ಬೇರು ಬಿಳಲು

 
(ವಿದೇಶಿಯಾಗಿ, ಸ್ವದೇಶಕ್ಕೆ ಮರಳಿ, ಬೇರು ಹುಡುಕುವಾತನ ತಲ್ಲಣ)
 
ಬಿ ಎಸ್ ಸತ್ಯ
 
ಏರ್ಪೋರ್ಟ್ ನಿಂದ ಹೊರಬರುತ್ತಿದ್ದಂತೆಯೇ ನನ್ನ ಹೆಸರಿನ ಬ್ಯಾನರ್ ಹಿಡಿದು ನಿಂತಿದ್ದ ಡ್ರೈವರ್ ಕಡೆಗೆ ಸಾಗಿ ತುಟಿ ಅರಳಿಸಿದೆ. ತಕ್ಷಣವೇ ನನ್ನ ಗಿರಾಕಿ ಇವನೇ ಎಂದು ನನ್ನೆಡೆಗೆ ಸಾಗಿ ಬಂದ ಡ್ರೈವರ್ ನಾನು ಎಳೆದು ತರುತ್ತಿದ್ದ ಲಗ್ಗೇಜ್ ಪಡೆದುಕೊಂಡು ಕಾರಿನ ಕಡೆ ಕರೆದೊಯ್ದ. ಹಿಂಭಾಗದ ಸೀಟಿನಲ್ಲಿ ಒರಗಿದೊಡನೇ ಕಾರು ರೊಯ್ಯನೆ ಹೊರಟಿತು. ಹೊರಗಿನ ಬಿಸಿಗೆ ಒಳಗಿನ ಎಸಿ ಅಷ್ಟೇನೂ ತಂಪೆನಿಸಲಿಲ್ಲ. ಆದರೆ ಮೂವತ್ತೆರಡು ವರ್ಷಗಳ ಹಿಂದೆ ತೊರೆದಿದ್ದ ನನ್ನ ಊರಿಗೆ ಬಂದ ಖುಶಿಗೆ ಮನಸ್ಸು ಮಗುವಿನಂತೆ ಪುಳಕಿತಗೊಂಡಿತ್ತು. ಕಣ್ಣುಗಳು ಹೊರಗಿನ ನೋಟಕ್ಕಾಗಿ ಅಲೆಯುತ್ತಿದ್ದವು.
 
 
ಅಬ್ಬಾ!! ಇದಾ ಬೆಂಗಳೂರು?! ಮೂರು ದಶಕಗಳ ಹಿಂದೆ ಇದ್ದ ಬೆಂಗಳೂರಿಗೂ ಈಗ ನಾನು ನೋಡುತ್ತಿರುವ ಬೆಂಗಳೂರಿಗೂ ಎಲ್ಲಿಂದೆಲ್ಲಿಯ ಸಂಬಂಧ! ನಾನು ಅಂದುಕೊಂಡಿದ್ದೆ ಬೇರೆ...ಇಲ್ಲಿ ಆಗಿರೋದೆ ಬೇರೆ...ನನ್ನ ಊಹೆಗೂ ನಿಲುಕದ ಏನೆಲ್ಲಾ ಬದಲಾವಣೆಗಳು ನಡೆದುಬಿಟ್ಟಿವೆ! ಮೂವತ್ತೆರಡು ವರ್ಷಗಳ ಹಿಂದೆ ನಾನು ಬಿಟ್ಟಿದ್ದ ಬೆಂಗಳೂರಿನ ನೆನಪಿನಲ್ಲೇ ನನ್ನ ಮಣ್ಣಿಗೆ ಕಾಲಿಟ್ಟರೆ ಇಲ್ಲಿ ನನಗೆಲ್ಲವೂ ಶಾಕ್! ನನ್ನ ಕಲ್ಪನೆಯಲ್ಲಿ ಬಂಧಿಯಾಗಿದ್ದ ’ಆ’ ಬೆಂಗಳೂರು ಇವತ್ತಿನ ಬೆಂಗಳೂರಿನ ಒಳಗೇ ಎಲ್ಲೋ ಮಾಯವಾದಂತಿದೆ! ನಾನು ನೋಡುತ್ತಿರುವುದು ನಿಜವೋ ನನಗಾಗಿರುವ ಪ್ರಯಾಣದ ಆಯಾಸದ ಕಾರಣವೋ ಗೊತ್ತಾಗದೇ ಹಾಗೇ ಸೀಟಿಗೊರಗಿ ಕಣ್ಣು ಮುಚ್ಚಿದೆ.
 
 
ಅಪ್ಪನ ಆಸೆ ತುಂಬಿದ ಮುಖ ಕಣ್ಣುಗಳ ಮುಂದೆ ಬಂತು. ಹೌದು. ಅಪ್ಪ ನನ್ನ ಓದಿಸಿ ವಿದ್ಯಾವಂತನನ್ನಾಗಿ ಮಾಡಲು ಪಡಬಾರದ ಕಷ್ಟ ಪಟ್ಟಿದ್ದರು. ಅವರ ಕಣ್ಣು ತುಂಬಾ ನಾನು ಯಶಸ್ವಿಯಾಗುವುದರ ಕನಸುಗಳೇ...ನಾನು ಅಮ್ಮನ್ನ ನೋಡೇ ಇರಲಿಲ್ಲ. ಅವಳು ತಾನು ಉಸಿರು ಬಿಟ್ಟು ನನಗೆ ಉಸಿರು ಕೊಟ್ಟು ಇಹಲೋಕ ತ್ಯಜಿಸಿದ್ದಳು. ಈಗಲೂ ಅವಳ ಬಗ್ಗೆ ನನಗೆ ಹೆಚ್ಚು ಗೊತ್ತೇ ಇಲ್ಲ. ಅಪ್ಪ ಆಗಾಗ ಅಮ್ಮನ ಬಗ್ಗೆ ಹೇಳಿದ ನೆನಪುಗಳಷ್ಟೇ ನನ್ನಲ್ಲಿ. ಹುಟ್ಟುವಾಗಲೇ ಅಮ್ಮನ್ನ ತಿನ್ಕೊಂಡ ಇವನು ಅಂತ ಅಪ್ಪನ ಕಡೆಯವರು ನನ್ನನ್ನು ಆಡಿಕೊಂಡಿದ್ದರಂತೆ. ಅವಳು ಸತ್ತ ಮೇಲೆ ಅಪ್ಪ ಇನ್ನೊಂದು ಮದುವೆ ಆಗ್ತಾರೆ ಅಂತ ಊರಿನವರೆಲ್ಲ ಮಾತಾಡಿಕೊಂಡಿದ್ದರಂತೆ...ಆದರೆ ಅಪ್ಪ ಮತ್ತೆ ಮದುವೆಯಾಗಿರಲಿಲ್ಲ. ನನ್ನನ್ನು ಅವನಿಂದ ದೂರ ಮಾಡಿಕೊಂಡಿರಲಿಲ್ಲ. ಕೆ.ಆರ್.ಮಿಲ್ ನಲ್ಲಿ ಸಣ್ಣದೊಂದು ಕೆಲಸ ಮಾಡಿಕೊಂಡು ಸಣ್ಣ ಸಂಬಳದಲ್ಲಿ ಯಾರ ಸಹಾಯವೂ ಇಲ್ಲದೇ ಕಷ್ಟಪಟ್ಟು ಒಬ್ಬರೇ ನನ್ನನ್ನು ಸಾಕಿದ್ದರು. ಯಾರಾದ್ರೂ ಹೆಂಗಸನ್ನು ಕೆಲಸಕ್ಕಿಟ್ಟುಕೋ ಅಂತ ಅವರಿವರು ಸೂಚಿಸಿದ್ದರೂ ಅಪ್ಪ ಒಪ್ಪಿರಲಿಲ್ಲ. ಮನೆಯ ಹೆಂಗಸಿಲ್ಲದೆ ಬೇರೆ ಯಾರೋ ಹೆಂಗಸು ಸಹಾಯಕ್ಕೆ ಬಂದ್ರೆ ಜನ ಇಲ್ಲಸಲ್ಲದ ಕಥೆ ಕಟ್ತಾರೆ ಅದರ ಉಸಾಬರಿಯೇ ಬೇಡ ಅಂತ ಅಪ್ಪನ ಪಟ್ಟು.
 
 
 
ಹುಟ್ಟಿದ ಮೊದಲ ಒಂದೆರಡುವರ್ಷ ನಾನು ನನ್ನಜ್ಜಿ ಮನೆಯಲ್ಲಿ ಕಳೆದಿದ್ದೆ. ಮಾಗಡಿ ತಾಲೂಕಿನ ಕುದೂರು ಬಳಿಯ ಪುಟ್ಟ ಹಳ್ಳಿ ನನ್ನ ಅಜ್ಜಿಯ ಮನೆ. ಅಂದರೆ ನನ್ನ ತಾಯಿಯ ತಾಯಿ ಮನೆ ಅದು. ಅಲ್ಲಿ ನನ್ನ ಹಸುಗೂಸಿನ ದಿನಗಳನ್ನ ಕಳೆದು, ನನ್ನ ಸಂಬಂಧಿಯೊಬ್ಬರ ಎದೆಹಾಲು ಕುಡಿದು ಬೆಳೆದಿದ್ದೆನಂತೆ. ಅದೂ ಹಾಲು ಕರೆದು ’ಒಳ್ಳೆ’ಯಲ್ಲಿ ನನ್ನ ಬಾಯಿಗೆ ಬಿಡುತ್ತಿದ್ದರಂತೆ. ನಾನು ಬೆಳೆದು ಬೇರೆ ಆಹಾರ ತಿನ್ನುವಂತಾಗುವಷ್ಟರಲ್ಲಿ, ಮೂರನೇ ವರ್ಷದಲ್ಲಿ ಅಪ್ಪ ನನ್ನನ್ನು ಅನಾಮತ್ ಎತ್ತಿಕೊಂಡು ಬೆಂಗಳೂರಿಗೆ ಬಂದುಬಿಟ್ಟಿದ್ದರು. ಅವರ ನೆಂಟರು ಅಪ್ಪನಿಗೆ ಇನ್ನೊಂದು ಮದುವೆ ಮಾಡಲು ಹಿಂದೆ ಬಿದ್ದಿದ್ದರಂತೆ. ನನಗೆ ನನ್ನ ಮಗ ನನ್ನ ಹೆಂಡತಿಯ ನೆನಪೇ ಸಾಕು ಇನ್ಯಾರೂ ಬೇಡ ಅಂತ ಅಪ್ಪ ನನ್ನನ್ನು ವಾಪಸ್ ಕರೆದುಕೊಂಡು ಬಂದಿದ್ದರು.
 
ಆಗ ನಮ್ಮನೆಗೆ ಬೆಂಗಳೂರಿನಲ್ಲಿದ್ದು ಎಸ್ ಎಸ್ ಎಲ್ ಸಿ ಕಟ್ಟಿಕೊಂಡು ಪಾಸು ಮಾಡಿಕೊಳ್ಳಲು ಅಪ್ಪನ ದೂರನ ಸಂಬಂಧಿ ಗಂಗಾಧರನೂ ಬಂದಿದ್ದ. ಅವನಂತೂ ಎಸ್ ಎಸ್ ಎಲ್ ಸಿ ಯ ಲವರ್! ಅದನ್ನು ಬಿಟ್ಟು ಮುಂದೆ ಹೋಗಲಿಕ್ಕೇ ರೆಡಿಯಿರಲಿಲ್ಲ. ನಾನು ಒಂದನೇ ಕ್ಲಾಸಿಗೆ ಬಂದಾಗಲು ಅವನ ಎಸ್ ಎಸ್ ಎಲ್ ಸಿ ದಂಡಯಾತ್ರೆ ಯಶಸ್ವಿಯಾಗದೇ ಮುಂದುವರೆಯುತ್ತಲೇ ಇತ್ತು. ನನಗೂ ಅವನು ಒಳ್ಳೆಯ ಜೊತೆಯಾಗಿದ್ದ. ಆದರೆ ಅವನ ಮುಗಿಯದ ಓದಿಗೆ ತಲೆಚಿಟ್ಟು ಹಿಡಿಸಿಕೊಂಡು ಊರಿನಿಂದ ಅವರ ಅಪ್ಪ ಅಮ್ಮ ವಾಪಸ್ಸು ಬರುವಂತೆ ಅವನನ್ನು ಒತ್ತಾಯ ಮಾಡಿದ್ದರಿಂದ ಅಪ್ಪ ಗಂಗಾಧರನನ್ನು ಊರಿಗೆ ಕಳಿಸಿಬಿಟ್ಟರು. ನನ್ನನ್ನು ಒಂಟಿಯಾಗೇ ಸಾಕುವ ಪೂರ್ತಿ ಜವಾಬ್ದಾರಿ ತೆಗೆದುಕೊಂಡಿದ್ದರು. ಅದ್ಯಾಕೋ ಅಪ್ಪ ನನ್ನನ್ನು ಅಜ್ಜಿ  ಊರಿಗಾಗಲಿ, ಅಲ್ಲೇ ಪಕ್ಕದಲ್ಲಿನ ತಮ್ಮ ಊರಿಗಾಗಲಿ ಆಮೇಲೆಂದೂ ಕಳಿಸಿದವರಲ್ಲ.
 
