ಅಂಗಳ      ನೀನಾರಿಗಾದೆಯೊ ಎಲೆ ಮಾನವ
 
 

ಗೋಹತ್ಯೆ : (೧) ತಾತ್ವಿಕತೆ

 
ಡಾ. ಹಿ. ಶಿ. ರಾ.
 
 
ಗೋಹತ್ಯೆ ನಿಷೇಧ ಕಾನೂನನ್ನು ತರಲು ಬಿ.ಜೆ.ಪಿ. ಸರ್ಕಾರ ತುದಿಗಾಲ ಮೇಲೆ ನಿಂತಿದೆ. ಇದು ತಮ್ಮ ಪ್ರತಿಷ್ಠೆಯ ಪ್ರಶ್ನೆ ಎಂದು ಅದು ತಿಳಿದಿದೆ. ಈ ಸರ್ಕಾರದ ಸಾಧನೆಗಳಲ್ಲಿ ಈ ಕಾನೂನು ಜಾರಿ ಕೂಡ ಒಂದು ಮುಖ್ಯ ದಾಖಲೆ ಎಂದು ಅದು ಹೇಳಿಕೊಳ್ಳುತ್ತಿದೆ. ಗೋಹತ್ಯೆ ನಿಷೇಧ ಕಾನೂನು ಜಾರಿ ಬಗ್ಗೆ ಬಿ.ಜೆ.ಪಿ ಸರ್ಕಾರಕ್ಕೆ ಇರುವ ಈ ತುರ್ತು ಯಾಕೆ ಎಂದು ಕೇಳಬೇಕಿಲ್ಲ. ಅದು ಬೀದಿ ಬೆಳಕಿನಷ್ಟು ಸತ್ಯ.
 
ಗೋಹತ್ಯೆ ನಿಷೇಧವೆ? ಯಾಕೆ? ಎಂದು ಕೇಳಿದರೆ ಅದು ಸಿದ್ಧ ಉತ್ತರವನ್ನು ಇಟ್ಟುಕೊಂಡಿದೆ. ಅದು ಪ್ರೈಮರಿ ಶಾಲೆಯ ಮಕ್ಕಳು ಕಾಗುಣಿತವನ್ನು ಬಾಯಿಪಾಠ ಮಾಡಿಕೊಂಡ ಹಾಗೆ. ಗೋವು ಬಿ.ಜೆ.ಪಿ. ಮೂಲನಿವಾಸಿಗಳ ಆಶ್ರಯ ತಾಣ. ಅವರ ಮುನ್ನೂರು ಮೂವತ್ತು ಕೋಟಿ ದೇವತೆಗಳ ವಾಸಸ್ಥಾನ. ಹಸು ಅವರ ಭೂಮಿ, ಬಂಡವಾಳ ಹಾಗೂ ಬ್ರಹ್ಮಾಂಡ. ಅದು ಹತ್ಯೆಯಾಗುವುದರಿಂದ ಅವರು ಹತ್ಯೆಯಾದ ಹಾಗೆ. ಅಂದರೆ, ಅವರ ಸತ್ವ, ಸತ್ಯ ಮತ್ತು ಅಸ್ತಿತ್ವ ನಾಶವಾದ ಹಾಗೆ. ಗೋಹತ್ಯೆ ಮೂಲಕ ಅವರು ಕೊಲೆಯಾಗುತ್ತಾರೆ. ಅಂಥ ಕೊಲೆಯನ್ನು ತಪ್ಪಿಸಿಕೊಳ್ಳಲು ಅವರು ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತರಬೇಕಾಗಿದೆ.
 
ಗೋವು ವೈದಿಕರ ಪವಿತ್ರ ಪ್ರಾಣಿ. ಅದರ ಎಲ್ಲ ವಿಸರ್ಜತೆಗಳೂ ಕೂಡ ಅಮೃತ ಸಮಾನ. ಆದ್ದರಿಂದಲೆ ಹಾಲು ಅಮೃತ. ಹಸು ಮತ್ತು ಹಾಲನ್ನು ಉಳಿಸಿಕೊಳ್ಳುವ ಕಥಾನಕವಾಗಿಯೆ ಅವರ ಪುರಾಣ ಪುಣ್ಯಕತೆಗಳು ಹುಟ್ಟಿಕೊಂಡಿವೆ. ಅವು ಅವರ ಅಸ್ತಿತ್ವದ ಪ್ರತಿಪಾದನೆಗಳು ಮಾತ್ರವಾಗಿರದೆ ಭಾರತದ ಅಸ್ತಿತ್ವದ ಆಕರಗಳಾಗಿಯೂ ವರ್ಣಿಸಲ್ಪಟ್ಟಿವೆ. ಹೀಗಾಗಿ, ಅವರ ಅಸ್ತಿತ್ವವೆಂದರೆ ಭಾರತದ ಅಸ್ತಿತ್ವ ಎಂದಂತಾಯಿತು.
 
