ಯಾಹೊತ್ತು ನಾವು ಕೇಳುವುದು ಉತ್ತರವನ್ನೆ. ಯಾಕೆ ಭಾರತ ಹಾಗಿತ್ತು? ಯಾಕೆ ಇಂಡಿಯಾ ಹೀಗಿದೆ? ಅಲೆಕ್ಸಾಂಡರ್ ಬಂದಾಗ ಅವನಿಗೆ ಸುಲಭ ಉತ್ತರ ಸಿಕ್ಕಿತು. ಒಂದೇ ಸೈನ್ಯದ ನೂರಾರು ಬೇರೆ ಬೇರೆ ಒಲೆಗಳು ಉರಿಯುವುದನ್ನು ಕಂಡನಂತೆ. ಇನ್ನು ಅವನ ಯುದ್ಧ ಸುಲಭವಾಯಿತು. ಆ ತೆರೆದ ಯುದ್ಧದಿಂದ ನಾವೀಗ ಪರೋಕ್ಷ ಯುಧ್ಧ ಭೂಮಿಗೆ ಬಂದು ನಿಂತಿದ್ದೇವೆ. ಹಸಿರುಯುದ್ಧ, ನೀಲಿಯುದ್ಧ, ಬಿಳಿಯುದ್ಧ...ಇಂಥೆಲ್ಲ ಉತ್ಪಾದಕ ಯುದ್ಧಗಳು ಮುಗಿದು ’ಬಳಕೆ’ ಯುದ್ಧದ ಕಣದಲ್ಲಿ ನಿಂತಿದ್ದೇವೆ.
ನಾನೂ ಉತ್ತರಕೆ, ಉತ್ತರಕ್ಕೆ ಬಂದಿದ್ದೇನೆ, ಮೈಸೂರಿನಿಂದ ಇನ್ನೂ ಹಿಂದಕ್ಕೆ ಮಂಜನ ಹಳ್ಳಿಯಿಂದ. ಅಲ್ಲೆಲ್ಲ ತುಂಬಿದ ಗರ್ಭಿಣಿಯಂತಿದ್ದ ಕಾಡು ನಾಡಾಗಿ ಹೋಯಿತು. ನಾಡು ನಗರವಾಗಿ ಹೋಯಿತು. ಈ ನಗರ ಜಗತ್ತೇ ಆಗುತ್ತದೆ ಎಂದು ಅಮೆರಿಕೆ ಬುಡುಬುಡಿಕೆದಾಸ ಶಕುನ ಹೇಳುತ್ತಿದ್ದಾನೆ. ಇದನ್ನು ನಾನು ಕೇಳಬಹುದೆ?
ಆಗ ವರ್ಷ ಯಾವುದೆಂದು ತಿಳಿಯದು. ಮಿತ್ರ ದತ್ತ ಪಂಜಾಬಿ ಮಹಿಳೆ ಮತ್ತು ಕರ್ನಾಟಕದ ಪುರುಷನ ಪುತ್ರಿಯನ್ನು ಮದುವೆಯಾದರು. ಡೆಲ್ಲಿಗೆ ಬಂದಿದ್ದೆ. ಅವರ ಮನೆಯಲ್ಲಿ ಊಟಹಾಕಿ ಕಳಿಸಿದ್ದರು. ಇನ್ನೊಮ್ಮೆ ಮಿತ್ರರ ಒಳಗೆ ಸೇರಿ ಪ್ರವಾಸ ಬಂದಿದ್ದೆವು. ದೆಹಲಿ ಕಾಣದ ನಮ್ಮನ್ನು ಹೋಟೆಲ್ ಓನರ್ ಒಬ್ಬ ಒಂದು ಗೋಡೌನ್ ನಲ್ಲಿ ಕೂಡಿಹಾಕಿ ಬಾಡಿಗೆ ಪೀಕಿಸಿದ್ದ. ಮುಸೋರಿಗೆ ಹೋಗಿ ಬೆಟ್ಟದ ಮೇಲೆ ಫೋಟೋ ತೆಗೆಸಿಕೊಂಡೆವು; ಹಲವು ವೇಷಗಳನ್ನು ಹಾಕಿಕೊಂಡು. ಕ್ಯಾಮೆರಾದವರು ಹಣ ತೆಗೆದುಕೊಂಡು ಫೋಟೋಗಳು ನಿಮ್ಮೂರಿಗೆ ಬರುತ್ತವೆ ನಡೀರಿ ಅಂದರು. ಬಂದೆವು. ಫೋಟೋಗಳು ಮಾತ್ರ ಬರಲಿಲ್ಲ. ನಾವು ಗಂಡಹೆಂಡತಿಯರು ಫ್ರೆಶ್ ಆಗಿ ಎನ್ನುವಂತೆ ಮತ್ತೆ ಪರಸ್ಪರ ಮುಖ ನೋಡಿಕೊಂಡೆವು.
