(ಪುಟ ೨೫) ನನ್ನೊಳಗೆ ಯಾರು: ಹಾ.....ಳೈ ಪೇಪರ್...ಅರ್ಧ ಸೀ....ಸಾ...!
ಬೇಲಾ ಮರವ೦ತೆ

ನನ್ನೊಳಗೆ ನಾನೆಷ್ಟು? ಅಂತ ಕೇಳಿಕೊಂಡಾಗಿನಿಂದಲೂ ಭಯಂಕರ ಫಜೀತಿಯಾಗಿಬಿಟ್ಟಿತ್ತು. ’ನಾನು’, ’ನನ್ನ ಒಳಗು’ ಇವನ್ನು ಅರ್ಥಮಾಡಿಕೊಂಡು ಡಿಫೈನ್ ಮಾಡಿಕೊಳ್ಳಬೇಕಿತ್ತು.
 
'ನಾನು’ ಎನ್ನುವುದು ’ಅಹಂ’ಗೆ ಸರಿಸಮಾನದ್ದಾದರೆ...?
’ನಾನು!’ ಎಂದು ಹೇಳಿಕೊಂಡು ಯಾರೋ ಮಹಾನುಭಾವರ ಥರ ’ಅಹಂ ಬ್ರಹ್ಮಾಸ್ಮಿ’ ಎಂದುಕೊಂಡು ಸುಮ್ಮನಾಗಬಹುದಿತ್ತೇನೋ. ಕೆಲಸ ಈಸಿಯಾಗುತ್ತಿತ್ತು. ಆಗ ಬ್ರಹ್ಮನನ್ನು ಯಾರು? ಹೇಗೆ? ಏನು ಕಥೆ? ಎಂದು ಡಿಫೈನ್ ಮಾಡುವ ಪಾಡು ಬರುತ್ತಿರಲಿಲ್ಲ. ಅದನ್ನು ಸಿಕ್ಕಾಪಟ್ಟೆ ಬುಧ್ಧಿ ಇದ್ದ ಸಾಕಷ್ಟು ಮಂದಿ ಮಾಡಿಬಿಟ್ಟಿದ್ದಾರೆ. ಅವರು ಹೇಳಿರುವುದನ್ನು ಅರಗಿಸಿಕೊಳ್ಳುವುದೂ, ಒಪ್ಪಿಕೊಳ್ಳುವುದೂ ಈಗಿರುವ ಚರ್ಚೆ. ಅದು ಬಿಟ್ಟುಬಿಡೋಣ.
 
’ನಾನು?’ ಎಂದು ಕೇಳಿಕೊಂಡಾಗ ಬ್ರಹ್ಮಾಂಡದ ನಿಗೂಢ ಪದರಗಳಂತೆ ರಾಶಿ ಪ್ರಶ್ನೆಗಳು, ಗೊಂದಲಗಳು, ತರಂಗಗಳೆದ್ದು ನಮ್ಮನ್ನೂ ಒಂದೊಂದೇ ಪದರ ಹಿಂಜಿ ಎಳೆದು ಹಾಕುತ್ತಾ ಕಸಿವಿಸಿ, ಗಾಬರಿ, ಅಚ್ಚರಿ, ಸಂತೋಷ...ಏನೇನನ್ನೆಲ್ಲಾ ತರಿಸಿಬಿಡುತ್ತವೆ!
 
ಒಂಟಿತನವನ್ನು ನೊಚ್ಚಗೆ ಆಸ್ವಾದಿಸುತ್ತಾ, ಪೇಪರು ಪೆನ್ನು ಹಿಡಿದು ’ನನ್ನೊಳಗೆ ನಾನೆಷ್ಟು?’ ಎಂದು ಕೂತ ಬೇಲಾ ಎಂಬ ಸಂಪೂರ್ಣ ಓತ್ಲಾ ಹೊಡೆಯುತ್ತಿದ್ದ ಹುಡುಗಿಗೆ ಈ ಪ್ರಶ್ನೆ ಕೇಳಿಕೊಂಡು ಉತ್ತರ ಬರೆಯುವ ಆಟ ಇಷ್ಟವಾಗಿತ್ತು. ನನ್ನೊಳಗೆ ನಾನೆಷ್ಟು ಎಂದು ತಿಳಿಯುವ ಮುನ್ನ ಒಂದು ವ್ಯಕ್ತಿಯೊಳಗೆ ಯಾರು ಯಾರಿರುತ್ತಾರೆ? ಎಷ್ಟೆಷ್ಟಿರುತ್ತಾರೆಂಬ ಲೆಕ್ಕಾಚಾರ ಶುರುವಾಯಿತು.
 