ಜಗತ್ತಿನ ಎಲ್ಲ ಪುರಾತನ ಸಮುದಾಯಗಳಲ್ಲಿ ತಮ್ಮದೇ ಆದ ಪವಿತ್ರ ಪ್ರಾಣಿಗಳು ಇವೆ. ಅವು ಭಾವನಾತ್ಮಕವಾಗಿ ಆಯಾ ಸಮುದಾಯಗಳ ಜೀವಿತದ ಪ್ರಶ್ನೆಗಳಾಗಿವೆ. ಈ ಪ್ರಾಣಿಗಳನ್ನು ಕೊಲ್ಲುವುದು ಎಂದರೆ ಆ ಸಮುದಾಯದ ಜೀವನ ಸತ್ಯವನ್ನು ನಾಶ ಮಾಡಿದಂತೆ ಎಂದು ನಂಬಲಾಗಿದೆ. ಆದರೆ ಜಗತ್ತಿನ ಎಲ್ಲ ಸಮುದಾಯಗಳಿಗೂ ಇಂಥ ಪವಿತ್ರ ಪ್ರಾಣಿ ಇಲ್ಲ. ಯಾವ ಸಮುದಾಯಗಳು ತಮ್ಮನ್ನು ತಮ್ಮ ಪೂರ್ವಿಕ ಹಾಗೂ ಪೂರ್ವ ಪುರಾಣಗಳಿಂದ ಗುರುತಿಸಿಕೊಳ್ಳುತ್ತಾರೊ ಅವರಲ್ಲಿ ಮಾತ್ರ ಇವೆ. ಈ ನಂಬಿಕೆ ಬುಡಕಟ್ಟು ಸಮುದಾಯಗಳ ಕುಲ (clan) ಪರಿಕಲ್ಪನೆಯಿಂದ ಬಂದುದು. ಇದೆಲ್ಲಕ್ಕಿಂತ ಮುಖ್ಯ ಸಂಗತಿ ಎಂದರೆ ಒಂದು ಸಮುದಾಯದ ಪವಿತ್ರ ಪ್ರಾಣಿ ಬೇರೊಂದು ಸಮುದಾಯಕ್ಕೆ ಪವಿತ್ರ ಅಲ್ಲ. ಆ ಪ್ರಾಣಿಯನ್ನು ಬೇರೆ ಸಮುದಾಯದವರು ಚಪ್ಪರಿಸಿಕೊಂಡು ತಿನ್ನುತ್ತಾರೆ. ಪಾವಿತ್ರ್ಯದ ಪ್ರಶ್ನೆ ಇರಲಿ. ಇನ್ನೊಂದು ಸಮುದಾಯದ ಪವಿತ್ರ ಪ್ರಾಣಿಯನ್ನು ಕಂಡರೆ ಸಹನೆ ಇಲ್ಲದವರೂ ಇದ್ದಾರೆ. ಹಾಗಾಗಿ ಪಾವಿತ್ರ್ಯದ ಪ್ರಶ್ನೆ, ನಂಬಿರುವ ಆಯಾ ಸಮುದಾಯದ ನಡವಳಿಕೆಯೆ ಹೊರತು ಸಾರ್ವತ್ರಿಕ ಅಲ್ಲ.
 
