ನವಮಿ
"ಕಮ್ ಆ...ನ್!! ಎಲ್ಲವನ್ನೂ ಗ್ರೀನ್, ಎಕೋ ಫ್ರೆಂಡ್ಲಿ, ಪರಿಸರ, ಭೂಮಿ ಅಂತ ಯೋಚನೆ ಮಾಡಿಕೊಂಡೇ ಮಾಡಿದ್ರೆ ಲೈಫ್ ನ ಬದುಕೋಕೆ ಆಗತ್ತಾ?! ಎಲ್ಲೋ ನಮ್ಮ ಕೈಯ್ಯಲ್ಲಿ ಆದದ್ದನ್ನು ಅಲ್ಲಿ ಇಲ್ಲಿ, ಹಾಗೆ ಹೀಗೆ ಮಾಡಬಹುದಷ್ಟೇ. ನಾವು ಇದು ಮಾಡಿದರೆ ಭೂಮಿಗೆ ಅದಾಗುತ್ತೆ, ಅದು ಮಾಡಿದರೆ ಆಕಾಶಕ್ಕೆ ಇದಾಗುತ್ತೆ ಅಂತ ಪ್ರತೀ ಸೆಕೆಂಡ್ ಗಿಲ್ಟ್ ನಲ್ಲೇ ಬದುಕೋದಿಕ್ಕೆ ಆಗುತ್ತಾ?!!! ಇಂಪಾಸಿಬಲ್!!! ಐ ವುಡ್ ರಾದರ್ ಡೈ ದ್ಯಾನ್ ಲಿವ್ ಸಚ್ ಅ ಗಿಲ್ಟಿ ಲೈಫ್!!!!!" ಚಿಕ್ಕಬಳ್ಳಾಪುರದ ವಡಗೆರೆ ಹಳ್ಳಿಯ ಸಂಜಾತ, ಕಳೆದ ಹದಿನೈದು ವರ್ಷಗಳಿಂದ ಅಮೆರಿಕನ್ ನಿವಾಸಿಯಾಗಿರುವ ಪರಿಚಿತರೊಬ್ಬರು, ಮಿತ್ರರೊಬ್ಬರ ಮನೆಯ ಮಾತಿನ ಬೇಠಕ್ಕಿನಲ್ಲಿ ಕೈಯಲ್ಲಿ ರಮ್ ಹಿಡಿದು ಎಗರಾಡುತ್ತಿದ್ದರು. ಇಂಥಾ ಗಿಲ್ಟ್, ತಪ್ಪು ಮಾಡುವವರಿಗೆಲ್ಲರಿಗೂ ಬಂದು, ಅವರು ಅದನ್ನು ತಿದ್ದುಕೊಳ್ಳುವ ಬದಲು-ನಮ್ಮಿಂದಾಗುವ ಆಮೆ ಹೆಜ್ಜೆ ಇಡೋಣ ಎಂದು ಕ್ರಿಯಾಶೀಲರಾಗುವ ಬದಲು, ಈ ರಮ್ ಪ್ರೇಮಿಯಂತೆಯೇ ನಾವು ಸಾಯುವುದೇ ಲೇಸು ಎಂದು ಸಮ್ಮತಿಸಿದರೆ, ಅವರ ಕೈಲಿ ಚೀಟಿ ಬರೆಸಿಕೊಂಡು ಅವರನ್ನು ತುಂಬಿಕೊಂಡು ಗಲ್ಫ್ ಆಫ್ ಮೆಕ್ಸಿಕೋನ ಎಣ್ಣೆ ಸೋರಿರುವ ಭಾಗಕ್ಕೆ ಬಿಸಾಕಿ ಬರಬಹುದಿತ್ತು ಎಂದು ಅಲ್ಲಿದ್ದ ಕೆಲವು "ಗ್ರೀನ್" ಮಿತ್ರರು ಗೊಣಗಾಡಿಕೊಳ್ಳುತ್ತಿದ್ದರು.
ನನ್ನ ಯಜಮಾನರು ಹೇಳುವುದು ಸಂಪೂರ್ಣ ಸರಿ ಎಂದು ನಮ್ಮ ರಮ್ ಪ್ರೇಮಿ ಪರಿಚಿತರ ಮಡದಿ ಅವರಿಗೆ ಓಟು ಹಾಕಿ "ನಮ್ಮ ಕೈಲಿ ಏನಾದ್ರೂ ಆಗುವಂತಾ ಟಿಪ್ಸ್ ಕೊಟ್ರೆ ನಾವು ಏನಾದ್ರೂ ಟ್ರೈ ಮಾಡ್ಬಹುದು...ಅದ್ ಬಿಟ್ಟು...ಡಿಶ್ ವಾಶಿಂಗ್ ಲಿಕ್ವಿಡ್ ಉಪಯೋಗಿಸಬೇಡಿ...ಟಾಯ್ಲೆಟ್ ಕ್ಲೀನರ್ ಉಪಯೋಗಿಸಬೇಡಿ...