ಕಡಿದಾಳು ಶಾಮಣ್ಣ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಆಪ್ತ ಗೆಳೆಯ. ಸ್ವಾಭಿಮಾನಿ ರೈತರು, ಜೀವ ಸಂಕುಲಗಳ ಸಂಗಾತಿ. ಅಪೂರ್ವ ಸ್ನೇಹಜೀವಿ. ಜಾತ್ಯಾತೀತ ಮನೋಧರ್ಮದ ಮಾನವತಾವಾದಿ. ಕರ್ನಾಟಕದ ರೈತ ಚಳುವಳಿಯ ಗಾಂಧಿ. ನಮ್ಮ ಸಂಸ್ಕೃತಿ ಕಂಡ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ. ನಮ್ಮವ ಎನ್ನಬಹುದಾದ ಎಲ್ಲರ ಮನುಷ್ಯ.
ದೇವನೂರು ಮಹಾದೇವ: ಕರ್ನಾಟಕ ಕಂಡ ಶ್ರೇಷ್ಠ ಸಾಹಿತಿ ಹಾಗು ಚಿಂತಕ. ಬಡವರ ನೋವನ್ನು ಎದೆಯೊಳಗೆ ಇಟ್ಟು ಕೊಂಡು ಸಮ ಸಮಾಜದ ಕನಸು ಕಾಣುತ್ತಾ ಬಂದ ಯೋಗಿ. ಅವರು ಬರೆದದ್ದು ಕಡಿಮೆ ಆದರೆ ಬರೆದದ್ದೆಲ್ಲಾ ಚಿನ್ನ, ಬದುಕಿದ್ದೆಲ್ಲವೂ ತಪಸ್ಸು. ಅವರ ಕುಸುಮಬಾಲೆ, ಒಡಲಾಳ ಕನ್ನಡದ ಅತ್ಯಂತ ಶ್ರೀಮಂತ ಕೃತಿಗಳ ಸಾಲಿನಲ್ಲಿ ಸೇರಿವೆ. ದೇಮಾ ಎಂದರೆ ಅದು ಕರ್ನಾಟಕದ ಒಂದು ಬರಹದ ಮಹಾ ಮಾದರಿ ಹಾಗು ಬದುಕಿನ ಮಹಾಮಾದರಿ.
ಡಾ. ಹಿಶಿರಾ: ನಮ್ಮ ಕಾಲದ ಬಹುಮುಖ್ಯ ಜಾನಪದ ತಜ್ನರು, ಗಂಭೀರ ದೇಸೀ-ಸಂಸ್ಕೄತಿ ಚಿಂತಕರು, ೮೦ರ ದಶಕದ ರೈತ ಹೋರಾಟಕ್ಕೆ ಸಂಪೂರ್ಣ ದನಿಕೊಟ್ಟ ಸಾಹಿತಿ. ನೆಲಮೂಲವಾದ ವೈಚಾರಿಕ ಆಕೄತಿಗಳನ್ನು ವರ್ತಮಾನದ ಸಂದರ್ಭಕ್ಕೆ ಸೄಜನಶೀಲವಾಗಿ ಸಜ್ಜುಗೊಳಿಸುವ ದಿಕ್ಕಿನಲ್ಲಿ ಕ್ರಿಯಾಶೀಲರು. ಎಲ್ಲ ತರಹದ ಜೀವವಿರೋಧಿ ಸಿಧ್ಧಾಂತಗಳನ್ನೂ ಸಾರಾಸಗಟು ಸುಟ್ಟು ಬಿಡಬೇಕೆಂಬ ಸಾತ್ವಿಕ ಸಿಟ್ಟಿನ ಕುಲುಮೆಯಲ್ಲಿ ಇವರ ಬರಹಗಳು ಹರಳುಗಟ್ಟುತ್ತವೆ. ೨೫ಕ್ಕೂ ಹೆಚ್ಚು ಕೄತಿಗಳನ್ನು ರಚಿಸಿದ್ದಾರೆ. ಭೂಮಿ ಮತ್ತು ಹಿಂಸೆ, ರಾಮ ಅಳುತ್ತಿದ್ದಾನೆ, ಕ್ಲಿಂಟನ್ ನಗು, ಜಾನಪದ ಸಾಂಸ್ಕೄತಿಕ ಆಯಾಮಗಳು, ಜಾನಪದ ತಡಕಾಟ, ಪುರದ ಪುಣ್ಯ, ಜಾನಪದದ ನ್ಯಾಯ, ಜಾನಪದ ಪ್ರಕೄತಿ ಇವು ಇವರ ಮುಖ್ಯ ಕೄತಿಗಳು.
