ಸರಳ ಉಷಾಃಪಾನ

 
ದೇಹದಲ್ಲಿ ನಿರಂತರ ಹರಿಯುತ್ತ, ದೇಹದ ಎಲ್ಲಬಗೆಯ ಚಟುವಟಿಕೆಗಳಿಗೆ ಪೂರಕವಾಗಿರುವ ಜೀವ ಜಲಗಳನ್ನು ಆಯಾ ದೇಹಪ್ರಕೃತಿಗೆ ಪೂರಕವಾಗಿ ಸಮತೋಲನದಲ್ಲಿ ಇಟ್ಟುಕೊಂಡಾಗ, ದೈಹಿಕ ಬಾಧೆ-ತೊಂದರೆಗಳಿಂದ ದೂರವಿರಬಹುದು. ಆಯುರ್ವೇದ, ಪ್ರಕೃತಿ ಚಿಕಿತ್ಸೆಗಳು ದೇಹವನ್ನು ಮಲಿನ ಅಥವಾ ಟಾಕ್ಸಿನ್ ವಸ್ತುಗಳಿಂದ ಸದಾ ಶುದ್ಧಿ ಮಾಡಿಕೊಳ್ಳುವತ್ತ ಪ್ರಾಮುಖ್ಯತೆ ಕೊಡುತ್ತವೆ. ಎಡೆಬಿಡದೆ ಕೆಲಸ ಮಾಡುವ ನಮ್ಮ ದೇಹದ ಅಂಗಗಳು ನಾವು ಬಾಯಿಗೆ ಹಾಕಿಕೊಳ್ಳುವ ಆಹಾರವೆಂಬ ಪದಾರ್ಥಗಳನ್ನು ವಿಭಜಿಸುತ್ತಾ, ಜೀರ್ಣಿಸುತ್ತಾ, ಅವುಗಳಲ್ಲಿರುವ ಸತ್ವವನ್ನು ಹೀರುತ್ತಾ, ಅಸತ್ವವನ್ನು ತ್ಯಜಿಸುತ್ತಾ ಇರುತ್ತವೆ. ಹೀಗೆ ಜೀರ್ಣಾಂಗದಲ್ಲಿ ನಿರಂತರವಾಗಿ ಫಿಲ್ಟರ್ ಆಗುವ, ತ್ಯಾಜ್ಯವಾಗುವ ’ಅಸತ್ವ’ ನಮ್ಮ ದೇಹದಿಂದಲೂ ತುರ್ತಾಗಿ ನಿರ್ಗಮನ ಮಾಡಲೇ ಬೇಕು. ಇಲ್ಲದಿದ್ದರೆ ದೇಹ ಮಲಿನ ವಸ್ತುಗಳ ಸಂಗ್ರಹಾಲಯವಾಗಿ, ವಿಷಯುಕ್ತವಾಗಿ ಬೇಡದ ರೋಗಗಳಿಗೆ ತಾವುಕೊಡುತ್ತದೆ.
 