ಸೆಮಿನಾರ್ಗೆ ಅಂತ ಉತ್ತರಕ್ಕೆ ಬಂದಿದ್ದೇನೆ. ಕಲ್ಕತ್ತದಲ್ಲಿ ಸೆಮಿನಾರ್ಗೆಂದು ಕಲ್ಕತ್ತ ಮೇಲ್ ರೈಲಿನಲ್ಲಿ ಬೆಂಗಳೂರಿನಿಂದ ಬಂದೆ. ನಮ್ಮೂರಲ್ಲಿ ಇದ್ದ ಕಲ್ಕತ್ತದ ಸ್ವಾಮಿಯೊಬ್ಬ ನನ್ನ ಜೊತೆಗೆ ಪ್ರಯಾಣಿಕನಾಗಿದ್ದ. ರೈಲು ಹತ್ತುವಾಗ ನನ್ನ ಶ್ರೀಮತಿ ನನ್ನ ಗಂಡನಿಗೆ ಹಿಂದಿ ಭಾಷೆ ಏನೂ ಬರುವುದಿಲ್ಲ ಸ್ವಲ್ಪ ನೋಡಿಕೊಳ್ಳಿ ಎಂದು ಮಗುವಿನ ತಾಯಿ ಹೇಳಿದಂತೆ ಹೇಳಿ ಕಳಿಸಿದ್ದಳು. ರೈಲು ಕಲ್ಕತ್ತಾ ಸ್ಟೇಷನ್ ತಲುಪದೆ ಹತ್ತು ಕಿಲೋಮೀಟರ್ ದೂರದಲ್ಲಿ ನಿಂತಿತು. ಅದರೊಳಗೆ ಇದ್ದ ಜನರೆಲ್ಲ ಐದೇ ನಿಮಿಷದಲ್ಲಿ ದಡದಡ ಇಳಿದು ರೈಲು ಖಾಲಿ ಮಾಡಿ ಓಡಿ ಹೋದರು. ನಾನು ಮಂಗನ ಥರ ಕೂತಿದ್ದೆ. ಆ ಸ್ವಾಮಿ ಬೇಗ ಇಳಿಯಿರಿ...ಇನ್ನು ಐದು ನಿಮಿಷ ಇಲ್ಲಿ ಕೂತರೆ ನಮ್ಮ ಚಡ್ಡಿಗಳೂ ಉಳಿಯುವುದಿಲ್ಲ ಎಂದು ನನ್ನನ್ನು ಎಳೆದುಕೊಂಡು ಹೋಗಿ ಸಿಟಿ ಟ್ರೈನಿನಲ್ಲಿ ಕೂರಿಸಿದರು. ನೀವು ಈಗ ಲೇಕ್ವ್ಯೂ ಸ್ಟೇಡಿಯಂಗೆ ಹೋಗುವುದು ಬೇಡ ಮನೆಗೆ ಬನ್ನಿರಿ ಎಂದು ಕರೆದುಕೊಂಡು ಹೋದರು.
