಗಾರಿಕೆ ಬೇಕಿತ್ತು. "ಜೋಪಾನ ಒಬ್ಬಳೇ ಇದ್ದೀಯಾ ಬಾಗಿಲು ಸರಿಯಾಗಿ ಹಾಕ್ಕೋ" ಎಲ್ಲರೂ ಎಚ್ಚರಿಕೆ ಕೊಟ್ಟರು. ಸುಮಾರು ಎರಡು ಗಂಟೆ ಮಾತಾಡಿದ ಮೇಲೆ ಇನ್ನು ಅವರಿಗೆ ಮಲಗಲು ಬಿಡಬೇಕು ಎನ್ನಿಸಿ ಕಷ್ಟದಿಂದ ಬಾಯ್ ಹೇಳಿದೆ. "ದಿನಾ ಮಾಡು ಬಿಲ್ಲೂ...ಪ್ರಶಾಂತ ನ ಕೇಳಿದೆವು ಅಂತ ತಿಳಿಸು...ಏನಾದ್ರೂ ಬೇಕಾದ್ರೆ, ಗೊತ್ತಾಗಲಿಲ್ಲಾಂದ್ರೆ ಮಾಡು...ಗುಡ್ ನೈಟ್ ಅಲ್ಲಲ್ಲಾ...ನಿನಗೆ ಗುಡ್ ಡೇ ಅಲ್ವಾ..ನಿಮಗೆ ಗುಡ್ ನೈಟ್...ಅಂತೆಲ್ಲಾ ಎಂಟು ಹತ್ತು ಸರಿ ಬಾಯ್ ಹೇಳಿಕೊಂಡು ಕಡೆಗೂ ಕಷ್ಟ ಪಟ್ಟು ಫೋನ್ ಇಟ್ಟೆ. ಮದುವೆಯಾಗಿ ಗಂಡನ ಮನೆಗೆ, ಅಮೆರಿಕಾಗೆ ಹೊರಡುವ ಸಡಗರದಲ್ಲಿ ಅಮ್ಮನ ಮನೆ, ಊರು ಬಿಟ್ಟು ಬಂದಿರುವ ಸತ್ಯ ಮತ್ತೆ ಹೊಡೆಯಿತು. ದುಃಖ ಕೋಡಿಯಾಗಿ ಬಂತು. ಮನೆಯಲ್ಲಿ ನಾನೊಬ್ಬಳೇ ಇದ್ದರಿಂದ ದೊಡ್ಡ ದನಿಯಲ್ಲಿ ಮನಸ್ಸಿಗೆ ತಣಿಯುವಷ್ಟು ಅತ್ತುಕೊಂಡೆ.
ಗಂಟೆ ಎರಡಾಗಿತ್ತು! ಬೇಗ ಬೇಗ ಹಲ್ಲುಜ್ಜಿ-ಮುಖ ತೊಳೆದುಕೊಂಡು ಬಂದು ಕಾಫಿ ಮಾಡಿಕೊಂಡು ಬಾಲ್ಕನಿಗೆ ಬಂದೆ. ಮಟಮಟ ಮಧ್ಯಾನ್ಹವಾಗಿದ್ದರೂ ಮತ್ತದೇ ನೀರವತೆ. ಅಪಾರ್ಟ್ಮೆಂಟಿನ ಪಾರ್ಕಿಂಗ್ ಲಾಟ್ ಗಳು ಖಾಲಿ ಹೊಡೆಯುತ್ತಿದ್ದವು. ಚಲನೆಯೇ ಇಲ್ಲದ ನೋಟ! ಮತ್ತೆ ಮಂಪರು