ಮಲ-ಮೂತ್ರದ ಮುಖಾಂತರ, ಬೆವರಿನ ಮುಖಾಂತರ, ದೇಹಕ್ಕೆ ಅಹಿತವಾದದ್ದನ್ನು ಅಥವಾ ದೇಹದಲ್ಲಿ ವಾತವನ್ನು ಹೆಚ್ಚಿಸುವ ಪದಾರ್ಥಗಳನ್ನು ತಿಂದಾಗ ಅದು ತ್ಯಾಜ್ಯ ವಾಯುವಿನ ಮುಖಾಂತರ ಹೊರಗೆ ಬರುತ್ತಿರುತ್ತದೆ. ತ್ಯಾಜ್ಯವಸ್ತುಗಳು ಸುಲಭವಾಗಿ ಹೊರಬರಲು ಸರಳ ವಿಧಾನಗಳನ್ನು ಅನುಸರಿಸಿ ಅನುವು ಮಾಡಿಕೊಟ್ಟಾಗ ದೈಹಿಕ ಆರೋಗ್ಯ ಖಡಾಖಂಡಿತ ವೃದ್ಧಿಸುತ್ತದೆ. ಅಡಿಗೆಮನೆಯ ಬಚ್ಚಲಿನಿಂದ ಹೊರಡುವ ಪೈಪಿಗೆ ವಾರಕ್ಕೊಮ್ಮೆ ವಿನೆಗರ್ ಮತ್ತು ಬೇಕಿಂಗ್ ಸೋಡಾ ಮಿಶ್ರಣ ಹಾಕಿದರೆ ಅದು ತಾನಾಗೇ ಸ್ವಚ್ಚವಾಗಿ, ಪೈಪು ಕಟ್ಟಿಕೊಳ್ಳುವ, ರಿಪೇರಿ ಮಾಡಿಸುವ ಪ್ರಮೇಯ ಬರುವುದಿಲ್ಲ ನೋಡಿ...ನಮ್ಮೊಳಗಿನ ಪೈಪು-ಪಾತ್ರೆಗಳದ್ದೂ ಹೆಚ್ಚುಕಡಿಮೆ ಅದೇ ಪರಿಸ್ಥಿತಿ.

ಉಷಾಃಪಾನ ನಮ್ಮ ದೇಹದ ಜೀರ್ಣಕ್ರಿಯೆಯಿಂದ ವಿಭಜಿತವಾಗಿ ’ಅಸತ್ವ’ವೆಂದು ತಿರಸ್ಕೃತವಾಗಿರುವ ತ್ಯಾಜ್ಯ ವಸ್ತುಗಳನ್ನು ಹೊರಹಾಕಲು ನಮ್ಮ ದೇಹಕ್ಕೆ ನಾವು ಸಹಕಾರ ಮಾಡಿಕೊಡುವ ಒಂದು ಸಣ್ಣ ಪ್ರಯತ್ನ. ಹೆಸರೇ ಸೂಚಿಸುವಂತೆ ಉಷೆ/ಸೂರ್ಯ ನಮ್ಮ ಗೋಳದಲ್ಲಿ ಕಣ್ತೆರೆಯುವ ಸಮಯದಲ್ಲಿ, ಬೆಳ್ಳಂಬೆಳಿಗ್ಗೆ, ನಾವು ಎದ್ದು ಮುಖಮಾರ್ಜನ ಮುಗಿಸದೆ ಖಾಲಿಹೊಟ್ಟೆಯಲ್ಲಿ ದೇಹದೊಳಕ್ಕೆ ಅತ್ಯಂತ ಸ್ವಚ್ಚವಾದ ನೀರನ್ನು ಸೇರಿಸುವುದೇ ಉಷಾಪಾನ.