ಲಾನ್ ಗೆ ವೀಡ್ ಕಿಲ್ಲರ್ ಹಾಕಬೇಡಿ.." ಅಂತೆಲ್ಲಾ ಇಂಪಾಸಿಬಲ್ ಮಾತು ಹೇಳಿದ್ರೆ ಹೇಗ್ರೀ ಮಾಡೋದು?! ಇದೆಲ್ಲ ಒಂಥರಾ ನಾನ್ ಸೆನ್ಸ್ ಅಪ್ಪಾ!!" ಅಂತ ಗ್ರೀನ್ ವಾದಿಗಳನ್ನೆಲ್ಲಾ ತಮ್ಮ ದಡ್ಡತನದ ಪೊರಕೆಯಿಂದ ಗುಡಿಸಿ ಬಿಸಾಕಿಬಿಟ್ಟರು. ಇವರ ಹತ್ತಿರ ಮಾತಿಗೆ ಕೂತರೆ ನಮ್ಮ ಕಿಂದರಿ ಚಿಂದಿಯಾಗಿ ಬಿಡುತ್ತೆ ಎಂದು ನಮ್ಮ ಮಿತ್ರ ಗ್ರೀನ್ ವಾದಿಗಳೆಲ್ಲರೂ ಬಾಯಿಗೆ ಜಿಪ್ ಹಾಕಿಕೊಂಡು ಬಿಟ್ಟರು. ಆ ಹೆಂಗಸು ಕೇಳಿದ ಪ್ರಶ್ಣೆಯೂ ಸರೀನೇ ಬಿಡಿ. ಅಲ್ಪನಿಗೆ ಐಶ್ವರ್ಯ ಸಿಕ್ಕರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದಂತೆ, ಅರ್ಧ ಜೀವಮಾನ ಅರ್ಧರ್ಧ ಮಾರ್ಕುಗಳಿಗೂ ಹೊಡೆದಾಡಿಕೊಂಡು ಕೊನೆಗೊಮ್ಮೆ ಸಾಗರೋಲ್ಲಂಘನೆ ಮಾಡಿ ಪುಷ್ಕಳ ದೇಶ (ಈಗೇನಲ್ಲ ಬಿಡಿ) ಅಮೆರಿಕಾಗೆ ಬಂದು, ಬದುಕಿರುವರೆಗೂ ಇರುವ ಸುಖವನ್ನೆಲ್ಲಾ ಸೂರೆ ಮಾಡಿಬಿಡಬೇಕು ಎಂದು ಸೂಕ್ಶ್ಮತೆಗಳಿಲ್ಲದ ಬದುಕು ಬದುಕುವ ಇಂತಹ ಮಿತ್ರರಿಗೆ ಸಡನ್ನಾಗಿ ಒಂದು ದಿನ "ಭೂಮಿ ಉರಿದು ಹೋಗ್ತಾ ಇದೆ! ಪ್ಲೀಸ್ ಹೀಗೆ ಮಾಡಿ, ಹಾಗೆ ಮಾಡಬೇಡಿ..ಎಂದು ಸಲಹೆ ಕೊಡುವ ಗ್ರೀನ್ ವಾದಿ ಗಳು ಒಂಥರಾ ಕೆಂಪಿರುವೆಗಳ ಥರ!! ಇರಲಿ ಬಿಡಿ.
ಈ ದಂಪತಿಗಳ ಕಷ್ಟ ನಿಜವಾಗಲೂ ಪರಿಗಣಿಸಬೇಕಾದದ್ದು. ಆಧುನಿಕತೆಯ ಬೆರಗಿನಲ್ಲಿ ನಾವು ಯಾವ ಮಟ್ಟದಲ್ಲಿ ಮಂಕಾಗಿ ಹೋಗಿದ್ದೇವೆಂದರೆ ಮನೆಯಲ್ಲಿ ಸೋಪು-ಹಲ್ಲುಜ್ಜುವ ಪೇಸ್ಟ್ ಮುಗಿದು ಹೋದರೆ ಇನ್ನು ಮುಖ ತೊಳೆಯುವುದು-ಬಾಯಿಬಿಡುವುದು ಹೇಗೆ ಎಂಬ ಭಯಂಕರ ತಾಪತ್ರಯ ನಮಗೆ! ಅದಕ್ಕೇ ವಸುಂಧರೆಯ ನಿತ್ಯ ನಿರಂತರ ಹಾಡು-ಪಾಡುಗಳ ಜೊತೆಗೇ ಅವಳಿಗೆ ಹಿತವಾಗುವಂತೆ ಮಾಡುವ ಏನೇ ಪರ್ಯಾಯ ಬದುಕುವ ಮಾರ್ಗಗಳಿದ್ದರೂ ಅವನ್ನು ಹುಡುಕಿ, ಸಂಗ್ರಹಿಸಿ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದು ತೀರ್ಮಾನಿಸಿ ಈ ತಿಂಗಳ ಪೋಸ್ಟ್.
ಬೇಕಿಂಗ್ ಸೋಡಾ ಉರುಫ್ ಸೋಡಿಯಂ ಬೈ ಕಾರ್ಬೋನೇಟ್ (NaHCO3) ಅಂದರೆ ನಿಮಗೆ ಗೊತ್ತಿರಬೇಕಲ್ಲಾ.
ಭೂಮಿಯಿಂದಲೇ ಸಿಗುವ, ಭೂಮಿಗೆ ಅತಿಯಾಗಿ ಹಾನಿಮಾಡುವ ಕೆಟ್ಟ ಕೆಮಿಕಲ್ ಗಳ ಸಾಲಿಗೆ ಸೇರದ, ಆದರೆ ನಿತ್ಯ ಜೀವನದ ಹಲವಾರು ಕೆಲಸಗಳಲ್ಲಿ ಪರಿಸರಕ್ಕೆ ಪೂರಕವಾಗುವಂತೆ ಬದುಕಲು ನಮಗೆ ಸಹಾಯ ಮಾಡುವ ಈ ಮ್ಯಾಜಿಕ್ ಪುಡಿಯ ಬಗ್ಗೆ ನಿಮಗೆ ತಿಳಿದಿರಲೇಬೇಕಾದ ಅಂಶಗಳಿವು.