ಬರಿಸುವಂತಾಗಿ ಮನೆಯೊಳಗೆ ಬಂದೆ. ರೂಮ್ ಹೊಕ್ಕು ಪ್ರಶಾಂತನ ಪುಸ್ತಕಗಳನ್ನು ನೋಡಿದೆ. ಒಂದಷ್ಟು ಕಂಪ್ಯೂಟರ್ ಲಾಂಗ್ವೇಜ್, ಮ್ಯಾನೇಜ್ಮೆಂಟ್ ಪುಸ್ತಕಗಳ ಜೊತೆಗೇ ಹೈಪರ್ ಸ್ಪೇಸ್, ನ್ಯಾನೋ ಟೆಕ್ನಾಲಜಿ, ವಿವೇಕಾನಂದ ಇತ್ಯಾದಿ ಪುಸ್ತಕಗಳಿದ್ದವು. ಮುಟ್ಟಲೂ ಮನಸ್ಸು ಬರಲಿಲ್ಲ. ಅವನ ಬಟ್ಟೆಗಳಿಡುವ ’ಕ್ಲೋಸೆಟ್’ ಗೆ ಹೋದೆ. ಒಂದು ಸ್ಟ್ಯಾಂಡಿನ ಮೇಲೆ ಬಗೆ ಬಗೆಯ ಪರ್ಫ್ಯೂಮ್ ಗಳಿದ್ದವು. ಇವೇ ಬಟ್ಟೆಗಳ ಜೊತೆ ನನ್ನ ಬಟ್ಟೆ ಇಡಬೇಕು..ಅದೂ ಇಡೀ ಲೈಫ್!! ಆಶ್ಚರ್ಯ, ಗಾಬರಿ ಎಲ್ಲಾ ಆಯಿತು. ಮದುವೆ ಮಾಡಿಕೊಳ್ಳುವಾಗ ಇಂತಹ ಸಣ್ಣ ಸಣ್ಣ ಡಿಟೇಲ್ ಗಳನ್ನು ನಾವು ಯಾವತ್ತೂ ಯೋಚಿಸಿರುವುದಿಲ್ಲ. ಆಗ ಅದು ಮುಖ್ಯ ಎನ್ನಿಸಿಯೂ ಇರುವುದಿಲ್ಲ. ಆದರೆ ಒಂದೊಂದೇ ಹಂಚಿಕೊಳ್ಳುವಿಕೆಯನ್ನು ಮಾಡಿಕೊಳ್ಳುವಾಗಲೂ ಇಬ್ಬರು ವ್ಯಕ್ತಿಗಳು, ಅವರ ಆಯ್ಕೆಗಳು ಎಷ್ಟು ಭಿನ್ನ ಎನ್ನಿಸುತ್ತದೆ. ಈ ಮದುವೆ ಅನ್ನುವ ಸಡಗರ, ಒಂದು ಸಂತೆ, ಒಂದು ಸಾಮಾಜಿಕ ಒಪ್ಪಿಗೆ, ಇಬ್ಬರು ಪರಕೀಯರನ್ನು ಗಂಟು ಹಾಕಿಸಿ, ಇನ್ನು ಬದುಕಿ ತೋರಿಸಿ ಎನ್ನುವ ಪರಿ ಅದೆಷ್ಟು ಅಚ್ಚರಿಯದ್ದು ಅಂತ ಈಗ ಅನ್ನಿಸುತ್ತದೆ. ಪ್ರಶಾಂತನ ಬಟ್ಟೆ ಆಯ್ಕೆಗಳನ್ನೆಲ್ಲಾ ಅವಲೋಕಿಸಿ ನನ್ನ ಬಟ್ಟೆಗಳನ್ನು ಆಗಲೇ ತೆಗೆದಿಡಲು ಬೋರಾಗಿ ಮತ್ತೆ ಹೊರಗೆ ಬಂದೆ. ಅಡಿಗೆ ಮನೆ ನನ್ನ ಮುಂದಿನ ತನಿಖಾ ಸ್ಥಳ. ಪ್ರಶಾಂತ ಒಂದಷ್ಟು ರೆಡಿ ಟು ಈಟ್ ಗಳನ್ನು ತಂದು ಫ್ರಿಜ್ ಗೆ ತುಂಬಿಕೊಂಡಿದ್ದ. ಬೇರೆ ಬೇರೆ ಮಸಾಲೆಯ ಪುಡಿಗಳು, ಮಿಕ್ಸ್ ಗಳು. ಪರವಾಗಿಲ್ಲ ಹುಡುಗ! ಬ್ಯಾಚುಲರ್ ಆಗಿದ್ದರೂ ರುಚಿ ರುಚಿಯಾಗಿ ಊಟ ಮಾಡಿಕೊಳ್ಳುವ ನಿಯತ್ತಿನವನು ಅಂತ ಗೊತ್ತಾಯಿತು. ರಾತ್ರಿಗೆ ಏನಾದರೂ ಅಡಿಗೆ ಮಾಡೋಣವೆಂದು ಒಂದು ತಿಳಿಸಾರು, ಪಲ್ಯ ಮಾಡಿಟ್ಟು ಮತ್ತೆ ನನ್ನ ಆ ಪುಟ್ಟ ಮನೆಯ ತನಿಖೆ ಶುರು ಮಾಡಿದೆ. ಒಂದಷ್ಟು ಇಂಗ್ಲಿಶ್, ಕನ್ನಡ, ಹಿಂದಿ ಚಲನ ಚಿತ್ರಗಳ ಡಿವಿಡಿಗಳಿದ್ದವು. ಒಂದಷ್ಟು ಮ್ಯಾಗಜೀನುಗಳಿದ್ದವು. ಪ್ರಶಾಂತ ಬರುವುದಕ್ಕೆ ಇನ್ನೂ ಮೂರು ಗಂಟೆ ಸಮಯ ಇತ್ತು. ಟಿ ವಿ ಹಾಕಿಕೊಂಡೆ. ಹಿಂದೆ ಮುಂದೆ ಗೊತ್ತಿಲ್ಲದ ಕಾರ್ಯಕ್ರಮಗಳು ಬರುತ್ತಿದ್ದವು. ಅವತ್ತು ನೋಡಲು ಮನಸ್ಸು ಬರಲಿಲ್ಲ. ಆರಿಸಿ, ಪ್ರಶಾಂತ ತಂದಿಟ್ಟಿದ್ದ ಚಾಕೋಲೇಟ್ ಗಳನ್ನು ತಿನ್ನುತ್ತಾ ಮತ್ತೆ ಮನಸ್ಸನ್ನು ಮನೆಯ ಕಡೆಗೆ ಹಾರಿಸಿದೆ. ಯೋಚನೆಗಳ ಜೊತೆಯೇ ಮತ್ತೆ ನಿದ್ದೆ ಬರಲಾರಂಭಿಸಿತು. ನನ್ನ ಮೊದಲ ಜೆಟ್ ಲ್ಯಾಗ್ ಇಷ್ಟು ಬೇಗ ನನ್ನನ್ನು ಬಿಡುವಂತಿರಲಿಲ್ಲ.