ವೃದ್ಧ ಹೆಂಡತಿಯನ್ನು ಬಿಟ್ಟು ಸ್ವಾಮಿ ವೇಷದಲ್ಲಿ ಬಂದಿದ್ದ ನನ್ನ ಜೊತೆಯ ಮುದುಕ. ಅಪ್ಪ ಬೆಂಗಳೂರಿನಿಂದ ಏನು ತಂದಿದ್ದಾನೆ ಎಂದು ದೋಚಿಕೊಳ್ಳಲು ಹವಣಿಸುತ್ತಿದ್ದ ಮಗ. ತಾನು ಪ್ರೇಮಿಸಿದ ಹುಡುಗಿಯ ಜೊತೆ ಸಲ್ಲಾಪದಲ್ಲಿದ್ದ ಮೊಮ್ಮಗ. ನನಗೆ ಆ ಕುಟುಂಬ ಅರ್ಥವೆ ಆಗಲಿಲ್ಲ. ಬೆಳಿಗ್ಗೆ ತಿಂಡಿ ಅಂತ ಜಿಲೇಬಿ ತಿಂದು ನನ್ನ ಸೆಮಿನಾರ್ ಜಾಗಕ್ಕೆ ಹೊರಟೆ.
ಪಂಜಾಬ್ ನ ಪಟಿಯಾಲಾ ವಿಶ್ವವಿದ್ಯಾನಿಲಯಕ್ಕೆ ಎರಡುಬಾರಿ ವಿಚಾರ ಸಂಕಿರಣಕ್ಕೆ ಬಂದಿದ್ದೆ. ಉಗ್ರವಾದ ರಿಬೈರೋ ಕಾಲಕೆಳಗೆ ಬಿದ್ದು ಒದ್ದಾಡುತ್ತಿದ್ದ ಕಾಲವದು. ಅವರು ಹೇಳಿದ್ದರು ಆ ಹೋರಾಟ ಒಂದು ಇಂಡಸ್ಟ್ರಿ ಆಗಿತ್ತು ಎಂದು. ಆದ್ದರಿಂದಲೆ ಅದು ಸತ್ತು ಹೋಯಿತು ಅಂತ. ಕರ್ನಾಟಕದ ರೈತ ಚಳುವಳಿಯ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷನಾಗಿದ್ದ ನನಗೆ ಅದೂ ಹೀಗೆಯೇ ಆಗಬಹುದೆ ಎಂಬ ಅನುಮಾನ ಉಂಟಾಗಿತ್ತು. ಕಾಲಾನಂತರದಲ್ಲಿ ಅದು ಹಾಗೇ ಆಯಿತು. ನಾಯಕನ ಜೀವನಭಯ ಸಾಮಾನ್ಯ ರೈತರ ಬದುಕಿನ ಮೇಲೆ ಹೆಡೆಯಾಡಿಸಿತು. ಸ್ವಾಭಿಮಾನ ಇದ್ದವರೆಲ್ಲ ರೈತಸಂಘ ಬಿಟ್ಟು ಹೋದರು. ರೈತರ ಬಗ್ಗೆ ಹರಿಕಥೆ ಮಾಡುವವರು ನಾಯಕರಾಗಿ ಉಳಿದರು. ನನಗೆ ಆಗ, ಪಟಿಯಾಲಾ ಬಂದು ಪಾಠ ಹೇಳಿ ಕಲಿಸಿಕೊಟ್ಟಿತ್ತಲ್ಲ!