ಆಗಾಗ ತಾತ ಅಜ್ಜಿ, ಊರ ಕಡೆಯಿಂದ ಯಾರಾದರು ಬಂದರೂ ಅಪ್ಪ ಮಾತ್ರ ಮಾತನಾಡುತ್ತಿದ್ದದ್ದು ಅಷ್ಟಕಷ್ಟೇ. ಈ ಬಗ್ಗೆ ನಾನು ಎಂದೂ ತಲೆಕೆಡಿಸಿಕೊಂಡದ್ದೇ ಇಲ್ಲ. ಅಪ್ಪ ಕೂಡಾ ಏನನ್ನು ಹೇಳಿಕೊಳ್ಳುತ್ತಿರಲಿಲ್ಲ. ಯಾವಾಗಲೋ ಒಮ್ಮೆ ’ನಿನ್ನಮ್ಮ ಸಾಯಲಿಕ್ಕೆ ನಿನ್ನ ತಾತ-ಅಜ್ಜಿಯೇ ಕಾರಣ’ ಅಂತ ಹೇಳಿದ್ರು. ಅಮ್ಮನ ಹೆರಿಗೆಯನ್ನ ಬೆಂಗಳೂರಿನ ಆಸ್ಪತ್ರೆಯಲ್ಲೇ ಮಾಡಿಸಬೇಕು ಅನ್ನೋದು ಅಪ್ಪನ ಆಸೆಯಾಗಿದ್ದರೂ ನನ್ನ ತಾತ ಅಜ್ಜಿ ಇದಕ್ಕೆ ಒಪ್ಪದೇ ಗರ್ಭಿಣಿ ಅಮ್ಮನನ್ನು ಊರಿಗೆ ಕರೆದುಕೊಂಡು ಹೊರಟಾಗ ಅಮ್ಮ ಕೂಡ ಅನಿವಾರ್ಯವಾಗಿ ಸುಮ್ಮನಿರಬೇಕಾಯಿತಂತೆ. ’ಹೆರಿಗೆ ಸಮಯದಲ್ಲಿ ಸರಿಯಾಗಿ ನಿಗಾ ವಹಿಸದೆ ಅವಳ ಸಾವಿಗೆ ಅವಕಾಶ ಮಾಡಿಕೊಟ್ಟರು’ ಅನ್ನೋದು ಅಪ್ಪನ ಬಹಳ ದಿನಗಳ ಕೊರಗಾಗಿತ್ತು . ಹಾಗಾಗಿಯೇ ಅಪ್ಪ ಎಂದೂ ಊರಿನ ಸಂಬಂಧಗಳ ಬಗ್ಗೆ ನನಗೆ ಹೇಳಿದ್ದು ಬಹಳ ಕಡಿಮೆ. ಅದಕ್ಕೇ ಆ ಕಡೆಯ ಸಂಬಂಧಗಳಿಂದ ನಾನು ಅಪರಿಚಿತನಾಗಿಯೇ ಬಿಟ್ಟೆ.
 
 
ಧಿಡೀರನೆ ಎಚ್ಚರವಾಯಿತು. ’ಜ್ಞಾನ ಇಲ್ವೇನ್ರೀ...ರಸ್ತೆ ಕಾಣಲ್ವಾ?! ಡ್ರೈವರ್ ಸಡನ್ ಬ್ರೇಕು ಹಾಕಿ ಯಾರಿಗೋ ಬೈಯ್ಯುತ್ತಿದ್ದ. ಕಾರು ಹೊರಟಂತೆ ಮತ್ತೆ ಹಾಗೇ ಕಣ್ಮುಚ್ಚಿದೆ. ಮಂಪರು ಆವರಿಸಿತು...
 
ನಾನು ಅಪ್ಪನ ಮುದ್ದಿನ ಆರೈಕೆಯಲ್ಲೇ ಬೆಳೆದೆ. ಊಟ, ತಿಂಡಿ, ಓದು, ಪ್ರೀತಿ ಎಲ್ಲವನ್ನೂ ಒಂದು ಚೂರೂ ಕೊರತೆಯಾಗದಂತೆ ಅಪ್ಪ ನೋಡಿಕೊಂಡಿದ್ದರು. ಹಾಗಾಗಿ ನನಗ್ಯಾವತ್ತೂ ಅಜ್ಜಿ ತಾತ ನೆಂಟರು ಯಾರೂ ನೆನಪಾಗುತ್ತಿರಲಿಲ್ಲ. ಆದರೆ ಅಪ್ಪನ ಕಷ್ಟ ಅರ್ಥ ಆಗುವ ವಯಸ್ಸಾದಾಗ ಅಮ್ಮ ಇದ್ದಿದ್ದ್ರೆ ಎಷ್ಟು ಚನ್ನಾಗಿರ್ತಿತ್ತು ಎನಿಸುತ್ತಿತ್ತು. ಅಪ್ಪ ಕೆಲಸದಲ್ಲೂ ಪಡುತ್ತಿದ್ದ ಕಷ್ಟ ನೋಡಲಾಗದೆ ಎಸ್ ಎಸ್ ಎಲ್ ಸಿ ಹೊತ್ತಿಗೆ ಇಷ್ಟು ಓದಿದ್ದು ಸಾಕು ಏನಾದ್ರೂ ಕೆಲಸ ಹಿಡಿಯೋಣ ಅನ್ನಿಸ್ತಿತ್ತು. ಅಪ್ಪ ಬಿಟ್ಟಿರಲಿಲ್ಲ. ಕಾಲೇಜಿನಲ್ಲೂ ನನಗಿದ್ದ ಗೆಳೆಯರೆಲ್ಲಾ ನನಗಿಂತಲೂ ಸ್ತಿತಿವಂತರಾಗಿದ್ದರು. ಅವರೆಲ್ಲ ಎಮ್ ಡಿ, ಎಮ್ ಎಸ್ ಅಂತ ಮುಂದಿನ ಓದಿನ ಬಗ್ಗೆ ಭವಿಷ್ಯದ ಕನಸುಗಳನ್ನ ಹೆಣಿಯುತ್ತಿದ್ದಾಗ ನಾನು ಮಾತ್ರ ಕೆಲಸದ ಬಗ್ಗೆ ತಲೆ ಕೆಡಿಸಿಕೊಂಡು ಕೂರುತಿದ್ದೆ. ಆ ಯೋಚನೆ ಅಪ್ಪನಿಗೆ ಗೊತ್ತಾದಾಗ ಬಹಳ ನೊಂದುಕೊಂಡಿದ್ದರು. ’ನೀನು ಮುಂದಕ್ಕೆ ಚನ್ನಾಗಿ ಓದಬೇಕು, ಒಳ್ಳೆ ನೌಕರಿ ಹಿಡಿಯಬೇಕು, ನಾಲ್ಕು ಜನ ನೋಡಿ ಹೆಮ್ಮೆ ಪಡುವಂತಹ ಕೆಲಸ ಮಾಡಬೇಕು’ ಅಂತ ತಿಳಿ ಹೇಳಿದ್ದರು. ಇದು ಅವರು ನನಗೋಸ್ಕರ ಕಂಡ ಕನಸು. ನನ್ನ ಓದಿಗೆಂದೇ ಅಪ್ಪ ಮಿಲ್ ಮುಗಿದ ಮೇಲೆ ಮತ್ತೊಂದು ಪಾರ್ಟ್ ಟೈಮ್ ಕೆಲಸಕ್ಕೂ ಸೇರಿದ್ರು. ನನಗಾಗಿ ಅವರು ಪಡುತ್ತಿದ್ದ ಬವಣೆ ನನಗೆ ತೀರಾ ಸಂಕಟಕ್ಕೆ ಸಿಲುಕಿಸುತಿತ್ತು.
 
 
ಎಷ್ತೊ ಸಾರಿ ಗೆಳೆಯರು ಅವರ ಅಮ್ಮನ ಬಗ್ಗೆ, ತಾತ ಅಜ್ಜಿ, ಊರಹಬ್ಬಗಳ ಬಗ್ಗೆ ಮಾತನಾಡುವಾಗ ಅಪ್ಪನ ಹೊರತಾಗಿ ನನಗೆ ಬೇರೆ ಜಗತ್ತೇ ಇಲ್ಲವಲ್ಲಾ ಎನ್ನಿಸಿತ್ತಿತ್ತು. ನನಗೆ ನಮ್ಮ ವಠಾರದ ಮೂರ್ನಾಕು ಮಂದಿ ಹಾಗು ಶಾಲೆಯಲ್ಲಿನ ಗೆಳೆಯರನ್ನು ಬಿಟ್ಟರೆ ಬೇರೆ ಜಗತ್ತೇ ಗೊತ್ತಿರಲ್ಲಿಲ್ಲ. ಇದೇ ಸಣ್ಣ ಪ್ರಪಂಚದಲ್ಲೇ ನಾನು ಬೆಳೆದೆ. ಓದಿನಲ್ಲಿ ಎಲ್ಲಿಯೂ ನಿಲ್ಲದೆ ಇಂಜಿನಿಯರಿಂಗ್ ಗೆ ಸೇರಿಕೊಂಡಿದ್ದೆ. ನನ್ನ ಇಂಜಿನಿಯರಿಂಗ್ ಮುಗಿಯುವ ಸಮಯಕ್ಕೆ ಅಪ್ಪ ನಿವೃತ್ತಿಗೆ ಬಂದಿದ್ರು. ಇನ್ನೇನು ಬೇಗ ಓದು ಮುಗಿಸಿ ಅಪ್ಪನನ್ನು ತುಂಬ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಆಸೆ ನನ್ನದು. ಅದೊಂದೇ ನನ್ನ ಮಹದಾಸೆ. ನನ್ನಪ್ಪನಿಗೆ ನನ್ನ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಇದ್ದರು ಯಾರ ಬಗ್ಗೆಯೂ ಎಂದೂ ತಲೆಕೆಡಿಸಿಕೊಂಡವರಲ್ಲ. ನನ್ನ ಜವಾಬ್ದಾರಿ ಬಿಟ್ಟರೆ ಅವರಿಗೆ ಬೇರೆ ಲೋಕ ಇರಲಿಲ್ಲ. ಕೆ .ಆರ್ ಮಿಲ್, ಮನೆ, ಮಗ ಇವಿಷ್ಟೇ ಅವರ ಜಗತ್ತು.
 
 
 
ಮನೆಯಲ್ಲಿ ಕೆಲವೂಮ್ಮೆ ನಾನೇ ತಕ್ಕ ಮಟ್ಟಿಗೆ ಅಡುಗೆ ಮಾಡುತ್ತಿದ್ದೆ. ಅಪ್ಪ ಅದಕ್ಕೂ ಸಮಯ ವೇಸ್ಟ್ ಮಾಡಲು ಬಿಡುತ್ತಿರುಲಿಲ್ಲ. ಉಳಿದಂತೆ ಅವರದ್ದೇ ಅಡುಗೆ. ಬೆಳಗ್ಗೆ ಅನ್ನ ಸಾಂಬಾರ್ ಮಾಡಿದ್ರೆ ಮುಗಿಯುತ್ತಿತ್ತು ನಮ್ಮ ಆ ದಿನದ ನಮ್ಮ ಹೊಟ್ಟೆ ಪಾಡು! ಹೀಗಿರುವಾಗಲೇ ಮಿಚಿಗನ್ ಯೂನಿವರ್ಸಿಟಿ ಯಲ್ಲಿ ನನಗೆ ಎಮ್ ಎಸ್ ಮಾಡಲು ಅವಕಾಶ ಸಿಕ್ಕಿಬಿಟ್ಟಿತ್ತು. ಅಪ್ಪನಿಗೆ ವಿಷಯ ತಿಳಿದಾಗ ಆದ ಸಂತೋಷಕ್ಕೆ ಇತಿಮಿತಿಯಿರಲಿಲ್ಲ. ತಮ್ಮ ಜೀವನದ ಪರಮೊಚ್ಛ ಗುರಿ ತಲುಪಿದಂತೆ ಖುಷಿಪಟ್ಟಿದ್ದರು. ನಾನು ಪಟ್ಟ ಕಷ್ಟಕ್ಕೆ ದೇವರು ಕಡೆಗೂ ಕಣ್ಣು ಬಿಟ್ಟ ಎಂಬ ಖುಷಿಯಲ್ಲಿ ಕಣ್ಣಿರು ಹಾಕಿದ್ದರು. ನಾನು ಯೋಚನೆ ಮಾಡುತ್ತಿದ್ದೆ. ೨೨ ವರ್ಷಗಳಿಂದ ನನ್ನ ಬದುಕಿನಲ್ಲಿ ಅಪ್ಪನನ್ನು ಬಿಟ್ಟರೆ ಯಾರೂ ಏನೂ ಇರಲಿಲ್ಲ. ಅವರನ್ನು ನಾನು ಎಂದೂ ತೊರೆದಿರಲಿಲ್ಲ. ಅಪ್ಪನ ನೆರಳಲ್ಲೆ ಬೆಳೆದ ನನಗೆ ಏಕಾಏಕಿ ಅಪ್ಪನನ್ನು ಬಿಟ್ಟು ದೂರದ ಯಾವುದೋ ಅಪರಿಚಿತ ದೇಶಕ್ಕೆ ಹೋಗುವುದೆಂದರೆ ದಿಕ್ಕು ತೋಚದಂತಾಗಿತ್ತು. ದೇಶ ಬಿಟ್ಟು ಹೋಗುವ ಭಯವಲ್ಲ...ಅಪ್ಪನನ್ನು ಅಪ್ಪನನ್ನು ಬಿಟ್ಟು ಹೋಗುವುದು ನನಗೆ ಕಲ್ಪಿಸಿಕೊಳ್ಳಲು ಆಗಿರಲಿಲ್ಲ. ಇದು ಬೇಡ ಬಿಡಪ್ಪಾ ಇಲ್ಲೇ ಎಲ್ಲಾದ್ರೂ ಒಳ್ಳೆ ಕೆಲಸ ಮಾಡುತ್ತೇನೆ ಎಂದು ಅಪ್ಪನನ್ನು ಗೋಗರೆದಿದ್ದೆ, ಬೇಡಿದ್ದೆ. ಆದರೆ ಅಪ್ಪ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ನಿನ್ನ ಜೊತೆಯಲ್ಲಿ ಓದುತ್ತಿದ್ದ ಒಂದಿಬ್ಬರು ಗೆಳೆಯರೂ ಅಲ್ಲಿಗೇ ಹೋಗುತ್ತಿರಬೇಕಾದರೆ ನಿನಗೇನು? ಸುಮ್ಮನೆ ಧೈರ್ಯವಾಗಿ ಹೋಗಿ ಬಾ ಎಂದು ಬಾಯಿ ಮುಚ್ಚಿಸಿದ್ದರು.
 