ಡಾ. ಎಚ್. ಎಸ್. ರಾಘವೇಂದ್ರರಾವ್: ವಿಮರ್ಶಕ, ಕಥೆಗಾರ, ಅನುವಾದಕರಾಗಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ಕೊಟ್ಟಿರುವ ಶ್ರೀ ರಾವ್ ಮೆಲು ಮಾತಿನ ಸಜ್ಜನ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ೩೬ ವರ್ಷಗಳ ಕಾಲ ಉಪನ್ಯಾಸಕರಾಗಿದ್ದು, ಹಂಪಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ನಿವೃತ್ತಿಯ ನಂತರ ಸಂಪೂರ್ಣವಾಗಿ ಓದು-ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ೨೨ಕ್ಕೂ ಹೆಚ್ಚು ಕೃತಿಗಳಲ್ಲಿ ವಿಶ್ಲೇಷಣೆ, ನಿಲುವು ಇವು ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ವಿ. ಎಮ್. ಇನಾಂದಾರ್ ಪ್ರಶಸ್ತಿ ವಿಜೇತ ವಿಮರ್ಶಾ ಕೃತಿಗಳು. ಇವರ ಜನ ಗಣ ಮನ ಪ್ರವಾಸ ಕಥನ ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ಬಾಲ ಮೇಧಾವಿ, ಶಿಕ್ಷಣ ಮತ್ತು ಜೀವನ, ಪ್ರೀತಿಸುವುದೆಂದರೆ..., ಕಲೆಯಲ್ಲಿ ಮಾನವತಾವಾದ ಇವು ಇವರ ಕೆಲವು ಬಹುಮುಖ್ಯ ಅನುವಾದಿತ ಕೃತಿಗಳು.
ಕೆ. ವಿ. ತಿರುಮಲೇಶ್: ಮೂಲತಃ ಕೇರಳದ ಕಾಸರಗೋಡಿನವರಾದ ಪ್ರೊಫ಼ೆಸರ್ ಕೆ ವಿ ತಿರುಮಲೇಶ್ ಕನ್ನಡದ ಬಹು ಮುಖ್ಯಕವಿ ಮತ್ತು ವಿಮರ್ಶಕರಲ್ಲೊಬ್ಬರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲಾಂಗ್ವೇಜಸ್ ನಲ್ಲಿ ಪ್ರಾಧ್ಯಪಕರಾಗಿ ನಿವೃತ್ತಿ ಹೊಂದಿ ಈಗ ಯೆಮೆನ್ ನಲ್ಲಿ ಇಂಗ್ಲಿಷ್ ಅಧ್ಯಾಪನ ಮಾಡುತ್ತಿದ್ದಾರೆ. ಇವರ ೨೦ ಪ್ರಕಟಿತ ಕೃತಿಗಳಲ್ಲಿ ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬುವು ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕೆಲ ಕಾದಂಬರಿಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ ಇವರ ಅನುವಾದಿತ ಕೃತಿ.
ಮೀರಾ ನಾಯಕ್: ಮಹಿಳಾಪರ ಹೋರಾಟಗಾರ್ತಿ, ಪ್ರಬಂಧಕಾರ್ತಿ. ಮೈಸೂರಿನಲ್ಲಿ ಸಕ್ರಿಯವಾಗಿರುವ 'ಸಮತಾ' ಪ್ರಗತಿಪರ ಸಂಘಟನೆಯ ಸ್ಥಾಪಕ ಸದಸ್ಯೆ ಮತ್ತು ಅತ್ಯಂತ ಕ್ರಿಯಾಶೀಲ ಮಹಿಳೆ. ಬಲ್ಲವರೆಲ್ಲರಿಗೂ ಪ್ರೀತಿಯ "ಮೀರಕ್ಕ".