ನಾನು, ಎಂದರೆ ಬೇಲಾ ಎಂಬ ಹುಡುಗಿ ಅಂತಿಟ್ಟುಕೊಳ್ಳೋಣ. ಇಲ್ಲಿ ನನಗೆ ಯಾವ ಇಗೋ ಇಲ್ಲ; ಬರೀ ಒಂದು ದೇಹ, ಒಂದು ಮನಸ್ಸು ಅಷ್ಟೇ. ಈಗ ನನ್ನ ದೇಹವನ್ನು ಒಂದು ಬಾಟಲ್ ಎಂದಿಟ್ಟುಕೊಳ್ಳೋಣ. ಅದನ್ನು ತುಂಬಲು ನಾನು/ಮನಸ್ಸು ಬೇಕು. ಆ ಮನಸ್ಸಿಗೊಂದಷ್ಟು ಬಣ್ಣ, ವಾಸನೆ, ರುಚಿ, ಟೆಕ್ಸ್ಚರ್ ಇರಬೇಕು. ಸಿಕ್ಕಾಪಟ್ಟೆ ಅಬ್ಸ್ಟ್ರಾಕ್ಟ್ ಆದ ವಿಷಯಗಳನ್ನು ನಮ್ಮ ಶಕ್ತಿಗೆ ತಿಳಿದಂತೆ ನಾವು ಅರ್ಥಮಾಡಿಕೊಳ್ಳುತ್ತೇವಲ್ವಾ? ನಾನು ಅದನ್ನೇ ಮಾಡತೊಡಗಿದೆ. ಮನೆಯ ಡೈನಿಂಗ್ ಟೇಬಲ್ ನನ್ನ ಅನಾಹುತಕಾರಿ ಪ್ರಶ್ನೆಗಳಿಗೆ ಉತ್ತರ ಶೋಧಿಸಲು ಸಹಾಯ ಮಾಡುವ ಪ್ರಯೋಗಶಾಲೆಯಾಯಿತು. ಅಡಿಗೆ ಮನೆ ಸಾಮಾನು ಸರಂಜಾಮುಗಳನ್ನು ಒದಗಿಸಿತು. ಒಂದು ಖಾಲಿ ಗಾಜಿನ ಬಾಟಲ್ ಹುಡುಕಿದೆ. ಅದರ ಕ್ಯಾಪಿನ ಮೇಲೆ ’ಬೇಲಾ’ ಅಂತ ಬರೆದಿಟ್ಟೆ. ಮನೆಯಲ್ಲಿದ್ದ ವಿವಿಧ ಮಸಾಲೆ, ಜೂಸ್, ಪಾನೀಯಗಳನ್ನು ತಂದಿಟ್ಟುಕೊಂಡೆ. ಅಳತೆಗೊಂದು ಕಪ್ಪನ್ನೂ ತಂದಿಟ್ಟುಕೊಂಡೆ.
 
ಅಡ್ಡಕಸುಬಿ ಆತ್ಮಶೋಧಕಿ ಅಥವಾ ಫಿಲಾಸಫರ್ (ಫಿಲ್ ಸಫರರ್ ಅಂತ ಒಪ್ಪಿಕೊಳ್ಳುವುದು ಒಳ್ಳೆಯದು) ಒಬ್ಬಳ ಅನನ್ಯ ಪ್ರಯೋಗ ಶುರುವಾಯಿತು.
 
ನನ್ನೊಳಗೆ ಯಾರ್ಯಾರಿದ್ದಾರೆ? ನಾನು ಅನುಸರಿಸುತ್ತಿದ್ದ, ಮಾತುಕೇಳುತ್ತಿದ್ದ, ಪಾಲಿಸುತ್ತಿದ್ದ ಎಲ್ಲರ ಲಿಸ್ಟ್ ಬರೆದೆ. ಅಮ್ಮ, ಅಪ್ಪ, ಅಕ್ಕ, ತಮ್ಮ, ಮಹಾಲಕ್ಷ್ಮಿ ಮೇಡಂ, ಸಂಗೀತದ ಟೀಚರ್, ಇಬ್ಬರು ಅಜ್ಜಿಯಂದಿರು, ಸುಬ್ಬು ಮಾಮ, ಶಂಕ್ರು ಮಾಮ, ಬಾಲ್ಯದ ಗೆಳತಿ ಸೌಮ್ಯ, ಪ್ರಶಾಂತ, ಅತ್ತೆ, ನಾ ಬೆಳೆದ ಏರಿಯಾದ ಪ್ರತಿಯೊಬ್ಬ ಕ್ಯಾರೆಕ್ಟರ್, ’ಸಮಾಜ’, ನೆಂಟರು, ...ಲಿಸ್ಟ್ ರೆಡಿಯಾಯಿತು.
 