 
ಓದಿನಲ್ಲಿ ನಾನು ಮುಂದಿದ್ದರೂ ಹಣದ ವಿಚಾರದಲ್ಲಿ ನಾವು ಕಷ್ಟದಲ್ಲಿದ್ದೆವು. ಆದರೆ ಏನನ್ನಾದರೂ ಮಾಡಿ ಮಗನನ್ನು ಅಮೆರಿಕಾಗೆ ಕಳಿಸಬೇಕು ಎನ್ನುವ ಜಿದ್ದಿನಲ್ಲಿದ್ದ ಅಪ್ಪ ಯಾವ ಯೋಚನೆಯೂ ಅವರ ತಲೆ ಕೆಡಿಸದಂತೆ ನೋಡಿಕೊಂಡರು. ನನಗೋಸ್ಕರ ಊರಿನಲ್ಲಿ ಅವರ ಪಿತ್ರಾಜಿತ ಆಸ್ತಿ ಅಂತ ಇದ್ದ ಅಲ್ಪಸ್ವಲ್ಪ ಜಮೀನನ್ನು ಮಾರಿ ಸ್ವಲ್ಪ ಹಣ ಒಟ್ಟುಗೂಡಿಸಿದರು. ಅಮೆರಿಕಾಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ನಾನು ಮಾಡಿದ ಪ್ರಯತ್ನಗಳೆಲ್ಲವೂ ಕೈಕೊಟ್ಟವು. ನನಗೆ ಬೇರೆ ಮಾರ್ಗವೇ ಇರಲಿಲ್ಲ. ಅದರಲ್ಲೂ ಅಪ್ಪ ಅವತ್ತು ನನ್ನ ಕೈ ಹಿಡಿದು ’ನೋಡು ಮಗನೇ ನಾನು ಬದುಕಿರೊದೇ ನಿನಗಾಗಿ ಕಣಪ್ಪಾ...ನೀನು ನನ್ನ ಮಾತು ಕೇಳದಿದ್ರೆ ಇನ್ನು ಮುಂದೆ ನಿನ್ನಿಷ್ಟ" ಅಂತ ಕಣ್ಣೀರು ತುಂಬಿಕೊಂಡಾಗಲಂತೂ ನನ್ನಿಂದ ಏನನ್ನೂ ಬಯಸದೆ ೨೨ ವರ್ಷ ನನ್ನನ್ನು ಕಣ್ಮಣಿಯಂತೆ ಸಲಹಿ ಬೆಳೆಸಿದ ಅಪ್ಪನ ಮಾತುಗಳಿಗೆ ಎದುರು ಜವಾಬು ಕೊಡುವ ಸ್ತಿತಿಯಲ್ಲಿ ನಾನಿರಲಿಲ್ಲ. ಎಲ್ಲಕಿಂತ ಹೆಚ್ಚಾಗಿ ಅಪ್ಪ ನನ್ನನ್ನು ಓದಿಸಿ, ಅಮೆರಿಕಾಕ್ಕೆ ಕಳಿಸುವ ನಿರ್ಧಾರಕ್ಕೆ ಯಾಕೆ ಬಂದ್ರು, ಕಾರಣ ಏನು? ಯಾರು ಅವರನ್ನ ಈ ರೀತಿ ಮಾಡಲು ಪ್ರೇರೆಪಿಸಿದ್ರು, ಅನ್ನೋದು ನನಗೆ ಗೊತ್ತಾಗಲೇ ಇಲ್ಲ.
 
 
ಅಪ್ಪನಿಗೆ ವಯಸ್ಸಾಗಿತ್ತು. ಮಿಲ್ನಲ್ಲಿನ ದುಡಿತದಿಂತ ಅವರ ಆರೋಗ್ಯ ಅಷ್ಟೇನೂ ಚನ್ನಾಗಿರಲಿಲ್ಲ. ಅವರನ್ನು ಒಬ್ಬಂಟಿಯಾಗಿ ಬಿಟ್ಟು ಹೋಗುವ ಯೋಚನೆ ಮನಸ್ಸನ್ನು ಕಿತ್ತು ತಿನ್ನುತ್ತಿತ್ತು. ನಿಜಕ್ಕೂ ಹೋಗಲೇ ಬೇಕಾ ಅಂತ ಮನಸ್ಸು ಗಾಳಿಪಟದಂತೆ ಗೋತ ಹೊಡೆಯುತ್ತಿತ್ತು. ಬ್ಯಾಂಕ್ ವ್ಯವಹಾರ, ವೀಸಾ ಅಂತ ಎಲ್ಲ ಮುಗಿಸಿ ಅಮೆರಿಕಾಕ್ಕೆ ಹೋಗುವ ದಿನ ಹತ್ತಿರ ಬಂದಂತೆ ಮನದಲ್ಲಿ ದುಗುಡ ಹೆಚ್ಚುತ್ತಿತ್ತು. ಏನೋ ಭಯ ಕಾಡತೊಡಗಿತ್ತು. ಅಪ್ಪ ಏನಾದ್ರೂ ಮಾಡಿಕೊಳ್ಳಲಿ. ಎಲ್ಲವನ್ನೂ ಕ್ಯಾನ್ಸಲ್ ಮಾಡಿಬಿಟ್ಟರೆ ಹೇಗೆ ಅಂತ ಮನಸ್ಸು ಪೀಡಿಸುತ್ತಿತ್ತು. ಇಲ್ಲೇ ದುಡಿದು ಅಪ್ಪನನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋದು ಬಿಟ್ಟರೆ ನನಗೆ ಬೇರಾವ ಯೋಚನೆಗಳು ಇರಲಿಲ್ಲ. ಯಾಕಾದರೂ ಅಮೆರಿಕಾದಲ್ಲಿ ಸೀಟು ಸಿಕ್ಕಿರುವ ವಿಚಾರ ಅವರಿಗೆ ಹೇಳಿದೆನೋ ಎಂದು ಬೈದುಕೊಂಡಾಗಿತ್ತು. ಆದರೆ ಅಪ್ಪ ಮಾತ್ರ ಸಖತ್ ಖುಷಿಯಾಗಿದ್ದರು. ತಾತ ಅಜ್ಜಿ, ತಮ್ಮ ದೂರದೂರದ ಬಂಧುಬಳಗಕ್ಕೂ ನಾನು ಅಮೆರಿಕಾ ಹೋಗುತ್ತಿರುವ ಬಗ್ಗೆ ಹೇಳಿಕೊಂಡು ಸಂತೋಷಪಟ್ಟಿದ್ದರು. ನಾನು ವಿಮಾನ ಹತ್ತಲು ಇನ್ನು ೧೫ ದಿನ ಉಳಿದಿದ್ದವು. ಅಪ್ಪ ಪ್ರತಿಯೊಂದು ವಿಷಯವನ್ನೂ ನನ್ನ ಗೆಳೆಯರನ್ನು ಕೇಳಿಕೊಂಡು ನನಗಾಗಿ ಸಿದ್ದತೆ ಮಾಡುತ್ತಿದ್ದರು. ಸರಿಯಾಗಿ ಬೆಂಗಳೂರೂ ನೋಡದ ನಾನು ಏಕಾಏಕಿ ಅಮೆರಿಕಾಕ್ಕೆ ಹೋಗುವುದೆಂದರೆ ಹುಡುಗಾಟದ ವಿಷಯಾನಾ? ಇದು ಯಾಕಪ್ಪಾ ಬೇಕಿತ್ತು ಅಂತ ನನಗೆ ಹಿಂಸೆ ಆಗುತ್ತಿತ್ತು.
 
 
ಅವತ್ತು ರಾತ್ರಿ ಸುಮಾರು ೧೦ ಗಂಟೆ ಇರಬಹುದು, ಅಪ್ಪ ಮನೆಗೆ ಬಂದವರೇ ನನ್ನ ಪ್ರೈಮರಿ ಸ್ಕೂಲ್ ನ ಎಲ್ಲಾ ಮಾರ್ಕ್ಸ್ ಕಾರ್ಡ್ ಗಳನ್ನೂ ತೆಗೆದು, ಆ ಮಾರ್ಕ್ಸ್ ಕಾರ್ಡ್ಗಳನ್ನು ಕೈಗಳಿಂದ  ನೇವರಿಸಿ ಇವೆಲ್ಲಾ ನಂದೇ ಎಂಬಂತೆ ಕಣ್ಣು ತುಂಬಿಕೊಂಡು, ಇದೆಲ್ಲವನ್ನೂ ಜೋಪಾನವಾಗಿಟ್ಟುಕೋ ಅಂತ ಕೊಟ್ಟಿದ್ದರು. ಅಪ್ಪನ ಆ ನೋಟ ಆ ಪ್ರೀತಿಯನ್ನು ನಾನು ಹೇಗೆ ಮರೆಯಲು ಸಾಧ್ಯ??! ಪಕ್ಕ ಕೂರಿಸಿಕೊಂಡು ಬದುಕಿನಲ್ಲಿ ಓದು ಎಷ್ಟು ಮುಖ್ಯ, ಫ್ರೆಂಡ್ಸ್ ಎಲ್ಲಿಯವರೆಗೆ ಮುಖ್ಯ ಎಂಬೆಲ್ಲವನ್ನೂ ತಮಗಿದ್ದ ಪ್ರಪಂಚ ಜ್ನಾನದಲ್ಲೇ ತಿಳಿಸುತ್ತಾ, ಹೊಸ ದೇಶ, ಹೊಸ ಬದುಕು ಎಲ್ಲದರ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು. ಅಪ್ಪ ಹೋಗಿ ಮಲಗಿದ ಮೇಲೆ ನಾನು ನನ್ನ ಬುಕ್ಸ್ ದಾಖಲೆಗಳನ್ನು ಜೋಡಿಸಿಕೊಂಡು ಅಪ್ಪನ ಮಾತುಗಳನ್ನೇ ನೆನೆಯುತ್ತಾ ಅಲ್ಲೇ ದಿಂಬಿಗೊರಗಿದ್ದೆ.
 
 
ಅದು ಆಗಸ್ಟ್ ಕೊನೆಯವಾರ. ಮಳೆ...ಆಗಲೇ ಸ್ವಲ್ಪ ಚಳಿ. ಹಾಗೇ ಒದ್ದಾಡುತ್ತಾ ಮಲಗಿದ್ದವ ಕಣ್ಣು ಬಿಟ್ಟಾಗ ಬೆಳಿಗ್ಗೆ ಸುಮಾರು ೭ ಗಂಟೆ ಆಗಿತ್ತು. ಅಪ್ಪ ಕೂಡ ಮಲಗಿದ್ದರು. ನಾನು ಹಾಗೇ ಮಗ್ಗುಲು ಬದಲಿಸಿದೆ. ಹಾಲಿನವನು ಬಾಗಿಲು ತಟ್ಟಿದಾಗ ಎದ್ದು ಪಾತ್ರೆಗೆ ಹಾಲು ಹಾಕಿಸಿಕೊಂಡು ಅಡಿಗೆ ಮನೆಯಲ್ಲಿಟ್ಟು ಅಪ್ಪನನ್ನ ಏಳಿಸಲು ಹೋದವನು ಅವರೂ ರಾತ್ರಿ ಲೇಟಾಗಿ ಮಲಗಿದ್ದರಿಂದ ಇನ್ನಷ್ಟು ಮಲಗಲಿ ಎಂದು ಸುಮ್ಮನಾದೆ. ಬಾಗಿಲ ಬಳಿ ಪೇಪರ್ ಬಿದ್ದ ಸದ್ದಾಗಿ, ಪೇಪರ್ ಓದುವಾಗ ದೆಹಲಿಯಲ್ಲಿ ಸಿಖ್ಖರ ಗಲಾಟೆ ಸುದ್ದಿ ತುಂಬಿಕೊಂಡಿತ್ತು. ಬರೀ ಹಿಂಸೆಯ ಸುದ್ದಿಗಳು. ಎಂಟು ಗಂಟೆಯಾಗಿತ್ತು. ಸ್ವಲ್ಪ ಹೆಚ್ಚೇ ಮಲಗಿದ್ದಾರೆ ಈಗಲಾದರೂ ಅಪ್ಪನನ್ನು ಏಳಿಸೋಣ ಅಂತ ಹೋದಾಗ...
 
 
ಅಪ್ಪ ನಿಶ್ಚಲವಾಗಿ ಶಾಂತವಾಗಿ ಮಲಗಿದ್ದರು. ಅರೆ ಇದ್ಯಾಕೆ?! ಅಪ್ಪ...ಅಪ್ಪಾ...ಅಪ್ಪಾ ಎಂದು ಜೋರಾಗಿ ಕೂಗಿ ಅಲುಗಾಡಿಸಿದೆ. ಏಳ್ರಪ್ಪಾ ಅಂತ ಒರಟಾಗಿ ಅಲುಗಾಡಿಸಿದೆ. ಏನೂ ಮಾತಿರಲಿಲ್ಲ! ಅಪ್ಪನ ಉಸಿರು ನಿಂತಿತ್ತು. ನನ್ನಪ್ಪ ಶಾಶ್ವತವಾಗಿ ಮಲಗಿಬಿಟ್ಟಿದ್ದರು. ಸಿಡಿಲು ಹೊಡೆದಂತೆನೆಸಿ ನನ್ನ ತಲೆ ಒಮ್ಮೆಗೇ ಛಿದ್ರವಾಗಿತ್ತು. ನಾನು ಪ್ರಜ್ನೆ ತಪ್ಪಿದ್ದೆ. ಮೊದಲ ಬಾರಿಗೆ ನನ್ನ ಬದುಕೇ ಕುಸಿದಿತ್ತು.
 
 
ನನಗೆ ಪ್ರಜ್ಞೆ ಬಂದಾಗ ಮನೆಯಲ್ಲಿ ಸಾಕಷ್ಟು ಜನ ಸೇರಿದ್ದರು. ಏಳದೇ ಮಲಗಿದ್ದ ಅಪ್ಪ, ಅವರ ನಿಶ್ಚಲತೆ ನೆನಪಾಗಿ ಒಮ್ಮೆಗೇ ಬಿಕ್ಕಳಿಸಿ ಬಂದ ಅಳು ತಡೆಯದಾದೆ. ನಾನು ಅನಾಥನಾಗಿದ್ದೆ. ಅಕ್ಕಪಕ್ಕದ ಜನ ನನ್ನನ್ನು ಸಮಾಧಾನ ಮಾಡಲು ಪ್ರಯತ್ನಿಸಿದಷ್ಟೂ ಸಂಕಟ ತಡೆಯಲಾಗದೆ ದುಃಖ ಉಮ್ಮಳಿಸುತ್ತಿತ್ತು. ನಾನು ನೋಡೇ ಇರದ ಜನರೆಲ್ಲ ಸೇರಿದ್ದರು. ಯಾರೋ ಒಬ್ಬರು ’ಮುಂದಿನ ಕಾರ್ಯ ಮಾಡಿ ಮುಗಿಸಿ, ಆ ಹುಡುಗನಿಗೆ ಏನ್ ಗೊತ್ತಾಗತ್ತೆ...’ ಅಂತ ಹೇಳಿದ್ದು ಕೇಳಿಸ್ತು. ಅಪ್ಪನ ಗೆಳೆಯರು ಬಂದಿದ್ದರು. ಎಲ್ಲರೂ ನಾನು ಅಮೇರಿಕಾಗೆ ಹೋಗುವುದರ ಬಗ್ಗೆ ಮಾತನಾಡಿ ನನ್ನ ಪರಿಸ್ಥಿತಿಗೆ ಸಿಂಪತಿ ತೋರಿಸುತ್ತಿದ್ದರು. ನನಗಂತೂ ಏನೊಂದೂ ಅರ್ಥವಾಗದೇ ಕಂಗಾಲಾಗಿದ್ದೆ. ರಾತ್ರಿಯಷ್ಟೇ ನನಗೆ ಬದುಕಿನ ಪಾಠ ಹೇಳಿಕೊಟ್ಟಿದ್ದ ಅಪ್ಪ ಬೆಳಿಗ್ಗೆ ಕೈ ಬಿಟ್ಟು ಸಿಗದಷ್ಟು ದೂರ ಹೊರಟುಹೋಗಿದ್ದರು. ಅವರನ್ನು ಬಿಟ್ಟು ನನಗೆ ಬೇರೆ ಜಗತ್ತಿರಲಿಲ್ಲ. ನನ್ನ ಉಸಿರು ನನ್ನ ಅಪ್ಪ. ಈಗ ಅವರಿಲ್ಲದ ಮೇಲೆ ನಾನು ಏನು ಮಾಡಲಿ? ಎಲ್ಲಿಗೆ ಹೋಗಲಿ? ಅಮ್ಮ ನನ್ನನ್ನು ಹುಟ್ಟಿಸಿ ಬಿಟ್ಟು ಹೋಗಿದ್ದರೆ ಅಪ್ಪ ನಾನು ಹೊಸ ಬದುಕಿಗೆ ಕಣ್ಣು ಬಿಡುವಷ್ಟರಲ್ಲಿ ನನ್ನನ್ನು ಒಂಟಿ ಮಾಡಿ ಹೋಗಿಬಿಟ್ಟಿದ್ದರು. ಬದುಕಿನಲ್ಲಿ ಅದು ಮಾಡಬೇಕು ಅಪ್ಪನಿಗಾಗಿ ಇದು ಮಾಡಬೇಕು ಎಂದು ಏನೆಲ್ಲಾ ಯೋಚನೆ ಮಾಡಿದ್ದ ನಾನು ಒಂದೇ ಒಂದು ದಿನ ಕೂಡ ಅಪ್ಪನ ಇಲ್ಲದಿರುವಿಕೆಯ ಯೋಚನೆ ಮಾಡಿರಲಿಲ್ಲ! ನಾನೀಗ ಇಡೀ ಪ್ರಪಂಚದಲ್ಲಿ ಒಂಟಿ. ಹಿಂದಿಲ್ಲ ಮುಂದಿಲ್ಲ. ಕಾಯುವ ಅಮ್ಮ ಅಪ್ಪಂದಿರೂ ಇಲ್ಲದ ಅನಾಥ!
 
