ನೆನಪಿನಂಗಳದಿಂದ... ಕಾಮ್ರೆಡ್ ಕೆ.ಎಂ. ಶ್ರೀನಿವಾಸ್ ಹೇಳಿದ ನೆನಪುಗಳು...
ಡಾ. ರಾಜೇಗೌಡ ಹೊಸಹಳ್ಳಿ
(ಅಲ್ಲಲ್ಲಿ ಅಷ್ಟಷ್ಟನ್ನು ಹೆಕ್ಕುತ್ತಾ ಪೋಣಿಸುತ್ತಿರುವ ಮಾಲೆ)
೧) ಶಾಂತವೇರಿ ಗೋಪಾಲ ಗೌಡ್ರಿಗಿಂತ ನಾವು ವಯಸ್ಸಿನಲ್ಲಿ ಬಹಳ ಚಿಕ್ಕವರು. ನಾವಾಗಲೇ ಈಚಲಮರ ಕಡಿಯೋ, ಟೆಲಿಫೋನ್ ವೈರ್ ಕೀಳೋ ಕಾನೂನು ಉಲ್ಲಂಘನೆಗೆ ಕೈ ಹಾಕಿದ್ದೆವು. ಮುಂದೆ ದೇಶಕ್ಕೆ ಸ್ವತಂತ್ರ ಬಂದ ಮೇಲೆ ಕಾಂಗ್ರೆಸ್ಸಿನ ಬದರೀನಾರಾಯಣ ವಿರುದ್ಧ ಸೋಷಿಯಲಿಸ್ಟ್ ಪಾರ್ಟಿಯಿಂದ ಗೋಪಾಲಗೌಡ್ರು ನಿಂತರು. ನಾವು ಊರೂರು ಮೇಲೆ ಪ್ರಚಾರಕ್ಕೆ ನಡ್ಕೊಂತಾ ಹೋಗೋದು; ಅಲ್ಲೆ ಮನೆ ಮನೇಲಿ ಊಟ ತಿಂಡಿ ಮುಗಿಸೋದು. ಉಂಡವರೇ ವಲ್ಲಿ ಹಾಸಿ ಅವರಿಂದಲೇ ಓಟಿಗೊಂದು ರೂಪಾಯಿನಂತೆ ಓಟುಹಾಕೋರು ಕೊಡಬೇಕು ಅಂತಾ ಕುಳಿತುಬಿಡ್ತಿದ್ದಿವಿ. ಹಿಂಗೆ ಓಟಿಗೊಂದು ರುಪಾಯಿ ಇಸ್ಕೊಂಡು ವಲ್ಲಿಲಿ ಕಟ್ಕೊಂಬಂದು ಗೌಡ್ರ ಖರ್ಚಿಗೆ ಸುರಿತಿದ್ದಿವಿ. ಈಗಿನ ರಾಜಕೀಯ ನೋಡಿ! ಅಯ್ಯೋ ದೇವ್ರೇ! ಏನಾಗೋಯ್ತು ಕಾಲ! ನಾನು ರೈತರ ಪರ ಕಾರ್ಮಿಕರ ಪರ ನಿಂತೋನು! ನಾನು ಕಮ್ಯೂನಿಸ್ಟ್ ಪಾರ್ಟಿ ಬದಲಾಯಿಸಿದ್ರೆ ಎಂ.ಎಲ್.ಎ. ಆಗೋದು ಕಷ್ಟವಾಗಿರಲಿಲ್ಲ. ನಾವು ಸೋಲ್ತಿವಿ ಅಂತಾನೇ ಸ್ಪರ್ಧೆಗೆ ಇಳಿತಿದ್ವಿ. ಹಾಗೇ ನಾನು ಸೋತಿದ್ದು ಉಂಟು. ಅದು ಸೋಲು ಅಂತಾ ನಾನು ತಿಳಿದೇಯಿಲ್ಲ.