'ಯಾಕೆ?? ನಾನಿಲ್ಲವಾ? ನಾನು ನಿನ್ನನ್ನು ಇನ್ಸ್ಪೈರ್ ಮಾಡಿಲ್ಲವಾ? ನನ್ನ ನೋಡಿ ನೀನು ನಾನಿವಳ ಥರ ಆಗಬೇಕು ಎಂದುಕೊಂಡಿರಲಿಲ್ಲವಾ’?’ ಅದೆಲ್ಲಿದ್ದರೋ ಪುಣ್ಯಾತ್ಮರು! ತಲೆಯಿಂದ ಒಬ್ಬೊಬ್ಬರೇ ಬಂದು ನಮ್ಮನ್ನು ಮರೆತೆಯಾ ಎಂಬಂತೆ ಗಲಾಟೆ ಮಾಡಿ ಹೋಗುತ್ತಿದ್ದರು.
 
’ಯಾರ್ಯಾರು?’ ಎಂಬ ಪ್ರಶ್ನೆಗೆ ಮೇಲುನೋಟದ ಲಿಸ್ಟ್ ತಯಾರಾಗಿತ್ತು. ಈಗ ಎಷ್ಟೆಷ್ಟು ಪರ್ಸೆಂಟ್? ಎಂದು ನಾನೇ ಡಿಸೈಡ್ ಮಾಡಿ ಕಂಡುಹಿಡಿದುಕೊಳ್ಳಬೇಕಿತ್ತು.
 
ಅಮ್ಮ-ಇದುವರೆಗಿನ ನನ್ನ ಬದುಕಿನಲ್ಲಿ ನನ್ನನ್ನು ಅತ್ಯಂತ ಇನ್ಫ್ಲುಎನ್ಸ್ ಮಾಡಿದ್ದವರಲ್ಲಿ ಅಮ್ಮನೂ ಒಬ್ಬಳು. ಅಮ್ಮ ಮಾಡುವುದನ್ನು, ಮಾತನಾಡುವುದನ್ನು, ಪ್ರೀತಿಸುವುದನ್ನು, ಬೈಯ್ಯುವುದನ್ನು, ಅಡಿಗೆ ಮಾಡುವುದನ್ನು, ಊಟ ಬಡಿಸುವುದನ್ನು, ಸೀರೆ ಸುತ್ತಿಕೊಳ್ಳುವುದನ್ನು, ತಲೆ ಬಾಚುವುದನ್ನು, ಸ್ನಾನ ಮಾಡಿಸುವುದನ್ನು, ನೆಂಟರಿಷ್ಟರನ್ನು ಬಾವಣಿಸುವುದನ್ನು, ಮನೆ ಚೊಕ್ಕವಾಗಿಡುವುದನ್ನು, ಹಣಕಾಸನ್ನು ಸಂಭಾಳಿಸುತ್ತಿದ್ದುದನ್ನು, ಟೆನ್ಷನ್ನು, ಖರ್ಚು ಮಾಡುತ್ತಿದ್ದುದನ್ನು, ಹೆಂಡತಿಯಾಗುತ್ತಿದ್ದುದು, ಅವರ ಕೋಪವನ್ನು, ರಿಯಾಕ್ಟ್ ಮಾಡುವುದನ್ನು, ದುಃಖವನ್ನು, ನಗುವನ್ನು...ಆಕೆಯೆಲ್ಲವನ್ನೂ ನೋಡಿಯೇ ನನ್ನೆಲ್ಲವನ್ನೂ ಕಲಿತಿದ್ದೆ. ಇಂದು ಅಮ್ಮ ನನ್ನಲ್ಲಿ ೩೦ ಭಾಗದಷ್ಟು ಇದ್ದರು.
 