 
 
ಅಕ್ಕಪಕ್ಕದವರು ಸೇರಿ ಮಾಡಿಸಿದ ಎಲ್ಲಾ ಕಾರ್ಯಗಳನ್ನೂ ಮಾಡಿ ಸುಸ್ತಾಗಿ ಹೋಗಿದ್ದೆ. ಅಪ್ಪನನ್ನು ಮಣ್ಣಿಗೆ ಇಟ್ಟು ಮುಚ್ಚುವಾಗಲಂತೂ ನಾನು ಬದುಕಿಯೂ ಸತ್ತಂತಾಗಿದ್ದೆ. ನಾನೂ ಅವರ ಜೊತೆ ಹೋಗಿಬಿಡಬಾರದಾ ಎನ್ನಿಸಿತ್ತು. ನೆನ್ನೆ ಅಪ್ಪನೊಟ್ಟಿಗೆ ಕುಳಿತು ಊಟ ಮಾಡಿದವನು ಇಂದು ಒಬ್ಬಂಟಿಯಾಗಿ ಕುಳಿತಿದ್ದೆ. ಮನೆಯಲ್ಲಿ ದೀಪ ಉರಿಯುತ್ತಿತ್ತು. ಮನೆಗೆ ಬಂದವರು ಸಮಾಧಾನ ಮಾಡಿ ಹೋಗುತ್ತಿದ್ದರು. ಯಾರಿಗೋಸ್ಕರ ಇರಬೇಕು? ನನಗೋಸ್ಕರ ಯಾರಿದ್ದಾರೆ? ನಾನೂ ಸತ್ತು ಹೋಗಬೇಕು ಅಂತ ಯೋಚನೆ ಮಾಡುತ್ತಿದ್ದೆ. ಇವರೆಲ್ಲ ಹೋದಮೇಲೆ ನೇಣು ಹಾಕಿಕೊಂಡು ಸಾಯೋದೆ ಮೇಲು ಅನ್ನುವ ನಿರ್ಧಾರಕ್ಕೆ ಮನಸ್ಸು ಬಂದಿತ್ತು. ನನ್ನ ಗೆಳೆಯರು ಅವತ್ತು ಜೊತೆಯಲ್ಲಿದ್ದರು. ಸಮಾಧಾನ ಮಾಡುತ್ತಿದ್ದರು. ಯಾರು ಏನು ಹೇಳಿದರೂ ನನ್ನ ನೋವು ನನಗೆ ಮಾತ್ರ ಗೊತ್ತಿತ್ತು. ಸಾವು ನನ್ನನ್ನು ಕರೆಯುತ್ತಿದೆ, ಅಪ್ಪನೂ ಕಾಯುತ್ತಿದ್ದಾರೆ ಎನ್ನಿಸುತ್ತಿತ್ತು. ಸಾವು ಎಷ್ಟು ನಿರಾಳ! ಬದುಕಿನ ಎಲ್ಲಾ ಜಂಜಾಟಗಳಿಗೂ ಒಂದೇ ಸಾರಿ ಮುಕ್ತಿ ಕೊಟ್ಟುಬಿಡುತ್ತದೆ. ಯಾವತ್ತಿದ್ರೂ ಸಾಯಲೇ ಬೇಕು, ಈಗಲೇ ಸಾಯೋದ್ಯಾಕೆ ಬೆಡ? ಹೀಗೆ ಸಾವೇ ಸರಿಯೆಂಬ ನಿರ್ಧಾರಕ್ಕೆ ಬಂದು ನಿಂತಿದ್ದೆ. ಸಾವು ನನ್ನನ್ನು ವಿಪರೀತ ಕಾಡಿತ್ತು.
 
 
ಅಪ್ಪ ಸತ್ತ ೬-೭ ದಿನ ಅಕ್ಕಪಕ್ಕದ ಮನೆಗಳ ಜನ ಬಂದು ಹೋಗುತ್ತಿದ್ದರು. ಜೊತೆಗೆ ನನ್ನ ಗೆಳೆಯರು. ಅಮೆರಿಕಾಕ್ಕೆ ಹೋರಡುವ ದಿನ ಹತ್ತಿರ ಬರುತ್ತಿತ್ತು. ಯಾವುದೇ ಕಾರಣಕ್ಕೂ ಅಮೆರಿಕಾಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಅಪ್ಪನ ಕಾರ್ಯಗಳನ್ನು ಮಾಡಿ ಮುಗಿಸುವುದಷ್ಟೇ ಈಗ; ನನ್ನ ಬದುಕಿನ ನಿರ್ಧಾರ ನಂತರ. ಅಪ್ಪ ನನಗೆ ಕೊಟ್ಟ ಬದುಕಿಗೆ ನಾನು ಅವರ ಕಾರ್ಯಗಳನ್ನೂ ಮುಗಿಸದ್ದಿದ್ದರೆ ಹೇಗೆ? ಮಗನಾಗಿ ಅಷ್ಟು ಮಾಡದಿದ್ದರೆ ಅಪ್ಪನಿಗೆ ಅನ್ಯಾಯ ಮಾಡಿದಹಾಗೆ ಅಂತ ನನ್ನ ಮನಸ್ಸು ಧ್ವನಿಸುತ್ತಿತ್ತು. ಏನೂ ತಿಳಿಯದ ನಾನು ಹಲವರ ನೆರವಿನಿಂದ ಅಪ್ಪನ ಕಾರ್ಯ ಮಾಡಿ ಮುಗಿಸಿದೆ.
 
 
ಒಬ್ಬಂಟಿಯಾಗಿ ಕೂತು ಎಷ್ಟೇ ಯೋಚಿಸಿದರು ಏನೂ ಹೊಳೆಯದ ಸ್ತಿತಿ. ಆಗಾಗ ಬಂದು ಹೋಗುವ ಗೆಳೆಯರೆಲ್ಲ ಅಮೆರಿಕಾಕ್ಕೆ ಹೋಗಲು ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿರುವುದನ್ನು ನೆನಪಿಸಿ ರೆಡಿ ಆಗಲು ಒತ್ತಾಯ ಮಾಡುತ್ತಿದ್ದರು. ನನಗೆ ಅಮೆರಿಕಾವೋ..... ಸಾವೋ ಎನ್ನುವ ದುರ್ಬಲ ಮನಸ್ಸು. ಸಧ್ಯಕ್ಕೆ ಏರ್ ಟಿಕೆಟ್ ಕ್ಯಾನ್ಸಲ್ ಮಾಡಿ ಮುಂದೆ ಏನಾಗುವುದೋ ನೋಡುವುದು ಎನ್ನುವ ತಿರ್ಮಾನಕ್ಕೆ ಬಂದಿದ್ದೆ. ಅವತ್ತು ಸುಂದರ್ ಬಂದು ಸಾಕಷ್ಟು ಸಮಾಧಾನ ಹೇಳಿದ. ನಾವಿಬ್ಬರೂ ಎಸ್ ಎಸ್ ಎಲ್ ಸಿವರೆಗೂ ಜೊತೆಗೆ ಓದಿದ್ದೆವು. ಅವನು ಆಗಲೇ ಸ್ಕೂಲ್ ಗೆ ಗುಡ್ ಬೈ ಹೇಳಿ ಯಾವುದೋ ವರ್ಕ್ ಶಾಪಿನಲ್ಲಿ ಕೆಲಸ ಮಾಡುತ್ತಿದ್ದ. ಅವರ ಮನೆಯಲ್ಲೂ ಬಹಳ ಕಷ್ಟದ ಪರಿಸ್ಥಿತಿ ಇತ್ತು. ಅವನಿಗೆ ಅಪ್ಪ ಇರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ಇಡೀ ಮನೆಯ ಜವಾಬ್ದಾರಿ ಹೊತ್ತಿದ್ದ ಅವನನ್ನು ಕಂಡರೆ ನನಗೆ ತುಂಬ ಗೌರವ. ಅವನನ್ನು ನೋಡಿದಾಗಲೆಲ್ಲ ನನಗೂ ಕೆಲಸಕ್ಕೆ ಸೇರಬೇಕೆಂಬ ಮನಸ್ಸಾಗುತ್ತಿತ್ತು. ನನಗೆ ಅವನ ಬದುಕು ಇಷ್ಟ ಆಗುತ್ತಿತ್ತು. ಟಿಕೆಟ್ ತೆಗೆದು ನನ್ನನ್ನು ಆಗಾಗ ಸಿನೆಮಾಗೆ ಕರೆದುಕೊಂಡು ಹೋಗ್ತಿದ್ದಿದ್ದೇ ಅವನು! ಸುಂದರ್ ದಿಟ್ಟ ಹುಡುಗ, ನೇರ ಮಾತುಗಾರಿಕೆ ಅವನ ವಿಶೇಷ. ಅಪ್ಪ ಇದ್ದಾಗಲೂ ಆಗಾಗ ಮನೆಗೆ ಬಂದು ಹೋಗ್ತಿದ್ದ .
 
 
ನಾನು ಏರ್ ಟಿಕೆಟ್ ಕ್ಯಾನ್ಸಲ್ ಮಾಡುವ ವಿಷಯ ಅವನಲ್ಲಿ ಹೇಳಿದೆ. ಸುಂದರ್ ಅಚ್ಚರಿ ದಿಗ್ಭ್ರಮೆ ವ್ಯಕ್ತ ಪಡಿಸುತ್ತಾ ’ಅಯ್ಯೋ ನಾನು ಬಂದಿದ್ದೇ ನೀನು ಅಮೆರಿಕಾಗೆ ಹೋಗೋದರ ಬಗ್ಗೆ ಮಾತಾಡಕ್ಕೆ ಕಣೋ. ನೀನು ನೋಡಿದರೆ ಹಿಂಗ್ ಅಂತಿಯಾ...ಸಾರ್ಥಕ ಬಿಡು ನಿಮ್ಮಪ್ಪ ನಿನ್ನ ಓದ್ಸಿದ್ದುಕ್ಕು!! ನಿನಗೋಸ್ಕರ ಹಗಲು ರಾತ್ರಿ ಕಷ್ಟಪಟ್ರು...ನಿನಗೆ ಓದ್ಸಿ ನೆಲೆ ಮಾಡ್ಬೇಕು ಅಂತಾನೆ ಅವ್ರ ಜೀವನ ಹಿಡ್ಕೊಂಡಿದ್ರು...ಎಲ್ಲಾ ಒಳ್ಳೆದಾಯ್ತು, ಮಗ ಇನ್ನು ಬೇರೆ ದೇಶಕ್ಕೆ ಹೋಗಿ ಒಳ್ಳೆ ಹೆಸರು ಸಂಪಾದಿಸ್ತಾನೆ ಅನ್ನೋ ಸಂತೋಷದಲ್ಲಿ ಪ್ರಾಣ ಬಿಟ್ಟಿದ್ದಾರೆ ಕಣೋ ನಿಮ್ಮಪ್ಪ! ನೀನು ನೋಡಿದ್ರೆ ಹಿಂಗ್ ಅಂತಿಯ!! ನಿಜವಾಗಲು ನಿಂಗೆ ನಿಮ್ ಅಪ್ಪನ ಬಗ್ಗೆ ಪ್ರೀತಿ ಇದ್ರೆ ಹೊರಡು...ಇಲ್ಲ ಅಂದ್ರೆ ಇಲ್ಲೇ ಎಲ್ಲಾದ್ರೂ ಕೆಲಸ ಹುಡ್ಕೊಂಡು ಇರು ಅಷ್ಟೇ... ನೋಡೋ...ನನಗೆ ಓದಬೇಕು ಅನ್ನೋ ಆಸೆ ಇದ್ರೂ ಓದ್ಸೋರು ಯಾರೂ ಇರ್ಲಿಲ್ಲ. ನಿಂಗೆ ನಿಮ್ ತಂದೆ ಕಷ್ಟಪಟ್ಟು ಓದ್ಸಿದರೆ ನೀನು ಅವ್ರ ಆಸೆ ಪೂರೈಸದೆ ಹಿಂಗ್ ಪುಕ್ಕಲನ ಥರ ಅಳ್ತಿದೀಯ!! ಇನ್ನೂ ಏನು ಯೋಚನೆ ಮಾಡ್ತಿಯಾ?? ಅವ್ರ ಆಶಿರ್ವಾದ ಯಾವಾಗ್ಲೂ ನಿನ್ನ ಜೊತೆಲೆ ಇರುತ್ತೆ, ಬದುಕೋಕೆ ಸರಿಯಾದ ತೀರ್ಮಾನ ಮಾಡು’ ಅಂತ ಸುಂದರ್ ಸರಿಯಾಗಿ ಗದರಾಡಿದ. ನನ್ನ ದುರ್ಬಲ ದುಃಖತಪ್ತ ಮನಸ್ಸಿಗೆ ಹಾಗೆ ಬೈದು ಹೇಳಲು ಯಾರಾದರೂ ಬೇಕಿತ್ತೆನಿಸುತ್ತದೆ. ಸುಂದರ್ ಹೇಳಿದ್ದು ಸರಿ ಎನಿಸಿತು. ನನ್ನಪ್ಪ ನನಗೆ ಕೊಟ್ಟ ಬದುಕನ್ನು ಮುಗಿಸಿಬಿಡುವುದು ಸರಿಯಾ? ಇನ್ನು ಮುಂದೆ ಸಾವಿನ ಬಗ್ಗೆ ಯೋಚನೆ ಮಾಡುವುದು ತಪ್ಪು ಎನ್ನಿಸಿತು. ನನಗೆ ಇಲ್ಲಿ ಯಾರೂ ಇರಲಿಲ್ಲ. ಇಲ್ಲಿದ್ದು ಏನೂ ಮಾಡುವುದರಲ್ಲಿ ಅರ್ಥ ಕಾಣಿಸಲಿಲ್ಲ. ಸುಂದರ್ ಸಿಡಿಸಿದ ಪಟಾಕಿ ನಾನು ಯುಎಸ್ ವಿಮಾನ ಹತ್ತುವ ಹಾಗೆ ಮಾಡಿತ್ತು. ಐದಾರು ಬಟ್ಟೆ, ಪುಸ್ತಕಗಳು, ದಾಖಲೆಗಳನ್ನು ಇಟ್ಟುಕೊಂಡು ಹೊರಟಿದ್ದೆ. ದೇಹ ಸರಿಯಾಗಿದ್ದರೂ ಮನಸ್ಸು ಅಲ್ಲೋಲಕಲ್ಲೋಲವಾಗಿತ್ತು, ಛಿದ್ರವಾಗಿತ್ತು. ವಿಮಾನ ಹತ್ತುವ ಮೊದಲು ತಿರ್ಮಾನ ಮಾಡಿದ್ದೆ. ಎಲ್ಲೇ ಇದ್ದರೂ ಎಷ್ಟೇ ಕಷ್ಟ ಆದರೂ ಅಪ್ಪನ ಆಸೆ ನೆರವೇರಿಸಬೇಕು. ದೊಡ್ದ ಹೆಸರು ಮಾಡಬೇಕು. ಬದುಕಿನಲ್ಲಿ ಎಲ್ಲವನ್ನೂ ಸಂಪಾದಿಸಬೇಕು...
 