ಯೂತ್ ಹಾಸ್ಟೆಲ್ನವರು ಫ್ಯಾಮಿಲಿ ಕ್ಯಾಂಪ್ ಗೆ ಕರೆದಿದ್ದಾರೆ ಬನ್ನಿ ಎಂದು ನನ್ನ ಶ್ರೀಮತಿ ಕರೆದಳು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಗಾಣದೆತ್ತಿನಂತೆ ತಿರುಗುತ್ತಿದ್ದ, ನಿರ್ದೇಶಕನ ಕೆಲಸ ಮಾಡಿ ಜಡ ಹಿಡಿದಿದ್ದ ನನ್ನ ಮತಿಗೆ ಶ್ರೀಮತಿ ನೀಡಿದ ಆಹ್ವಾನ ಖುಷಿಯನ್ನೆ ತಂದಿತು. ಯಾವಾಗಲೂ ಯುವಕನಾಗಿ ಬದುಕಿದ ನನಗೆ ಬದುಕಿದ ನನಗೆ ಹಿರಿಯ ನಾಗರಿಕ ಆಗಬೇಕಾದುದು ಬೇಸರ ತಂದರೂ ಮತ್ತೊಂದು ಕಡೆ ಹಿರಿಯನಾದ ಹೆಮ್ಮೆಯಿಂದ ಸಂಪರ್ಕ ಕ್ರಾಂತಿ ರೈಲು ಹತ್ತಿದೆ. ಆಮೇಲೆ ನಮ್ಮ ಜಾಗದಲ್ಲಿ ಅಂಗವಿಕಲ ಮುದುಕಿ. ಛೆ! ಅಂಥ ಮುದುಕಿಗೆ ಕೆಳಗಡೆ ಬರ್ತ್ ಪಡೆಯುವ ವಿವೇಕವೂ ಮನೆಯವರಿಗೆ ಬೇಡವೆ ಅಥವಾ ರೈಲ್ವೆ ಕೌಂಟರ್ ನ ಅವಿವೇಕದ ಕೆಲಸವೆ ಎನಿಸಿತ್ತು. ನನ್ನೆದುರಿನ ಆ ಹಿರಿಯ ನಾಗರಿಕಳನ್ನು ಕಂಡು ನಾನಿನ್ನೂ ಕಿರಿಯನಾಗರಿಕ ಎಂದುಕೊಂಡು ಸಹಕರಿಸಿದ್ದೆ. ದೆಹಲಿಯಿಂದ ನನ್ನ ಶ್ರೀಮತಿ ಕುಲುವಿನ ಸೇವ್ ಬಾಗ್ ಯೂಥಾಸ್ಟೆಲ್ ಕ್ಯಾಂಪ್ ಕಡೆಗೆ ಕರೆದುಕೊಂಡು ಬಂದಳು.
ನಮ್ಮ ಚರಿತೆ ಹುಡುಕಿದ ಹಾಗೆ ಉತ್ತರಕ್ಕೆ ಬಂದರೆ ನಾನೂ ಕೂಡಾ ಏನನ್ನಾದರೂ ಹುಡುಕುತ್ತಿರುತ್ತೇನೆ. ಪ್ರವಾಸ ನನಗೆ ಮನರಂಜನೆಯಲ್ಲ. ಅದು ಕಲಿಕೆ. ನನ್ನೊಡನೆ ಇದ್ದವರಿಗೆ ಬೇಸರವಾಗಬಹುದು: ಲಘುವಾಗಿ ಕಾಲಕಳೆಯುವ ಬದಲು ಕಂಡಲ್ಲೆಲ್ಲ ಏನನ್ನಾದರೂ ಹುಡುಕುವ ಈ ಮನುಷ್ಯನಿಗೆ ನೆಮ್ಮದಿ ಇಲ್ಲವೆ ಅಂತ. ಹೋದಕಡೆಯಲ್ಲೆಲ್ಲಾ ಜೀವನವನ್ನೇ ಹುಡುಕುವುದೇ ನನಗೆ ತುಂಬ ಇಷ್ಟದ ಸಂಗತಿ.