ಸಾಂಪ್ರದಾಯಿಕ ಅರ್ಥದಲ್ಲಿ, ನಾವು ಸಾಧಾರಣವಾಗಿ ಒಂದು ಬಾರಿಗೆ ಕುಡಿದು ಮುಗಿಸುವ ಒಂದು ಲೋಟ ನೀರಿಗಿಂತಲೂ ಹೆಚ್ಚು ಅಂದರೆ ಒಂದು ಚೊಂಬಿನಷ್ಟು, ಒಂದುವರೆ ಲೀಟರಿನಷ್ಟು ನೀರನ್ನು ಒಂದೇ ಬಾರಿ ಕುಡಿದು ಆ ನೀರು ದೇಹದ ಒಳಗೆ ಕ್ಷಿಪ್ರವಾಗಿ ಹರಿದು ಮೂತ್ರ ಮಲದ ರೂಪದಲ್ಲಿ ಹೊರಗೆ ಬರುವಂತೆ ಮಾಡುವ ಕ್ರಿಯೆ. ಇದೊಂದುಕ್ಲೆನ್ಸಿಂಗ್ ಅಥವಾ ಶುದ್ದಿ ಮಾಡಿಕೊಳ್ಳುವ ಕ್ರಿಯೆ. ನಮ್ಮ ದೇಹವು ಒಮ್ಮೆಗೆ ಎಷ್ಟು ನೀರನ್ನು ಹಿಡಿದಿಟ್ಟುಕೊಳ್ಳಬಹುದೋ ಅಷ್ಟೂ ಸಾಮರ್ಥ್ಯವನ್ನು ಉಪಯೋಗಿಸಿಕೊಂಡು ಒಂದೇ ಬಾರಿಗೆ ಹೀಗೆ ನೀರನ್ನು ಕುಡಿದಾಗ, ಆಹಾರವು ದೇಹದೊಳಗೆ ಚಲಿಸುವ ಸ್ವಾಭಾವಿಕ ಪಥದಲ್ಲಿ ದೇಹ ಸೇರುವ ನೀರು ಅಂಗಾಗಗಳಿಗೆ ಸಣ್ಣದೊಂದು ಮಸಾಜು ಮಾಡುತ್ತದೆ. ಇಡೀ ಪಥವನ್ನು ತುಂಬಿಬಿಡುತ್ತದೆ. ಮಲಿನ ವಸ್ತುಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತದೆ. ಹೀಗೆ ಇಡೀ ಜೀರ್ಣಾಂಗ ವ್ಯೂಹವನ್ನು ತುಂಬುವ ನೀರಿನ ಸಣ್ಣದೊಂದು ಒತ್ತಡಕ್ಕೆ ಮಣಿಯುವ ಸಣ್ಣಕರುಳು, ದೊಡ್ಡಕರುಳುಗಳು ಅದನ್ನು ತುರ್ತಾಗಿ ಹೊರಹಾಕಲು ತಯಾರಾಗುತ್ತವೆ. ದೇಹದಲ್ಲಿ ರಾತ್ರಿಯಿಡೀ ಶೇಖರವಾಗಿದ್ದ ತ್ಯಾಜ್ಯವಸ್ತುಗಳು ನೀರಿನ ಈ ಒತ್ತಡದಿಂದ ಮಲ-ಮೂತ್ರವಾಗಿ ಹೊರಬರುತ್ತವೆ. ದೇಹ ಒಳಗಿನಿಂದ ಸ್ವಚ್ಚವಾಗಿ ಮತೊಂದು ದಿನದ ಕಾರ್ಯಕ್ಕೆ ತಯಾರಾಗುತ್ತದೆ. ತ್ಯಾಜ್ಯವಸ್ತು ದೇಹದಲ್ಲಿ ದೀರ್ಘಕಾಲ ಉಳಿದು ಅದು ವಿಷಯುಕ್ತವಾಗುವುದು ನಿಲ್ಲುತ್ತದೆ. ಇದು ಉಷಾಃಪಾನದ ಹಿಂದಿನ ಸರಳ ತತ್ವ. ಹೀಗೆ ಸಾಂಪ್ರದಾಯಿಕ ಉಷಾಪಾನವನ್ನು ಅನುಸರಿಸುವವರು ನೀರನ್ನು ಕುಡಿದ ೨ ಗಂಟೆಗಳ ಕಾಲ ದೇಹಕ್ಕೆ ಇತರೆ ಆಹಾರ ಅಥವಾ ಪಾನಿಯವನ್ನು ಸೇರಿಸಬಾರದು. ಸಮಾಧಾನದ ವಿಸರ್ಜನೆಗೆ ಒತ್ತು ಕೊಡಬೇಕು.
 
ಸರಿಯಾದ ಮಾರ್ಗದರ್ಶನದಲ್ಲಿ ಈ ಬಗೆಯ ಉಷಾಃಪಾನ ಮಾಡುವುದರಿಂದ ಡಯಾಬಿಟಿಸ್, ರಕ್ತದೊತ್ತಡ, ಮೈಗ್ರೇನ್, ಚರ್ಮವ್ಯಾಧಿಗಳು, ಮಲಬದ್ಧತೆ, ಚರ್ಮರೋಗಗಳು ಇತ್ಯಾದಿ ಹತ್ತು ಹಲವು ರೋಗಗಳನ್ನು ಗುಣಪಡಿಸಿಕೊಳ್ಳಬಹುದು.