 
ಮೂವತ್ತೆರಡು ವರ್ಷ!!! ಆವತ್ತು ವಿಮಾನ ಹತ್ತಿ ಅಮೇರಿಕ ನೋಡಿದವನು ಮತ್ತೆ ಇವತ್ತಿನವರೆಗೂ ಬೆಂಗಳೂರು ಕಡೆ ತಿರುಗಿ ನೋಡಿರಲಿಲ್ಲ! ಅಪ್ಪನದೇ ನೆನಪು...ಈಗ ಅವರು ಇದ್ದಿದ್ದರೆ...!! ’ಸಾರ್...ಸಾರ್...’ ಡ್ರೈವರ್ ನನ್ನ ಕಡೆಯ ಡೋರ್ ತೆಗೆದು ಕರೆಯುತ್ತಿದ್ದ. ಎದುರಿಗೆ ತಾಜ್ ಹೋಟೆಲ್ ನ ಮುಖ್ಯ ದ್ವಾರ ಕಾಣುತ್ತಿತ್ತು.
 
ಕಾರಿನಿಂದ ಲಾಬಿಗೆ ಬರುತ್ತಿದ್ದಂತೆ ರಿಸೆಪ್ಷನಿಸ್ಟ್ ಮುಗುಳ್ನಕ್ಕು ವೆಲ್ಕಂ ಹೇಳಿದಳು. ’ಯುವರ್ ಗುಡ್ ನೇಮ್ ಸಾರ್’ ಎನ್ನುತ್ತಿದ್ದಂತೆ ನನ್ನ ವಿಸಿಟಿಂಗ್ ಕಾರ್ಡ್ ಕೈಗೆ ಕೊಟ್ಟೆ. ನೋಡಿದವಳೇ ಮತ್ತೊಮ್ಮೆ ನಕ್ಕು ’ಟು ಮಿನಿಟ್ಸ್’ ಎಂದು ನಾನು ಸುತ್ತಮುತ್ತ ಕಣ್ಣಾಡಿಸುವುದರಲ್ಲಿ ’ಸಾರ್...ರೆಡಿ, ಫಿಫ್ತ್ ಫ್ಲೋರ್’ ಎಂದು ದಾರಿ ತೋರಿಸಿದಳು. ಎಲಿವೇಟರ್ ಹತ್ತಿ ರೂಮಿಗೆ ಹೋಗುವಷ್ಟರಲ್ಲಿ ನನ್ನ ಲಗ್ಗೇಜ್ ಕೂಡ ಬಂದ್ದಿತ್ತು. ಹಾಗೇ ಕಿಟಕಿಯ ಮೂಲಕ ಹೊರಗೆ ದೃಷ್ಟಿ ಹರಿಸಿದರೆ ಕಟ್ಟಡಗಳ ಮೇಲೆ ಕಟ್ಟಡಗಳು...ಹಾಗೆ ನೋಡುವಾಗಲೇ ’ಎನಿಥಿಂಗ್ ಎಲ್ಸ್ ಸರ್?’ ಕೇಳಿದ ರೂಂ ಬಾಯ್. ಬೆಂಗಳೂರು ನನಗೆ ಬೇರ್ಯಾವುದೋ ದೇಶದಂತೆ ಎನಿಸುತ್ತಿತ್ತು. ’ನೋ ಥ್ಯಾಂಕ್ಸ್’ ಎಂದು ಕಿಟಕಿಯ ಕಡೆ ಕಣ್ಣು ಹಾಯಿಸಿದೆ. ರೂಂ ಬಾಗಿಲು ಹಾಕಿದ ಶಬ್ದವಾಯಿತು.
 
ಅಮೇರಿಕಾದಲ್ಲಿ ಇದ್ದುಕೊಂಡು ಬೆಂಗಳೂರು ಬೆಳೆದಿದೆ, ಈಗ ಅದೇ ಭಾರತದ ಸಿಲಿಕಾನ್ ಸಿಟಿ ಎಂದೆಲ್ಲಾ ಪ್ರತಿ ದಿನ ಕೇಳುತ್ತಿದ್ದ ನನಗೆ ಈಗ ಸ್ವತಃ ಬೆಂಗಳೂರನ್ನು ನೋಡಿ ತಬ್ಬಿಬ್ಬಾಗಿದ್ದೆ. ಬೆಂಗಳೂರು ನನ್ನ ಊಹೆಗೂ ಮೀರಿ ಬೆಳೆದಿತ್ತು. ಇಲ್ಲಿ ಎಲ್ಲಿ ಹೋಗಲಿ? ಏನನ್ನು ಹುಡುಕಲಿ ಎಂದುಕೊಳ್ಳುತ್ತಾ ಪ್ರಯಾಣದ ಆಯಾಸದಿಂದ ಹಾಗೇ ಹಾಸಿಗೆ ಮೇಲೆ ಉರುಳಿಕೊಂಡೆ. ಅತ್ತಿತ್ತ ಹೊರಳಾಡಿದರು ನಿದ್ರೆ ಹತ್ತುವ ಹಾಗೆ ಕಾಣಲಿಲ್ಲ. ಆಗಲೇ ಬೆಳಗ್ಗೆ ೮ ಗಂಟೆ. ಸ್ನಾನ ಮಾಡಿ ರೆಡಿಯಾಗಿ ಹೊರಗೆ ಹೋಗುವುದೇ ಲೇಸು ಎಂದು ರಿಸೆಪ್ಶನ್ ಡೆಸ್ಕ್ ಗೆ ಫೋನ್ ಮಾಡಿ ಟ್ಯಾಕ್ಸಿ ರೆಡಿ ಇರಲು ಹೇಳಿ, ಬಾತ್ರೂಂ ಕಡೆ ನಡೆದೆ.
 
ತಲೆಗೆ ನೀರು ಹಾಕಿ ಶಾಂಪೂ ಹಚ್ಚಿದಾಗ...ಮತ್ತೆ ನನ್ನ ಮನೆಯ ನೆನಪಾಯಿತು. ಕಾವೇರಿ ನೀರಿಗಾಗಿ ನಡೆಯುತ್ತಿದ್ದ ಜಗಳ...ಅದರಲ್ಲೂ ಮನೆಯಿಂದ ಸ್ವಲ್ಪ ದೂರ ಇದ್ದ ಕೊಳಾಯಿಯಿಂದ ನಾನು ಅಪ್ಪ ನೀರು ಹಿಡಿದು ತರುತ್ತಿದ್ದುದು, ಹೆಂಗಸರು ಜಗಳ ಆಡಿಕೊಳ್ಳುತ್ತಾ ಅಪ್ಪನಿಗೆ ಜಗಳ ಒಪ್ಪಿಸುತ್ತಿದ್ದುದು...ಹತ್ತು ಹನ್ನೆರಡು ಬಿಂದಿಗೆ ನೀರು ತುಂಬುವಷ್ಟರಲ್ಲಿ ಆಗುತ್ತಿದ್ದ ರಾಮಾಯಣ ಒಂಥರ ಖುಷಿ ಕೊಡುತ್ತಿತ್ತು. ಮನೆಗಳಲ್ಲಿ ಸ್ವಂತದ ನಲ್ಲಿಗಳಿದ್ದ ಕೆಲವು ಜನ ನಮ್ಮ ನಲ್ಲಿ ಜಗಳವನ್ನು ಸಿನೆಮಾದಂತೆ ನೋಡುತ್ತಿದ್ದುದು ನನಗೆ ಏನೋ ಮುಜುಗರ, ಕೋಪ, ಅಸಹನೆ ತರಿಸುತ್ತಿತ್ತು. ಒಮ್ಮೊಮ್ಮೆ ಅಪ್ಪ ನೀರು ತರಲು ಕರೆದಾಗ ನಾನು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಆದರೆ ಅಪ್ಪನ ಕಷ್ಟ ನೋಡಲಾಗದೇ ಕಡೆಗೆ ಹೋಗಿ ನಾನೇ ನೀರು ತರುತ್ತಿದ್ದೆ. ನೀರು ಹೆಚ್ಚು ಹೊತ್ತು ಬರದೆ ನಿಂತು ಹೋದಾಗ ಆ ಹೆಂಗಸರು ಹಾಕುತ್ತಿದ್ದ ಹಿಡಿಶಾಪಗಳೆಲ್ಲ ಈಗ ಬರೀ ನೆನಪಷ್ಟೇ!
 
ಬೆಂಗಳೂರು ಅಪ್ಪನ ನೆನಪನ್ನು ಮತ್ತೆ ತರತೊಡಗಿತು. ಕಣ್ಣಾಲಿಗಳ ನೀರು ಸ್ನಾನದ ನೀರಿನಲ್ಲಿ ಸೇರುತ್ತಿದ್ದವು. ನಾನು ಬೆಂಗಳೂರಿಗೆ ಬರಲೇಬಾರದಿತ್ತು ಎನ್ನಿಸತೊಡಗಿತು. ಸುಮ್ಮನೆ ಹೆಂಡತಿ, ಮಕ್ಕಳೊಂದಿಗೆ ಅಮೇರಿಕಾದಲ್ಲಿ ಇದ್ದಿದ್ದರೆ ಆಗಿತ್ತು. ಇಲ್ಲಿ ನನ್ನವರು ಯಾರೂ ಇಲ್ಲ. ನಾನು ಹುಟ್ಟಿದ ದೇಶ, ನನ್ನ ಊರು, ನಾನು ಕಲಿತ ಶಾಲೆ, ಬಾಲ್ಯದ ದಿನಗಳು ಎಲ್ಲವೂ ಈಗ ಬರೀ ನೆನಪಷ್ಟೇ. ಯಾಕೋ ಇಲ್ಲಿ ಎಲ್ಲರೂ ಅಪರಿಚಿತರಂತೆ ಕಾಣುತ್ತಿದ್ದಾರೆ ಎನ್ನಿಸುತ್ತಿತ್ತು. ನಾನು ಹುಟ್ಟಿದ ಸ್ಥಳದಲ್ಲೇ ನಾನು ಅಪರಿಚಿತ ದೇಶಕ್ಕೆ ಬಂದಿದ್ದೀನಿ ಇಲ್ಲಿ ಯಾರನ್ನು ಭೇಟಿ ಮಾಡುವುದು? ಎಲ್ಲಿಗೆ ಹೋಗುವುದು? ಎನ್ನುವ ಪ್ರಶ್ನೆ ಕಾಡತೊಡಗಿತು. ಹೊರಗೆ ಫೋನ್ ರಿಂಗಾಗುವ ಸದ್ದು ನನ್ನನ್ನು ವಾಸ್ತವಕ್ಕೆ ಕರೆದುಕೊಂಡು ಬಂತು. ಸ್ನಾನ ಮುಗಿಸಿ ರೆಡಿಯಾಗಿ ಲಾಬಿಗೆ ಬಂದೆ. ಅಲ್ಲೇ ಹೊಟ್ಟೆಗೆ ಒಂದಷ್ಟು ಹಾಕಿಕೊಂಡು ಲಾಬಿ ಬಳಿ ಪೇಪರ್ ತಿರುವಿ ನೋಡುವಷ್ಟರಲ್ಲಿ ಕಾರ್ ಬಂದು ನಿಂತಿತ್ತು. ಕಾರ್ ಹತ್ತಿ ಕುಳಿತೊಡನೆ ಡ್ರೈವರ್ಗೆ ಮಲ್ಲೇಶ್ವರಂ ಕಡೆಗೆ ಹೋಗಲು ಹೇಳಿದೆ. ಕಾರ್ ಹೊರಟಿತು.
 