ಹಿಮಾಚಲ್ ಪ್ರದೇಶದ ಡಿಲಕ್ಸ್ ಬಸ್ಸಿನವನು ಹನ್ನೊಂದು ಗಂಟೆ ಸಮಯಕ್ಕೆ ಒಂದು ಹೋಟೆಲ್ ಹತ್ತಿರ ಊಟಕ್ಕೆ ನಿಲ್ಲಿಸಿದ. ಅದು ಭಾರಿ ಹೋಟೆಲ್. ಅಂಥವನ್ನು ನಾನು ಚೌರದಂಗಡಿ ಎಂದು ಕರೆಯುತ್ತೇನೆ. ಅದರೊಳಕ್ಕೆ ಹೋದರೆ ಅವರು ಮಾಡಿರುವುದನ್ನು ತಿನ್ನಬೇಕು. ಆ ಊಟ ನಮ್ಮದು ಎನಿಸುವುದಿಲ್ಲ. ಊಟವೇ ನಮ್ಮದಲ್ಲ ಎನಿಸಿದರೆ ಈ ಜೀವನಕ್ಕೆ ಏನು ಬೆಲೆ. ಈಗ ಉದ್ಯಮಪತಿಗಳು ಯಾರನ್ನೂ ಅವರವರ ಪಾಲಿಗೆ ಬಿಟ್ಟಿಲ್ಲ. ಈ ಹಿಂದೆ ಪರಮಾತ್ಮ ಆಡಿಸಿದಂತೆ ಆಡುತ್ತಿದ್ದ ನಾವು ಈಗ ಉದ್ಯಮಪತಿಗಳು ಆಡಿಸಿದಂತೆ ಆಡಬೇಕಾಗಿದೆ! ಬದುಕನ್ನು ಮೋಜು ಎಂದು ತಿಳಿದುಕೊಂದವರಿಗೆ ಇದು ಖುಷಿ. ಇನ್ನೊಬ್ಬರು ಮಾಡಿದ ಖುಷಿಯಿಂದ ನಾವೂ ಖುಷಿಪಡುವ ಮೆದುಳಿಲ್ಲದ ಮಂದಿಗೆ ಇದು ಸಹಜ. ಖುಷಿ ನಾವು ಸೃಷ್ಟಿಮಾಡಿಕೊಳ್ಳಬೇಕಾದ ಹೊಸ ಸ್ಪಂದನ ಎಂಬುವವರಿಗೆ ಇದೆಲ್ಲ ಮುಜುಗರ.
ಬಸ್ಸು ಮಂಡಿ ಎಂಬ ಜಾಗಕ್ಕೆ ಬಂತು. ಅಲ್ಲಿ ಆಳದ ಹೊಳೆ, ಮಕ್ಕಳು ಉಚ್ಚೆ ಹುಯ್ದಂತೆ ನೀರು. ನನ್ನ ಶ್ರೀಮತಿ ಹೇಳಿದಳು ನಾನು ೧೧೯೩ರಲ್ಲಿ ಬಂದಾಗ ಇದ್ದ ನೀರು ಈಗಿಲ್ಲ, ಮಂಡಿಗೆ ಬಂದರೂ ಮೊಳಕಾಲುದ್ದ ನೀರು ಎಂದು. ಆ ನದಿ ಅದರ ಪಾತ್ರ ಅಕ್ಕಪಕ್ಕ ಬೆಟ್ಟಗಳ ಸಾಲು. ನದಿಯೊಳಗೆ ನೀಲಿಬಣ್ಣದ ಚಲುವೆಯಂತೆ ನೀರು. ನೋಡುತ್ತಾ ಹೋದಂತೆ ನೀರಿರುವ ಕಡೆ ನೆಲೆಯೂರಿ ಸಂಸ್ಕೃತಿಯನ್ನು ಸೃಷ್ಟಿಸುತ್ತಿರುವ ಪುರಾತನ ಮನುಷ್ಯನನ್ನು ನನ್ನೊಳಗಿಂದ ಕಾಣುತ್ತಾ ಹೋದೆ. ಸ್ವಲ್ಪ ದೂರ ಹೋದ ಮೇಲೆ ಅಣೆಕಟ್ಟು ಸಿಕ್ಕಿತು. ಆ ಅಣೆಕಟ್ಟು ಸುತ್ತುವರಿದಿರುವ ಬೆಟ್ಟಸಾಲು ಕಂಡು ಪುಳಕಿತನಾದೆ. ಹಿನ್ನೀರಿನ ಕಣಿವೆಯೊಂದು ನಮ್ಮ ರಸ್ತೆ ಮತ್ತು ಬಸ್ಸಿನ ಜೊತೆಗೇ ಬರುತ್ತಿರುವ ದೃಶ್ಯ ನನ್ನಲ್ಲೊಬ್ಬ ಸಂಶೋಧಕನನ್ನು ಹುಟ್ಟುಹಾಕಿದಂತೆನಿಸಿತು. ಹನುಮಂತನ ಬಾಲದಂತೆ ಬೆಳೆದ ಆ ಕಿರುನದಿ ಎರಡು ಪರ್ವತಸಾಲುಗಳ ಮಧ್ಯೆ ಸಖಿಯಾಗಿತ್ತು. ಬೌದ್ಧ ಗುರುಗಳ ಧರ್ಮಶಾಲಾ ಹತ್ತಿರ ಹೋದಂತೆ ಅದೆ ಹೊಳೆ ನನ್ನೊಳಗೆಲ್ಲ ಹೊಳೆಸಿದಂತೆ ಭಾಸವಾಗಿತ್ತು.