೨) ನಾನು ಲಾಯರ್ ಆಗಿ ಅದ್ಯಾಕೆ ಸೇರಿದೆನೋ ಕಾಣೆ! ಮಹಿಷಿ ನರಸಿಂಹಮೂರ್ತಿಗಳ ಶಿವಮೊಗ್ಗ ಆಫೀಸಿನಲ್ಲಿ ಜೂನಿಯರ್ ಲಾಯರ್ ಆಗಿ ಸೇರಿದ್ದೆ. ಅವರು ಕ್ರಿಮಿನಲ್ ಲಾಯರ್. ಮೈದುನನಾದವನು ಅತ್ತಿಗೆಯ ಜುಟ್ಟು ಕೊಯ್ದಿದ್ದ ಒಂದು ಕೇಸು. ಆಕೆ ದರ್ಜಿ ಹೆಣ್ಣುಮಗಳು. ಮೈದುನನ ಪರ ವಕಾಲತ್ ಹಾಕಿದ್ದ ನಮ್ಮ ಸೀನಿಯರ್ ಲಾಯರು ಅವತ್ತು ಇರಲಿಲ್ಲ. 'ನೀವೇ ನಡೆಸ್ರಿ' ಅಂತಾ ಜಡ್ಜ್ ಹೇಳಿದರು. ಸರಿ ವಾದ ಮಂಡಿಸಿದೆ. 'ಅಮ್ಮಾ ನೀವು ಓದುವಾಗ ಕ್ರಾಪ್ಕಟ್ ಮಾಡಿಸ್ಕೊಳ್ತಾ ಇದ್ರಿ ಅಲ್ಲವೆ!' ಎಂದೆ. ಅವರು ಹೌದು ಅನ್ನಬೇಕನ್ನುವಷ್ಟರಲ್ಲಿ ಜಡ್ಜಿಗೆ ಸಿಟ್ಟುಬಂತು. ’ಏನ್ರೀ! ನೀವೇ ತಲೆ ಕಟ್ಮಾಡಿಸ್ಕೊಂಡು ಸುಳ್ಳುಕೇಸು ಹಾಕಿದಿರಿ ಅಂತಾ ಅಲ್ಲವೇ ನಿಮ್ಮ ವಾದ!’ ಅಂತಾ ಜಡ್ಜು ನನ್ನ ದಬಾಯಿಸಿದರು. ನಾನು ಫೈಲು ಪುಸ್ತಕವೆಲ್ಲ ಟೇಬಲ್ ಮೇಲೆ ಎಸೆದು ಸೆಟೆದು ನಿಂತುಬಿಟ್ಟೆ. ತಕ್ಷಣ ಅಲ್ಲೆ ಇದ್ದ ಕಲ್ಲಯ್ಯ ಎನ್ನೋ ಕ್ರಿಮಿನಲ್ ಲಾಯರ್ ಅಡ್ಡಬಂದು ಪರಿಸ್ತಿತಿ ಸುಧಾರಿಸಿದರು ಅನ್ನಿ. ಅವತ್ತೆ ನನ್ನ ಲಾಯರ್ಗಿರಿ ಮುಗಿತು. ಸಮಾಜಸೇವೆ ಅಂತಾ ಹೊರಟೋನು ಹಿಂದಿರುಗಿ ನೋಡಲಿಲ್ಲ.