’ಸಾರ್ ಅಲ್ಲಿ ಎಲ್ಲಿ?’ ಅಂದ ಡ್ರೈವರ್. ನಾನು ಸುಮ್ಮನಿದ್ದೆ. ಅಲ್ಲಿ ಎಲ್ಲಿ ಹೋಗುವುದು? ಮನಸಿನಲ್ಲೇ ಲೆಕ್ಕ ಹಾಕತೊಡಗಿದೆ. ಮತ್ತೆ ಡ್ರೈವರ್ ’ಮಲ್ಲೇಶ್ವರಂನಲ್ಲಿ ಎಲ್ಲಿ ಹೋಗ್ಬೇಕು ಸಾರ್’ ಎಂದ. ’ಎಯ್ತ್ ಕ್ರಾಸ್’ ಅಂದೆ. ಎಯ್ತ್ ಕ್ರಾಸ್ ಅಂದರೆ ಅದೊಂದು ಸಂತೆ ನಡೆಯುವ ಸ್ಥಳ. ಅಕ್ಕಪಕ್ಕ ವಿಶಾಲ ರಸ್ತೆ, ಸಾಲು ಮರಗಳು, ಬೆಂಗಳೂರಿನ ಮಧ್ಯ ಭಾಗ. ಹಬ್ಬ ಹರಿದಿನಗಳಲ್ಲಿ ಸುತ್ತಮುತ್ತಲಿನ ರೈತರು ತಾವು ಬೆಳೆದ ಹೂವು ಹಣ್ಣು ತರಕಾರಿ ತಂದು ಮಾರಾಟ ಮಾಡುವ ಜೊತೆಗೆ ವ್ಯವಹಾರಕ್ಕೆ ಕೇಂದ್ರ ಸ್ಥಾನ ಅದು. ನಾನು ನನ್ನ ಗೆಳೆಯರು ಅಲ್ಲಿದ್ದ ಪುಟ್ಟ ಪೆಟ್ಟಿ ಹೋಟೆಲ್ನಲ್ಲಿ ಮಾಡುತ್ತಿದ್ದ ಬಜ್ಜಿ, ವಡೆ ತಿಂದು ಖುಷಿ ಪಡುತ್ತಿದ್ದುದು ಇನ್ನೂ ಮಾಸಿಲ್ಲ. ವಿಶಾಲ ರಸ್ತೆಗಳ ಅಕ್ಕಪಕ್ಕದಲ್ಲೇ ಸಾಲಾಗಿದ್ದ ಹೆಂಚಿನ ಮನೆಗಳು, ವಟಾರಗಳು, ಬೀದಿ ಕೊಳಾಯಿಗಳು, ಅಲ್ಲಿಂದ ಮುಂದಕ್ಕೆ ಹೋದರೆ ಮಣ್ಣಿನ ರಸ್ತೆ, ಆಟದ ಮೈದಾನ...ಆಗಲೇ ಮಲ್ಲೇಶ್ವರಂ ಬೆಂಗಳೂರಿನ ನಗರಪ್ರದೇಶ ಆಗಿದ್ದರು ಗ್ರಾಮೀಣ ಬದುಕನ್ನೂ ಹೊದ್ದುಕೊಂಡಿತ್ತು. ಆಗೆಲ್ಲಾ ಅದು ಕಾಡುಮಲ್ಲೇಶ ದೇವಸ್ಥಾನಕ್ಕೆ ಹೆಸರುವಾಸಿ. ನಾನು ನನ್ನ ಗೆಳೆಯರು ಪರೀಕ್ಷೆ ಸಮಯದಲ್ಲಿ ಅಲ್ಲಿಗೆ ಹೋಗಿ ಕೈಮುಗಿದು ಬರುತ್ತಿದ್ದದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆಗೆಲ್ಲ ಮದ್ಯಮ ವರ್ಗದ ಜನ ಅಲ್ಲಿ ಹೆಚ್ಚು ವಾಸಿಸುತ್ತಿದ್ದರೂ ಶ್ರೀಮಂತರೂ ಇದ್ದರು. ಈಗ ಯೋಚಿಸಿದಾಗ ಮಲ್ಲೇಶ್ವರಂ ಆಗಿನ ಬೆಂಗಳೂರಿನ ಸಾಂಸ್ಕೃತಿಕ ತಾಣ ಎನಬಹುದೇನೋ.
 
ಆದರೀಗ, ನಾನು ಇಪ್ಪತ್ತೆರಡು ವರ್ಷದವನಿದ್ದಾಗ ನೋಡಿದ ಬೆಂಗಳೂರಿನ ಕೋನಕೋನಗಳೂ ಗುರುತಿಸಲಾಗದಷ್ಟು ಸುಸ್ತಾಗುವಷ್ಟು ಬದಲಾಗಿಬಿಟ್ಟಿದೆ!! ಎಲ್ಲೆಲ್ಲೂ ಜನ, ಕಾರು, ಬೈಕ್, ಕಿರಿದಾದ ರಸ್ತೆಗಳು, ಅಯ್ಯೋ ಇದೇನು ರಸ್ತೆಗಳ ಮೇಲೇ ಮನೆ ಕಟ್ಟಿದ್ದಾರಾ ಎನ್ನಿಸಿತು. ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾಣಿಗಳನ್ನ ನೋಡಿದ ಹಾಗೆ ಕಾರಿನ ಒಳಗಿಂದ ಬೆಂಗಳೂರಿನ ಹೊರ ಜಗತ್ತನ್ನ ನೋಡ್ತಿದ್ದೆ. ಮಲ್ಟಿ ಕಾಂಪ್ಲೆಕ್ಸ್ ಗಳು, ಶಾಪಿಂಗ್ ಮಾಲ್, ದೊಡ್ಡ ದೊಡ್ಡ ಕಟ್ಟಡಗಳನ್ನು ನೋಡಿ ನಾನೆಲ್ಲಿಗೆ ಹೋಗುತ್ತಿದ್ದೇನೆ ಎಂಬ ಅನುಮಾನ ಬಂತು. ಡ್ರೈವರ್ ಗೆ ’ಮಲ್ಲೇಶ್ವರಂ ಕಡೆ ಹೋಗ್ತಿರೋದು ತಾನೇ’ ಅಂದೆ. ’ಹೌದು ಸಾರ್...ಇಲ್ಲೇ ಮುಂದೆ ನಿಲ್ಲಿಸ್ತೀನಿ’ ಅಂದ. ಹಾಗಾದ್ರೆ ನಾವು ಇದ್ದ ಮನೆ ಕಡೆ ಹೋಗಲಿಕ್ಕೆ ಹೇಳೋಣ ಎಂದು ಸುತ್ತ ನೋಡಿದರೆ ಎಲ್ಲಿದ್ದೇನೆ ಎಂದೂ ಗೊತ್ತಾಗಲಿಲ್ಲ. ಆದರೂ ಒಂದೆರಡು ಕ್ರಾಸ್ ಸುತ್ತಿಸಿದೆ. ಆ ಟ್ರಾಫಿಕ್ ನಲ್ಲಿ ಸಾಧ್ಯ ಆಗಲಿಲ್ಲ. ಜೊತೆಗೆ ಒನ್ ವೆ ಸಮಸ್ಯೆ ಬೇರೆಯಾಗಿ ಕಷ್ಟವೆನಿಸತೊಡಗಿತು. ಡ್ರೈವರ್ ಸಾಕಾಗಿ ’ಕರೆಕ್ಟ್ ಆಗಿ ಎಲ್ಲಿ ಹೋಗ್ಬೇಕು ಸಾರ್’ ಅಂದು ಹಿಂತಿರುಗಿ ಮುಖ ನೋಡಿದ. ಏನನ್ನು ಯೋಚಿಸದ ನಾನು ’ಇಲ್ಲೇ...ಇಲ್ಲೇ..’ ಅಂದದ್ದೇ ತಡ ಕಾರ್ ಗಕ್ಕನೆ ನಿಂತಿತು. ಪಕ್ಕದಲ್ಲಿದ್ದ ಬೈಕ್ ಸವಾರ ನಮ್ಮ ಕಡೆ ಕೈ ತೋರುತ್ತ ಭರ್ರನೆ ನುಗ್ಗಿದ. ನಿಂತಿದ್ದ ಕಾರಿನಿಂದ ನಾನು ಇಳಿಯುವ ಹೊತ್ತಿಗೆ ಹಿಂದಿನಿಂದ ವಾಹನಗಳ ಹಾರ್ನ್ ಸದ್ದು ಚಿಟ್ಟು ಹಿಡಿಸಿತ್ತು. ಡ್ರೈವರ್ ನನ್ನನ್ನು ನೋಡಿ ಗೊಣಗುತ್ತಿದ್ದನೋ, ಇಲ್ಲ ವಾಹನಗಳ ಬಗ್ಗೆ ಗೊಣಗಿದನೋ ಗೊತ್ತಿಲ್ಲ. ’ಸಾರ್ ಇಲ್ಲೇ ಮುಂದೆ ಲೆಫ್ಟ್ ನಲ್ಲಿ ಇರ್ತಿನಿ’ ಎಂದವನೇ ನನ್ನನ್ನು ಇಳಿಸಿ ನೇರ ಹೊರಟು ಹೋದ.
 
ಕೈ ಗಡಿಯಾರ ನೋಡಿದೆ. ಟೈಮ್ ಆಗಲೇ ಹನ್ನೆರಡು ಗಂಟೆ ತೋರುತಿತ್ತು. ಮೆಲ್ಲಗೆ ಹೆಜ್ಜೆ ಹಾಕತೊಡಗಿದೆ. ಫುಟ್ಪಾತ್ ಮೇಲೆ ನಡೆಯಲಾಗದೆ ನನ್ನ ಪಾಡು ಹೇಳಲಾಗದು. ಜನ ಹಾಗೇ ಮೈ ಗುದ್ದಿಕೊಂಡು ಓಡಾಡುತ್ತಿದ್ದರು. ನಾನು ಮಾತ್ರ ನಿಧಾನವಾಗಿ ಹೆಜ್ಜೆ ಹಾಕುತ್ತ ಸಾಗಿದೆ. ಯಾವುದೋ ರಸ್ತೆಯ ಒಳ ನುಗ್ಗಿದೆ. ಎಲ್ಲಿಯೋ ನಿಂತು ಹುಡುಕಿದೆ. ನಾನೆಲ್ಲಿದ್ದೇನೆ ಎನ್ನುವುದೇ ಗೊತ್ತಾಗದ ಕಾರಣ ಎತ್ತ ಹೋಗಲಿ ಎನ್ನುವ ಸಮಸ್ಯೆ ನನ್ನದು. ವಾಹನಗಳ ಅಬ್ಬರ, ಬದಲಾದ ಮಲ್ಲೇಶ್ವರಂ ಚಿತ್ರಣ ನನ್ನ ನೆನಪಿಗೆ ಸವಾಲಾಗಿತ್ತು. ನನ್ನ ಬಾಲ್ಯವನ್ನು ಕಳೆದ ಮನೆಯ ಗುರುತು ಪತ್ತೆ ಹಚ್ಚಲು ಎಷ್ಟೇ ಓಡಾಡಿದರೂ ಸಾದ್ಯವಾಗಲಿಲ್ಲ. ಯಾಕೋ ಏನೋ ನನ್ನಲಿ ಅಪರಾಧಿ ಪ್ರಜ್ಞೆ ಕಾಡತೊಡಗಿತು. ಬಿಸಿಲಿಗೆ ಸುಸ್ತಾಗುತ್ತಿತ್ತು. ಸೂರ್ಯನ ತಾಪಕ್ಕೆ ಈಗ ದಾರಿ ಗೊತ್ತಿಲ್ಲದೆ ಸುತ್ತುವುದಕಿಂತ ಸಂಜೆ ವೇಳೆಗೆ ಬರುವುದು ಅಂತ ತೀರ್ಮಾನಿಸಿ ಕಾರ್ ಇರುವ ಕಡೆ ಹೆಜ್ಜೆ ಹಾಕತೊಡಗಿದೆ. ದೂರದಲ್ಲಿ ಡ್ರೈವರ್ ಕಂಡ. ಕಾರ್ ಹತ್ತಿದವನೇ ಸೀಟಿಗೊರಗಿ ಕುಳಿತುಬಿಟ್ಟೆ. ಡ್ರೈವರ್ ಕೇಳುವ ಮೊದಲೇ ಹೋಟೆಲ್ ಕಡೆ ಅಂದೆ. ಹೊರಗೆ ನೋಡುತ್ತಿರುವಾಗಲೇ ಕಣ್ಣೆಲ್ಲ ಮಂಜಾಗಿ ನಾನು ಹುಟ್ಟಿ ಓದಿ ಬೆಳೆದ ಜಾಗದ ಗುರುತು ಹಚ್ಚಲಾಗದ ನನ್ನ ಸ್ಥಿತಿಯಿಂದ ಕಣ್ಣಲ್ಲಿ ನೀರು ತುಂಬಿಕೊಂಡಿತು. ಡ್ರೈವರ್ ನನ್ನ ಕಡೆಯೇ ನೋಡುತ್ತಿದ್ದಾನೆ ಎನಿಸಿ ಕಣ್ಣು ಮುಚ್ಚಿದೆ.
 
***
 
ಕೈ ತುಂಬಾ ಹಣ. ನಾನು, ನನ್ನ ಮಕ್ಕಳು ಎಷ್ಟು ಖರ್ಚು ಮಾಡಿದರೂ ಕರಗದಷ್ಟು ಸಂಪತ್ತು ನನ್ನದು. ಆದರೆ ಇಷ್ಟೆಲ್ಲಾ ಇದ್ದರು ಏನೋ ಕೊರಗು! ಇಷ್ಟು ವರ್ಷಗಳ ಬಳಿಕ, ನನ್ನ ಅಪ್ಪನ ನೆನಪುಗಳು ಮುತ್ತಿಕೊಂಡು ನನ್ನನ್ನು ಇತ್ತ ಬರುವಂತೆ ಮಾಡಿತ್ತು.  ಅಪ್ಪ ಇದ್ದಿದ್ರೆ ಹೀಗೆ ಆಗುತ್ತಿರಲಿಲ್ಲ. ನಾನೇ ಇಲ್ಲಿಗೆ ಬಂದು ಬಿಡ್ತಿದ್ದೆ. ಮೂರು ದಶಕಗಳ ಹಿಂದೆ ಬೆಂಗಳೂರು ಬಿಟ್ಟವನು ತಿರುಗಿ ನೋಡಿದ್ದೇ ಈಗ. ನನಗೆ ಓದು, ಕಾಲೇಜು, ಮನೆ ಬಿಟ್ಟರೆ ಆಗ ಬೇರೆ ಲೋಕ ಗೊತ್ತಿರಲಿಲ್ಲ. ಈಗ ಲೋಕದೆಲ್ಲವೂ ಗೊತ್ತಿದೆ ಎನಿಸಿದರೂ ನನ್ನ ಹುಟ್ಟೂರಿನ ದಾರಿಗಳೇ ತಿಳಿಯುತ್ತಿಲ್ಲ. ಇನ್ನು ನಾನು ಇಲ್ಲಿ ಏನನ್ನು ಹುಡುಕಲಿ? ಗೆಳೆಯರು ಗುರುತಿನವರು ಯಾರೂ ಇಲ್ಲದಾಗ ಯಾರನ್ನು ಸಹಾಯಕ್ಕೆ ಕೇಳಲಿ? ನನ್ನ ಹತ್ತಿರ ಹಳೆಯ ಗೆಳೆಯರ ವಿವರ ಕೂಡಾ ಇಲ್ಲ.
 