ಹಾಗೆ ನೋಡಿದರೆ ಬೇಕಿಂಗ್ ಸೋಡಾ ಸಂಪೂರ್ಣವಾಗಿ ಭೂಮಿಯಿಂದ ಸಿಗುವ ವಸ್ತುವಲ್ಲ. ಭೂಮಿಯ ಹೊರ ಪದರದಲ್ಲಿ ಸಿಗುವ ಸೋಡಾ ಬೂದಿಯನ್ನು ಸರಳ ರೀತಿಯಲ್ಲಿ ಶೋಧಿಸಿದಾಗ ಇದನ್ನು ಪಡೆಯಬಹುದು. ಸೋಲ್ವೇ ವಿಧಾನದಿಂದ ಸೋಡಾವನ್ನು ಶೋಧಿಸುವಾಗ ಅಮೋನಿಯಾ ಮತ್ತು ಇಂಗಾಲದ ಡೈ ಆಕ್ಸೈಡ್ ಅನ್ನು ಸೋಡಾಗೆ ಸೇರಿಸಲಾಗುತ್ತದೆ. ಆಗ ಬಿಡುಗಡೆಯಾಗುವ ಕ್ಯಾಲ್ಶಿಯಮ್ ಕ್ಲೋರೈಡ್ ಪರಿಸರಕ್ಕೆ ಹಾನಿಕಾರವಾಗುತ್ತದೆ. ಆದರೆ ನೇರವಾಗಿ ಭೂಮಿಯಿಂದ ಟ್ರೋನಾ ಎಂಬ ಸರಳ ಕಚ್ಚಾ ಖನಿಜವನ್ನು ಗಣಿಗಾರಿಕೆ ಮಾಡಿ ತೆಗೆದು ಅದರಿಂದ ಸೋಡಿಯಮ್ ಬೈ ಕಾರ್ಬೋನೇಟ್ ಅನ್ನು ಪಡೆಯುವ ಕ್ರಿಯೆ ಪರಿಸರಕ್ಕೆ ಹೆಚ್ಚು ಹಾನಿಯಾಗದು. ಭೂಮಿಯ ಮೇಲೆ ಈಗ ಈ ಕಚ್ಚಾ ಖನಿಜದ ೬೨ ನಿಕ್ಶೇಪಗಳನ್ನು ಗುರುತಿಸಲಾಗಿದೆಯಂತೆ. ಇಲ್ಲಿರುವ ಕಚ್ಚಾ ಖನಿಜ ಪ್ರಪಂಚಕ್ಕೆ ಹಲವು ಸಾವಿರ ವರ್ಷಗಳಷ್ಟು ಕಾಲ ಸೋಡಿಯಮ್ ಬೈಕಾರ್ಬೋನೇಟ್ ಅನ್ನು ಒದಗಿಸಬಲ್ಲುದಂತೆ.
ನಿಜ ಏನೆಂದರೆ ಬೇಕಿಂಗ್ ಸೋಡಾ ಮ್ಯಾಜಿಕ್ ನಿಂದ ಹುಟ್ಟಿ ಬರುವುದಿಲ್ಲ. ಅದನ್ನೂ ಕೂಡಾ ಭೂಮಿಯೊಡಲಿನಿಂದಲೇ ತೆಗೆಯುತ್ತೇವೆ. ಅವಳ ಮೇಲೇ ಪ್ರಯೋಗಿಸಿತ್ತೇವೆ. ಆದರೆ ಬೇಕಿಂಗ್ ಸೋಡಾ ನಾವು ಬಳಸುವ ಬೇರೆಲ್ಲ ರಾಸಾಯನಿಕಗಳಂತೆ ಭೂಮಿಗೆ-ಅವಳ ಮೇಲೆ ಬದುಕುವ ಜೀವಿಗಳಿಗೆ ಅಪಾರ ಪ್ರಮಾಣದ ಹಾನಿ ಮಾಡುವುದಿಲ್ಲ. ಹಾಗಾಗಿ, ಬಾಂಬು ಹಾಕಿ ನಿರ್ನಾಮ ಮಾಡುವುದೋ ಈಟಿಯಲ್ಲಿ ಚುಚ್ಚುವುದೋ ಎಂಬ ದ್ವಂದ್ವದ ಪರಿಸ್ಥಿತಿ ನಮ್ಮ ಮುಂದೆ ಎದುರಾಗುತ್ತದೆ. ನಮ್ಮ ಸಲಹೆ-ಖಂಡಿತಾ ಈಟಿಯನ್ನೇ ಆರಿಸಿಕೊಳ್ಳಿ. ಕನಿಷ್ಟ ನಿಮ್ಮ ಮೊಮ್ಮಕ್ಕಳು ಭೂಮಿಯ ಮೇಲೆ ಆಟ ಆಡುವುದನ್ನು ಕಲ್ಪಿಸಿಕೊಳ್ಳಬಹುದು!
ಈಗ ಬೇಕಿಂಗ್ ಸೋಡಾದ ವೈವಿಧ್ಯಮಯ ಬಳಕೆಗಳ ವಿವರಕ್ಕೆ ಬರೋಣ. ಇಲ್ಲಿ ತಿಳಿಸಿರುವ ಬಹುಪಾಲು ಉಪಯೋಗಗಳನ್ನು ಒಂದೆರಡು ಬಾರಿ ಪರೀಕ್ಷೆ ಮಾಡಿ ಅವು ನಿಜ ಅಂತ ಸಾಬೀತು ಪಡಿಸಿಕೊಂಡೇ ನಿಮ್ಮ ಮುಂದೆ ಈ ಪಟ್ಟಿ ಇಡುತ್ತಿದ್ದೇನೆ.
