ಗ್ರೇಸ್ ತನ್ನ ತಾಯಿಗೆ ಮಲಮಗಳು. ತಾಯಿ ಮದ್ಯವ್ಯಸನಿಯಾಗಿ ಅವಳಿಂದ, ತಂದೆಯಿಂದ ಯಾವತ್ತೋ ದೂರವಾಗಿದ್ದಳಂತೆ. ಅವಳಿಗೆ ಯಾರೂ ಗೊತ್ತಿಲ್ಲ. ಎಲ್ಲ ಬರಿ ಫೈಲುಗಳ ಪುರಾಣ. ಈಗಿರುವ ಅಮ್ಮ ಹದಿನಾಕರ ತನಕ ಮನೆಯಲ್ಲಿಟ್ಟುಕೊಂಡು ಪುಣ್ಯ ಕಟ್ಟಿಕೊಂಡಿದ್ದಾಳೆ. ಈಗ ಹದಿನೈದಾಯಿತಲ್ಲ. ಅವಳೀಗ ಮನೆಯೆಂಬ ಕತ್ತಲು ಬಿಟ್ಟು ಇಲ್ಲಿಗೆ ಬಂದಿದ್ದಾಳೆ.

 
ಇಲ್ಲಿ ಅವಳಂತೆಯೇ ಮುವತ್ತಾರು ಮಂದಿ. ಅಪ್ಪ ಅಮ್ಮ ಯಾರೂ ಇಲ್ಲ. ಯಾರಿಗೂ ದೇಹವೆಂಬುದು ಭಾರವೆಂದು ಬಿಟ್ಟರೆ ಬೇರೇನೂ ಗೊತ್ತಾಗುವುದಿಲ್ಲ. ಇಲ್ಲಿ ಅವರಿಗೆ ಆಗಾಗ ಹೋಗಿ ಬರುವ ಅಕ್ಕಂದಿರಿದ್ದಾರೆ, ಊಟ ನೀರು ಕೊಡುತ್ತಾರೆ, ಹಲ್ಲುಜ್ಜಿಸಿ, ಕಕ್ಕ ಮಾಡಿಸಿ ಶುಚಿ ಮಾಡುತ್ತಾರೆ, ಬಾಲಾಡಿಸುತ್ತಾರೆ, ಉಗುರು ಬಣ್ಣ ಹಚ್ಚಿಕೊಡುತ್ತಾರೆ, ಪಾರ್ಕು ತೊರಿಸುತ್ತಾರೆ.
 
ಗ್ರೇಸ್ ಈಗ ನಗುತ್ತಾಳೆ. ಹೊಸದಾಗಿ ನೋಡುವವರಿಗೆ ಅವಳ ಸೀಕ್ರೆಟ್ ನಗು ಗೊತ್ತಾಗುವುದಿಲ್ಲ. ಸುಮ್ಮನೆ ಹಲ್ಲು ತೊರಿಸಿದ ಹಾಗೆನಿಸುತ್ತದೆ. ಆದರೆ ಗ್ರೇಸ್ ಗೆ ಗೊತ್ತು...ಅವಳು ತುಂಬಾ ಖುಶಿಯಾದಾಗ ಅಷ್ಟೂ ಮುಖದ ಮೇಲೆ ಮೂಡಿ ಬಿಡುತ್ತದೆ. ಅವಳಿಗೀಗ ಕೆಂಪು ಬಣ್ಣ ಹಿಡಿಸುತ್ತದೆ, ಅರ್ಥವಾಗುತ್ತದೆ. ಅವಳ ಹತ್ತಿರ ಒಂದು ಸಣ್ಣ ಕೆಂಪು ಕರ್ಚೀಪಿದೆ (ಶ್! ಯಾರಿಗಾದರೂ ಹೇಳಿಬಿಟ್ಟೀರಾ ಮತ್ತೆ!).
 
ವಯಸ್ಸು ಹದಿನೈದಾಯಿತಲ್ಲ...ಇನ್ನೊಂದು ಹತ್ತು ವರ್ಷ...ಆಮೇಲೆ...ಆಗೋದಿಲ್ಲವೇನೋ...ಆಗಾಗ ತಪಾಸಣೆಗೆ ಬರುವ ಡಾಕ್ಟರರು ಅಕ್ಕಂದಿರಿಗೆ ಹೇಳಿರುವುದು ಗ್ರೇಸ್ ಗೆ ಇನ್ನೂ ಗೊತ್ತಾಗಿಲ್ಲ. ಅವಳು ಈಗಷ್ಟೇ ’ಹಾಯ್’ ಹೇಳಿ ಕೈಯ್ಯಾಡಿಸುವುದು ಕಲಿತಿದ್ದಾಳೆ. ಅಮ್ಮನ ಗರ್ಭದಲ್ಲೇ ಮುಕ್ಕಾಲು ಜೀವ ಕಳೆದುಕೊಂಡೇ ಹುಟ್ಟಿದ್ದಕ್ಕೇನೋ...ಅಲ್ಲಿಂದ ಹೊರಗೆ ಅವಳಿಗೆ ಎಲ್ಲ ಖಾಲಿ.
 
ಬಂಡವಾಳಶಾಹಿ, ಮಾರುಕಟ್ಟೆ, ವ್ಯಾಪಾರ ಧಾವಂತದ ಪಿತಪಿತ ಪ್ರಪಂಚದಲ್ಲೇ, ಅವರಿವರ ಕರುಣೆ ಕಟ್ಟಿಸಿಕೊಟ್ಟ ಒಳ್ಳೆ ಬೆಳಕು ಬರುವ ಪುಟ್ಟ ಗೂಡೊಂದರಲ್ಲಿ ತನ್ನಂತೆಯೇ ತರಕಾರಿಗಳಾಗಿರುವ ಅಕ್ಕ ತಂಗಿಯರ ಜೊತೆ ಗ್ರೇಸ್ ತಂಗಾಳಿಯಂತೆ ಇದ್ದಾಳೆ. ಹಾಗೇ ಸದ್ದಿಲ್ಲದೆ ಹಾರಿ ಹೋಗುವ ದಿನ ಕಾಯುತ್ತಾ...
 
ಕರುಣೆಯಿದ್ದಿದ್ದಕ್ಕೆ ಅವಳಿಗೆ ’ಹಾಯ್’ ಕಲಿತು ನಗಲಾಗಿದ್ದು ಎಂದು ಎಲ್ಲರಿಗೂ ತಿಳಿಸಿ ಹೋಗಲು...
 
 
 
 
 

 

 
 
 
 
 
 
 
 
Copyright © 2011 Neemgrove Media
All Rights Reserved