ಡಾ. ಬಂಜಗೆರೆ ಜಯಪ್ರಕಾಶ: ಕರ್ನಾಟಕದ ಬಹು ಮುಖ್ಯ ಪ್ರಗತಿಪರ ಚಿಂತಕ. ಕವಿ, ಸಂಸ್ಕೃತಿ ಚಿಂತಕ, ಅನುವಾದಕ, ವಿಮರ್ಶಕ, ಅಂಕಣಕಾರರಾಗಿ ತಮ್ಮ ಆಸಕ್ತಿಗಳ ವೈವಿಧ್ಯತೆಯನ್ನು ಅಭಿವ್ಯಕ್ತಿಸುತ್ತಿದ್ದಾರೆ. ಪೂರ್ಣಾವಧಿ ಬರಹಗಾರರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಕ್ರಿಯಾಶೀಲರಾಗಿದ್ದಾರೆ. ಈವರೆಗೆ ಕನ್ನಡದಲ್ಲಿ ೧೫ ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಮಹೂವಾ', `ನಾಳೆಗಾದರು ಸಿಗದೆ ನಿನ್ನ ತಾವಿನ ಗುರುತು', `ಬಾಗ್ ಬಹಾದುರ್ನ ಸಾವು', `ಉಲಿಯ ಉಯ್ಯಲೆ', `ನಿಲ', `ಕನ್ನಡ ರಾಷ್ಟ್ರೀಯತೆ', `ಇದೇ ರಾಮಾಯಣ' ಮುಂತಾದವು ಇವರ ಮುಖ್ಯ ಕೃತಿಗಳು. `ತಲೆಮಾರು', `ದೇಗುಲದಲ್ಲಿ ದೆವ್ವ', `ಪಾಪ ನಿವೇದನೆ' ಮುಂತಾದವು ಇವರ ಅನುವಾದಿತ ಕೃತಿಗಳು.
ಚ. ಸರ್ವಮಂಗಳ: ಪ್ರಬುಧ್ಧ ಕವಿಯತ್ರಿ, ವಿಮರ್ಶಕಿ ಹಾಗು ಪ್ರಬಂಧಕಾರ್ತಿ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ’ಅಮ್ಮನ ಗುಡ್ಡ’ ಇವರ ಮನ್ನಣೆಯ ಕವನ ಸಂಕಲನ. ಮಹಿಳೆಯರ ಪರ ಕಾಳಜಿ ಹೊಂದಿರುವಂತಹ ಬರಹಗಾರ್ತಿ.
ಡಾ. ಪಂಡಿತಾರಾಧ್ಯ: ಪಂಡಿತರು ಎಂದರೆ ಪ್ರಾಮಾಣಿಕ, ಶ್ರದ್ಧಾವಂತ, ಮುಕ್ತ ಮನುಷ್ಯ. ನಿರಂತರವಾಗಿ ಕನ್ನಡ ಭಾಷೆಯನ್ನು ಪ್ರೀತಿಸುವ, ಪ್ರೇಮಿಸುವ, ಒಡನಾಡುವ ಸಂಗಾತಿಯನ್ನಾಗೇ ಮಾಡಿಕೊಂಡು ಕನ್ನಡ ನಾಡಿನ ಉದ್ದಗಲಕ್ಕೂ ತಮ್ಮ ಕನ್ನಡ ಸಂಸಾರವನ್ನು ಹೂಡಿಕೊಂಡು ಎಲ್ಲರನ್ನೂ ಕನ್ನಡ ಬಳಸಲು-ಬೆಳೆಸಲು ಆಹ್ವಾನಿಸುತ್ತಾ ಬದುಕುತ್ತಿರುವ ವಿಶ್ವ ಕುಟುಂಬಿ. ಕನ್ನಡವಿಲ್ಲದೆ ಪಂಡಿತರಿಲ್ಲ- ಇದು ಅವರ ಮನೋಧರ್ಮ. ಅವರು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.