ಈ ಬಗೆಯ ಉಷಾಃಪಾನವನ್ನು ಎಲ್ಲರೂ-ಪ್ರತಿನಿತ್ಯ ಮಾಡಬಹುದೇ? ಸಾಂಪ್ರದಾಯಿಕ ಉಷಾಃಪಾನವನ್ನು ಎಲ್ಲರೂ ಪ್ರತಿನಿತ್ಯ ಮಾಡುವ ಅಗತ್ಯವಿಲ್ಲ. ಹಾಗೆ ಮಾಡಲು ದೇಹಕ್ಕೆ ತಯಾರಿ, ಸಿದ್ಧತೆ ಮತ್ತು ಮಾರ್ಗದರ್ಶನ ಬೇಕು. ವ್ಯಕ್ತಿಯೊಬ್ಬನ ದೇಹದಲ್ಲಿ ಅತಿಯಾದ ಟಾಕ್ಸಿನ್ ಸೇರಿದ್ದರೆ ಅದನ್ನು ಒಂದೆರಡು ವಾರಗಳಲ್ಲಿ ತುರ್ತಾಗಿ ಹೊರಹಾಕಲು ಈ ಬಗೆಯ ಉಷಾಃಪಾನ ಅತ್ಯಗತ್ಯ.
 
ಆದರೆ ಪ್ರತಿನಿತ್ಯ, ಪ್ರತಿಯೊಬ್ಬರೂ ಮಾಡಿ ಅಪಾರ ಅನುಕೂಲ ಪಡೆದುಕೊಳ್ಳಬಹುದಾದ ಸರಳ ಉಷಾಃಪಾನದ ಉಪಾಯ ಇಲ್ಲಿದೆ: ಎಂಟು ಔನ್ಸ್ ನಷ್ಟು ಬೆಚ್ಚಗಿನ ಸ್ವಚ್ಚ ನೀರಿಗೆ, ಅಂದರೆ ಒಂದು ದೊಡ್ಡ ಲೋಟ ಬೆಚ್ಚಗಿನ ನೀರಿಗೆ ಅರ್ಧ (ಕಾಲ ಕ್ರಮೇಣ ೧) ನಿಂಬೆಹಣ್ಣಿನ ರಸವನ್ನು ಹಿಂಡಿಕೊಂಡು ಅದನ್ನು ಖಾಲಿಹೊಟ್ಟೆಯಲ್ಲಿ ಕುಡಿಯುವುದು ಸರಳ ಉಷಾಃಪಾನದ ತತ್ವ.
 