ಅಡಿಗೆಮನೆಯಲ್ಲಿನ ಉಪಯೋಗ
ಅಡುಗೆ ಮಾಡುವ ಒಲೆ ಎಣ್ಣೆ-ಮಸಾಲೆಗಳ ಸೀರುವಿಕೆಯಿಂದ ಜಿಡ್ಡಾಗಿ, ಕೊಳೆಯಾಗಿದ್ದರೆ-ಒಂದು ಬಟ್ಟಲು ಬೇಕಿಂಗ್ ಸೋಡಾಗೆ ಸ್ವಲ್ಪ ನೀರು ಸೇರಿಸಿ. ಆ ಮಿಶ್ರಣವನ್ನು ಒಲೆ ಗ್ಯಾಸ್ ಬರ್ನರ್ ಗಳ ಅಕ್ಕಪಕ್ಕಗಳಲ್ಲಿ ಹಚ್ಚಿಟ್ಟು ೫-೮ ನಿಮಿಷದ ನಂತರ ಒಂದು ಒರಟು ಬಟ್ಟೆಯನ್ನು ಬಿಸಿ ನೀರಿನಲ್ಲಿ ಅದ್ದಿಕೊಂಡು ಒಲೆಯ ಮೇಲ್ಮೈ ಅನ್ನು ಚನ್ನಾಗಿ ಒರೆಸಿ ಸ್ವಚ್ಚ ಗೊಳಿಸಿ.
ಔಷಧಿ ಸಿಂಪಡಿತ ತರಕಾರಿ, ಹಣ್ಣುಗಳನ್ನು ತೊಳೆಯಲು: ಇತ್ತೀಚೆಗೆ ಮಾರುಕಟ್ಟೆಯಲ್ಲಿ, ಸೂಪರ್ ಬಜ಼ಾರ್ಗಳಲ್ಲಿ ಸಾವಯವ ತರಕಾರಿ-ಹಣ್ಣುಗಳು ಸಿಗುವುದು ಕಡಿಮೆಯಾಗಿದೆ. ಸಿಕ್ಕರೂ ಅದರ ಬೆಲೆ ದುಬಾರಿ. ಈ ರೀತಿ ಸಿಗುವ ಹಣ್ಣು ತರಕಾರಿಗಳ ಮೇಲೆ ವಿಪರೀತ ರಾಸಾಯನಿಕ-ಕೀಟ ನಾಶಕ-ಮೇಣಗಳ ಬಳಕೆಯಾಗಿರುತ್ತದೆ. ಸಾಮಾನ್ಯ ನೀರಿನಲ್ಲಿ ಒಂದು ಬಾರಿ ತೊಳೆದರೂ ಅವುಗಳ ಮೈಮೇಲಿರುವ ಕೀಟನಾಶಕಗಳು, ಮೇಣ ಸಂಪೂರ್ಣವಾಗಿ ಹೋಗಿರುವುದಿಲ್ಲ. ಹೀಗೆ ತಂದ ಹಣ್ಣು ತರಕಾರಿಗಳನ್ನು ಒಂದು ಬಟ್ಟಲು ಉಗುರು ಬೆಚ್ಚಗಿನ ನೀರಿನಲ್ಲಿ ೨ ಚಮಚ ಬೇಕಿಂಗ್ ಸೋಡಾ ಹಾಕಿ ೫-೧೦ ನಿಮಿಷ ನೆನೆಸಿ ನಂತರ ಸಾಮಾನ್ಯ ನೀರಿನಲ್ಲಿ ತೊಳೆದು ಉಪಯೋಗಿಸಿ. ಹೀಗೆ ತೊಳೆಯುವುದರಿಂದ ರಾಸಾಯನಿಕ-ಕೀಟನಾಶಕಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವುದು.
ಫ್ರಿಜ್ ಅನ್ನು ಶುಚಿಯಾಗಿಟ್ಟುಕೊಳ್ಳಲು: ಮನೆ ಬಳಕೆಯ ತರಕಾರಿ, ಹಣ್ಣುಗಳು, ಮೊಟ್ಟೆ-ಮಾಂಸ, ಉಳಿದ ಅಡುಗೆಗಳು ಇತ್ಯಾದಿಗಳನ್ನು ಫ್ರಿಜ್ನಲ್ಲಿಡುವುದರಿಂದ ಫ್ರಿಜ್ ಗಳ ಒಳಭಾಗದಲ್ಲಿ ಒಂದು ಬಗೆಯ ಅಹಿತಕರ ವಾಸನೆ ಇರುತ್ತದೆ. ಫ್ರಿಜ್ ಅನ್ನು ವಾಸನೆ ಇಲ್ಲದಂತೆ ಇಟ್ಟುಕೊಳ್ಳಲು ಒಂದು ಸಣ್ಣ ಅಗಲ ಬಾಯಿಯ ಬಟ್ಟಲಿನಲ್ಲಿ ೫-೬ ಚಮಚ ಬೇಕಿಂಗ್ ಸೋಡಾ ತುಂಬಿ ಫ್ರಿಜ್ ಒಳಗಿಡಿ. ಬೇಕಿಂಗ್ ಸೋಡಾ ಫ್ರಿಜ್ ಒಳಗಿನ ತೇವಾಂಶವನ್ನು-ವಾಸನೆಯನ್ನು ಹೀರಿಕೊಂಡು ಅದನ್ನು ಫ್ರೆಶ್ ಆಗಿಡುತ್ತದೆ. ಹಾಗೇ ಪ್ರತೀ ಬಾರಿ ಫ್ರಿಜ್ ಅನ್ನು ಕ್ಲೀನ್ ಮಾಡುವಾಗಲೂ ಒಂದು ಬಟ್ಟಲು ನೀರಿಗೆ ಒಂದೆರಡು ಚಮಚ ಬೇಕಿಂಗ್ ಸೋಡಾ ಹಾಕಿ ಫ್ರಿಜ್ ಅನ್ನು ಆ ನೀರಿನಿಂದ ಒರೆಸುವುದರಿಂದ ಫ್ರಿಜ್ ಚೊಕ್ಕವಾಗುತ್ತದೆ.
ತರಕಾರಿಗಳನ್ನು ಹೆಚ್ಚುಕಾಲ ಕೆಡದಂತೆ ಇಡಲು ಅವುಗಳ ಮೇಲೆ ಒಂದು ಚಿಟಿಕೆ ಬೇಕಿಂಗ್ ಸೋಡಾ ಸಿಂಪಡಿಸಿ, ಅವನ್ನು ಟಿಶ್ಯು ಅಥವಾ ಬಟ್ಟೆಯ ನ್ಯಾಪ್ಕಿನ್ ಗಳಲ್ಲಿ ಸುತ್ತಿ ಫ್ರಿಜ್ ನಲ್ಲಿಡಿ.
ಅಡುಗೆ ಮಾಡುವಾಗ ಆಕಸ್ಮಿಕ ಬೆಂಕಿ ತಗುಲಿದರೆ ತಕ್ಷಣ ಬೇಕಿಂಗ್ ಸೋಡಾ ಪುಡಿಯನ್ನು ಬೆಂಕಿಯ ಮೇಲೆ ಚೆಲ್ಲಿ. ಬೆಂಕಿಯ ಜೊತೆಯಲ್ಲಿ ಸೋಡಾ ಇಂಗಾಲದ ಡೈ ಆಕ್ಸೈಡ್ ಅನ್ನುಂಟು ಮಾಡುವುದರಿಂದ ಜ್ವಾಲೆಗಳು ತಕ್ಷಣ ತಣಿಯುತ್ತವೆ.
ಅಡುಗೆ ಮನೆಯ ಕಸದ ಬುಟ್ಟಿಯ ತಳಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಉದುರಿಸಿಟ್ಟುಕೊಳ್ಳಿ. ಕಸದ ಬುಟ್ಟಿಯಿಂದ ಅಹಿತಕರ ವಾಸನೆ ಬರುವುದನ್ನು ತಡೆಯಬಹುದು.
ಮೈಕ್ರೋ ವೇವ್ ಕ್ಲೀನ್ ಮಾಡಲು: ಒಂದು ಮೈಕ್ರೋವೇವ್ ಸುರಕ್ಷಿತ ಬಟ್ಟಲಿನ ತುಂಬಾ ನೀರು ತುಂಬಿ ಅದಕ್ಕೆ ೧ ಚಮಚ ಬೇಕಿಂಗ್ ಸೋಡಾ, ಅರ್ಧ ಹೋಳು ನಿಂಬೆ ಹಣ್ಣು ಹಾಕಿ ೧ ನಿಮಿಷ ಮೈಕ್ರೋವೇವ್ ಮಾಡಿ. ಬಟ್ಟಲನ್ನು ಮೈಕ್ರೋವೇವ್ ಒಳಗೇ ೨-೩ ನಿಮಿಷ ಇರಲಿ ಬಿಟ್ಟು ನಂತರ ಒಳಗೆ ಒರೆಸಿಕೊಳ್ಳಿ. ಎಲ್ಲ ಬಗೆಯ ಜಿಡ್ಡು, ಅಡುಗೆ ಕಲೆಗಳು ಕ್ಲೀನ್ ಆಗುತ್ತವೆ ಮತ್ತು ವಾಸನೆ ಇಲ್ಲದಂತಾಗುತ್ತದೆ.
ಅಡುಗೆ ಮನೆ ಅಥವಾ ಮನೆ ಒರೆಸುವ ಬಟ್ಟೆಗಳಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಆ ಬಟ್ಟೆಗಳನ್ನು ಒಗೆದು ಅವನ್ನು ಬೇಕಿಂಗ್ ಸೋಡಾ ಮಿಶ್ರಿತ ನೀರಿನಲ್ಲಿ ಕೆಲ ಕಾಲ ನೆನೆಸಿಡಿ.
ಅಡುಗೆ ಮನೆಯ ಸಿಂಕ್ ಅಥವಾ ಟಾಯ್ಲೆಟ್ಟಿನ ಸಿಂಕ್ ಕಟ್ಟಿಕೊಂಡು ನೀರು ಹೋಗುವುದು ತಡವಾಗುತ್ತಿದ್ದರೆ-ಒಂದು ಬಟ್ಟಲು ಬೇಕಿಂಗ್ ಸೋಡಾವನ್ನು ಅಲ್ಲಿಗೆ ಸುರಿದು, ೨-೩ ನಿಮಿಷಗಳ ಬಳಿಕ ಒಂದು ಬಟ್ಟಲು ವಿನೇಗರ್ ಸುರಿಯಿರಿ. ಮತ್ತೆರಡು ನಿಮಿಷಗಳ ಬಳಿಕೆ ನಾಲ್ಕೈದು ಮಗ್ ಬಿಸಿ ನೀರು ಸುರಿಯಿರಿ. ತಿಂಗಳಿಗೊಮ್ಮೆ ಹೀಗೆ ಕ್ಲೀನ್ ಮಾಡಿಕೊಳ್ಳುವುದರಿಂದ ಸಿಂಕ್ ಗಳೂ ಸದಾ ಸ್ವಚ್ಚವಾಗಿರುತ್ತವೆ ಮತ್ತು ವಾಸನೆ ಇರುವುದಿಲ್ಲ.