ಬೆಟ್ಟಗಳೇನೋ ಇಷ್ಟವಾದವು. ಅವುಗಳ ಮೈಮೇಲೆ ಕಾಣಿಸಿದ ಮನೆಗಳು ಹೊಲಗಳು ಬೆಟ್ಟದ ಮೈಲೇಲಿನ ಕಜ್ಜಿಗಳಂತೆ ಕಂಡವು. ತುಟ್ಟತುದಿಯವರೆಗೆ ಕಣ್ಣಿತ್ತಿ ನೋಡಿದರೆ ಬೃಹತ್ ಬೆಟ್ಟದ ತುದಿಯಲ್ಲೂ ಈ ಅನಿಷ್ಟ ಮನೆಗಳು. ಪರ್ವತಗಳಿಂದ ಅವುಗಳ ಸೊಗಸನ್ನೂ ಕಿತ್ತುಕೊಳ್ಳುವ ಕೇಡಿಗಳು ಅನಿಸಿತು. ಅದೇ ಗಳಿಗೆಯಲ್ಲಿ ನಾನು ಆ ಪರ್ವತನಾಡನ್ನು ಮನುಷ್ಯರು ಮತ್ತು ವಸತಿ ಜೀವನ ಹೊರಗೆ ರಸಾಸ್ವಾದಕನಂತೆ ನೋಡುತ್ತಿದ್ದೇನೆ. ಇಲ್ಲಿಯವರಿಗೆ ಅದು ಇರುವ ಹಾಗೆ ಜೀವನ, ನನಗೆ ಒಂದು ನೋಟ. ಇನ್ನೂ ವಿಶಿಷ್ಟ ಸಂಗತಿ ಎಂದರೆ ಸಾಂಪ್ರದಾಯಿಕ ಮನೆಗಳು ಈಗಿಲ್ಲ, ಎಲ್ಲವೂ ದೆಹಲಿ ಚಂಡೀಗಡದ ಮಾದರಿ. ಹಾಗಂದಾಗ ಈ ಪ್ರದೇಶದ ಸರ್ವಸ್ವರೂಪವನ್ನೂ ನೋಡಲು ಬಂದಿದ್ದೇನೆಯೇ ಅನಿಸಿದ್ದು ಉಂಟು. ಕಾಡು ಇಲ್ಲಿಯೆ, ಈ ಪ್ರತ್ಯೇಕ ಜಾಗದಲ್ಲಿಯೆ ಇರಬೇಕೆಂದು ಬಯಸುವುದು ಆ ಪ್ರದೇಶದ ಆಧುನಿಕತೆಯನ್ನು ನಿರಾಕರಿಸಿದಂತಲ್ಲವೆ ಅನಿಸಿದಾಗಲೂ ಕಾಡು ಇಲ್ಲಿಯಲ್ಲದೆ, ಬೇರೆಲ್ಲಿ ಸಂವೃದ್ಧವಾಗಿರಲು ಸಾಧ್ಯ ಎನಿಸಿದ್ದು ಉಂಟು. ನನ್ನೊಳಗೆ ಒಬ್ಬ ಪೂರ್ವಿಕ ಮತ್ತು ನಾಗರಿಕ ಯುದ್ಧ ಮಾಡುತ್ತಿದ್ದಾನೆ. ಕಾಲವನ್ನೂ ಕಾಲನನ್ನೂ ದೂರ ಇಡಲು ಸಾಧ್ಯವೇ?