ಜೆಟ್ ಲ್ಯಾಗ್...ಅದೊಂದು ಬೇರೆಯದೇ ಫೀಲಿಂಗ್ ಬಿಡಿ! ಅನುಭವಿಸಿದವರಿಗಷ್ಟೇ ಗೊತ್ತು ಅದರ ಪರದಾಟ. ಅಲ್ಲೇ ಕುಳಿತಿದ್ದರೂ ನಮ್ಮನ್ನು ಅಲ್ಲಿರಬಿಡುವುದಿಲ್ಲ...ಕಣ್ಣು ಹಿಗ್ಗಲಿಸಿಕೊಂಡು ನೋಡಿದರೂ ಕಂಡ ನೋಟ ಮೆದುಳನ್ನು ತಲುಪುವುದಿಲ್ಲ...ಅದೊಂಥರಾ ಮಂಪರಿನ ಮಹಾ ಮೇಳ! ಊರಿನಲ್ಲಿ ನಮ್ಮ ಮನೆ ಹತ್ತಿರ ಒಂದು ಬಟ್ಟೆ ಅಂಗಡಿ ಇತ್ತು. ನಾವದನ್ನು ಶೆಟ್ಟರಂಗಡಿ ಅಂತಲೇ ಕರೆಯುತ್ತಿದ್ವಿ. ನಮ್ಮನೆಗೆ ಬೇಕಾಗುವ ಟವಲ್ ಗಳು, ಬನಿಯನ್-ಲಂಗ ಇತ್ಯಾದಿ ಬೇಸಿಕ್ ಬಟ್ಟೆಗಳೆಲ್ಲವೂ ಅಲ್ಲಿಂದಲೇ ಖರೀದಿಯಾಗುತ್ತಿದ್ದವು. ಆ ಅಂಗಡಿಯಲ್ಲಿ ಈಗ ಎರಡು ವರ್ಷಗಳಿಂದ ಶೆಟ್ಟರ ಒಬ್ಬ ಮಗ ಯಾವಾಗಲೂ ಕೂರುತ್ತಿದ್ದ. ತುಂಬಾ ಚಂದದ ಹುಡುಗ. ಚಿಗುರು ಮೀಸೆ ಕೂಡಾ ಇತ್ತು. ಒಮ್ಮೆ ಅಪರೂಪಕ್ಕೆ ಅಕ್ಕ ಮತ್ತು ನಾನು ಅಮ್ಮನ ಜೊತೆ ಅಲ್ಲಿಗೆ ಹೋದಾಗ ಅವನು ಕಂಡು, ಇವನ್ಯಾರು? ಪಿಚ್ಚರ್ ಹೀರೋ ಥರ ಇದಾನೆ ಅಂತ ಆಶ್ಚರ್ಯದಿಂದ ಒಂದೆರಡು ಸಲ ಕಣ್ಣ ಸಂದಿಯಲ್ಲೇ ನೋಡಿದ್ದೆವು. ಮೂರನೇ ಸಾರಿ ಇಣುಕುವಾಗ ಅವನು ನಮ್ಮ ಹಿಂದೆಯೇ ನಿಂತು ಬಿಟ್ಟ ಕಣ್ಣುಗಳಿಂದ ನಮ್ಮನ್ನೇ ನೋಡುತ್ತಿದ್ದ. ನಮಗೆ ಗಾಬರಿ ಆಗಿತ್ತು. ಏನೋ ಹುಡುಗ ಚನ್ನಾಗಿದ್ದ ಅಂತ ಒಂಚೂರೇ ಚೂರು ನೋಡಿದರೆ ಇದೇನಪ್ಪಾ ಹೀಗೆ ದಿಟ್ಟಿಸುತ್ತಿದ್ದಾನೆ ಅಂತ. ಅಮ್ಮ ಅದನ್ನು ಗಮನಿಸಿ ಇರುಸುಮುರುಸುಗೊಂಡು ಬನ್ರೇ ಹೋಗಣ ಅಂತ ಹರಿಬಿರಿಯಲ್ಲಿ ನಮ್ಮನ್ನು ಮನೆಗೆ ಕರೆದುಕೊಂಡು ಬಂದಿದ್ದರು.