ಭಾರತದಲ್ಲಿ ಗೋವು ಎನ್ನುವುದು `ಹಿಂದೂ' ಎಂಬ ಜನರ ಪವಿತ್ರ ಪ್ರಾಣಿ ಎಂದು ಹೇಳಲಾಗುತ್ತಿದೆ. ಇದು ನಿಜ ಅಲ್ಲ. ಪಂಚಮರು, ತಳ - ಕೆಳವರ್ಗದ ಜನರಲ್ಲಿ ಗೋಮಾಂಸ ಭಕ್ಷಣಿ ಸರ್ವೇ ಸಾಮಾನ್ಯವಾಗಿದೆ. ಅದು ಅವರ ಪೌಷ್ಠಿಕ ಆಹಾರವಾಗಿದೆ. ಕ್ರಿಶ್ಚಿಯನ್ ಮತ್ತು ಮುಸ್ಲಿಮರ ವಿಷಯ ಬಿಡಿ: ಅವರಿಗೆ ಗೋಮಾಂಸದ ಬಿರ್ಯಾನಿ ಇಲ್ಲದಿದ್ದರೆ ಜೀವವನ್ನೆ ಕಳೆದುಕೊಂಡಾರು. ದಲಿತರ ವಿಷಯದಲ್ಲೂ ಈ ಮಾತನ್ನು ಹೇಳಬಹುದು. ಅವರಲ್ಲೂ ಒಂದು ವರ್ಗದ
ಜನರಿಗೆ ಗೋಮಾಂಸ ಒಂದು ಅನ್ವೇಷಣೆ.
 
ಗೋವು ಒಂದು ಸಮುದಾಯಕ್ಕೆ ಪವಿತ್ರವೆಂದಾದರೆ ಅದನ್ನು ಸಂರಕ್ಷಿಸಿಕೊಳ್ಳುವುದು ಅದರ ಹಕ್ಕು ಮತ್ತು ಕರ್ತವ್ಯವಾಗಿದೆ. ಒಂದು ಪ್ರಾಣಿ ಒಂದು ಸಮುದಾಯದ ಪೌಷ್ಠಿಕ ಆಹಾರವಾಗಿದ್ದಲ್ಲಿ ಅದನ್ನು ಸಾಕುವುದು ಮತ್ತು ಅಭಿವೃದ್ಧಿ ಪಡಿಸುವುದು ಅದರ ಹಕ್ಕಾಗಿದೆ. ಒಂದು ಪ್ರಾಣಿ ಒಳ್ಳೆಯ ಆಹಾರ ಮತ್ತು ಔಷಧ ಎನ್ನುವುದಾದಲ್ಲಿ ಸಕಲೆಂಟು ಸಮುದಾಯಗಳೂ ಅದನ್ನು ಉಳಿಸಿ - ಬೆಳಸುವ ಕೆಲಸವನ್ನು ಮಾಡಲೇಬೇಕಾಗುತ್ತದೆ. ಮನುಷ್ಯನ - ಆರೋಗ್ಯದ ವಿಷಯಕ್ಕೆ ಮೇಲಿನ ಮೂರೂ ಕಾರಣಗಳಲ್ಲಿ ಯಾವುದಾದರೊಂದನ್ನು ನಿರಾಕರಿಸುವುದು ಸಾಧ್ಯವಾಗದು. ಇವೆಲ್ಲಕ್ಕಿಂತ, ಆರ್ಥಿಕ ದೃಷ್ಟಿಯಿಂದ ಕೆಲವು ಪ್ರಾಣಿಗಳು ತುಂಬಾ ಅಗತ್ಯವಾಗಿವೆ ಮತ್ತು ಅವುಗಳನ್ನು ಸಂರಕ್ಷಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅಂಥ ಪ್ರಾಣಿಗಳಲ್ಲಿ ಗೋವು ಪ್ರಮುಖಪಾತ್ರವನ್ನು ವಹಿಸುತ್ತದೆ. ಜಗತ್ತಿನ ಮೊದಲ ಅಭಿವೃದ್ಧಿ ಕ್ರಾಂತಿ- ಕೃಷಿ. ಅದರ ಕೇಂದ್ರಶಕ್ತಿ ಗೋವು. ಈ ಗೋವು ಎರಡು ಮಹಾಕ್ರಾಂತಿಗಳಲ್ಲಿ ಮುಖ್ಯ ಧಾತುವಾಗಿದೆ. ಒಂದು, ಸಾಕುಪ್ರಾಣಿಗಳಲ್ಲಿ ಹಾಲಿನಂಥ ಪ್ರಮುಖ ಪೌಷ್ಠಿಕ ಆಹಾರವನ್ನು ಒದಗಿಸಿ ಮನುಕುಲದ ಶಿಶುಗಳನ್ನು ಪೋಷಿಸಿದೆ. ಎರಡು, ಮನುಷ್ಯ ಅಲೆಮಾರಿತನದಿಂದ ಕೇಂದ್ರ ಜೀವನಕ್ಕೆ ಬಂದು ನೆಲೆ ನಿಲ್ಲಲು ಕಾರಣವಾದ ಕೃಷಿ ಪದ್ಧತಿಯ ಅಸ್ತಿತ್ವಕ್ಕೆ ಮೂಲ ಕಾರಣವಾಗಿದೆ. ಗೋವಿನ ಈ ಕೊಡುಗೆ ಹಿಂದೂ ಎಂಬ ಜನರಿಗೆ ಮಾತ್ರವಲ್ಲ. ಇಡೀ ಮಾನವ ಜನಾಂಗ ಯಜಮಾನನಾಗಲು ಕೊಟ್ಟ ಕೊಡುಗೆಯಾಗಿದೆ. ಆಹಾರದಲ್ಲಿ ಉಳಿತಾಯ ಬಂದಿದೆ. ಅದು ರಾಜ, ರಾಜ್ಯ ಮತ್ತು ಪ್ರಭುತ್ವ ವ್ಯವಸ್ಥೆಯನ್ನು ಕಟ್ಟಲು ಅನುವಾಗಿದೆ. ಇನ್ನೊಂದು ಅರ್ಥದಲ್ಲಿ ಭೂಮಾಲೀಕತ್ವ ಹುಟ್ಟಿ ಬೆಳೆಯಲು ಗೋವುಗಳೇ ಕಾರಣವಾಗಿವೆ. ಅವು ಹೊಲದಲ್ಲಿ ಗೇಯುವುದು ಮಾತ್ರವಲ್ಲ. ಮನೆಯ ಮೌಲ್ಯವೂ, ರಾಜರುಗಳ ಸಂಪತ್ತಿನ ಕಣಜವೂ ಆಗಿ ಕೆಲಸ ನಿರ್ವಹಿಸಿವೆ.
 