ಜಾಣಗೆರೆ ವೆಂಕಟರಾಮಯ್ಯ: ಹಿರಿಯ ಕನ್ನಡ ಪತ್ರಕರ್ತ, ಕನ್ನಡಕಾಗಿ ಸದಾ ಹೋರಾಟನಿರತ ಭಾವುಕ. ಪ್ರಕಟವಾಗಿರುವ ಇವರ ೧೭ ಪುಸ್ತಕಗಳಲ್ಲಿ ನನ್ನ ನೆಲ ನನ್ನ ಜನ, ಕಥೆ ಮುಗಿಸಿದ ನಾಯಕ, ಪ್ರಪಾತ ಇವು ಕೆಲವು ಕಥಾ ಸಂಕಲನಗಳು. ದಡ, ನೆಲೆ, ಗರ, ಮಹಾನದಿ ಇವು ಅವರ ಕಾದಂಬರಿಗಳು. ಅವರ ಮಹಾನದಿ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ. ಜಾಣಗೆರೆ ಅವರು ಲಂಕೇಶ್ ಪತ್ರಿಕೆ, ಈ ಸಂಜೆ, ಅಭಿಮಾನಿ, ನಮ್ಮ ನಾಡುಗಳಂತಹ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಮಾರ್ದನಿ, ಕರುನಾಡ ಸಂಜೆ, ಜಾಣಗೆರೆ ಪತ್ರಿಕೆ ಇವು ಇವರ ಸಂಪಾದಕತ್ವದಲ್ಲಿ ಮೂಡಿ ಬಂದ ಪತ್ರಿಕೆಗಳು.
ಪದ್ಮಾ ಶ್ರೀರಾಮ್: ಮೈಸೂರಿನ ಬಹುತೇಕ ಪುಟಾಣಿಗಳಿಗೆ ಪಕ್ಷಿ-ಹೂವಿನ ಕಥೆ ಹೇಳಿ ಪರಿಚಯಿಸುವ ಆಂಟಿ ಅಂತಲೇ ಚಿರಪರಿಚಿತರು. ಸಸ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿರುವ ಇವರ ಆಸಕ್ತಿ ಪಕ್ಷಿಗಳು-ಸಸ್ಯಸಂಕುಲ-ಹೂವುಗಳು ಇವಕ್ಕಷ್ಟೇ ಸೀಮಿತವಲ್ಲದೆ ಸಾಹಿತ್ಯ-ಸಂಗೀತ-ಚಾರಣ-ಪ್ರವಾಸ-ಓದು ಮತ್ತು ಬರಹದ ಕಡೆಗೂ ಪಸರಿಸಿಕೊಂಡಿದೆ.
ದಿವಂಗತ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರು (೧೯೫೪-೨೦೧೦): ಮೂವತ್ತು ವರ್ಷಗಳ ಅನುಭವವಿರುವ ಕರ್ನಾಟಕದ ತಜ್ಷ ಶಸ್ತ್ರವೈದ್ಯರು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದ ನಂತರ, ಎಡಿನ್ ಬರೋ ಮತ್ತು ಗ್ಲಾಸ್ಗೋ ವಿಶ್ವವಿದ್ಯಾಲಯಗಳಿಂದ ಎಫ್.ಆರ್.ಸಿ.ಎಸ್. ಪದವಿಗಳನ್ನು ಗಳಿಸಿದರು. ಯುನೈಟೆಡ್ ಕಿಂಗಡಮ್ ಮತ್ತು ಸೌದಿ ಅರೇಬಿಯಾಗಳಲ್ಲಿ ಹಲವು ವರ್ಷಗಳು ಕೆಲಸ ಮಾಡಿದ ನಂತರ ಬೆಂಗಳೂರಿಗೆ ಹಿಂದಿರುಗಿ ಸರ್ಜಿಕಲ್ ಗ್ಯಾಸ್ಟ್ರೋ ಎಂಟೆರಾಲಜಿಸ್ಟ್ ಮತ್ತು ಜನರಲ್ ಸರ್ಜನ್ ಆಗಿ ಪ್ರಸಿದ್ಧರಾಗಿದ್ದರು.
ಡಾ. ಪ್ರೀತಿ ಶುಭಚಂದ್ರ: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯನ ಸಂಸ್ಥೆಯಲ್ಲಿ ರೀಡರ್ ಆಗಿದ್ದಾರೆ. ವಚನ ಸಾಹಿತ್ಯ, ಜೈನ ಸಾಹಿತ್ಯ, ವಿಮರ್ಶೆ ಮತ್ತು ಮಹಿಳಾ ಅಧ್ಯಯನ ಇವರ ವಿಶೇಷ ಆಸಕ್ತಿಯ ಕ್ಷೇತ್ರಗಳು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪ್ರಕಟವಾದ "ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು" ಇವರ ಹಲವು ಮುಖ್ಯ ಕೃತಿಗಳಲ್ಲೊಂದು.