ದಾರಿಯಲ್ಲಿ ಬರುವಾಗ ದುಸು ದುಸು ಕೋಪ. ಅದೂ ನಮ್ಮ ಮೇಲೆ! ನಾವು ಹೆಣ್ಣು ಮಕ್ಕಳಾದ್ದರಿಂದ ಜನ ನಮ್ಮನ್ನು ನೋಡಿದರೂ ನಮ್ಮದೇ ಪರಮ ತಪ್ಪು ಎನ್ನುವ ಲಾಜಿಕ್ ಅಮ್ಮನದು!! "ಹೆಣ್ಣು ಮಕ್ಕಳು ಬೆಳೆಯುವಾಗ ಎಲೆಮರೆಯ ಕಾಯಿ ಬೆಳೆಯುವಂತೆ ಬೆಳೀಬೇಕು...ಇಲ್ಲದಿದ್ದರೆ ಜನರ ದೄಷ್ಟಿ ತಾಗಿ ಆಗಬಾರದ್ದು ಆಗಿಬಿಡತ್ತೆ..." ಅಂತ ನಮಗೆ ತಿಂಗಳಿಗೆ ಹತ್ತು ಸಾರಿನಾದ್ರೂ ಡೈಲಾಗ್ ಬಿಡುತ್ತಿದ್ದರು. ನಾವೇನಾದರೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಿಹುಮಾನ ಹಿಡಿದುಕೊಂಡು ಬಂದರೆ ಅದನ್ನು ನೋಡಿ ಒಳಗೇ ಸಂತೋಷಪಟ್ಟರೂ ಈ ರೀತಿಯ ಹೆಣ್ಣುಮಕ್ಕಳಿಗಾಗಿಯೇ ಇದ್ದ ವಿಶೇಷ ಜ್ನಾನವನ್ನು ನಮಗೆ ಹರಿಸಿ, ದೄಷ್ಟಿ ತೆಗೆಯುತ್ತಿದ್ದರು. ಈ ಹುಡುಗ ನಮ್ಮನ್ನು ನೋಡಿದ ಮೊದಲನೆಯ ದಿನ ಮನೆಗೆ ಬಂದವರೇ ಅಪ್ಪನಿಗೆ ಆ ಹುಡುಗನ ಚಾರಿತ್ರದ ಬಗ್ಗೆ ಬೈದು, ಇನ್ನು ಮುಂದೆ ಅಕ್ಕ-ನನ್ನನ್ನು ಯಾವುದೇ ಕಾರಣಕ್ಕೂ ಅಲ್ಲಿಗೆ ಕರೆದುಕೊಂಡು ಹೋಗಬಾರದೆಂದು ಫರ್ಮಾನ್ ಹೊರಡಿಸಿಬಿಟ್ಟಿದ್ದರು. ಇದಾದ ಎರಡೇ ದಿನದಲ್ಲಿ ಅಪ್ಪ ಮನೆಗೆ ಬಂದು ಆ ಹುಡುಗನ ಕಥೆ ಹೇಳಿದ್ದರು. ಆ ಹುಡುಗ ಶೆಟ್ಟರ ಕಿರಿ ಮಗ. ಇಷ್ಟು ದಿನ ಅವರ ಅಜ್ಜಿ ಮನೆ ವಿಶಾಖಪಟ್ಣ ದಲ್ಲಿ ಬೆಳೆಯುತ್ತಿದ್ದನಂತೆ. ಅವನಿಗೆ ತಲೆ ಬೆಳೆದಿಲ್ಲವಂತೆ...ಸುಮ್ಮನೇ ಮನೆಯಲ್ಲಿ ಕೂರುವ ಬದಲು ಅಂಗಡಿಯಲ್ಲಿರಲಿ ಅಂತ ಕಳಿಸುತ್ತಾರಂತೆ...ಹೀಗೆಲ್ಲಾ. ಅಮ್ಮ ಅವತ್ತಿಂದ ನಿರುಮ್ಮಳಳಾಗಿದ್ದಳು. ಅದಾದ ಮೇಲೆ ಕೆಲವು ಬಾರಿ ಅಪ್ಪನ ಜೊತೆ, ಅಕ್ಕ-ಭಾವನ ಜೊತೆ ಅವರ ಅಂಗಡಿಗೆ ಹೋಗುವ ಅವಕಾಶ ಸಿಕ್ಕಿತ್ತು. ನಮ್ಮ ಭಾವ ಅವನನ್ನು ನೋಡಿ "ಅವನೊಬ್ಬ ದ್ರ್ಯಾಬೆ ಥರ ಕೂತಿರ್ತಾನೆ" ಅಂತ ತಮಾಷಿ ಮಾಡುತ್ತಿದ್ದರು. "ಪಾಪ ಭಾವ ಹಾಗನ್ನ ಬೇಡಿ" ಎನ್ನುತ್ತಿದ್ದೆ. "ಸರಿ ಬಿಡು ಶೆಟ್ಟರ ಆಂಟಿ ಜೊತೆ ಮಾತಾಡಿ ನಿನ್ನ ಮದುವೆ ಫಿಕ್ಸ್ ಮಾಡಿಸಿಬಿಡುತ್ತೀನಿ ಅವನ ಜೊತೆ" ಅಂತ ತಮಾಶಿ ಮಾಡಿ ಅಕ್ಕನ ಕೈಲಿ ಬೈಸಿಕೊಂಡಿದ್ದರು.