ನಾನು ರೈತ ಸಮುದಾಯದಿಂದ ಬಂದವನು. ನಮ್ಮಲ್ಲಿ ಬಳಸುವುದು ಇದೆ. ಬಿಸಾಡುವುದು ಇಲ್ಲ; ಅದನ್ನು ಪುನರುತ್ಪಾದನೆ ಮಾಡಲಾಗುತ್ತದೆ. ನಮ್ಮಲ್ಲಿ ಸಹ ಜೀವಿಗಳು ಇವೆ. ಅವುಗಳ ಜೊತೆಗೇ ಸಹಕಾರ ಮತ್ತು ದೂರ ಇಡುವ ತತ್ವ ಇದೆ. ನಮ್ಮ ಬೆಳೆ ಶ್ರಮದ ಫಲ ಎನ್ನುವ ಕಾರಣಕ್ಕೆ ಅದನ್ನು ನಾಶ ಮಾಡುವ ಪ್ರಾಣಿಗಳನ್ನು ದೂರ ಇಡಲು ನಾನಾ ಕ್ರಮಗಳನ್ನು ಬಳಸಲಾಗುತ್ತದೆ. ಅದರಲ್ಲಿ ಕೊಲ್ಲುವುದೂ ಒಂದು ಕ್ರಮ. ಎರೆಹುಳು, ಗುಬ್ಬಚ್ಚಿ, ಇರುವೆ ಇಂಥ ಸಹಾಯಕ ಪ್ರಾಣಿಗಳಿವೆ. ಅವುಗಳ ಜೊತೆಗೆ ಸ್ನೇಹ ಸಂಬಂಧವಿದೆ. ಸಸ್ಯಗಳ ಜೊತೆಗೆ ನಮಗೆ ಮಿತ್ರ ಮತ್ತು ಶತ್ರುವಿನ ಸಂಬಂಧವಿದೆ. ಕಳೆ ನಮ್ಮ ಶತ್ರು. ಆದರೆ ಬೆಳೆ ಸೇರಿದಂತೆ, ಹಣ್ಣು, ಔಷಧ, ರಕ್ಷಣೆ ಕೊಡುವ ಸಸ್ಯಗಳಿವೆ. ಅವು ನಮ್ಮ ಬದುಕಿನ ಭಾಗವೇ ಆಗುತ್ತವೆ. ಹೀಗೆ ಬಳಸುವುದು ಮತ್ತು ಬದುಕಿಸುವುದು - ಈ ಎರಡೂ ಗುಣಗಳು ರೈತನ ಗುಣಗೌರವಗಳು. ಈ ಹಿನ್ನೆಲೆಯಲ್ಲಿಯೆ ನಮ್ಮಲ್ಲಿ ಹೆಣ್ಣನ್ನೂ-ಗೋವನ್ನೂ  ಕೊಲ್ಲಬಾರದು ಎಂದಿದೆ. ಈ ಎರಡರ ಜೊತೆಗೆ ಬ್ರಾಹ್ಮಣನನ್ನು ಸೇರಿಸಲಾಗಿದೆ. ಇದು ಮನುಧರ್ಮಶಾಸ್ತ್ರಕಾರನ ಕಿತಾಪತಿ ಇರಬಹುದು! ಸಂರಕ್ಷಕ ವಸ್ತುಗಳ ಜೊತೆಗೆ ಸೇರಿಕೊಂಡರೆ ಯಾಹೊತ್ತೂ ಕ್ಷೇಮ!! ಇಲ್ಲಿಯೇ ಗೋವು ಮತ್ತು ಬ್ರಾಹ್ಮಣ ಒಟ್ಟಿಗೆ ಸೇರುವುದು. ಹೆಣ್ಣಿಗೆ ಮಾತ್ರ ಈ ಸುವರ್ಣಾವಕಾಶ ಸಿಗಲಿಲ್ಲ!!! ಇದರಿಂದ ಗಂಡು ಏನಾದ? ಸುಲಿಗೆ ಕೋರ, ಪ್ರಭು, ಬಂಡವಾಳಿಗ, ಬಳಕೆದಾರ...
 