ಇದು ಓಡುವವರ ಕಾಲ. ಧಾವಂತ, ಸ್ಟ್ರೆಸ್, ಒತ್ತಡಗಳಿಂದಲೇ ನಮ್ಮ ದೇಹ ಮನಸ್ಸನ್ನು ಕೆಟ್ಟದಾಗಿ ಪ್ರೇರೇಪಿಸಿಕೊಳ್ಳುವ ’ಆಧುನಿಕ’ ಯುಗ. ಏನಾದರೂ ಮಾಡು ಕೆಲಸಕ್ಕೆ ತಲುಪುವ ಮುನ್ನ ’ಅಲರ್ಟ್’ ಆಗಿರು ಎನ್ನುವುದೇ ದಿನಬೆಳಗಿನ ಸಿದ್ಧಾಂತ. ಬೆಳಿಗ್ಗೆ ಎದ್ದ ತಕ್ಷಣ ಕಾಫಿ-ಚಹಾ ಇಲ್ಲದೆ ಕೆಲಸವೇ ನಡೆಯಲಾರದು ಎನ್ನುವ ಮಂದಿ ಈಗ ಎಲ್ಲೆಲ್ಲಿಯೂ ತುಂಬಿದ್ದಾರೆ. ಅವರಿಗೆ ತಿಳಿಯಬೇಕಾದ ಸರಳ ವಿಷಯವೇನೆಂದರೆ, ಕಾಫಿ ಕೇವಲ ಅವರ ಅಡ್ರಿನಾಲಿನ್ ಅನ್ನು ಉತ್ತೇಜಿಸಿ, ಅಲ್ಲಿಂದ ಎಪಿನೆಫ್ರಿನ್ ಮತು ನೊರೆಪಿನೆಫ್ರಿನ್ ಎಂಬ ಎನರ್ಜಿಯ ಹಾರ್ಮೋನುಗಳನ್ನು ಬಿಡುಗಡೆ ಮಾಡಿಸುತ್ತದೆ. ಈ ಹಾರ್ಮೋನುಗಳು ದೇಹದಲ್ಲಿ (ಕಷ್ಟಕಾಲಕ್ಕೆಂದು) ಶೇಖರಿತವಾಗಿರುವ ಗ್ಲುಕೋಸ್ ಅನ್ನು ವಿಭಜಿಸಿ ರಕ್ತಕ್ಕೆ ಬಿಡುಗಡೆ ಮಾಡಲು ದೇಹವನ್ನು ಪ್ರೇರೇಪಿಸುತ್ತವೆ. ಆಗ ನಮಗೆ ತಕ್ಷಣ ಶಕ್ತಿ ಹರಿದ ಅನುಭವ. ಇದೇ ’ಕ್ಯಾಫೀನ್ ಎಫೆಕ್ಟ್.’ ಇದು ಕೇವಲ ಒಂದು ಸಣ್ಣ ಮತ್ತಿನ ಅನುಭವವಷ್ಟೇ. ಹೀಗೆ ಉತ್ಪನ್ನವಾಗುವ ಎನರ್ಜಿಯನ್ನು ಋಣಾತ್ಮಕ ಶಕ್ತಿ ಎನ್ನುತ್ತೇವೆ. ದೇಹದ ಆರೋಗ್ಯಕ್ಕೆ ಬಹಳ ಬೇಕಾಗಿದ್ದು, ದೇಹದಲ್ಲಿ ಶೇಖರಿತವಾಗಿರುವ ನೀರು, ಸೋಡಿಯಂ, ಪೊಟಾಸಿಯಂ, ಕ್ಯಾಲ್ಸಿಯಂ, ಮ್ಯಾಗ್ನಿಸಿಯಂ ಇನ್ನಿತರ ಮುಖ್ಯ ಎಲೆಕ್ಟ್ರ‍ೋಲೈಟ್ ಮತ್ತು ಲವಣಗಳನ್ನು ಕಾಫಿ ಸತ್ವಹೀನ ಮಾಡಿಬಿಡುತ್ತದ್ದಾದ್ದರಿಂದ ಕಾಫಿಯೂ ಒಂದು ಬಗೆಯ ಮಾದಕ ಪಾನೀಯವೇ ಹೊರತು. ಶಕ್ತಿದಾಯಕ ಪೇಯವಲ್ಲ.
 