ಆ ಹುಡುಗ ಅಲ್ಲೇ ಇರುತ್ತಿದ್ದ, ಆದರೆ ಅಲ್ಲಿರುತ್ತಿರಲಿಲ್ಲ. ನಮ್ಮನ್ನೇ ನೋಡುತ್ತಿರುತ್ತಿದ್ದ ಆದರೆ ನಮ್ಮನ್ನು ನೋಡುತ್ತಿರಲಿಲ್ಲ! ನಾವೇನಾದರೂ ಅವನಲ್ಲಿ ಪ್ರಶ್ಣೆ ಅಥವಾ ಸಹಾಯ ಕೇಳಿದ್ದರೆ ನಮ್ಮನ್ನು ನೋಡುತ್ತಾ ಕೇಳುತ್ತಿರುವಂತೆ ಮುಖ ಮಾಡುತ್ತಿದ್ದ. ಆದರೆ ನಾವು ನಮ್ಮ ಕೆಲಸ ಮುಗಿಸಿ ಅಂಗಡಿಯಿಂದ ಹೊರಬರುವ ಮುನ್ನ "ನೀವು ಅದೇನೋ ಕೇಳಿದ್ರಲ್ಲಾ ರೀ"...ಎಂದು ಬರುತ್ತಿದ್ದ. ನಾವು ’ಆಯ್ತು ರೀ..’ ಎಂದುಕೊಂಡು ಬರುತ್ತಿದ್ದೆವು. ಅತ್ಯಂತ ನಾರ್ಮಲ್ ಆಗಿ ಕಾಣುತ್ತಿದ್ದ ಅವನೇನಾದ್ರೂ ಬೇಕು ಬೇಕೆಂದೇ ಹಾಗೆ ಮಾಡುತ್ತಾನೋ ಎನ್ನುವ ಅನುಮಾನ ಆಗಾಗ ಬರುತ್ತಿತ್ತು. ಆದರೆ ಅವನನ್ನು, ಅವನ ಇರುವನ್ನೂ ಒಂಚೂರೂ ಗಣಿಸದೆ ಎಲ್ಲವನ್ನೂ ತಾವೇ ಮಾಡುತ್ತಿದ್ದ ಅಂಗಡಿ ಆಂಟಿ, ಅವರ ಮುಖದ ಮೇಲೆ ಯಾವಾಗಲೂ ಊರಿರುತ್ತಿದ್ದ ಏನೋ ವಿಷಾದ ಈ ಹುಡುಗ ಸಂಪೂರ್ಣ ’ನಾರ್ಮಲ್’ ಆಗಿಲ್ಲ ಅಂತ ಖಾತ್ರಿ ಮಾಡುತ್ತಿದ್ದವು. ಅವತ್ತು ಆ ಜೆಟ್ ಲ್ಯಾಗ್ ನ ಕಲಸುಮೆಲಸಿನಲ್ಲಿ ಆ ಶೆಟ್ಟರ ಹುಡುಗನ ಪಾಡು ಯಾಕೆ ನೆನಪಿಗೆ ಬಂತೋ ಗೊತ್ತಿಲ್ಲ. ನನಗೆ ಭೂಮಿ ಭ್ರಮಣವಾಗಿರುವ ಲಾಜಿಕ್ಕಿನಲ್ಲೇ ಅವನಿಗೂ ಮಸ್ತಿಷ್ಕ ಭ್ರಮಣ ಆಗಿರಬೇಕು ಅನ್ನಿಸಿತ್ತು. ಆ ಪಾಪದ ಹುಡುಗನ ಬಗ್ಗೆ ಇಷ್ಟು ಹಗುರವಾಗಿ ಯೋಚಿಸುತ್ತಿದ್ದೀನಲ್ಲಾ ಅಂತಾ ಬೇಜಾರಾಗಿ ಕುಳಿತಲ್ಲಿಂದ ಎದ್ದೆ.