ಕಣ್ಣು ಮುಚ್ಚಿ ಅಮ್ಮನನ್ನು ನೆನಪಿಸಿಕೊಂಡೆ...ಮನಸ್ಸಿಗೆ ಬಂದ ಭಾವನೆಗೆ ಪೂರಕವಾಗಿ ಆ ಕಪ್ಪಿನ ತುಂಬಾ ಒಮ್ಮೆ ಕೋಕೊಕೋಲಾ, ಮತ್ತೊಮ್ಮೆ ನೀರು, ಮತ್ತೊಮ್ಮೆ ಕಿತ್ತಳೆ ಹಣ್ಣಿನ ಜೂಸು ಹಾಕಿದೆ. ಸ್ವಲ್ಪ ಉಪ್ಪು, ವಿನೆಗರ್, ಮೆಣಸಿನಪುಡಿ, ಸಕ್ಕರೆ ಸೇರಿಸಿದೆ. ಬಾಟಲ್ ನ ಒಳಗೆಲ್ಲ ಚುಸ್ಸ್ ಪಟಾರ್ ಅಂತ ಗಾಳಿಗುಳ್ಳೆಗಳು...
 
ಅಪ್ಪ-ಅಮ್ಮನಷ್ಟೇ ಪ್ರಭಾವಕಾರೀ ಪಾತ್ರ. ಅಪ್ಪ ಮಾತಾಡುವುದು, ಪ್ರೀತಿಸುವುದು, ಬೈಯ್ಯುವುದು, ಕೆಲಸ ಮಾಡುವುದು, ಸಿಟ್ಟು ಮಾಡಿಕೊಳ್ಳುವುದು, ಪಾಠ ಓದಿಸುವುದು, ದುಡಿದು ತರುವುದು, ಧಾವಂತದಲ್ಲಿರುತ್ತಿದ್ದುದು, ಹಣಕಾಸು ಸಂಭಾಳಿಸುತ್ತಿದ್ದುದು, ಬುದ್ಧಿವಂತಿಕೆ, ಖರ್ಚು ಮಾಡುತ್ತಿದ್ದುದು, ಗತ್ತು, ಗೌರವ, ಇಷ್ಟವಿಲ್ಲದ ನೆಂಟರಿಷ್ಟರು ಬಂದರೆ ಮಾತೇ ಆಡಿಸದೆ ಕೂರುತ್ತಿದ್ದುದು, ಹಲಸಿನ ಹಣ್ಣು ಕುಯ್ಯುತ್ತಿದ್ದುದು, ಅಮ್ಮನ ಗಂಡನಾಗುತ್ತಿದ್ದುದು, ರಸ್ತೆಗಿಳಿದ ತಕ್ಷಣ ಸಮಾಜದಲ್ಲಿ ಆತನ ಪಾತ್ರ...ಅದನ್ನೂ ಕಲಿತಿದ್ದೆ. ಅಪ್ಪನೂ ನನ್ನಲ್ಲಿ ಶೇಕಡಾ ೩೦ ಭಾಗ ಇದ್ದರು ಅಂತಲೇ ಬರೆದುಕೊಂಡೆ.
 
ಮತ್ತದೇ ಅಳತೆ ಕಪ್ಪಿನ ತುಂಬಾ ಒಮ್ಮೆ ಸೇಬಿನ ಜೂಸು, ಒಮ್ಮೆ ನೀರು, ಫ್ರಿಜ್ಜಿನಲ್ಲಿದ್ದ ಹೆಸರುಬೇಳೆ ಪಾಯಸ ಸೇರಿಸಿದೆ. ಕೆಂಪುಮೆಣಸಿನ ಪುಡಿ, ಅರಿಸಿನ, ಮತ್ತಷ್ಟು ಸಕ್ಕರೆ, ಒಂಚೂರು ಹುಣಸೆ ಹುಳಿ ಸೇರಿಸಿದೆ. ಮತ್ತೆ ಬಾಟಲಿನೊಳಗೆ ಗಲಾಟೆ...
 