ಇದಕ್ಕೆ ವ್ಯತಿರಿಕ್ತವಾಗಿ ನಿಂಬೆಹಣ್ಣಿನ ರಸ ಮಿಶ್ರಿತ ಬೆಚ್ಚಗಿನ ನೀರು ದೇಹಕ್ಕೆ ಅತ್ಯಗತ್ಯವಾದ ನೀರನ್ನು ಸರಬರಾಜು ಮಾಡಿ ದೇಹಕ್ಕೆ ಆಮ್ಲಜನಕವನ್ನು ಒದಗಿಸಿ ದೇಹಕ್ಕೆ ಧನಾತ್ಮಕ ಶಕ್ತಿ (ಪಾಸಿಟಿವ್ ಎನರ್ಜಿ)ಯನ್ನು ಕೊಡುತ್ತದೆ. ಹೇಗೆಂದರೆ, ನಾವು ತೆಗೆದುಕೊಳ್ಳುವ ಶುದ್ಧ ಆಹಾರ ಅಥವ ಪಾನೀಯ ನಮ್ಮ ದೇಹಕ್ಕೆ ಶಕ್ತಿಯನ್ನು ಉತ್ಪಾದನೆ ಮಾಡುವ ಚುರುಕು ಮಾಲಿಕ್ಯೂಲ್ ಗಳನ್ನು ಒದಗಿಸುತ್ತವೆ. ಈ ಮಾಲಿಕ್ಯೂಲ್ ಗಳಲ್ಲಿ ’ಐಯಾನ್’ ಎಂಬ ಸಣ್ಣ ಭಾಗವಿದ್ದು ಅದು ವಿದ್ಯುತ್ತಿನಂತಹ ಶಕ್ತಿಯನ್ನು ಹೊಂದಿರುತ್ತದೆ. ಧನಾತ್ಮಕ ಐಯಾನ್ ಗಳನ್ನು ’ಕೇಷನ್’ (ಕೇಷಾನಿಕ್) ಎಂದು ಕರೆದರೆ ಋಣಾತ್ಮಕ ಐಯಾನುಗಳನ್ನು ’ಅನಿಯನ್ಸ್’ (ಅನಿಯಾನಿಕ್) ಎನ್ನುತ್ತೇವೆ.

 
ನಾವು ತಿನ್ನುವ ಬಹುಪಾಲು ಆಹಾರಗಳು ’ಕೇಷನ್’ ಐಯಾನುಗಳಿಂದ ಕೂಡಿವೆ. ಆದರೆ ನಮ್ಮ ಸ್ವಾಭಾವಿಕ ಜೀರ್ಣಾಂಗ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಹೈಡ್ರಾಲಿಕ್ ಆಮ್ಲ, ಜೀರ್ಣಕ್ರಿಯೆಯ ಎನ್ಜ಼ೈಮ್ ಗಳು, ನಮ್ಮ ಜೊಲ್ಲು ರಸ ಇವೆಲ್ಲವೂ ’ಅನಿಯಾನಿಕ್’ ಆಗಿವೆ. ವಿಜ್ನಾನಿಗಳ ಪ್ರಕಾರ ಇಡೀ ಭೂಮಿಯ ಮೇಲಿನ ಎಲ್ಲಾ ಆಹಾರ ಪದಾರ್ಥಗಳಲ್ಲಿ ನಿಂಬೆಹಣ್ಣು ಮಾತ್ರ ’ಅನಿಯಾನಿಕ್’ ಅಯಾನುಗಳನ್ನು ಹೊಂದಿದೆ!! ನಿಂಬೆಹಣ್ಣಿನ ರಸ ಅತ್ಯಂತ ಚುರುಕಿನ ಎಲೆಕ್ಟ್ರಿಕ್ ಶಕ್ತಿ ಹೊಂದಿದೆ. ಹೀಗಾಗಿ ತಾಜಾ ನಿಂಬೆ ಹಣ್ಣಿನ ರಸ ದೇಹಕ್ಕೆ ಸಾಕಷ್ಟು ಆಮ್ಲಜನಕ ಒದಗಿಸಿ, ನಮ್ಮ ಯಕೃತ್ತಿನ ಎನ್ಜ಼ೈಮುಗಳ ಕ್ರಿಯೆಯನ್ನು ಪ್ರೇರೇಪಿಸುತ್ತದೆ. ದೇಹದೊಳಕ್ಕೆ ಸೇರಿದ ಆಹಾರದಲ್ಲಿನ ತ್ಯಾಜ್ಯವಸ್ತುಗಳನ್ನು ವಿಂಗಡಿಸುವಲ್ಲಿ ನಿರಂತರ ಕೆಲಸ ಮಾಡುವ ಯಕೃತ್ತು ಈ ಪಾನದಿಂದ ತಾನೂ ಶುದ್ದಿಯಾಗುತ್ತದೆ.