ಕುಲುವಿನಿಂದ ಸೇವ್ ಬಾಗ್ ನ ಒಂದು ಗುಡಾರದಲ್ಲಿ ಉಳಿದುಕೊಂಡೆವು; ಆದಿವಾಸಿ ಗಂಡಹೆಂಡತಿಯ ಹಾಗೆ. ಆಗ ನನಗೆ ಕನ್ನಡ ಕವಿ ಹೇಳಿದ ’ಗುಡಾರದ ಕವಿಯುಂ ಕವಿಯೇ?’ ಎಂಬ ನುಡಿ ಜ್ನಾಪಕಕ್ಕೆ ಬಂತು. ದೆಹಲಿಯ ಮಿತ್ರ ಬಿಳಿಮಲೆಯವರಿಗೆ ಫೋನ್ ಮಾಡಿ ಆ ಹಳಗನ್ನಡದ ಕವಿ ನನ್ನಂತವರನ್ನು ಕುರಿತು ಈ ಮೊದಲೆ ಈ ಮಾತನ್ನು ಹೇಳಿರಬೇಕು ಅಂದೆ. ಅವರು ಹೇಳಿದರು ಮಧುರ ಕವಿ ಸಾಮಾನ್ಯರ ಬಗ್ಗೆ ಹೇಳಿದ ಮಾತನ್ನು ನಾವು ತಿರಸ್ಕರಿಸಿಯಾಗಿದೆ. ಯಾಕೆಂದರೆ ಈಗ ನವೋದಯದಲ್ಲಿ ಕಾಡಿನಕವಿ ರಸಋಷಿಯಾಗಿ ಹೊರಹೊಮ್ಮಿದ್ದಾರೆ. ಬಂಡಾಯ ಸಾಹಿತ್ಯದಲ್ಲಿ ಗುಡಿಸಲುಗಳು ಗುಡುಗಿವೆ. ಇನ್ನೇನಿದ್ದರೂ ಗುಡಾರದ ಕವಿಯೇ ಕವಿ...ಉಳಿದುವೆಲ್ಲ ಬರಿ ಕಿವಿ ಎಂದು ಹೇಳೋಣ ಎಂದರು.
ಆ ಕ್ಯಾಂಪ್ ನ ಸನಿಹವೆ ಹರಿಯುತ್ತಿದ್ದ ಬಿಯಾಸ್ ನದಿಯನ್ನು ಶ್ರೀಮತಿ ಪರಿಚಯಿಸಿದಳು. ಯಾಕೋ ಗೊತ್ತಿಲ್ಲ ಈಗ ನೀರು ಕಡಿಮೆ ಎಂದಳು. ನದಿ ಝುಳಝುಳ ಹರಿಯುತ್ತಿತ್ತು. ಈ ನದಿಯ ರಕ್ತ ಚರಿತೆ ನೆನಪಾಯಿತು. ಇದರ ನೀರನ್ನು ಕುಡಿಯುವುದೆ? ’ಕೆಟ್ಟವಳು ನಾನಲ್ಲ ನೀವೆಂದು ಸಾರುತಿದೆ’ ಎನ್ನುವ ಉತ್ತರ ಆ ಕಡೆಯಿಂದ ಬಂದಂತಾಯಿತು. ಈ ನೀರು ಒಳ್ಳೆಯ ನೀರು, ಹರಿಯುವ ನೀರು, ಶುದ್ಧ ನೀರು ಚನ್ನಾಗಿ ಕುಡಿಯಬಹುದು ಎಂದು ನನ್ನ ಮಡದಿ ಹೇಳಿದಳು. ನನ್ನ ಬುಧ್ಧಿ ಒಪ್ಪಲಿಲ್ಲ; ನದಿಯ ಅಕ್ಕಪಕ್ಕ ಮನೆ ಕಟ್ಟಿಕೊಂಡಿರುವವರು ತಮ್ಮ ನವರಂಧ್ರಗಳಿಗೆ ಬೀಗ ಹಾಕಿಕೊಂಡಿರುತ್ತಾರೆಯೇ ಎಂದೆ. ನದಿಯ ಪಾವಿತ್ರ್ಯವನ್ನು ಪ್ರಶ್ನಿಸಿದ ನನ್ನ ದುಷ್ಟತನ ಅವಳಿಗೆ ಇಷ್ಟವಾಗಲಿಲ್ಲ. ನಿಮ್ಮ ವಿಚಾರವಂತ ಬುದ್ಧಿಯನ್ನು ಎಲ್ಲಿ ಬಿಡುತ್ತೀರಾ ಎಂದು ಹಿಯಾಳಿಸಿದಳು.