ರೈತರಿಗೆ, ಅರ್ಥಾತ್ ದುಡಿಯುವ ಮಂದಿಗೆ ಸೃಜನ ಮೂಲಗಳಾದ ಭೂಮಿ, ಹೆಣ್ಣು ಮತ್ತು ಗೋವುಗಳಂಥ ಜೀವಿಗಳು ಪ್ರಾಣವಾಯುವಿನಷ್ಟೆ ಮುಖ್ಯ. ಪಾವಿತ್ರ್ಯ ? nonsense. ಅದೊಂದು ಸಂರಕ್ಷಣ (Protection) ಸಿದ್ಧಾಂತ. ಮಕ್ಕಳಿಗೆ, ಮುದುಕರಿಗೆ, ದುರ್ಬಲ ಪ್ರಾಣಿಗಳಿಗೆ ಸಂರಕ್ಷಣೆ ಬೇಕು. ದಾಂಢಿಗರಿಗೆ, ಶೋಷಕರಿಗೆ, ಕದೀಮರಿಗೆ ರಕ್ಷಣೆ ಯಾಕೆ ಬೇಕು? ಯಾಹೊತ್ತೂ ಆರ್ಥಿಕ ಮತ್ತು ಸಾಂಸ್ಕೃತಿಕ ದರೋಡೆಕೋರರಿಗೆ ಸಂರಕ್ಷಣೆ ಬೇಕು. ಅಂಥವರು ಪಾವಿತ್ರ್ಯ, ಶ್ರೇಷ್ಠತೆ, ನೈಪುಣ್ಯತೆಗಳೆಂಬ ಸಾಧನಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಇವೆಲ್ಲ ಇರುವುದಾದರೆ ವ್ಯಕ್ತಿಯ ಶೀಲ ಮತ್ತು ಸಾಧನೆಯೊಳಗೆ ಅಡಕವಾಗಿರುತ್ತವೆ.
 