ಈಗ ಗೊತ್ತಾಗುತ್ತಿದೆ. ಅಪ್ಪ ಅಮ್ಮಂದಿರ ಜೊತೆಗೆ ಬೆಳೆಯುತ್ತಾ ನಡೆದ ಕಲಿಕೆ ಪ್ರಜ್ನಾಪೂರ್ವಕವಾಗಿರಲಿಲ್ಲ; ನಡೆದು ಹೋಗಿತ್ತು. ಯಾವ ಮಗುವೂ ತನ್ನ ತಂದೆ ತಾಯಿಯಿಂದ ಎಲ್ಲವನ್ನೂ ಪ್ರಜ್ನಾಪೂರ್ವಕವಾಗಿ ಕಲಿಯುವುದಿಲ್ಲ. ದಿನನಿತ್ಯದ ಚಟುವಟಿಕೆಗಳಲ್ಲಿ ಅವರು ಮಾಡುವ ಎಲ್ಲವೂ ನಮಗೆ ಗೊತ್ತಿಲ್ಲದೆಯೇ ನಮ್ಮ ಜೀವನದ ಸಂವಿಧಾನವೆಂಬಂತಾಗಿ ಬಿಡುತ್ತದೆ. ತಂದೆ-ತಾಯಿಯ ಜೊತೆಯಲ್ಲಿದ್ದಷ್ಟು ದಿನ ಅವರನ್ನೇ ನೋಡಿ ಕಲಿತಿದ್ದೆ, ಪಾಲಿಸಿದ್ದೆ. ಸ್ವತಂತ್ರವಾಗಿ ಬದುಕುವುದು ನನಗೆ ಮದುವೆಯಾಗುವವರೆಗೂ ಗೊತ್ತಿರಲಿಲ್ಲ. ಅವರು ಕಟ್ಟುತ್ತಿದ್ದ ಶೈಲಿಯೇ ಶೈಲಿಯೆಂದಾಗಿತ್ತು. ಅವರೇ ನಮ್ಮನ್ನು ಡೈಫೈನ್ ಮಾಡಿಯಾಗಿತ್ತು. ಹಾಗಾಗಿ ಆಗ ಈ ಎಲ್ಲ ಪ್ರಶ್ನೆಗಳು ಹುಟ್ಟಿರಲೇ ಇಲ್ಲ.
 
ಅಕ್ಕ-ಜೊತೆಯಲ್ಲಿರುವವರೆಗೂ ಅಕ್ಕನಿಂದ ಕಲಿತದ್ದು ಕಡಿಮೆ. ಏಕೆಂದರೆ ಅವಳೂ ನನ್ನ ಥರದ ಜೀವನ ವಿದ್ಯಾರ್ಥಿನಿಯೇ. ಆದರೂ ಜಿತವಾಗಿ ಕುಳಿತು ಓದುವುದು, ಹೊರಗಾದಾಗ ಹೊಟ್ಟೆ ಕತ್ತರಿಸಿ ಬಿಸಾಡುವಷ್ಟು ನೋವಾದರೂ ಅವಡುಗಚ್ಚಿ ತಡೆದುಕೊಳ್ಳುವುದು, ಹೊಸ ಬಟ್ಟೆ-ಬಳೆ ಬೇಕೆನಿಸಿದರೂ ಅಪ್ಪ ಅಮ್ಮನ ಪರಿಸ್ಥಿತಿ ನೋಡಿ ಇರುವುದೇ ಹೆಚ್ಚೆಂದು ಖುಷಿಯಾಗಿರುವುದು, ಖುಷಿಯಾಗಿ ಮನಸ್ಸು ಬಿಚ್ಚಿ ನಗಾಡುವುದು, ತಮಾಷೆ ಮಾಡುವುದು, ಒಡಹುಟ್ಟಿದವರಿಗೆ ಪ್ರೀತಿ ಮಾಡುವುದು ಇದೆಲ್ಲವನ್ನೂ ಅಕ್ಕ ಕೊಟ್ಟಿದ್ದಳು. ಮದುವೆಯಾದ ಮೇಲೆ ಅವಳು ತನ್ನ ಗಂಡನೊಡನೆ ಸಂಸಾರ ನಡೆಸುತ್ತಿದ್ದ ರೀತಿ ನಮ್ಮ ಮನೆಯ ಸಂಸಾರಕ್ಕಿಂತ ತುಂಬ ಭಿನ್ನವಾಗಿತ್ತು. ಅಕ್ಕ-ಭಾವ ಬರೀ ಗಂಡಹೆಂಡತಿಯಂತಿರದೆ ಗೆಳೆಯರಂತಿದ್ದರು. ಅಕ್ಕ ಹಕ್ಕಿಯಂತಿದ್ದಳು. ಕಲಿತದ್ದನ್ನು ಹಾಗೆಯೇ ಉರುಳುಹಾಕಿಕೊಂಡು ಪಾಲಿಸಬೇಕೇನಿಲ್ಲ ಎಂಬ ಪುಟ್ಟ ಪಾಠವೂ ಅಕ್ಕನದ್ದೇ ಆಗಿತ್ತು. ಅವಳು ನನ್ನೊಳಗೆ ಕನಿಷ್ಟ ೧೫ ಪರ್ಸೆಂಟ್ ಇದ್ದಳು.
 