ಆ ದಿವಸ ರೋಥೆನ್ ಪಾಸ್ ಗೆ ಎಂದು ಕ್ಯಾಂಪ್ನ ಗೆಳೆಯರೊಡನೆ ಹೋದೆವು. ಇದೆಲ್ಲ ನನಗೆ ಹೊಸ ಜಾಗ. ಹಿಮದ ಉಡುಪು ಧರಿಸಿ ಅತ್ತ ಇತ್ತ ಎತ್ತರದ ಪರ್ವತದ ಮೇಲೆ ಬಿದ್ದ ಹಿಮದ ತುಂಡುಗಳನ್ನು ಕಂಡೇ ಸಖತ್ತು ಪುಳಕಿತನಾಗಿದ್ದೆ. ಪರ್ವತವನ್ನು ನೋಡುತ್ತಾ ಏರಿದಂತೆಲ್ಲಾ ನಾನು ಚಿಕ್ಕವನಾಗುತ್ತಾ ಹೋದೆ. ಅಧ್ಭುತ ಭಯಂಕರ ಮನೋಹರ...ಹೀಗೆ ಬಂದ ಪದಗಳೆಲ್ಲ ಹೊರಗೆ ಬಂದು ಒಳಕ್ಕೆ ಹೋಗುತ್ತಿದ್ದವು. ಆ ಪದಗಳಿಗೆ ಹೆದರಿಕೆಯಾಗಿತ್ತು, ನಮ್ಮಲ್ಲಿ ಆ ದೃಶ್ಯವನ್ನು ಹೇಳುವ ಸಾಮರ್ಥ್ಯ ಸಾಲದು ಅಂತ. ಏರುತ್ತಾ ಏರುತ್ತಾ ಅಧ್ಭುತವನ್ನು ಕಾಣುತ್ತಿದ್ದ ನನ್ನಲ್ಲಿ ಅದ್ಭುತ ಹಾರಿಹೋಗಿ ಭಯ ಶುರುವಾಯಿತು 'ಎಲ್ಲಿಗೆ ಏರುತ್ತಿದ್ದೇನೆ' ಅಂತ.
ಮಹಾಕವಿ ಕುವೆಂಪು ಅವರು ಬಳಸಿದ ಅದ್ಭುತ ಪದದ ಬಗ್ಗೆ ನಾವು ತಮಾಷೆ ಮಾಡುತ್ತಿದ್ದೆವು, ಎಲ್ಲಿದೆ ಅದು ಅಂತ. ಒಮ್ಮೆ ಪ್ರೊ, ಜಿ ಎಚ್ ನಾಯಕರು ಹಿಮಾಲಯ ಪರ್ವತ ಪ್ರವಾಸಕ್ಕೆ ಹೋಗಿ ಬಂದು ಹೇಳುತ್ತಿದ್ದರು. ಕುವೆಂಪು ಅವರ ಮಹೋನ್ನತ ವರ್ಣನೆಗಳು ಅರ್ಥವಾಗಬೇಕಾದರೆ ಹಿಮಾಲಯ ಪರ್ವತ ಪ್ರವಾಸ ಮಾಡಿ ಬರಬೇಕು ಎಂದು. ನನಗೂ ಈಗ ಅನಿಸಿದ್ದು ಸೊನ್ನೆಯಿಂದ ಎಲ್ಲವನ್ನೂ ಕಲ್ಪಿಸಿಕೊಳ್ಳಲು ಆಗುವುದಿಲ್ಲ. ದೊಡ್ಡದನ್ನು ನಮ್ಮ ಪೂರ್ವಜ್ನಾನದಿಂದ ಕಲ್ಪಿಸಿಕೊಳ್ಳಬೇಕು ಇಲ್ಲವೆ ನಮ್ಮ ಎದುರಿನ ಅನುಭವಗಳಿಂದ ಕಲ್ಪಿಸಿಕೊಳ್ಳಬೇಕು. ಈ ಯಾವೂ ನಮ್ಮ ಭೌಗೋಳಿಕ ಅನುಭವದಿಂದ ಹೊರಗೆ ಇರುವುದಿಲ್ಲ.