ಸ್ನಾನ ಮುಗಿಸಿ ಮತ್ತೆ ಕಾಫಿ ಕುಡಿದು ಹೊರಗೆ ಬಂದೆ. ಸ್ಕೂಲಿನಿಂದ ಮನೆಗೆ ಬಂದಿದ್ದ ಸುಮಾರು ಮಕ್ಕಳು ಅಪಾರ್ಟ್ಮೆಂಟ್ ಕಾಂಪ್ಲೆಕ್ಸಿನ ಆವರಣದಲ್ಲಿ ಸ್ಕೇಟ್ ಮಾಡುತ್ತಿದ್ದರು. ಬಣ್ಣ ಬಣ್ಣದ ಮಕ್ಕಳು. ಕೆಲವರು ಸೈಕಲ್ ಹೊಡೆಯುತ್ತಿದ್ದರು. ಒಂದಿಬ್ಬರು ಪುಟಾಣಿ ಸ್ಕೂಟರ್ಗಳನ್ನು ತಳ್ಳಿಕೊಂಡು ರೇಸ್ ಮಾಡುತ್ತಿದ್ದರು. ಬದುಕು ಬಂದಿತ್ತು! ಬಿಸಿಲು ತಗ್ಗಿತ್ತಾದ್ದರಿಂದ ಕೆಲವು ಅಮ್ಮಂದಿರು ತಮ್ಮ ಪಿಳ್ಳೆಗಳನ್ನು ಸ್ಟ್ರಾಲರ್ ಗಳಲ್ಲಿ ಹಾಕಿಕೊಂಡು ವಾಕ್ ಮಾಡುತ್ತಿದ್ದರು. ಪಾರ್ಕಿಂಗ್ ಲಾಟ್ ತುಂಬತೊಡಗಿತ್ತು. ಖುಶಿಯಿಂದ ನೋಡತೊಡಗಿದೆ. ಸುಮ್ಮರು ಹೊತ್ತಾಗಿದೆಯೆಂದು ಟೈಮ್ ನೋಡಿದಾಗ ಏಳುಗಂಟೆ. ಅಷ್ಟಾದರೂ ಸೂರ್ಯ ಮುಳುಗುವ ಸೂಚನೆಯೇ ಇರಲಿಲ್ಲ! ನಾಲ್ಕು-ಐದು ಗಂಟೆಯಂತಹ ಹಗಲು. ಇದೂ ಭೂಮಿ ಭ್ರಮಣದ್ದೇ ಮ್ಯಾಜಿಕ್ ಇರಬೇಕೆಂದುಕೊಂಡೆ. ಇನ್ನು ಮುಂದೆ, ನಾನು ಕೆಲಸಕ್ಕೆ ಸೇರುವವರೆಗೂ ಅಥವಾ ಓದು ಮುಂದುವರೆಸುವವರೆಗೂ ನನ್ನ ದಿನಗಳು ಹೀಗೇ ಇರುತ್ತವೆ ಎನ್ನಿಸಿ, ಅವನ್ನು ಬೋರಿಂಗ್ ಮಾಡಿಕೊಳ್ಳದೆ, ಏಕತಾನತೆಗೆ ಸಿಕ್ಕಿಹಾಕಿಕೊಳ್ಳದೆ ಏನನ್ನಾದರೂ ಚಟುವಟಿಕೆಯುಕ್ತ ಮಾಡಿಕೊಳ್ಳಬೇಕೆನ್ನಿಸಿತು. ಪ್ರಶಾಂತನನ್ನು ಹೀಗೇ ದಿನಾ ಕಾಯುತ್ತಾ ಕೂರುವುದು ತುಂಬಾ ಕಷ್ಟದ ಕೆಲಸ. ನನ್ನ ತಲೆ ಕೆಟ್ಟರೆ ನಾನು ಅವನ ತಲೆಯನ್ನೂ ಸುಮ್ಮನೆ ಬಿಡುವವಳಲ್ಲವಾದ್ದರಿಂದ ನಾಳೆ ಹೀಗಿರಬಾರದು, ಬದಲಾಗಲೇಬೇಕು ಎಂದು ನಿಶ್ಚಯಿಸಿಕೊಂಡೆ.