ಆಗ ಅರಗದ ಸೀಮೆಲಿ ಏನೂ ಇರಲಿಲ್ಲ. ಸಹಕಾರಸಂಘ, ವೇರ್ಹೌಸ್, ದನದ ಆಸ್ಪತ್ರೆ, ಹೈಸ್ಕೂಲು, ಗ್ರಾಮಪಂಚಾಯ್ತಿ, ಕಾರ್ಪೊರೇಷನ್ ಬ್ಯಾಂಕ್, ಟೇಲಿಫೋನ್ ಆಫೀಸು ಎಲ್ಲ ತಂದಿವಿ. ಪ್ರಾಂತ ರೈತ ಸಂಘ ಕಟ್ಟಿದಿವಿ. ಇದಕ್ಕೆಲ್ಲಾ ಅಲ್ಲಿನ ಸಾಹುಕಾರ್ ಖಾದರ್ಸಾಬ್ ಅನ್ನೋರು ಸದಾ ಸಹಕಾರ ನೀಡಿದರು. ನಾನೇನೇ ಮಾಡಿರಲಿ, ಆ ನನ್ನ ಹೆತ್ತವ್ವನೇ ಇದಕ್ಕೆಲ್ಲ ಕಾರಣ ಅನ್ನಿ. ನಾನು ಅಪ್ಪನ ಮುಖ ನೋಡ್ದಲ್ಲ. ಆಕೆ ಗಂಡನ ಕಳ್ಕೊಂಡವಳು, ೧೯ ಮೊಳದ ಗೊಬ್ಬೆ ಸೀರೆ ಉಟ್ಟು ಗಂಡಸಿಗಿಂತ ಹೆಚ್ಚಾಗಿ ಜಮೀನು ಮನೆ ಮಾಡಿದ್ದಕ್ಕೇ ನಾನು ಇಂಥಾದನ್ನ ಮಾಡೋಕಾಯ್ತು. ಅವಳು ನನ್ನಂತವನನ್ನ ಹೇಗೆ ಸಹಿಸಿದಳೋ ಕಾಣೆ! ದೇವರು ಆಕೆ.
೩) ನಾನೆಂತಾ ಹೋರಾಟಗಾರ ಬಿಡ್ರಿ. ನನ್ನಂತವರೆಷ್ಟು ಜನ ಈ ದೇಶದಲ್ಲಿಲ್ಲ!
ನನ್ನ ಹೋರಾಟದಲ್ಲಿ ನೆನೆಪುಳಿಯೋ ಅಂತಾದ್ದು 'ವರಾಹಿ ಸಂತ್ರಸ್ಥರ ಹೋರಾಟ ಸಮಿತಿ'. ಅದಕ್ಕೆ ನನ್ನನ್ನ ಅಧ್ಯಕ್ಷ ಅಂತಾ ಮಾಡಿದರು. ಆಗಿನ ಪರಿಸ್ಥಿತಿ ಏನಂತೀರಿ! ಅಡವಿಯೊಳಗಿದ್ದ ಏನೂ ಅರಿಯಿದ ಜನ. ಸರ್ವೆ ನಂಬರು ಅಂದರೇನು ಅಂತಲೇ ಗೊತ್ತಿಲ್ಲದೋರು. ಇಂತಾವರನ್ನ ವಕ್ಕಲೆಬ್ಬಿಸೋ ಕಾಲ. ಲಿಂಗನಮಕ್ಕಿ, ಚಕ್ರ, ಸಾವೆಹಕ್ಲು ಇಲ್ಲೆಲ್ಲ ಏನೆಲ್ಲಾ ಅನಾಹುತ ಆಗಿತ್ತು ಅಂತಾ ತಿಳಿದಿತ್ತು. (ಕಾಗೋಡು ಸತ್ಯಾಗ್ರಹ ಆಗಿತ್ತು). ಆಗ ಅಬ್ಬೆಪಾರಿಗಳಾಗಿ ಎಷ್ಟೋ ಜನ ಸತ್ತು ಹೋಗಿದ್ದರು. ಏನು ಪ್ರಾಮಾಣಿಕವಾಗಿ ಮಾಡಿದ್ರೂ ಕಾನೂನೇ ಸತ್ತು ಹೋಗಿತ್ತು ಅನ್ನಿ.