ಡಾ. ಉಷಾಕಿರಣ: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕಿ. ಕೃಷಿ ವಿಜ್ನಾನ ಕುರಿತ ಕನ್ನಡ ಪುಸ್ತಕಗಳ ಪ್ರಕಟಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಸವೇಶ್ವರ ಮತ್ತು ಪ್ರತಿಮಾ ನಿರ್ಮಿತಿ, ವಚನಗಳಲ್ಲಿ ಪ್ರತಿಮೆಗಳು, ವಚನ ಮಾಣಿಕ್ಯ ಕೋಶ ಇವು ಇವರ ಪ್ರಕಟಿತ ಕೃತಿಗಳ ಪಟ್ಟಿಯಲ್ಲಿ ಸೇರುತ್ತವೆ.
ಬಿ. ಎಸ್. ನಾಗರತ್ನ: ಮೈಸೂರಿನ ಪೂಜಾ ಭಾಗವತ್-ಮಹಾಜನ ಸಂಸ್ಥೆಯ ಪ್ರಾಂಶುಪಾಲರಾಗಿದ್ದಾರೆ. ಜನಪದ ಪರಿಶೀಲನ, ಊರಮ್ಮ ಮಾರಮ್ಮ, ಪಂಚಪಟಿಯ ಗಿಣಿ, ಅಂಕಲು ತೆನೆ ಇವರ ಹಲವು ಪ್ರಕಟಿತ ಕೃತಿಗಳು. ಈ ಕವಯತ್ರಿ ಮಹಿಳಾಪರ ಚಳುವಳಿಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಎಸ್. 'ರಂಗಧರ' : ಕರ್ನಾಟಕದ ಜನಪದ ಕಲೆಗಳು, ಕಲಾವಿದರ ಬದುಕಿನ ಕ್ಷಣಗಳಿಗೆ ಆಪ್ತ ಕಿಂಡಿ ಕೊರೆದುಕೊಡಲು ಒಪ್ಪಿರುವ ಪ್ರೀತಿಯ ಮಿತ್ರ.
ಶ್ರೀಮತಿ ದಮಯಂತಿ: ಹಳ್ಳಿ ಅಡಿಗೆ, ಆರೋಗ್ಯಕರ ಅಡಿಗೆಗಳೆಂದರೆ ಇವರಿಗೆ ತುಂಬಾ ಪ್ರೀತಿ. ಬಹಳ ಶುಚಿ-ರುಚಿಯಾಗಿ ಅಡುಗೆ ಮಾಡುತ್ತಾರೆ.
ಬಿ.ಎಸ್. ಶಿವಪ್ರಕಾಶ್ : ನಮ್ಮ ಪತ್ರಕರ್ತ ಮಿತ್ರ. ಬೆಂಗಳೂರಿನವರು. ಕನ್ನಡ-ಕರ್ನಾಟಕದ ವಿಷಯಗಳ ಬಗ್ಗೆ ಬಹಳ ಕಾಳಜಿ, ಭಾವಾರೋಷದಿಂದ ಬರೆಯುತ್ತಾರೆ. ಪಕ್ಷಿ ವೀಕ್ಷಣೆ, ಪ್ರಯಾಣ, ಓದು ಇವರ ಪ್ರೀತಿಯ ಹವ್ಯಾಸಗಳು.
ಟೋನಿ: ಅನುಭವೀ ಹವ್ಯಾಸೀ ಪತ್ರಕರ್ತ. ಗುಂಬಜ್ ಒಂದರ ಯಾವುದೋ ಮೇಲ್ಮೂಲೆಯಲ್ಲಿ ಸದ್ದಿಲ್ಲದೇ ಕುಳಿತು ಸುತ್ತಮುತ್ತಲನ್ನೆಲ್ಲ ಮೌನವಾಗಿ ಪರಿವೀಕ್ಷಿಸಿ, ತನ್ನಷ್ಟಕ್ಕೇ ಮಾತಾಡಿಕೊಳ್ಳುವ ಪಾರಿವಾಳ. ಉತ್ಕಟ ಭಾವುಕ ಮತ್ತು ತೀರ ಸಜ್ಜನ.
ಸಹನಾ: ಬೆಂಗಳೂರಿನ ಪತ್ರಕರ್ತ ಮಿತ್ರ. ಕನ್ನಡದ ಜನಪ್ರಿಯ ಟಿವಿ ಚಾನೆಲ್ ಒಂದರಲ್ಲಿ ಹಿರಿಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ, ರಾಜಕೀಯ ನಾಯಕರು-ಇತರೆ ಹೋರಾಟಗಳ ನಾಯಕರುಗಳನ್ನು ಅಭ್ಯಸಿಸುವುದು, ವ್ಯವಸಾಯ, ಟ್ರಾವೆಲಿಂಗ್ ಇವರ ಹವ್ಯಾಸಗಳು.