ನನ್ನ ಥರ ಕರ್ನಾಟಕ ಅಥವಾ ಭಾರತದ ಯಾವುದೇ ಮೂಲೆಯಿಂದ ಹೆಚ್೪ ವೀಸಾ ಮೇಲೆ ಅಮೆರಿಕೆಗೆ ಬಂದಿರುವ ಎಲ್ಲಾ ಹುಡುಗಿಯರ ಮಾಮೂಲಿ ದಿನಚರಿ ಇದು. ಕೆಲವರಿಗೆ ಒಂದು-ಎರಡು ವಾರಗಳಲ್ಲೇ ಈ ಏಕಾಂಗಿತನ, ಕಾಯುವಿಕೆ, "ಹೋಮ್ ಸಿಕ್ ನೆಸ್" ಎಂಬ ಗೊಜಾ ಗೊಂದಲದ ಸೆಳೆತ, ಅಳುವಿನಿಂದ ಮುಕ್ತಿ ಸಿಕ್ಕು ಏನಾದರೂ ಚಟುವಟಿಕೆಗಳಲ್ಲಿ ಮನಸ್ಸು ತೊಡಗಿಸಿಕೊಳ್ಳುವ ಅವಕಾಶ ಸಿಗುತ್ತದೆ. ಕೆಲವರಿಗೆ ಇದೊಂದು ಮುಗಿಯಲಾರದ ಒಂಟಿ ಹೋರಾಟವಾಗಿಬಿಡುತ್ತದೆ. ನನಗೆ ಮೊದಲ ಕೆಲವು ವಾರಗಳು ಪ್ರತಿ ದಿನ ಬೆಳಿಗ್ಗೆಯಿಂದ ರಾತ್ರಿವರೆಗೆ ಇದೇ ಏಕತಾನತೆ ಕಂಡು ತಲೆ ಚಿಟ್ಟು ಬಂದು ಬಿಟ್ಟಿತ್ತು. ಅದನ್ನೆಲ್ಲಾ ಇಷ್ಟೇ ವಿವರವಾಗಿ ಬರೆಯುತ್ತಾ ಕೂತರೆ ನಿಮಗೆ ಅಂಡಮಾನ್ ಜೈಲಿಗೆ ಹಾಕಿದ ಶಿಕ್ಷೆ ಕೊಟ್ತಂತಾಗುತ್ತದೆ. ಆದ್ದರಿಂದ ಒಂಟಿತನ-ಬೇಜಾರು-ಕಾಯುವಿಕೆಗಳ ಪುಟಗಳಿನ್ನು ಸಾಕು. ನನಗೂ ಅದನ್ನು ನೆನಪಿಸಿಕೊಳ್ಳಲು ಕಜೆ ಎನ್ನಿಸುತ್ತದೆ. ಮುಂದೆ ಈ ದೇಶ, ನಾ ಕಂಡ ಜನ, ಜೀವನದ ಚಂದ, ತಮಾಶಿ-ವಿಸ್ಮಯ-ವಿಡಂಬನೆ-ನನ್ನ ದಡ್ದ ಅನುಭವಗಳನ್ನು ನಿಮ್ಮ ಮುಂದೆ ತೆರೆದಿಡುತ್ತೇನೆ.
ಎಂದಿನಂತೆ ಪ್ರೀತಿಯಿರಲಿ...
(ಮುಂದುವರಿಯುವುದು) |