ಅಕ್ಕಳನ್ನು ಬಾಟಲಿಗೆ ತುಂಬಲು ಒಂದು ಕಪ್ಪು ದ್ರಾಕ್ಷಿ ರಸ, ಅರ್ಧ ಕಪ್ಪು ನೀರು, ಒಂದೆರಡು ಒಣ ದ್ರಾಕ್ಷಿ, ಒಂಚೂರು ಉಪ್ಪು, ಉಪ್ಪಿನಕಾಯಿ, ಒಂದು ಚೂರು ಗರಂ ಮಸಾಲೆ ಪುಡಿ ಹಾಕಿದೆ.
 
ಪ್ರಶಾಂತ-ಅಪ್ಪ ಅಮ್ಮಂದಿರ ಜೊತೆ ಬಿಟ್ಟು ಊರು ಕೇರಿ ಗೊತ್ತಿಲ್ಲದ ಜಾಗ ಸೇರಿದ್ದಾಗ ಮನಸ್ಸಿನಲ್ಲಿದ್ದ ಎಲ್ಲ ಖಾಲಿಗಳನ್ನೂ, ಗೊಂದಲಗಳನ್ನೂ ತುಂಬಿದ್ದವನು ಪ್ರಶಾಂತ. ಅವನಿಗೂ ಎಲ್ಲವೂ ಹೊಸದು. ಆದರೆ ನನ್ನ ಮುಂದೆ ಹಾಗಿರುವಂತಿಲ್ಲ. ಭಯಂಕರ ಧೈರ್ಯದಿಂದಿರಬೇಕು. ಅವನ ಪರಿಸ್ಥಿತಿ ನನಗೆ ಗೊತ್ತಾಗುತ್ತಿದ್ದರೂ ನನ್ನೆದುರು, ಹೊರಗಿನ ಹೊಸ ಸಮಾಜದೆದುರು, ಕೆಲಸ ಮಾಡುವ ಪರಿಸರದಲ್ಲಿ ಅವನು ತೋರಿಸುತ್ತಿದ್ದ ಗಾಂಭೀರ್ಯ-ದೃಢತೆ, ತೀರ್ಮಾನ ಮಾಡಿದರೆ ಹಾರಿಬಿಡಲು ಹಿಂದೆ ನೋಡದ ಧೈರ್ಯ, ನೀನಿದ್ದರೆ ಏನು ಬೇಕಾದರೂ ಮಾಡುತ್ತೇನೆಂದು ತೋರಿಸಿದ್ದ ಅಚಲ ನಂಬಿಕೆ, ನನಗಾಗಿ ಅವನು ತಂದು ಕೊಟ್ಟಿದ್ದ ಹೊಸ ವಾತಾವರಣ, ಪ್ರೀತಿ, ವಿಶ್ವಾಸ, ಬಂಧನ, ಒಂಟಿತನ...ಪ್ರಶಾಂತ ನನ್ನೊಳಗೆ ೨೦ ಪರ್ಸೆಂಟ್ ಖಂಡಿತಾ ಇದ್ದ.
 
ಈಗ ಪ್ರಶಾಂತನನ್ನು ಅಳೆಯುವ ಸರದಿ. ಒಂದು ಕಪ್ಪು ವೈನು ಸುರಿದೆ, ಮತ್ತೊಂದು ಕಪ್ಪು ತಣ್ಣಗಿನ ಐಸ್ ನೀರು ಹಾಕಿದೆ. ಒಂದು ಚಾಕೋಲೇಟ್, ಒಂದಷ್ಟು ತಿಳಿಸಾರಿನ ಪುಡಿ, ಒಂದು ಸ್ಪೂನು ಟೊಮ್ಯಾಟೋ ಕೆಚಪ್. ಮತ್ತೆ ಬಾಟಲಿಯ ಒಳಗೆ ಹೊಯ್ದಾಟ.
 