ನಾವು ರೈತರು. ಸೃಜನ ಮೂಲಗಳನ್ನು ಗೌರವಿಸುವುದು ಮತ್ತು ಅವುಗಳ ಅಸ್ತಿತ್ವವನ್ನು ಪ್ರತಿಪಾದಿಸುವುದು ಅವುಗಳು ಕೊಡುತ್ತಿರುವ ಉತ್ಪಾದನಾ ಮಹತ್ವದಿಂದ. ಅಂಥ ಉತ್ಪಾದನಾ ನೈಪುಣ್ಯವೇ ಅವುಗಲ ಶೀಲ ಮತ್ತು ಪಾವಿತ್ರ್ಯ. ಈ ಕಾರಣದ ಮೇಲೆ ಹೆಣ್ಣು ನಮಗೆ: ಅವಳು ಮಕ್ಕಳನ್ನು ಕೊಡುತ್ತಾಳೆ, ಆಹಾರವನ್ನು ತಯಾರಿಸುತ್ತಾಳೆ (ಮೊದಲು ಅವಳ ಕಂದನಿಗಾಗಿ), ಮನೆಯನ್ನು ಶುಚಿಯಾಗಿ ಇಡುತ್ತಾಳೆ, ಸಾಕು ಪ್ರಾಣಿಗಳನ್ನು ನೋಡಿಕೊಳ್ಳುತ್ತಾಳೆ. ಬೀಜವನ್ನು ಬಿತ್ತುತ್ತಾಳೆ, ಬೆಳೆಯನ್ನು ಕೊಯ್ಯುತ್ತಾಳೆ, ಕಾಳು ಕಡ್ಡಿಯನ್ನು ಅಚ್ಚುಕಟ್ಟು ಮಾಡುತ್ತಾಳೆ, ಮನೆಯಲ್ಲಿಟ್ಟು ಸಂರಕ್ಷಣೆ ಮಾಡುತ್ತಾಳೆ, ಮಕ್ಕಳನ್ನು ಸಮಾಜ ಮುಖಿಯಾಗಿ ಬೆಳೆಸುತ್ತಾಳೆ, ಗಂಡ ರಾಕ್ಷಸನಾಗದಂತೆ ನೋಡಿಕೊಳ್ಳುತ್ತಾಳೆ. ಹೀಗೆ ಅವಳು ಅತ್ಯಂತ ಅಮೂಲ್ಯ. ಅವಳನ್ನು ಹತ್ಯೆ ಮಾಡಲಾಗದು, ಮಹಾಪಾಪ. ಯಾಕೆಂದರೆ ಅಮೋಘ ಉತ್ಪಾದನಾ ಮೂಲವೊಂದನ್ನು ನಾಶಮಾಡಿದಂತೆ. ಆ ಮೂಲಕ ಜನಜೀವನವನ್ನು ಕಷ್ಟಕ್ಕೆ ತಳ್ಳಿದಂತೆ. ಅತ್ಯಾಧುನಿಕ ಶೋಧನೆಯಿಂದಲೂ ಇಂಥ ನೆಲ ಮೂಲ ಸೃಜನ ಮೂಲವನ್ನು ಕಂಡುಕೊಳ್ಳಲು ಆಗದು.
 