ಇತರೆ ಮನೆಬಳಕೆ
ಮನೆಯ ಹೊರ ತೋಟದಲ್ಲಿ ಇರುವೆಗಳ ಕಾಟ ಹೆಚ್ಚಾಗಿದ್ದರೆ ಅವು ಮನೆಯೊಳಗೆ ಬರದಂತೆ ಮನೆಯ ಸುತ್ತಾ ಬೇಕಿಂಗ್ ಸೋಡಾದ ರಂಗೋಲಿ ಹಾಕಿಬಿಡಿ. ಅವು ಆ ಗೆರೆಯನ್ನು ದಾಟುವುದಿಲ್ಲ. ಅಂಗಡಿಗಳಲ್ಲಿ ಅಗ್ಗವಾಗಿ ಸಿಗುವ ’ಲಕ್ಷ್ಮಣ ರೇಖೆ’ ಅಥವಾ ’ಚಿನೀಸ್ ಚಾಕ್’ ಅತ್ಯಂತ ಕೆಳದರ್ಜೆಯ ಹಾನಿಕಾರಕ ರಸಾಯನಿಕಗಳಿಂದ ಮಾಡಲ್ಪಡುವಂತದು. ಗರ್ಭಿಣಿಯರು, ಮಕ್ಕಳು, ಅಸ್ತಮಾ ಇತರ ಉಸಿರಾಟದ ತೊಂದರೆಯಿರುವವರು, ಮನೆಗಳಲ್ಲಿ ಸಾಕುವ ಪೆಟ್ ಗಳು ಇದನ್ನು ಉಸಿರಾಡುವುದರಿಂದ ಹಲವಾರು ಅನಾಹುತಗಳನ್ನು ಎದುರಿಸಬೇಕಾಗುತ್ತದೆ. ನೆನಪಿಡಿ! ಈ ಅನಾಹುತಗಳು ತಕ್ಷಣ ನಿಮಗೆ ಕಾಣಿಸದಿರಬಹುದು. ಆದರೆ ಇವು ಸ್ಲೋ ಪೊಯ್ಸನ್ ಗಳು.
ಬಟ್ಟೆಗಳ ಮೇಲೆ ತೇವಾಂಶದ ಫಂಗಸ್ ಕಲೆಗಳಿದ್ದಲೆ ಅವಕ್ಕೆ ನೀರು ಮಿಶ್ರಿತ ಬೇಕಿಂಗ್ ಸೋಡಾವನ್ನು ಹಚ್ಚಿಡಿ. ೫-೧೦ ನಿಮಿಷಗಳ ನಂತರ ಒಗೆದಿಡಿ. ಕಲೆ ತುಂಬ ಹಳೆಯದಾಗಿದ್ದರೆ ಇದೇ ಕ್ರಿಯೆಯನ್ನು ೨-೩ ಬಾರಿ ಪುನರಾವರ್ತಿಸಿ.
ನಿಮ್ಮ ಪೆಟ್ ಗಳು ಆಕಸ್ಮಿಕವಾಗಿ ಮನೆಯ ಒಳಗೆ ಮಲ-ಮೂತ್ರ ಮಾಡಿದಾಗ ಅದರ ವಾಸನೆಯನ್ನು ತಡೆಯಲು ಆ ನೆಲದ, ಕಾರ್ಪೆಟ್ ನ ಮೇಲೆ ಬೇಕಿಂಗ್ ಸೋಡಾ ಚಿಮುಕಿಸಿ. ಸ್ವಲ್ಪ ಸಮಯದ ನಂತರ ಅದನ್ನು ವ್ಯಾಕ್ಯೂಮ್ ಮಾಡಿ ಅಥವಾ ಒರೆಸಿ.
ಮನೆಯ ಹೊರ ತೋಟದಲ್ಲಿ ಸೊಳ್ಳೆಗಳು ವಂಶವೃದ್ದಿ ಮಾಡಿಕೊಳ್ಳುತ್ತಿದ್ದರೆ, ನೀರು ನಿಲ್ಲುವ ಎಲ್ಲಾ ಜಾಗಗಳಿಗೂ ಬೇಕಿಂಗ್ ಸೋಡಾ ಮತ್ತು ಪುಡಿ ಉಪ್ಪನ್ನು ನೀರಿನೊಂದಿಗೆ ಬೆರೆಸಿ ಆ ಜಾಗಗಳಲ್ಲಿ ಸಿಂಪಡಿಸಿ.
ಟೂತ್ ಪೇಸ್ಟ್ ಖಾಲಿಯಾಗಿದ್ದರೆ: ಪ್ರಪಂಚವೇನೂ ಮುಳುಗುವುದಿಲ್ಲವಲ್ಲಾ. ಒಂದು ಚಿಟಿಕೆ ಬೇಕಿಂಗ್ ಸೋಡಾಗೆ ಕಾಲು ಚಿಟಿಕೆ ಉಪ್ಪು, ಒಂದು ಹನಿ ನಿಂಬೆರಸ ಬೆರೆಸಿ ಹಲ್ಲುಜ್ಜಿ. ಇದು ನೈಸರ್ಗಿಕ ಬ್ಲೀಚ್ ನಂತೆಯೂ ಕೆಲಸ ಮಾಡುತ್ತದೆ. ಮೌತ್ ವಾಶ್ ನಂತೆಯೂ ಕೆಲಸ ಮಾಡುತ್ತದೆ.
ಈಜುಕೊಳದ ಕ್ಲೋರಿನ್ ನೀರಿನಿಂದ ಮತ್ತು ಸಮುದ್ರದಲ್ಲಿ ನೀರಾಟವಾಡಿ ತಲೆಕೂದಲು ಒರಟಾಗುವುದನ್ನು ತಡೆಯಲು-ಸ್ನಾನ ಮಾಡುವ ಕೊನೆಯ ಹಂತದಲ್ಲಿ ಸ್ವಲ್ಪ ಬೇಕಿಂಗ್ ಸೋಡಾವನ್ನು ನಿರಿನಲ್ಲಿ ಕಲೆಸಿಕೊಂಡು ತಲೆಗೆ ಹಚ್ಚಿ ಚನ್ನಾಗಿ ಗಲಬರಿಸಿ. ಕ್ಲೋರಿನ್ ಹಾಗೂ ಲವಣದಿಂದ ಒರಟಾಗಿರುವ ಕೂದಲು ನಯವಾಗುತ್ತದೆ.