ನನ್ನೊಳಗೆ ಒಬ್ಬೊಬ್ಬರ ಇರುವನ್ನು, ಅವರ ಪ್ರಭಾವವನ್ನು ನೆನೆದಾಗಲೂ ಅಬ್ಬಾ! ಇವರು ನನ್ನ ಸ್ಪಿರಿಟ್ಟಿನಲ್ಲಿ ಎಷ್ಟು ಹಾಸುಹೊಕ್ಕಾಗಿದ್ದರೆ ಎಂದುಕೊಳ್ಳುತ್ತಲೇ ಎಷ್ಟಾಗಿರಬಹುದೆಂದು ಲೆಕ್ಕ ಹಾಕಿದೆ. ನಾಲ್ಕು ಮಂದಿಗೇ ೩೦+೩೦+೧೫+೨೦= ೯೫ ಪರ್ಸೆಂಟ್?!! ಮತ್ತಿನ್ನುಳಿದವರೆಲ್ಲರೂ ಐದು ಪರ್ಸೆಂಟ್ ಎಂದುಕೊಂಡು ಅದೂ ಇದೂ ಸೇರಿಸಿದರೆ ೧೦೦ ಮುಗಿಯಿತು! ಬಾಟಲ್ ಮುಕ್ಕಾಲಿಗಿಂತಲೂ ಹೆಚ್ಚು ತುಂಬಿತ್ತು. ಅದಕ್ಕೆ ಮತ್ತೂ ಏನನ್ನಾದರೂ ಹಾಕಿದರೆ ಮಿಶ್ರಣ ಮಾಡಲಾಗುವುದಿಲ್ಲವಲ್ಲಾ? ಈಗೇನು ಮಾಡುವುದು? ಮತ್ತೆ ಬೇಲಾ?! ಬಾಟಲಿಗೆ ಬರಿಯ ಮುಚ್ಚಳ ಮಾತ್ರಾನಾ!!!
 
ಬೇರೆ ಮಾರ್ಗವಿರಲಿಲ್ಲ. ಮುಚ್ಚಳ ಹಾಕಿ ಬಾಟಲ್ ಅನ್ನು ಗಡಗಡ ಅಲುಗಾಡಿಸಿದೆ. ಅಡುಗೆ ಮನೆ ಸಿಂಕಿನ ಬಳಿ ಬಂದೆ. ಈಗ ಆ ಬೇಲಾ ಎಂಬ ಬಾಟಲಿಯಲ್ಲಿದ್ದ ನಾನೆಂಬ ದ್ರಾವಣದ ರುಚಿ, ಟೆಕ್ಸ್ಚರ್, ಪರಿಮಳ ನೋಡಬೇಕಿತ್ತು...
 
ಬಾಟಲ್ ತೆಗೆದಾಗ ಅದೆಲ್ಲಿತ್ತೋ ಅಷ್ಟು ರಭಸ. ಒಳಗಿದ್ದ ಸಮಸ್ತ ದ್ರಾವಣಗಳೂ ಒಂದರ ಜೊತೆ ಮತ್ತೊಂದು ಯಾವ್ಯಾವುದೋ ಥರದಲ್ಲಿ ಬೆರೆತೋ, ಜಗಳವಾಡಿಯೋ ಏನೋ...ಮಿಶ್ರ ಬಣ್ಣ, ಮಿಶ್ರ ವಾಸನೆಯ ದ್ರಾವಣವೊಂದು ನೊರೆಯಾಗಿ ಹೊರಗೆ ಚಿಮ್ಮಿತ್ತು. ಬುಗ್ಗೆಯಂತೆ ಹೊರಬಂದು ಅರ್ಧದಷ್ಟು ಖಾಲಿಯಾಗಿತ್ತು. ಚನ್ನಾಗಿ ಕಲಕಿ ಮಿಶ್ರ ಮಾಡಿದ್ದರಿಂದ ಅಮ್ಮ, ಅಪ್ಪ, ಅಕ್ಕ, ಪ್ರಶಾಂತ, ಜೊತೆಯಲ್ಲಿ ಉಳಿದೆಲ್ಲರೂ ಯಾರು ಯಾವುದೆಂದು ಹೇಳಲಾಗದಷ್ಟು ಬೆರೆತು ಹೋಗಿದ್ದರು. ನೆಕ್ಕಿ ನೋಡಿದೆ. ನನ್ನ ನಾಲಿಗೆಗೆ ಅರ್ಥವಾಗದ ಕಲಸುಮೆಲೋಗರವೆಂಬ ರುಚಿ. ಅದೇ ಬಣ್ಣ, ಅರಿವಿಗೆ ಬರದ ವಾಸನೆ.
 
ಇದೇ ನಾನಾ?? ನನಗೇ ಪರಿಚಯವಿಲ್ಲದ, ಅರ್ಥವಾಗದ, ರುಚಿಸದ, ನಾನೆಂಬ ದ್ರಾವಣ.
 