ಗೋವು : ರೈತನ ಮಿತ್ರ, ಸಹಾಯಕ, ಸೇವಕ, ಆಹಾರ, ಅಮೃತ, ಪೋಷಕ, ಪವಿತ್ರ ಮತ್ತು ಇತ್ಯಾದಿ. ರೈತ ಗೋವುಗಳನ್ನು ಹತ್ಯೆ ಮಾಡಿದುದಿಲ್ಲ, ನಿರ್ಲಕ್ಷಿಸಿದ್ದೂ ಇಲ್ಲ. ಅದು ಅವನ ವಿವಿಧೋದ್ದೇಶದ ಅಣೆಕಟ್ಟೆಯಂತೆ ಇತ್ತು. ಚೈತನ್ಯವಿದ್ದಾಗ ಕೃಷಿ ಮಾಡುತ್ತಿತ್ತು. ಚೈತನ್ಯ ಕುಂದಿದಾಗ ಗೊಬ್ಬರ ಕೊಡುತ್ತಿತ್ತು. ಈಗ ಉಳುಮೆ ಮತ್ತು ಗೊಬ್ಬರ ಉತ್ಪಾದನೆಯನ್ನು ರೈತನಿಂದ ಕಸಿದುಕೊಂಡು ಟ್ರಾಕ್ಟರ್ ಮತ್ತು ರಸಗೊಬ್ಬರ ತಯಾರಿಕೆಯ ಉದ್ಯಮಿಗೆ ಕೊಡಲಾಗಿದೆ. ಆದ್ದರಿಂದ ರೈತ ಈಗ ನೇಗಿಲು ಮತ್ತು ಗೋವು ನಿರುತ್ಪಾದಕ ಎಂದು ತಿಳಿದಿದ್ದಾನೆ. ಅವನದು ಈಗ ಸಹಜ ಬದುಕಾಗಿಲ್ಲ, ಅವನು ಮಾರಿಕೊಂಡವನು. ಹಸುಗಳನ್ನು ಮೇಸಲು ಗೋಮಾಳ ಇಲ್ಲ. ಭತ್ತ-ರಾಗಿ-ಗೋಧಿ ಹುಲ್ಲನ್ನು ತಿನ್ನಿಸೋಣವೆಂದರೆ ಆಧುನಿಕ ತಳಿಶಾಸ್ತ್ರಜ್ಞರು ಕಡಿಮೆ ಎತ್ತರದ ಹುಲ್ಲು ಹಾಗೂ ಹೆಚ್ಚು ಬೀಜಕೊಡುವ ತಳಿಗಳನ್ನು ಕೃಷಿಗೆ ಬಿಟ್ಟಿದ್ದಾರೆ. ರೈತನ ಅಪರಾಧ ಎಂದರೆ ಪೋಷಿಸಲು ಆಗದ್ದಕ್ಕಿಂತ ಹೆಚ್ಚಿಗೆ ಸಂತಾನ ಸೃಷ್ಟಿ ಮಾಡುತ್ತಿರುವುದು ಮತ್ತು ಆದಾಯಕ್ಕಿಂತ ವೆಚ್ಚವನ್ನು ಹೆಚ್ಚು ಮಾಡಿರುವುದು. ಸಾಕಲು ಅನುಕೂಲ ಇಲ್ಲದ ಕಾರಣ ವಯಸ್ಸಾದ ದನ-ಕರುಗಳನ್ನು ಮಾರುತ್ತಿದ್ದಾನೆ. ಅದರಲ್ಲೂ ಲಾಭದ ಕಾರಣಕ್ಕೆ ಹಾಲು ಕೊಡುವ ಹಸು ಮತ್ತು ಕರುಗಳನ್ನು ಆತ ಸಲೀಸಾಗಿ ಮಾರುತ್ತಿದ್ದಾನೆ. ಮಿತ್ರನಾಗಿ ದುಡಿದ, ಸಾಂಸ್ಕೃತಿಕ ಸ್ನೇಹಿತನಾಗಿದ್ದ ಸ್ಥಳೀಯ ಹಸು-ಕರುಗಳನ್ನು ಮಾರಲು ಹಿಂಜರಿಯುತ್ತಾನೆ. ಸಂಸ್ಕೃತಿಯನ್ನು ಮಾರಿ ಹೊಟ್ಟೆ ಹೊರೆಯುವ ದುಸ್ಥಿತಿಗೆ ರೈತ ಇನ್ನೂ ಬಂದಿಲ್ಲ. ಬರಬಹುದು! ಆದರೆ ಕರ್ನಾಟಕ ಸರ್ಕಾರದ ಗೋಹತ್ಯೆ ನಿಷೇಧ ಕಾನೂನಿನಿಂದ ರೈತರಿಗೆ ಏನೂ ಉಪಯೋಗವಿಲ್ಲ. ಹಾಗೇನಾದರೂ ಇದ್ದರೆ ಅದು ರೈತರ ಹೆಸರಿನಲ್ಲಿ ಸರ್ಕಾರ ಬೇನಾಮಿ ವ್ಯವಹಾರ ನಡೆಸುತ್ತಿದೆ ಎಂದು ತಿಳಿಯಬೇಕು.
 