ಡಿಯೋಡರೆಂಟ್ ಆಗಿ ಬೇಕಿಂಗ್ ಸೋಡಾ-೧ ಚಮಚ ಚಂದನದ (ಅಥವಾ ಇನ್ನಿತರೆ ಸಸ್ಯ ಜನ್ಯ ಸುಗಂಧದ ಪುಡಿಗಳಿಗೆ) ಪುಡಿಗೆ ೧ ಚಮಚ ಬೇಕಿಂಗ್ ಸೋಡಾ ಬೆರೆಸಿಟ್ಟುಕೊಂಡು ಅದನ್ನು ’ಹೋಮ್ ಮೇಡ್" ಟಾಲ್ಕ್ ಆಗಿ ಉಪಯೋಗಿಸಬಹುದು.
ಆಭರಣ ಸ್ವಚ್ಚ ಮಾಡಿಕೊಳ್ಳಲು-೨ ಚಮಚ ಬೇಕಿಂಗ್ ಸೋಡಾವನ್ನು ಒಂದು ಸಣ್ಣ ಬಟ್ಟಲು ನೀರಿನಲ್ಲಿ ಕರಗಿಸಿ ನಿಮ್ಮ ಅಮೂಲ್ಯ ಆಭರಣಗಳನ್ನು ಅದರಲ್ಲಿ ನೆನೆಸಿಟ್ಟು ನಂತರ ಮೃದುವಾದ ಬ್ರಶ್ ನಿಂದ ಉಜ್ಜಿ ತೊಳೆಯಿರಿ.
ಕಾರ್ ಅಥವಾ ನಿಮ್ಮ ಯಾವುದೇ ವಾಹನದ ವೀಲ್ ಗಳು ತುಕ್ಕಾದಂತಿದ್ದರೆ-೪ ಚಮಚ ಬೇಕಿಂಗ್ ಸೋಡಾವನ್ನು ೨ ಚಮಚ ನಿರಿನಲ್ಲಿ ಕಲೆಸಿ ಪೇಸ್ಟ್ ಮಾಡಿಕೊಂದು ತುಕ್ಕು ಹಿಡಿದ ಜಾಗಗಳಿಗೆ ಹಚ್ಚಿ ೧೦-೧೫ ನಿಮಿಷ ಬಿಟ್ಟು ತೊಳೆಯಿರಿ ಅಥವಾ ಒದ್ದೆ ಬಟ್ಟೆಯಿಂದ ಒರೆಸಿ.
ಸಿಂಕ್ ಗಳು ಬಣ್ಣ/ಹೊಳಪು ಕಳೆದುಕೊಂಡಿದ್ದರೆ-೨ ಚಮಚ ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಬೆರೆಸಿಕೊಂಡು ಸಿಂಕ್ ಗಳಿಗೆ ಹಚ್ಚಿಡಿ. ೧೦ ನಿಮಿಷಗಲ ನಂತರ ಅರ್ಧ ಬಟ್ಟಲು ವಿನೇಗರ್ ಅನ್ನು ಅದರ ಮೇಲೆ ಸಿಂಪಡಿಸಿ (ವಿನೇಗರ್ ಕೂಡಾ ಸಂಪೂರ್ಣ ನ್ಯಾಚುರಲ್ ಉತ್ಪನ್ನ, ಮತ್ತೊಂದು ಪರಿಸರ ಸ್ನೇಹಿತ) ಈ ಎರಡು ಪದಾರ್ಥ ನೀರಿನೊಟ್ಟಿಗೆ ಬೆರೆತಾಗ ಜುಜ್ ಶಬ್ದದೊಂದಿಗೆ ಸಣ್ಣ ನೊರೆಯುಂಟಾಗುತ್ತದೆ. ಮತ್ತೆರಡು ನಿಮಿಷ ತಡೆದು ಸಿಂಕ್ ಅನ್ನು ಬ್ರಶ್ ನಿಂದ ಉಜ್ಜಿ ಬಿಸಿ ನೀರಿನಲ್ಲಿ ತೊಳೆಯಿರಿ. ಹಾಗೇ ಬಾತ್ ಟಬ್, ಸೆರಾಮಿಕ್ ಸಿಂಕ್, ಸ್ಟೀಲ್ ಸಿಂಕ್ ಈ ಎಲ್ಲವನ್ನೂ ಬೇಕಿಂಗ್ ಸೋಡಾ ದಿಂದ ಸ್ವಚ್ಚ ಮಾಡಬಹುದು. ಇದರಿಂದ ಉಗ್ರ ರಾಸಾಯನಿಕಗಳ ಬಳಗೆ ತಪ್ಪುವುದರ ಜೊತೆಗೆ, ನಿಮ್ಮ ಮನೆಯವರ ಆರೋಗ್ಯ ಚನ್ನಾಗಿರುತ್ತದೆ ಮತ್ತು ಸಾಮಾನುಗಳ ಚನ್ನಾಗಿ ಬಹು ಕಾಲ ಉಳಿಯುತ್ತವೆ.
ಡಿಶ್ ವಾಶರ್ ನಲ್ಲಿ ಆಗಾಗ ಒಂದು ಚಮಚ ಬೇಕಿಂಗ್ ಸೋಡಾ ಎರಚುವುದರಿಂದ ಅದೂ ಸ್ವಚ್ಚವಾಗಿ ಮತ್ತು ವಾಸನಾ ರಹಿತವಾಗಿರುತ್ತದೆ.
ಬಟ್ಟೆ ಒಗೆಯುವಾಗ ವಾಶಿಂಗ್ ಮಶೀನ್ ಗೆ ಎರಡು ಚಮಚ ಬೇಕಿಂಗ್ ಸೋಡಾವನ್ನು ಸೇರಿಸುವುದರಿಂದ ಬಟ್ಟೆಗಳು ಮೃದುವಾಗುತ್ತವೆ. ವಾಸನೆ ದೂರವಾಗುತ್ತದೆ. ಮತ್ತಿ ವಾಶಿಂಗ್ ಮಶೀನ್ ಲವಣಗಳ ಡೆಪಾಸಿಟ್ ಇಲ್ಲದೆ ಸ್ವಚ್ಚವಾಗಿರುತ್ತದೆ.