ಅರೆ!!! ಬಾಟಲ್ ನ ಮುಚ್ಚಳ ತೆರೆದಾಗ ಬುರುಗು ಬುರುಗಾಗಿ ಸುಮಾರು ದ್ರಾವಣ ಸೋರಿ ಬಾಟಲ್ ಈಗ ಅರ್ಧದಷ್ಟು ಖಾಲಿ! ಅಂದರೆ ಇನ್ನೂ ಸಮಯ ಮಿಂಚಿಲ್ಲ! ನನ್ನೊಳಗೆ ನನಗಿಷ್ಟವಾಗುವ ಫ್ಲೇವರ್, ರುಚಿ, ಬಣ್ಣವನ್ನು ಸೇರಿಸಿಕೊಳ್ಳಲು ಇನ್ನೂ ಅವಕಾಶವಿದೆ! ಬಹುಃಷ್ಯ ನಾನು ಅಮ್ಮ, ಅಪ್ಪ, ಅಕ್ಕ, ಪ್ರಶಾಂತರನ್ನೆಲ್ಲರನ್ನೂ ಬೇಲಾ ಬಾಟಲ್ ಒಳಗೆ ಹಾಕಿ ಇನ್ನಷ್ಟು ಕುಲುಕಿದರೆ ಅವರೂ ಇನ್ನಷ್ಟು ಬೆರೆಯಬಹುದು...ಇನ್ನಷ್ಟು ಗಾಳಿ ಹೊರಬಂದು ಮತ್ತೂ ಜಾಗ ಸಿಗಬಹುದು...ಹಾಗೇ ಆಗಿತ್ತು.
 
ನಾನೆಂಬ ಬಾಟಲ್ ಒಳಗೆ ನಾನೆಷ್ಟಿದ್ದೇನೆಂದು ಕಂಡುಹಿಡಿದುಕೊಳ್ಳಲು ನನ್ನ ಪುಟ್ಟ ಹುಡುಗಾಟದ ಪ್ರಯತ್ನ ಮಾಡಿದ್ದೆ. ಪ್ರಯತ್ನ ಪ್ರಾಮಾಣಿಕವಾಗಿತ್ತು. ಫಲಿತಾಂಶ ಸಿಕ್ಕಿತ್ತು. ನನ್ನೊಳಗೆ ನನಗೆ ಗೊತ್ತಿರುವ, ಇಷ್ಟವಾಗುವ ನಾನು ಇರಲೇ ಇಲ್ಲ. ಬೆರೆತು ಒಳಗಿದ್ದ, ಪ್ರೀತಿ, ಮಮತೆ, ಅಕ್ಕರೆ, ಸ್ನೇಹದಲ್ಲಿ ಕಾಯುತ್ತಿರುವ ಶಕ್ತಿಗಳ ಜೊತೆಯಲ್ಲಿಯೇ, ಉಳಿದಿರುವ ಖಾಲಿ ಜಾಗದಲ್ಲಿ, ಬೇಕೆನಿಸಿದ ಬಣ್ಣ ರುಚಿ ವಾಸನೆ ಜಲಗಳನ್ನು ಹುಡುಕಿಕೊಳ್ಳಬೇಕಿತ್ತು. ಇವನ್ನೆಲ್ಲಾ ನಿಜ ಜೀವನದ ಭಾಷೆಗೆ ಅನುವಾದಿಸಿಕೊಳ್ಳಬೇಕಿತ್ತು...ಹನಿ ಹನಿಯಾಗಿ ಆರಾಮಕ್ಕೆ ತುಂಬಿಕೊಳ್ಳಬೇಕಿತ್ತು...ನಾನಿನ್ನೂ ಖಾಲಿ ಖಾಲಿ...ಈ ಬಗೆಯ ಖಾಲಿತನ ಇಷ್ಟು ಸಮಾಧಾನ ಸಂತೋಷ ಕೊಡುತ್ತದೆನಿಸಿರಲಿಲ್ಲ.
 
ನಾನಿನ್ನೂ ಖಾಲಿ...ಎಂದು ಗೊತ್ತಾದಾಗ ಮುಂದೆ ತುಂಬಿಕೊಳ್ಳಲು ಅವಕಾಶ ಕೊಟ್ಟಿರುವುದಕ್ಕೆ ಥ್ಯಾಂಕ್ಯೂ ಹೇಳಲು ಅಡಿಗೆಮನೆಯ ಸಣ್ಣ ಗೂಡೊಂದರಲ್ಲಿ ಕೂತಿದ್ದ ನನ್ನ ಬಳಗದ ಹತ್ತಿರ ಧಾವಿಸಿದೆ.
 
ನಿಮ್ಮ ಹೊಸವರ್ಷ ಸುಂದರವಾಗಿರಲಿ...
 
(ಮುಂದುವರಿಯುವುದು)
 
 
 
 
 
 
Copyright © 2011 Neemgrove Media
All Rights Reserved