ಶಶಾಂಕ್ ಶೆಟ್ಟಿ: ಅಟ್ಲಾಂಟನಲ್ಲಿ ಸಾಫ್ಟ್ ವೇರ್ ಉದ್ಯೋಗಿ. ಓದುವುದು-ಸಂಗೀತ ಕೇಳುವುದು-ಪ್ರಯಾಣ ಇವರ ಹವ್ಯಾಸಗಳು.
ಡಾ. ತೇಜಸ್ವಿ ಶಿವಾನ೦ದ್: ಈ ಯುವ ವಿಜ್ನಾನಿ ಬೆ೦ಗಳೂರಿನಲ್ಲಿರುವ ಜಿಡ್ಡು ಕ್ರಿಷ್ಣಮೂರ್ತಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದಾರೆ. ತು೦ಬಾ ಜೀವನ ಪ್ರೀತಿಯ ವ್ಯಕ್ತಿ. ಅಷ್ಟೇ ಉತ್ಕಟವಾಗಿ ಪರಿಸರವನ್ನೂ ಪ್ರೀತಿಸುತ್ತಾರೆ. ಪಕ್ಷಿ ವೀಕ್ಷಣೆ, ಪರ್ಯಟನೆ, ಬರವಣಿಗೆ, ಹಾಡುಗಾರಿಕೆ ಇವರ ಹಲವು ಹವ್ಯಾಸಗಳು.
ಎಸ್. ಸಿರಾಜ್ ಅಹಮದ್: ಪ್ರಗತಿಪರ ಯುವ ಬರಹಗಾರ. ವಿಮರ್ಶೆ ಇವರ ವಿಶೇಷ ಆಸಕ್ತಿ. ಪ್ರಸ್ತುತ ಡಾ. ರಾಜೇಂದ್ರ ಚೆನ್ನಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಮಾಡುತ್ತಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿದ್ದಾರೆ.
ಬೇಲಾ ಮರವ೦ತೆ: ಬೇವು ಮತ್ತು ಆಲದ ಮರಕ್ಕೆ ಮದುವೆ ಮಾಡಿಸಿದ ಮೇಲೆ ಇವರು ಹುಟ್ಟಿದ್ದ೦ತೆ. ಇತ್ತೀಚೆಗೆ ಅಮೆರಿಕಾಗೆ ಬ೦ದು ನೆಲೆಸಿದ್ದಾರೆ. ವ್ಯಾಸ೦ಗ ಮು೦ದುವರಿಸಿದ್ದಾರೆ. ಜನರನ್ನು ಅಭ್ಯಸಿಸುವುದು, ಸಂಗೀತ ಕೇಳುವುದು ಇವರ ಹವ್ಯಾಸಗಳು.
ವಿವೇಕ್ ವಿಶ್ವನಾಥ್: ಸಾಫ್ಟ್ ವೇರ್ ಉದ್ಯೋಗಿ. ಹೈಕಿಂಗ್, ಬರೆಯುವುದು, ಸ್ಯಾನ್ ಆಂಟೋನಿಯೋ ’ಸ್ಪರ್ಸ್’ ಗಳ ಬ್ಯಾಸ್ಕೆಟ್ ಬಾಲ್ ಗೇಮ್ ನೋಡುವುದು ಇವರ ಮೆಚ್ಚಿನ ಹವ್ಯಾಸಗಳು.
ನವೀನ್ ಪಿ. ದಾಸ್: ಸಾಫ್ಟ್ವೇರ್ ವೇರ್ ಉದ್ಯೋಗಿ. ನ್ಯೂಯಾರ್ಕ್ ನಲ್ಲಿ ವಾಸ. ಕೇರಮ್ ಆಡುವುದು ಮತ್ತು ಹಳೆಯ ಕನ್ನಡ-ಹಿಂದಿ ಸಿನೆಮಾಗಳನ್ನು ನೋಡುವುದು ಇವರ ಹವ್ಯಾಸ.
ನವಮಿ : ಆಯಾಮದ ಗೆಳತಿ
|