ಆರೋಗ್ಯಕ್ಕೆ
ಹೊಟ್ಟೆಯಲ್ಲಿ ಗುಡುಗುಡುವಾಗಿ, ವಾಯುಬಾಧೆಯಾದಾಗ ಒಂದು ಲೋಟ ಬೆಚ್ಚಗಿನ ನೀರಿಗೆ, ಕಾಲು ಚಮಚ ಬೇಕಿಂಗ್ ಸೋಡಾ, ಒಂದು ಚಿಟಿಕೆ ಉಪ್ಪು, ಎರಡು ಚಮಚ ನಿಂಬೆರಸ ಬೆರೆಸಿಕೊಂಡು ಕುಡಿಯಿರಿ. ಹೊಟ್ಟೆಗೆ ಅತಿಯಾಗಿ ಸೇವಿಸಿದ್ದಾಗ ಹೀಗೆ ಮಾಡುವಿದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ.
ಅತಿಯಾದ ಧಗೆಯಿರುವ ಸ್ಥಳಗಳಲ್ಲಿ ಪ್ರಯಾಣ ಮಾಡುವಾಗ, ದೇಹದಲ್ಲಿ ಪಿಎಚ್ ಗಳ ಅಸಮತೋಲನವಾದಾಗ ಈ ಪೇಯವನ್ನು ಸೇವಿಸುವುದರಿಂದ ಉರಿಮೂತ್ರ ವಿಸರ್ಜನೆ ಪರಿಹಾರವಾಗುತ್ತದೆ. ಆದರೆ ರಕ್ತದೊತ್ತಡ ಇರುವವರು ಹೆಚ್ಚು ಬೇಕಿಂಗ್ ಸೋಡಾವನ್ನು ಸೇವಿಸಬಾರದು.
ಸೊಳ್ಳೆ ಅಥವಾ ಕೀಟಗಳು ಕಡಿದು ಆ ಭಾಗ ಉರಿಯಾಗುತ್ತಿದ್ದರೆ ಪ್ರಥಮ ಚಿಕಿತ್ಸೆಯಾಗಿ ಸ್ವಲ್ಪ ಬೇಕಿಂಗ್ ಸೋಡಾವನ್ನು ಆ ಭಾಗಕ್ಕೆ ಹಚ್ಚಿ. ಉರಿತ-ನವೆ ಕಡಿಮೆಯಾಗುತ್ತದೆ ಮತ್ತು ಇನ್ಫೆಕ್ಷನ್ ಆಗುವುದು ತಪ್ಪುತ್ತದೆ. (ನೆನಪಿಡಿ!! ಪ್ರಥಮ ಚಿಕಿತ್ಸೆಗಾಗಿ, ಸೇವನೆಗಾಗಿ ಬೇಕಿಂಗ್ ಸೋಡಾ ಕೊಳ್ಳುವಾಗ ಉತ್ತಮ ದರ್ಜೆಯದ್ದನ್ನೇ ಕೊಳ್ಳಿ.)
ಮೇಲೆ ನಮೂದಿಸಿರುವ ಎಲ್ಲ ಕೆಲಸಗಳಿಗೂ ನಮಗೆ ಸಹಾಯ ಮಾಡಲು ನಮ್ಮಲ್ಲಿ ಪ್ರಿಲ್, ಡಾನ್, ಏರಿಯಲ್, ಲಕ್ಷ್ಮಣ ರೇಖೆ, ಲೈಸಾಲ್, ಹಾರ್ಪಿಕ್, ಆಕ್ಸಿ ಕ್ಲೀನ್, ಟೈಡ್, ಗೇನ್, ಸನ್ ಲೈಟ್ ಗಳಂತಹ ನೂರಾರು ಘನ ಕೆಮಿಕಲ್ ಗಳು ಚಂದ ಚಂದದ ಸಿನೆಮಾ ತಾರೆಯಂದಿರ ಒಪ್ಪಿಗೆ ಪಡೆದು ಚಂದ ಚಂದದ ಬಾಟಲ್ಗಳಲ್ಲಿ ತುಂಬಿ ಕುಳಿತಿವೆ. ಅವುಗಳ ಚಂದ ಸುಮ್ಮನೇ ನಮ್ಮ-ನಿಮ್ಮ ಮನೆಗೆ ಬರುವುದಿಲ್ಲ. ನಮ್ಮ ಜೇಬು ಕರಗಿಸಿ, ನಮ್ಮ ಸುತ್ತಲೂ ವಿಷಪೂರಿತ ಪ್ರಭೆಯೊಂದನ್ನು ಮೂಡಿಸಿ, ನಮ್ಮನ್ನು-ನಮ್ಮ ಧರೆಯನ್ನು ಬೇಗ ಅಳಿಸಿ-ಮುಳುಗಿಸಲು ಖುಷಿಯಿಂದ ಕುಣಿದು ಬರುತ್ತವೆ. ಈಗ ತೀರ್ಮಾನ ನಮ್ಮದು. ನಮಗಾಗಿ ಅಲ್ಲದಿದ್ದರೂ ನಮ್ಮ ಮಕ್ಕಳಿಗಾಗಿ, ಅವರ ನಾಳೆಗಳಿಗಾಗಿ, ಈ ಸುಂದರ ವಿಷಗಳನ್ನು ಆದಷ್ಟು ನಮ್ಮ ಮನೆ ಮತ್ತು ಪರಿಸರದಿಂದ ದೂರವಿಟ್ಟು ಪರಿಸರ ಸ್ನೇಹಿತ ಬೇಕಿಂಗ್ ಸೋಡಾವನ್ನು ಬಳಸಿಕೊಳ್ಳೋದರ ಬಗ್ಗೆ ತ್ವರಿತವಾಗಿ ಕ್ರಿಯಾಶೀಲರಾಗೋಣ. |