ಅಮೆರಿಕಾಕ್ಕೆ ಹೋದವನು ಸಂಪೂರ್ಣವಾಗಿ ಎಲ್ಲರನ್ನು ಮರೆತಿದ್ದೆ, ಸಂಪರ್ಕ ಕಡಿದುಕೊಂಡಿದ್ದೆ. ಹೋದ ಸ್ವಲ್ಪ ದಿನ ಮತ್ತೆ ಬೆಂಗಳೂರಿಗೆ ಹೋಗಿಬಿಡೋಣ ಎಂದುಕೊಂಡಿದ್ದವನು ಅಪ್ಪನ ಕನಸಿನ ನೆನಪಾಗಿ ಅಲ್ಲೇ ಕೂಲಿ ಮಾಡಿ ಉಳಿದು ಬಿಟ್ಟಿದ್ದೆ. ಅಮೆರಿಕಾದಲ್ಲಿ ನಾನು ಮಾಡದ ಕೆಲಸ ಇಲ್ಲ, ಪಡದ ಕಷ್ಟಗಳಿಲ್ಲ. ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಅಲೆಯುತ್ತಾ ಸುತ್ತುತ್ತಾ ಬದುಕನ್ನು ಕಂಡುಕೊಳ್ಳುವ ತವಕದಲ್ಲಿ ನನ್ನ ಬುಡ, ಬೇರು ಎಲ್ಲವನ್ನೂ ಮರೆತುಬಿಟ್ಟಿದ್ದೆ. ಈಗ ನನಗೆ ನನ್ನ ಬೇರಿನ ಗುರುತಿರಲಿಲ್ಲ ಅದು ಬಿಟ್ಟರೆ ಎಲ್ಲಾ ಇತ್ತು. ನನ್ನದೇ ಸ್ವಂತ ಕಂಪನಿ, ಭವ್ಯ ಬಂಗಲೆ, ಬೇಕಾದಂತ ಕಾರುಗಳು, ಹೇಳಿದ ಕೆಲಸ ಮಾಡಲು ಕಾದಿರುವ ಜನ, ಅಮೇರಿಕಾದ ನಾಲ್ಕು ರಾಜ್ಯಗಳಲ್ಲಿ ನಾನು ಊಹಿಸದಷ್ಟು ಆಸ್ತಿ, ಅಂತಸ್ತು. ಲೆಕ್ಕ ಇಡಲಿಕ್ಕು ಜನ! ನನ್ನ ಹತ್ತಿರ ಎಲ್ಲವೂ ಇತ್ತು. ಆದರೆ ಇದು ಈಗ ನನ್ನ ಅಪ್ಪನಿಲ್ಲದ ಕೊರಗನ್ನು ಮಾತ್ರ ದೂರಮಾಡಿರಲಿಲ್ಲ.
 
ನಾನು ಬೆಂಗಳೂರಿಗೆ ಹೊರಟಾಗಲೇ ಅಮೆರಿಕದವಳೇ ಆದ ಹೆಂಡತಿ 'ನೀನು ಅಲ್ಲಿ ಹೋಗಿ ಏನೂ ಮಾಡ್ತೀಯಾ? ಯಾರಿದ್ದಾರೆ ಅಲ್ಲಿ ನಿನಗೆ" ಎಂದಿದ್ದಳು. ನನ್ನ ಎರಡು ಮಕ್ಕಳು ಕೂಡ ಅಮ್ಮನ ಮಾತಿಗೆ ದನಿ ಕೂಡಿಸಿದ್ದವು. ಆದರೂ ನನ್ನ ಹಲವು ವರ್ಷಗಳ ಕಾತುರ, ನಿರೀಕ್ಷೆ, ಕುತೂಹಲಕ್ಕಾಗಿ ವಿಮಾನ ಹತ್ತಿದೆ. ಆದರೀಗ ನಾನು ಬಂದು ಎರಡು ದಿನಗಳಾದವು. ಅಂದುಕೊಂಡಿದ್ದು ಏನೂ ಆಗಿಲ್ಲ. ಸುತ್ತಮುತ್ತಲ ಸ್ಥಳ ಪರಿಚಯ ಆಗಿಲ್ಲ. ನಾನಿದ್ದ ಮನೆ ಸಿಗುತ್ತಿಲ್ಲ. ಇನ್ನು ಸುಂದರ್ ಹೇಗೆ ಸಿಗುತ್ತಾನೆ? ಎಲ್ಲಿ ಅಂತ ಹುಡುಕಲಿ? ಅವನಾದರೂ ಸಿಕ್ಕಿದರೆ ಮೂವತ್ತೆರಡು ವರ್ಷಗಳ ಇತಿಹಾಸ ಕೇಳಬಹುದಿತ್ತು. ಓದಿದ ಕಾಲೇಜ್ ಬಳಿ ಹೋದರೆ ಯಾರು ಸಿಕ್ಕಿಯಾರು? ಇಲ್ಲಿಗೆ ಬಂದ ಮೇಲೆ ನನ್ನ ಒಂಟಿತನ ಹೆಚ್ಚಾಗುತ್ತಿದೆ. ಹೆಂಡತಿ ಮಕ್ಕಳು ಫೋನ್ ಮಾಡಿ ’ವಾಪಸ್ ಹೊರಟು ಬಾ ಯಾರನ್ನು ಹುಡುಕುತ್ತೀಯಾ’ ಎಂದು ಒತ್ತಾಯ ಮಾಡುತ್ತಿದ್ದಾರೆ. ಬಹುಶ ಇನ್ನು ನಾನಿಲ್ಲಿ ಹುಡುಕಾಟ ನಡೆಸುವುದರಲ್ಲಿ ಅರ್ಥ ಇಲ್ಲವೆಂದು ನನಗೂ ಅನ್ನಿಸುತ್ತಿದೆ. ಇವತ್ತೊಂದು ದಿನ ಸ್ವಲ್ಪ ಸುತ್ತಾಡಿ ವಾಪಸ್ ಹೊರಟು ಬಿಡಲು ನಿರ್ಧರಿಸಿಬಿಟ್ಟೆ. ಇಷ್ಟು ವರ್ಷಗಳ ಬಳಿಕ ನಾನು ಮಾಡಲು ಬಂದ ಏಕೈಕ ಕೆಲಸ ಈಡೇರಲಿಲ್ಲ ಎಂಬ ಕೊರಗು ಜೀವನ ಪರ್ಯಂತ ನನ್ನನ್ನು ಕಾಡುತ್ತೆ ಎನ್ನುವ ನೋವಿನಲ್ಲೇ ಹಿಂತಿರುಗುವ ಮನಸ್ಸು ಮಾಡಿದ್ದೆ.
 
ಕೊನೆ ದಿನ! ನಾಳೆ ರಾತ್ರಿ ನಾನು ಹೊರಡುವನಿದ್ದೆ. ಇಂದು ನನ್ನ ಕೊನೆ ಪ್ರಯತ್ನ ಮಾಡಿ ಮುಗಿಸಬೇಕಿತ್ತು. ಎಂದಿನಂತೆ ಕಾರ್ ರೆಡಿ ಇತ್ತು. ಡ್ರೈವರ್ ಕೇಳುವ ಮೊದಲೇ ’ಮತ್ತೆ ಮಲ್ಲೇಶ್ವರಂ ಕಡೆ’ ಅಂದೆ. ಪಾಪ ಆತನಿಗೆ ನನ್ನ ಅಂತರಂಗದ ತೊಯ್ದಾಟ ಹೇಗೆ ತಾನೇ ಗೊತ್ತಾಗಬೇಕು?! ಸ್ವಲ್ಪ ಅನುಮಾನದಿಂದಲೇ ನೋಡಿದ. ಇವತ್ತು ನಾನು ಸಂಪೂರ್ಣ ಪ್ರಯತ್ನ ಮಾಡಬೇಕಿತ್ತು. ರೈಲ್ವೆ ಟ್ರ್ಯಾಕ್ ಬಳಿ ಇಳಿದು ಹೆಜ್ಜೆ ಹಾಕತೊಡಗಿದೆ. ಪಕ್ಕದ ರಸ್ತೆಯಲ್ಲಿ ಎಡಕ್ಕೆ ತಿರುಗಿ ಹೊರಟೆ. ದೊಡ್ಡ ಕಾಂಪ್ಲೆಕ್ಸ್ ಎದುರಾಯ್ತು. ಬಲಕ್ಕೆ ತಿರುಗಿ ಹಾಗೇ ಮುಂದೆ ನಡೆದೆ. ಹಳೆಯ ಮರವೊಂದು ಬೃಹದಾಕಾರವಾಗಿ ಹರಡಿಕೊಂಡಿತ್ತು. ಅದನ್ನೇ ನೋಡುತ್ತಾ ನಿಂತೆ. ಈ ಮರ!! ಇಲ್ಲೇ! ಇದೇ ಮರದ ಕೆಳಗೆ ನಾವೆಲ್ಲಾ ಆಡಿದ ನೆನಪಾಯಿತು. ಮರದಿಂದ ಬಿದ್ದ ಕಪ್ಪುಕಾಯಿಗಳನ್ನು ಆಯ್ದು ಕಾರ್ಕ್ ಬಾಲ್ ಮಾಡಿ ಆಡಿದ ಬಾಲ್ಯದ ನೆನಪುಗಳು ಸುಳಿಯತೊಡಗಿತು. ನಾನು ಸುಂದರ್, ಮುರುಳಿ, ಕಾರ್ತಿಕ್ ಇಲ್ಲಿ ಆಟವಾಡಿದ್ದೆವು...
 
ನೆನಪಿನ ಬುತ್ತಿ ಸ್ವಲ್ಪ ಸ್ವಲ್ಪವೇ ಬಿಚ್ಚಿಕೊಳ್ಳತೊಡಗಿತು. ಅಬ್ಬಾ ಅದೆಷ್ಟು ಎತ್ತರಕ್ಕೆ ಬೆಳೆದಿದೆ ಈ ಮರ! ನನಗೆ ೫೫ ವರ್ಷ ಆಗ್ತಿದೆ ಅಂದಮೇಲೆ ಈ ಮರಕ್ಕೆ ಎಷ್ಟಾಗಿರಬೇಕು? ಮುಂದೆ ನಡೆದೆ. ಈಗ ಜಾಗದ ನೆನಪಾಗತೊಡಗಿತು. ಇಲ್ಲೆಲ್ಲಾ ನಾವು ಓಡಾಡುತ್ತಿದ್ದೆವು. ಮೂವತ್ತೆರಡು ವರ್ಷದ ಹಿಂದಿನ ನೆನಪುಗಳನ್ನ ಕೆದಕತೊಡಗಿದೆ. ಇಲ್ಲೇ ಎಲ್ಲೋ ನಮ್ಮ ಮನೆ ಇದ್ದ ನೆನಪು. ಈಗ ಬಹಳಷ್ಟು ರಸ್ತೆಗಳು ಟಾರ್ ಕಂಡಿವೆ. ಆಗ ನಮ್ಮದು ಮಣ್ಣಿನ ರಸ್ತೆ. ಅಲ್ಲೇ ಎಡಕ್ಕೆ ವಠಾರ ಇದ್ದ ನೆನಪು. ಹಾಗೇ ಹೆಜ್ಜೆ ಹಾಕಿದೆ. ಈ ಮಣ್ಣಿನ ರಸ್ತೆಯಲ್ಲಿ ನಡೆಯುವಾಗ ಅದೆಷ್ಟು ಬಾರಿ ಎಡವಿ ಬಿದ್ದಿರಲಿಲ್ಲ! ಅಕ್ಕಪಕ್ಕದ ಮನೆಯವರು ಕಾಲಿಗೆ ಅರಿಶಿನ, ಕಾಫಿಪುಡಿ ಹಾಕಿ ಬಟ್ಟೆ ಕಟ್ಟಿಕೊಟ್ಟಿದ್ದ ನೆನಪುಗಳು ಸುಳಿದಾಡಿದವು. ’ಅಯ್ಯೋ!!!’ ನನಗೇ ಗೊತ್ತಿಲ್ಲದೇ ಉದ್ಗರಿಸಿದೆ. ಇದು ನಾವು ಇದ್ದ ಜಾಗ. ಇದೇ ಇದೇ! ಕುಣಿದಾಡುವ ಹಾಗಾಯ್ತು. ಹದಿನೆಂಟು ಮನೆಗಳಿದ್ದ ತುಂಬು ಸಂಸಾರದ ವಠಾರ. ಆದರೆ ಇವತ್ತು ಅಲ್ಲಿ ನಾನಿದ್ದ ವಠಾರ ಇರಲಿಲ್ಲ. ಆಕಾಶದೆತ್ತರಕ್ಕೆ ಎದ್ದು ನಿಂತಿದ್ದ ದೊಡ್ಡ ಅಪಾರ್ಟ್ ಮೆಂಟ್ ಅಲ್ಲಿತ್ತು. ನಾನು ಊಹಿಸದಷ್ಟು ಎತ್ತರದ ಅಪಾರ್ಟ್ ಮೆಂಟ್ ಅದು. ಅಲ್ಲೆಲ್ಲೂ ನಾನು ಚಿಕ್ಕಂದಿನಲ್ಲಿ ಕಂಡ ಮುಖಗಳ ಸುಳಿವಿರಲಿಲ್ಲ. ಜನ ತಮ್ಮ ಪಾಡಿಗೆ ತಾವು ಓಡಾಡುತಿದ್ದರು. ನನಗೆ ಯಾರ ಗುರುತೂ ಸಿಗಲಿಲ್ಲ. ಸುತ್ತ ಮುತ್ತ ನೋಡೋಣ ಎಂದರೆ ಅಲ್ಲಿ ಸಣ್ಣ ಮನೆಗಳ ಕುರುಹೇ ಇಲ್ಲ. ಎಲ್ಲಾ ದೊಡ್ಡ ದೊಡ್ಡ ಮಹಲುಗಳಂತ ಮನೆಗಳು. ಮರಗಿಡಗಳೂ ಇಲ್ಲ, ಬರೀ ಮನೆಗಳು. ಯಾರದರೂ ನನ್ನ ಪರಿಚಯದವರು ಸಿಗಬಹುದಾ ಎಂದು ಸುತ್ತ ಮುತ್ತ ಹುಡುಕಾಡಿದೆ.
 