ನಾನು ದುಡಿಯುವ ವರ್ಗದಿಂದ ಬಂದವನು. ತನ್ನ ತಾಯಿ ಕೃಷಿಯಲ್ಲಿ ದುಡಿಯುತ್ತಿದ್ದಳು. ಅವಳ ಬಾಲ-ಬಾಲಕ ನಾನು. ಆ ಕಾರಣಕ್ಕೆ ಹೆಣ್ಣು, ಗೋವು, ಕೃಷಿ ಕೂಲಿ ಮತ್ತು ರೈತರ ನಿರಾಕರಣೆ, ಸಾವು ಅಥವಾ ಹತ್ಯೆಯನ್ನು ಸಹಿಸುವುದಿಲ್ಲ. ರೈತರ ಆತ್ಮಹತ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಸಾರ್ವಜನಿಕರು ಮೊದಲ ಹಂತಕರು. ಪ್ರಜೆಗಳನ್ನು ಪ್ರತಿನಿಧಿಸುವ ಸರ್ಕಾರ ಎರಡನೆಯ ಹಂತಕನ ಸ್ಥಾನದಲ್ಲಿ ನಿಲ್ಲುತ್ತದೆ. ರೈತರ ನೆಲೆ ಬಿಡಿಸುವ ಚಿಂತನೆ ಹೊಂದಿರುವ ಮತ್ತು ಪರದೇಶದ ಯೋಜನೆಗಳಿಗೆ ತಮ್ಮನ್ನು ಮಾರಿಕೊಂಡಿರುವ ವಿಜ್ಞಾನಿಗಳು ಅಜ್ಞಾನಿಗಳು. ತಮ್ಮ ಸಂಪತ್ತು ಸಂಗ್ರಹಕ್ಕಾಗಿ ಯಾರನ್ನೂ ಬಲಿಕೊಡಲು ಸಿದ್ಧವಿರುವ ಉದ್ಯಮಪತಿಗಳು ಆಧುನಿಕ ರಾಕ್ಷಸರು. ಯಾವುದೇ ಸಮುದಾಯದ ಅವಕಾಶಗಳನ್ನು ಕಿತ್ತುಕೊಳ್ಳುವುದು, ನಿರಾಕರಿಸುವುದು ಜೀವನವನ್ನು ಕುಂಟಿತಗೊಳಿಸುವುದು ಮತ್ತು ಹತ್ಯೆ ಮಾಡುವುದು ಅಪರಾಧ.
 
ದುಡಿದು ಸೋತಿವೆ ಎನ್ನುವ ಕಾರಣಕ್ಕೆ ಗೋವುಗಳನ್ನು ಮಾರುವುದು, ಹತ್ಯೆ ಮಾಡುವುದು ಸರಿಯಲ್ಲ. ಹೆತ್ತು, ಸಾಕಿ, ದುಡಿದು ಹಣ್ಣಾದ ತಾಯಿ-ತಂದೆಯರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿರುವುದು ತರವಲ್ಲ. ಇದು ಯಂತ್ರ ಸಂಸ್ಕೃತಿಯ ತಾತ್ವಿಕತೆ. ಚಲಿಸುವಾಗ ಯಂತ್ರಬೇಕು, ಅದು ದುಡಿಮೆ ನಿಲ್ಲಿಸಿದರೆ ಗುಜರಿಗೆ ಎಂಬ ಮೆಟೀರಿಯಲಿಸ್ಟಿಕ್ ತತ್ವವನ್ನು ಮಾನವ ಜೀವನಕ್ಕೆ ನೇರವಾಗಿ ಅನ್ವಿಯಿಸಿದರೆ ಹೇಗೆ? ಹೆಣ್ಣನ್ನು ಅತ್ಯಾಚಾರ ಮಾಡಿದ ನಂತರ ಕೊಲ್ಲುವ ಮನಸ್ಸು ಕೂಡ ಇದೇ ಬಗೆಯದು. ಏನನ್ನಾದರೂ ನಿರಾಕರಿಸುವ ಮನಸ್ಸು ಇದೆಯಲ್ಲ ಅದು ಪೂರ್ವ ಪ್ರಾಕೃತವಾದುದು ಇಲ್ಲವೇ ಆಧುನಿಕ ಯಂತ್ರ ಸಂಸ್ಕೃತಿಯಿಂದ ದತ್ತವಾದುದು. ವ್ಯಕ್ತಿ, ಅಥವಾ ಸಮೂಹದ ಆಹಾರವೊಂದನ್ನು ನಿರಾಕರಿಸುವುದರಲ್ಲಿ ಮಾನವ ದ್ವೇಷವಿದೆ. ಕೊನೆಗೆ ಈ ಮನಸ್ಸು ದ್ವೇಷಿಸುವವನನ್ನೇ ದಹಿಸುತ್ತದೆ.
 
ಮುಂದೆ ಓದಿ: ಗೋಹತ್ಯೆ : (೨) ಆಹಾರ