ವರಾಹಿ ವಿಚಾರ ಹೇಳ್ತೀನಿ ಕೇಳಿ. ಆ ಕಾಡು ಜಗತ್ತಿನ ಬೃಹತ್ ಅಡವಿಯಲ್ಲಿ ಇದೊಂದು. ಆ ಕಾಡು ಕಡಿತಾ ಇದ್ದರೆ ಈಚೆಗೆ ಬಂದ ಹಂದಿಗಳು ಬೆಳ್ಳಗಿದ್ದವು ಅಂತಿನಿ. ಸೂರ್ಯನ ಬೆಳಕೇ ಬೀಳದ ಕಾಡು ಅದು. ಕಡಿದಿದ್ದು ೨೨ ಸಾವಿರ ಹೆಕ್ಟೇರ್ ಕಾಡು. ವಿದ್ಯುತ್ ಅಲ್ಲಿಂದ ಬರೋದು ಅಷ್ಟರಲ್ಲೇ ಇರಲಿಬಿಡಿ! ಗೇಣಿ ಕಾಯ್ದೆ ಬಂದ ಸಮಯ. ಸಾಹುಕಾರರಾದ 'ಶೀರ್ನಾಳಿಯವರಿಗೋಸ್ಕರ ಈ ಮುಳುಗಡೆ' ಅಂತಾ ನಮಗೇನು ಗೊತ್ತಿಲ್ಲದ ವಿಚಾರ ಆಗಿರ್ಲಿಲ್ಲ. ಏನು ಮಾಡೋದು?! ದೇವರಾಜ ಅರಸರ ಬಳಿ ರೈತರ ಪರ ನಿಯೋಗ ಹೋದಿವಿ. ಆಯ್ತು ಆಯ್ತು. 'ನೀವೆಲ್ಲಾ ದೇಶಕ್ಕೆ ತ್ಯಾಗ ಮಾಡಬೇಕ್ರಿ' ಎಂದು ಗುಟುರಿಕೆ ಹಾಕಿ ಕಳುಹಿಸಿದರು.
ಆಮೇಲೆ ಗುಂಡೂರಾವ್ ಬಂದರು. ಮತ್ತೆ ಹೋದಿವಿ. ಎಲ್ಲಾ ಚೀಫ್ ಸೆಕ್ರೆಟರಿ, ಸೀನಿಯರ್ ಆಫೀಸರನ್ನೆಲ್ಲಾ ಹಾಜರಿರಿಸಿದ್ದರು. ನಾನು ವಿಚಾರವೆಲ್ಲಾ ವಿವರವಾಗಿ ಮಂಡಿಸಿದೆ. ಏನೂ ಅರಿಯದ ಕಾಡು ಜನ ಸ್ವಾಮಿ...ಎಲ್ಲಿಗೆ ಹೋಗೋದು, ಈಗ ನೀವು ನಿಗದಿ ಪಡಿಸಿರೋ ಹಣದಲ್ಲಿ ಏನು ಸಿಗುತ್ತೆ ಅಂತೆಲ್ಲ ವಾದ ಮಂಡಿಸಿದೆ. ಪಂಚೆವುಟ್ಟು ಹೆಗಲ ಮೇಲೆ ವಲ್ಲಿ ಹಾಕಿದ್ದ ನನ್ನ ದಿರಿಸು ನೋಡಿ, ’ಇವರು ತಿಳ್ಕೊಂಡಿರಂತೆ ಕಾಣ್ತಾರೆ’ ಅಂದ್ರು. ಅಲ್ಲೆ ಪಕ್ಕದಲ್ಲಿದ್ದ ಕಾಗೋಡು ತಿಮ್ಮಪ್ಪನವರು ನನ್ನನ್ನ ಚುಟುಕದಲ್ಲಿ ಪರಿಚಯಿಸಿದರು. ’ಇರಲಿ, ಸಂತೋಷ’ ಅಂದವರೇ ಎಕರೆಗೆ ಅಡಿಕೆ ತೋಟಕ್ಕೆ ೪೦ ಸಾವಿರ, ಗದ್ದೆಗೆ ೧೭ ಸಾವಿರ, ಮನೆಗೆ ಇಂತಿಷ್ಟು, ಕಡೆಗೆ ಏನೂ ರಿಕಾರ್ಡ್ ಇಲ್ಲದ ಜಾಗ, ಮನೆಗೂ ಇಷ್ಟು