 
ನನಗೆ ಗೊತ್ತಿಲ್ಲದಂತೆ ನನ್ನ ಕಾಣ್ಣಾಲಿಗಳಲ್ಲಿ ನೀರು ತುಂಬಿತ್ತು. ಕಡೆಗೂ ಸಿಕ್ಕಿತಲ್ಲಾ!! ನಾನು ಆಟ ಆಡಿದ, ಬಿದ್ದು ಗಾಯ ಮಾಡಿಕೊಂಡ ಸ್ಥಳ. ನನ್ನಪ್ಪನ ಕಿರು ಬೆರಳು ಹಿಡಿದು ಶಾಲೆಗೆ ಹೋದ ದಾರಿ, ಕಲ್ಲಂಗಡಿ, ಸೌತೆಕಾಯಿ ಚೂರುಗಳನ್ನು ಮಾರಿಕೊಂಡು ಬರುತ್ತಿದ್ದ ಗಾಡಿಯನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡಿದ ಜಾಗವೀಗ ತನ್ನ ಅಂದ ಚೆಂದವನ್ನೆಲ್ಲಾ ಬದಲಾಯಿಸಿಕೊಂಡು ಬಿಟ್ಟಿದೆ. ಆಗ ಆ ಮೂಲೆಯಲ್ಲಿದ್ದ ಮಾವಿನಮರ ಅಲ್ಲಿದ್ದ ಯಾವುದೇ ಕುರುಹು ಇಲ್ಲ. ವಠಾರದಲ್ಲಿದ್ದ ಗಂಗಣ್ಣ, ಸ್ವಾಮಿ, ನರಸಿಂಹ ಅವರ ಹೆಸರು ಬಿಟ್ಟರೆ ಮತ್ತೆಲ್ಲಾ ಮಸುಕು ಮಸುಕು...ಯಾರನ್ನಾದರೂ ಕೇಳೋಣ ಎಂದರೆ ಯಾರನ್ನ ಕೇಳುವುದು? ಹಾಗೆ ಪಕ್ಕದ ಗೋಡೆಗೆ ಒರಗಿ ಕುಳಿತು ಬಿಟ್ಟೆ. ಹಾದಿಯಲ್ಲಿ ಅಡ್ಡಾಡುತ್ತಿದ್ದವರು ನನ್ನ ಕಡೆ ದೃಷ್ಟಿ ಹಾಯಿಸಿ ನೋಡಿದರು. ನನಗದರ ಪರಿವೆ ಇಲ್ಲದಂತೆ ಕುಳಿತಿದ್ದೆ. ಯಾಕೋ ಹೃದಯ ಭಾರವೆನಿಸಿತು. ಕಣ್ಣೆಲ್ಲ ಮಂಜಾದವು. ಎಲ್ಲವನ್ನು ಮತ್ತೊಮ್ಮೆ ಕಳೆದುಕೊಂಡ ಅನುಭವ. ಜೀವ ಇದ್ದೂ ಜೀವಂತಿಕೆ ಇಲ್ಲದಂತಾಗಿತ್ತು. ಬದುಕೆ ಇಷ್ಟೇನಾ?
 
 
ಯಾವುದೂ ಶಾಶ್ವತವಲ್ಲ. ನಾನು, ನನ್ನ ಹೆತ್ತೋರು, ನನ್ನ ಹುಟ್ಟೂರು, ಬಂಧು-ಬಳಗ...ಉಹುಂ ಎಲ್ಲವನ್ನು ಕಳೆದುಕೊಂಡು ಬಿಡುತ್ತೇವೆ. ಎಂದೋ ಕಳೆದುಕೊಂಡದ್ದನ್ನು ಮತ್ಯಾವಾಗೋ ಹುಡುಕಿದರೆ ಸಿಗಲು ಅದೇನು ಅಂಗಡಿಯಲ್ಲಿ ತಯಾರಿಸಿ ಬೇಕಾದಾಗ ಮಾರುವ ವಸ್ತುವೇ? ಮತ್ತೆ ಪಡೆಯಲು ಸಾಧ್ಯವೇ? ನಾನೊಮ್ಮೆ ಆ ಜಾಗವನ್ನು ನೋಡಬೇಕಿತ್ತು. ನನ್ನ ಹುಡುಕಾಟ ಮಾಡಬೇಕಿತ್ತು. ನಾನು ಕಳೆದುಕೊಂಡಿದ್ದೇನು ಎಂದು ನನಗೇ ಇಲ್ಲೇ ಗೊತ್ತಾಗಬೇಕಿತ್ತು. ಇಲ್ಲದಿದ್ದರೆ ನಾನು ನನ್ನನ್ನೆಂದೂ ಕ್ಷಮಿಸಿಕೊಳ್ಳಲಾಗುತ್ತಿರಲಿಲ್ಲ. ನನಗೆ ಒಮ್ಮೆಗೆ ಅರಿವಾಯಿತು.
 
 
ಯಾಕೋ ಅಮೆರಿಕದಲ್ಲಿನ ಹೆಂಡತಿ, ಮಕ್ಕಳು ನೆನಪಾದರು. ನನ್ನ ಮಕ್ಕಳನ್ನು ನಾನೆಂದೂ ನನ್ನಪ್ಪ ನನ್ನನ್ನು ಪ್ರೀತಿಸಿದಷ್ಟು, ಪೋಷಿಸಿದಷ್ಟು ಎಚ್ಚರ ವಹಿಸಿದಷ್ಟು ಚನ್ನಾಗಿ ಸಲಹುತ್ತಿಲ್ಲ ಎಂಬ ನೋವು ಮುತ್ತಿಕೊಂಡಿತು. ಅವರಿಗೆ ಸೌಲಭ್ಯಗಳು, ಹಣ, ಅನುಕೂಲತೆಗೇನೂ ಕಮ್ಮಿಯಿರಲಿಲ್ಲ. ಆದರೆ ನಾನು ಯಾವಾಗಲೂ ಅವರ ಜೊತೆ ಇರಲಿಲ್ಲ. ನಾನು ಕಳೆದುಕೊಂಡಿರುವುದನ್ನೇ ಹುಡುಕುತ್ತಿದ್ದೆ. ಅಯ್ಯೋ ನನ್ನ ಮಕ್ಕಳು ನನ್ನಿಂದ ಏನನ್ನೂ ನಿರಿಕ್ಷಿಸುವುದೇ ಇಲ್ಲವಲ್ಲ ಎನಿಸತೊಡಗಿತು. ಹಾಗಾದರೆ ಅವರು ನನ್ನಿಂದ ಏನನ್ನು ಕಳೆದುಕೊಂಡಿಲ್ಲವೇ...ಅಥವಾ ನಾನು ಅವರಿಗೆ ಪ್ರೀತಿನೇ ಕೊಟ್ಟಿಲ್ಲವೆ? ಮನಸ್ಸು ಜೋಕಾಲಿಯಂತಾಯ್ತು ... ಹಾಗೇ ಎದ್ದು ನಿಂತು ಹೆಜ್ಜೆಹಾಕತೊಡಗಿದೆ.
 
***
 
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ನನ್ನ ಕಾರ್ ಓಡುತ್ತಿತ್ತು. ಕಳೆದ ನಾಲ್ಕು ದಿನಗಳಿಂದ ನನ್ನ ಜೊತೆಗಿದ್ದ ಡ್ರೈವರ್ ’ಸಾರ್ ಅಮೆರಿಕಾಗಾ?’ ಅಂದ. ಕಣ್ಣು ಮುಚ್ಚಿದ್ದ ನಾನು ’ಹು’ ಎಂದೆ. ’ಮತ್ತೆ ಇಲ್ಲಿಗೆ ಬಂದದ್ದು?’ ಕೇಳಿದ. ಮೌನವೆ ಉತ್ತರ ಎಂದು ಸುಮ್ಮನಿದ್ದೆ. ’ಮಲ್ಲೇಶ್ವರಂನಲ್ಲಿ ಏನ್ ಬಿಸ್ನೆಸ್ ಸಾರ್’ ಅಂದ. ಉತ್ತರಿಸಬೇಕು ಎನಿಸಲಿಲ್ಲ. ಮತ್ತೆ ಅಪ್ಪನ ಚಿತ್ರಗಳೇ ಸುತ್ತಿಕೊಂಡಿದ್ದವು. ವಿಮಾನ ನಿಲ್ದಾಣದಲ್ಲಿ ಇಳಿದವನೇ ಏನು ಮಾತನಾಡದೆ ಡ್ರೈವರ್ ಕೈಗೆ ಜೇಬಿನಲ್ಲಿದ್ದ ಹಣವನ್ನು ಕೊಟ್ಟು ನನ್ನ ಭಾರದ ಹೃದಯದ ಜೊತೆಗೆ ಲಗ್ಗೇಜ್ ಎಳೆದುಕೊಂಡು ಒಳನಡೆದೆ. ಚೆಕ್ ಇನ್ ಮಾಡಿ ಕೂತೆ.
 
 
ಇನ್ನು ಕೆಲವೇ ನಿಮಿಷಗಳಲ್ಲಿ ನ್ಯೂಯಾರ್ಕ್ ಗೆ ವಿಮಾನ ಹೊರಡಲಿದೆ ಎಂಬ ಧ್ವನಿ ಹೊರಬಿತ್ತು. ಸೀದಾ ವಿಮಾನ ಹತ್ತಿ ಕುಳಿತವನು...ಪಾಪ ಡ್ರೈವರ್ ಕೇಳಿದ ಪ್ರಶ್ನೆಗೆ ಉತ್ತರ ಹೇಳಬೇಕಿತ್ತು...ನಾನು ಬಿಸ್ನೆಸ್ ಗೆ ಬಂದವನಲ್ಲ...ನನ್ನಪ್ಪನ ನೆನಪಿನ ಗಂಟನ್ನ ಹುಡುಕಿಕೊಂಡು ಬಂದಿದ್ದೆ. ಅದರಲ್ಲಿ ನನ್ನ ಅಪ್ಪ ಅಮ್ಮ ದಿನನಿತ್ಯ ಬಳಸುತ್ತಿದ್ದ ನನ್ನ ಪಾಲಿನ ಅಮೂಲ್ಯ ವಸ್ತುಗಳಿದ್ದವು. ಅದನ್ನು ಕೊಂಡೊಯ್ದು ನನ್ನ ಮಕ್ಕಳಿಗೆ ತೋರಿಸಲು ಬಂದಿದ್ದೆ, ಆದರೆ ಅವರ ಯಾವ ನೆನಪುಗಳೂ ನನಗೆ ಸಿಗಲಿಲ್ಲ ಅಂತ ಹೇಳಿಬಿಡಬೇಕಿತ್ತು. ನಾನು ಕಳೆದುಕೊಂಡೆ ಕಣೋ..., ಎಂದು ಅವನಿಗಾದರೂ ಹೇಳಿಕೊಳ್ಳಬೇಕಿತ್ತು ಎಂದುಕೊಂಡೆ. ನಾನು ಅವತ್ತು ನನ್ನ ಅಪ್ಪ ಸತ್ತ ನಂತರ ಅಮೆರಿಕಾಕ್ಕೆ ಹೊರಟಾಗ ಅವರ ಬಟ್ಟೆ, ಮನೆಯ ಸಾಮಾನು ಅಮ್ಮನ ಫೋಟೋ ಎಲ್ಲವನ್ನೂ ಗಂಟು ಕಟ್ಟಿ ಪಕ್ಕದ ಮನೆಯಲ್ಲಿ ಇಟ್ಟು ಬಂದಿದ್ದೆ. ಅದರಲ್ಲಿದ್ದ ಅಪ್ಪ ಅಮ್ಮನ ಫೋಟೋವನ್ನು ನನ್ನ ಮಕ್ಕಳಿಗೆ ನನ್ನ ಬದುಕಿನ ಗಿಫ್ಟ್ ಆಗಿ ಕೊಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಅದಕ್ಕಾಗೇ ತೀವ್ರವಾಗಿ ಹುಡುಕಿದ್ದೆ. ಅಪ್ಪನ ಒಂದು ಚಿತ್ರವನ್ನು ಹುಡುಕಿ ಬಂದು ಇಗ ಬರೀ ಕೈಯ್ಯಲ್ಲಿ ವಾಪಸ್ಸು ಹೋಗುತ್ತಿದ್ದೇನೆ. ಅಂದು ನಾನು ಎತ್ತುಕೊಂಡು ಹೋಗಲಾರದೆ ಇಲ್ಲಿ ಬಿಟ್ಟು ಹೋದ ಆ ಬಿಳಿ ಗಂಟಿನ ಚಿತ್ರಣ ಮಸುಕು...ಮಸುಕಾಗಿ ಅಣಕಿಸ ತೊಡಗಿತು. ಮತ್ತೆ ಅವರ ನೆನಪುಗಳನ್ನು ಮಾತ್ರ ಶಾಶ್ವತವಾಗಿ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದುಕೊಂಡು ಕಣ್ಣುಮುಚ್ಚಿದೆ.
 
 
ಅಪ್ಪ, ಮನೆ, ಮಲ್ಲೇಶ್ವರಂ, ಕಾಡುಮಲ್ಲೇಶ, ಬೆಂಗಳೂರು...ಎಲ್ಲಾ ಮಸುಕಾಗಿದ್ದವು. ವಿಮಾನ ಮೇಲೆರತೊಡಗಿತು. ಬೇರುಗಳನ್ನು ಉಳಿಸಿಕೊಳ್ಳದೆ ಬೆಳೆದವ ನಾನು. ನನ್ನ ಬಿಳಲುಗಳನ್ನಾದರು ಗಟ್ಟಿ ಮಾಡಿಕೊಳ್ಳಬೇಕು ಎಂದು ಗಾಡವಾಗಿ ಎನಿಸತೊಡಗಿತು. ಮಕ್ಕಳ ಮುಖ ಕಣ್ಣ ಮುಂದೆ ಕಂಡು ಕಣ್ಣು ಮಂಜಾದವು. ನಮ್ಮಪ್ಪ ಅವರ ಹತ್ತಿರವಿದ್ದ ಎರಡೇ ಶರಟನ್ನು ಎರಡು ದಿನಗಳಿಗೊಮ್ಮೆ ರಾತ್ರಿ ಒಗೆದು ಬೆಳಗ್ಗೆ ಹಾಕಿಕೊಳ್ಳುತ್ತಿದ್ದ ನೆನಪಾಗಿ ಮುಖ ಮುಚ್ಚಿಕೊಂಡೆ. ಬದುಕು ಎಷ್ಟು ವಿಚಿತ್ರ!!! ವಿಮಾನ ಆಗಸವನ್ನು ಸೀಳಿ ನೆತ್ತಿ ಗೇರಿತ್ತು.
 
 
 
 
 
 
 
 
 
 
Copyright © 2011 Neemgrove Media
All Rights Reserved