ಇದಲ್ಲದೆ ನಿಂಬೆಹಣ್ಣಿನ ರಸದಲ್ಲಿರುವ ಸಿಟ್ರಿಕ್ ಆಮ್ಲ ಪ್ಯಾನ್ಕ್ರಿಯಾಸ್ ಮತ್ತು ಕಿಡ್ನಿಗಳಲ್ಲಿ ಶೇಖರಿತವಾಗಿ ಕಡೆಗೆ ಕಲ್ಲುಗಳಾಗಿ ಬಾಧೆಕೊಡುವ ಅನಗತ್ಯ ಕ್ಯಾಲ್ಸಿಯಂ ಸಂಗ್ರಹಣೆಯನ್ನೂ ಸ್ವಚ್ಚ ಮಾಡುತ್ತದೆ. ನಿಂಬೆಹಣ್ಣು ವಿಟಮಿನ್ ’ಸಿ’ ಯ ಆಗರವಾಗಿರುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ನಿಂಬೆಹಣ್ಣಿನ ರಸದಲ್ಲಿ ಪೊಟಾಸಿಯಂ, ಮ್ಯಾಗ್ನೀಸಿಯಂ ನಂತಹ ದೇಹದ ಆರೋಗ್ಯಕ್ಕೆ ಪೂರಕವಾದ ಎಲೆಕ್ಟ್ರೋಲೈಟ್ ಮತ್ತು ಲವಣಗಳಿರುವುದರ ಜೊತೆಗೆ ಅತ್ಯುಪಯುಕ್ತ ಸಂಕೀರ್ಣ ಲವಣ, ಆಮ್ಲೀಯತೆ ಮತ್ತು ಬಯೋ ಫ್ಲೇವನಾಯ್ಡ್ ಹೊಂದಿರುವ ವಿಟಮಿನ್ ’ಪಿ’ (ಫೈಟೋನ್ಯೂಟ್ರಿಯಂಟ್ಸ್) ಕೂಡಾ ಇದೆ. ಈ ವಿಟಮಿನ್ ’ಪಿ’ ವೈಟಮಿನ್ ’ಸಿ’ ನ ಆಂಟಿ ಆಕ್ಸೋಡೆಂಟ್ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುವುದಾಗಿಯೂ ಪರೀಕ್ಷೆಗಳು ತಿಳಿಸುತ್ತವೆ.
  
ಇದೆಲ್ಲ ಕಾರಣಗಳಿಗಾಗಿ ಬೆಳಗ್ಗಿನ ಈ ಸರಳ ಉಷಾಃಪಾನದ ಅಭ್ಯಾಸವನ್ನಿಟ್ಟುಕೊಳ್ಳುವುದು ನಮ್ಮ ಆರೋಗ್ಯಕ್ಕೆ ಅತ್ಯುಪಯುಕ್ತ. ಬರೀ ನಿಂಬೆಹಣ್ಣಿನ ರಸವನ್ನು (ವಾಯುಸಂಬಂಧಿ ಅನಾರೋಗ್ಯದ ಕಾರಣ) ನೀರಿನಲ್ಲಿ ಕುಡಿಯಲು ಸಾಧ್ಯವಾಗಲಾರದವರು ಅರ್ಧ ಚಮಚ ನಿಂಬೆರಸದ ಜೊತೆ, ಅರ್ಧ ಚಮಚ ತುಳಸಿ ಅಥವಾ ಪುದೀನಾ ರಸದ ಜೊತೆ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಒಮ್ಮೆ ನಿಂಬೆಹಣ್ಣು ನಿಮ್ಮ ದೇಹಕ್ಕೆ ಸಂಪೂರ್ಣ ಹಿತವೆನಿಸಿದ ನಂತರ ನಿಂಬೆರಸದ ಸರಳ ಉಷಾಃಪಾನ ಚಿಕಿತ್ಸೆಯನ್ನು ಜೀವಮಾನವಿಡೀ ಮುಂದುವರಿಸಿ ಸಂಪೂರ್ಣ ಆರೋಗ್ಯ ಕಾಪಾಡಿಕೊಳ್ಳಬಹುದು.
 
 
 
 
 
 
 
Copyright © 2011 Neemgrove Media
All Rights Reserved