ಕೊಡಬೇಕು ಅಂತಾ ತೀರ್ಮಾನ ಹೇಳಿ ಬಿಟ್ಟರು. ಆ ಕಾಲಕ್ಕೆ ಅದು ರೈತರಿಗೆ ದೊಡ್ಡಮೊತ್ತ. ಗುಂಡುರಾಯರು ಹಾರಂಗಿ ಮುಳುಗಡೆ ಪ್ರದೇಶದಿಂದ ಬಂದವರು, 'ನಾವೂ ಮನೆಮಠ ಕಳ್ಕೊಂಡವರೇ. ಹೆಚ್ಚು ಮಾತಾಡಬೇಡಿ, ರೈತರ ಕಷ್ಟ ನಿಮಗೇನು ಗೊತ್ರಿ, ಕೊಡ್ರಿ ದುಡ್ಡ. ಅದೆಷ್ಟಿದ್ದರೂ ನಾನು ಕೊಡ್ತಿನಿ’ ಎಂದು ಖಡಾಖಂಡಿತವಾಗಿ ಅಧಿಕಾರಿಗಳಿಗೆ ಹೇಳಿದರು. ಆತನ ಇತಿಹಾಸ ಏನಾದರಿರಲಿ, ಗುಂಡೂರಾಯನನ್ನು ಈ ವಿಚಾರದಲ್ಲಿ ಮೆಚ್ಚಬೇಕು. ತಿಳಿವಳಿಕೆಗೆ ಭಾರಿ ವಿದ್ಯೆ ಬೇಕಿಲ್ಲ ನೋಡಿ. ಅದೇ ರೀತಿ ಆದೇಶಗಳಾದವು. ನಾವು ರೈತರನ್ನ ಒಟ್ಟು ಹಾಕಿದೆವು. ಹಣಕೊಡದೆ ಜಾಗ ಬಿಡೋರಲ್ಲ ಅಂತಾ ಹೇಳಿ ಚಡೇ ಕೂತಿವಿ. ಮುಳುಗಡೆ ಕಛೇರಿಗಳಿಗೆ ರೈತರ ದನಕರು ಕಟ್ಟಿಸಿದ್ದು ಉಂಟು. ಅನಂತರ ನಮ್ಮ ಅಲ್ಲಿನ ಹೋರಾಟ ಉಳಿದೆಡೆಗೆ ಒಂದು ಮಾದರಿಯಾದಂತಾಯಿತು. ಅದಿರಲಿ! ಏನು ಸುಡುಗಾಡು ಸರ್ಕಾರಗಳೋ! ರೈತರ ಗೋಳು ಕೇಳೋರೆ ಇಲ್ಲವಲ್ಲ!
(ಮುಂದುವರಿಯುವುದು)
ರಾಮ ಅಳುತ್ತಿದ್ದಾನೆ!
ಪ್ರೊ. ಶಿವರಾಮಯ್ಯ
ಅಯೋಧ್ಯೆಯ ಜನ್ಮ ಭೂಮಿಯಲಿ
ಮುರುಕು ಚಪ್ಪರದ ಹರಕು ಡೇರೆಯಲಿ
ಪೂಜೆ ಆರತಿ ನೈವೇದ್ಯ ಕಾಣದೆ
ಚಳಿ ಗಾಳಿ ಮಳೆ ಬಿಸಿಲ ತಾಳಲಾರದೆ
ಬಿದ್ದ ಬಾಬರಿ ಮಸೀದಿಯತ್ತ ಮುಖ ಮಾಡಿ
ಕೌಸಲ್ಯೆಯ ಕಂದ ಅಳುತ್ತಿದ್ದಾನೆ,
ಚುನಾವಣೆಗೊಮ್ಮೆ ಮಂದಿರಕಟ್ಟುವೆವೆಂಬ
ಗುತ್ತಿಗೆ ದೇಶಭಕ್ತರ ಸುಳ್ಳಿಗೆ ನಾಚಿ
ಬಂದೂಕುಧಾರಿ ಕಾವಲುಪಡೆಯ
ಬೂಟುಗಾಲಿನ ಹೆಜ್ಜೆ ಸದ್ದಿಗೆ ಬೆಚ್ಚಿ
ಕೆಂಪು ಕೋರ್ಟಿನ ತೀರ್ಪು ಕಾಯುತ್ತ
ರಾಮ ಲಲ್ಲಾ ಅಳುತ್ತಿದ್ದಾನೆ.
|
|